ಸೋಮವಾರ, ಫೆಬ್ರವರಿ 17, 2014

“ಮೃಚ್ಛಿಕಟಿಕ” : ಸಾಣೇಹಳ್ಳಿ ರಂಗಶಾಲೆಯ ನಾಟಕ





ಕೆ.ಹಿರಣ್ಣಯ್ಯಾಸ್ ಆರ್ಟ ಫೌಂಡೇಶನ್ ಹೆಚ್.ಎನ್.ಕಲಾಕ್ಷೇತ್ರದಲ್ಲಿ ಆಯೋಜಿಸಿದ ಮಾಸ್ಟರ್ ಗೆ 80, ಲಂಚಕ್ಕೆ 50 ಸಂಭ್ರಮ ನಾಟಕೋತ್ಸವದಲ್ಲಿ ಶೂದ್ರಕ ಕವಿಯ ಮೃಚ್ಛಿಕಟಿಕ ನಾಟಕವನ್ನು ಸಾಣೆಹಳ್ಳಿಯ ಶಿವಸಂಚಾರ ರಂಗಶಾಲೆಯ ವಿದ್ಯಾರ್ಥಿಗಳು ನಟರಾಜ ಹೊನ್ನವಳ್ಳಿಯವರ ನಿರ್ದೇಶನದಲ್ಲಿ ಫೆಬ್ರವರಿ 13 ರಂದು ಪ್ರದರ್ಶಿಸಿದರು.

ಪ್ರಾಕೃತ ಮತ್ತು ಸಂಸ್ಕೃತಗಳಲ್ಲಿ ರಚಿತವಾದ ಶೂದ್ರಕ ಮಹಾಕವಿಯ ಹತ್ತು ಅಂಕಗಳ ಪ್ರಸಿದ್ಧ ನಾಟಕ ಮೃಚ್ಛಿಕಟಿಕ. ಪ್ರಾಚೀನ ಭಾರತದ ಮಹತ್ವದ ರಂಗನಾಟಕವಿದು. ಆರನೇ ಶತಮಾನಕ್ಕಿಂತಲೂ ಹಿಂದೆ ನಾಟಕವನ್ನು ರಚಿಸಲಾಗಿದೆ. ಸಂಸ್ಕೃತ ರಂಗ ಸಾಹಿತ್ಯದ ಅತ್ಯಂತ ಪ್ರಾಚೀನ ಕೃತಿಗಳಲ್ಲೊಂದಾದ ಮೃಚ್ಛಿಕಟಿಕ ನಾಟಕವು ತನ್ನ ವಿಡಂಬನಾ ಪ್ರಾಧಾನ್ಯತೆಯಿಂದಾಗಿ ಸರ್ವಕಾಲಕ್ಕೂ ಆಪ್ತವಾಗಿದೆ.
 
 ಆಕಸ್ಮಿಕಗಳೇ ನಾಟಕದಾದ್ಯಂತ ಪ್ರಮುಖ ಪಾತ್ರವಹಿಸುತ್ತವೆ. ಹಲವಾರು ನಾಟಕೀಯ ತಿರುವುಗಳು ನಾಟಕದ ಜೀವಾಳವಾಗಿವೆ. ಪರಿಸ್ಥಿತಿಗಳ ಕೂಸುಗಳಾಗಿ ಎಲ್ಲಾ ಪಾತ್ರಗಳೂ ಇಲ್ಲಿ ಪೋಷಿಸಲ್ಪಟ್ಟಿವೆ. ಪಾತ್ರಗಳಲ್ಲಿ ವೈವಿದ್ಯತೆ ಇದೆ. ಉದಾತ್ತ, ಕಳ್ಳ, ಜೂಜುಕೋರ, ವೇಶ್ಯೆ, ದುರಹಂಕಾರಿ ಪಾತ್ರಗಳು ನಾಟಕವನ್ನು ಕಟ್ಟಿಕೊಟ್ಟಿವೆ. ಮಾನವ ಸಹಜ ವೈಚಿತ್ರ್ಯಗಳನ್ನು ವಿಶ್ಲೇಷಿಸುವುದೇ ನಾಟಕದ ಪ್ರಮುಖ ಆಶಯವಾಗಿದೆ. ಚಾರುದತ್ತನ ಆದರ್ಶ, ಶಕಾರನ ಕ್ರೂರ ಹಾಸ್ಯ, ಹಾಗೂ ಮೈತ್ರೇಯನ ಮುಗ್ದ ವಿನೋದಾವಳಿಗಳು ನಾಟಕವನ್ನು ಮುನ್ನಡೆಸುತ್ತವೆ.

ಶೂದ್ರಕನ ಕಾಲಘಟ್ಟದಲ್ಲಿದ್ದ ಬೌದ್ಧ ಧರ್ಮದ ಪ್ರಚಲಿತತೆ, ಅವನತಿಯತ್ತ ಸಾಗಿದ್ದ ಸರ್ವಾಧಿಕಾರಿ ದೊರೆಗಳ ಅವಸಾನ, ಅಜ್ಞಾನ ಅಹಂಕಾರಗಳಿಂದ ಮೆರೆಯುವ ಖಳನಾಯಕತನ, ಜೂಜುಕೋರತನ, ಸ್ತ್ರೀಲೋಲುತನ, ಕಳ್ಳತನ, ಕೊಲೆಪಾತಕತನಗಳೆಲ್ಲಾ ನಾಟಕದಲ್ಲಿ ಅನಾವರಣಗೊಂಡಿವೆ. ಬ್ರಾಹ್ಮಣರ ಕಳ್ಳತನ ಹಾಗೂ ಸೂಳೆ ಸಹವಾಸಗಳನ್ನೂ ಸಹ ನಾಟಕ ಬಯಲುಮಾಡುತ್ತದೆ. ಕಾಲದ ಉಜ್ಜಯಿನಿಯ ಸಾಮಾಜಿಕ ವ್ಯವಸ್ಥೆಯನ್ನು ನಾಟಕದಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದೆ. ಆಗಿನ ಕಾಲದ ರಾಜಕೀಯ, ಸಾಮಾಜಿಕ ಹಾಗೂ ವೈಯಕ್ತಿಕ ಗಂಡು ಹೆಣ್ಣಿನ ಸಂಬಂಧಗಳನ್ನು ಮತ್ತು ಆಗಿನ ಕಾಲದಲ್ಲಿ ಅವನತಿಹೊಂದುತ್ತಿರುವ ರಾಜಕೀಯ ಸಾಮಾಜಿಕ ಸ್ಥಿತಿಯನ್ನು  ವಿಶ್ಲೇಷಿಸುವ ನಾಟಕವಿದು. ಹಿಂದಿನ ಕಾಲದ ಸಮಾಜದ ನಕಾರಾತ್ಮಕತೆಯನ್ನೇ ಹೆಚ್ಚಾಗಿ ಹೇಳುವ ನಾಟಕದ ಸಮಕಾಲೀನ ಪ್ರಸ್ತುತತೆ ಏನು? ಎನ್ನುವುದನ್ನು ಪ್ರಶ್ನಿಸಬಹುದಾಗಿದೆ.


ಸಂಸ್ಕೃತದಲ್ಲಿದ್ದ ನಾಟಕವನ್ನು ಧೋಂಡೋ ನರಸಿಂಹ ಮುಳಬಾಗಿಲರು ಮೃಚ್ಛಿಕಟಿಕ ಪ್ರಕರಣಂ ಎನ್ನುವ ಹೆಸರಲ್ಲಿ ಸಂಪೂರ್ಣ ಗದ್ಯಭಾಷೆಯಲ್ಲಿ ಅನುವಾದಿಸಿದ್ದಾರೆ. (ಕರ್ನಾಟಕ ಬುಕ್ ಡಿಪೋ ಪ್ರಸ್ ದಿಂದ 1889 ರಲ್ಲಿ ಪ್ರಕಟಗೊಂಡಿದೆ). ಇದಕ್ಕಿಂತಲೂ ಮುಂಚೆ ಹತ್ತೊಂಬತ್ತನೆಯ ಶತಮಾನದಲ್ಲಿಯೇ (1890) ಗರಣಿ ಕೃಷ್ಣಾಚಾರ್ಯರು ಮೃಚ್ಛಿಕಟಿಕವನ್ನು ಮೃಚ್ಛಿಕಟಿಕ ಪ್ರಕರಣಂ ಎನ್ನುವ ಹೆಸರಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. 1929ರಲ್ಲಿ ನಂಜನಗೂಡು ಸುಬ್ಬಾಶಾಸ್ತ್ರಿಗಳು ಕರ್ನಾಟಕ ಮೃಚ್ಛಕಟಿಕ ಪ್ರಕರಣಂ ಹೆಸರಲ್ಲಿ ಕನ್ನಡಕ್ಕೆ ಅನುವಾದಿಸಿದ್ದರು. ತದನಂತರ 1958ರಲ್ಲಿ ಕೆ.ಕೃಷ್ಣಮೂರ್ತಿಯವರು ಕನ್ನಡದ ಮೃಚ್ಛಿಕಟಿಕ ಹೆಸರಲ್ಲಿ ಅನುವಾದಿಸಿದರು. ಮೃಚ್ಛಿಕಟಿಕ ನಾಟಕದ ಸಂಗ್ರಹಾನುವಾದವನ್ನು 1976ರಲ್ಲಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು ಕನ್ನಡದಲ್ಲಿ ಮಾಡಿ ಇಡೀ ನಾಟಕವನ್ನು ವಿಶ್ಲೇಷಿಸಿದ್ದಾರೆ. 1982ರಲ್ಲಿ ಬನ್ನಂಜೆ ಗೋವಿಂದಾಚಾರ್ಯರು ಆವೇ ಮಣ್ಣಿನ ಆಟದ ಬಂಡಿ ಹೆಸರಲ್ಲಿ ಗಪದ್ಯ ಶೈಲಿಯಲ್ಲಿ ಕನ್ನಡಕ್ಕೆ ಮೃಚ್ಛಿಕಟಿಕವನ್ನು ಅನುವಾದಿಸಿದ್ದಾರೆ. ಶೂದ್ರಕನ ಮೃಚ್ಛಿಕಟಿಕ ಕನ್ನಡದಲ್ಲಿ ಇಷ್ಟೊಂದು ಜನರಿಂದ ಇಷ್ಟೊಂದು ರೀತಿಯಲ್ಲಿ ಅನುವಾದಗೊಂಡಿದ್ದೇ ನಾಟಕದ ಜನಪ್ರೀಯತೆಗೆ ಸಾಕ್ಷಿಯಾಗಿದೆ.
  
ತನ್ನ ದಾನಗುಣದಿಂದ ಎಲ್ಲವನ್ನೂ ಕಳೆದುಕೊಂಡು ಬಡವನಾದ ವಿವಾಹಿತ ಚಾರುದತ್ತನನ್ನು ವೇಶ್ಯೆ ವಸಂತಸೇನೆ ಪ್ರೀತಿಸುತ್ತಾಳೆ.    ರಾಜನ ಸಂಬಂಧಿ ಶಕಾರ ವಸಂತಸೇನೆಯ ಮೋಹಕ್ಕೊಳಗಾಗಿ ಆತನ ಹಿಂದೆ ಬೀಳುತ್ತಾನೆ. ಶಕಾರನಿಂದಾಗಿ ಹೆದರಿದ ವಸಂತಸೇನೆ ತನ್ನಲ್ಲಿರುವ ಒಡವೆಗಳನ್ನೆಲ್ಲಾ ಚಾರುದತ್ತನಲ್ಲಿಡುತ್ತಾಳೆ. ವಸಂತಸೇನೆಯ ಸಹಾಯಕಿ ಮದನಿಕೆಯ ಪ್ರೀತಿಯನ್ನು ಗಳಿಸಲು ಕಳ್ಳನೊಬ್ಬ ಚಾರುದತ್ತನ ಮನೆಯಿಂದ ವಡವೆಗಳನ್ನು ಕದ್ದು ಮದನಿಕೆಗೆ ಕೊಡುತ್ತಾನೆ. ವಡವೆಗಳನ್ನು ಗುರುತಿಸಿದ ಮದನಿಕೆ ವಸಂತಸೇನೆಗೆ ಕೊಡುತ್ತಾಳೆ. ವಡವೆಗಳು ಕಳುವಾದರೆಲ್ಲಿ ವಸಂತಸೇನೆ ತಪ್ಪು ತಿಳಿದುಕೊಳ್ಳುತ್ತಾಳೋ ಎಂದು ತಿಳಿದ ಚಾರುದತ್ತ ಜೂಜಿನಲ್ಲಿ ವಡವೆ ಕಳೆದುಕೊಂಡೆ ಅದರ ಬದಲಾಗಿ ಕಂಠೀಂಹಾರವನ್ನು ತೆಗೆದುಕೊಳ್ಳಬೇಕೆಂದು ವಸಂತಸೇನೆಗೆ ಹೇಳಿ ಕಳುಹಿಸುತ್ತಾನೆ. ಸತ್ಯ ಗೊತ್ತಿದ್ದ ಆಕೆಯೂ ನಾಟಕವಾಡುತ್ತಾಳೆ. ಶಕಾರ ತನ್ನನ್ನು ತಿರಸ್ಕರಿಸಿದ ವಸಂತಸೇನೆಯ ಕತ್ತು ಹಿಚುಕಿ ಕೊಲೆಮಾಡಿ ಕೊಲೆಯನ್ನು ಚಾರುದತ್ತನ ಮೇಲೆ ಆರೋಪಿಸುತ್ತಾನೆ. ಸಾಂದರ್ಭಿಕ ಸಾಕ್ಷಿಗಳೆಲ್ಲಾ ಚಾರುದತ್ತನೇ ಕೊಲೆಗಾರ ಎಂದು ಸಾಬೀತುಪಡಿಸಿದ್ದರಿಂದಾಗಿ ನ್ಯಾಯಾಲಯ ಆತನಿಗೆ ಮರಣದಂಡನೆ ಶಿಕ್ಷೆ ವಿಧಿಸುತ್ತದೆ. ಇನ್ನೇನು ಶಿಕ್ಷೆ ಜಾರಿಯಾಗಬೇಕು ಎನ್ನುವಷ್ಟರಲ್ಲಿ ವಸಂತಸೇನೆಯೇ ಹಾಜರಾಗುತ್ತಾಳೆ. ಕೊನೆಗೆ ನಾಟಕ ಸುಖಾಂತ್ಯವಾಗುತ್ತದೆ.
         
ಕ್ಷಮೆ ಮತ್ತು ಅದರಿಂದಾಗುವ ಸಕಾರಾತ್ಮಕ ಪರಿಹಾರ  ನಾಟಕದ ಅಂತರ್ಗತ ಶಕ್ತಿಯಾಗಿದೆ. ವಸಂತಸೇನೆ ಜೂಜುಕೋರನನ್ನು ಕ್ಷಮಿಸುತ್ತಾಳೆ ಆತ ಜೂಜುತನ ಬಿಟ್ಟು ಬೌದ್ದ ಸನ್ಯಾಸಿಯಾಗುತ್ತಾನೆ.  ತನ್ನದೇ ಒಡವೆಗಳನ್ನು ಕದ್ದ ಕಳ್ಳನನ್ನು ಸಹ ಕ್ಷಮಿಸುತ್ತಾಳೆ. ಆತ ಕಳ್ಳತನ ಬಿಟ್ಟು ಸಂಸಾರಿಯಾಗುತ್ತಾನೆ. ತನ್ನ ಗೆಳೆಯ ಮೈತ್ರೇಯ ಮಾಡುವ ಅತಾಚುರ್ಯಗಳನ್ನೆಲ್ಲಾ ಚಾರುದತ್ತ ಕ್ಷಮಿಸುತ್ತಿರುವುದರಿಂದ ಮೈತ್ರೇಯ ಸರಿದಾರಿಗೆ ಬರುತ್ತಾನೆ. ಚಾರುದತ್ತನ ಸೂಳೆ ಸಹವಾಸವನ್ನು ಆತನ ಪತ್ನಿ ಕ್ಷಮಿಸಿ ಸಹಾಯ ಮಾಡುತ್ತಾಳೆ ಇದರಿಂದಾಗಿ ವಿವಾಹಬಾಹಿರ ಪ್ರೇಮ ಪ್ರಕರಣ ಕೊನೆಗೆ ಸುಖಾಂತ್ಯವಾಗುತ್ತದೆ. ತನ್ನ ಮಗಳನ್ನು ಚಾರುದತ್ತ ಕೊಲೆಮಾಡಿದ ಆರೋಪ ಇದ್ದರೂ ವಸಂತಸೇನೆಯ ತಾಯಿ ಚಾರುದತ್ತನನ್ನು ಕ್ಷಮಿಸುತ್ತಾಳೆ. ಕೊನೆಗೆ ಚಾರುದತ್ತ ಶಕಾರನನ್ನು ಕ್ಷಮಿಸುತ್ತಾನೆ ಆತ ಒಳ್ಳೆಯವನಾಗುತ್ತಾನೆ. ಕ್ಷಮೆ ಎನ್ನುವುದು ಎಲ್ಲರನ್ನೂ  ಬದಲಿಸಬಲ್ಲುದು ಎನ್ನುವುದನ್ನು ನಾಟಕ ಪರೋಕ್ಷವಾಗಿ ಹೇಳುವಲ್ಲಿ ಯಶಸ್ವಿಯಾಗಿದೆ.


ಆಗಿನ ಕಾಲದ ಸಾಮಾಜಿಕ ವ್ಯವಸ್ಥೆಯೇ ವಿಚಿತ್ರವೆನಿಸುತ್ತದೆ. ಸೂಳೆಗಾರಿಕೆ ಕಾನೂನು ಬದ್ಧವಾಗಿತ್ತು. ಪುರುಷರ ವಿವಾಹ ಬಾಹಿರ ಸಂಬಂಧಗಳು ಊರ್ಜಿತವಾಗಿತ್ತು. ಜೂಜುಗಾರಿಕೆ ಸರ್ವವ್ಯಾಪಿಯಾಗಿತ್ತು ಎಂಬುದು ನಾಟಕ ನೋಡಿದಾಗ ಸ್ಪಷ್ಟವಾಗುತ್ತದೆ. ನಾಟಕದ ಪ್ರಮುಖ ಪಾತ್ರಗಳು ಪಾತ್ರದ ಗುಣವನ್ನು ಮೀರಿ ವರ್ತಿಸುತ್ತವೆ. ಸೂಳೆ ಗರತಿಯಂತಾಡುತ್ತಾಳೆ. ಗರತಿ ತನ್ನ ಗಂಡನ ಸೂಳೆ ಸಹವಾಸಕ್ಕೆ ಸಹಕಾರಿಯಾಗುತ್ತಾಳೆ. ಉದಾತ್ತ ಗುಣವುಳ್ಳ ವಿವಾಹಿತ ಚಾರುದತ್ತ ಸೂಳೆಯ ಮೋಹಕ್ಕೊಳಗಾಗುತ್ತಾನೆ.  ಬ್ರಾಹ್ಮಣ ಕಳ್ಳನಾಗುತ್ತಾನೆ. ಜೂಜುಕೋರ ಬೌದ್ಧ ಸನ್ಯಾಸಿಯಾಗುತ್ತಾನೆ. ಬ್ರಾಹ್ಮಣ ವಟು ಮೈತ್ರೇಯ ತನ್ನ ದಡ್ಡತನದಿಂದಾಗಿ ವಿದೂಷಕನಂತಾಡುತ್ತಾನೆ, ಪಕ್ಕಾ ವಿದೂಷಕನಂತಾಡುವ ಶಕಾರ ಕ್ರೂರಿಯೂ ಆಗಿರುತ್ತಾನೆ. ಹೀಗೆ... ಶೂದ್ರಕ ಮಹಾಕವಿ ನಾಟಕದಾದ್ಯಂತ ವಿಚಿತ್ರ ಹಾಗೂ ವಿರೋದಾಭಾಸಉಳ್ಳ ಪಾತ್ರಗಳನ್ನೇ ಸೃಷ್ಟಿಸಿ ಆಗಿನ ಕಾಲದ ಅರಾಜಕತೆಯನ್ನು ಮೃಚ್ಚಿಕಟಿಕದಲ್ಲಿ ಕಟ್ಟಿಕೊಡುತ್ತಾನೆ.
 
  ನಾಟಕದಲ್ಲಿ ತರ್ಕಗಳಿಗೆ ಜಾಗವಿಲ್ಲ. ಆಕಸ್ಮಿಕ ಸನ್ನಿವೇಶಗಳಿಗೆ ತಾತ್ವಕತೆ ಎಂಬುದಿಲ್ಲ. ಅತಾರ್ಕಿಕ ನೆಲೆಯಲ್ಲಿ ಸಾಗುವ ನಾಟಕದ ಉದ್ದೇಶ ಮನರಂಜನೆಯನ್ನು ಕೊಡುವುದೇ ಆಗಿದೆ. ಪಾತ್ರಗಳು ಹಾಗೂ ದೃಶ್ಯಗಳು ಸೃಷ್ಟಿಸುವ ಎಡವಟ್ಟುಗಳೇ ನಾಟಕದ ಯಶಸ್ಸಿಗೆ ಕಾರಣವಾಗಿವೆ. ಕೆಲವು ಪ್ರಸಂಗ ಹಾಗೂ ಹಲವು ಅಧಿಕ ಪ್ರಸಂಗಗಳು ಸೇರಿ ಮೃಚ್ಛಿಕಟಿಕವನ್ನು ಪ್ರಕರಣವಾಗಿ ಕಟ್ಟಿಕೊಟ್ಟಿವೆ. ಅದಕ್ಕಾಗಿಯೇ  ಶೂದ್ರಕನ ಮೃಚ್ಛಿಕಟಿಕವನ್ನು ಕನ್ನಡಕ್ಕೆ ಅನುವಾದಿಸಿದ  ಮುಳಬಾಗಿಲರು, ಗರಣಿ ಕೃಷ್ಣಾಚಾರ್ಯರು ಹಾಗೂ ನಂಜನಗೂಡು ಸುಬ್ಬಾಶಾಸ್ತ್ರಿಗಳು ನಾಟಕಕ್ಕೆ  ಮೃಚ್ಛಿಕಟಿಕ ಪ್ರಕರಣಂ ಎಂದು ಹೆಸರು ಕೊಟ್ಟಿದ್ದು. ಇದನ್ನು ನಾಟಕ ಎನ್ನುವುದಕ್ಕಿಂತ ಪ್ರಕರಣ ಎನ್ನುವುದೇ ಸೂಕ್ತವಾಗಿದೆ.
                  
ನಾಟಕದ ಆರಂಭದ ಮೊದಲೆ ಇದು ಪ್ರದರ್ಶನವಲ್ಲ ಕೇವಲ ರಂಗಶಾಲೆಯ ಪ್ರಯೋಗಕ್ಕೆ ಸಿದ್ಧವಾದ ನಾಟಕ ಎಂದು ಡಿಕ್ಲೇರ್ ಮಾಡಿದ ನಿರ್ದೇಶಕರು ತಪ್ಪು ಒಪ್ಪುಗಳ ವಿಶ್ಲೇಷಣೆಯನ್ನು ಮಾಡದೇ ಕೇವಲ ನೋಡಿ ಎನ್ನುವ ಸಂದೇಶವನ್ನು ಮುಂಗಡವಾಗಿ ಪ್ರೇಕ್ಷಕರಿಗೆ ರವಾನಿಸಿ ರಿಯಾಯಿತಿಯನ್ನು ಕೇಳಲಾಯಿತು. ಹಾಗಿದ್ದರೆ ರಂಗಶಾಲೆಯಲ್ಲಿ ಮಾತ್ರ ಪ್ರಯೋಗಿಸಬೇಕಿತ್ತು, ಅದು ಬಿಟ್ಟು ಬೆಂಗಳೂರಿಗೆ ಬಂದು ಪ್ರದರ್ಶಿಸುವ ಅಗತ್ಯತೆ ಏನಿತ್ತು? ಎಂಬ ಪ್ರಶ್ನೆ ಹುಟ್ಟಿತು.


  ನಾಟಕದ ಕಳೆಗಟ್ಟುವುದೇ ಖಳನಾಯಕ ಕಮ್ ವಿದುಷಕನಾದ ಶಕಾರನ ಪಾತ್ರದಿಂದ. ಶಕಾರ ಹೆಸರೇ ಸೂಚಿಸುವಂತೆ ಬಳಕೆಯಿಂದಾಗಿ. ಅಂದರೆ ವಸಂತಸೇನೆ ಎನ್ನುವುದನ್ನು ಪಾತ್ರ ವಸಂತಶೇನೆ ಎನ್ನುತ್ತದೆ. ಸಕಾರಗಳೆಲ್ಲಾ ಶಕಾರಗಳಾಗಿ ಉಚ್ಚಾರಣೆಗೊಂಡು ಕೇಳುಗರಿಗೆ ಮನರಂಜನೆಯನ್ನು ಕೊಡುತ್ತವೆ. ಆದರೆ.... ಹೊನ್ನವಳ್ಳಿಯವರು ಶಕಾರನ ಪಾತ್ರದಾರಿಯಿಂದ ಶಕಾರಾದಿ ಶಬ್ಧಗಳನ್ನು ದೂರಮಾಡಿದ್ದಾರೆ. ಜೊತೆಗೆ ಶಕಾರ ಪಾತ್ರದ ಪ್ರಾಮುಖ್ಯತೆಯನ್ನು ನಾಟಕದಲ್ಲಿ ಕಡಿಮೆಗೊಳಿಸಲಾಗಿದೆ. ಇದರಿಂದಾಗಿ ಇಡೀ ನಾಟಕ ಸಪ್ಪೆಎನಿಸುತ್ತದೆ. ಧೋಂಡೋ ನರಸಿಂಹ ಮುಳಬಾಗಿಲರವರೂ ಸಹ ತಮ್ಮ ಕನ್ನಡ ಅನುವಾದದಲ್ಲಿ ಶಕಾರೀ ಬಳಕೆಯನ್ನು ನಿರ್ಲಕ್ಷಿಸಿದ್ದಾರೆಂದು ವಿಮರ್ಶಕರು ವಿಶ್ಲೇಷಿಸಿದ್ದಾರೆ.

ಪೌರಾಣಿಕ ವಸ್ತುವುಳ್ಳ ಮೃಚ್ಛಿಕಟಿಕಾ ನಾಟಕವನ್ನು ವಸ್ತ್ರವಿನ್ಯಾಸ ಹಾಗೂ ನಿರೂಪನಾ ರೀತಿಯಲ್ಲಿ ಒಂದಿಷ್ಟು ಬದಲಾವಣೆ ಮಾಡಿ ಆಧುನಿಕ ಸ್ಪರ್ಷ ನೀಡುವ ಪ್ರಯತ್ನಮಾಡಲಾಗಿದೆ. ಮೂಲ ನಾಟಕದಲ್ಲೂ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ. ಇದು ಖಂಡಿತ ಶೂದ್ರಕ ಕವಿಯ ಮೃಚ್ಛಕಟಿಕ ನಾಟವೆನ್ನುವಂತಿಲ್ಲ, ನಟರಾಜ ಹೊನ್ನವಳ್ಳಿಯವರ ಮೃಚ್ಛಿಕಟಿಕಾ ಆಗಿದೆ. ಯಾವುದೇ ಸನ್ನಿವೇಶವಿರಲಿ ದಿಡೀರ್ ಎಂದು ಒಂದೇ ರೀತಿಯ ಯುನಿಫಾರಂನಲ್ಲಿ ಬರುವ ಗುಂಪು ಕೋರಸ್ನಲ್ಲಿ ಹಾಡುಗಳನ್ನು ಹಾಡುವುದು ನೋಡುಗರಿಗೆ ಸೊಗಸೆನ್ನಿಸಿದರೂ ದೃಶ್ಯಗಳನ್ನು ಆಸ್ವಾಧಿಸುವ ಪ್ರೇಕ್ಷಕರಿಗೆ ವ್ಯತ್ಯಯ ಉಂಟಾಗುವಂತಿದೆ. ಗುಂಪುಗಳ ವೇಷಕ್ಕೂ ಅಲ್ಲಿ ನಡೆಯುತ್ತಿರುವ ಸನ್ನಿವೇಶಕ್ಕೂ ಯಾವುದೇ ಸಂಬಂಧವೇ ಇಲ್ಲ. ಗುಂಪಿನ ಆಂಗಿಕ ಸರ್ಕಸ್ ಕೂಡಾ ಬೇಕಾದಷ್ಟಿದೆ.

ಹುಟ್ಟು ಸಾವಿನ ನಡುವೆ ಒಂಟಿ ಬದುಕೊಂದು ನರಳುತಿದೆ.. ಎನ್ನುವಂತಹ ಕೆಲವು ಹಾಡುಗಳು ಮೋಹಕವಾಗಿವೆ. ಬನ್ನಂಜೆ ಗೋವಿಂದಾಚಾರ್ಯರು ಆವೇ ಮಣ್ಣಿನ ಆಟದ ಬಂಡಿಯಲ್ಲಿ ರಚಿಸಿದ ಹಾಡುಗಳನ್ನು ಇಲ್ಲಿ ಬಳಸಲಾಗಿದೆ. ಎಲ್ಲಾ ಹಾಡುಗಳನ್ನೂ ಕೋರಸ್ನಲ್ಲಿ ನಟರೇ ಹಾಡಿದ್ದಾರೆ. ಕೋರಸ್ ಹಾಡಿನ ಅಬ್ಬರಕ್ಕೆ ಸಂಗೀತ ಸಂಯೋಜನೆ ಹಿನ್ನೆಲೆಗೆ ಸರಿದಂತಿದೆ. ಕೆಲವು ಹಾಡುಗಳು ದೀರ್ಘವಾಗಿವೆ. ಬೆಳಕಿನಲ್ಲಿ ಅಂತಹ ವ್ಯತ್ಯಾಸವೇನೂ ಇಲ್ಲ. ವೇದಿಕೆಯಾದ್ಯಂತ ತೀಕ್ಷ್ಣ ಬೆಳಕು ಬಿಟ್ಟು ಪಾತ್ರಗಳು ಮಾತ್ರ ಕತ್ತಲಾಗಿದೆ ಏನೂ ಕಾಣಿಸುತ್ತಿಲ್ಲ ಎಂದು ನಟಿಸುವುದು ನಿಜಕ್ಕೂ ಆಭಾಸಕಾರಿಯಾಗಿದೆ.
 
ಗುಂಪು ಜನರಿಗೆ ಬಳಸಿದ ಕಾಸ್ಟೂಮ್ಸಗಳೇ ವಿಚಿತ್ರವಾಗಿವೆ. ಕೆಳಗೆ ಬಿಳಿ ದೋತಿ, ಮೇಲೆ ತೋಳಿಲ್ಲದ ಕಂದು ಕೋಟಿನಂತಾ ಅಂಗಿ, ಅದರ ಮೇಲೆ ಕರಿ ಟೋಪಿ.... ಆಗಿನ ಕಾಲದ ವಸಂತಸೇನೆಗೆ ಈಗಿನ ಕಾಲದ ಚೂಡಿದಾರವನ್ನು ತೊಡಿಸಲಾಗಿದೆ. ಶಕಾರನ  ಜೊತೆಗಾರರಿಗೆ ಮಾರವಾಡಿ ಟೋಪಿ ಹಾಗೂ ಜುಬ್ಬಾ ಹಾಕಿಸಲಾಗಿದೆ. ನ್ಯಾಯಾಧೀಶರಿಗೂ ಸಹ ಬಿಳಿಅಂಗಿ, ಕರಿಕೋಟು ಹಾಕಿ ಈಗಿನ ನ್ಯಾಯವಾದಿಗಳಂತೆ ಉಡುಪು ತೊಡಿಸಲಾಗಿದ್ದು ಕೆಳಗೆ ದೋತಿ ಹಾಗೂ ತಲೆಗೆ ಪೇಟ ಹಾಕಲಾಗಿದೆ. ಪೌರಾಣಿಕ ಹಾಗೂ ಸಮಕಾಲೀನತೆಗಳನ್ನು ವಸ್ತ್ರವಿನ್ಯಾಸದಲ್ಲಿ ಮಿಶ್ರಣಗೊಳಿಸಿ ಕಾಲವನ್ನೇ ಸಮ್ಮಿಶ್ರಗೊಳಿಸುವ ಪ್ರಯತ್ನ ಮಾಡಲಾಗಿದೆ.


ಹಿಂದೆ ಉಜ್ಜಯಿನಿ ನಗರದ ದೊಡ್ಡ ಕಟ್ಟಡವನ್ನು ತೋರಿಸುವ ಪರದೆಯನ್ನು ನಾಟಕದಾದ್ಯಂತ ಖಾಯಂ ಆಗಿ ಹಾಕಲಾಗಿದೆ. ಆದರೆ ಅದು ಎಲ್ಲಾ ದೃಶ್ಯಕ್ಕೂ ಸೂಕ್ತವೆನ್ನಿಸುವುದಿಲ್ಲ. ನಾಟಕಕ್ಕೂ ಸಾಂಕೇತಿಕವೆನ್ನಿಸುವುದಿಲ್ಲ. ರಸ್ತೆ ದೃಶ್ಯಗಳಿಗೆ ಇನ್ನೊಂದು ಪರದೆಯನ್ನು ರಂಗದ ನಡುವೆ ಆಗಾಗ ಎಳೆಯಲಾಗುತ್ತದೆ. ಇದರಿಂದಾಗಿ ಇದು ಆಧುನಿಕ ನಾಟಕವೋ, ವೃತ್ತಿ ಕಂಪನಿ ನಾಟಕವೋ ಎನ್ನುವ ಗೊಂದಲ ಉಂಟಾಗುತ್ತದೆ. ಯಾಕೆಂದರೆ ಆಧುನಿಕ ನಾಟಕದಲ್ಲಿ ವೃತ್ತಿ ಕಂಪನಿ ಮಾದರಿಯ ಪರದೆಯನ್ನು ಬಳಸಲಾಗಿದೆ. ಇಡೀ ನಾಟಕವೇ ಯಾವುದೇ ಒಂದು ಕಾಲದ ಸನ್ನಿವೇಶ, ಭಾಷೆ, ವೇಷಕ್ಕೆ ಬದ್ದವಾಗಿರದೆ ಚಿತ್ತ ಬಂದತ್ತ ವಿಸ್ತರಿಸಿಕೊಂಡಿತು.

ತರಬೇತಿ ಪಡೆದ ನಟರುಗಳು ಇನ್ನೂ ಪಾತ್ರಗಳಿಗೆ ಜೀವತುಂಬಬೇಕಾಗಿತ್ತು. ರೆಪರ್ಟರಿ ರಂಗಶಾಲೆಯ ನಾಟಕವೆಂದು ಹೆಚ್ಚಿನ ನಿರೀಕ್ಷೆಯನ್ನಿಟ್ಟುಕೊಂಡು ಬಂದ ಪ್ರೇಕ್ಷಕರಿಗೆ ನಿರಾಶೆಯನ್ನುಂಟುಮಾಡುವಲ್ಲಿ ನಾಟಕ ಸಫಲವಾಯಿತು. ಯಾವುದೇ ವಿಭಾಗದಲ್ಲಿಯೂ  ಪ್ರದರ್ಶನ ಗೆಲ್ಲಲಿಲ್ಲ. ನಾಟಕದ ಆರಂಭದಲ್ಲಿ ಹೇಳಿದಂತೆ ಇದನ್ನು ಪ್ರದರ್ಶನವೆಂದು ನೋಡದೇ ಕೇವಲ ರಂಗಶಾಲೆಯೊಳಗಿನ ಪ್ರಾಯೋಗಿಕ ಪ್ರಸಂಗ ಎಂದುಕೊಳ್ಳುವುದೇ ಸೂಕ್ತ ಮತ್ತು ಸಮಾದಾನಕರ.


ನಟರಾಜ ಹೊನ್ನವಳ್ಳಿ
ಸಾನೇಹಳ್ಳಿಯ ಶ್ರೀಮಠದ ಆಶ್ರಯದ ರಂಗಶಾಲೆಯ ಮೃಚ್ಛಿಕಟಿಕ ನಾಟಕದಲ್ಲಿ ಬೈಗುಳಗಳಿಗೇನೂ ಕೊರತೆ ಇಲ್ಲ. ಬೋಸಡಿಮಗ, ಹಡಿಸಿಗಂಡ, ಸೂಳೆಗಂಡ ಹಾಗೂ ಸೂಳೆಮಗ ಎನ್ನುವ ಪುರುಷ ಪ್ರಧಾನ ವ್ಯವಸ್ಥೆ ಮಹಿಳೆಯರನ್ನು ತುಚ್ಚೀಕರಿಸಲು ಹುಟ್ಟಿಸಲಾದ ಬೈಗಳುಗಳು ನಾಟಕದಾದ್ಯಂತ ಇವೆ. ಇದು ಸ್ವಾಮೀಜಿಗಳ ಗಮನಕ್ಕೆ ಬಂತೋ ಇಲ್ಲವೋ ಗೊತ್ತಿಲ್ಲ ಆದರೆ ನೋಡುಗರಿಗಂತೂ ಮುಜುಗರವನ್ನು ತಂದಿದ್ದಂತೂ ಸುಳ್ಳಲ್ಲ. ನೈತಿಕ ಪ್ರಜ್ಞೆಯನ್ನು ಸಮಾಜದಲ್ಲಿ ಬಿಂಬಿಸುವುದಕ್ಕಾಗಿಯೇ ರಂಗಕಾಯಕದಲ್ಲಿ ತೊಡಗಿದ ಸಾಣೆಹಳ್ಳಿ ಶರಣ ಮಠ ಯಾಕೆ ಇಂತಹ ಮಹಿಳಾ ವಿರೋಧಿ ಬೈಗಳುಗಳಿರುವ ನಾಟಕಗಳನ್ನು ಪ್ರಮೋಟ್ ಮಾಡುತ್ತದೆ. ಯಾಕೆ ಕ್ಯಾಬರೆ, ಕುಡಿತ, ಕುಣಿತಗಳಿರುವ ಸೂಳೆಸನ್ಯಾಸಿಯಂತಹ ನಾಟಕವನ್ನು ಆಡಿಸುತ್ತದೆ ಎನ್ನುವುದೇ ಉತ್ತರ ಸಿಗದ ಪ್ರಶ್ನೆಯಾಗಿದೆ.   


                                 -ಶಶಿಕಾಂತ ಯಡಹಳ್ಳಿ     
   
               



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ