ಶುಕ್ರವಾರ, ಫೆಬ್ರವರಿ 7, 2014

ಅವಾಸ್ತವದಲ್ಲಿ ವಾಸ್ತವ ಕಟ್ಟಿಕೊಡುವ “ಅಗ್ನಿವರ್ಣ”








ರಂಗದಿಗ್ಗಜ ಬಿ.ವಿ.ಕಾರಂತರ ಅಪೇಕ್ಷೆಯ ಮೇರೆಗೆ ಕಾಳಿದಾಸನ ರಘುವಂಶವನ್ನು ಆಧರಿಸಿ ಡಾ. ಹೆಚ್.ಎಸ್.ವೆಂಕಟೇಶಮೂರ್ತಿಯವರು ಅಗ್ನಿವರ್ಣ ನಾಟಕವನ್ನು ರಚಿಸಿದ್ದರು. ಕಾರಂತರು ಮೊಟ್ಟಮೊದಲ ಬಾರಿಗೆ ಮೈಸೂರಿನ ರಂಗಾಯಣಕ್ಕೆ ನಾಟಕವನ್ನು ನಿರ್ದೇಶಿಸಿ ರಂಗದ ಮೇಲೆ ದೃಶ್ಯವೈಭವವನ್ನೇ ಸೃಷ್ಟಿಸಿದ್ದರು. ತದನಂತರ ಕೃಷ್ಣಮೂರ್ತಿ ಕವತಾರರು ಮಲ್ಲಾಡಿಹಳ್ಳಿಯವರಿಗೆ ನಾಟಕ ನಿರ್ದೇಶಿಸಿದ್ದರು. ಗಂಭೀರ ನಾಟಕವನ್ನು ನಿರ್ದೇಶಿಸುವ ಸವಾಲನ್ನು ಮತ್ಯಾರೂ ಸ್ವೀಕರಿಸಲಿಲ್ಲ. ಆದರೆ ಈಗ ಅಗ್ನಿವರ್ಣ ನಾಟಕವನ್ನು ದಾಕ್ಷಾಯಿಣಿ ಭಟ್ರವರು ತಮ್ಮ ದೃಶ್ಯ ತಂಡಕ್ಕೆ ನಿರ್ದೇಶಿಸಿ ತಮ್ಮ ನಿರ್ದೇಶನ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತು ಪಡಿಸಿದರು.

ರವೀಂದ್ರ ಕಲಾಕ್ಷೇತ್ರ-50 ಸುವರ್ಣ ಸಂಭ್ರಮದಲ್ಲಿ ನಾಟಕ ಬೆಂಗಳೂರು ಆಯೋಜಿಸಿದ ಮೂರನೆಯ ಕಂತಿನ ನಾಟಕೋತ್ಸವದಲ್ಲಿ 2014, ಫೆಬ್ರವರಿ 6ರಂದು ಅಗ್ನಿವರ್ಣ ನಾಟಕವು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡು ನೋಡುಗರನ್ನು ಮೂಕವಿಸ್ಮಿತರನ್ನಾಗಿಸಿತು.

ನಾಟಕವನ್ನು ನಿರ್ದೇಶಿಸುವುದು ಅಷ್ಟೊಂದು ಸುಲಭಸಾಧ್ಯವಲ್ಲ. ಯಾಕೆಂದರೆ ನಾಟಕದಲ್ಲಿ ಶ್ರೀರಾಮನ ಪೂರ್ವಜರಾದ  ದಿಲೀಪ, ರಘುರಾಯ, ಅಜರಾಯ ಹೀಗೆ ಮೂರು ತಲೆಮಾರುಗಳ ರಾಜರುಗಳ ವಿಶೇಷತೆಯನ್ನು ರೂಪಕವಾಗಿ ಬಳಸಿಕೊಂಡು ರಘುವಂಶದ ಕೊನೆಯ ರಾಜ ಅಗ್ನಿವರ್ಣ ಅವಸಾನವನ್ನು ತೋರಿಸಬೇಕಾಗುತ್ತದೆ. ರಾಮಾಯಣದ ಕಥೆ ಬಹುತೇಕರಿಗೆ ಗೊತ್ತಿರುತ್ತದೆ. ಆದರೆ ರಾಮನ ವಂಶಾವಳಿ ಕುರಿತ ಅರಿವು ಎಲ್ಲರಿಗೂ ಇಲ್ಲವಾಗಿದ್ದರಿಂದ, ಕೆಲವೇ ಕೆಲವರನ್ನು ಹೊರತು ಪಡಿಸಿ ಬಹುತೇಕರಿಗೆ ಅಗ್ನಿವರ್ಣ ರಾಜನ ಬಗ್ಗೆ ಅರಿವೇ ಇಲ್ಲದ್ದರಿಂದ ಹಾಗೂ ತಲೆಮಾರುಗಳ ನಾಟಕವನ್ನು ಜನರಿಗೆ ಕಮ್ಯೂನಿಕೇಟ್ ಮಾಡುವುದು ಕಷ್ಟಕರವಾದದ್ದು. ನಾಟಕದ ಎಲ್ಲಾ ವಿವರಗಳು ನೋಡುಗರಿಗೆ ಅರ್ಥವಾಗದಿದ್ದರೂ ಒಟ್ಟಾರೆ ನಾಟಕ ಕಟ್ಟಿಕೊಡುವ ಅನುಭವ ಅನನ್ಯವಾದದ್ದು



 ನಾಟಕದ ಸಂಕ್ಷಿಪ್ತ ಕಥೆ ಹೀಗಿದೆ. ಆತ ಅಯೋಧ್ಯೆಯ ರಾಜ ಅಗ್ನಿವರ್ಣ. ಸುಖಲೋಲುಪತೆಯಲ್ಲಿ ಪ್ರಜಾಹಿತ ಮರೆತಿದ್ದ. ಮುಳುಗುತ್ತಿರುವ ಆತನ ಸಾಮ್ರಾಜ್ಯವನ್ನು ಎತ್ತಿಹಿಡಿಯಲು ವೃದ್ದ ನಾವಿಕನೊಬ್ಬ ತನ್ನ ಸಹಚರರೊಂದಿಗೆ ಬಲು ದೂರದಿಂದ ಸಮುದ್ರದಲ್ಲಿ ಪ್ರಯಾಣಿಸಿ ಅಯೋಧ್ಯೆಗೆ ಬರುತ್ತಾನೆ. ಅಗ್ನಿವರ್ಣನ ಪೂರ್ವಜರ ಕನಸುಗಳು ಆಕಾರ ತಳೆದು ಬೆಸ್ತರ ಜೊತೆಗೂಡುತ್ತವೆ. ರಾಜ ತನ್ನ ಕನಸಿನಲ್ಲಿ ಕಂಡ ಕನಸಿನ ಕನ್ಯೆಯರನ್ನೇ ಮೋಹಿಸುತ್ತಾನೆ.  ಕನಸಿನ ಕನ್ಯೆಯರು ರಾಜನ ಪೂರ್ವಜರ ತ್ಯಾಗ, ದಾನ-ಧರ್ಮಗಳ ಕುರಿತು ತಿಳಿಹೇಳಿ ಅಗ್ನಿವರ್ಣನನ್ನು ಬದಲಾಯಿಸಲು ಪ್ರಯತ್ನಿಸುತ್ತಾರೆ. ನಾವಿಕರ ಮುಂದಾಳು ಅಜ್ಜ ಕೂಡಾ ಅಗ್ನಿವರ್ಣನಿಗೆ ಬುದ್ದಿ ಹೇಳಿ ವಿಫಲನಾಗಿ ಅಜ-ಇಂದುಮತಿಯ ಪ್ರೇಮವನ್ನು ನಾಟಕ ರೂಪದಲ್ಲಿ ತೋರಿಸುತ್ತಾನೆ. ಯಾವುದಕ್ಕೂ ಬದಲಾಗದ ಅಗ್ನಿವರ್ಣ ಕೊನೆಗೆ ತನ್ನ ಪ್ರೇಯಸಿಯರಿಗೆ ಬೆಂಕಿ ಇಟ್ಟು ಯಜ್ಞ ಮಾಡುವ ಅಹಮಿಕೆಯಲ್ಲಿ ಅಗ್ನಿಗಾಹುತಿಯಾಗಿ ಸರ್ವನಾಶನಾಗುತ್ತಾನೆ.

ಸರ್ವಾಧಿಕಾರದ ದಾಹ ಹಾಗೂ ಸುಖಲೋಲುಪತೆಯ ಮೋಹಕ್ಕೆ ಬಿದ್ದ ರಾಜನೊಬ್ಬ ಅದು ಹೇಗೆ ತನ್ನ ದುರಂತವನ್ನು ತಾನೇ ತಂದು ಕೊಳ್ಳುತ್ತಾನೆ ಎನ್ನುವುದನ್ನು ತಿಳಿಸುವುದೇ ನಾಟಕದ ಪ್ರಮುಖ ಆಶಯವಾಗಿದೆ.   ಅಗ್ನಿವರ್ಣ ನಾಟಕದಲ್ಲಿ ತಾರ್ಕಿಕತೆ ಇಲ್ಲದಿದ್ದರೂ ತಾತ್ವಿಕತೆ ಇದೆ. ಯಾವುದೇ ಲಾಜಿಕ್ಗಳಿಲ್ಲದಿದ್ದರೂ ಮ್ಯಾಜಿಕ್ ರೀತಿಯ ದೃಶ್ಯ ಸಂಯೋಜನೆಗಳಿವೆ. ಇಡೀ ನಾಟಕದ ನಿರೂಪಣೆ ವಿಚಿತ್ರವಾಗಿರುವಷ್ಟೇ ವಿಶಿಷ್ಟವಾಗಿದೆ. ಒಟ್ಟಾರೆ ನಾಟಕದ ಆಶಯ ಮಾತ್ರ ಇಲ್ಲಿ ಪ್ರಮುಖವಾಗಿದ್ದು ಗುರಿ ಮುಟ್ಟುವ ದಾರಿಯ ಇತಿಮಿತಿಸ್ಥಿತಿಗಳು ಭ್ರಮಾಲೋಕವೊಂದನ್ನು ಸೃಷ್ಟಿಸುತ್ತವೆ.

ಸಾಂಕೇತಿಕವಾಗಿಯೂ ನಾಟಕ ಶ್ರೀಮಂತವಾಗಿದೆ. ಧರ್ಮ-ಆರ್ಥ-ಕಾಮಗಳನ್ನು ಸೂಚಿಸುವ ಮೂವರು ಕನಸಿನ ಕನ್ಯೆಯರ ಪಾತ್ರ ಸೃಷ್ಟಿಸಿದ್ದು ನಾಟಕಕಾರರ ಅನನ್ಯ ಪರಿಕಲ್ಪನೆಗೆ ಸಾಕ್ಷಿಯಾಗಿದೆ. ನಿಜವಾದ ರಾಜ ಹಾಗೂ ಕನಸಿನೊಳಗಿನ ರಾಜ ಹೀಗೆ ಒಬ್ಬ ವ್ಯಕ್ತಿಯ ಎರಡು ಪಾತ್ರಗಳನ್ನು ಸೃಷ್ಟಿಸಿದ ನಿರ್ದೇಶಕಿ ನಾಟಕಕಾರರ ಪರಿಕಲ್ಪನೆಗೆ ಇನ್ನಷ್ಟು ಪರಿಣಾಮಕಾರಿ ಆಯಾಮವನ್ನೊದಗಿಸಿದ್ದಾರೆ. ರಘುವಂಶದ ಅವನತಿಗೆ ಸಾಕ್ಷಿ ಎನ್ನುವಂತೆ ಸೂರ್ಯನ ಪಾತ್ರವನ್ನು ಹಿನ್ನೆಲೆಯಲ್ಲಿ ನಿಲ್ಲಿಸಿದ್ದು ಪ್ರತಿಮಾತ್ಮಕವಾಗಿದೆ. ಪೌರಾಣಿಕ ನಾಟಕವನ್ನು ಸಮಕಾಲೀನಗೊಳಿಸಿದ್ದರಿಂದಾಗಿ ಬಿ.ವಿ.ಕಾರಂತರ ನಿರ್ದೇಶನದ ನಾಟಕಕ್ಕಿಂತ ದಾಕ್ಷಾಯಿಣಿ ಭಟ್ರವರ ನಾಟಕ ಭಿನ್ನವೆನಿಸುತ್ತದೆ. ರಂಗಪ್ರಯೋಗದಲ್ಲಿ ಜನವಿರೋಧಿ ರಾಜನಿಗೆ ಗಾಂಧಿಟೋಪಿ ಹಾಕಿಸಿ ಪ್ರಸ್ತುತ ರಾಜಕಾರಣಿಗಳ ಅರಾಜಕತೆಗೆ ಸಮೀಕರಿಸಲಾಗಿದೆ. ಶ್ರೀರಾಮನ ಸಂತಾನವಾದ ಅಗ್ನಿವರ್ಣವೆನ್ನುವ ಪ್ರಜಾವಿರೋಧಿ ರಾಜನನ್ನು ನಾಟಕದಲ್ಲಿ ನೋಡಿದಾಗ,  ಪ್ರಸ್ತುತ ಕಾಲಘಟ್ಟದಲ್ಲಿ ರಾಮನ ಹೆಸರು ಹೇಳಿಕೊಂಡ ಕೆಲವರು ಮಾಡುತ್ತಿರುವ ಜನವಿರೋಧಿ ರಾಜಕಾರಣ, ದಂಗೆ, ನರಹತ್ಯೆಗಳು ನೆನಪಾಗುತ್ತವೆ. ಪೌರಾಣಿಕ ನಾಟಕವನ್ನು ಸಮಕಾಲೀನಗೊಳಿಸುವ ಸಾಧ್ಯತೆಯನ್ನು ಸಮರ್ಥವಾಗಿ ಬಳಸಲಾಗಿದೆ. ಅವಾಸ್ತವಿಕ ದೃಶ್ಯಗಳ ಮೂಲಕ ವಾಸ್ತವಿಕತೆಯನ್ನು ಹೇಳುವಲ್ಲಿ ನಾಟಕ ಯಶಸ್ವಿಯಾಗಿದೆ.

  
ಯಥಾ ರಾಜಾ ತಥಾ ಪ್ರಜಾ ಎನ್ನುವಂತೆ ರಾಜ ಸ್ತ್ರೀಪೀಡಕನಾದರೆ ಪ್ರಜೆಗಳೂ ಸಹ ಹಾಗೆಯೇ ಮಹಿಳೆಯರ ಮೇಲೆ ಅತ್ಯಾಚಾರಕ್ಕಿಳಿಯುತ್ತಾರೆ ಎನ್ನುವ ಸತ್ಯವನ್ನು ದೃಶ್ಯಗಳ ಮೂಲಕ ತೋರಿಸಲಾಗಿದೆ. ನಾಟಕದ ನಿರ್ದೇಶಕಿ ಮಹಿಳೆಯಾಗಿದ್ದರಿಂದ ನಾಟಕದಾದ್ಯಂತ ಮಹಿಳೆಯರ ಮೇಲಾಗುವ ಶೋಷಣೆಯತ್ತ ಅವರ ಚಿತ್ತ ಕೇಂದ್ರೀಕೃತವಾದಂತಿದೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ರಾಜನಿಂದ ಪ್ರಜೆಗಳವರೆಗೆ ಮಹಿಳೆಯರ ಮೇಲೆ ನಡೆಯುವ ದಬ್ಬಾಳಿಕೆಯನ್ನು ನಾಟಕದಲ್ಲಿ ಅನಾವರಣಗೊಳಿಸಲಾಗಿದೆ.

ಅಜನ ಪ್ರೇಮದ ಪರಾಕಾಷ್ಟೆ ತೋರಿಸುವಾಗ ಇಂದುಮತಿ ಸ್ವಯಂವರ ಅನಗತ್ಯವೆನಿಸುತ್ತದೆ, ಹಾಗೆಯೇ ದಿಲೀಪರಾಜನ ರೂಪಕ ತುಂಬಾ ದೀರ್ಘವೂ ಹಾಗೂ ಅನಗತ್ಯ ವಿವರಗಳನ್ನು ಹೊಂದಿದೆ. ಇವನ್ನು ಎಡಿಟ್ ಮಾಡಿದರೆ ಉತ್ತಮವೆನಿಸುತ್ತದೆ. ತಾಂತ್ರಿಕತೆಯಲ್ಲಿ ಕೆಲವು ತಪ್ಪಿಸಬಹುದಾದ ತಪ್ಪುಗಳಾಗಿವೆ. ಆಲಾಪಗಳು ಹಾಗೂ ಹಿನ್ನೆಲೆ ಸಂಗೀತ ನಟರ ಸಂಭಾಷಣೆ ಮೇಲೆ ಓವರ್ಲ್ಯಾಪ್ ಆಗಿ ಮಾತು ಅಸ್ಪಷ್ಟವಾಗಿ ಕೇಳುವಂತಾಯಿತು. ಅದೇ ರೀತಿ ಬೆಳಕಿನ ವಿನ್ಯಾಸ (ಮುಸ್ತಪಾ) ಸಹ ಕೆಲವೊಮ್ಮೆ ಒಬ್ಬರ ನಟರ ನೆರಳು ಇನ್ನೊಬ್ಬರ ಮೇಲೆ ಬೀಳುವಂತಾಗಿ ನಟರ ಮುಖಭಾವ ಸ್ಪಷ್ಟವಾಗಿ ಕಾಣದಂತಾಯಿತು.  ಡಾ. ಶ್ರೀಧರಭಟ್ರವರ ಹಾಡು ಮತ್ತು ಸಂಗೀತ ಸಂಯೋಜನೆ ನಾಟಕದ ಯಶಸ್ಸಿನಲ್ಲಿ ಪಾಲುಕೇಳುವಂತಿತ್ತು. ಮುರಳಿಧರ ಹೊಳ್ಳರವರ ರಂಗಪರಿಕರಗಳು, ದಾಮೋದರ ನಾಯ್ಕರ ರಂಗಸಜ್ಜಿಕೆ ನಾಟಕದ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದವು



ಇಡೀ ನಾಟಕದ ಅಂತಸತ್ವವೆನಿಸಿದ್ದು ಡಾ.ಹೆಚ್.ಎಸ್.ವಿ ರವರು ಬರೆದ ಹಾಡು ಮತ್ತು ಕಾವ್ಯಾತ್ಮಕ ಸಂಭಾಷಣೆಗಳು. ಆರಂಭ ಮತ್ತು ಅಂತ್ಯದಲ್ಲಿ ಹಾಡಿದ ಶರಣೆಂಬೆವಯ್ಯಾ ಮುಗಿಯುತ್ತ ಕೈಯಾ... ಹಾಡು ಕೇಳುಗರು ತಲೆದೂಗುವಂತಿದ್ದರೆ ಅದರ ಜೊತೆಗೆ ಶುರುವಾಗುವ ದಿಂತಾನ ತನನಾ... ಆಲಾಪ ಪ್ರೇಕ್ಷಕರು ಕೂತಲ್ಲೆ ಕುಣಿಯುವಂತಿತ್ತು. ಆದರೆ ಕನಸಿನ ಕನ್ಯೆಯರು ಹಾಡುವಂತಹ ಹಾಡಿಗೆ ಹಿನ್ನೆಲೆಯಲ್ಲಿ ಗಂಡು ದ್ವನಿ ಕೊಟ್ಟಿದ್ದೊಂಚೂರು ಆಭಾಸಕಾರಿಯಾಗಿದೆ. ಎಲ್ಲಾ ಹಾಡುಗಳಿಗೆ ಮಾಡಲಾದ ನೃತ್ಯ ಸಂಯೋಜನೆಯಂತೂ ಕಣ್ತುಂಬಿಕೊಳ್ಳುವಂತೆ ಮೂಡಿಬಂದಿತು. ಸಾವು ಪ್ರಕೃತಿ ಬದುಕು ವಿಕೃತಿ..  ಎನ್ನುವಂತಹ ಹಲವಾರು ಮಾರ್ಮಿಕ ಕಾವ್ಯಾತ್ಮಕ ಮಾತುಗಳು ಸೊಗಸಾಗಿ ಮೂಡಿಬಂದಿವೆ. ಆದರೆ... ಭಾಷೆಯ ಬಳಕೆಯಲ್ಲಿ ಕೆಲವೊಂದು ಪಾತ್ರಗಳು ಉತ್ತರ ಕರ್ನಾಟಕದ ಶೈಲಿಯಲ್ಲಿ ಮಾತಾಡಿದರೆ, ಇನ್ನು ಕೆಲವು ಪಾತ್ರಗಳು ಬೆಂಗಳೂರು ಕನ್ನಡದಲ್ಲಿ ಮಾತನಾಡುತ್ತವೆ. ಕೆಲವು ಪಾತ್ರಗಳು ಎರಡೂ ರೀತಿಯ ಶೈಲಿಯಲ್ಲೂ ಸಂಭಾಷಿಸುತ್ತವೆ. ಯಾವುದಾದರೂ ಒಂದು ಶೈಲಿಯಲ್ಲಿ ಮಾತುಗಳನ್ನು ಪಾತ್ರಗಳೆಲ್ಲಾ ರೂಢಿಸಿಕೊಂಡಿದ್ದರೆ ಚೆನ್ನಾಗಿತ್ತು.

ನಾಟಕದ ಇಪ್ಪತೈದಕ್ಕೂ ಹೆಚ್ಚು ಪಾತ್ರದಾರಿಗಳೆಲ್ಲಾ ಹೊಸ ಹುಡುಗರು. ಇನ್ನೂ ಕಾಲೇಜಿನಲ್ಲಿ ಓದುತ್ತಿರುವವರು. ಅಭಿನಯಿಸುವ ಹುಮ್ಮಸ್ಸಿದೆ. ದಾಕ್ಷಾಯಿಣಿ ಭಟ್ರವರು ಉತ್ತಮ ತರಬೇತಿಯನ್ನೇ ಕೊಟ್ಟಿದ್ದಾರೆ. ಆದರೆ ಇನ್ನು ನಟನೆಯಲ್ಲಿ ಪಳಗಬೇಕಿದೆ. ಆರಂಭದಲ್ಲಿ ಇದ್ದ ಸಂಭಾಷಣೆ ಮತ್ತು ಮಾತಿನ ಎನರ್ಜಿಯನ್ನು ಕೊನೆವರೆಗೂ ಹೇಗೆ ಕಾಪಾಡಿಕೊಳ್ಳಬೇಕು ಎನ್ನುವ ಗುಟ್ಟನ್ನು ತಿಳಿದುಕೊಳ್ಳಬೇಕಿದೆ. ರಾಜರಂತಹ ಪಾತ್ರಮಾಡಲು ದೈಹಿಕ ಆಕೃತಿ ಹಾಗೂ ತಾಕತ್ತಿನ ಅಭಿಯನ ಬೇಕಾಗುತ್ತದೆ. ಆದರೆ ನಾಟಕದ ಬಹುತೇಕ ರಾಜರೆಲ್ಲಾ ತುಂಬಾ ಪೀಚಲು ಎನ್ನಿಸುವಂತಿದ್ದಾರೆ. ರಾಜರೆನ್ನುವುದಕ್ಕಿಂತಲೂ ರಾಜಕುಮಾರ ಎನ್ನುವಂತಹ ಎಳಸು ವಯಸ್ಸಿನವರು. ಆದರೂ ಪ್ರತಿಯೊಬ್ಬರೂ ತಮ್ಮ ದೈಹಿಕ ಸಾಮರ್ಥ್ಯ ಹಾಗೂ ವಯಸ್ಸನ್ನೂ ಮೀರಿ ಅಭಿನಯಿಸಲು ಪ್ರಯತ್ನಿಸಿದ್ದಾರೆ. ನಿಶ್ಚಯ್ ಕಡೂರ ನಿಸ್ಸಂದೇಹವಾಗಿ ಅಗ್ನಿವರ್ಣ ಪಾತ್ರಕ್ಕೆ ತಮ್ಮ ಸಾಮರ್ಥ್ಯವನ್ನೂ ಮೀರಿ ತಮ್ಮ ಪ್ರತಿಭೆ ದಾರೆಯೆರೆದಿದ್ದಾರೆ. ನಾವಿಕ ಅಜ್ಜನಾಗಿ ಪೃತ್ವಿಕ್ ಅಭಿನಯ ತುಂಬಾ ಸೊಗಸಾಗಿ ಮೂಡಿಬಂದಿದೆ. ಉಳಿದವರೆಲ್ಲರೂ ತಮ್ಮ ಪಾತ್ರಗಳಿಗೆ ನ್ಯಾಯವೊದಗಿಸಲು ಶಕ್ತಿಮೀರಿ ಪ್ರಯತ್ನಿಸಿದ್ದಾರೆ. ಕನಸಿನ ಕನ್ಯೆಯರ ಶೈಲೀಕೃತ ಅಭಿನಯ ಹಾಗೂ ಚಲನೆ ನೋಡುಗರಲ್ಲಿ ಸಂಚಲನವನ್ನುಂಟುಮಾಡುವಂತಿತ್ತು

     
ದಾಕ್ಷಾಯಿಣಿ ಭಟ್ರವರು ತಮ್ಮೆಲ್ಲಾ ಪ್ರತಿಭೆಯನ್ನು ನಾಟಕದ ನಿರ್ಮಿತಿಯಲ್ಲಿ ಧಾರೆಯೆರೆದಿದ್ದು ನಾಟಕದಾದ್ಯಂತ ಕಂಡುಬರುತ್ತದೆ. ಎಲ್ಲಾ ಪಾತ್ರಗಳ ಕಾಸ್ಟೂಮ್ಸ್ಗಳನ್ನು ವಿನ್ಯಾಸಗೊಳಿಸಿ, ನೃತ್ಯವನ್ನು ಸಂಯೋಜಿಸಿ, ಮೇಕಪ್ನಲ್ಲಿ ಸಹಕರಿಸಿ, ರಂಗವಿನ್ಯಾಸವನ್ನೂ ಮಾಡಿ, ದೃಶ್ಯ ರಂಗತಂಡವನ್ನು ಮ್ಯಾನೇಜ್ ಮಾಡುತ್ತಾ, ಹೊಸ ಯುವ ಹುಡುಗರಿಗೆ ನಟನೆಯ ತರಬೇತಿಯನ್ನೂ ಕೊಡುತ್ತಾ, ನಾಟಕದ ಖರ್ಚುಗಳನ್ನು ನಿಭಾಯಿಸುತ್ತಾ, ಸವಾಲಿನ ನಾಟಕವನ್ನು ಉತ್ತಮವಾಗಿ ನಿರ್ದೇಶನ ಮಾಡಿದ್ದು ಅವರ ಬಹು ಆಯಾಮದ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಅವರಿಗೊಂದು ಹ್ಯಾಟ್ಸ್ಆಪ್ ಹೇಳಲೇಬೇಕಿದೆ. ನಾಟಕದ ಯಶಸ್ಸಿನಲ್ಲಿ ಬಹುಪಾಲು ನಿರ್ದೇಶಕಿಗೆ ಸಲ್ಲಬೇಕಾಗಿದೆ.    

                                               -ಶಶಿಕಾಂತ ಯಡಹಳ್ಳಿ   

           
                   


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ