ಶುಕ್ರವಾರ, ಜನವರಿ 8, 2016

'ಅನುಭವ ವಿಸ್ತರಿಸಿದ ಸೃಷ್ಟಿ ಅಕಾಡೆಮಿ'

ಕಥೆಗಾರ ಹನುಮಂತ ಹಾಲಗೇರಿಯವರ ಅನುಭವ ಕಥನ :


ಶಾಲಾ ಕಾಲೇಜುಗಳಲ್ಲಿ ನಾಟಕ ಮಾಡಿ ಶಹಬ್ಬಾಸ್ ಅನಿಸಿಕೊಳ್ಳುತ್ತಿದ್ದ ನನ್ನಲ್ಲಿ ನಟನಾಗಬೇಕು ಎಂಬ ಹುಚ್ಚು ಆಗಾಗ ತಲೆಗೇರಿಬಿಟ್ಟಿತ್ತುಕುಣಿಗಲ್ ಕೆಂಪಾಪುರದಲ್ಲಿ ಎನ್ಜಿಓ ಒಂದರಲ್ಲಿ ಸುಜಲ ಜಲಾನಯನದಲ್ಲಿ ಕೆಲಸ ಮಾಡುತ್ತಿದ್ದ ನಾನು ಅಲ್ಲಿನ ಏಕತಾನತೆ ಮತ್ತು ಹೊಲಸು ವ್ಯವಸ್ಥೆಯಿಂದಾಗಿ ಬೇಸತ್ತು  ಒಂದು ಬೆಳಗು ಸೀದ ಬೆಂಗಳೂರು ಬಸ್ ಹಿಡಕೊಂಡು ಬಂದು ಬಿಟ್ಟಿದ್ದೆ. ಬೆಳಗ್ಗೆ ಪ್ರಜಾವಾಣಿಯಲ್ಲಿ ಪ್ರಮೋಟರ್ ಆಗಿ ಮನೆ ಮನೆಗೆ ಪೇಪರ್ ಹಾಕೋ ಕೆಲಸ ಮಾಡುತ್ತಾ ಸಂಜೆ ರವೀಂದ್ರ ಕಲಾಕ್ಷೇತ್ರ, ಅಲ್ಲಿ ಇಲ್ಲಿ ನಾಟಕಗಳ ಪಾತ್ರಗಳಿಗಾಗಿ ಹಲ್ಲುಗಿಂಜುತ್ತಾ ನನ್ನಂಥ ಅಲೆಮಾರಿ ಗೆಳೆಯರೊಂದಿಗೆ ಅಲೆಯುತ್ತಾ ಕಾಲ ಕಳಿಯುತ್ತಿದ್ದೆ.

 ಘಾಟೆ ಭವನದಲ್ಲೊಂದು ಪ್ರೀಯಾಗಿ ಆ್ಯಕ್ಟಿಂಗ್ ಕ್ಲಾಸ್ ನಡೆಯುತ್ತೆ ಸೇರ್ಕೊ ಅಂತ ಯಾರೋ ಹೇಳಿದ್ರಿಂದ ಅಲ್ಲಿಗೆ ಹೋದೆ. ಅಲ್ಲಿ ಶಶಿಕಾಂತ ಯಡಹಳ್ಳಿಯವರು ಸಿಪಿಐನ ಇಪ್ಟಾ ಘಟಕದೊಂದಿಗೆ ಜಂಟಿಯಾಗಿ ಸೃಷ್ಟಿ ಅಭಿನಯ ಕಾರ್ಯಾಗಾರ ಮಾಡುತ್ತಿದ್ದರು. ಭಾನುವಾರಕ್ಕೊಮ್ಮೆ 5 ತಿಂಗಳವರೆಗೆ ನಡೆಯುವ ಕಾರ್ಯಾಗಾರಕ್ಕೆ ಕೇವಲ 500 ರೂ.ಪ್ರವೇಶ ನಿಧಿ ಅಂತ ಕೊಡಬೇಕಿತ್ತು. ದುರಾದೃಷ್ಟಕ್ಕೆ ಆಗ ನನ್ನ ಹತ್ತಿರ ಅಷ್ಟೂ ದುಡ್ಡಿರಲಿಲ್ಲ. ಶಶಿ ಸರ್ ಮುಂದೆ ಕೈ ಚಾಚಿ " ನನ್ನ ಹತ್ತಿರ ಇಷ್ಟೇ ಇರೋದು ಸರ್" ಅಂತ ನೂರರ ಎರಡು ನೋಟು ಹಿಡಿದಿದ್ದೆ. ಮುಂದೆ ಕೊಟ್ರಾಯಿತು ಬಿಡು ಎಂದು ನನಗೆ ಅರ್ಜಿ ಕೊಟ್ಟಿದ್ದರು.

ಯಡಹಳ್ಳಿಯವರು ಆಗಲೇ ತಮ್ಮ ವೈಚಾರಿಕತೆಯಲ್ಲಿ ಎಷ್ಟೊಂದು ಸ್ಪಷ್ಟತೆ ರೂಡಿಸಿಕೊಂಡಿದ್ದರೆಂದರೆ ತಮ್ಮ ಕ್ಲಾಸಿಗೆ ಯಾರಾದ್ರೂ ಕುಂಕುಮ, ನಾಮ ಹಚ್ಕೊಂಡು ಬಂದ್ರೆ ಅವರೊಂದಿಗೆ ಜಗಳಕ್ಕೆ ನಿಂತು ಬೀಡುತ್ತಿದ್ದರು. "ನಿಮ್ಮ ಚಪ್ಲಿ ಹೊರಗ ಬಿಡ್ತಿರಿಲ್ಲೋ.. ಹಂಗ ನಿಮ್ಮ ಜಾತಿ, ಧರ್ಮ ಸುಟ್ಟ ಸುಡಗಾಡು ಎಲ್ಲಾನೂ ಹೊರಗಡೆ ಬಿಟ್ಟು ಬರ್ರಿ. ಕ್ಲಾಸ್ ಒಳಗ ನೀವು ಶುದ್ಧ ಮನುಷ್ಯರಾಗಿ ಬರಬೇಕು." ಅಂತಿದ್ರು. ಆಗಷ್ಟೆ ಸೃಷ್ಟಿ ಕಾರ್ಯಾಗಾರದಿಂದ ತರಬೇತಿ ಪಡೆದು ಹೀರೋ ಆಗಿದ್ದ ನೆನಪಿರಲಿ ಪ್ರೇಮ್ ಸಹ ಬಂದು ನಮಗೆ ಅಭಿನಯ ಹೇಳಿಕೊಟ್ಟಿದ್ದರು. ಕೆಂಗುಲಾಭಿ ಚಿತ್ರ ನಿರ್ದೇಶಿಸುತ್ತಿರುವ ಶ್ರೀಧರ ಜಾವೂರ ಸಹ ಸೃಷ್ಟಿಯ ವಿದ್ಯಾರ್ಥಿಯೇ. ಸೃಷ್ಟಿಯ ಅಂದಿನ ಗೆಳೆತನದಿಂದಲೇ ಇಂದು ಕೆಂಗುಲಾಬಿ ಸಿನೆಮಾ ಆಗುವ ಹಂತ ತಲುಪಿದ್ದು.

ಅವರ ಕಾರ್ಯಾಗಾರ ಕೇವಲ ಕ್ಲಾಸ್ ರೂಮಿಗೆ ಮಾತ್ರ ಸೀಮಿತವಾಗಿರದೆ, ಮೊಬೈಲ್ನಲ್ಲಿ ಕಿರು ಚಿತ್ರ ಮಾಡುವುದು, ಒಳ್ಳೊಳ್ಳೆ ನಾಟಕಗಳಿಗೆ ಕರೆದುಕೊಂಡು ಹೋಗುವುದು, ಸಂವಾದಗಳಿಗೆ ಕರೆದುಕೊಂಡು ಹೋಗುವುದು, ಅಲ್ಲಿ ಪ್ರಶ್ನೆ ಕೇಳುವಂತೆ ಹುರಿದುಂಬಿಸುವುದು, ಹಿಂಜರಿದರೆ ತಾವೇ ಪ್ರಶ್ನೆ ಬರೆದುಕೊಟ್ಟು ಪ್ರೇರೆಪಿಸುವುದು, ರಂಗಭೂಮಿ ಸಂಬಂಧದ ಪ್ರತಿಭಟನೆಗಳಿಗೆ ಕರೆದುಕೊಂಡು ಹೋಗುವುದು. ಸಿನೆಮಾ ಶೂಟಿಂಗ್ ಗಳಿಗೆ ಕರೆದೊಯ್ಯುವುದು, ಮೊಬೈಲ್ನಲ್ಲಿ ಕಿರುಚಿತ್ರ ಮಾಡಿಸುವುದು ಇವೆಲ್ಲ ಯಡಹಳ್ಳಿ ಮಾಡಿಸುತ್ತಿದ್ದರು.

ಅವರ ಕಾರ್ಯಾಗಾರದಲ್ಲಿಯೇ ಚಿಕ್ಕದೊಂದು ನಾಟಕ ಬರೆದು ಗೆಳೆಯರೊಂದಿಗೆ ಅಭಿನಯಿಸಿದ್ದೆ. ನನ್ನ ಬರವಣಿಗೆ ನೋಡಿ "ಬರವಣಿಗೆ ಚಲೋ ಐತಿ ನಿಂದು" ಅಂತ ಬೆನ್ನು ತಟ್ಟಿದ್ದರು. ಆಗ ವಾರ್ತಾಭಾರತಿ ಪತ್ರಿಕೆಗೆ ರಂಗಭೂಮಿ ವಿಮರ್ಶೆ ಬರೆಯುತ್ತಿದ್ದ ಶಶಿಕಾಂತ ಅವರು, ನನಗೂ ಅಲ್ಲಿ ಬರೆಯಲು ಪ್ರೇರೆಪಿಸಿದರು. ಅಷ್ಟೇ ಅಲ್ಲದೆ "ನೀನು ವಾರ್ತಾಭಾರತಿ ಪತ್ರಿಕೆಗೆ ಕೆಲಸಕ್ಕೆ ಸೇರ್ಕೋ ನಾನು ಬಷೀರ ಅವರಿಗೆ ಹೇಳ್ತಿನಿ" ಎಂದು ನನ್ನ ಬದುಕಿಗೆ ದೊಡ್ಡ ತಿರುವನ್ನು ಕೊಟ್ಟವರೇ ಯಡಹಳ್ಳಿ ಸರ್.

ಸುಮಾರು 15 ವರ್ಷಗಳಿಂದೇ  ಅದೇ ಬದ್ಧತೆಯಿಂದ ಯಡಹಳ್ಳಿ ಸರ್ ಸೃಷ್ಟಿ ಕಾರ್ಯಾಗಾರವನ್ನು ನಡೆಸುತ್ತಾ ಬಂದಿರುವ ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೃಷ್ಟಿಯಿಂದ ತರಬೇತಿ ಪಡೆದು ಸಿನೆಮಾ, ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದಾರೆ. "ನಿನೊಬ್ಬ ಮಾತ್ರ ಹೊರಗೆ ಹೋಗಿ ಕಥೆ ಬರೆಯುತ್ತಿದ್ದಿ" ಎಂದು ಆಗಾಗ ಯಡಹಳ್ಳಿಯವರು ನನ್ನನ್ನು ಕಾಲೆಳೆಯುತ್ತಿರುತ್ತಾರೆ.

ಮುಂದೆ ನಾಟಕ ಅಕಾಡೆಮಿಯಿಂದ ಚಿ.ಶ್ರೀನಿವಾಸರಾಜು, ಡಾ.ವಿಜಯಮ್ಮ ಅವರು ನಡೆಸಿದ ನಾಟಕ ರಚನಾ ಕಾರ್ಯಾಗಾರದಲ್ಲಿ ಶಶಿ ಸರ್ ಮತ್ತು ನಾನು ಭಾಗವಹಿಸಿದ್ದೇವು. ಕಾರ್ಯಾಗಾರದ ಕೊನೆಯ ದಿನ 60 ಶಿಭಿರಾರ್ಥಿಗಳು ಸ್ಥಳದಲ್ಲೆ ಕುಳಿತು ಬರೆದ ಕೊಟ್ಟ ನಾಟಕಗಳಲ್ಲಿ ಶಶಿಕಾಂತ, ನನ್ನದು ಸೇರಿ ಕೇವಲ 5 ನಾಟಕಗಳು ಮಾತ್ರ ಪ್ರದರ್ಶನಕ್ಕೆ ಯೋಗ್ಯವಾಗಿದ್ದವು ಮುಂದೆ ಅವು ಪ್ರದರ್ಶನ ಕಂಡಿದ್ದವು. ನನ್ನ ಶಿಷ್ಯ ನೀನು, ನನ್ನ ಜೊತೆಗೆ ನಾಟಕ ಬರೆದು ಗೆದ್ದುಬಿಟ್ಟೆ ಎಂದು ಯಡಹಳ್ಳಿ ಅಂದು ನಗಾಡಿದ್ದರು. (ನನ್ನ ನಾಟಕದ ವಸ್ತುವನ್ನು ಮಾತ್ರ ಬಹುವಾಗಿ ಇಷ್ಟಪಟ್ಟಿದ್ದ ಡಾ.ವಿಜಯಮ್ಮ ಮತ್ತು ಶ್ರೀನಿವಾಸರಾಜು ಮೇಷ್ಟ್ರು ನನ್ನನ್ನು ಕರೆಸಿಕೊಂಡು ತಿದ್ದಿ ತೀಡಿ, ಪ್ರದರ್ಶನಕ್ಕೆ ಯೋಗ್ಯವಾಗಿಸಿದ್ದರು.)

ಒಂದೆರಡು ವರ್ಷ ರಂಗಭೂಮಿ ವಿಶ್ಲೇಷಣೆ ಎಂಬ ರಂಗಭೂಮಿಗೆ ಮೀಸಲಾಗಿದ್ದ ಪತ್ರಿಕೆಯೊಂದನ್ನು ಹೊರತಂದರು. ಸಾಕಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಕಂಡದ್ದನ್ನು ನೇರವಾಗಿ ಬರೆಯುವ ಯಡಹಳ್ಳಿ, ತಮ್ಮ ಬರವಣಿಗೆಯುದ್ದಕ್ಕೂ ಸಾಂಸ್ಕೃತಿಕ ದಲ್ಲಾಳಿತನವನ್ನು ಖಂಡಿಸುತ್ತಲೇ ಬಂದವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರತಿವರ್ಷ ಸುಮಾರು 300 ಕೋಟಿ ಅನುದಾನ ನೀಡಲಾಗುತ್ತದೆ. ಇದರಲ್ಲಿ ಶೇ.70ರಷ್ಟು ಅನುದಾನ ದಲ್ಲಾಳಿಗಳಿಗೆ ಸೋರಿಕೆಯಾಗುತ್ತಿರುವುದು ಎಲ್ಲರಿಗೂ ಗೊತ್ತಿರುವಂಥದ್ದೆಅಂತ ಎಲ್ಲ ದಲ್ಲಾಳಿಗಳ ಹುನ್ನಾರಗಳನ್ನು, ಅಧಿಕಾರಿಗಳನ್ನು, ಮಂತ್ರಿ ಮಹೋದಯರನ್ನು ನೇರವಾಗಿ ಖಂಡಿಸುತ್ತಾ ಬಂದವರು. ಬಹಳಷ್ಟು ಸಲ ನಾಟಕ ಪ್ರದರ್ಶನವನ್ನು ಕಟುವಾಗಿ ವಿಮರ್ಶಿಸುವುದರಿಂದ ಯಡಹಳ್ಳಿ ಬರುತ್ತಾರೆಂದರೆ ಒಂದು ರೀತಿಯ ಹೆದರಿಕೆ ಇರುತ್ತದೆ.

ನಾನು ಕಲಿತ ಸೃಷ್ಟಿ ಶಾಲೆಯಲ್ಲಿ ನಾನು ಪಾಠ ಮಾಡಲು ಇದೇ ಭಾನುವಾರ ಹೋಗುತ್ತಿರುವುದರಿಂದ ಖುಷಿಯಲ್ಲಿ ಇದೆಲ್ಲ ನೆನಪಾಯಿತು. ಕಥಿ ಬರಿಬಹುದು, ಆದ್ರೆ ಕಥನ ತಂತ್ರಗಳ ಕುರಿತು ಕಥಿ ಹೇಳಕ್ಕೆ ನನಗೆ ಬರೂದಿಲ್ಲ ಅಂತ ಹೇಳುತ್ತಲೇ ಹಲವು ಸಲ ತಪ್ಪಿಸಿಕೊಂಡಿದ್ದೆ. ಸಲ ಮೇಷ್ಟ್ರ ಪ್ರೀತಿಯ ಒತ್ತಾಯಕ್ಕೆ ಮಣಿಯಬೇಕಾಯಿತು.

                                                                            - ಹನುಮಂತ  ಹಾಲಗೇರಿ





ಗುರುವಾರ, ಜನವರಿ 7, 2016

’ಆಲದಾಳ-80’ ಕಾರ್ಯಕ್ರಮದಲ್ಲಿ ಗುಡಿಹಳ್ಳಿ ಆವಾಂತರ :



ವೃತ್ತಿ ಕಂಪನಿ ರಂಗಭೂಮಿಯ ಪ್ರಮುಖ ನಾಟಕಕಾರರಾದ ಆಲದಾಳ ಕವಿಗಳಿಗೆ 80 ವರ್ಷ ತುಂಬಿದ ಸಂದರ್ಭದಲ್ಲಿಹಾಲದಾಳ -80ಎನ್ನುವ ಅಭಿನಂದನಾ ಕಾರ್ಯಕ್ರಮವನ್ನು ಕರ್ನಾಟಕ ನಾಟಕ ಅಕಾಡೆಮಿಯು ಜನವರಿ 4 ರಂದು ಗುಲ್ಬರ್ಗಾದಲ್ಲಿ ಆಯೋಜಿಸಿತ್ತು. ಅದರ ಭಾಗವಾಗಿ ವಿಚಾರ ಸಂಕಿರಣವನ್ನೂ ಹಾಗೂ ರಂಗಗೀತೆಗಳ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ವಿಚಾರಸಂಕಿರಣದಲ್ಲಿಗ್ರಾಮೀಣ ರಂಗಭೂಮಿ ಮತ್ತು ಆಲದಾಳಎನ್ನುವ ವಿಷಯದ ಬಗ್ಗೆ ಮಾತನಾಡುತ್ತಾ ಡಾ.ಬಸವರಾಜ್ ಸಬರದರವರು "ರಾಜ್ಯೋತ್ಸವ ಪ್ರಶಸ್ತಿಯಲ್ಲಿ ವೃತ್ತಿರಂಗಭೂಮಿಯವನ್ನೇ ಹೆಚ್ಚಾಗಿ ಪರಿಗಣಿಸಿದ್ದು ಹವ್ಯಾಸಿ ಹಾಗೂ ಗ್ರಾಮೀಣ ರಂಗಭೂಮಿಯನ್ನು ಕಡೆಗಣಿಸಲಾಗಿದೆ...  ಕೇವಲ ಹೆಚ್.ಜಿ.ಸೋಮಶೇಖರರವರಿಗೆ ಮಾತ್ರ ಪ್ರಶಸ್ತಿ ಕೊಡಿಸಲಾಗಿದೆ. ಕುರಿತ ಲೇಖನಸಂಸರಂಗಪತ್ರಿಕೆಯಲ್ಲಿ ಪ್ರಕಟಗೊಂಡಿದೆ. ಹಾಗೂ ಅದು ಸತ್ಯವೂ ಆಗಿದೆ. ರೀತಿಯ ತಾರತಮ್ಯ ಅಸಹನೀಯ..." ಎಂದು ಖಡಾಖಂಡಿತವಾಗಿ ಹೇಳಿದರು.

ಇದರಿಂದ ತಲ್ಲಣಗೊಂಡ ನಾಟಕ ಅಕಾಡೆಮಿಯ ಸಹಸದಸ್ಯ  ಗುಡಿಹಳ್ಳಿ ನಾಗರಾಜರವರು "ಸಂಸಪತ್ರಿಕೆಯಲ್ಲಿ ತಪ್ಪು ಗ್ರಹಿಕೆಯಿಂದ ಲೇಖನ ಬರೆಯಲಾಗಿದೆ. ಆದರೆ ನಾವು ರಂಗಭೂಮಿಯ ಎಲ್ಲಾ ಪ್ರಕಾರಗಳನ್ನು ಪರಿಗಣಿಸಿಯೇ ಪ್ರಶಸ್ತಿಗಳನ್ನು ಕೊಡಿಸಲಾಗಿದೆ. ಸೋಮಶೇಖರ್ ಮಾತ್ರವಲ್ಲ ವೀಣಾ ಆದ್ವಾಣಿ ಹಾಗೂ ಕರಿಯಪ್ಪ ಮಾಸ್ತರ್ಗಳಿಗೂ ರಾಜ್ಯೋತ್ಸವ ಪ್ರಶಸ್ತಿ ದೊರಕಿವೆ..." ಎಂದು ತಮ್ಮ ವಿತಂಡವಾದದ ಸಮರ್ಥನೆಗಳನ್ನು ಕೊಡತೊಡಗಿದರು. ಮೊದಲನೆಯದಾಗಿ ಒಂದು ಸೆಮಿನಾರ್ ನಡೆದಾಗ ಸೆಮಿನಾರನಲ್ಲಿ ವಿಷಯಮಂಡನೆ ಮಾಡಲು ಆಹ್ವಾನಿಸಿದವರನ್ನು ಹೊರತು ಪಡಿಸಿ ನಿರೂಪಣೆ ಮಾಡುವವರು ಅನಗತ್ಯವಾಗಿ ಮಾತನಾಡುವುದೇ ಅಸಭ್ಯ ವರ್ತನೆ. ಮಾತನಾಡಲೇಬೇಕೆಂದರೆ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದವರ ಅನುಮತಿ ಪಡೆಯಬೇಕು. ಇಲ್ಲವೇ ಕ್ಲೆರಿಫಿಕೇಶನ್ ಕೊಡಲೇಬೇಕೆಂದರೆ ವೇದಿಕೆ ಹಂಚಿಕೊಂಡಿದ್ದ ನಾಟಕ ಅಕಾಡೆಮಿಯ ಅಧ್ಯಕ್ಷ ಶೇಖ ಮಾಸ್ತರ್ ತಮ್ಮ ಸರದಿ ಬಂದಾಗ ಮಾತಾಡಬೇಕು. ಆದರೆ ಒಬ್ಬ ಸಹಸದಸ್ಯನಾದ ಗುಡಿಹಳ್ಳಿ ಹೀಗೆ ದುಂಡಾವರ್ತಿ ಮಾಡಿದ್ದೇ ಸರ್ವಾಧಿಕಾರದ ಪರಮಾವಧಿ. ಸೆಮಿನಾರ್ನಲ್ಲಿ ಮಾತನಾಡುವವರಿಗೆ ತಮ್ಮ ವಿಷಯ ಮಂಡನೆ ಮಾಡಲು ಸಂಪೂರ್ಣ ಸ್ವಾತಂತ್ರ್ಯವಿರುತ್ತದೆ. ಕುರಿತು ತದನಂತರ ಬೇಕಾದರೆ ಸಂವಾದ ಗೋಷ್ಠಿ ಇದ್ದರೆ ಚರ್ಚಿಸಬಹುದಾಗಿದೆಆದರೆ ಗೋಷ್ಠಿಯ ವಿಚಾರಕ್ಕೆ ಸಂಬಂಧವಿಲ್ಲದ ವ್ಯಕ್ತಿ ನಡುವೆ ಬಂದು ಮೂಗು ತೂರಿಸುವುದು ಅತಿರೇಕವೆನಿಸುತ್ತದೆ. ವಿಚಾರ ಮಂಡಿಸುವವರ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗುತ್ತದೆ.

ಡಾ.ಬಸವರಾಜ್ ಸಬರದ

ವಿಚಾರಸಂಕಿರಣದ ಅಘೋಷಿತ ನಿಬಂಧನೆಯ ಗಡಿಗಳನ್ನು ಸ್ವಯಂಪ್ರೇರಣೆಯಿಂದ ಉಲ್ಲಂಘಿಸಿದ ಗುಡಿಹಳ್ಳಿ ಮಾಡಿಕೊಂಡ ಸಮರ್ಥನೆಗಳೇ ಬಾಲಿಷವಾದವುಗಳಾಗಿದ್ದವು. ತಪ್ಪು ಗ್ರಹಿಕೆ ಆಗಿದ್ದುಸಂಸಪತ್ರಿಕೆಗೂ ಅಲ್ಲಾ ಲೇಖನ ಬರೆದ ಪತ್ರಿಕೆಯ ಸಂಪಾದಕರಿಗೂ ಅಲ್ಲ. ಮೊದಲನೆಯದಾಗಿ ಡಾ.ಸಬರದರ ಬಾಯಲ್ಲಿಸಂಸರಂಗಪತ್ರಿಕೆ ಹಾಗೂ ಯಡಹಳ್ಳಿ ಎನ್ನುವ ಹೆಸರು ಕೇಳಿದ ತಕ್ಷಣವೇ ಗುಡಿಹಳ್ಳಿಯವರ ಮೈಮೇಲೆ ದೆವ್ವ ಬಂದಂತಾಗಿದೆ. ಬೆಂಗಳೂರು ಬಿಟ್ಟು ಗುಲ್ಬರ್ಗಕ್ಕೆ ಬಂದರೂ   ಪತ್ರಿಕೆ ಭೂತದಂತೆ ನನ್ನ ಹಿಂದೆ ಬಿದ್ದಿದೆಯಲ್ಲಾ ಎಂದು ಆಕ್ರೋಶ ಉಕ್ಕಿ ಬಂದಿದೆ. ಜೊತೆಗೆ ಮೈಕ್ ಬೇರೆ ಕೈಯಲ್ಲಿದೆ. ತಕ್ಷಣ ನಾಗರಾಜರ ವಿತಂಡವಾದ ಶುರುವಾಗಿದೆ. "ವೀಣಾ ಅದ್ವಾಣಿಯವರು ಗ್ರಾಮೀಣ ರಂಗಭೂಮಿಯವರು ಹಾಗೂ ಕರಿಯಪ್ಪ ಮಾಸ್ತರ್ ಹವ್ಯಾಸಿ ರಂಗಭೂಮಿಯವರು  ಆದ್ದರಿಂದ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಸಲಾಗಿದೆ..." ಎಂದು ಗುಡಿಹಳ್ಳಿ ಪುಂಗತೊಡಗಿದರು. ಇದನ್ನು ಕೇಳಿದ ಗುಲ್ಬರ್ಗಾದ ರಂಗಕರ್ಮಿಗಳು ಗುಡಿಹಳ್ಳಿಯ ಅಜ್ಞಾನಕ್ಕೆ ಮುಸಿಮುಸಿ ನಗತೊಡಗಿದರು. ಯಾಕೆಂದರೆ ಕರಿಯಪ್ಪ ಮಾಸ್ತರ್ ಪ್ರವೃತ್ತಿಯಲ್ಲಿ  ಪೇಟಿ ಮಾಸ್ತರ್. ಹವ್ಯಾಸಿ ರಂಗಭೂಮಿಯಲ್ಲಿ ಪೇಟಿ ಮಾಸ್ತರನಿಗೇನು ಕೆಲಸ?. ಪೇಟಿ ನುಡಿಸುವ ಮಾಸ್ತರ್ ಇರೋದೆ ವೃತ್ತಿ ರಂಗಭೂಮಿಯಲ್ಲಿ. ಇನ್ನು ವೀಣಾರವರು ಪಕ್ಕಾ ವೃತ್ತಿ ಕಂಪನಿ ನಾಟಕಗಳ ನಟಿ ಎನ್ನುವುದು ಉತ್ತರ ಕರ್ನಾಟಕ ಹಾಗೂ ಹೈದರಾಬಾದ ಕರ್ನಾಟಕದ ಸಮಸ್ತ ರಂಗಾಸಕ್ತರಿಗೂ ಗೊತ್ತಿದ್ದ ವಿಷಯ. ವೃತಿ ಕಂಪನಿ ನಟಿಯನ್ನು ಗ್ರಾಮೀಣ ರಂಗಭೂಮಿಯ ಕಲಾವಿದೆ ಎಂದು ಸಾಬೀತುಪಡಿಸಲು ಹರಸಾಹಸಪಟ್ಟ ಗುಡಿಹಳ್ಳಿಯನ್ನು ಅಸಹನೆಯಿಂದ ಸಭಿಕರು ನೋಡತೊಡಗಿದರು.

ಹವ್ಯಾಸಿ ರಂಗಭೂಮಿಗೆ ಅನ್ಯಾಯ ಆಗಿದೆಎಂದು ಸ್ವತಃ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹೆಚ್.ಜಿ.ಸೋಮಶೇಖರಾವ್ರವರೇಸಂಸರಂಗಪತ್ರಿಕೆಗೆ ಕೊಟ್ಟ ಸಂದರ್ಶನದಲ್ಲಿ ಹೇಳಿದ್ದಾರೆ. (2015 ಡಿಸೆಂಬರ್ ಸಂಚಿಕೆ) ’ಸಂಸಪತ್ರಿಕೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿಯ ಕುರಿತು ವಿವರವಾಗಿ ಬರೆಯಲಾಗಿದೆ. ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಕಮಿಟಿಯಲ್ಲಿ ರಂಗಭೂಮಿಯನ್ನು ಪ್ರತಿನಿಧಿಸಿದ ನಾ.ದಾಮೋದರ ಶೆಟ್ಟಿಯವರೂ ಅಸಮಾಧಾನ ಹೊರಹಾಕಿದ್ದಾರೆ. ಜೊತೆಗೆ ಜಾನಪದ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾದ್ಯಾಪಕರಾದ ಡಾ.ಬಸವರಾಜ ಸಬರದರವರುಹವ್ಯಾಸಿ ಹಾಗೂ ಗ್ರಾಮೀಣ ರಂಗಭೂಮಿಯವರಿಗೆ ಅನ್ಯಾಯ ಆಗಿದೆಎಂದು ವಿಚಾರ ಸಂಕಿರಣದಲ್ಲಿ ಹೇಳುತ್ತಿದ್ದಾರೆ.... ಆದರೂ ಗುಡಿಹಳ್ಳಿ ಸಾಹೇಬರು ಮಾತ್ರಅನ್ಯಾಯ ಆಗಿಲ್ಲ.... ಪ್ರಶಸ್ತಿಗಳು ಸಮರ್ಪಕವಾಗಿ ಹಂಚಿಕೆಯಾಗಿವೆಎಂದು ಬಡಬಡಿಸುತ್ತಿದ್ದಾರೆ.

ಅಸಲಿಗೆ ರಾಜ್ಯೋತ್ಸವ ಪ್ರಶಸ್ತಿಗೂ ಕರ್ನಾಟಕ ನಾಟಕ ಅಕಾಡೆಮಿಗೂ ಹಾಗೂ ಅದರ ಸಹಸದಸ್ಯರಾದ ಗುಡಿಹಳ್ಳಿಯವರಿಗೂ ಎಲ್ಲಿದೆ ನೇರ ಸಂಬಂಧ. ರಾಜ್ಯೋತ್ಸವ ಪ್ರಶಸ್ತಿಯನ್ನು ಕೊಡುವುದು ಕರ್ನಾಟಕ ರಾಜ್ಯ ಸರಕಾರವೇ ಹೊರತು ನಾಟಕ ಅಕಾಡೆಮಿಯಲ್ಲ. ರಾಜ್ಯಸರಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ರಾಜ್ಯಪ್ರಶಸ್ತಿ ಆಯ್ಕೆಗೆ ಒಂದು ಕಮಿಟಿಯನ್ನು ಆಯ್ಕೆ ಮಾಡಿರುತ್ತದೆ. ಹಾಗೂ ಅಕಾಡೆಮಿಯ ಅಧ್ಯಕ್ಷರಾಗಿರುವವರು ಕಮಿಟಿಯಲ್ಲಿ ಒಬ್ಬ ಸದಸ್ಯರಾಗಿ ಪ್ರಶಸ್ತಿಗೆ ಅರ್ಹರಾದವರ ಹೆಸರನ್ನು ಸೂಚಿಸಬಹುದಾಗಿದೆಯೇ ಹೊರತು ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳುವ ಹಾಗಿಲ್ಲ. ಮೊದಲೇ ಹವ್ಯಾಸಿ ಹಾಗೂ ಗ್ರಾಮೀಣ ರಂಗಭೂಮಿಯ ಬಗ್ಗೆ ಪರಿಚಯವೇ ಇಲ್ಲದ.... ರಂಗಭೂಮಿ ಎಂದರೆ ಕೇವಲ ವೃತ್ತಿರಂಗಭೂಮಿ ಎನ್ನುವ ಭ್ರಮೆಯಲ್ಲಿರುವ ಶೇಖ ಮಾಸ್ತರರು ತಮಗೆ ತಿಳಿದ ವೃತ್ತಿ ರಂಗಭೂಮಿಯವರ ಹೆಸರುಗಳನ್ನು ಸೂಚಿಸಿದ್ದಾರೆ. ಅದರಲ್ಲಿ ಕೆಲವರ ಹೆಸರನ್ನು ಆಯ್ಕೆ ಸಮಿತಿ ಪರಿಗಣಿಸಿದೆ. ಇದು ಗೊತ್ತಿದ್ದೂ ಕಳ್ಳ ಎಂದ ತಕ್ಷಣ ಅದ್ಯಾಕೆ ಗುಡಿಹಳ್ಳಿ ಸಾಹೇಬರು ಹೆಗಲು ಮುಟ್ಟಿ ನೋಡಿಕೊಂಡು ತಲ್ಲಣಗೊಂಡರು?. ಹವ್ಯಾಸಿ ರಂಗಭೂಮಿಗೆ ರಾಜ್ಯಪ್ರಶಸ್ತಿ ಆಯ್ಕೆಯಲ್ಲಿ ಅನ್ಯಾಯ ಆಗಿದೆ ಅಂದಾಕ್ಷಣ ಎಗರಾಡತೊಡಗಿದರು....?

ಹಾಗೆ ಗುಡಿಹಳ್ಳಿಯವರೇ ಏನಾದರೂ ರಾಜ್ಯೋತ್ಸವ ಪ್ರಶಸ್ತಿ ನಿರ್ಣಯಿಸುವವರಾಗಿದ್ದರೆ ಬೇರೆ ಮಾತಿತ್ತು. ಆದ ಅನ್ಯಾಯದ ಹೊಣೆಗೆ ಉತ್ತರವನ್ನೋ ಸಮರ್ಥನೆಯನ್ನೋ ಕೊಡಬೇಕಾಗಿತ್ತು. ತಮಗೆ ಸಂಬಂಧವೇ ಇಲ್ಲದ ವಿಷಯದ ಬಗ್ಗೆ ಇಷ್ಟೆಲ್ಲಾ ಮಾತಾಡಿ ತಮ್ಮದೇ ಅಕಾಡೆಮಿಯ ವೇದಿಕೆಯಲ್ಲಿ ಸೀನ್ ಕ್ರಿಯೇಟ್ ಮಾಡುವುದು ಬೇಕಿರಲಿಲ್ಲ. ಇಷ್ಟಕ್ಕೂ ಗುಡಿಹಳ್ಳಿಯವರು ಗೋಪಾಲಕೃಷ್ಣ ನಾಯರಿಯವರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಕೊಡಿಸಲು ಕೊನೆಯ ಕ್ಷಣದವರೆಗೂ ಶತಾಯ ಗತಾಯ ಪ್ರಯತ್ನಿಸಿದ್ದು ಬಹಿರಂಗ ಸತ್ಯ. ಶೇಖ ಮಾಸ್ತರ್ ಹಿಂದೆ ನಕ್ಷತ್ರಿಕನ ಹಾಗೆ ಬೆನ್ನುಬಿದ್ದಿದ್ದರು. ಶೇಖ ಮಾಸ್ತರರಿಗೆ ಅದೇನು ಅಸಹನೆ ಇತ್ತೋ ಗೊತ್ತಿಲ್ಲ... ಆಯ್ಕೆ ಸಮಿತಿಯ ಮುಂದೆ ನಾಯರಿಯವರ ಹೆಸರನ್ನೇ ಅವರು ಪ್ರಸ್ತಾಪಿಸಲಿಲ್ಲ. ನಾಯರಿಯವರಿಗೆ ರಾಜ್ಯೋತ್ಸವ ಪ್ರಶಸ್ತಿ ಬರಲಿಲ್ಲ. ಇಷ್ಟಕ್ಕೂ ಗುಡಿಹಳ್ಳಿ ನಾಯರಿಯವರಿಗೆ ಪ್ರಶಸ್ತಿ  ಕೊಡಿಸಲು ಯಾಕೆ ಅಷ್ಟೊಂದು ಪರದಾಡಿದರು...? ಲಾಭ ಇಲ್ಲದೇ ಏನನ್ನೂ ಮಾಡದ (ಪ್ರೀತಿಯನ್ನೂ) ಮನುಷ್ಯ ಸುಖಾಸುಮ್ಮನೆ ನಾಯರಿಯವರಿಗೆ ಪ್ರಶಸ್ತಿ  ಕೊಡಿಸಲು ತನ್ನೆಲ್ಲಾ ಪ್ರಭಾವ ವಶೀಲಿ ಬಳಸುತ್ತಾನೆಂದರೆ ಯಾರೂ ನಂಬಲಾರರು. ಅದಕ್ಕೂ ಕಾರಣ ಇತ್ತು.

ಅದೇನೆಂದರೆ.... ಕೇಂದ್ರ ಸರಕಾರದ ಸಂಸ್ಕೃತಿ ಮಂತ್ರಾಲಯದ ಅನುದಾನ ಆಯ್ಕೆ ಸಮಿತಿಗೆ ಗೋಪಾಲಕೃಷ್ಣ ನಾಯರಿಯವರು ಕರ್ನಾಟಕದಿಂದ ಸದಸ್ಯರಾಗಿದ್ದಾರೆ. ಅವರ ಹಿಂದೆ ಮುಂದೆ ಬಿದ್ದ ಗುಡಿಹಳ್ಳಿ ಮಹಾಶಯರಿಗೆ ಅನುದಾನ ಪಡೆಯಲು ಯಾವುದೇ ಅರ್ಹತೆ ಇಲ್ಲದಿದ್ದರೂ ತಮ್ಮ ಹೆಸರಲ್ಲಿ ಹಾಗೂ ತಮ್ಮ ಮಗನ ಹೆಸರಲ್ಲಿ ಲಕ್ಷಾಂತರ ರೂಪಾಯಿ ಹಣವನ್ನು ಗಿಟ್ಟಿಸಿಕೊಂಡರು. ಅದಕ್ಕೆ ರೆಕಮೆಂಡ್ ಮಾಡಿದ್ದು ನಮ್ಮ ರಂಗಕರ್ಮಿ ನಾಯರಿ ಸಾಹೇಬರು. ನಾಟಕ ಮಾಡಿಸುತ್ತೇನೆಂಬ ನೆಪಹೇಳಿ ತಂದೆ ಮಗ ಇಬ್ಬರ ಹೆಸರಲ್ಲೂ ಹಣ ಪಡೆದ ಗುಡಿಹಳ್ಳಿಯವರು ತಮಗೆ ಅನುದಾನ ಕೊಡಿಸಿದ ನಾಯರಿಯವರ ಋಣಸಂದಾಯ ಮಾಡಲು ರಾಜ್ಯೋತ್ಸವ ಪ್ರಶಸ್ತಿ ಕೊಡಿಸುತ್ತೇನೆಂದು ಭರವಸೆ ಇತ್ತಿದ್ದರು. ಹಾಗೂ ಅದಕ್ಕಾಗಿ ತಮ್ಮೆಲ್ಲಾ ಪ್ರಯತ್ನ ಮಾಡಿದರು. ಆದರೆ ಶೇಖ ಸಾಹೇಬರು ನಿರ್ಲಕ್ಷಿಸಿದ್ದರಿಂದ ನಾಯರಿಯವರಿಗೆ ಪ್ರಶಸ್ತಿ ತಪ್ಪಿಹೋಯಿತು. ಗುಡಿಹಳ್ಳಿಯವರಿಗೆ ಮುಖಭಂಗವಾಯಿತು. ಈಗ ನಾಟಕ ಅಕಾಡೆಮಿಗೆ ಸಂಬಂಧಿಸದ ರಾಜ್ಯೋತ್ಸವ ಪ್ರಶಸ್ತಿಯ ಆಯ್ಕೆ ಕುರಿತು ಅಡ್ಡ ಮಾತಾಡಲು ಹೋದ ಗುಡಿಹಳ್ಳಿಯವರ ಅಧಿಕಪ್ರಸಂಗತನವನ್ನು ನೋಡಿ ಗುಲ್ಬರ್ಗಾದ ರಂಗಾಸಕ್ತರು ನಗುವಂತಾಯಿತು.

ಅಧಿಕಪ್ರಸಂಗದಿಂದ ಆದ ಅವಮಾನದ ಮೇಲೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆರ್.ಕೆ. ಹುಡುಗಿಯವರು ಪರೋಕ್ಷವಾಗಿ ಗುಡಿಹಳ್ಳಿಯವರನ್ನು ಅಣಕಿಸಿ ಗಾಯದ ಮೇಲೆ ಬರೆಯೆಳೆದುಬಿಟ್ಟರು. ಅದೇನಾಯ್ತೆಂದರೆ.... "ಹಾಲದಾಳ ಕವಿಗಳೊಬ್ಬರಿಗೇ ಅಭಿನಂದನಾ ಸನ್ಮಾನ ಮಾಡುವುದರ ಜೊತೆಗೆ ಅವರ ಪತ್ನಿಯವರಿಗೂ ಸೇರಿಸಿ ಸನ್ಮಾನ ಮಾಡುವುದು ಸೂಕ್ತ. ಯಶಸ್ವಿ ಪುರುಷನ ಹಿಂದೆ ಒಬ್ಬಳು ಮಹಿಳೆ ಇದ್ದೇ ಇರುತ್ತಾಳೆ. ಕೆಲವು ಪುರುಷರ ಹಿಂದೆ ಇಬ್ಬಿಬ್ಬರು ಮಹಿಳೆಯರೂ ಇರುತ್ತಾರೆ... " ಎಂದು ಹೇಳಿದ ಹುಡುಗಿಯವರು ಗುಡಿಹಳ್ಳಿಯತ್ತ ತುಂಟ ನೋಟ ಬೀರಿದರು. ಇದು ಅರ್ಥವಾಗುವವರಿಗೆ ಆಗಿಬಿಟ್ಟಿತ್ತು. ಅಂತವರ ತುಟಿಗಳಲ್ಲಿ ನಗೆ ಚಿಮ್ಮಿಬಿಟ್ಟಿತ್ತು. ’ಇಬ್ಬಿಬ್ಬರುಎನ್ನುವ ಶಬ್ಧ ಕೇಳುತ್ತಲೇ ತಬ್ಬಿಬ್ಬಾದ ಗುಡಿಹಳ್ಳಿ ಸಾಹೇಬರಿಗೆ ಸಾರ್ವಜನಿಕವಾಗಿಯೇ ಕರೆಂಟ್ ಹೊಡೆದಂತಾಯಿತು. ತದನಂತರ ಸೈಲೆಂಟ್ ಆಗಿ ಹೋದರು.

ನಾಟಕ ಅಕಾಡೆಮಿಯ ಅಧ್ಯಕ್ಷರಾದ ಶೇಖ ಮಾಸ್ತರ್ ತಮ್ಮದೇ ಕೋಮಿನ ನಾಟಕಕಾರರಿಗೆ ಅಕಾಡೆಮಿ ಖರ್ಚಲ್ಲಿ ಅದ್ದೂರಿ ಅಭಿನಂದನಾ ಸಮಾರಂಭವನ್ನು ಯಾಕೆ ಏರ್ಪಡಿಸಿದರು? ಇನ್ನೂ ಹಲವಾರು ವೃದ್ದ ಕಲಾವಿದರು ಈಗಲೂ ಒಪ್ಪೊತ್ತಿನ mಕ್ಕೂ ಪರದಾಡುತ್ತಿದ್ದಾರಲ್ಲಾ.. ಅವರಿಗೆ ಯಾಕೆ ಅಭಿನಂದನೆ ಸನ್ಮಾನ ಗೌರವ ಮಾಡುವುದಿಲ್ಲ’... ಇದು ಪಕ್ಕಾ ಜಾತಿ ಪ್ರೀತಿ ಅಲ್ಲವೇ..? ಸ್ವಜನ ಪಕ್ಷಪಾತ ಅಲ್ಲವೆ...? ಎನ್ನುವ ಅಪಸ್ವರಗಳೂ ಕೇಳಿಬಂದವು. ಹಲವಾರು ನಾಟಕಗಳನ್ನು ಬರೆದಿರುವ ಹಾಗೂ ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತರಾಗಿರುವ ಆಲದಾಳ ಕವಿಗಳು ಅಭಿನಂದನೆಗೆ ಅರ್ಹರು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ... ಕೆಲವು ರಂಗಗೀತೆಗಳನ್ನು ಹಾಡಿಸಿ... ನಾಲ್ಕು ಜನರನ್ನು ಕರೆದು ಸೆಮಿನಾರಲ್ಲಿ ಮಾತಾಡಿಸಿ... ಒಬ್ಬರಿಗೆ ಸನ್ಮಾನ ಮಾಡಲು  ನಾಟಕ ಅಕಾಡೆಮಿಯ ಸಿಬ್ಬಂದಿ ಹಾಗೂ ಸರ್ವಸದಸ್ಯರೂ ಗುಲ್ಬರ್ಗಕ್ಕೆ ಗುಳೆ ಹೋಗುವ ಅಗತ್ಯವಿತ್ತಾ....? ಒಂದು ಪುಟ್ಟ ಕಾರ್ಯಕ್ರಮಕ್ಕೆ ಲಕ್ಷಾಂತರ ರೂಪಾಯಿ ಸರಕಾರಿ ಹಣ ಖರ್ಚು ಮಾಡುವ ಅಗತ್ಯವಿತ್ತಾ? ಎನ್ನುವುದು ಪ್ರಶ್ನಾರ್ಹವಾಗಿದೆ.

ಇಷ್ಟೊಂದು ಹಣ ಖರ್ಚು ಮಾಡುವ ಬದಲು ಇದೇ ಹಣದಿಂದ ಆಲದಾಳರವರ ಹೆಸರಲ್ಲಿ  ’ಆಲದಾಳ ನಾಟಕೋತ್ಸವಆಯೋಜಿಸಿ ಉತ್ಸವದಲ್ಲಿ ಅವರನ್ನು ಸನ್ಮಾನಿಸಬಹುದಾಗಿತ್ತು. ಆಲದಾಳರವರ ಹೆಸರಲ್ಲಿ ನಾಟಕ ರಚನಾ ಸ್ಪರ್ಧೆಗಳನ್ನು ಏರ್ಪಡಿಸಿ... ಬಹುಮಾನಿತ ನಾಟಕಗಳನ್ನು ಪ್ರದರ್ಶಿಸುವ ಮೂಲಕ ಕವಿಗಳನ್ನು ಸನ್ಮಾನಿಸಬಹುದಾಗಿತ್ತು.... ರಂಗಭೂಮಿಯ ಬೆಳವಣಿಗೆಗೆ ಪೂರಕವಾಗುವಂತಹ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವ ಬದಲು ಅನಗತ್ಯವಾಗಿ ಹಣ ಖರ್ಚುಮಾಡುವಂತಹ ಸಮಾರಂಭಗಳನ್ನು ಮಾಡುವುದರಿಂದ ರಂಗಭೂಮಿಗಂತೂ ಯಾವುದೇ ಲಾಭವಿಲ್ಲ. ಲಾಭವೇನಾದರೂ ಇದ್ದರೆ ಅದು ಅಕಾಡೆಮಿಯಲ್ಲಿರುವ ಹೆಗ್ಗಣಗಳಿಗೆ... ಸ್ವಜನಪಕ್ಷಪಾತಿಗಳಿಗೆ ಹಾಗೂ ಅವಕಾಶವಾದಿಗಳಿಗೆ ಮಾತ್ರ. ನಾಟಕ ಅಕಾಡೆಮಿಯ ವಿಷಯದಲ್ಲಿ ಸಚಿವೆ ಉಮಾಶ್ರೀ ಮಾಡಿದ ಚಾರಿತ್ರಿಕ ತಪ್ಪಿಗೆ ಹಾಗೂ ಶೇಖ ಮಾಸ್ತರ್ ತಮ್ಮ ದುರ್ಬಲ ಗಳಿಗೆಗಳಲ್ಲಿ ಗುಡಿಹಳ್ಳಿಯಂತಹ ಪರಮಸ್ವಾರ್ಥಿಯನ್ನು ಅಕಾಡೆಮಿಗೆ ಸಹಸದಸ್ಯನನ್ನಾಗಿ ಆಯ್ಕೆ ಮಾಡಿಕೊಂಡ ತಪ್ಪು ನಿರ್ದಾರಕ್ಕೆ ಕನ್ನಡ ರಂಗಭೂಮಿ ಹಾಗೂ ನಾಟಕ ಅಕಾಡೆಮಿಗಳ ಪ್ರತಿಷ್ಟೆ ಬಲಿಯಾಗಬೇಕಿದೆ. ಇನ್ನೊಂದು ವರ್ಷ ನಾಟಕ ಅಕಾಡೆಮಿಯವರ ಆವಾಂತರಗಳನ್ನು ರಂಗಭೂಮಿ ಸಹಿಸಿಕೊಳ್ಳಲೇಬೇಕಿದೆ.

ನಾಟಕ ಅಕಾಡೆಮಿಯನ್ನು ಸ್ವಂತಕ್ಕೆ ಬಳಸಿಕೊಳ್ಳುತ್ತಿರುವ ಗುಡಿಹಳ್ಳಿ :
ಕರ್ನಾಟಕ ನಾಟಕ ಅಕಾಡೆಮಿ ಇತಿಹಾಸದಲ್ಲೇ ಯಾವೊಬ್ಬ ಅಧ್ಯಕ್ಷರೂ ಹೀಗೆ ರಬ್ಬರ್ ಸ್ಟಾಂಪ್ ಆಗಿರಲಿಲ್ಲ. ಸಹಸದಸ್ಯನೊಬ್ಬನ ಕೈಗೆ ಬೇನಾಮಿಯಾಗಿ ಅಧ್ಯಕ್ಷತೆಯನ್ನು ಬಿಟ್ಟು ಕೊಟ್ಟಿರಲಿಲ್ಲ. ಆದರೆ ಸಮಗ್ರ ಕನ್ನಡ ರಂಗಭೂಮಿಯ ಬಗ್ಗೆ ಹೆಚ್ಚು ತಿಳಿಯದ ಶೇಖ ಮಾಸ್ತರ್ ಕೆಲಸ ಮಾಡಿಬಿಟ್ಟಿದ್ದರು. ಪೇಟಿ ಮಾಸ್ತರರ ಅಜ್ಞಾನ ಹಾಗೂ ದೌರ್ಬಲ್ಯವನ್ನು ತನ್ನ ಹಿತಾಸಕ್ತಿಗೆ ಪೂರಕವಾಗಿ ಬಳಸಿಕೊಳ್ಳತೊಡಗಿದ ಸಹಸದಸ್ಯ ಗುಡಿಹಳ್ಳಿ ನಾಟಕ ಅಕಾಡೆಮಿಯ ಬೇನಾಮಿ ಅಧ್ಯಕ್ಷರಾಗಿ ಅಧಿಕಾರ ಚಲಾಯಿಸಿತೊಡಗಿದರು. ತನಗೆ ಸಹಕರಿಸಲಿಲ್ಲ ಎನ್ನುವ ಕಾರಣಕ್ಕೆ ಅಕಾಡೆಮಿಯ ನೌಕರ ರೇವಣ್ಣನವರನ್ನು ಎತ್ತಂಗಡಿ ಮಾಡಲು ಪ್ರಯತ್ನಿಸಿದರು. ಇಡೀ ಅಕಾಡೆಮಿಯನ್ನು ಆವರಿಸಿಕೊಂಡು ಕನ್ನಡ ಭವನದಲ್ಲಿರುವ ಅಕಾಡೆಮಿ ಕಛೇರಿಯನ್ನು ತನ್ನ ಸ್ವಂತ ಕೆಲಸಗಳಿಗೆ ಬಳಸಿಕೊಳ್ಳುತ್ತಿರುವುದಂತೂ ಅಕ್ಷಮ್ಯ. ಎಲ್.ಕೃಷ್ಣಪ್ಪನವರ  ’ ಮಾಸ ನಾಟಕಪತ್ರಿಕೆಯ ಹಾಲಿ ಸಂಪಾದಕರಾದ ಗುಡಿಹಳ್ಳಿ ಪತ್ರಿಕೆಯ ಕೆಲಸಕ್ಕೆ ಅಕಾಡೆಮಿ ಕಾರ್ಯಾಲಯವನ್ನೂ ಹಾಗೂ ಅಲ್ಲಿರುವ ಸಿಬ್ಬಂದಿಯನ್ನೂ ಬಳಸಿಕೊಳ್ಳುತ್ತಿರುವುದು ಅಸಹನೀಯ. ಸುಭದ್ರಮ್ಮ ಮನ್ಸೂರರ ಕುರಿತು ಮಾಸ ಪತ್ರಿಕೆವಿಶೇಷ ಸಂಚಿಕೆ ತಂದಿದ್ದು ಅದರ ಬಿಡುಗಡೆ ಸಮಾರಂಭಕ್ಕೆ ಸಂಬಂಧಿಸಿದ ಎಲ್ಲವೂ ಟೈಪ್ ಆಗಿದ್ದು ಅಕಾಡೆಮಿ ಕಂಪ್ಯೂಟರುಗಳಲ್ಲಿ. ಆಹ್ವಾನ ಪತ್ರಿಕೆ ಕವರಿಗೆ ಹಾಕಿ ವಿಳಾಸದ ಚೀಟಿ ಅಂಟಿಸಿ ಪೋಸ್ಟ್ ಮಾಡುವುದು ಸಹ ಅಕಾಡೆಮಿಯ ಸಿಬ್ಬಂದಿ. ಜೊತೆಗೆ ಕೇಂದ್ರದ ಸಂಸ್ಕೃತಿ ಸಚಿವಾಲಯದ ಅನುದಾನವನ್ನು ಪಡೆಯಲು ಬೇಕಾದ ವ್ಯಯಕ್ತಿಕ ದಾಖಲೆಗಳೆಲ್ಲಾ ಸಿದ್ದಗೊಂಡಿದ್ದು ಹಾಗೂ ಟೈಪ್ಗೊಂಡಿದ್ದು ಅಕಾಡೆಮಿಯಲ್ಲಿ ಹಾಗೂ ಬಳಕೆಯಾಗಿದ್ದು ಅಕಾಡೆಮಿಯ ಕ್ಲರ್ಕಗಳು. ಅಂದರೆ.... ಸರಕಾರಿ ಅಕಾಡೆಮಿಯ ಕಾರ್ಯಾಲಯವನ್ನು ಹಾಗೂ ಅಲ್ಲಿರುವ ನೌಕರರನ್ನು ತನ್ನ ಸ್ವಂತ ಕೆಲಸಗಳಿಗೆ ಬಳಸುವ ಅಕಾಡೆಮಿಯ ಸದಸ್ಯ ಗುಡಿಹಳ್ಳಿಯ ವರ್ತನೆ ಖಂಡನೀಯ. ಇದನ್ನು ಪ್ರಶ್ನಿಸಬೇಕಾದ ಅಧ್ಯಕ್ಷರು ಯಾವಾಗಲೂ ಸ್ವಂತ ನಾಟಕ ಕಂಪನಿ ಕೆಲಸದಲ್ಲಿ ಬ್ಯೂಸಿ ಆಗಿರುತ್ತಾರೆ. ಎಲ್ಲಿ ತಮ್ಮ ನೌಕರಿಗೆ ಕುತ್ತು ತರುತ್ತಾನೋ ಎಂದು ಅಕಾಡೆಮಿಯ ನೌಕರರು ಆತಂಕದಲ್ಲಿಯೇ ಹೇಳಿದ ಕೆಳದ ಮಾಡಿಕೊಡುತ್ತಾರೆ. ಬಾಕಿ ಉಳಿದ ಸದಸ್ಯರು ಮೂರು ತಿಂಗಳಿಗೊಮ್ಮೆ ಟಿಎ-ಡಿಎ ಪಡೆದು ಮೀಟಿಂಗ್ಗಳಿಗೆ ಬಂದು ತಮಗೆ ಹಾಗೂ ತಮಗೆ ಬೇಕಾದವರಿಗೆ ಪೂರಕವಾಗಿ ಹಣ ಹಾಗೂ ಯೋಜನೆಗಳನ್ನು ಬಳಸಿಕೊಳ್ಳಲು ಹವಣಿಸುತ್ತಾರೆ. ಹೀಗಾಗಿ ಅಕಾಡೆಮಿ ಎನ್ನುವುದು ಗುಡಿಹಳ್ಳಿ ನಾಗರಾಜರವರ ಏಕಸ್ವಾಮ್ಯಕ್ಕೆ ಒಳಪಟ್ಟಂತಿದ್ದು ಅಕಾಡೆಮಿಯೇತರ ಕೆಲಸಕ್ಕೆ ಬಳಕೆಯಾಗುತ್ತಿರುವುದು ಸತ್ಯ. ಇದನ್ನು  ಕೇಳಬೇಕಾದ ರಂಗಭೂಮಿಯ ಬಹುತೇಕರು ಅಕಾಡೆಮಿಗೂ ತಮಗೂ ಸಂಬಂಧವೇ ಇಲ್ಲವೆಂದು ನಿರ್ಲಕ್ಷಿಸಿಬಿಟ್ಟಿದ್ದಾರೆ. ಇನ್ನು ಕೆಲವರು ಅಕಾಡೆಮಿಯ ಫಲಾನುಭವಿಗಳಾಗಿದ್ದಾರೆ.

  

                                                 -ಶಶಿಕಾಂತ ಯಡಹಳ್ಳಿ