ಸೋಮವಾರ, ಆಗಸ್ಟ್ 17, 2015

“ರಮಾಬಾಯಿ ಅಂಬೇಡ್ಕರ್”: ಸಾರ್ಥಕ ಡಾಕ್ಯೂಡ್ರಾಮಾ ರಂಗಪ್ರಯೋಗ

ಅಂಬೇಡ್ಕರ್ ಎಂಬ ಸೂರ್ಯನೂ, ರಮಾಬಾಯಿ ಎಂಬ ಹಣತೆಯೂ :



ಯಶಸ್ವಿ ಪುರುಷನ ಹಿಂದೆ ಒಬ್ಬಳು ಮಹಿಳೆ ಇರುತ್ತಾಳೆ ಎನ್ನುವುದು ರೂಢಿಗತ ಮಾತು. ಎಲ್ಲಾ ಸಾಧಕರಿಗೂ ಮಾತು ಅನ್ವಯವಾಗುವುದಿಲ್ಲವಾದರೂ ಡಾ.ಬಾಬಾಸಾಹೇಬ ಅಂಬೇಡ್ಕರ್ರವರ ಅಪೂರ್ವ ಸಾಧನೆಯ ಹಿಂದೆ ಅವರ ಪತ್ನಿ ರಮಾಬಾಯಿಯವರು ಒತ್ತಾಸೆಯಾಗಿ ಇದ್ದರೆಂಬುದು ನಿರ್ವಿವಾದ. ಸಾವಿತ್ರಿಬಾಯಿ ಪುಲೆಯವರು ತಮ್ಮ ಪತಿ ಜ್ಯೋತಿಬಾ ಪುಲೆಯವರ ಜೊತೆಗೆ ಸಮಾಜ ಪರಿವರ್ತನೆಗಾಗಿ ಜೊತೆಜೊತೆಯಾಗಿ ನಿಂತು ಸಾಮಾಜಿಕ ಹೋರಾಟದಲ್ಲಿ ನೇರವಾಗಿ ಪಾಲ್ಗೊಂಡಂತೆ ರಮಾಬಾಯಿಯವರು ತಮ್ಮ ಪತಿಯ ಸಾಮಾಜಿಕ ಹೋರಾಟಗಳಲ್ಲಿ ಭಾಗವಹಿಸಲಿಲ್ಲ...... ಗಾಂಧಿಯವರ ಹಲವಾರು ಸತ್ಯಾಗ್ರಹಗಳಲ್ಲಿ ಅವರ ಪತ್ನಿ ಕಸ್ತೂರಿ ಬಾ ರವರು ಭಾಗವಹಿಸಿದಂತೆ ರಮಾಬಾಯಿಯವರು ಸಾರ್ವಜನಿಕವಾಗಿ ಹೋರಾಟಗಳಲ್ಲಿ ಪಾಲ್ಗೊಳ್ಳಲಿಲ್ಲ. ಆದರೆ... ಅದೆಷ್ಟೇ ಕಷ್ಟ ಬಂದರೂ, ಮನೆಯಲ್ಲಿ ಬಡತನ ತಾಂಡವವಾಡುತ್ತಿದ್ದರೂ, ಕುಟುಂಬದಲ್ಲಿ ಸಾವಿನ ಸರಮಾಲೆಯೇ ಘಟಿಸಿದರೂ ರಮಾಬಾಯಿಯವರು ಅಂಬೇಡ್ಕರರವರ ಅನುಪಸ್ಥಿತಿಯಲ್ಲಿ ಎಲ್ಲವನ್ನೂ ನಿಭಾಯಿಸಿದರು. ಸಂಸಾರದ ತಾಪತ್ರಯಗಳಿಂದ ಅಂಬೇಡ್ಕರರ ಭಾರವನ್ನು ಕಡಿಮೆಗೊಳಿಸಿ ಪತಿಯ ವಿದೇಶಿ ವ್ಯಾಸಂಗ ಹಾಗೂ ಸಾಮಾಜಿಕ ಕೆಲಸಗಳಿಗೆ ನೇಪತ್ಯದಲ್ಲಿ ನಿಂತು ಬೆಂಬಲವನ್ನು ಕೊಟ್ಟರು. ಪ್ರತಿಯೊಂದು ಹಂತದಲ್ಲೂ ಪತಿಯನ್ನು ಪ್ರೋತ್ಸಾಹಿಸಿದರು. ಸಂಕಷ್ಟಗಳನ್ನು ನುಂಗಿಕೊಂಡು ಅಂಬೇಡ್ಕರರ ಸಮಾನತೆಯ ಆಶಯಕ್ಕೆ ಪೂರಕವಾಗಿ ಸ್ಪಂದಿಸಿದರು.

ರಮಾಬಾಯಿಯವರ ನಿಸ್ವಾರ್ಥತೆ ಮತ್ತು ಕಷ್ಟಸಹಿಷ್ಣುತನವನ್ನು ಕುರಿತ ವಿವರಗಳನ್ನು ದೃಶ್ಯಗಳ ರೂಪದಲ್ಲಿ ಪ್ರಸ್ತುತಪಡಿಸುವ ಸಾರ್ಥಕ ಪ್ರಯತ್ನವನ್ನು ಧಾರವಾಡದ ಗಣಕರಂಗ ತಂಡವು ಯಶಸ್ವಿಯಾಗಿ ಮಾಡಿದೆ. ಡಾ.ಯಶವಂತ ಮನೋಹರರವರು ಮರಾಠಿಯಲ್ಲಿ ಬರೆದಿರುವ ರಮಾಯಿ ಕಾದಂಬರಿಯನ್ನು  ಡಾ.ಎಚ್.ಟಿ.ಪೋತೆಯವರು ರಮಾಬಾಯಿ ಹೆಸರಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಕಾದಂಬರಿ ಆಧರಿಸಿ ಹಿಪ್ಪರಗಿ ಸಿದ್ಧರಾಮರವರು ರಮಾಬಾಯಿ ಅಂಬೇಡ್ಕರ್ ನಾಟಕವನ್ನು ನಿರ್ದೇಶಿಸಿದ್ದು 2015 ಆಗಸ್ಟ್ 16 ರಂದು ಬೆಂಗಳೂರಿನ ಸೃಷ್ಟಿ ಆಪ್ತ ರಂಗಮಂದಿರದಲ್ಲಿ ಪ್ರಯೋಗಗೊಂಡಿತು. ಕರ್ನಾಟಕ ರಂಗ ಪರಿಷತ್ತು ಹಾಗೂ ಸೃಷ್ಟಿ ದೃಶ್ಯಕಲಾ ಮಾಧ್ಯಮ ಅಕಾಡೆಮಿಗಳು ಜಂಟಿಯಾಗಿ ನಾಟಕದ ಪ್ರದರ್ಶನವನ್ನು ಆಯೋಜಿಸಿದ್ದವು.

ಕಾದಂಬರಿಯನ್ನು ನಾಟಕರೂಪದಲ್ಲಿ ಕಟ್ಟಿಕೊಡುವುದು ಅಷ್ಟೊಂದು ಸುಲಭ ಸಾಧ್ಯವಾದದ್ದಲ್ಲ. ಅದರಲ್ಲೂ ಚಾರಿತ್ರಿಕ ವ್ಯಕ್ತಿಗಳ ವಿವರಗಳ ಕುರಿತ ನಾಟಕ ಇನ್ನೂ ಕಷ್ಟಕರವಾದದ್ದು. ಆದರೂ ಕ್ಲಿಷ್ಟಕರವಾದದ್ದನ್ನು ಸರಳವಾಗಿ ಕಟ್ಟಿಕೊಡುವ ಪ್ರಯತ್ನವನ್ನು ಯುವ ನಿರ್ದೇಶಕ ಹಿಪ್ಪರಿಗಿ ಸಿದ್ದರಾಮ ಮಾಡಿದ್ದಾರೆ. ನಾಟಕ ಅಭಿನಯ ಕಲಾವಿದರಾದ ಸಿದ್ಧರಾಮರವರ ಮೊಟ್ಟಮೊದಲ ನಿರ್ದೇಶನವಾಗಿದ್ದು  ಪ್ರಥಮ ಪ್ರಯತ್ನದಲ್ಲೇ ಭರವಸೆಯನ್ನು ಮೂಡಿಸುವಂತಹ ನಾಟಕವನ್ನು ಕಟ್ಟಿ ಕಟ್ಟಿಕೊಟ್ಟಿದ್ದಾರೆ.

ಅಂಬೇಡ್ಕರರು ರಮಾಬಾಯಿಯವರನ್ನು ಮದುವೆಯಾಗಿದ್ದು, ಅಂಬೇಡ್ಕರರ ತಂದೆ ಅಸುನೀಗಿದ್ದು. ಸಾಹು ಮಹಾರಾಜರ ಸಹಾಯದಿಂದ ಉನ್ನತ ವ್ಯಾಸಂಗಕ್ಕಾಗಿ ಅಂಬೇಡ್ಕರರು ವಿದೇಶಕ್ಕೆ ಹೋಗಿದ್ದು. ಅಂಬೇಡ್ಕರರ ಅನುಪಸ್ಥಿತಿಯಲಿ ರಮಾಬಾಯಿಯವರು ಕಷ್ಟನಷ್ಟಗಳನ್ನು ಎದುರಿಸಿ ಕುಟುಂಬವನ್ನು ನಿರ್ವಹಿಸಿದ್ದು, ಮನೆಯಲ್ಲಿದ್ದ ಹಿರಿಯರು ಹಾಗೂ ಕರುಳ ಕುಡಿಗಳು ಚಿಕಿತ್ಸೆಗೆ ಹಣವಿಲ್ಲದೇ ತೀರಿಕೊಂಡಿದ್ದು, ಐದು ಮಕ್ಕಳಲ್ಲಿ ನಾಲ್ಕು ಮಕ್ಕಳ ಸಾವು ಹಾಗೂ ಅಪಾರವಾದ ಸಂಕಷ್ಟಗಳನ್ನು ರಮಾಬಾಯಿಯವರು ಅನುಭವಿಸುತ್ತಲೇ ಪತಿಯ ಬೆಳವಣಿಗೆಗೆ ಸಹಕರಿಸಿದ್ದು, ಓದು, ವಿದ್ಯಾಭ್ಯಾಸ, ಸಭೆ ಸಮಾರಂಭ ಹೋರಾಟಗಳಲ್ಲೇ ಅಂಬೇಡ್ಕರರವರು ನಿರತರಾಗಿದ್ದಾಗ ಮನೆಯ ಜವಾಬ್ದಾರಿಯನ್ನು ಹೊತ್ತುಕೊಂಡು ಕುಟುಂಬವನ್ನು ರಮಾಬಾಯಿಯವರು ಮುನ್ನಡೆಸಿದ್ದು, ಎಲ್ಲಾ ರೀತಿಯ ಸಾವು ನೋವು ಭಾರಗಳಿಂದ ಅನಾರೋಗ್ಯಕ್ಕೆ ತುತ್ತಾದ ರಮಾಬಾಯಿಯವರು ಪತಿಯ ಸಾಧನೆಗೆ ಸ್ಪೂರ್ತಿಯನ್ನು ತುಂಬುತ್ತಲೇ ತೀರಿಕೊಂಡಿದ್ದು.... ತಂದೆ, ಸಹೋದರ ಹಾಗೂ ಪತ್ನಿಯ ನಿಸ್ವಾರ್ಥ ಸಹಕಾರಗಳು ಅಂಬೇಡ್ಕರರ ಹೋರಾಟದ ಬದುಕಿಗೆ ಪ್ರೇರೇಪಣೆ ನೀಡಿದ್ದು... ಹೀಗೆ ಎಲ್ಲಾ ಘಟನೆಗಳನ್ನು ರಮಾಬಾಯಿ ಅಂಬೇಡ್ಕರ್ ನಾಟಕವು ಕಟ್ಟಿಕೊಡುತ್ತಾ ಹೋಗುತ್ತದೆ. ಅಂಬೇಡ್ಕರರ ಹೋರಾಟದ ಬದುಕಿನ ಹಾದಿಯನ್ನು   ಕೌಟುಂಬಿಕ ಸಮಸ್ಯೆಗಳಿಂದ ಮುಕ್ತಗೊಳಿಸಿ ಅವರ ಸಾಧನೆಯನ್ನು ಸುಗಮಗೊಳಿಸಲು ಶ್ರಮಿಸಿದ ರಮಾಬಾಯಿಯವರ ವ್ಯಕ್ತಿತ್ವವನ್ನು ನಾಟಕ ತೆರೆದಿಡುವಲ್ಲಿ ಯಶಸ್ವಿಯಾಗಿದೆ.
  
ಇಡೀ ನಾಟಕ ಲೈವ್ ಡಾಕ್ಯೂಮೆಂಟರಿ ರೀತಿಯಲ್ಲಿ ಪ್ರಸ್ತುತಗೊಂಡಿದೆ. ಚಾರಿತ್ರಿಕ ಕಾಲಘಟ್ಟದ ಹಲವಾರು ವಿವರಗಳು ಇಸ್ವಿಗಳ ಸಮೇತ ನಿರೂಪಿಸಲಾಗಿದೆ. ಅಂಬೇಡ್ಕರರವರನ್ನು  ಮದುವೆಯಾದಾಗಿನಿಂದ ರಮಾಬಾಯಿಯವರ ಸಾವಿನವರೆಗೂ ನಡೆದ ಕೆಲವು ಆಯ್ದ ಘಟನೆಗಳನ್ನು ಕ್ರಮಬದ್ದವಾಗಿ ಜೋಡಿಸಿ ದೃಶ್ಯರೂಪದಲ್ಲಿ ಪ್ರಸ್ತುತಪಡಿಸಲಾಗಿದೆ. ನಾಟಕಕ್ಕಿಂತಲೂ ಇದನ್ನು ಸಾಕ್ಷಚಿತ್ರ ಮಾದರಿ ನಾಟಕ ಪ್ರಕಾರ ಎನ್ನುವುದು ಹೆಚ್ಚು ಸೂಕ್ತ. ಕಥಾನಕದ ರೂಢಿಗತ ಶೈಲಿಯನ್ನು ಬಿಟ್ಟು ಚಾರಿತ್ರಿಕ ಘಟನೆಗಳನ್ನು ಆಯ್ದು ಜೋಡಿಸಿ ನಿರೂಪಿಸುವ ವಿಭಿನ್ನ ಪ್ರಯತ್ನವನ್ನು ಸಿದ್ದರಾಮರವರು ಮಾಡಿದ್ದಾರೆ.

ನಾಟಕದ ಹೆಸರು ರಮಾಬಾಯಿಯವರದಾದರೂ ಇಡೀ ನಾಟಕದ ಕೇಂದ್ರದಲ್ಲಿರುವುದು ಡಾ. ಅಂಬೇಡ್ಕರರವರೇ. ಅಂಬೇಡ್ಕರರವರ ಸುತ್ತ ಪರೀಧಿಯಲ್ಲಿ ಅವರ ಸಾಧನೆಗೆ ಪೂರಕವಾಗಿ ಪ್ರೋತ್ಸಾಹಿಸಿದ ಅವರ ತಂದೆ ಸುಬೇದಾರ್ ರಾಮಜಿ, ಪತ್ನಿ ರಮಾಬಾಯಿ ಹಾಗೂ ಶಾಹೂ ಮಹಾರಾಜರ ಪಾತ್ರಗಳು ಚಿತ್ರಿತಗೊಂಡಿವೆ. ಅಂಬೇಡ್ಕರರ ವಿದ್ಯಾಭ್ಯಾಸ, ವಿದೇಶಿ ವ್ಯಾಸಂಗ, ಸಾಮಾಜಿಕ ಹೋರಾಟಗಳೇ ನಾಟಕದಲ್ಲಿ ಪ್ರಮುಖವಾಗಿದ್ದು ರಮಾಬಾಯಿಯವರು ಪತಿಯ ಅನುಪಸ್ಥಿತಿಯಲ್ಲಿ ಮನೆವಾರ್ತೆ ನೋಡಿಕೊಳ್ಳುವ ಬದ್ಧತೆಯಿರುವ ಹೌಸ್ವೈಪ್ ಆಗಿ ಬಿಂಬಿತಗೊಂಡಿದ್ದಾರೆ. ಅಂಬೇಡ್ಕರವರು ಕತ್ತಲೆಯಲ್ಲಿದ್ದ ಜನಾಂಗಕ್ಕೆ ಬೆಳಕಾದರೆ... ರಮಾಬಾಯಿಯವರು ಅಂಬೇಡ್ಕರರ ಕುಟುಂಬ ನಿರ್ವಹಣೆಗಾಗಿ ತಮ್ಮನ್ನೇ ತಾವು ಸುಟ್ಟುಕೊಂಡು ಬೆಳಕು ನೀಡುವ ಹಣತೆಯಾಗಿದ್ದನ್ನು ದೃಶ್ಯ ರೂಪದಲ್ಲಿ ತೋರಿಸುವುದು ನಾಟಕದ ಉದ್ದೇಶವಾಗಿದೆ. ಹಾಗೂ ತನ್ನ ಆಶಯದಲ್ಲಿ ನಾಟಕ ಸಫಲವಾಗಿದೆ.



ಎಂತಹುದೇ ಸಾಧಕನಾದರೂ ಕೌಟುಂಬಿಕ ಬಡತನ ಹಾಗೂ ಸಾವು ನೋವುಗಳು ಆತನನ್ನು ಹೈರಾಣಾಗಿಸುತ್ತವೆ... ಅತಿರಥ ಮಹಾರಥರನ್ನೇ ತಮ್ಮ ಗುರಿಯಿಂದ ವಿಚಲಿತರನ್ನಾಗಿಸುತ್ತವೆ. ದ್ವನಿಯಿಲ್ಲದ ಜನಾಂಗಕ್ಕೆ ದ್ವನಿಯಾದ ಅಂಬೇಡ್ಕರರಂತಹ ಮಹಾನ್ ಚೇತನವು ಕೌಟುಂಬಿಕ ತಾಪತ್ರಯಗಳ ಬಿಸಿಯಲ್ಲಿ ಕರಗಿ ಹೋಗದಂತೆ ಕಾಪಾಡಿದ್ದು ಅವರ ಪತ್ನಿ ರಮಾಬಾಯಿಯವರು. ಅಪಾರ ಕಷ್ಟಗಳನ್ನು ನಿರ್ವಹಿಸುತ್ತಲೇ ಅಂಬೇಡ್ಕರರವರನ್ನು ಸಾಮಾಜಿಕ ಕೆಲಸಗಳಿಗೆ ಪ್ರತಿ ಹಂತದಲ್ಲೂ ಬೆಂಬಲ ಕೊಟ್ಟಿದ್ದರಿಂದಲೇ ಅಂಬೇಡ್ಕರರ ಸಾಧನೆಯಲ್ಲಿ ರಮಾಬಾಯಿ ಪಾಲುದಾರರಾಗಿದ್ದಾರೆ. ಅಂಬೇಡ್ಕರ್ ಎನ್ನುವ ದಲಿತ ಸೂರ್ಯನ ಪ್ರಭಾವಳಿಯಿಂದ  ಪ್ರಭಾವಿತರಾಗುವ ಜನತೆ ಪ್ರತಿಭೆಯ ಪೋಷಣೆಗೆ  ನೇಪತ್ಯದಲ್ಲಿದ್ದುಕೊಂಡೇ ಕಾರಣರಾದವರನ್ನು ಮರೆತುಬಿಡುತ್ತಾರೆ. ಅಂಬೇಡ್ಕರರವರ ಬೆಳವಣಿಗೆ ಹಾಗೂ ಸಾಧನೆಗೆ ಕಾರಣೀಕರ್ತರಾದವರ ಮೇಲೂ ಬೆಳಕು ಚೆಲ್ಲಿ ಅವರ ಅಸ್ತಿತ್ವವನ್ನು ಜನತೆಗೆ ತೋರಿಸಿ ಕೊಡುವ ಕೆಲಸವನ್ನು ರಮಾಬಾಯಿ.... ನಾಟಕ ಮಾಡುತ್ತದೆ. ಇದು ರಮಾಬಾಯಿಯಂತಹ ಹಲವಾರು ನಿಸ್ವಾರ್ಥ ಮಹಿಳೆಯರಿಗೆ ಸಲ್ಲಿಸಿದ ಗೌರವವೂ ಆಗಿದೆ. ಸಾಧಕರ ಸಾಧನೆಯ ಹಿಂದೆ ಸತಿಯಾದವರ ಪಾತ್ರ ಎಷ್ಟೊಂದು ಮಹತ್ವದ್ದಾಗಿರುತ್ತದೆ ಎನ್ನುವುದರ ಪ್ರಾತ್ಯಕ್ಷಿಕತೆ ನಾಟಕದಲ್ಲಿದೆ. ಅಂಬೇಡ್ಕರರವರ ಬದುಕು, ಬರಹ, ಸಾಧನೆ, ವಿಚಾರಗಳ ಬಗ್ಗೆ ಈಗಿನ ತಲೆಮಾರಿನವರಿಗೆ ಗೊತ್ತಿರುವುದೇ ಕಡಿಮೆ. ಇನ್ನು ರಮಾಬಾಯಿಯವರ ಕುರಿತ ಮಾಹಿತಿಯಂತೂ ಇಲ್ಲವೇ ಇಲ್ಲ ಎನ್ನಬಹುದು. ಇಂತಹ ಸಂದರ್ಭದಲ್ಲಿ ನಾಟಕದ ಮೂಲಕ ಅಂಬೇಡ್ಕರರಂತಹ ಮಹಾನ್ ಚೇತನ ಹಾಗೂ ರಮಾಬಾಯಿಯವರಂತಹ ಅಪರೂಪದ ವ್ಯಕ್ತಿತ್ವವನ್ನು ಪರಿಚಯಿಸುವ ಕೆಲಸ ನಿಜಕ್ಕೂ ಸ್ತುತ್ಯಾರ್ಹ.

ಆದರೆ ಗೊತ್ತಿದ್ದೊ ಗೊತ್ತಿಲ್ಲದೆಯೋ ನಾಟಕದಲ್ಲಿ ಕೆಲವು ಮಹಿಳಾ ವಿರೋಧಿ ಅಂಶಗಳು ಸೇರಿಕೊಂಡಂತಿವೆ. ಉದಾಹರಣೆಗೆ... ನಾಟಕದಲ್ಲಿ ಹಲವಾರು ಬಾರಿ ಮುತ್ತೈದೆ ಎನ್ನುವ ಪ್ರಸ್ತಾಪ ಬರುತ್ತದೆ. ನಿರೂಪಕರೂ ಸಹ ರಮಾಬಾಯಿಯವರ ಮುತ್ತೈದೆತನ ಗಟ್ಟಿಯಾಗಿತ್ತು, ಅಂಬೇಡ್ಕರರ ಮೇಲೆ ಹಲ್ಲೆಯಾದರೂ ಬದುಕುಳಿದರು ಎಂದು ಹೇಳುತ್ತಾರೆ. ಕೊನೆಗೆ ರಮಾಬಾಯಿ ಪಾತ್ರ ಸಾಯುವಂತಹ ಸಂದರ್ಭದಲ್ಲಿ ಅಂಬೇಡ್ಕರರಿಗೆ ಮುತ್ತೈದೆತನ ನೀಡಿದಿರಿ... ನನಗೆ ಮುತ್ತೈದೆಯಾಗಿ ಸಾಯುವುದಕ್ಕೆ ತುಂಬಾ ಹೆಮ್ಮೆ ಎನ್ನಿಸುತ್ತದೆ ಎಂದು ಹಲವಾರು ಬಾರಿ ಹೇಳುತ್ತಾರೆ. ಆದರೆ... ಮುತ್ತೈದೆತನ, ಶೀಲ, ಪಾತಿವ್ರತ್ಯ ಅನ್ನೋದೆಲ್ಲಾ ಮೇಲ್ವರ್ಗದ ಪುರೋಹಿತಶಾಹಿ ಪರಿಕಲ್ಪನೆಗಳು. ಮಹಿಳೆಯರ ಮೇಲೆ ಹೇರಲ್ಪಟ್ಟ ಪುರುಷ ಪ್ರಧಾನ ಹುನ್ನಾರಗಳು. ಜೀವವೀರೋಧಿ ಮೌಲ್ಯಗಳನ್ನು ವಿರೋಧಿಸುವ ಅಂಬೇಡ್ಕರರಂತಹ ವಿಚಾರವಾದಿಗಳ ಹೆಂಡತಿ ಮುತೈದೆ ಸಾವಿಗಾಗಿ ಹಂಬಲಿಸುವುದು ಹಾಗೂ ಅದನ್ನು ಕೇಳಿಕೊಂಡು ಅಂಬೇಡ್ಕರರ ಪಾತ್ರ ಸುಮ್ಮನಿರುವುದು ನಾಟಕದಲ್ಲಿ ಆಭಾಸಕಾರಿಯಾಗಿ ಮೂಡಿಬಂದಿದೆ. ಜೊತೆಗೆ.... ಇಡೀ ನಾಟಕದಲ್ಲಿ ಅಂಬೇಡ್ಕರರು ತಮ್ಮ ಪತ್ನಿಯನ್ನು ಮನೆಗೆ ಮಾತ್ರ ಸೀಮಿತಿಗೊಳಿಸಿರುವುದು ಕಂಡುಬರುತ್ತದೆ. ಅದೆಷ್ಟೋ ಸಲ ರಮಾಬಾಯಿಯವರು ತಾನೂ ಹೋರಾಟಕ್ಕೆ, ಸಭೆ ಸಮಾರಂಭಗಳಿಗೆ ಬರುತ್ತೇನೆಂದು ಕೇಳಿಕೊಂಡರೂ ಅಂಬೇಡ್ಕರರು ಆಕೆಯ ಅನಾರೋಗ್ಯದ ನೆಪ ಹೇಳಿ ಮನೆಯಲ್ಲೇ ಇರಲು ಒತ್ತಾಯಿಸುತ್ತಾರೆ. ಇದು ನಾಟಕದ ಪ್ರೇಕ್ಷಕರಲ್ಲಿ ಅಂಬೇಡ್ಕರರು ಮಹಿಳಾ ವಿರೋಧಿಯಾಗಿದ್ದರೇನೋ ಎನ್ನುವ ಭಾವನೆಯನ್ನು ಹುಟ್ಟುಹಾಕುವಂತಿದೆ. ಮಹಿಳಾ ವಿರೋಧಿ ಮನುವಾದಿತನವನ್ನು ಅಂಬೇಡ್ಕರರಂತಹ ಜೀವಪರ ಚೇತನಗಳಿಗೆ ಆರೋಪಿಸುವುದು ಅಪಾಯಕಾರಿಯಾಗಿದೆ. ನಿಟ್ಟಿನಲ್ಲಿ ನಿರ್ದೇಶಕರು ಆಲೋಚಿಸಿ ಸೂಕ್ತ ಬದಲಾವಣೆಯನ್ನು ಮಾಡಿಕೊಳ್ಳುವುದುತ್ತಮ.

ವಿದೇಶದಲ್ಲಿದ್ದ ಅಂಬೇಡ್ಕರ್ ಹಾಗೂ ಊರಲ್ಲಿದ್ದ ರಮಾಬಾಯಿಯವರು ಪರಸ್ಪರ ಪತ್ರವನ್ನು ಬರೆದು ಓದುವ ರೀತಿ ನಾಟಕದಲ್ಲಿ ಸೊಗಸಾಗಿ ಮೂಡಿಬಂದಿದೆ. ಅಂಬೇಡ್ಕರರ ಕೈಯಲ್ಲಿ ಬುದ್ದ ಚರಿತೆಯ ಕನ್ನಡ ಪುಸ್ತಕ ಕೊಟ್ಟಿದ್ದು ಹಾಗೂ ಅದೇ ಪುಸ್ತಕವನ್ನು ರಮಾಬಾಯಿಯವರು ಓದುವುದು ನಾಟಕದಲ್ಲಿದೆ. ವಾಸ್ತವದಲ್ಲಿ ಕನ್ನಡವೇ ಬಾರದ ಅಂಬೇಡ್ಕರ್ ದಂಪತಿಗಳನ್ನು ಕನ್ನಡೀಕರಿಸುವ ಪ್ರಯತ್ನ ಅನಗತ್ಯವೆನಿಸುತ್ತದೆ. ಏನು ಬೇಕಾದರೂ ಸಹಾಯ ಮಾಡುತ್ತೇನೆಂದು ಸೊಲ್ಲಾಪುರ ಸಂಸ್ಥಾನದ ಚತ್ರಪತಿ ಸಾಹೂ ಮಹಾರಾಜರೇ  ಅಂಬೇಡ್ಕರರ ಮನೆಗೆ ಬಂದು ಹೇಳಿದ ನಂತರವೂ ಮನೆಯ ಹಿರಿಯರಿಗೆ ಹಾಗೂ ಮಕ್ಕಳಿಗೆ ಚಿಕಿತ್ಸೆ ಕೊಡಿಸಲೂ ಹಣವಿಲ್ಲದ ಬಡತನವಿರುವುದು ಹೇಗೆ ಸಾಧ್ಯ? ಸಾಹೂ ಮಹಾರಾಜರು ಕೊಟ್ಟ ಮಾತು ತಪ್ಪಿದರೇ ಅಥವಾ ರಮಾಬಾಯಿಯವರೇ ಸಹಾಯ ಕೇಳಲಿಲ್ಲವೇ ಎಂಬುದು ಸ್ಪಷ್ಟವಾಗಿಲ್ಲ. ರಾಜಾಶ್ರಯವಿದ್ದರೂ ಚಿಕಿತ್ಸೆಗೆ ಹಣವಿಲ್ಲದೇ ಕುಟುಂಬದಲ್ಲಿ ಸಾವಿನ ಸರಮಾಲೆಯೇ ಮುಂದುವರೆದದ್ದು ಮಾತ್ರ ದುರಂತ.

ತಾತ್ವಿಕತೆಗಳನ್ನು ಪಕ್ಕಕ್ಕಿಟ್ಟು ನಾಟಕದ ಪ್ರದರ್ಶನದ ಬಗ್ಗೆ ನೋಡಿದರೆ... ಇಡೀ ನಾಟಕ ಪ್ರೇಕ್ಷಕರ ಗಮನ ಸೆಳೆಯುತ್ತದೆ. ನಿರೂಪಣೆ ಹಾಗೂ ದೃಶ್ಯ ಜೋಡಣೆ ಎನ್ನುವ ಸಾಂಪ್ರದಾಯಿಕ ತಂತ್ರಗಾರಿಕೆಯನ್ನು ಬಳಸುವುದರ ಜೊತೆಗೆ ನಿರೂಪಕರೇ ಪಾತ್ರವಾಗುವ ಹಾಗೂ ಪಾತ್ರದಾರಿಗಳೇ ನಿರೂಪಕರಾಗಿ ವಿವರಗಳನ್ನು ಹೇಳುವಂತಹ ರಂಗತಂತ್ರವು ಇಂತಹ ಡಾಕ್ಯೂಡ್ರಾಮಾ ಶೈಲಿಯ ನಾಟಕಕ್ಕೆ ಸೂಕ್ತವಾಗಿದೆಇನ್ನೊಂದಿಷ್ಟು ನಿರೂಪಣೆ ಹಾಗೂ ದೃಶ್ಯಗಳ ನಡುವೆ ಕರಾರುವಕ್ಕಾಗಿ ಬ್ಲೆಂಡ್ ಮಾಡುವ ಅಗತ್ಯವಿದೆ. ಆಪ್ತರಂಗಮಂದಿರದ ಇತಿಮಿತಿಯಲ್ಲೂ ಎರಡು ಗಂಟೆಯ ನಾಟಕವನ್ನು ಕಟ್ಟಿಕೊಟ್ಟಿದ್ದು ಹಾಗೂ ಪ್ರೇಕ್ಷಕರನ್ನು ಹಿಡಿದಿಟ್ಟಿದ್ದು ನಿರ್ದೇಶಕರ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ. ಕೊನೆಯ ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ರಮಾಬಾಯಿಯವರ ಅಂತಿಮ ಕ್ಷಣಗಳನ್ನು ಭಾವನಾತ್ಮಕವಾಗಿ ಚಿತ್ರಿಸಿದ್ದು ನೋಡುಗರು ಭಾವತೀವ್ರತೆಗೊಳಗಾಗಿ ಕಣ್ಣೀರಾಗುವಷ್ಟು ಸಶಕ್ತವಾಗಿ ಮೂಡಿಬಂದಿದೆ. ಇಡೀ ನಾಟಕ ಇನ್ನೂ ಸ್ವಲ್ಪ ಪರಿಷ್ಕರಣೆ ಮಾಡಿ ಅರ್ಧ ಗಂಟೆಯಷ್ಟು ಎಡಿಟ್ ಮಾಡಿದರೆ, ನಿರೂಪಣೆಗಿಂತಲೂ ದೃಶ್ಯಗಳಿಗೆ ಹೆಚ್ಚು ಮಹತ್ವಕೊಟ್ಟರೆ ನಾಟಕ ಇನ್ನೂ ಸೊಗಸಾಗಿ ಮೂಡಿಬರುವ ಸಾಧ್ಯತೆಗಳಿವೆ.
 
ಮೂಲತಃ ಹಿಪ್ಪರಗಿ ಸಿದ್ಧರಾಮರವರು ನಟರಾಗಿದ್ದರಿಂದ ನಾಟಕದ ಕಲಾವಿದರ ಮೇಲೆ ಹೆಚ್ಚು ಕೆಲಸಮಾಡಿದ್ದಾರೆಅಂಬೇಡ್ಕರ್ ಪಾತ್ರದಾರಿ ವೈಭವ ಸಹವಾಸಿಯವರು ಡಾ.ಅಂಬೇಡ್ಕರರನ್ನು  ಸ್ವಕಾಯ ಪ್ರವೇಶ ಮಾಡಿಕೊಂಡು ಪ್ರಭುದ್ಧವಾಗಿ ಅಭಿನಯಿಸಿದ್ದಾರೆ. ರಮಾಬಾಯಿ ಪಾತ್ರದಾರಿಗೆ ಹೋಲಿಸಿದರೆ ದೈಹಿಕವಾಗಿ ವಯಸ್ಸಲ್ಲಿ ಚಿಕ್ಕವರಂತೆ ವೈಭವ್ ಕಂಡರೂ ಅವರ ಸಮರ್ಥ ನಟನೆ ನ್ಯೂನ್ಯತೆಯನ್ನು ಮರೆಸುವಂತೆ ಮೂಡಿಬಂದಿದೆ. ರಮಾಬಾಯಿ ಪಾತ್ರಕ್ಕೆ ರಾಜೇಶ್ವರಿ ಸುಳ್ಯರವರು ಜೀವದುಂಬಿ ನಟಿಸಿ ಇಡೀ ನಾಟಕದ ಜೀವಾಳವೇ ಆಗಿದ್ದಾರೆ. ಕ್ಲೈಮ್ಯಾಕ್ಸ್ ದೃಶ್ಯದಲ್ಲಂತೂ ರಾಜೇಶ್ವರಿಯವರ ಕರುಣಾರಸಭರಿತ ಅಭಿನಯ ನೋಡುಗರ ಕಣ್ಣುಗಳನ್ನು ತೇವ ಮಾಡಿದ್ದಂತೂ ಸುಳ್ಳಲ್ಲ. ನಂತರ ಅಂಬೇಡ್ಕರರ ದುಃಖ ಹಾಗೂ ತಲ್ಲಣಗಳನ್ನು ವೈಭವ್ ತಮ್ಮ ಮುಖಭಾವದಲ್ಲೇ ತೋರಿಸಿದ ರೀತಿಯಂತೂ ಸ್ಮರಣೀಯ. ವೈಭವ ಹಾಗೂ ರಾಜೇಶ್ವರಿ ಇಬ್ಬರೂ ಅಂಬೇಡ್ಕರ್ ದಂಪತಿಗಳಾಗಿ ಪೈಪೋಟಿಯ ಅಭಿನಯ ನೀಡಿ ಇಡೀ ನಾಟಕವನ್ನು ನೋಡುಗರ ಮನದಾಳಕ್ಕಿಳಿಯುವಂತೆ ಮಾಡಿದ್ದಾರೆ. ಪ್ರಮುಖ ಪಾತ್ರಗಳಿಗೆ ಪೂರಕವಾಗಿ ಮುತ್ತಪ್ಪ ಪಾಲ್ತಿಯವರು ಅಂಬೇಡ್ಕರ್ ತಂದೆ ರಾಮಜೀ ಆಗಿ ಗಮನಸೆಳೆಯುತ್ತಾರೆ. ಅದ್ಯಾಕೋ ಸಾಹು ಮಹಾರಾಜರ ಪಾತ್ರದಾರಿ ಅಭಿಷೇಕ ಹಡಪದರವರು ಮಾತು ಮತ್ತು ಅಭಿನಯದಲ್ಲಿ ದುರ್ಬಲರೆನಿಸುತ್ತಾರೆ. ಹಲವಾರು ಪಾತ್ರ ಹಾಗೂ ನಿರೂಪಕರುಗಳಾದ ಅಭಿಷೇಕ, ದುರ್ಗಾದಾಸ್, ಭೀಮನಗೌಡ, ಶರಣಪ್ಪ, ಯೋಗೇಶ್ರವರೆಲ್ಲಾ ತಮ್ಮ ಮಾತುಗಳನ್ನು ಸರಿಯಾಗಿ ಒಪ್ಪಿಸಿದ್ದಾರಾದರೂ ನಿರೂಪಣೆ ಮಾಡುವಾಗ ಪರಸ್ಪರ ಹೊಂದಾಣಿಕೆಯನ್ನು  ರೂಢಿಸಿಕೊಳ್ಳಬೇಕಿದೆ.



ನಟರ ಆಂಗಿಕ, ವಾಚಿಕ ಹಾಗೂ ಸಾತ್ವಿಕಾಭಿನಯದಲ್ಲಿ ಹೆಚ್ಚು ಕೆಲಸ ಮಾಡಿದ ನಿರ್ದೇಶಕರು ಅದ್ಯಾಕೋ ಆಹಾರ್ಯಾಭಿನಯದಲ್ಲಿ ಎಡವಿದ್ದಾರೆ. ದಲಿತ ಸಂವೇದನೆಯ ನಾಟಕದಲ್ಲಿ ಬಹುತೇಕ ಎಲ್ಲಾ ಪಾತ್ರಗಳೂ ಕೋಟು ಧರಿಸಿವೆ. ಅಂಬೇಡ್ಕರರವರು ದಲಿತ ವರ್ಗದವರ ಸ್ವಾಭಿಮಾನದ ಸಂಕೇತವಾಗಿ ಪ್ರಜ್ಞಾಪೂರ್ವಕವಾಗಿಯೇ ಸೂಟು ಕೋಟು ಹಾಕುತ್ತಿದ್ದರು. ಆದರೆ ಅವರ ತಂದೆಯನ್ನೂ ಸೇರಿಸಿದಂತೆ ನಿರೂಪಕರು ಹಾಗೂ ಇತರೆಲ್ಲಾ ಪಾತ್ರಧಾರಿಗಳಿಗೆ ಆರಂಭದಿಂದ ಅಂತ್ಯದವರೆಗೂ ಮಿರಿಮಿರಿ ಮಿಂಚುವ ಕೋಟನ್ನು ಹಾಕುವ ಅಗತ್ಯವೇನಿತ್ತು? ಗೊತ್ತಿಲ್ಲ. ಬಡತನದ ಬೇಗೆಯಲ್ಲಿ ಬೇಯುತ್ತಿದ್ದ ರಮಾಬಾಯಿಯವರಿಗೂ ಸಹ ಮಧ್ಯಮವರ್ಗದ ಮಹಿಳೆಯರು ತೊಡುವಂತಹ ಹೊಚ್ಚ ಹೊಸ ಸೀರೆಯನ್ನು ಉಡಿಸಿದ್ದೂ ಸಹ ಬಡತನವನ್ನು ತೋರಿಸಲು ಪೂರಕವಾಗಿಲ್ಲ. ಉಡಲು ಒಂದೇ ಒಂದು ಹರಿಯದ ಸೀರೆಯೂ ಇಲ್ಲದ್ದರಿಂದ ಅಂಬೇಡ್ಕರರವರನ್ನು ನೋಡಲು ರಮಾಬಾಯಿಯವರಿಗೆ ಹೋಗಲಾಗುವುದಿಲ್ಲ ಎಂದು ನಾಟಕದಲ್ಲಿ ರಮಾಬಾಯಿ ಪಾತ್ರ ಹೇಳುತ್ತದಾದರೂ ಅವರು ಉಟ್ಟಿದ್ದ ಉಡುಗೆ ಮಾತ್ರ ಶ್ರೀಮಂತವಾಗೇ ಇತ್ತು. ಸನ್ನಿವೇಶ ಹಾಗೂ ಪಾತ್ರಕ್ಕೆ ಪೂರಕವಾಗಿ ವಸ್ತ್ರವಿನ್ಯಾಸವನ್ನು ಮಾಡಿದ್ದರೆ ನಾಟಕ ಇನ್ನೂ ಹೆಚ್ಚು ಗಮನೀಯವಾಗುತ್ತಿತ್ತು.

ಪರಿವರ್ತನ್ರವರ ಸಂಯೋಜನೆಯ (ರೆಕಾರ್ಡೆಡ್) ಸಂಗೀತ ಹಾಗೂ ಹಾಡುಗಳು ನಾಟಕದಲ್ಲಿ ಪೂರಕ ಪಾತ್ರವನ್ನು ವಹಿಸಿದವು. ಆದರೆ ದೃಶ್ಯಕ್ಕೂ ಹಾಗೂ ಹಿನ್ನೆಲೆ ಸಂಗೀತಕ್ಕೂ ಸರಿಯಾಗಿ ಸಿಂಕ್ ಆಗಬೇಕಾಗಿತ್ತು. ಬ್ಲಾಕ್ಔಟ್ಗಳಲ್ಲಿ ಸಂಗೀತ ಹಾಗೂ ಹಾಡುಗಳಿದ್ದರೆ ಪ್ರೇಕ್ಷಕರ ಗಮನ ಬೇರಡೆ ಹೋಗದಂತೆ ತಡೆಯಬಹುದಾಗಿತ್ತು. ಮಂಟೇಸ್ವಾಮಿಯ ಸಿದ್ದಯ್ಯ ಸ್ವಾಮಿ ಬನ್ನಿ ಹಾಡನ್ನು ಸ್ವಲ್ಪ ಬದಲಾಯಿಸಿ ಬಳಸಲಾಗಿದೆ. ಸಿದ್ದಯ್ಯ ಸ್ವಾಮಿಗೂ ಅಂಬೇಡ್ಕರರಿಗೂ ಏನು ಸಂಬಂಧ ಎನ್ನುವುದು ತಿಳಿಯುತ್ತಿಲ್ಲ. ಮಂಟೇಸ್ವಾಮಿ ಹಾಡಿನ ಟ್ಯೂನನ್ನು ಬಳಸಿಕೊಂಡು ಸನ್ನಿವೇಶಕ್ಕೆ ತಕ್ಕಂತೆ ಹಾಡನ್ನು ಕಟ್ಟಿದ್ದರೆ ಇನ್ನೂ ಚೆನ್ನಾಗಿತ್ತು. ಕೆಲವು ಹೋರಾಟದ ಹಾಡುಗಳನ್ನೂ ಬಳಸಿಕೊಳ್ಳಲಾಗಿದೆ. ಸಂಸ ಸುರೇಶರವರು ಇರುವ ಲೈಟ್ಸ್ ಗಳನ್ನೇ ಬಳಸಿ ಇಡೀ ನಾಟಕದ ಸನ್ನಿವೇಶಕ್ಕೆ ಪೂರಕವಾಗಿ ಬೆಳಕನ್ನು ವಿನ್ಯಾಸಗೊಳಿಸಿ ನಿರ್ವಹಿಸಿದ ರೀತಿ ಪ್ರದರ್ಶನಕ್ಕೆ ಪ್ಲಸ್ ಪಾಯಿಂಟ್ ಆಯಿತು.

ಬಾಬಾಸಾಹೇಬ ಅಂಬೇಡ್ಕರರವರ ಸಾಧನೆಗೆ ಪೂರಕವಾಗಿ ಸ್ಪಂದಿಸಿ ಬದುಕನ್ನೇ ಅಂಬೇಡ್ಕರರ ಏಳಿಗೆಗಾಗಿ ಹಾಗೂ ಕುಟಂಬಕ್ಕಾಗಿ ತೇಯ್ದ ರಮಾಬಾಯಿಯವರನ್ನು ಜನರಿಗೆ ಪರಿಚಯಿಸುವ ನಾಟಕ ಇನ್ನಷ್ಟು ಪರಿಷ್ಕರಣೆಗೊಳಗಾಗಿ ಎಲ್ಲಾ ಕನ್ನಡಿಗರನ್ನೂ ತಲುಪಬೇಕಿದೆ. ದಾಂಪತ್ಯದಲ್ಲಿ ಅಹಂ ಎನ್ನುವುದು ಹೆಚ್ಚಾಗಿ, ದಂಪತಿಗಳಲ್ಲಿ ಹೆಚ್ಚುಗಾರಿಕೆಯೇ ಹುಚ್ಚಾಗಿ ಆವರಿಸಿಕೊಳ್ಳುತ್ತಿರುವ ದಿನಮಾನದಲ್ಲಿ ಅದು ಹೇಗೆ ದಂಪತಿಗಳು ಒಬ್ಬರಿಗೊಬ್ಬರು ಹೊಂದಾಣಿಕೆ ಮಾಡಿಕೊಂಡು ಬದುಕನ್ನು ಕಟ್ಟಬೇಕು ಎನ್ನುವುದರ ಪ್ರಾತ್ಯಕ್ಷಿಕತೆ ಎಂಬಂತೆ ನಾಟಕ ಚಿತ್ರಿತವಾಗಿದೆ. ಸಾಮಾಜಿಕ ಕೆಲಸದಲ್ಲಿ, ಹೋರಾಟಗಳಲ್ಲಿ ತೊಡಗಿಸಿಕೊಂಡವರಿಗೆ ಕೌಟುಂಬಿಕ ಸಮಸ್ಯೆಗಳು ಅಡೆತಡೆಗಳಾಗಿ ಸವಾಲನ್ನೊಡ್ಡುತ್ತವೆ. ಅಂತಹ ಸಂದರ್ಭದಲ್ಲಿ ಹೆಂಡತಿಯಾದವಳು ಸಂಸಾರದ ಭಾರಹೊತ್ತು ಗಂಡನ ಸಾಮಾಜಿಕ ಕೆಲಸಗಳಿಗೆ ಪ್ರೋತ್ಸಾಹಿಸುವುದೂ ಕೂಡಾ ಹೋರಾಟದ ಒಂದು ಭಾಗವೇ ಆಗಿದೆ. ರಮಾಭಾಯಿಯವರು ಕೆಲಸವನ್ನು ಸಮರ್ಥವಾಗಿ ನಿರ್ವಹಿಸುತ್ತಾರೆ. ಕಷ್ಟ ಕಾರ್ಪಣ್ಯಗಳನ್ನು ಎದುರಿಸಿ ಅಂಬೇಡ್ಕರರ ಸಾರ್ವಜನಿಕ ಬದುಕಿಗೆ ದಾರಿಮಾಡಿಕೊಡುತ್ತಾರೆ. ದಲಿತ ದಮನಿತ ವರ್ಗದವರಿU ಸೂರ್ಯನಾಗಿ ಬೆಳಗಿದ ಅಂಬೇಡ್ಕರರಷ್ಟೇ ಮಹತ್ವವನ್ನು ಅಂಬೇಡ್ಕರರ ಬದುಕನ್ನು ಹಣತೆಯಾಗಿ ಬೆಳಗಿದ ರಮಾಬಾಯಿಯವರಿಗೂ ಕೊಟ್ಟು, ಚರಿತ್ರೆಯ ನೇಪತ್ಯದಲ್ಲಿದ್ದ ರಮಾಬಾಯಿಯವರನ್ನು ರಂಗವೇದಿಕೆಗೆ ಕರೆತಂದು ನಾಟಕವಾಗಿ ಪ್ರಸ್ತುತಪಡಿಸಿದ ಗಣಕರಂಗ ತಂಡ ಹಾಗೂ ರಂಗನಿರ್ದೇಶಕ ಹಿಪ್ಪರಿಗಿ ಸಿದ್ದರಾಮರು ಅಭಿನಂದನಾರ್ಹರು.

                        -ಶಶಿಕಾಂತ ಯಡಹಳ್ಳಿ



ಗಣಕರಂಗ : ಧಾರವಾಡವನ್ನು ಕೇಂದ್ರವಾಗಿಟ್ಟುಕೊಂಡು 1998 ರಿಂದ ಸಾಮಾಜಿಕ ಚಟುವಟಿಕೆಗಳು ಹಾಗೂ ಪುಸ್ತಕ ಪ್ರಕಟಣೆಗಳಲ್ಲಿ ತೊಡಗಿಸಿಕೊಂಡಿದ್ದ ಗಣಕರಂಗವು ಮೊದಲ ಬಾರಿಗೆ ರಂಗಚಟುವಟಿಕೆಯನ್ನು ಆರಂಭಿಸಿದೆ. ಹಿಪ್ಪರಗಿ ಸಿದ್ಧರಾಮರವರ ನೇತೃತ್ವದ ತಂಡವು ವರ್ಷ ರಮಾಬಾಯಿ ಅಂಬೇಡ್ಕರ್ ನಾಟಕವನ್ನು ನಿರ್ಮಿಸಿ ಈಗಾಗಲೇ ಐದಾರು ಯಶಸ್ವಿ ಪ್ರದರ್ಶನಗಳನ್ನು ಕೊಟ್ಟಿದೆ. ವೈಚಾರಿಕತೆಯ ಮೂಲಕ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಜನಜಾಗೃತಿ ಮಾಡುವ ಉದ್ದೇಶದಿಂದ ಸ್ಥಾಪನೆಗೊಂಡ ಗಣಕರಂಗವು ರಂಗಮುಖೇನ ಜನಜಾಗೃತಿ ಮಾಡಲು ಆರಂಭಿಸಿದ್ದು ಅಭಿನಂದನೀಯ. ತನ್ನ ಮೊದಲ ನಾಟಕವನ್ನೇ ಅಂಬೇಡ್ಕರ್  ದಂಪತಿಗಳ ಕುರಿತು ತೆಗೆದುಕೊಂಡು ನಿರ್ಮಿಸಿದ್ದು ಗಣಕರಂಗದ ಸಾಮಾಜಿಕ ಕಾಳಜಿ ಹಾಗೂ ಕಳಕಳಿಯನ್ನು ತೋರಿಸುತ್ತದೆ. ಯುವಕರೇ ಸೇರಿ ಕಟ್ಟಿರುವ ತಂಡ ನಿರಂತರವಾಗಿ ವರ್ಷಕ್ಕೊಂದು ನಾಟಕವನ್ನು ನಿರ್ಮಿಸಿ ನಾಡಿನಾದ್ಯಂತ ಪ್ರದರ್ಶನಮಾಡಲಿ ಎಂದು ಹಾರೈಸಬಹುದಾಗಿದೆ.



ನಿರ್ದೇಶಕರಾದ  ಹಿಪ್ಪರಗಿ  ಸಿದ್ದರಾಮ 
ಹಿಪ್ಪರಗಿ ಸಿದ್ಧರಾಮ : ಮೂಲತಃ ಅಭಿನಯ ಕಲಾವಿದರಾದ ಸಿದ್ಧರಾಮರವರು ಕಾಲೇಜು ರಂಗಭೂಮಿ ಹಾಗೂ ಗ್ರಾಮೀಣ ರಂಗಭೂಮಿಯಲ್ಲಿ ನಟನೆಯಲ್ಲಿ ತೊಡಗಿಸಿಕೊಂಡಿದ್ದವರು. ತದನಂತರ ಎರಡು ದಶಕಗಳಿಂದ ಆಧುನಿಕ ರಂಗಭೂಮಿಯಲ್ಲೂ ತಮ್ಮ ನಟನೆಯನ್ನು ಮುಂದುವರೆಸಿದರು. ಏಣಗಿ ನಟರಾಜರ ಗರಡಿಯಲ್ಲಿ ಬೆಳೆದ ಸಿದ್ಧರಾಮರವರು ತುಘಲಕ್, ಮಹಾಮಾಯಿ, ಚೂರಿಕಟ್ಟೆ, ಸಾಂಬಶಿವ ಪ್ರಹಸನ, ಜಗಜ್ಯೋತಿ ಬಸವೇಶ್ವರ.... ಹೀಗೆ ಹಲವಾರು ಹವ್ಯಾಸಿ ನಾಟಕಗಳಲ್ಲೂ ಅಭಿನಯಿಸಿ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ. ಧಾರವಾಡದ ರಂಗಪರಿಸರ ರಂಗತಂಡದ ಉಪಾಧ್ಯಕ್ಷರಾಗಿ ನಾಲ್ಕು ವರ್ಷ ತಂಡದ ರಂಗಕಾರ್ಯಕ್ರಮಗಳನ್ನು ಮುನ್ನೆಡೆಸುವಲ್ಲಿ ಶ್ರಮಿಸಿದ್ದಾರೆ. ರಂಗಭೂಮಿ ಕುರಿತ ಲೇಖನಗಳನ್ನು ಹಾಗೂ ರಂಗವಿಮರ್ಶೆಗಳನ್ನು ಬರೆಯುತ್ತಾ ರಂಗಚಟುವಟಿಕೆಗಳನ್ನು ದಾಖಲಿಸುತ್ತಿದ್ದಾರೆ. ಗಣಕರಂಗವನ್ನು ಕಳೆದ ಮೂರು ವರ್ಷಗಳಿಂದ ಮತ್ತೆ ಆಕ್ಟಿವ್ಗೊಳಿಸಿದ್ದಾರೆ. ವರ್ಷ ತಮ್ಮ ತಂಡಕ್ಕೆ ರಮಾಬಾಯಿ ಅಂಬೇಡ್ಕರ್ ನಾಟಕವನ್ನು ತೆಗೆದುಕೊಂಡು ನಿರ್ಮಿಸಿ ನಿರ್ದೇಶಿಸಿದ್ದಾರೆ.