ಬುಧವಾರ, ಏಪ್ರಿಲ್ 12, 2023

ರಂಗಭೂಮಿಯ ಹುತಾತ್ಮ ಸಫ್ದರ್ ಹಶ್ಮಿಯವರ ಸ್ಮರಣೆಯಲ್ಲಿ “ರಾಷ್ಟ್ರಿಯ ಬೀದಿರಂಗಭೂಮಿ ದಿನ”

 


ರಂಗಭೂಮಿಯ ಹುತಾತ್ಮ ಸಫ್ದರ್ ಹಶ್ಮಿಯವರ ಸ್ಮರಣೆಯಲ್ಲಿ “ರಾಷ್ಟ್ರಿಯ ಬೀದಿರಂಗಭೂಮಿ ದಿನ”

ಎಪ್ರಿಲ್ 12, ಸಫ್ದರ್ ಹಶ್ಮಿಯವರು ಹುಟ್ಟಿದ ದಿನ. ಅವರ ಸ್ಮರಣೆಯಲ್ಲಿ ಈ ದಿನವನ್ನು 1990 ರಿಂದ “ರಾಷ್ಟ್ರೀಯ ಬೀದಿರಂಗಭೂಮಿ ದಿನ”ವನ್ನಾಗಿ ಆಚರಿಸಲಾಗುತ್ತದೆ. ಹಶ್ಮಿಯವರ ಸ್ಮರಣೆಗಾಗಿ ಹಾಗೂ ಬೀದಿನಾಟಕ ದಿನದ ಅಂಗವಾಗಿ ಈ ಲೇಖನ.

ಪ್ರತಿಭಟನಾ ಮಾಧ್ಯಮವಾದ ಬೀದಿನಾಟಕ ಕಲೆಯು ಜನರನ್ನು ನೇರವಾಗಿ ತಲುಪುವ ಸಾಮಾಜಿಕ ಸಾಧನವಾಗಿದೆ. “ಕಲೆಗಾಗಿ ಕಲೆಯಲ್ಲ, ಜನರಿಗಾಗಿ ಕಲೆ” ಎನ್ನುವ ತತ್ವಕ್ಕೆ ಬದ್ದವಾಗಿರುವ ಬೀದಿನಾಟಕವು ದಮನದ ವಿರುದ್ದ ದಮನಿತ ಜನರಲ್ಲಿ ಜಾಗೃತಿ ಮೂಡಿಸುವ ಸಶಕ್ತ ಮಾಧ್ಯಮವಾಗಿದೆ. ಪ್ರಭುತ್ವಗಳ ಜನವಿರೋಧಿ ಧೋರಣೆಗಳನ್ನು, ಧಾರ್ಮಿಕ, ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಶೋಷಣೆಗಳನ್ನು, ಪಾರಂಪರಿಕ ಮೌಢ್ಯಗಳನ್ನು, ಜೀವವಿರೋಧಿ ಆಚರಣೆಗಳನ್ನು ವಿರೋಧಿಸುವ, ಪ್ರತಿಭಟಿಸುವ ಮತ್ತು ಎಚ್ಚರಿಸುವ ಪ್ರಬಲ ಅಸ್ತ್ರವಾಗಿ ಬೀದಿರಂಗಭೂಮಿಯು ಬೆಳೆದು ಬಂದಿದೆ. ನೊಂದ ಜನರ ದ್ವನಿಯಾಗಿ, ನೋವುಂಡವರ ಪ್ರತಿನಿಧಿಯಾಗಿ ಬೀದಿನಾಟಕ ತನ್ನ ವೈಚಾರಿಕ ಹಾಗೂ ಪ್ರತಿಭಟನಾತ್ಮಕ ಮೌಲ್ಯಗಳನ್ನು ಉಳಿಸಿಕೊಂಡು ಬಂದಿದೆ.

ಪ್ರಭುತ್ವಗಳಿಗೆ ಸಿಂಹಸ್ವಪ್ನವಾಗಿ, ಮೇಲ್ವರ್ಗಗಳ ದಮನ ದಬ್ಬಾಳಿಕೆಗೆ ವಿರೋಧವಾಗಿ, ತಾರತಮ್ಯದ ವಿರುದ್ಧ ಸಮತೆಗಾಗಿ ಹುಟ್ಟಿಕೊಂಡ ಬೀದಿನಾಟಕಗಳು ಕಾಲಕಾಲಕ್ಕೆ ಆಳುವ ವರ್ಗಗಳಲ್ಲಿ ನಡುಕ ಹುಟ್ಟಿಸಿದ್ದೂ ಸತ್ಯ. ಹೀಗಾಗಿಯೇ ಬೀದಿನಾಟಕಗಳ ಕಲಾವಿದರುಗಳು ಮತ್ತು ತಂಡಗಳ ಮೇಲೆ ಆಳುವ ವರ್ಗಗಳ ಎಜಂಟರುಗಳಿಂದ ಬೇಕಾದಷ್ಟು ದಾಳಿಗಳಾಗಿವೆ. ಪ್ರಭುತ್ವ ಹಲವಾರು ನಿರ್ಬಂಧಗಳನ್ನು ಹೇರಿದೆ. ಅಸಮಾನ ವ್ಯವಸ್ಥೆಯಲ್ಲಿ ಸತ್ಯವನ್ನು ಹೇಳುವುದು ಯಾವಾಗಲೂ ಅಪಾಯಕಾರಿಯೇ. ಅಂತಹ ಅಪಾಯವನ್ನು ಯಾವಾಗಲೂ ಎದುರಿಸುತ್ತಲೇ ಬೀದಿನಾಟಕ ಪ್ರಕಾರವು ತನ್ನ ಜೀವಪರ ನಿಲುವನ್ನು ಉಳಿಸಿಕೊಂಡು, ಪ್ರತಿರೋಧದ ದ್ವನಿಯನ್ನು ಕಾಪಿಟ್ಟುಕೊಂಡು ಜನತೆಯ ಪರ ಎಚ್ಚರದ ದ್ವನಿಯಾಗಿದ್ದು, ಜನಹೋರಾಟಗಳಿಗೆ ಪೂರಕವಾಗಿ ಸ್ವಂದಿಸಿದ್ದು ರಂಗಭೂಮಿಯ ಚರಿತ್ರೆಯಲ್ಲಿ ಎಂದೂ ಮರೆಯದ ಪುಟಗಳಾಗಿ ದಾಖಲಾಗಿದೆ.


ಬೀದಿರಂಗಭೂಮಿಯ ಇತಿಹಾಸದಲ್ಲಿ 1989ರ ಜನವರಿ 1 ರಂದು ದೊಡ್ಡ ದುರಂತವೊಂದು ನಡೆದು ಹೋಯಿತು. ಆ ದಿನ ಯುಪಿಯ ಗಾಜಿಯಾಬಾದಿನ ಬೀದಿಯೊಂದರಲ್ಲಿ ‘ಜನ ನಾಟ್ಯ ಮಂಚ್’ ತಂಡದಿಂದ ಕಾರ್ಮಿಕರ ಹಕ್ಕುಗಳನ್ನು ಆಧರಿಸಿದ “ಹಲ್ಲಾಬೋಲ್” ಎನ್ನುವ ಬೀದಿನಾಟಕವೊಂದು ಪ್ರದರ್ಶನಗೊಳ್ಳುತ್ತಿತ್ತು. ಮುಕೇಶ್ ಶರ್ಮಾ ಎನ್ನುವ ಲೋಕಲ್ ಕಾಂಗ್ರೆಸ್ ಮುಖಂಡ ಹಾಗೂ ಆತನ ಗೂಂಡಾ ಪಡೆಗಳು ಹಾಡುಹಗಲೇ ನಾಟಕ ನಡೆಯುತ್ತಿದ್ದಾಗಲೇ ಇಡೀ ನಾಟಕ ತಂಡದ ಕಲಾವಿದರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದರು. ಕಲಾವಿದರನ್ನು ಕಾಪಾಡಲು ಹೋದ ಸಫ್ದರ್ ಹಸ್ಮಿಯವರೂ ತೀವ್ರವಾಗಿ ಹಲ್ಲೆಗೊಳಗಾಗಿ ಮರುದಿನ ಅಂದರೆ ಜನವರಿ 2 ರಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಜನರ ಪರವಾಗಿದ್ದ ಪ್ರತಿರೋಧದ ದ್ವನಿಯೊಂದು ಮೌನವಾಯಿತು. ಆಗ ಅವರಿಗೆ ಕೇವಲ 34 ವರ್ಷ ವಯಸ್ಸು. ಹಶ್ಮಿಯವರು ತೀರಿಕೊಂಡ 3 ದಿನಗಳ ನಂತರ ಅವರ ಪತ್ನಿ ಮೊಲೊಶ್ರೀ ಹಶ್ಮಿಯವರು ತಮ್ಮ ತಂಡದ ಕಲಾವಿದರುಗಳೊಂದಿಗೆ ಹಲ್ಲೆ ನಡೆದ ಜಾಗದಲ್ಲೇ ಹೋಗಿ ಅರ್ಧಕ್ಕೆ ನಿಲ್ಲಿಸಲಾಗಿದ್ದ ‘ಹಲ್ಲಾಬೋಲ್’ ಬೀದಿ ನಾಟಕವನ್ನು ಪೂರ್ಣಗೊಳಿಸಿ ಸಪ್ಧರ್ ರವರಿಗೆ ರಂಗಶ್ರದ್ದಾಂಜಲಿಯನ್ನು ಸಲ್ಲಿಸುವ ಜೊತೆಗೆ ಹಲ್ಲೆ ಹಿಂಸೆಯಿಂದ ಪ್ರತಿಭಟನೆಯ ಗಟ್ಟಿ ದ್ವನಿಯನ್ನು ದಮನಿಸಲು ಸಾಧ್ಯವಿಲ್ಲವೆಂಬ ದಿಟ್ಟ ಸಂದೇಶವನ್ನು ಸಾರಿದರು.

ವಿದ್ಯಾರ್ಥಿಗಳು, ಮಹಿಳೆಯರು ಮತ್ತು ಕಾರ್ಮಿಕರ ಪರವಾಗಿ ಬೀದಿನಾಟಕಗಳ ಮೂಲಕ ದ್ವನಿ ಎತ್ತಿ ಜನರನ್ನು ಜಾಗೃತಗೊಳಿಸುತ್ತಾ ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದ ಹೋರಾಟಗಾರ ಕವಿ ಕಲಾವಿದ ನಾಟಕಕಾರ ನಿರ್ದೇಶಕ ಸಂಘಟಕ ವೈಚಾರಿಕ ಪ್ರಜ್ಞೆಯ ಸಫ್ದರ್ ಹಶ್ಮಿಯವರ ನೆನಪಿನಲ್ಲಿ ಪ್ರತಿ ವರ್ಷ ಅವರು ಜನಿಸಿದ ದಿನವಾದ ಎಪ್ರಿಲ್ 12 ರಂದು ರಾಷ್ಟ್ರೀಯ ಬೀದಿರಂಗಭೂಮಿ ದಿನವನ್ನಾಗಿ 1990 ರಿಂದ ಪ್ರತಿವರ್ಷ ಆಚರಿಸಲಾಗುತ್ತಿದೆ.

 

ಬೀದಿನಾಟಕವೆಂಬುದು ಎಂದೂ ಮನರಂಜನೆಯ ಸರಕಾಗದೇ ವೈಚಾರಿಕ ಪ್ರಜ್ಞೆ ಇರುವ ಅರಿವಿನ ದಾರಿಗೆ ಪ್ರೇರಣೆಯಾಗಿದೆ. ಆದರೆ ಪ್ರತಿಭಟನೆಯ ಮಾಧ್ಯಮವಾಗಿದ್ದ ಬೀದಿರಂಗಭೂಮಿ ಜಾಗತೀಕರಣದ ಪ್ರಭಾವಕ್ಕೊಳಗಾಗಿ ಪ್ರಚಾರ ಮಾಧ್ಯಮವಾಗಿದ್ದು ಪ್ರಸ್ತುತ ಕಾಲದ ದುರಂತವಾಗಿದೆ. ಬೀದಿರಂಗಭೂಮಿ ಯಾವಾಗಲೂ ಚಳುವಳಿಗಳಿಗೆ ಪೂರಕವಾಗಿ ಸಮಾಜಕ್ಕೆ ಸ್ಪಂದಿಸುವ ಕಲಾದ್ವನಿ. ಆದರೆ ಯಾವಾಗ ಚಳುವಳಿ ಹೋರಾಟ ಜನಾಲೋಂದನಗಳು ಬಂಡವಾಳಶಾಹಿ ವ್ಯವಸ್ಥೆಯ ಕುತಂತ್ರಕ್ಕೆ ಬಲಿಯಾದವೋ, ಯಾವಾಗ ಪ್ರಭುತ್ವದ ಹುನ್ನಾರದಿಂದಾಗಿ ಕಾರ್ಮಿಕ, ರೈತ, ದಲಿತ, ಮಹಿಳಾ ಚಳುವಳಿಗಳು ತಮ್ಮ ತೀವ್ರತೆಯನ್ನು ಕಳೆದುಕೊಂಡವೋ, ಆಗ ಬೀದಿರಂಗಭೂಮಿಯೂ ತನ್ನ ಮೊನಚನ್ನು ಕಳೆದುಕೊಂಡಿತು. ಕರ್ನಾಟಕದಲ್ಲಿ ಬೀದಿನಾಟಕದ ಪರಂಪರೆಗೆ ಚಾಲನೆಯಿತ್ತು ಮುನ್ನಡೆಸಿಕೊಂಡು ಬಂದಿದ್ದ ಇಪ್ಟಾ, ಸಮುದಾಯ, ಅವಿಷ್ಕಾರದಂತಹ ಸಾಂಸ್ಕೃತಿಕ ಸಂಘಟನೆಗಳೂ ಸಹ ಚಳುವಳಿಗಳ ತೀವ್ರತೆಯ ಕೊರತೆಯಿಂದಾಗಿ ಬಸವಳಿದು ಕೂತಿವೆ. ಅಲ್ಲಲ್ಲಿ ಬೇರೆ ರಂಗತಂಡಗಳಿಂದ ಆಗಾಗ ಪ್ರದರ್ಶನಗೊಳ್ಳುತ್ತಿದ್ದ  ಬೀದಿ ನಾಟಕಗಳು ಸಹ ಬಹುತೇಕ ನಿಂತಿವೆ.

ಹೀಗೆ ಬೀದಿರಂಗ ಚಳುವಳಿಯಲ್ಲಿ ಶೂನ್ಯತೆ ಆವರಿಸಿದ ಸಂದರ್ಭವನ್ನು ಕಾರ್ಪೋರೇಟ್ ಕಂಪನಿಗಳು, ಬಂಡವಾಳಶಾಹಿಗಳು, ರಾಜಕೀಯ ಪಕ್ಷಗಳು ಬೀದಿನಾಟಕ ಎನ್ನುವ ಪ್ರಬಲ ನೇರ ಸಂಹವನ ಕಲೆಯನ್ನು ಪ್ರಚಾರ ಮಾಧ್ಯಮವಾಗಿ ಬಳಸಿಕೊಳ್ಳತೊಡಗಿದವು. ಚುನಾವಣಾ ಪ್ರಚಾರಕ್ಕೆ, ಕಂಪನಿ ಉತ್ಪನ್ನಗಳ ಜಾಹೀರಾತಿಗೆ, ಪಕ್ಷಗಳ ಸಾಧನೆಗಳ ಪ್ರಸರಣಕ್ಕೆ ಬೀದಿನಾಟಕಗಳು ಪ್ರದರ್ಶನಗೊಳ್ಳತೊಡಗಿದವು. ಅನೇಕಾನೇಕ ರಂಗಕಲಾವಿದರುಗಳು ಹಾಗೂ ಕೆಲವು ರಂಗತಂಡಗಳು ದಿನಗೂಲಿ ಲೆಕ್ಕದಲ್ಲಿಯೋ, ಗುತ್ತಿಗೆ ಲೆಕ್ಕದಲ್ಲಿಯೋ ಕಾಸುಕೊಟ್ಟವರ ಲಾಭಕ್ಕೆ ತಕ್ಕಂತೆ ಬೀದಿನಾಟಕವನ್ನು ಕಟ್ಟಿ ಪ್ರದರ್ಶಿಸಿ ತಮ್ಮ ಹೊಟ್ಟೆಪಾಡಿಗೆ ದಾರಿ ಮಾಡಿಕೊಂಡವು. ಸಫ್ದರ್ ಹಶ್ಮಿಯವರಂತಹ ಅನೇಕ ಕಲಾವಿದರುಗಳ ತ್ಯಾಗ ಬಲಿದಾನದಿಂದ ಕಟ್ಟಲ್ಪಟ್ಟ ಬೀದಿರಂಗಭೂಮಿ ಪರಂಪರೆಯೊಂದು ಹೀಗೆ ಅವಸಾನದತ್ತ ಮುಖಮಾಡಿದ್ದು ಈ ದಶಕದ ರಂಗದುರಂತ.

ಇಂದು ಹಿಂದಿನ ಕಾಲಕ್ಕಿಂತಲೂ ಪ್ರಭುತ್ವದ ದಮನ ಮತ್ತು ಆಳುವ ವರ್ಗಗಳ ಶೋಷಣೆ ನಿರಂತರವಾಗಿದೆ. ಜಾತಿಯ ಬೇರುಗಳು ಗಟ್ಟಿಗೊಂಡು ವರ್ಗ ತಾರತಮ್ಯ ಅತಿಯಾಗಿದೆ. ಕೋಮುಸೌಹಾರ್ಧತೆ ಅಪಾಯದಲ್ಲಿದೆ, ಪ್ರಜಾತಂತ್ರ ಅಳಿವು ಉಳಿವಿನ ಸಂಕಷ್ಟದಲ್ಲಿದೆ, ಕಾರ್ಮಿಕರು ತಮ್ಮ ಮೂಲಭೂತ ಹಕ್ಕುಗಳಿಂದ ವಂಚಿತರಾಗಿದ್ದಾರೆ, ಮಹಿಳೆಯರ ಮೇಲಿನ ಹಲ್ಲೆ ಅತ್ಯಾಚಾರಗಳು ಮಿತಿಮೀರಿವೆ, ರೈತರು ಕಂಗಾಲಾಗಿದ್ದಾರೆ, ದಲಿತರ ಮೇಲೆ ನಡೆಯುವ ದಬ್ಬಾಳಿಕೆಗೆ ಕೊನೆಮೊದಲಿಲ್ಲವಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಭಯದಲ್ಲಿ ಬಳಲುತ್ತಿದೆ. ಪ್ರಶ್ನಿಸಿದವರು ಪ್ರತಿರೋಧಿಸಿದವರು ದೇಶದ್ರೋಹಿಗಳ ಪಟ್ಟಿಯಲ್ಲಿ ದಾಖಲಾಗುತ್ತಿದ್ದಾರೆ. ಇಂತಹ ದುರಿತ ಕಾಲದಲ್ಲಿ ಚಳುವಳಿ ಹೋರಾಟಗಳು ಮರುಹುಟ್ಟುಪಡೆಯಬೇಕಿವೆ. ಪೂರಕವಾಗಿ ಬೀದಿರಂಗಭೂಮಿ ಮತ್ತೆ ಜಾಗೃತವಾಗಬೇಕಾಗಿದೆ. ಸಫ್ದರ್ ಹಶ್ಮಿಯವರಂತಹ ಬದ್ದತೆ ಇರುವ ವೈಚಾರಿಕ ಯುವ ರಂಗಕರ್ಮಿಗಳ ಅಗತ್ಯತೆ ಎಂದಿಗಿಂತಲೂ ಈಗ ಹೆಚ್ಚಿದೆ. ಹೀಗಾದಾಗ ಮಾತ್ರ ರಾಷ್ಟ್ರೀಯ ಬೀದಿರಂಗಭೂಮಿಯ ದಿನಾಚರಣೆಗೆ ಅರ್ಥಬರುತ್ತದೆ. ಹಶ್ಮಿಯವರಂತಹ ಕಲಾವಿದರ ತ್ಯಾಗ ಬಲಿದಾನ ವ್ಯರ್ಥವಾಗದೇ ಸ್ಮರಣೀಯವಾಗುತ್ತದೆ. ಶೋಷಣಾ ರಹಿತ ಸಮಸಮಾಜದ ನಿರ್ಮಿತಿಯ ಪ್ರಯತ್ನದಲಿ ಪ್ರತಿರೋಧದ ಬೀದಿನಾಟಕಗಳ ಕೊಡುಗೆಯೂ ಮಹತ್ತರವಾಗಿದೆ. ಅಂತಹ ಬೀದಿರಂಗಭೂಮಿ ಚಳುವಳಿಯನ್ನು ಉಳಿಸಿ ಬೆಳೆಸಿ ಸಾಮಾಜಿಕ ಜಾಗೃತಿಯನ್ನು ಮುಂದುವರೆಸುವ ಹೊಣೆಗಾರಿಕೆ ಇಂದಿನ ಯುವಕರ್ಮಿಗಳದ್ದಾಗಿದೆ.


ಬೀದಿನಾಟಕಗಳೇ ವಿರಳವಾಗಿರುವ ದಿನಮಾನದಲ್ಲಿ ಬೀದಿರಂಗಭೂಮಿ ದಿನಾಚರಣೆಯನ್ನು ಸಂಭ್ರಮಿಸಿ ಸಫ್ದರ್ ಹಶ್ಮಿಯವರನ್ನು ಸ್ಮರಿಸುವ ಪ್ರಯತ್ನಗಳೇ ಕರ್ನಾಟಕದಲ್ಲಿ ನಡೆಯುತ್ತಿಲ್ಲವಲ್ಲ ಎನ್ನುವುದು ಬೇಸರದ ಸಂಗತಿ. ಅದಕ್ಕಿಂತ ಹೆಚ್ಚಾಗಿ ಇಂಡಿಯನ್ ಪೀಪಲ್ಸ್ ಥೀಯಟರ್ (ಇಪ್ಟಾ) ಸಾಂಸ್ಕೃತಿಕ ಸಂಘಟನೆಯ ಭಾಗವಾಗಿದ್ದ ಸಫ್ದರ್ ಹಶ್ಮಿಯವರನ್ನು ಆ ಸಂಘಟನೆ ಅಥವಾ ಇಪ್ಟಾ ಪ್ರತಿನಿಧಿಸುವ ಸಿಪಿಐ ಪಕ್ಷವಾದರೂ ಸ್ಮರಿಸಿಕೊಂಡು ನಾಡಿನಾದ್ಯಂತ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬಹುದೆಂಬ ಆಸೆಯೂ ನಿರಾಸೆಯಾಯಿತು. ಇತ್ತೀಚೆಗೆ ಇಪ್ಟಾದ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಹಾಲಿ ಗಾಂಧಿವಾದಿ ಪ್ರಸನ್ನನವರಾದರೂ ಕರ್ನಾಟಕದಲ್ಲಿ ಹಶ್ಮಿಯವರ ಸ್ಮರಣೆಗೆ ವೇದಿಕೆಯನ್ನು ಸಿದ್ದಗೊಳಿಸಬಹುದೆಂಬ ಕನಸೂ ಭಗ್ನವಾಯಿತು. ಇರಲಿ.. ಯಾರ ತ್ಯಾಗ ಬಲಿದಾನಗಳೂ ವ್ಯರ್ಥವಾಗುವುದಿಲ್ಲ. ಇಂದಿಲ್ಲವಾದರೆ ಮುಂದಿನ ತಲೆಮಾರಿನ ರಂಗಕರ್ಮಿಗಳಾದರೂ ಸಫ್ದರ್ ಹಶ್ಮಿಯವರ ನೆನಪಲ್ಲಿ ರಾಷ್ಟ್ರೀಯ ಬೀದಿರಂಗಭೂಮಿ ದಿನವನ್ನು ಅದ್ದೂರಿಯಾಗಿ ಆಚರಿಸುತ್ತಾರೆ ಎನ್ನುವ ಭರವಸೆಯೊಂದೇ ನಮ್ಮ ನಿಮ್ಮೆಲ್ಲರ ಆಶಯವಾಗಿರಲಿ.

ಸಫ್ದರ್ ಹಶ್ಮಿ ಅಮರರಾಗಲಿ…  ಬೀದಿರಂಗಭೂಮಿ ನಿರಂತರವಾಗಲಿ.

-ಶಶಿಕಾಂತ ಯಡಹಳ್ಳಿ