ಶನಿವಾರ, ಆಗಸ್ಟ್ 30, 2014

“ಸರ್ವಾಧಿಕಾರಿಣಿಯಿಂದ ನಾಟಕ ಅಕಾಡೆಮಿಗೆ ಬಿಡುಗಡೆ ಭಾಗ್ಯ”

ಸಿ.ಎಸ್.ಭಾಗ್ಯ

ಕರ್ನಾಟಕ ನಾಟಕ ಅಕಾಡೆಮಿಯಿಂದ ರೆಜಿಸ್ಟ್ರಾರ್ ಸಿ.ಎಸ್.ಭಾಗ್ಯ  ಎತ್ತಂಗಡಿ ನಿಜಕ್ಕೂ ಸಂತಸದ ಸುದ್ದಿ.

ಅರೆಸತ್ತ ನಾಟಕ ಅಕಾಡೆಮಿಯನ್ನು ತನ್ನ ಕಪಿಮುಷ್ಟಿಯಲ್ಲಿಟ್ಟುಕೊಂಡಿದ್ದ ಅಧಿಕಾರಿಣಿ, ಅನನುಭವಿ ಅಧ್ಯಕ್ಷರಿಂದ ಹಿಡಿದು ಸದಸ್ಯರವರೆಗೂ ಎಲ್ಲರನ್ನೂ ತನ್ನ ಅಧಿಕಾರದ ಬಲೆಯಲ್ಲಿ ಹಿಡಿದಿಡಲು ಪ್ರಯತ್ನಿಸಿದ ಸರ್ವಾಧಿಕಾರಿಣಿ ಸಿ.ಎಸ್.ಭಾಗ್ಯ ರವರಿಂದ ನಾಟಕ ಅಕಾಡೆಮಿಗೆ ಕೊನೆಗೂ ಬಿಡುಗಡೆಯ ಭಾಗ್ಯ ಸಿಕ್ಕಂತಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯಕಟ್ಟಿನ ಅಧಿಕಾರದ ಜಾಗದಲ್ಲಿ ಕುಳಿತಿರುವ ಪುರೋಹಿತಶಾಹಿ ಪಳುವಳಿಕೆಗಳು ಶತಾಯ ಗತಾಯ ಇಡೀ  ಇಲಾಖೆಯನ್ನು ತಮ್ಮ ವಶದಲ್ಲಿಟ್ಟುಕೊಂಡಿವೆ. ಆದರೆ ನಾಟಕ ಅಕಾಡೆಮಿ ಎನ್ನುವುದು ಅಧಿಕಾರಿಶಾಹಿಗಳ ನಿಯಂತ್ರಣಕ್ಕೆ ಇಲ್ಲಿವರೆಗೂ ಹೋಗಿಲ್ಲ. ಹಾಗೆ ನಿಯಂತ್ರಣದಲ್ಲಿಟ್ಟುಕೊಳ್ಳಲು ನೋಡಿದ ಯಾವುದೇ ಅಧಿಕಾರಿ ಅಕಾಡೆಮಿಯಲ್ಲಿ ಬಹುದಿನಗಳ ಕಾಲ ನಿಂತಿಲ್ಲ.

ಆರ್.ನಾಗೇಶ್ರವರು ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ಇದೇ ರೀತಿ ತನ್ನ ವರಾತ ತೆಗೆದ ದಕ್ಷಿಣಾಮೂರ್ತಿ ಎನ್ನುವ ರೆಜಿಸ್ಟ್ರಾರ್ ಮುಖಕ್ಕೆ ತುಂಬಿದ ಸಭೆಯಲ್ಲಿ ಪೇಪರ್ವೇಟ್ ಎಸೆದು ಒಂದೆರಡು ಹಲ್ಲುಗಳನ್ನು ಉದುರಿಸಿ ಸರಿಯಾಗಿ ಪಾಠ ಕಲಿಸಿದ್ದರು. ನಾಟಕದವರ ಸಹವಾಸವೇ ಬೇಡಾ ಎಂದುಕೊಂಡು ದಕ್ಷಿಣಾಮೂರ್ತಿ ಟ್ರಾನ್ಸಫರ್ ಮಾಡಿಸಿಕೊಂಡು ಜಾಗ ಖಾಲಿ ಮಾಡಿದರು. ಮಾಲತಿ ಸುಧೀರರವರು ಅಕಾಡೆಮಿ ಅಧ್ಯಕ್ಷೆಯಾಗಿದ್ದಾಗ ಸಿಕ್ಕಾಪಟ್ಟೆ ಕಿರಿಕಿರಿಯನ್ನುಂಟು ಮಾಡುತ್ತಿದ್ದವರು ನರಸಿಂಹಮೂರ್ತಿ ಎನ್ನುವ ಹಾರವ ರೆಜಿಸ್ಟ್ರಾರ್. ಯಾವುದೇ ರೀತಿ ಮುಕ್ತವಾಗಿ ಕೆಲಸಮಾಡಲು ಅಧ್ಯಕ್ಷೆಗೆ ಇಲ್ಲವೆ ಸದಸ್ಯರಿಗೆ ಅವಕಾಶವನ್ನೇ ಆತ ಕೊಡುತ್ತಿರಲಿಲ್ಲ. ತನ್ನ ಕುಲಬಾಂಧವರಿಗೆ ಕರೆದು ಕರೆದು ಸಹಾಯ ಮಾಡುವ ಬ್ರಾಹ್ಮಣ ಪಕ್ಷಪಾತಿಯನ್ನು ಹಠಕ್ಕೆ ಬಿದ್ದು ಎತ್ತಂಗಡಿ ಮಾಡಿಸಿದವರು ನಾಟಕ ಅಕಾಡೆಮಿಯ ಸದಸ್ಯರಾದ ವಿಠ್ಠಲ್ ಕೊಪ್ಪದರವರು.

ರಂಗಭೂಮಿ, ರಂಗತಂಡಗಳು, ಕಲಾವಿದರ ಬಗ್ಗೆ ಏನೆಂದರೆ ಏನೂ ಗೊತ್ತಿಲ್ಲದ ಅದಕ್ಷ ಶೇಖ ಮಾಸ್ತರನ್ನು ಕೋಮು ಹಾಗೂ ರಾಜಕೀಯ ಕಾರಣಗಳಿಗಾಗಿ ನಾಟಕ ಅಕಾಡೆಮಿಯ ಮೇಲೆ ಹೇರಲಾಗಿದೆ. ಇದೇ ಸಂದರ್ಭಕ್ಕೆ ಸರಿಯಾಗಿ ಸಿ.ಎಸ್.ಭಾಗ್ಯ ಎನ್ನುವ ಸದಾ ವಟಗುಟ್ಟುವ ಸರ್ವಾಧಿಕಾರಿಣಿಯನ್ನು ಸಹ ಅಕಾಡೆಮಿ ರೆಜಿಸ್ಟ್ರಾರ್ ಆಗಿ ಸಂಸ್ಕೃತಿ ಇಲಾಖೆ ನಿಯಮಿಸಿತು. ಈಗಾಗಲೇ ಸಾಹಿತ್ಯ ಅಕಾಡೆಮಿಯ ರೆಜಿಸ್ಟ್ರಾರ್ ಆಗಿದ್ದ ಭಾಗ್ಯರವರಿಗೆ ನಾಟಕ ಅಕಾಡೆಮಿಯ ಹೆಚ್ಚುವರಿ ಅಧಿಕಾರ ಬಯಸದೇ ಬಂದ ಭಾಗ್ಯವಾಗಿತ್ತು. ಸಾಹಿತ್ಯ ಮತ್ತು ನಾಟಕ ಅಕಾಡೆಮಿಗಳಿಗೆ ಅಧ್ಯಕ್ಷ ಹಾಗೂ ಸದಸ್ಯರ ಆಯ್ಕೆಯಲ್ಲಿ ಸರಕಾರ ವಿಳಂಬ ಮಾಡಿದಾಗ ಭಾಗ್ಯಾರದೇ ಸಾಮ್ರಾಜ್ಯವಾಗಿಬಿಟ್ಟಿತ್ತು. ಆದರೆ ಆಗ ಅಧಿಕಾರ ಚಲಾಯಿಸಲು ಯಾರೂ ಇಲ್ಲದ್ದರಿಂದ ಅವಕಾಶಕ್ಕಾಗಿ ಈಯಮ್ಮ ಕಾಯತೊಡಗಿತ್ತು.

ಯಾವಾಗ ಅಧ್ಯಕ್ಷರು ಹಾಗೂ ಸದಸ್ಯರ ನೇಮಕಗಳಾದವೋ ಭಾಗ್ಯಮ್ಮ ಚುರುಕಾದರು. ತಮ್ಮ ಬ್ರಾಹ್ಮಣ್ಯದ ಪ್ರಳಯಾಂತಕ ವರಸೆಗಳನ್ನು ತೋರಿಸತೊಡಗಿದರು. ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದ ಶೇಖ ಸಾಯೇಬರು ಮೊದಮೊದಲು ‘‘ಏನೋ ಹೆಣ್ಣು ಹೆಂಗಸು ತನ್ನ ಪಾಡಿಗೆ ತಾನಿರುತ್ತಾಳೆ, ತಾನು ತನ್ನ ಕಂಪನಿ ನಾಟಕದ ವರಸೆಗಳನ್ನು ತೋರಿಸಿ ಸಿಕ್ಕಷ್ಟು ಗೆಬರಿದರಾಯಿತು ಎಂದು ತನ್ನ ರಂಗೋದ್ಯಮದ ಎಸ್ಟಿಮೇಟ್ ಹಾಕಿದ್ದು ತಪ್ಪಾಯಿತೆಂದು ಅರಿವಾಗುವುದರೊಳಗೆ ಸಮಯ ಮೀರಿತ್ತು. ಯಾಕೆಂದರೆ ನಾಟಕ ಅಕಾಡೆಮಿಗೆ ಬೇರೆ ರೆಜಿಸ್ಟ್ರಾರ್ ಕಳುಹಿಸುತ್ತೇವೆ ಎಂದು ಸಂಸ್ಕೃತಿ ಇಲಾಖೆಯವರು ಹೇಳಿದಾಗ ಬೇಡಾ, ಭಾಗ್ಯರವರೇ ನಮ್ಮ ಅಕಾಡೆಮಿಯ ಸೌಭಾಗ್ಯ, ಅವರೇ ಇರಲಿ ಎಂದು ಶೇಖ ಮಾಸ್ತರ್ ಸೌಭಾಗ್ಯ ಎಂದು ತಿಳಿದು ತನ್ನ ದೌರ್ಬಾಗ್ಯವನ್ನು ಅಕಾಡೆಮಿಯಲ್ಲಿರಿಸಿಕೊಂಡರು

ಆದರೆ ಅಧ್ಯಕ್ಷ ಬಯಸಿದ್ದೊಂದು ರೆಜಿಸ್ಟ್ರಾರ್ ಮಾಡಿದ್ದೊಂದು. ಕೊಆಪ್ಟ್ ಆಯ್ಕೆಯಲ್ಲಿ ಮೂಗು ತೂರಿಸಿದ ಭಾಗ್ಯ ಒತ್ತಾಯಪೂರ್ವಕವಾಗಿ ತನ್ನ ಕುಲಬಾಂಧವನೆಂಬ ಕಾರಣಕ್ಕೆ ಶ್ರೀಪಾದಭಟ್ರನ್ನು ಕೋಆಪ್ಟ್ ಸದಸ್ಯರನ್ನಾಗಿಸಿದರು. ಯಾರಾದರೆ ನನಗೇನು ಎಂದು ಶೇಖ ಮಾಸ್ತರ್ ಸುಮ್ಮನಿದ್ದರು. ಸದಸ್ಯರು ವಿಸಿಟಿಂಗ್ ಕಾರ್ಡ ಲೆಟರ್ ಹೆಡ್ ಮಾಡಿಸಿಕೊಳ್ಳಲು ಅನುಮತಿ ಕೇಳಿದಾಗಲೂ ಭಾಗ್ಯ ನಿರಾಕರಿಸಿದರು. ಕೊನೆಗೆ ಶೇಖ ಮಾಸ್ತರ್ ಸ್ಕೂಲ್ ಮಾಸ್ಟರ್ ತನ್ನ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೆಡ್ ಮಾಸ್ತರ ಬಳಿ ಹೋದ ಹಾಗೆ ಎಲ್ಲಾ ಸದಸ್ಯರನ್ನೂ ಕರೆದುಕೊಂಡು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ದಯಾನಂದರವರ ಹತ್ತಿರ ಹೋಗಿ ಅನುಮತಿ ಪಡೆಯಬೇಕಾಯಿತು. ಸದಸ್ಯರು ಟಿಎ ಡಿಎ ಹೆಚ್ಚಿಸಬೇಕು ಎಂದು ನ್ಯಾಯಯುತವಾದ ಬೇಡಿಕೆಯನ್ನಿಟ್ಟರೆ ಭಾಗ್ಯಮ್ಮ ಕನಿಷ್ಟ ಪರಿಶೀಲಿಸುತ್ತೇನೆ ಎಂದು ಅಧಿಕಾರಿಗಳ ಭಾಷೆಯಲ್ಲಿ ಕೂಡಾ ಹೇಳದೇ ಸಾಧ್ಯವೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿದಾಗ ಶೇಖ ಮಾಸ್ತರ್ ಶೇಕ್ ಆಗತೊಡಗಿದರು. ನಾಟಕ ಅಕಾಡೆಮಿಯ ಸದಸ್ಯರೆಂದರೆ ರೆಜಿಸ್ಟ್ರಾರಮ್ಮನ ಕಣ್ಣಲ್ಲಿ ತಾತ್ಸಾರದ ಭಾವನೆಯೇ ತುಳುಕುತ್ತಿತ್ತು. ಅಕಾಡೆಮಿಯ ಮೀಟಿಂಗ್ ನಡೆದಾಗ ಯಾರಿಗೂ ಮಾತಾಡಲು ಅವಕಾಶವನ್ನೇ ಕೊಡದೇ ತನ್ನ ನಿರ್ಧಾರಗಳನ್ನೇ ಸಭೆಯ ನಿರ್ಣಯಗಳು ಎಂದು ಮಂಡಿಸಿ ಅನುಮೋದನೆ ಪಡೆಯುವ ಭಾಗ್ಯರವರ ತಂತ್ರಗಾರಿಕೆ ಅಕಾಡೆಮಿಯ ಪದಾಧಿಕಾರಿಗಳಿಗೆ ಬಲು ಬೇಗ ಅರ್ಥವಾಗತೊಡಗಿತು.

  
ಏಣಗಿ ಬಾಳಪ್ಪನವರ ಸನ್ಮಾನ ಕಾರ್ಯಕ್ರಮದಲ್ಲಿ ಮಿಂಚಿದ ಭಾಗ್ಯಮ್ಮ

ನಾಟಕ ಅಕಾಡೆಮಿ ತನ್ನ ಚೊಚ್ಚಲ ಕಾರ್ಯಕ್ರಮವಾಗಿ ಏಣಗಿ ಬಾಳಪ್ಪನವರ ಸನ್ಮಾನ ಸಮಾರಂಭವನ್ನು ಧಾರವಾಡದಲ್ಲಿ ಜೂನ್ 14 ರಂದು ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಭಾಗ್ಯಮ್ಮರ ಅಸಲಿ ಬಣ್ಣ ಅಧ್ಯಕ್ಷರಾದಿಯಾಗಿ ಸದಸ್ಯರಿಗೆ ಸರಿಯಾಗಿ ಗೊತ್ತಾಯಿತು. ಎಲ್ಲಾ ಭಾಗ್ಯಮ್ಮ ಹೇಳಿದ ರೀತಿಯಲ್ಲೇ ಆಗಬೇಕು. ಅದು ಆಗದೇ ಹೋದರೆ ಕಾನೂನಿನ ಕೊಕ್ಕೆ ಬಿತ್ತೆಂದೇ ಲೆಕ್ಕ. ಕೊಡಬಾರದ ಕಷ್ಟ ಕೊಡತೊಡಗಿದಾಗ ಶೇಖ ಮಾಸ್ತರ್ಗೆ ಇರುಸು ಮುರಸಾಗತೊಡಗಿತು. ಕಾರ್ಯಕ್ರಮ ಇದ್ದದ್ದು ದೂರದ ಧಾರವಾಡದಲ್ಲಿ. ಆದರೆ ಕಾರ್ಯಕ್ರಮಕ್ಕೆ ಬೇಕಾದ ಬ್ಯಾನರು, ಆಮಂತ್ರಣ ಪತ್ರಿಕೆಯಿಂದ ಹಿಡಿದು ಪ್ರತಿಯೊಂದು ಸಹ ಭಾಗ್ಯರವರು ಹೇಳಿದಂತೆ, ಹೇಳಿದಲ್ಲೇ ಸಿದ್ದವಾಗಬೇಕು. ಎಲ್ಲವೂ ಬೆಂಗಳೂರಿನಿಂದಲೇ ಹೋಗಬೇಕು. ಅಲ್ಲಿ ಕಾರ್ಯಕ್ರಮ ನಿರೂಪಣೆ ಮಾಡುವವರನ್ನೂ ಸಹ ತಮ್ಮ ಕುಲಬಾಂಧವರನ್ನು ಭಾಗ್ಯಮ್ಮ ಆಯ್ಕೆ ಮಾಡಿಕೊಂಡಾಗ ಧಾರವಾಡದಲ್ಲಿ ಆತಿಥ್ಯವನ್ನು ವಹಿಸಿಕೊಂಡಿದ್ದ ಶಂಕರ್ ಹಲಗತ್ತಿ ಕೆರಳಿನಿಂತರು. ಧಾರವಾಡದಲ್ಲಿರುವವರನ್ನೇ ನಿರೂಪಣೆಗೆ ನಿಯೋಜಿಸಿದರೆ ಸರಿ ಇಲ್ಲವಾದರೆ ಕಾರ್ಯಕ್ರಮಕ್ಕೆ ನಮ್ಮ ಬೆಂಬಲವಿಲ್ಲ ಎಂದು ಘೋಷಿಸಿದರು. ಕೊನೆಗೆ ಅನಿವಾರ್ಯವಾಗಿ ಬೆಂಗಳೂರಿನ ನಿರೂಪಕರನ್ನು ಕೈಬಿಡಲಾಯಿತು. ಯಾಕೆಂದರೆ ಕಾರ್ಯಕ್ರಮ ನಡೆಯುವ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಂಗಣದ ಉಸ್ತುವಾರಿ ಶಂಕರಣ್ಣನದಾಗಿತ್ತು. ಅವರ ಸಹಕಾರ ಇಲ್ಲವಾದರೆ ಕಾರ್ಯಕ್ರಮ ನಡೆಸುವುದು ಅಷ್ಟೊಂದು ಸರಳವಾಗಿರಲಿಲ್ಲ. ಇದೆಲ್ಲವನ್ನೂ ಅಕಾಡೆಮಿಯಲ್ಲಿ ಧಾರವಾಡವನ್ನು ಪ್ರತಿನಿಧಿಸುವ ಜಗುಚಂದ್ರ ಹಾಗೂ ಶೇಖ ಮಾಸ್ತರ್ ಇಬ್ಬರೂ ಸೇರಿ ಭಾಗ್ಯಮ್ಮರಿಗೆ ತಿಳಿಸಿ ಹೇಳಿದರು. ಇದರಿಂದಾಗಿ ರೆಜಿಸ್ಟ್ರಮ್ಮ ಬುಸುಗುಡತೊಡಗಿದರು. ಆಗ ಶುರುವಾದ ಅಸಹಕಾರ ಚಳುವಳಿ ಇಡೀ ಕಾರ್ಯಕ್ರಮ ಮುಗಿಯುವವರೆಗೂ ಮುಂದುವರೆಯಿತು.

ಬಾಳಪ್ಪನವರನ್ನು ಸನ್ಮಾನಿಸಲು ಕಾರ್ನಾಡರು, ಕಂಬಾರರೇ ಬೇಕೆನ್ನುವುದು ರೆಜಿಸ್ಟ್ರಮ್ಮನ ಹಠ. ಯಾರು ಕಾರ್ಯಕ್ರಮದ  ಅತಿಥಿಗಳಾಗಬೇಕು ಎನ್ನುವುದನ್ನು ನಿರ್ಧರಿಸಬೇಕಾದವರು ಅಕಾಡೆಮಿಯ ಪದಾಧಿಕಾರಿಗಳು. ಅದರಲ್ಲೂ ಮೂಗು ತೂರಿಸುವ ಭಾಗ್ಯಮ್ಮನನ್ನೇನು ಮಾಡುವುದು? ಎನ್ನುವುದೇ ನಾಟಕ ಅಕಾಡೆಮಿಯವರಿಗೆ ಯಕ್ಷಪ್ರಶ್ನೆಯಾಯಿತು. ಧಾರವಾಡದ ಲೋಕಲ್ ಕಲಾವಿದ ಕಾರ್ಯಕರ್ತರಿಗೆ ಭಾಗ್ಯಜ್ಜಿಯನ್ನು ಸಂಬಾಳಿಸುವುದೇ ಒಂದು ದೊಡ್ಡ ಕೆಲಸವಾಯಿತು. ಈಯಮ್ಮನ ಹುಚ್ಚಾಟ ಎಷ್ಟು ಮೇರೆ ಮೀರಿತೆಂದರೆ ಕಾರ್ಯಕ್ರಮ ಮುಗಿದ ತಕ್ಷಣ ಎಲ್ಲಾ ಖರ್ಚುಗಳಿಗೆ ಬಿಲ್ ಬೇಕು, ಓಚರ್ ಬೇಕು ಎಂದು ರಚ್ಚೆ ಹಿಡಿಯಿತು. ಚೆಕ್ ಬುಕ್ ಕೈಯಲ್ಲಿ ಹಿಡಿದು ಬಿಲ್ಲು ವೋಚರ್ ಕೊಟ್ಟರೆ ಚೆಕ್ ಕೊಡುತ್ತೇನೆ ಎಂದು ಹಠ ಹಿಡಿದು ಕುಳಿತ ಭಾಗ್ಯರ ಕಾಳಿ ವೇಷವನ್ನು ನೋಡಿ ಶಂಕರಣ್ಣನಂತಹ ಹಿರಿಯ ಸಂಘಟಕರೇ ದಂಗು ಬಡಿದು ಹೋದರು. ತಾನೊಬ್ಬ ಸರಕಾರಿ ಅಧಿಕಾರಿ ಎನ್ನುವುದನ್ನು ಮರೆತು ಅಂದು ಕಾರ್ಯಕ್ರಮದಾದ್ಯಂತ  ಭಾಗ್ಯ ಮಿಂಚಿದ್ದೇ ಮಿಂಚಿದ್ದು. ಇಲ್ಲಿವರೆಗೂ ನಾಟಕ ಅಕಾಡೆಮಿಗೆ ರೆಜಿಸ್ಟ್ರಾರ್ ಆಗಿದ್ದವರು ತೆರೆಮರೆಯಲ್ಲಿದ್ದುಕೊಂಡೇ ತಮ್ಮ ಆಟ ಆಡುತ್ತಿದ್ದರು. ಆದರೆ ಈಯಮ್ಮನಿಗೆ ಐಡೆಂಟಿಟಿ ಕ್ರೈಸಸ್ ಸಿಕ್ಕಾಪಟ್ಟೆ ಇದೆ. ಸನ್ಮಾನವನ್ನು ತಾನೇ ಮಾಡಬೇಕು, ಕಾರ್ಯಕ್ರಮಕ್ಕೆ ಬಂದ ಅತಿಥಿಗಳನ್ನು ಪಕ್ಕಕ್ಕೆ ತಳ್ಳಿ ಮುಂಚೂಣಿಯಲ್ಲಿ ತಾನೇ ಇರಬೇಕು ಎನ್ನುವ ಹಪಾಹಪಿ. ಕಾರ್ಯಕ್ರಮದ ಕೊನೆಗೆ ವಂದನಾರ್ಪನೆ ಮಾಡಬೇಕಾಗಿದ್ದವರು ಅಕಾಡೆಮಿಯ ಸದಸ್ಯ ಜಗುಚಂದ್ರ ಕೂಡ್ಲ. ಅದು ಮೊದಲೇ ನಿರ್ಧಾರಿತವಾಗಿತ್ತಂತೆ. ಆದರೆ ಅವರ ಮೇಲೆ ಒತ್ತಡ ಹೇರಿ ಆ ಅವಕಾಶವನ್ನು ಕಿತ್ತುಕೊಂಡ ಭಾಗ್ಯಮ್ಮ ತಾವೇ ತಪ್ಪು ತಪ್ಪಾಗಿ ವಂದನಾರ್ಪನೆಯನ್ನು ಮಾಡಿ ವೇದಿಕೆಯ ಮೇಲಿದ್ದವರಿಗೂ ಹಾಗೂ ಕೆಳಗೆ ಕುಳಿತ ಪ್ರೇಕ್ಷಕರಿಗೂ ಮುಜುಗರ ತಂದಿದ್ದಂತೂ ಆಭಾಸಕಾರಿಯಾಗಿತ್ತು.  "ಇದು ನಿಮ್ಮ ಮನೆಯ ಖಾಸಗಿ ಕಾರ್ಯಕ್ರಮವಲ್ಲ, ನಾಟಕ ಅಕಾಡೆಮಿಯ ಕಾರ್ಯಕ್ರಮ . ಹಿಂದೆ ನಿಂತು ಸರಕಾರಿ ರೂಲ್ಸಗಳ ಪ್ರಕಾರ ಗೈಡನ್ಸ್  ಕೊಡುವುದಷ್ಟೇ ನಿಮ್ಮ ಕೆಲಸ" ಎಂದು ಅಧಿಕಪ್ರಸಂಗತನ ಮಾಡುತ್ತಿದ್ದ ರೆಜಿಸ್ಟ್ರಾರಮ್ಮನಿಗೆ  ಹೇಳುವ ಗಟ್ಸ್ ನಾಟಕ ಅಕಾಡೆಮಿಯ ಅಧ್ಯಕ್ಷರಿಗಾಗಲೀ ಸದಸ್ಯರಿಗಾಗಲೀ ಇರಲೇ ಇಲ್ಲ. ಇಲ್ಲಿ ಕೊಟ್ಟ ಕೆಲವು ಪೊಟೋಗಳನ್ನು ಗಮನಿಸಿ, ಪ್ರತಿಯೊಂದರಲ್ಲೂ ಭಾಗ್ಯರವರು ಅದು ಹೇಗೆ ಮಿಂಚಿ ಮೆರೆಯುತ್ತಿದ್ದಾರೆ.  


ಏಣಗಿ ಬಾಳಪ್ಪನವರ ಸನ್ಮಾನ ಕಾರ್ಯಕ್ರಮ ಪೂರ್ತಿ ಭಾಗ್ಯ ಮಯ.

ಪೊಟೋಗ್ರಾಫರನಿಂದ ಹಿಡಿದು ವಿಡಿಯೋಗ್ರಾಫರ್ ವರೆಗೂ ಎಲ್ಲರಿಗೂ ಬಿಲ್ ಕೊಡಿ ಎಂದು ಗಂಟುಬಿದ್ದ ರೆಜಿಸ್ಟ್ರಾರಮ್ಮನ ಕಾಟಕ್ಕೆ ಅವರೆಲ್ಲಾ ತಲೆತಪ್ಪಿಸಿಕೊಂಡು ತಿರುಗುವಂತಾಯಿತು. ಆರ್.ಕೆ.ಪೊಟೋಗ್ರಾಫರ್ ಅಂತೂ ನಾನು ರಾತ್ರಿ ಎಲ್ಲಿ ಹೋಗಿ ಬಿಲ್ ತರಲಿ ಮೇಡಂ, ಆಮೇಲೆ ಬೆಂಗಳೂರಿಗೆ ಬಿಲ್ ಕಳುಹಿಸುತ್ತೇನೆ ಎಂದು ಬೇಡಿಕೊಂಡರೂ ನೀವು ಬಿಲ್ ಕಳಿಸುತ್ತೀರೆಂದು ಗ್ಯಾರಂಟಿ ಏನು? ಎಂದು ಪ್ರಶ್ನಿಸುತ್ತಾ ಈಗ ಬಿಲ್ ಕೊಟ್ಟರೆ ಚೆಕ್ ಕೊಡುತ್ತೇನೆ, ಇಲ್ಲವಾದರೆ ಕೊಡೋಕಾಗೊಲ್ಲ ಎಂದು ಬಾಗ್ಯಮ್ಮ ಹೇಳಿದ್ದು ಕೇಳಿ ದಂಗಾದ ಆರ್.ಕೆ ಈಯಮ್ಮನಿಗೆ ಪಾಠ ಕಲಿಸಬೇಕು ಎಂದುಕೊಂಡ. ರಾತ್ರೋ ರಾತ್ರಿ ಹೋಗಿ ಬಿಲ್ಲು ಕೊಟ್ಟು ಚೆಕ್ ಪಡೆದ. ಆದರೆ  ಪೋಟೋಗಳನ್ನು ಕೊಡಲು ಸತಾಯಿಸಿಬಿಟ್ಟ.
 
ಇನ್ನೊಂದು ತಮಾಷೆಯ ವಿಷಯ ನಡೆಯಿತು. ಅಧ್ಯಕ್ಷರು ತಮ್ಮ ಓಡಾಟಕ್ಕೆಂದು ಧಾರವಾಡದಲ್ಲಿ ಒಂದು ಜೀಪನ್ನು ಬಾಡಿಗೆಗೆ ಪಡೆದಿದ್ದರು. ಅದರ ಮೂರು ದಿನದ ಬಾಡಿಗೆ ಆರು ಸಾವಿರ ರೂಪಾಯಿ ಎಂದು ಅಧ್ಯಕ್ಷರ ಸಮ್ಮುಖದಲ್ಲಿ ಮಾತುಕತೆಯಾಗಿತ್ತು.  ಕಾರ್ಯಕ್ರಮ ಮುಗಿದ ಮೇಲೆ ರಿಜಿಸ್ಟ್ರಾರಮ್ಮ ಡ್ರೈವರ್ ಜೊತೆಗೆ ಚೌಕಾಸಿ ಮಾಡತೊಡಗಿದರು. ಬೆಂಗಳೂರಿನಲ್ಲೇ ಅಷ್ಟೊಂದಿಲ್ಲ ಇಲ್ಯಾಕೆ ಇಷ್ಟೊಂದು ರೇಟು, ಕಡಿಮೆ ಮಾಡಿಕೋ, ಐದು ಸಾವಿರ ಕೊಡ್ತೇನೆ ಎಂದು ಕಾಯಪಲ್ಲೆ ಚೌಕಾಸಿ ಮಾಡಿದ ಹಾಗೆ ಮಾಡತೊಡಗಿದರು. ಡ್ರೈವರ್ ತಿರುಗಿ ಬಿದ್ದ. ಹೇಳಿದಷ್ಟು ಕೊಡಲೇಬೇಕೆಂದು ಹಠಕ್ಕೆ ಬಿದ್ದ. ಇದನ್ನು ನೋಡಿದರೂ ನೋಡದಂತೆ ಅಧ್ಯಕ್ಷ ಶೇಖ ಓಡಾಡತೊಡಗಿದರು. ಕೊನೆಗೆ ಭಾಗ್ಯರವರು ಚೆಕ್ ಬರೆದು ರೇವಣ್ಣನ ಕೈಯಲ್ಲಿ ಕೊಟ್ಟು ಕಳುಹಿಸಿದರು. ಆದರೆ ಡ್ರೈವರ್ ಮಾತ್ರ ಚೆಕ್ಕನ್ನು ಮುಟ್ಟಲೂ ಇಲ್ಲ, ಮೂಸಿ ನೋಡಲೂ ಇಲ್ಲ. ನನಗೆ ಚೆಕ್ಕೆಲ್ಲಾ ಬೇಕಾಗಿಲ್ಲ ಕ್ಯಾಷ್ ಬೇಕೇ ಬೇಕು ಅಂತಾ ಹಠಹಿಡಿದು ಕುಳಿತ. ನಾಟಕ ಅಕಾಡೆಮಿಯ ಸಹಾಯಕ ರೇವಣ್ಣ ಜೋರು ಮಾಡಲು ಹೋದಾಗ ಕೆರಳಿನಿಂತ ಡ್ರೈವರ್ ಸಿಟ್ಟಿಗೆದ್ದು ರೇವಣ್ಣನಿಗೆ ಹೊಡೆಯಲು ಕೈಎತ್ತಿಯೇ ಬಿಟ್ಟ. ಬೇರೆಯವರು ಬಂದು ತಡೆಯದೇ ಇದ್ದಿದ್ದರೆ ಅವತ್ತು ರೇವಣ್ಣನ ಕಥೆ ವ್ಯಥೆಯಾಗುತ್ತಿತ್ತೆಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ. ಕೊನೆಗೂ ಹಣ ಕೊಡುವವರೆಗೂ ಡ್ರೈವರ್ ಭಾಗ್ಯರನ್ನು ಬಿಡಲಿಲ್ಲ, ವಸೂಲಿ ಮಾಡಿಯೇ ಬಿಟ್ಟ.


ಎದ್ದು ನಿಂತ ಅಧ್ಯಕ್ಷ ಗತ್ತಿನಿಂದ ಕುಂತ ರೆಜಿಸ್ಟ್ರಾರಮ್ಮ

ಬೆಂಗಳೂರಿನ ನಯನಾಜೂಕಿನ ಜನಕ್ಕೆ ಇನ್ನೂ ಧಾರವಾಡದವರ ಹುಂಬತನದ ಅರಿವಿಲ್ಲ. ಅಲ್ಲಿಯವರು ಮಾತು ಕೊಟ್ಟರೆ ಪ್ರಾಣಕೊಟ್ಟಾದರೂ ನಡೆಸಿಕೊಡುತ್ತಾರೆ. ಮಾತು ತಪ್ಪಿದವರ ಪ್ರಾಣವನ್ನೂ ತೆಗೆಯುತ್ತಾರೆ. ಆನಂತರ ಹೊರಗೆ ಬಂದ ಡ್ರೈವರ್ ಹೆಂಗಸು ಅದು ಹೇಗೆ ಧಾರವಾಡ ಬಿಟ್ಟು ಹೋಗುತ್ತಾಳೆ ನೋಡಿಯೇ ಬಿಡ್ತೀನಿ ಎಂದು ಅಚ್ಚ ದೇಸಿ ಸಂಸ್ಕೃತದಲ್ಲಿ ಮಾತಾಡತೊಡಗಿದನಂತೆ. ಇದೆಲ್ಲಾ ಒಬ್ಬ ಅಧಿಕಾರಣಿಗೆ ಬೇಕಾಗಿತ್ತಾ. ತನ್ನ ಅಧಿಕಾರದ ಮರ್ಯಾದೆಯನ್ನು ಒಬ್ಬ ಡ್ರೈವರ್ ಮುಂದೆ ಹರಾಜಾಕಿಸಿಕೊಳ್ಳಬೇಕಾಗಿತ್ತಾಅಟೋದವನಿಗೆ, ಜೀಪಿನವನಿಗೆ ಚೆಕ್ ಕೊಡ್ತೀನಿ ಅಂದ್ರೆ ಒಪ್ಪಕೊಳ್ಳತಾರಾ?.

ರೆಜಿಸ್ಟ್ರಾರಮ್ಮನ ಆಟಾಟೊಪಗಳಿಗೆ ಅಕಾಡೆಮಿ ಅಧ್ಯಕ್ಷ ಬೆಚ್ಚಿಬಿದ್ದರು. ಈಯಮ್ಮ ಇಲ್ಲೇ ಇದ್ದರೆ ತನ್ನ ಬುಡಕ್ಕೆ ನೀರು ಬಿಡೋದು ಗ್ಯಾರಂಟಿ ಎಂದು ಗೊತ್ತಾಯಿತು. ಭಾಗ್ಯಮ್ಮಳ ಎಲ್ಲಾ ಅವತಾರಗಳಿಂದ ರೋಸಿಹೋದ ಧಾರವಾಡದ ಅಕಾಡೆಮಿ ಸದಸ್ಯ ನೇರವಾಗಿ ಮಂತ್ರಿಣಿ ಉಮಾಶ್ರೀಗೆ ಭಾಗ್ಯರವರ ಸರ್ವಾಧಿಕಾರಿ ಧೋರಣೆಯನ್ನು ವಿವರಿಸಿ ಪತ್ರ ಬರೆದರು. ಸಂಸ್ಕೃತಿ ಇಲಾಖೆಯ ನಿರ್ದೇಶಕ ದಯಾನಂದರವರಿಗೆ ದೂರು ನೀಡಿದರು. ಇನ್ನು ಹದಿನೈದು ದಿನದೊಳಗೆ ಈಯಮ್ಮ ನಾಟಕ ಅಕಾಡೆಮಿ ಜಾಗ ಖಾಲಿ ಮಾಡದಿದ್ದರೆ ಸದಸ್ಯತ್ವಕ್ಕೆ ರಾಜೀನಾಮೆ ಕೊಡ್ತೇನೆ ಎಂದು ಜಗುಚಂದ್ರ ಬಹಿರಂಗವಾಗಿಯೇ ಹೇಳಿದರೆಂದು ಧಾರವಾಡದ ರಂಗಬಳಗ ಸಾಕ್ಷಿ ಆಧಾರದ ಸಮೇತ ಮಾತಾಡತೊಡಗಿತು. ಆದರೂ ವಿವರ ಕೇಳಿದರೆ ಜಗುಚಂದ್ರ ಇದರ ಬಗ್ಗೆ ಬಾಯಿಬಿಡುತ್ತಿಲ್ಲ. ಅವರಿಗೆ ಯಾರ ಮುಂದೂ ಏನೂ ಹೇಳಕೂಡದು ಎಂದು ರಂಗಶಂಕರದ ಸರ್ವಾಧಿಕಾರಿ ಮುದ್ದಣ್ಣನವರ ಅಪ್ಪಣೆಯಾಗಿದೆಯಂತೆ. ಏಣಗಿ ಬಾಳಪ್ಪನವರಿಗೆ ಸನ್ಮಾನದ ಹೆಸರಲ್ಲಿ ಅವಮಾನ ಮಾಡಿ, ಇಡೀ ಕಾರ್ಯಕ್ರಮವನ್ನು ಕೆಟ್ಟದಾಗಿ ನಿರ್ವಹಿಸಿದ ಕೀರ್ತಿ ಅಕಾಡೆಮಿಯ ಅಧ್ಯಕ್ಷರದ್ದಾದರೆ, ಅಕಾಡೆಮಿಯನ್ನು ಡ್ರೈವರ್, ಪೊಟೋಗ್ರಾಫರ್ಗಳ ಮುಂದೆಲ್ಲಾ ತಲೆತಗ್ಗಿಸುವಂತಹ ನಡುವಳಿಕೆಯನ್ನು ಪ್ರದರ್ಶಿಸಿದ ವಯೋವೃದ್ದೆ ರೆಜಿಸ್ಟ್ರಾರ್ ಭಾಗ್ಯಮ್ಮ ಅಕಾಡೆಮಿಯ ಮರ್ಯಾದೆಯನ್ನು ಧಾರವಾಡದಲ್ಲಿ ಮೂರು ಕಾಸಿಗೆ ಹರಾಜಾಕಿ ಬಂದರು.

ಶೇಖ ಮಾಸ್ತರ
ನಾನು ಅಕಾಡೆಮಿಯ ಕೋಆಪ್ಟ್ ರಾಜಕೀಯ ಎನ್ನುವ ಲೇಖನದಲ್ಲಿ ಭಾಗ್ಯರವರ ಜಾತಿವಾದಿತನ ಹಾಗೂ  ಸರ್ವಾಧಿಕಾರಿತನಗಳ ಬಗ್ಗೆ ಬರೆದಾಗ ಇದೇ ಶೇಖ ಸಾಯೇಬರು ''ಪಾಪದ ಹೆಣ್ಣುಮಗಳ ಮ್ಯಾಗ ಸುಳ್ಳ ಸುಳ್ಳ ಬರದಿದ್ದಾರ ನೋಡ್ರಿ'' ಎಂದು ಅವಲತ್ತುಕೊಂಡರಂತೆ. ಆದರೆ ಮುಂದಿನ  ಒಂದೇ ತಿಂಗಳಲ್ಲಿ ಭಾಗ್ಯಮ್ಮಳ  ಅಕ್ಟೋಪಸ್ ಹಿಡಿತದಲ್ಲಿ ಸಿಕ್ಕು  ಅಧ್ಯಕ್ಷರಾದಿಯಾಗಿ ಇಡೀ ನಾಟಕ ಅಕಾಡೆಮಿಯೇ ತಲ್ಲಣಿಸಿ ಹೋಯಿತು. ಪಾಪದ ಹೆಣ್ಣುಮಗಳು ಶಾಪದ ಹೆಣ್ಣುಮಗಳಾಗಿ ಎಲ್ಲರನ್ನೂ ಕಾಡತೊಡಗಿದಳು. 

ಹೀಗೆಯೇ ಭಾಗ್ಯಮ್ಮ ಅಕಾಡೆಮಿಯಲ್ಲೇ ಮುಂದುವರೆದರೆ ತಮಗೂ ಮರ್ಯಾದೆ ಬಾರದು ಅಕಾಡೆಮಿಗೂ ಕೆಟ್ಟ ಹೆಸರು ಎಂದು ತಿಳಿದ ಶೇಖ ಸಾಹೇಬರು ಮಂತ್ರಿಣಿಯಾದ ಉಮಾಶ್ರೀಯವರ ಹತ್ತಿರ ಹೋಗಿ ದಯವಿಟ್ಟು ರೆಜಿಸ್ಟ್ರಾರನ್ನು ಬದಲಾಯಿಸಿ ಎಂದು ಅವಲತ್ತುಕೊಂಡರು.  ಅಂತೂ ಇಂತೂ ಧಾರವಾಡದ ಕಾರ್ಯಕ್ರಮ ಮುಗಿದು ಇನ್ನೂ ಹದಿನೈದು ದಿನಗಳಾಗಿರಲಿಲ್ಲ ಭಾಗ್ಯಮ್ಮ ಅಕಾಡೆಮಿಯಿಂದ ಬಲವಂತದಿಂದ ಎತ್ತಂಗಡಿಯಾದರು. ಇಡೀ ನಾಟಕ ಅಕಾಡೆಮಿ ನೆಮ್ಮದಿಯ ನಿಟ್ಟುಸಿರು ಬಿಟ್ಟತು. ರವೀಂದ್ರ ಕಲಾಕ್ಷೇತ್ರದ ಮ್ಯಾನೇಜರ್ ಆಗಿದ್ದ ಸಿದ್ದರಾಜುರವರು ಈಗ ಕನ್ನಡ ನಾಟಕ ಅಕಾಡೆಮಿಯ ರೆಜಿಸ್ಟ್ರಾರ್ ಆಗಿ ಬಂದಿದ್ದಾರೆ. ಅವರಾದರೂ ಹಿಂದಿನ ರೆಜಿಸ್ಟ್ರಾರ್ಗಳು ಮಾಡಿದ ತಪ್ಪುಗಳಿಂದ ಪಾಠಕಲಿತು ರಂಗಭೂಮಿಯನ್ನು ಸಕಾರಾತ್ಮಕವಾಗಿ ಕಟ್ಟುವ ನಿಟ್ಟಿನಲ್ಲಿ ತಮ್ಮ ಅಧಿಕಾರವನ್ನು ರಂಗಸೇವಕನ ವಿನಯದೊಂದಿಗೆ ಬಳಸಬೇಕಿದೆ.

ಸರಕಾರಿ ಅಧಿಕಾರಿಗಳು ಅಧಿಕಾರ ಚಲಾಯಿಸಲೆಂದೇ ಇದ್ದೇವೆ ಎನ್ನುವ ದುರಹಂಕಾರವನ್ನು ಬಿಡಬೇಕಿದೆ. ಅನನುಭವಿ ಅಧ್ಯಕ್ಷರಿಗೆ ಹಾಗೂ ಮಹತ್ವಾಕಾಂಕ್ಷೆಗಳಿಲ್ಲದ ಸದಸ್ಯರಿಗೆ ಮಾರ್ಗದರ್ಶಕರಾಗಿ ರೆಜಿಸ್ಟ್ರಾರ್ಗಳು ಇರಬೇಕಾಗುತ್ತದೆ. ಎಲ್ಲದಕ್ಕೂ ಕಾನೂನುಗಳನ್ನು ಮುಂದೆ ಮಾಡಿ ಅಡೆತಡೆ ಒಡ್ಡುವ ಬದಲಾಗಿ ಇರುವ ಕಾನೂನುಗಳನ್ನು ರಂಗಭೂಮಿಯ ಬೆಳವಣಿಗೆಗೆ ಪೂರಕವಾಗಿ ಉಪಯೋಗಿಸಿಬೇಕಿದೆ.  ರಂಗಭೂಮಿಗಾಗಿ ಅಕಾಡೆಮಿ ಇದೆ. ಅಕಾಡೆಮಿ ಇದೆಯೆಂದು   ರೆಜಿಸ್ಟ್ರಾರ್ ಹುದ್ದೆ ಇದೆ. ಅಧಿಕಾರಿಗಳಿಗಾಗಿ ಅಕಾಡೆಮಿಯೂ ಇಲ್ಲ, ರಂಗಭೂಮಿಯೂ ಇಲ್ಲ. ಸತ್ಯವನ್ನು ಅಕಾಡೆಮಿಯ ರೆಜಿಸ್ಟ್ರಾರ್ಗಳು ಮನನ ಮಾಡಿಕೊಳ್ಳಬೇಕು. ಅಧ್ಯಕ್ಷರಾದವರು ಅದಕ್ಷರಾಗಿದ್ದರೆ ಅವರಲ್ಲಿ ದಕ್ಷತೆಯನ್ನು ಹೇಗೆ ತರಬೇಕು ಎನ್ನುವುದರ ಬಗ್ಗೆ ಆಲೊಚಿಸಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಕಲಾವಿದರ ಜೊತೆಗೆ ಒಡನಾಡಬೇಕಾದ ರೆಜಿಸ್ಟ್ರಾರ್ ಹುದ್ದೆಗೆ ಕಲೆಯ ಬಗ್ಗೆ ಒಲವುಳ್ಳವರನ್ನೇ ನಿಯಮಿಸುವುದುತ್ತಮ. ಸರಕಾರದ ಹಣವನ್ನು ಬೇಕಾಬಿಟ್ಟಿ ಹಂಚಿಕೆ ಮಾಡುವುದನ್ನೇ ಉದ್ಯೋಗ ಮಾಡಿಕೊಂಡಿರುವ ಹಾಲಿ ಅಧ್ಯಕ್ಷ ಹಾಗೂ ಸದಸ್ಯರುಗಳಲ್ಲಿ ರಂಗಜವಾಬ್ದಾರಿಯನ್ನು ಆತ್ಮೀಯತೆಯಿಂದ ಬೆಳೆಸುವಂತಹ ಸ್ನೇಹಮಯಿ ರೆಜಿಸ್ಟ್ರಾರ್ ಅಗತ್ಯವಿದೆ. ಸಾಹಿತ್ಯ ಅಕಾಡೆಮಿಗೆ ರೆಜಿಸ್ಟ್ರಾರ್ ಆಗಿ ಒಕ್ಕರಿಸಿಕೊಂಡಿರುವ ಭಾಗ್ಯ ಅಲ್ಲೇನು ಮಾಡುತ್ತಾರೋ ಕಾಯ್ದು ನೊಡಬೇಕಾಗಿದೆ. ಒಬ್ಬ ಅಧಿಕಾರಿ ವರ್ಗ ಆದರೆ ಆಹಾ ಎಂಥಾ ಒಳ್ಳೆಯ ಅಧಿಕಾರಿಯಾಗಿದ್ದರು, ಇದ್ದರೆ ಇಂತಹ ಜನಸೇವೆ ಮಾಡುವ ಅಧಿಕಾರಗಳಿರಬೇಕು ಎಂದು ಇಲಾಖೆಯಲ್ಲಿರುವವರು ಹೆಮ್ಮೆಯಿಂದ ಹೇಳಬೇಕು. ಆದರೆ ಭಾಗ್ಯಮ್ಮರವರಿಗೆ ಭಾಗ್ಯ ಇಲ್ಲವೆನ್ನುವುದೇ ಅವರ ದೌರ್ಭಾಗ್ಯ. ಸದ್ಯ ತೊಲಿಗಿದರು ಎಂದುಕೊಳ್ಳುವಂತಹ ವರ್ತನೆಯನ್ನು ಅಳವಡಿಸಿಕೊಳ್ಳುವುದು ನಿವೃತ್ತಿಯ ಅಂಚಿನಲ್ಲಿರುವ ಮಹಿಳೆಗೆ ಬೇಕಾಗಿತ್ತಾ? ಅಕಾಡೆಮಿಗೆ ಭಾರವಾಗಿ ಅಲ್ಲಿಂದ ಬರಕಾಸ್ತಾಗುವ ದೈನೇಸಿ ಸ್ಥಿತಿ ತಂದುಕೊಳ್ಳಬೇಕಿತ್ತಾ?

ಸದ್ಯ ಅಕಾಡೆಮಿಯ ಸೌಭಾಗ್ಯ. ಅದಕ್ಕಂಟಿದ ಸರಕಾರಿ ಶನಿಗ್ರಹವೊಂದು ತೊಲಗಿತು. ಆದರೆ ಇನ್ನೂ ಕೆಲವಾರು ಕ್ಷುದ್ರಗ್ರಹಗಳು, ವೃದ್ದಗ್ರಹಗಳು, ಬಾಲಗ್ರಹಗಳು, ಜಾತಿಗ್ರಹಗಳು, ನಾಗಗ್ರಹಗಳು, ಸ್ವಾರ್ಥಿಗ್ರಹಗಳು... ನಾಟಕ ಅಕಾಡೆಮಿಯಲ್ಲೇ ಇವೆ. ಒಂದೆರಡ್ಮೂರು ಮಂಗಳ ಗ್ರಹಗಳಿವೆಯಾದರೂ ಅವುಗಳ ಅಕ್ಕಪಕ್ಕದಲ್ಲೇ ಶನಿಗ್ರಹಗಳು ದಿಕ್ಕುತಪ್ಪಿಸಲು ಒಕ್ಕರಿಸಿವೆ. ನಾಟಕ ಅಕಾಡೆಮಿಯ ಬಗ್ಗೆ ನಿಜವಾದ ರಂಗಕರ್ಮಿಗಳು ಭರವಸೆಯನ್ನೆ ಕಳೆದುಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ರಂಗಭೂಮಿಯ ಪ್ರಾತಿನಿಧಿಕ ಸಂಸ್ಥೆಯಾದ ನಾಟಕ ಅಕಾಡೆಮಿಯನ್ನು ಸರಿದಾರಿಗೆ ತರುವವರು ಯಾರು? 



ನಾಟಕ  ಅಕಾಡೆಮಿ ಎನ್ನುವ ರಂಗತಂಡ ಏಕಪಕ್ಷೀಯವಾಗಿ ಆಡುತ್ತಿರುವ ಮೂರು ವರ್ಷದ ರಾಜಕೀಯ ಲಾಭಿಪ್ರೇರೇಪಿತ  ರಂಗಾಟದಲ್ಲಿ ಮೊಟ್ಟ ಮೊದಲು ಔಟಾಗಿದ್ದು ಅಂಪಾಯರ್. ಎಲ್ಲಾ ಆಟಗಾರರೂ ಸೇರಿ ಸರಕಾರಕ್ಕೆ ದೂರು ಕೊಟ್ಟು ಸರ್ವಾಧಿಕಾರಿ ಧೋರಣೆ ತೋರಿದ ಸರಕಾರಿ ಅಂಪಾಯರರನ್ನು  ಹೊರಗೆ ಹಾಕಿ ಇನ್ನೊಬ್ಬ ಅಂಪಾಯರನನ್ನು ಅಪಾಯಿಂಟ್ ಮಾಡಿಸಿಕೊಂಡಿದ್ದಾರೆ. ಆಟ ನೀರಸವಾಗಿ ಮುಂದುವರೆದಿದೆ. ಅದರೆ ಈ ಆಟವನ್ನು ನೋಡುವ ಕನಿಷ್ಟ ಕುತೂಹಲವೂ ರಂಗಕರ್ಮಿಗಳಿಗಿಲ್ಲವಾಗಿದೆ. ಯಾಕೆಂದರೆ ಟೀಮ್ ಕ್ಯಾಪ್ಟನ್ ಎನ್ನುವವನು ತನ್ನ ಸಾಮರ್ಥ್ಯದಿಂದ ಆಯ್ಕೆಯಾಗುವ ಬದಲಾಗಿ ರಾಜಕೀಯ ರೆಕಮೆಂಡೆಶನ್ನಿನಿಂದ ಆಯ್ಕೆಯಾಗಿದ್ದಾಗಿದೆ. ಹಾಗೂ ಬಹುತೇಕ ಸದಸ್ಯರೂ ಸಹ ಸ್ವಸಾಮರ್ಥ್ಯಕ್ಕಿಂತಲೂ ಲಾಬಿ ಮಾಡಿ ಆಯ್ಕೆ ಮಾಡಿಸಿಕೊಂಡಿದ್ದಾರೆ. ಹೀಗಾಗಿ ಈ ಅಸಮರ್ಥ ಟೀಮ್ ಇಟ್ಟುಕೊಂಡು ಗೆಲುವನ್ನು ನಿರೀಕ್ಷಿಸುವುದಂತೂ ಸಾಧ್ಯವಿಲ್ಲ. ಇನ್ನೂ ಎರಡೂವರೆ ವರ್ಷದ ಕಾಲಾವಕಾಶವಿದೆ. ನೋಡೋಣ ಏನೇನಾಗುತ್ತದೋ ಏನೋ?
 

                           -ಶಶಿಕಾಂತ ಯಡಹಳ್ಳಿ