ಬುಧವಾರ, ಅಕ್ಟೋಬರ್ 24, 2018

ರಂಗಾಭಿವ್ಯಕ್ತಿ ಸ್ವಾತಂತ್ರ್ಯ ಉಳಿಯಲಿ, ನಾಟಕದ ಸೆನ್ಸಾರ್ ಕಾನೂನು ರದ್ದಾಗಲಿ..



ಈ ಮನುವಾದಿಗಳು ಇರೋದೇ ಹೀಗೆ... ಅವರಿಗೆ ಮಾನವೀಯ ಸಂವೇದನೆಯ ಅಭಿವ್ಯಕ್ತಿಯೂ ಗೊತ್ತಿಲ್ಲಾ.. ನುಷ್ಯ ಸ್ವಾತಂತ್ರ್ಯದ ಅರಿವೂ ಇಲ್ಲಾ. ಅಭಿವ್ಯಕ್ತಿ ಸ್ವಾತಂತ್ರ್ಯ ಅಂದರೆ ಅವರು ನಂಬಿರುವ ಸನಾತನ ಸಂಪ್ರಾದಯಗಳನ್ನ ಇತರರು ಪ್ರಶ್ನಿಸದೇ ಅನುಸರಿಸಿ ಭಜನೆ ಮಾಡಬೇಕು ಎಂದುಕೊಂಡಿರುವ ಭ್ರಮಾಧೀನ ಸಮುದಾಯವೊಂದು ಇಡೀ ಸಮಾಜದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದೆ. ತಲೆಮಾರುಗಳಿಂದ ಧರ್ಮ ಮತ್ತು ದೇವರುಗಳ ಗುತ್ತಿಗೆ ಹಿಡಿದವರಂತೆ ದಾಂಗುಡಿ ಇಡುತ್ತಿರುವ ಮನುವ್ಯಾಧಿಪೀಡಿತರು ದೇವರ ಹೆಸರನ್ನು ನಾಟಕದ ಪಾತ್ರಗಳಿಗೆ ಇಡುವುದನ್ನೂ ಸಹ ವಿರೋಧಿಸುತ್ತಾರೆ. ಇಷ್ಟು ದಿನ ರಾಮನ ಹೆಸರಲ್ಲಿ ದೇಶಾದ್ಯಂತ ತಳಮಳ ಸೃಷ್ಟಿಸಿಯಾಯಿತು. ಈಗ ತಳ ಸಮುದಾಯದ ದೇವರಾದ ಶಿವನನ್ನೂ ಸಹ ಅನಧೀಕೃತವಾಗಿ ಗುತ್ತಿಗೆ ಪಡೆದವರಂತೆ ಹಾರಾಡುತ್ತಿದ್ದಾರೆ.

ಆಗಿದ್ದಿಷ್ಟೇ.. ನಾಟಕದ ಮುಖ್ಯ ಪಾತ್ರದಾರಿಯ ಹೆಸರು ಶಿವ ಎಂದು ಇರುವುದಕ್ಕೆ ನಾಟಕವನ್ನೇ ರದ್ದು ಮಾಡಬೇಕೆಂದು ದಾಂಗುಡಿ ಇಟ್ಟಿದ್ದನ್ನು ಎಲ್ಲಾದರೂ ಕೇಳಿದ್ದೀರಾ? ನಾಟಕದ ಹೆಸರು ಶಿವ ಎಂದು ಇರುವುದಕ್ಕೆ ನಾಟಕವನ್ನೇ ಮಾಡಕೂಡದು ಎಂದು ಗಲಾಟೆ ಮಾಡಿದ್ದನ್ನು ನೋಡಿದ್ದೀರಾ? ಮೊದಲು ನಾಟಕಗಳನ್ನೆ ಆಡಬಾರದು.. ಎಂದು ಪರಮಾನು ಹೊರಡಿಸುತ್ತಿದ್ದ ಈ ಪುರೋಹಿತಶಾಹಿ ಮನಸ್ಥಿತಿಯ ಸಾಂಸ್ಕೃತಿಕ ಪುಂಡರು ಈಗ ಇಂತಹ ನಾಟಕಕ್ಕೆ, ಇಂತಹ ಪಾತ್ರಕ್ಕೆ ಇಂತಹ ಹೆಸರನ್ನು ಇಡಬಾರದು ಎನ್ನುವ ಪ್ಯಾಸಿಸ್ಟ್ ಧೋರಣೆಯನ್ನು ಅಳವಡಿಸಿಕೊಂಡಿದೆ. ಪ್ರತಿಭಟನಾ ಮಾಧ್ಯಮವಾದ ರಂಗಭೂಮಿಯನ್ನೂ ಸಹ ತಮ್ಮ ಅನುಕೂಲಕ್ಕೆ ತಕ್ಕಂತೆ ಮಾರ್ಪಡಿಸಲು ಪ್ರಯತ್ನಿಸುತ್ತಲೇ ಬಂದಿದೆ.

ಇಷ್ಟಕ್ಕೂ ಆಗಿದ್ದಾದರೂ ಏನು? ಅದೊಂದು ಆಂಗ್ಲ ಭಾಷೆಯ ನಾಟಕ ಹೆಸರು ಶಿವ, ದಯಾಸಿಂಧು ಸಕ್ರೆಪಟ್ನ ಎನ್ನುವ ರಂಗಾಸಕ್ತ ಯುವಕ ಕೆಲವು ಯುವಕರನ್ನು ಸೇರಿಸಿಕೊಂಡು ಎನಿಮಾ ಮತ್ತು ಆನಿಮಸ್ ಎನ್ನುವ ರಂಗತಂಡವನ್ನು ಹುಟ್ಟು ಹಾಕಿ ಮೊದಲ ಬಾರಿಗೆ ಶಿವ ಎನ್ನುವ ಹೆಸರಿನ ನಾಟಕವನ್ನು ಬರೆದು ನಿರ್ದೇಶಿಸಿದ್ದಾರೆ. ಇಂಡಿಯಾ ಪೌಂಡೇಶನ್ ಆಪ್ ಆರ್ಟ್ಸ ಸಂಸ್ಥೆಯ ಆರ್ಥಿಕ ಸಹಕಾರದಿಂದ ಈ ನಾಟಕ ನಿರ್ಮಾಣಗೊಂಡಿದೆ. ಈ ಶಿವ ನಾಟಕ ಈಗಾಗಲೇ ಹದಿನಾರು ಪ್ರದರ್ಶನಗಳನ್ನೂ ಕಂಡಿದೆ. ರಂಗಶಂಕರದಲ್ಲೇ ಎಂಟು ಪ್ರದರ್ಶನಗಳಾಗಿವೆ. ಇಲ್ಲಿವರೆಗೂ ಈ ನಾಟಕಕ್ಕೆ ಎಲ್ಲಿಯೂ ಯಾವುದೇ ರೀತಿಯ ವಿರೋಧ ಬಂದಿರಲಿಲ್ಲ. ನೋಡಿದವರೆಲ್ಲಾ ಲೈಂಗಿಕ ಅಲ್ಪಸಂಖ್ಯಾತರ ಸಲಿಂಗರತಿ ಕುರಿತ ಸೂಕ್ಷ್ಮ ಸಂವೇದನೆಯ ನಾಟಕವನ್ನು ಕುರಿತು ಮೆಚ್ಚಿದ್ದಾರೆ. ಇಂತಹ ವಿಭಿನ್ನ ವಿಷಯದ ನಾಟಕಗಳು ಒಂದು ಆರೋಗ್ಯಪೂರ್ಣ ಚರ್ಚೆಯನ್ನು ಹುಟ್ಟುಹಾಕಬೇಕೆ ಹೊರತು ಮಡಿವಂತಿಕೆಯನ್ನಲ್ಲ.


ಅರುಂಧತಿ ರಾಜರವರು ತಮ್ಮ ಸ್ವಯಂ ಆಸಕ್ತಿಯಿಂದ ಬೆಂಗಳೂರಿನ ವೈಟ್‌ಪೀಲ್ಡನಲ್ಲಿರುವ ತಮ್ಮ ಮನೆಯ ಮೇಲೆ ಜಾಗೃತಿ ಥೀಯಟರ್ ಎನ್ನುವ  ರಂಗಮಂದಿರವೊಂದಿನ್ನು ನಿರ್ಮಿಸಿಕೊಂಡು ರಂಗ ಚಟುವಟಿಕೆಗಳನ್ನು ಮಾಡುತ್ತಾ ಬಂದಿದ್ದಾರೆ. ಬಹುತೇಕ ಇಂಗ್ಲೀಷ್ ರಂಗಭೂಮಿಯ ಚಟುವಟಿಕೆಗಳೇ ಇಲ್ಲಿ ನಡೆಯುತ್ತಾ ಬಂದಿದ್ದಾವೆ. ಈ ಹಿಂದೆ ಕೂಡಾ ಚೆನೈನ ಇವಾನ್ ರಂಗತಂಡ ಜಾಗೃತಿ ಥೀಯಟರ‍್ನಲ್ಲಿ ಅಲಿ ಜೆ ಎನ್ನುವ ನಾಟಕ ಪ್ರದರ್ಶನ ಮಾಡಿದ್ದಾಗಲೂ ಕೂಡಾ ಹಿಂದುತ್ವವಾದಿಗಳು ಆಕ್ಷೇಪ ವ್ಯಕ್ತಪಡಿಸಿ ನಾಟಕ ಪ್ರದರ್ಶನವನ್ನೇ ರದ್ದು ಮಾಡಿಸಿದ್ದರು. ಈಗ ಇದೇ ಜಾಗೃತಿ ಆಪ್ತ ರಂಗಮಂದಿರದಲ್ಲಿ ಶಿವ ನಾಟಕದ ಪ್ರದರ್ಶನವು ಸಹ ಅಕ್ಟೋಬರ್ 13 ಮತ್ತು 14 ರಂದು ವಾರಾಂತ್ಯದಲ್ಲಿ ಆಯೋಜಿಸಲಾಗಿತ್ತು.  ಅಕ್ಟೋಬರ್ 13ರಂದು ಬೆಳಿಗ್ಗೆ 11.30ಸುಮಾರು ವಿಶ್ವ ಹಿಂದೂ ಪರಿಷತ್ತಿನ (ವಿಹೆಚ್‌ಪಿ) ಗುಂಪು ರಂಗಮಂದಿರದ ಒಳಗೇ ನುಗ್ಗಿ ಬಂದು ಶಿವ ಅಂತಾ ಯಾಕೆ ಹೆಸರು ಇಟ್ಟಿದ್ದೀರಾ? ಸಲಿಂಗಕಾಮಿ ನಾಟಕಕ್ಕೆ ದೇವರ ಹೆಸರೇ ಬೇಕಾ? ಎಂದೆಲ್ಲಾ ಪ್ರಶ್ನಿಸಿ ಯಾವುದೇ ಕಾರಣಕ್ಕೂ ಈ ನಾಟಕ ಪ್ರದರ್ಶನ ಮಾಡಕೂಡದು ಎಂದು ಬೆದರಿಕೆ ಹಾಕಿದ್ದಾರೆ. ಈ ನಾಟಕದಲ್ಲಿ ಧರ್ಮವಿರೋಧಿ ಸಂದೇಶವಿರುವುದರಿಂದ ಪ್ರದರ್ಶನಕ್ಕೆ ಅವಕಾಶ ನೀಡಬಾರದು ಎಂದು ವಿಹೆಚ್‌ಪಿ ವಕ್ತಾರ ಗಿರೀಶ್ ಭಾರದ್ವಾಜ್ ಪೊಲೀಸರಿಗೆ ದೂರು ನೀಡಿದರು. ಈ ದೇಶದ ಎಲ್ಲರಿಗೂ ದೂರು ಕೊಡುವ ಅಥವಾ ಪ್ರತಿಭಟಿಸುವ ಹಕ್ಕಿದೆಯೇ ಹೊರತು ನಾಟಕ ಪ್ರದರ್ಶನವನ್ನು ನಿಲ್ಲಿಸುವ ಅಥವಾ ಬೆದರಿಕೆಯನ್ನು ಹಾಕುವ ಹಕ್ಕನ್ನು ಸಂವಿಧಾನ ಕೊಟ್ಟಿಲ್ಲ. ಹೋಗಲಿ ಈ ನಾಟಕವನ್ನು ನೀವು ನೋಡಿದ್ದೀರಾ? ಎಂದು ಅರುಂದತಿಯವರು ಸಂಘಿಗಳನ್ನು ಪ್ರಶ್ನಿಸಿದಾಗ ನೋಡಿಲ್ಲಾ.. ಆದರೆ ನಾಟಕದ ಹೆಸರು ಶಿವ ಎಂದು ಇರುವುದು ನಮಗೆ ನೋವುಂಟು ಮಾಡಿದೆ. ಅದಕ್ಕೆ ನಾಟಕದ ಹೆಸರು ಬದಲಾಯಿಸಿ ಇಲ್ಲವೇ ನಾಟಕ ನಡೆಯಲು ಬಿಡುವುದಿಲ್ಲಾ ಎಂದು ಉಡಾಫೆತನದಿಂದ ಉತ್ತರಿಸಿದರು. ಪುಸ್ತಕವನ್ನೇ ಓದದೇ ಪುಸ್ತಕ ಬ್ಯಾನ್ ಮಾಡಿ ಎನ್ನುವ, ಸಿನೆಮಾ ನೋಡದೇ ಸಿನೆಮಾ ರಿಲೀಸ್ ಮಾಡಲು ಬಿಡುವುದಿಲ್ಲಾ ಎನ್ನುವ ಕೋಮುವಾದಿಗಳ ಬಗ್ಗೆ ನಮಗೆಲ್ಲಾ ಗೊತ್ತು. ನಾಟಕವನ್ನು ನೋಡದೇ ನಾಟಕ ನಿಲ್ಲಿಸಿ ಎನ್ನುವ ಮನುವಾದಿಗಳ ತಲೆಯಲ್ಲಿ ಮೆದುಳು ಎನ್ನುವುದು ಇದೆಯಾ? ಎನ್ನುವುದೇ ಆಕ್ಷೇಪನೀಯ.

ತದನಂತರ ಬಂದ ಇಬ್ಬರು ಪೊಲೀಸರು ಈ ಥೇಯಟರ್‌ನಲ್ಲಿ  ದ್ವನಿವರ್ಧಕಗಳ ಬಳಕೆಗೆ ಅನುಮತಿ ಪಡೆಯದೇ ಪ್ರದರ್ಶನ ಮಾಡುತ್ತಿರುವುದನ್ನು ಪ್ರಶ್ನಿಸಿ ಪೊಲೀಸ್ ನೋಟೀಸ್ ಕೊಟ್ಟು ನಾಟಕ ಪ್ರದರ್ಶನ ನಿಲ್ಲಿಸಬೇಕು ಹಾಗೂ ಸ್ಟೇಶನ್ನಿಗೆ ಬರಬೇಕು ಎಂದು ಆಗ್ರಹಿಸಿ ಆರುಂದತಿಯವರನ್ನು ಸ್ಟೇಶನ್ನಿಗೆ ಕರೆಸಿಕೊಂಡಿದ್ದಾರೆ. ಸ್ಟೇಶನ್ನಿನಲ್ಲಿ ಮತ್ತೊಂದು ಸುತ್ತಿನ ವಿಚಾರಣೆ ನಡೆದು ನಾಟಕದ ವಿವರ ಕೇಳಲಾಯಿತು. ಹಾಗೂ ನಾಟಕದ ಸ್ರಿಪ್ಟ್ ಸಲ್ಲಿಸಿ ಪೊಲೀಸ್ ಅನುಮತಿ ಪಡೆಯಬೇಕು ಎಂದು ಪೊಲೀಸರು ಒತ್ತಾಯಿಸಿದರು. ಜೊತೆಗೆ ನಾಟಕ ಪ್ರದರ್ಶನ ಮಾಡುವುದೇ ಆದಲ್ಲಿ ನಮಗೆ ಇವತ್ತು ಸೆಕ್ಯೂರಿಟಿ ಕೊಡಲು ಸಾಧ್ಯವಿಲ್ಲಾ.. ಏನಾದರೂ ಅನಾಹುತಗಳಾದರೆ ಅದಕ್ಕೆ ಪೊಲೀಸರು ಜವಾಬ್ದಾರರಲ್ಲ ಎಂದು ಸ್ಟೇಶನ್ ಇನ್ಸಫೆಕ್ಟರ್ ತಮ್ಮ ಅಸಹಾಯಕತೆಯನ್ನು ತೋರಿ ಸಂವಿಧಾನಬದ್ದ ಹೊಣೆಗಾರಿಕೆಯಿಂದ ನುಣುಚಿಕೊಂಡು ನಾಟಕ ಪ್ರದರ್ಶನ ಮಾಡದಂತೆ ಪರೋಕ್ಷವಾಗಿ ಎಚ್ಚರಿಸಿ ಕಳಿಸಿದರು.

ವೈಟ್‌ಫೀಲ್ಡ್ ಡಿಸಿಪಿ ಸಾಹೇಬರಾದ ಅಬ್ದುಲ್ ಅಹಮದ್‌ರವರು ಕಾರ್ಯಕ್ರಮ ನಡೆಯುವ ಹದಿನೈದು ದಿನಕ್ಕೂ ಮುಂಚೆ ಅನುಮತಿ ಪಡೆಯುವುದು ನಿಯಮ. ಆದರೆ ನಾಟಕದ ಆಯೋಜಕರು ಯಾವುದೇ ಅನುಮತಿ ಪಡೆದಿಲ್ಲ. ಆ ಕುರಿತು ಮನವಿಯನ್ನೂ ಸಲ್ಲಿಸಿಲ್ಲ. ಭದ್ರತೆ ಒದಗಿಸುತ್ತಿಲ್ಲ ಎನ್ನುವುದು ಸೂಕ್ತವಲ್ಲ ಎಂದು ಪ್ರತಿಕ್ರಿಯಸಿದ್ದಾರೆ. ಕಾರ್ಯಕ್ರಮ ನಡೆಯುವ ಮೊದಲೇ ಅನುಮತಿ ಪಡೆಯಲು ಇದೇನು ರಾಜ್ಯೋತ್ಸವದ ಉತ್ಸವನಾ ಇಲ್ಲವೇ ಗಣೇಶ ಪ್ರತಿಷ್ಟಾಪನೆಯಾ? ಈ ಪೊಲೀಸರಿಗೆ ರಂಗಮಂದಿರದ ಒಳಗೆ ನಡೆಯುವ ನಾಟಕ ಯಾವುದು, ಬಹಿರಂಗ ಆಚರಣೆಗಳಾವವು? ಎನ್ನುವ ವ್ಯತ್ಯಾಸಗಳೇ ಗೊತ್ತಿರುವುದಿಲ್ಲ. ಇಷ್ಟೆಲ್ಲಾ ಆದ ಮೇಲೂ ಬೆದರಿಕೆಗೆ ಹೆದರದೇ ನಾಟಕ ಪ್ರದರ್ಶನ ಮಾಡುವ ಧೈರ್ಯವನ್ನು ರಂಗಮಂದಿರದವರು ಹಾಗೂ ನಿರ್ದೇಶಕರು ತೋರಿಸಬಹುದಾಗಿತ್ತು. ಆದರೆ.. ಅದು ಹೇಗೆ ನಾಟಕ ಮಾಡ್ತೀರೋ ನೋಡ್ತೇವೆ. ನೀವು ಪೊಲೀಸ್ ಬೆಂಗಾವಲಿನಲ್ಲಿ ನಾಟಕ ಮಾಡಿದರೂ ಆಚೆ ಬಂದಮೇಲೆ ನೋಡ್ಕೊಳ್ತೇವೆ.. ಎಂದು ಸಂಘಿಗಳು ಬೆದರಿಕೆ ಹಾಕತೊಡಗಿದರು. ರಂಗಮಂದಿರಕ್ಕೆ ಹಾನಿಯಾದೀತೆಂಬ ಆತಂಕದಿಂದ ಅರುಂದತಿ ರಾಜ್‌ರವರು, ಕಲಾವಿದರಿಗೆ ತೊಂದರೆ ಆದೀತೆಂಬ ಭಯದಿಂದ ನಾಟಕದ ನಿರ್ದೇಶಕರು ಎರಡು ದಿನಗಳ ಈ ನಾಟಕ ಪ್ರದರ್ಶನವನ್ನೇ ರದ್ದು ಮಾಡಿದರು. ನಾಟಕ ನೋಡಲು ಬಂದ ಪ್ರೇಕ್ಷಕರು ನಿರಾಶೆಯಿಂದ ವಾಪಸ್ ಹೋದರು.



ಇಷ್ಟಕ್ಕೂ ಈ ನಾಟಕದಲ್ಲಿ ಇರೋದಾದರೂ ಏನು? ಸಂಘಿಗಳನ್ನು ಕೆರಳಿಸಿದ ಅಂಶವಾದರೂ ಯಾವುದು? ಈ ನಾಟಕದಲ್ಲಿ ಶಿವ ಎನ್ನುವ ಹೆಸರಿನ ಪಾತ್ರವು ತನ್ನಲ್ಲಾಗುವ ಲೈಂಗಿಕ ಬಯಕೆ ಹಾಗೂ ಬದಲಾವಣೆಗಳ ಕುರಿತು ತನ್ನ ತಾಯಿಗೆ ಪತ್ರಗಳು ಹಾಗೂ ಕವಿತೆಗಳ ಮೂಲಕ ತಿಳಿಸುತ್ತದೆ. ಪ್ರತಿಯೊಂದು ಪತ್ರವೂ ಸಹ ಒಂದೊಂದು ಥೀಮ್ ಹೊಂದಿದ್ದು ಒಂದೊಂದು ಕಥೆಯನ್ನು ಅನಾವರಣಗೊಳಿಸುತ್ತದೆ. ಹೀಗೆ ನಾಲ್ಕು ಕಥೆಗಳು ನಾಟಕದಾದ್ಯಂತ ತೆರೆದುಕೊಳ್ಳುತ್ತವೆ. ಗಂಡು ಮತ್ತು ಹೆಣ್ಣಿನ ಸಂಯೋಜನೆಯ ಪ್ರತೀಕವಾದ ಅರ್ಧನಾರೀಶ್ವರನಾದ ಶಿವನ ಹೆಸರನ್ನೇ ಪ್ರಮುಖ ಪಾತ್ರದಾರಿಗೆ ಹಾಗೂ ನಾಟಕಕ್ಕೆ ಇಡಲಾಗಿದೆ. ಸಲಿಂಗಕಾಮ ಸಂಬಂಧವನ್ನು ಇತ್ತೀಚೆಗೆ ಸುಪ್ರೀಮ್ ಕೋರ್ಟ ಕೂಡಾ ಮಾನ್ಯ ಮಾಡಿದೆ. ಅಂತಹ ಸಂಬಂಧದ ಕುರಿತು ನಾಟಕ ಮಾಡಿದರೆ ತಪ್ಪೇನು? ಸಲಿಂಗ ಸಂಬಂಧದ ಥೀಮ್ ಇರುವ ನಾಟಕಕ್ಕಿಂತಲೂ ಆ ನಾಟಕದ ಹೆಸರೇ ಮೂಲಭೂತವಾದಿಗಳಿಗೆ ನುಂಗಲಾರದ ತುತ್ತಾಗಿದೆ. ಶಿವನ ಹೆಸರನ್ನು ತಮ್ಮ ಸ್ವತ್ತು ಎಂದುಕೊಂಡಿರುವ ಈ ಮೂರ್ಖರಿಗೆ ರೂಪಕವಾಗಿ ಶಿವನ ಹೆಸರನ್ನು ಬಳಸಿಕೊಳ್ಳಲಾಗಿದೆ ಎಂದು ಹೇಳಿದರೆ ಅರ್ಥವಾಗುವುದಾದರೂ ಹೇಗೆ?. ಅವರ ತಲೆಯಲ್ಲಿ ಬರೀ ಧರ್ಮಾಂಧ ಮೌಢ್ಯವೇ ತುಂಬಿರುವಾಗ ಅರ್ಧನಾರೀಶ್ವರದ ಪ್ರತೀಕವನ್ನು ತಿಳಿಸಿ ಹೇಳುವುದಾದರೂ ಹೇಗೆ? ನಾಟಕವನ್ನೇ ನೋಡದೇ ಯಾರೋ ಹೇಳಿದ್ದನ್ನು ಕೇಳಿ ಬಂದು ನಾಟಕವನ್ನು ನಿಲ್ಲಿಸುವ ಬಂಢತನವನ್ನು ತೋರುವ ಕೆಲವು ಹಿಂದುತ್ವವಾದಿಗಳ ಅಸಂವಿಧಾನಿಕ ನಡೆಯನ್ನು ವಿರೋಧಿಸಲೇಬೇಕಿದೆ. ವೈಟ್‌ಪೀಲ್ಡ್ ಎನ್ನುವ ಏರಿಯಾ ಬಿಜೆಪಿ ಹಿಡಿತದಲ್ಲಿದೆ. ಬಿಜೆಪಿ ಬೆಂಬಲದಿಂದಾಗಿ ಹಿಂದುತ್ವವಾದಿ ಹಿಂಬಾಲಕರು ಹೀಗೆ ತಮ್ಮ ಆಟೋಟೋಪ ತೋರಿಸಿದ್ದಾರೆ. ಜಾಗೃತಿ ಥೀಯೇಟರ್‌ನವರೂ ಸಹ ಈ ಮನುವಾದಿಗಳನ್ನು ಎದುರು ಹಾಕಿಕೊಳ್ಳಲು ಹಿಂಜರಿಯುತ್ತಿದ್ದಾರೆ.  

ಇಂತಹ ಪರಿಸ್ಥಿತಿಯಲ್ಲಿ ನಾಟಕ ಪ್ರದರ್ಶನಕ್ಕೆ ಅಡೆತಡೆಯಾಗದಂತೆ ರಕ್ಷಣೆ ಕೊಡುವುದು ಪೊಲೀಸರ ಕರ್ತವ್ಯ. ಆದರೆ.. ಅದಕ್ಕೆ ವ್ಯತಿರಿಕ್ತವಾಗಿ ವೈಟ್‌ಪೀಲ್ಡ್ ಪೊಲೀಸಿನವರು ನಡೆದುಕೊಂಡು ಸಂಘಪರಿವಾರದ ರೌಡಿ ಎಲೆಮೆಂಟ್‌ಗಳ ಪರವಾಗಿ ನಿಂತಿದ್ದು ಖಂಡನೀಯವಾಗಿದೆ. ಪೋಲೀಸರೂ ಈ ಮನುವಾದಿ ಸಂಘಟನೆಯವರ ಪರವಾಗಿ ವಕಾಲತ್ತು ವಹಿಸಿದವರಂತೆ ದ್ವನಿವರ್ಧಕ ಬಳಕೆಗೆ ಅನುಮತಿ ಪಡೆದಿಲ್ಲ ಹಾಗೂ ನಾಟಕ ಪ್ರದರ್ಶನಕ್ಕೆ ಪೂರ್ವದಲ್ಲಿ ಪೊಲೀಸ್ ಅನುಮತಿಯನ್ನು ಪಡೆದಿಲ್ಲವೆಂದು ಜಾಗೃತಿ ರಂಗಮಂದಿರದ ಮಾಲೀಕರಾದ ಅರುಂಧತಿಯವರಿಗೆ ನೊಟೀಸನ್ನು ಜಾರಿಗೊಳಿಸಿದ್ದಂತೂ ಅಕ್ಷಮ್ಯ. ಇಂದು ಸಂಜೆ ನಾಟಕ ಪ್ರದರ್ಶನವೆಂದು ಪ್ರಚಾರ ಮಾಡಲಾಗಿದೆ. ಪ್ರದರ್ಶನಕ್ಕೆ ಪೊಲೀಸ್ ರಕ್ಷಣೆ ಕೊಡಿ, ನಾವು ನಾಟಕ ಮಾಡಬೇಕು ಎಂದು ಥೀಯಟರ್ ಮಾಲೀಕರು ವಿನಂತಿಸಿಕೊಂಡರೂ ಸಹ ನಾಟಕ ಪ್ರದರ್ಶನಕ್ಕೆ ಪೊಲೀಸ್ ಪ್ರೊಟೆಕ್ಷನ್ ಕೊಡಲು ನಿರಾಕರಿಸಿದ್ದಾರೆ. ಇದು ನಿಜಕ್ಕೂ ಖಂಡನೀಯ. ಈ ರೀತಿ ನಾಟಕ ಪ್ರದರ್ಶನವನ್ನು ನಿಲ್ಲಿಸುವುದು ತಪ್ಪಲ್ಲವೇ ಎಂದು ದಿ ಹಿಂದೂ ಪತ್ರಿಕೆಯವರು ಪೊಲೀಸ್ ಕಮಿಶನರ್ ಟಿ.ಸುನೀಲ್‌ಕುಮಾರ್ ಸಾಹೇಬರನ್ನು ಕೇಳಿದಾಗ, ನಾಟಕ ಪ್ರದರ್ಶನಕ್ಕೆ ರಕ್ಷಣೆ ಕೊಡುವ ಮೊದಲು ನಾವು ನಾಟಕದ ಕಂಟೆಂಟ್‌ನ್ನು ಪರಿಷ್ಕರಿಸಬೇಕು. ಈ ನಾಟಕ ಕೆಲವರ ಧಾರ್ಮಿಕ ಭಾವನೆಗಳಿಗೆ ದಕ್ಕೆಯನ್ನುಂಟು ಮಾಡಿ ಶಾಂತಿಯನ್ನು ಕಲಕುವಂತಿದ್ದರೆ ಪ್ರದರ್ಶನಕ್ಕೆ ಅನುಮತಿ ಕೊಡಲಾಗುವುದಿಲ್ಲ ಎಂದು ಹೇಳಿದರು.  ನಾಟಕದ ಸ್ಕ್ರಿಪ್ಟನ್ನು ಪೊಲೀಸರಿಗೆ ಮೊದಲೇ ಕೊಟ್ಟು ಅನುಮತಿ ಪಡೆಯಬೇಕು ಎಂಬ ಇವರ ಮಾತಿನ ಒಳಾರ್ಥ ರಂಗಭೂಮಿಗೆ ಮಾರಕವಾದ ಹೇಳಿಕೆಯಾಗಿದೆ. ನಾಟಕಕ್ಕೆ ಪೊಲೀಸ್ ಅನುಮತಿ ಬೇಕು ಹಾಗೂ ಪ್ರದರ್ಶನ ಪೂರ್ವದಲ್ಲಿ ನಾಟಕದ ಸ್ಕ್ರಿಪ್ಟನ್ನು ಪೊಲೀಸರಿಗೆ ಸಲ್ಲಿಸಿ ಪರ್ಮಿಶನ್ ಪಡೆಯಬೇಕು ಎನ್ನವ ಬ್ರಿಟಿಷ್ ಆಡಳಿತ ಕಾಲದಲ್ಲಿ ಹಾಗೂ ನಂತರ ಎಮರ್ಜನ್ಸಿಯ ಸಮಯದಲ್ಲಿ ಜಾರಿಯಲ್ಲಿದ್ದ ಕರಾಳ ಕಾನೂನನ್ನು ಈಗ ಮತ್ತೆ ಜಾರಿಗೆ ತರುವ ಶಡ್ಯಂತ್ರ ನಡೆಯುತ್ತಿದೆ. ಇದು ರಂಗಾಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗಿದೆ. ಶಿವ ನಾಟಕದ ಹೆಸರನ್ನು ಬದಲಾಯಿಸಲೂ ಪೊಲೀಸ ಅಧಿಕಾರಿಗಳು ಸಲಹೆ ಕೊಟ್ಟಿದ್ದಾರಂತೆ. ಇನ್ನು ಮೇಲೆ ನಾಟಕಕ್ಕೆ ಹೆಸರಿಡಲೂ ಆರಕ್ಷಕರ ಅನುಮತಿ ತೆಗೆದುಕೊಳ್ಳಬೇಕೇನೋ?

ನಾಟಕಕ್ಕೆ ಸೆನ್ಸಾರ್ ಬೇಕು ಎನ್ನುವ ಕರಾಳ ಕಾನೂನು ಪೊಲೀಸರು ತಮಗೆ ಬೇಕಾದಾಗ ಬಳಸುವ ಅಸ್ತ್ರವಾಗಿದೆ. ಮೊದಲು ರಂಗಾಭಿವ್ಯಕ್ತಿಗೆ ಮಾರಕವಾಗುವ ಈ ಕಾನೂನು ತೊಲಗಬೇಕಿದೆ. ಆಧುನಿಕ ರಂಗಭೂಮಿ ಅತ್ಯಂತ ಪ್ರಜ್ಞಾವಂತಿಕೆಯಿಂದ ಬೆಳೆದು ಬಂದಿದೆ. ತನ್ನ ತೆಕ್ಕೆಗೆ ದಕ್ಕುವ ಎಲ್ಲವನ್ನೂ ವೈಚಾರಿಕ ದೃಷ್ಟಿಕೋನದಿಂದ ಪರಿಷ್ಕರಿಸಿಯೇ ನಾಟಕಗಳು ಮೂಡಿಬರುತ್ತವೆ. ಜನವಿರೋಧಿ ನಾಟಕ ಇದ್ದಲ್ಲಿ ಇಲ್ಲಿ ಜನರೇ ತಿರಸ್ಕರಿಸುತ್ತಾರೆ. ಜೀವಪರ ನಿಲುವನ್ನು ಸದಾ ಪ್ರತಿಪಾದಿಸುವ, ಮೌಢ್ಯವನ್ನು ವಿರೋಧಿಸುವ ಹಾಗೂ ಎಲ್ಲಾ ರೀತಿಯ ಶೋಷಣೆಗಳನ್ನು ಪ್ರತಿರೋಧಿಸುವ ಸಜೀವ ಮಾಧ್ಯಮ ರಂಗಭೂಮಿ. ರಂಗಪ್ರದರ್ಶನಗಳನ್ನು ಯಾವುಯಾವುದೋ ಕಾರಣಗಳನ್ನು ಹೇಳಿ ನಿರ್ಬಂಧಿಸುವುದು ಜೀವವಿರೋಧಿ ನಿಲುವಾಗಿದೆ. ಕುಂಬಕರ್ಣನಂತೆ ಮಲಗಿದ್ದು ಯಾವಾಗಲೋ ಎದ್ದು ಬಂದು ಕಾಡುವ ನಾಟಕ ಸೆನ್ಸಾರ್ ಕಾನೂನನ್ನು ರಂಗಭೂಮಿಯವರು ಒಟ್ಟಾಗಿ ವಿರೋಧಿಸಲು ಇದು ಸಕಾಲ. ಸೃಜನಶೀಲ ಮಾಧ್ಯಮವನ್ನು ಕರಾಳ ಕಾನೂನಿನ ಮೂಲಕ ನಿರ್ಬಂಧಿಸಲು ಬಯಸುವ ವ್ಯವಸ್ಥೆಯ ವಿರುದ್ಧ ಪ್ರತಿಭಟಿಸಲು ರಂಗಭೂಮಿಯವರು ಸಿದ್ದರಾಗಬೇಕಿದೆ. ಇಂದು ಶಿವ ನಾಟಕಕ್ಕೆ ಆದ ಪರಿಸ್ಥಿತಿ ನಾಳೆ ಬೇರೆ ನಾಟಕಗಳಿಗೂ ಆಗುವುದರಲ್ಲಿ ಸಂದೇಹವಿಲ್ಲ. ಒಂದು ವೇಳೆ ಮುಂದೆ ಸಂಘಪರಿವಾರದವರ ಕೈಗೆ ರಾಜ್ಯಾಡಳಿತವೇನಾದರೂ ಸಿಕ್ಕರೆ ಪ್ರಗತಿಪರವಾದ ಹಾಗೂ ಪ್ರತಿರೋಧದ ನಾಟಕಗಳನ್ನು ಮಾಡುವುದೇ ಅಸಾಧ್ಯವಾಗುತ್ತದೆ. ರಂಗಭೂಮಿ ಸಾಮಾಜಿಕ ಅವ್ಯವಸ್ಥೆಗೆ ಕನ್ನಡಿ ಹಿಡಿಯುವ ಪ್ರಯತ್ನ ಬಿಟ್ಟು ಮನರಂಜನೆಗಾಗಿ ಮಾತ್ರ ನಾಟಕ ಮಾಡುವ ಅನಿವಾರ್ಯತೆಗೊಳಗಾಗುತ್ತದೆ. ಆದ್ದರಿಂದ ಈಗಲೇ ಎಚ್ಚೆತ್ತು ರಂಗಾಭಿವ್ಯಕ್ತಿ ಸ್ವಾತಂತ್ರ್ಯದ ಪರಿವಾಗಿ ಹಾಗೂ ನಾಟಕದ ಸೆನ್ಸಾರ್ ವಿರುದ್ದ ರಂಗಕರ್ಮಿ ಕಲಾವಿದರೆಲ್ಲಾ ಒಂದಾಗಿ ಸರಕಾರದ ಮೇಲೆ ಒತ್ತಡ ತಂದು ಈ ಕರಾಳ ಕಾನೂನನ್ನು ನಿಷ್ಕ್ರೀಯಗೊಳಿಸಬೇಕಿದೆ. ಯಾವ ನಾಟಕವನ್ನು ಪ್ರದರ್ಶಿಸಬೇಕು, ಯಾವುದನ್ನು ಪ್ರದರ್ಶಿಸಬಾರದು ಎಂದು ನಿರ್ಧರಿಸುವ ಜವಾಬ್ದಾರಿಯನ್ನು ಸಂವೇದನಾ ರಹಿತವಾದ ಪೊಲೀಸರಿಗೆ ಕೊಟ್ಟರೆ ಅನಾಹುತಗಳೇ ಆಗುತ್ತವೆ. ರಂಗಭೂಮಿ ತನ್ನ ಸ್ವಂತಿಕೆಯನ್ನೇ ಕಳೆದುಕೊಳ್ಳುತ್ತದೆ.

ಈ ಮನುವಾದಿಗಳಿಗೆ ಬೇಕಾದದ್ದೂ ಇದೆ. ಬಹುತೇಕ ಬೇರೆಲ್ಲಾ ಸಮೂಹ ಮಾಧ್ಯಮಗಳು ಈಗಾಗಲೇ ಸಂಘಪರಿವಾರದವರ ಪರವಾಗಿ ಶಂಖ ಊದುತ್ತಿವೆ. ಆದರೆ.. ರಂಗಭೂಮಿ ಮಾತ್ರ ಇವತ್ತಿಗೂ ಪೌರಾಣಿಕ, ಐತಿಹಾಸಿಕ ಹಾಗೂ ಸಮಕಾಲೀನ ವಸ್ತುವಿಷಯಗಳನ್ನು ವಿಶ್ಲೇಷಿಸಿ ವೈಚಾರಿಕ ನೆಲೆಗಟ್ಟಿನಲ್ಲಿ ನಾಟಕವನ್ನು ಕಟ್ಟಿಕೊಡುತ್ತಲೇ ಬಂದಿದೆ. ಎಲ್ಲಾ ನಾಟಕಗಳೂ ಹೀಗೆ ಇರುತ್ತವೆ ಎಂದೇನಿಲ್ಲಾ. ಆದರೆ.. ಬಹುತೇಕ ಆಧುನಿಕ ನಾಟಕಗಳಲ್ಲಿ ಜನಪರ ಮೌಲ್ಯಗಳು ಹಾಗೂ ಜೀವಪರ ವಿಚಾರಗಳು ಇದ್ದೇ ಇರುತ್ತವೆ. ವೈಚಾರಿಕತೆಯನ್ನೇ ವಿರೋಧಿಸುವ ಯಥಾಸ್ತಿತಿವಾದಿಗಳು ಪ್ರಗತಿಪರ ಮೌಲ್ಯಗಳನ್ನು ಪ್ರತಿಪಾದಿಸುತ್ತಾ, ಸಮಾಜದಲ್ಲಿ ಹಾಸುಹೊಕ್ಕಾಗಿರುವ ನಂಬಿಕೆಯ ಹೆಸರಿನ ಮೌಢ್ಯಗಳ ಕುರಿತು ಜನರಿಗೆ ತಿಳಿಸುವ ರಂಗಮಾಧ್ಯವನ್ನು ಕಾಲಕಾಲಕ್ಕೆ ವಿರೋಧಿಸುತ್ತಲೇ ಬಂದಿದ್ದಾರೆ. ಪೌರಾಣಿಕ ಕಲ್ಪಿತ ಕತೆಗಳನ್ನೇ ಅಕ್ಷರಶಃ ನಿಜವೆಂದು ನಂಬಿ ಪ್ರತಿಪಾದಿಸುವವರು ಪೌರಾಣಿಕ ನಂಬಿಕೆಗಳನ್ನು ಒಡೆದು ಕಟ್ಟುವ ರಂಗಮಾಧ್ಯಮವನ್ನು ಶತಾಯ ಗತಾಯ ವಿರೋಧಿಸುತ್ತಲೇ ಬಂದಿದ್ದಾರೆ. ಯಾರು ಅದೆಷ್ಟೇ ವಿರೋಧ ವ್ಯಕ್ತಪಡಿಸಿದರೂ ಇಲ್ಲಿವರೆಗೂ ವೈಚಾರಿಕ ನೆಲೆಗಟ್ಟಿನ ರಂಗಭೂಮಿಯನ್ನು ನಿರ್ಬಂಧಿಸಲು ಆಗಿಲ್ಲ. ಪ್ರತಿಭಟನಾ ಮಾಧ್ಯಮವಾದ ರಂಗಕಲೆಯನ್ನು ನಿಲ್ಲಿಸಲು ಸಾಧ್ಯವಿಲ್ಲ. ಆದರೆ.. ರಂಗವಿರೋಧಿ ಪ್ರಯತ್ನಗಳಂತೂ ಜಾರಿಯಲ್ಲಿವೆ. ರಂಗಭೂಮಿಯವರು ಒಂದಾಗಿ ಈ ಶಡ್ಯಂತ್ರಗಳನ್ನು ವಿರೋಧಿಸಲೇಬೇಕಿದೆ.

ಈಗ ಎರಡು ವರ್ಷಗಳ ಹಿಂದೆ ನಾನು ಅಚ್ಚೇ ದಿನ್ ಎನ್ನುವ ಬೀದಿನಾಟಕವನ್ನು ಬರೆದು ನಿರ್ದೇಶಿಸಿದ್ದೆ. ರವೀಂದ್ರ ಕಲಾಕ್ಷೇತ್ರದ ಮುಂದೆ ನಾಟಕ ಪ್ರದರ್ಶನವಾಗುತ್ತಿದ್ದಾಗ ಕೆಲವು ಹಿಂದುತ್ವವಾದಿ ಸಂಘಿಗಳು ಬಂದು ನಾಟಕವನ್ನು ನಿಲ್ಲಿಸಲು ಪ್ರಯತ್ನಿಸಿದರು. ನಾಟಕ ನೋಡಲು ನೆರೆದ ಪ್ರೇಕ್ಷಕರು ಸಂಘಿಗಳ ಹುನ್ನಾರವನ್ನು ಹುಸಿಗೊಳಿಸಿ ನಾಟಕ ಪ್ರದರ್ಶನವನ್ನು ಮುಂದುವರೆಸಲು ಆಗ್ರಹಿಸಿದರು. ನಾಟಕದ ನಂತರವೂ ಬೆರಳೆಣಿಕೆಯಷ್ಟಿದ್ದ ಈ ಮನುವಾದಿಗಳ ಆಟಾಟೋಪ ಮುಂದುವರೆದಿತ್ತು. ರಂಗಾಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹಾಡುಹಗಲೇ ಹಲ್ಲೆಯಾದರೂ ವಿರೋಧಿಸಬೇಕಾಗಿದ್ದ ಹಲವಾರು ರಂಗಕರ್ಮಿಗಳು ಮೌನಕ್ಕೆ ಶರಣಾಗಿದ್ದರು. ಈಗ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿರುವ ಜೆ.ಲೊಕೇಶರವರು ಸಂಘಿಗಳ ಈ ರಂಗವಿರೋಧಿ ದುಷ್ಕೃತ್ಯದ ವಿರುದ್ಧ ಪ್ರತಿಭಟಿಸಲು ಹಲವಾರು ರಂಗದಿಗ್ಗಜರನ್ನು ಕೇಳಿಕೊಂಡರೂ ಯಾರೂ ಪ್ರತಿಭಟಿಸಲು ಮುಂದೆ ಬರಲಿಲ್ಲ. ಕೆಲವು ಪತ್ರಿಕೆಗಳು ನಾಟಕ ಪ್ರದರ್ಶನಕ್ಕೆ ಅಡ್ಡಿಪಡಿಸಿದ್ದನ್ನು ವಿರೋಧಿಸಿ ಬರೆದರು. ಗೌರಿ ಲಂಕೇಶರವರಂತೂ ಇಂಗ್ಲೀಷ್ ಪತ್ರಿಕೆಯಲ್ಲಿ ಲೇಖನ ಬರೆದು ಸಂಘಿಗಳ ಕುತಂತ್ರವನ್ನು ಬಯಲು ಮಾಡಿದ್ದರು. ಆಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿದ್ದ ಉಮಾಶ್ರೀಯವರು ಮಾತ್ರ ಸಾರ್ವಜನಿಕವಾಗಿಯೇ ಯಾರೂ ಎಷ್ಟೇ ಅಡೆತಡೆ ಒಡ್ಡಿದರೂ ರಂಗಭೂಮಿಯ ಒಂದೇ ಒಂದು ಕೂದಲನ್ನೂ ಅಲ್ಲಾಡಿಸಲು ಸಾಧ್ಯವಿಲ್ಲ ಎಂದು ಹೇಳಿ ರಂಗತಂಡಕ್ಕೆ ಬೆಂಬಲಿಸಿ ತಮ್ಮ ರಂಗಬದ್ದತೆಯನ್ನು ತೋರಿದ್ದರು. ಈಗ ಮತ್ತೆ ಶಿವ ನಾಟಕದ ಪ್ರದರ್ಶನಕ್ಕೆ ಅದೇ ಸಂಘಪರಿವಾರದ ಮನಸ್ಥಿತಿಯವರಿಂದ ಅಡೆತಡೆ ಉಂಟಾಗಿದೆ. ಈಗಲಾದರೂ ರಂಗಕರ್ಮಿ ಕಲಾವಿದರು ಒಟ್ಟಾಗಿ ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿ ಹಾಗೂ ಸಂಘಪರಿವಾರದ ರಂಗವಿರೋಧಿತನದ ವಿರುದ್ಧವಾಗಿ ಪ್ರತಿಭಟನೆಯನ್ನು  ಹಮ್ಮಿಕೊಳ್ಳಬೇಕಿದೆ. ನಾಟಕದ ಸೆನ್ಸಾರ್ ಕಾನೂನನ್ನು ರದ್ದು ಮಾಡಲು ಸರಕಾರದ ಮೇಲೆ ಒತ್ತಡ ತರಬೇಕಿದೆ. ಇಲ್ಲವಾದರೆ ಮೊನ್ನೆ ನನಗೆ ಹಾಗೂ ನನ್ನ ತಂಡಕ್ಕಾದದ್ದು ನಿನ್ನೆ ಶಿವ ನಾಟಕದ ತಂಡಕ್ಕಾಗಿದೆ. ನಾಳೆ ಬೇರೆ ನಾಟಕಗಳ ಪ್ರದರ್ಶನಕ್ಕೆ ತೊಂದರೆ ತಪ್ಪಿದ್ದಲ್ಲ.

ಹಿರಿಯ ರಂಗಕರ್ಮಿಗಳು ಯುವ ರಂಗನಿರ್ದೇಶಕರನ್ನು ಬೆಂಬಲಿಸಿ ದೈರ್ಯವಾಗಿ ಮುನ್ನುಗ್ಗಲು ದೈರ್ಯ ತುಂಬಬೇಕಿದೆ. ದಯಾಸಿಂಧು ಸಕ್ರೆಪಟ್ನ ಎನ್ನುವ ಯುವಕ ಹೊಸದಾಗಿ ಮೊದಲ ಬಾರಿಗೆ ನಾಟಕ ನಿರ್ದೇಶಿಸಿದ್ದಾರೆ. ಈಗ ತಾನೆ ರಂಗಭೂಮಿಗೆ ಅಡಿ ಇಡುತ್ತಿದ್ದಾರೆ. ಇಂತಹ ದುರ್ಘಟನೆಗಳಾದಾಗ ಏನು ಮಾಡಬೇಕು ಎಂದು ಗೊತ್ತಾಗದೇ ಕಂಗಾಲಾಗಿ ಕುಳಿತಿದ್ದಾರೆ. ಇನ್ನು ಮುಂದೆ ಪ್ರದರ್ಶನಗಳನ್ನು ಮಾಡಬೇಕೊ ಬೇಡವೋ ಎನ್ನುವ ಸಂದಿಗದ್ದತೆಯಲ್ಲಿ ಆಘಾತಕ್ಕೊಳಗಾಗಿದ್ದಾರೆ. ಇಡೀ ಟೀಮ್ ಭಯಗ್ರಸ್ತವಾಗಿದೆ. ಯಾರಾದರೂ ಪೋನ್ ಮಾಡಿದರೂ ಮಾತಾಡಲು ಹಿಂದೆ ಮುಂದೆ ನೋಡುವಂತಹ ಆತಂಕದ ಪರಿಸ್ಥಿತಿಯಲ್ಲಿದ್ದಾರೆ. ಎಲ್ಲಿ ಯಾವಾಗ ಯಾರು ಬಂದು ಹಲ್ಲೆ ಮಾಡುತ್ತಾರೋ ಎಂದು ಭಯಭೀತರಾಗಿದ್ದಾರೆ. ಆತಂಕದಲ್ಲಿರುವ ರಂಗತಂಡಕ್ಕೆ ಇಡೀ ರಂಗಭೂಮಿಯವರು ದೈರ್ಯವನ್ನು ಹೇಳುವ ಕೆಲಸ ಮೊದಲು ಆಗಬೇಕಿದೆ. ನಿಮ್ಮ ಜೊತೆಗೆ ನಾವಿದ್ದೇವೆ ಹೆದರದೇ ನಾಟಕ ಪ್ರದರ್ಶನ ಮುಂದುವರೆಸಿ ಎಂದು ಬೆನ್ನುತಟ್ಟಿ ಬೆಂಬಲಿಸಬೇಕಿದೆ.

ಆಂಗ್ಲನಾಟಕ ಮಾಡುವವರು ತಮ್ಮ ಸುತ್ತಲೂ ಒಂದು ಕೋಟೆ ಕಟ್ಟಿಕೊಂಡು ತಮ್ಮದೇ ಆದ ಪ್ರೇಕ್ಷಕವರ್ಗವನ್ನು ಹೊಂದಿ ತಮ್ಮ ಪಾಡಿಗೆ ತಾವು ವೀಕೆಂಡ್ ನಾಟಕ ಮಾಡುತ್ತಾ ಇರುತ್ತಾರೆ ಎಂಬುದೂ ಸತ್ಯ. ಕನ್ನಡ ರಂಗಭೂಮಿಗೆ ಏನೇ ಸಮಸ್ಯೆ ಆದರೂ ಆಂಗ್ಲ ಭಾಷೆಯ ನಾಟಕ ಮಾಡುವ ತಂಡದವರು ಸ್ಪಂದಿಸುವುದಿಲ್ಲಾ ಎನ್ನುವುದೂ ಸುಳ್ಳಲ್ಲಾ. ಅವರು ಕನ್ನಡ ರಂಗಭೂಮಿಯವರಲ್ಲಾ ಬಿಡಿ.. ಇಂಗ್ಲೀಷ್ ನಾಟಕ ಮಾಡುವವರು ಎಂದು ಅಸಹನೆ ತೋರುವುದು ಸರಿಯಾದ ನಿಲುವಲ್ಲ. ನಾಟಕ ಯಾವ ಭಾಷೆಯಲ್ಲಿದ್ದರೇನು ಅದೂ ಕೂಡಾ ಕರ್ನಾಟಕದ ರಂಗಭೂಮಿಗೆ ಹೊರತಲ್ಲವಲ್ಲಾ. ನಾಟಕ ನಿರ್ಮಿಸುವವರು, ಕಲಾವಿದರುಗಳು ಇಂಗ್ಲೆಂಡಿನಿಂದ ಬಂದವರಂತೂ ಖಂಡಿತಾ ಅಲ್ಲಾ. ಅವರೂ ಕನ್ನಡಿಗರೇ. ಇಂಗ್ಲೀಷ್‌ನಲ್ಲಿ ನಾಟಕ ಮಾಡುತ್ತಾರಷ್ಟೇ. ಕನ್ನಡ ರಂಗಭೂಮಿಯವರ ಜೊತೆಗೆ ಬೆರೆತು, ಕನ್ನಡ ರಂಗಭೂಮಿಯ ಕಷ್ಟ ಸುಖಕ್ಕೆ ಸಹಭಾಗಿಯಾಗಬೇಕೆಂದು ಅವರಿಗೆ ಇವತ್ತಿಲ್ಲಾ ನಾಳೆ ಮನವರಿಕೆ ಆಗುತ್ತದೆ. ಇಲ್ಲವೇ ಯಾರಾದರೂ ತಿಳಿಸಿ ಹೇಳಬೇಕು. ಆದರೆ.. ನಿಂತಿದ್ದು ಕನ್ನಡ ನಾಟಕವಲ್ಲವಲ್ಲ.. ಇಂಗ್ಲೀಷ್ ನಾಟಕ ನಿಂತರೆ ನಿಲ್ಲಲಿ ಎಂದು ನಿರ್ಲಕ್ಷಿಸುವ ಸಮಯವಿದಲ್ಲ. ಸಂಘಪರಿವಾರದವರು ದಿನದಿಂದ ದಿನಕ್ಕೆ ದೈತ್ಯರಾಗಿ ಬೆಳೆಯುತ್ತಿದ್ದಾರೆ. ಇಡೀ ದೇಶದ ತುಂಬಾ ತಮ್ಮ ಹಿಂದುತ್ವದ ವಿಷಬೀಜವನ್ನು ಬಿತ್ತುತ್ತಲೇ ಬರುತ್ತಿದ್ದಾರೆ. ಅವರ ಜನವಿರೋಧಿ ನೀತಿಯನ್ನು ವಿರೋಧಿಸುವ ಎಲ್ಲರನ್ನೂ ಸಾಮ ಬೇಧ ದಂಡಾದಿಗಳ ಪ್ರಯೋಗದಿಂದ ಮೌನವಾಗಿಸಲು ಪ್ರಯತ್ನಿಸುತ್ತಲೇ ಇದ್ದಾರೆ. ಇಂತಹ ಸಂದರ್ಭದಲ್ಲಿ ರಂಗಭೂಮಿಯವರು ಯಾವ ಭಾಷೆಯ ನಾಟಕ ಎಂದು ನೋಡದೇ ರಂಗಾಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಆದ ಹಲ್ಲೆಯನ್ನು ಖಂಡಿಸಲೇಬೇಕಿದೆ. ಆಗಾಗ ನಾಟಕದ ಮೇಲೆ ಹೇರಿ ಹೆದರಿಸಲಾಗುವ ಸೆನ್ಸಾರ್‌ಶಿಪ್ ಕಾನೂನನ್ನು ಶತಾಯ ಗತಾಯ ವಿರೋಧಿಸಲೇಬೇಕಿದೆ. ರಂಗಭೂಮಿ ತನ್ನ ಪ್ರತಿಭಟನಾತ್ಮಕ ಅಸ್ಮಿತೆಯನ್ನು ಉಳಿಸಿಕೊಳ್ಳಲೇಬೇಕಿದೆ. ಕನ್ನಡ ರಂಗಭೂಮಿ ಉಳಿಯಬೇಕಾದರೆ ರಂಗಚಟುವಟಿಕೆಗಳ ಜೊತೆಜೊತೆಗೆ ರಂಗಚಳುವಳಿಗಳೂ ಸಹ ಬೆಳೆಯಬೇಕಿದೆ.

ಲೋಕಸಭೆಯ ಚುನಾವಣೆಗಳು ಇನ್ನೇನು ಹತ್ತಿರ ಬಂದಿದೆ. ಕರ್ನಾಟಕದಲ್ಲಿ ಸಂಘಪರಿವಾರದವರಿಗೆ ಮತದಾರರನ್ನು ಬಿಜೆಪಿ ಪರವಾಗಿ ಓಲೈಸಲು ಇಸ್ಯೂಗಳು ಬೇಕಾಗಿವೆ. ಕೇಂದ್ರ ಸರಕಾರದ ವೈಪಲ್ಯಗಳನ್ನು ಮರೆಮಾಚಲು ಜನರ ಗಮನವನ್ನು ಬೇರೆಡೆ ಸೆಳೆಯಲೂ ಇಂತಹ ಭಾವನಾತ್ಮಕ ವಿಷಯಗಳನ್ನು ಸಂಘಪರಿವಾರದವರು ದೊಡ್ಡದು ಮಾಡುತ್ತಲೇ ಇರುತ್ತಾರೆ. ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಅದರಲ್ಲೇ ಬಿಜೆಪಿಯ ಕಮಲವನ್ನು ಅರಳಿಸುವ ತಂತ್ರಗಾರಿಕೆಯಲ್ಲಿ ಸಿದ್ದಹಸ್ತರಾಗಿರುವ ಈ ಮನುವಾದಿಗಳು ಈಗ ನಾಟಕದ ಹೆಸರಿನ ಹಿಂದೆ ಬಿದ್ದಿದ್ದಾರೆ. ನೋಡಿ ನಮ್ಮ ದೇವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತದೆ, ಸಲಿಂಗರತಿ ನಾಟಕಕ್ಕೆ ಶಿವ ಎಂದು ಹೆಸರಿಟ್ಟು ನಮ್ಮ ಪರಮ ಪವಿತ್ರ ದೇವರ ಹೆಸರನ್ನು ಕೆಡಿಸಲಾಗುತ್ತಿದೆ ಎಂದು ಅಪಪ್ರಚಾರ ಮಾಡಿ ಜನರಲ್ಲಿ ಇರುವ ದೈವ ನಂಬಿಕೆಯನ್ನು ಉದ್ದೀಪನಗೊಳಿಸುವ ಪ್ರಯತ್ನವನ್ನು ವಿಶ್ವಹಿಂದೂ ಪರಿಷತ್ತಾದಿಯಾಗಿ ಎಲ್ಲಾ ಸಂಘಪರಿವಾರದವರು ಮಾಡಲು ಹವಣಿಸುತ್ತಿದ್ದಾರೆ. ದೇವರ ಹೆಸರಲ್ಲಿ ಜನರ ಭಾವನೆಗಳನ್ನು ಕೆರಳಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅದಕ್ಕೆ ಶಿವ ನಾಟಕವೂ ಹೊರತಲ್ಲ. ಎಲ್ಲಾ ದೇವರ ಹೆಸರಿನ ಬಾರ್‌ಗಳಲ್ಲಿ ಕುಡಿದು ಕುಣಿದು ಬರುವ ಮೂಲಭೂತವಾದಿಗಳಿಗೆ ದೇವರ ಹೆಸರಿನ ಹೆಂಡದಂಗಡಿಗಳಲ್ಲಿ ಮತ್ತೇರಿಸಿಕೊಳ್ಳುವುದು ಅಪ್ಯಾಯಮಾನವಾಗುತ್ತದೆಯೇ ಹೊರತು ದೇವರ ಹೆಸರಿನ ನಾಟಕದಲ್ಲಿ ಜನಪರವಾದದ್ದನ್ನು ತೋರಿಸಿದರೆ ಅಸಹನೆ ಹೆಚ್ಚಾಗುತ್ತದೆ. ಸಾಂಸ್ಕೃತಿಕ ಸಂಗತಿಗಳನ್ನೂ ಸಹ ಅದು ಹೇಗೆ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲಾಗುತ್ತದೆ ಎನ್ನುವುದಕ್ಕೆ ಪುಟ್ಟ ಉದಾಹರಣೆ ಶಿವ ನಾಟಕದ ಪ್ರದರ್ಶನ ನಿಲುಗಡೆ. 

ಈ ಶಿವ ನಾಟಕ ಪ್ರದರ್ಶನ ವಿರೋಧಿಸಿದವರ ವಿರುದ್ಧ ಮೊಟ್ಟ ಮೊದಲಿಗೆ ಕರ್ನಾಟಕ ನಾಟಕ ಅಕಾಡೆಮಿಯು ದ್ವನಿ ಎತ್ತಿದ್ದು ಸ್ವಾಗತಾರ್ಹವಾಗಿದೆ. ವಾಟ್ಸಾಪ್, ಫೇಸ್ಬುಕ್‌ಗಳಲ್ಲಿ ಸಂದೇಶವನ್ನು ಕಳುಹಿಸಿ ನಾಟಕ ಪ್ರದರ್ಶನ ನಿಲ್ಲಿಸಿದ ರಂಗವಿರೋಧಿ ಶಕ್ತಿಗಳು ಹಾಗೂ ಅವರಿಗೆ ಪೂರಕವಾಗಿ ನಿಂತ ಪೊಲೀಸ್ ವ್ಯವಸ್ಥೆಯ ಕುರಿತು ತಮ್ಮ ವಿರೋಧ ವ್ಯಕ್ತಪಡಿಸಿತು. ಸರಕಾರಿ ಅನುದಾನಿತ ನಾಟಕ ಅಕಾಡೆಮಿಯಂತಹ ಸಂಸ್ಥೆಯೊಂದು ರಂಗಭೂಮಿಯ ಹಿತಾಸಕ್ತಿಗಾಗಿ ರಂಗವಿರೋಧಿ ಹಿತಾಸಕ್ತಿಗಳನ್ನು ಸಾರ್ವಜನಿಕವಾಗಿ ಖಂಡಿಸಿ ಕ್ರಮಕ್ಕಾಗಿ ಆಗ್ರಹಿಸಿದ್ದು ಸ್ತುತ್ಯಾರ್ಹವಾಗಿದೆ. ನಾಟಕ ಅಕಾಡೆಮಿಯು ಸಂಸ್ಕೃತಿ ಇಲಾಖೆಯ ಸಚಿವರಿಂದ ಹಿಡಿದು ಗೃಹ ಮಂತ್ರಿಗಳ ತನಕ ಪತ್ರವನ್ನೂ ಬರೆದು ನಾಟಕಕ್ಕೆ ತಡೆಯೊಡ್ಡಿದವರ ಮೇಲೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಹಾಗೂ ನಾಟಕದ ಸೆನ್ಸಾರ್ ಕಾನೂನನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದ್ದು ಮಾದರಿಯಾಗಿದೆ. ರಂಗಕರ್ಮಿಗಳೆಲ್ಲರನ್ನೂ ಒಟ್ಟುಗೂಡಿಸಿ ನಾಟಕದ ಮೇಲಿನ ಸೆನ್ಸಾರ್ ಕಾನೂನನ್ನು ತೆರೆವುಗೊಳಿಸುವ ಚಳುವಳಿಯ ನೇತೃತ್ವವನ್ನೂ ಸಹ ನಾಟಕ ಅಕಾಡೆಮಿ ವಹಿಸಿಕೊಂಡರೆ ಕರಾಳ ಕಾನೂನನ್ನು ತೆರವುಗೊಳಿಸಿದ ಕೀರ್ತಿ ಸಿಕ್ಕುತ್ತದೆ. ರಂಗಭೂಮಿಯವರಿಗೆ ಸಂಪೂರ್ಣ ಅಭಿವ್ಯಕ್ತಿ ಸ್ವಾತಂತ್ರ್ಯ ದಕ್ಕುತ್ತದೆ.

ಈ ಕೂಡಲೇ ಶಿವ ನಾಟಕದ ಪ್ರದರ್ಶನಕ್ಕೆ ಯಾವುದೇ ಶರತ್ತುಗಳಿಲ್ಲದೇ ಪೊಲೀಸರು ರಂಗಮಂದಿರಕ್ಕೆ ಹಾಗೂ ಕಲಾವಿದರಿಗೆ ರಕ್ಷಣೆ ಕೊಡಬೇಕು. ಗುಂಪು ಕಟ್ಟಿಕೊಂಡು ಬಂದು ನಾಟಕ ಪ್ರದರ್ಶನ ನಿಲ್ಲಿಸಲು ದಮಕಿ ಹಾಕಿದ ಹಿಂದುತ್ವವಾದಿ ಸಂಘಟನೆಯವರ ಮೇಲೆ ಕೇಸ್ ದಾಖಲಿಸಿ ಬಂಧಿಸಬೇಕು. ಮತ್ತು ಹವ್ಯಾಸಿ ನಾಟಕಗಳ ಪ್ರದರ್ಶನಕ್ಕೆ ಪೊಲೀಸ್ ಅನುಮತಿ ತೆಗೆದುಕೊಳ್ಳಬೇಕು ಎನ್ನುವ ಕರಾಳ ಕಾನೂನನ್ನು ಸರಕಾರವು ತೆರವುಗೊಳಿಸಿ ರಂಗಭೂಮಿಯವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬೆಂಬಲಿಸಬೇಕು ಎಂದು ಕರ್ನಾಟಕದ ಸಮಸ್ತ ರಂಗಕರ್ಮಿ ಕಲಾವಿದರುಗಳು, ಹೋರಾಟಗಾರರು, ಸಾಹಿತಿ ಬರಹಗಾರರು ಸರಕಾರವನ್ನು ಒತ್ತಾಯಿಸಬೇಕಿದೆ. ರಂಗಾಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಬೇಕಿದೆ. ರಂಗಭೂಮಿ ಪ್ರತಿಭಟನಾ ಮಾಧ್ಯಮವಾಗಿಯೇ ಬೆಳೆಯಬೇಕಿದೆ.

(ಶಿವ ನಾಟಕದ ಪ್ರದರ್ಶನವನ್ನು ನಿಲ್ಲಿಸಿದವರ ವಿರುದ್ದ ಕ್ರಮಕೈಗೊಳ್ಳಲು ಒತ್ತಾಯಿಸಿ ಹಾಗೂ ನಾಟಕ ಪ್ರದರ್ಶನಕ್ಕೆ ರಕ್ಷಣೆ ಕೊಡಲು ಕೋರಿ ಪೊಲೀಸ್ ಕಂಟ್ರೋಲ್ ರೂಂ ವಾಟ್ಸಾಪ್ ನಂ. 95135 38637 ಗೆ ಎಲ್ಲರೂ ಸಂದೇಶಗಳನ್ನು ಕಳಿಸುವ ಅಭಿಯಾನ ಶುರುಮಾಡಿ ಪೊಲೀಸರ ಮೇಲೆ ಒತ್ತಡ ತರಲು ವಿನಂತಿ) 

 -ಶಶಿಕಾಂತ ಯಡಹಳ್ಳಿ




ಬುಧವಾರ, ಸೆಪ್ಟೆಂಬರ್ 12, 2018

ಅಕಾಡೆಮಿ ಅಧ್ಯಕ್ಷರ ಅಸಂಗತ ಪ್ರಸಂಗ: (ಪ್ರಹಸನ)



(ನಾಟಕ ಅಕಾಡೆಮಿಯ ಕಛೇರಿಯ ಲಾಬಿಯಲ್ಲಿ ಅಕಾಡೆಮಿ ಅಧ್ಯಕ್ಷರು ಅಪರೂಪಕ್ಕೆ ಕೂಲ್ ಮೂಡಲ್ಲಿ ವಿರಾಜಮಾನರಾಗಿದ್ದಾರೆ. ಆಗ ಸುಮಾರು ಎಂಬತ್ತು  ವರ್ಷದ ವ್ಯಕ್ತಿಯೊಬ್ಬರು ವಿನೀತಭಾವದಿಂದ  ಪ್ರವೇಶಿಸಿ..)

ವ್ಯಕ್ತಿ : (ಮೆಲ್ಲಗಿನ ದ್ವನಿಯಲ್ಲಿ)  ಸಾರ್…  ನಮಸ್ಕಾರ ಸಾರ್... 

ಅಧ್ಯಕ್ಷರು : (ಜೋರಾಗಿ ನಾಟಕೀಯತೆಯಿಂದಾ) ಓಹೋಹೋ ನಮಸ್ಕಾರ... ಬರಬೇಕು ಬರಬೇಕು ಹಿರಿಯರು.. ಕೂತ್ಕೊಳ್ಳಿ... ಹೇಳಿ ಏನಾಗಬೇಕಿತ್ತು..

ವ್ಯಕ್ತಿ : (ಹೆದರಿ ಎರಡು ಹಜ್ಜೆ ಹಿಂದಿಟ್ಟು.. ಮುಂದೆ ಬಂದು ಸೋಫಾದ ಮೂಲೆಯಲ್ಲಿ ಆತಂಕದಿಂದ ಕುಳಿತುಕೊಳ್ಳುತ್ತಾ) ಸಾರ್.. ಅದು..ಅದು.. 

ಅಧ್ಯಕ್ಷರು : ಅಯ್ಯೋ  ಪರವಾಗಿಲ್ಲ ಹೇಳ್ರಿ.. ಏನಾಗಬೇಕಿತ್ತು...

ವ್ಯಕ್ತಿ : ಅಂತಾದ್ದೇನಿಲ್ಲ ಸರ್... ಅಧ್ಯಕ್ಷರನ್ನ ಕಾಣಬೇಕಿತ್ತು...

ಅಧ್ಯಕ್ಷರು : ಪರವಾಗಿಲ್ಲ ಅಂತಾ ಹೇಳಿದ್ನಲ್ಲಾ.. ಅದೇನಾಗಬೇಕಿತ್ತು  ಅದನ್ನ ಮೊದಲು ಹೇಳ್ರೀ..

ವ್ಯಕ್ತಿ : ಸಾರ್... ಅದು.. ಅದು ಏನಂದ್ರೆ... ಅದು...

ಅಧ್ಯಕ್ಷರು : ಇಲ್ಲಿಗೆ ಯಾಕೆ ಬಂದ್ರಿ ಅನ್ನೋದೆ ಮರ್ತಿರೋ ಹಾಗೆ ಕಾಣ್ಸುತ್ತೆ. ಎಷ್ಟೇ ಆದ್ರೂ ನಿಮಗೂ ತುಂಬಾ ವಯಸ್ಸಾಗಿದೆ, ವಯಸ್ಸಲ್ಲಿ ಮರೆವು ಸಹಜ... ಈಗ ನೋಡ್ರಿ ನನ್ನಂತಾ ನನಗೇನೇ ಯಾರ ಹೆಸರೂ ನೆನಪೇ ಇರೋದಿಲ್ಲ..  ವಿದ್ಯಾರಣ್ಯನಿಗೆ ಹಿರಣ್ಣಯ್ಯ ಅಂತೇನೆ.. ಗಣೇಶ ಅನ್ನೋರಿಗೆ ದಿನೇಶಾ ಅಂತೇನಿ.. ಇನ್ಯಾರಿಗೋ ಮತ್ತೇನೋ ಕರೀತೇನೆ.. ಇನ್ನು ನಿಮಗೆ ಮರೆವು ಅದೂ ವಯಸ್ಸಲ್ಲಿ ಸಹಜ ಬಿಡಿ... ನಿಧಾನವಾಗಿ ನೆನಪಿಸಿಕೊಂಡು ಹೇಳಿ... ಅಂದಂಗೆ ನಿಮ್ಮ ಹೆಸರೇನು ಯಜಮಾನ್ರೆ..

ವ್ಯಕ್ತಿ : ಸಾರ್.. ನನ್ನ ಹೆಸರು ಏನಂತಾ ಕೇಳಿದ್ರಾ? ವೆಂಕಟಶೇಷಾದ್ರಿ ಅಚ್ವುತ್ ಆಚಾರಿ ಅಂತಾ ಸಾರ್.. ನಾನು ವೃತ್ತಿ ರಂಗಭೂಮಿ ಕಲಾವಿದಾ, ಕಾಲದಲ್ಲಿ ಎಷ್ಟೊಂದು ನಾಟಕ ಮಾಡಿದ್ದೀನಿ... ಎಷ್ಟೊಂದು ಪಾತ್ರಾ ಹಾಕೀದೀನಿ. ಭಕ್ತ ಪ್ರಹ್ಲಾದ ನಾಟಕದಾಗ ದುರ್ಯೋಧನನ ಪಾತ್ರ ಅದ್ಬುತವಾಗಿ ಮಾಡ್ತಿದ್ದೆ...

ಅಧ್ಯಕ್ಷರು : ನಾಟಕಕ್ಕೂ ದುರ್ಯೋಧನನಿಗೂ ಏನ್ರೀ ಕನೆಕ್ಷನ್ನು.. ಬಹುಷಃ  ಎಲ್ಲಿರುವನು ನಿನ್ನ ಹರಿ’ ಎಂದು ಅಬ್ಬರಿಸುವ  ಕೀಚಕನ ಪಾತ್ರ ಮಾಡಿರಬಹುದು ನೀವು ಆರಾಧ್ಯರೆ..

ವ್ಯಕ್ತಿ : ನಾನು ಆರಾಧ್ಯ ಅಲ್ಲಾ ಸಾರ್ ಆಚಾರಿ ಅಂತಾ.. ಅದು ಕೀಚಕನ ಪಾತ್ರ  ಅಲ್ಲಾ.. ಅದು ಅದು.. ಹಾಂ ನೆನಪಾಯ್ತು.. ಹಿರಣ್ಯಕಶಪು ಪಾತ್ರ... ಆಹಾ ಗದೆ ಹಿಡ್ಕೊಂಡು ಸ್ಟೇಜಿಗೆ ಬಂದ್ರೆ ನಾಟಕ ಮುಗಿಯೋವರೆಗೂ ಜನಾ ಸಿಳ್ಳೆ ಹೊಡಿತಾನೇ ಇರ್ತಿದ್ರು.. ಚೆಪ್ಪಾಳೆ ಹೊಡೀತಾನೇ ಇರ್ತಿದ್ರು.. ಇನ್ನೂ ಆ ಸಿಳ್ಳೆ ಚಪ್ಪಾಳೆಗಳ ಸದ್ದು ನನ್ನ ಕಿವಿಯಲ್ಲಿ ಗುಣುಗುಣುಸ್ತಾನೇ ಇವೆ..

ಅಧ್ಯಕ್ಷರು : ಹೌದೌದು.. ಪಾತ್ರದ ತಾಕತ್ತೇ ಅಂತಾದ್ದು.. ನಿಮ್ಮಂತಾ ದೊಡ್ಡ ಕಲಾವಿದರು ಅಕಾಡೆಮಿ ಕಡೆ ಯಾಕೆ ಬಂದ್ರಿ.. ಈಗಲಾದ್ರೂ ಏನಾದ್ರೂ ನೆನಪಾಯ್ತಾ ಅಯ್ಯಂಗಾರರೆ..

ವ್ಯಕ್ತಿ : ಅಯ್ಯೋ ಅಯ್ಯಂಗಾರ ಅಲ್ಲಾ ಸಾರ್... ನಾನು ಆಚಾರ್, ಅಚ್ಚುತ ಆಚಾರಿ, ಇನ್ನೂ ಪೂರ್ತಿ ಹೆಸರು ಹೇಳಬೇಕೆಂದರೆ ವೆಂಕಟಶೇಷಾದ್ರಿ  ಅಚ್ಚುತ್ ಆಚಾರಿ.. ಊರ್ಪ್ ಕಲಾಕೇಸರಿ ನಟಭಯಂಕರ ಆಚಾರ್... 

ಅಧ್ಯಕ್ಷರು : ಓಹೋಹೋ ಗೊತ್ತಾಯ್ತು ಬಿಡಿ.. ಗೊತ್ತಾಯ್ತು.. ನಟಭಯಂಕರರು ಅಕಾಡೆಮಿಗೆ ಯಾಕೆ ಬಂದಿದ್ದು..?

ವ್ಯಕ್ತಿ : ಸರ್.. ಅದು.. ಅದು..ಅದೇನಪಾ ಅಂತಂದ್ರೆ...

ಅಧ್ಯಕ್ಷರು : ಅದೇ ಅದು ಏನು ಅಂತಾ ಬೇಗ ಹೇಳ್ರಿ.. ಇಲ್ಲಾಂದ್ರೆ ನಂಗೂ ಎಲ್ಲಾ  ಮರ್ತೋಗುತ್ತೆ..

ವ್ಯಕ್ತಿ : ಸಾರ್.. ನಂಗೆ...ಹೆಂಗಾರ ಮಾಡಿ ಸಲ ಕೊಡಿಸ್ಲೇಬೇಕು ಸಾರ್...

ಅಧ್ಯಕ್ಷರು : ಅದೇ ಏನು ಕೊಡಿಸ್ಬೇಕು ಹೇಳಿ ಆದ್ಯರೆ...

ವ್ಯಕ್ತಿ : ಅಯ್ಯೋ, ಆದ್ಯರೆ ಅಲ್ಲಾ ಸಾರ್, ಆಚಾರಿ ಅನ್ನಿ ಸಾಕು.. ಅಕಾಡೆಮಿಯಿಂದ ಅದೇನೋ ಕೋಡ್ತಾರಂತಲ್ಲಾ.. ಅವಾರ್ಡು.. ನಂಗೂ ಒಂದು ತಗೊಂಡು ಸಾಯಬೇಕು ಅಂತಾ ಬಾಳಾ ಇಚ್ಚಾ ಆಗೇದ.. ನಾನೂ ಒಬ್ಬ ವೃತ್ತಿ ರಂಗಭೂಮಿಯ ಕಲಾವಿದ ಅನ್ನೋದನ್ನ  ನನ್ನ ಆ ಕಾಲದ ಅಭಿಮಾನಿಗಳೇ ಮರ್ತೆ ಬಿಟ್ಟಿದ್ದಾರೆ ಸಾರ್.. ನೀವೊಂದ್ ಅವಾರ್ಡ ಕೊಟ್ಟಬಿಟ್ರೆ ಅವ್ರೆಲ್ಲಾ ಮತ್ತೆ ನನ್ನ ನೆನಸ್ಕೋತಾರೆ. ‘ಈ ನಟ ಭಯಂಕರ ಅಚಾರಿ ಇನ್ನೂ ಬದ್ಕಿದ್ದಾನೆ’ ಅಂತಾ ತಿಳ್ಕೊತಾರೆ.. ಹೆಂಗಾದ್ರೂ ಮಾಡಿ ಸಲ ಒಂದೇ ಒಂದು ಅವಾರ್ಡ ಕೊಡ್ಸಿ ಸಾರ್... ನೆಮ್ಮದಿಯಾಗಿ ಸಾಯ್ತೀನಿ..

ಅಧ್ಯಕ್ಷರು : ಅಲ್ಲಾ ಆರಾದ್ಯರೆ, ಅಲ್ಲಲ್ಲಾ ಅಯ್ಯಂಗಾರರೆ.. ಹೋ ಹಾಳು ಮರವು... ಹಾಂ ನೆನಪಾಯ್ತು ನೋಡಿ.. ಆಚಾರರೆ... ನೀವು ಎಷ್ಟೊಂದು ನಾಟಕದಲ್ಲಿ ಮೇನ್ ಪಾತ್ರಾ ಮಾಡೀರಿ ಹೌದಲ್ವೊ...

ವ್ಯಕ್ತಿ : ಹೌದರೀ ಸರ ಹೌದು..

ಅಧ್ಯಕ್ಷರು : ನಿಮ್ಮ ಅಭಿನಯ ನೋಡಿ ಪ್ರೇಕ್ಷಕರು ಹುಚ್ಚೆದ್ದು ಕುಣಿದು ವನ್ಸ್ ಮೋರ್ ಅಂತಿದ್ರು ಹೌಂದಲ್ಲೋ..

ವ್ಯಕ್ತಿ :  (ಹೆಮ್ಮೆಯಿಂದ)  ಹೌದರೀ ಸರ ಹೌದು..ಹೌದೌದು..

ಅಧ್ಯಕ್ಷರು : ನಿಮ್ಮ ಭಯಂಕರ ನಟನೆ ನೋಡಿ ಜನರು ನಿಮ್ಮ ಪ್ರತಿ ಡೈಲಾಗಿಗೂ ಚಪ್ಪಾಳೆ ಮೇಲೆ ಚಪ್ಪಾಳೆ ಹೊಡಿತಾನೇ ಇರ್ತಿದ್ರು.. ಹೌಂದಲ್ಲೋ..

ವ್ಯಕ್ತಿ : (ಭಾರೀ ಖುಷಿಯಿಂದ ) ಹೌದರೀ ಸರ ಹೌದೌದು.. ನೂರಕ್ಕ ನೂರು ಖರೇ ಮಾತ್ರಿ ನಿಮ್ದು..

ಅಧ್ಯಕ್ಷರು : ನಿಮ್ಮಂತಾ ದೊಡ್ಡ ಕಲಾವಿದರಿಗೆ ಒಂದೊಂದು ಚಪ್ಪಾಳೆನೂ ಒಂದೊಂದು ಅವಾರ್ಡ ಸಿಕ್ಕಿದ್ದಕ್ಕಿಂತ ಹೆಚ್ಚು ಖುಷಿ ಕೊಡ್ತಿದ್ದವು ಹೌದಲ್ಲಾ...

ವ್ಯಕ್ತಿ : ಹೌದರೀ ಸರ ಹೌದು.. ಚಪ್ಪಾಳೆಗಳ ಬೋರ್ಗರಿತದ ಮುಂದ ಯಾವ ಅವಾರ್ಡಗಳೂ ಲೆಕ್ಕಕ್ಕಿಲ್ಲ ಬಿಡ್ರಿ.. ಜನಾ ನನ್ನ ಪಾತ್ರಾ ನೋಡಿ ನಾಟಕದ ಟೆಂಟ್ ಹಾರಿ ಹೋಗುವಂಗ ಸೀಟಿ ಹೊಡದ್ ಕೇಕೆ ಹಾಕತಿದ್ರು.. ಆಯೇರಿ ಮಾಡ್ತಿದ್ರು.. ನೋಟು.. ನೋಟಿನ ಹಾರಾ ಹಾಕ್ತಿದ್ರು, ಹೆಗಲಮ್ಯಾಗ ಹೊತ್ಕೊಂಡ್ ಮೆರಸತಿದ್ರು... 

ಅಧ್ಯಕ್ಷರು :  ನಿಮ್ಮಂತಾ ಕಲಾವಿದರಿಗೆ ಅಂತಾ ಕೇಕೆ, ಸಿಳ್ಳೆ, ಚಪ್ಪಾಳೆಗಳ ಮುಂದೆ  ಜುಜಬಿ ಅವಾರ್ಡಗಳು ಯಾವ ಲೆಕ್ಕ ಹೇಳ್ರೀ ಆದ್ಯಾರರೇ..

ವ್ಯಕ್ತಿ : ನನ್ನ ಹೆಸರು ಏನಾದ್ರೂ ತಪ್ಪಾಗಿ ಕರೀರಿ ಚಿಂತಿಲ್ಲ. ಆದರ ನನ್ನ ದೊಡ್ಡ ಕಲಾವಿದ ಅಂತಾ ನೀವೊಬ್ಬರಾದ್ರೂ ಒಪ್ಪಕೊಂಡ್ರಲ್ಲಾ   ಜನ್ಮಕ್ಕ ಅಷ್ಟ ಸಾಕು...  

ಅಧ್ಯಕ್ಷರು :  ಮತ್ತೇ ನೀವಂದ್ರೇನು ಸುಮ್ಮನೇನಾ? ನೀವು ದುರ್ಯೋಧನನ ಪಾತ್ರಾ ಹಾಕ್ತಿದ್ರಿ. ಜನಾ ನಿಮ್ಮ ನಟನೆ ನೋಡಿ ಜೋರಾಗಿ ಉಚ್ಚೆ ಬಂದಿದ್ರು  ತಡಕೊಂಡು ಹುಚ್ಚೆದ್ದು ಕುಣಿತಿದ್ರು. ನೀವು ನಾಟಕದ ಮರುದಿನ ರಸ್ತೆ ಮೇಲೆ ಚಂಬ್ ಹಿಡ್ಕೊಂಡು ಕಕ್ಕ ಮಾಡೋಕೆ ಹೊರಟ್ರೆ ಸಾಕು..  ನಿಮ್ಮನ್ನ ನೋಡಿದ ನಿಮ್ಮ ಅಭಿಮಾನಿಗಳು “ಲೇ ಅಲ್ಲಿ ನೋಡ್ರೋ ದುರ್ಯೋಧನ ಚರಿಗಿ ತೊಗೊಂಡು ಹೊಂಟಾನ’ ಅಂತಾ ಗುರುತಿಸಿ ಮಾತಾಡ್ಕೊಂತಿದ್ರು. ನೀವು ಅಷ್ಟು ಫೇಮಸ್ ಆಗಿ ಹೋಗಿದ್ರಿ.. 

ವ್ಯಕ್ತಿ : ಇನ್ನೇನು ಕಕ್ಕ ಮಾಡೋಕೆ ಕೂಡಬೇಕು ಅನ್ನುದರಾಗ ಇನ್ಯಾರೋ ಬಂದು ‘ಬಾರೀ ಚೊಲೋ ಪಾತ್ರಾ ಮಾಡಿದ್ರಿ, ದುರ್ಯೋಧನ ಬೇರಲ್ಲಾ ನೀವು ಬೇರಲ್ಲಾ.. ಆಹಾ. ” ಅಂತಾ ಜನಾ ಹುಡುಕ್ಕೊಂಡು ಬಂದ್ ಹೊಗಳತಿದ್ರು.  ಅದ ಖುಷಿಯೊಳಗ ನಾ ತಗೊಂಡು ಹೋದ ಚರಗಿ ಅಲ್ಲೇ ಬಿಟ್ಟು, ಹೋದ ಕೆಲಸಾ ಮಾಡೂದು ಮರತಬಿಟ್ಟು, ಹಂಗ ಅವರ ಕೂಡ ಮಾತಾಡ್ಕೊಂಡು ವಾಪಸ್ ನಾಟಕದ ಟೆಂಟಿಗೆ ಬರ್ತಿದ್ದೆ.    

ಅಧ್ಯಕ್ಷರು : ನಾನೂ ಅದನ್ನೇ ಹೇಳ್ತಿದ್ದೀನಿ ಅಯ್ಯನವರೆ.. ಈ ತಿನ್ನೋದು ವಿಸರ್ಜಿಸೋದು ದಿನಾ ಇರೋದೆ. ಆದರೆ ಇದೆಲ್ಲಾದಕ್ಕಿಂತಾ ಅಭಿಮಾನಿಗಳ ಅಭಿಮಾನ ದೊಡ್ಡದು. ಅದಕ್ಕಿಂತಾ ದೊಡ್ಡದು ಈ  ಜಗತ್ತಿನಾಗ ಇರುದಾದ್ರೂ ಏನು?. ಕಲಾವಿದರಾದವರಿಗೆ ಹಣ ಹೊಟ್ಟಿ ಹಸಿವಿ ಅಷ್ಟ ಯಾಕ್ ಬಹಿರ್ದಶೆಗಳಿಗಿಂತಾ ಜನರ ಚಪ್ಪಾಳೆ ಮುಖ್ಯ, ಜನರ ಹೊಗಳಿಕೆ ಬಹಳಾ ಮುಖ್ಯ, ಚಪ್ಪಾಳೆಗಳನ್ನ ತಿಂದುಂಡು ಮಲಗಿದ್ರೂ ಚೆಂದನೆಯ ನಿದ್ದೆ ಬರೋದಂತೂ ಗ್ಯಾರಂಟಿ. ಪ್ರೇಕ್ಷಕರು ನಿಮ್ಮನ್ನ ದುರ್ಯೋಧನ, ಹಿರಣ್ಯಕಶಪು, ರಾವಣ.. ಅಂತಾ ಪಾತ್ರದ ಮೂಲಕ ಗುರುತಿಸ್ತಾರೆಯೇ ಹೊರತು ಅಕಾಡೆಮಿ ಪ್ರಶಸ್ತಿ ಪಡೆದವರು ಅಂತಾ ಗುರುತಿಸೋದಿಲ್ಲ ಅಲ್ವಾ ಅಯ್ಯಂಗಾರರೇ…

ವ್ಯಕ್ತಿ : ಆಚಾರಿ.. ಅಂತಾ ನನ್ನ ಯಾರೂ ಆಗ ಕರೀತಾನೇ ಇರಲಿಲ್ಲಾ.. ನೀವು ಹೇಳಿದಂತೆ ನನ್ನ ಪಾತ್ರದ ಹೆಸರಿಂದಲೇ ಕರೀತಿದ್ರು.. ಮರ್ಯಾದೆ ಕೊಡ್ತಿದ್ರು. ಆದು ಆಗಿನ ಕಾಲ.. (ತುಂಬಾ ಖಿನ್ನತೆಯಿಂದಾ) ಬರ್ತಾ ಬರ್ತಾ ನಂಗೂ ವಯಸ್ಸಾಯ್ತು, ಕಳೆದುಹೋದ ವಯಸ್ಸಿಗೆ ವಿರಾಟ ಪಾತ್ರಗಳು ಹೊಂದಾಣಿಕೆ ಆಗ್ತಿರಲಿಲ್ಲ. ಆಮೇಲೆ ದೃತರಾಷ್ಟ್ರ, ದಶರಥನಂತಹ ಮುದುಕರ ಪಾತ್ರ ಮಾಡಿದೆ. ಮತ್ತೂ ವಯಸ್ಸಾಯ್ತು.. ಯಾರೂ ಕರದು ಪಾತ್ರ ಕೊಡಲಿಲ್ಲಾ. ಕಿಸೆತುಂಬಾ ಆಯೇರಿ ಮಾಡ್ತಿದ್ದ ಜನರ ಹತ್ರ ಹೋಗಿ ‘ಅನಾರೋಗ್ಯ ಹೆಚ್ಚಾಗಿದೆ ಮಾತ್ರೆ ತಗೋಬೇಕು ಕಾಸ್ ಕೊಡಿ’ ಅಂತಾ ಗೋಗರೆದರೂ ಕರುಣೆಯಿಂದ ನೋಡಲಿಲ್ಲ. “ನಾನು ಅಂತಾ ನಾಟಕದಾಗ ಇಂತಾ ಪಾತ್ರ ಮಾಡ್ತಿದ್ದೆ” ಅಂತಾ ನಾನೇ ಹೇಳ್ಕೊಂಡು ತಿರುಗಾಡಿದ್ರೂ  ಕೇಳಿದ ಜನರು ನನ್ನ ಅನುಮಾನದಿಂದ ನೋಡ್ತಿದ್ರು. “ಈ ಮುದುಕ ದುರ್ಯೋಧನ ಅಂತಾ,, ಇಂವಾ ರಾವಣ ಅಂತಾ.. ಇವನಿಗೆಲ್ಲೋ ಭ್ರಮೆ. ಎಲ್ಲಿಯ ಹಿರಣ್ಯಕಶಪು.. ಇದೆಲ್ಲಿಯ ಹಳೆಯ ಮುದುಕಾ..” ಎಂದು ಲೇವಡಿ ಮಾಡಿ ಜನ ಮಜಾ ತಗೊಂಡು ಬಿದ್ದು ಬಿದ್ದು ನಗ್ತಿದ್ದರು. ಇಂತಹ ಅವಮಾನಗಳನ್ನ ತುಂಬಾನೇ ಸಹಿಸಿಕೊಳ್ತಾನೇ ಬದ್ಕಿದ್ದೀನಿ. ಬಾಳಾ ಅಂದ್ರೆ ಬಾಳಾ ಸಂಕಟ ಆಗುತ್ತೆ ಸಾಹೇಬ್ರೆ. ಐನೂರು ಸಾವಿರ ನೋಟುಗಳಿಗೆ ಚಲಾವಣೆಯಲ್ಲಿರೋವರೆಗೂ ಮಾತ್ರ ಬೆಲೆ.. ಅದು ಹಳೇದಾಗಿ ಡಿಮಾನಿಟೇಶನ್ನಿಗೆ ಒಳಗಾಗಿ ಬ್ಯಾನ್ ಆಗಿ ಬಿಟ್ರೆ, ಬಿಟ್ಟಿ ಕೊಟ್ರೂ  ಯಾರೂ ಅಂಡು ವರೆಸಿಕೊಳ್ಳೋಕೂ ತಗೊಳ್ಳೋದಿಲ್ಲಾ..  ಮುಗೀತು.. ಎಲ್ಲಾ ಮುಗೀತು..  ಆ ಯೌವನ, ಆ ಹುಮ್ಮಸ್ಸು, ಆ ಹೆಸರು, ಆ ಗೌರವ, ಆ ಅಭಿಮಾನಿಗಳ ಬಳಗ.. ಎಲ್ಲಾ ಕಳಕೊಂಡೆ.. ಈಗ ನನ್ನ ಹತ್ರ ಇರೋದು ಬರೀ ನೆನಪುಗಳು ಮಾತ್ರ ಸಾಹೇಬರೇ.. ಕ್ಷಣಕ್ಷಣಕ್ಕೂ ಕಾಡುವ ನೆನಪುಗಳು.. ನಿಮ್ಮ ಕೈಮುಗೀತೆನೆ ಒಂದೇ ಒಂದು ನಾಟಕ ಅಕಾಡೆಮಿ ಪ್ರಶಸ್ತಿ ಕೊಡಿಸಿ ಪುಣ್ಯ ಕಟ್ಕೊಳ್ಳಿ. (ಎದ್ದು ನಿಂತು ಅತೀ ಭಾವುಕತೆಯಿಂದಾ) ನೋಡ್ರಿ ಇಲ್ಲಿ  ನೋಡ್ರಿ..  ನಾನೂ ಒಬ್ಬ ಕಲಾವಿದ, ಸಾಕ್ಷಿ ಬೇಕಿದ್ರೆ ಇಲ್ಲಿ ನೋಡ್ರಿ ಅಕಾಡೆಮಿಯವರೇ ನನಗೆ ಅವಾರ್ಡ ಕೊಟ್ಟಾರ, ಪ್ರಮಾಣ ಪತ್ರ ಕೊಟ್ಟಾರ, ನೋಡ್ರಿ ಈ ಹಾರ, ಈ ಶಾಲು.. ಇದೆಲ್ಲವನ್ನು  ಮಿನಿಸ್ಟ್ರ ಕೈಯಲ್ಲಿ  ಕೊಡ್ತಿದ್ದಾರ. ಈಗಾದ್ರೂ ನಂಬ್ರಿ ನಾನೂ ಒಬ್ಬ ಕಲಾವಿದನಾಗಿದ್ದೆ, ಧುರ್ಯೋಧನ, ರಾವಣ, ಹಿರಣ್ಯಕಶುಪುವಿನಂತಹ ಮೇರು ಪಾತ್ರಗಳನ್ನ ಮಾಡ್ತಿದ್ದೆ, ಜನ ಚಪ್ಪಾಳೆ ಹೊಡೀತಿದ್ರು..” ಅಂತಾ ಜನರ ಮುಂದೆ ಹೋಗಿ ಹೇಳ್ತೀನಿ  ಸಾಹೇಬ್ರೆ.. ಯಾಕೆಂದರೆ ಈಗಿನ ಜನಾ ಎಲ್ಲದಕ್ಕೂ ಸಾಕ್ಷಿ, ಪುರಾವೆ, ಸಬೂಬು ಕೇಳ್ತಾರೆ.. ಬರೀ ಬಾಯಲ್ಲಿ ಹೇಳಿದ್ರೆ ನಂಬೋದಿಲ್ಲಾ ಸಾರ್.. (ಕಣ್ಣಲ್ಲಿಯ ನೀರನ್ನ ಒರೆಸಿಕೊಳ್ಳುತ್ತಾನೆ)

ಅಧ್ಯಕ್ಷರು: ಸಮಾಧಾನ ಮಾಡಿಕೊಳ್ಳಿ.. ನಿಮ್ಮಂತವರ ಸಂಕಟಾ ನನಗೂ ಅರ್ಥ ಆಗುತ್ತೆ ಹಿರಿಯರೇ.. ಹಿರಿಯ ಸಾಧಕರನ್ನ ಗುರುತಿಸಿ ಪ್ರಶಸ್ತಿ ಕೊಡಿಸುವ ಕಾಲ ಎಂದೋ ಮುಗಿದೋಯ್ತು. ಇಲ್ಲಿ ನೂರು ನಾಟಕ ಬರೆದವರಿಗಿಂತಾ ಮೂರು ನಾಟಕ ಬರೆದೋರಿಗೆ ಇಲ್ಲಿ ಲಾಬಿ ಮಾಡಿ ಪ್ರಶಸ್ತಿ ಕೊಡಿಸಲಾಗುತ್ತದೆ. ಈ ವ್ಯವಸ್ಥೆಯೊಳಗೆ ನನ್ನಂತಾ ನಾನೂ ಏನೂ ಮಾಡಲು ಆಗದಂತಹ ಅಸಹಾಯಕತೆಯಲ್ಲಿದ್ದೇನೆ ಆಚಾರಿಗಳೇ. ನಿಮ್ಮಂತಾ ಮೇರು ಕಲಾವಿದರು ಅಕಾಡೆಮಿಗಳ ಪ್ರಶಸ್ತಿ ಗಿಶಸ್ತಿಗಳನ್ನೆಲ್ಲಾ ಮೀರಿ ಬೆಳದವರು. ನಿಮ್ಮ ಲೇವಲ್ಲಿಗೆ ಗುಬ್ಬಿ ವೀರಣ್ಣ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸಿಗಬೇಕು. ಅದಕ್ಕೆ ಟ್ರೈ ಮಾಡಿ.. 

ವ್ಯಕ್ತಿ : (ಸಮಾಧಾನಗೊಂಡು ಕೂತು)  ಹೌದಾ ಸಾರ್.. 

ಅಧ್ಯಕ್ಷರು : ಹೌದ್ರಿ.. ನಾಟಕ ಅಕಾಡೆಮಿ ಅವಾರ್ಡ್ ಜೊತೆ ಕೇವಲ ಇಪ್ಪತ್ತೈದು ಸಾವಿರ ಕೊಡ್ತಾರೆ. ಅದೇ ಗುಬ್ಬಿ ವೀರಣ್ಣ ಪ್ರಶಸ್ತಿ ಬಂದ್ರೆ ಐದು...ಐದು ಲಕ್ಷ ಕೊಡ್ತಾರೆ... ಎಲ್ಲಾ ಪತ್ರಿಕೆಗಳಲ್ಲಿ ಪ್ರಂಟ್ ಪೇಜಲ್ಲಿ ನಿಮ್ಮ ಪೋಟೋ ಪ್ರಿಂಟಾಗುತ್ತೆ. ನೀವಿನ್ನೂ ಬದ್ಕಿದ್ದೀರಿ ಅಂತಾ ಇಡೀ ರಾಜ್ಯಕ್ಕೆ ಗೊತ್ತಾಗುತ್ತೆ. ಮತ್ತೆ ನಿಮ್ಮ ಅಭಿಮಾನಿಗಳು ನಿಮಗೆ ಜೋರಾಗಿ ಚಪ್ಪಾಳೆ ಹೊಡೀತಾರೆ..ಸಿಳ್ಳೆ ಹಾಕ್ತಾರೆ... ಪಕ್ಕದಲ್ಲಿ ಸಂಸ್ಕೃತಿ ಇಲಾಖೆ ಅಂತಾ ಇದೆ. ಅಲ್ಲಿ ಹೋಗಿ ಗುಬ್ಬಿ ವೀರಣ್ಣ ಪ್ರಶಸ್ತಿ ಕೊಡಿ ಅಂತಾ ಕೇಳಿ ಅಯ್ಯಂಗಾರರೆ...

ವ್ಯಕ್ತಿ : (ಖುಷಿಯಿಂದಾ ಎದ್ದು ನಿಂತು) ಹೌದಾ ಸಾರ್.. ಎಂತಾ ಮುತ್ತಿನಂತಾ ಸುದ್ದಿ ಹೇಳಿದ್ರೀ ಸಾರ್... ಯಾರೋ ನಂಗೆ ತಪ್ಪು ಮಾಹಿತಿ ಕೊಟ್ಟು ದಿಕ್ಕತಪ್ಪಿಸಿ ಇಲ್ಲಿ ಕಳಿಸಿದ್ರು.. ನೀವು ನನ್ನ ಯೋಗ್ಯತೆಯನ್ನ ಸರಿಯಾಗಿ ಗುರ್ತಿಸಿ ಅಯ್ಯಂಗಾರಿಗೆ ಸರಿಯಾದ ದಾರಿ ತೋರ್ಸಿದ್ರಿ.. ತತ್ ನಿಮ್ಮ ಜೊತೆ ಸೇರಿ ನನ್ನ ಹೆಸರೇ ಮರ್ತು ಅಯ್ಯಂಗಾರಿ ಅಂತಿದ್ದೀನಿ.. ನಾನು ಆಚಾರಿ.. ನಟ ಭಯಂಕರ ವೆಂಕಟಶೇಷಾದ್ರಿ ಅಚ್ಚುತ್ ಆಚಾರಿ.. ನಂಗೆ ಚಿಕ್ಕ ಪುಟ್ಟ ಅವಾರ್ಡ್ ಗಳ ಅಗತ್ಯಾನೇ ಇಲ್ಲಾ... ( ಎದ್ದು ಹೋಗುತ್ತಾ) ದೊಡ್ಡ ಅವಾರ್ಡ್ ಬೇಕು. ನಾನು ಇನ್ನೂ ಬದ್ಕಿದ್ದೇನೆ ಅಂತಾ ಎಲ್ಲರಿಗೂ ಗೊತ್ತು ಮಾಡೋವಂತಾ ಅವಾರ್ಡ ಬೇಕು... ಅವಾರ್ಡ ತಗೊಂಡೇ ಸಾಯಬೇಕು. ನಾನು ಸತ್ತರು ನಾ ತಗೊಂಡು ಅವಾರ್ಡ ನೋಡಿ ನನ್ನ ಮುಂದಿನ ಸಂತಾನ ಇಂತಾ ಒಬ್ಬ ನಟ ಭಯಂಕರ ನಮ್ಮ ವಂಶದಲ್ಲಿದ್ರೂ ಅಂತಾ ನೆನಪಿಸಿಕೊಳ್ಳಬೇಕ್ರಿ ಸಾಹೇಬರಾ.. ನಿಮ್ಮಿಂದಾ ಬಾಳಾ ಉಪಕಾರ ಆಯ್ತು.. ಬರ್ತೀನಿ..
( ಹೊರಟು ನಿಂತವರಿಗೆ ಮತ್ತೇನೋ ನೆನಪಾಗಿ ತಿರುಗಿ ನಿಂತು..)
ಅಂದಂಗೆ ಸಾರ್ ನೀವ್ಯಾರು..? ಇಲ್ಲೇನು ಕೆಲಸಾ ಮಾಡ್ಕೊಂಡಿದ್ದೀರಿ?

ಅಧ್ಯಕ್ಷರು : ನಾನು ಯಾರಾ..? ಹೌದು ನಾನ್ಯಾರು? ನಾನು.. ಅಯ್ಯೋ ನನ್ನ ಹೆಸರೇ ನಂಗೆ ಮರ್ತೋಗಿದೆಯಲ್ಲಾ.. (ಜೋರಾಗಿ) ಯಶೋದಮ್ಮಾ.. ಬಾಯಿಲ್ಲಿ.. ನನ್ನ ಹೆಸರೇನು?

ಸುಶೀಲಮ್ಮ : ಸಾರ್  ಕರದ್ರಾ ಸಾರ್. ನಾನು ಸುಶೀಲಮ್ಮಾ ಸಾರ್..

ಅಧ್ಯಕ್ಷರು : ಅದು ಗೊತ್ತಮ್ಮಾ... ನಿನ್ನ ಹೆಸರಲ್ಲಾ ನನ್ನ ಹೆಸರು ಏನು

ಸುಶೀಲಮ್ಮ : ಕಾಫಿ ತರಲಾ ಸಾರ್... ಸಕ್ಕರೆ ಕಮ್ಮೀನಾ ಜಾಸ್ತೀನಾ ಸಾರ್...

ಅಧ್ಯಕ್ಷರು : ಅಯ್ಯೋ  ಕಿವಡಮ್ಮನಿಗೆ ಹೆಂಗಪ್ಪಾ ಹೇಳೋದು.. ಕಾಫಿ ಅಲ್ಲಾ  ಹೆಸರು... ನನ್ನ ಹೆಸರು...

ಸುಶಿಲಮ್ಮ : ಮಸರು ಬೇಕಾ ಸಾರ್.. ಮಜ್ಜಿಗೆನೇ ತರ್ತೀನಿ ಸಾರ್..

ಅಧ್ಯಕ್ಷರು : (ಪರಾಪರಾ ಅಂತಾ ತಲೆ ಕೆರೆದುಕೊಳ್ಳುತ್ತಾ) ಏನೂ ಬೇಡ ಇಲ್ಲಿಂದಾ ಮೊದಲು ತೊಲಗು... (ಏನೋ ಹೊಳೆದಂತಾಗಿ) ಹಾಂ.. ಇಲ್ಲೇ ನನ್ನ ಹೆಸರಿನ ಸೈನ್ ಬೋರ್ಡ ಇದೆಯಲ್ಲಾ.. ರೀ ಆರಾಧ್ಯರೆ, ಅಲ್ಲಲ್ಲಾ ಅಯ್ಯಂಗಾರರೇ.. ಅಯ್ಯೋ ಆಚಾರರೇ.. ಅಲ್ಲಿ ನೋಡ್ರಿ.. ನನ್ನ ಹೆಸರು ಬಂಗಾರದ ಬಣ್ಣದಲ್ಲಿ ಪಳಪಳ ಹೊಳೆಯೋ ಹಂಗೆ ಕೆತ್ತಿ ಬರ್ಸಿದ್ದಾರೆ. ಅದರ ಕೆಳಗೆ ಅಧ್ಯಕ್ಷರು ನಾಟಕ ಅಕಾಡೆಮಿ ಅಂತಾನೂ ಬರ್ದಿದೆ. ಓದ್ರಿ... ( ಎಂದು ಪಕ್ಕಕ್ಕೆ ತಿರುಗುತ್ತಾನೆ. ವ್ಯಕ್ತಿ ಆಗಲೇ ಅಲ್ಲಿಂದ ಹೊರಟೇ ಹೋಗಿರ್ತಾರೆ..) ನಟ ಭಯಂಕರ ಎಲ್ಲಿ ಹೋದ್ರು ಸರಸಮ್ಮಾ...

ಸುಶೀಲಮ್ಮಾ : ಸಾರ್... ಸಿಟ್ಟಾಗಬೇಡಿ ಸಾರ್... ಮಜ್ಜಿಗೆ ಬೇಡಾಂದ್ರೆ ಬಿಡಿ.. ಮಸರು ತರ್ತೀನಿ ಇರಿ... ನಾನು ಸುಶೀಲಮ್ಮಾ ಸಾರ್.. ಸುಶೀಲಮ್ಮಾ..

ಅಧ್ಯಕ್ಷರು : ಯಾವುದೋ ಒಂದು ಅಮ್ಮಾ.. ಅಯ್ಯೋ ಯಾರಾದ್ರೂ ಈಯಮ್ಮನ್ನ ಇಲ್ಲಿಂದ ಕರ್ಕೊಂಡು ದೂರ ಹೋಗ್ರಯ್ಯಾ... (ಎದ್ದು ನಿಂತು ಸ್ವಗತದಲ್ಲಿ) ಅಯ್ಯೋ ಏನೂ ನೆನಪಾಗ್ತಿಲ್ವಲ್ಲಾನಾನ್ಯಾರು... ಏನಾಗಿದ್ದೆ... ಏನಾಗಿರುವೆ... ನನ್ನ ಹೆಸರೇನು... ಇಟ್ಟ ಹೆಸರೋ ಕೊಟ್ಟ ಹೆಸರೋ... ಕರಿಯೋ ಹೆಸರೋ...  ಯಾವುದೋ ಒಂದು ಹೆಸರು.. ಯಾವ ಹೆಸರಿಂದ ಕರೆದರೇನಾಯ್ತು... ಹೆಸರು ಬದಲಾದ್ರೆ ವ್ಯಕ್ತಿ ಬದಲಾಗತಾನಾ?  ನಾನು ನಾನೇ... ಹಾಂ... ಚಪ್ಪಾಳೆ.. ಒಂದೊಂದು ಚಪ್ಪಾಳೆ ಒಂದೊಂದು ಅವಾರ್ಡಿಗೆ ಸಮ.   ನಾನೂ ಈಗ ಡೈಲಾಗ ಹೇಳ್ತೇನೆ.. ಆದ್ರೆ ಒಂದು ಕಂಡೀಶನ್ನು ಏನಂದ್ರೆ.. ಎಲ್ರೂ ಚಪ್ಪಾಳೆ ತಟ್ಟಬೇಕು.. ( ಖುರ್ಚಿಯ ಮೇಲೆ ಹತ್ತಿ ನಿಂತು)  "ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು ಆದರೆ.. ಆದರೆ ಕನಸುಗಳಿಲ್ಲದ ದಾರಿಯಲ್ಲಿ ಹೇಗೆ ನಡೆಯಲಿ" ಹಾಂ... ಇನ್ನೂ ಜೋರಾಗಿ ಚಪ್ಪಾಳೆ ಬೀಳಲಿ. ಏನು ಒನ್ಸ್ ಮೋರ್ ಅಂತೀರಾ ಅನ್ನಿ... ನಾನು ಎಂದೂ ನನ್ನ ಅಭಿಮಾನಿಗಳನ್ನ ನಿರಾಸೆ ಮಾಡುವುದಿಲ್ಲ. " ಹೆಸರಿಲ್ಲದೇ ಹಾದಿಯಲ್ಲಿ ನಡೆಯಬಹುದು... ಆದರೆ ಮರೆವಿನ ದಾರಿಯಲ್ಲಿ ಹೇಗೆ ನಡೆಯಲಿ ಹೇಳಿ
( ಹಿನ್ನೆಲೆಯಲ್ಲಿ ಜೋರಾದ ಚಪ್ಪಾಳೆ ಸದ್ದು... ಅಧ್ಯಕ್ಷರು ಎರಡೂ ಕೈ ಜೋಡಿಸಿ ತಲೆಯ ಮೇಲೆತ್ತಿ ನಮಸ್ಕರಿಸಿ ಸ್ಟಿಲ್ ಆಗುತ್ತಾರೆ. ಹಿನ್ನೆಲೆಯಲ್ಲಿ ಹಾಡು...)

   - ಶಶಿಕಾಂತ ಯಡಹಳ್ಳಿ

( ಕ್ಷಮಿಸಿ ನಾ ಇಲ್ಲಿ ಬರೆದಿದ್ದೆಲ್ಲಾ ತಮಾಷೆಗಾಗಿ. ಅರ್ಧ ಸತ್ಯಕ್ಕೆ ಇನ್ನರ್ಧ ಕಲ್ಪನೆಯನ್ನು ಸೇರಿಸಿ ಪ್ರಹಸನವನ್ನು ವಿಡಂಬನಾತ್ಮಕವಾಗಿ ಬರೆಯಲಾಗಿದೆ. ಇದು ಸಂಪೂರ್ಣ ಸತ್ಯವೂ ಅಲ್ಲಾ ಹಾಗಂತಾ ಸಂಪೂರ್ಣ ಸುಳ್ಳೂ ಅಲ್ಲಾ.. ನಾವು ನಾಟಕದವರು. ನಮ್ಮನ್ನು ನಾವೇ ಕಿಚಾಯಿಸಿಕೊಂಡು ಖುಷಿಪಡುವವರು. ಆಗಾಗ ಕಾಲೆಳೆದು ಕಾಲೆಳೆಸಿಕೊಂಡು ಸಂಭ್ರಮ ಪಡುತ್ತೇವೆ. ತಮಾಷೆಯನ್ನು ತಮಾಷೆಯಾಗಿ ತೆಗೆದುಕೊಳ್ಳಬೇಕೆನ್ನುವ ಹಾಸ್ಯಪ್ರಜ್ಞೆ ನಮಗೆ ನಾಟಕದವರಿಗೆ ಇದ್ದೇ ಇದೆ. ಪ್ರಹಸನ ಓದಿದವರ ಮುಖದಲ್ಲಿ ಒಂದಿಷ್ಟು ಮಂದಹಾಸ ಮೂಡಿದರೆ ಬರೆದಿದ್ದಕ್ಕೂ ಸಾರ್ಥಕ.)