ಮಂಗಳವಾರ, ಜೂನ್ 25, 2019

ನಾಟಕಕಾರ ಚೌಟರ ನಿರ್ಗಮನ; ರಂಗಭೂಮಿಯಲ್ಲಿ ನೀರವ ಮೌನ:

ಮರೆತೆನೆಂದರೂ ಮರೆಯಲಾಗದ ಮಹಾಪೋಷಕ ಮಾಣಿಕ್ಯ; ಚೌಟರು ರಂಗೈಕ್ಯ :

 

ಅನೇಕರಿಗೆ ಆಶ್ರಯವಿತ್ತ ಆಲದಮರವಿಂದು ಉರುಳಿ

ಆತ್ಮೀಯರ ಅಂತರಂಗದಲಿ  ಅನಾಥ ಭಾವ..!

ಕೈಲಾದಷ್ಟು ಕೊಟ್ಟು, ಕೊಟ್ಟೆನೆಂಬ ಅಹಮಿಕೆ ಬಿಟ್ಟು

ಮರೆಯಾಯ್ತು ಕಲಾಪೋಷಕ ಮಹಾಜೀವ..!!

ಆಧುನಿಕ ಕನ್ನಡ ರಂಗಭೂಮಿಯಲ್ಲಿ ನಟರಿದ್ದಾರೆ, ನಿರ್ದೇಶಕರಿದ್ದಾರೆ, ನೇಪತ್ಯ ತಜ್ಞರಿದ್ದಾರೆ, ಸಂಘಟಕರಿದ್ದಾರೆ, ಪ್ರೇಕ್ಷಕರೂ ಬೇಕಾದಷ್ಟಿದ್ದಾರೆ. ಆದರೆ.. ಪೋಷಕರ ಸಂಖ್ಯೆ ಕಡಿಮೆ. ಅದರಲ್ಲೂ ಮಹಾಪೋಷಕರಂತೂ ಅಪರೂಪ. ಅಂತಹ ಅಪರೂಪದಲ್ಲಿ ಅಪರೂಪವಾದ ಮಹಾ ಕಲಾಪೋಷಕರಾಗಿದ್ದವರು ಡಿ.ಕೆ.ಚೌಟರವರು. ಚಿತ್ರಕಲೆ, ರಂಗಕಲೆಗಳನ್ನು ಪೋಷಿಸಿ ಬೆಳೆಸುವ ನಿಟ್ಟಿನಲ್ಲಿ ತಮ್ಮ ಪ್ರತಿಭೆ ಹಾಗೂ ಸಂಪಾದನೆಯನ್ನು ದಾರಾಳವಾಗಿ ಧಾರೆಯೆರೆದು ಕೊಟ್ಟು ಸಾಂಸ್ಕೃತಿಕ ಲೋಕದ ಕೊಡುಗೈ ದಾನಿಯೆಂದೇ ಹೆಸರುವಾಸಿಯಾಗಿದ್ದ ಡಿ.ಕೆ.ಚೌಟರವರು (82ವರ್ಷ) ಸಾಂಸ್ಕೃತಿಕ ಲೋಕವನ್ನು ಶಾಶ್ವತವಾಗಿ (2019, ಜೂನ್ 19 ರಂದು) ಅಗಲಿದ್ದಾರೆ. ಆದರೂ.. ತಮ್ಮ ಅಪರೂಪದ ಕಥೆ, ಕಾದಂಬರಿ ಹಾಗೂ ನಾಟಕಗಳ ಮೂಲಕ ಕನ್ನಡ ಹಾಗೂ ತುಳು ನಾಡಿನ ಸಾಂಸ್ಕೃತಿಕ ಚರಿತ್ರೆಯಲ್ಲಿ ಸದಾ ಜೀವಂತವಾಗಿ ಇದ್ದೇ ಇರುತ್ತಾರೆ.

ಯಾರು ಯಾವಾಗಲೇ ಹೋಗಿ ರಂಗಕಾಯಕಕ್ಕೆ ಸಹಾಯನೀಡಿ ಎಂದು ಕೇಳಿದರೆ ಇಲ್ಲವೆಂದು ಹೇಳಿದವರೇ ಅಲ್ಲಾ. ಚೌಟರವರು ಆರ್ಥಿಕವಾಗಿ ಸಹಾಯ ಮಾಡಿದೇ ಇದ್ದಿದ್ದರೆ ಬಿ.ವಿ.ಕಾರಂತರ ಜೀವನಗಾಥೆಯ ಮಹತ್ವದ ಗ್ರಂಥ ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ ಪ್ರಕಟಗೊಳ್ಳುವುದೂ ಕಷ್ಟಸಾಧ್ಯವಾಗಿತ್ತು. ಸಿಜಿಕೆಯವರ ಬಯೋಗ್ರಾಫಿ ಹೊತ್ತಿಗೆಯಾದ ಕತ್ತಾಳ ಬೆಳದಿಂಗಳೊಳಗೆ ಹೊರಬರಲು ಚೌಟರ ಆರ್ಥಿಕ ಹೊಣೆಗಾರಿಕೆ ಬಹುದೊಡ್ಡದಾಗಿತ್ತು. ಯಾವುದಾದರೂ ರಂಗಕರ್ಮಿಗೆ ತೀವ್ರ ಅನಾರೋಗ್ಯವೆಂದು ಗೊತ್ತಾದರೆ ಅವರ ಆಸ್ಪತ್ರೆ ಖರ್ಚಿನ ಬಹುಭಾಗ ಭರಿಸುವ ಜವಾಬ್ದಾರಿ ಚೌಟರದ್ದಾಗಿತ್ತು.  ಅನೇಕಾನೇಕ ರಂಗತಂಡಗಳ ರಂಗಕಾಯಕಕ್ಕೆ ಚೌಟರ ಸಹಕಾರ ಸದಾ ಇದ್ದೇ ಇರುತ್ತಿತ್ತು. ಅಷ್ಟೇ ಯಾಕೆ ಸಿಜಿಕೆಯವರ ಕಾಲಾನಂತರ ಅವರ ರಂಗನಿರಂತರ ರಂಗಸಂಘಟನೆಗೆ ನೈತಿಕವಾಗಿ, ಆರ್ಥಿಕವಾಗಿ ಬೆನ್ನುಲುಬಾಗಿ ಚೌಟರವರು ನಿಂತಿದ್ದರಿಂದಲೇ ರಂಗನಿರಂತರ ಪ್ರತಿ ವರ್ಷ ನಿರಂತರವಾಗಿ ಅದ್ದೂರಿ ರಾಷ್ಟ್ರೀಯ ನಾಟಕೋತ್ಸವವನ್ನು ಮಾಡಲು ಸಾಧ್ಯವಾಯಿತು. ಕಲೆ ಹಾಗೂ ಕಲಾವಿದರ ಮೇಲೆ ಅಪಾರವಾಗಿ ತಂದೆಯ ಪ್ರೀತಿ ಮತ್ತು ತಾಯಿಯ ಮಮತೆಯನ್ನು ಹೊಂದಿದ್ದ ಚೌಟರವರ ಅನುಪಸ್ಥಿತಿ ಬಹುಕಾಲದವರೆಗೆ ಹವ್ಯಾಸಿ ರಂಗಭೂಮಿಯನ್ನು ಕಾಡದೇ ಇರದು. 



ಕೇವಲ ಕಲಾಪೋಷಕರಾಗಿ ಮಾತ್ರ ಇದ್ದಿದ್ದರೆ ಚೌಟರವರ ನೆನಪು ಇತಿಹಾಸದಲ್ಲಿ ಸ್ಥಿರಸ್ತಾಯಿಯಾಗಿರಲು ಸಾಧ್ಯವಿರುತ್ತಿರಲಿಲ್ಲ. ಯಾಕೆಂದರೆ ಜನಸಮೂಹಕ್ಕೆ ನೆನಪಿನ ಶಕ್ತಿ ಕಡಿಮೆ. ಇಷ್ಟು ಕೊಟ್ಟು ಅಷ್ಟು ಕೊಟ್ಟಿದ್ದೇನೆಂದು ಹೇಳಿಕೊಂಡು ದೊಡ್ಡಸ್ಥಿಕೆ ಮೆರೆಯುವವರೇ ಹೆಚ್ಚಿರುವ ಸಮಾಜದಲ್ಲಿ,  ಚೌಟರವರ ಬಹು ದೊಡ್ಡಗುಣ ಏನೆಂದರೆ ಸಹಾಯ ಮಾಡಿ ಮರೆತುಬಿಡುವುದು. ಚೌಟರವರು ಎಂದೂ ಯಾರಿಗೆ ಯಾವಾಗ ಯಾಕೆ ದೇಣಿಗೆ ಕೊಟ್ಟಿದ್ದೇನೆಂಬುದನ್ನು ಯಾರ ಮುಂದೆಯೋ ಹೇಳಿಕೊಳ್ಳುವ ಆತ್ಮರತಿಗೆ ಹೋದವರೇ ಅಲ್ಲಾ. ಒಬ್ಬರಿಗೆ ಸಹಾಯ ಮಾಡಿದ್ದು ಇನ್ನೊಬ್ಬರಿಗೆ ಗೊತ್ತಾಗದಂತೆ ನೋಡಿಕೊಳ್ಳುತ್ತಿದ್ದರು. ಚೌಟರಂತವರು ಯಾರಿಗೆಷ್ಟೇ ಸಹಕಾರ ಕೊಟ್ಟಿದ್ದರೂ ಅದು ಬೇರೆಯವರಿಗೆ ಗೊತ್ತಾಗುತ್ತಲೇ ಇರಲಿಲ್ಲ ಹಾಗೂ ಅವರೆಂದೂ ಯಾವುದಕ್ಕೂ ಪ್ರಚಾರವನ್ನೂ ಬಯಸಿದವರಲ್ಲ. ಸಹಾಯ ತೆಗೆದುಕೊಂಡವರೂ ಅದನ್ನು ಬಹಿರಂಗವಾಗಿ ಹೇಳಿಕೊಳ್ಳುವುದೂ ಕಡಿಮೆಯೇ.. ಹೀಗಾಗಿ ಬರೀ ಕಲಾಪೋಷಕರಾಗಿದ್ದರೆ ಚರಿತ್ರೆಯಲ್ಲಿ ಅನಾಮಧೇಯರಾಗಿಯೇ ಉಳಿಯಬಹುದಾಗಿತ್ತು. ಆದರೆ.. ಚೌಟರವರು ಕಲೆ, ಸಾಹಿತ್ಯ ಹಾಗೂ ರಂಗಭೂಮಿಗೆ ಕೊಟ್ಟ ಕೊಡುಗೆಯಿಂದಾಗಿ ಚಿರಕಾಲ ಸಾಂಸ್ಕೃತಿಕ ಚರಿತ್ರೆಯ ಪುಟಗಳಲ್ಲಿ ದಾಖಲಾಗಲು ಸಾಧ್ಯವಾಯಿತು. ಮುಂದಿನ ತಲೆಮಾರು ಚೌಟರನ್ನು ನೆನಪಿಸಿಕೊಳ್ಳಲು ದಾರಿಯಾಯಿತು. ಚೌಟರ ಬದುಕು ಹಾಗೂ ಸಾಧನೆ ಕುರಿತು ಒಂದಿಷ್ಟು ಮಾಹಿತಿಗಳನ್ನು ಈ  ಲೇಖನದ ಮೂಲಕ ಬರೆಯಬೇಕಾಯಿತು.

ದರ್ಬೆ ಕೃಷ್ಣಾನಂದ ಚೌಟರು ಹುಟ್ಟಿದ್ದು ದಕ್ಷಿಣ ಕನ್ನಡದ ವಿಶಿಷ್ಟ ಸಂಸ್ಕೃತಿಯ ತುಳುನಾಡಿನಲ್ಲಿ. ದರ್ಬೆ ಎನ್ನುವುದು ಮಂಜೇಶ್ವರದ ಹತ್ತಿರದ ಒಂದು ಹಳ್ಳಿ.. ಈಗ ಆ ಭಾಗ ಕಾಸರಗೋಡಿಗೆ ಸೇರಿಕೊಂಡಿದೆ. ಕೃಷ್ಣಾನಂದರವರದು ತುಳುನಾಡಿನ ಅರಸು ಪರಂಪರೆಯ ಚೌಟ ಮನೆತನ. ದರ್ಬೆಯೆಂಬ ಗ್ರಾಮದ ಗುತ್ತಿನ ಚಾವಡಿಯಿಂದ ಜಗತ್ತಿನ ವಿಶಾಲ ಅಂಗಳದ ಅನುಭವಗಳನ್ನು ದಕ್ಕಿಸಿಕೊಂಡು ಅಕ್ಷರ ಮತ್ತು ಕಲಾ ಸಾಧನೆ ಮಾಡಿದ ಡಿ.ಕೆ.ಚೌಟರ ಬದುಕು ಬಲು ಸ್ವಾರಸ್ಯಪೂರ್ಣವಾಗಿರುವಂತಹುದು.

ಚೌಟರ ಓದುವ ಚಟ : ಚೌಟರಿಗಿದ್ದ ಅನೇಕ ಸೃಜನಶೀಲ ಹವ್ಯಾಸಗಳಲ್ಲಿ ಓದುವುದು ಪ್ರಮುಖವಾದದ್ದು. ಕೋಶ ಓದಿ ದೇಶ ಸುತ್ತಿ ಗಳಿಸಿದ ತಮ್ಮ ಅನುಭವಗಳನ್ನೆಲ್ಲಾ ಅಕ್ಷರವಾಗಿಸಿದರು. ದರ್ಬೆಯಲ್ಲಿ ಚೌಟರು ಓದಿದ್ದೇ ಎರಡನೇ ಕ್ಲಾಸ್‌ವರೆಗೆ. ಮಳೆ ಹಾಗೂ ನೆರೆಗಳ ಸಮಸ್ಯೆಗಳಿಂದಾಗಿ ಪಾಠಗಳೇ ನಡೆಯದಂತಾಗಿದ್ದ ಆ ನದೀ ತೀರದ ಶಾಲೆಯನ್ನು ತೊರೆದು ಮಂಜೇಶ್ವರದ ಅಜ್ಜಿ ಮನೆಗೆ ಬಂದು ಎಸ್.ಎಸ್.ಎಲ್.ಸಿ ವರೆಗೆ ವಿದ್ಯಾಭ್ಯಾಸ ಮುಂದುವರೆಸಿದರು. ಶಾಲಾದಿನಗಳಲ್ಲಿ ಪಠ್ಯಕ್ಕಿಂತ ಪಠ್ಯೇತರ ಚಟುವಟಿಕೆಗಳಲ್ಲಿಯೇ ಹೆಚ್ಚು ಆಸಕ್ತಿಯನ್ನು ಹೊಂದಿದ್ದ ಕೃಷ್ಣಾನಂದರು ಶಾಲೆಯ ಗ್ರಂಥಾಲಯದಿಂದ ಪುಸ್ತಕಗಳನ್ನು ತಂದು ಓದುವುದನ್ನೇ ಕ್ರಿಯಾಶೀಲ ಚಟವಾಗಿಸಿಕೊಂಡರು. ಹೈಸ್ಕೂಲಿನಲ್ಲಿದ್ದಾಗಲೇ ಮಂಜೇಶ್ವರದಲ್ಲಿ ನಡೆಯುತ್ತಿದ್ದ ಸಾಹಿತ್ಯಕ ಕಾರ್ಯಕ್ರಮಗಳಲ್ಲಿ ಬಿಟ್ಟುಬಿಡದೇ ಭಾಗವಹಿಸುತ್ತಿದ್ದರು. ಇವರು ಇಂಟರ್‌ಮೀಡೀಯೇಟ್‌ನಲ್ಲಿ ಇದ್ದಾಗಲೇ ಮೊದಲ ಕವನ ಪ್ರಕಟಗೊಂಡಿತು. ಅಜ್ಜಿ ಹೇಳುತ್ತಿದ್ದ ರಾಮಾಯಣ ಮಹಾಭಾರತ ದೇವಿಪುರಾಣಗಳನ್ನು ಕೇಳಿ ಪ್ರಶ್ನಿಸುತ್ತಲೇ ಬೆಳೆದ ಕೃಷ್ಣಾನಂದರಿಗೆ ಬಾಲ್ಯದಲ್ಲೇ ಕಥನ ಕುತೂಹಲ ಮೂಡಿ ಅವರು ದೊಡ್ಡವರಾಗುತ್ತಾ ಹೋದಂತೆ ಓದು ಬರಹಗಳಲ್ಲಿ ಆಸಕ್ತಿ ಹೆಚ್ಚಾಗುತ್ತಾ ಹೋಯಿತು. ಓದು ಕೊಟ್ಟ ಅನುಭವದಿಂದ ಹೊಸ ವಿಚಾರಗಳನ್ನು ಓದಿ, ಪ್ರಶ್ನಿಸಿ, ಚರ್ಚಿಸಿ, ಮಥಿಸಿ ತಿಳಿದುಕೊಳ್ಳುವ ಪ್ರಯತ್ನ ಬಾಲಕ ಚೌಟರ ಬದುಕಿನ ಭಾಗವೇ ಆಗಿತ್ತು. 



ತದನಂತರ ಕಾಲೇಜು ಶಿಕ್ಷಣ ಶುರುವಾಗಿದ್ದು ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ (57-59) ಡಿಗ್ರಿ ಓದುವಾಗಲೂ ಸಹ ನಾಟಕ ಸಾಹಿತ್ಯವನ್ನು ಓದಿಕೊಂಡು ರಂಗಭೂಮಿಯತ್ತ ಆಕರ್ಷಿತರಾದರು. ಮಾಜಿ ಮುಖ್ಯಮಂತ್ರಿಗಳಾಗಿದ್ದ ವೀರಪ್ಪ ಮೊಯಿಲಿಯವರೂ ಇದೇ ಕಾಲೇಜಿನಲ್ಲಿ ಓದಿದ್ದು ಚೌಟರಿಗಿಂತ ಒಂದು ವರ್ಷ ಜೂನಿಯರ್ ಆಗಿದ್ದವರು. ಕಾಲೇಜಿನ ವಾಲ್ ಮ್ಯಾಗಜಿನ್‌ನಲ್ಲಿ ಚೌಟರೂ ಹಾಗೂ ಮೋಯಿಲಿಯವರು ತಮ್ಮ ಕವಿತೆಗಳನ್ನು ಬರೆದು ಪ್ರಕಟಿಸುತ್ತಾ ಕಾವ್ಯಕೃಷಿಯನ್ನು ಆರಂಭಿಸಿದರು. ಮಂಗಳೂರಿನ ಸರಕಾರಿ ಕಾಲೇಜ್ ಆಗ ಶೇಕ್ಸ್‌ಫೀಯರ್ ನಾಟಕಗಳಿಗೆ ತುಂಬಾ ಪ್ರಸಿದ್ದಿ ಪಡೆದಿತ್ತು. ಈಶ್ವರ್ ಭಟ್ ಎನ್ನುವ ಪ್ರಿನ್ಸಿಪಾಲರು ಸಾಂಸ್ಕೃತಿಕ ಚಟುವಟಿಕೆಗಳಿಗೆ ತುಂಬಾ ಪ್ರೋತ್ಸಾಹ ಕೊಡುತ್ತಿದ್ದರು. ಇದರಿಂದಾಗಿ ಯಕ್ಷಗಾನ ತಾಲಮದ್ದಲೆ ಹಾಗೂ ನಾಟಕಗಳೆಲ್ಲಾ ಕಾಲೇಜಿನಲ್ಲಿ ನಡೆಯುತ್ತಿದ್ದವು. ವರ್ಷಕ್ಕೆ ಕನಿಷ್ಟ ಎರಡು ಕನ್ನಡ ನಾಟಕಗಳೂ ತಯಾರಾಗುತ್ತಿದ್ದವು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದ್ದ ಚೌಟರು ಕಾಲೇಜಿನ ಕನ್ನಡ ಸಂಘದ ಕಾರ್ಯದರ್ಶಿಯೂ ಆಗಿದ್ದರು.

ಡಿಗ್ರಿ ನಂತರ ಚೌಟರು ಸ್ನಾತಕೋತ್ತರ ವಿದ್ಯಾಭಾಸಕ್ಕೆ ಮುಂಬಯಿಗೆ ಹೋದರು. ಸಾಹಿತಿ ಹಾಗೂ ಜನಪ್ರೀಯ ರಾಜಕಾರಣಿಯಾಗಿದ್ದ ಎಂ.ಪಿ.ಪ್ರಕಾಶರವರು ಅಲ್ಲಿ ಚೌಟರ ಕ್ಲಾಸ್‌ಮೇಟ್ ಆಗಿದ್ದರು. ಅಲ್ಲಿದ್ದಾಗಲೇ ಯಕ್ಷಗಾನ ಪ್ರದರ್ಶನವನ್ನು ಕೊಟ್ಟ ಚೌಟರು ಬಭ್ರುವಾಹನ ಕಾಳಗದಲ್ಲಿ ಅರ್ಜುನನ ಪಾತ್ರ ವಹಿಸಿದ್ದರು. ಎಂ.ಪಿ.ಪ್ರಕಾಶರವರೂ ಸಹ ಮೊದಲ ಬಾರಿಗೆ ಯಕ್ಷಗಾನದ ವೇಷ ತೊಟ್ಟಿದ್ದೂ ಸಹ ಚೌಟರ ಜೊತೆಯಲ್ಲೇ. ಇದೆಲ್ಲದರಿಂದಾಗಿ ಚೌಟರಿಗೆ ಪುಸ್ತಕಗಳನ್ನು ಓದುವ ಹುಚ್ಚಿನ ಜೊತೆಗೆ ಸಂಗೀತ ಹಾಗೂ ನಾಟಕದ ಹುಚ್ಚು ಸಹ ಸೇರಿಕೊಂಡಿತು. 

ಉದ್ಯೋಗಿಯಾಗಿ ಚೌಟರು: ಅದು 1965ರ ಕಾಲ. ಓದು ಮುಗಿಯುತ್ತಲೇ ಸಂಪಾದನೆಗಾಗಿ ಮುಂಬಯಿಯಲ್ಲಿ ಜನರಲ್ ಇನ್ಸೂರೆನ್ಸ್ ಕಂಪನಿಗೆ ಸೇರಿದರು. ಆಗತಾನೆ ಮದುವೆ ಕೂಡಾ ಆಗಿತ್ತು. ಆಪ್ರೀಕಾ ದರಿದ್ರ ದೇಶವೆಂದುಕೊಂಡು ಅಲ್ಲಿಗೆ ಹೋಗಲು ಬೇರೆಯವರು ಸಿದ್ದವಾಗಿಲ್ಲದೇ ಇರುವುದರಿಂದ ಕಂಪನಿ ಕೆಲಸದ ಮೇಲೆ ಚೌಟರು ಆಪ್ರಿಕಾದ ಘಾನಕ್ಕೆ ಮ್ಯಾನೇಜರ್ ಆಗಿ ಹೋಗಿ ಅಲ್ಲಿ ಸತತ ಏಳು ವರ್ಷ ಕೆಲಸ ಮಾಡಿದರು. ಅವರ ಇಬ್ಬರೂ ಮಕ್ಕಳು ಹುಟ್ಟಿದ್ದೇ ಅಲ್ಲಿ. ಘಾನದಲ್ಲಿದ್ದಾಗಲೂ ಸಹ ಘಾನ ಕನ್ನಡ ಸಂಘವನ್ನು ಹುಟ್ಟು ಹಾಕುವಲ್ಲಿ ಚೌಟರು ಮಹತ್ವದ ಪಾತ್ರ ವಹಿಸಿದರು. ಯುಗಾದಿಯಂತಹ ಭಾರತೀಯ ಹಬ್ಬಗಳ ಆಚರಣೆಗಳ ಜೊತೆಜೊತೆಗೆ ನಾಟಕಗಳಿಗೂ ಸಹ ವೇದಿಕೆಗಳನ್ನು ಒದಗಿಸುತ್ತಿದ್ದರು.  ಅಲ್ಲಿರುವ ಕನ್ನಡಿಗರು ತಮ್ಮಲ್ಲಿರುವ ಕನ್ನಡ ಪುಸ್ತಕಗಳನ್ನು ಒಬ್ಬರಿಗೊಬ್ಬರು ಬದಲಾಯಿಸಿಕೊಂಡು ಓದುವ ಅಭ್ಯಾಸವನ್ನು ಆರಂಭಿಸಿದ್ದೇ ಚೌಟರವರು. ಭಾರತಕ್ಕೆ ಬಂದು ಆಪ್ರಿಕಾಕ್ಕೆ ಹೋಗುವಾಗಲೆಲ್ಲಾ ಸುಟಕೇಸ್ ತುಂಬ್ ಚೌಟರು ತೆಗೆದುಕೊಂಡು ಹೋಗುತ್ತಿದ್ದುದು ಕನ್ನಡ-ತುಳು ಸಾಹಿತ್ಯದ ಪುಸ್ತಕಗಳನ್ನು ಹಾಗೂ ಆಡಿಯೋ ಕ್ಯಾಸೆಟ್‌ಗಳನ್ನು. ವಿದೇಶದಲ್ಲಿ ತಮ್ಮ ಬಿಡುವಿಲ್ಲದ ಕೆಲಸದ ನಡುವೆಯೂ ಓದುವ ಕೇಳುವ ಹಾಗೂ ನೋಡುವ ಆಸಕ್ತಿಯನ್ನು ಬಿಟ್ಟು ಬಿಡದೇ ಕಾಪಿಟ್ಟುಕೊಂಡು ಬಂದರು ಹಾಗೂ ಅಲ್ಲಿರುವ ಕನ್ನಡಿಗರಿಗೂ ಆ ಹವ್ಯಾಸವನ್ನು ಬೆಳೆಸಿದರು. 



ಉದ್ಯಮಿಯಾಗಿ ಚೌಟರು: ಅಷ್ಟರಲ್ಲಾಗಲೇ ಖಾಸಗಿ ಕಂಪನಿಯಾಗಿದ್ದ ಬ್ರಿಟಿಷ್ ಇಂಡಿಯಾ ಜನರಲ್ ಇನ್ಸೂರೆನ್ಸ್ ರಾಷ್ಟ್ರೀಕರಣಗೊಂಡಿದ್ದರಿಂದ ನೈಜೀರಿಯಾಕ್ಕೆ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಹೋಗಬೇಕಾಗಿ ಬಂತು. 1973ರಿಂದ ೮೦ರ ವರೆಗೆ ಅಲ್ಲಿ ಕೆಲಸ ಮಾಡಿದ ಚೌಟರಿಗೆ ಉದ್ಯೋಗಕ್ಕಿಂತಲೂ ಉದ್ಯಮಿಯಾಗಬೇಕೆಂಬ ಹಂಬಲ ಶುರುವಾಯಿತು. ಆಗ ಅವರು ಆರಂಭಿಸಿದ ಮೊದಲ ಫ್ಯಾಕ್ಟರಿಯಾವುದೆಂದರೆ ಶೂಗಳಿಗೆ ಥರ್ಮೋಪ್ಲಾಸ್ಟಿಕ್ ಸೋಲ್ ತಯಾರಿಸುವುದು. ತದನಂತರ ಹತ್ತು ಹಲವು ಉತ್ಪನ್ನಗಳನ್ನು ತಯಾರಿಸಿ ಬೇರೆ ಬೇರೆ ದೇಶಗಳಲ್ಲಿ ವ್ಯಾಪಾರ ವಹಿವಾಟನ್ನು ಯಶಸ್ವಿಯಾಗಿ ಮಾಡಿದ ಚೌಟರವರು ದೇಶವಿದೇಶಗಳನ್ನೆಲ್ಲಾ ಸುತ್ತಿದರು. ಚೌಟರು ಹಣದ ಹಿಂದೆಯೇ ಬಿದ್ದಿದ್ದರೆ ದೊಡ್ಡ ಬಂಡವಾಳಶಾಹಿಯಾಗಿ ಐಶಾರಾಮಿ ಬದುಕು ರೂಪಿಸಿಕೊಂಡು ವಿದೇಶಗಳಲ್ಲೇ ನೆಲೆ ಊರಬಹುದಾಗಿತ್ತು. ಆದರೆ...

ಮರಳಿ ಮಣ್ಣಿಗೆ: ಚೌಟರು ತಮ್ಮ ಟೊಂಗೆ ಟಿಸುಳುಗಳನ್ನು ಬೇರೆ ದೇಶದ ಆಗಸದಲ್ಲಿ ಚಾಚಿದ್ದರೂ ಬೇರು ಮಾತ್ರ ತುಳುನಾಡಿನಲ್ಲೇ ಇತ್ತು. ಕಲೆ, ನೆಲೆ ಮತ್ತು ನುಡಿ ಚೌಟರನ್ನು ಕರೆಯುತ್ತಲೇ ಇತ್ತು. ಮನದ ಮಾತು ಆಲಿಸಿ ದುಡಿದ ಅಷ್ಟೂ  ಹಣವನ್ನೂ ಒಟ್ಟು ಮಾಡಿಕೊಂಡು ಹುಟ್ಟಿದ ಊರು ದರ್ಬೆಗೆ ಬಂದವರೇ ಅಲ್ಲಿ ನೂರು ಎಕರೆಯಷ್ಟು ಕೃಷಿ ಭೂಮಿಯನ್ನು ಖರೀದಿ ಮಾಡಿ ಕೃಷಿಕರಾದರು. ಮಾದರಿ ತೋಟವನ್ನು ನಿರ್ಮಿಸಿದರು. ಹಲವಾರು ಕೃಷಿ ಮೇಳಗಳನ್ನು ವ್ಯವಸ್ಥಿತವಾಗಿ ತಮ್ಮ ತೋಟದಲ್ಲಿ ಆಯೋಜಿಸುತ್ತಿದ್ದರು. ಗುಣಮಟ್ಟದ ಕೃಷಿ ಉತ್ಪನ್ನಗಳನ್ನು ಬೆಳೆದವರಿಗೆ ಪ್ರಶಸ್ತಿಕೊಟ್ಟು, ಪ್ರಗತಿ ಪರ ರೈತರಿಗೆ ಬಹುಮಾನಗಳನ್ನಿತ್ತು ಸನ್ಮಾನಿಸಿ ಪ್ರೋತ್ಸಾಹಿಸುತ್ತಿದ್ದರು. ಕೃಷಿ ಕುರಿತ ಉಪನ್ಯಾಸ ಹಾಗೂ ಪ್ರಯೋಗಗಳ ಕುರಿತು ಚರ್ಚೆಗಳನ್ನೂ ಏರ್ಪಡಿಸಿ ರೈತಾಪಿ ಜನರಲ್ಲಿ ಜಾಗೃತಿಯನ್ನು ಬೆಳೆಸಲು ಪ್ರಯತ್ನಿಸಿದರು. ಕೃಷಿ ಮೇಳದ ಕೊನೆಯಲ್ಲಿ ನಾಟಕ ಪ್ರದರ್ಶನಗಳಿಗೂ ಅವಕಾಶ ಕಲ್ಪಿಸುತ್ತಿದ್ದರು. ಕಲೆ ಮತ್ತು ಕೃಷಿಯ ಪೋಷಣೆಯನ್ನು ಕೊನೆಯವರೆಗೂ ತಮ್ಮ ಕಾಯಕವನ್ನಾಗಿಸಿಕೊಂಡರು. ನನಗೆ ಅಪ್ಪ ಕೊಟ್ಟಿದ್ದು ಚೌಟ ಎನ್ನುವ ಹೆಸರನ್ನು ಮಾತ್ರ. ಉಳಿದ ಎಲ್ಲವನ್ನೂ ನಾನೇ ದುಡಿದು ಗಳಿಸಿದೆ. ನೀವೂ ಗಳಿಸಿ.. ಆದರೆ ಉಳಿದವರ ಜೊತೆಗೆ ಹಂಚಿ ತಿನ್ನಿ. ಎಂದು  ಚೌಟರವರು ತಮ್ಮ ಮಕ್ಕಳಿಗೆ ಹೇಳುತ್ತಿದ್ದರು.. ಹೇಳಿದಂತೆಯೇ ಘನತೆಯಿಂದ ಬಾಳಿ ಬದುಕಿದರು.

ಚಿತ್ರಕಲಾ ಪರಿಷತ್ತಿಗೆ ಚೌಟರು: ಪೂರ್ಣಚಂದ್ರ ತೇಜಸ್ವಿಯವರ ಹಾಗೆಯೇ ಡಿ.ಕೆ.ಚೌಟರಿಗೂ ಹತ್ತು ಹಲವು ಕ್ರಿಯಾಶೀಲ ಹವ್ಯಾಸಗಳಿದ್ದವು. ಅದರಲ್ಲಿ ಒಂದು ಚಿತ್ರಕಲೆ. ಚಿತ್ರಕಲೆಯ ಬಗ್ಗೆ ಅವರ ಆಸಕ್ತಿ ಎಷ್ಟಿತ್ತೆಂದರೆ ತೊಂಬತ್ತರ ದಶಕದಿಂದಲೂ ಚಿತ್ರಕಲಾ ಪರಿಷತ್ತಿನಲ್ಲಿ ಯಾವುದೇ ಚಿತ್ರಕಲಾ ಪ್ರದರ್ಶನ ನಡೆದರೂ ಅಲ್ಲಿ ಹೋಗಿ ಆಸ್ವಾದಿಸಿ ಬರುತ್ತಿದ್ದರು. ಆಗ ಪ್ರೊ. ನಂಜುಂಡಯ್ಯನವರು ಚಿತ್ರಕಲಾ ಪರಿಷತ್ತಿನ ಮೊದಲ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಆಗ ಪರಿಷತ್ತು ಆರ್ಥಿಕವಾಗಿ ಸಂಕಷ್ಟದಲ್ಲಿತ್ತು. ಕಟ್ಟಡದ ಕೆಲಸ ಬೇರೆ ನಡೆಯುತ್ತಿತ್ತು. ನಂಜುಂಡಪ್ಪನವರು ತಮ್ಮ ಆರ್ಥಿಕ ಸಮಸ್ಯೆಯನ್ನು ಹೇಳಿಕೊಂಡಾಗ ಮರುದಿನವೇ ಹತ್ತು ಸಾವಿರ ಹಣವನ್ನು ಚೌಟರು ದೇಣಿಗೆಯಾಗಿ ನೀಡಿದರು. ಆಗಿನ ಕಾಲಕ್ಕೆ ಇದು ದೊಡ್ಡ ಮೊತ್ತ. ನಂತರ ನಂಜುಂಡಯ್ಯನವರು ಸಂಕಷ್ಟಕಾಲದಲ್ಲಿ ಸಹಾಯ ಮಾಡಿದ ಚೌಟರನ್ನು ಪರಿಷತ್ತಿಗೆ ಉಪಾದ್ಯಕ್ಷರನ್ನಾಗಿ ಮಾಡಿದರು. ಜೀವರಾಜ ಆಳ್ವರವರು ಆಗ ಅಧ್ಯಕ್ಷರಾಗಿದ್ದರು. ನಂತರ ಆಳ್ವರವರ ಆಗ್ರಹಕ್ಕೆ ಒಪ್ಪಿದ ಚೌಟರವರು ಪರಿಷತ್ತಿನ ಕಮಿಟಿಯ ಸದಸ್ಯರಾಗಿ ನಂತರ ಟ್ರಸ್ಟಿ ಸಹ ಆದರು. ಈಗಿರುವ ಆರ್ಟ ಗ್ಯಾಲರಿ ಕಟ್ಟಡ ಪೂರ್ಣಗೊಳ್ಳುವುದಕ್ಕೆ ಕಾರಣ ಚೌಟರವರು ಕೊಟ್ಟ ಬಹುದೊಡ್ಡ ಆರ್ಥಿಕ ಸಹಾಯ. ನಂಜುಂಡಯ್ಯನವರು ತೀರಿಕೊಂಡ ನಂತರ ಚಿತ್ರಕಲಾ ಪರಿಷತ್ತಿಗೆ ಚೌಟರು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಚಿತ್ರಕಲಾ ಪರಿಷತ್ತನ್ನು ಇಡೀ ದೇಶದಲ್ಲೇ ಪ್ರಸಿದ್ಧಗೊಳಿಸಲು ಶ್ರಮಿಸಿದರು.


ಚೌಟರು ಪರಿಷತ್ತಿನ ಚುಕ್ಕಾಣಿ ಹಿಡಿದ ಮೇಲೆ ಚಿತ್ರಕಲಾ ಪರಿಷತ್ತಿಗೆ ಬೇರೆಯದೇ ಆದ ಕ್ಯಾನ್ವಾಸ್ ಕೊಟ್ಟರು. ಅದನ್ನೊಂದು ರಾಷ್ಟ್ರೀಯ ಮಟ್ಟದ ಸಂಸ್ಥೆಯನ್ನಾಗಿ ಬೆಳೆಸಬೇಕೆನ್ನುವ ತಮ್ಮ ಕನಸನ್ನು ನನಸಾಗಿಸಿಕೊಂಡರು ಜೊತೆಗೆ ಪರಿಷತ್ತನ್ನು ಸ್ವಾಯತ್ತ ಸಂಸ್ಥೆಯನ್ನಾಗಿ ರೂಪಿಸುವಲ್ಲಿ ಶ್ರಮವಹಿಸಿ ಯಶಸ್ವಿಯಾದರು. ಸರಕಾರದ ಅನುದಾನದಲ್ಲೇ ಬದುಕುತ್ತಿದ್ದ ಚಿತ್ರಕಲಾ ಪರಿಷತ್ತಿಗೆ ಸ್ವಂತ ಆದಾಯದ ಮೂಲಗಳನ್ನು ಹುಡುಕಿದರು. ಕಲಾವಿದರಿಂದ ನಿರ್ಮಾಣಗೊಂಡ ಕಲಾಕೃತಿಗಳನ್ನು ಪೇರಿಸಿ ಇಡುವ ದಾಸ್ತಾನು ಕೊಠಡಿಯಂತಾಗಿದ್ದ ಪರಿಷತ್ತಿನಲ್ಲಿ, ವರ್ಷದ ಎಲ್ಲ ದಿನವೂ ಚಿತ್ರಕಲಾ ಪ್ರದರ್ಶನಗಳನ್ನು ಹಮ್ಮಿಕೊಳ್ಳುವಂತೆ ಮಾಡಿ, ಕಲಾಕೃತಿಗಳ ಮಾರಾಟದ ವ್ಯವಸ್ಥೆಯನ್ನೂ ಚೌಟರು ವ್ಯವಸ್ಥಿತವಾಗಿ ಮಾಡಿದರು. ಪರಿಷತ್ತಿನ ಆವರಣದಲ್ಲಿ ಮಾರಾಟದ ಮಳಿಗೆಯೊಂದನ್ನು ಆರಂಭಿಸಿದರು. ಕಲಾವಿದರಿಗೆ ಬೇಕಾಗುವ ಎಲ್ಲಾ ವಸ್ತುಗಳೂ ಅಲ್ಲಿ ದೊರೆಯುವಂತೆ ಮಾಡಿದರು. ಈಗ ಈ ಮಾರಾಟ ಮಳಿಗೆಯ ವಾರ್ಷಿಕ ಆದಾಯವೇ ಹತ್ತಿಪ್ಪತ್ತು ಲಕ್ಷಕ್ಕೂ ಹೆಚ್ಚು ಎಂಬುದಕ್ಕೆ ಮೂಲ ಕಾರಣ ಚೌಟರವರ ದೂರದೃಷ್ಟಿಯೇ ಆಗಿದೆ.

ಉಳ್ಳವರಿಗೆ ಮಾತ್ರ ಚಿತ್ರಕಲೆಯ ಉಸಾಬರಿ ಎನ್ನುವ ಮಾತು ಸಾರ್ವತ್ರಿಕವಾಗಿರುವಾಗ ಜನಸಾಮಾನ್ಯರಿಗೂ ಚಿತ್ರಕಲಾ ಉತ್ಪನ್ನಗಳು ದೊರೆಯಲಿ ಎನ್ನುವ ಉದ್ದೇಶದಿಂದ ವರ್ಷಕ್ಕೊಮ್ಮೆ ಚಿತ್ರಸಂತೆಯನ್ನು ಚೌಟರು ಆರಂಭಿಸಿದರು. ಚಿತ್ರಕಲಾ ಪರಿಷತ್ತಿನ ಮುಂದಿರುವ ಎರಡು ಕಿಲೋಮೀಟರ್ ರಸ್ತೆಯಲ್ಲಿ ದೇಶದ ಮೂಲೆ ಮೂಲೆಗಳಿಂದ ಬಂದ ಚಿತ್ರ ಕಲಾವಿದರುಗಳು ಚಿತ್ರಸಂತೆಯಲ್ಲಿ ತಮ್ಮ ಕಲಾಕೃತಿಗಳನ್ನು ಪ್ರದರ್ಶನ ಮಾಡಿ ಮಾರಾಟ ಮಾಡುವ ವ್ಯವಸ್ಥೆ ಶುರುವಾಗಿದ್ದೇ ಚೌಟರವರಿಂದ. ಈ ಚಿತ್ರಸಂತೆ ಅದೆಷ್ಟು ಯಶಸ್ವಿಯಾಯಿತು ಎಂದರೆ ಪ್ರತಿ ವರ್ಷ ಡಿಸೆಂಬರ್ ತಿಂಗಳು ಬರುವುದನ್ನೇ ಕಲಾವಿದರು ಕಾಯುತ್ತಿರುತ್ತಾರೆ. ಚಿತ್ರ ಸಂತೆಯಲ್ಲಿ ಚಿತ್ರಕಲೆಯನ್ನು ನೋಡಲು ಹಾಗೂ ಕೊಳ್ಳಲು ಕಲಾಸಕ್ತ ಜನರೂ ಉತ್ಸುಕರಾಗಿರುತ್ತಾರೆ. ವರ್ಷಕ್ಕೊಮ್ಮೆ ನಡೆಯುವ ಚಿತ್ರಸಂತೆಯೆಂಬ ಪರಿಷೆಯ ಸಂಭ್ರಮ ನೋಡುವುದೇ ಒಂದು ರೋಮಾಂಚನ. ಇಂತಹ ಪ್ರಯತ್ನ ಇಡೀ ದೇಶದಲ್ಲೇ ಮೊದಲನೆಯದು. ಇದರ ಯಶಸ್ಸಿನ ಶ್ರೇಯಸ್ಸು ದಕ್ಕಬೇಕಾದದ್ದು ಚೌಟರಿಗೆ. ಈ ಚಿತ್ರಸಂತೆಯ ಸಾಫಲ್ಯ ಸರಕಾರದ ಗಮನವನ್ನೂ ಸೆಳೆದು ಈಗ ಪ್ರತಿವರ್ಷ ಮೈಸೂರಿನ ದಸರಾ ಉತ್ಸವದಲ್ಲೂ ಸಹ ಚಿತ್ರಸಂತೆಯನ್ನು ಆಯೋಜಿಸಲಾಗುತ್ತಿದೆ. ಹಲವಾರು ಕಲಾವಿದರ ಬದುಕಿಗೂ ಸಹ ಚಿತ್ರಸಂತೆ ದಾರಿಯಾಗಿದೆ. 

ಚೌಟರಂತಹ ರಂಗಾಸಕ್ತರು ಪರಿಷತ್ತಿನ ಕಾರ್ಯದರ್ಶಿಗಳಾಗಿದ್ದರಿಂದಲೇ ಚಿತ್ರಕಲಾ ಪರಿಷತ್ತಿನ ಆವರಣ ನಾಟಕ ಪ್ರದರ್ಶನಗಳಿಗೆ ತೆರೆದುಕೊಂಡಿತು. ಬಸವಲಿಂಗಯ್ಯನವರ ನಿರ್ದೇಶನದ ಕುಸುಮಬಾಲೆಯಿಂದ ಹಿಡಿದು ಅನೇಕಾನೇಕ ನಾಟಕಗಳು ಚಿತ್ರಕಲಾ ಪರಿಷತ್ತಿನಲ್ಲಿ ಪ್ರಯೋಗಗೊಂಡಿವೆ. ಇತರ ಪ್ರದರ್ಶನ ಕಲಾಪ್ರಕಾರಗಳಿಗೂ ಪರಿಷತ್ತಿನ ಬಯಲು ರಂಗಮಂದಿರ ವೇದಿಕೆಯಾಗಿದೆ.

ಸಾಹಿತಿಯಾಗಿ ಚೌಟರು : ಚೌಟರು ಜಗವನ್ನೆಲ್ಲಾ ಸುತ್ತಿ ಬಂದು ಪ್ರಗತಿಪರ ರೈತರಾಗಿ ಕೃಷಿ ಮಾಡಿದ್ದು ಹುಟ್ಟೂರಿನಲ್ಲಿ, ಅಕ್ಷರ ಕೃಷಿ ಮಾಡಿದ್ದೂ ಸಹ ತಾಯಿ ಭಾಷೆಯಲ್ಲಿ. ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳು ನಿರರ್ಗಳವಾಗಿ ಬರುತ್ತಿದ್ದರೂ ಸಹ ಚೌಟರು ಬಹುತೇಕ ಬರೆದದ್ದು ಮಾತೃಭಾಷೆ ತುಳುವಿನಲ್ಲಿ. ಚೌಟರು ತುಳುವಿನಲ್ಲಿ ಬರೆದು ಪ್ರಕಟಿಸಿದ ಮೊಟ್ಟ ಮೊದಲ ಕಥಾಸಂಕಲನ ಕರಿಯವಜ್ಜೆರೆನ ಕತೆಕುಲು ಅಂದರೆ ಕನ್ನಡದಲ್ಲಿ ಕರಿಯಜ್ಜನ ಕತೆಗಳು. ಅದೂ ಸಹ ಆನಂದಕೃಷ್ಣ ಎನ್ನುವ ಹೆಸರಿನಲ್ಲಿ ಪ್ರಕಟಗೊಂಡಿತ್ತು. ಯಾಕೆ ಹೀಗೆ ಬೇರೆ ಹೆಸರಲ್ಲಿ ಪ್ರಕಟಿಸಿದ್ದೀರಿ? ಎಂದು ಕೇಳಿದರೆ ಚೌಟರು ನಾನು 1995ರಲ್ಲಿ ವಿಶ್ವ ಬಂಟರ ಸಂಘದ ಅಧ್ಯಕ್ಷನಾಗಿದ್ದೆ, ಅಧ್ಯಕ್ಷರು ಬರೆದ ಕಥಾ ಪುಸ್ತಕವೆಂದು ಸಂಘದ ಸದಸ್ಯರೆಲ್ಲಾ ದಾಕ್ಷಿಣ್ಯದಿಂದ ನನ್ನ ಪುಸ್ತಕ ಕೊಂಡುಕೊಳ್ಳುವುದು ನನಗೆ ಇಷ್ಟವಿಲ್ಲ. ಒತ್ತಾಯವೋ ಪ್ರಭಾವವೋ ಒಂದು ಸಾಹಿತ್ಯ ಕೃತಿಯ ಮೇಲೆ ಸವಾರಿ ಮಾಡುವುದು ನನಗೆಂದೂ ಒಪ್ಪಿತವಲ್ಲ. ಸಾಹಿತ್ಯ ಎನ್ನುವುದು ತನ್ನ ಸತ್ವದಿಂದಾಗಿ ತನ್ನಿಂದ ತಾನೇ ಓದುಗರನ್ನು ಮುಟ್ಟಬೇಕು ಎಂದು ಹೇಳಿದ ಚೌಟರ ಮಾತುಗಳಲ್ಲಿ ಅವರ ಸಾಹಿತ್ಯದ ಕುರಿತ ಪ್ರಾಮಾಣಿಕ ಕಳಕಳಿಯೂ ಅಡಗಿದೆ. ಹೀಗಾಗಿ ಕೃಷ್ಣಾನಂದರವರು ಆನಂದ ಕೃಷ್ಣರಾಗಿ ಅಜ್ಞಾತವಾಗಿದ್ದುಕೊಂಡೇ ಮಾತೃಭಾಷೆಯಲ್ಲಿ ಸಾಹಿತ್ಯ ಕೃಷಿಯನ್ನು ಶುರುಮಾಡಿದರು. ಚೌಟರ ಯಾವುದೇ ಪ್ರಕಟಿತ ಸಾಹಿತ್ಯ ಕೃತಿಯನ್ನು ತೆರೆದು ನೋಡಿದರೆ ಅಲ್ಲೆಲ್ಲೂ ಡಿ.ಕೆ.ಚೌಟ ಎನ್ನುವ ಹೆಸರಿನ ಉಲ್ಲೇಖ ಕಾಣಿಸಿಕೊಳ್ಳುವುದಿಲ್ಲ. ಅಷ್ಟೇ ಯಾಕೆ ವಿಳಾಸವನ್ನೂ ಕೂಡಾ ಮುದ್ರಿಸಿರುವುದಿಲ್ಲ. ಇಲ್ಲಿ ಕೃತಿ ಮುಖ್ಯವಾಗಬೇಕೆ ಹೊರತು ಕೃತಿಕಾರನಲ್ಲ, ಬರಹಗಾರನ ವ್ಯವಹಾರ, ಹುದ್ದೆ, ಪ್ರಭಾವಗಳು ಅವರ ಸಾಹಿತ್ಯದ ಓದುಗರ ಮೇಲೆ ಯಾವುದೇ ಪ್ರಭಾವವನ್ನೂ ಬೀರಬಾರದು ಎನ್ನುವುದೇ ಅವರ ಉದ್ದೇಶವಾಗಿತ್ತು. ಕೊನೆಯವರೆಗೂ ಅದನ್ನು ಪರಿಪಾಲಿಸಿಕೊಂಡೇ ಬಂದರು. ಮುಂದೆ ಅವರ ಮೊದಲ ತುಳು ಕಥಾಸಂಕಲನ ಕನ್ನಡಕ್ಕೂ ಸಹ ಭಾಷಾಂತರಗೊಂಡು ಪ್ರಕಟವಾಗಿ ಓದುಗರ ಗಮನ ಸೆಳೆಯಿತು. ಈ ಕಥೆಗಳಲ್ಲಿರುವ ನಾಟಕೀಯ ಅಂಶಗಳಿಂದಾಗಿ ಕರಿಯಜ್ಜನ ಕಥೆಗಳು ಕೃತಿ ಕೃಷ್ಣಮೂರ್ತಿ ಕವತ್ತಾರರ ನಿರ್ದೇಶನದಲ್ಲಿ ರಂಗರೂಪ ಪಡೆದು ತುಳು ಹಾಗೂ ಕನ್ನಡ ಎರಡೂ ಭಾಷೆಯಲ್ಲಿ ನಾಟಕವಾಗಿ ಪ್ರದರ್ಶನಗೊಂಡಿತು. ಈ ನಾಟಕದಲ್ಲಿ ಮಾಡಲಾದ ಹಲವು ಕಥೆಗಳ ಕೊಲಾಜ್ ಸ್ವರೂಪದ ಅಭಿವ್ಯಕ್ತಿಯೂ ಸಹ ತುಳು ರಂಗಭೂಮಿಯ ಇತಿಹಾಸದಲ್ಲೇ ಮೊದಲನೆಯದಾಗಿದೆ. ಚೌಟರವರ ಮೊದಲ ಕಥಾ ಸಂಕಲನಕ್ಕೆ ತುಳು ಸಾಹಿತ್ಯ ಅಕಾಡೆಮಿಯ ಬಹುಮಾನವೂ ದೊರೆಯಿತು. 



ಕಥಾ ಸಂಕಲನದ ನಂತರ ಮಿತ್ತಬೈಲ್ ಯಮುನಕ್ಕೆ-ಒಂದು ಗುತ್ತುದ ಕತೆ ಎನ್ನುವ ತುಳು ಕಾದಂಬರಿಯನ್ನು ಚೌಟರು ಬರೆದರು. ತುಳು ಸಾಹಿತ್ಯದಲ್ಲಿ ಈ ಕಾದಂಬರಿಯನ್ನು ಒಂದು ಮೈಲುಗಲ್ಲು ಎಂದೇ ಪರಿಗಣಿಸಲಾಯಿತು. ತುಳು ಭಾಷೆಯ ಸಮೃದ್ದತೆಯನ್ನು ಹೀರಿಕೊಂಡು ರೂಪಗೊಂಡ ಈ ಕಾದಂಬರಿಯನ್ನು ಪ್ರೊ.ಕೆ.ಈ.ರಾಧಾಕೃಷ್ಣರವರು ಕನ್ನಡಕ್ಕೂ ಅನುವಾದಿಸಿದ್ದು ದೇಶಕಾಲ ಪತ್ರಿಕೆಯಲ್ಲಿ ದಾರಾವಾಹಿ ರೂಪದಲ್ಲಿ ಪ್ರಕಟಗೊಂಡಿತ್ತು. ಈ  ಕಾದಂಬರಿಯ ಮೂಲಕ ಚೌಟರವರು ತುಳು ಜಗತ್ತಿನ ಆಗುಹೋಗುಗಳನ್ನು ಕನ್ನಡಕ್ಕೂ ವಿಸ್ತರಿಸಿದರು. ಇದೇ ಕಾದಂಬರಿಯನ್ನು ಮುಹಮುದ್ ಕುಳಾಯಿಯವರೂ ಕನ್ನಡಕ್ಕೆ ಅನುವಾದಿಸಿದ್ದಾರೆ. ಪ್ರೊ.ಬಿ.ಸುರೇಂದ್ರರಾವ್ ಹಾಗೂ ಪ್ರೊ.ಕೆ.ಚಿನ್ನಪ್ಪಗೌಡರವರು ಜಂಟಿಯಾಗಿ ಆಂಗ್ಲ ಭಾಷೆಗೂ ಅನುವಾದಿಸಿದ್ದು ಪುಸ್ತಕ ರೂಪದಲ್ಲಿ ಪ್ರಕಟಗೊಂಡಿದೆ. ಈ ಕಾದಂಬರಿಯನ್ನು ಕನ್ನಡದಲ್ಲಿ ಬಸವರಾಜ ಸೂಳೇರಿಪಾಳ್ಯರವರು ರಂಗರೂಪಗೊಳಿಸಿದ್ದು ರಂಗನಿರಂತರ ತಂಡಕ್ಕೆ ಪ್ರಮೋದ್ ಶಿಗ್ಗಾಂವ್‌ರವರು ನಿರ್ದೇಶಿಸಿ ಹಲವಾರು ಯಶಸ್ವಿ ಪ್ರದರ್ಶನಗಳನ್ನೂ ಕಂಡಿದೆ. ಆ ನಂತರ ಪ್ರಕಟಗೊಂಡ ಚೌಟರ ಇನ್ನೊಂದು ಕಥಾ ಸಂಕಲನ ಪತ್ತ್ ಪಜ್ಜೆಲು ಸಹ ತುಳು ಕಥಾ ಸಾಹಿತ್ಯದಲ್ಲಿ ಮಹತ್ತರವಾದ ಕೃತಿಯಾಗಿದೆ. ಕನ್ನಡದಲ್ಲಿ ಚೌಟರು ಬರೆದ ಒಂದೇ ಒಂದು ಕಾದಂಬರಿ ಎಂದರೆ ಅದು ಅರ್ಧ ಸತ್ಯ ಬಾಕಿ ಸುಳ್ಳಲ್ಲ. ಈ ಕಾದಂಬರಿಯನ್ನು ಕೃಷ್ಣಮೂರ್ತಿ ಕವತ್ತಾರರು ಗಾರ್ಗಿ ಹೆಸರಲ್ಲಿ ರಂಗರೂಪಗೊಳಿಸಿ ನಿರ್ದೇಶಿಸಿದ್ದಾರೆ.   

ನಾಟಕಕಾರರಾಗಿ ಚೌಟರವರು : ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಮನೆಯೊಂದನ್ನು ಕಟ್ಟಿಸಿ ವಾಸಿಸತೊಡಗಿದ ಚೌಟರು ಕೃಷಿಯ ಜೊತೆಗೆ ತಮಗಿಷ್ಟವಾದ ಓದು ಮತ್ತು ಬರಹಗಳನ್ನು ಮುಂದುವರೆಸಿದರು. ಕೆಲವಾರು ಕಥೆ ಕಾದಂಬರಿಗಳನ್ನು ಬರೆದರು. ವಿಶೇಷವೆಂದರೆ ತಾವು ಬರೆದ ಸಾಹಿತ್ಯಕ್ಕೆ ತಮ್ಮ ಕೃಷ್ಣಾನಂದ ಎನ್ನುವ ಹೆಸರನ್ನು ಎಲ್ಲೂ ನಮೂದಿಸದೇ ಆನಂದ ಕೃಷ್ಣ ಎನ್ನುವ ಕಾವ್ಯನಾಮವನ್ನು ಕೊಟ್ಟು ಅಕ್ಷರ ಕೃಷಿ ಮಾಡತೊಡಗಿದರು. ಸಾಹಿತ್ಯದಲ್ಲೂ ಸಹ ಅನಾಮಧೇಯರಾಗಿಯೇ ಕಾಯಕ ಮಾಡುವ ಹಂಬಲ. ಬೆಂಗಳೂರಿನಲ್ಲಿದ್ದಾಗಲೆಲ್ಲಾ ಚೌಟರನ್ನು ಕೈಬೀಸಿ ಕರೆಯುತ್ತಿದ್ದುದು ರವೀಂದ್ರ ಕಲಾಕ್ಷೇತ್ರ. ಉತ್ತಮ ನಾಟಕಗಳ ಖಾಯಂ ಪ್ರೇಕ್ಷಕರಾದರು. ತಮ್ಮ ಪಾಡಿಗೆ ಬಂದು ನಾಟಕ ನೋಡಿ ಹೋಗುತ್ತಿದ್ದ ಬಿಳಿ ಗಡ್ಡದಾರಿ ಚೌಟರು ರಂಗಕರ್ಮಿ ಸಿಜಿಕೆಯವರ ಕಣ್ಣಿಗೆ ಬಿದ್ದರು. ರಂಗಾಸಕ್ತಿಯಿಂದಾಗಿ ಸಿಜಿಕೆ ಹಾಗೂ ಚೌಟರು ಬರುಬರುತ್ತಾ ತುಂಬಾ ಆತ್ಮೀಯರಾದರು. ಈ ಇಬ್ಬರ ಕಾಂಬೀನೇಶನ್ನಿನಲ್ಲಿ ಮುಂದೆ ನಡೆದ ಅನೇಕ ರಂಗಪವಾಡಗಳಿಗೆ ರಂಗಭೂಮಿ ಸಾಕ್ಷಿಯಾಯಿತು. ಚೌಟರಿಂದ ಕೆಲವಾರು ರಂಗಕೃತಿಗಳು ಮೂಡಿಬರಲೂ ಪ್ರೇರಣೆಯಾಯಿತು.

ಪಿಲಿಪತ್ತಿ ಗಡಸ್ : ಮೊದಲು ಕಥಾಸಂಕಲನವನ್ನು ಬರೆದು ಪ್ರಕಟಿಸಿದ್ದ ಚೌಟರು ಎರಡನೆಯದಾಗಿ ಬರೆದಿದ್ದೇ ನಾಟಕ ಸಾಹಿತ್ಯವನ್ನು. ಚೌಟರ ಕುಟುಂಬದ ಸನ್ನಿವೇಶಗಳನ್ನೇ ಆಧರಿಸಿ ಬರೆದ ಮೊದಲ ರಂಗಕೃತಿ ಪಿಲಿಪತ್ತಿ ಗಡಸ್. ತುಳು ನಾಟಕ ಪರಂಪರೆಯಲ್ಲೇ ಒಂದು ದೊಡ್ಡ ಕ್ರಾಂತಿಯ ಅಲೆಯನ್ನು ಎಬ್ಬಿಸಿತು. ಈ ನಾಟಕವು ಮೊದಲು ಸುರೇಶ್ ಆನಗಳ್ಳಿಯವರ ನಿರ್ದೇಶನದಲ್ಲಿ (1996ರಲ್ಲಿ) ಪ್ರಯೋಗಗೊಂಡು ಮೂರ‍್ನಾಲ್ಕು ಪ್ರದರ್ಶನ ಕಂಡಿತು. ಮುದ್ರಾಡಿಯ ನಮ ತುಳುವೆರ್ ಕಲಾ ಸಂಘಟನೆಗೆ ಬಾಸುಮ ಕೊಡಗುರವರು ಇದೇ ತುಳು ನಾಟಕವನ್ನು ನಿರ್ದೇಶಿಸಿದರಾದರೂ ಅದು ಒಂದೇ ಪ್ರದರ್ಶನಕ್ಕೆ ಸೀಮಿತವಾಯಿತು. ತದನಂತರ ಜೀವನರಾಂ ಸುಳ್ಯರವರು ಇದೇ ನಾಟಕವನ್ನು ಇದೇ ತಂಡಕ್ಕೆ ನಿರ್ದೇಶಿಸಿದ್ದು ಇಲ್ಲಿವರೆಗೂ ರಾಜ್ಯವೂ ಸೇರಿದಂತೆ ದೇಶಾದ್ಯಂತ ನಾನೂರಾ ಎಂಬತ್ತಕ್ಕೂ ಹೆಚ್ಚು ಪ್ರಯೋಗಗಳನ್ನು ಕಂಡು ಈಗಲೂ ಪ್ರದರ್ಶನಗಳು ಆಗುತ್ತಿವೆ. ಕೇವಲ ಕಂಪನಿ ನಾಟಕದ ಮಾದರಿಯಲ್ಲಿ ಹಾಸ್ಯಪ್ರಧಾನ ನಾಟಕಗಳೇ ತುಳು ಭಾಷೆಯಲ್ಲಿ ಇರುವಂತಹ ಸಂದರ್ಭದಲ್ಲಿ ವೈಚಾರಿಕ ಹಿನ್ನಲೆಯ ಆಧುನಿಕ ರಂಗಭೂಮಿಯ ತಂತ್ರಗಾರಿಕೆಗಳನ್ನು ಬಳಸಿಕೊಂಡ ಪಿಲಿಪತ್ತಿ ಗಡಸ್ ನಾಟಕವು ತುಳು ಭಾಷಾ ಪ್ರಾಭಲ್ಯದ ಪ್ರದೇಶದಲ್ಲಿ ಮನೆಮಾತಾಯಿತು. ಈ ನಾಟಕ ಸಾಹಿತ್ಯಕ್ಕೂ ಸಹ ತುಳು ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ದೊರೆತಿದೆ. ಈ ಪಿಲಿಪತ್ತಿ ಗಡಸ್ ನಾಟಕದಿಂದಾಗಿ ಚೌಟರು ಒಬ್ಬ ನಾಟಕಕಾರರಾಗಿ ಗುರುತಿಸಿಕೊಂಡು ಪ್ರಸಿದ್ಧರಾಗಿದ್ದಷ್ಟೇ ಅಲ್ಲಾ ಮುದ್ರಾಡಿಯ ನಮ ತುಳುವೆರ್ ತಂಡವೂ ಖ್ಯಾತಿಯನ್ನು ಪಡೆದು ನಾಟಕ ಪ್ರದರ್ಶನಗಳನ್ನೇ ನಿರಂತರವಾಗಿಸಿಕೊಂಡಿತು. ತ್ರಿಶೂರಿನಲ್ಲಿ ನಡೆದ ರಂಗೋತ್ಸವದಲ್ಲಿ ಈ ನಾಟಕ ಮೊದಲ ಪ್ರಶಸ್ತಿಯನ್ನೂ ಪಡೆದಿತ್ತು. ಚೌಟರ ಕರಿಯವಜ್ಜೆರೆನ ಕತೆಕುಲು ಕಥಾ ಸಂಕಲನವನ್ನು ಕನ್ನಡಕ್ಕೆ ಅನುವಾದ ಮಾಡಿದ ಬಾಲಕೃಷ್ಣ ಶೆಟ್ಟಿ ಪೊಳಲಿಯವರೇ ಪಿಲಿಪತ್ತಿ ಗಡಸ್ ನಾಟಕವನ್ನೂ ಸಹ ಹುಲಿ ಹಿಡಿದ ಕಡಸು ಎಂಬ ಹೆಸರಲ್ಲಿ ಕನ್ನಡಕ್ಕೆ ಭಾಷಾಂತರಗೊಳಿಸಿದ್ದಾರೆ. ಈ ನಾಟಕದ ಕನ್ನಡ ಆವೃತ್ತಿಗೆ ಸಿಜಿಕೆಯವರೇ ಮುನ್ನುಡಿಯನ್ನೂ ಸಹ ಬರೆದಿದ್ದಾರೆ. ಈ ನಾಟಕವನ್ನು ಕನ್ನಡದಲ್ಲಿ ಹುಲಿ ಮತ್ತು ಹುಡುಗಿ ಹೆಸರಲ್ಲಿ ಕೃಷ್ಣಮೂರ್ತಿ ಕವತ್ತಾರರವರು ನಿರ್ದೇಶಿಸಿದ್ದಾರೆ.



ಧರ್ಮೆತ್ತಿ ಮಾಯೆ: ಪಿಲಿಪತ್ತಿ ಗಡಸ್ ನಾಟಕದ ಯಶಸ್ಸಿನಿಂದ ಪ್ರಭಾವಿತರಾದ ಚೌಟರವರು ಬರೆದ ಎರಡನೇ ನಾಟಕ ಧರ್ಮೆತ್ತಿ ಮಾಯೆ. ಈ ತುಳು ನಾಟಕವನ್ನು ಕೃಷ್ಣಮೂರ್ತಿ ಕವತ್ತಾರರು ತಮ್ಮ ರಂಗಾವತಾರ ನಾಟಕ ತಂಡಕ್ಕೆ ತುಳು ಭಾಷೆಯಲ್ಲೇ ನಿರ್ದೇಶಿಸಿದ್ದು ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದಲ್ಲೂ ಪ್ರದರ್ಶನಗೊಂಡಿತ್ತು. ಇದು ತುಳು ಭಾಷೆಯ ಮಹತ್ವದ ನಾಟಕವೆಂದೆನಿಸಿಕೊಂಡಿದೆ. ಇದೇ ನಾಟಕವನ್ನು ಕುರಾಡಿಯ ಸೀತಾರಾಮ್ ಶೆಟ್ಟಿಯವರು ಮುದ್ರಾಡಿಯ ನಮ ತುಳುವೆರ್ ತಂಡಕ್ಕೂ ಸಹ ನಿರ್ದೇಶಿಸಿದ್ದರು.

ಉರಿಉಷ್ಣದ ಮಾಯೆ : ಚೌಟರ ಮೂರನೆಯ ನಾಟಕ ಉರಿಉಷ್ಣದ ಮಾಯೆ. ಚೌಟರ ಇನ್ನೊಂದು ಕಥಾ ಸಂಕಲನ ಪತ್ತ್‌ಪಜ್ಜೆಲು ಕಥಾ ಸಂಕಲನದೊಳಗಿರುವ ಸುನೀತಾ ಮದ್ಮೆ ಆಯಲ್ (ಸುನೀತ ಮದುವೆ ಆದಳು) ಕಥೆಯನ್ನು ಆಧರಿಸಿ ಬರೆದ ನಾಟಕವಿದು. ಜಾಗತೀಕರಣದಿಂದಾಗಿ ಆದ ಬದಲಾವಣೆಯನ್ನು ಹೇಳುವ ನಾಟಕ ಇದು. ತುಳು ಭಾಷೆಯ ಈ ನಾಟಕವನ್ನು ಕನ್ನಡ ಹಾಗೂ ತುಳು ಎರಡೂ ಭಾಷೆಗಳಲ್ಲಿ ಕೃಷ್ಣಮೂರ್ತಿ ಕವತ್ತಾರರೇ ತಮ್ಮ ರಂಗಾವತಾರ ತಂಡಕ್ಕೆ ನಿರ್ದೇಶಿಸಿ ಗಮನಸೆಳೆದರು. ಧರ್ಮೆತ್ತಿ ಮಾಯೆ ಹಾಗೂ ಉರಿಉಷ್ಣದ ಮಾಯೆ ಈ ಎರಡೂ ನಾಟಕಗಳನ್ನು ಸೇರಿಸಿ ರಡ್ಡ್ ಮಾಯೋದ ನಾಟಕೊಲು ಎನ್ನುವ ಸಂಕಲನವೂ ಪ್ರಕಟಗೊಂಡಿದೆ.

ಮೂರು ಹೆಜ್ಜೆ ಮೂರು ಲೋಕ : ಚೌಟರವರ ಮತ್ತೊಂದು ಮಹತ್ವದ ತುಳು ನಾಟಕ ಮೂರು ಹೆಜ್ಜೆ ಮೂರು ಲೋಕ. ಈ ನಾಟಕವನ್ನು ಕೃಷ್ಣಮೂರ್ತಿ ಕವತ್ತಾರರವರು ತುಳು ಭಾಷೆಯಲ್ಲಿ ತಮ್ಮ ರಂಗಾವತಾರ ತಂಡಕ್ಕೆ ನಿರ್ದೇಶಿಸಿ ಪ್ರದರ್ಶಿಸಿದ್ದರು. ಇದೇ ನಾಟಕವನ್ನು ನಾ.ದಾಮೋದರ ಶೆಟ್ಟಿಯವರು ಕನ್ನಡಕ್ಕೆ ಅನುವಾದಿಸಿದ್ದು ಮುದ್ರಾಡಿಯ ನಮ ತುಳುವೆರ್ ತಂಡಕ್ಕೆ ಶ್ರೀಪಾದ ಭಟ್ ರವರು ನಿರ್ದೇಶಿಸಿದ್ದು ಈಗಾಗಲೇ ಮುನ್ನೂರಕ್ಕೂ ಹೆಚ್ಚು ಪ್ರದರ್ಶನಗಳನ್ನೂ ಕಂಡಿದೆ.



ಹೀಗೆ.. ಚೌಟರವರು ಬರೆದ ರಂಗಕೃತಿಗಳಷ್ಟೇ ಅಲ್ಲಾ, ಅವರ ಬಹುತೇಕ  ಸಾಹಿತ್ಯ ಕೃತಿಗಳೂ ಸಹ ನಾಟಕವಾಗಿ ರಂಗಕ್ಕೇರಿದ್ದು ಚೌಟರವರಿಗೆ ರಂಗಭೂಮಿಯ ಮೇಲಿರುವ ಆಸಕ್ತಿ ಮತ್ತು ಆಕರ್ಷಣೆಯನ್ನು ತೋರಿಸುತ್ತದೆ. ಆಧುನಿಕ ಕನ್ನಡ ರಂಗಭೂಮಿಯಲ್ಲಿ ವೈಚಾರಿಕ ಪ್ರಜ್ಞೆಯ ನಾಟಕಗಳಿಗೇನೂ ಕೊರತೆ ಇಲ್ಲ. ಆದರೆ ತುಳು ಸಾಹಿತ್ಯ ಹಾಗೂ ರಂಗಭೂಮಿಗೆ ಇದೆಲ್ಲಾ ಹೊಸತು. ಹೀಗೆ ಹೊಸ ಆಲೋಚನೆಯ ಪರಂಪರೆಯನ್ನು ಚೌಟರವರು ತಮ್ಮೆಲ್ಲಾ ಕೃತಿಗಳ ಮೂಲಕ ತೋರಿಸಿಕೊಟ್ಟು ತುಳು ಸಾಂಸ್ಕೃತಿಕ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ ಅದರಲ್ಲಿ ಕನ್ನಡಕ್ಕೂ ಒಂದಿಷ್ಟು ಹಂಚಿದ್ದಾರೆ. ಚೌಟರವರು ತಮ್ಮೆಲ್ಲಾ ಕೃತಿಗಳಲ್ಲಿ ವ್ಯಕ್ತಿ ಹಾಗೂ ವರ್ಗ ಸಂಘರ್ಷಗಳ ಜೊತೆಗೆ ಮಾನವೀಯತೆಯನ್ನು ಎತ್ತಿ ಹಿಡಿಯುವ ಪ್ರಯತ್ನವನ್ನು ಪ್ರಜ್ಞಾಪೂರ್ವಕವಾಗಿಯೇ ಮಾಡಿದ್ದಾರೆ. ಕಾವ್ಯಾತ್ಮಕ ಭಾಷೆ ಹಾಗೂ ನೇರ ನುಡಿಯ ಸ್ಪಷ್ಟವಾದ ಅಭಿವ್ಯಕ್ತಿ ಚೌಟರ ಎಲ್ಲಾ ಬರವಣಿಗೆಗಳ ಅಂತಃಸತ್ವವಾಗಿದೆ. ತುಳು ಸಂಸ್ಕೃತಿಯನ್ನು ತಮ್ಮ ಕೃತಿಗಳ ಮೂಲಕ ಎಳೆಎಳೆಯಾಗಿ ಬಿಡಿಸಿ ಇಟ್ಟಿರುವ ಚೌಟರು ತಾವು ಹುಟ್ಟಿ ಬೆಳೆದ ತುಳುನಾಡಿನ ಅನುಭವಗಳನ್ನು ಅಕ್ಷರ ರೂಪದಲ್ಲಿ ಮೂಡಿಸಿದ ಪರಿ ಓದುಗರಿಗೆ ವಿಸ್ಮಯವನ್ನುಂಟುಮಾಡುವಂತಿವೆ.

ರಂಗಮಂದಿರಗಳ ನಿರ್ಮಿತಿ: ರಂಗಭೂಮಿಯ ಮೇಲೆ ಚೌಟರಿಗೆ ಅದಮ್ಯವಾದ ಮೋಹ. ರಂಗಕರ್ಮಿ ಕಲಾವಿದರ ಸಂಕಷ್ಟಕ್ಕೆ ಸದಾ ಚಾಚಿದ ಚೌಟರ ಸಹಾಯಹಸ್ತ ಕೆಲವಾರು ರಂಗಮಂದಿರಗಳ ಸ್ಥಾಪನೆಗೂ ವಿಸ್ತಾರಗೊಂಡಿದ್ದು ವಿಸ್ಮಯಕಾರಿ.  ಕಾಂತಾವರದಲ್ಲಿ ದೊಡ್ಡದಾದ ಬಯಲು ರಂಗಮಂದಿರ ದ ನಿರ್ಮಾಣಕ್ಕೆ ಬೇಕಾದ ಇಪ್ಪತ್ತು ಲಕ್ಷದಷ್ಟು ಸಂಪೂರ್ಣ ವೆಚ್ಚವನ್ನು ಭರಿಸಿದ್ದು ಚೌಟರವರೇ. ಈಗ ಆ ಬಯಲು ರಂಗಮಂದಿರಕ್ಕೆ ಚೌಟರ ಚೌಕಿ ಎಂದೇ ಹೆಸರಿಡಲಾಗಿದೆ ಹಾಗೂ ಅಲ್ಲಿ ಈಗ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಉಡುಪಿ ಹತ್ತಿರದ ಮುದ್ರಾಡಿಯಲ್ಲಿ ಸಹ ನಿರ್ಮಾಣಗೊಂಡ ಬಯಲು ರಂಗಮಂದಿರಕ್ಕೆ ಹೆಚ್ಚು ಆರ್ಥಿಕ ಸಹಕಾರ ಕೊಟ್ಟ ಚೌಟರ ಹೆಸರನ್ನೇ ಇಡಲಾಗುತ್ತಿದ್ದು ಚೌಟರ ಬಯಲು ಎಂದು ಕರೆಯಲಾಗುತ್ತಿದೆ. ಮುದ್ರಾಡಿಯ ಈ ಬಯಲು ರಂಗಮಂದಿರದಲ್ಲಿ ರಾಷ್ಟ್ರೀಯ ನಾಟಕೋತ್ಸವಗಳೂ ಸಹ ಆಯೋಜಿಸಲಾಗುತ್ತಿದ್ದು ನಾಡಿನ ಗಮನ ಸೆಳೆಯುತ್ತಿದೆ. ಮಂಜೇಶ್ವರದಲ್ಲಿ ರಾಷ್ಟ್ರಕವಿ ಗೋವಿಂದ ಪೈಗಳ ಸ್ಮಾರಕವು ಶಿಥಿಲಗೊಂಡಿತ್ತು. ಈಗ ಅಲ್ಲಿ ಅದೇ ಸ್ಮಾರಕವು ಹೊಸದಾಗಿ ಹಾಗೂ ಭವ್ಯವಾಗಿ ನಿರ್ಮಿತಿಗೊಂಡಿದ್ದರೆ, ಸರಕಾರದ ಸಹಕಾರದಿಂದ ಬಲು ದೊಡ್ಡದಾದ ರಂಗಮಂದಿರವೊಂದು ಅಲ್ಲಿ ನಿರ್ಮಾಣಗೊಂಡಿದ್ದರೆ ಅದಕ್ಕೆ ಕಾರಣ ಚೌಟರ ಶ್ರಮ ಮತ್ತು ಸಹಾಯ. ಅಲ್ಲಿ ಚೌಟರ ಚಾವಡಿ ಎಂಬ ಪುಟ್ಟ ರಂಗಮಂದಿರವೂ ಇದೆ. ಈ ಸ್ಮಾರಕದ ಒಳಗೆ ಹೋದವರಿಗೆ ಕರಾವಳಿಯ ಜಾನಪದ ಕಲೆ ಯಕ್ಷಗಾನದ ಆಳೆತ್ತರದ ಪಾತ್ರದಾರಿಗಳನ್ನು ನೋಡುವುದೇ ಚೆಂದ. ರಂಗಕರ್ಮಿ ಜೀವನರಾಂ ಸುಳ್ಯರವರನ್ನು ಕರೆದು ಈ ಎಲ್ಲಾ ಯಕ್ಷಪುತ್ತಳಿಗಳನ್ನು ರೂಪಿಸಲು ಹೇಳಿ ಅದಕ್ಕೆ ಬೇಕಾದ ಆರ್ಥಿಕ ಸಹಾಯವನ್ನು ಮಾಡಿದ್ದೂ ಸಹ ಚೌಟರವರೇ. ರಂಗಭೂಮಿಗೆ ಹೀಗೆ ಕೆಲವಾರು ಸ್ಥಾವರಗಳನ್ನು ನಿರ್ಮಿಸಲು ಪರೋಕ್ಷವಾಗಿ ಹಾಗೂ ಪ್ರತ್ಯಕ್ಷವಾಗಿ ಕಾರಣೀಕರ್ತರಾದ ಡಿ.ಕೆ.ಚೌಟರವರು ನಿರಂತರವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದುಕೊಂಡು ಹೋಗುವ ವೇದಿಕೆಗಳು ನಿರ್ಮಾಣಗೊಳ್ಳುವಂತೆ ಮಾಡಿದ್ದನ್ನು ಸಾಂಸ್ಕೃತಿಕ ಲೋಕ ಮರೆಯಲು ಸಾಧ್ಯವೇ ಇಲ್ಲ.




ಚೌಟರ ಟ್ರಸ್ಟ್ : ಬಾಲ್ಯದಲ್ಲಿ ಎರಡು ವರ್ಷ ಕಲಿತ ಶಾಲೆಯನ್ನು ಯಾರು ತಾನೇ ನೆನಪಿನಲ್ಲಿಟ್ಟುಕೊಂಡು ಸಹಾಯ ಮಾಡುತ್ತಾರೆ? ಚೌಟರು ತಾವು ಕಲಿತ ಊರಿನ ಪ್ರಾಥಮಿಕ ಶಾಲೆಗೆ ಆಗಿನ ಕಾಲಕ್ಕೆ ಎಪ್ಪತ್ತು ಸಾವಿರ ದೇಣಿಗೆ ನೀಡಿ ಬೆಂಚು, ಡೆಸ್ಕ್ ಇತ್ಯಾದಿ ಶೈಕ್ಷಣಿಕ ಪರಿಕರಗಳನ್ನು ಮಾಡಿಸಿದ್ದರು. ತಾವು ಕಲಿಯುವಾಗ ಇದ್ದ ಅನಾನುಕೂಲತೆಗಳು ಈಗಿನ ಮಕ್ಕಳಿಗೆ ಆಗಬಾರದು ಎನ್ನುವುದೇ ಅವರ ಸಹಾಯದ ಹಿಂದಿರುವ ಉದ್ದೇಶವಾಗಿತ್ತು. ಅಷ್ಟೇ ಅಲ್ಲಾ.. ಚೌಟರ ಟ್ರಸ್ಟ್ ಒಂದನ್ನು ಆರಂಭಿಸಿದ ಚೌಟರವರು ಟ್ರಸ್ಟ್ ಮೂಲಕ ಪ್ರತಿ ವರ್ಷ ಚಿತ್ರಕಲೆಯಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗೆ ವಾರ್ಷಿಕ ಇಪ್ಪತ್ತೈದು ಸಾವಿರ ಶಿಷ್ಯವೇತನವನ್ನು ನೀಡುತ್ತಿದ್ದಾರೆ. ಸಂಗೀತ ಅಭ್ಯಾಸ ಮಾಡುವ ವಿದ್ಯಾರ್ಥಿಗೆ ಐದು ವರ್ಷಗಳ ಕಾಲ ವಾರ್ಷಿಕವಾಗಿ ಹನ್ನೆರಡು ಸಾವಿರ ಶಿಷ್ಯವೇತನ ಸಂದಾಯವಾಗುತ್ತಿದೆ. ಈ ಚೌಟರ ಟ್ರಸ್ಟ್ ಹೊಸ ನಾಟಕ ರಚನೆ ಮಾಡುವವರಿಗೆ, ರಂಗಭೂಮಿಯಲ್ಲಿ ಕೆಲಸ ಮಾಡುವ ಸಂಸ್ಥೆ ಹಾಗೂ ವ್ಯಕ್ತಿಗಳಿಗೆ ನಿರಂತರವಾಗಿ ನೆರವು ಕೊಡುತ್ತಾ ಬಂದಿದೆ. ಪ್ರತಿ ವರ್ಷ ಒಂದು ಸಂಶೋಧನಾ ಗ್ರಂಥಕ್ಕೆ ಇಪ್ಪತ್ತೈದು ಸಾವಿರ ಮೊತ್ತದ ನೆರವನ್ನು ನೀಡಲಾಗುತ್ತಿದೆ. ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಕೊಳ್ಳುವ ವಿದ್ಯಾರ್ಥಿಗೆ ಮೂರು ವರ್ಷಗಳ ಕಾಲ ವಿದ್ಯಾರ್ಥಿವೇತನ ಕೊಡಲಾಗುತ್ತಿದೆ. ಹೀಗೆ ವಿದ್ಯಾರ್ಥಿವೇತನ, ದೇಣಿಗೆಗಳಿಗಾಗಿಯೇ ಟ್ರಸ್ಟ್ ವಾರ್ಷಿಕವಾಗಿ ಎರಡೂವರೆ ಲಕ್ಷದಷ್ಟು ಖರ್ಚು ಮಾಡುತ್ತಾ ಬಂದಿದೆ. ಚೌಟರು ಸಹಾಯ ಮಾಡಿದ ಅದೆಷ್ಟೋ ವಿದ್ಯಾರ್ಥಿಗಳು ಈಗ ಅವರ ಹೆಸರು ಹೇಳಿಕೊಂಡು ಬದುಕುತ್ತಿದ್ದಾರೆ. ಕೆಲವರು ಐಎಎಸ್ ಮಾಡಿಕೊಂಡು ಅಧಿಕಾರಿಗಳಾಗಿದ್ದಾರೆ. ಹಲವಾರು ಇಂಜಿನೀಯರ್ ಆಗಿದ್ದರೆ ಇನ್ನು ಕೆಲವರು ಚಿತ್ರಕಲಾವಿದರಾಗಿದ್ದಾರೆ. ಚಿತ್ರಕಲಾ ಪರಿಷತ್ತಿನ ಅದೆಷೋ ಪ್ರತಿಭೆಗಳಿಗೆ ಆಸರೆಯಾಗಿದ್ದವರು ಚೌಟರು. ತಮ್ಮ ಊರಲ್ಲಿ ಪಾಳು ಬಿದ್ದಿದ್ದ ಮೂರು ಎಕರೆ ಭೂಮಿಯನ್ನು ಚೌಟೀಸ್ ಸೋಸ್ಯೋ ಕಲ್ಚರಲ್ ಪೌಂಡೇಶನ್ ಮೂಲಕ ಖರೀದಿಸಿ ಅಭಿವೃದ್ದಿ ಪಡಿಸಿ ಊರವರಿಗೆ ಬಿಟ್ಟುಕೊಡುವಂತಹ ಯೋಜನೆಯನ್ನು ಚೌಟರು ರೂಪಿಸಿದರು. ಮಣ್ಣಿನ ಋಣ, ಸಮಾಜದ ಋಣವನ್ನು ಸಾಧ್ಯವಾದಷ್ಟೂ ತೀರಿಸಿದ ಚೌಟರು ಕೊನೆಗೆ ತಮ್ಮ ಜಾತಿ ಋಣವನ್ನೂ ಸಹ ತೀರಿಸಲು ಪ್ರಯತ್ನಿಸಿ ‘ಬಂಟ್ಸ್ ಪೌಂಡೇಶನ್ನಿ’ಗೆ ಪ್ರತಿ ವರ್ಷ ತಮ್ಮ ವಯಸ್ಸಿನ ಸಂಖ್ಯೆಯಷ್ಟು ಸಾವಿರ ರೂಪಾಯಿಗಳನ್ನು ನೀಡುತ್ತಲೇ ಬಂದಿದ್ದಾರೆ. ಮಲ್ಲಾಡಿಹಳ್ಳಿಯಲ್ಲಿರುವ ಸಾವಿರದ ಐನೂರು ಅನಾಥ ಮಕ್ಕಳ ಒಂದು ದಿನದ ಊಟದ ಖರ್ಚನ್ನು ಪ್ರತಿವರ್ಷ ಕೊಡುತ್ತಲೇ ಬಂದಿದ್ದಾರೆ. ಸಾಣೇಹಳ್ಳಿಯ ರಂಗಕಾಯಕಕ್ಕೆ ಉದಾರವಾಗಿ ದೇಣಿಗೆ ಕೊಟ್ಟಿದ್ದಾರೆ.



ಹಣ ಇದ್ದವರು ಇರುವ ಹಣವನ್ನು ವ್ಯಾಪಾರ ವ್ಯವಹಾರದಲ್ಲಿ ತೊಡಗಿಸಿ ಹೇಗೆ ಹೆಚ್ಚು ಹೆಚ್ಚಾಗಿ ಬೆಳೆಸಬೇಕು ಎಂದು ಹಾತೊರೆಯುತ್ತಾರೆ. ಆದರೆ.. ಈ ಮನೋಭಾವಕ್ಕೆ ವ್ಯತಿರಿಕ್ತವಾಗಿದ್ದ ಚೌಟರು ತಾವು ಸ್ವಂತ ದುಡಿದು ಸಂಪಾದಿಸಿದ ಹಣದ ಬಹುಭಾಗವನ್ನು ಶಿಕ್ಷಣ, ಸಮಾಜ, ಕಲೆ, ಸಾಹಿತ್ಯ, ರಂಗಭೂಮಿಗಾಗಿ ಯಾವುದೇ ಪ್ರತಿಫಲಪೇಕ್ಷೆ ಇಲ್ಲದೇ, ಪ್ರಚಾರದ ಹಂಗಿಲ್ಲದೇ ಮಾಡಿದ ಚೌಟರವರು ಮಾಡಿದ ಉಪಕಾರವನ್ನು ಎಲ್ಲರೂ ನೆನೆಯಲೇಬೇಕು. ಯಾಕೆ ಹೀಗೆ ಲಾಭವೇ ಇಲ್ಲದ ಕ್ಷೇತ್ರಗಳಿಗೆ ಹಣ ಖರ್ಚುಮಾಡುತ್ತೀರಿ ಎಂದು ಕೇಳಿದಾಗ ಚೌಟರು ಸಾಂಸ್ಕೃತಿಕವಾಗಿ, ವ್ಯವಹಾರಿಕವಾಗಿ ಸಮಾಜದಿಂದ ನಾನು ಪಡೆದುಕೊಂಡದ್ದು ತುಂಬಾ ಇದೆ. ಅದನ್ನೆಲ್ಲಾ ತೀರಿಸುತ್ತೇನೆ ಎನ್ನುವ ಹೆಮ್ಮೆ ನನಗಿಲ್ಲ. ಅದರ ಒಂದಂಶವನ್ನಾದರೂ ತೀರಿಸಲು ಪ್ರಯತ್ನಿಸಿ ಕೆರೆಯ ನೀರನು ಕೆರೆಗೆ ಚೆಲ್ಲುವ ಧನ್ಯತಾ ಭಾವ ಮಾತ್ರ ನನ್ನದು. ಎಂದರು. ಇದಕ್ಕಿಂತಾ ದೊಡ್ಡ ಮಾತು ಇನ್ನೇನಿದೆ. ಚೌಟರಿಗೆ ಚೌಟರೇ ಸಾಟಿ.

ರಂಗನಿರಂತರದ ರೂವಾರಿ : ಸಿಜಿಕೆಯವರ ರಂಗಪಯಣದಲಿ ಜೊತೆಗಾರರಾಗಿದ್ದ ಡಿ.ಕೆ.ಚೌಟರವರು, ಸಿಜಿಕೆಯವರ ನಂತರ ಅವರು ಕಟ್ಟಿದ್ದ ರಂಗನಿರಂತರ ರಂಗಸಂಘಟನೆಗೆ ಬೆಂಗಾವಲಾಗಿ ನಿಂತು ಮುನ್ನಡೆಸಿದವರು. ರಂಗನಿರಂತರದ ಕಾರ್ಯಾಧ್ಯಕ್ಷರಾಗಿದ್ದ ಚೌಟರವರು ಈಗ ನಿರ್ಮಾಣಗೊಳ್ಳುತ್ತಿರುವ ಕನ್ನಗತ್ತಿ ನಾಟಕದ ನಿರ್ಮಿತಿಯಲ್ಲಿ ಅತೀವ ಆಸಕ್ತಿಯನ್ನು ಹೊಂದಿದ್ದರು. ಈ ನಾಟಕದ ಪ್ರದರ್ಶನಕ್ಕೂ ಮುನ್ನವೇ ಚೌಟರವರು ರಂಗೈಕ್ಯರಾಗಿದ್ದು ಅತ್ಯಂತ ವಿಷಾದನೀಯ ಸಂಗತಿ. ಚೌಟರವರಿಗೆ ಈ ನಾಟಕವನ್ನು ರಂಗನಿರಂತರ ಸಮರ್ಪಿಸುವ ಮೂಲಕ ರಂಗಶೃದ್ದಾಂಜಲಿಯನ್ನು ಸಲ್ಲಿಸುತ್ತಿದೆ.  



ಪ್ರಶಸ್ತಿಗಳು : ಚೌಟರವರ ಸಾಧನೆಗೆ ಮಂಗಳೂರು ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಕೊಟ್ಟು ಗೌರವಿಸಿದೆ. ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಇವರ ನಾಟಕಗಳು ಭಾಜನವಾಗಿವೆ. ಕರ್ನಾಟಕ ಸರಕಾರವು ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದೆ. ಕರ್ನಾಟಕ ನಾಟಕ ಅಕಾಡೆಮಿ, ಕರ್ನಾಟಕ ಚಿತ್ರಕಲಾ ಅಕಾಡೆಮಿಗಳು ಪ್ರಶಸ್ತಿಯನ್ನು ಕೊಟ್ಟು ಸನ್ಮಾನಿಸಿವೆ. ಆದರೆ ಚೌಟರು ಮಾಡಿದ ಸಾಮಾಜಿಕ, ಸಾಂಸ್ಕೃತಿಕ ಕೆಲಸಗಳಿಗೆ ಹೋಲಿಸಿದರೆ ಈ ಪ್ರಶಸ್ತಿಗಳು ಯಾವುದಕ್ಕೂ ಸಾಲವು. ಸಮಾಜ ಸೇವೆಗೆ ಕೇಂದ್ರ ಸರಕಾರ ಕೊಡಮಾಡುವ ಅತ್ಯುನ್ನತ ಪ್ರಶಸ್ತಿಗಳೆಲ್ಲಾ ಬರಬೇಕಿತ್ತು. ಆದರೆ ಪ್ರಚಾರಪ್ರೀಯರಲ್ಲದ, ಲಾಭಿ ಮಾಡುವುದು ಬೇಕಿಲ್ಲದ ಚೌಟರಿಗೆ ರಾಷ್ಟ್ರಪ್ರಶಸ್ತಿಗಳು ದೊರೆಯುವದು ಕಷ್ಟಸಾಧ್ಯ. ಎಂದೂ ಪ್ರಶಸ್ತಿ ಪುರಸ್ಕಾರ ಸನ್ಮಾನಗಳನ್ನು ಬಯಸದ ಚೌಟರ ಸಾಧನೆಯೇ ಅನುಕರಣೀಯ.    

ಈಡೇರದ ಅಂತಿಮ ಆಸೆ: ಮಕ್ಕಳು ಮೊಮ್ಮಕ್ಕಳ ಜೊತೆಗೆ ಹುಟ್ಟೂರಿಗೆ ಹೋಗಿ ಅಲ್ಲೇ ಕೊನೆಯುಸಿರೆಳೆಯಬೇಕೆಂಬುದು ಹಿರಿಯ ಜೀವ ಚೌಟರವರಿಗೆ ಕೊನೆಯ ಆಸೆ ಒಂದಿತ್ತು. ಆದರೆ ಅವರ ಅನಾರೋಗ್ಯ ಹಳ್ಳಿಗೆ ಹೋಗಲು ಅವಕಾಶ ಕೊಡಲೇ ಇಲ್ಲ. ಚೌಟರ ಕೊನೆಯ ಆಸೆಯೂ ಈಡೇರಲಿಲ್ಲ. ಉಸಿರಾಟದ ಸಮಸ್ಯೆ ಆಗಾಗ ಉಲ್ಬಣಿಸುತ್ತಲೇ ಇತ್ತು. ಎರಡು ವಾರಗಳ ಕಾಲ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಇನ್ನೇನು ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಹೋಗಬೇಕು ಎನ್ನುವಷ್ಟರಲ್ಲಿ ಇದ್ದಕ್ಕಿದ್ದಂತೆ ಜೂನ್ 19ರ ಬೆಳಿಗ್ಗೆ ಹೃದಯಸ್ಥಂಭನವಾಗಿ ಚೌಟರು ದಿವಂಗತರಾದರು. ಹುಟ್ಟೂರಿನ ಮಣ್ಣಲ್ಲಿ ಮಣ್ಣಾಗುವ ಆಸೆಯನ್ನು ಮನಸ್ಸಿನಲ್ಲಿಟ್ಟುಕೊಂಡೇ ಮಡಿದರು.



ಸಾವಿನಲ್ಲೂ ಸಹ ತಮ್ಮ ವೈಚಾರಿಕತೆಯನ್ನು ಮೆರೆದ ಚೌಟರನ್ನು ಹೇಗೆ ಅಭಿನಂದಿಸುವುದೋ ಗೊತ್ತಾಗುತ್ತಿಲ್ಲ. ನಿರೀಶ್ವರವಾದಿಯಾಗಿದ್ದ ಚೌಟರವರಿಗೆ ಈ ಸಾಂಪ್ರದಾಯಿಕ ಹುಸಿ ಆಚರಣೆಗಳಲ್ಲಿ ನಂಬಿಕೆ ಇರಲಿಲ್ಲ. ರಾಜಮನೆತನದಲ್ಲಿ ಹುಟ್ಟಿ, ಯಾವುದಕ್ಕೂ ಕೊರತೆ ಇಲ್ಲದೇ ರಾಜನಂತೆಯೇ ಘನತೆ ಗಾಂಭೀರ್ಯದಿಂದ ಬಾಳಿದ್ದ ಚೌಟರವರು ತಾವು ತೀರಿಕೊಂಡ ನಂತರ ತಮ್ಮ ಪಾರ್ಥೀವ ಶರೀರಕ್ಕೆ ಯಾವುದೇ ರೀತಿಯ ಸಾಂಪ್ರದಾಯಿಕ ಸಂಸ್ಕಾರದ ಆಚರಣೆಗಳನ್ನು, ಪೂಜೆ ಪುನಸ್ಕಾರ ಮೆರವಣಿಗೆಗಳ ಹುಸಿ ಆಡಂಬರಗಳನ್ನೂ ಮಾಡಬಾರದೆಂದು ಕಟ್ಟಪ್ಪಣೆ ಮಾಡಿದ್ದರು. ಕೊನೆಗೆ ಪಾರ್ಥೀವ ಶರೀರಕ್ಕೆ ಹೂಹಾರಗಳನ್ನೂ ಸಹ ಹಾಕಬಾರದು ಎಂದೂ ಹೇಳಿದ್ದರು. ಇದ್ಯಾವುದೂ ಗೊತ್ತಿಲ್ಲದೇ ಅಂತಿಮ ದರ್ಶನಕ್ಕೆ ಬಂದ ಹಲವಾರು ಜನ ತಂದ ಹೂಹಾರಗಳನ್ನು ಹಾಕದೇ ಪಕ್ಕದಲ್ಲಿ ಪೇರಿಸಿ ಇಡಲಾಗುತ್ತಿತ್ತು. ಅಸಾಮಾನ್ಯ ವ್ಯಕ್ತಿಯೊಬ್ಬ ಸಾಮಾನ್ಯರಲ್ಲಿ ಸಾಮಾನ್ಯರಂತೆ ಹರಿಶ್ಚಂದ್ರ ಘಾಟಿನ ರುದ್ರಭೂಮಿಯಲ್ಲಿ ಬೂದಿಯಾದರು. ತಾವು ನಂಬಿದ ಪ್ರಗತಿಪರ ಸಿದ್ದಾಂತಗಳಿಗೆ ಕೊನೆಯವರೆಗೂ ಬದ್ಧರಾಗಿದ್ದರು. ನುಡಿದಂತೆ ನಡೆದರು, ಬರೆದಂತೆ ಬದುಕಿದರು. ತಮ್ಮ ಕೈಲಾದಷ್ಟು ಅಗತ್ಯವಿದ್ದವರಿಗೆಲ್ಲಾ ಸಹಾಯ ಮಾಡಿದರು. ಸಾಹಿತ್ಯ, ಕಲೆ ಹಾಗೂ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಬದುಕನ್ನು ಸಾರ್ಥಕಗೊಳಿಸಿಕೊಂಡರು. ಚೌಟರವರ ಭೌತಿಕ ಅಸ್ತಿತ್ವ ಅಳಿದರೂ ಬೌದ್ದಿಕ ಕೊಡುಗೆಯನ್ನು ಮುಂದಿನ ತಲೆಮಾರಿಗೆ ಬಿಟ್ಟು ಹೋದರು. ಘನತೆಯಿಂದ ಬದುಕುವುದು ಹೇಗೆಂಬುದಕ್ಕೆ ಮಾದರಿಯಾದರು. ಇಂತಹ ಹಿರಿಯ ಕ್ರಿಯಾಶೀಲ ಜೀವಕ್ಕೆ ಅಂತಿಮ ನಮನಗಳು.

-ಶಶಿಕಾಂತ ಯಡಹಳ್ಳಿ       




ಸೋಮವಾರ, ಜೂನ್ 10, 2019

ಕರುಣೆಯಿಲ್ಲ ಸಾವಿಗೆ.. ನಂದಿತು ಧಗಧಗಿಸಿದ ರಂಗದೀವಿಗೆ..




ಬೈಯಪ್ಪನಹಳ್ಳಿ ಚಿತಾಗಾರದ ಮುಂಭಾಗದ ವರಾಂಡದಲ್ಲಿ ಆಸ್ಪತ್ರೆಯ ಸ್ಟ್ರೆಚರ್ ಮೇಲೆ ಬಿಳಿ ಬಟ್ಟೆ ಹೊದಿಸಿ ಅವರನ್ನು ಮಲಗಿಸಲಾಗಿತ್ತು. ಎದೆಯಮೇಲೆ ಏಳೆಂಟು ಹಾರಗಳು ಜೊತೆಗೆ ಸುತ್ತಲೂ ನೆರೆದಿದ್ದ ಕೆಲವೇ ಕೆಲವು ಜನರ ಗುಂಪು. ಯಾರೋ ಒಬ್ಬ ಸಾಮಾನ್ಯ ವ್ಯಕ್ತಿ ಮರಣ ಹೊಂದಿದ್ದಾಗಲೂ ಇದಕ್ಕಿಂತಾ ಚೆಂದದ ಮೆರವಣಿಗೆ ತೆಗೆದು, ಹಾರತುರಾಯಿಗಳಲ್ಲಿ ಹೆಣವನ್ನು ಮುಳುಗಿಸಿ, ಒಂದಿಷ್ಟು ಜನ ಅತ್ತು ಕರೆದು ಅಲ್ಲೊಂದು ಸೂತಕದ ದೃಶ್ಯವನ್ನೇ ಸೃಷ್ಟಿಸಲಾಗುತ್ತಿತ್ತು. ಆದರೆ.. ಈಗ ಅಲ್ಲಿ ಹೀಗೆ ಕೆಲವು ಹಾರಗಳನ್ನು ಹಾಕಿಸಿಕೊಂಡು ನಿರುಮ್ಮಳವಾಗಿ ಜಗದ ಚಿಂತೆ ಮರೆತು ಮಲಗಿರುವ ವ್ಯಕ್ತಿ ಸಾಮಾನ್ಯರಾಗಿರಲಿಲ್ಲ ! ಇವರ ಹೆಸರನ್ನು ಕೇಳದೇ ಇರುವ ಸಾಹಿತಿ ಕಲಾವಿದರೇ ಈ ರಾಜ್ಯ ದೇಶದಲ್ಲಿಲ್ಲ. 

ಅಕ್ಷರ ಲೋಕದ ಅಸಾಮಾನ್ಯ ವ್ಯಕ್ತಿ, ರಂಗಭೂಮಿಯ ಅದಮ್ಯ ಶಕ್ತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಭಾರತೀಯ ರಂಗಭೂಮಿಯ ಶ್ರೇಷ್ಟ ನಾಟಕಕಾರ ಗಿರೀಶ್ ಕಾರ್ನಾಡರು ತಮ್ಮ ಸಾರ್ಥಕ ಬದುಕನ್ನು ಅಂತ್ಯಗೊಳಿಸಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ಚಿತಾಗಾರದ ಮುಂಬಾಗದ ವರಾಂಡದ ಚಪ್ಪಡಿ ಕಲ್ಲಿನ ಹಾಸಿಗೆಯ ಮೇಲೆ ಚಿರನಿದ್ರೆಯಲ್ಲಿದ್ದರು. ಕಣ್ಣಳತೆಯಲ್ಲಿ ಲೆಕ್ಕ ಹಾಕಿದರು ಸುತ್ತಲೂ ಅಂದಾಜು ಇನ್ನೂರೈವತ್ತು ಜನ ಸೇರಿರಬಹುದು. ಅದರಲ್ಲಿ ಅರ್ಧದಷ್ಟು ಜನ ಪೊಲೀಸರು ಮತ್ತು ಮಾಧ್ಯಮದವರು.



ಆಶ್ಚರ್ಯ, ಕನ್ನಡ ರಂಗಭೂಮಿಯ ಬೆಳಕನ್ನು ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸಿದ, ನಾಟಕ ಸಾಹಿತ್ಯಕ್ಕಾಗಿಯೇ ಜ್ಞಾನಪೀಠ ಪ್ರಶಸ್ತಿ ಪಡೆದ, ಕನ್ನಡ ರಂಗಭೂಮಿಗೆ ವಿಶಿಷ್ಟವಾದ ಅಪರೂಪದ ನಾಟಕಗಳನ್ನು ಬರೆದುಕೊಟ್ಟು ಆಧುನಿಕ ರಂಗಭೂಮಿಯನ್ನು ಶ್ರೀಮಂತಗೊಳಿಸಿದ ಹೆಸರಾಂತ ವ್ಯಕ್ತಿಯೊಬ್ಬರ ಪಾರ್ಥೀವ ಶರೀರವನ್ನು ಹೀಗೆ ಅತೀ ಸಾಮಾನ್ಯ ವ್ಯಕ್ತಿಯ ಶವದಂತೆ ಅಂತ್ಯಸಂಸ್ಕಾರಕ್ಕಾಗಿ ತಂದಿರಿಸಿದ್ದು ನಿಜಕ್ಕೂ ವಿಸ್ಮಯಕಾರಿಯಾದದ್ದು.

ಕಾರ್ನಾಡರೆಂದರೇ ಹೀಗೆ.. ಅವರಿಗೆ ವಿಧಿವಿಧಾನಗಳ ಹೆಸರಿನ ಆಡಂಬರಗಳ ಬಗ್ಗೆ ಆಸ್ತೆ ಹಾಗೂ ಆಸಕ್ತಿ ಎರಡೂ ಇರಲಿಲ್ಲ. ಸನಾತನ ಸಂಪ್ರದಾಯಗಳ ಕುರಿತು ಭ್ರಮೆಗಳಿರಲಿಲ್ಲ, ಸಾವಿನ ನಂತರದ ಸ್ವರ್ಗನರಕಗಳ ಕಲ್ಪನೆಗಳ ಕುರಿತು ನಂಬಿಕೆಗಳಿರಲಿಲ್ಲ, ಇರುವವರೆಗೆ ಎಲ್ಲಾ, ಸತ್ತಮೇಲೆ ಏನೂ ಇಲ್ಲಾ ಎಂದು ಅರಿತಿದ್ದವರು. ಹಾಗಾಗಿ ಸಾವಿಗೆ ಮುನ್ನವೇ ಸತ್ತನಂತರ ಯಾವುದೇ ಧಾರ್ಮಿಕ ವಿಧಿವಿಧಾನಗಳನ್ನು ಮಾಡಕೂಡದು, ಸತ್ತ ಶವದ ಮೆರವಣಿಗೆ ವೈಭವೀಕರಣಗಳು ಆಗಕೂಡದು, ಸರಕಾರಿ ಗೌರವಾದರಗಳು ನಡೆಯಕೂಡದು ಎಂದು ಕುಟುಂಬಸ್ತರಿಗೆ ಕಟ್ಟುಪಾಡು ಮಾಡಿ ತಮ್ಮ ಪಾಡಿಗೆ ತಾವು ಜಗದ ಜಾತ್ರೆ ಮುಗಿಸಿ ಮತ್ತೆ ಮರಳಿ ಬರದ ಶೂನ್ಯದತ್ತ ಯಾತ್ರೆ ಹೊರಟರು. 

ಶೋಕತಪ್ತರಾದ ಕಾರ್ನಾಡರ ಮಗ ಹಾಗೂ ಮಗಳು


2019, ಜೂನ್ 10ರಂದು ಬೆಳಿಗ್ಗೆ ಎಂಟು ಗಂಟೆಗೆ ನಿದ್ದೆಯಲ್ಲೇ ಚಿರನಿದ್ರೆಗೆ ಜಾರಿದ ಕಾರ್ನಾಡರ ಅಗಲಿಕೆ ಸಾಂಸ್ಕೃತಿಕ ಲೋಕಕ್ಕೆ ಒಂಚೂರು ಆಘಾತವನ್ನುಂಟು ಮಾಡಿತು. ಒಂಬತ್ತು ಗಂಟೆಗೆಲ್ಲಾ ಸಾಮಾಜಿಕ ಜಾಲತಾಣಗಳ ಮೂಲಕ ಸಾವಿನ ಸುದ್ದಿ ಒಬ್ಬರಿಂದ ಇನ್ನೊಬ್ಬರಿಗೆ ಹಬ್ಬಿ ಮನಸ್ಸು ಭಾರವಾಯಿತು. ಕಳೆದ ಮೂರು ವರ್ಷಗಳಿಂದ ಕಾರ್ನಾಡರ ಆರೋಗ್ಯ ಕ್ಷೀಣಿಸತೊಡಗಿತ್ತು. ಉಸಿರಾಟದ ತೊಂದರೆಯಿಂದಾಗಿ ಕೃತಕವಾಗಿ ಆಕ್ಸಿಜನ್ ಉಸಿರಾಡಿಸುತ್ತಲೇ ಬದುಕಿನ ಬಂಡಿ ಉರುಳಿಸುತ್ತಿದ್ದರು. ಬರುಬರುತ್ತಾ ಬಹುಅಂಗಾಂಗಗಳ ವೈಪಲ್ಯವೇ ಕಾರಣವಾಗಿ ಜೂನ್ 10 ರಂದು ಗಿರೀಶರವರ ಹೃದಯ ಸ್ಥಬ್ದವಾಗಿ ಉಸಿರು ನಿಂತಿತು. ಕಾರ್ನಾಡರು ಎಂಬತ್ತು ವರ್ಷಗಳ ಸುದೀರ್ಘ ಬದುಕನ್ನು ಸಾರ್ಥಕಗೊಳಿಸಿಕೊಂಡು ಸಾಂಸ್ಕೃತಿಕ ಲೋಕದ ಚರಿತ್ರೆಯಲ್ಲಿ ಉಳಿಯಬಹುದಾದಂತಹ ಅನನ್ಯ ಕೊಡುಗೆಗಳನ್ನು ಕೊಟ್ಟು ಕಾಲನ ವಶವಾದರು.

ಹೇಳುವುದೊಂದು ಮಾಡುವುದೊಂದು ಎನ್ನುವಂತೆ ಬದುಕಿದ ಸಾಧಕರನ್ನು ನೋಡಿದ್ದೇವೆ, ಬರೆದಿದ್ದೊಂದು ಬದುಕಿದ್ದೊಂದು ಎನ್ನುವಂತೆ ಜೀವನ ಸಾಗಿಸಿದ ಅತಿರಥರನ್ನೂ ಕಂಡಿದ್ದೇವೆ. ಆದರೆ ತಾವು ನಂಬಿದ ಸಿದ್ದಾಂತಗಳಿಗೆ ಬದ್ಧರಾಗಿ ನಡೆದಂತ ನುಡಿದ, ನುಡಿದಂತೆ ನಡೆದ ವ್ಯಕ್ತಿಗಳು ಅಪರೂಪ. ಅಂತಹ ಅಪರೂಪದಲ್ಲಿ ಅಪರೂಪವಾದವರು ಗಿರೀಶ್ ಕಾರ್ನಾಡರು. ಅವರ ವಿಚಾರಗಳನ್ನು ವಿರೋಧಿಸುವವರೂ ಇದ್ದಾರೆ, ಅವರ ಹಿಂದುತ್ವ ವಿರೋಧಿತನವನ್ನು ಖಂಡಿಸುವವರೂ ಇದ್ದಾರೆ, ಅವರ ವಿವಾದಾತ್ಮಕ ಹೇಳಿಕೆಗಳನ್ನು ಒಪ್ಪದೇ ಇರುವವರೂ ಬೇಕಾದಷ್ಟು ಜನರಿದ್ದಾರೆ. ಆದರೆ.. ಯಾರು ಎಷ್ಟೇ ವಿರೋಧಿಸಲಿ, ಅದ್ಯಾರು ಅದೆಷ್ಟೇ ಪ್ರತಿಭಟಿಸಲಿ ತಾವು ನಂಬಿದ ಸಿದ್ದಾಂತಕ್ಕೆ ಕೊನೆಯವರೆಗೂ ನಿಷ್ಟರಾಗಿದ್ದ ಕಾರ್ನಾಡರ ಬದ್ದತೆಯನ್ನು ಒಪ್ಪಲೇಬೇಕು.


ಎಲ್ಲಾ ರೀತಿಯ ಹೇರಿಕೆಗಳನ್ನೂ ತಮ್ಮ ಬದುಕಿನಾದ್ಯಂತ ಕಾರ್ನಾಡರು ವಿರೋಧಿಸುತ್ತಲೇ ಬಂದರು. ಗೋಮಾಂಸ ನಿಷೇಧವನ್ನು ಮಾಂಸಾಹಾರಿಗಳ ಮೇಲೆ ಹೇರಲು ಹಿಂದುತ್ವವಾದಿಗಳು ಪ್ರಯತ್ನಿಸಿದಾಗ ಕಾರ್ನಾಡರು ಜನರ ಆಹಾರದ ಹಕ್ಕನ್ನು ಎತ್ತಿಹಿಡಿಯಲು ಬೀದಿಗಿಳಿದು ಪ್ರತಿಭಟಿಸಿದ್ದರು. ಸಲಿಂಗ ಕಾಮಿಗಳ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಿರುವ ಕಾನೂನುಗಳನ್ನು ಕಿತ್ತು ಹಾಕಲು ಲೈಂಗಿಕ ಅಲ್ಪಸಂಖ್ಯಾತರ ಹೋರಾಟಕ್ಕೆ ಬಹಿರಂಗವಾಗಿ ಬೆಂಬಲಕೊಟ್ಟರು. ಹಿಂದುತ್ವವಾದವನ್ನು ವಿರೋಧಿಸಿದವರೆಲ್ಲರನ್ನು ನಗರ ನಕ್ಸಲರು ಎಂದು ಆರೋಪಿಸಿ ಸಂಘಪರಿವಾರದವರು ಹಿಯಾಳಿಸುತ್ತಿದ್ದಾಗ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕಾರ್ನಾಡರು ಆಕ್ಸಿಜನ್ ನಳಿಕೆಗಳನ್ನು ಕೈಯಲ್ಲಿ  ಹಿಡಿದುಕೊಂಡೇ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದರು ಹಾಗೂ ಅವರ ಕತ್ತಿನಲ್ಲಿ ನಾನೂ ನಗರ ನಕ್ಸಲ್ ಎನ್ನುವ ಬಿತ್ತಿಪತ್ರವನ್ನು ತೂಗಿಹಾಕಿಕೊಂಡೇ ಬಂದು ಬಲಪಂಥೀಯರ ಅಸಹಿಷ್ಣುತತೆಯ ವಿರುದ್ಧ ಪ್ರತಿಭಟಿಸಿದ್ದರು. ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಾಗ, ಮನುಷ್ಯರ ಮೂಲಭೂತ ಅಗತ್ಯಗಳನ್ನು ಬಲವಂತವಾಗಿ ನಿರ್ಬಂಧಿಸಿದಾಗ, ಅಲ್ಪಸಂಖ್ಯಾತರ ಹಕ್ಕುಗಳಿಗೆ ಚ್ಯುತಿಯಾದಾಗ, ಕಾನೂನುಗಳು ಮಾನವೀಯತೆಯ ಮೇಲೆ ಸವಾರಿ ಮಾಡಿದಾಗಲೆಲ್ಲಾ ಕಾರ್ನಾಡರು ಬೀದಿಗಿಳಿದು ಪ್ರತಿಭಟನಾನಿರತರ ಜೊತೆಗೆ ಸೇರಿ ವಿರೋಧಿಸುತ್ತಲೇ ಬಂದವರು. ಅವರ ಈ ಎಲ್ಲಾ ವಿರೋಧಗಳು ವಿವಾದಗಳಿಗೆ ಕಾರಣವಾಗಿದ್ದವು. ಕಾರ್ನಾಡರಿಗೆ ಜೀವಬೆದರಿಕೆ ಬರಲೂ ನೆಪವಾಗಿದ್ದವು. ಉಗ್ರ ಬಲಪಂಥೀಯರ ಹಿಟ್ ಲಿಸ್ಟಲ್ಲಿ ಕಾರ್ನಾಡರ ಹೆಸರೂ ಸೇರ್ಪಡೆಯಾಗುವಂತೆ ಮಾಡಿದ್ದವು. ಆದರೆ.. ಇಂತಹ ಯಾವುದೇ ಬೆದರಿಕೆಗಳಿಗೂ ಒಂಚೂರು ಮಣಿಯದೇ ತಾವು ನಂಬಿದ್ದನ್ನು ನಿರ್ಬಡೆಯಿಂದ ಹೇಳುತ್ತಲೇ ಬದುಕಿದ ಕಾರ್ನಾಡರು ಬಹುಸಂಖ್ಯಾತರಿಂದ ತುಳಿತಕ್ಕೊಳಗಾದ ಅಲ್ಪಸಂಖ್ಯಾತರ ದಮನಿತ ಜನರ ದ್ವನಿಯಾಗಿದ್ದರು.


ಕಾಂಟ್ರವರ್ಸಿಗಳಿಗೂ ಕಾರ್ನಾಡರಿಗೂ ಅವಿನಾಭಾವ ಸಂಬಂಧ. ತಮಗನ್ನಿಸಿದ್ದನ್ನು ಯಾವುದೇ ಮುಚ್ಚುಮರೆಯಿಲ್ಲದೇ ನೇರವಾಗಿ ನಿಷ್ಠುರವಾಗಿ ಹೇಳುವ ಸ್ವಭಾವವನ್ನು ಮೈಗೂಡಿಸಿಕೊಂಡಿದ್ದ ಕಾರ್ನಾಡರ ಅನೇಕ ಅನಿಸಿಕೆಗಳು ದೇಶಾದ್ಯಂತ ತೀವ್ರ ವಿವಾದಗಳನ್ನು ಹುಟ್ಟಿಹಾಕಿ ಗಿರೀಶರವರನ್ನು ಸದಾ ಸುದ್ದಿಯಲ್ಲಿಟ್ಟಿವೆ. ರಾಷ್ಟ್ರಕವಿ ರವೀಂದ್ರನಾಥ ಠಾಗೋರರವರವರನ್ನು ಎರಡನೇ ದರ್ಜೆ ನಾಟಕಕಾರ ಎಂದು ಸಮಾರಂಭವೊಂದರಲ್ಲಿ ನೇರವಾಗಿ ಆರೋಪಿಸಿದಾಗ ದೇಶಾದ್ಯಂತ ವಿರೋಧವನ್ನು ಎದುರಿಸಿದರು. 2012ರ ಮುಂಬೈ ಸಾಹಿತ್ಯ ಸಮ್ಮೇಳನದಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತ ನೈಪಾಲ್‌ರವರನ್ನು ಹೀಯಾಳಿಸಿ ಮಾತಾಡಿದ್ದು ಅಂತರಾಷ್ಟ್ರೀಯ ವಿವಾದವಾಗಿತ್ತು. 2915ರಲ್ಲಿ ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ರಾಜ್ಯೋತ್ಸವ ಸಮಾರಂಭದಲ್ಲಿಯೂ ಸಹ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಬದಲಿಗೆ ಟಿಪು ಸುಲ್ತಾನ್ ಹೆಸರಿಡಬೇಕು ಯಾಕೆಂದರೆ ಟಿಪು ಹುಟ್ಟಿದ್ದು ದೇವನಹಳ್ಳಿಯಲ್ಲಿ ಎಂದು ಹೇಳಿ ರಾಜ್ಯಾದ್ಯಂತ ವಿವಾದದ ಕಿಡಿಯನ್ನು ಹೊತ್ತಿಸಿ ಸುಮ್ಮನಾಗಿದ್ದರು. ಈ ಕಿಡಿ ಬೆಂಕಿಯಾಗಿ ಧಗಧಗಿಸಿದಾಗ ಕ್ಷಮೆ ಕೋರಿ ವಿವಾದವನ್ನು ತಣ್ಣಗಾಗಿಸಿದ್ದರು. 

ಪ್ರಚಾರಕ್ಕಾಗಿಯೋ, ಪ್ರಶಸ್ತಿಗಳಿಗಾಗಿಯೋ, ಸದಾ ಸುದ್ದಿಯಲ್ಲಿರಲೆಂದೋ ಕಾರ್ನಾಡರು ಹೀಗೆ ವಿವಾದಗಳನ್ನು ಸೃಷ್ಟಿಸುತ್ತಾರೆ ಎಂಬುದು ಅವರನ್ನು ವಿರೋಧಿಸುವವರ ಆರೋಪವಾಗಿತ್ತು. ಆದರೆ.. ತಮಗನ್ನಿಸಿದ್ದನ್ನು ನೇರವಾಗಿ ಅಭಿವ್ಯಕ್ತಿಸುವ ಚಟ ಮತ್ತು ಹಠ ಇದ್ದುದರಿಂದ ಮುಂದಿನ ಪರಿಣಾಮಗಳ ಬಗ್ಗೆ ಎಂದೂ ಆಲೋಚನೆ ಮಾಡದೇ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿ ಕಾರ್ನಾಡರು ಪಜೀತಿಗೆ ಒಳಗಾಗುತ್ತಿದ್ದರು. ಇದಕ್ಕಾಗಿಯೇ ಹಸಿದು ಕಾಯುತ್ತಿರುವ ಸುದ್ದಿ ಮಾಧ್ಯಮಗಳು ಗಿರೀಶರವರ ಹೇಳಿಕೆಗಳನ್ನು ಅತಿಯಾಗಿ ವೈಭವೀಕರಿಸಿ ಕಾರ್ನಾಡರನ್ನು ಸದಾ ಸುದ್ದಿಯಲ್ಲಿರಿಸಲು ಸಹಕರಿಸುತ್ತಲೇ ಬಂದವು.  

ವಾದವಿವಾದಗಳೇನೇ ಇರಲಿ... ಗಿರೀಶ್ ಕಾರ್ನಾಡರು ತಮ್ಮ ಬಹುಮುಖಿ ಪ್ರತಿಭೆಯಿಂದಾಗಿ ದೇಶಾದ್ಯಂತ ಗುರುತಿಸಲ್ಪಟ್ಟಿದ್ದಾರೆ. ನಾಟಕಕಾರರಾಗಿ, ನಟರಾಗಿ, ಚಲನಚಿತ್ರಗಳ ನಿರ್ದೇಶಕರಾಗಿ, ಸ್ಕ್ರಿಪ್ಟ್ ರೈಟರಾಗಿ, ಬರಹಗಾರರಾಗಿ, ಪ್ರತಿಷ್ಠಿತ ಸಾಂಸ್ಕೃತಿಕ ಸಂಸ್ಥೆಗಳ ನಿರ್ದೇಶಕರಾಗಿ ರಾಜ್ಯದ ಗಡಿಯನ್ನೂ ಮೀರಿ ದೇಶ ವಿದೇಶಗಳಲ್ಲಿಯೂ ಸಹ ತಮ್ಮ ಅಸ್ಮಿತೆಯನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಬೆಂಗಾಲಿಯಲ್ಲಿ ಬಾದಲ್ ಸರ್ಕಾರ್, ಮರಾಠಿಯಲ್ಲಿ ವಿಜಯ್ ತೆಂಡೂಲ್ಕರ್, ಹಿಂದಿಯಲ್ಲಿ ಮೋಹನ್ ರಾಕೇಶ್‌ರವರು ಆಧುನಿಕ ರಂಗಭೂಮಿಯಲ್ಲಿ ನಾಟಕಕಾರರಾಗಿ ದೇಶಾದ್ಯಂತ ಹೆಸರಾದಂತೆಯೇ ಕನ್ನಡದಲ್ಲಿ ಗಿರೀಶ್ ಕಾರ್ನಾಡರು ಜಗದ್ವಿಖ್ಯಾತರಾದವರು. ಕಾರ್ನಾಡರು ಬರೆದ ನಾಟಕಗಳು ಒಂದಕ್ಕಿಂತಾ ಒಂದು ವಿಭಿನ್ನವಾಗಿರುವಂತಹವು. ಪುರಾಣ, ಚರಿತ್ರೆ, ಜಾನಪದಗಳ ಸೊಗಡನ್ನು ಸಂಸ್ಕರಿಸಿ ಕಾರ್ನಾಡರು ಬರೆದ ನಾಟಕಗಳು ದೇಶಾದ್ಯಂತ ರಂಗಭೂಮಿಯಲ್ಲಿ ಸಂಚಲನವನ್ನು ಉಂಟುಮಾಡಿದವು. ಕನ್ನಡದಲ್ಲಿ ಒಬ್ಬ ಅಪ್ರತಿಮ ಪ್ರತಿಭಾವಂತ ನಾಟಕಕಾರ ಹುಟ್ಟಿ ಬರಲು ಕಾರಣವಾದವು.



ಚಿತ್ರಕಲಾವಿದರು ಹಾಗೂ ಕವಿಯಾಗಿದ್ದ ಕಾರ್ನಾಡರು ಮೊಟ್ಟಮೊದಲ ಬಾರಿಗೆ 1961ರಲ್ಲಿ ಬರೆದ ನಾಟಕ ಯಯಾತಿ. ಕಾರ್ನಾಡರಿಗೆ ದೇಶಾದ್ಯಂತ ಹೆಸರು ತಂದುಕೊಟ್ಟು ಜ್ಞಾನಪೀಠ ಪ್ರಶಸ್ತಿ ದೊರಕಲು ಕಾರಣವಾಗಿದ್ದು 1964ರಲ್ಲಿ ರಚಿಸಿದ ನಾಟಕ ತುಘಲಕ್. ಕನ್ನಡದಲ್ಲಿ ಪ್ರೊ.ಬಿ.ಚಂದ್ರಶೇಖರರವರು ನಿರ್ದೇಶಿಸಿದ್ದ ಈ ನಾಟಕ ತದನಂತರ ಸಿ.ಆರ್.ಸಿಂಹರವರ ಅಭಿನಯ ಮತ್ತು ನಿರ್ದೇಶನದಲ್ಲಿ (1969ರಿಂದ) ಅತೀ ಹೆಚ್ಚು ಖ್ಯಾತಿಯನ್ನು ಪಡೆದು ನೂರಾರು ಯಶಸ್ವಿ ಪ್ರದರ್ಶನಗಳನ್ನು ಕಂಡಿತು. ಬಿ.ವಿ.ಕಾರಂತರೇ ಈ ನಾಟಕವನ್ನು ಹಿಂದಿ ಭಾಷೆಗೆ ರೂಪಾಂತರ ಮಾಡಿದ್ದರು. ಭಾರತದ ಪ್ರಮುಖ ರಂಗನಿರ್ದೇಶಕರುಗಳಾದ ಇಬ್ರಾಹಿಂ ಅಲ್ಕಾಜಿ, ಪ್ರಸನ್ನ, ಅರವಿಂದ ಗೌರ್, ದಿನೇಶ್ ಥಾಕೂರ್‌ರವರು ಈ ನಾಟಕವನ್ನು ನಿರ್ದೇಶಿಸಿದ್ದಾರೆ. ಬೆಂಗಾಲಿ ಭಾಷೆಯಲ್ಲೂ ಸಹ ಶ್ಯಾಮಾನಂದ್ ಜಲನ್‌ರವರಿಂದ ತುಘಲಕ್ ನಿರ್ದೇಶನಕ್ಕೊಳಗಾಗಿದೆ. ತುಘಲಕ್ ನಾಟಕ ಇಂಗ್ಲೀಷ್, ಹಂಗೇರಿಯನ್, ಸ್ಪ್ಯಾನಿಶ್, ಜರ್ಮನ್ ಭಾಷೆಗಳಿಗೂ ಅನುವಾದವಾಗಿದೆ. 

ಮಾನಿಶಾದ, 1971ರಲ್ಲಿ ಹಯವದನ, 1977ರಲ್ಲಿ ಅಂಜುಮಲ್ಲಿಗೆ, 1980ರಲ್ಲಿ ಹಿಟ್ಟಿನ ಹುಂಜ, 1989ರಲ್ಲಿ ನಾಗಮಂಡಲ, 1991ರಲ್ಲಿ ತಲೆದಂಡ, 1994ರಲ್ಲಿ ಅಗ್ನಿ ಮತ್ತು ಮಳೆ, 2000ರಲ್ಲಿ ಟಿಪು ಸುಲ್ತಾನ ಕಂಡ ಕನಸು, 2006ರಲ್ಲಿ ಒಡಕಲು ಬಿಂಬ ಹಾಗೂ ಮದುವೆ ಅಲ್ಬಂ, 2012ರಲ್ಲಿ ಹೂ ಮತ್ತು ಬೆಂದ ಕಾಳು ಆನ್ ಟೋಸ್ಟ್.. ಹೀಗೆ ಒಟ್ಟು ಹದಿನಾಲ್ಕು ನಾಟಕಗಳನ್ನು ಕಾರ್ನಾಡರು ರಚಿಸಿದ್ದಾರೆ. ಸಂಖ್ಯೆಯ ದೃಷ್ಟಿಯಲ್ಲಿ ಇವು ಜಾಸ್ತಿ ಅಲ್ಲದೇ ಇರಬಹುದು, ಆದರೆ.. ಯಶಸ್ಸಿನ ದಾರಿಯಲ್ಲಿ ಬಹುತೇಕ ನಾಟಕಗಳು ಮೈಲುಗಲ್ಲಾಗುವಂತಹುವೇ ಆಗಿವೆ. ಕಾರ್ನಾಡರು ಬಾದಲ್ ಸರ್ಕಾರರ ಏವಂ ಇಂದ್ರಜಿತ್ ನಾಟಕವನ್ನು ಹಾಗೂ ಮರಾಠಿಯ ಮಹೇಶ್ ಎಲಕುಂಚವಾರರ ವಾಸಾಂಸಿ ಜೀರ್ಣಾನಿ ಮತ್ತು ಧರ್ಮಪುತ್ರ ನಾಟಕಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ತಲೆದಂಡ ನಾಟಕಕ್ಕೆ ಕರ್ನಾಟಕ ನಾಟಕ ಅಕಾಡೆಮಿ (1990), ಕರ್ನಾಟಕ ಸಾಹಿತ್ಯ ಅಕಾಡೆಮಿ (1993) ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಯ (1994) ಪ್ರಶಸ್ತಿಗಳು ದೊರಕಿವೆ.

ಆಗೊಮ್ಮೆ ಈಗೊಮ್ಮೆ ಎನ್ನುವ ಹೆಸರಿನಲ್ಲಿ ಕಾರ್ನಾಡರು ಬರೆದ ಹಲವಾರು ಲೇಖನಗಳ ಸಂಗ್ರಹವು ಪುಸ್ತಕ ರೂಪದಲ್ಲಿ ಪ್ರಕಟವಾಗಿದೆ. 2011ರಲ್ಲಿ ಆಡಾಡತ ಆಯುಷ್ಯ ಎನ್ನುವ ಹೆಸರಲ್ಲಿ ತಮ್ಮ ಆತ್ಮಕತೆಯನ್ನೂ ಗಿರೀಶರವರು ಬರೆದಿದ್ದು ಧಾರವಾಡದ ಮನೋಹರ ಗ್ರಂಥ ಮಾಲಾದವರು ಪ್ರಕಟಿಸಿದ್ದಾರೆ.



ಬಹುಭಾಷಾ ಚಲನಚಿತ್ರ ನಟರಾಗಿಯೂ ಗುರುತಿಸಲ್ಪಟ್ಟಿರುವ ಕಾರ್ನಾಡರು ಕನ್ನಡ, ಹಿಂದಿ, ತಮಿಳು, ಮಲಯಾಳಿ, ತೆಲಗು, ರಾಠಿ ಭಾಷೆಗಳೂ ಸೇರಿದಂತೆ ಒಟ್ಟು ನೂರರಷ್ಟು ಸಿನೆಮಾಗಳಲ್ಲಿ ಅಭಿನಯಿಸಿದ್ದಾರೆ. ಪ್ರಸಿದ್ದ ಟಿವಿ ಸೀರಿಯಲ್‌ಗಳಾದ ಮಾಲ್ಗುಡಿ ಡೇಸ್ ಹಾಗೂ ಇಂದ್ರಧನುಷ್ನಲ್ಲಿಯೂ ಸಹ ತಮ್ಮ ನಟನೆಯ ಮೂಲಕ ಗಮನ ಸೆಳೆದಿದ್ದಾರೆ. ಸಿನೆಮಾ ನಿರ್ದೇಶಕರಾಗಿಯೂ ಹೆಸರುವಾಸಿಯಾಗಿರುವ ಕಾರ್ನಾಡರು 1971ರಲ್ಲಿ ನಿರ್ದೇಶಿಸಿದ್ದ ವಂಶವೃಕ್ಷ ಕನ್ನಡ ಸಿನೆಮಾದ ನಿರ್ದೇಶನಕ್ಕಾಗಿ ರಾಷ್ಟೀಯ ಫಿಲಂ ಪ್ರಶಸ್ತಿ ಪುರಸ್ಕೃತವಾಗಿತ್ತು. ಕನ್ನಡದ ಅತ್ಯುತ್ತಮ ಸಿನೆಮಾ ಪ್ರಶಸ್ತಿಯನ್ನೂ ಸಹ ತಮ್ಮದಾಗಿಸಿಕೊಂಡಿತ್ತು. ತದನಂತರ ತಬ್ಬಲಿಯು ನೀನಾದೆ ಮಗನೆ (1977), ಗೋಧೂಳಿ (ಹಿಂದಿ 1977), ಒಂದಾನೊಂದು ಕಾಲದಲ್ಲಿ (1978), ಕಾನೂರು ಹೆಗ್ಗಡತಿ (1999), ಕಾಡು (1973), ಉತ್ಸವ್ (ಹಿಂದಿ 1984) ಚೆಲುವಿ (ಹಿಂದಿ ಮತ್ತು ಕನ್ನಡ 1992), ಚಿದಂಬರ ರಹಸ್ಯ (ಟಿವಿ ಫಿಲಂ).. ಎನ್ನುವ ಕಲಾತ್ಮಕ ಸಿನೆಮಾಗಳನ್ನು ಕಾರ್ನಾಡರು ನಿರ್ದೇಶಿಸಿ ಸಿನೆಮಾ ರಂಗದಲ್ಲೂ ಸಹ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ.

ಕಾರ್ನಾಡರು ನಿರ್ದೇಶಿಸಿದ ಕಾಡು, ಒಂದಾನೊಂದು ಕಾಲದಲ್ಲಿ, ತಬ್ಬಲಿಯು ನೀನಾದೆ ಮಗನೆ, ಚೆಲುವಿ, ಕಾನೂರು ಹೆಗ್ಗಡತಿ.. ಹೀಗೆ ಅವರ ಬಹುತೇಕ ಸಿನೆಮಾಗಳೆಲ್ಲಾ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗಳನ್ನು ಪಡೆದಿವೆ. ವಂಶವೃಕ್ಷ, ಕಾಡು, ಒಂದಾನೊಂದು ಕಾಲದಲ್ಲಿ ಈ ಮೂರೂ ಸಿನೆಮಾಗಳ ನಿರ್ದೇಶನಕ್ಕಾಗಿ ಪ್ರತಿಷ್ಟಿತ ಫಿಲಂ ಫೇರ್ ಅವಾರ್ಡ ದೊರಕಿದ್ದು, ಆನಂದ ಭೈರವಿ ಸಿನೆಮಾದಲ್ಲಿ ನಟಿಸಿದ್ದ ಕಾರ್ನಾಡರ ಅತ್ಯತ್ತಮ ನಟನೆಗೆ ಫಿಲಂ ಫೇರ್ ಪ್ರಶಸ್ತಿ ಕೊಟ್ಟು ಗೌರವಿಸಲಾಗಿತ್ತು. ಸಂಸ್ಕಾರ ಚಿತ್ರದ ಅಭಿನಯಕ್ಕಾಗಿ ರಾಷ್ಟ್ರಪತಿಗಳಿಂದ ಸುವರ್ಣ ಪದಕವನ್ನೂ ಕಾರ್ನಾಡರು ಪಡೆದು ಕರ್ನಾಟಕದ ಗೌರವವನ್ನು ಹೆಚ್ಚಿಸಿದ್ದಾರೆ.



ಕಾರ್ನಾಡರನ್ನು 1974ರಲ್ಲಿ ಪುಣೆಯ ಫಿಲಂ ಆಂಡ್ ಟೆಲವಿಜನ್ ಇನ್ಸ್ಟೀಟ್ಯೂಟ್ ಆಪ್ ಇಂಡಿಯಾ ಸಂಸ್ಥೆಗೆ ನಿರ್ದೇಶಕರನ್ನಾಗಿ ಕೇಂದ್ರ ಸರಕಾರವು ಆಯ್ಕೆ ಮಾಡಿತ್ತು. 1984 ರಿಂದ 1993ರ ವರೆಗೆ ಇಂಡೋ ಯುಎಸ್ ಸಬ್ ಕಮಿಶನ್ ಆನ್ ಎಜುಕೇಶನ್ ಆಂಡ್ ಕಲ್ಚರಲ್ ಎನ್ನುವ ಅಂತರಾಷ್ಟ್ರೀಯ ಮೀಡಿಯಾ ಕಮಿಟಿಯ ಕೋ-ಛೇರಮನ್ ಆಗಿಯೂ ಕಾರ್ನಾಡರು ಕೆಲಸ ಮಾಡಿದ್ದಾರೆ. 1988 ರಿಂದ 1993ರವರೆಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಕಾರ್ನಾಡರು 1976 ರಿಂದ 1978ರ ವರೆಗೆ ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ ಕನ್ನಡ ರಂಗಭೂಮಿಯ ಪ್ರಾತಿನಿಧಿಕ ಸಂಸ್ಥೆಯನ್ನು ಮುನ್ನಡೆಸಿದ್ದಾರೆ. ಲಾಸ್ ಎಂಜಲೀಸಿನ ದಕ್ಷಿಣ ಕ್ಯಾಲಿಪೋರ್ನಿಯಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಗೌರವಕ್ಕೂ ಕಾರ್ನಾಡರು ಪಾತ್ರವಾಗಿದ್ದಾರೆ.

ಭಾರತದಲ್ಲಿ ಸಾಹಿತ್ಯ ಸಾಧನೆಗಾಗಿ ಕೊಡಮಾಡುವ ಜ್ಞಾನಪೀಠ ಪ್ರಶಸ್ತಿಯು ಮೊದಲ ಬಾರಿಗೆ ನಾಟಕಕಾರನೊಬ್ಬನಿಗೆ ಒಲಿದು ಬಂದಿದ್ದರೆ ಅದು ಗಿರೀಶ್ ಕಾರ್ನಾಡರಿಗೆ ಮಾತ್ರ. (1998ರಲ್ಲಿ). ಕಾರ್ನಾಡರ ಪ್ರತಿಭೆ ಮತ್ತು ಸಾಧನೆಗೆ ಸಂದಿರುವ ಪ್ರಶಸ್ತಿಗಳು ಅನೇಕಾನೇಕ. ಕೇಂದ್ರ ಸರಕಾರದ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (1972), ಭಾರತದ ಪ್ರತಿಷ್ಠಿತ ಪ್ರಶಸ್ತಿಗಳಾದ ಪದ್ವಶ್ರೀ ಪ್ರಶಸ್ತಿ (1974) ಹಾಗೂ ಪದ್ಮಭೂಷಣ (1992), ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ (1992), ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1994), ಕಾಳಿದಾಸ್ ಸನ್ಮಾನ್ (1998), ರಾಜ್ಯೋತ್ಸವ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ (1997)... ಹೀಗೆ ಅನೇಕ ರಾಜ್ಯ, ರಾಷ್ಟ್ರ ಪ್ರಶಸ್ತಿಗಳು ಗಿರೀಶ್ ಕಾರ್ನಾಡರನ್ನು ಹುಡುಕಿಕೊಂಡು ಬಂದಿವೆ. ಕಾರ್ನಾಡರಿಗೆ ದಕ್ಕಿದ ಈ ಎಲ್ಲಾ ಪ್ರಶಸ್ತಿಗಳೂ ಸಹ  ಕರ್ನಾಟಕದ ಹೆಮ್ಮೆಯನ್ನು ಸಾರುತ್ತವೆ. ರಾಷ್ಟ್ರೀಯ ಮಟ್ಟದಲ್ಲಿ ಕನ್ನಡಿಗರ ಪ್ರತಿಭೆಯ ಸಂಕೇತವೂ ಆಗಿ ಕಂಗೊಳಿಸುತ್ತವೆ.


ಇಲ್ಲಿವರೆಗೂ ಕಾರ್ನಾಡರ ಸಾಧನೆಗಳನ್ನು ಹೇಳಲಾಗಿದ್ದು ಅವರ ಜೀವನದ ವ್ಯಯಕ್ತಿಕ ವಿವರಗಳನ್ನು ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಕಾರ್ನಾಡರು 1938ರ ಮೇ 19ರಂದು ಮಹಾರಾಷ್ಟ್ರದ ಮಾಥೇರಾನ್ ಎಂಬಲ್ಲಿ ಜನಿಸಿದರು. ಶಿರಸಿಯಲ್ಲಿ ಪ್ರಾಥಮಿಕ ವಿದ್ಯಾಬ್ಯಾಸವನ್ನು ಮುಗಿಸಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಗಣಿತ ಹಾಗೂ ಸಂಖ್ಯಾಶಾಸ್ತ್ರದಲ್ಲಿ ವಿಶ್ವವಿದ್ಯಾಲಯಕ್ಕೆ ಮೊದಲಿಗರಾಗಿ ಬಿ.ಎ ಡಿಗ್ರಿ (1958) ಪಡೆದರು. ಇಂಗ್ಲೆಂಡಿನ ಆಕ್ಸ್‌ಫರ್ಡ ವಿಶ್ವವಿದ್ಯಾಲಯದಲ್ಲಿ ತತ್ವಜ್ಞಾನ, ರಾಜ್ಯಶಾಸ್ತ್ರ ಮತ್ತು ಅರ್ಥಶಾಸ್ತ್ರ ವಿಷಯಗಳಲ್ಲಿ ಎಂಎ (1963) ಸ್ನಾತಕೋತ್ತರ ಪದವಿಯನ್ನು ಪಡೆದರು. ಇಂಗ್ಲೆಂಡಿನಲ್ಲಿ ಓದುತ್ತಿದ್ದಾಗಲೇ ಆಕ್ಸ್‌ಫರ್ಡ ಯುನಿವರ್ಸಿಟಿಯ ಯುನಿಯನ್ ಸೊಸೈಟಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಓದಿನ ನಂತರ ಭಾರತಕ್ಕೆ ಮರಳಿ ಮದ್ರಾಸಿನ ಆಕ್ಸ್‌ಫರ್ಡ ಯುನಿವರ್ಸಿಟಿ ಪ್ರೆಸ್‌ನಲ್ಲಿ (1963-70) ಸಹಾಯಕ ಮ್ಯಾನೇಜರ್ ಆಗಿ ಕೆಲಸಕ್ಕೆ ಸೇರಿಕೊಂಡು ತದನಂತರ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸಿದರು. 1974ರಲ್ಲಿ ಪುಣೆಯ ಫಿಲ್ಮ್ ಆಂಡ್ ಟೆಲಿವಿಜನ್ ಇನ್‌ಸ್ಟಿಟ್ಯೂಟಿನ ನಿರ್ದೇಶಕರಾಗಿ ಕೇಂದ್ರ ಸರಕಾರದಿಂದ ನಿಯಮಿಸಲ್ಪಟ್ಟರು. 2000-03 ರವರೆಗೆ ಲಂಡನ್ನಿನ ನೆಹರು ಸೆಂಟರಿನ ನಿರ್ದೇಶಕರ ಹಾಗೂ ಭಾರತದ ಹೈಕಮೀಶನ್‌ನಲ್ಲಿ ಸಚಿವರಾಗಿದ್ದರು. ಕಾರ್ನಾಡರು 1980 ರಲ್ಲಿ ಡಾ.ಸರಸ್ವತಿ ಗಣಪತಿಯವರೊಡನೆ ವಿವಾಹವಾದರು ಹಾಗೂ ಈ ದಂಪತಿಗಳಿಗೆ ಮಗಳು ಶಾಲ್ಮಲೀ ರಾಧಾ ಹಾಗೂ ರಘು ಅಮೇಯ ಹೆಸರಿನ ಮಗ ಇದ್ದಾರೆ. ಈಗ ಭೌತಿಕವಾಗಿ ಗಿರೀಶ್ ಕಾರ್ನಾಡರು ಅಗಲಿದ್ದಾರೆ ಆದರೆ ಅವರ ನಾಟಕ, ಸಿನೆಮಾ ಹಾಗೂ ಬರಹಗಳು ಮೂಲಕ ತಲೆತಲೆಮಾರುಗಳ ಕಾಲ ಜೀವಂತವಾಗಿರುತ್ತಾರೆ.

ಯಯಾತಿ ನಾಟಕದಲ್ಲಿ ಕಾರ್ನಾಡರು ಬರೆದ ಈ ಸಂಭಾಷಣೆ ಹೀಗಿದೆ..

ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು ಆದರೆ
ಕನಸುಗಳಿಲ್ಲದ ದಾರಿಯಲ್ಲಿ ಹೇಗೆ ನಡೆಯಲಿ..

ಆಧುನಿಕ ಭಾರತೀಯ ರಂಗಭೂಮಿಯ ಪ್ರಸಿದ್ಧ ನಾಟಕಕಾರ ಗಿರೀಶ್ ಕಾರ್ನಾಡರು ಮುಂದಿನ ಪೀಳಿಗೆಗೆ ತಮ್ಮ ನಾಟಕ ಸಿನೆಮಾಗಳ ಮೂಲಕ ಬೆಳಕನ್ನೂ ತೋರಿಸುತ್ತಲೇ ಕನಸುಗಳನ್ನು ನನಸಾಗಿಸಲು ಪ್ರೇರಣೆಯೂ ಆಗಿದ್ದಾರೆ. ಅವರ ವ್ಯಯಕ್ತಿಕ ಒಲವು ನಿಲುವುಗಳನ್ನು ಪಕ್ಕಕ್ಕಿಟ್ಟು ನೋಡಿದರೆ ಅವರ ಬದುಕು ಹಾಗೂ ಸಾಧನೆಯೇ ಯುವ ರಂಗಪೀಳಿಗೆಗೆ ಮಾರ್ಗದರ್ಶಕವಾಗಿವೆ. ಕಾರ್ನಾಡರು ಸಾವನ್ನು ಆಡಂಬರಗೊಳಿಸದೇ ಸರಳವಾಗಿಸಿದ್ದು ಕಾಲನ ಪಟ್ಟಿಯ ಸರದಿಯಲ್ಲಿರುವವರಿಗೆ ಮಾದರಿಯಾಗಿದೆ. 

-ಶಶಿಕಾಂತ ಯಡಹಳ್ಳಿ