ಮಂಗಳವಾರ, ಡಿಸೆಂಬರ್ 17, 2013

"ಶಿವರಾತ್ರಿ" ಯ ದೃಶ್ಯವೈಭವದಲ್ಲಿ ಸೊರಗಿದ ಅಭಿನಯ



ನಾಟಕ ವಿಮರ್ಶೆ :

                                                                               
ಬಸವಣ್ಣನವರ ಕುರಿತು ಹಲವಾರು ನಾಟಕಗಳು ಕನ್ನಡ ರಂಗಭೂಮಿಯಲ್ಲಿ ಪ್ರಯೋಗಗೊಂಡಿವೆ. ಲಂಕೇಶರ "ಸಂಕ್ರಾಂತಿ", ಕಾರ್ನಾಡರ "ತಲೆದಂಡ", ಶಿವಪ್ರಕಾಶರ "ಮಹಾಚೈತ್ರ", ಸಾನೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿಯವರ "ಜಂಗಮದೆಡೆಗೆ", ಸಿರಿಗೆರೆಯ ಶಿವಕುಮಾರ ಸ್ವಾಮೀಜಿಯವರ "ಮರಣವೇ ಮಹಾನವಮಿ"...... ಪ್ರಮುಖವಾದವುಗಳು. ಎಲ್ಲಾ ನಾಟಕಗಳು ಶರಣರ ಕಾಲಘಟ್ಟದ ಧರ್ಮಸಂಘರ್ಷ, ವರ್ಗಸಂಘರ್ಷ ಮತ್ತು ವೈಚಾರಿಕ ಸಂಘರ್ಷಗಳನ್ನು ವಿವಿಧ ಆಯಾಮಗಳಲ್ಲಿ ಅನಾವರಣ ಮಾಡುವ ಪ್ರಯತ್ನವನ್ನು ಮಾಡಿವೆ. ಈಗ ಡಾ.ಚಂದ್ರಶೇಖರ ಕಂಬಾರರು ಸಹ ತಮ್ಮ "ಶಿವರಾತ್ರಿ" ನಾಟಕದ ಮೂಲಕ ಬಿಜ್ಜಳ-ಬಸವಣ್ಣನವರನ್ನು ವಿಭಿನ್ನ ಬಗೆಯಲ್ಲಿ ಅನಾವರಣ ಮಾಡಿದ್ದಾರೆ.
ಡಾ.ಚಂದ್ರಶೇಖರ ಕಂಬಾರರು ರಚಿಸಿದ "ಶಿವರಾತ್ರಿ" ನಾಟಕವನ್ನು ನಾದಭ್ರಹ್ಮ ಹಂಸಲೇಖರವರುಹಂಸಲೇಖ ದೇಸಿ ಕಾಲೇಜಿನ ವಿದ್ಯಾರ್ಥಿಗಳಿಗೆ  ನಿರ್ದೇಶಿಸಿದ್ದು 2013 ಡಿಸೆಂಬರ್ 16ರಂದು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ ಜ್ಞಾನಪೀಠ ಪುರಸ್ಕೃತರ ಕುರಿತ ಕಾರ್ಯಕ್ರಮದ ಭಾಗವಾಗಿ ರವೀಂದ್ರ ಕಲಾಕ್ಷೇತ್ರದಲ್ಲಿಶಿವರಾತ್ರಿ ಪ್ರದರ್ಶನಗೊಂಡು ಬೆರಗನ್ನೂ ಹಾಗೂ ಬೇಸರವನ್ನೂ ಉಂಟುಮಾಡಿತು. ನಾಟಕದ ಸಂಕ್ಷಿಪ್ತ ವಿವರ ಹೀಗಿದೆ....
ಶಿವಶರಣ ಮುಗ್ದ ಸಂಗಯ್ಯ ಸೂಳೆ ಸಾವಂತ್ರಿಯ ಮನೆ ಹುಡುಕಿ ಬರುತ್ತಾನೆ. ಶರಣರ ವೇಷದಲ್ಲಿ ಅರಮನೆಯ ರತ್ನಹಾರವನ್ನು ಕದ್ದ ಪಂಡಿತ ಹರಿಹರೇಶ್ವರನ ಮಗ ದಾಮೋದರ ಹಾರವನ್ನು ಸಂಗಯ್ಯನ ಕೈಗಿತ್ತು ಸಾವಂತ್ರಿಯ ಮನೆ ತೋರಿಸುತ್ತಾನೆ. ಸಾವಂತ್ರಿಯ ಕೈಗೆ ಹಾರವನ್ನು ಕೊಟ್ಟ ಸಂಗಯ್ಯ ಕಾಮಾಕ್ಷಿಯ ಜೊತೆ ಸೇರಿ ಲಿಂಗಪೂಜೆ ಏಕಾಂತದಲ್ಲಿ ಆರಂಭಿಸುತ್ತಾನೆ. ಅದೇ ಸಮಯಕ್ಕೆ ಕಾಮಾಕ್ಷಿಯ ಜೊತೆ ಬಯಸಿ ದೊರೆ ಬಿಜ್ಜಳನೂ ಸಂಕವ್ವನ ಮನೆಗೆ ಬಂದಾಗ ಕಾಮಾಕ್ಷಿಯು ಸಂಗಯ್ಯನ ಜೊತೆಗಿರುವುದನ್ನು ಕಂಡು ದಿಗ್ಬ್ರಮೆಗೊಳ್ಳುತ್ತಾನೆ. ಶರಣ ಸಂಗಯ್ಯನು ಸೂಳೆ ಸಾವಂತ್ರಿಯ ಮನೆಯಲ್ಲಿರೋದನ್ನು ತಿಳಿದ ಬಸವಣ್ಣ ಕೂಡಾ ಸಾವಂತ್ರಿಯ ಮನೆಗೆ ಬರುತ್ತಾನೆ. ದೊರೆ ಬಿಜ್ಜಳ ಮತ್ತು ಮಾಜಿ ಮಂತ್ರಿ ಬಸವಣ್ಣನವರ ಮುಖಾಮುಖಿಯಾಗುತ್ತದೆ. ರತ್ನದ ಹಾರವನ್ನು ಕದ್ದ ಆರೋಪವನ್ನು ಸಂಗಯ್ಯನ ಮೇಲೆ ಹಾಕಲು ಪಂಡಿತನು ಪ್ರಯತ್ನಿಸುತ್ತಾನೆ. ಹರಳಯ್ಯನ ಮನೆಗೆ ಬೆಂಕಿಬೀಳುತ್ತದೆ.  ನಿರಾಸೆಗೊಂಡ ಬಸವಣ್ಣ ಕೂಡಲ ಸಂಗಮದಲ್ಲಿ ಐಕ್ಯನಾಗುತ್ತಾನೆ. ಪಂಡಿತನ ಮಗ ದಾಮೋದರ ಭಟ್ಟ ತನ್ನ ತಪ್ಪನ್ನು ಕೊನೆಗೆ ಒಪ್ಪಿಕೊಳ್ಳುತ್ತಾನೆ. ಆತನನ್ನು ಬಿಜ್ಜಳ ಕೊಲ್ಲುತ್ತಾನೆ. ಬಿಜ್ಜಳನ ದುರಾಡಳಿತದಿಂದ ಬೇಸತ್ತ ಜಗದೇವ ತನ್ನ ಜೊತೆಗಾರನ ಜೊತೆ ಸೇರಿ ಬಿಜ್ಜಳನನ್ನು ಕೊಲ್ಲುತ್ತಾನೆ. ಇಲ್ಲಿಗೆ ನಾಟಕವೇನೋ ಮುಗಿಯುತ್ತದೆ ಆದರೆ ನೋಡುಗರ ತಲೆಯಲ್ಲಿ ಹಲವಾರು ಸಂದೇಹಗಳನ್ನು ಸೃಷ್ಟಿಸುತ್ತದೆ. ಹಲವಾರು ಉತ್ತರವಿಲ್ಲದ ಪ್ರಶ್ನೆಗಳನ್ನು ಹುಟ್ಟಿಸುತ್ತದೆ.


ಶಿವಶರಣ ಸಂಗಯ್ಯ ಮಹಾಮನೆ ಬಿಟ್ಟು ಲಿಂಗಪೂಜೆ ಮಾಡಲು ಸೂಳೆ ಸಾವಂತ್ರಿಯ ಮನೆಯ ಕಾಮಾಕ್ಷಿಯನ್ನೇ ಯಾಕೆ ಹುಡುಕಿಕೊಂಡು ಬಂದ?. ಕಾಮಾಂಗನೆಯ ತಲೆಯಮೇಲೆ ಲಿಂಗವನ್ನಿಟ್ಟು ಪೂಜೆ ಮಾಡುವುದಾದರೂ ಯಾತಕ್ಕೆ? ಹೋಗಲಿ ಶರಣರ ವೇಷದಲ್ಲಿ ರತ್ನದಹಾರವನ್ನು ಕದ್ದ ದಾಮೋದರ ಅದನ್ನು ಅಪರಿಚಿತನಾದ ಸಂಗಯ್ಯನಿಗ್ಯಾಕೆ ಕೊಡಬೇಕಿತ್ತು?. ಕಳ್ಳತನ ಬಿಟ್ಟು ಶರಣನಾದ ಕಳ್ಳಚಿಕ್ಕಯ್ಯನಿಗೆ ಪಂಡಿತ ಹಾಗೂ ಅವನ ಮಗ ಇವರಿಬ್ಬರೂ ಶರಣರ ವೇಷದ ಕಳ್ಳರೆಂದು ಗೊತ್ತಾದ ಮೇಲೂ ಭಟರಿಂದ ಅವರನ್ನು ರಕ್ಷಿಸಿದ್ದಾದರೂ ಯಾಕೆ? ಸರ್ವಾಧಿಕಾರ ಹೊಂದಿದ್ದ ಬಿಜ್ಜಳರಾಜ ಕಳ್ಳನ ಹಾಗೆ ವೇಷಮರೆಸಿಕೊಂಡು ಸೂಳೆ ಮನೆಗೆ ಬಂದಿದ್ದರ ಔಚಿತ್ಯವೇನು?. ಬೇಕೆಂದಿದ್ದರೆ ತಾನಿದ್ದಲ್ಲಿಗೇ ಕಾಮಾಕ್ಷಿಯನ್ನು ಕರೆಸುವ ತಾಕತ್ತು ಅವನಿಗಿಲ್ಲವೇ. ಹೋಗಲಿ ಬಿಜ್ಜಳನು ಜನರಿಗೆ, ಶರಣರಿಗೆ ಹೆದರಿ ಗುಟ್ಟಾಗಿ ಬಂದಿದ್ದ ಅಂದುಕೊಂಡರೆ, ದೊರೆ ಸೂಳೆ ಮನೆಲಿದ್ದದ್ದು ಪಂಡಿತನಿಂದ ಹಿಡಿದು ಪಾಮರಳಾದ ಅಜ್ಜಿಯವರೆಗೂ ಎಲ್ಲರಿಗೂ ಗೊತ್ತಾದದ್ದಾದರೂ ಹೇಗೆ? ರಾಜ ವೇಶ್ಯೆಯ ಮನೆಗೆ ಹೋದರೆ ಹೋಗಲಿ ಬಸವಣ್ಣ ಯಾಕೆ ಅಲ್ಲಿಗೆ ಹೋದ? ಪಾತ್ರೋಚಿತ್ಯವನ್ನು ಮೀರಿ ಸಾವಂತ್ರಿ ಬಿಜ್ಜಳನ ಜೊತೆ ವಾದಿಸುವುದು ಹಾಗೂ ಕತ್ತಿ ಹಿಡಿದು ನಿಲ್ಲುವುದು ಅತಾರ್ಕಿಕವಾಗಿದೆ. ಇಷ್ಟೇ ಅಲ್ಲ....ಇನ್ನೂ ಒಂದು ಕ್ಲೈಮ್ಯಾಕ್ಸ ಪವಾಡ ಏನೆಂದರೆ, ತನ್ನ ಯುಕ್ತಿ ಹಾಗೂ ಶಕ್ತಿಗಳಿಂದಲೇ ಸಾಮ್ರಾಜ್ಯವನ್ನು ಕಟ್ಟಿದ ದೊರೆ ಬಿಜ್ಜಳ ಕೇವಲ ಈಟಿ ಹಿಡಿದು ಬಂದ ಇಬ್ಬರ ಮುಂದೆ ಕನಿಷ್ಟ ಪ್ರತಿರೋಧವನ್ನೂ ಒಡ್ಡದೇ ಪ್ರಾಣವನ್ನು ಅರ್ಪಿಸಿಕೊಂಡಿದ್ದು.......  ಹೀಗೆ ನಾಟಕದಾದ್ಯಂತ ಹಲವಾರು ತರ್ಕಕ್ಕೆ ನಿಲುಕದ ಘಟನೆಗಳು ನಾಟಕವನ್ನು ಗೊಂದಲದ ಗೂಡಾಗಿಸುವಲ್ಲಿ ಯಶಸ್ವಿಯಾಗಿವೆ.
 ಬಸವಣ್ಣ ಪವಾಡಗಳನ್ನು ಮಾಡಿದರೋ ಇಲ್ಲವೋ ಗೊತ್ತಿಲ್ಲ, ಆದರೆ ನಾಟಕಕಾರರು ನಾಟಕದಲ್ಲಿ ಮೇಲೆ ತಿಳಿಸಿದ ತರ್ಕಾತೀತವಾದ ಹಲವಾರು ಪವಾಡಗಳನ್ನು ಕಟ್ಟಿಕೊಟ್ಟಿದ್ದಾರೆ. ಮೂಲಕ ತಮ್ಮದೇ ಆದ ರೀತಿಯಲ್ಲಿ ಬಸವಣ್ಣನವರ ಚರಿತ್ರೆಯನ್ನು ತಮಗಿಷ್ಟಬಂದ ಹಾಗೆ ತಿರುಚಿ ತಮ್ಮ ಕಲ್ಪನೆಯ ಮೂಸೆಯಲ್ಲಿ ಹೊಸದಾದ ರೀತಿಯಲ್ಲಿ ಬಸವ ಪುರಾಣವನ್ನು ರಚಿಸಲು ಪ್ರಯತ್ನಿಸಿದ್ದಾರೆ. ಹಾಗೂ ನಾಟಕ ನೋಡಿದ ಪ್ರೇಕ್ಷಕರ ಮನೋರಂಗಭೂಮಿಯಲ್ಲಿ ಗೊಂದಲಗಳನ್ನು ಹುಟ್ಟುಹಾಕುವಲ್ಲಿಯೂ ಸಫಲರಾಗಿದ್ದಾರೆ.
ಸರಳವಾಗಿ ಪಂಡಿತರಿಂದ ಪಾಮರರವರೆಗೆ ಎಲ್ಲರಿಗೂ ಅರ್ಥವಾಗುವ ಹಾಗೆ ಶರಣರು ತಮ್ಮ ವಚನಗಳನ್ನು ರಚಿಸಿ ಜನಸಾಮಾನ್ಯರನ್ನು ತಲುಪಲು ಪ್ರಯತ್ನಿಸಿ ಯಶಸ್ವಿಯಾದರು. ಆದರೆ ಅದೇ ಶರಣರ ಕಾಲಘಟ್ಟವನ್ನು ಅತ್ಯಂತ ಸಂಕೀರ್ಣವಾಗಿ "ಶಿವರಾತ್ರಿ" ನಾಟಕದ ಮೂಲಕ ಚಿತ್ರಿಸಿದ ಚಂದ್ರಶೇಖರ ಕಂಬಾರರು ತರ್ಕಾತೀತ ಘಟನೆಗಳ ಮೂಲಕ ಜನಸಾಮಾನ್ಯರಿಗೆ ಸುಲಭಕ್ಕೆ ಅರ್ಥವಾಗದ ರೀತಿಯಲ್ಲಿ ನಾಟಕವನ್ನು ರಚಿಸಿ ತಮ್ಮ ಬೌದ್ದಿಕ ಪಾಂಡಿತ್ಯವನ್ನು ಮೆರೆದಿದ್ದಾರೆ. ನಾಟಕವನ್ನು ರಂಗವೇದಿಕೆಗೆ ತರುವ ಮೂಲಕ ನಿರ್ದೇಶಕ ಹಂಸಲೇಖರವರು ಇನ್ನೂ ಹೆಚ್ಚಿನ ಗೊಂದಲಗಳನ್ನು ಸೃಷ್ಟಿಸಿ ಪ್ರೇಕ್ಷಕರ ಗ್ರಹಿಕೆಯ ಮೇಲೆ ಪ್ರಯೋಗ ಮಾಡುವಲ್ಲಿ ಸಫಲವಾಗಿದ್ದಾರೆ


ಎಲ್ಲಾ ರೀತಿಯ ವಿಚಿತ್ರ ತರ್ಕಗಳನ್ನು ಪಕ್ಕಕ್ಕಿಟ್ಟು ನೋಡಿದರೂ ಸಹ ನಾಟಕ ಸಾಮಾನ್ಯ ಪ್ರೇಕ್ಷಕನಿಗೆ ದಕ್ಕದೇ ಹೋಗಿದ್ದಕ್ಕೆ ಕಾರಣ ಬೌದ್ದಿಕ ಮಾತುಗಳ ಮಂಥನ. ಸೂಳೆ ಸಾವಂತ್ರಿ ಮತ್ತು ಬಿಜ್ಜಳ, ಬಿಜ್ಜಳ ಮತ್ತು ಬಸವಣ್ಣ ಇವರ ನಡುವಿನ ಸಂಭಾಷಣೆಗಳು ಅತಿ ಎನಿಸುವಷ್ಟು ಹೆಚ್ಚಾಗಿದ್ದು ಆಯಾ ಪಾತ್ರಗಳ ಧರ್ಮಜಿಜ್ಞಾಸೆಯ ಮೇಲಾಟದಲ್ಲಿ ನಾಟಕದ ಕಥೆ ಮುಂದಕ್ಕೆ ಸಾಗದೇ ನಿಂತಲ್ಲೇ ನಿಂತು ಇಲ್ಲಿ ವಾದ ಪ್ರತಿವಾದಗಳೇ ಪ್ರಾಮುಖ್ಯತೆ ಪಡೆದಂತಿವೆ. ಅಸಲಿಗೆ ಕಥೆ ಎನ್ನುವುದೇ ಇಲ್ಲಿ ಇಲ್ಲ.  ಶರಣರ ಕಾಲಘಟ್ಟದ ಕಲ್ಯಾಣದ ಅವನತಿಯನ್ನು ತಿಳಿಸುವ ನಿಟ್ಟಿನಲ್ಲಿ ಸೂಳೆ ಸಾವಂತ್ರಿಯ ಮನೆಯನ್ನು ವೇದಿಕೆಯನ್ನಾಗಿ ಬಳಸಲಾಗಿದೆ. ಅಸಂಗತ ಘಟನೆಗಳಿಗೆ ಸಂಗತ ರೂಪಕೊಡುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.
"ನಾಟಕದ ಪರಿಕರ, ಬೆಳಕು, ಪ್ರಸಾದನ, ರಂಗವಿನ್ಯಾಸ, ವಸ್ತ್ರವಿನ್ಯಾಸ ಎಲ್ಲವೂ ತುಂಬಾ ಸೊಗಸಾಗಿತ್ತು ಆದರೆ ನಟರು ನಾಟಕಕ್ಕೆ ಅಡ್ಡ ಬಂದು ಅಡೆತಡೆ ಮಾಡಿದರು" ಎಂದು ರಂಗಕರ್ಮಿ ಮೇಕಪ್ ನಾಣಿಯವರು ಯಾವಾಗಲೂ ಕೆಟ್ಟ ನಾಟಕಗಳ ಬಗ್ಗೆ ಒಂದು ಮಾತು ಹೇಳುತ್ತಿದ್ದರು. ಮಾತು ಹಂಸಲೇಖರವರಶಿವರಾತ್ರಿನಾಟಕಕ್ಕೆ ಬಹಳ ಸೂಕ್ತವಾಗಿ ಅನ್ವಯಿಸುವಂತಿದೆ. ಪ್ರಮೋದ ಸಿಗ್ಗಾಂವರವರ ವಸ್ತ್ರವಿನ್ಯಾಸ, ಜಯಸಿಂಹರವರ ರಂಗಪರಿಕರ, ಮಂಜು ನಾರಾಯಣರವರ ಬೆಳಕು ವಿನ್ಯಾಸ, ವಿಜಯ್ ರವರ ಪ್ರಸಾದನ, ಮತ್ತು ಹಂಸಲೇಖರವರ ಸಂಗೀತ ಸಂಯೋಜನೆ ಅದ್ಭುತವಾಗಿ ಮೂಡಿಬಂದಿದೆ. ಇಡೀ ನಾಟಕವನ್ನು ಶ್ರೀಮಂತವಾಗಿ ಕಟ್ಟಿಕೊಡಲಾಗಿದೆ. ಆದರೆ... ಇಡೀ ನಾಟಕವನ್ನು ಕುಲಗೆಡಿಸಿದ್ದು ಕಲಾವಿದರ ಅಭಿನಯ, ಪ್ರೇಕ್ಷಕರ ಮೂಡನ್ನೇ ಹಾಳುಮಾಡಿದ್ದು ಅಸ್ತವ್ಯಸ್ತ ದ್ವನಿವ್ಯವಸ್ಥೆ ಮತ್ತು ನೋಡುಗರಿಗೆ ಬೇಸರ ತರಿಸಿದ್ದು ಹಂಸಲೇಖರವರ ಜಾಳುಜಾಳಾದ ನಿರ್ದೇಶನ

ಹಂಸಲೇಖರವರು ಹಾಡು ಮತ್ತು ಸಂಗೀತ ಕ್ಷೇತ್ರದಲ್ಲಿ ದಿಗ್ಗಜರೆಂಬುದರಲ್ಲಿ ಎರಡು ಮಾತಿಲ್ಲ. ನಾಟಕದಲ್ಲೂ ಸಹ ಸೊಗಸಾದ ಸಂಗೀತ ಸಂಯೋಜನೆ ಮಾಡಿದ್ದಾರೆ. ಆದರೆ.. ಅವರಿಗಿನ್ನು ರಂಗತಂತ್ರಗಳ ಅರಿವಿಲ್ಲ. ಬ್ಲಾಕಿಂಗ್, ಮೂವ್ಮೆಂಟ್, ಎಂಟ್ರಿ ಎಕ್ಸಿಟ್, ಸ್ಪೇಸ್, ಸ್ಟೇಜ್ ಬ್ಯಾಲನ್ಸ್ ಗಳೆಂಬ ಕನಿಷ್ಟ ರಂಗವ್ಯಾಕರಣದ ಪರಿಚಯವೂ ಇಲ್ಲ. ಹೊಸ ಯುವಕರನ್ನು ಹೇಗೆ ಅಭಿನಯಕ್ಕೆ ಮೋಲ್ಡ್ ಮಾಡಬೇಕು, ಅದು ಹೇಗೆ ಪಾತ್ರಗಳನ್ನು ಪೋಷಿಸಬೇಕು ಎನ್ನುವುದರ ಅರಿವೂ ಇಲ್ಲ ಎಂಬುದು ನಾಟಕವನ್ನು ನೋಡಿದವರಿಗೆ ಅನ್ನಿಸದೇ ಇರುವುದಿಲ್ಲ. ಕೇವಲ ದೃಶ್ಯವೈಭವವನ್ನು  ಸೃಷ್ಟಿಸಿ ನಾಟಕವನ್ನು ಗೆಲ್ಲಿಸುತ್ತೇನೆಂದರೆ ಸಾಧ್ಯವಿಲ್ಲ


ನಿಜ ಹೇಳಬೇಕೆಂದರೆ ನಾಟಕದ ಆಶಯವೇನು ಎನ್ನುವುದೂ ನಿರ್ದೇಶಕರಿಗೆ ಅರ್ಥವಾಗಿಲ್ಲ. ವಚನಗಳನ್ನು ಯಾವಾಗ ಬಳಸಬೇಕು, ಹೇಗೆ ಬಳಸಬೇಕು ಎನ್ನುವುದು ಗೊತ್ತಾಗಿಲ್ಲ. ಬಸವಣ್ಣ ಬಿಜ್ಜಳನ ಕಾಲಮೇಲೆ ಬಿದ್ದು ಬೇಡಿಕೊಳ್ಳುವುದು ಬಸವಣ್ಣನಂತಹ ಸ್ವಾಭಿಮಾನಿಗೆ ಮಾಡಿದ ಅವಮಾನ ಎಂಬುದರ ಪ್ರಜ್ಞೆಯೂ ಹಂಸಲೇಖರಿಗಿಲ್ಲ. ಹಿಂಸೆಯನ್ನು ವಿರೋಧಿಸಿ
ಹಂಸಲೇಖ
ಅರಿವಿನ ಹಾದಿಯನ್ನು ತೋರಿದ ಶರಣರ ವಚನಗಳನ್ನು ವಚನಗತ್ತಿಗಳು ಎಂದು ಕರೆದು ಹಿಂಸೆಯ ಪ್ರತೀಕವಾದ ಕತ್ತಿಗೆ ವಚನಗಳನ್ನು ಹೋಲಿಸಿದ್ದೇ ಶರಣರಿಗೆ ಮಾಡಿದ ಅಪಚಾರ ಎಂಬುದರ ಕನಿಷ್ಟ ಕಲ್ಪನೆಯೂ ಅವರಿಗಿಲ್ಲ. ಕೊನೆಗೆ ಮನುಜ ಮತ ವಿಶ್ವಪಥ ಎಂದು ಹೇಳುತ್ತಲೇ ಕ್ಲೀಯರ್ ನ್ಯೂಕ್ಲಿಯರ್ ಎನ್ನುವ ಸಂದೇಶವನ್ನು ಕೊಡುವ ಪ್ರಯತ್ನ  ಮಾಡಲಾಗಿದೆ. ಸಂದೇಶಕ್ಕೂ ನಾಟಕದ ಆಶಯಕ್ಕೂ, ವಚನಗತ್ತಿಗಳನ್ನು ಜಳಪಿಸುವುದಕ್ಕೂ ಎತ್ತನಿಂದ ಎತ್ತ ಸಂಬಂಧವಯ್ಯಾ ಎನ್ನುವುದು ನಾದಭ್ರಹ್ಮನಿಗೆ ಮಾತ್ರ ಗೊತ್ತು. ನಾಟಕದ ಜನ್ಮದಾತ ಡಾ.ಚಂದ್ರಶೇಖರ್ ಕಂಬಾರರು ಆಸೆಯಿಂದ ಕುಟುಂಬ ಪರಿವಾರ ಸಮೇತ ಪ್ರೇಕ್ಷಕರ ನಡುವೆ ಕುಳಿತು ನಾಟಕ ನೋಡುತ್ತಿದ್ದವರು ಪ್ರಸ್ತುತಗೊಂಡ ನಾಟಕದ ವಿಕಾರತೆಗಳನ್ನು ನೋಡಲಾಗದೇ ಅರ್ಧದಲ್ಲೇ ಎದ್ದು ಹೊರಟುಹೋದರು. ನಾಟಕಕ್ಕೆ ಹಂಸಲೇಖರವರು ರಂಗಕಾವ್ಯ ಎಂದು ಕರೆದಿದ್ದಾರೆ. ಆದರೆ ನೋಡುಗರು ನಾಟಕದಾದ್ಯಂತ ಎಲ್ಲಿದೆ ಕಾವ್ಯ ಎಂದು ಹುಡುಕಾಡಿದರೂ ಸಿಗಲಿಲ್ಲ ಎಂಬುದೊಂದು ವಿಪರ್ಯಾಸ.   

ನಗರದೇವತೆ ಪಾತ್ರದಲ್ಲಿ ನಾಗೇಶ್ ನೃತ್ಯ ಪ್ರೇಕ್ಷಕರಲ್ಲಿ ವಿದ್ಯುತ್ ಸಂಚಾರವನ್ನುಂಟುಮಾಡುವಂತಿದೆ. ಬಿಜ್ಜಳ ಪಾತ್ರಧಾರಿ ಮಂಜುನಾಥರಿಗೆ ಪಾತ್ರವೇ ಅರ್ಥವಾಗಿಲ್ಲ. ಅವರು ಬಿಜ್ಜಳ ಎಂದರೆ ಸಿನೆಮಾದಲ್ಲಿರುವ ದುಷ್ಟ ಖಳನಾಯಕ ಎಂದು ತಿಳಿದಂತಿದೆ. ನಿಂತಲ್ಲಿ ನಿಲ್ಲಲಿಲ್ಲ, ಕುಂತಲ್ಲಿ ಕೂಡಲಿಲ್ಲ, ಸದಾ ಅನಗತ್ಯ ಚಲನೆಗಳನ್ನು ಮಾಡುತ್ತಾ, ಒಡೆದ ಗಂಟಲಲ್ಲಿ ಕರ್ಕಶ ಮಾತುಗಳನ್ನು ಹೊರಡಿಸುತ್ತಾ ನಿಜವಾಗಿಯೂ ಇಡೀ ನಾಟಕದಲ್ಲಿ ಖಳನಾಯಕರಾಗೇ ಕಾಡುವಲ್ಲಿ ಸಫಲರಾದರು. ಬಸವಣ್ಣನ ಪಾತ್ರದಾರಿ ಬಸವಣ್ಣ ಯಾವುದೇ ಕೋನದಲ್ಲೂ ಬಸವಣ್ಣ ಎನ್ನಿಸಲೇ ಇಲ್ಲ. ಇರುವುದರಲ್ಲಿ ಸಾವಂತ್ರಿ ಮತ್ತು ಕಲ್ಯಾಣಿ ಪಾತ್ರದಾರಿಗಳೇ ವಾಸಿ. ಉಳಿದೆಲ್ಲಾ ಪಾತ್ರಗಳೂ ಸಹ ಅದ್ಯಾಕೋ ಸಶಕ್ತವಾಗಿ ಮೂಡಿಬಂದಿಲ್ಲ. ಆಹಾರ್ಯಾಭಿನಯವನ್ನು ಹೊರತು ಪಡಿಸಿ ಆಂಗಿಕ, ವಾಚಿಕ ಹಾಗೂ ಸಾತ್ವಿಕ ಅಭಿನಯಗಳಲ್ಲಿ ಇನ್ನೂ ಎಲ್ಲಾ ಯುವ ನಟರು ಪಳಗಬೇಕಿದೆ. ಹಂಸಲೇಖರ ದೇಸಿ ಕಾಲೇಜು ಇನ್ನೂ ಹೆಚ್ಚಿನ ಪ್ರಾಯೋಗಿಕ ತರಬೇತಿಯನ್ನು ಕೊಡಬೇಕಿದೆ. ನಾಟಕದ ಅಭಿನಯ ಎಂದರೆ ಸಿನೆಮಾದ ಅಭಿನಯ ಅಲ್ಲಾ, ಸಿನೆಮಾದಲ್ಲಿ ಕಟ್ಶಾಟ್ ಮತ್ತು ರೀಟೇಕ್ಗಳಿವೆ, ಆದರೆ ನಾಟಕದಲ್ಲಿ ಒಂದೇ ಶಾಟ್, ಅದು ಮಾಸ್ಟರ್ ಶಾಟ್, ಸಾವಿರಾರು ಪ್ರೇಕ್ಷಕರೆ ಕ್ಯಾಮರಾಗಳು ಎನ್ನುವುದನ್ನು ನಟರಿಗೆ ತಿಳಿಹೇಳಬೇಕಾಗಿದೆ.  

ಚಾರಿತ್ರಿಕ ವಿಷಯವನ್ನಿಟ್ಟುಕೊಂಡು ರಚಿಸಲಾದ "ಶಿವರಾತ್ರಿ" ಯಲ್ಲಿ ಕೆಲವೊಂದು ಊಹಾತ್ಮಕ ಪಾತ್ರಗಳು (ಬಸವಣ್ಣ ಮತ್ತು ಬಿಜ್ಜಳನನ್ನು ಹೊರತುಪಡಿಸಿ ಬಹುತೇಕ ಪಾತ್ರಗಳು ಕಾಲ್ಪನಿಕವೇ) ಹಾಗೂ ಸಂಪೂರ್ಣ ಕಲ್ಪನೆಯ ಸನ್ನಿವೇಶಗಳನ್ನು ಸೃಷ್ಟಿಸುವ ಮೂಲಕ ಬಸವಕಲ್ಯಾಣದ ಅವನತಿಯನ್ನು ಹೇಳುವ ಪ್ರಯತ್ನವೇ ನಾಟಕದ ಮೂಲ ಉದ್ದೇಶವಾಗಿದೆ. ಅಸಂಗತವೆನ್ನಿಸಿದರೂ ಸಾಂಕೇತಿಕವಾಗಿ ಸೃಷ್ಟಿಸಲಾದ ನಗರದೇವತೆಯ ಪಾತ್ರ ಇಡೀ ನಾಟಕದ ಆತ್ಮದಂತೆ ಮೂಡಿಬಂದಿದೆ. ಶಿವರಾತ್ರಿಯ ಒಂದೇ ದಿನದಲ್ಲಿ ಇಡೀ ಕಲ್ಯಾಣದ ಜಾತಕವನ್ನು ಬಿಚ್ಚಿಡುವ ದಾವಂತಕ್ಕೆ ನಾಟಕ ಸಾಕ್ಷಿಯಾಗಿದೆ. ಬಸವಣ್ಣನವರ ನಿರ್ಗಮನದಿಂದ ಕಲ್ಯಾಣ ಅನಾಥವಾಯಿತು, ಬಿಜ್ಜಳನ ಹತ್ಯೆಯಿಂದ ರಾಜ್ಯ ಪತನವಾಯಿತು ಎಂಬಲ್ಲಿಗೆ ನಾಟಕ ಸಮಾಪ್ತಿಯಾಯ್ತು, ಆದರೆ ಮುಂದೇನಾಯಿತು...... ಹಿಂದೇನಾಗಿತ್ತು........ ಎಲ್ಲವೂ ನಿಗೂಢ.


                                                                -ಶಶಿಕಾಂತ ಯಡಹಳ್ಳಿ  

 
  
      
   



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ