ಶುಕ್ರವಾರ, ಮೇ 19, 2017

ಗ್ರಾಮೀಣ ಪ್ರತಿಭೆಗಳು ಕಟ್ಟಿಕೊಟ್ಟ ದೃಶ್ಯಕಾವ್ಯ “ವಾಲಿವಧೆ” :




ಬಹಳ ವರ್ಷಗಳಾಗಿತ್ತು ಬೆಂಗಳೂರಿನ ಪ್ರೇಕ್ಷಕರು ಇಂತದೊಂದು ನಾಟಕ ನೋಡಿ. ಎಡಿಎ ರಂಗಮಂದಿರ ಕಿಕ್ಕಿರಿದು ತುಂಬಿತ್ತು. ನಿಧಾನವಾಗಿ ನಾಟಕ ಪ್ರೇಕ್ಷಕರ ಎದೆಗಿಳಿಯತೊಡಗಿತ್ತು. ಆ ಹಾಡು, ಆ ಸಂಗೀತ, ಆ ಆಲಾಪ, ಆ ಅಭಿನಯಗಳು ಒಂದಕ್ಕೊಂದು ಸಮ್ಮಿಳಿತವಾಗಿ ನೋಡುಗರನ್ನು ಸೂಜಿಗಲ್ಲಂತೆ ಸೆಳೆದು ಖುರ್ಚಿಯ ತುದಿಗೆ ಕೂಡಿಸಿತ್ತು, ಒಂದೊಂದು ದೃಶ್ಯ, ಪ್ರತಿಯೊಂದು ಚಲನೆ, ಒಂದೊಂದು ಸಂಭಾಷಣೆಗಳು ಪ್ರೇಕ್ಷಕರನ್ನು ಪರವಶಗೊಳಿಸುತ್ತಿದ್ದವು. ಪ್ರೀತಿಯೊಂದೇ ಸತ್ಯ ಬಾಕಿಯೆಲ್ಲಾ ಮಿಥ್ಯ ಎನ್ನುವ ಸಂದೇಶವನ್ನು ಕೊಡುತ್ತಾ ನಾಟಕ ಕೊನೆಯಾದಾಗ ಪ್ರತಿಯೊಬ್ಬ ಪ್ರೇಕ್ಷಕರೂ ಸ್ವಯಂಪ್ರೇರಿತವಾಗಿ ಎದ್ದು ನಿಂತು ಐದಕ್ಕೂ ಹೆಚ್ಚು ನಿಮಿಷಗಳ ಕಾಲ ಹೊಡೆದ ಚಪ್ಪಾಳೆಗಳ ಸದ್ದು ರಂಗಮಂದಿರದಲ್ಲಿ ಹತ್ತಾರು ನಿಮಿಷ ಪ್ರತಿದ್ವನಿಸಿತು. ಮಾಡಿದರೆ ಹೀಗೆ ನಾಟಕ ಮಾಡಬೇಕು, ನೋಡಿದರೆ ಇಂಥಾ ನಾಟಕ ನೋಡಬೇಕು ಎನ್ನುವಂತಹ ಈ ಅಪರೂಪದ ಪ್ರದರ್ಶನಕ್ಕೆ ಸಾಕ್ಷಿಯಾದವರೆಲ್ಲಾ ಧನ್ಯ.. ನೋಡುವುದನ್ನು ತಪ್ಪಿಸಿಕೊಂಡವರಿಗೆ ಗೊತ್ತಾದರೆ ಪಶ್ಚಾತ್ತಾಪದಿಂದ ಪರಿತಪಿಸಿ ಆವರಿಸೀತು ಶೂನ್ಯ. 

ಹಲವಾರು ದಿನಗಳ ಕಾಲ ನೋಡಿದವರ ಚಿತ್ತಬಿತ್ತಿಯಲ್ಲಿ ಉಳಿಯಬಹುದಾದ ಈ ನಾಟಕ ವಾಲಿವಧೆ. ನಾಟಕದಾದ್ಯಂತ ಬಳಸಿದ ಭಾಷೆ ಸರಳಗನ್ನಡವಾಗಿರದೇ ಈಗಿನವರಿಗೆ ಕ್ಲಿಷ್ಟಕರವೆನಿಸುವ ಹಳೆಗನ್ನಡ. ಕುವೆಂಪುರವರ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದೊಳಗೆ ಬರುವ ವಾಲಿವಧೆ ವೃತ್ತಾಂತವನ್ನು ಆಧರಿಸಿದ ಇಂತಹ ನಾಟಕ ಮಾಡುವುದಿರಲಿ ಓದುವುದೇ ಕಷ್ಟಕರ. ಅಷ್ಟಕ್ಕೂ ಇದು ಬರೀ ಸಂಭಾಷಣೆಯ ನಾಟಕವಾಗಿರದೇ ಸಂಗೀತ ಪ್ರಧಾನ, ಅಭಿನಯ ಪ್ರಧಾನ ನಾಟಕ. ಇಷ್ಟೆಲ್ಲಾ ಕ್ಲಿಷ್ಟಕರವಾದ ಭಾಷೆಯನ್ನು ಬಳಸಿ ಸಂಗೀತ ಪ್ರಧಾನ ನಾಟಕವನ್ನು ದೃಶ್ಯಕಾವ್ಯವಾಗಿ ಕಟ್ಟಿಕೊಟ್ಟವರು ಯಾವುದೋ ರೆಪರ್ಟರಿ ಇಲ್ಲವೇ ವೃತ್ತಿನಿರತ ಕಲಾವಿದರು ಎಂದುಕೊಂಡವರ ಊಹೆ ತಪ್ಪು. ಯಾಕೆಂದರೆ ನಾಟಕದಲ್ಲಿ ಪಾತ್ರವಾದವರು ಶೇಷಗಿರಿ ಎನ್ನುವ ಹಳ್ಳಿಗಾಡಿನ ಕೃಷಿ-ಕಾರ್ಮಿಕ ಯುವಕರು. ಪಕ್ಕಾ ಗ್ರಾಮೀಣ ಹವ್ಯಾಸಿ ಕಲಾವಿದರು. ಇನ್ನೆಷ್ಟೇ ಹೇಳಿದರೂ ಸಾಲದು.. ಈ ನಾಟಕವನ್ನು ನೋಡಿಯೇ ಅನುಭವಿಸಬೇಕು.. ಅನುಭವಿಸಿಯೇ ಅನುಭಾವಿಸಬೇಕು, ಅನುಭಾವದಿಂದಲೇ ಆನಂದಿಸಬೇಕು.

ರಂಗನಿರಂತರವು ಆಯೋಜಿಸಿದ ಸಿಜಿಕೆ ರಾಷ್ಟ್ರೀಯ ರಂಗೋತ್ಸವದಲ್ಲಿ 2017, ಮೇ 19 ರಂದು ಎಡಿಎ ರಂಗಮಂದಿರದಲ್ಲಿ ಪ್ರದರ್ಶನಗೊಂಡ ವಾಲಿವಧೆ ನಾಟಕವನ್ನು ಉಡುಪಿಯ ಎಂ.ಗಣೇಶ್‌ರವರು ನಿರ್ದೇಶಿಸಿದ್ದು, ಶೇಷಗಿರಿಯ ಶ್ರೀ ಗಜಾನನ ಯುವಕ ಮಂಡಳಿಯ ಕಲಾವಿದರು ಅತ್ಯಮೋಘವಾಗಿ ನಟಿಸಿ ನಾಟಕದ ಯಶಸ್ಸಿಗೆ ಕಾರಣರಾದರು. ಹಳ್ಳಿಗಾಡಿನ ಈ ಹೈದರು ನಾಟಕ ನೋಡಿದ ಪ್ರೇಕ್ಷಕರ ಕಣ್ಮಣಿಗಳಾದರು. ಇಡೀ ಸಿಜಿಕೆ ರಂಗೋತ್ಸವಕ್ಕೆ ಈ ನಾಟಕ ಮುಕುಟಪ್ರಾಯವಾಗಿ ಶೋಬೆ ತಂದಿತು.   

ಪರಮ ದುಷ್ಟನಾದ ವಾನರ ವಾಲಿ ತನ್ನ ತಮ್ಮ ಸುಗ್ರೀವನನ್ನು ಗಡಿಪಾರುಗೊಳಿಸಿ ಆತನ ಪತ್ನಿಯನ್ನು ಒತ್ತಾಯದಿಂದ ತನ್ನವಳನ್ನಾಗಿ ಮಾಡಿಕೊಂಡು ಮೆರೆದ. ಇದೆಲ್ಲವನ್ನೂ ತಿಳಿದ ಶ್ರೀರಾಮ ಮರೆಯಲ್ಲಿ ನಿಂತು ಬಾಣಬಿಟ್ಟು ವಾಲಿಯನ್ನು ಕೊಂದು ದುಷ್ಟನ ಸಂಹಾರ ಮಾಡಿ ಶಿಷ್ಟ ರಕ್ಷಕನಾಗಿ ಕಪಿಕುಲವನ್ನು ಕಾಪಾಡಿದ ಎನ್ನುವುದು ವಾಲ್ಮೀಕಿ ರಾಮಾಯಣ ಗೊತ್ತಿದ್ದವರಿಗೆಲ್ಲಾ ತಿಳಿದ ವಿಷಯ. ಆದರೆ ರಾಮಾಯಣವನ್ನು ಕುವೆಂಪುರವರು ನೋಡುವ ದೃಷ್ಟಿಕೋನವೇ ವಿಭಿನ್ನವಾದದ್ದು. ದುರುಳತನದೊಳಗಿರುವ ಮಾನವೀಯ ಮೌಲ್ಯಗಳನ್ನು ಕುವೆಂಪುರವರು ಎತ್ತಿ ಹಿಡಿಯುತ್ತಾರೆ. ಅದೇ ರೀತಿ ವಾಲಿಯ ಭ್ರಾತೃದ್ವೇಷದ ಜೊತೆಗೆ ಪ್ರೀತಿಗಾಗಿ ಹಂಬಲಿಸುವ ಸಹೋದರ ಪ್ರೇಮವನ್ನು ಪಲ್ಲವಿಸಿದ್ದಾರೆ. ಈ ನಾಟಕದಲ್ಲೂ ಬ್ರಾತೃಪ್ರೇಮದ ಪರಕಾಷ್ಟೆಯನ್ನು ಕಣ್ಣಿಗೆ ಕಟ್ಟುವಂತೆ ನಿರ್ದೇಶಕರು ಕಟ್ಟಿಕೊಟ್ಟಿದ್ದು ವಾಲಿಯ ದ್ವೇಷತಮ ಮನಸ್ಥಿತಿಯಲ್ಲಿರುವವರನ್ನು ಮನಪರಿವರ್ತನೆಗೆ ಪ್ರೇರೇಪಿಸುವಂತೆ ನಾಟಕ ಮೂಡಿಬಂದಿದೆ. 

ಮಾಯಾವಿ ರಕ್ಕಸನನ್ನು ಸಂವಾರಮಾಡಲು ವಾಲಿ ಗುಹೆಯೊಳಗೆ ಹೋದಾಗ ಆತ ಸತ್ತನೆಂದು ತಿಳಿದ ಸುಗ್ರೀವ ಗುಹೆಯ ದ್ವಾರಕ್ಕೆ ದೊಡ್ಡ ಬಂಡೆಕಲ್ಲನ್ನಿಟ್ಟು ಬರುತ್ತಾನೆ. ರಕ್ಕಸನನ್ನು ಕೊಂದು ಬಂದ ವಾಲಿ ತಮ್ಮನೇ ತನ್ನನ್ನು ಮರಳಿ ಬಾರದಂತೆ ಈ ಶಡ್ಯಂತ್ರ ಮಾಡಿದ್ದಾನೆಂದು ತಪ್ಪು ತಿಳಿದು ಸುಗ್ರೀವನಿಗೆ ಗಡಿಪಾರು ಮಾಡಿ ತಮ್ಮನ ಹೆಂಡತಿಯನ್ನು ವಶವಾಗಿಸಿಕೊಳ್ಳುತ್ತಾನೆ. ವನವಾಸದಲ್ಲಿದ್ದ ಶ್ರೀರಾಮ ಪತ್ನೀ ವಿಯೋಗದಿಂದ ಕಂಗಾಲಾಗಿ ಸೀತೆಯನ್ನು ಹುಡುಕುತ್ತಾ ಕಾಡೆಲ್ಲಾ ಅಲೆಯುತ್ತಿರುವಾಗ ಹನುಮ ಸಿಕ್ಕು ಈ ಕಥೆಯನ್ನೆಲ್ಲಾ ಹೇಳುತ್ತಾನೆ. ರಾಮ ಹಾಗು ಸುಗ್ರೀವ ಇಬ್ಬರೂ ತಮ್ಮ ಪತ್ನಿಯನ್ನು ಅಗಲಿದ್ದಾರೆ. ಹೀಗಾಗಿ ಮತ್ತೆ ತಮ್ಮ ಪತ್ನಿಯರನ್ನು ಪಡೆಯಲು ಒಬ್ಬರಿಗೊಬ್ಬರು ಸಹಾಯ ಮಾಡಬೇಕು. ವಾಲಿಯನ್ನು ರಾಮ ನಿವಾರಿಸಬೇಕು ಹಾಗೂ ಸುಗ್ರೀಯನ ಪಡೆ ಸೀತೆಯನ್ನು ಹುಡುಕಬೇಕು ಎನ್ನುವ ಒಪ್ಪಂದವಾಗುತ್ತದೆ. ರಾಮನ ಆದೇಶದಂತೆ ಸುಗ್ರೀವ ವಾಲಿಯನ್ನು ಯುದ್ದಕ್ಕೆ ಆಹ್ವಾನಿಸಿ ರಾಮನಿಂದ ಕೊಲ್ಲಲ್ಪಡುತ್ತಾನೆ. ಇದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಗೊತ್ತಿಲ್ಲದ.. ಗೊತ್ತು ಮಾಡಿಕೊಳ್ಳಬೇಕಾದ ಸಂಗತಿ ಈ ನಾಟಕದಲ್ಲಿ ಮೂಡಿಬಂದಿದೆ.

ಸುಗ್ರೀವನನ್ನು ಸೋಲಿಸಿ ಅರಮನೆಗೆ ಬಂದ ವಾಲಿಗೆ ಆತನ ಹೆಂಡತಿ ತಾರಾ ಪ್ರಶ್ನಿಸುತ್ತಾಳೆ. ತಮ್ಮನ ಬಗ್ಗೆ ತಪ್ಪು ತಿಳುವಳಿಕೆಯನ್ನು ಬಿಟ್ಟು ಆತನೊಂದಿಗೆ ಕೂಡಿ ಆಡಿದ ದೃಶ್ಯಗಳನ್ನು ನೆನಪಿಸಿಕೋ ಎಂದು ಪ್ರೇರೇಪಿಸುತ್ತಾಳೆ. ಸಹೋದರರ ಆತ್ಮೀಯ ಒಡನಾಟಗಳನ್ನು ನೆನೆದ ವಾಲಿ ತಮ್ಮನ ಬಗ್ಗೆ ಅಪಾರ ಪ್ರೀತಿಯನ್ನು ಹೊಂದಿ ಸುಗ್ರೀವನನ್ನು ಮರಳಿ ಅರಮನೆಗೆ ಕರೆದೊಯ್ಯಲು ಬಂದು ಪ್ರಯತ್ನಿಸುವಾಗ ರಾಮನಿಂದ ಹತನಾಗುತ್ತಾನೆ. ಈ ಕೆಲಸ ಮೊದಲೇ ಮಾಡಬೇಕಿತ್ತು..  ತಡಮಾಡಿದೆ.. ಪ್ರೀತಿಯನ್ನು ಹೊತ್ತು ತಂದಾಗ ಕೊಂದು  ತಪ್ಪು ಮಾಡಿದೆ ರಾಮಾ ಎನ್ನುತ್ತಾ ವಾಲಿ ಪ್ರಾಣಬಿಡುತ್ತಾನೆ. ರಾಮ ಲಕ್ಷ್ಮಣ ಸುಗ್ರೀವಾದಿಯಾಗಿ ಎಲ್ಲರೂ ಪಶ್ಚಾತ್ತಾಪ ಪಡುವುದರೊಂದಿಗೆ ನಾಟಕ ಮುಗಿಯುತ್ತದೆ. ಭಾವತೀವ್ರತೆಯಿಂದ ನೋಡುಗರ ಕಣ್ಣಲ್ಲಿ ಮೂಡಿದ ಹನಿಗಳು ಹೊರಬರಲು ಹವಣಿಸುತ್ತವೆ. 


ಇಷ್ಟೆಲ್ಲ ಹೇಳಿದ ಮೇಲೆ ಇದೊಂದು ಪರಿಪೂರ್ಣ ನಾಟಕವೇ ಎಂದುಕೊಂಡರೆ ತಪ್ಪಾಗುತ್ತದೆ. ಈ ನಾಟಕದ ಸಕಾರಾತ್ಮಕ ಅಂಶಗಳು ಬೇಕಾದಷ್ಟಿವೆ. ಜೊತೆಗೆ ಕೆಲವಾರು ನ್ಯೂನ್ಯತೆಗಳು ಈ ನಾಟಕದೊಳಗೂ ಇವೆ. ಹಾಗೂ ಅವೆಲ್ಲವುಗಳನ್ನೂ ಮುಂದಿನ ಪ್ರದರ್ಶನಗಳಲ್ಲಿ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆಗಳೂ ಮುಕ್ತವಾಗಿವೆ. ಕಲಾವಿದನೊಬ್ಬ ಅದ್ಭುತ ಪೇಂಟಿಂಗ್ ಮಾಡಿದ ನಂತರ ಅದರ ಆಶಯವನ್ನು ಘೋಷಣೆಯಾಗಿ ಚಿತ್ರಪಟದ ಮೇಲೆ ಬರೆದರೆ ಹೇಗೆ ನೋಡಿದವರಿಗೆ ರಸಭಂಗವಾಗುತ್ತದೆಯೋ ಹಾಗೆಯೇ ಉತ್ತಮ ರಂಗಕಲಾಕೃತಿಯನ್ನು ನೀಡಿದ ನಿರ್ದೇಶಕ ನಾಟಕದ ಅಂತ್ಯವನ್ನು ಘೋಷನಾತ್ಮಕವಾಗಿ ಕೊನೆಗೊಳಿಸಿದ್ದೂ ಸಹ ದೃಶ್ಯಕಾವ್ಯಾನುಭವದ ರುಚಿಯನ್ನು ವಾಚ್ಯಗೊಳಿಸಿದಂತಾಗಿ ಬಿಟ್ಟಿದೆ. ಅಧಿಕಾರ ಸಂಪತ್ತು ಶಾಶ್ವತವಲ್ಲಾ.. ಬದುಕಿಗೆ ಪ್ರೀತಿಯೊಂದೆ ಅಗತ್ಯ ಎಂಬುದನ್ನು ನಾಟಕವೇ ಹೇಳುತ್ತದೆ.. ಆದರೆ ಅದನ್ನು ಘೋಷನಾತ್ಮಕವಾಗಿ ಹೇಳದಿದ್ದರೂ ನಾಟಕದ ಆಶಯ ಪ್ರೇಕ್ಷಕರ ಅನುಭವಕ್ಕೆ ದಕ್ಕತ್ತಿತ್ತು, ಗ್ರಹಿಕೆಗೆ ಸಿಕ್ಕುತ್ತಿತ್ತು.

ಎಲ್ಲಾ ಪಾತ್ರಗಳೂ ಹಳಗನ್ನಡವನ್ನು ಬಳಸಿದರೆ ರಾಕ್ಷಸ ಪಾತ್ರ ಮಾತ್ರ ಉತ್ತರ ಕರ್ನಾಟಕದ ದೇಸಿ ಭಾಷೆ ಮಾತಾಡುತ್ತದೆ. ನಾಟಕದ ಭಾಷಾ ವಿನ್ಯಾಸಲ್ಲಿ ಇದು ಯಾಕೋ ಹೊಂದಾಣಿಕೆಯಾಗುತ್ತಿಲ್ಲಾ. ಆ ಪ್ರಾಂತ್ಯದವರು ರಾಕ್ಷಸರೇನೋ ಎನ್ನುವ ಅನುಮಾನ ಬಾರದೇ ಇರದು. ಯಾಕೆಂದರೆ ದಕ್ಷಿಣ ಹಾಗೂ ಕರಾವಳಿ ಕರ್ನಾಟಕದವರಿಗೆ ಉತ್ತರ ಕರ್ನಾಟಕದ ಭಾಷೆಯ ಬಗ್ಗೆ ಅಸಡ್ಡೆ ಹೆಚ್ಚಾಗಿದೆ. ಸಿನೆಮಾಗಳಲ್ಲಂತೂ ಉತ್ತರ ಕರ್ನಾಟಕದ ಭಾಷೆಯನ್ನು ಹಾಸ್ಯಕ್ಕಾಗಿ ಬಳಸಿದ್ದೇ ಹೆಚ್ಚು. ಮತ್ತು ಗ್ರಾಂಥಿಕ ಭಾಷಾ ಪ್ರಧಾನವಾದ ಈ ನಾಟಕದೊಳಗೆ ರಕ್ಕಸ ಪಾತ್ರಕ್ಕೆ ಉತ್ತರ ಕರ್ನಾಟಕದ ಭಾಷೆಯನ್ನು ಬಳಸುವ ಅಗತ್ಯವೇ ಇರಲಿಲ್ಲಾ.. ಅನಗತ್ಯವಾಗಿ ಬಳಸಿದ್ದರಿಂದ ಕೇಳುಗರಿಗೆ ಆಭಾಸವಾಗಿದ್ದಂತೂ ಸುಳ್ಳಲ್ಲಾ.  

ನಾಟಕದಲ್ಲಿ ಪ್ರತಿಯೊಂದು ಪಾತ್ರಕ್ಕೂ ತಮ್ಮದೇ ಆದ ಘನತೆ ಇರುತ್ತದೆ ಹಾಗೂ ಇರಬೇಕು. ಹನುಮಂತನನ್ನು ಎತ್ತರದಲ್ಲಿ ನಿಲ್ಲಿಸಿ ರಾಮನನ್ನು ಕೆಳಗೆ ನಿಲ್ಲಿಸಿ ಮಾತಾಡಿಸಿದ್ದು ಸೂಕ್ತವೆನಿಸುವಂತಿಲ್ಲಾ. ಯಾಕೆಂದರೆ ರಾಮ ಚಕ್ರವರ್ತಿ. ಅವನಿಗೆ ಎತ್ತರದ ಸ್ಥಳವೇ ಸೂಕ್ತ. ಕೊನೆಗೆ ವಾಲಿಯನ್ನು ಕೊಂದಿದ್ದಕ್ಕೆ ರಾಮ ಲಕ್ಷ್ಮಣ ಇಬ್ಬರೂ ಪಾಶ್ಚಾತ್ತಾಪದಿಂದ ನೆಲಕ್ಕೆ ಹಣೆ ಹಚ್ಚಿ ಗೋಳಾಡುವ ಅಗತ್ಯ ಇರಲಿಲ್ಲಾ. ಅದೆಷ್ಟೇ ಭಾವತೀವ್ರತೆಗೊಳಗಾದರೂ ಪಾತ್ರದ ಮೂಲ ಗುಣಲಕ್ಷಣಗಳನ್ನು ಬಿಡಬಾರದಲ್ಲಾ. ಇಲ್ಲಿ ರಾಮನ ಪಾತ್ರ ಪಾತ್ರೋಚಿತತೆಯನ್ನು ಬಿಟ್ಟು ಅಸಹಾಯಕತೆಯಿಂದಾ ಅತಿಯಾದ ಶೋಕವನ್ನು ತೋರಿಸಿದ್ದು ಅಸಮಂಜಸವೆನಿಸುತ್ತದೆ. ಒಂದು ಪಾತ್ರವನ್ನು ವೈಭವೀಕರಿಸಲು ಇನ್ನೊಂದು ಪಾತ್ರವನ್ನು ಅಸಹಾಯಕವನ್ನಾಗಿಸುವ ಅಗತ್ಯವೂ ಇರಲಿಲ್ಲಾ.
 
ಶೈಲೀಕೃತ ಅಭಿನಯದ ಬಳಕೆ ನಾಟಕಕ್ಕೆ ರಭಸವನ್ನು ತಂದು ಕೊಟ್ಟಿದೆ. ವಾಲಿ ಪಾತ್ರವಾದ ದೇವಿಪ್ರಸಾದ ಎರತೋಡಿ ಹಾಗೂ ಸುಗ್ರೀವನಾದ ಸಿದ್ದು ಕೊಂಡೋಜಿ ಈ ಇಬ್ಬರೂ ನಾಟಕದಾದ್ಯಂತ ತಮ್ಮ ವಿಶಿಷ್ಟ ಆಂಗೀಕಾಭಿನಯದ ಹಾಗೂ ಪಾದರಸದಂತಾ ಚಲನೆಗಳ ಮೂಲಕ ವಿಜ್ರಂಬಿಸಿ ನೋಡುಗರೆದೆಯಲ್ಲಿ ಸಂಚಲನವನ್ನುಂಟು ಮಾಡಿದರು. ಬಾಲ ಸುಗ್ರೀವನಾಗಿ ಅನಿಶ್ ನಟನೆ ನೋಡುಗರನ್ನು ಮಂತ್ರಮುಗ್ದಗೊಳಿಸಿರು. ಶ್ರೀರಾಮನ ಪಾತ್ರವಹಿಸಿದ್ದು ಮುಸ್ಲಿಂ ಯುವಕ ಜಮೀರ್ ಪಠಾಣ. ಆದರೆ ಅದ್ಯಾಕೋ ರಾಮ ಹಾಗೂ ಲಕ್ಷಣರ ಪಾತ್ರಗಳು ವಾಲಿ ಸುಗ್ರೀವರ ಅರ್ಭಟದ ಮುಂದೆ ದುರ್ಬಲವಾದಂತೆನಿಸಿದವು. ಅವರಿಬ್ಬರ ಕಾಸ್ಟೂಮ್ಸ್‌ಗಳೂ ಸಹ ಪಾತ್ರಕ್ಕೆ ಪೂರಕವಾಗಿರಲಿಲ್ಲಾ. ಮುಂದೆಂದೋ ಸುಗ್ರೀವನಿಗೆ ಹಾಕಬಹುದಾದ ಹಾರವನ್ನು ಲಕ್ಷ್ಮಣನ ಪಾತ್ರವು ಆರಂಭದಿಂದಲೇ ಸೊಂಟಕ್ಕೆ ಕಟ್ಟಿಕೊಂಡು ಓಡಾಡುವ ಅಗತ್ಯವೂ ಇರಲಿಲ್ಲಾ. ಆಂಗಿಕ ವಾಚಿಕ ಹಾಗೂ ಸಾತ್ವಿಕಕ್ಕೆ ಕೊಟ್ಟಷ್ಟೇ ಮಹತ್ವವನ್ನು ನಿರ್ದೇಶಕರು ಆಹಾರ್ಯಕ್ಕೂ ಕೊಟ್ಟಿದ್ದರೆ ಚೆನ್ನಾಗಿತ್ತು. ಪ್ರಶಾಂತ ಉದ್ಯಾವರರವರು ಪ್ರಸಾದನ ಮಾಡಿದ್ದು, ಬಹುತೇಕ ಪಾತ್ರಗಳ ಅತಿಯಾದ ಮೇಕಪ್ಪಿನಲ್ಲಿ ಮುಖಗಳ ಚಹರೆಗಳೇ ಕಾಣದಂತಾಗಿದ್ದವು.  ಹನುಮಂತ, ಜಾಂಬವಂತ ಹಾಗೂ ಇತರೆ ಪಾತ್ರದಾರಿಗಳ ಮುಖದ ತುಂಬಾ ಗಾಡಿಯಾಗಿ ಮೇಕಪ್ ಮಾಡಿದ್ದರಿಂದ ಭಾವನೆಗಳೇ ಮರೆಯಾದವು. ವಾನರರು ಹಾಗೂ ಜಾಂಬವಂತನ ಕಾಸ್ಟೂಮ್ಸ್ ಹಾಗೂ ಮೇಕಪ್‌ಗಳು ಖಳನಾಯಕರಂತೆ ಕಾಣುತ್ತಿದ್ದವು.  ಕಾಸ್ಟ್ರೂಮ್ಸ್ ಹಾಗೂ ಮೇಕಪ್‌ಗಳ ಬಗ್ಗೆ ನಿರ್ದೇಶಕರು ಇನ್ನೂ ಹೆಚ್ಚು ಕ್ರಿಯಾಶೀಲತೆ ತೋರಿಸಿದ್ದರೆ ಚೆನ್ನಾಗಿತ್ತು. 

ಆದರೆ.. ಈ ಎಲ್ಲಾ ನ್ಯೂನ್ಯತೆಗಳನ್ನು ನಗಣ್ಯಗೊಳಿಸಿ ನೋಡುಗರನ್ನು ಹಿಡಿದಿಟ್ಟು ಹುಚ್ಚೆಬ್ಬಿಸಿದ್ದು ಸಂಗೀತ, ಬೆಳಕು ಹಾಗೂ ಅಭಿನಯಗಳು. ಸ್ವತಃ ನಿರ್ದೇಶಕ ಗಣೇಶ್‌ರವರೇ ಸಂಗೀತ ಸಂಯೋಜನೆಯನ್ನು ಮಾಡಿದ್ದು ನಾಟಕದಾದ್ಯಂತ ಹಾಡು, ಸಂಗೀತ ಹಾಗೂ ಆಲಾಪಗಳು ಪಾತ್ರಗಳಾಗಿ ಮೂಡಿಬಂದಂತಿವೆ. ಯಕ್ಷಗಾನ ಸಂಗೀತದ ಪಟ್ಟುಗಳನ್ನೆ ಬಹುತೇಕ ಬಳಸಿ ಕೇಳುಗರ ಎದೆಯಲ್ಲಿ ತಾಳಮದ್ದಲೆ ಕುಣಿಸಲಾಗಿದೆ. ಅಭಿನಯದಲ್ಲೂ ಸಹ ಯಕ್ಷಗಾನ, ಕಳರಿ ಹಾಗೂ ಮಣಿಪುರಿ ಕಲೆಗಳನ್ನು ಬ್ಲೆಂಡ್ ಮಾಡಿ ಬಳಸಲಾಗಿದ್ದು ಪ್ರತಿ ಪಾತ್ರದ ಚಲನೆಗಳು ನೋಡುಗರ ಚಿತ್ತದಲ್ಲಿ ಬಿತ್ತರಗೊಂಡವು. ರಾಜು ಮಣಿಪಾಲರವರು ವಿನ್ಯಾಸಗೊಳಿಸಿದ ವಿಶಿಷ್ಟ ಬೆಳಕಿನ ಸಂಯೋಜನೆಯೂ ಸಹ ಪ್ರತಿ ದೃಶ್ಯಗಳನ್ನು ದೃಶ್ಯಕಾವ್ಯವಾಗಿಸುವಲ್ಲಿ ತನ್ನದೇ ಆದ ಕೊಡುಗೆ ನೀಡಿತು. ಅಂತಹ ಅದ್ದೂರಿ ಸೆಟ್‌ಗಳ ಹಂಗಿಲ್ಲದೇ ಒಂದೆರಡು ಪ್ಲಾಟಪಾರಂಗಳನ್ನು ಬಳಸಿಕೊಂಡು ನಟರನ್ನೇ ಹೆಚ್ಚು ಪಳಗಿಸಿ, ಪೂರಕವಾಗಿ ರಂಗತಂತ್ರಗಳನ್ನು ಸಮರ್ಥವಾಗಿ ಬಳಸಿಕೊಂಡು ಅನನ್ಯ ನಾಟಕವೊಂದನ್ನು ಕಟ್ಟಿಕೊಟ್ಟ ಯುವ ನಿರ್ದೇಶಕ ಎಂ.ಗಣೇಶ್ ನಿಜಕ್ಕೂ ಅಭಿನಂದನಾರ್ಹರು. 

ಈ ನಾಟಕ ಶೇಷಗಿರಿ ಗ್ರಾಮದಲ್ಲಿ ಮೊದಲ ಪ್ರದರ್ಶನವಾದ ನಂತರ ಎರಡನೇ ಪ್ರದರ್ಶನ ರಂಗಶಂಕರದಲ್ಲಿ ಮಾಡಲಾಯಿತು. ರಂಗಶಂಕರದಲ್ಲಿ ನಾಟಕ ನೋಡಿದವರು ನೋಡದೇ ಇರುವ ರಂಗಾಸಕ್ತರಿಗೆ ಅದೆಂತಾ ಅಸೂಯೆ ಬರುವಂತೆ ಈ ನಾಟಕದ ಕುರಿತು ಹೇಳಿದರೆಂದರೆ ಹಲವಾರು ರಂಗಾಸಕ್ತರು ವಾಲಿವಧೆ ನಾಟಕವನ್ನು ಮತ್ತೆ ಪ್ರದರ್ಶನಗೊಳಿಸಲು ರಂಗಶಂಕರದವರಿಗೆ ಒತ್ತಡ ಹೇರತೊಡಗಿದರು. ಕೆಲವರು ತಾವೇ ರಂಗಶಂಕರದ ಬಾಡಿಗೆಯನ್ನು ತುಂಬಿದರು. ಪ್ರೇಕ್ಷಕರ ಒತ್ತಾಯದ ಮೇರೆಗೆ ಕಳೆದ ತಿಂಗಳು ರಂಗಶಂಕರದಲ್ಲಿ ವಾಲಿವಧೆಯ ಮತ್ತೆರಡು ಪ್ರಯೋಗಗಳಾದವು. ಈಗ ಮೇ 19 ರಂದು ಎಡಿಎ ರಂಗಮಂದಿರದಲ್ಲಿ ಪ್ರದರ್ಶನಗೊಂಡಾಗಲೂ ಸಹ ರಂಗಮಂದಿರದ ಮೇಲೆ ಕೆಳಗೆ ಪ್ರೇಕ್ಷಕರು ಕಿಕ್ಕಿರಿದು ಕೂಡಲು ಖುರ್ಚಿಗಳು ಸಿಗದವರು ನೆಲದಲ್ಲಿ ಕುಳಿತೇ ನಾಟಕ ನೋಡಿದರು. ಒಳಗೆ ಸ್ಥಳವಿಲ್ಲದೇ ಕೆಲವರು ನಿರಾಸೆಯಿಂದಾ ವಾಪಸ್ ಹೋದರು.

ಕನ್ನಡ ನಾಟಕಗಳಿಗೆ ಪ್ರೇಕ್ಷಕರೆ ಬರುವುದಿಲ್ಲಾ ಎನ್ನುವ ಹಪಾಹಪಿ ಇದ್ದೇ ಇದೆ. ಅನುದಾನಕ್ಕಾಗಿಯೇ ಅವಸರದಲ್ಲಿ ನಾಟಕ ಮಾಡುವವರು ಹೆಚ್ಚಿದ್ದರಿಂದ ಕಳಪೆ ನಾಟಕಗಳು ನಿರ್ಮಾಣವಾಗಿ ಬೆಂಗಳೂರು ರಂಗಭೂಮಿ ಪ್ರೇಕ್ಷಕರನ್ನು ಕಳೆದುಕೊಳ್ಳುತ್ತಿದೆ. ಇಂತಹ ನಾಟಕಗಳನ್ನು ಮಾಡಿದರೆ ಪ್ರೇಕ್ಷಕರೇ ಒತ್ತಾಯ ಮಾಡಿ ನಾಟಕ ಕರೆಸಿ ನೋಡಲು ಬಯಸುತ್ತಾರೆಂಬುದಕ್ಕೆ ವಾಲಿವಧೆ ನಾಟಕವೇ ಸಾಕ್ಷಿ. ಉತ್ತಮ ನಾಟಕಗಳು ಅಕಾಡೆಮಿಕ್ ರೆಪರ್ಟರಿ ಹಾಗೂ ರಂಗಶಾಲೆಗಳಿಂದ ಮಾತ್ರ ನಿರ್ಮಾಣಗೊಳ್ಳಲು ಸಾಧ್ಯ ಎನ್ನುವ ಮಿಥ್‌ನ್ನು ಶೇಷಗಿರಿಯ ರಂಗತಂಡವು ಒಡೆದು ಹಾಕಿತು. ಯಾವುದೇ ಅಕಾಡೆಮಿಕ್ ಟ್ರೇನಿಂಗ್ ಇಲ್ಲದ ಕೃಷಿ ಕಾರ್ಮಿಕ ವೃತ್ತಿಯ ಯುವಕರು ಟ್ರೇನ್ಡ್ ಕಲಾವಿದರನ್ನು ಮೀರಿಸುವಂತೆ ಅಭಿನಯಿಸಲು ಸಾಧ್ಯ ಎನ್ನುವುದನ್ನು ಈ ವಾಲಿವಧೆ ನಾಟಕ ಸಾಬೀತು ಪಡಿಸಿತು. ನಮ್ಮ ಗ್ರಾಮೀಣ ಯುವಕರು ಅತ್ಯಂತ ಪ್ರತಿಭಾವಂತರಾಗಿದ್ದು ಸೂಕ್ತ ಮಾರ್ಗದರ್ಶನ ಹಾಗೂ ಕೌಶಲ್ಯಪೂರ್ಣ ನಿರ್ದೇಶನ ಸಿಕ್ಕರೆ ಅದ್ಭುತವನ್ನು ನಾಟಕ ರಂಗದಲ್ಲಿ ಸಾಧಿಸಿ ತೋರಿಸಲು ಸಿದ್ದವಾಗಿದ್ದಾರೆ ಎನ್ನುವುದಕ್ಕೆ ಈ ನಾಟಕವೇ ಸಾಕ್ಷಿ. ಹಾಗೂ ರಂಗಭೂಮಿಂiiನ್ನು ಗಂಭೀರವಾಗಿ ತೆಗೆದುಕೊಂಡ ಇತ್ತೀಚಿನ ಕೆಲ ಯುವ ನಿರ್ದೇಶಕರು ರಂಗಭೂಮಿಯಲ್ಲಿ ವಿಭಿನ್ನ ರೀತಿಯ ಪ್ರಯೋಗಗಳನ್ನು ಮಾಡುತ್ತಿದ್ದು ಆಧುನಿಕ ಕನ್ನಡ ರಂಗಭೂಮಿಯ ಬೆಳವಣಿಗೆಗೆ ಆಶಾಕಿರಣ ಮೂಡಿಸಿದ್ದಾರೆ. ಅಂತವರಲ್ಲಿ ಬಹುಮುಖಿ ಪ್ರತಿಭೆ ಎಂ.ಗಣೇಶ್ ರವರೂ ಒಬ್ಬರು ಎನ್ನುವುದನ್ನು ವಾಲಿವಧೆ ನಾಟಕದ ಮೂಲಕ ಸಾಬೀತುಪಡಿಸಿದ್ದಾರೆ..

ರಂಗನಿರ್ದೇಶಕ ಎಂ.ಗಣೇಶ್ ರವರಿಗೆ ಡಾ.ವಿಜಯಮ್ಮನವರಿಂದ ಗೌರವ
ಸಿಜಿಕೆ ರಾಷ್ಟ್ರೀಯ ರಂಗೋತ್ಸವದಲ್ಲಿ ಬೇರೆ ಭಾಷೆಗಳ ನಾಟಕಗಳ ಜೊತೆಗೆ ನಮ್ಮದೆ ನೆಲದ ಉತ್ತಮ ನಾಟಕವನ್ನು ಆಯ್ಕೆ ಮಾಡಿದ ರಂಗೋತ್ಸವದ ನಿರ್ದೇಶಕಿ ಡಾ.ವಿಜಯಮ್ಮನವರಿಗೆ ಹಾಗೂ ರಂಗನಿರಂತರದ ಬಳಗಕ್ಕೆ ನಿನ್ನೆ ನಾಟಕ ನೋಡಿ ಸಂತಸಪಟ್ಟ ಎಲ್ಲಾ ಪ್ರೇಕ್ಷಕರೂ ವಂದನೆಗಳನ್ನು ಅಭಿನಂದನೆಗಳನ್ನು ಹೇಳಲೇಬೇಕಿದೆ. ಇಂತಹ ಹೊಸ ಆಲೋಚನೆಯ ನಾಟಕಗಳು ಯುವ ರಂಗ ನಿರ್ದೇಶಕರಿಗೆ ಮಾದರಿಯಾಗಬೇಕಿದೆ. ಗ್ರಾಮೀಣ ಪ್ರದೇಶದ ಕಲಾವಿದರ ಅಮೋಘವಾದ ಅಭಿನಯ ಹೊಸ ತಲೆಮಾರಿನ ನಟರಿಗೆ ಪ್ರೇರಣೆಯನ್ನು ಕೊಡಬೇಕಿದೆ. ಮತ್ತೊಮ್ಮೆ ಕನ್ನಡ ರಂಗಭೂಮಿ ಎಪ್ಪತ್ತು ಎಂಬತ್ತರ ದಶಕದ ಹಳಹಳಿಕೆಯನ್ನು ಬಿಟ್ಟು ಹೊಸ ಮನ್ವಂತರದತ್ತ ದಾಪುಗಾಲಿಡಬೇಕಿದೆ. ರಂಗಭೂಮಿ ಬೆಳೆಯಲು ಹಾಗೂ ಉಳಿಯಲು ಅಂತಹ ಸಕಾರಾತ್ಮಕ ಹಾಗೂ ಕ್ರಿಯಾಶೀಲ ಬದಲಾವಣೆ ಈಗಿನ ತುರ್ತು ಅಗತ್ಯವಾಗಿದೆ.  

                                        -ಶಶಿಕಾಂತ ಯಡಹಳ್ಳಿ     
 
(ಪೊಟೋ ಕರ್ಟಸಿ  ಥಾಯ್ ಲೊಕೇಶ್)



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ