ಬುಧವಾರ, ಜುಲೈ 23, 2014

“ಸರಳ ಸಜ್ಜನ ಜಾನಪದ ಜಂಗಮ ಡಾ. ಮಲಶೆಟ್ಟರಿಗೆ ಅಕ್ಷರ ನಮನ”


 
ಜಾನಪದ ಕ್ಷೇತ್ರದಲ್ಲಿ ಹಲವಾರು ಜನರು ಅಧ್ಯಯನ ಮಾಡಿದವರಿದ್ದಾರೆ. ಪಿಹೆಚ್ಡಿ ಮಾಡಿ ಮಹಾಪ್ರಬಂಧ ಗ್ರಂಥ ರಚಿಸಿ ಡಾಕ್ಟರೇಟ್ ಪಡೆದವರಿದ್ದಾರೆ. ಇಂತವರಲ್ಲಿ ಬಹುತೇಕರು ಅಕಾಡೆಮಿಕ್ಕಾದ ಥೇಯರಿ ಜ್ಞಾನ ಹೊಂದಿದ್ದಾರೆ. ಇಂತವರಿಂದ ಜಾನಪದ ಲೋಕಕ್ಕೆ ಅದೆಷ್ಟು ಅನುಕೂಲವಾಯಿತೋ ಗೊತ್ತಿಲ್ಲ, ಆದರೆ ಡಾಕ್ಟರೇಟ್ಗಳು ಜಾನಪದದ ಹೆಸರಲ್ಲಿ ಬಹಳಷ್ಟು ಅನುಕೂಲತೆಗಳನ್ನು ಪಡೆದದ್ದಂತೂ ಸುಳ್ಳಲ್ಲ. ಹುದ್ದೆ ಹೆಸರು ಪ್ರಶಸ್ತಿ ಪದವಿಗಳನ್ನು ಪಡೆದವರೂ ಬೇಕಾದಷ್ಟಿದ್ದಾರೆ. ಜಾನಪದದ ಹೆಸರಲ್ಲಿ ಸರಕಾರಿ ಖಜಾನೆಗೇ ಕನ್ನ ಹಾಕಿದ ಅನೇಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಸಿಗುತ್ತಾರೆ. ಇಂತಹ ಹಲವಾರು ಮಹನೀಯರೆಲ್ಲಾ ಜಾನಪದ ಲೋಕಕ್ಕೆ ಕೊಟ್ಟಿದ್ದಕ್ಕಿಂತ ಪಡೆದದ್ದೇ ಹೆಚ್ಚು.

ಆದರೆ... ಅಲ್ಲೊಬ್ಬರಿದ್ದರು, ಜಾನಪದವನ್ನೇ ಉಸಿರಾಡುತ್ತಿದ್ದರು. ತಮ್ಮ ಬದುಕನ್ನೇ ಜಾನಪದ ರಂಗಭೂಮಿಗಾಗಿ ಮೀಸಲಿಟ್ಟಿದ್ದರು. ಅವರು ಜನಪದ ಪರಿಸರದಲ್ಲೇ ಹುಟ್ಟಿ, ಬೆಳೆದು, ಜಾನಪದದಲ್ಲೇ ಪದವಿ ಸ್ನಾತಕೋತ್ತರ ಪದವಿ ಹಾಗೂ ಡಾಕ್ಟರೇಟ್ ಮಾಡಿ, ಸ್ವತಃ ಬಯಲಾಟಗಳನ್ನು ಪರಿಷ್ಕರಿಸಿ, ತಂಡಕಟ್ಟಿ, ಊರೂರುಗಳಲ್ಲಿ ದೊಡ್ಡಾಟ, ಪಾರಿಜಾತಗಳನ್ನು ಆಡಿಸಿ ನಿರಂತರವಾಗಿ ಜಾನಪದದ ಉಳಿವು ಹಾಗೂ ಬೆಳವಣಿಗೆಗಾಗಿ ಶ್ರಮಿಸಿದರು. ಅಂತಹ ಹಿರಿಯ ಚೇತನವು ಬಯಲಾಟದಿಂದ ಖಾಯಂ ಆಗಿ ನಿರ್ಗಮಿಸಿತು, ಜಾನಪದ ಲೋಕದಿಂದ ದೂರಾಯಿತು, ಸಾರ್ಥಕ ಬದುಕಿನ ಪಯಣವನ್ನು ನಿಲ್ಲಿಸಿತು. ಜಾನಪದ ಕ್ಷೇತ್ರದಲ್ಲೊಂದು ಅನಾಥ ಪ್ರಜ್ಞೆಯನ್ನುಂಟುಮಾಡಿ ಮರಳಿ ಬಾರದ ಲೋಕಕ್ಕೆ ಹೊರಟೇ ಹೋಯಿತು. ಅವರು.... ನಮ್ಮ ಹೆಮ್ಮೆಯ ಜಾನಪದ ಜಂಗಮ ಡಾ.ಬಸವರಾಜ ಮಲಶೆಟ್ಟಿಯವರು.

ಕರ್ನಾಟಕದ ಜಾನಪದ ಕ್ಷೇತ್ರದ ಜೀನಿಯಸ್ ಆಗಿದ್ದ ಡಾ.ಮಲಶೆಟ್ಟರು 2014 ಜೂನ್ 28 ರಂದು ಬೆಳಗಾವಿಯ ಕೆಎಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ತುಂಬಾ ಸರಳ ಸಜ್ಜನಿಕೆಯ ಸುಸಂಸ್ಕೃತ ವ್ಯಕ್ತಿತ್ವದ ಮಲಶೆಟ್ಟರ ಅಗಲಿಕೆ ಜಾನಪದ ಲೋಕಕ್ಕೆ ಅದರಲ್ಲೂ ಉತ್ತರ ಕರ್ನಾಟಕದ ಬಯಲಾಟ ಕ್ಷೇತ್ರಕ್ಕೆ ಹಿನ್ನೆಡೆ ಎಂದೇ ಹೇಳಬೇಕು. ಇಂತಹ ಮಹಾನ್ ವ್ಯಕ್ತಿಯ ಬದುಕು, ಬರಹ, ಸಾಧನೆ ಕುರಿತು ಪರಿಚಯದ ಲೇಖನದ ಮೂಲಕ ಡಾ.ಮಲಶೆಟ್ಟರಿಗೆ ಪತ್ರಿಕೆ ಅಕ್ಷರನಮನ ಸಲ್ಲಿಸುತ್ತದೆ.


ಬಸವರಾಜ ಮಲಶೆಟ್ಟರು ಹುಟ್ಟಿದ್ದು 1949 ಆಗಸ್ಟ್ 10, ಬೆಳಗಾವಿ ಜಿಲ್ಲೆಯ ಬೈಲುಹೊಂಗಲ ತಾಲೂಕಿನ ತಿಗಡೊಳ್ಳಿ ಗ್ರಾಮದಲ್ಲಿ. ಕಿತ್ತೂರು ಚೆನ್ನಮ್ಮನ ಕಿತ್ತೂರಿನಿಂದ ಹತ್ತು ಮೈಲಿ ಅಂತದಲ್ಲಿರುವ ಪುಟ್ಟ ಗ್ರಾಮ ತಿಗಡೊಳ್ಳಿ ಮಲಶೆಟ್ಟರ ಬಾಲ್ಯವನ್ನು ಸಾಂಸ್ಕೃತಿಕವಾಗಿ ರೂಪಿಸುವಲ್ಲಿ ಮಹತ್ತರ ಪಾತ್ರವಹಿಸಿತ್ತು. ಮುಂದೆ ಮಲಶೆಟ್ಟರು ಕೋಶ ಓದಿ ದೇಶ ಸುತ್ತಿದರೂ ತಮ್ಮ ಹುಟ್ಟೂರಿನ ಸಂಪರ್ಕವನ್ನು ಕೊನೆಯವರೆಗೂ ಬಿಡಲಿಲ್ಲ. ತಮ್ಮ ಮೂಲ ಬೇರುಗಳನ್ನು ಮರೆಯಲಿಲ್ಲ.

ಜಾನಪದ ಹಾಡುಗಳ ಸಂಗ ಹಾಗೂ ಬಯಲಾಟದ ಸಾಂಗತ್ಯ ಮಲಶೆಟ್ಟರಿಗೆ ಹುಟ್ಟಿನಿಂದಲೇ ದೊರೆಯಿತು. ಅವರ ಹೆತ್ತವರು ಜಾನಪದ ಕಲಾವಿದರು. ಅವರ ತಾಯಿ ನಾಗೇಂದ್ರವ್ವ ಸೋಬಾನೆ ಹಾಗೂ ಬೀಸುಕಲ್ಲಿನ ಪದಗಳನ್ನು ಹಾಡುತ್ತಿದ್ದರು. ತಂದೆ ಮರಿಕಲ್ಲಪ್ಪ ಮಲಶೆಟ್ಟರು ಆಗಿನ ಕಾಲದಲ್ಲಿ ಬೆಳಗಾವಿ ಜಿಲ್ಲೆಯಲ್ಲೇ ಪ್ರಸಿದ್ದರಾದ ಜಾನಪದ ಗಾಯಕರಾಗಿದ್ದರು. ಮರಿಮಲ್ಲಪ್ಪನವರು ತಮ್ಮ ಹಾಡಿನ ತಂಡದ ಜೊತೆಗೆ ವೇದಿಕೆ ಏರಿ ಗೀಯಗಾ ಗಾಗಿಯಗಾ... ಎಂದು ಗೀಗಿಪದ ಹಾಡಲು ನಿಂತರೆ ಕೇಳಲು ಜನಜಾತ್ರೆಯೇ ಸೇರುತ್ತಿತ್ತಂತೆ. ಸ್ವತಃ ಬಾಲಕ ಬಸವರಾಜು ತಮ್ಮ ತಂದೆಯ ಜೊತೆಗೆ ಗೀಗಿಪದಗಳ ಕಾರ್ಯಕ್ರಮದಲ್ಲಿ ಹಿಮ್ಮೇಳದಲ್ಲಿದ್ದು ಭಾಗವಹಿಸುತ್ತಿದ್ದರಂತೆ. ಇದರಿಂದಾಗಿ ಜಾನಪದ ಗಾಯನವೆನ್ನುವುದು ಹುಟ್ಟಿನಿಂದಲೇ ಮಲಶೆಟ್ಟಿಯವರಲ್ಲಿ ಬೆಳೆದುಬಂದು ಅವರನ್ನು ಜಾನಪದದತ್ತ ಆಕರ್ಷಿತರನ್ನಾಗಿಸಿತು.

ಡಾ. ಬಸವರಾಜ ಮಲಶೆಟ್ಟಿ' ರವರ ಕುರಿತು ನುಡಿನಮನ ಕಾರ್ಯಕ್ರಮ


ಜೊತೆಗೆ ಬೆಳಗಾವಿ ಜಿಲ್ಲೆಯಲ್ಲಿ ಆಗ ಜಾನಪದ ಬಯಲಾಟ ಪರಂಪರೆ ತುಂಬಾ ಕ್ರಿಯಾಶೀಲವಾಗಿತ್ತು.  ಹಳ್ಳಿ ಹಳ್ಳಿಗಳಲ್ಲಿ ದೊಡ್ಡಾಟ, ಸಣ್ಣಾಟ ಹಾಗೂ ಪಾರಿಜಾತ ತಂಡಗಳಿದ್ದವು. ಬೇಕಾದಷ್ಟು ಪ್ರದರ್ಶನಗಳು ಪೈಪೋಟಿಯ ಮೇಲೆ ನಡೆಯುತ್ತಿದ್ದವು. ಬಸವರಾಜುರವರು ತಮ್ಮ 11 ನೇ ವಯಸ್ಸಿನಲ್ಲಿಯೇ ತಮ್ಮ ತಂದೆಯವರ ಜೊತೆಗೆ ದೊಡ್ಡಾಟದಲ್ಲಿ ಪಾತ್ರಮಾಡಿದರು. ಬಯಲಾಟಗಳನ್ನು ನೋಡುತ್ತಾ, ಅವಕಾಶ ಸಿಕ್ಕಿದಾಗಲೆಲ್ಲಾ ಬಯಲಾಟಗಳನ್ನು ಆಡುತ್ತಾ ಬೆಳೆದ ಮಲಶೆಟ್ಟರಿಗೆ ಬರುಬರುತ್ತಾ ಜಾನಪದವೇ ಬದುಕಾಯ್ತು, ಉಸಿರಾಯ್ತು, ಶಿಕ್ಷಣವಾಯ್ತು, ಸಂಶೋಧನಾ ಕ್ಷೇತ್ರವಾಯ್ತು. ಡಿಗ್ರಿ ಮುಗಿಸಿದ ನಂತರ ಜಾನಪದ ವಿಷಯದಲ್ಲೇ ಎಂ. ಸ್ನಾತಕೊತ್ತರ ಪದವಿ ಪಡೆದ ಮಲಶೆಟ್ಟರು 1979 ರಲ್ಲಿ ಉತ್ತರ ಕರ್ನಾಟಕದ ಬಯಲಾಟಗಳು ವಿಷಯದಲ್ಲಿ ಅಧ್ಯಯನ ಮಾಡಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದು ಡಾ.ಮಲಶೆಟ್ಟರಾದರು. ಆಗ ಒಮ್ಮೆ ಮಲಶೆಟ್ಟರು ಎಂ.ಪಿ.ಪ್ರಕಾಶರನ್ನು ಬೆಟ್ಟಿಯಾಗಿ ತಮಗೆ ಡಾಕ್ಟರೇಟ್ ಆಗಿದ್ದರ ಬಗ್ಗೆ ಹೇಳಿದರಂತೆ. ಆಗ ಎಂ.ಪಿ.ಪ್ರಕಾಶರವರು ಪಿಹೆಚ್ಡಿ ಮಾಡಿದ್ದರಿಂದ ನಿನಗ ಲಾಭ ಆಯ್ತು, ಆದರೆ ಬಯಲಾಟಕ್ಕೆ ಏನು ಉಪಯೋಗ ಆಯ್ತು ಎಂದು ಪ್ರಶ್ನಿಸಿದರಂತೆ. ಇದರಿಂದ ಎಚ್ಚೆತ್ತ ಮಲಶೆಟ್ಟರು ತಮ್ಮ ಅಕಾಡೆಮಿಕ್ ಪ್ರತಿಭೆಯನ್ನು ಜಾನಪದ ರಂಗಭೂಮಿಯ ಬೆಳವಣಿಗೆಗೆ ಬಳಸಬೇಕೆಂದು ನಿರ್ಧರಿಸಿ ಕಾರ್ಯಪ್ರವೃತ್ತರಾದರು. ಮಲಶೆಟ್ಟರ ವಿಶೇಷವೇನೆಂದರೆ ಡಾಕ್ಟರೇಟ್ ಮಾಡಿ ಚರ್ಚೆ, ಗೋಷ್ಟಿ, ವಿಚಾರಸಂಕಿರಣಗಳಲ್ಲಿ ತಮ್ಮ ವಿದ್ವತ್ತನ್ನು ತೋರಿಸುತ್ತಲೇ ಪ್ರಾಯೋಗಿಕವಾಗಿಯೂ ಜಾನಪದ ಕ್ಷೇತ್ರದಲ್ಲಿ ದುಡಿದರು. ಜಾನಪದ ರಂಗಭೂಮಿಗಾಗಿ ಸದಾ ತುಡಿದರು.

ಪಿ.ಹೆಚ್.ಡಿ ಮಾಡಿ ತಮ್ಮ ಹೆಸರಿನ ಮುಂದೆ ಡಾಕ್ಟರ್ ಎಂದು ಬರೆದುಕೊಂಡು ಕೃತಾರ್ಥರಾಗುವ ಬದಲು ಮಲಶೆಟ್ಟಿರವರು ಸ್ವತಃ ಬಯಲಾಟ ತಂಡವನ್ನು ಕಟ್ಟಿದರು,  ಗಿರಿಜಾ ಕಲ್ಯಾಣ ಎನ್ನುವ ದೀರ್ಘಾವಧಿಯ ಜಾನಪದ ದೊಡ್ಡಾಟವನ್ನು ಎರಡು ಗಂಟೆಯ ಅವಧಿಗೆ ಪರಿಷ್ಕರಿಸಿ ಹಲವಾರು ಊರುಗಳಲ್ಲಿ ಪ್ರದರ್ಶಿಸಿದರು. ಕರ್ನಾಟಕದ ಬಯಲಾಟದ ಇತಿಹಾಸದಲ್ಲಿಯೇ ಅತೀ ಕಡಿಮೆ ಅವಧಿಯ ದೊಡ್ಡಾಟವೆಂದು ಗಿರಿಜಾ ಕಲ್ಯಾಣ ದಾಖಲಾಗಿದೆ. ಹಂಪಿ ಉತ್ಸವದಿಂದ ಹಿಡಿದು ದೆಲ್ಲಿಯ ಕರ್ನಾಟಕ ಸಂಘದ ವರೆಗೂ ಗಿರಿಜಾ ಕಲ್ಯಾಣವನ್ನು ಮಲಶೆಟ್ಟರು ಪ್ರದರ್ಶಿಸಿ ಜಾನಪದ ರಂಗಭೂಮಿಯನ್ನು ಪ್ರಾಯೋಗಿಕವಾಗಿ ಬೆಳೆಸಲು ಶ್ರಮಿಸಿದರು.

ಪಿಹೆಚ್ಡಿ ಗಾಗಿ ಅಕಾಡೆಮಿಕ್ ಅಧ್ಯಯನ ಮಾಡಿದ್ದಕ್ಕಿಂತಲೂ ದೊಡ್ಡಾಟ ತಂಡ ಕಟ್ಟಿಕೊಂಡು ಊರೂರು ತಿರುಗಿ ಪ್ರದರ್ಶನ ಮಾಡುವಾಗಿನ ಪ್ರಾಯೋಗಿಕ ಅನುಭವವೇ ನನಗೆ ಹೆಚ್ಚು ಜ್ಞಾನವನ್ನು ಕೊಟ್ಟಿತು ಎಂದು ಹೇಳುತ್ತಿದ್ದ ಮಲಶೆಟ್ಟರು ಅಕಾಡೆಮಿಕ್ ಥೇಯರಿ ತಿಳುವಳಿಕೆಗಿಂತ ಜನರ ನಡುವಿನಲ್ಲಿಯೇ ತೊಡಗಿಸಿಕೊಂಡಾಗ ದೊರೆಯುವ ಪ್ರ್ಯಾಕ್ಟಿಕಲ್ ಪರಿಜ್ಞಾನವೇ ಶ್ರೇಷ್ಟವಾದದ್ದು ಎಂಬುದನ್ನು ಸಾಬೀತುಪಡಿಸಿದರು.

ಮಲಶೆಟ್ಟರು ಕೇವಲ ಡಾಕ್ಟರೇಟ್ ಮಾಡಿ ತಂಡ ಕಟ್ಟಿ ಸುಮ್ಮನಾದವರಲ್ಲ. ಸ್ವತಃ ದೊಡ್ಡಾಟದ ಕಥೆಗಾರರಗೂ ಆಗಿದ್ದವರು. ದೊಡ್ಡಾಟದಲ್ಲಿ ಕಥೆಗಾರ ಎಂದರೆ ಕಥೆ ಬರೆಯುವವರಲ್ಲ. ವೇದಿಕೆಯ ಮೇಲೆ ನಿಂತು ಹಾಡಿನ ಮೂಲಕ ಕಥೆ ಹೇಳಬೇಕು, ಇಡೀ ತಂಡವನ್ನು ಮುನ್ನಡೆಸಬೇಕು, ಕಷ್ಟಕರವಾದ ಕುಣಿತಗಳನ್ನು ಹೇಳಿಕೊಡಬೇಕು. ಇಡೀ ಪ್ರದರ್ಶನವನ್ನು ನಿರ್ದೇಶಿಸಬೇಕು. ಇಷ್ಟೆಲ್ಲಾ ಕೆಲಸಗಳನ್ನು ಡಾ.ಮಲಶೆಟ್ಟರು ಸ್ವತಃ ಮಾಡುತ್ತಾ ಜಾನಪದ ರಂಗಭೂಮಿಯಲ್ಲಿ ಆಲ್ರೌಂಡರ್ ಆಗಿ ತಮ್ಮನ್ನು ತೊಡಗಿಸಿಕೊಂಡರು.

ಬಯಲಾಟಗಳನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಆಡಿಸಿದರೆ ಬಹುದಿನಗಳ ಕಾಲ ಜಾನಪದ ಕಲೆ ನಿಲ್ಲುವುದಿಲ್ಲ. ಬದಲಾದ ಕಾಲಕ್ಕೆ ತಕ್ಕಂತೆ  ಬಯಲಾಟಗಳನ್ನು ಪರಿಷ್ಕರಿಸಬೇಕು.. ಎಂಬ ಸತ್ಯವನ್ನು ಅರಿತ ಮಲಶೆಟ್ಟರು ಬಯಲಾಟಕ್ಕೆ ಹೊಸ ಕಾಯಕಲ್ಪ ಕೊಡಲು ಪ್ರಯತ್ನಿಸಿದರು. ದೊಡ್ಡಾಟ ಗಿರಿಜಾಕಲ್ಯಾಣವನ್ನು ಎರಡು ಗಂಟೆಗೆ ಪರಿಷ್ಕರಿಸಿ ಪ್ರದರ್ಶಿಸಿದ ಹಾಗೆಯೇ ಶ್ರೀಕೃಷ್ಣ ಪಾರಿಜಾತವನ್ನೂ ಸಹ ಎರಡು ಗಂಟೆ ಅವಧಿಗೆ ಪರಿಷ್ಕರಿಸಿ ನೂರಾರು ಪ್ರದರ್ಶನಗಳನ್ನು ಆಡಿಸಿದರು. ಅರ್ಥವಾಗದ ಬಯಲಾಟದ ಹಾಡುಗಳನ್ನು ಸರಳೀಕರಿಸಿ ಬಯಲಾಟ ಪರಂಪರೆಗೆ ಹೊಸ ಕಾಯಕಲ್ಪಕೊಡಲು ಪ್ರಯತ್ನಿಸಿದರು.

ಡಾ. ಮಲಶೆಟ್ಟಿರವರಿಗೆ ಬಯಲಾಟದ ವಿಶಿಷ್ಟವಾದ ಸಂಗೀತದಲ್ಲಿ ಅಪಾರವಾದ ಆಸಕ್ತಿ ಹಾಗೂ ಜ್ಞಾನವಿತ್ತು. ತಮ್ಮ ಸಂಗೀತದ ಪ್ರತಿಭೆಯನ್ನು ದೊಡ್ಡಾಟ ಪ್ರದರ್ಶನಗಳಲ್ಲಿ ತೋರಿಸಿದರು. ಸ್ವತಃ ಹಾಡುತ್ತಾ. ಸಂಗೀತವನ್ನು ಸಂಯೋಜಿಸುತ್ತಾ, ನಟರನ್ನು ಹುರಿದುಂಬಿಸುತ್ತಾ ಮಲಶೆಟ್ಟರು ದೊಡ್ಡಾಟವನ್ನು ಕಟ್ಟಿಕೊಡುವ ಪರಿ ಅನನ್ಯವಾಗಿತ್ತು. ಹಾವೇರಿ, ಧಾರವಾಡ, ಗದಗ ಪ್ರದೇಶಗಳಲ್ಲಿ  ಬಯಲಾಟದಲ್ಲಿರುವ ಹಾಡು ಮತ್ತು ಸಂಗೀತ ತುಂಬಾ ಶ್ರೇಷ್ಟವಾದದ್ದು. ಕೆಲವರು ಇದಕ್ಕೆ ಏನೇನೋ ಮಿಶ್ರಮಾಡಿ ಹಾಳು ಮಾಡುತ್ತಿದ್ದಾರೆ. ಅದನ್ನು ತಪ್ಪಿಸಿ ಮೂಲ ಹಾಡು ಹಾಗೂ ಸಂಗೀತವನ್ನು ಕಾಯ್ದಿಟ್ಟು ಬಯಲಾಟದ ಸಂಗೀತವನ್ನು ಉಳಿಸಿ, ಬೆಳೆಸಿ ಮುಂದಿನ ಪೀಳಿಗೆಗೆ ಮುಟ್ಟಿಸಬೇಕು ಎನ್ನುವುದು ಡಾ.ಮಲಶೆಟ್ಟರ ಬಯಕೆಯಾಗಿತ್ತು. ನಿಟ್ಟಿನಲ್ಲಿ ಪ್ರಯತ್ನವನ್ನೂ ಮಾಡಿದರು.

ಡಾ. ಬಸವರಾಜ ಮಲಶೆಟ್ಟಿ' ರವರ ಕುರಿತು ನುಡಿನಮನ ಕಾರ್ಯಕ್ರಮ
ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ವೀರಶೈವ ವಿದ್ಯಾವರ್ಧಕ ಸಂಘದ ವಿಜಯನಗರ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಮಲಶೆಟ್ಟರು ಅದೇ ಕಾಲೇಜಿನ ಪ್ರಿನ್ಸಿಪಾಲರಾಗಿ ಒಟ್ಟು 34 ವರ್ಷ (1973-2007) ಸೇವೆ ಸಲ್ಲಿಸಿ ನಿವೃತ್ತರಾದರು. ತಮ್ಮ ಶಿಕ್ಷಕ ವೃತ್ತಿಗಿಂತಲೂ ಮಲಶೆಟ್ಟರು ಹೆಚ್ಚು ಅಸಕ್ತಿಯಿಂದ ಹವ್ಯಾಸಿ ರಂಗಭೂಮಿಯಲ್ಲಿಯೂ ತೊಡಗಿಸಿಕೊಂಡರು. ಸ್ವತಃ ನಾಟಕಗಳಲ್ಲಿ ಅಭಿನಯಿಸಿದರು. ಹೊಸಪೇಟೆಯಲ್ಲಿ ರಂಗಚಟುವಟಿಕೆಗಳು ಹೆಚ್ಚಾಗಿದ್ದೇ ಮಲಶೆಟ್ಟರ ಮುತುವರ್ಜಿಯಿಂದಾಗಿ. ಹಲವಾರು ನಾಟಕ ಪ್ರದರ್ಶನಗಳನ್ನು, ರಂಗೋತ್ಸವಗಳನ್ನು, ರಂಗಭೂಮಿಯ ಕುರಿತ ವಿಚಾರ ಸಂಕಿರಣಗಳನ್ನು ಮಲಶೆಟ್ಟರು ಹೊಸಪೇಟೆಯಲ್ಲಿ ಆಯೋಜಿಸಿ ಬಿಸಿಲೂರಿನಲ್ಲಿ ರಂಗತಂಪನ್ನು ಸಿಂಪಡಿಸಿದರು.
    
ಡಾ.ಮಲಶೆಟ್ಟಿರವರನ್ನು ನೋಡಿದವರಾರೂ ಸಹ ಅವರನ್ನೊಬ್ಬ ಡಾಕ್ಟರೇಟ್ ಮಾಡಿದ ಸ್ಕಾಲರ್ ಎಂದು ಮೇಲ್ನೋಟಕ್ಕೆ ಗುರುತಿಸಲು ಸಾಧ್ಯವೇ ಇಲ್ಲದಷ್ಟು ಸರಳವಾದ ವ್ಯಕ್ತಿ. ಸಾಮಾನ್ಯರಲ್ಲಿ ಸಾಮಾನ್ಯ ಎನಿಸುವಂತಹ ಉಡುಗೆ ತೊಡುತ್ತಿದ್ದರು. ಕೈಗೆ ಸಿಕ್ಕ ಒಂದು ಪ್ಯಾಂಟು, ಮೇಲೊಂದು ಖಾದಿ ಜುಬ್ಬಾ, ಹೆಗಲಿಗೊಂದು ಚೀಲ.. ಇಷ್ಟಿದ್ದರೆ ಸಾಕು ಜಗತ್ತೆಲ್ಲಾ ಸುತ್ತಿಬರುತ್ತಿದ್ದರು. ಹಳ್ಳಿಯಿಂದ ದಿಲ್ಲಿವರೆಗೂ, ಕಾಲೇಜಿನಿಂದ ಸೆಮಿನಾರ್ಗಳವರೆಗೂ ಹೀಗೆ ಸಿಂಪಲ್ಲಾಗೇ ಇರುತ್ತಿದ್ದರು. ಇದೇ ಸರಳ ವೇಶದಲ್ಲೇ ಅಮೇರಿಕಾ ಸುತ್ತಿ ಬಂದ ಮಲಶೆಟ್ಟರು ಜೀವನ ಪರ್ಯಂತ ಹೀಗೆಯೇ ಬದುಕಿದರು. ಜಾನಪದ ಲೋಕದ ಅನುಭಾವಿಯಾಗೇ ಜೀವಿಸಿದರು.

ಅವರ ಉಡುಗೆಯಂತೆಯೇ ಅವರ ಭಾಷೆಯೂ ಸಹ ಸರಳವಾದದ್ದು. ಉತ್ತರ ಕರ್ನಾಟಕದ ವಿಶಿಷ್ಟ ದೇಸಿ ಭಾಷಾ ಪ್ರಯೋಗವನ್ನು ಅವರೆಂದೂ ಬಿಟ್ಟವರಲ್ಲ. ಎಂದೂ ವಿದ್ವಾಂಸರ ಹಾಗೆ ಗ್ರಾಂಥಿಕ ಭಾಷೆಯಲ್ಲಿ ಭಾಷಣವನ್ನೂ ಮಾಡಿದವರಲ್ಲ. ಬುದ್ದಿಜೀವಿಗಳ ಹಾಗೆ ಡಿಪ್ಲೋಮ್ಯಾಟಿಕ್ ಆಗಿ ವರ್ತಿಸಿದವರೂ ಅಲ್ಲ. ಪಕ್ಕಾ ಹಳ್ಳಿಯ ನಿಷ್ಕಪಟವಾದ ಮುಗ್ಧತೆ ಹೊಂದಿದ ಮಾತುಗಾರಿಕೆ ಮಲಶೆಟ್ಟರ ಸರಳತೆಗೆ ಸಾಕ್ಷಿಯಾಗಿತ್ತು. ಸ್ಪಷ್ಟವಾಗಿ ಹೇಳಬೇಕೆಂದರೆ ಯಾವುದೇ ರೀತಿಯ ಮುಖವಾಡಗಳಿಲ್ಲದೇ ಬದುಕಿನ ಪಕ್ಕಾ ದೇಸಿ ಪ್ರತಿಭೆ ಡಾ. ಮಲಶೆಟ್ಟರವರು.

ಮಲಶೆಟ್ಟರಿಗೆ ಜಾನಪದ ರಂಗಭೂಮಿಯ ಮೇಲೆ ಒಲವು ಅದೆಷ್ಟಿತ್ತೆಂದರೆ, ಕರ್ನಾಟಕದ ಯಾವುದೇ ಪ್ರದೇಶದ ಯಾವುದೇ ಊರಲ್ಲಿ ಬಯಲಾಟ ಪ್ರದರ್ಶನ ಇದೆ ಎಂದು ಗೊತ್ತಾದರೆ ಸಾಕು, ತಮ್ಮೆಲ್ಲಾ ಕೆಲಸಗಳನ್ನು ಪಕ್ಕಕ್ಕಿಟ್ಟು ಇಳಿವಯಸ್ಸಿನಲ್ಲಿಯೂ ಆಟ ನೋಡಲು ಹೊರಟೇ ಬಿಡುತ್ತಿದ್ದರು. ಯಾರಾದರೂ ಬಂದು ಕಾರ್ಯಕ್ರಮಕ್ಕೆ ಆಹ್ವಾನಿಸಿದರೆ, ಭಾಷಣಾ ಗಿಷನಾ ಮಾಡುದಿದ್ರ ನಾ ಬರಾಂಗಿಲ್ರಿ, ಬಯಲಾಟ ಇದ್ರ ಹೇಳ್ರಿ ಎಲ್ಲಿದ್ರೂ ಬರ್ತೀನಿ.. ಎನ್ನುತ್ತಿದ್ದ ಮಲಶೆಟ್ಟರು ವ್ಯರ್ಥ ಮಾತುಗಳಿಗಿಂತ ಅರ್ಥಪೂರ್ಣ ನಾಟಕ ಮುಖ್ಯ ಎಂಬುದನ್ನು ಸಾಬೀತುಪಡಿಸುವಂತೆ ಬಾಳಿದರು. ಭಾಷಣ, ಚರ್ಚೆ, ಸಂವಾದ, ವಿಚಾರ ಸಂಕಿರಣಗಳಿಗೆ ಮಲಶೆಟ್ಟರು ಇಷ್ಟಪಟ್ಟು ಹೋಗಿದ್ದೇ ಕಡಿಮೆ. ಬಯಲಾಟದ ಪ್ರಾಯೋಗಿಕ ಶಿಬಿರಗಳು, ಅಭಿನಯ ಕಾರ್ಯಾಗಾರಗಳು, ಬಯಲಾಟ ಪ್ರದರ್ಶನಗಳು ಹಾಗೂ ಜಾನಪದ ಕಾರ್ಯಕ್ರಮಗಳಿಗೆ ಕರೆದರೆ ಎಂತಹ ವ್ಯಯಕ್ತಿಕ ಕೆಲಸಗಳಿದ್ದರೂ ಬಿಟ್ಟು ಹೋಗುತ್ತಿದ್ದರು. ಯುವಕರ ತರಬೇತಿ ಕಾರ್ಯಾಗಾರಗಳಲ್ಲಿ ತಾವೂ ಯುವಕರಂತೆಯೇ ಉತ್ಸಾಹದಿಂದ ಭಾಗವಹಿಸಿದ್ದಿದೆ. ಮಲಶೆಟ್ಟರು ತೀರಿಕೊಳ್ಳುವ ಒಂದು ತಿಂಗಳ ಮುಂಚೆ ಹಾವೇರಿಯಲ್ಲಿ ಗ್ರಾಮರಂಗ ಆಯೋಜಿಸಿದ ದೊಡ್ಡಾಟದ ಕುರಿತು ಕಾರ್ಯಾಗಾರದಲ್ಲಿ ಖುಷಿಯಿಂದ ಭಾಗವಹಿಸಿದ್ದ ಮಲಶೆಟ್ಟರು ಯುವಕರ ಜೊತೆಗೆ ಬೆರೆತು ಉತ್ಸಾಹದಿಂದ ಜೊತೆಯಾಗಿದ್ದನ್ನು ಗ್ರಾಮರಂಗದ ಮಲ್ಲಿಕಾರ್ಜುನ ಮಾಳವಾಡರು ಈಗಲೂ ನೆನಪಿಸಿಕೊಳ್ಳುತ್ತಾರೆ.

ಮಲಶೆಟ್ಟರ ಕೃತಿಗಳು : ಡಾ.ಮಲಶೆಟ್ಟರು ಕೆಲವಾರು ಅಪರೂಪದ ಕೃತಿಗಳನ್ನು ಬರೆದು ಬರೆದಿದ್ದಾರೆ. ಅವುಗಳು ಈಗಲೂ ಅಧ್ಯಯನಶೀಲರಿಗೆ ಆಕರ ಗ್ರಂಥಗಳಾಗಿವೆ. ಉತ್ತರ ಕರ್ನಾಟಕದ ಬಯಲಾಟಗಳು (1983), ಜನಪದ ರಂಗಭೂಮಿ, ಜನಪದ ಲೇಖನಗಳು (ವಿಮರ್ಶಾ ಸಂಕಲನ), ಉತ್ತರ ಕರ್ನಾಟಕದ ರಂಗಸಂಗೀತ, ಉತ್ತರ ಕರ್ನಾಟಕದ ರಂಗಗೀತೆಗಳು, ಗಿರಿಜಾ ಕಲ್ಯಾಣ ದೊಡ್ಡಾಟ (ಸಂಪಾದನೆ), ಶ್ರೀ ಕೃಷ್ಣ ಪಾರಿಜಾತ (ಸಂಪಾದನೆ) (1999),  ಸಣ್ಣಾಟಗಳ ಸಂಗ್ರಹ, ಹಂಪಿ ಒಂದು ಪರಿಚಯ, ಹಂಪಿಯ ಹರಿಹರ, ಹರಿಹರನ ಸಮಗ್ರ ಕೃತಿಗಳ ಪದಕೋಶ, ಉತ್ತರ ಕರ್ನಾಟಕದ ಗೀಗಿ ಪದಗಳು, ಉತ್ತರ ಕರ್ನಾಟಕದ ಜಾನಪದ ವಾದ್ಯಗಳು (1987), ಸ್ವಾತಂತ್ರ್ಯ ಹೋರಾಟ ಮತ್ತು ಲಾವಣಿ ಸಾಹಿತ್ಯ (1988), ಜಾನಪದ ಕಾವ್ಯಗಳಲ್ಲಿ ಭಕ್ತಿ ನಿರೂಪಣೆ (1982), ಡಾ.ಮಲಶೆಟ್ಟಿರವರ ಆಯ್ದ ಬರಹಗಳು, ಮರಿಕಲ್ಲಪ್ಪರವರ ಗೀಗಿ ಪದಗಳು (ಸಂಗ್ರಹ) (2001), ನಾಟಕದ ಹುಟ್ಟು ಮತ್ತು ಬೆಳವಣಿಗೆ, ಪ್ರಾಚೀನ ಕರ್ನಾಟಕದಲ್ಲಿ ನಾಟಕ ಪರಂಪರೆ, ಜೋಳದರಾಶಿ ದೊಡ್ಡನಗೌಡರು (ಜೀವನ ಚರಿತ್ರೆ), ಕೋಪನಾಚಲದ ಅಂಗಡಿ ಸಂಗಣ್ಣ (ಜೀವನ ಚರಿತ್ರೆ), ಚಂದ್ರಶೇಖರ ಕಂಬಾರ (ವ್ಯಕ್ತಿ ಚಿತ್ರಣ), ಬಳ್ಳಾರಿ ಜಿಲ್ಲೆಯ ಜಾನಪದ ಕಥೆಗಳು (1979), ಈಜಿಯಣ್ಣನ ಹಾಡುಗಳು (1982), ಕೋಲಾಟದ ಪದಗಳು (1980), ಸೋಂಡುರು ಕುಮಾರಸ್ವಾಮಿ ಹಾಡುಗಳು (1988), ಆಯ್ದ ವಿಮರ್ಶಾ ಲೇಖನಗಳು... ಹೀಗೆ ಜಾನಪದ ಕ್ಷೇತ್ರದ ಹಲವಾರು ಆಯಾಮಗಳ ಕುರಿತು ಗ್ರಂಥಗಳನ್ನು ಬರೆದ ಮಲಶೆಟ್ಟರು ಮುಂದಿನ ತಲೆಮಾರಿಗೆ ಜಾನಪದವನ್ನು ಅಕ್ಷರಗಳಲ್ಲಿ ದಾಖಲಿಸಿದ್ದಾರೆ.  ವಚನ ಸಾಹಿತ್ಯದಲ್ಲಿ ಆಸಕ್ತಿಯನ್ನು ಹೊಂದಿದ್ದ ಮಲಶೆಟ್ಟರು ಶರಣರ ಕ್ಷೇತ್ರಗಳು (ಅಧ್ಯಯನ ಗ್ರಂಥ), ಬಸವಣ್ಣನವರ ವಚನಗಳು (ಸಂಪಾದನೆ)... ಪುಸ್ತಕಗಳನ್ನು ರಚಿಸಿದ್ದು ಶರಣ ಸಾಹಿತ್ಯದ ಕುರಿತು ಅನೇಕ ಪ್ರಬಂಧಗಳನ್ನು ಮಂಡಿಸಿದ್ದಾರೆ. ಹಲವಾರು ಅಭಿನಂದನಾ ಗ್ರಂಥಗಳು, ಸ್ಮರಣ ಸಂಚಿಕೆಗಳು ಹಾಗೂ ವಾಚಿಕೆಗಳ ಸಂಪಾದಕರಾಗಿಯೂ ಕೆಲಸ ಮಾಡಿದ್ದಾರೆ.

ಡಾ.ಮಲಶೆಟ್ಟರು ಗುಲ್ಬರ್ಗಾ ವಿಶ್ವವಿದ್ಯಾಲಯದ ಮೂರು ವಿದ್ಯಾರ್ಥಿಗಳಿಗೆ  ಜಾನಪದ ವಿಷಯದಲ್ಲಿ ಸಂಶೋಧನಾ (ಪಿಹೆಚ್ಡಿ) ಮಾರ್ಗದರ್ಶಕರಾಗಿದ್ದಾರೆ. ಡಾ.ಕೆ.ರುದ್ರಪ್ಪ, ಡಾ.ನುಚ್ಚಾ ಹಾಗೂ ಡಾ.ಜಿ.ವಿ.ನಿಸಾಜಿ ಮೂವರೂ ಮಲಶೆಟ್ಟರ ಮಾರ್ಗದರ್ಶನದಲ್ಲಿ ಡಾಕ್ಟರೇಟ್ ಮಾಡಿದ್ದರೆ ಡಾ.ಲಕ್ಷಣ್ ಕರಿಬೀಮಣ್ಣನವರು ಡಾ.ಬಸವರಾಜ ಮಲಶೆಟ್ಟಿಯವರ ಬದುಕು ಹಾಗೂ ಬರಹ ವಿಷಯದ ಮೇಲೆ ಅಧ್ಯಯನ ಮಾಡಿ ಡಾಕ್ಟರೇಟ್ ಪಡೆದಿದ್ದಾರೆ. ಡಾಕ್ಟರೇಟ್ ಮಾಡುವುದಕ್ಕಿಂತಲೂ, ಬೇರೆಯವರಿಗೆ ಡಾಕ್ಟರೇಟ್ ಮಾಡಲು ಮಾರ್ಗದರ್ಶನ ಮಾಡುವುದಕ್ಕಿಂತಲೂ ಮಲಶೆಟ್ಟರ ಬದುಕು ಬರಹವೇ ಡಾಕ್ಟರೇಟ್ ಅಧ್ಯಯನದ ವಿಷಯವಾಗಿದ್ದು ಅವರ ಪ್ರತಿಭೆಗೆ ಸಂದ ಗೌರವವಾಗಿದೆ. ಕರ್ನಾಟಕದ ಇತರ ವಿಶ್ವವಿದ್ಯಾಲಯಗಳ ಹನ್ನೆರಡು ಪಿಹೆಚ್ಡಿ ಹಾಗೂ ಮೂರು ಡಿಲಿಟ್ ಮಹಾಪ್ರಬಂಧಗಳ ಮೌಲ್ಯಮಾಪಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
  
ಇತ್ತೀಚೆಗೆ ಮಲಶೆಟ್ಟರು ತೀರಿಕೊಳ್ಳುವ ಕೆಲವು ತಿಂಗಳ ಹಿಂದೆ ದಿ.ಎಂ.ಪಿ.ಪ್ರಕಾಶರ ಪ್ರತಿಷ್ಟಾನದಿಂದ ಮಲಶೆಟ್ಟರಿಗೆ ಜೀವಮಾನದ ಸಾಧನೆಗಾಗಿ ಪ್ರಶಸ್ತಿಯನ್ನು ಕೊಡಲು ತೀರ್ಮಾನಿಸಲಾಗಿತ್ತು. ಐವತ್ತು ಸಾವಿರ ನಗದು ಹಣ ಕೊಟ್ಟು ಪುರಸ್ಕರಿಸಲು ನಿರ್ಧರಿಸಲಾಗಿತ್ತು. ಪ್ರಶಸ್ತಿಯ ಸುದ್ದಿ ಗೊತ್ತಾದ ತಕ್ಷಣ ಮಲಶೆಟ್ಟಿಯವರು ನನಗೀಗಾಲೇ ವಯಸ್ಸಾಗೈತೆ, ವೃದ್ಯಾಪ್ಯದಲ್ಲಿ ಅವಾರ್ಡ ತಗೊಂಡು ನಾ ಮಾಡುದರ ಏನೈತಿ, ಬ್ಯಾರೇ ಯಾರಾದ್ರೂ ಕೆಲಸ ಮಾಡುವ ಹುಮ್ಮಸ್ಸಿರೊರಿಗೆ ಪ್ರಶಸ್ತಿ ಕೊಟ್ರ ಅವರು ಇನ್ನೂ ಉತ್ಸಾಹದಿಂದ ಕೆಲಸ ಮಾಡತಾರ, ನನಗ ಈಗ ಏನ ಕೊಟ್ರೂ ಮೊದಲಿನಂಗ ಕೆಲಸ ಮಾಡಾಕಾಗೂದಿಲ್ಲ... ಎಂದು ಹೇಳಿ ಅತ್ಯಂತ ವಿನಯದಿಂದ ಪ್ರಶಸ್ತಿಯನ್ನು ನಿರಾಕರಿಸಿದರು. ಇಂತಹ ಜನಪರ ಕಾಳಜಿಯ ನಿಷ್ಟಾವಂತ ವ್ಯಕ್ತಿಯನ್ನು ಎಲ್ಲಾದರೂ ನೋಡಲು ಸಾಧ್ಯವಾ? ಪ್ರಶಸ್ತಿ ಪುರಸ್ಕಾರಗಳಿಗೆ ಮಂತ್ರಿಮಹೋದಯರ ಹಿಂದೆ ಬಿದ್ದು, ಸಾಧ್ಯವಾದ ಲಾಬಿಗಳನ್ನೆಲ್ಲಾ ಮಾಡುತ್ತಿರುವ ಸಾವಿರಾರು ಜನ ಸ್ವಾರ್ಥಿಗಳ ಸಂತೆಯಲ್ಲಿ ಡಾ.ಮಲಶೆಟ್ಟರು ಸಂತರ ಹಾಗೆ ಕಾಣುತ್ತಾರೆ. ಮಲಶೆಟ್ಟರ ಸಂತತನದಿಂದಾಗಿಯೇ ಅವರಿಗೆ ಸಂದ ಪ್ರಶಸ್ತಿಗಳು ತುಂಬಾ ಕಡಿಮೆ. ಅವರ ಹರಿಹರನ ಪದಕೋಶಕ್ಕೆ ಶಿವರಾತ್ರೀಶ್ವರ ದತ್ತಿನಿಧಿ ಪ್ರಶಸ್ತಿ ಹಾಗೂ ಕಾವ್ಯಾನಂದ ಪ್ರಶಸ್ತಿಗಳು ದೊರೆತಿವೆ. ಜಾನಪದ ಅಕಾಡೆಮಿಯವರು ಜಾನಪದ ತಜ್ಞ ಪ್ರಶಸ್ತಿ ಕೊಟ್ಟು ಸನ್ಮಾನಿಸಿದ್ದಾರೆ. ೩೩ನೇ ಅಖಿಲ ಕರ್ನಾಟಕ ಜಾನಪದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಆದರೆ ಡಾ. ಮಲಶೆಟ್ಟಿಯವರ ಪ್ರತಿಭೆಗೆ ತಕ್ಕ ಪ್ರಶಸ್ತಿ ಪುರಸ್ಕಾರಗಳು ಹಾಗೂ ಹುದ್ದೆಗಳು ಸಿಗಲಿಲ್ಲ. ಅವರ ಸಾಧನೆಯನ್ನು ಸರಕಾರವಾಗಲೀ ಸರಕಾರೇತರ ಸಂಸ್ಥೆಗಳಾಗಲೀ ಗುರುತಿಸಿ ಪುರಸ್ಕರಿಸಿದ್ದೇ ಕಡಿಮೆ.
         
ಒಮ್ಮೆ ನಾಟಕ ಅಕಾಡೆಮಿಗೆ ಹಾಗೂ ಇನ್ನೊಮ್ಮೆ ಜಾನಪದ ಪರಿಷತ್ತಿಗೆ ಸದಸ್ಯರಾಗಿದ್ದರು, ಹಾಗೂ ಗುಬ್ಬಿ ವೀರಣ್ಣ ಪ್ರಶಸ್ತಿ ಆಯ್ಕೆ ಕಮಿಟಿಗೆ ಸದಸ್ಯರಾಗಿದ್ದನ್ನು ಹೊರತು ಪಡಿಸಿ ಬೇರೆ ಯಾವುದೇ ಜವಾಬ್ದಾರಿಗಳನ್ನು ಮಲಶೆಟ್ಟರಿಗೆ ಕೊಡಲಾಗಲಿಲ್ಲ. ಇಂತಹ ಸರಕಾರಿ ಕೃಪಾಪೋಷಿತ ಹುದ್ದೆಗಳಿಗೆ ಎಂದೂ ಮಲಶೆಟ್ಟರು ಹಾತೊರೆಯಲಿಲ್ಲ. ಲಾಭಿ ಮಾಡಲಿಲ್ಲ. ಒಂದು ಅಕಾಡೆಮಿಯ ಅಧ್ಯಕ್ಷರಾಗುವ ಎಲ್ಲಾ ರೀತಿಯ ಯೋಗ್ಯತೆಗಳೂ ಡಾ.ಮಲಶೆಟ್ಟರವರಿಗಿದ್ದರೂ ಅದನ್ನು ಪಡೆಯುವ ಕನಿಷ್ಟ ಪ್ರಯತ್ನವನ್ನೂ ಮಾಡದ್ದರಿಂದ ಅಂತಹ ಗುರುತರ ಜವಾಬ್ದಾರಿಗಳಿಂದ ವಂಚಿತರಾದರು. ಆಗ ಗ್ರಹಮಂತ್ರಿಯಾಗಿದ್ದ ಎಂ.ಪಿ.ಪ್ರಕಾಶರನ್ನು ಒಂದು ಮಾತು ಕೇಳಿದ್ದರೆ ಸಾಕಾಗಿತ್ತು ಯಾವುದೇ ಅಕಾಡೆಮಿಯ ಅಧ್ಯಕ್ಷರಾಗಬಹುದಾಗಿತ್ತು. ಇಲ್ಲವೇ ಕೇಳಿದ ಪ್ರಶಸ್ತಿ ದೊರೆಯಬಹುದಾಗಿತ್ತು. ಆದರೆ ಮಲಶೆಟ್ಟರ ಸ್ವಾಭಿಮಾನ ಅದಕ್ಕೆ ಅಡ್ಡವಾಯಿತು. ಮಲಶೆಟ್ಟರು ಜಾನಪದ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಸರಿಯಾಗಿ ಸರಕಾರ ಗುರುತಿಸಿದ್ದರೆ ರಾಜ್ಯೋತ್ಸವ, ಕೆಂಪೇಗೌಡ, ಗುಬ್ಬಿವೀರಣ್ಣ ಮೊದಲಾದ ಸರಕಾರಿ ಪ್ರಶಸ್ತಿಗಳನ್ನು ಡಾ.ಮಲಶೆಟ್ಟರಿಗೆ ಕೊಟ್ಟು ಆಯಾ ಪ್ರಶಸ್ತಿಯ ಮೌಲ್ಯವನ್ನು ಹೆಚ್ಚಿಸಿಕೊಳ್ಳಬಹುದಾಗಿತ್ತು. ಆದರೆ ಸರಕಾರಕ್ಕೆ ಹಾಗೂ ಸರಿಕಾರಿ ಅಧಿಕಾರಿಗಳಿಗೆ ಸಾಂಸ್ಕೃತಿಕ ಸೂಕ್ಷ್ಮತೆ ಎಂದೂ ಅರ್ಥವಾಗುವುದಿಲ್ಲ. ಡಾ.ಮಲಶೆಟ್ಟರಂತಹ ಸಾಧಕರು ಸರಕಾರದ ಮಟ್ಟದಲ್ಲಿ ಪರಿಗಣನೆಗೆ ಬರುವುದಿಲ್ಲ.

ಮಲಶೆಟ್ಟರು ಅದೆಂತಾ ಸಂಕೋಚದ ಸ್ವಭಾವದವರೆಂದರೆ ಯಾವುದೇ ಕಾರ್ಯಕ್ರಮದಲ್ಲಿ ನಿರೂಪಕರು ಅವರನ್ನು ಜಾನಪದ ವಿದ್ವಾಂಸರು ಎಂದರೆ ಬೇಸರಪಟ್ಟುಕೊಳ್ಳುತ್ತಿದ್ದರು. ಅಂತಹ ದೊಡ್ಡ ಶಬ್ದಗಳ ಬಳಕೆ ಬೇಕಾಗಿಲ್ಲ ಎಂದು ಆಕ್ಷೇಪಿಸುತ್ತಿದ್ದರು. ಎನಗಿಂತ ಕಿರಿಯರಿಲ್ಲ ಎನ್ನುವ ಶರಣ ಸೂಕ್ತಿಯಂತೆ ಬದುಕಿದ ಮಹಾಚೇತನವದು. ಯಾವುದೇ ಕಾರ್ಯಕ್ರಮಕ್ಕೆ ಹೋದಾಗ ಆಯೋಜಕರು ಕನ್ವೀಯನ್ಸ ಅಂತಾ ಹಣವನ್ನೇನಾದರೂ ಕೊಟ್ಟರೆ ಅದರಲ್ಲಿ ಪುಸ್ತಕ ಪೆನ್ನುಗಳನ್ನು ಖರೀದಿಸಿ ಮಕ್ಕಳಿಗೆ ಹಂಚುತ್ತಿದ್ದರು. ತಿಗಡೊಳ್ಳಿ ಗ್ರಾಮದ ಮಕ್ಕಳೆಲ್ಲಾ ಮಲಶೆಟ್ಟರನ್ನು ಕರೆಯುತ್ತಿದ್ದುದೇ ಚಾಕಲೇಟ್ ತಾತಾ ಎಂದು. ಯಾಕೆಂದರೆ ತಮ್ಮ ಹುಟ್ಟೂರಿಗೆ ಹೋದಾಗಲೆಲ್ಲಾ ಮಲಶೆಟ್ಟರು ಒಂದು ಪಾಕೆಟ್ ಚಾಕಲೇಟ್ಗಳನ್ನು ತೆಗೆದುಕೊಂಡು ಹೋಗಿ ಗ್ರಾಮದ ಮಕ್ಕಳಿಗೆಲ್ಲಾ ಹಂಚುತ್ತಿದ್ದರು. ಮಕ್ಕಳಲ್ಲಿ ಮಕ್ಕಳಾಗಿ ನಲಿಯುತ್ತಿದ್ದ ಮಗುವಿನಂತಹ ಮನಸ್ಸಿನ ಮಲಶೆಟ್ಟರನ್ನು ಊರಿನ ಮಕ್ಕಳು ತುಂಬಾ ಮಿಸ್ ಮಾಡ್ಕೊಂಡಿರುವುದಂತೂ ಸತ್ಯ.

ಮಲಶೆಟ್ಟರ ಹಾಸ್ಯಪ್ರಜ್ಞೆ ಅವರ ಜೊತೆ ಕಾಲಕಳೆದವರಿಗೆ ಖುಷಿ ಕೊಡುವಂತಿತ್ತು. ಉದಾಹರಣೆಗೆ.... ಯಾರಾದರೂ ಮಲಶೆಟ್ಟರಿಗೆ ಪೋನ್ ಮಾಡಿ ಎಲ್ಲಿದ್ದೀರಿ? ಎಂದು ಕೇಳಿದರೆ, ಮಲಶೆಟ್ಟರು ಹುಟ್ಟೂರಿನಲ್ಲಿದ್ದರೆ ಸಂಸ್ಥಾನದಲ್ಲಿದ್ದೇನೆ ಎನ್ನುತ್ತಿದ್ದರು. ಅವರೇನಾದರೂ ಹೊಸಪೇಟೆಯಲ್ಲಿದ್ದರೆ ಸಾಮ್ರಾಜ್ಯದಲ್ಲಿದ್ದೇನೆ ಎಂದುತ್ತರಿಸುತ್ತಿದ್ದರು. ಅವರ ಉತ್ತರದಲ್ಲಿರುವ ಗೂಢಾರ್ಥವನ್ನು ಗ್ರಹಿಸಿದವರಿಗೆ ನಗು ಉಕ್ಕುತ್ತಿತ್ತು. ಯಾಕೆಂದರೆ ಸಂಸ್ಥಾನ ಎಂದರೆ ಕಿತ್ತೂರು ಸಂಸ್ಥಾನ ಎಂದೂ ಸಾಮ್ರಾಜ್ಯ ಎಂದರೆ ಶ್ರೀಕೃಷ್ಣದೇವರಾಯನ ಹಂಪಿ ಸಾಮ್ರಾಜ್ಯವೆಂದೂ ಅವರ ಮಾತಿನೊಳಗಿನ ಮರ್ಮವಾಗಿತ್ತು. ಮಲಶೆಟ್ಟರೊಂದಿಗೆ ಮಾತಾಡುವುದೇ ಒಂದು ರೀತಿಯಲ್ಲಿ ಸಂತಸದ ಸಂಗತಿಯಾಗಿತ್ತು. ಹಿರಿಯರಿರಲಿ, ಕಿರಿಯರಿರಲಿ, ಸಮಕಾಲೀನರಾಗಿರಲಿ.... ಎಲ್ಲರ ಜೊತೆಗೂ ಖುಷಿಯಿಂದ, ಸಂತಸದಿಂದ ಮಾತಾಡುತ್ತಾ, ಆಗಾಗ ನಗಿಸುತ್ತಾ ತಮ್ಮ ಸುತ್ತಲಿನ ಪರಿಸರವನ್ನು ಯಾವಾಗಲೂ ಲವಲವಿಕೆಯಿಂದ ಇಡುವ ಪ್ರಯತ್ನವನ್ನು ಮಲಶೆಟ್ಟರು ಮಾಡುತ್ತಿದ್ದರು.
  
ಇತ್ತೀಚೆಗೆ ಕೆಲವೊಮ್ಮೆ ಮಲಶೆಟ್ಟರ ಆರೋಗ್ಯ ಆಗಾಗ ಕೈಕೊಡುತ್ತಿತ್ತು. ಸಕ್ಕರೆ ಕಾಯಿಲೆ ಉಲ್ಪಣಿಸುತ್ತಿತ್ತು. ಕೆಮ್ಮು ಕಿರಿಕಿರಿಮಾಡತೊಡಗಿತ್ತು.  ದೇಹ ವಿಶ್ರಾಂತಿಯನ್ನು  ಬಯಸುತ್ತಿತ್ತು. ಆದರೂ ಮಲಶೆಟ್ಟರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡುತ್ತಿದ್ದರು. ನಾಟಕ ಪ್ರದರ್ಶನ, ಜಾನಪದ ಕಾರ್ಯಕ್ರಮಗಳಿಗೆ ತಪ್ಪದೇ ಹೋಗುತ್ತಿದ್ದರು. ಇದೆಲ್ಲದರಿಂದ ಬೇಸರಗೊಂಡ ಅವರ ಪತ್ನಿ ಶಾರದಕ್ಕ ಇನ್ನು ಊರೂರು ಸುತ್ತಿದ್ದು ಸಾಕು, ವಿಶ್ರಾಂತಿ ತೆಗೆದುಕೊಳ್ಳಿ, ಏನಾದರೂ ಆದರೆ ನಾನೇ ಚಾಕರಿ ಮಾಡಬೇಕು.. ಎಂದು ಆಕ್ಷೇಪಿಸುತ್ತಿದ್ದರು. ಅದಕ್ಕೆ ಮಲಶೆಟ್ಟರು ಇಡೀ ಆಯುಷ್ಯ ಪೂರಾ ನೀನೇಳಿದಂಗ ಕೇಳ್ತಾ ಬಂದೇನಿ ಶಾರೂ, ಆದರ ನನ್ನ ಪ್ರಾಣ ಇರೂವರೆಗೂ ಯಾವ ಬಯಲಾಟ ಕಾರ್ಯಕ್ರಮಕ್ಕೂ ಹೋಗಬ್ಯಾಡ ಅನಬ್ಯಾಡ. ಯಾಕಂದ್ರ ಜಾನಪದ ಬಯಲಾಟ ಅನ್ನೋದು ನನಗ ಹೆಸರು, ಕೆಲಸ, ಬದುಕು, ಗುರುತು ತಂದು ಕೊಟೈತಿ, ಬದುಕು ಕೊಟ್ಟ ಕಲೆಯನ್ನು ಬಿಟ್ಟು ಹ್ಯಾಂಗಿರಲಿ... ಎಂದು ಹೆಂಡತಿಯನ್ನು ಸಮಾಧಾನ ಪಡಿಸುತ್ತಿದ್ದರು.

ಶಾರದಕ್ಕನ ಕಳಕಳಿಯನ್ನು ಅರ್ಥಮಾಡಿಕೊಂಡು, ವೈದ್ಯರ ಸಲಹೆಗಳನ್ನು ಪರಿಪಾಲಿಸಿ ತಮ್ಮ ಆರೋಗ್ಯದ ಬಗ್ಗೆ ಮಲಶೆಟ್ಟರು ಕಾಳಜಿ ವಹಿಸಿದ್ದರೆ ಇನ್ನೂ ಕೆಲವಾರು ವರ್ಷಗಳ ಕಾಲ ಬದುಕಿರುತ್ತಿದ್ದರು. 65 ವರ್ಷ ಖಂಡಿತ ಸಾಯುವ ವಯಸ್ಸಂತು ಅಲ್ಲವೆ ಅಲ್ಲ. ಆದರೆ ಜೀವಕ್ಕೆ ಜೀವವಾಗಿ ಪ್ರೀತಿಸಿದ ಜಾನಪದದ ಹಿಂದೆ ಅಲೆಮಾರಿಯಂತೆ ಅಲೆದು ಆರೋಗ್ಯದ ಕಡೆ ಕಾಳಜಿವಹಿಸದೇ ಇದ್ದದ್ದು ಅನಾಹುತಕ್ಕೆ ಕಾರಣವಾಯಿತು. ಕೊನೆಗೂ ಜಾನಪದ ಜೀವ ಭವಬಂಧನದಿಂದ ಮುಕ್ತವಾಯಿತು. ಪಂಚಭೂತಗಳಲ್ಲಿ ಐಕ್ಯವಾಯಿತು.

ಮಲಶೆಟ್ಟರಿಗೆ ಕೊನೆಯ ಆಸೆ ಹಾಗೂ ಕನಸುಗಳಿದ್ದವು. ಯಕ್ಷಗಾನಕ್ಕೆ ಪರ್ಯಾಯವಾಗಿ ಬಯಲಾಟವನ್ನು ಜನಪ್ರೀಯಗೊಳಿಸಬೇಕು ಮತ್ತು ಬಯಲಾಟವನ್ನು ಯಕ್ಷಗಾನದ ಹಾಗೆ ಪ್ರಸ್ತುತಕ್ಕೆ ಅಳವಡಿಸಬೇಕು ಎಂದು ಕನಸು ಕಟ್ಟಿದ್ದರು. ಅದು ಅವರೊಬ್ಬರಿಂದ ಆಗುವ ಕೆಲಸವಲ್ಲ. ಕೆಲಸಕ್ಕೆ ಸರಕಾರಿ ಅಕಾಡೆಮಿಗಳು ಕೈಜೋಡಿಸಬೇಕು, ಜಾನಪದ ತಜ್ಞರು ಜೊತೆ ಸೇರಬೇಕು. ಆದರೆ ಮಲಶೆಟ್ಟರ ಕನಸನ್ನು ನನಸಾಗಿಸಲು ಸೂಕ್ತ ಸ್ಪಂದನೆ ಸಿಗಲೇ ಇಲ್ಲ. ಅವರ ಕನಸು ಕನಸಾಗಿಯೇ ಉಳಿಯಿತು. ಹಾಗೆಯೇ ಬಯಲಾಟಗಳ ಸಂಗೀತದ ಟೆಕ್ಸ್ಟನ್ನು ಮುಂದಿನ ತಲೆಮಾರಿಗಾಗಿ ದಾಖಲಾತಿ ಮಾಡಬೇಕು ಹಾಗೂ ಹಾಡು ಕುಣಿತಗಳನ್ನು ಚಿತ್ರೀಕರಿಸಿ ದೃಶ್ಯಮಾಧ್ಯಮದಲ್ಲಿ ದಾಖಲಿಸಬೇಕು ಎನ್ನುವ ಅದಮ್ಯ ಆಸೆಯನ್ನು ಮಲಶೆಟ್ಟರು ಹೊಂದಿದ್ದರು. ಇದಕ್ಕಾಗಿ ಯಕ್ಷಗಾನ ಬಯಲಾಟ ಅಕಾಡೆಮಿಯನ್ನು ಕೇಳಿಕೊಂಡರು, ಸಂಸ್ಕೃತಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು. ಆದರೆ ಯಾರಿಂದಲೂ ಪ್ರತಿಸ್ಪಂದನೆ ಸಿಗಲೇ ಇಲ್ಲ. ಮಲಶೆಟ್ಟರ ಅಂತಿಮ ಆಸೆ ನಿರಾಸೆಯಾಗಿಯೇ ಉಳಿಯಿತು. ಜಾನಪದದ ಕುರಿತು ಕಳಕಳಿತೊರುತ್ತಿದ್ದ ಮಲಶೆಟ್ಟರ ಅಗಲಿಕೆಯಿಂದ ಜಾನಪದ ರಂಗಭೂಮಿಯ ಉಳಿವಿಗಾಗಿ ಅಗತ್ಯವಾಗಿ ಆಗಲೇಬೇಕಾದ ಕೆಲಸಗಳು ನೆನಗುದಿಗೆ ಬಿದ್ದಂತಾಯಿತು. ಜಾನಪದ ದೇಸಿ ಕಲೆಗಳ ಬಗ್ಗೆ ಮಲತಾಯಿ ದೋರಣೆ ತಳೆದಿರುವ ವ್ಯವಸ್ಥೆಗೆ ಜಾನಪದ ಕಲೆಗಳ ಉಳಿವಿನ ಅಗತ್ಯದ ಬಗ್ಗೆ ತಿಳಿಹೇಳಬಹುದಾಗಿದ್ದ ಮಲಶೆಟ್ಟರಂತಹ ಜಾನಪದ ವಿದ್ವಾಂಸರ ಅಗಲಿಕೆ ಜಾನಪದ ಕ್ಷೇತ್ರಕ್ಕೆ ಹಿನ್ನಡೆಯನ್ನುಂಟುಮಾಡಿತು.

ದೇಸಿ ಸಂಸ್ಕೃತಿಗಳ ಮೇಲೆ ವಿದೇಶಿ ವಿಕೃತ ಸಾಂಸ್ಕೃತಿಕ ದಾಳಿ ಮಾಡುತ್ತಿರುವ ಇಂದಿನ ಜಾಗತೀಕರಣದ ಸಂದರ್ಭದಲ್ಲಿ ಡಾ.ಮಲಶೆಟ್ಟಿಯವರಂತಹ ಸರಳ, ಸಜ್ಜನ ಜಾನಪದ ಜಂಗಮನ ಅಗತ್ಯತೆ ತುಂಬಾ ಇತ್ತು. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಹೊರಟುಹೋದ ಮಲಶೆಟ್ಟರ ಅಗಲಿಕೆಗೆ ಸಾಂಸ್ಕೃತಿಕ ಲೋಕ ಅವರ ಆಶಯಗಳನ್ನು ಈಡೇರಿಸಲು ಪ್ರಯತ್ನಿಸುವ ಮೂಲಕ ಸ್ಪಂದಿಸಬೇಕಾಗಿದೆ. ದೇಸಿ ಸಂಸ್ಕೃತಿ ಹಾಗೂ ಜಾನಪದ ರಂಗಭೂಮಿಯ ಉಳಿವಿಗಾಗಿ ಮಲಶೆಟ್ಟರ ಕನಸನ್ನು ನನಸಾಗಿಸಲೇಬೇಕಿದೆ. ದಿಕ್ಕಿನತ್ತ ಎಲ್ಲಾ ಸಾಂಸ್ಕೃತಿಕ ಚಿಂತಕರು, ರಂಗಕರ್ಮಿಗಳು ಶ್ರಮಿಸಬೇಕಿದೆ. ಮೂಲಕ ಡಾ.ಮಲಶೆಟ್ಟರಿಗೆ ಶೃದ್ದಾಂಜಲಿ ಸಲ್ಲಿಸಬೇಕಿದೆ. 

                                     -ಶಶಿಕಾಂತ ಯಡಹಳ್ಳಿ


(ಬಾಗಿಲುಕೋಟೆ ಸಾಹಿತ್ಯ ಬಳಗವು  2014 ಜುಲೈ 12 ರಂದು ಬಾಗಲಕೋಟೆಯ  ಅಂಜುಮನ್ ಪಿ.ಯು.ಕಾಲೇಜಿನಲ್ಲಿ 'ಡಾ. ಬಸವರಾಜ ಮಲಶೆಟ್ಟಿ' ರವರ ಕುರಿತು ನುಡಿನಮನ ಕಾರ್ಯಕ್ರಮವನ್ನು ಆಯೋಜಿಸಿತ್ತು.  ಆ ಕಾರ್ಯಕ್ರಮಕ್ಕೆ ಆಹ್ವಾನಿತನಾದ  ನಾನು ಮಲಶೆಟ್ಟಿಯವರ ಬದುಕು ಬರಹ ಸಾಧನೆ ಕುರಿತು ನೀಡಿದ  ಉಪನ್ಯಾಸದ ಲೇಖನ ರೂಪ ಇಲ್ಲಿದೆ. )