ಭಾನುವಾರ, ಫೆಬ್ರವರಿ 23, 2014

ಗಾಂಧಿ ಹೆಸರಲ್ಲಿ.... (ಪ್ರಹಸನ)



                         


( ಗಾಂಧಿವಾದ ಎನ್ನುವುದು ತೋರುಂಬ ಲಾಭವಾಗಿದೆ. ಗಾಂಧಿ ಹೆಸರೇ ದುರುಪಯೋಗವಾಗುತ್ತಿದೆ. ನಿಜವಾದ ಗಾಂಧಿವಾದಿಗಳು ನಿರ್ಲಕ್ಷಕ್ಕೆ  ಹಾಸ್ಯಕ್ಕೆ ಒಳಗಾಗುತ್ತಿದ್ದಾರೆ. ಇಂತಹ ಪ್ರಸ್ತುತ ಸಂದರ್ಭದಲ್ಲಿ  ವೃತ್ತಿನಿರತ ಕಳ್ಳನೊಬ್ಬ ಪ್ರಾಮಾಣಿಕ ಗಾಂಧಿವಾದಿಯೊಬ್ಬನನ್ನು ಹೇಗೆ ಕಳ್ಳನೆಂದು ಸಾಬೀತುಪಡಿಸಿ ಪರಿಸ್ಥಿತಿಯ ಲಾಭವನ್ನು ಪಡೆದು ರಾಜಕಾರಣಿಯಾಗುತ್ತಾನೆ ಎನ್ನುವುದನ್ನು  ಪ್ರಹಸನ ರೂಪದಲ್ಲಿ ಇಲ್ಲಿ ಬರೆಯಲಾಗಿದೆ. ಈಗಾಗಲೇ ಈ ಪ್ರಹಸನ ಚಿಕ್ಕ ನಾಟಕವಾಗಿ 2004 ಜನವರಿ 1 ರಂದು ನಯನ ಸಭಾಂಗಣದಲ್ಲಿ 'ಸೃಷ್ಟಿ ದೃಶ್ಯಕಲಾಮಾಧ್ಯಮಿ ಅಕಾಡೆಮಿ' ಯ ವಿದ್ಯಾರ್ಥಿಗಳಿಂದ ಪ್ರದರ್ಶನಗೊಂಡಿದೆ. ಹಾಗೂ 2014 ಫೆಬ್ರವರಿ 8 ರಂದು ಮಲ್ಲೇಶ್ವರಂನಲ್ಲಿ 'ಅವಿಷ್ಕಾರ ' ಸಾಂಸ್ಕೃತಿಕ ಸಂಘಟನೆ ಆಯೋಜಿಸಿದ ಬೀದಿನಾಟಕೋತ್ಸವದಲ್ಲಿ 'ಇಪ್ಟಾ ಸಾಂಸ್ಕೃತಿಕ ಸಂಘಟನೆಯ ಕಲಾವಿದರಿಂದ ಬೀದಿ ನಾಟಕವಾಗಿ ಪ್ರದರ್ಶನಗೊಂಡಿದೆ. ಈ ಎರಡೂ ಕಡೆ ನಾಟಕವನ್ನು ಶಶಿಕಾಂತ ಯಡಹಳ್ಳಿ ಬರೆದು ನಿರ್ದೇಶಿಸಿದ್ದಾರೆ. ಗಾಂಧಿ ಹೆಸರಲ್ಲಿ ನಾಟಕದ ಸ್ಕ್ರಿಪ್ಟ್ ಹೀಗಿದೆ........)


 ( ಗಾಂಧಿವಾದಿಯೊಬ್ಬ ತನ್ನಿಬ್ಬರು ಸ್ನೇಹಿತರೊಂದಿಗೆ ಮಾತಾಡುತ್ತಿದ್ದಾಗ ಕಳ್ಳನ್ನೊಬ್ಬ  ಯಾರದೋ ಜೇಬಿನಿಂದ ಪರ್ಸನ್ನು ಎಗರಿಸೋದನ್ನ ನೋಡ್ತಾನೆ.)

ಗಾಂಧಿವಾದಿ       :         ಅಯ್ಯೋ ಅಲ್ಲಿ ನೋಡ್ರೋ?  ಕಳ್ಳ- ಕಳ್ಳ.........
ಸ್ನೇಹಿತ         :         ಎಲ್ಲೋ ಎಲ್ಲಿ?
ಗಾಂಧಿವಾದಿ       :         ಅಲ್ಲಿ ನೋಡೊ. ಪರ್ಸ ಎತ್ಕೊಂಡು ಆರಾಮಾಗಿ ಹೋಗ್ತಿದ್ದಾನೆ.
ಸ್ನೇಹಿತ         :         ಹೋಗ್ಲಿ ಬಿಡೋ ನಮಗ್ಯಾಕೆ? ಪರ್ಸ ನಮ್ಮದೇನಲ್ವಲ್ಲಾ...
ಸ್ನೇಹಿತ         :         ಇವತ್ತೇ ಸಂಬಳ ತಗೊಂಡಿದ್ದಿಯಾ, ಮನೆಗೆ ಹೋಗಿ ಎಂಜಾಯ್ ಮಾಡು,                               ಇದೆಲ್ಲಾ ಯಾಕೆ?
ಗಾಂಧಿವಾದಿ       :         ಹಾಂಗಂದ್ರೇಗೆ. ನಾನು ಗಾಂಧಿವಾದಿ ಅನ್ಯಾಯ ಕಂಡು ಸುಮ್ಮನಿರೋದು                                ಮಹಾಪರಾದ.
ಸ್ನೇಹಿತ         :         ಅಲ್ಲಯ್ಯಾ ಅನ್ಯಾಯ ನಿನಗಾದ್ರೆ ಪ್ರತಿಭಟಿಸೋವಂತೆ. ಊರ ಉಸಾಬರಿ ನಿನಗ್ಯಾಕೆ?
ಸ್ನೇಹಿತ         :         ಮತ್ತೊಬ್ರದ್ದು ತಗೊಂಡು ನಮಗೇನು? ಸಧ್ಯ ನನ್ನ ಪರ್ಸ ಸೇಫಾಗಿದೆ.
ಸ್ನೇಹಿತ         :         ಬಸವಣ್ಣನವರು ಹೇಳಿಲ್ವೇನೋ ನೆರೆಮನೆಯವರ ದುಃಖಕ್ಕೆ ಅಳುವವರ ಮೆಚ್ಚನಾ                               ಕೂಡಲಸಂಗಮ ದೇವ ಅಂತ.
ಗಾಂಧಿವಾದಿ       :         ಥೂ! ನಾನು ಬಸವಣ್ಣ ಅಲ್ಲಯ್ಯ. ಗಾಂಧಿವಾದಿ. ಸತ್ಯಕ್ಕಾಗಿ ನನ್ನ ಹೋರಾಟ. ಈಗ                               ನೋಡಿ ನಾನೇನು ಮಾಡ್ತೇನೆ ಅಂತಾ..  ( ಕಳ್ಳನ ಹಿಂದೆ ಓಡ್ತಾನೆ) ಕಳ್ಳ-ಕಳ್ಳ                               ಹಿಡಿರಿ....ಹಿಡಿರಿ....
(ಆತನ ಹಿಂದೆ ಇನ್ನೂ ಕೆಲವು ಜನ ಕಳ್ಳ ಕಳ್ಳ ಅಂತ ಕೂಗ್ತಾ ಗಾಂಧಿವಾದಿ ಹಿಂದೆ ಓಡ್ತಾರೆ. ಗಲಾಟೆ ಕೇಳಿ ಹಿಂದೆ ತಿರುಗಿದ ಕಳ್ಳ ತನ್ನ ಅಂಗಿ ತೆಗೆದು ಬಿಸಾಕ್ತಾನೆ. ಓಡಿ ಬಂದು ಗಾಂಧಿವಾದಿಯನ್ನು ತಬ್ಬಿ ಹಿಡಿದುಕೊಂಡು)


ಕಳ್ಳ               :         ಹಿಡಿದೆ... ಹಿಡಿದೇ ಬಿಟ್ಟೆ. ಕಳ್ಳ.. ಕಳ್ಳ ಸಿಕ್ಕಾಕ್ಕೊಂಡಾ.... (ಅಂತಾ ಕಿರಿಚ್ತಾನೆ.)
ಗಾಂಧಿವಾದಿ       :         (ಕಕ್ಕಾಬಿಕ್ಕಿಯಾಗಿ) . ಬಿಡೋ ನನ್ನ, ಕಳ್ಳ ನನ್ನ ಮಗನೇ.
ಕಳ್ಳ               :         (ಆದನ್ನೇ ಮತ್ತೆ ರಿಪೀರ್ಟ ಮಾಡ್ತಾ) ಬಿಡೋ ನನ್ನ, ಕಳ್ಳ ನನ್ನ ಮಗನೇ.
ಗಾಂಧಿವಾದಿ       :         ನೀನು ಕಳ್ಳ
ಕಳ್ಳ               :         ನಿಮ್ಮಪ್ಪ ಕಳ್ಳ.
ಗಾಂಧೀವಾದಿ     :         ನಿಮ್ಮ ತಾತ ಕಳ್ಳ
ಕಳ್ಳ               :         ನಿಮ್ಮ ಮುತ್ತಾತಾ ಕಳ್ಳ
                             (ಅಷ್ಟರಲ್ಲಿ ಜನ ಸೇರ್ತಾರೆ)
ಒಬ್ಬ               :         ಏನು? ಎನಾಗ್ತಿದೆ ಇಲ್ಲಿ?
ಗಾಂಧೀವಾದಿ     :         ನೋಡಿ ಸ್ವಾಮಿ. ಈತ ಪರ್ಸ ಕದ್ದಕೊಂಡು ಓಡಿ ಹೋಗ್ತಿದ್ದಾ. ನಾನು ರೆಡ್                               ಹ್ಯಾಂಡಾಗಿ  ಹಿಂಡ್ಕೊಂಡಿದ್ದೇನೆ.
ಕಳ್ಳ               :         ಅಯ್ಯೋ! ಎಂತಾ ಮಾತು ಅಂತಾ ಹೇಳ್ತಿದ್ದಿಯಾ? ಶಾಂತಂ, ಪಾಪಂ. ನೋಡಿ                              ಸಾರ್.. ಇವನೇ ಕಳ್ಳ.. ಜೇಬುಕಳ್ಳ.. ನಾನೇ ಹಿಡಿದ್ದಿದು ರೆಡ್ ವೈಟ್ ಹ್ಯಾಂಡಾಂಗಿ.
ಗಾಂಧಿವಾದಿ       :         ಇವನೇ ಕಳ್ಳ
ಕಳ್ಳ               :         ಇವನು ಜೇಬು ಕಳ್ಳ.
                             (ಅಷ್ಟರಲ್ಲಿ ಪೊಲೀಸ್ ರತಾನೆ)
ಪೊಲೀಸ್         :         ... ಪಕ್ಕಕ್ಕೆ ಬನ್ನಿ ನಾನು ವಿಚಾರಿಸ್ತೇನೆ. .. ಏನಡಿತಿದೇ ಇಲ್ಲಿ?
ಕಳ್ಳ               :         ಸರಿಯಾದ ಟೈಮಿಗೆ ಬಂದ್ರಿ ಪೊಲೀಸಣ್ಣಾ ಕಳ್ಳನ ಹಿಡಿದಿದೀನಿ. ಅದೂ                               ಜೇಬುಗಳ್ಳನ್ನ, ರೆಡ್ ಹ್ಯಾಂಡಾಗಿ.
ಗಾಂಧಿವಾದಿ       :         ಅಯ್ಯೋ ಉಲ್ಟಾ ಹೊಡಿತವನೇ, ಕಳ್ಳ ನನ್ನ ಮಗನೇ ಮಾಡೋದೆಲ್ಲಾ ಮಾಡಿಬಿಟ್ಟು                               ಸುಳ್ಳು ಬೊಗಳ್ತೀಯ.
ಕಳ್ಳ               :         ನೋಡ್ರಣ್ಣಾ, ಸಂಭಾವಿತರಿಗೆ... ಸಜ್ಜಣರಿಗೆ ಕಾಲಾ ಇಲ್ಲಾ ಕಣಣ್ಣಾ..
ಪೋಲಿಸ್         :         ಉಷ್. ಸುಮ್ನಿರ್ರಿ. ಇಬ್ರೂ ಅರಚಡಬ್ಯಾಡ್ರಿ. ಒಬ್ಬೊಬ್ಬರಾಗಿ ಹೇಳ್ರಿ ಜುಬ್ದಾ                              ನೀನು ಹೇಳು.


ಗಾಂಧಿವಾದಿ       :         ನೋಡಿ ಸ್ವಾಮಿ, ಈತ ಒಬ್ಬರ  ಜೇಬಿನಿಂದ ಪರ್ಸ ಕದ್ದಿದ್ದನ್ನ ನಾನೇ ನನ್ನ                               ಕಣ್ಣಾರೆ ನೋಡಿದೀನಿ.
ಪೊಲೀಸ          :         ಅದಕ್ಕೇನು ಸಾಕ್ಷಿ?
ಗಾಂಧಿವಾದಿ       :         ಅಗೋ ಅಲ್ಲಿ ನಿಂತಾರಲ್ಲ ಬಿಳಿ ಅಂಗಿ ಹಾಕ್ಕೊಂಡು ಅವರದೇ ಪರ್ಸ ಈತ ಕದ್ದಿದ್ದು.
ಬಿಳಿಯಂಗಿಯಾತ :         ಏನು ನನ್ನ ಪರ್ಸಾ ಇಲ್ವಲ್ಲಾ? ನನಗೇನು ಗೊತ್ತೇ ಇಲ್ಲಾ?
ಕಳ್ಳ               :         ನೋಡಿ ಸ್ವಾಮಿ ಸುಳ್ಳು ಹೇಳಿ ಸಿಕ್ಕಕೊಂಡ
ಗಾಂಧಿವಾದಿ       :         ಅಯ್ಯೋ ನಾನ್ಯಾಕೆ ಸುಳ್ಳು ಹೇಳ್ಲಿ? ನಿಮ್ಮ ಪರ್ಸ ಇದೆಯೋ ಇಲ್ವೋ ನೋಡ್ಕೋಳ್ಳಿ.
ಬಿಳಿಅಂಗಿಯಾತ   :         (ಚೆಕ್ ಮಾಡಿ) ಅಯ್ಯೋ ನನ್ನ ಪರ್ಸು, ನನಗೆ ಗೊತ್ತಿಲ್ದಂಗೆ ಕದ್ದಿದ್ದಾನಲ್ಲಪೊ.
                             (ಜನ ಕಳ್ಳನನ್ನು ಹಿಡಿದುಕೊಂಡು)
ಜನ               :         ಹಿಡೀರಿ - ಹೊಡೀರಿ ಕಳ್ಳನನ್ನ ಮಗನ್ಗೆ ನಾಲ್ಕು ತದುಕ್ರಿ....
ಕಳ್ಳ               :         ಇರಿ ಇರೀ ಮೊದಲು ಕಳ್ಳ ಯಾರು ಅಂತಾ ಡಿಸೈಡ್ ಆಗಲಿ ಆಮೇಲೆ                               ಹೊಡಿಯೋರಂತೆ. ನಾನೇ ಕಳ್ಳತನಾ ಮಾಡಿದ್ದನ್ನ ಈತ ನೋಡಿದ್ದಾನಾ?
ಪೊಲೀಸ್         :         (ಬಿಳಿಯಂಗಿಯವನತ್ತ ತಿರುಗಿ) ನೋಡಿದ್ದೀರೇನ್ರಿ?
ಬಿಳಿಅಂಗಿಯಾತ   :         ದೇವರಾಣೆ ನೋಡಿಲ್ಲಾ ಸಾರ್. ಕಳ್ಳತನಾ ಆಗಿದ್ದು ಗೊತ್ತಾಗಿದ್ದೇ ಈಗ ಸಾರ್. ನನ್ನ                               ಪರ್ಸ ಕೊಡಿಸಿ ಸಾರ್. ಅದ್ರಲ್ಲಿ ಹತ್ತು ಸಾವಿರ ರೂಪಾಯಿ ಇದೆ ಸಾರ್.
ಪೊಲೀಸ್          :         ಸತ್ಯ ಬೊಗಳಲೇ, ತೆಗಿ ಎಲ್ಲಿದೆ ಪರ್ಸ...ತೆಗಿತಿಯೋ ಎರೋಪ್ಲೇನ್ ಹತ್ತಿಸ್ಲೋ?
ಕಳ್ಳ               :         ಏನ್ರಿ ಇದು. ಅಮಾಯಕನ ಮೇಲೆ ರೋಪ್ ಹಾಕ್ತೀರಾ? ಮಾನವ ಹಕ್ಕುಗಳ                              ಉಲ್ಲಂಘನೆ ಮಾಡ್ತಿರಾ? ನಿಮ್ಮ ಮೇಲೆ ಮೊಕದ್ದಮೆ ಹಾಕ್ತೀನಿ ಸಸ್ಪೆಂಡ್                              ಮಾಡಿಸ್ತೀನಿ. ಮರ್ಯಾದೆ...ಮರ್ಯಾದೆ.
ಪೊಲೀಸ್         :         ಮರ್ಯಾದೆಯಿಂದ ಹೇಳ್ತಿದ್ದೀನಿ ಅವರ ಪರ್ಸ ಕೊಟ್ಟು ಬಿಡು ಇಲ್ಲಾಂದ್ರೆ.....
ಕಳ್ಳ               :         ಅರೇ ಕಳ್ಳ ಇಲ್ಲೇ ಇದ್ದಾನಲ್ಲ ಹಿಡ್ಕೊಳ್ಳಿ ಸ್ವಾಮಿ.
ಪೋಲಿಸ್         :         ಇವನೇ ಕಳ್ಳ ಅಂತ ಹೇಗೆ ಹೇಳ್ತೀಯ.
ಕಳ್ಳ               :         ಅಯ್ಯೋ ಅದು ಬಾಳಾ ಸುಲಬಾ ಸಾರು. ಅವನ ಜೇಬು ಚೆಕ್ ಮಾಡಿ. ಕದ್ದ                              ಮಾಲು ಸಿಕ್ಕೆ ಸಿಗುತ್ತೆ.
ಗಾಂಧಿವಾದಿ       :         ಕದ್ದಿದ್ದು ನೀನು, ನನ್ನತ್ರ ಹ್ಯಾಗಯ್ಯ ಸಿಗುತ್ತೇ?
ಪೊಲೀಸ್          :         ಅನುಮಾನ ಬಂದಮ್ಯಾಗ ಚೆಕ್ ಮಾಡೇ ಬಿಡ್ಬೇಕು.
ಗಾಂಧಿವಾದಿ       :         ಮಾಡ್ಕೋಳ್ಳಿ ಸ್ವಾಮಿ, ಚೆಕ್ ಮಾಡ್ಕೊಳ್ಳಿ, ಬ್ಯಾಡಾ ಎಂದೋರ್ಯಾರು?
ಪೊಲೀಸ್          :         (ಎಲ್ಲಾ ಜೇಬು ಚೆಕ್ ಮಾಡಿ) ಎಲ್ಲಯ್ಯಾ ಇದೆ.  ಯಾವ ಜೇಬಲ್ಲೂ ಏನೂ                               ಇಲ್ವಲ್ಲಯ್ಯಾ.
ಗಾಂಧಿವಾದಿ       :         (ಗಾಬರಿಯಿಂದ) ಅಯ್ಯೋ ಅನ್ಯಾಯ! ನನ್ನ ಪರ್ಸುಕಾಣ್ತಿಲ್ಲ. ಇಲ್ಲೇ ಇದೇ ಜೇಬಲ್ಲಿಟ್ಟಿದ್ದೆ.                                ಮೊದಲು ಕಳ್ಳನ್ನ ಚೆಕ್ಮಾಡಿ ಸ್ವಾಮಿ. ನನ್ನ ಪರ್ಸಇವನೇ ಕದ್ದಿದ್ದಾನೆ. ಇವತ್ತೇ ಸಂಬಳ                               ತಗೊಂಡು ರತಿದ್ದೇ, ಅಯ್ಯೋ ಏನಪ್ಪಾ ಮಾಡೋದು? ನನ್ನ ಹೆಂಡತಿಗೆ ಏನಪ್ಪಾಹೇಳೋದು?
ಪೊಲೀಸ್          :         ಏಯ್ ಹಲ್ಕಾನನ್ನ ಮಗನೆ, ಇವರ ಪರ್ಸು ಏಗ್ರಿಸಿದ್ದಿಯ್ಯಾ ತೆಗಿಯಲೇ.
ಕಳ್ಳ               :         ಮರ್ಯಾದೆ.... ಮರ್ಯಾದೆ. ನಿಮಗ್ಯಾರ್ರಿ ಪೊಲೀಸ್ ನೌಕರಿ ಕೊಟ್ಟಿದ್ದು. ಆತ ನಾಟಕಾ                               ಮಾಡ್ತಿದ್ದಾನೆ. ಅವರ ಪರ್ಸ ಕದ್ದಿದ್ದಲ್ದೇ ತಂದೂ ಹೋಗಿದೆ ಅಂತಾ ಮೂರು ದಾರಿ                                ಸೆರೋವಲ್ಲಿ ನಿಂತು ಬಾಯಿ ಬಡ್ಕೋಂತಿದ್ದಾನೆ. ಮೊದಲು ಟಾಪ್ಟು ಬಾಟಮ್ ಚೆಕ್ಮಾಡಿ.                                ಅಲ್ಲಿ ಸಿಗಲಿಲ್ಲಾಂದ್ರೆ ನನ್ನ ಎಲ್ಲಿ ಬೇಕಾದ್ರೂ ಚೆಕ್ಮಾಡ್ರಿ.
ಪೊಲೀಸ್         :         ಯೋಯ್ ಇಗ ನಿನ್ನ ಮುಂದೆನೇ ಚೆಕ್ ಮಾಡಿದ್ನಲ್ಲಯ್ಯಾ.....
ಕಳ್ಳ               :         ನಾನೇಳಿದ್ದು ಟಾಪ್ ಟು ಬಾಟಮ್ ಅಂತಾ. ನೀವು ಬರೇ ಬಾಟಮ್ ಚೆಕ್                               ಮಾಡಿದಿರಿ ಆದರೆ ಅವನ ಟಾಪ್ನಲ್ಲಿ ನೋಡೇ ಇಲ್ಲ.
ಪೊಲೀಸ್          :         ಹೌದಲ್ಲ, ರೀ ನಿಮ್ಮ ಟೋಪಿ ಕೊಡ್ರಿ ಇಲ್ಲಿ.
ಗಾಂಧಿವಾದಿ       :         ಇದು ಗಾಂಧೀ ಟೋಪಿ. ಹಾಗೆಲ್ಲಾ ಕೊಡೋಕಾಗೋದಿಲ್ಲ.
ಪೊಲೀಸ್          :         ಯಾಕಯ್ಯ ಕೊಡೋದಿಲ್ಲಾ. ಗಾಂಧಿನ್ನೇ ಬಿಡದೇ ಟೋಪಿ ಕಿತ್ಕೊಂಡು ಬೋಳು                                ತಲೇಲಿ ನಿಲ್ಲಿಸಿದ್ದೀವಿ, ಇನ್ನು  ನಿಂದ್ಯಾವ ಮಹಾ ಕೊಡಯ್ಯೋ. (ಕಿತ್ಕೋತಾನೆ.                                 ಅದ್ರೊಳಗಿಂದ ಪರ್ಸ ಬೀಳುತ್ತೆ)
ಗಾಂಧಿವಾದಿ       :         (ಕಕ್ಕಾಬಿಕ್ಕಿಯಾಗಿ) ಪರ್ಸು..... ಟೋಪಿಲಿ..., ಅಯ್ಯೊ ಇದು ಇಲ್ಲಿ ಹ್ಯಾಗೆ ಬಂತು                               ಅಂತ ನನಗ್ಗೋತ್ತೆ ಇಲ್ಲ.
ಕಳ್ಳ               :         ನೋಡಿದ್ರಾ ಸ್ವಾಮಿ ಸತ್ಯ ಏನೂ ಅಂತಾ? (ಬಿಳೀಅಂಗಿಯಾತನಿಗೆ) ರೀ ಸ್ವಾಮಿ                               ಪರ್ಸು ನಿಮ್ಮದಾ ಇಲ್ಲಾ ಅವರದೇನಾ ಅಂತ ನೋಡಿ.
ಬಿಳಿಅಂಗಿಯಾತ   :         (ಪರ್ಸ ಚೆಕ್ ಮಾಡಿ) ಸಾರ್ ಪರ್ಸ ನಂದೆ. ಇದರೊಳಗೆ ನನ್ನ ಪೋಟೋ ಇದೆ.                                ನೋಡಿ. ಅಯ್ಯೋ- ಹಣಾನೇ ಇಲ್ಲಾ ಸಾರ್.....
ಕಳ್ಳ                 :         ಅದ್ಯಾಗೆ ಇರುತ್ತೇ ಹೇಳಿ. ಕಳ್ಳ ಇವನೊಬ್ಬನೇ ಅಲ್ಲಾ ಸಾರ್. ಪರ್ಸಲ್ಲಿರೋ ಹಣಾನ                                   ಇನ್ನೊಬ್ಬನಿಗೆ ಕೊಡೊದನ್ನ ನಾನೇ ನೋಡಿದೀನಿ. ಇವುರದೊಂದು ದೊಡ್ಡ ಗ್ಯಾಂಗೆ                      ಇದೇ ಸಾರ್.. ಇವನು ಹಾಕಿದ್ದಾನಲ್ಲಾ ಅಂಗಿ ಇದೂ ನಂದೇ. ಇವನ                              ಮೆಟ್ಟಿದ್ದಾನಲ್ಲಾ  ಚಪ್ಪಲಿ ಇದೂ  ನಂದೇ. ಟೋಪಿ ಮಾತ್ರ ಅವಂದು.
ಪೊಲೀಸ್           :         ನಿಂದು ಅವನ ಹತ್ರಾ ಹೆಂಗಯ್ಯಾ ಬಂತು?
ಕಳ್ಳ                 :         ಎಲ್ಲಾ ಬಿಚ್ಚಿಟ್ಟು ಕಾರ್ಪೊರೇಶನ್ ನಲ್ಲೀಲಿ ಮುಖ ತೊಳಿತಿದ್ದೆ. ಅಷ್ಟರಲ್ಲಿ                                 ಎಗರಿಸಿಕೊಂಡು ಬಂದಿದ್ದಾನೆ. ಇಲ್ನೋಡಿ ನಾನು ಇನ್ನು ಬನಿಯನ್ ಮೇಲೆ                                 ನಿಂತಿದ್ದೀನಿ. ಕೊಡಲೇ ನನ್ನ ಅಂಗಿ, ನನ್ನ ಚಪ್ಪಲಿ...
ಜನ               :             ಹೊಡಿರಿ ಕಳ್ಳನಿಗೆ (ಒಂದೆರಡು ಧರ್ಮದೇಟು ಕೊಡ್ತಾರೆ)
ಪೊಲೀಸ್         :         ನಿಲ್ಲಿಸ್ರಿ. ಕಾನೂನನ್ನ ಯಾರೂ ಕೈಗೆ ತಗೊಬೇಡಿ. ಮೊದಲೇ ಹೊಡದ್ರೆ                              ಸಾಯೋಹಾಗಿದ್ದಾನವನು. ಏನಾದ್ರೂ ಆಗಿ ಸತ್ರ ಕೊಲೆ ಕೇಸಲ್ಲಿ ನಿಮ್ಮನ್ನ                               ಒಳಗಾಕಬೇಕಾಗುತ್ತೆ. ಹುಷಾರ್ರು... ಹೊರಡಿ ಎಲ್ಲಾ ಹೊರಡಿ...


ಬಿಳಿಯಂಗಿಯಾತ :         ಸಾರ್ ನನ್ನ ಪರ್ಸು.
ಪೊಲೀಸ್         :         ಸಿಕ್ಕಿತಲ್ಲಯ್ಯಾ ನಿನ್ನ ಪರ್ಸ.
ಬಿಳಿಯಂಗಿಯಾತ :         ಸರ್ ಅದರೊಳಗಿದ್ದ ಕಾಸು?
ಕಳ್ಳ               :         ಪರ್ಸ ಸಿಕ್ಕಿದ್ದೆ ನಿನ್ನ ಪುಣ್ಯಾ ಹೋಗಯ್ಯಾ, ಕಾಸಂತೆ ಕಾಸು.
ಗಾಂಧಿವಾದಿ       :         ಅಯ್ಯೋ ನಾನು ಕಳ್ಳ ಅಲ್ಲಾ... ಅವ್ನು ಕಳ್ಳ. ನನ್ನ ಮಾತು ನಂಬಿ...
ಪೊಲೀಸ್          :         ಲೇ ಗಾಂಚಾಲಿ ಮಾಡಿದ್ರೆ ಸ್ಟೇಶನ್ಗೆ ಎಳ್ಕೊಂಡು ಹೋಗಿ ಏರೋಪ್ಲೇನ ಹತ್ತಿಸ್ತೀನಿ
ಕಳ್ಳ               :         (ಕಾಲಿಡಿದು) ಸಾರ್ ಅವ್ನು ಕಳ್ಳ ಸಾರ್,  ನಾನು ಸಜ್ಜನ, ನನಗೆ ಏರೋಪ್ಲೇನ್                               ಹತ್ತಿಸಿ ಪುಣ್ಯ ಕಟ್ಕೊಳ್ಳಿ ಸಾರ್. ಕಳ್ಳನ್ನ ನಾನೇ ಹಿಡಕೊಟ್ಟಿದ್ದು. ಜೀವನದಲ್ಲಿ                                ಒಮ್ಮೆಯಾದ್ರು ವಿಮಾನ ಹತ್ತಿ ಪಾವನ ಅಗ್ತೀನಿ. ನೇರವಾಗಿ ಅಮೇರಿಕಕ್ಕೆ ಕಳ್ಸಿ ಬಿಡಿ                                           ಸಾರ್. ಹಂಗೆ ನಮ್ಮೆಲ್ಲರ ಗುರು ಬುಷ್, ಓಬಾಮಾರನ್ನ ನೋಡಿಕೊಂಡು ಬರ್ತೀನಿ.
ಪೊಲೀಸ್         :         ಯೋ ಬಿಡಯ್ಯಾ ನನ್ನ ಕಾಲು.. ಏರೋಪ್ಲೇನಲ್ಲ ಏರೋಪ್ಲೇನ್.                               (ಗಾಂಧಿವಾದಿ ಕೈ ಹಿಂದೆ ಕೋಲು ತೂರಿಸುತ್ತಾನೆ)
ಗಾಂಧಿವಾದಿ       :         ಕಳ್ಳ ಅವನು. ನಾನಲ್ಲ. ದಯವಿಟ್ಟು ನನ್ನ ಮಾತು ಕೇಳಿ....
ಪೊಲೀಸ್          :         ಮೊದಲು ಇವನ ಬಾಯಿ ಮುಚ್ರಿ. ಜಾಸ್ತಿ ಮಾತಾಡ್ತಾನೆ ಮಗಾ.
                             (ಕಳ್ಳ ಅವನ ಬಾಯಿ ಕಟ್ಟತ್ತಾನೆ, ಆತನ ಜುಬ್ಬಾ ಪೈಜಾಮ, ಚಪ್ಪಲಿ ಬಿಚ್ಚಿ                               ಹಾಕಿಕೊಂಡು ರಾಜಕಾರಣಿಯಂತಾಗುತ್ತಾನೆ. ಗಾಂಧಿವಾದಿ ಅರೆಬೆತ್ತಲೆ ಗಾಂಧಿ                               ಹಾಗೇ ಕಾಣುತ್ತಾನೆ.)
ಕಳ್ಳ               :         (ಗಾಂಧಿವಾದಿ ಕಿವಿಯಲ್ಲಿ) ನೋಡು ಗುರು ಈಗಿನ ಕಾಲದಲ್ಲಿ ಗಾಂಧಿ                              ಡ್ರೆಸ್, ಸತ್ಯ ಸತ್ಯ ಅನ್ನೋ ನಿಮ್ಮಂತವರಿಗೆ ಸೂಟ್ ಆಗೋಲ್ಲ. ನಮ್ಮಂತವರಿಗೆ                              ಸೂಟ್ ಆಗುತ್ತೆ. ಪರ್ಪೆಕ್ಟ ಆಗುತ್ತೆ. (ಸ್ಟೈಲಾಗಿ ತನ್ನ ಚೆಡ್ಡಿ ಜೇಬಿನಿಂದ ಗಾಂಧಿವಾದಿಯ                              ಪರ್ಸ ಎತ್ತುತ್ತಾನೆ.)
ಗಾಂಧಿವಾದಿ       :         (ಮಾತನಾಡಲಾಗದೇ ಅದು ನನ್ನದೇ ಪರ್ಸ ಅಂತಾ ಹೇಳಲು ಪ್ರಯತ್ನಿಸ್ತಾನೆ.                               ಯಾರು ಕೇಳೋರಿಲ್ಲ)
                             (ಕಳ್ಳ ಅಲ್ಲೇ ಇದ್ದ ಎತ್ತರದ ಸ್ಥಳದ ಮೇಲೆ ಹತ್ತಿ ನಿಂತು ಭಾಷಣ ಮಾಡ್ತಾನೆ.
ಕಳ್ಳ               :         ನೋಡಿ ಮಹಾಜನಗಳೇ ರಾಷ್ಟ್ರಪಿತ ಗಾಂಧೀಜಿ ಏನು ಹೇಳಿದ್ದಾರೆ ಅಂತಂದ್ರೆ..
ಒಬ್ಬ               :         ಕೆಟ್ಟದ್ದನ್ನ ನೋಡಬೇಡಿ ಅಂತ.
ಕಳ್ಳ               :         ಅಲ್ಲಾ..  ಕೆಟ್ಟದ್ದನ್ನ ನೋಡಿದ್ರು ಪರವಾಗಿಲ್ಲ ಬಾಯಿಬಿಡಬ್ಯಾಡ್ರಿ ಅಂತಾ ಹೇಳಿದ್ದಾರೆ.                               ಅದಕ್ಕೆ ಮಹಾತ್ಮರು ಬಾಯಿ ಮುಚ್ಚಿಕೊಂಡಿರೋ ಕೋತಿನಾ ತೋರ್ಸಿದ್ದಾರೆ.  ಬಾಯಿ                               ಬಿಟ್ರೆ ಏನಾಗುತ್ತೆ, ಇವನಂಗೆ ಬಾಯಿ ಮುಚ್ಚಿಸಬೇಕಾಗುತ್ತೆ. ಮತ್ತೆ..... ಮಹಾತ್ಮರು                               ಏನು ಹೇಳಿದ್ದಾರೆ ಅಂತಂದ್ರೆ.. ಇದ್ದವರು ಇಲ್ಲದವರಿಗೆ ದಾನಾ ಮಾಡಿ ಅಂತಾ.                               ಗಾಂಧಿವಾದಿಯ ಪರ್ಸ ತೆಗೆದು. ಅದರಲ್ಲಿರೋ ನೂರರ ನೋಟು ಎಲ್ಲರಿಗೂ                                                   ಹಂಚುತ್ತಾನೆ.
                             (ಪೊಲೀಸ್ ಕೂಡ ಹಣ ಪಡೆದು ಆತನ ಬೆಂಗಾವಲಿಗೆ ನಿಲ್ಲುತ್ತಾನೆ)
ಕಳ್ಳ               :         ಮಹಾತ್ಮಾ ಗಾಂಧೀಜಿಗೆ
                             (ಎಲ್ಲರೂ ಸುಮ್ಮನಿರುತ್ತಾರೆ)
ಕಳ್ಳ               :         ಗಾಂಧೀ ನೋಟಿಗೆ
ಎಲ್ಲರೂ           :         ಜೈ
ಕಳ್ಳ               :         ಗಾಂಧಿ ಟೋಪಿಗೆ
ಎಲ್ಲರೂ           :         ಜೈ
ಕಳ್ಳ               :         ಗಾಂಧೀಜೀಕಿ...
ಎಲ್ಲರೂ           :         ಜೈ
ಒಬ್ಬ               :         ಜನನಾಯಕರಿಗೆ
ಎಲ್ಲರೂ           :         ಜೈ
ಗಾಂಧಿವಾದಿ       :         ಏನೋ ಸನ್ನೆ ಮಾಡಿ ಜೋರಾಗಿ ಕೂಗಾಡುತ್ತಾನೆ.
ಪೊಲೀಸ್          :         ಸರ್.. ಕಳ್ಳನ್ನ ಸ್ಟೇಶನ್ಗೆ ತಂಗೊಂಡೋಗಿ ಏರೋಪ್ಲೇನ್ ಹತ್ತಿಸ್ತೇನೆ.
ಕಳ್ಳ               :         ಇರು ಹಾಗೆಲ್ಲಾ ಹಿಂಸೆ ಮಾಡಬಾರ್ದು. ಗಾಂಧಿಜಿ ನಮಗೆಲ್ಲಾ ಏನು ಹೇಳಿದ್ದಾರೆ,                               ಅಹಿಂಸೋ ಪರಮೋ ಧರ್ಮ ಅಂತ.
                             (ಗಾಂಧಿ  ವಾದಿ ಹತ್ತಿರ ಬಂದು ಕಿವಿಯಲ್ಲಿ)
ಕಳ್ಳ     :  ಯಾಕೆ  ಸ್ವಾಮಿ ಗಾಂಧಿವಾದಿಗಳೇ, ನಿಮಗೆ ನಿಜಕ್ಕೂ ಧನ್ಯವಾದ ಹೇಳಲೇ ಬೇಕು.                                 ಆರ್ಡಿನರಿ ಜೇಬುಗಳ್ಳನಾದ ನನ್ನನ್ನ ಇಂದು ಜನನಾಯಕನನ್ನಾಗಿ ಮಾಡಿ ನನ್ನ          ಉದ್ಧಾರಾ ಮಾಡಿದ್ರಿ. ಇನ್ಮೇಲೆ ನನ್ನ ಜಾಗ ಬಸ್ ಸ್ಟಾಂಡ್ ರೈಲ್ವೆ ಸ್ಟೇಶನ್ ಅಲ್ಲಾ.                                      ಪಿಕ್ ಪಾಕೆಟ್ ಮಾಡೋದು ಮರ್ಯಾದೆ ಕೆಲಸಾನೂ ಅಲ್ಲಾ. ನನ್ನ ಜಾಗ          ಏನಿದ್ರೂ ವಿಧಾನ ಸೌಧ. ನನ್ನ ಕೆಲಸಾ ಇನ್ಮೇಲೆ ಕೋಟಿಗಳ ಲೂಟಿ. ಅದೇನೋ                                        ಅಂತಾರಲ್ಲಾ... ಬೇಟೆ ಆಡಿದ್ರೆ ಆನೇನಾ ಆಡ್ಬೇಕು, ಲೂಟಿ ಮಾಡಿದ್ರೆ ಕಜಾನೇನಾ          ಲೂಟಿ ಮಾಡ್ಬೇಕು ಅಂತಾ.  ನನಗೆ ಬದುಕಿನ ಪಾಠ ಹೇಳಿಕೊಟ್ಟ ಗುರು ನೀವು,                                         ನಿಮ್ಮ ಪಾದಾ ಜೆರಾಕ್ಸ ಮಾಡಿ ಕಳಿಸಿಕೊಡಿ, ದಿನಾ ಪೂಜೆ ಮಾಡ್ತೀನಿ.
ಗಾಂಧಿವಾದಿ       :         ಹೂ...ಹೂಂ.. (ಅಂತಾ ಏನೋ ಹೇಳ್ತಾನೆ.)
ಕಳ್ಳ               :         ಓಹೋ ನಾನು ಕದ್ದಿರೋ ಪರ್ಸ ನಿಮ್ಮ ಟೋಪಿಲಿ ಹ್ಯಾಗೆ ಬಂತು ಅಂತಾ                               ಕೇಳ್ತೀರೋ? ನಾನೇ ನಿಮ್ಮನ್ನ ಹಿಡ್ಕೊಂಡಾಗ ಕದ್ದ ಪರ್ಸ ನಿಮ್ಮ ಟೋಪಿಲಿಟ್ಟಿದ್ದೆ.                               ನಿಮ್ಮ ಪರ್ಸ ಕದ್ದು ನನ್ನ ಜೇಬಲ್ಲಿಟ್ಟುಕೊಂಡೆ. ನನ್ನ ಪ್ಲಾನು ಸೆಕ್ಸಸ್ ಆಯಿತು.                               ಹ್ಹ..ಹ್ಹ....ಹ್ಹ.....ವಿಪರ್ಯಾಸ ನೋಡಿ.... ಗಾಂಧಿವಾದಿ ಕಳ್ಳ ಆದ, ಕಳ್ಳ ರಾಜಕಾರಣಿ                               ಆದ. ಎಷ್ಟೇ ಆದರೂ ನೀವು ನನಗೆ ಒಂದು ದಿಕ್ಕು ತೋರಿಸಿದ ಗುರುಗಳು, ನಾನೂ                               ನಿಮಗೊಂದು ಪಾಠ ಹೇಳಿ ಋಣಮುಕ್ತನಾಗ್ತೀನಿ. ಗಮನಾ ಇಟ್ಟು ಕೇಳಿ.                                ಗಾಂಧಿವಾದ ಇರೋದು ಬರೀ ಜನರನ್ನ ನಂಬಿಸೋಕೆ ಹೊರತು ಆಚರಿಸೋಕಲ್ಲ.                                      ನಿಮ್ಮಂತ ಸತ್ಯವಂತರಿಗೆ ಕಾಲ ಸರಿಯಲ್ಲ. ಗಾಂಧೀಜಿಯ ಮೂರು ಕೋತಿಗಳು                                ಹೇಳೊದನ್ನ ನೋಡಿ ಬದುಕಲು ಕಲೀರಿ. ಕೆಟ್ಟದನ್ನ ಕೇಳಬೇಡಿ, ಕೆಟ್ಟದ್ದನ್ನ                                 ನೋಡಬ್ಯಾಡಿ, ಕೇಳಿ ನೋಡಿದ್ರು ಬಾಯಿ ಮುಚ್ಕೊಂಡಿರಿ.. ಮಾತಾಡ ಬ್ಯಾಡಿ. ನಾನು                                ಗಾಂಧೀ ವೇಷದಲ್ಲಿರೋ ಕಳ್ಳ, ನೀವು ಕಳ್ಳನೆಂದು ಅರೋಪಿಸಲಾದ ಗಾಂಧಿ.                                ನಮ್ಮಿಬ್ಬರಿಗೂ ಇಷ್ಟೇ ವ್ಯತ್ಯಾಸ. ನಮಸ್ಕಾರ ಬರ್ತೀನಿ.
                             (ಜನರನ್ನುದ್ದೇಶಿಸಿ)
ಕಳ್ಳ               :         ಮಹಾಜನಗಳೇ, ಕರುಣೆ... ಕರುಣೆ ಬೇಕು ಮನುಷ್ಯನಿಗೆ. ನನಗೆ ಅಹಿಂಸೆಯಲ್ಲಿ                               ನಂಬಿಕೆ ಇದೆ. ಯಾರೂ ಹುಟ್ಟಿನಿಂದಲೇ ಕಳ್ಳ ಆಗಿರೋದಿಲ್ಲ. ಸಂದರ್ಭಗಳು                                ಹಾಗೆ ಮಾಡ್ತಾವೆ. ಕೆಲವೊಂದು ಸಂದರ್ಭಗಳಲ್ಲಿ ಕಳ್ಳ ಗಾಂಧೀವಾದಿ ಯಾಗಲೂ                               ಬಹುದು ಹಾಗೇಯೇ ಗಾಂಧಿವಾದಿಯನ್ನು ಕಳ್ಳನೆಂದೂ ತಿಳಿಯಬಹುದು. ಈತನ                               ಅಪರಾಧ ಮಣ್ಣಿಸಿ ಕ್ಷಮಿಸಿದ್ದೇನೆ. ನನ್ನ ಕ್ಷಮೆ ಈತನನ್ನು ಬದಲಾಯಿಸಿ ಗಾಂಧಿ                               ಮಾರ್ಗದಲ್ಲಿ ಮುನ್ನಡೆಸುತ್ತದೆ ಎಂದು ನಂಬಿದ್ದೇನೆ. ಬಿಟ್ಟು ಬಿಡಿ. ನೀವೆಲ್ಲಾ ಇವನನ್ನು                                ಕ್ಷಮಿಸಿ ಬಿಡಿ. ಗಾಂಧಿ ಮಹಾತ್ಮನು ನನಗೆ ಕೊಟ್ಟ ಹಾಗೆ ಇವನಿಗೂ ಸದ್ಬುದ್ದಿಯನ್ನು                               ಕೊಡಲಿ. ಹಾಗೆಯೇ ಮಹಾಜನರಲ್ಲೊಂದು ಮನವಿ ಬಾರಿಯ ಪಾರ್ಲಿಮೆಂಟ                                                ಎಲೆಕ್ಷನ್ಗೆ ನಾನು ಕ್ಯಾಂಡಿಡೆಂಟಾಗಿ ನಿಲ್ಲಬೇಕೆಂಬುದು ಕ್ಷೇತ್ರದ ಮತದಾರರ                               ಬಯಕೆ ಆಗಿದೆ.  ಯಾವುದೇ ಪಕ್ಷ ಸೀಟು ಕೊಟ್ರು ನಿಂತು ಗೆಲ್ತೇನೆ. ಯಾರೂ                               ಕೊಡದಿದ್ರೂ  ಪಕ್ಷೇತರನಾಗಿ ನಿಂತು ಗೆಲ್ತೇನೆ. ನಿಮ್ಮೆಲ್ಲರ ಆಶಿರ್ವಾದ ಬೇಕಷ್ಟೇ.                               ನಮಸ್ಕಾರ.
                             (ಯಾರೋ ಹಾರ ಹಾಕ್ತಾರೆ. ಇನ್ಯಾರೋ ಮೇಲೆ ಎತ್ತಿಕೊಳ್ತಾರೆ)
ಒಬ್ಬ               :         ಜನನಾಯಕರಿಗೆ
ಎಲ್ಲರೂ           :         ಜೈ
ಇನ್ನೊಬ್ಬ          :         ಜನಾನುರಾಗಿ ನಾಯಕನಿಗೆ..
ಎಲ್ಲರೂ           :         ಜೈ
                             (ಮೆರವಣಿಗೆ ಮುಂದೆ ಸಾಗುತ್ತದೆ. ಗಾಂಧಿವಾದಿಯೊಬ್ಬನೇ ಅರೆಬೆತ್ತಲಾಗಿ                              ಉಳಿಯುತ್ತಾನೆ. ತನ್ನ ಕಿವಿ-ಕಣ್ಣುಗಳನ್ನು ಮುಚ್ಚಿ ಗಾಂಧಿವಾದಿಯ ಕೋತಿಯ ಹಾಗೆ                               ಕುಳಿತುಕೊಳ್ಳುತ್ತಾನೆ.)

                                                      -ಶಶಿಕಾಂತ ಯಡಹಳ್ಳಿ