ಮಂಗಳವಾರ, ಅಕ್ಟೋಬರ್ 26, 2021

ರಂಗೇರಿದ ರಂಗಾಯಣದ ‘ಪರ್ವ’ ದ ಅಂಬಾರಿ ; ಆಶಯದ ಮೇಲೆ ಆಕೃತಿಯ ಸವಾರಿ..

ವೃತ್ತಿಪರತೆಯ ಕೊರತೆಯಲ್ಲಿ  ‘ಪರ್ವ’ವೆಂಬ ಮೆಘಾ ಈವೆಂಟ್ ರಂಗಪ್ರಸ್ತುತಿ;    


ದೇಶದ ಪೌರಾಣಿಕ ಮಹಾಕಾವ್ಯಗಳಾದ ಮಹಾಭಾರತ ಮತ್ತು ರಾಮಾಯಣಗಳು ಕಾಲಕಾಲಕ್ಕೆ ಬದಲಾವಣೆಗೆ ಚರ್ಚೆ ಸಂವಾದ ವಿಮರ್ಶೆಗಳಿಗೆ ಒಳಗಾಗುತ್ತಾ, ದೃಶ್ಯಗಳು ಮರುಸೃಷ್ಟಿ ಪಡೆಯುತ್ತಾ ಬಂದಿರುವುದರಿಂದಲೇ ತಮ್ಮ ಜೀವಂತಿಕೆಯನ್ನು ಶತಶತಮಾನಗಳಿಂದ ಉಳಿಸಿಕೊಂಡು ಬಂದಿವೆ. ರಂಗಭೂಮಿಯ ಎಲ್ಲಾ ಪ್ರಕಾರಗಳೂ ಮಹಾಕಾವ್ಯಗಳನ್ನು ಬಿಡಿ ಬಿಡಿಯಾಗಿ ಹಾಗೂ ಇಡಿಯಾಗಿ ದೃಶ್ಯೀಕರಿಸಿ ಮರುಸೃಷ್ಟಿ ಮಾಡುತ್ತಾ ಜನಮಾನಸದಲ್ಲಿ ಚಿತ್ತಬಿತ್ತಿಯಲ್ಲಿ ಬಿತ್ತುತ್ತಲೇ ಬಂದಿವೆ. ಮನುಷ್ಯರೊಳಗಿರುವ ಗುಣಾವಗುಣಗಳನ್ನು ಚಿತ್ರಿಸುವ, ಪ್ರೀತಿ-ದ್ವೇಷ, ಅಸೂಯೆ-ಅಹಂಕಾರ, ದೌರ್ಬಲ್ಯ ಮತ್ತು ಪರಾಕ್ರಮಗಳನ್ನು ಅನಾವರಣಗೊಳಿಸುವ ಮಹಾಭಾರತ ಸಾರ್ವಕಾಲಿಕ ಕಥಾನಕವಾಗಿದೆ. ಇಂತಹ ಪೌರಾಣಿಕ ಮಹಾಕಾವ್ಯದಲ್ಲಿ ಕವಿಕಾವ್ಯ ಧರ್ಮದಿಂದಲೋ ಇಲ್ಲವೇ ಧರ್ಮ ಕಾರಣದಿಂದಲೋ ಬೇಕಾದಷ್ಟು ತರ್ಕಾತೀತ ಸಂಗತಿಗಳು ಸೇರಿಹೋಗಿವೆ.  ಅನಾದಿ ಕಾಲದಿಂದ ನಂಬಿಕೊಂಡು ನಂಬಿಸಿಕೊಂಡು ಬಂದಿದ್ದ ಹಲವಾರು ಅತರ್ಕಗಳನ್ನು ವರ್ತಮಾನದ ತರ್ಕದ ನೆಲೆಯಲ್ಲಿ ಮರುವ್ಯಾಖ್ಯಾನಕ್ಕೆ ಅಳವಡಿಸಿಪರ್ವಮಹಾಕೃತಿಯನ್ನು ಡಾ. ಎಸ್.ಎಲ್.ಭೈರಪ್ಪನವರು ರಚಿಸಿ 1979ರಲ್ಲಿ ಪ್ರಕಟಿಸಿ ಸಾಹಿತ್ಯ ಹಾಗೂ ಸಾಂಸ್ಕøತಿಕ ಲೋಕದಲ್ಲಿ ಸಂಚಲನವನ್ನು ಸೃಷ್ಟಿಸಿದ್ದರು.    

ಯುದ್ಧದ ಮೂಲಕ ಶಾಂತಿಯನ್ನೂ, ಅಧರ್ಮದ ಮೂಲಕ ಧರ್ಮವನ್ನೂ, ಹಿಂಸೆಯ ಮೂಲಕ ಅಹಿಂಸೆಯನ್ನೂ ಪ್ರತಿಪಾದಿಸುವ ಪ್ರಚೋದಿಸುವ ಪೌರಾಣಿಕ ಮಹೋನ್ನತ ಮಹಾಕೃತಿ ಮಹಾಭಾರತ. ಧರ್ಮಕ್ಕಾಗಿ, ಧರ್ಮದ ಸಂಸ್ಥಾಪನೆಗಾಗಿ, ಧರ್ಮದ ರಕ್ಷಣೆಗಾಗಿ ಏನು ಮಾಡಿದರೂ ಅದೆಲ್ಲಾ ಧರ್ಮಸಮ್ಮತ ಎನ್ನುವ ಮಹಾಭಾರತದ ಸೃಷ್ಟಿಕರ್ತರ ಮೂಲ ಆಶಯವನ್ನು ಒಡೆದು ಹಾಕಿ ಪ್ರಭುತ್ವ, ದೈವತ್ವ, ಆರ್ಯಾವರ್ತ, ಹಾಗೂ ಧರ್ಮಗಳ ಒಳಮರ್ಮವನ್ನು ಭೈರಪ್ಪನವರ ಪರ್ವ ಬಿಡಿಸಿಡುತ್ತದೆ.  ಪರುಷಹಂಕಾರಕ್ಕೆ ಬಲಿಯಾದ ಮಹಿಳೆಯರ ನೋವನ್ನು, ರಾಜರುಗಳ ಅಂತಃಪ್ಪುರದ ರಸಿಕತೆಯ ಉತ್ಪನ್ನಗಳಾದ ದಾಸಿಪುತ್ರರ ಅತಂತ್ರತೆಯನ್ನು, ಸೂತಕುಲದವರು ಅನುಭವಿಸುವ ಅವಮಾನಗಳನ್ನೂ, ಹಾಗೂ ಯಾರದೋ ದ್ವೇಷ ಮತ್ಸರಗಳಿಂದಾಗಿ ಹುಟ್ಟಿದ ಯುದ್ಧಗಳಿಂದ ಜರ್ಜರಿತರಾಗಿ ತಮ್ಮದೆಲ್ಲವನ್ನೂ ಕಳೆದುಕೊಳ್ಳುವ ಜನಸಾಮಾನ್ಯರ ಅಸಹಾಯಕ ಬದುಕನ್ನೂಪರ್ವಕಾದಂಬರಿ ಅನಾವರಣಗೊಳಿಸುವುದರಿಂದ ತನ್ನ ವೈಶಿಷ್ಟ್ಯತೆಯನ್ನು ಉಳಿಸಿಕೊಂಡಿದೆ. ಇಂತಹ ಸಂಕೀರ್ಣವಾದ, ಧರ್ಮಸೂಕ್ಷ್ಮಗಳ ಮರ್ಮಗಳನ್ನು ನಾಟಕದ ಮೂಲಕ ದೃಶ್ಯೀಕರಿಸುವುದು ಸವಾಲಿನ ಕೆಲಸ. ಸರಿಸುಮಾರು 738 ಪುಟಗಳ ಬ್ರಹತ್ ಕಾದಂಬರಿಯನ್ನು ಸಂಕಲನ ಮಾಡಿ ನಾಟಕವಾಗಿಸುವುದು ಇನ್ನೂ ಸಾಹಸದ ಕೆಲಸ. ಇಂತಹ ಒಂದು ಮಹಾಪ್ರಯೋಗಕ್ಕೆ ಮೈಸೂರು ರಂಗಾಯಣ ತನ್ನನ್ನು ತೊಡಗಿಸಿಕೊಂಡಿದ್ದು ಸಂತಸದ ಸಂಗತಿ. ರಂಗಾಯಣದ ಹಾಲಿ ನಿರ್ದೆಶಕರಾದ ಅಡ್ಡಂಡ ಕಾರ್ಯಪ್ಪನವರ ಸವಾಲಿನ ಪ್ರಯತ್ನ ಮತ್ತು ಸಾಹಸ ಪ್ರವೃತ್ತಿಗೆ, ಕಾರ್ಯಪ್ಪನವರ ಕನಸನ್ನು ನನಸಾಗಿಸಲು ಪ್ರಯತ್ನಿಸಿದ ಕನ್ನಡ ಮತ್ತು ಸಂಸ್ಕøತಿ ಇಲಾಖೆಗೆ, ರಂಗನಿರ್ದೇಶಕರಿಗೆ ಹಾಗೂ ಕಲಾವಿದರು ತಂತ್ರಜ್ಞರಿಗೆ ಅಭಿನಂದನೆಗಳನ್ನು ಹೇಳಲೇಬೇಕಿದೆ.

ಏಳು ಗಂಟೆಗಳ ಸುದೀರ್ಘ ಸಮಯದಪರ್ವಮಹಾರಂಗಪ್ರಯೋಗವು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಕ್ಟೋಬರ್ 23 ಮತ್ತು 24 ರಂದು ಕಿಕ್ಕಿರಿದ ಪ್ರೇಕ್ಷಕ ಸಮುದಾಯದ ಮುಂದೆ ಪ್ರದರ್ಶನಗೊಂಡಿತು. ಬ್ರಹತ್ ಕಾದಂಬರಿಗೆ ರಂಗರೂಪ ಕೊಟ್ಟು ನಿರ್ದೇಶನವನ್ನು ಮಾಡಿದ್ದು ಪ್ರಕಾಶ್ ಬೆಳವಾಡಿಯವರು. ಮಹಾ ಪ್ರಾಜೆಕ್ಟಿನ ನಿರ್ಮಾಪಕರು ಕನ್ನಡ ಮತ್ತು ಸಂಸ್ಕøತಿ ಇಲಾಖೆ. ಒಂದು ಕೋಟಿ ರೂಪಾಯಿಗಳಷ್ಟು ಬಜೆಟ್ಟಿನಪರ್ವನಾಟಕದ ಪ್ರದರ್ಶನದ ಕುರಿತು ವಿಶ್ಲೇಷಣೆ ಮಾಡಬೇಕಿದೆ. ರಂಗಪ್ರಯೋಗದ ಸಾಧಕ ಬಾಧಕಗಳ ಬಗ್ಗೆ ಚರ್ಚೆ ಸಂವಾದ ಆಗಲೇಬೇಕಿದೆ.

ಪೌರಾಣಿಕ ಕಥಾನಕವನ್ನು ವರ್ತಮಾನದ ದೃಷ್ಟಿಕೋನದಲ್ಲಿ ಪ್ರಸ್ತುತ ಪಡಿಸುವಪರ್ವರಂಗಪ್ರಯೋಗವು ಮಹಾಭಾರತದ ರೂಢಿಗತ ಅನೇಕಾನೇಕ ಮಿಥ್ಗಳನ್ನು ಒಡೆದು ಹಾಕಿ ತಾರ್ಕಿಕ ಆಲೋಚನೆಯಲ್ಲಿ ಪ್ರಸ್ತುತಗೊಂಡಿದೆ. ಮೂಲ ಮಹಾಭಾರತವು ಆಳುವ ವರ್ಗಗಳ ದೃಷ್ಟಿಕೋನದಲ್ಲಿ ಸೃಷ್ಟಿಯಾದರೆ, ‘ಪರ್ವವು ಜನಸಾಮಾನ್ಯರ, ಮಹಿಳೆಯರ ಒಳನೋಟಗಳಲ್ಲಿ ಕಟ್ಟಲ್ಪಟ್ಟಿದೆ. ಅಧಿಕಾರಕ್ಕಾಗಿ ನಡೆಯುವ ಸಂಘರ್ಷಗಳಲ್ಲಿ ಅದು ಹೇಗೆ ಮಹಿಳೆಯರು, ಸೈನಿಕರು ಮತ್ತು ಜನಸಾಮಾನ್ಯರು ಬಲಿಪಶುಗಳಾಗಿ ಬದುಕನ್ನು ಪ್ರಭುತ್ವದ ಅಡಿಯಾಳಾಗಿಸಬೇಕಾಗುತ್ತದೆ ಎನ್ನುವುದನ್ನುಪರ್ವ ದೃಶ್ಯಗಳು ಅನಾವರಣಗೊಳಸುತ್ತವೆ.

ರಾಜವಂಶಸ್ಥರ ಹುಟ್ಟಿನ ಗುಟ್ಟನ್ನು ಮರೆಮಾಚಲು ಮಹಾಭಾರತದ ಕವಿಗಳು ಕಟ್ಟಿದ ಸುಂದರ ಸುಳ್ಳುಗಳನ್ನು ನಿರ್ಲಕ್ಷಿಸಿ ಮುಚ್ಚಿಟ್ಟ ಮಹಾಗುಟ್ಟುಗಳನ್ನು ವಾಸ್ತವದ ನೆಲೆಗಟ್ಟಿನಲ್ಲಿ ರಟ್ಟುಮಾಡುವ ಪ್ರಯತ್ನಪರ್ವನಾಟಕದ ಅಂತಸ್ಸತ್ವವಾಗಿದೆ. ಇಡೀ ನಾಟಕವುಬೀಜ ಮತ್ತು ಕ್ಷೇತ್ರವೆಂಬ ಜಿಜ್ಞಾಸೆಯ ಕೇಂದ್ರದ ಸುತ್ತ ಹುತ್ತಗಟ್ಟುತ್ತ ಸಾಗುತ್ತದೆ. ಇಲ್ಲಿ ಬೀಜವೆಂಬುದು ಪುರುಷನಾದರೆ ಕ್ಷೇತ್ರವೆಂಬುದು ಮಹಿಳೆಂiÀiರಿಗೆ ಸಂಕೇತವಾಗಿದೆ. ಬೀಜ ಮತ್ತು ಭೂಮಿಯ ಸಂಬಂಧದಲ್ಲಿ ಹುಟ್ಟುವ ಫಲಕ್ಕೆ ವಾರಸುದಾರರು ಯಾರು ಎಂಬುದೇ ಇಲ್ಲಿ ಧರ್ಮಸೂಕ್ಷ್ಮ. ಯಾಕೆಂದರೆ ಬೀಜಬಿತ್ತಲು ಅಸಮರ್ಥರಾದ ಶಂಡ ರಾಜರ ವಾರಸುದಾರರ ಸೃಷ್ಟಿಗೆ ಅನ್ಯ ಗಂಡಸರನ್ನು ನಿಯೋಜನೆ ಮಾಡುವ ಕ್ರಮವೇ ನಿಯೋಗ ಪದ್ದತಿ. ರೀತಿಯ ನಿಯೋಗಕ್ಕೆ ಹುಟ್ಟಿದವರ ಪರಂಪರೆಯೇ ಮಹಾಭಾರತ ವಂಶಾವಳಿಯಲ್ಲಿದೆ. ವಿಚಿತ್ರವೀರ್ಯನಿಂದ ಹಿಡಿದು ಪಾಂಡುರಾಜನವರೆಗೆ ಹುಟ್ಟಿದ ವಾರಸುಗಳೆಲ್ಲಾ ನಿಯೋಗ ಸಂತಾನವೇ. ಧರ್ಮವೇ ರಾಜಪ್ರಭುತ್ವದ ಉಳಿವಿಗೆ ಸಕ್ರಮಗೊಳಿಸಿದ ರೀತಿಯ ಸಂತಾನ ಸೃಷ್ಟಿಯೇ ಅಧಿಕಾರಕ್ಕೆ ಅಕ್ರಮವೆಂಬುದು ದುರ್ಯೋಧನನ ವಾದವಾದರೆ, ಬೀಜ ಯಾರು ಬಿತ್ತಿದರೇನು ಭೂಮಿಯ ಮಾಲೀಕತ್ವ ಹೊಂದಿದರವರೇ ಫಲದ ಮಾಲೀಕರು ಎನ್ನುವುದು ಪಾಂಡವರ ಪರದವರ ವಾದ. ಧರ್ಮಸೂಕ್ಷ್ಮಗಳ ಮರ್ಮದ ಹುಡುಕಾಟದಲ್ಲೇ ಭೀಷ್ಮ ಪಿತಾಮಹ ಚಿಂತಿತರು.  ಅಕ್ರಮ ಸಕ್ರಮಗಳ ಸಂಘರ್ಷದ ಪ್ರತಿಫಲವೇ ಕುರುಕ್ಷೇತ್ರ ಮಹಾಯುದ್ಧ.

ಮಹಾಭಾರತದಲ್ಲಿ ತರ್ಕಕ್ಕೆ ನಿಲುಕದ ಅನೇಕಾನೇಕ ಸಂಗತಿಗಳನ್ನು ಸೇರಿಸಲಾಗಿದೆ. ಅಂತಹ ಸಂಗತಿಗಳನ್ನು ತರ್ಕಬದ್ಧವಾಗಿ ನಿರೂಪಿಸುವ ಕೆಲಸವನ್ನುಪರ್ವಮಾಡುತ್ತದೆ. ಉದಾಹರಣೆಗೆ ಕುಂತಿಗೆ ದೂರ್ವಾಸ ಮುನಿ ಕೊಟ್ಟ ಮಕ್ಕಳ ಮಂತ್ರದಿಂದ ಬೇಕೆಂದಾಗ ಪುತ್ರಭಾಗ್ಯ ಪ್ರಾಪ್ತವಾಯಿತು. ಕುಂತಿಯು ಮಂತ್ರಶಕ್ತಿಯಿಂದ ತನ್ನ ಕಿವಿಯಿಂದಲೂ ಕರ್ಣಕುಂಡಲ ಸಮೇತ ಕರ್ಣನನ್ನು ಹುಟ್ಟಿಸಲು ಸಾಧ್ಯವಾಯಿತು. ಅಷ್ಟೇ ಯಾಕೆ ಕುಂತಿಯು ಮಾದ್ರಿಗೆ ಕಲಿಸಿದ ಸಂತಾನಸೃಷ್ಟಿ ಮಂತ್ರದಿಂದ ಅವಳಿಗೂ ಎರಡು ಮಕ್ಕಳಾಯಿತು ಎಂಬುದು ಮಹಾಭಾರತ ಓದಿ ಕೇಳಿದವರಿಗೆ ಗೊತ್ತಿರುವ ಸಂಗತಿ. ಆದರೆ.. ಅವೈಜ್ಞಾನಿಕ ಸಂತಾನ ಸೃಷ್ಟಿಗೆ ಮಂತ್ರಗಳ ಸಮರ್ಥನೆ ಸುಳ್ಳುಗೊಳಿಸಿದಪರ್ವವು ಮಕ್ಕಳನ್ನು ಮಾಡಲು ಅಶಕ್ತನಾದ ಪಾಂಡುರಾಜನೇ ಪಟ್ಟಕ್ಕೆ ವಾರಸುದಾರ ಬೇಕೆಂಬ ಒತ್ತಡದಲ್ಲಿ ದೇವತೆಗಳ ಜೊತೆ ತನ್ನ ಹೆಂಡತಿಯರ ಕೂಡಾವಳಿ ಮಾಡಿಸಿ ಪಾಂಡವರ ಹುಟ್ಟಿಗೆ ಕಾರಣನಾದವೆಂದು ಸ್ಪಷ್ಟೀಕರಿಸುತ್ತದೆ. ಅದೇ ರೀತಿ ಗಾಂಧಾರಿಯು ಕುಂತಿಗೆ ಮೊದಲು ಮಕ್ಕಳಾದವೆಂಬುದನ್ನು ಕೇಳಿ ಹೊಟ್ಟೆಕಿಚ್ಚಿನಿಂದ ಗರ್ಭವನ್ನು ಹಿಚುಕಿಕೊಂಡು ಗರ್ಭಪಾತವಾಗಿ ಅದನ್ನು ನೂರೊಂದು ಕುಂಡಗಳಲ್ಲಿ ಹಾಕಿ ಬೆಳೆಸಿದಾಗ ನೂರೊಂದು ಕೌರವರು ಹುಟ್ಟಿದರು ಎಂಬ ಕಾಲ್ಪನಿಕ ಪವಾಡವು ಸರ್ವಮಾನ್ಯ. ಆದರೆ.. ಗಾಂಧಾರಿಗೆ ಹುಟ್ಟಿದ್ದೇ ಕೇವಲ ಹದಿನಾಲ್ಕು ಗಂಡು ಮತ್ತು ಒಂದು ಹೆಣ್ಣು ಸಂತಾನ. ನೂರೊಂದರಲ್ಲಿ ಬಾಕಿ ಉಳಿದವುಗಳೆಲ್ಲಾ ದೃತರಾಷ್ಟ್ರನ ದಾಸಿ ಪುತ್ರರು ಎಂಬುದನ್ನು ಹೇಳುವಪರ್ವನಾಟಕವು ಕಲ್ಪನೆಯ ಕತ್ತಲಿಗೆ ಬೆಳಕಿನ ದರ್ಶನ ಮಾಡಿಸುತ್ತದೆ. ಹೀಗೆ ದಾಸಿಯರಲ್ಲಿ ಹುಟ್ಟಿದ ರಾಜಪುತ್ರರೂ ಸಹ ಅಧಿಕಾರದ ಹಂಚಿಕೆಯಲ್ಲಿ ಯಾವುದೇ ರೀತಿ ಪಾಲುದಾರರಾಗದೇ ಕೇವಲ ರಾಜಪರಿಚಾರಕರಾಗಿದ್ದು, ಇಲ್ಲಿ ಭೂಮಿ ಮತ್ತು ಬೀಜ ಎರಡೂ ಮುಖ್ಯವಾಗದೇ ಹೋದದ್ದನ್ನು ನಾಟಕ ಸೂಕ್ಷ್ಮವಾಗಿ ಪ್ರತಿಪಾದಿಸುತ್ತದೆ.


ಪಾಂಡಕುವರರ ಸೃಷ್ಟಿಯ ವಿಷಯದಲ್ಲಿ ಹುಟ್ಟಿದ ಮಕ್ಕಳು ಬೀಜದ್ದಲ್ಲ ಭೂಮಿಯದ್ದಾದರೆ, ಕೃಷ್ಣದ್ವೈಪಾಯನ ಋಷಿ ಹುಟ್ಟಿಸಿದ ಮಗ ಶುಕನ ವಾರಸುದಾರಿಕೆ ಬಾಡಿಗೆ ಭೂಮಿಯದ್ದಲ್ಲ ಬೀಜದ್ದು. ದ್ರೌಪತಿಯ ಮಕ್ಕಳ ಸಂಗತಿಗೆ ಬಂದರೆ ಭೂಮಿಯಲ್ಲಿ ಬಿತ್ತಲ್ಪಟ್ಟ ಬೀಜಗಳು ಐವರಲಿ ಯಾರದ್ದೆಂಬುದರ ಗುರುತೇ ಇಲ್ಲಅದೇ ರೀತಿ ದೃತರಾಷ್ಟ್ರನ ಎಂಬತ್ತಾರು ದಾಸೀಪುತ್ರರ ಹಕ್ಕುದಾರಿಕೆ ಬೀಜದ್ದೂ ಅಲ್ಲಾ ಭೂಮಿಗೆ ಸ್ವಂತ ಅಸ್ತಿತ್ವವೇ ಇಲ್ಲಾ ರೀತಿಯಾಗಿ ಬೀಜ ಭೂಮಿಯ ಸಂಬಂಧದ ಕುರಿತಾದ ಹಲವಾರು ಸಂಕೀರ್ಣತೆಗಳುಪರ್ವನಾಟಕದಲ್ಲಿ ಹರಳುಗಟ್ಟಿವೆ.

ಹೀಗೆ ಬೀಜ ಮತ್ತು ಕ್ಷೇತ್ರ ಸಂಬಂಧ ಮತ್ತು ಸಂಘರ್ಷಗಳನ್ನೇ ಕೇಂದ್ರವಾಗಿಟ್ಟುಕೊಂಡು ನಿರ್ದೇಶಕರು ನಾಟಕವನ್ನು ಕಟ್ಟಿಕೊಟ್ಟಿದ್ದರೆ ರಂಗಪ್ರಯೋಗ ರಂಗಭೂಮಿಯಲ್ಲಿ ಚರಿತ್ರೆಯನ್ನೇ ಸೃಷ್ಟಿಸಬಹುದಾಗಿತ್ತು. ಆದರೆ.. ಕೇಂದ್ರ ವಿಷಯದ ಜೊತೆಗೆ ಅನೇಕ ವಿಷಯಗಳ ವಿಕೇಂದ್ರಿಕರಣ ಮಾಡಲು ಹೋಗಿ ಇಡೀ ನಾಟಕವನ್ನು ಗೊಂದಲದ ಗೂಡಾಗಿಸುವಲ್ಲಿ  ನಿರ್ದೇಶಕರು ಸಫಲರಾಗಿದ್ದಾರೆ. ಏನನ್ನು ಸ್ಪಷ್ಟವಾಗಿ ಹೇಳಬೇಕು, ಇಡೀ ನಾಟಕವನ್ನು ಯಾವ ಉದ್ದೇಶಕ್ಕಾಗಿ ಹೇಗೆ ಕಟ್ಟಬೇಕು, ದೃಶ್ಯದಿಂದ ದೃಶ್ಯಕ್ಕೆ ಹೇಗೆ ಲಿಂಕ್ ಕೊಟ್ಟು ನಾಟಕವನ್ನು ಬೆಳೆಸಬೇಕು ಎಂಬುದು ಗೊತ್ತಾಗದೇ ಗೊತ್ತು ಗುರಿ ಇಲ್ಲದೇ ಸಾಗುವ ನಾಟಕ ನಿರ್ದೇಶಕನ ಚಿತ್ತಬಂದತ್ತ ಓಡುತ್ತಾ ಪ್ರೇಕ್ಷಕರ ಸಹನೆಯನ್ನು ಕೆಣಕುತ್ತದೆ. ಆರಂಭದಲ್ಲಿ ಬಿಡಿ ಬಿಡಿ ದೃಶ್ಯವಾಗಿ ಇಷ್ಟವಾಗುವ ನಾಟಕ ತನ್ನ ಅಸಂಬದ್ದತೆಯಿಂದಾಗಿ ಬರುಬರುತ್ತಾ ಬೇಸರವನ್ನುಂಟುಮಾಡುತ್ತದೆ. ಮದ್ಯಂತರದ ನಂತರವಂತೂ ಯಾವಾಗ ನಾಟಕ ಮುಗಿಯುತ್ತದೋ ಎಂದು ಪ್ರೇಕ್ಷಕರು ಕಾಯುವಂತಾಗಿದೆ.

ಏಳು ಗಂಟೆಗಳ ನಾಟಕ ಪ್ರದರ್ಶನದ ಅವಧಿಯನ್ನು ಆದಿಪರ್ವ, ನಿರೋಗ ಪರ್ವ ಹಾಗೂ ಯುದ್ಧ ಪರ್ವಗಳಾಗಿ ಮೂರು ಭಾಗಗಳಲ್ಲಿ ವಿಭಾಗಿಸಿ ಮೂರು ಮದ್ಯಂತರಗಳನ್ನು ಕೊಡಲಾಗಿದೆ. ಆದರೆ ಊಟದ ಮದ್ಯಂತರದ ನಂತರದ ಕಟ್ಟಲಾದ ದೃಶ್ಯಗಳಿಗೂ ನಾಟಕದ ಆಶಯಕ್ಕೂ ಸಂಬಂಧವೇ ಇಲ್ಲದಂತಾಗಿದೆ. ಎರಡನೇ ಮದ್ಯಂತರದ ಹಾಗೂ ಕೊನೆಯ ಭಾಗದ ನಡುವೆ ನಡೆಯುವ ದೃಶ್ಯಗಳನ್ನೆಲ್ಲಾ ತೆಗೆದು ಹಾಕಿದರೂ ನಾಟಕಕ್ಕೆ ಯಾವುದೇ ನಷ್ಟವಿಲ್ಲ. ಕೇವಲ ದೀರ್ಘಾವಧಿಯ ನಾಟಕವನ್ನು ಮಾಡಬೇಕೆನ್ನುವ ಹಪಾಹಪಿಗಾಗಿ ಅನಗತ್ಯ ದೃಶ್ಯಗಳನ್ನು ಕಟ್ಟಲಾಗಿದೆಯೋ ಇಲ್ಲವೇ ಬ್ರಹತ್ ಕಾದಂಬರಿಯಲ್ಲಿ ಯಾವ ಭಾಗವನ್ನು ತೆಗೆದುಕೊಳ್ಳಬೇಕು ಯಾವುದನ್ನು ಬಿಡಬೇಕು ಎನ್ನುವ ಸ್ಪಷ್ಟತೆಯ ಕೊರತೆಯಿಂದಲೋ ನಿರ್ದೇಶಕರು ನಾಟಕದ ದಿಕ್ಕನ್ನೇ ತಪ್ಪಿಸಿ ನೋಡುಗರಲ್ಲೂ ಗೊಂದಲವನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುದೀರ್ಘ ಸಮಯದ ಭ್ರಮೆಯನ್ನು ಬಿಟ್ಟು ಪರ್ವ ಕೃತಿಯ ಕೇಂದ್ರ ಆಶಯದ ಸುತ್ತ ಪೂರಕ ಘಟನೆಗಳನ್ನು ಕಟ್ಟುವ ಮೂಲಕ ಈಗಿರುವ ನಾಟಕವನ್ನು ಸಂಪೂರ್ಣವಾಗಿ ಮರುಸಂಕಲನಗೊಳಿಸಿ ಗರಿಷ್ಟ ಮೂರು ಇಲ್ಲವೇ ನಾಲ್ಕು ಗಂಟೆಯ ಕಾಲಾವಧಿಯ ನಾಟಕವನ್ನು ಪ್ರದರ್ಶಿಸಿದರೆ ಪ್ರಯೋಗ ಪ್ರಯೋಜನಕಾರಿಯಾಗಬಹುದಾಗಿದೆ. ಕ್ರಮಬದ್ದವಲ್ಲದ ರೀತಿಯಲ್ಲಿ ದೃಶ್ಯಗಳನ್ನು ಕಲಸುಮೇಲೋಗರವಾಗಿ ಕಟ್ಟಲಾಗಿದ್ದು ಮಹಾಭಾರತದ ಕಥೆ ಈಗಾಗಲೇ ಗೊತ್ತಿರುವವರಿಗೆ ಒಂದಿಷ್ಟು ಕನೆಕ್ಟ್ ಆಗಬಹುದಾಗಿದೆ. ಮಹಾಭಾರತ ಕಥಾನಕದ ಬಗ್ಗೆ ಹೆಚ್ಚು ಅರಿವಿಲ್ಲದ ಈಚಿನ ಕಾನ್ಮೆಂಟ್ ಶಾಲೆಯಲ್ಲಿ ಕಲಿತು ಬಂದ ಉತ್ಪನ್ನಗಳಿಗೆ ನಾಟಕದ ತಲೆಬುಡ ಅರ್ಥವಾಗುವುದೇ ಕಷ್ಟಸಾಧ್ಯ. ಅತಿಬೌದ್ದಿಕ ಪ್ರದರ್ಶನವನ್ನು ನಿರ್ದೇಶಕರು ಬದಿಗಿಟ್ಟು ಒಂದು ಜನಪ್ರೀಯ ಕಥಾನಕವನ್ನು ಬಹುಜನರ ಅರಿವಿಗೆ ದಕ್ಕುವಂತೆ ಕಟ್ಟಿಕೊಟ್ಟಿದ್ದರೆ ನಾಟಕ ಹೆಚ್ಚು ದಿನ ಪ್ರೇಕ್ಷಕರ ಮನದಲ್ಲಿ ಉಳಿಯುತ್ತಿತ್ತು.



ಮಹಾರಂಗಪ್ರಯೋಗದ ಪ್ರದರ್ಶನದ ತಂತ್ರಗಳ ಬಗ್ಗೆ ಹೇಳಲೇಬೇಕಿದೆ. ಪಾತ್ರದಾರಿಗಳ ಆಯ್ಕೆಯಲ್ಲಿಯೇ ನಿರ್ದೇಶಕರು ಮೊದಲೇ ಎಡವಿದ್ದಾರೆ. ಮುಖ್ಯವಾಗಿ ದುರ್ಯೋಧನ ಭೀಮ ಎರಡು ಪಾತ್ರಗಳನ್ನು ಹೊರತು ಪಡಿಸಿ ಬೇರೆಲ್ಲಾ ಪುರುಷ ಪಾತ್ರಗಳು ಬೌತಿಕವಾಗಿ ಪಾತ್ರೋಚಿತವಾಗಿಲ್ಲದಿರುವುದೇ ನಾಟಕದ ಮುಖ್ಯ ನಕಾರಾತ್ಮಕ ಅಂಶವಾಗಿದೆ. ಕುರುಕುಲದವರು ಯೋಧರು ಎನ್ನುವುದನ್ನು ಗಮನದಲ್ಲಿರಿಸಿದ್ದರೆ ಆಯಾ ಪಾತ್ರಕ್ಕೆ ಕಟ್ಟುಮಸ್ತಾದ ವ್ಯಕ್ತಿಗಳನ್ನೇ ಆಯ್ಕೆಮಾಡಿಕೊಳ್ಳಬೇಕಾಗಿತ್ತು. ಪೀಚಲು ದೇಹದವರನ್ನು ಧರ್ಮರಾಜ, ಅರ್ಜುನ, ದುಶ್ಯಾಸನ, ಅಶ್ವತ್ಥಾಮ ಎಂದು ಒಪ್ಪಿಕೊಳ್ಳಲು ಸಾಧ್ಯವಾ? ದುರ್ಯೊಧನ ಪಾತ್ರದಾರಿ ತನ್ನ ಸಮರ್ಥ ಅಭಿನಯದ ಮೂಲಕ ದೊಡ್ಡ ಹೊಟ್ಟೆಯ ನ್ಯೂನ್ಯತೆಯನ್ನು ಮರೆಸಿದ್ದು ನಿಜವಾದರೂ ಬೊಜ್ಜಿರುವ ಕರ್ಣನನ್ನು ಊಹಿಸಿಕೊಳ್ಳಲು ಸಾಧ್ಯವೆ? ಹವ್ಯಾಸಿ ನಾಟಕ ಮಾಡುವವರಿಗೆ ಸೂಕ್ತ ಪಾತ್ರದಾರಿಗಳ ಕೊರತೆ ಕಾಡಿದ್ದುಂಟು, ಆದರೆ ರಂಗಾಯಣದಂತಹ ಸರಕಾರಿ ಅನುದಾನಿತ ಶ್ರೀಮಂತ ಸಂಸ್ಥೆಗೆ ಪಾತ್ರಕ್ಕೆ ಪೂರಕವಾದ ವ್ಯಕ್ತಿಗಳು ಸಿಕ್ಕಲಿಲ್ಲವೆಂದರೆ ನಿಜಕ್ಕೂ ಅಚ್ಚರಿಯ ಸಂಗತಿ. ಬಹುತೇಕ ಪಾತ್ರಗಳ ಸಾಕಾರಕ್ಕೂ ಪಾತ್ರದಾರಿಗಳ ಆಕಾರಕ್ಕೂ ಸಂಬಂಧವೇ ಇಲ್ಲವಾಗಿದ್ದರಿಂದ ನಾಟಕ ಕಳೆಗಟ್ಟಲು ಸಾಧ್ಯವಾಗದೇ ಹೋಗಿದೆ.

ಇಡೀ ನಾಟಕವನ್ನು ತಮ್ಮ ವಿರಾಟ ನಟನೆಯಿಂದ ತೂಗಿಸಿಕೊಂಡು ಹೋಗಿದ್ದು ದುರ್ಯೋಧನ ಹಾಗೂ ಕೃಷ್ಣದ್ವೈಪಾಯನ ಪಾತ್ರದಾರಿ ಹುಲಗಪ್ಪ ಕಟ್ಟೀಮನಿ ಮಾತ್ರ. ಕುಂತಿ ಮಾದ್ವಿ ಗಾಂಧಾರಿ, ದ್ರೌಪತಿ ಪಾತ್ರಗಳ ಅಭಿನಯ ಪಾತ್ರೋಚಿತವಾಗಿದ್ದವಾದರೂ ಆಗಾಗ ಮೆಲೋಡ್ರಾಮಾ ಹೆಚ್ಚಾದಂತಾಗಿ ಗೋಳೀಕರಣ ಅತಿ ಎನಿಸಿತು. ಗುಂಪು ಸನ್ನಿವೇಶಗಳ ಮೇಲೆ ನಿರ್ದೇಶಕರ ನಿಯಂತ್ರಣವೇ ಇಲ್ಲವಾಗಿದ್ದು ಬ್ಲಾಕಿಂಗ್ನಲ್ಲಿ ಸ್ಟೇಜ್ ಬ್ಯಾಲನ್ಸ್ ಬಗ್ಗೆ ಗಮನಹರಿಸಬೇಕಾಗಿತ್ತು. ಪಾತ್ರಗಳ ಪೋಷಣೆಯಲ್ಲೂ ನಿರ್ದೇಶಕರು ವಿಫಲರಾಗಿದ್ದಾರೆ. ನಾಟಕದಲ್ಲಿ ನಗೆಯನ್ನು ಹುಟ್ಟಿಸಲು ಗಂಭೀರ ಪಾತ್ರಗಳನ್ನೇ ಬಳಸಿಕೊಂಡಿದ್ದಾರೆ. ಮೊದಲಿನಿಂದ ಕೊನೆಯವರೆಗೂ ರಾಜ ದೃತರಾಷ್ಟ್ರ ಪೆದ್ದನ ಹಾಗೆ ಬಫೂನ್ ಮಾದರಿಯಲ್ಲಿ ಪ್ರೊಜೆಕ್ಟ್ ಆಗಿದ್ದು ನಾಟಕದ ದೊಡ್ಡ ದುರಂತ. ಗುರುದ್ರೋಣರಂತಹ ಪ್ರಮುಖ ಪಾತ್ರವನ್ನೂ ಸಹ ಹಾಸ್ಯಪಾತ್ರವಾಗಿಸಿದ್ದು ಅಕ್ಷಮ್ಯ. ಅಗ್ರಜ ಧರ್ಮರಾಯನನ್ನು ತಮ್ಮಂದಿರು ಪ್ರಶ್ನಿಸಬಹುದೇ ಹೊರತು ಆತನನ್ನು ಕೆಳಗೆ ಕೆಡವಿ ಮೈಮೇಲೇರಿ ಹೋಗಿ ನಿಂದಿಸುವುದು ಪಾತ್ರೋಚಿತವಾದುದಲ್ಲ. ಕೋಪೋದ್ರಿಕ್ತನಾಗಿ ಕೂಗಾಡುವ ಕೃಷ್ಣನ ಪಾತ್ರವೂ ಇಲ್ಲಿ ಎಸ್ಟ್ಯಾಬ್ಲಿಶ್ ಆಗಲಿಲ್ಲ. ಪ್ರತಿ ಪೌರಾಣಿಕ ಪಾತ್ರಕ್ಕೂ ತನ್ನದೇ ಆದ ಘನತೆ ಗಾಂಭೀರ್ಯ ಇದ್ದೇ ಇರುತ್ತದೆ, ಇರಬೇಕು. ಅದನ್ನೇ ಅಕಾರಣವಾಗಿ ಬದಲಾಯಿಸಿದರೆ ನೋಡುಗರಿಗೆ ಕಸಿವಿಸಿಯಾಗುತ್ತದೆ. ಇಲ್ಲಿ ಆಗಿದ್ದೂ ಅದೇ.

ಇಡೀ ನಾಟಕದಲ್ಲಿ ಏಕಪಾತ್ರಾಭಿನಯ ದ್ವಿಪಾತ್ರಾಭಿನಯದಂತಹ ಸನ್ನಿವೇಶಗಳೇ ಹೆಚ್ಚಾಗಿ ಒಂದೊಂದು ಪಾತ್ರಗಳು ಹತ್ತಾರು ನಿಮಿಷಗಳ ಕಾಲ ಪುಟಗಂಟಲೇ ಸಂಭಾಷಣೆಯನ್ನು ಹೇಳುತ್ತಾ ನಾಟಕವನ್ನು ನಿರೂಪಣಾ ಪ್ರಧಾನ ಪ್ರದರ್ಶನವಾಗಿಸಿದ್ದು ನಾಟಕದ ನಕಾರಾತ್ಮಕ ಅಂಶವಾಗಿದೆ. ದುರ್ಯೋಧನ, ಕುಂತಿ, ದ್ರೌಪತಿ, ಭೀಷ್ಮ, ಕೃಷ್ಣದ್ವೈಪಾಯನ. ದ್ರೋಣ, ಕರ್ಣ, ಯುಯುತ್ಸು, ಸಂಜಯ.. ಹೀಗೆ ಮುಂತಾದ ಪಾತ್ರಗಳ ನಿರೂಪಣಾ ಪ್ರಧಾನ ಉದ್ದುದ್ದ ಮಾತುಗಳು ನೋಡುಗರಲ್ಲಿ ಏಕತಾನತೆ ಸೃಷ್ಟಿಸಿತು. ಒಂದು ರೀತಿಯಲ್ಲಿ ಏಕವ್ಯಕ್ತಿ ಪ್ರದರ್ಶನಗಳ ಚಿಕ್ಕಪುಟ್ಟ ತುಣುಕುಗಳನ್ನು ನೋಡಿದಂತೆ ಭಾಸವಾಯಿತು. ದೃಶ್ಯಗಳ ಮೂಲಕ ಕಟ್ಟಬಹುದಾದ ಸನ್ನಿವೇಶಗಳನ್ನು ಮಾತಿನ ಮೂಲಕವೂ, ಮಾತಿನ ಮೂಲಕ ಹೇಳಬಹುದಾದದ್ದನ್ನು ದೃಶ್ಯಗಳ ಮೂಲಕವೂ ಕಟ್ಟಿದ್ದರಿಂದಾಗಿ ಒಟ್ಟಾರೆ ನಾಟಕದ ಓಘಕ್ಕೆ ಹಿನ್ನಡೆಯಾದಂತಾಯಿತು. ಎಲ್ಲ ಕಾರಣಗಳಿಂದ ದುರ್ಯೋಧನ ಮತ್ತು ಕುಂತಿ ಪಾತ್ರವನ್ನು ಹೊರತು ಪಡಿಸಿ ಬೇರೆ ಯಾವ ಪಾತ್ರವೂ ಪ್ರೇಕ್ಷಕರ ಚಿತ್ತಬಿತ್ತಿಯಲ್ಲಿ ಅಚ್ಚೊತ್ತದೇ ಹೋಗಿದ್ದೊಂದು ವಿಪರ್ಯಾಸ. 

ರಂಗವಿನ್ಯಾಸವು ನಾಟಕದಲ್ಲಿ ಅತ್ಯಂತ ಪ್ರಮುಖ ಸಂಗತಿ. ಪರ್ವನಾಟಕದಲ್ಲೂ ಸಹ ಸೆಟ್ಗಳು ವಿರಾಟಪರ್ವ ರೂಪ ತಾಳಿ ನಿಂತಿವೆ. ಸೆಟ್ಗಳ ಗಾತ್ರ ದೊಡ್ಡದಾದಷ್ಟೂ ಪಾತ್ರಗಳು ಪುಟ್ಟದಾಗಿ ಕಾಣಿಸುತ್ತಾ ಹೋಗುತ್ತವೆ. ಪಾತ್ರಗಳ ಅಭಿನಯದ ಮೇಲೆ ಕೇಂದ್ರಿಕೃತವಾಗಬೇಕಾದ ನೋಡುಗರ ನೋಟವನ್ನು ಬ್ರಹತ್ ಸೆಟ್ಗಳೇ ಸೆಳೆಯುತ್ತವೆ. ರಂಗವೇದಿಕೆಗೆ ಸೆಟ್ಗಳ ಭಾರವೇ ಅತಿಯಾಗಿದ್ದು ನಟರು ಕುಬ್ಜರಾದಂತಿದೆ. ಪ್ರದರ್ಶನದ ಆಶಯವನ್ನು ನಾಟಕಕ್ಕೆ ಪೂರಕವಾಗಬೇಕಾದ ಆಕೃತಿಗಳು ಮರೆಮಾಚುವಂತಾದಾಗ ನಾಟಕ ಸಮತೋಲನ ತಪ್ಪುತ್ತದೆ. ಅದೇ ಇಲ್ಲಿಯೂ ಆಗಿದ್ದು. ಹಿಂದೆ ಸೈಕ್ ಮೇಲೆ ಅರಮನೆಯ ನೆರಳಿನ ಚಿತ್ರ ಆಗಾಗ ಮೂಡುತ್ತಿದ್ದು ಅದು ಅರಮನೆ ಎನ್ನುವುದರ ಸಂಕೇತಕ್ಕಿಂತಲೂ ಮುಸ್ಲಿಂ ರಾಜರುಗಳ ಮಹಲಿನಂತೆ ಕಾಣುತ್ತದೆ. ರಂಗದಂಗಳದ ತುಂಬಾ ಪ್ಲಾಟ್ಪಾರಂಗಳೇ ತುಂಬಿದ್ದರಿಂದ ನಟರ ಸರಾಗ ಚಲನೆ ಹಾಗೂ ಅಭಿನಯಕ್ಕೆ ಅಡೆತಡೆ ಒಡ್ಡುವಂತಿವೆ.



ದೃಶ್ಯ ಬದಲಾವಣೆ ಇಷ್ಟವಾಗುವಂತಿವೆ. ಒಂದಾದ ನಂತರ ಒಂದು ದೃಶ್ಯಗಳು ಬಿಡುವಿಲ್ಲದೇ ಬದಲಾವಣೆಯಾಗುತ್ತಲೇ ಇರುತ್ತವೆ. ಪ್ರೇಕ್ಷಕರ ಗಮನ ಅತ್ತಿತ್ತ ಹರಿಯದಂತೆ ಮಾಡುವಲ್ಲಿ ತಂತ್ರ ಯಶಸ್ವಿಯಾಗಿದೆ. ಆದರೆ ಅನುಕ್ರಮವಲ್ಲದ ರೀತಿಯಲ್ಲಿ ಒಂದಕೊಂದು ಸಂಬಂಧವಿಲ್ಲದಂತಹ ದೃಶ್ಯಗಳು ದಿಢೀರನೆ ಬರುವುದರಿಂದ ಗೊಂದಲ ಸೃಷ್ಟಿಯಾಗುತ್ತದೆ. ಪಾಂಡವರು ಇನ್ನೂ ಹುಟ್ಟಿಲ್ಲದ ದೃಶ್ಯದ ನಂತರ ತಕ್ಷಣಕ್ಕೆ ಜೂಜಿನ ದೃಶ್ಯ ಬಂದರೆ ನೋಡುಗರಿಗೆ ಹೇಗಾಗಬೇಡ. ಹೋಗಲಿ ರೀತಿಯ ಕಲಸುಮೆಲೋಗರ ದೃಶ್ಯ ಬದಲಾವಣೆಗಳನ್ನೂ ರಂಗತಂತ್ರವೆಂದು ಒಪ್ಪಿಕೊಂಡರೂ ಯಾಕೋ ನೋಡುಗರಲ್ಲಿ ಗೊಂದಲ ಹುಟ್ಟುವಂತಿದೆ.

ದ್ವನಿ ಮತ್ತು ಬೆಳಕು ಪ್ರೇಕ್ಷಕರಲ್ಲಿ ಭಾವನೆಗಳನ್ನು ಸೃಷ್ಟಿಸಲು ಬೇಕಾದ ಮಹತ್ತರವಾದ ಪರಿಕರಗಳು. ನಾಟಕದಲ್ಲಿ ತುಸು ಹೆಚ್ಚೇ ಪರಿಕರಗಳು ಬಳಕೆಯಾಗಿವೆ. ಯಾವ ರೀತಿಯ ಮೂಡ್ ಸೃಷ್ಟಿಯಾಗಲು ಯಾವ ಬಣ್ಣದ ಬೆಳಕಿನ ವಿನ್ಯಾಸ ಮಾಡಬೇಕು ಎಂಬುದು ರಂಗನಿಯಮ. ಆದರೆ ಇದ್ದಬದ್ದ ಬಣ್ಣಗಳ ಬೆಳಕನ್ನೆಲ್ಲಾ ರಾಡಿಯಾಗಿ ರಂಗದ ಮೇಲೆ ಚೆಲ್ಲಾಡಿದರೆ ನೋಡುಗರಲ್ಲಿ ವಿಸ್ಮಯವನ್ನು ಹುಟ್ಟಿಸಬಹುದೇ ವಿನಹ ಮೂಡನ್ನಲ್ಲ. ಬೆಳಕಿನ ಬಣ್ಣಗಳ ಹರಡುವಿಕೆಯಲ್ಲಿ ಇನ್ನೂ ನಿಯಂತ್ರಣ ಬೇಕಿದೆ. ದೃಶ್ಯದ ಭಾವಕ್ಕೆ ತಕ್ಕಂತೆ ಬೆಳಕನ್ನು ಮರುವಿನ್ಯಾಸಗೊಳಿಸುವುದು ನಾಟಕದ ಯಶಸ್ಸಿಗೆ ಅಗತ್ಯವಾಗಿದೆ. ಹಿನ್ನೆಲೆ ಸಂಗೀತವಂತೂ ಕೆಲವೊಮ್ಮೆ ಅತಿ ಎನ್ನಿಸುವಂತಿದ್ದರೆ ಇನ್ನು ಕೆಲವೊಮ್ಮೆ ಸಂಭಾಷಣೆಗೆ ಅಡ್ಡಿಯಾಗುವಂತೆ ಮೂಡಿ ಬಂದಿದೆ. ಸಂಜಯ ಪಾತ್ರಧಾರಿಯ ಬಪೂನ್ ಮಾದರಿಯ ನಟನೆಯ ಸಂದರ್ಭದಲ್ಲಿ ಕಿವಿಗಡಚಿಕ್ಕುವ ಹಿನ್ನೆಲೆ ಸಂಗೀತವಂತೂ ಅಸಹನೀಯ. ಇನ್ನು ಪಾತ್ರಗಳ ಉಡುಗೆ ತೊಡುಗೆಗಳ ಬಗ್ಗೆಯಂತೂ ಹೇಳುವುದೇ ಬೇಡ. ಯಾವುದೋ ಬಣ್ಣಕ್ಕೆ ಹೊಂದದ ಇನ್ಯಾವುದೋ ಬಣ್ಣವನ್ನು ಸೇರಿಸಿ ತಯಾರಿಸಿದ ಕಾಸ್ಟೂಮ್ಗಳು ಪಾತ್ರಗಳ ಅಂದಗೆಡಿಸಿವೆ. ಪ್ರಸಾದ್ ಬಿದ್ದಪ್ಪನಂತಹ ಪ್ಯಾಶನ್ ವಿನ್ಯಾಸಕಾರರನ್ನು ಕರೆಯಿಸಿ ವಸ್ತ್ರವಿನ್ಯಾಸ ಮಾಡಿದ್ದರಿಂದಾಗಿ ಅನೇಕರಿಗೆ ಅತೀವ ಕುತೂಹಲವಿತ್ತು. ಆದರೆ.. ನಿರಾಸೆಯಾಯಿತು.

ಪರ್ವದಂತಹ ಜನಪ್ರೀಯ ಕೃತಿಯನ್ನು ನಾಟಕವಾಗಿಸಲು ರಂಗಭೂಮಿಯ ತಂತ್ರಗಾರಿಕೆ ಹಾಗೂ ಪರಿಕರಗಳನ್ನು ಬಳಸುವ ಬದಲು ಈವೆಂಟ್ ಮ್ಯಾನೇಜ್ಮೆಂಟ್ ಸ್ಕಿಲ್ಗಳನ್ನು ಬಳಸಿ ಸಿನಮೀಯ ತಂತ್ರಗಳನ್ನು ಅಳವಡಿಸಿಕೊಂಡಿದ್ದರಿಂದ ಇಡೀ ನಾಟಕ ನಾಟಕವಾಗದೇ ಕಾರ್ಪೋರೇಟ್ ಕಂಪನಿಯೊಂದರ ಈವೆಂಟ್ ಆಯಿತು. ನಾಟಕದ ನಿರ್ದೇಶಕರಾದ ಪ್ರಕಾಶ್ ಬೆಳವಾಡಿಯವರು ರಂಗಭೂಮಿಗಿಂತಲೂ ಸಿನೆಮಾ ಹಾಗೂ ಈವೆಂಟ್ಗಳ ಸಹವಾಸದಲ್ಲೇ ಇದ್ದವರು. ರಂಗಭೂಮಿಯ ಗಂಧಗಾಳಿ ಇಲ್ಲದ ಪ್ಯಾಶನ್ ಡಿಸೈನರ್ ಪ್ರಸಾಧ್ ಬಿದ್ದಪ್ಪನವರು ದೊಡ್ಡ ದೊಡ್ಡ ಈವೆಂಟ್ಗಳಲ್ಲೇ ಬದುಕಿನ ಸಾರ್ಥಕತೆ ಪಡೆದವರು. ಇದರಿಂದಾಗಿ ನಾಟಕದಲ್ಲಿ ಭಾವನೆಗಳ ಮೇಲೆ ಬಣ್ಣ ಬೆಳಕಿನ ಸವಾರಿ ಹೆಚ್ಚಾಯಿತು. ಕೊನೆಗೂ ರಂಗಕ್ರಿಯೆಗಳಿಗಾಗಿಯೇ ಇರುವ ರಂಗಾಯಣವು ನಾಟಕವನ್ನು ಈವೆಂಟ್ ಮಾದರಿಯಲ್ಲಿ ಪ್ರಸ್ತುತ ಪಡಿಸುವಲ್ಲಿ ಮಾದರಿಯಾಯಿತು. ಇಡೀ ನಾಟಕದಲ್ಲಿ ಯಾವ ವಿಭಾಗದಲ್ಲೂ ವೃತ್ತಿಪರತೆ ಎನ್ನುವುದು ಕಾಣಿಸಲೇ ಇಲ್ಲ. ರಂಗಾಯಣಕ್ಕೆ ತನ್ನದೇ ಆದ ಪ್ರೊಫೆಸಲಿಸಂ ಇರಬೇಕು, ಇದೆ ಎಂದುಕೊಳ್ಳಲಾಗಿದೆ. ಆದರೆ ಅದುಪರ್ವದಲ್ಲಿ ಮಾಯವಾಗಿದೆ. ರಂಗರೂಪ, ನಿರ್ದೇಶನ, ನಟನೆ, ನೇಪತ್ಯ ಎಲ್ಲದರಲ್ಲೂ ವೃತ್ತಿಪರತೆ ಕಾಣದೇ ಹೋದರೂ ಪ್ರಚಾರದಲ್ಲಿ ಮಾತ್ರ ವೃತ್ತಿಪರತೆಯನ್ನು ರೂಢಿಸಿಕೊಳ್ಳಲಾಗಿದೆ. ರಂಗಮಂದಿರಕ್ಕೆ ಪ್ರೇಕ್ಷಕರನ್ನು ಸೆಳೆಯಲು ಬೇಕಾದ ಕಾರ್ಪೋರೇಟ್ ಮಾದರಿಯ ಪ್ರಚಾರ ಕಾರ್ಯದಲ್ಲಿ ರಂಗಾಯಣ ಯಶಸ್ವಿಯಾಗಿದೆ. ಆದರೆ.. ಬಂದ ಪ್ರೇಕ್ಷಕರಲ್ಲಿ ಹೆಚ್ಚು ಜನ ಬೈರಪ್ಪನವರ ಪರ್ವ ಕಾದಂಬರಿಯ ಅಭಿಮಾನಿಗಳೇ ಆಗಿದ್ದು ವಾಸ್ತವ.  

ಒಂದು ಕೋಟಿ ರೂಪಾಯಿಗಳ ಬಜೆಟ್, ಮೂರು ತಿಂಗಳ ಕಾಲ ಕಲಾವಿದರಿಗೆ ರಂಗತರಬೇತಿ, ಮತ್ತೂ ಮೂರು ತಿಂಗಳು ತಾಲೀಮು,  ರಂಗಾಯಣದ 10 ಹಿರಿಯ ಕಲಾವಿದರು, 25 ಹವ್ಯಾಸಿ ಕಲಾವಿದರು ಹಾಗೂ 10 ಜನ ತಂತ್ರಜ್ಞರುಗಳು ಸೇರಿ ಕೋವಿಡ್ ಕಾಲದಲ್ಲಿ ಆರು ತಿಂಗಳುಗಳ ಕಾಲ ಶ್ರಮಪಟ್ಟು ಕಟ್ಟಿದಪರ್ವರಂಗಪ್ರಯೋಗ ಕನ್ನಡ ರಂಗಭೂಮಿ ಅಷ್ಟೇ ಯಾಕೆ ಭಾರತೀಯ ರಂಗಭೂಮಿಯಲ್ಲಿ ಮಹಾರಂಗಪರ್ವವನ್ನು ಸೃಷ್ಟಿಸಬಹುದು ಎಂದು ಆಶಿಸಲಾಗಿತ್ತು. ಭೈರಪ್ಪನವರಪರ್ವಈಗಾಗಲೇ 26ಕ್ಕೂ ಹೆಚ್ಚು ಸಲ ಮರುಮುದ್ರಣಗೊಂಡಿರುವ ಜನಪ್ರೀಯ ಕಾದಂಬರಿಯಾಗಿದ್ದರಿಂದ ಪರ್ವ ಆಧಾರಿತ ನಾಟಕದ ಬಗ್ಗೆ ರಂಗಾಸಕ್ತ ಹಾಗೂ ಸಾಹಿತ್ಯಾಸಕ್ತ ಜನರಲ್ಲಿ ಅತೀವ ನಿರೀಕ್ಷೆಗಳೂ ಗರಿಗದರಿದ್ದವು. ಆದರೆ.. ಇನ್ನೂ ನಿರೀಕ್ಷೆ ಮುಟ್ಟಲು ರಂಗಾಯಣ ಅನೇಕ ಬದಲಾವಣೆಗಳನ್ನು ಮಾಡಿಕೊಳ್ಳಬೇಕಿದೆ. ದೃಶ್ಯ ಮೋಹವನ್ನು ತೊರೆದು ಅನಗತ್ಯವೆನಿಸುವ ಭಾಗಗಳನ್ನು ತೆಗೆದು ರೀಎಡಿಟ್ ಮಾಡಬೇಕಿದೆ. ಪರ್ವ ಕಾದಂಬರಿ ಕೊಡುವ ಓದುವ ರೋಚಕ ಅನುಭವದಲ್ಲಿ ಒಂದಿಷ್ಟನ್ನಾದರೂ ನಾಟಕದಲ್ಲಿ ತರಲು ಪ್ರಯತ್ನಿಸಬೇಕಿದೆ. ಆಗ ಮಾತ್ರ ಪರ್ವಕ್ಕೆ ಪರ್ವದ ಅಭಿಮಾನಿ ವರ್ಗಕ್ಕೆ ನ್ಯಾಯಸಲ್ಲಿಸಿದಂತಾಗಬಹುದು. ರಂಗಾಯಣದ ಮೂಲಕ ಏನಾದರೂ ಮೇಘಾ ಈವೆಂಟ್ ಮಾಡಬೇಕೆನ್ನುವ ಮಾನ್ಯ ಅಡ್ಡಂಡ ಕಾರ್ಯಪ್ಪನವರ ಕನಸು ನನಸಾಗಬಹುದಾಗಿದೆ.  

ಪ್ರದರ್ಶನದ ಅತಿ-ಮಿತಿಗಳೇನೇ ಇರಲಿ, ಆಶಯದ ಮೇಲೆ ಆಕೃತಿ ಅದೆಷ್ಟೇ ಸವಾರಿ ಮಾಡಿರಲಿ, ದೃಶ್ಯಗಳ ಮೇಲೆ ತಂತ್ರಗಳು ವೈಭವೀಕರಣಗೊಂಡಿರಲಿ, ಉದ್ದೇಶಕ್ಕಿಂತಲೂ ಹೆಚ್ಚಾಗಿ ಗೊಂದಲಗಳೇ ಸೃಷ್ಟಿಯಾಗಿರಲಿ, ಕೋಟ್ಯಾಂತರ ರೂಪಾಯಿ ಜನರ ತೆರಿಗೆ ಹಣ ಖರ್ಚಾಗಿರಲಿ ಆದರೆ.. ಪರ್ವ ನಾಟಕದಲ್ಲಿ ಆರ್ಯರ ಶ್ರೇಷ್ಟತೆಯನ್ನು ಪ್ರಶ್ನಿಸುವ, ಧರ್ಮಗಳ ದೌರ್ಬಲ್ಯಗಳನ್ನು ವಿಡಂಬಿಸುವಂತಹ, ಆಳುವ ವರ್ಗಗಳ ಅಧಿಕಾರದ ಆಸೆಗೆ ಬಲಿಪಶುಗಳಾದ ಮಹಿಳೆಯರು, ಸೂತಕುಲದವರು ಹಾಗೂ ಜನಸಾಮಾನ್ಯರ ನೋವನ್ನು ಹೇಳುವಂತಹ ನಾಟಕದ ಕೆಲವು ದೃಶ್ಯಗಳು ಪ್ರೇಕ್ಷಕರನ್ನು ಪುನರಾಲೋಚನೆಗೆ ಪ್ರೇರೇಪಿಸುವಂತಿವೆ. ಅಷ್ಟರ ಮಟ್ಟಿಗೆ ನಾಟಕ ಯಶಸ್ವಿಯಾಗಿದೆ. 

-ಶಶಿಕಾಂತ ಯಡಹಳ್ಳಿ   

 

         


4 ಕಾಮೆಂಟ್‌ಗಳು:

  1. "ದ್ರೌಪತಿಯ ಮಕ್ಕಳ ಸಂಗತಿಗೆ ಬಂದರೆ ಭೂಮಿಯಲ್ಲಿ ಬಿತ್ತಲ್ಪಟ್ಟ ಬೀಜಗಳು ಐವರಲಿ ಯಾರದ್ದೆಂಬುದರ ಗುರುತೇ ಇಲ್ಲ"
    ಓದಿ ದಶಕಗಳೇ ಆದರೂ ನನಗೆ ನೆನಪಿರುವಂತೆ:sex ವಿಷಯದಲ್ಲಿ ಕುಂತಿಯಷ್ಟು ಆಸಕ್ತಿ ಇಲ್ಲದ ದ್ರೌಪದಿ ವರ್ಷಕ್ಕೆ ಒಬ್ಬರು ಎಂಬ ಕಟ್ಟಳೆ ವಿಧಿಸುತ್ತಾಳೆ (ನಾಲ್ಕು ವರ್ಷ ತಡೆದು ಕೊಳ್ಳಲಾಗದ ಅರ್ಜುನ ಒಂದು ರೌಂಡ್ ಹೋಗಿ ಚಿತ್ರಾಂಗದ, ಉಲೂಪಿ ಕಡೇಗೆ permanent ಆಗಿ ಸುಭದ್ರೆ ಜೊತೆಗೆ..)
    ಹೀಗಿರುವಾಗ ಉಪ-ಪಾಂಡವರಲ್ಲಿ ಯಾರು ಯಾರ ಮಗ ಎಂದು ಯಾಕೆ ಗೊತ್ತಾಗಲಿಲ್ಲ?

    ಪ್ರತ್ಯುತ್ತರಅಳಿಸಿ
  2. ಅದ್ಭುತ ವಿಶ್ಲೇಷಣೆ ಸರ್, ತುಂಬಾ ವಿಸ್ತಾರವೂ ಮತ್ತು ಅಥ೯ಪೂಣ೯ವಾಗಿದೆ..

    ಪ್ರತ್ಯುತ್ತರಅಳಿಸಿ