ಗುರುವಾರ, ಮೇ 2, 2019

ಮೌನವಾದ ಮಾತಿನ ಮಲ್ಲ ಮಾಸ್ಟರ್ ಹಿರಣ್ಣಯ್ಯ :



ಮಾಸ್ಟರ್ ಹಿರಣ್ಣಯ್ಯ ಇನ್ನಿಲ್ಲಾ ಎನ್ನುವ ಸಾವಿನ ಸುದ್ದಿ ಮೇ 2ರ ಬೆಳ್ಳಂಬೆಳಿಗ್ಗೆ ಗೊತ್ತಾಗುತ್ತಲೇ ಸಾಂಸ್ಕೃತಿಕ ಲೋಕದಲ್ಲಿ ಒಂದು ರೀತಿಯ ವಿಷಾದಮಯ ಸೂತಕದ ಛಾಯೆ ಆವರಿಸಿತು. ಕನ್ನಡ ವೃತ್ತಿ ರಂಗಭೂಮಿಯ ಹಿರಿಯ ನಟ ನಿರ್ದೇಶಕ ನಾಟಕ ಕಂಪನಿಯ ಮಾಲೀಕರಾದ ಮಾಸ್ಟರ್ ಹಿರಣ್ಣಯ್ಯನವರು ಅಭಿನಯವನ್ನು ನಿಲ್ಲಿಸಿ ಕೆಲವು ವರ್ಷಗಳೇ ಕಳೆದಿವೆ. ಈ ಮಾರ್ಮಿಕ ಮಾತುಗಳನ್ನೇ ವೃತ್ತಿಯಾಗಿಸಿಕೊಂಡ ಮಾತಿನ ಮಲ್ಲ ಮಾತನ್ನು ನಿಲ್ಲಿಸಿಯೇ ತಿಂಗಳುಗಳುರುಳಿವೆ. ಆದರೆ ಹಲವಾರು ದಶಕಗಳ ಕಾಲ ತಮ್ಮ ನಾಟಕಗಳ ಪಾತ್ರಗಳ ಮೂಲಕ ಅವರು ಮಾತಾಡುತ್ತಲೇ ಬಂದಿದ್ದ ನೇರ ನಿಷ್ಟುರವಾದ ವಿಡಂಬನಾತ್ಮಕ ಮಾತುಗಳಂತೂ ಈಗಲೂ ರಂಗಾಸಕ್ತರ ಮೆದುಳಲ್ಲಿ ಅಚ್ಚೊತ್ತಿವೆ.

ವೃತ್ತಿ ರಂಗಭೂಮಿಯಲ್ಲಿ ಹಾಸ್ಯ ಪಾತ್ರವೆಂದರೆ ಬರೀ ಹಾಸ್ಯ ಅಪಹಾಸ್ಯ, ದ್ವಂದ್ವಾರ್ಥಗಳ ಮೂಲಕ ಜನರಿಗೆ  ಮನರಂಜನೆ ಕೊಡಲು ಮಾತ್ರ ಸೀಮಿತ ಎನ್ನುವಂತಿದ್ದ ಕಾಲದಲ್ಲಿ ಹಾಸ್ಯ ಪಾತ್ರದ ಮೂಲಕವೇ ಸಾಮಾಜಿಕ, ರಾಜಕೀಯ ವಿಡಂಬಣೆಯನ್ನು ಮಾಡುತ್ತಾ ಆಳುವ ವರ್ಗಗಳ ಜನವಿರೋಧಿ ನೀತಿಗಳ ವಿರುದ್ದ ಜನರನ್ನು ಜಾಗೃತಗೊಳಿಸುವ ಕಾಯಕವನ್ನು ತಮ್ಮ ರಂಗಬದುಕಿನಾದ್ಯಂತ ಮಾಡುತ್ತಾ ಬಂದವರು ಮಾಸ್ಟರ್ ಹಿರಣ್ಣಯ್ಯನವರು. ಲಂಚಾವತಾರ, ಭ್ರಷ್ಟಾಚಾರಗಳ ನಿರ್ಮೂಲನದ ಕುರಿತು ಆಳುವವರು ಬರೀ ಸುಳ್ಳು ಭರವಸೆಗಳನ್ನು ಕೊಡುತ್ತಾ ಅದರಲ್ಲೇ ನಿರತರಾಗಿದ್ದಾಗ ತಮ್ಮ ಮಾತಿನ ಅಸ್ತ್ರಗಳ ಮೂಲಕ ರಾಜಕಾರಣಿಗಳ, ಅಧಿಕಾರಿಗಳ ಲಂಚಾವತಾರಗಳನ್ನು, ಭ್ರಷ್ಟತೆಯನ್ನು ಎಳೆಎಳೆಯಾಗಿ ರಂಗದ ಮೇಲೆ ಬಿಡಿಸಿಟ್ಟು ನೋಡುಗರಲ್ಲಿ ಸಂಚಲನವನ್ನೂ ಹಾಗೂ ಆಳುವವರಲ್ಲಿ ನಡುಕವನ್ನೂ ಹುಟ್ಟಿಸಿದ ಹಿರಣ್ಣಯ್ಯನವರು ಸದಾ ಏಕವ್ಯಕ್ತಿ ವಿರೋಧ ಪಕ್ಷದ ರೀತಿಯಲ್ಲಿ ಕೆಲಸ ಮಾಡುತ್ತಲೇ ಬಂದವರು. ಕೆಲವಾರು ಸಲ ಜನರ ಧರಣಿ, ಸತ್ಯಾಗ್ರಹ, ಪ್ರತಿಭಟನೆಗಳಿಗೆ ಹೆದರದ ಆಳುವ ಸರಕಾರಗಳು ಹಿರಣ್ಣಯ್ಯನವರು ನಾಟಕದಲ್ಲಿ ಮಾಡುವ ನೇರಾನೇರಾ ಟೀಕೆ ಟಿಪ್ಪಣೆ ವಿಡಂಬಣೆಗಳಿಗೆ ಬೆದರುತ್ತಿದ್ದವು. ಒಂದು ವಿರೋಧ ಪಕ್ಷ ಮಾಡಬಹುದಾದ ಸಾಮಾಜಿಕ ವಿರೋಧದ ಕೆಲಸವನ್ನು, ಹೋರಾಟಪರ ಸಂಘಟನೆಗಳು ಮಾಡಬಹುದಾದ ಪ್ರತಿರೋಧದ ಕಾರ್ಯವನ್ನು ಮಾಸ್ಟರ್ ಹಿರಣ್ಣಯ್ಯನವರು ತಮ್ಮ ನಾಟಕದ ಪಾತ್ರಗಳ ಮೂಲಕ ಮಾಡಿ ಆಳುವ ವರ್ಗಗಳನ್ನು ವಿರೋಧಿಸುವ ಹಾಗೂ ಜನರಲ್ಲಿ ಎಚ್ಚರಿಕೆ ಮೂಡಿಸುವ ಕೆಲಸವನ್ನು ಒಟ್ಟೊಟ್ಟಿಗೆ ಮಾಡುತ್ತಾ ಬಂದರು. ಅನೇಕ ರಾಜಕಾರಣಿಗಳನ್ನು, ಅಧಿಕಾರಸ್ತರನ್ನು  ನಾಟಕ ನೋಡಲು ಆಹ್ವಾನಿಸಿ ಅವರ ಮುಖಸ್ತುತಿ ಮಾಡದೇ ಮುಖಾಮುಖಿ ಟೀಕಿಸಿ, ಬೈದು, ತಮ್ಮ ಮಾತಿನ ಈಟಿಯಿಂದ ಇರಿದು, ಸಂಭಾಷಣೆಗಳ ಚಾಟಿಯನ್ನು ಬೀಸಿ ಬಿಸಿಮುಟ್ಟಿಸುವ ಛಾತಿ ಇದ್ದದ್ದು ರಂಗಭೂಮಿಯಲ್ಲಿ ಮಾಸ್ಟರ್ ಹಿರಣ್ಣಯ್ಯರೊಬ್ಬರಿಗೆ ಮಾತ್ರ ಎನ್ನುವುದು ಪ್ರಶ್ನಾತೀತ.



ಇಂತಹ ನಟ ಭಯಂಕರ ಹಿರಣ್ಣಯ್ಯನವರ ಬಾಯಿಮುಚ್ಚಿಸುವುದು ಕಾಲನ ಹೊರತು ಯಾರಿಂದಲೂ ಸಾಧ್ಯವಿರಲಿಲ್ಲ. ಕೊನೆಗೂ ಕಾಲ ಹಠವೇ ಗೆದ್ದಿತು.. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ರಂಗಕರ್ಮಿ ಕಲಾವಿದ ಮಾಸ್ಟರ್ ಹಿರಣ್ಣಯ್ಯನವರು ತಮ್ಮ ಎಂಬತ್ತನಾಲ್ಕನೆಯ ವಯಸ್ಸಿನಲ್ಲಿ ಸಾವಿನ ಕರೆಗೆ ಓಗೊಟ್ಟು ಹೊರಟೇ ಹೋದರು. ಸಾಮಾಜಿಕ ಪೀಡೆಗಳ ವಿರುದ್ದ ನಟನೆಯ ಮೂಲಕ ಮಾತುಗಳನ್ನೇ ಅಸ್ತ್ರ ಶಸ್ತಗಳಂತೆ ಬಳಸಿ ಸ್ವಸ್ಥ ಸಮಾಜದ ಅಸ್ತಿತ್ವಕ್ಕಾಗಿ ಪರಿತಪಿಸಿದ ಹಿರಣ್ಣಯ್ಯನವರು ತಮ್ಮ ಬದುಕನ್ನು ಸಾರ್ಥಕಗೊಳಿಸಿಕೊಂಡು ನಿರ್ಗಮಿಸಿದರು.

ರಂಗಕಲೆ ಎನ್ನುವುದು ಹುಟ್ಟಿನಿಂದಲೇ ಹಿರಣ್ಣಯ್ಯನವರ ಬೆನ್ನಿಗಂಟಿಕೊಂಡೇ ಬಂದಿತ್ತು. ಇವರ ತಂದೆ ಕಲಾವಿದ ಕೆ.ಹಿರಣ್ಣಯ್ಯನವರು ನಾಟಕ ಕಂಪನಿಯನ್ನು ನಡೆಸುತ್ತಿದ್ದರು. 1934 ಫೆ.15 ರಂದು ಮೈಸೂರಿನಲ್ಲಿ ಶಾರದಮ್ಮನವರು ಮಗುವಿಗೆ ಜನ್ಮವಿತ್ತಾಗ ಕೆ.ಹಿರಣ್ಣಯ್ಯನವರು ನರಸಿಂಹಮೂರ್ತಿ ಎಂದು ನಾಮಕರಣ ಮಾಡಿದ್ದರು. ಆರು ವಯಸ್ಸಿನ ಮಗುವಿದ್ದಾಗಲೇ ಬಣ್ಣ ಹಚ್ಚಿ ರಂಗವೇದಿಕೆಗೆ ಬಂದ ನರಸಿಂಹಮೂರ್ತಿ ತಮ್ಮ ತಂದೆಯವರು ಬರೆದು ನಿರ್ದೆಶಿಸಿದ ವಾಣಿ ನಾಟಕದಲ್ಲಿ ಮೊಟ್ಟಮೊದಲ ಬಾರಿಗೆ ಬಾಲನಟನಾಗಿ ನಟಿಸಿದರು. ತಂದೆಯವರ ಆಸೆಯಂತೆ ಇಂಟರ್‌ಮೀಡಿಯೇಟ್‌ವರೆಗೆ ಓದಿದ ನರಸಿಂಹಮೂರ್ತಿಗೆ ನಾಟಕದ ಸೆಳೆತ ಎಳೆಯತೊಡಗಿತು. ಓದುವಾಗಲೇ ಕಾಲೇಜಿನಲ್ಲಿ ಸಂಘವೊಂದನ್ನು ಕಟ್ಟಿ ಆಗ್ರಹ ಎನ್ನುವ ನಾಟಕವನ್ನು ಪ್ರದರ್ಶಿಸಿದರು. ತಮ್ಮ 18ನೇ ವಯಸ್ಸಿನಲ್ಲಿಯೇ ಹಿರಣ್ಣಯ್ಯನವರ ರಂಗಗರಡಿಯಲ್ಲಿ ಪೂರ್ಣಾವಧಿಯಾಗಿ ರಂಗಕಲೆಯನ್ನು ಕರಗತ ಮಾಡಿಕೊಂಡಿದ್ದ ನರಸಿಂಹಮೂರ್ತಿಯವರು ನಟನೆಯನ್ನು ಆರಂಭಿಸಿದರು. ಮಾತು ಮತ್ತು ನmನೆಯಲ್ಲಿ ತಂದೆಯವರನ್ನೇ ಮೀರಿಸಿದ ಮಗ ನರಸಿಂಹಮೂರ್ತಿಯನ್ನು ಎಲ್ಲರೂ ಮಾಸ್ಟರ್ ಹಿರಣ್ಣಯ್ಯ ಎಂದೇ ಕರೆಯತೊಡಗಿದರು. ತದನಂತರ ಅದೇ ಹೆಸರೇ ಖಾಯಂ ಆಗಿ ಅವರ ಮೂಲ ಹೆಸರು ಎಲ್ಲರಿಗೂ ಮರೆತೇಹೋಯಿತು. 1953ರಲ್ಲಿ ಕೆ.ಹಿರಣ್ಣಯ್ಯನವರು ಕಾಲವಶರಾದಾಗ ತಮ್ಮ ತಂದೆಯವರ ಹೆಸರಿನಲ್ಲಿ ಕೆ.ಹಿರಣ್ಣಯ್ಯ ಮಿತ್ರ ಮಂಡಳಿಯನ್ನು ಸ್ಥಾಪಿಸಿ ಕಳೆದ ಆರು ದಶಕಗಳಿಗಿಂತಲೂ ಹೆಚ್ಚು ಕಾಲ ಮಾಸ್ಟರ್ ಹಿರಣ್ಣಯ್ಯನವರು ಆ ರಂಗತಂಡವನ್ನು ಮುನ್ನಡೆಸಿಕೊಂಡು ಬಂದರು. ರಂಗಭೂಮಿಯಲ್ಲಿ ತಮ್ಮದೇ ಆದ ಹೊಸ ಮಾರ್ಗವನ್ನು ಕಂಡುಕೊಂಡರು.



ನಾಟಕ ಕಂಪನಿಯೊಂದನ್ನು ಕಟ್ಟಿ ನಿರ್ವಹಿಸುವುದು ಅಂದುಕೊಂಡಷ್ಟು ಸುಲಭದ್ದೇನಾಗಿರಲಿಲ್ಲಾ. ಮಿತ್ರ ಮಂಡಳಿ ಆರಂಭದಲ್ಲಿ ತುಂಬಾನೇ ನಷ್ಟವನ್ನು ಅನುಭವಿಸಿ ಇನ್ನೇನು ಮುಚ್ಚಬೇಕಾಗಿತ್ತು.. ಆದರೆ.. ಆಗ ಬಂತು ನೋಡಿ ಮಾಸ್ಟರ್ ಹಿರಣ್ಣಯ್ಯನವರ ಮಾಸ್ಟರ್ ಫೀಸ್ ನಾಟಕ ಲಂಚಾವತಾರ. ಕೆಲವೇ ದಿನಗಳಲ್ಲಿ ಈ ನಾಟಕ ಅತ್ಯಂತ ಜನಪ್ರೀಯವಾಯಿತು. ಲಂಚದ ಹಾವಳಿಯಿಂದ ಜನರು ಜರ್ಜರಿತರಾಗಿದ್ದಂತಹ ಸಮಯದಲ್ಲಿ ಲಂಚದ ವಿರುದ್ದವಾಗಿ ವ್ಯವಸ್ಥೆಯನ್ನು ಬೈದು ಬುದ್ದಿಹೇಳಿ ಮಾತಾಡುವವರೊಬ್ಬರು ಬೇಕಾಗಿತ್ತು. ಆ ಕೆಲಸವನ್ನು ಹಿರಣ್ಣಯ್ಯನವರು ಅತ್ಯಂತ ಸಮರ್ಥವಾಗಿ ನಿರ್ವಹಿಸಿದರು. ಜೊತೆಗೆ ವೃತ್ತಿ ರಂಗಭೂಮಿ ನಾಟಕದ ಸಾಂಪ್ರದಾಯಿಕ ರೀತಿ ನೀತಿ ಸೂತ್ರಗಳನ್ನೆಲ್ಲಾ ಬದಲಾಯಿಸಿ ವ್ಯವಸ್ಥೆಯ  ಅವ್ಯವಸ್ಥೆಯನ್ನು ಸಂದರ್ಭೋಚಿತ ವಾಚಿಕಾಭಿನಯದ ಮೂಲಕ ಅಭಿವ್ಯಕ್ತಿಸುತ್ತಾ ಪ್ರೇಕ್ಷಕರ ಮನಸ್ಸನ್ನು ಮುಟ್ಟಿದರು.. ಮೆದುಳನ್ನು ತಟ್ಟಿದರು. ಲಂಚಾವತಾರ ನಾಟಕ ಆಗಿನ ಕಾಲಕ್ಕೆ ಸುಪರ್‌ಹಿಟ್ ಆಗಿ ಹೋಯ್ತು. ಇಲ್ಲಿವರೆಗೂ ಹತ್ತು ಸಾವಿರಕ್ಕಿಂತಲೂ ಹೆಚ್ಚು ಪ್ರದರ್ಶನಗಳನ್ನು ಲಂಚಾವತಾರ ಕಂಡಿದೆ. ಈ ನಾಟಕದ ಯಶಸ್ಸು ಹಾಗೂ ಅದಕ್ಕೆ ಕಾರಣವಾದ ಅಂಶಗಳಿಂದ ಪ್ರೇರೇಪಿತರಾದ ಹಿರಣ್ಣಯ್ಯನವರು ತದನಂತರ ಭ್ರಷ್ಟಾಚಾರ, ಮಕ್ಮಲ್ ಟೋಪಿ, ದೇವದಾಸಿ, ಕಪಿಮುಷ್ಟಿ, ನಡುಬೀಡಿ ನಾರಾಯಣ, ಪಶ್ಚಾತ್ತಾಪ, ಚಪಲಾವತಾರ, ಲಾಟರಿ ಸರಕಾರ, ಸನ್ಯಾಸಿ ಸಂಸಾರ, ಡಬ್ಬಲ್ ತಾಳಿ.. ಹೀಗೆ ಮುಂತಾದ ನಾಟಕಗಳನ್ನು ತಮ್ಮ ..ಮಿತ್ರ ಮಂಡಳಿಯಿಂದ ನಿರ್ಮಿಸಿ ನಟಿಸಿ ರಾಜ್ಯ ಅಷ್ಟೇ ಅಲ್ಲಾ ದೇಶಾದ್ಯಂತ ಪ್ರದರ್ಶಿಸಿದರು. ಒಂದು ರೀತಿಯ ಮಾತಿನ ನಾಟಕದ ಅಲೆಯನ್ನೇ ಸೃಷ್ಟಿಸಿದರು. ಅವರ ಬಹುತೇಕ ನಾಟಕಗಳು ವಿಡಂಬಣಾ ಪ್ರಧಾನವಾಗಿದ್ದು ನೋಡುಗರನ್ನು ಪ್ರಚೋದಿಸುವಲ್ಲಿ, ಯೋಚನೆಗೆ ಹಚ್ಚುವಲ್ಲಿ ಯಶಸ್ವಿಯಾದವು. ತಮ್ಮ ಮಗ ಬಾಬು ಹಿರಣ್ಣಯ್ಯನವರನ್ನೂ ಜೊತೆಗೆ ಸೇರಿಸಿಕೊಂಡು ನಿರಂತರವಾಗಿ ಆರು ದಶಕಗಳ ಕಾಲ ವೃತ್ತಿ ಕಂಪನಿ ನಾಟಕಗಳನ್ನು ಆಡುತ್ತಲೇ ಬಂದರು. ಕನ್ನಡ ರಂಗಭೂಮಿಯಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸುವಲ್ಲಿ ಯಶಸ್ವಿಯಾದರು.

ಹಿರಣ್ಣಯ್ಯನವರ ಮಾತಿನ ಮೋಡಿಗೆ ಕೇವಲ ರಂಗಭೂಮಿಯವರು ಮಾತ್ರವಲ್ಲಾ ಸಿನೆಮಾ ರಂಗದವರೂ ಬೆರಗಾದರು. ಕರೆಕರೆದು ಚಲನಚಿತ್ರಗಳಲ್ಲಿ ಪಾತ್ರಗಳನ್ನು ಕೊಟ್ಟರು. 1955ರಲ್ಲೇ ಮೊದಲ ಬಾರಿಗೆ ಮೊದಲ ತೇದಿ ಸಿನೆಮಾದಲ್ಲಿ ನಟಿಸಿದರು. ಆನಂತರ ಮುತ್ತೈದೆ ಭಾಗ್ಯ, ದೈವ ಸಂಕಲ್ಪ, ಮಧುರ ಸಂಗಮ, ಆನಂದ ಸಾಗರ, ಋಣಮುಕ್ತಳು, ದೇವರಮನೆ, ಶಕ್ತಿ-ಯುಕ್ತಿ, ಹರಕೆಯ ಕುರಿ, ಆಪರೇಶನ್ ಅಂತ, ಕಲ್ಯಾಣೋತ್ಸವ, ಮುಸ್ಸಂಜೆ, ಮರ್ಮ, ಗಜ, ಶಾಂತಿನಿವಾಸ, ಲಂಚಸಾಮ್ರಾಜ್ಯ, ಈ ಸಂಭಾಷಣೆ, ನಿರಂತರ, ಯಕ್ಷ, ಸಂಕ್ರಾಂತಿ, ಕೇರ್ ಆಪ್ ಫುಟಪಾತ್.. ಹೀಗೆ ಒಟ್ಟು ಮೂವತ್ತಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿ ಜನರ ಮನರಂಜಿಸಿದ್ದಾರೆ.  2016 ರಲ್ಲಿ ಬಂದ ರೇ ಸಿನೆಮಾವೇ ಅವರು ಅಭಿನಯಿಸಿದ ಕೊನೆಯ ಸಿನೆಮಾ ಆಗಿದೆ. ಹಿರಣ್ಣಯ್ಯನವರು ನಿರ್ಮಿಸಿ ನಟಿಸಿದ ದೇವದಾಸಿ ನಾಟಕವು ಅದೇ ಹೆಸರಲ್ಲಿ 1978ರಲ್ಲಿ ಸಿನೆಮಾ ಆಗಿ ನಿರ್ಮಾಣಗೊಂಡಿತು. ಇದರಲ್ಲಿ ಡಬಲ್ ರೋಲ್‌ನಲ್ಲಿ ಅಭಿನಯಿಸಿದ್ದ ಹಿರಣ್ಣಯ್ಯನವರು ಸಿನೆಮಾದ ಸಂಭಾಷಣೆಯನ್ನೂ ಬರೆದಿದ್ದರು. 1987ರಲ್ಲಿ ಸಂಪ್ರದಾಯ ಎನ್ನುವ ಸಿನೆಮಾವನ್ನು ನಿರ್ದೇಶಿಸಿದ್ದು ಅದಕ್ಕೆ ಕಥೆ ಚಿತ್ರಕಥೆ ಹಾಗೂ ಸಾಹಿತ್ಯವನ್ನೂ ಬರೆದು ನಟಿಸಿದ್ದರು. ಪುಣ್ಯಕೋಟಿ, ಅಮೃತವಾಹಿನಿ ಧಾರಾವಾಹಿಗಳಲ್ಲೂ ಸಹ ನಟನೆ ಮಾಡಿ ತಮ್ಮ ಅಭಿನಯ ಪ್ರತಿಭೆಯನ್ನು ರಂಗಭೂಮಿಯ ಆಚೆಗೂ ದೃಶ್ಯಮಾಧ್ಯಮಗಳಿಗೆ ವಿಸ್ತರಿಸಿದ್ದರು.



ಮಾಸ್ಟರ್ ಹಿರಣ್ಣಯ್ಯನವರು ರಂಗಭೂಮಿಗೆ ಸಲ್ಲಿಸಿದ ಸೇವೆಗಾಗಿ ರಾಜ್ಯೋತ್ಸವ ಪ್ರಶಸ್ತಿ (1984) ನಾಟಕ ಅಕಾಡೆಮಿ ಪ್ರಶಸ್ತಿ, ರಂಗಭೂಮಿಯ ಪ್ರತಿಷ್ಟಿತ ಗುಬ್ಬಿ ವೀರಣ್ಣ ಪ್ರಶಸ್ತಿ (1988) ಹಾಗೂ ಸಂದೇಶ ಆರ್ಟ್ಸ ಅವಾರ್ಡ (2009), ಅನಕೃ ನಿರ್ಮಾಣ ಸ್ವರ್ಣ ಪ್ರಶಸ್ತಿ (2013), ಅಲ್ವಾಸ್ ನುಡಿಸಿರಿ ಪ್ರಶಸ್ತಿ (2005), ನವರತ್ನ ರಾಂ ಪ್ರಶಸ್ತಿ.. ಹೀಗೆ ಅನೇಕಾನೇಕ ಸಂಘ ಸಂಸ್ಥೆಗಳು ಪ್ರಶಸ್ತಿಗಳನ್ನು ಕೊಟ್ಟು ಗೌರವಿಸಿವೆ.  ನಟರತ್ನಾಕರ ಕಲ್ಚರ್ಡ ಕಾಮೇಡಿಯನ್, ಕಲಾಗಜ ಸಿಂಹ ಎಂಬ ಬಿರುದುಗಳನ್ನು ಕೊಟ್ಟು ರಂಗಸಕ್ತರು ಸಂಭ್ರಮಿಸಿದ್ದಾರೆ. 

ಹಿರಣ್ಣಯ್ಯರವರ ಬದುಕಿನ ದಾರಿಯ ವ್ಯಕ್ತಿಗತ ದೌರ್ಬಲ್ಯಗಳನ್ನು ಮರೆತು, ಅವರ ವ್ಯಯಕ್ತಿಕವಾದ ಒಲವು ನಿಲುವುಗಳನ್ನು ಪಕ್ಕಕ್ಕಿಟ್ಟು ಅವರ ಸಾಧನೆಯನ್ನು ಮಾತ್ರ ಪರಿಗಣಿಸಿದರೆ ನಿಜಕ್ಕೂ ಸೋಜಿಗವೆನಿಸುತ್ತದೆ. ವೃತ್ತಿ ರಂಗಭೂಮಿಯ ಸಾಂಪ್ರದಾಯಿಕ ಮಾದರಿ ಶೈಲಿಗಳನ್ನು ಬಿಟ್ಟು ಅವರದೇ ಆದ ವಾಚಕಾಭಿನಯ ಕೇಂದ್ರಿತ ವಿಕ್ಷಿಪ್ತ ಮಾರ್ಗವನ್ನು ಕಂಡುಕೊಂಡಿದ್ದು ಅನುಕರಣೀಯವಲ್ಲದಿದ್ದರೂ ಆದರಣೀಯವಾಗಿದೆ. ಹಿರಣ್ಣಯ್ಯನವರು ಮಾಡುತ್ತಿರುವುದು ನಾಟಕವೇ ಅಲ್ಲಾ ಬರೀ ಬೈಗುಳಗಳ ಭಾಷಣ ಎಂದು ವಿಮರ್ಶಿಸಿದವರಿದ್ದಾರೆ, ಅವರು ಮಾಡುವುದು ಒಂದು ರೀತಿ ಏಕವ್ಯಕ್ತಿ ಅಭಿನಯ ಕೇಂದ್ರಿತ ನಾಟಕವಾಗಿದ್ದು ಸಂಗೀತದಲ್ಲಿ ಪಕ್ಕವಾದ್ಯಗಳಿದ್ದಂತೆ ಅಕ್ಕಪಕ್ಕ ಒಂದೆರಡು ಪಾತ್ರಗಳನ್ನು ಹೂಂಗುಟ್ಟಲು ಇಟ್ಟುಕೊಂಡಿರುತ್ತಾರಷ್ಟೇ ಎಂದು ಮೂದಲಿಸಿದವರೂ ಇದ್ದಾರೆ, ಕಲಾತ್ಮಕ ಅಂಶಗಳೇ ಇಲ್ಲದ. ಕಾವ್ಯಾತ್ಮಕತೆಯ ಸೋಂಕು ಇಲ್ಲದ ಬೀಡುಬೀಸಾದ ಬರೀ ಉಡಾಫೆ ಮಾತುಗಳು ಅದು ಹೇಗೆ ನಾಟಕ ಎನಿಸಿಕೊಳ್ಳುತ್ತದೆ ಎಂದು ಹೇಳಿದವರೂ ಬೇಕಾದಷ್ಟಿದ್ದಾರೆ. ಅತ್ತ ವೃತ್ತಿ ರಂಗಭೂಮಿಯ ನೃತ್ಯ ಸಂಗೀತ ಬೆಳಕಿನ ವೈಭವಗಳೂ ಇಲ್ಲದ, ಇತ್ತ ಆಧುನಿಕ ರಂಗಭೂಮಿಯ ವೈಚಾರಿಕತೆ ಹಾಗೂ ಕಲೆಯ ಸೂಕ್ಷ್ಮಗಳು ಇಲ್ಲದ ಆಯಾ ಕ್ಷಣದ ತುರುಕೆಯ ಕೆರತದಂತಹವು ಹಿರಣ್ಣಯ್ಯನವರ ನಾಟಕಗಳು ಎಂದೂ ಮೂಗು ಮುರಿದವರಿದ್ದಾರೆ. ಆದರೆ.. ಯಾರು ಏನೇ ಹೇಳಲಿ ತಮ್ಮದೇ ಆದ ನಿಂದಾಸ್ತುತಿ ಶೈಲಿಯೊಂದನ್ನು ಕಂಡುಕೊಂಡ ಹಿರಣ್ಣಯ್ಯನವರು ಆನೆ ನಡೆದಿದ್ದೇ ದಾರಿ ಎಂಬಂತೆ ತಮ್ಮದೇ ಆದ ರಂಗಭೂಮಿಯನ್ನು ಕಟ್ಟಿಕೊಂಡರು. ಈ ಮಾದರಿಯ ನಿಂದಾಸ್ತುತಿ ನಾಟಕಗಳನ್ನು ಪ್ರೇಕ್ಷಕರು ಹುಚ್ಚೆದ್ದು ನೋಡಿ ತಣಿದರು. ತನ್ನದೇ ಆದ ಪ್ರೇಕ್ಷಕವರ್ಗವೊಂದನ್ನು ಹಿರಣ್ಣಯ್ಯನವರು ಹುಟ್ಟುಹಾಕಿಕೊಂಡು ಹೌಸ್‌ಪುಲ್ ಶೋಗಳನ್ನು ಕೊಡುತ್ತಲೇ ಬಂದರು. ಆರ್ಥಿಕವಾಗಿ ಸದೃಡತೆಯನ್ನೂ ಸಂಪಾದಿಸಿದರು.



ಈ ರೀತಿ ಭಿನ್ನ ದಾರಿಯನ್ನು ಹಿಡಿಯುವುದಕ್ಕೂ ಕಾರಣಗಳಿವೆ. ಆ ಒಂದು ಘಟನೆಯಂತೂ ಹಿರಣ್ಣಯ್ಯನವರನ್ನು ತಲ್ಲಣಗೊಳಿಸಿ ಸಾವಿನಂಚಿಗೆ ನೂಕಿದ್ದನ್ನು ಅವರ ಸಹಕಲಾವಿದರಾಗಿದ್ದಿ ಡಿಂಗ್ರಿ ನಾಗರಾಜರವರು ಈಗಲೂ ನೆನಪಿಸಿಕೊಳ್ಳುತ್ತಾರೆ. ಹಿರಣ್ಣಯ್ಯನವರ ತಂದೆಯವರು 1953ರಲ್ಲಿ ತೀರಿಕೊಂಡಾಗ ಅವರ ನಾಟಕ ಕಂಪನಿ ಅಷ್ಟೊಂದು ಆರ್ಥಿಕವಾಗಿ ಶ್ರೀಮಂತವಾಗಿರಲಿಲ್ಲ. ನಟನೆ ಬಿಟ್ಟು ಬೇರೇನೂ ಮಾಡಲು ಗೊತ್ತಿಲ್ಲದ ಹಾಗೂ ರಂಗಭೂಮಿಯ ಆಕರ್ಷಣೆಯಿಂದ ಹೊರಬರಲಾಗದ ಹಿರಣ್ಣಯ್ಯನವರು ಕೆ.ಹಿರಣ್ಣಯ್ಯ ಮಿತ್ರ ಮಂಡಳಿ ಹೆಸರಲ್ಲಿ ನಾಟಕ ಕಂಪನಿ ಹುಟ್ಟು ಹಾಕಿ ಎಂಟು ವರ್ಷಗಳ ಕಾಲ ಆ ಕಂಪನಿಯನ್ನು ಉಳಿಸಿಕೊಳ್ಳಲು ಹರಸಾಹಸ ಪಟ್ಟರು. ಆದರೂ.. ಅದನ್ನು ಮುಂದುವರೆಸಿಕೊಂಡು ಹೋಗುವುದು ಅಸಾಧ್ಯವೆನಿಸಿ ಅತೀವ ಬೇಸರಗೊಂಡರು.

ಆಗ.. ಹಿರಿಯೂರಲ್ಲಿ ನಾಟಕ ಕಂಪನಿ ಕ್ಯಾಂಪ್ ಮಾಡಿತ್ತು. ಮೀಸೆ ಮುನಿಯಪ್ಪ ಮತ್ತು ರಂಗಸ್ವಾಮಿ ಎನ್ನುವವರು ಹಿರಣ್ಣಯ್ಯನವರ ಅಕ್ಕಪಕ್ಕದ ಪಾತ್ರಗಳನ್ನು ಮಾಡುತ್ತಿದ್ದರು. ಅನಕ್ಷರಸ್ತರಾಗಿದ್ದ ಮೀಸೆ ಮುನಿಯಪ್ಪನವರ ಮೇಲೆ ಹಿರಣ್ಣಯ್ಯನವರಿಗೆ ಅತಿಯಾದ ಪ್ರೀತಿ ಮತ್ತು ವಿಶ್ವಾಸ. ಅದೊಂದು ದಿನ ರಾತ್ರಿ ನಾಟಕ ಮಾಡಿ ಬೆಳಿಗ್ಗೆ ಎದ್ದ ಮುನಿಯಪ್ಪನವರಿಗೆ ಎದೆನೋವು ಆರಂಭವಾಗಿ ಆಸ್ಪತ್ರೆಗೆ ಸೇರಿದವರು ಹೃದಯಾಘಾತದಿಂದ ಸಾವಿಗೀಡಾದರು. ಚಿತ್ರದುರ್ಗದಲ್ಲಿ ಮನೆಮಾಡಿದ್ದ ಹಿರಣ್ಣಯ್ಯನವರಿಗೆ ವಿಷಯ ಗೊತ್ತಾಗಿ ಬದುಕಿನ ಮೇಲೆಯೇ ಜಿಗುಪ್ಸೆ ಹೊಂದಿದರು. ಮುನಿಯಪ್ಪನವರು ಹಿಡಿದ ದಾರಿಯನ್ನೇ ಹಿಡಿಯಬೇಕೆಂದು ನಿರ್ಧರಿಸಿದರು. ನೇರವಾಗಿ ಔಷಧಿ ಅಂಗಡಿಗೆ ಹೋದವರೇ ಐವತ್ತು ಮಾತ್ರೆಗಳನ್ನು ಖರೀದಿಸಿದರು. ಆರೋಗ್ಯವಂತ ಮನುಷ್ಯ ಒಂದು ಮಾತ್ರೆ ಸೇವಿಸಿದರೆ ದಿನಪೂರ್ತಿ ಕೋಮಾಗೆ ಹೋಗುವಂತಹ ಮಾತ್ರೆಗಳವು. ಅಂತಹ 50 ಮಾತ್ರೆಗಳನ್ನು ನುಂಗಿ ಮಲಗಿ ಸಾವಿನೂರಿಗೆ ಹೊರಡಲುವಾಗಿದ್ದ ಹಿರಣ್ಣಯ್ಯನವರನ್ನು ಡಾಕ್ಟರುಗಳು ಅದು  ಹೇಗೋ ಹರಸಾಹಸ ಮಾಡಿ ಬದುಕಿಸಿದರಾದರೂ ಅವರ ನೆನಪಿನ ಶಕ್ತಿಯೇ ನಷ್ಟವಾಗಿ ಹೋಗಿತ್ತು. ಮುಂದಿನ ಮೂರು ತಿಂಗಳುಗಳ ಕಾಲ ಯಾವುದರ ಅರಿವೂ ಇಲ್ಲದೇ, ಯಾವುದರ ಕುರಿತು ನೆನಪೂ ಇಲ್ಲದೇ ಕೂತಲ್ಲೇ ಕೂತು ಶೂನ್ಯವನ್ನು ನೋಡುತ್ತಾ ಕಾಲತಳ್ಳತೊಡಗಿದರು. ಮನೆಯವರು ತಿನ್ನಿಸಿದ್ದನ್ನು ತಿಂದು ಕೂಡುವುದು ಇಲ್ಲವೇ ಮಲಗುವುದೇ ನಿತ್ಯ ಕಾಯಕವಾಯಿತು. ಯಾವುದೇ ಚಟುವಟಿಕೆಗಳಿಲ್ಲದೇ ಇದ್ದುದರಿಂದ ತೆಳ್ಳಗೇ ಇದ್ದ ಹಿರಣ್ಣಯ್ಯನವರು ದಿನದಿಂದ ದಿನಕ್ಕೆ ದಪ್ಪಗಾಗತೊಡಗಿದರು. ಆಗ ಏರಿದ ಮೈ ಮತ್ತೆ ಇಳಿಯಲೇ ಇಲ್ಲ. ಡಾಕ್ಟರುಗಳ ಪ್ರಯತ್ನದಿಂದ ಸಾವಕಾಶವಾಗಿ ನೆನಪುಗಳು ಮರುಕಳಿಸಿದವು. ರಂಗಭೂಮಿಯ ನೆನಪು ಮತ್ತೆ  ಬದುಕುವ ಚೈತನ್ಯವನ್ನು ತುಂಬಿತು. ನಟನೆ ಕೈಬೀಸಿ ಕರೆಯಿತು. ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢಗೊಂಡರು. ಹೊಸ ಬದುಕನ್ನು ಪಡೆದು ಹೊಸ ಲೋಕವನ್ನೇ ನೋಡತೊಡಗಿದರು. ಅವರು ನೋಡುವ ನೋಟದಲ್ಲಿ ಇಡೀ ವ್ಯವಸ್ಥೆಯ ನ್ಯೂನ್ಯತೆಗಳು ಢಾಳಾಗಿ ಕಾಣಿಸತೊಡಗಿದವರು. ಲಂಚ ಹಾಗೂ ಭ್ರಷ್ಟಾಚಾರಗಳಿಂದ ಸಮಾಜ ದಿಕ್ಕೆಟ್ಟು ಹೋಗಿತ್ತು. ಅದನ್ನೇ ನಾಟಕವಾಗಿಸಿದರು. 1961ರಲ್ಲಿ ಲಂಚಾವತಾರ ನಾಟಕವನ್ನು ಬರೆದು ನಿರ್ದೇಶಿಸಿ ನಿರ್ಮಿಸಿ ವೃತ್ತಿ ರಂಗಭೂಮಿಯಲ್ಲಿ ಹೊಸ ದಾಖಲೆಯನ್ನೇ ಬರೆದರು. ಸಾಂಪ್ರದಾಯಿಕ ರೀತಿಯಲ್ಲಿ ವೃತ್ತಿ ನಾಟಕಗಳನ್ನು ಮಾಡಿದರೆ ಗಿಟ್ಟುವುದು ಕಷ್ಟವೆಂದರಿತು., ಲಂಚಾವತಾರ ನಾಟಕದ ಯಶಸ್ಸಿನಿಂದ ಪ್ರೇರಿತರಾಗಿ ಅದೇ ಮಾದರಿಯಲ್ಲಿ ಬೇರೆ ಬೇರೆ ಸಾಮಾಜಿಕ ಸಮಸ್ಯೆಗಳನ್ನು ವಿಡಂಬನಾತ್ಮಕವಾಗಿ ಹೇಳುವ ನಾಟಕಗಳನ್ನು ಬರೆದು ನಟಿಸಿ ಯಶಸ್ಸಿನ ಮೆಟ್ಟಿಲನ್ನು ಹತ್ತುತ್ತಲೇ ಸಾಗಿದರು. ಹಿರಣ್ಣಯ್ಯನವರು ಪಡೆದ ಮರುಜನ್ಮ ಅವರಿಗೆ ಸಾಧನೆಯ ಹಾದಿಯನ್ನು ತೋರಿಸಿತು. ಹಿರಣ್ಣಯ್ಯ ಎನ್ನುವ ರಂಗಭೂಮಿಯ ಆನೆ ತನ್ನದೇ ಆದ ದಾರಿಯನ್ನು ಕಂಡುಕೊಂಡಿತು.



ಈಗೊಂದು ಎರಡ್ಮೂರು ವರ್ಷಗಳಿಂದ ಹಿರಣ್ಣಯ್ಯನವರು ಸಾರ್ವಜನಿಕ ವೇದಿಕೆಗಳಲ್ಲಿ ಭಾಗವಹಿಸುವುದನ್ನು ಭಹಿಷ್ಕರಿಸಿದ್ದರು. ಈ ಕಟು ನಿರ್ಧಾರದ ಹಿಂದೆಯೂ ಸಹ ಒಂದು ವಿಷಾದದ ಕಥೆಯಿದೆ. ಸಿದ್ದರಾಮಯ್ಯನವರು ಮಂತ್ರಿಯಾಗಿದ್ದಾಗ ಸಾರ್ವಜನಿಕ ಸಭೆಯೊಂದಕ್ಕೆ ಹಿರಣ್ಣಯ್ಯನವರು ಆಹ್ವಾನಿತರಾಗಿದ್ದರು. ಜನರು ತುಂಬಿದ ಸಭೆಯಲ್ಲಿ ಹಿರಣ್ಣಯ್ಯನವರು ಸಿದ್ದರಾಮಯ್ಯನವರ ಕಾರ್ಯವೈಖರಿಯನ್ನು ಅವರ ಉಪಸ್ಥಿತಿಯಲ್ಲೇ ತಮ್ಮದೇ ಆದ ಟಿಪಿಕಲ್ ಬೈಗುಳ ಶೈಲಿಯಲ್ಲಿ ವಿಶ್ಲೇಷಿಸಿದರು. ಸಭೆಯ ನಂತರ ಗುಂಪುಗೂಡಿದ ಕಾಂಗ್ರೆಸ್ ಕಾರ್ಯಕರ್ತರುಗಳು ಹಿರಣ್ಣಯ್ಯನವರನ್ನು ಸುತ್ತುಗಟ್ಟಿ ನಿಂದಿಸಿ ಕ್ಷಮಾಪಣೆ ಕೇಳಿಯೇ ಇಲ್ಲಿಂದ ಹೋಗಬೇಕೆಂದು ದಮಕಿ ಹಾಕಿದರು. ನನ್ನ ಜೀವನದಲ್ಲೇ ಎಂದೂ ಯಾರಿಗೂ ಕ್ಷಮೆ ಕೇಳದೇ ಅಂದಿದ್ದೆಲ್ಲವನ್ನೂ ಅರಗಿಸಿಕೊಂಡಿದ್ದ ಹಿರಣ್ಣಯ್ಯನವರಿಗೆ ಈ ಅನಿರೀಕ್ಷಿತ ಘಟನೆಯಿಂದ ಮುಜುಗರವಾಗತೊಡಗಿತು. ಮೊದಲಿನಂತೆ ಮೈಯಲ್ಲಿ ಶಕ್ತಿ ಇದ್ದರೆ ಈ ಅಂಧಾಭಿಮಾನಿಗಳ ಗುಂಪನ್ನೂ ತಮ್ಮ ಮಾತಿನ ಚಾಟಿಯಿಂದಲೇ ನಿಭಾಯಿಸುತ್ತಿದ್ದರು. ಆದರೆ.. ಈಗ ಅದು ಆಗಲಿಲ್ಲ. ತಮ್ಮ ಮನಸ್ಸಿನ ವಿರುದ್ಧವಾಗಿ ಅವರ ಬದುಕಿನಲ್ಲೇ ಮೊಟ್ಟ ಮೊದಲ ಬಾರಿಗೆ ಕ್ಷಮೆಯಾಚಿಸಿ ಗುಂಪಿನಿಂದ ಪಾರಾಗಿ ಮನೆಗೆ ಬಂದರಾದರೂ ಮನಸ್ಸು ಪೂರಾ ಜರ್ಜರಿತವಾಗಿತ್ತು. ಇನ್ನು ಮೇಲೆ ಯಾವುದೇ ಸಾರ್ವಜನಿಕ ಸಭೆಗಳಿಗೆ, ಅದರಲ್ಲೂ ರಾಜಕೀಯ ಸಭೆಗಳಿಗೆ ಹೋಗಲೇಬಾರದು ಎಂದು ನಿರ್ಧರಿಸಿದರು ಹಾಗೂ ಕೊನೆಯುಸಿರು ಇರುವವರೆಗೂ ಅದನ್ನು ನಿಭಾಯಿಸಿದರು. 

ಪ್ರೇಕ್ಷಕರನ್ನು ಡಾ.ರಾಜಕುಮಾರರವರು ಅಭಿಮಾನಿ ದೇವರುಗಳು ಎನ್ನುವುದಕ್ಕಿಂತಲೂ ಮುಂಚೆಯೇ ಮಾಸ್ಟರ್ ಹಿರಣ್ಣಯ್ಯನವರು ಪ್ರೇಕ್ಷಕರು ರಂಗಭೂಮಿಯ ಅನ್ನದಾತರು ಎಂದು ಪ್ರತಿ ನಾಟಕದ ಪ್ರದರ್ಶನ ಕೊನೆಗೆ ಕರೆದು ನೋಡುಗರಿಗೆ ಗೌರವವನ್ನು ತೋರಿಸುತ್ತಿದ್ದರು. ಅದೊಂದು ಸಲ ತುಮಕೂರಿನಲ್ಲಿ ನಾಟಕದ ಕ್ಯಾಂಪ್ ಹಾಕಿದ್ದರು. ಹಿರಣ್ಣಯ್ಯನವರು ಅದೆಷ್ಟೇ ಹಾಸ್ಯಪ್ರಧಾನವಾದ ಮಾತುಗಳಿಂದ ಅಲ್ಲಿರುವ ಪ್ರೇಕ್ಷಕರ ಮನರಂಜಿಸಿ ನಗಿಸಲು ಪ್ರಯತ್ನಿಸಿದರೂ ಯಾವೊಬ್ಬ ಪ್ರೇಕ್ಷಕನೂ ನಗಲೇ ಇಲ್ಲದ್ದು ನೋಡಿ ಬೇಸರಗೊಂಡರು. ತಮಗಾದ ಬೇಸರವನ್ನು ಯಾವತ್ತೂ ಮರೆಮಾಚುವ ಸ್ವಭಾವವೇ ಇಲ್ಲದ ಹಿರಣ್ಣಯ್ಯನವರು ನಾಟಕ ಮುಗಿದ ಮೇಲೆ ಎ ತುಮಕೋ ಊರು ಹಮಕೋ ಮಷಾನ್ ಎಂದು ನೇರವಾಗಿಯೇ ಹೇಳಿದಾಗ ಅದು ಅರ್ಥವಾದ ಕೆಲವರ ತುಟಿಗಳಲ್ಲಿ ನಗೆ ಚಿಮ್ಮಿತಂತೆ. ಅಂದರೆ ತುಮಕೂರು ಎನ್ನುವ ಹೆಸರನ್ನೇ ಇಟ್ಟುಕೊಂಡು ಫನ್ ಮಾಡುತ್ತಾ ತುಮಕೋ ಊರಿರಬಹುದು ಆದರೆ ಹಾಸ್ಯವನ್ನು ಅನುಭವಿಸಿ ನಗುವ ಒಬ್ಬರೂ ಇಲ್ಲಿ ಇಲ್ಲದ್ದರಿಂದ ನನಗೆ ಸ್ಮಶಾನ ಇದ್ದಂತೆ ಅನುಭವವಾಯಿತು ಎಂದು ಪ್ರೇಕ್ಷಕರನ್ನೇ ಪರೋಕ್ಷವಾಗಿ ಬೈದಿದ್ದರು. ಈ ಘಟನೆಯನ್ನು ಅನೇಕ ಸಲ ಹಾಸ್ಯ ಕಾರ್ಯಕ್ರಮಗಳಲ್ಲಿ ಹಿರಣ್ಣಯ್ಯನವರು ಹೇಳಿ ಪ್ರೇಕ್ಷಕರನ್ನು ರಂಜಿಸಿದ್ದಾರೆ.



ಹೀಗೆಲ್ಲಾ ನಾಟಕಗಳಲ್ಲಿ ಆಳುವವರನ್ನು, ಅಧಿಕಾರಿಗಳನ್ನು ನೇರಾ ನೇರಾ ನಿಂದಿಸಿದರೆ ಸಾರ್ವಜನಿಕವಾಗಿ ಬೈಸಿಕೊಂಡವರು ಸುಮ್ಮನೆ ಇರುತ್ತಾರೆಯೇ.. ತಮ್ಮ ಹೋದ ಮಾನವನ್ನು ಉಳಿಸಿಕೊಳ್ಳಲಾದರೂ ಕೇಸ್ ಹಾಕುತ್ತಾರೆ. ಹೀಗೆ ಹಲವಾರು ಮಾನನಷ್ಟ ಮೊಕದ್ದಮೆಗಳನ್ನು ಕಾಲಕಾಲಕ್ಕೆ ಎದುರಿಸಿ ಕೋರ್ಟಿಗೆ ಅಲೆದಾಡಿ ಕಾನೂನಾತ್ಮಕವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿ ಹಿರಣ್ಣಯ್ಯನವರು ಬಡೆದಾಡಿದ್ದಾರೆ. ಆದರೆ ಎಂದೂ ಯಾರ ಮುಂದೆಯೂ ಸಹ ಈ ಕೇಸುಗಳ ಕುರಿತು ನೊಂದವರೂ ಅಲ್ಲಾ ಗೋಳಾಡಿದವರೂ ಅಲ್ಲಾ. ಇದ್ದದ್ದನ್ನು ಇದ್ದಂತೆ ಹೇಳಿದ್ದೇನೆ.. ಮುಂದೆ ಬಂದಿದ್ದನ್ನು ಎದುರಿಸುತ್ತೇನೆ ಎನ್ನುವ ಧೈರ್ಯ ಈ ಕಲಾವಿದನಲ್ಲಿ ಹಾಸುಹೊಕ್ಕಾಗಿತ್ತು. ಎಂದೂ ತಾವು ಹೇಳಿದ್ದನ್ನು ಹೇಳಿಯೇ ಇಲ್ಲ ಎಂದು ಹೇಳಲೇ ಇಲ್ಲಾ. ಅನುಕೂಲಸಿಂಧು ರಾಜಿ ಸಂಧಾನಗಳನ್ನೂ ಮಾಡಲಿಲ್ಲಾ.. ಕೋರ್ಟುಗಳಲ್ಲಿ ಕೇಸುಗಳನ್ನು ಹಾಕಲಾಯಿತೆಂದು ಹೆದರಿ ಭ್ರಷ್ಟರನ್ನು ನಿಂದಿಸುವುದನ್ನಂತೂ ಬಿಡಲೇ ಇಲ್ಲಾ. ಆರೋಗ್ಯ ಕ್ಷೀಣಿಸುವವರೆಗೂ, ನೆನಪಿನ ಶಕ್ತಿ ಕುಂದುವವರೆಗೂ ನಾಟಕದ ಮೂಲಕ ಜನವಿರೋಧಿಗಳ ಜೊತೆಗೆ ಸಂಘರ್ಷಕ್ಕೆ ಇಳಿದರು ಹಾಗೂ ನ್ಯಾಯಾಲಯಗಳಲ್ಲಿ ಕೇಸು ಹಾಕಿದವರನ್ನೂ ಕಾನೂನಾತ್ಮಕವಾಗಿಯೇ ಎದುರಿಸಿದರು. ಆಳುವ ಪ್ರಭುತ್ವವವನ್ನು, ಪ್ರಭಲ ಅಧಿಕಾರಿಶಾಹಿಗಳನ್ನು, ಭ್ರಷ್ಟ ರಾಜಕಾರಣಿಗಳನ್ನೂ ಬದುಕಿನಾದ್ಯಂತ ವಿರೋಧಿಸಿ ಟೀಕಿಸುತ್ತಲೇ ಬಂದ ಹಿರಣ್ಣಯ್ಯನವರ ದೈರ್ಯವನ್ನು ಅಭಿನಂದಿಸಲೇಬೇಕಿದೆ.



ಇವತ್ತು ಹಿರಣ್ಣಯ್ಯನವರು ನಮ್ಮ ನಡುವೆ ಇಲ್ಲದೇ ಇರಬಹುದು. ಅವರನ್ನು ವಿಮರ್ಶಿಸುವವರ ಮಾನದಂಡಗಳ ಪ್ರಕಾರ ಹಿರಣ್ಣಯ್ಯನವರು ಆಡಿದ್ದು ನಾಟಕಗಳು ಅಲ್ಲದೇ ಇರಬಹುದು. ರಂಗಭೂಮಿಯ ನಾಟಕಗಳ ಮಾಪನಗಳಿಗೆ ಅವರ ನಾಟಕಗಳು ಒಗ್ಗದೇ ಇರಬಹುದು. ಕಲಾತ್ಮಕತೆ ಕಾವ್ಯಾತ್ಮಕತೆ ಸೂಕ್ಷ್ಮತೆಗಳ ಕೊರತೆ ಹಿರಣ್ಣಯ್ಯನವರ ಅಭಿನಯದ ನಾಟಕಗಳಲ್ಲಿ ಇಲ್ಲದೇ ಇರಬಹುದು. ಅದರೆ ಅವರ ನಾಟಕಗಳು ಜನಸಾಮಾನ್ಯರನ್ನು ತಲುಪುವಲ್ಲಿ ಯಶಸ್ವಿಯಾಗಿವೆ. ಜನಪ್ರೀಯತೆಯನ್ನು ಕಾಯ್ದುಕೊಂಡೇ ಬಂದಿವೆ. ಅವರ ನಾಟಕಗಳು ಮಾತ್ರವಲ್ಲಾ ಆ ನಾಟಕಗಳ ಆಡಿಯೋ ಕ್ಯಾಸೆಟ್ಗಳು ಎರಡು ಮೂರು ದಶಕಗಳ ಕಾಲ ಜನರ ಮನವನ್ನು ರಂಜಿಸಿವೆ.. ಆಳುವ ವರ್ಗಗಳ ನಿದ್ದೆಗೆಡಿಸಿವೆ.. ಒಬ್ಬ ರಂಗಕರ್ಮಿಗೆ, ಒಬ್ಬ ಕಲಾವಿದನಿಗೆ ಇನ್ನೇನು ತಾನೇ ಬೇಕು. ಅಂತಿಮವಾಗಿ ಯಾರನ್ನು ತಲುಪಬೇಕಾಗಿತ್ತೋ ಅವರನ್ನು ಹಿರಣ್ಣಯ್ಯನವರ ನಾಟಕಗಳು ತಲುಪಿಯಾಗಿವೆ. ಯಾರನ್ನು ಎಚ್ಚರಿಸಬೇಕಾಗಿತ್ತೋ ಅವರನ್ನು ಹಿರಣ್ಣಯ್ಯನವರ ಮಾತುಗಳು ಎಚ್ಚರಿಸಿಯಾಗಿವೆ. ಅವೆಲ್ಲಾ ಇನ್ನು ಮೇಲೆ ಕೇವಲ ನೆನಪುಗಳು ಮಾತ್ರ. ದೈಹಿಕವಾಗಿ ಹಿರಣ್ಣಯ್ಯನವರು ನಮ್ಮ ಜೊತೆ ಇಲ್ಲದೇ ಹೋದರೂ ಅವರು ನಾಟಕಗಳ ಆಡಿಯೋ ಹಾಗೂ ವಿಡಿಯೋಗಳ ಮೂಲಕ ಯಾವಾಗಲೂ ಜೊತೆಯಲ್ಲಿರುತ್ತಾರೆ. ಅವರ ವಿಡಂಬನಾತ್ಮಕ ಮಾತುಗಳು ಮುಂದಿನ ತಲೆಮಾರಿಗೂ ಮಾರ್ಧನಿಸುತ್ತಲೇ ಇರುತ್ತವೆ. ಅಗಲಿದ ಹಿರಿಯ ಜೀವಕ್ಕೆ ಕನ್ನಡ ರಂಗಭೂಮಿ ಹಾಗೂ ಕೋಟ್ಯಾಂತರ ಹಿರಣ್ಣಯ್ಯನವರ ಅಭಿಮಾನಿಗಳು ಮೌನವಾಗಿ ನಮನವನ್ನು ಸಲ್ಲಿಸುತ್ತಿದ್ದಾರೆ. ಕಲ್ಚರಲ್ ಕಾಮಿಡಿಯನ್ ಹಿರಣ್ಣಯ್ಯನವರು ಮಾತು ನಿಲ್ಲಿಸಿ ಶಾಶ್ವತವಾಗಿ ಮೌನವನ್ನಪ್ಪಿ ನೇಪತ್ಯಕ್ಕೆ ಸೇರಿದ ಈ ಸಂದರ್ಭದಲ್ಲಿ ಇಡೀ ರಂಗಭೂಮಿ ಸೂತಕದ ಮನೆಯಾಗಿದೆ. ಹಿರಣ್ಣಯ್ಯನವರ ನೆನಪು ಹಾಗೂ ಸಾಧನೆಗಳು ಮುಂದಿನ ಪೀಳಿಗೆಗೆ ದೀವಿಗೆಯಾಗಿವೆ.

-ಶಶಿಕಾಂತ ಯಡಹಳ್ಳಿ