ಮಂಗಳವಾರ, ಡಿಸೆಂಬರ್ 31, 2019

ಘೋಷಿತ ಪ್ರಶಸ್ತಿ ಪ್ರದಾನ ಅನುಮಾನ; ಅಕಾಡೆಮಿಯಿಂದ ಕಲಾವಿದರಿಗೆ ಅವಮಾನ:





ಕಲೆ, ಸಾಹಿತ್ಯ, ಭಾಷೆ ಮತ್ತು ಸಂಸ್ಕೃತಿಗಳ ಬೆಳವಣಿಗೆಗೆ ಪೂರಕವಾಗಿ ಅಕಾಡೆಮಿಗಳು ಹಾಗೂ ಪ್ರಾಧಿಕಾರಗಳನ್ನು ಕರ್ನಾಟಕ ಸರಕಾರ ಸ್ಥಾಪಿಸಿ ಪೋಷಿಸಿಕೊಂಡು ಬರುತ್ತಿದೆ. ಈ ಎಲ್ಲಾ ಸಾಂಸ್ಕೃತಿಕ ಸಂಸ್ಥೆಗಳ ಅಧ್ಯಕ್ಷರು ಹಾಗೂ ಸದಸ್ಯರು ಅಷ್ಟೇ ಯಾಕೆ ಇವುಗಳಿಗೆ ಸಂಬಂಧಿಸಿದ ಸರಕಾರಿ ಅಧಿಕಾರಿಗಳೆಲ್ಲಾ ಆಳುವ ಸರಕಾರಗಳ ಸೂಚನೆಯ ಮೇರೆಗೆ ಅವಧಿಪೂರ್ವವೋ, ಅವಧಿನಂತರವೋ ಅಂತೂ ಕಾಲ ಕಾಲಕ್ಕೆ ಬದಲಾಗುತ್ತಲೇ ಇರುತ್ತಾರೆ.  ಆದರೆ ಅಕಾಡೆಮಿ ಪ್ರಾಧಿಕಾರಗಳು ಮಾತ್ರ ಸ್ಥಾಯಿಯಾಗಿ ಇದ್ದೇ ಇರುತ್ತವೆ.

ಅಕಾಡೆಮಿಯ ಅಧ್ಯಕ್ಷರು ಹಾಗೂ ಸದಸ್ಯರುಗಳು ತಮ್ಮ ಕಾಲಮಿತಿಯಲ್ಲಿ  ಬಹುಮತದಿಂದ  ಹಮ್ಮಿಕೊಂಡ ಯೋಜನೆಗಳನ್ನು ಮುಂದಿನ ಕಾಲಾವಧಿಯಲ್ಲಿ ಆಯ್ಕೆಗೊಂಡ ಅಕಾಡೆಮಿಯ ಅಧ್ಯಕ್ಷರ ಸಮಿತಿಯು ರದ್ದುಗೊಳಿಸುವುದು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ. ಹೀಗೆ ಮಾಡಿದರೆ ಅಕಾಡೆಮಿಯ ವಿಶ್ವಾಸಾರ್ಹತೆಗೆ ದಕ್ಕೆಯಾಗುತ್ತದೆ ಎಂಬುದಕ್ಕೆ ಪ್ರಸ್ತುತ ಕರ್ನಾಟಕ ನಾಟಕ ಅಕಾಡೆಮಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳೇ ಸಾಕ್ಷಿ.

ನಾಟಕ ಅಕಾಡೆಮಿ ಇರುವುದು ರಂಗಕಲೆಯನ್ನು ಉಳಿಸಿ ಬೆಳೆಸಲು. ಕಲಾವಿದರು ಇದ್ದಾಗ ಮಾತ್ರ ಕಲೆ ಇರುತ್ತದೆ, ಉಳಿದು ಬೆಳೆಯುತ್ತದೆ. ಕಲಾವಿದರನ್ನೇ ಅವಮಾನಿಸುವ ಅವರ ಸ್ವಾಭಿಮಾನಕ್ಕೆ ಕಂಟಕ ತರುವ ಕೆಲಸವನ್ನು ನಾಟಕ ಅಕಾಡೆಮಿಯೇ ಮಾಡಿದರೆ ಅದು ಸಾರ್ವಕಾಲಿಕ ಅಕ್ಷಮ್ಯ. ಈಗ ಆಗಿದ್ದೂ ಸಹ ಅದೇ. ನಾಟಕ ಅಕಾಡೆಮಿಯ ಹಿಂದಿನ ಅವಧಿಯಲ್ಲಿ ಮೂವತ್ತು ಜನ ರಂಗಸಾಧಕ ಕಲಾವಿದರಿಗೆ ವಾರ್ಷಿಕ ಪ್ರಶಸ್ತಿಯನ್ನು ಘೋಷಿಸಲಾಗಿತ್ತು. ಈಗ ಅಕಾಡೆಮಿಗೆ ಆಯ್ಕೆಯಾಗಿ ಬಂದ ಅಧ್ಯಕ್ಷರು ಹಾಗೂ ಕೆಲವು ಸದಸ್ಯರುಗಳು ಈ ಹಿಂದೆ ಘೋಷಿಸಲಾದ ವಾರ್ಷಿಕ ಪ್ರಶಸ್ತಿಗಳನ್ನು ರದ್ದು ಮಾಡಲೇಬೇಕು ಎನ್ನುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆಂಬುದು ರಂಗಕರ್ಮಿಗಳ ಆತಂಕಕ್ಕೆ ಕಾರಣವಾಗಿದೆ. ಅರುಣ್ ಸಾಗರ್, ಲಕ್ಷ್ಮೀಪತಿ ಕೋಲಾರ್, ಧಮೇಂದ್ರ ಅರಸ್, ಗ್ಯಾರಂಟಿ ರಾಮಯ್ಯ, ಜಯಕುಮಾರ್ ಕೊಡಗನೂರು, ಉಮೇಶ್ ಸಾಲಿಯಾನ, ಪ್ರಬಾತ್ ವೆಂಕಟೇಶ್.. ಹೀಗೆ ರಂಗಭೂಮಿಗೆ ಅಪಾರವಾದ ಕೊಡುಗೆ ನೀಡಿದ ಮೂವತ್ತು ಸಾಧಕರಿಗೆ ಘೋಷಿಸಲಾದ ಪ್ರಶಸ್ತಿಗಳು ರದ್ದಾಗಲಿದ್ದು ಸ್ವತಃ ನಾಟಕ ಅಕಾಡೆಮಿಯೇ ಕಲಾವಿದರ ಸ್ವಾಭಿಮಾನಕ್ಕೆ ಧಕ್ಕೆ ತರುತ್ತಿದೆ. 


ನಾಟಕ ಅಕಾಡೆಮಿಯಅಧ್ಯಕ್ಷ ಭೀಮಸೇನ್‍

ಪ್ರಸ್ತುತ ನಾಟಕ ಅಕಾಡೆಮಿಯ (ಪಾರ್ಟಟೈಂ?) ಅಧ್ಯಕ್ಷರಾಗಿರುವ ಭೀಮಸೇನ್‍ರವರನ್ನು ಯಾಕೆ ಹೀಗೆ ಮಾಡಿದಿರಿ? ಎಂದು ಪತ್ರಿಕೆಯವರು ಹಾಗೂ ರಂಗಕರ್ಮಿಗಳು ಪ್ರಶ್ನಿಸಿದರೆ ಮೊದಮೊದಲು “2019-20 ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಅಸಿಂಧುಗೊಳಿಸಿ ಹೊಸದಾಗಿ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿದೆ” ಎಂದು ತಿಳಿಸಿದರು. ಅವರ ಈ ಹೇಳಿಕೆ ಡಿಸೆಂಬರ್ 29ರಂದು ಪ್ರಜಾವಾಣಿಯಲ್ಲಿ ಪ್ರಕಟವಾಯಿತು. ನಂತರ ಕೆಲವಾರು ರಂಗಕರ್ಮಿಗಳು ಭೀಮಸೇನರವರಿಗೆ ಪೋನ್ ಮಾಡಿ ಅವರ ಈ ವ್ಯತಿರಿಕ್ತ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಂತೆಯೇ ಮಾತಿನ ವರಸೆ ಬದಲಾಯಿಸಿದ ಹಾಲಿ ಅಧ್ಯಕ್ಷರು “ಇದು ನನ್ನೊಬ್ಬನ ನಿರ್ಧಾರವಲ್ಲ. ಪ್ರಶಸ್ತಿಗಳ ಆಯ್ಕೆ ಸಂಬಂಧ ಮುಂದಿನ ತಿಂಗಳು ನಡೆಯುವ ಸರ್ವ ಸದಸ್ಯರ ಸಭೆಯಲ್ಲಿ ತೀರ್ಮಾನಿಸಲಾಗುವುದು” ಎಂದು ಡ್ಯಾಮೇಜ್ ಕಂಟ್ರೋಲಿಗೆ ಮುಂದಾದರು. ಪತ್ರಿಕೆಗಳಲ್ಲಿ ಈ ಹೇಳಿಕೆಯೂ ಪ್ರಕಟಗೊಂಡು ರಾಜ್ಯಾದ್ಯಂತ ರಂಗಕರ್ಮಿಗಳು ಹಾಲಿ ಅಕಾಡೆಮಿಯ ರಂಗವಿರೋಧಿ ನಿರ್ಣಯವನ್ನು ವಿರೋಧಿಸತೊಡಗಿದರು. ವಾಟ್ಸಾಪ್, ಫೇಸ್‍ಬುಕ್‍ಗಳಲ್ಲಿ ಹಾಲಿ ಅಕಾಡೆಮಿಯ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗತೊಡಗಿತು. 


ಯಶವಂತ ಸರದೇಶಪಾಂಡೆಯವರು

ಹಾಗಾದರೆ ಅಧ್ಯಕ್ಷರ ಈ ನಿರ್ಣಯದ ಹಿಂದಿರುವ ಕಾರಣಗಳಾದರೂ ಯಾವವು? ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುವ ಸ್ವಂತ ಯೋಚನಾಶಕ್ತಿ ನಾಟಕ ಅಕಾಡೆಮಿಯ ಈಗಿನ ದುರ್ಬಲ ಅಧ್ಯಕ್ಷರಿಗಂತೂ ಇಲ್ಲ ಎಂಬುದನ್ನು ಅವರ ಸದಸ್ಯರುಗಳೇ ಹೇಳುತ್ತಾರೆ. ಘೋಷಿತಗೊಂಡ ಪ್ರಶಸ್ತಿಗಳನ್ನು ಅಸಿಂಧುಗೊಳಿಸುವುದರ ಹಿಂದೆ ಇಬ್ಬರು ಖಳನಾಯಕರಿದ್ದಾರೆ. ಅದರಲ್ಲಿ ಒಬ್ಬರು ನಾಟಕ ಅಕಾಡೆಮಿಯ ಹಿರಿಯ ಸದಸ್ಯರಾದ ಮಾನ್ಯ ಯಶವಂತ ಸರದೇಶಪಾಂಡೆಯವರು.  ಈ ಹಿಂದೆ ಬಿಜೆಪಿ ಪಕ್ಷ ಆಡಳಿತದಲ್ಲಿದ್ದಾಗ, ಬಿ.ವಿ.ರಾಜಾರಾಮ್‍ರವರು ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ಸರದೇಶಪಾಂಡಯವರು ನಾಟಕ ಅಕಾಡೆಮಿಯ ಸದಸ್ಯರಾಗಿ ಆಯ್ಕೆ ಮಾಡಿಸಿಕೊಂಡಿದ್ದರು. ಆದರೆ.. ಅಕಾಡೆಮಿಯ ಬಹುತೇಕ ಸಭೆಗಳಿಗೆ ಗೈರಾಗುತ್ತಿದ್ದ ಇವರು ಒಂದೇ ವರ್ಷಕ್ಕೆ ಅಕಾಡೆಮಿಯ ಸದಸ್ಯಗಿರಿಗೆ ರಾಜೀನಾಮೆ ಕೊಟ್ಟಿದ್ದರು. ರಾಜ್ಯೋತ್ಸವ ಪ್ರಶಸ್ತಿ ಪಡೆಯಲು ಈ ರಾಜೀನಾಮೆ ನಿರ್ಧಾರವೆಂದು ಆ ನಂತರ ಎಲ್ಲರಿಗೂ ಗೊತ್ತಾಯಿತು. ಈಗ ಮತ್ತೆ ಬಿಜೆಪಿ ಸರಕಾರ ಬಂದಾಗ ನಾಟಕ ಅಕಾಡೆಮಿಗೆ ಅಧ್ಯಕ್ಷರಾಗಲು ಬೇಕಾದಷ್ಟು ಲಾಬಿ ಮಾಡಿದರೂ ಅದು ಸಾಧ್ಯವಾಗದೇ ಅತೃಪ್ತಿಯನ್ನು ನುಂಗಿಕೊಂಡು ಸದಸ್ಯಗಿರಿಗಷ್ಟೇ ತೃಪ್ತರಾಗಬೇಕಾಯಿತು. ಈಗಲೂ ಸಹ ಅಕಾಡೆಮಿ ಸದಸ್ಯತ್ವಕ್ಕೆ ಮತ್ತೆ ರಾಜೀನಾಮೆ ಕೊಟ್ಟು ಧಾರವಾಡ ರಂಗಾಯಣದ ನಿರ್ದೇಶಕರಾಗಬೇಕು ಎಂದು ಸರ್ವಪ್ರಯತ್ನವನ್ನು ಮಾಡಿದರಾದರೂ ಅದೂ ಸಹ ಸಾಧ್ಯವಾಗಲೇ ಇಲ್ಲ. ಅಕಾಡೆಮಿಗೆ ಸದಸ್ಯರಾದಾಗಿನಿಂದ ಸರದೇಶಪಾಂಡೆಯವರ ಕಾಕದೃಷ್ಠಿ ಘೋಷಿತವಾದ ಪ್ರಶಸ್ತಿಗಳ ಮೇಲೆ ಬಿದ್ದಿದೆ. ಮೊದಲ ಸರ್ವಸದಸ್ಯರ ಸಭೆಯಿಂದಲೇ ತಮ್ಮ ವಿರೋಧವನ್ನು ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. 


ಅಕಾಡೆಮಿಯ ರೆಜಿಸ್ಟ್ರಾರ್ ಡಾ.ಶೈಲಜಾರವರು

ಸರದೇಶಪಾಂಡೆಯವರ ಪ್ರಶಸ್ತಿ ಅಸಿಂಧು ಕಾರ್ಯಾಚರಣೆಯಲ್ಲಿ ಅವರಿಗೆ ಸಾಥ್ ಕೊಟ್ಟು ಖಳನಾಯಕಿ ಪಟ್ಟ ಗಿಟ್ಟಿಸಿದ್ದು ನಾಟಕ ಅಕಾಡೆಮಿಯ ರೆಜಿಸ್ಟ್ರಾರ್ ಡಾ.ಶೈಲಜಾರವರು. ಜೆ.ಲೊಕೇಶರವರು ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ಶೈಲಜಾರವರ ಅಧಿಕಾರಶಾಹಿ ಸರ್ವಾಧಿಕಾರಿ ನಿರ್ಣಯಗಳಿಗೆ ಅವಕಾಶವನ್ನು ಕೊಡುತ್ತಿರಲಿಲ್ಲ. ಅಕಾಡೆಮಿಯ ಸ್ವಾಯತ್ತತೆಯನ್ನು ಉಳಿಸಿಕೊಳ್ಳಲು ಎರಡು ವರ್ಷಗಳ ಕಾಲ ಹೋರಾಡಿದ ಲೋಕೇಶರವರ ಜೊತೆಗೆ ರೆಜಿಸ್ಟ್ರಾರ್‍ರವರ ಆಂತರಿಕ ಸಂಘರ್ಷ ಸದಾ ಜಾರಿಯಲ್ಲಿತ್ತು. ಲೊಕೇಶರವರು ಅಧ್ಯಕ್ಷರಾಗಿದ್ದಾಗ ಆದ ನಿರ್ಧಾರಗಳಿಗೆ ಈಗ ಹೇಗಾದರೂ ಮಾಡಿ ಕೊಕ್ಕೆ ಹಾಕಿ ಸೇಡು ತೀರಿಸಿಕೊಳ್ಳುವ ತರಾತುರಿಯಲ್ಲಿರುವ ರೆಜಿಸ್ಟ್ರಾರಮ್ಮನವರು ರಂಗಮಂದಿರಗಳಿಗೆ ಬೆಳಕಿನ ಪರಿಕರಗಳನ್ನು ಕೊಡುವ ಯೋಜನೆಗೆ ಅಡ್ಡಗಾಲು ಹಾಕಿ ರದ್ದುಗೊಳಿಸಿದರು. ಈಗ ಪ್ರಶಸ್ತಿ ರದ್ದತಿಗಾಗಿ ತಮ್ಮ ಬುದ್ದಿ ಬಲ ಅಧಿಕಾರವನ್ನು ಬಳಸಿ ಕಲಾವಿದರ ಸ್ವಾಭಿಮಾನಕ್ಕೆ ದಕ್ಕೆತರುವ ಕೆಲಸಕ್ಕೆ ಕೈಹಾಕಿದ್ದಾರೆ. 

ಈ ಇಬ್ಬರೂ ಸೇರಿ ಪ್ರಶಸ್ತಿ ಸಿಂಧುತ್ವವನ್ನು ಪ್ರಶ್ನಿಸುವ ಕೆಲವು ತಾಂತ್ರಿಕ ಲೋಪಗಳನ್ನು ಮುಂದೆ ಮಾಡಿಕೊಂಡು ಪ್ರಶ್ನಿಸುವವರ ದಿಕ್ಕುತಪ್ಪಿಸುವ ಕೆಲಸವನ್ನು ಪ್ಲಾನ್ಡ್ ಆಗಿಯೇ ಮಾಡುತ್ತಿದ್ದಾರೆ. ಅಕಾಡೆಮಿಯ ಇದರ ಸದಸ್ಯರುಗಳ ಬಾಯಿ ಮುಚ್ಚಿಸಲು ವ್ಯರ್ಥ ಸಮರ್ಥನಗೆಗಳನ್ನು ಕೊಡುತ್ತಿದ್ದಾರೆ. ಪೋನ್ ಮಾಡಿ ಕೇಳಿದವರಿಗೆ ಇದೇ ಸುಳ್ಳುಗಳನ್ನು ಸತ್ಯದ ತಲೆಯಮೇಲೆ ಹೊಡೆದಂತೆ ಹೇಳುತ್ತಾ ಉತ್ತರಿಸಲು ಪರದಾಡುತ್ತಿದ್ದಾರೆ. ಹಾಗಾದರೆ ಘೋಷಿತ ಪ್ರಶಸ್ತಿ ರದ್ದತಿಗೆ ಈ ಇಬ್ಬರೂ ಮಹನೀಯರು ಮುಂದಿಡುತ್ತಿರುವ ಕಾರಣಗಳಾದರೂ ಯಾವವು..?


1. ಅಕಾಡೆಮಿಯ ಹಿಂದಿನ ಅಧ್ಯಕ್ಷರು ತರಾತುರಿಯಲ್ಲಿ ಪ್ರಶಸ್ತಿಗಳನ್ನು ಘೋಷಿಸುವ ಅಗತ್ಯವಿರಲಿಲ್ಲ.

ಯಾರು ಹೇಳಿದ್ದು ತರಾತುರಿಯಲಿ ಪ್ರಶಸ್ತಿ ಘೋಷಿಸಿದ್ದೆಂದು. ವಾರ್ಷಿಕವಾಗಿ ಕನಿಷ್ಟ ಮೂರು ಸರ್ವಸದಸ್ಯರ ಸಭೆಯನ್ನು ಕರೆಯಲಾಗುತ್ತದೆ. ಎರಡನೇ ಸಭೆಯಲ್ಲಿ ಪ್ರಶಸ್ತಿಗೆ ಅರ್ಹರನ್ನು ಕಾರ್ಯಕಾರಿ ಸಮಿತಿ ಆಯ್ಕೆ ಮಾಡುತ್ತದೆ. ಹಾಗೂ ಮೂರನೆಯ ಸಭೆಯ ನಂತರ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಹೀಗೆಯೇ ಎರಡನೆಯ ಸರ್ವ ಸದಸ್ಯರ ಸಭೆಯನ್ನು 2019, ಜುಲೈ 29ರಂದು ನಡೆಸಲು ಮೂರು ವಾರಗಳ ಮೊದಲೇ ಪೂರ್ವಭಾವಿಯಾಗಿ ನಿರ್ಧರಿಸಿ 17ದಿನಗಳ ಮುನ್ನವೇ ಅಕಾಡೆಮಿಯ ಎಲ್ಲಾ ಸದಸ್ಯರುಗಳಿಗೂ ಜುಲೈ 12ರಂದು ಪತ್ರಗಳನ್ನು ಕಳುಹಿಸಲಾಗಿತ್ತು. ಈ ಪತ್ರಕ್ಕೆ ಅಕಾಡೆಮಿಯ ರೆಜಿಸ್ಟ್ರಾರ್‍ರವರೇ ಖುದ್ದಾಗಿ ಸಹಿ ಮಾಡಿದ್ದು ಅದರಲ್ಲಿ 2019-20ನೇ ಸಾಲಿನ ಪ್ರಶಸ್ತಿ ಬಗ್ಗೆ ಎಂದು ಕಾರ್ಯಸೂಚಿಯಲ್ಲಿ ನಮೂದಿಸಲಾಗಿತ್ತು. ಆಗ ಇನ್ನೂ ಬಿಜೆಪಿ ಸರಕಾರ ಆಡಳಿತದಲ್ಲಿದ್ದಿಲ್ಲ. 29ನೇ ದಿನಾಂಕದಂದು ಸರ್ವಸದಸ್ಯರ ಸಭೆಯಲ್ಲಿ ಕಾರ್ಯಸೂಚಿಗೆ ಅನುಗುಣವಾಗಿ ಅರ್ಹ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಅದು ಮರುದಿನ ಪತ್ರಿಕೆಗಳಲ್ಲಿ ಪ್ರಕಟವಾಯಿತು. ಹೀಗೆ ಪ್ರಕಟವಾದ ನಂತರದ ದಿನಗಳಲ್ಲಿಲ ಸರಕಾರ ಅಕಾಡೆಮಿಯ ನೇಮಕಾತಿಗಳನ್ನು ರದ್ದು ಮಾಡಿತೇ ಹೊರತು ಪ್ರಶಸ್ತಿ ಪ್ರಕಟವಾಗುವುದಕ್ಕಿಂತ ಮುಂಚೆಯಲ್ಲ. ಸರಕಾರದಿಂದ ನಾಮನಿರ್ದೇಶನದ ರದ್ದತಿ ಕುರಿತ ಆದೇಶ ಬರುವುದಕ್ಕಿಂತಾ ಮುಂಚೆ ತೆಗೆದುಕೊಂಡ ಅಕಾಡೆಮಿಯ ಸರ್ವಸದಸ್ಯರ ನಿರ್ಧಾರವನ್ನು ಅಸಿಂಧು, ಅಕ್ರಮ ಎಂದು ಕರೆಯುವುದೇ ವಿಕೃತಿ ಮನಸ್ಥಿತಿ.


2. ರೆಜಿಸ್ಟ್ರಾರ್‍ರವರ ಸಹಿ ಇಲ್ಲದೇ ಅಧ್ಯಕ್ಷರೇ ಪ್ರಶಸ್ತಿ ಪಟ್ಟಿಯನ್ನು ಘೋಷಿಸಿದ್ದಾರೆ..

ಇದು ಇನ್ನೊಂದು ಸುಳ್ಳು ಆರೋಪ. ಇದನ್ನೇ ರೆಜಿಸ್ಟ್ರಾರ್‍ರವರು ಹಾಗೂ ಸರದೇಶಪಾಂಡೆಯವರು ಎಲ್ಲರಿಗೂ ಹೇಳುತ್ತಾ ನಂಬಿಸಲು ಪ್ರಯತ್ನಿಸುತ್ತಿದ್ದಾರೆ. ಅಪ್ರೂವ್ ಆಗಿರುವ ನಡಾವಳಿಗಳ ಪ್ರತಿ ಕೊಡಲು ಲೊಕೇಶರವರು ಅದೆಷ್ಟು ಸಲ ಮನವಿ ಮಾಡಿಕೊಂಡರೂ ರೆಜಿಸ್ಟ್ರಾರ್‍ರವರು ಕೊಡಲು ನಿರಾಕರಿಸಿದರು. ಅವರು ಹೇಳಿದ ಸುಳ್ಳು ಅದೆಲ್ಲಿ ಬಯಲಾಗುತ್ತದೋ ಎನ್ನುವ ಆತಂಕ ಅವರದು. ಆದರೆ ಪಟ್ಟು ಬಿಡದೇ ಆರ್‍ಟಿಐ ನಲ್ಲಿ ಅರ್ಜಿ ಸಲ್ಲಿಸಿ ಸರ್ವಸದಸ್ಯರ ಸಭೆಯ ನಡಾವಳಿಗಳ ಪ್ರತಿಯನ್ನು ಲೊಕೇಶರವರು ಪಡೆಯಬೇಕಾಯ್ತು. ಹಾಗೂ 29ರಂದು ನಡೆದ ಸರ್ವಸದಸ್ಯರ ಸಭೆಯಲ್ಲಿ ಬಹುಮತದ ತೀರ್ಮಾನದಿಂದ ಆಯ್ಕೆಯಾದ ಪ್ರಶಸ್ತಿ ಆಯ್ಕೆಯ ಪಟ್ಟಿಗೆ ಅಧ್ಯಕ್ಷರ ಜೊತೆಗೆ ರೆಜಿಸ್ಟ್ರಾರ್ ಅವರ ಸಹಿಯೂ ಇತ್ತು. ಅಧ್ಯಕ್ಷರು ಹಾಗೂ ಸದಸ್ಯರುಗಳ ಕಾರ್ಯಕಾರಿ ಸಮಿತಿ ಒಂದಾಗಿ ಒಪ್ಪಿದ ಪ್ರಶಸ್ತಿ ಆಯ್ಕೆ ಪಟ್ಟಿಗೆ ಅನುಮತಿಸಿ ರೆಜಿಸ್ಟ್ರಾರ್ ಸಹಿ ಮಾಡಿದ ಮೇಲೆ ಘೋಷಿತ ಪ್ರಶಸ್ತಿಗಳು ಅಕ್ರಮ ಆಯ್ಕೆ ಹೇಗಾಗುತ್ತದೆ. ಅಕಾಡೆಮಿಗೆ ಸರ್ವಸದಸ್ಯರ ಸಭೆಯ ನಿರ್ಣಯವೇ ಅಂತಿಮ ಅಲ್ಲವೇ.. 


3. ಪ್ರೆಸ್ ಮೀಟ್ ಮಾಡದೇ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆ ಮಾಡಿದ್ದು ಸರಿಯಲ್ಲ.

ಹಾಗಂತ ಯಾವ ಬೈಲಾದಲ್ಲಿ ಹೇಳಿದೆ. ಘೋಷಿತಗೊಂಡ ಪ್ರಶಸ್ತಿಯ ಪಟ್ಟಿ ಪತ್ರಿಕೆಗಳಲ್ಲಿ ಪ್ರಕಟಗೊಳ್ಳಬೇಕೆಂದರೆ ಪ್ರೆಸ್ ಮೀಟ್ ಮಾಡಬೇಕೆಂಬ ನಿಯಮವೇನಿಲ್ಲವಲ್ಲಾ. ಪ್ರಶಸ್ತಿ ಪುರಸ್ಕೃತರ ಪಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಪತ್ರಿಕಾ ಕಾರ್ಯಾಲಯಗಳಿಗೆ ತಲುಪಿ ಮಾರನೆಯ ದಿನ ಪ್ರಕಟಗೊಂಡಿತು. ಇದರಲ್ಲಿ ತಪ್ಪೇನು. ಪ್ರಶಸ್ತಿ ಆಯ್ಕೆ ಎಂದರೆ ಯಾರಿಗೂ ಗೊತ್ತಾಗದಂತೆ ಮಾಡುವ ರಹಸ್ಯ ಕಾರ್ಯಾಚರಣೆ ಏನಲ್ಲವಲ್ಲ. 2018-19ರ ಸಾಲಿನ ಪ್ರಶಸ್ತಿಗಳನ್ನೂ ಸಹ ಸರ್ವಸದಸ್ಯರ ಸಭೆಯಲ್ಲಿ ಅನುಮೋದನೆಗೊಂಡ ಕೂಡಲೇ ಪ್ರೆಸ್‍ಮೀಟ್ ಕರೆದು ಹಾಗೂ ಈಮೇಲ್ ಮೂಲಕ ವಿವರಗಳನ್ನು ಪತ್ರಿಕೆಗಳಿಗೆ ಕೊಡಲಾಗಿತ್ತು. ಈ ಸಲ ಪತ್ರಿಕೆಯವರೇ ಯಾವುಯಾವುದೋ ಮೂಲಗಳಿಂದ ವಿವರ ಪಡೆದು ಪ್ರಕಟಿಸಿದ್ದಾರೆ. ಯಾವುದರ ಮೂಲಕ ಹೇಗೆ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿಯನ್ನು ಪತ್ರಿಕೆಗಳಿಗೆ ಬಿಡುಗಡೆ ಮಾಡುತ್ತೀರೆಂಬುದು ಮುಖ್ಯವೋ ಇಲ್ಲಾ ಪ್ರಶಸ್ತಿ ಕುರಿತು ಪತ್ರಿಕೆಗಳಲ್ಲಿ ಪ್ರಕಟವಾಗುವುದು ಮುಖ್ಯವೋ. ಪ್ರಶಸ್ತಿ ಘೋಷಣೆಯಾದ ಕೂಡಲೇ ಪತ್ರಿಕೆಗಳಿಗೆ ಸುದ್ದಿ ಹೋಗದೇ ವಿಳಂಬ ಮಾಡಿದರೆ ಕುತೂಹಲ ತಾಳದ ಸದಸ್ಯರುಗಳೇ ವಿಷಯವನ್ನು ಪಬ್ಲಿಕ್ ಮಾಡುವ ಸಾಧ್ಯತೆಗಳಿಗೆ ಹಿಂದಿನ ಅನುಭವಗಳೇ ಸಾಕ್ಷಿಯಾಗಿದ್ದರಿಂದ ಆದಷ್ಟು ಬೇಗ ಪತ್ರಿಕೆಗಳಿಗೆ ಕಳುಹಿಸುವ ಇಲ್ಲವೇ ಪ್ರೆಸ್ ಮೀಟ್ ಮಾಡುವ ಕೆಲಸವನ್ನು ಮಾಡಲಾಗುತ್ತದೆ.


4. ಅಕಾಡೆಮಿ ಘೋಷಿಸಿದ ಪ್ರಶಸ್ತಿಯ ಪಟ್ಟಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರ ಅನುಮತಿ ಇರಲಿಲ್ಲ.

ಅಕಾಡೆಮಿಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅನುದಾನದಿಂದ ನಡೆಯುತ್ತಿದ್ದರೂ ಸ್ವಾಯತ್ತತೆ ಹೊಂದಿರುವ ಸಂಸ್ಥೆಗಳು. ಇದನ್ನು ಸರಕಾರವೇ ಒಪ್ಪಿಕೊಂಡ ಬರುಗೂರರ ಸಾಂಸ್ಕೃತಿಕ ನೀತಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಸ್ವಾಯತ್ತ ಸಂಸ್ಥೆಯಲ್ಲಿ ಸರ್ವಸದಸ್ಯರ ಸಭೆಯ ತೀರ್ಮಾನವೇ ಅಂತಿಮ. ಅಧ್ಯಕ್ಷರು ಹಾಗೂ ಸದಸ್ಯರು ಇರುವ ಕಾರ್ಯಕಾರಿ ಸಮಿತಿ ತೆಗೆದುಕೊಂಡ ನಿರ್ಣಯ ಬೈಲಾ ಪ್ರಕಾರ ಇದೆಯೋ ಇಲ್ಲವೋ ಎಂದು ಪರಿಶೀಲಿಸಿ ಅನುಮೋದಿಸುವುದು ಮಾತ್ರ ರೆಜಿಸ್ಟ್ರಾರ್‍ರವರ ಕರ್ತವ್ಯ. ಹೀಗೆ ಕಾರ್ಯಕಾರಿ ಸಮಿತಿಯೊಂದು ಬಹುಮತದಿಂದ ಆಯ್ಕೆ ಮಾಡಲಾದ ಪ್ರಶಸ್ತಿ ಪುರಸ್ಕೃತರ ಪಟ್ಟಿಗೆ ಇಲಾಖೆಯ ನಿರ್ದೇಶಕರ ಅನುಮತಿ ಬೇಕೆಂಬುದು ಯಾವ ಬೈಲಾದಲ್ಲೂ ಹೇಳಿಲ್ಲ. ಬೈಲಾ ಪ್ರಕಾರವೇ ಮಾಡಲಾದ ಕಾರ್ಯಕಾರೀ ಸಮಿತಿಯ ತೀರ್ಮಾನದಲ್ಲಿ ಅನಗತ್ಯವಾಗಿ ಮೂಗುತೂರಿಸುವ ಅಧಿಕಾರ ರೆಜಿಸ್ಟ್ರಾರ್‍ರವರಿಗೂ ಇಲ್ಲಾ, ಇಲಾಖೆಯ ನಿರ್ದೇಶಕರಿಗೂ ಇಲ್ಲಾ. ಇದು ಗೊತ್ತಿದ್ದರೂ ರೆಜಿಸ್ಟ್ರಾರ್ ಮೇಡಂ ತಮಗಿಲ್ಲದ ಅಧಿಕಾರವನ್ನು ಚಲಾಯಿಸಲು ಪ್ರಯತ್ನಿಸುತ್ತಿರುವುದೇ ಅಕಾಡೆಮಿಯ ಸ್ವಾಯತ್ತತೆಗೆ ದಕ್ಕೆಯನ್ನುಂಟುಮಾಡುವಂತಹುದು. ಅಧ್ಯಕ್ಷರುಗಳ ಜೊತೆಗೆ ಸಂಘರ್ಷಕ್ಕೆ ಕಾರಣವಾಗುವಂತಹುದು. 


5. ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದಿಸಿ ಬರೆಯಲಾದ ಪತ್ರಕ್ಕೆ ರೆಜಿಸ್ಟ್ರಾರ್ ಸಹಿ ಮಾಡಿಲ್ಲ.

ಅರೆ.. ಸರ್ವಸದಸ್ಯರ ಸಭೆಯೇ ಅಂಗೀಕರಿಸಿದ ನಿರ್ಣಯಗಳಿಗೆ ಸ್ವತಃ ರೆಜಿಸ್ಟ್ರಾರ್‍ರವರೇ ಸಹಿ ಮಾಡಿ ತಮ್ಮ ಅನುಮೋದನೆಯನ್ನು ತಿಳಿಸಿದ ಮೇಲೆ ಮತ್ತೇನಿದೆ. ಕಾರ್ಯಕಾರಿ ಸಮಿತಿ ನಿರ್ಧರಿಸಿಯಾಗಿದೆ, ಹೇಗೋ ಪತ್ರಿಕೆಗಳಲ್ಲಿ ಪ್ರಶಸ್ತಿ ಪಟ್ಟಿ ಬಿಡುಗಡೆಯಾಗಿದೆ. ಸ್ವಾಯತ್ತ ಸಂಸ್ಥೆಯೊಂದರ ಮುಖ್ಯಸ್ಥರಾಗಿರುವ ಅಕಾಡೆಮಿ ಅಧ್ಯಕ್ಷರು ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನಾ ಪತ್ರ ಬರೆಯುವುದು ತಪ್ಪಾ? ಯಾಕೆ ಬರೆಯಬಾರದು? ಅಧ್ಯಕ್ಷರು ಪತ್ರ ಬರೆಯಬಾರದು ಅಂತಾ ಯಾವ ಬೈಲಾದಲ್ಲಿದೆ. ಅಕಾಡೆಮಿಗಳ ಸ್ವಾಯತ್ತತೆಯನ್ನು ಶತಾಯ ಗತಾಯ ಮೊಟಕುಗೊಳಿಸುವುದೇ ಈ ಅಧಿಕಾರಿವರ್ಗದವರ ತಂತ್ರಗಾರಿಕೆಯಾಗಿದೆ. ಎಲ್ಲಾ ಅಧಿಕಾರಗಳನ್ನೂ ತಮ್ಮ ಕೈಯಲ್ಲಿ ಇಟ್ಟುಕೊಂಡು ಅಕಾಡೆಮಿಯ ಅಧ್ಯಕ್ಷರು ಹಾಗೂ ಸದಸ್ಯರುಗಳನ್ನು ಸೂತ್ರದ ಬೊಂಬೆಯಂತೆ ಆಟ ಆಡಿಸುವ ಪ್ರಯತ್ನವನ್ನು ಮಾಡುತ್ತಲೇ ಇರುತ್ತಾರೆ. ಅಧಿಕಾರಗಳ ಒಳಪೆಟ್ಟುಗಳಿಗೆ ಸವಾಲು ಹಾಕಿ ಅಕಾಡೆಮಿಯ ಸ್ವಾಯತ್ತತೆಯನ್ನು ಎತ್ತಿ ಹಿಡಿಯ ಬಯಸುವ ಜೆ.ಲೊಕೇಶ್‍ರವರಂತಹ ಖಡಕ್ ಅಧ್ಯಕ್ಷರಿಗೆ ಇನ್ನಿಲ್ಲದಂತೆ ತೊಂದರೆ ಕೊಟ್ಟು ಕಾನೂನಿನ ಕೊಕ್ಕೆಯಲ್ಲಿ ಸಿಕ್ಕಿಸಲು ನೋಡುತ್ತಾರೆ. ಈಗಲೂ ಆಗಿದ್ದು ಅಕಾಡೆಮಿಯ ಸ್ವಾಯತ್ತತೆಯ ಮೇಲೆ ಅಧಿಕಾರಿಶಾಹಿಯ ಸವಾರಿ ಮಾತ್ರ. ಇದಕ್ಕೆ ಬಲಿಪಶುವಾಗಿದ್ದು ಮಾತ್ರ ಪ್ರಶಸ್ತಿ ಪುರಸ್ಕೃತಿ ರಂಗಕಲಾವಿದರು. 


6. ಉಮಾಶ್ರೀಯವರಿಗೆ ಜೀವಮಾನದ ಸಾಧನೆ ಪ್ರಶಸ್ತಿ ಕೊಟ್ಟಿದ್ದು ತಪ್ಪು..

ಹಾಂ.. ಘೋಷಿತ ಪ್ರಶಸ್ತಿಗಳನ್ನು ರದ್ದು ಮಾಡುವ ಸರದೇಶಪಾಂಡೆಯಂತವರ ಒಳಗುದಿಗೆ ಪ್ರಮುಖ ಕಾರಣವಾಗಿದ್ದು ಇದು. ಕಾಂಗ್ರೆಸ್ ಪಕ್ಷದ ಸರಕಾರದಲ್ಲಿ ಸಚಿವೆಯಾಗಿದ್ದ ಉಮಾಶ್ರೀಯವರಿಗೆ ಪ್ರಶಸ್ತಿ ಕೊಡಬಾರದಿತ್ತು ಎಂಬುದು ಈ ಕೇಸರಿ ಕಲಾವಿದರ ಮುಖ್ಯ ಆಕ್ಷೇಪಣೆ. ಸಂಘಪರಿವಾರದ ಅಂಗವಾಗಿರುವ, ಬಿಜೆಪಿ ಚುನಾವಣಾ ಪ್ರಚಾರಕ್ಕೆ ಬೀದಿ ನಾಟಕ ಪ್ರಕಾರವನ್ನು ವ್ಯಾಪಕವಾಗಿ ಬಳಸಿದ ಸರದೇಶಪಾಂಡಯವರು ತಮ್ಮ ಕಣ್ಣಿಗೆ ಹಾಕಿಕೊಂಡ ಕೇಸರಿ ಕನ್ನಡಕವನ್ನು ತೆಗೆದು ಕಲಾವಿದರಾಗಿ ಯೋಚನೆ ಮಾಡಿದ್ದರೆ ಈ ರೀತಿಯ ಆಕ್ಷೇಪ ಮಾಡುತ್ತಲೇ ಇರಲಿಲ್ಲ. ನಾಟಕ ಅಕಾಡೆಮಿ ರಾಜಕಾರಣಿ ಉಮಾಶ್ರೀಯವರಿಗೆ ಪ್ರಶಸ್ತಿಯನ್ನು ಕೊಟ್ಟಿಲ್ಲಾ ಹಾಗೂ ರಾಜಕಾರಣಿಗಳಿಗೆ ಅಕಾಡೆಮಿ ಪ್ರಶಸ್ತಿಯನ್ನೂ ಕೊಡುವುದಿಲ್ಲ. ಪ್ರಶಸ್ತಿ ಘೋಷಣೆಯಾದಾಗ ಉಮಾಶ್ರೀಯವರು ಸಚಿವರೇನು ಶಾಸಕರೂ ಆಗಿರಲಿಲ್ಲ. ಕನ್ನಡ ರಂಗಭೂಮಿಯ ಜನಪ್ರೀಯ ಅಭಿನೇತ್ರಿ ಉಮಾಶ್ರೀಯವರ ಜೀವಮಾನದ ಸಾಧನೆಗಾಗಿ ಪ್ರಶಸ್ತಿಯನ್ನು ಕೊಡಮಾಡಲಾಗಿದೆ. ಅದರ ಹಿಂದೆ ಪ್ರಬಲ ಕಾರಣವೂ ಇದೆ. ಕಳೆದ ಎರಡು ವರ್ಷಗಳಲ್ಲಿ ನಾಟಕ ಅಕಾಡೆಮಿಯ ಜೀವಮಾನ ಸಾಧನೆ ಪ್ರಶಸ್ತಿಯನ್ನು ಹಿರಿಯ ರಂಗಕರ್ಮಿಗಳಾದ ಪ್ರಸನ್ನ ಹಾಗೂ ಗಂಗಾಧರಸ್ವಾಮಿಯವರಿಗೆ ಕೊಟ್ಟು ಗೌರವಿಸಲಾಗಿತ್ತು. ಈ ಇಬ್ಬರೂ ಸಹ ರಂಗ ನಿರ್ದೇಶಕರಾಗಿದ್ದು ಹವ್ಯಾಸಿ ರಂಗಭೂಮಿಯವರಾಗಿದ್ದರು. ಈ ಸಲ ಅಭಿನಯ ಕಲಾವಿದರನ್ನು ಆಯ್ಕೆಮಾಡುವುದು ಸೂಕ್ತವಾಗಿತ್ತು. ಎರಡೂ ಸಲ ಪುರುಷರನ್ನೇ ಪ್ರಶಸ್ತಿಗೆ ಪರಿಗಣಿಸಿದ್ದರಿಂದ ಈ ಸಲ ಸಾಧಕ ಮಹಿಳೆಯೊಬ್ಬರಿಗೆ ಪ್ರಶಸ್ತಿ ಕೊಡುವುದು ಲಿಂಗಸಮಾನತೆ ದೃಷ್ಟಿಯಿಂದ ಸರಿಯಾದ ಕ್ರಮವಾಗಿತ್ತು. ವೃತ್ತಿರಂಗಭೂಮಿ, ಗ್ರಾಮೀಣ ರಂಗಭೂಮಿ ಹಾಗೂ ಪೌರಾಣಿಕ ರಂಗಭೂಮಿಯವರು ತಮ್ಮ ಕ್ಷೇತ್ರದ ಸಾಧಕರೊಬ್ಬರಿಗೆ ಜೀವಮಾನದ ಪ್ರಶಸ್ತಿಯನ್ನು ಕೊಡಲೇಬೇಕು ಎಂದು ಅಧ್ಯಕ್ಷರನ್ನು ಒತ್ತಾಯಿಸತೊಡಗಿದ್ದರು. ಇರುವುದೊಂದೇ ಪ್ರಶಸ್ತಿ ರಂಗಭೂಮಿಯ ಯಾವ ವಿಭಾಗದವರಿಗೆ ಕೊಡುವುದು? ಎಂಬ ಪ್ರಶ್ನೆ ಕಾರ್ಯಕಾರಿ ಸಮಿತಿಯ ಮುಂದೆ ಬಂದಾಗ ಹವ್ಯಾಸಿ, ಗ್ರಾಮೀಣ, ವೃತ್ತಿ, ಪೌರಾಣಿಕ ಹಾಗೂ ಕೈಗಾರಿಕಾ ರಂಗಭೂಮಿಗೆ ಅಪಾರವಾದ ಕೊಡುಗೆಯನ್ನು ಕೊಟ್ಟ ಮಹಿಳಾ ಕಲಾವಿದೆಯೊಬ್ಬರಿಗೆ ಈ ಸಲದ ಜೀವಮಾನದ ಪ್ರಶಸ್ತಿಯನ್ನು ಕೊಡುವುದು ಸೂಕ್ತ ಎಂದು ನಿರ್ಧರಿಸಲಾಯಿತು. ಈ ಮಾನದಂಡಕ್ಕೆ ಉಮಾಶ್ರೀಯವರ ಹೆಸರು ಸೂಕ್ತವಾದ ಆಯ್ಕೆಯಾಗಿತ್ತು. ಹೀಗಾಗಿ ಸರ್ವಸಮ್ಮತದ ಆಯ್ಕೆಯಾಗಿ ಉಮಾಶ್ರೀಯವರನ್ನು ಪ್ರಶಸ್ತಿಗೆ ಪರಿಗಣಿಸಿ ಆಯ್ಕೆ ಮಾಡಲಾಯಿತು. ಕಲಾವಿದೆ ಉಮಾಶ್ರೀಯವರ ಆಯ್ಕೆಯನ್ನು ಯಾರೂ ವಿರೋಧಿಸಲು ಸಾಧ್ಯವಿಲ್ಲ ಯಾಕೆಂದರೆ ಅವರು ಜೀವಮಾನದ ಪ್ರಶಸ್ತಿಗೆ ಅತ್ಯಂತ ಅರ್ಹರಾಗಿದ್ದಾರೆ. ಅವರ ಹಾಗೆ ಸಮಗ್ರ ರಂಗಭೂಮಿಯಲ್ಲಿ ತೊಡಗಿಸಿಕೊಂಡು ಜನಪ್ರೀಯವಾದ ಇನ್ನೊಬ್ಬ ಕಲಾವಿದೆಯ ಹೆಸರನ್ನು ದೇಶಪಾಂಡೆಯಂತವರು ಸೂಚಿಸಲಿ ನೊಡೋಣ. ಕೇವಲ ರಾಜಕೀಯ ಕಾರಣಗಳಿಗಾಗಿ ವಿರೋಧಿಸುವವರ ಸಂದೇಹಗಳಿಗೆ ಮದ್ದಿಲ್ಲ.

ಘೋಷಿತಗೊಂಡ ಪ್ರಶಸ್ತಿಗಳನ್ನು ಅಧಿಕಾರದ ಪ್ರತಿಷ್ಟೆಗಾಗಿಯೋ, ರಾಜಕೀಯ ಕಾರಣಕ್ಕಾಗಿಯೋ ಇಲ್ಲವೇ ತಾಂತ್ರಿಕ ಕಾರಣಕ್ಕಾಗಿಯೋ ವಿರೋಧಿಸುವವರಿಗೆ ಕಲಾವಿದರ ಭಾವನೆಗಳು ಅರ್ಥವಾಗುವುದಿಲ್ಲ. ಕಲೆ ಮತ್ತು ಕಲಾವಿದರಿಗಾಗಿಯೇ ಇರುವ ನಾಟಕ ಅಕಾಡೆಮಿಯ ಉದ್ದೇಶವೇ ಇಂತವರಿಗೆ ಅರ್ಥವಾಗುವುದಿಲ್ಲ. ಪ್ರಶಸ್ತಿ ರದ್ದುಗೊಳಿಸಲು ಉತ್ಸುಕರಾಗಿರುವವರು ಹೇಳುವಂತೆ ತರಾತುರಿಯಲ್ಲಿ  ಪ್ರಶಸ್ತಿ ಘೋಷಿಸಲಾಯ್ತಾ? ಆಯ್ಕೆಯ ಹಿಂದೆ ತಾಂತ್ರಿಕ ದೋಷಗಳಿವೆಯಾ? ಎನ್ನುವುದು ಈಗ ಮುಖ್ಯವಾದ ಸಂಗತಿಯಲ್ಲಾ. 30 ಜನ ಕಲಾವಿದರ ಸ್ವಾಭಿಮಾನದ ಪ್ರಶ್ನೆ ಇದರಲ್ಲಿದೆ. ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾದವರಲ್ಲಿ ಬಹುತೇಕರು ಕನ್ನಡ ರಂಗಭೂಮಿಗೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆಯನ್ನು ಕೊಟ್ಟಿದ್ದಾರೆ. ಹಲವಾರು ವರ್ಷಗಳ ಕಾಲ ಪರಿಶ್ರಮವಹಿಸಿದ್ದಾರೆ. ಯಾವುದೇ ಜಾತಿ, ಧರ್ಮ, ಪಕ್ಷಗಳ ಪಕ್ಷಪಾತವಿಲ್ಲದೇ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ. ಪ್ರಶಸ್ತಿ ಪಟ್ಟಿಯಲ್ಲಿರುವ ಬಹುತೇಕರು ತಮಗೆ ಪ್ರಶಸ್ತಿ ಕೊಡಬೇಕೆಂದು ಅರ್ಜಿ ಸಲ್ಲಿಸಿಲ್ಲ, ದುಂಬಾಲು ಬಿದ್ದಿಲ್ಲ, ಲಾಭಿ ಮಾಡಿಲ್ಲ. ಅಕಾಡೆಮಿಯೇ ಕರೆದು ಕೊಡುತ್ತೇನೆ ಎಂದು ಘೋಷಿಸಿದ ಪ್ರಶಸ್ತಿಯನ್ನು ಅಕಾಡೆಮಿಯೇ ರದ್ದು ಮಾಡುವುದು ಒಳ್ಳೆಯ ಸಂಪ್ರದಾಯವಲ್ಲ. 

ಕಲಾವಿದರು ಮೂಲಭೂತವಾಗಿ ಭಾವುಕ ಜೀವಿಗಳು. ಪ್ರಶಸ್ತಿ ಬಂದಾಗ ಸಂಭ್ರಮಿಸಿದ್ದಾರೆ. ತಮ್ಮ ಶ್ರಮ ಸಾರ್ಥಕವಾಯಿತು ಎಂದು ಸಂತಸ ಪಟ್ಟಿದ್ದಾರೆ. ಪ್ರಶಸ್ತಿ ಬಂದಿದ್ದನ್ನೇ ನೆಪವಾಗಿಟ್ಟುಕೊಂಡು ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿ ಪಡೆಯುವವರನ್ನು ಸನ್ಮಾನಿಸಿ ಗೌರವಿಸಿದೆ. ಈಗ ಕೊಡಲಾಗುತ್ತದೆ ಎಂದು ಭರವಸೆ ಕೊಟ್ಟು ಇದ್ದಕ್ಕಿದ್ದಂತೆ ಪ್ರಶಸ್ತಿ ರದ್ದು ಮಾಡಿದರೆ ಕಲಾವಿದರ ಸ್ವಾಭಿಮಾನಕ್ಕೆ ಪೆಟ್ಟುಬೀಳುತ್ತದೆ. ಕಲಾವಿದರು ಅತೀವವಾದ ಮಾನಸಿಕ ವೇದನೆ ಮತ್ತು  ಅವಮಾನಕ್ಕೆ ತುತ್ತಾಗುತ್ತಾರೆ. ಕಲಾವಿದರ ಬಗ್ಗೆ ಪ್ರೀತಿ, ಕಕ್ಕುಲಾತಿ, ಮಮತೆ, ಗೌರವ ಇಲ್ಲದ ನಾಟಕ ಅಕಾಡೆಮಿಯ ಅಧ್ಯಕ್ಷರು ಹಾಗೂ ಸದಸ್ಯರುಗಳು ಪ್ರಶ್ನಾರ್ಹರಾಗುತ್ತಾರೆ. ಪ್ರಶಸ್ತಿಯನ್ನು ಘೋಷಿಸಿ ರದ್ದುಪಡಿಸಿದ್ದಕ್ಕಾಗಿ ಇಡೀ ಅಕಾಡೆಮಿಯೇ ಅವಮಾನಪೀಡಿತವಾಗಬೇಕಾಗುತ್ತದೆ. ಯಾರೋ ಒಂದಿಬ್ಬರು ಸದಸ್ಯರು ಹಾಗೂ ಅಧಿಕಾರಿಗಳ ಸೇಡಿನ ರಾಜಕೀಯಕ್ಕೆ ಕಲಾವಿದರು ಬಲಿಪಶುವಾಗುವುದನ್ನು ಇಡೀ ರಂಗಭೂಮಿ ಒಂದಾಗಿ ಖಂಡಿಸಬೇಕಾಗಿದೆ.

ನೈತಿಕವಾಗಿ ಹಾಗೂ ತಾಂತ್ರಿಕವಾಗಿ ನೋಡಿದರೆ ಈಗಿನ ನಾಟಕ ಅಕಾಡೆಮಿಯ ಅಧ್ಯಕ್ಷರು ಸರ್ವ ಸದಸ್ಯರ ಸಭೆ ನಡೆಸುವುದೇ ಸೂಕ್ತವಲ್ಲ. ಯಾಕೆಂದರೆ ಇನ್ನೂ ಬೈಲಾ ಪ್ರಕಾರ ಪೂರ್ಣವಾಗಿ ಸರ್ವಸದಸ್ಯರು ಅಯ್ಕೆಯೇ ಆಗಿಲ್ಲ. ಅಕಾಡೆಮಿಯ ನಡಾವಳಿಯ ಪ್ರಕಾರ ಹದಿನೈದು ಜನ ಸದಸ್ಯರುಗಳನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವಾಲಯವು ಆಯ್ಕೆ ಮಾಡಬೇಕು ಹಾಗೂ ಮೂರು ಜನ ಪರಿಣಿತರನ್ನು ಅಕಾಡೆಮಿಯ ಅಧ್ಯಕ್ಷರು ಹಾಗೂ ಸದಸ್ಯರುಗಳು ಕೋಆಪ್ಟ್ ಮಾಡಿಕೊಳ್ಳಬೇಕು. ಅಂದರೆ ಅಧ್ಯಕ್ಷರನ್ನು ಹೊರತು ಪಡಿಸಿ ಒಟ್ಟು ಹದಿನೆಂಟು ಜನ ಸದಸ್ಯರುಗಳು ಸೇರಿ ಸರ್ವಸದಸ್ಯರಾಗುತ್ತಾರೆ. ಅಕಾಡೆಮಿಯ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಈ ಎಲ್ಲಾ ಸದಸ್ಯರುಗಳು ಸೇರಿ ತೆಗೆದುಕೊಂಡ ಬಹುಮತದ ನಿರ್ಣಯಗಳನ್ನು ರೆಜಿಸ್ಟ್ರಾರ್ ಎನ್ನುವ ಸರಕಾರಿ ಅಧಿಕಾರಿ ದಾಖಲಿಸಬೇಕಾಗುತ್ತದೆ. ಇದು ನಡಾವಳಿಗಳಲ್ಲಿರುವ ನಿಯಮ. ಪೂರ್ಣ ಪ್ರಮಾಣದ ಸದಸ್ಯರೇ ಇಲ್ಲದಿರುವಾಗ ಸರ್ವಸದಸ್ಯರ ಸಭೆ ಕರೆದು ಪ್ರಶಸ್ತಿಗಳ ಕುರಿತು ನಿರ್ಣಯಗಳನ್ನು ತೆಗೆದುಕೊಳ್ಳುವುದೇ ತಾಂತ್ರಿಕವಾಗಿ ಕಾರ್ಯಸಾಧುವಲ್ಲ. ಆದರೂ ಅದನ್ನು ಮಾಡುತ್ತಿದ್ದಾರೆ.. ಇದಕ್ಕೆ ರೆಜಿಸ್ಟ್ರಾರ್ ಒಪ್ಪಿಕೊಂಡಿದ್ದಾರೆ ಎಂಬುದೇ ಸೋಜಿಗ.   

ಈಗ ಪ್ರಶಸ್ತಿಗೆ ಪಾತ್ರರಾಗಿರುವ ಕಲಾವಿದರ ಹಿತಾಸಕ್ತಿಯನ್ನು ಕಾಪಾಡುವ ಹೊಣೆಗಾರಿಕೆ ಹಾಗೂ ನಾಟಕ ಅಕಾಡೆಮಿಯ ಗೌರವವನ್ನು ಉಳಿಸಿಕೊಳ್ಳುವ ಜವಾಬ್ದಾರಿ ಅಕಾಡೆಮಿಯ ಸದಸ್ಯರುಗಳ ಕೈಯಲ್ಲಿದೆ. 2020, ಜನವರಿ 3 ರಂದು ಕರೆಯಲಾದ ಸರ್ವಸದಸ್ಯರ ಸಭೆಯಲ್ಲಿ ಭಾಗವಹಿಸುವ ಅಕಾಡೆಮಿಯ ಸದಸ್ಯರುಗಳು ಘೋಷಿತ ಪ್ರಶಸ್ತಿ ರದ್ದತಿಯನ್ನು ಬಹುಮತದಿಂದ ವಿರೋಧಿಸಬೇಕಾಗಿದೆ. ಯಾರೇ ಆಗಲಿ ಕಲಾವಿದರು ಕಲಾವಿದರೆ,, ರಂಗಭೂಮಿಯವರು ರಂಗಭೂಮಿಯವರೇ.. ಯಾವುದೇ ಕಲಾವಿದರಿಗೆ ಅವಮಾನವಾದರೂ ಅದು ರಂಗಭೂಮಿಯವರಿಗಾದ ಅವಮಾನವೇ. ರಂಗಭೂಮಿಯಲ್ಲಿ ತೊಡಗಿಸಿಕೊಂಡ ಎಲ್ಲರೂ ಕುಲಬಾಂಧವರೇ. ಬಂಧುಗಳ ಸ್ವಾಭಿಮಾನಕ್ಕೆ ದಕ್ಕೆಯಾಗುವುದನ್ನು ಸಹಿಸಬಾರದು. ಅಕಾಡೆಮಿಯ ಸದಸ್ಯರುಗಳು ರಂಗಭೂಮಿಯ ಐಕ್ಯತೆಯನ್ನು ಉಳಿಸಲು, ಅಕಾಡೆಮಿಯ ಸ್ವಾಯತ್ತತೆಯನ್ನು ಕಾಪಾಡಲು, ಕಲಾವಿದರುಗಳ ಸ್ವಾಭಿಮಾನವನ್ನು ಎತ್ತಿಹಿಡಿಯಲು, ಅಧಿಕಾರಿಗಳ ಕುತಂತ್ರವನ್ನು ಬಯಲುಮಾಡಲು ಒಂದಾಗಬೇಕಿದೆ. ಏನಕೇನ ಪ್ರಕಾರೇಣ ಘೋಷಿತಗೊಂಡ ಪ್ರಶಸ್ತಿಗಳನ್ನು ಕಲಾವಿದರುಗಳಿಗೆ ಕೊಟ್ಟು ಗೌರವಿಸುವ ಮೂಲಕ ಅಕಾಡೆಮಿಯ ಗೌರವವನ್ನು ಎತ್ತಿ ಹಿಡಿಯಬೇಕಾಗಿದೆ. ಯಾಕೆಂದರೆ ಅಕಾಡೆಮಿಯ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಬದಲಾಗುತ್ತಾರೆಯೇ ಹೊರತು ಅಕಾಡೆಮಿ ಅಲ್ಲಾ. 

ನಾಟಕ ಅಕಾಡೆಮಿಯ ಸರ್ವಸದಸ್ಯರ ನಿರ್ಣಯಗಳಲ್ಲಿ ಮೂಗು ತೂರಿಸುವ ಅಧಿಕಾರವನ್ನು ಬೇರೆಯವರಿಗೆ ಬೈಲಾ ಕೊಟ್ಟಿಲ್ಲ. ಆದರೆ ಕಲಾವಿದರಿಗೆ ಅನ್ಯಾಯವಾದಾಗ ಪ್ರತಿರೋಧಿಸುವ ಹಕ್ಕನ್ನು ಸಂವಿಧಾನವೇ ಕೊಟ್ಟಿದೆ. ಹೀಗಾಗಿ ಈಗ ಪ್ರಶಸ್ತಿ ಘೋಷಿತ ಕಲಾವಿದರಿಗೆ ಅವಮಾನ ಆಗದ ರೀತಿಯಲ್ಲಿ ಸರ್ವಸದಸ್ಯರ ಸಭೆ ನಿರ್ಣಯ ತೆಗೆದುಕೊಳ್ಳಬೇಕಾಗಿದೆ. ಹಾಗಾದರೆ ನಾಟಕ ಅಕಾಡೆಮಿಯ ಸದಸ್ಯರುಗಳು ಈಗೇನು ಮಾಡಬೇಕು?

1. ಕಲಾವಿದರ ಗೌರವವನ್ನು ಎತ್ತಿ ಹಿಡಿಯಲು ಈಗಾಗಲೇ ಘೋಷಿತವಾದ ಪ್ರಶಸ್ತಿಗಳನ್ನು ಮಾನ್ಯಮಾಡಲು ಒಗ್ಗಟ್ಟಿನಿಂದ ಒತ್ತಾಯಿಸಬೇಕು.

2.ಅಕಾಡೆಮಿಯ ಸ್ವಾಯತ್ತತೆಯ ಮೇಲೆ ಸವಾರಿ ಮಾಡುತ್ತಿರುವ ರೆಜಿಸ್ಟ್ರಾರ್‍ರವರು ಎತ್ತುವ ತಾಂತ್ರಿಕ ನೆಪಗಳಿಗೆ ಸಮರ್ಥನೆಗಳನ್ನು ಬೈಲಾದಲ್ಲಿ ತೋರಿಸಲು ಕೇಳಬೇಕು.

3. ಪ್ರಶಸ್ತಿಗಳಿಗೆ ಹೊಸದಾಗಿ ಸಾಧಕರನ್ನು ಆಯ್ಕೆ ಮಾಡುವುದೇ ಆದಲ್ಲಿ ಅದನ್ನೂ ಮಾಡಲಿ ಆದರೆ ಇನ್ನು ನಾಲ್ಕು ತಿಂಗಳುಗಳ ಕಾಲ ಕಾಯ್ದು ಈ ಹಿಂದೆ 2019-20ರ ಸಾಲಿನ ಪ್ರಶಸ್ತಿಗೆ ಆಯ್ಕೆಯಾದವರ ಜೊತೆಗೆ 2020-21ನೇ ಸಾಲಿಗೆ ಹೊಸದಾಗಿ ಆಯ್ಕೆಯಾದವರನ್ನೂ ಸೇರಿಸಿ ಒಂದೇ ಸಲ ಎರಡೂ ವರ್ಷದ ಪ್ರಶಸ್ತಿಗಳನ್ನೂ ಎಪ್ರೀಲ್ ಅಥವಾ ಮೇ ತಿಂಗಳಲ್ಲಿ ಪ್ರದಾನ ಮಾಡಲಿ. ಆಗ ಯಾವ ಕಲಾವಿದರಿಗೂ ಅನ್ಯಾಯವಾಗುವುದಿಲ್ಲ. ಈ ಹಿಂದೆ ಶೇಖ ಮಾಸ್ತರ್‍ರವರು ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ಎರಡು ವರ್ಷಗಳ ಪ್ರಶಸ್ತಿಯನ್ನೂ ಒಂದೇ ಬಾರಿಗೆ ಕೊಟ್ಟ ಉದಾಹರಣೆಯೂ ಇದೆ.

4. ಅಕಾಡೆಮಿಗೆ ಅಧ್ಯಕ್ಷರು ಸದಸ್ಯರುಗಳು ಯಾವುದೇ ರಾಜಕೀಯ ಕಾರಣಗಳಿಗೆ ಆಯ್ಕೆಯಾಗಿರಲಿ. ಆದರೆ ಒಮ್ಮೆ ರಂಗಭೂಮಿಯನ್ನು ಪ್ರತಿನಿಧಿಸುವ ನಾಟಕ ಅಕಾಡೆಮಿಗೆ ನೇಮಕವಾದಮೇಲೆ ಸಮಗ್ರ ರಂಗಭೂಮಿಯ ಹಿತಾಸಕ್ತಿಯೇ ಅಕಾಡೆಮಿಯ ಧ್ಯೇಯವಾಗಿರಲಿ.

5. ಈಗಾಗಲೇ ಸರಕಾರದಿಂದ ಅನುಮೋದನೆಗೊಂಡು ಅಧಿಕಾರಿಗಳ ನಿರ್ಲಕ್ಷಕ್ಕೊಳಗಾಗಿ ಇಲಾಖೆಯ ಕಡತದಲ್ಲಿ ದೂಳುತಿನ್ನುತ್ತಿರುವ ಸಾಂಸ್ಕತಿಕ ನೀತಿಯ ಅನುಷ್ಟಾನಕ್ಕೆ ನಾಟಕ ಅಕಾಡೆಮಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಒತ್ತಾಯಿಸಲಿ. ಯಾಕೆಂದರೆ ಅದರಲ್ಲಿ ನಾಟಕ ಅಕಾಡೆಮಿಯ ಸ್ವಾಯತ್ತತೆ ಅಡಗಿದೆ. ಅಧಿಕಾರಿಗಳ ಸರ್ವಾಧಿಕಾರಿ ಧೋರಣೆಯಿಂದ ಅಕಾಡೆಮಿ ಸ್ವಾತಂತ್ರ್ಯವನ್ನು ಪಡೆಯಬೇಕೆಂದರೆ ಸ್ವಾಯತ್ತತೆ ಪಡೆಯುವುದು ಅತೀ ಮುಖ್ಯವಾಗಿದೆ.

ಕಲಾವಿದರೇ ರಂಗಭೂಮಿಯ ಉಳಿವಿಗೆ ಮೂಲ ಆಕರ. ಅವರ ಹಿತಾಸಕ್ತಿಯನ್ನು ಕಡೆಗಣಿಸುವ ಯಾವುದೇ ವ್ಯಕ್ತಿಯಾಗಲಿ ಇಲ್ಲವೇ ಸಂಸ್ಥೆಯಾಗಲಿ ರಂಗಭೂಮಿಯ ಇತಿಹಾಸದಲ್ಲಿ ಖಳನಾಯಕರಾಗಿ ದಾಖಲಾಗುತ್ತಾರೆ. ಅಧಿಕಾರಿಗಳು ಬರುತ್ತಾರೆ ಹೋಗುತ್ತಾರೆ ಆದರೆ ರಂಗಕರ್ಮಿಗಳು ರಂಗಭೂಮಿಯಲ್ಲೇ ಕಾಯಕನಿರತರಾಗಿ ಇರಬೇಕಾಗುತ್ತದೆ. ಕಲಾವಿದರಿಗೆ ಅಗೌರವ ತರುವಂತಹ ಯಾವುದೇ ಪ್ರಯತ್ನಗಳನ್ನು ರಂಗಕರ್ಮಿಗಳು ವಿರೋಧಿಸಲೇಬೇಕಿದೆ. ರಂಗಭೂಮಿ ಎನ್ನುವುದು ಯಾವಾಗಲೂ ಪ್ರತಿಭಟನೆಯ ಮಾಧ್ಯಮ. ರಂಗಕಲಾವಿದರಿಗೆ ಅನ್ಯಾಯವಾದಾಗ ಪ್ರತಿಭಟಿಸದಿದ್ದರೆ ಹೇಗೆ? ಇಷ್ಟಕ್ಕೂ ಈಗಿನ ನಾಟಕ ಅಕಾಡೆಮಿಯವರು ಹಠಕ್ಕೆ ಬಿದ್ದು ಘೋಷಿತ ಪ್ರಶಸ್ತಿಗಳನ್ನು ರದ್ದು ಮಾಡಿದ್ದೇ ಆದರೆ ಇಡೀ ರಂಗಭೂಮಿ ಒಂದಾಗಿ ನಾಟಕ ಅಕಾಡೆಮಿಯ ಮುಂದೆ ಧರಣಿ ಸತ್ಯಾಗ್ರಹ ಹೋರಾಟ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಬೇಕಾಗುತ್ತದೆ. ಇಂತಹ ಯಾವುದೇ ಪ್ರತಿರೋಧಕ್ಕೆ ಅವಕಾಶವನ್ನು ಕೊಡದೇ ಈ ಹಿಂದೆ ಘೋಷಿತವಾದಂತೆ ಕಲಾವಿದರಿಗೆ ಪ್ರಶಸ್ತಿಗಳನ್ನು ಪ್ರಸ್ತುತ ಅಕಾಡೆಮಿಯ ಅಧ್ಯಕ್ಷರು ಹಾಗೂ ಸದಸ್ಯರು ಕೊಡಮಾಡುವ ಶ್ಲಾಘನೀಯ ನಿರ್ಣಯವನ್ನು ತೆಗೆದುಕೊಳ್ಳುತ್ತಾರೆ ಎಂದು ಆಶಿಸೋಣ.

-ಶಶಿಕಾಂತ ಯಡಹಳ್ಳಿ


ಪ್ರಶಸ್ತಿ ರದ್ದತಿಗೆ ಜಾಲತಾಣಗಳಲ್ಲಿ ಪ್ರತಿರೋಧ ವ್ಯಕ್ತಪಡಿಸಿದ ಕೆಲವು ರಂಗಕರ್ಮಿಗಳ ಅನಿಸಿಕೆಗಳು ಹೀಗಿವೆ.

ಜೆ.ಲೊಕೇಶ್, ನಿಕಟ ಪೂರ್ವ ನಾಟಕ ಅಕಾಡೆಮಿಯ ಅಧ್ಯಕ್ಷರು

ನಾಟಕ ಅಕಾಡೆಮಿಯ 2019-20ನೇ ಸಾಲಿನ ಪ್ರಶಸ್ತಿಗಳನ್ನು ಅವಸರದಲ್ಲಿ ಘೋಷಣೆ ಮಾಡಲಾಯ್ತು ಹಾಗೂ ರೆಜಿಸ್ಟ್ರಾರ್‍ರವರ ಒಪ್ಪಿಗೆ ಇಲ್ಲದೇ ಅಧ್ಯಕ್ಷರೆ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆ ಮಾಡಿದರು ಎನ್ನುವ ವದಂತಿಯನ್ನು ಹಬ್ಬಿಸಿ ಇಲ್ಲಸಲ್ಲದ ಸಂದೇಹದ ಬೀಜ ಬಿತ್ತುತ್ತಿದ್ದಾರೆ. ಅವರ ಅನುಮಾನಗಳನ್ನು ಬಗೆಹರಿಸಲು ಮಾಹಿತಿ ಹಕ್ಕು ಮೂಲಕ ಸರ್ವಸದಸ್ಯರ ನಿರ್ಣಯಗಳ ಪಟ್ಟಿಯನ್ನು ಪಡೆದುಕೊಂಡಿರುವೆ. ಹದಿನೇಳು ದಿನ ಮೊದಲೇ ಅಕಾಡೆಮಿಯ ಎಲ್ಲಾ ಸದಸ್ಯರಿಗೂ ಪತ್ರದ ಮೂಲಕ ಸರ್ವಸದಸ್ಯರ ಸಭೆಗೆ ಬರಲು ಸೂಚಿಸಲಾಗಿತ್ತು. ಜುಲೈ 29ರಂದು ನಡೆದ ಸಭೆಯಲ್ಲಿ ಬೇರೆಲ್ಲಾ ವಿಷಯಗಳಂತೆ ಪ್ರಶಸ್ತಿ ಆಯ್ಕೆಯ ಕುರಿತು ಸುದೀರ್ಘ ಚರ್ಚೆ ನಡೆಸಿ ಸೂಕ್ತ ಸಾಧಕರ ಹೆಸರುಗಳನ್ನು ವಾರ್ಷಿಕ ಪ್ರಶಸ್ತಿಗೆ ಅಂತಿಮಗೊಳಿಸಲಾಯಿತು. ಒಪ್ಪಿತವಾದ ಸಭೆಯ ನಡಾವಳಿಗಳಿಗೆ ಅಕಾಡೆಮಿ ಅಧ್ಯಕ್ಷರ ಜೊತೆ ರೆಜಿಸ್ಟ್ರಾರ್‍ರವರೂ ಸಹ ಸಹಮತ ಹೊಂದಿ ಸಹಿ ಮಾಡಿದ್ದರು. ಇಲ್ಲಿ ಯಾವುದೇ ನಿರ್ಣಯವನ್ನೂ ತರಾತುರಿಯಲ್ಲಿ ಕೈಗೊಳ್ಳದೇ ಪೂರ್ವಯೋಜನೆಯಂತೆ ಮಾಡಲಾಗಿದೆ. ಅರ್ಹ ರಂಗಸಾಧಕರಿಗೆ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಅವರಿಗೆಲ್ಲಾ ಪ್ರಶಸ್ತಿ ಪ್ರದಾನ ಮಾಡುವುದು ನಾಟಕ ಅಕಾಡೆಮಿಯ ಕರ್ತವ್ಯವಾಗಿದೆ. 



ಸಿ.ಕೆ.ಗುಂಡಣ್ಣ, ಹಿರಿಯ ರಂಗಕರ್ಮಿಗಳು, ಸಮುದಾಯ

ಪ್ರಸ್ತುತ ಅಪೂರ್ಣ ಪ್ರಮಾಣದ ನಾಟಕ ಅಕಾಡೆಮಿ, ಹಿಂದಿನ ಸಾಲಿನ ಪೂರ್ಣ ಪ್ರಮಾಣದ ನಾಟಕ ಅಕಾಡೆಮಿ ಅಖೈರುಗೊಳಿಸಿದ್ದ ಪ್ರಶಸ್ತಿ ಪಟ್ಟಿಯನ್ನು ತಿರಸ್ಕರಿಸಿ ಹೊಸದಾಗಿ ಪ್ರಶಸ್ತಿಗೆ ಆಯ್ಕೆ ಮಾಡುತ್ತಾರೆ ಎನ್ನುವುದು ವಿಷಾದನೀಯ. ಇದರ ಹಿಂದೆ ಸಾಂಸ್ಕೃತಿಕ ಚಿಂತನೆಗಳಿಗಿಂತ ಸ್ವಾರ್ಥ ಮತ್ತು ರಾಜಕೀಯ ದ್ವೇಶದ ಛಾಯೆ ಎದ್ದು ಕಾಣುತ್ತಿದೆ. ಸರ್ಕಾರದ ಅಧೀಕೃತ ಪ್ರತಿನಿಧಿಯಾಗಿರುವ ನಾಟಕ ಅಕಾಡೆಮಿಯ ರಿಜಿಸ್ಟ್ರಾರ್ ಕೂಡ ಒಪ್ಪಿಗೆ ನೀಡಿ ಸಹಿ ಹಾಕಿದ ಪ್ರಶಸ್ತಿ ಪುರಸ್ಕೃತರ ಪಟ್ಟಿ ಮರುಪರಿಶೀಲನೆಗೂ ಒಳಗಾಗದೇ ಸಂಪೂರ್ಣವಾಗಿ ತಿರಸ್ಕೃತವಾಗುತ್ತದೆ ಎನ್ನುವುದು ದುರದೃಷ್ಟಕರ. ಈಗಾಗಲೇ ಪಟ್ಟಿಯಲ್ಲಿ ಇರುವ ಪ್ರಶಸ್ತಿ ಪುರಸ್ಕೃತರ ಹೆಸರುಗಳು ಮಾಧ್ಯಮದಲ್ಲಿ ಬಹಿರಂಗಗೊಂಡು ಪ್ರಶಸ್ತಿಯ ನಿರೀಕ್ಷೆಯಲ್ಲಿ ಇರುವ ಅವರಿಗೆ, ಅವರ ಕುಟುಂಬದವರಿಗೆ ಮತ್ತು ಅವರ ಅಭಿಮಾನಿಗಳಿಗೆ ಆಗುವ ಅವಮಾನ ಪದಗಳಲ್ಲಿ ಹೇಳಲಾಗದು. ಇಂತಹ ಪ್ರಸಂಗ ಬಹುಶಃ ನಮ್ಮ ರಾಜ್ಯದಲ್ಲಿ ಈ ಹಿಂದೆ ಆದ ಉದಾಹರಣೆ ನನಗಂತೂ ತಿಳಿಯದು. ದಯವಿಟ್ಟು ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕರು ಸನ್ಮಾನ್ಯ ಮಂತ್ರಿಗಳಿಗೆ ಇದರ ಬಗ್ಗೆ ತಿಳುವಳಿಕೆ ನೀಡಿ ಆಗಲಿರುವ ಆಘಾತವನ್ನು ತಪ್ಪಿಸಬೇಕು. ರಾಜ್ಯದ ಬೇರೆ ಜಿಲ್ಲೆಗಳ ಸಾಂಸ್ಕೃತಿಕ ಚಿಂತಕರು, ನಾಟಕ ಅಕಾಡೆಮಿ ಅಧ್ಯಕ್ಷರ ಈ ಅಸಾಂಸ್ಕೃತಿಕ ನಡೆಯನ್ನು ಖಂಡಿಸಬೇಕು. ಒಂದು ವೇಳೆ ಸನ್ಮಾನ್ಯ ಸಂಸ್ಕೃತಿ ಸಚಿವರ ಕೈವಾಡ ಈ ಹೀನ ಚಿಂತನೆಯ ಹಿಂದೆ ಇದೆ ಎಂದಾದಲ್ಲಿ ನಾವು ಸಾಂಸ್ಕೃತಿಕ ಪ್ರತಿಭಟನೆಗೂ ಮುಂದಾಗಬೇಕು. ನಮ್ಮ ರಾಜ್ಯದಲ್ಲಿನ ಈ ಕೆಟ್ಟ ನಡೆ, ಮುಂದಿನ ದಿನಗಳಲ್ಲಿನ ಕೆಟ್ಟ ಸಂಪ್ರದಾಯಕ್ಕೆ ನಾಂದಿಯಾಗದ ಹಾಗೆ ನೋಡಿಕೊಳ್ಳವುದು ರಾಜ್ಯದ ಸಾಂಸ್ಕೃತಿಕ ಚಿಂತಕರ ಆದ್ಯ ಕರ್ತವ್ಯವಾಗಬೇಕು. ನಮ್ಮ ವಿಭಿನ್ನ ರಾಜಕೀಯ ನಿಲುವುಗಳು ನಮ್ಮ ಸ್ನೇಹಿತರಿಗೆ, ಹಿತೈಷಿಗಳಿಗೆ, ಗುರು ಸಮಾನರಾದವರಿಗೆ ಆಗುವ ಅಪಮಾನ ಮತ್ತು ಹಿಂಸೆಯನ್ನು ತಡೆಯುವಲ್ಲಿ ಅಡ್ಡಗೋಡೆಗಳಾಗಬಾರದು.


ವಿಷುಕುಮಾರ್, ಮಾಜಿ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಇದು ನಿಜಕ್ಕೂ ಖಂಡನೀಯ. ಎಲ್ಲದಕ್ಕೂ ರಾಜಕೀಯ ತಳುಕು ಹಾಕುವುದು ಸರಿಯಲ್ಲ. ಮುಂದಿನ ವರ್ಷ ಅವರಿಗೆ ಬೇಕಾದವರಿಗೆ ಪ್ರಶಸ್ತಿ ಕೊಟ್ಟುಕೊಳ್ಳಲಿ.


ಬಿ.ಸುರೇಶ್, ರಂಗಕರ್ಮಿಗಳು.

ಒಂದು ಪ್ರಜಾಸತ್ತಾತ್ಮಕ ಸಭೆಯ ತೀರ್ಮಾನವನ್ನು ಮತ್ತೊಂದು ಅದೇ ಮಾದರಿಯ ಸಭೆ ತಿರಸ್ಕರಿಸುವುದು, ಅಮಾನ್ಯಗೊಳಿಸುವುದು ಪ್ರಜಾಪ್ರಭುತ್ವದ ಮೂಲ ಕಲ್ಪನೆಗೆ ಅವಮಾನ ಮಾಡಿದ ಹಾಗೆ. ಇಂದು ಕರ್ನಾಟಕ ನಾಟಕ ಅಕಾಡೆಮಿಯ ಅಡಿಯಲ್ಲಿ ಆಗಿರುವ ಈ ಬಗೆಯ ತೀರ್ಮಾನವು ಬರಲಿರುವ ನಾಳೆಗಳ ಬಗ್ಗೆ, ಭಾರತ ಎಂಬ ಬೃಹತ್ ಬಹುತ್ವದ ಹಾಗೂ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವಕ್ಕೆ ಮುಳುವಾಗಬಹುದು. ಈ ಹಿನ್ನೆಲೆಯಲ್ಲಿ ಹಿಂದಿನ ಸರ್ವಸದಸ್ಯರ ಸಭೆಯ ನಿರ್ಧಾರದ ಪ್ರಶಸ್ತಿ ವಿಜೇತರ ಆಯ್ಕೆ ಪಟ್ಟಿಯನ್ನು ಕೈ ಬಿಡುವ ಕುರಿತು ಈಗಿನ ಕರ್ನಾಟಕ ನಾಟಕ ಅಕಾಡೆಮಿಯು ತೆಗೆದುಕೊಂಡಿರುವ ತೀರ್ಮಾನವನ್ನು ನಾನು ವಿರೋಧಿಸುತ್ತೇನೆ. 


ವಸುಂಧರಾ ಭೂಪತಿ, ನಿಕಟಪೂರ್ವ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರು.

ಕೆಟ್ಟ ಪರಂಪರರೆ ಹುಟ್ಟು ಹಾಕುತ್ತಿದ್ದಾರೆ. ಖಂಡನೀಯ


ಎಸ್.ಜಿ.ಸಿದ್ದರಾಮಯ್ಯ, ಮಾಜಿ ಅಧ್ಯಕ್ಷರು, ಕನ್ನಡ ಅಭಿವೃದ್ದಿ ಪ್ರಾಧಿಕಾರ

ಸಾಂಸ್ಕೃತಿಕ ಲೋಕವನ್ನು ವಸುಧೈವಿಕ ಕುಟುಂಬ ಜಗತ್ತು ಎನ್ನುತ್ತಾರೆ. ರಾಜಕೀಯ ಮನಸ್ಸು ದ್ವೇಷವನ್ನು ಬಿತ್ತಿದರೆ ಸಾಂಸ್ಕೃತಿಕ ಮನಸ್ಸು ಪ್ರೀತಿ ಸೌಹಾರ್ದ ಸ್ನೇಹ ಶಾಂತಿಯನ್ನು ಬೆಳೆಯುತ್ತದೆ. ಈಗ ನಾಟಕ ಅಕಾಡೆಮಿಯಲ್ಲಿರುವವರು ಸಾಂಸ್ಕೃತಿಕ ಮನಸ್ಸುಳ್ಳವರು ಅಂದುಕೊಂಡಿದ್ದೇನೆ. ಪ್ರಜಾಪ್ರಭುತ್ವವನ್ನು ಗೌರವಿಸೋಣ. ಬಹುತ್ವ ಭಾರತವನ್ನು ರಕ್ಷಿಸೋಣ.



ಪ್ರೊ.ಕೆ.ಮರುಳಸಿದ್ದಪ್ಪ. ನಿಕಟಪೂರ್ವ ಅಧ್ಯಕ್ಷರು, ಕುವೆಂಪು ಭಾಷಾಭಾರತಿ ಪ್ರಾಧಿಕಾರ

ಹಿಂದಿನ ನಾಟಕ ಅಕಾಡೆಮಿಯ ಅಧ್ಯಕ್ಷರು, ಸದಸ್ಯರು ವಾರ್ಷಿಕ ಪ್ರಶಸ್ತಿಗಳ ಬಗೆಗೆ ತೆಗೆದುಕೊಂಡಿದ್ದ ತೀರ್ಮಾನವನ್ನು ರದ್ದು ಪಡಿಸಿ, ಹೊಸ ಆಯ್ಕೆ ಮಾಡಲು ಹೊರಟಿರುವ ಈಗಿನ ಅಧ್ಯಕ್ಷರು ಮತ್ತು ಸದಸ್ಯರ ನಿರ್ಧಾರ ದುರದೃಷ್ಟಕರ ಮಾತ್ರವಲ್ಲ ಖಂಡನಾರ್ಹ. ಇದೇ ಸಂದರ್ಭದಲ್ಲಿ ಇಂದಿನ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರು ಮತ್ತು ಸದಸ್ಯರನ್ನು ನಾನು ಅಭಿನಂದಿಸ ಬಯಸುತ್ತೇನೆ. ಹಿಂದಿನವರು ತೆಗೆದುಕೊಂಡಿದ್ದ ಎಲ್ಲ ತೀಮಾನಗಳನ್ನು ಇವರು ಮಾನ್ಯ ಮಾಡಿರುವುದಲ್ಲದೆ, ಅವುಗಳನ್ನು ಮುಂದುವರೆಸಿ ಎಲ್ಲರಿಗೂ ಪತ್ರ ಬರೆದಿದ್ದಾರೆಂದು ಕೇಳಿ ಬಲ್ಲೆ.. ನಮ್ಮ ಅವಧಿಯಲ್ಲಿಯೂ ಹೀಗೆಯೇ ತೀರ್ಮಾನ ತೆಗೆದುಕೊಂಡಿದ್ದ ವಿಚಾರ ಈಗ ನನಗೆ ನೆನಪಿಗೆ ಬರುತ್ತಿದೆ. ಸತ್ಸಂಪ್ರದಾಯಗಳನ್ನು ಒಪ್ಪಿ ಪಾಲಿಸಿಕೊಂಡು ಬರುವುದು ಅಕಾಡೆಮಿಗಳಂತಹ ಸಾಂಸ್ಕೃತಿಕ ಸಂಸ್ಥೆಗಳ ಕರ್ತವ್ಯವಾಗಬೇಕು. ಇದಕ್ಕೆ ಚ್ಯುತಿ ಬಂದಾಗ ದುಃಖವಾಗುತ್ತದೆ. 


ಡಾ.ವಿಜಯಮ್ಮ, ಹಿರಿಯ ರಂಗಕರ್ಮಿಗಳು,

ಈಗಾಗಲೇ ನಾಟಕ ಅಕಾಡೆಮಿಯ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ರಾಜಕಾರಣದ ಏರುಪೇರಿನಿಂದಾಗಿ ಗೊಂದಲಗಳು ಸೃಷ್ಟಿಯಾಗಿವೆ. ಆದರೆ ಪ್ರಶಸ್ತಿಗೆ ಭಾಜನರಾದ ಕಲಾವಿದರ ಅರ್ಹತೆಯನ್ನು ಈ ಗೊಂದಲಗಳು ಪ್ರಶ್ನಿಸಬಾರದು. ಅದು ಅಕಾಡೆಮಿಯಂತಹ ಸಂಸ್ಥೆಗೆ ಶೋಭೆ ತರುವುದಿಲ್ಲ. ಪ್ರಶಸ್ತಿಗಳನ್ನು ರದ್ದುಗೊಳಿಸುವ ಸುದ್ದಿ ನಿಜವಿರಲಾರದು. ಹೊಸ ಸದಸ್ಯರ ಮನ ಒಲಿಸಿ, ಒಪ್ಪಿಗೆ ಪಡೆದು ಈಗಾಗಲೇ ಘೋಷಿತ ಕಲಾವಿದರನ್ನೇ ಗೌರವಿಸುವುದು ಘನತೆಯುಳ್ಳವರು ಮಾಡಬೇಕಾದ ಕೆಲಸ. ಪ್ರಸ್ತುತ ಅಕಾಡೆಮಿಯೂ ಅದೇ ದಾರಿಯಲ್ಲಿ ನಡೆಯುವುದು ಸರಿಯಾದ ಕ್ರಮ ಕೊಂಚ ತಡವಾದರೂ ಕಾಯೋಣ. ಈಗಿನ ಸದಸ್ಯರ ಆಯ್ಕೆಯನ್ನೂ ಸೇರಿಸಿ ಎರಡು ವರ್ಷದ ಪ್ರಶಸ್ತಿಗಳನ್ನು ಒಟ್ಟಿಗೆ ಕೊಡಲಿ. ಅಕಾಡೆಮಿಗಳಿಗೆ ಒಂದು ಘನತೆ ಇದೆ. ಅದನ್ನು ಉಳಿಸಿಕೊಳ್ಳುವ ಸತ್ ಸಂಪ್ರದಾಯವನ್ನು ಉಳಿಸುವ ಉತ್ತಮರು ಇನ್ನೂ ನಮ್ಮ ರಂಗಭೂಮಿಯಲ್ಲಿ ಇದ್ದಾರೆ. ಇಂಥ ಸವಾಲನ್ನು ಪ್ರಸ್ತುತದ ಅಧ್ಯಕ್ಷರು, ಸದಸ್ಯರು ಸಮರ್ಥವಾಗಿ ಎದುರಿಸಿ ನಿಭಾಯಿಸುತ್ತಾರೆ ಮತ್ತು ಅಕಾಡೆಮಿಯ ಘನತೆಯನ್ನು ಕಾಪಾಡುತ್ತಾರೆ ಎಂದು ನಂಬಿದ್ದೇನೆ. ನಾವು ಕಲಾವಿದರಿಗೆ ಅಪಮಾನ ಅಗುವುದನ್ನು ಯಾವ ಕಾರಣಕ್ಕೂ ಸಹಿಸುವವರಲ್ಲ. ಕಾಯೋಣ..


ನಟರಾಜ ಹೊನ್ನವಳ್ಳಿ, ರಂಗನಿರ್ದೇಶಕರು

ನಾಟಕ ಅಕಾಡೆಮಿಯ ಅಧ್ಯಕ್ಷರು ಮತ್ತು ಸದಸ್ಯರೆ, ಹಿಂದಿನ ವರ್ಷ ಪ್ರಕಟಿಸಿದ್ದ ನಾಟಕ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತರ ಅಧೀಕೃತ ಆಯ್ಕೆಯನ್ನು ಈಗಿನ ಅಧ್ಯಕ್ಷರು ಮತ್ತು ಸದಸ್ಯರು ಮಾನ್ಯ ಮಾಡಿ ನಾಟಕ ಅಕಾಡೆಮಿಯ ಘನತೆಯನ್ನು ಹೆಚ್ಚಿಸುತ್ತೀರಿ ಎಂಬ ನಂಬಿಕೆ ನನಗಿದೆ. ಪಟ್ಟಿಯನ್ನು ಪರಿಷ್ಕೃತಗೊಳಿಸುವುದಾಗಲೀ ಅಥವಾ ಕೈಬಿಡುವ ನಿರ್ಧಾರದಿಂದ ಘನತೆವೆತ್ತ ಕರ್ನಾಟಕ ನಾಟಕ ಅಕಾಡೆಮಿ ಘಾಸಿಗೊಳ್ಳುತ್ತದೆ. ಕನ್ನಡದ ಸಾಂಸ್ಕೃತಿಕ ನಡೆ ತಪ್ಪುತ್ತದೆ. ಆಯ್ಕೆ ಆಗಿರುವ ಕಲಾವಿದರ ಮನಸ್ಸನ್ನು ನೋಯಿಸಬೇಡಿ, ಅವಮಾನಿಸಬೇಡಿ. ನಾಟಕ ಅಕಾಡೆಮಿ ಕಲಾವಿದರ ಜೊತೆಗೆ ಯಾವಾಗಲೂ ಇರುತ್ತದೆ ಎಂದು ನಂಬಿದ್ದೇನೆ.



ಬೇಲೂರು ರಘುನಂದನ್. ನಿಕಟಪೂರ್ವ ನಾಟಕ ಅಕಾಡೆಮಿ ಸದಸ್ಯರು

ಈ ಹಿಂದಿನ ನಾಟಕ ಅಕಾಡೆಮಿಯ ಸರ್ವ ಸದಸ್ಯರ ಸಭೆಯಲ್ಲಿ ಆಯ್ಕೆ ಮಾಡಿದ ನಾಡಿನ ರಂಗಕರ್ಮಿಗಳಿಗೆ ಪ್ರಶಸ್ತಿಗಳನ್ನು ಘೋಷಿಸಿತ್ತು ಈಗ ಆ ಪ್ರಶಸ್ತಿಗಳನ್ನು ಪ್ರಸ್ತುತ ಅಕಾಡೆಮಿಯು ರದ್ದುಗೊಳಿಸುವುದಾಗಿ ಸರ್ವ ಸದಸ್ಯರ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಅಧ್ಯಕ್ಷರು ಪತ್ರಿಕೆಗೆ ತಿಳಿಸಿದ್ದಾರೆ. ಇದು ಅಕಾಡೆಮಿಗೆ ಘನತೆ ತರುವಂತದ್ದಲ್ಲ. ಪ್ರಶಸ್ತಿ ಪುರಸ್ಕರಿಸುವುದಕ್ಕೆ ಇರುವುದೇ ಹೊರತು ತಿರಸ್ಕರಿಸುವುದಕ್ಕಲ್ಲ. ಸೈಂದಾತಿಕ ಕಾರಣಗಳಿಗೆ ಸಾಧಕರಿಗೆ ಘೋಷಿಸಿದ ಪ್ರಶಸ್ತಿಗಳನ್ನು ರದ್ದು ಪಡಿಸುವುದು ನಿಜಕ್ಕೂ ಸುದೀರ್ಘ ಪರಂಪರೆಯುಳ್ಳ ನಾಟಕ ಅಕಾಡೆಮಿಗೆ ಗೌರವ ತರುವಂತದ್ದಲ್ಲ. ಇಷ್ಟಿದ್ದೂ ಪ್ರಶಸ್ತಿ ರದ್ದು ಮಾಡುವುದೆಂದರೆ 30 ಜನ ಸಾಧಕರ ಸಾಧನೆಯನ್ನು ಹೀನವಾಗಿ ಕಂಡಂತೆ. ಇದರಿಂದ ಪುರಸ್ಕಾರ ಪಡೆದವರ ಗೌರವಕ್ಕಿಂತ ನಿರ್ಧರಿಸಿದವರು ತೀರಾ ಚಿಕ್ಕವರಾಗುತ್ತಾರೆ.


ಬಸವರಾಜ ಬೆಂಗೇರ್, ಹಿರಿಯ ರಂಗಕರ್ಮಿಗಳು, ಧಾರವಾಡ

ಯಾವ ಮಾನದಂಡವನ್ನು ಅನುಸರಿಸಿ ಪ್ರಶಸ್ತಿಯನ್ನು ತಡೆಹಿಡಿಯಲಾಗಿದೆ? ಕಾರಣವಿಲ್ಲದೆ ಪ್ರಕಟಗೊಂಡಿರುವ ಪ್ರಶಸ್ತಿ ತಡೆಯುವುದರಿಂದ ಆ ಕಲಾವಿದರಿಗೆ ಆಗುವ ಮಾನಸಿಕ ಯಾತನೆಯ ಅರಿವಿರಬೇಕಾದದ್ದು ಅಗತ್ಯ. ಏಕೆಂದರೆ ಕೆಲವು ಆಯ್ಕೆಗಳು ಲಾಭಿ ಮೂಲಕ ಆಗಿರಬಹುದಾದರೂ ಎಲ್ಲ ಆಯ್ಕೆಗಳೂ ಹಾಗೇ ಇರುವುದಿಲ್ಲ. ಕಲಾವಿದರು ಸೂಕ್ಷ್ಮಮತಿಗಳು. ಮುಜುಗರವನ್ನುಂಟು ಮಾಡುವ ಕಾರ್ಯ ಅಕಾಡೆಮಿ ಮಾಡದಿರಲಿ.


ಎಸ್.ದೇವೇಂದ್ರಗೌಡ, ಪ್ರಧಾನ ಕಾರ್ಯದರ್ಶಿ, ಸಮುದಾಯ ಕರ್ನಾಟಕ

ಒಂದು ಮಿಸ್ಟೇಕ್ ಇನ್ನೊಂದು ಮಿಸ್ಟೇಕಿಗೆ ದಾರಿ ಮಾಡಿಕೊಡುತ್ತದೆ. ಈ ಬಗೆಯ ಮಾದರಿ ಯಾರಿಗೂ ಯಾವತ್ತೂ ಒಳಿತಲ್ಲ. ಹೊಸದಾಗಿ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡುವ ಸದಸ್ಯರಿಗೂ ಇದು ಮುಜುಗರ. ಒಂದೇ ಸಮಾಜದಲ್ಲಿರಬೇಕಾದವರು ನಾವು. ದಯವಿಟ್ಟು ಅಕಾಡೆಮಿ ತಮ್ಮ ನಿಲುವನ್ನು ಪುನರ್‍ಪರಿಶೀಲಿಸಲಿ. ನಾಟಕ ಅಕಾಡೆಮಿ ನೀಡಿದ ಪ್ರಶಸ್ತಿ ತಡೆ ಹಿಡಿದ ನಿಲುವನ್ನು ಖಂಡಿಸೋಣ. ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ಸಮಿತಿ ತೀರ್ಮಾನಿಸಿದ ಆಯ್ಕೆಯನ್ನು ರದ್ದುಗೊಳಿಸಿದ ನೀತಿ ಸರಿಯಲ್ಲ. ಕೂಡಲೇ ಮುಖ್ಯ ಮಂತ್ರಿಗಳು ಮಧ್ಯ ಪ್ರವೇಶಿಸಿ ಹಿಂದಿನ ಸಮಿತಿ ಆಯ್ಕೆಯನ್ನು ಜಾರಿಗೊಳಿಸಲು ಸಮುದಾಯ ಕರ್ನಾಟದಿಂದ ಒತ್ತಾಯಿಸುತ್ತೇವೆ.


ಮಲ್ಲಿಕಾರ್ಜುನ ಕಡಕೋಳ, ರಂಗಸಮಾಜದ ನಿಕಟಪೂರ್ವ ಸದಸ್ಯರು

2019-20ರ ಅವಧಿಗೆ ಪ್ರಕಟಿಸಿದ ನಾಟಕ ಅಕಾಡೆಮಿಯ ಪ್ರಶಸ್ತಿಗಳನ್ನು ರದ್ದುಪಡಿಸಿದ್ದರ ಹಿಂದಿನ ತಾಂತ್ರಿಕ ಕಾರಣ, ನೇಪಥ್ಯ ಕಾರಣ.. ವಗೈರೆಗಳೇನೇ ಇರಲಿ. ಪ್ರಜಾಸತ್ತಾತ್ಮಕ ಸರ್ಕಾರವೊಂದು ನೇಮಿಸಿದ ಅಕಾಡೆಮಿಯ ತೀಮಾನಗಳನ್ನು ಅಂಥದೇ ಅಕಾಡೆಮಿಯೊಂದು ರದ್ದುಗೊಳಿಸುವುದರ ಹಿಂದೆ ಪೊಲಿಟಿಕಲ್ ಅಜೆಂಡಾಗಳ ಅಸಹಿಷ್ಣುತೆಯ ನಾತ  ಇರುವಂತಹ ಸುಳಿವು ಅರಿಯದ್ದೇನಲ್ಲ? ಹಿಡನ್ ಅಜೆಂಡಾಗಳೇನೇ ಇರಲಿ, ತಾಂತ್ರಿಕತೆಯ ತಂತ್ರ ಕುತಂತ್ರಗಳೇನೇ ಇರಲಿ. ಅಧಿಕಾರಶಾಹಿಯು ತಾಂತ್ರಿಕ ದೋಷಗಳಿದ್ರೆ ಸರಿಪಡಿಸಿಕೊಳ್ಳಲಿ. ಹಿಂದಿನ ಅಕಾಡೆಮಿಯು ಪ್ರಶಸ್ತಿಗಳನ್ನು  ಪ್ರಕಟಿಸಿ ಪ್ರಶಸ್ತಿಗೆ ಭಾಜನರಾದವರಿಗೂ ಪತ್ರ ಮೂಲಕ ತಿಳಿಸಿದ್ದು ಈಗ ಅಕಾಡೆಮಿಯು ಅದನ್ನು ರದ್ದುಗೊಳಿಸುವುದೆಂದರೆ..! ಅದೇನು ಸುಲಭದಲ್ಲಿ ಕೆಡವಿ ಹಾಕುವ ಮಕ್ಕಳಾಡುವ ಮರಳಿನಾಟವೆ..? ನಮ್ಮೆಲ್ಲ ಚರ್ಚೆ ಸಂವಾದಗಳಿಗಿಂತ ಕಲಾವಿದರು ಮತ್ತು ಅಕಾಡೆಮಿಯ ಗೌರವದೊಡ್ಡದು. ಅದಕ್ಕೆ ಧಕ್ಕೆ ಬಾರದಿರಲಿ. 


ನಾಗರಾಜಮೂರ್ತಿ, ಹಿರಿಯ ರಂಗಕರ್ಮಿಗಳು

ಭೀಮಸೇನ್ ಸಾರ್. ದಯಮಾಡಿ ಪ್ರಶಸ್ತಿ ಪುರಸ್ಕೃತರಿಗೆ ಅವಮಾನ ಮಾಡುವುದು ಬೇಡ. ಕಳೆದ ಅಕಾಡೆಮಿ ಅರ್ಹರಿಗೆ ಪ್ರಶಸ್ತಿಯನ್ನು ನೀಡಿದೆ. ಸಹೃದಯಿಗಳಾದ ನೀವು ಅನ್ಯತಾ ರಂಗ ಗೆಳೆಯರ ಅವಿಶ್ವಾಸಕ್ಕೆ ಒಳಗಾಗುವುದು ಬೇಡ. ಸರ್ವ ಸದಸ್ಯರ ಸಭೆ ಈಗಾಗಲೇ ಆಯ್ಕೆ ಯಾದವರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಯೋಜಿಸುವತ್ತ ಚರ್ಚಿಸಲಿ.








ಶುಕ್ರವಾರ, ನವೆಂಬರ್ 15, 2019

ಅಕಾಡೆಮಿಯಲ್ಲಿ ಅಧಿಕಾರಿಗಳ ಅನಗತ್ಯ ಹಸ್ತಕ್ಷೇಪ ನಿಲ್ಲಲಿ; ನಿಲ್ಲಿಸಲಾದ ಬೆಳಕಿನ ಪರಿಕರ ಯೋಜನೆ ಜಾರಿಯಾಗಲಿ.


ಬಿಜೆಪಿ ಪಕ್ಷದ ನೇತೃತ್ವದ ಹೊಸ ಸರಕಾರ ಅಸ್ಥಿತ್ವಕ್ಕೆ ಬಂದ ತಕ್ಷಣ ಮಾಡಿದ ಮೊದಲ ಘನಂಧಾರಿ ಕೆಲಸವೇನೆಂದರೆ ಸರಕಾರಿ ಅನುದಾನಿತ ಸಂಘ, ಸಂಸ್ಥೆ ಅಕಾಡೆಮಿ ಪ್ರಾಧಿಕಾರಗಳ ಆಯ್ಕೆಗಳನ್ನೆಲ್ಲಾ ಅಕಾಲಿಕವಾಗಿ ರದ್ದುಮಾಡಿದ್ದು. ಇನ್ನೂ ಯಾವ ಇಲಾಖೆಗಳಿಗೂ ಮಂತ್ರಿಗಿರಿಯನ್ನೇ ಹಂಚಿಕೆ ಮಾಡಿರಲಿಲ್ಲ. ಇನ್ನೂ ಸಚಿವ ಸಂಪುಟವೇ ರಚನೆಯಾಗಿರಲಿಲ್ಲ. ಅಂತಹುದರಲ್ಲಿ ತರಾತುರಿಯಲ್ಲಿ  2019, ಜುಲೈ 31 ರಂದು ಆದೇಶ ಹೊರಡಿಸಿದ ಸರಕಾರ ಅಕಾಡೆಮಿ ಪ್ರಾಧಿಕಾರಗಳ ಅಧ್ಯಕ್ಷರು ಹಾಗೂ ಸದಸ್ಯರುಗಳನ್ನು ಯಾವುದೇ ಕಾರಣವೇ ಇಲ್ಲದೇ ಅವಧಿಪೂರ್ವವಾಗಿ ವಜಾಮಾಡಿತು. ಆದೇಶವೇ ಅಕಾಡೆಮಿಗಳ ಬೈಲಾ ನಡಾವಳಿಗೆ ಹಾಗೂ ಸರಕಾರವೇ ಒಪ್ಪಿಕೊಂಡ ಸಾಂಸ್ಕೃತಿಕ ನೀತಿಗೆ ವಿರುದ್ದವಾಗಿತ್ತು. ಅಸಂವಿಧಾನಿಕ ಆದೇಶದ ವಿರುದ್ಧ ಅಲ್ಲಲ್ಲಿ ಪ್ರತಿಭಟನೆ ಹೋರಾಟಗಳು ನಡೆದವು, ಪತ್ರಿಕೆಗಳಲ್ಲಿ ವರದಿ ಲೇಖನಗಳು ಪ್ರಕಟಗೊಂಡವು, ಸಾಮಾಜಿಕ ಜಾಲತಾಣಗಳಲ್ಲಿ ಅಸಹನೆ ವ್ಯಕ್ತವಾಯಿತು.. ಆದರೂ ಪಂಚೇಂದ್ರಿಯಗಳನ್ನೇ ಕಳೆದುಕೊಂಡ ಸರಕಾರಕ್ಕೆ ಕಲಾವಿದರ ಕೂಗು ಕೇಳಿಸುವಂತೆ ಮಾಡುವವರಾದರೂ ಯಾರು? ಬೆಕ್ಕಿಗೆ ಗಂಟೆ ಕಟ್ಟುವುದಾದರೂ ಹೇಗೆ..?

ಸರಿ.. ವಜಾ ಆದೇಶವಾದ ತಕ್ಷಣವಾದರೂ ಅಕಾಡೆಮಿ ಪ್ರಾಧಿಕಾರಗಳಿಗೆ ಹೊಸದಾಗಿ ಅಧ್ಯಕ್ಷರು ಸದಸ್ಯರ ನೇಮಕಾತಿಯನ್ನಾದರೂ ಸರಕಾರ ಮಾಡಿತಾ..? ಅದಕ್ಕಾಗಿ  ಬರೊಬ್ಬರಿ ಎರಡೂವರೆ ತಿಂಗಳುಗಳ ಕಾಲ ಕಾಯಬೇಕಾಯಿತು. ಅಲ್ಲಿವರೆಗೂ ಎಲ್ಲಾ ಅಕಾಡೆಮಿ ಪ್ರಾಧಿಕಾರಗಳ ಕೆಲಸ ಕಾರ್ಯಗಳು ಕೋಮಾಗೆ ಜಾರಿದ್ದವು. ಅಂತೂ ಇಂತೂ 2019, ಅಕ್ಟೋಬರ್ 15ರಂದು ಅಕಾಡೆಮಿ ಪ್ರಾಧಿಕಾರಗಳಿಗೆ ಹೊಸದಾಗಿ ಅಧ್ಯಕ್ಷರು ಹಾಗೂ ಸದಸ್ಯರ ನೇಮಕಾತಿಯನ್ನು ಮಾಡಿ ಅಧಿಸೂಚನೆ ಹೊರಡಿಸಿತು. ಸಂಘಪರಿವಾರದ ಆಶಯಗಳಿಗೆ ಬದ್ದರಾಗಿರುವ ಬಹುತೇಕರ ಹೆಸರುಗಳೇ ಪಟ್ಟಿಯ ತುಂಬ ರಾರಾಜಿಸುತ್ತಿತ್ತು. ಬೇರೆ ದಾರಿಯಿಲ್ಲದೇ ಅಕಾಡೆಮಿ ಪ್ರಾಧಿಕಾರಗಳಿಗೆ ಹೊಸದಾಗಿ ನೇಮಕವಾದವರನ್ನು  ಸ್ವಾಗತಿಸಿದ್ದೂ ಆಯಿತು. ಅಕ್ಟೋಬರ್ 18ರಂದು ಹೊಸದಾಗಿ ಆಯ್ಕೆಮಾಡಲಾದ ಅಕಾಡೆಮಿ ಪ್ರಾಧಿಕಾರಗಳ ಅಧ್ಯಕ್ಷರು ಹಾಗೂ ಸದಸ್ಯರುಗಳಿಗೆ ಅಭಿನಂದನೆ ಸಲ್ಲಿಸಲು ಕರೆದ ಸಭೆಯಲ್ಲಿ ಸಂಸ್ಕೃತಿ ಇಲಾಖೆಯ ಸಚಿವರಾದ ಸಿ.ಟಿ.ರವಿಯವರು ಮನೆಹಾಳರು.. ಎಂದು ಸಾಹಿತಿ ಕಲಾವಿದರುಗಳಿಗೆ ಅವಮಾನಕಾರಿಯಾಗಿ ಮಾತಾಡಿ  ಪ್ರಜ್ಞಾವಂತರ ಆಕ್ರೋಶಕ್ಕೂ ಈಡಾಗಿದ್ದೂ ಆಯಿತು.
  
ಅಕಾಡೆಮಿಯ ಅಧ್ಯಕ್ಷ ಮಾನ್ಯ ಭೀಮಸೇನ್ ರವರು
ಕರ್ನಾಟಕ ನಾಟಕ ಅಕಾಡೆಮಿಯ ಮೊದಲ ಸರ್ವಸದಸ್ಯರ ಸಭೆ ನಾಟಕ ಅಕಾಡೆಮಿಯ ನೂತನ ಅಧ್ಯಕ್ಷರಾದ ಮಾನ್ಯ ಭೀಮಸೇನ್ ರವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 25ರಂದು ನಡೆಯಿತು. ಬೈಲಾ ಪ್ರಕಾರ ಹದಿನೈದು ಜನ ಸದಸ್ಯರನ್ನು ಆಯ್ಕೆ ಮಾಡಬೇಕಾಗಿದ್ದ ಸರಕಾರ ಕೇವಲ ಹದಿಮೂರು ಜನರನ್ನು ಆಯ್ಕೆ ಮಾಡಿದ್ದು, ಅಪೂರ್ಣ ಸರ್ವಸದಸ್ಯರ ಸಭೆ ಇದಾಗಿದ್ದರಿಂದ ಇನ್ನೂ ಮೂರು ಜನ ಕಲಾವಿದರುಗಳನ್ನು ಕೋಆಪ್ಟ್ ಮಾಡಬಹುದಾಗಿದ್ದುದನ್ನು ಮುಂದೂಡಲಾಯಿತು.  ಹಿಂದಿನ ಅವಧಿಯಲ್ಲಿ ಜಾರಿಮಾಡಲಾಗಿದ್ದ ಯೋಜನೆಗಳನ್ನು ಮುಂದುವರೆಸುವ ನಿರ್ಧಾರವನ್ನು ಸರ್ವಸದಸ್ಯರ ಸಭೆ ತೆಗೆದುಕೊಂಡಿದ್ದು ಶ್ಲಾಘನೀಯ. ಇದಕ್ಕಾಗಿ ನಾಟಕ ಅಕಾಡೆಮಿಯ ಅಧ್ಯಕ್ಷರು ಹಾಗೂ ಸದಸ್ಯರುಗಳು ಅಭಿನಂದನೀಯ.

ಆದರೆ.. ಎರಡು ಪ್ರಮುಖವಾದ ಯೋಜನೆಗಳಿಗೆ ಮಾತ್ರ ತಡೆಯೊಡ್ಡಲಾಗಿದ್ದು ಮಾತ್ರ ಪ್ರಶ್ನಾರ್ಹವಾಗಿದೆ. ಅದರಲ್ಲಿ ಮೊದಲನೆಯದು, ರಂಗಚಟುವಟಿಕೆಗಳಲ್ಲಿ ಕಾರ್ಯನಿರತವಾಗಿರುವ ಖಾಸಗಿ ರಂಗಮಂದಿರಗಳಿಗೆ ಬೆಳಕಿನ ಪರಿಕರಗಳನ್ನು ಅಕಾಡೆಮಿ ಒದಗಿಸುವ ಯೋಜನೆ. ಆದರೆ ಅದರ ಮುಂದುವರಿಕೆಗೆ ಅಕಾಡೆಮಿಯ ರೆಜಿಸ್ಟ್ರಾರಮ್ಮನವರೇ ಅಡ್ಡಗಾಲು ಹಾಕಿ ನಿಲ್ಲಿಸಿದ್ದು ಅಕ್ಷಮ್ಯ. ನಿಕಟಪೂರ್ವ ಕಾಲಾವಧಿಯ ಅಕಾಡೆಮಿಯ ಸರ್ವಸದಸ್ಯರ ಸಭೆಯಲ್ಲಿ ಬೆಳಕಿನ ಪರಿಕರಗಳನ್ನು ಅರ್ಹ ರಂಗಮಂದಿರಗಳಿಗೆ ಕೊಡುವ ನಿರ್ಧಾರ ಕೈಗೊಂಡು ಅದಕ್ಕಾಗಿ 10 ಲಕ್ಷ ರೂಪಾಯಿಗಳನ್ನು ತೆಗೆದಿರಿಸಲಾಗಿತ್ತು. ಕರ್ನಾಟಕ ಅಷ್ಟೇ ಯಾಕೆ ಕೇರಳದ ಕಾಸರಗೋಡಿನವರೆಗೂ ಹೋಗಿ ಅನೇಕ ರಂಗಮಂದಿರಗಳನ್ನು ಖುದ್ದಾಗಿ ನೋಡಿ ಬಂದ ನಾಟಕ ಅಕಾಡೆಮಿಯ ಸದಸ್ಯರ ತಂಡವು 12 ಅರ್ಹ ರಂಗಮಂದಿರಗಳನ್ನು ಗುರುತಿಸಿ ವರದಿ ಕೊಟ್ಟಿತ್ತು. ವರ್ಷ ಐದು ರಂಗಮಂದಿರಗಳಿಗೆ ಹಾಗೂ ಮುಂದಿನ ವರ್ಷ ಇನ್ನು ಐದು ರಂಗಮಂದಿರಗಳಿಗೆ ಲೈಟ್ಸ್ ಇಕ್ಯುಪ್ಮೆಂಟ್ಗಳನ್ನು ಕೊಡುವುದಾಗಿ ನಿರ್ಧರಿಸಿ ಕಾರ್ಯಸೂಚಿಯಲ್ಲಿ ಸೇರಿಸಲಾಗಿತ್ತು. ಲಕ್ಷ ರೂಪಾಯಿಯ ಮೇಲಿನ ಖರ್ಚುಗಳು ಆಗಿದ್ದರಿಂದ ಈಟೆಂಡರ್ ಕರೆಯುವ ಪ್ರಯತ್ನವೂ ಜಾರಿಯಲ್ಲಿತ್ತು. ಆದರೆ.. ಅಷ್ಟರಲ್ಲಿ ಅಕಾಡೆಮಿಗಳ ಅಧಿಕಾರಾವಧಿಯನ್ನೇ ಸರಕಾರ ವಜಾಗೊಳಿಸಿತು.

ಅಕಾಡೆಮಿಯ ರೆಜಿಸ್ಟ್ರಾರ್ ಶೈಲಜಾರವರು
 ಅಕ್ಟೋಬರ್ 25ರಂದು ನಡೆದ ಸರ್ವಸದಸ್ಯರ ಸಭೆಯಲ್ಲಿ ಹಿಂದಿನ ಎಲ್ಲಾ ಯೋಜನೆಗಳನ್ನು ಮುಂದುವರೆಸಲು ನಿರ್ಧರಿಸಿ ಯೋಜನೆಯನ್ನು ಮಾತ್ರ ನಿಲ್ಲಿಸಲಾಯಿತು. ಇಲಾಖೆಯ ನಿರ್ದೇಶಕರು ಯೋಜನೆಗೆ ಅನುಮತಿ ನೀಡಿಲ್ಲವಾದ್ದರಿಂದ ಇದನ್ನು ಮುಂದುವರೆಸಲು ಸಾಧ್ಯವಿಲ್ಲ ಎಂದು ಅಕಾಡೆಮಿಯ ರೆಜಿಸ್ಟ್ರಾರ್ ಶೈಲಜಾರವರು ಹಾಲಿ ಸರ್ವಸದಸ್ಯರ ಸಭೆಯ ದಿಕ್ಕು ತಪ್ಪಿಸಿದರು. ಇದಕ್ಕೆ ಪಕ್ಕವಾದ್ಯ ನುಡಿಸಿದ ಜಂಟಿನಿರ್ದೇಶಕರಾದ  ಬಲವಂತರಾವ್ ಪಾಟೀಲರು ಹೌದೌದು, ಇದು ಅಕಾಡೆಮಿ ಮಾಡುವ ಕೆಲಸವಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಡುವ ಕೆಲಸವೆಂದು ತಿಪ್ಪೆ ಸಾರಿಸಿ ರಂಗೋಲಿ ಹಾಕಿದರು. ಇಲಾಖೆಯ ನಿರ್ದೇಶಕರು ಯಾವಾಗ ಎಲ್ಲಿ ಯೋಜನೆಗೆ ಅನುಮತಿ ತಡೆಹಿಡಿದಿದ್ದಾರೆ, ಕುರಿತು ದಾಖಲೆ ಎಲ್ಲಿವೆ? ಎಂದು ಕೇಳುವ ಯೋಚನೆಯೂ ಅಕಾಡೆಮಿ ಅಧ್ಯಕ್ಷರಿಗಾಗಲೀ ಇಲ್ಲವೇ ಸದಸ್ಯರುಗಳಿಗಾಗಲೀ ಬರಲೇ ಇಲ್ಲ. ಅಧಿಕಾರಿಗಳು ಹೇಳಿದ್ದನ್ನು ಮಹಾಪ್ರಸಾದವೆಂದುಕೊಂಡು ಇಡೀ ಯೋಜನೆಯನ್ನೇ ರದ್ದು ಮಾಡುವ ಆಘಾತಕಾರಿ  ನಿರ್ಣಯವನ್ನು  ಸಭೆ ತೆಗೆದುಕೊಳ್ಳಲಾಯಿತು. ಯೋಜನೆಯ ಮಹತ್ವ ಏನು? ಇದರಿಂದಾಗಿ ರಂಗಮಂದಿರಗಳಿಗೆ ಎಷ್ಟು ಪ್ರಯೋಜನವಾಗುತ್ತದೆ. ರಂಗಸಂಘಟಕರ ಹಣ ಶ್ರಮ ಎಷ್ಟು ಉಳಿತಾಯವಾಗುತ್ತದೆ. ರಂಗಮಂದಿರವೊಂದು ದ್ವನಿ ಬೆಳಕಿನ ಸಿದ್ದ ವ್ಯವಸ್ಥೆಯನ್ನು ಹೊಂದಿದ್ದರೆ ಅಲ್ಲಿ ಎಷ್ಟೊಂದು ರಂಗಚಟುವಟಿಕೆಗಳು ನಿರಂತರವಾಗಿ ಗರಿಗೆದರುತ್ತವೆ.. ಎಂಬುದರ ಬಗ್ಗೆ ಒಂದಿಷ್ಟೂ ತಿಳುವಳಿಕೆ ಇಲ್ಲದ ಸರಕಾರಿ ಅಧಿಕಾರಿಗಳು ಒಂದು ಅತ್ಯುತ್ತಮ ಯೋಜನೆಗೆ ಕಲ್ಲುಹಾಕಿದರು, ಅಡೆತಡೆಗಳ ಮೀರಿ ಕಾರ್ಯಸಾಧುವಾದ ಪ್ರಯೋಜನಕಾರಿ ಯೋಜನೆಯೊಂದನ್ನು ನಿಲ್ಲಿಸಲು ಒಪ್ಪಿಕೊಂಡ ನಾಟಕ ಅಕಾಡೆಮಿಯ ಅಧ್ಯಕ್ಷರು ಹಾಗೂ ಸದಸ್ಯರುಗಳು ರಂಗಮಂದಿರಗಳ ಬೆಳಕನ್ನೇ ಕತ್ತಲಾಗಿಸಿ ಕಲ್ಲಾಗಿ ಕು:ಳಿತರು.

ಇಷ್ಟಕ್ಕೂ ಜೆಡಿ ಪಾಟೀಲರು ಹೇಳಿದಂತೆ ರಂಗಮಂದಿರಗಳಿಗೆ ಬೆಳಕಿನ ಪರಿಕರಗಳನ್ನು ಇಲಾಖೆಯೇ ಕೊಡಮಾಡುವುದೇ ಆಗಿದ್ದರೆ ಇಲ್ಲಿವರೆಗೂ ಅದೆಷ್ಟು ರಂಗಮಂದಿರಗಳಿಗೆ ಹೋಗಿ ಇಲಾಖೆಯ ಅಧಿಕಾರಿಗಳು ಅಲ್ಲಿಯ ಅಗತ್ಯತೆಗಳ ಕುರಿತು ಅಧ್ಯಯನ ಮಾಡಿಕೊಂಡು ಬಂದಿದ್ದಾರೆ.? ಅದೆಷ್ಟು ರಂಗಮಂದಿರಗಳಿಗೆ ಅಗತ್ಯ ಪರಿಕರಗಳನ್ನು ಒದಗಿಸಿ ಅಳವಡಿಸಿದ್ದಾರೆ? ಅದ್ಯಾವ ರಂಗಮಂದಿರ ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಬೆಳಗುತ್ತಿದೆ? ಯಾವುದೂ ಇಲ್ಲ. ಯಾಕೆಂದರೆ ಇಲಾಖೆ ಪರಿಕರಗಳನ್ನು ಕೊಡುವುದಿಲ್ಲಾ.. ಕೊಟ್ಟರೂ ಅರ್ಹರಿಗೆ ಅದು ತಲುಪುವುದೂ ಇಲ್ಲಾ. ಈಗಾಗಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿಯಂತ್ರಣದಲ್ಲಿರುವ ಸರಕಾರಿ ರಂಗಮಂದಿರಗಳಲ್ಲಿಯೇ ನೆಟ್ಟಗೆ ಬೆಳಕು ಮತ್ತು ದ್ವನಿ ವ್ಯವಸ್ಥೆಗಳಿಲ್ಲ. ಕಲಾಗ್ರಾಮದಲ್ಲಿರುವ ರಂಗಮಂದಿರ ಬೆಂಕಿಗಾಹುತಿಯಾಗಿ ಒಂದೂವರೆ ವರ್ಷಕಳೆದರೂ ಅದನ್ನು ಸರಿಪಡಿಸಿ ಮತ್ತೆ ನಾಟಕ ಪ್ರದರ್ಶನಗಳಿಗೆ ಸಿದ್ದಗೊಳಿಸುವ ಯೋಗ್ಯತೆಯೂ ಅಧಿಕಾರಸ್ತರಿಗಿಲ್ಲ


ಬೆಳಕಿನ ಪರಿಕರಗಳಿಗೆ ಆಯ್ಕೆ ಮಾಡಲಾದ  ಐದೂ ರಂಗಮಂದಿರಗಳು ಕರ್ನಾಟಕದಲ್ಲಿ ರಂಗಚಟುವಟಿಕೆಗಳಿಗೆ ಮುಂಚೂಣಿಯಲ್ಲಿರುವಂತಹವು. ಬೆಂಗಳೂರನಲ್ಲಿ ಎ.ಎಸ್.ಮೂರ್ತಿಯವರಿಂದ ಸ್ಥಾಪಿತ ಅಭಿನಯ ತರಂಗವು ಕಳೆದ ಮೂರೂವರೆ ದಶಕಗಳಿಂದ ರಂಗಭೂಮಿ ಕುರಿತ ತರಬೇತಿ, ಪ್ರದರ್ಶನಗಳನ್ನು ಮಾಡುತ್ತಲೇ ಬಂದಿದೆ. ಸಾವಿರಾರು ಯುವಕ ಯುವತಿಯರು ಈ ರಂಗಶಾಲೆಯಲ್ಲಿ ಕಲಿತು ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದಾರೆ. ನಿರಂತರವಾಗಿ ನಾಟಕ ಪ್ರದರ್ಶನಗಳು ಅಲ್ಲಿ ಆಗುತ್ತಲೇ ಇರುತ್ತವೆ. ಆದರೆ ಅಲ್ಲಿ ಇರುವುದು ಎರಡು ಹಾಲೋಜನ್ ಲೈಟ್ಸ್ ಗಳು ಮಾತ್ರ. ಪ್ರತಿಸಲ ನಾಟಕಕ್ಕೆ ಅಗತ್ಯವಾದ ಲೈಟ್ಸ್ ಗಳನ್ನು ಬಾಡಿಗೆಗೆ ತರಲಾಗುತ್ತದೆ. ಇಂತಹ ಆಪ್ತ ರಂಗಮಂದಿರಕ್ಕೆ ನಾಟಕ ಅಕಾಡೆಮಿ ಬೆಳಕಿನ ಪರಿಕರಗಳನ್ನು ಕೊಟ್ಟರೆ ಒಳಿತಲ್ಲವೇ. ಅದೇ ರೀತಿ ಗ್ರಾಮೀಣ ಪ್ರದೇಶದಲ್ಲಿ ದೊಡ್ಡ ರಂಗಮಂದಿರವನ್ನು ಕಟ್ಟಿ ನಾಟಕ ಚಟುವಟಿಕೆಯನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿರುವ ಹೊಸಕೋಟೆಯ ‘ಜನಪದರು’, ಕೋಲಾರದ ‘ಆದಿಮ’, ರಕ್ಷಿದಿಯ ‘ಜೈ ಕರ್ನಾಟಕ ಸಂಘ’ ಹಾಗೂ ಸೂಳ್ಯದ  ‘ರಂಗಮನೆ’.. ಈ ಐದು ರಂಗಮಂದಿರಗಳ ಅಗತ್ಯಕ್ಕೆ ಪೂರಕವಾಗಿ ಬೆಳಕಿನ ಪರಿಕರಗಳನ್ನು ವದಗಿಸುವ ಸ್ತುತ್ಯಾರ್ಹ ಕಾಯಕವನ್ನು ನಾಟಕ ಅಕಾಡೆಮಿ ಹಮ್ಮಿಕೊಂಡಿತ್ತು. ಇಲ್ಲಿವರೆಗೂ ಯಾವುದೇ ಅಕಾಡೆಮಿಯಾಗಲಿ ಇಲ್ಲವೇ ಸಂಸ್ಕೃತಿ ಇಲಾಖೆಯಾಗಲಿ ಮಾಡದ ಕೆಲಸವನ್ನು ಮಾಡವ ಯೋಜನೆ ರೂಪಿಸಲಾಗಿತ್ತು. ಈ ಯೋಜನೆ ಸರ್ವ ಸದಸ್ಯರ ಸಭೆಯಲ್ಲಿ  ಅನುಮತಿ ಪಡೆದು 2019 ಮಾರ್ಚ್ 7 ರಂದು ನಡೆದ ಉಪಸಮಿತಿಯ ಸಭೆಯಲ್ಲಿ ಕಾರ್ಯಯೋಜನೆ ಅಧೀಕೃತವಾಗಿ ರೂಪಗೊಂಡಿತು. ಈ ಸಭೆಯ ನಡಾವಳಿಗಳಿಗೆ  ನಾಟಕ ಅಕಾಡೆಮಿಯ ರೆಜಿಸ್ಟ್ರಾರ್ ಸಹ ಸಹಿ ಹಾಕಿ ಒಪ್ಪಿದ್ದರು. ಆದರೆ.. ಆಗ ಇಲ್ಲದ ವಿರೋಧವನ್ನು ಈಗ ಯಾಕೆ ಈ ಅಧಿಕಾರಮ್ಮ ಮಾಡುತ್ತಿದ್ದಾರೆ..? ಆಗ ಇಲಾಖೆಯ ನಿರ್ದೇಶಕಿಯಾಗಿದ್ದ ಮಾನ್ಯ ಜಾನಕಿಯವರು ಈ ಯೋಜನೆಯ ವಿರುದ್ಧ ಚಕಾರ ಎತ್ತಿರಲಿಲ್ಲ ಹಾಗೂ ಎತ್ತುವ ಹಾಗೂ ಇರಲಿಲ್ಲ. ಈಗ ವರ್ಗವಾಗಿ ಹೋದ ಜಾನಕಿಯವರ ಹೆಸರನ್ನು ಬಳಸಿಕೊಂಡು ಶೈಲಜಮ್ಮನವರು ಇಡೀ ಬೆಳಕಿನ ಯೋಜನೆಯನ್ನು  ಕತ್ತಲಿಗೆ ದೂಡುವ ಪ್ರಯತ್ನವನ್ನು ಮಾಡುತ್ತಿರುವುದಾದರೂ ಯಾಕೆ? ರೆಜಿಸ್ಟ್ರಾರ್ ರವರಿಗೆ ಜಂಟಿ ನಿರ್ದೇಶಕರೂ ಸಹ ದ್ವನಿಗೂಡಿಸುತ್ತಿರುವುದರ ಹಿಂದಿರುವ ತಂತ್ರಗಾರಿಕೆಯಾದರೂ ಯಾವುದು..? ಯಾಕೆ ಈ ಯೋಜನೆಗೆ ಮಾತ್ರ ಈ ಅಧಿಕಾರಿಗಳು ತಮ್ಮ ವಿರೋಧ ವ್ಯಕ್ತಪಡಿಸುತ್ತಿದ್ದಾರೆ..?  ಯಾಕೆ ಅಧಿಕಾರಿಗಳು ನಾಟಕ ಅಕಾಡೆಮಿಯ ಬೆಳಕಿನ ಯೋಜನೆಯನ್ನು ಕತ್ತಲೆಗೆ ತಳ್ಳಿದರು? ಯಾಕೆ ಅಕಾಡೆಮಿಯಿಂದ ಬೇಡಾ ಇಲಾಖೆಯಿಂದಲೇ ಯೋಜನೆ ಜಾರಿಗೊಳಿಸಬಹುದು ಎಂದು ಹೇಳಿದರು

 ಇದಕ್ಕೆಲ್ಲಾ ಕಾರಣವೂ ಇದೆ. ಅದೇನೆಂದರೆ ಕಮೀಷನ್. ಸರಕಾರಿ ಅಧಿಕಾರಿಗಳು ಯಾವುದೇ ಯೋಜನೆಯನ್ನು ಜಾರಿಗೆ ಗೊಳಿಸಲಿ ಇಲ್ಲವೇ ನಿಲ್ಲಿಸಲಿ ಅದಕ್ಕೆಲ್ಲಾ ಮೂಲ ಕಾರಣ ಅದರಲ್ಲಿ ಅವರ ಲಾಭ ಎಷ್ಟು ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಬೆಳಕಿನ ಯೋಜನೆಯನ್ನು ನಾಟಕ ಅಕಾಡೆಮಿಯಿಂದ ಜಾರಿಗೆ ಗೊಳಿಸಿದರೆ ಅದಕ್ಕೆ -ಟೆಂಡರ್ ಕರೆಯಬೇಕು ಹಾಗೂ ಅದು ಅಕಾಡೆಮಿಯ ಅಧ್ಯಕ್ಷರು ಹಾಗೂ ಸದಸ್ಯರುಗಳ ಕಣ್ಗಾವಲಿನಲ್ಲಿ ಯೋಜನೆ ಕಾರ್ಯರೂಪಕ್ಕೆ ಬರಬೇಕಾಗುತ್ತದೆ. ಅತ್ತ ಪರಿಕರಗಳ ಸಪ್ಲೈಯರಗಳಿಂದಲೂ ಅಂದುಕೊಂಡ ಪರ್ಸಂಟೇಸ್ ಸಿಗುವುದು ಕಷ್ಟ ಹಾಗೂ ಇತ್ತ ಫಲಾನುಭವಿಗಳಾಗುವ ರಂಗಮಂದಿರಗಳಿಂದಲೂ ಸಹ ಕಮೀಷನ್ ದೊರೆಯುವುದು ಅಸಾಧ್ಯ. ಹೀಗಾಗಿ ಅಧಿಕಾರಸ್ತರಿಗೆ ಲಾಭವೇ ಇಲ್ಲದ ಯೋಜನೆಯನ್ನೇ ನಿಲ್ಲಿಸಿ ಬಿಡುವ ಶಡ್ಯಂತ್ರವೊಂದು ಬಹಳಾ ನಯನಾಜೂಕಾಗಿ ಮಾಡಲಾಯಿತು. ನಿಕಟಪೂರ್ವ ಅಧ್ಯಕ್ಷರಾಗಿದ್ದ ಜೆ.ಲೊಕೇಶರವರು ಅಧಿಕಾರಸ್ತರಿಗೆ ಜಗ್ಗುತ್ತಿರಲಿಲ್ಲ. ಕಮಿಷನ್ ಪರ್ಸಂಟೇಜ್ಗಳಿಗೆ ಆಸೆಪಡುತ್ತಿರಲಿಲ್ಲ. ಹೀಗಾಗಿ ಅವರು ಇದ್ದಾಗ ಬಾಲಬಿಚ್ಚದ ಅಧಿಕಾರಿಗಳು ಈಗ ತಾನೆ ಹೊಸದಾಗಿ ಬಂದ ಅಧ್ಯಕ್ಷರು ಹಾಗೂ ಸದಸ್ಯರುಗಳಿಗೆ ಇಲ್ಲಸಲ್ಲದ್ದನ್ನು ಹೇಳಿ ಇಡೀ ಯೋಜನೆ ನಿಲ್ಲಿಸುವಂತೆ ನೋಡಿಕೊಂಡರು. ಯೋಜನೆಗಾಗಿ ಮೀಸಲಿಟ್ಟಿದ್ದ ಹಣವನ್ನು ನಾಟಕೋತ್ಸವಗಳಿಗೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭಗಳಿಗೆ ಡೈವರ್ಟ ಮಾಡಲಾಯ್ತು.


ಯಾವಾಗ ಉಪಸಮಿತಿಯಲ್ಲಿ  ಈ ಬೆಳಕಿನ ಯೋಜನೆ ಕಾರ್ಯರೂಪಕ್ಕೆ ತರಲು ನಿರ್ಧಾರ ಮಾಡಲಾಯಿತೋ ಆಗಲೇ ಆಯ್ಕೆಯಾದ ಐದೂ ರಂಗಮಂದಿರದ ರೂವಾರಿಗಳಿಗೆ ತಿಳಿಸಲಾಗಿತ್ತು. ಅವರೆಲ್ಲಾ ಅತೀವ ಸಂತಸ ವ್ಯಕ್ತಪಡಿಸಿದ್ದರು. ರಂಗಚಟುವಟಿಕೆಗಳನ್ನು ಇನ್ನೂ ಹೆಚ್ಚಾಗಿ ಮಾಡುವುದಾಗಿ ಹೇಳಿದ್ದರು. ಆದರೆ.. ಈಗ  ಯೋಜನೆ ರದ್ದಾಗಿದೆ ಎಂದು ಅವರಿಗೆ ತಿಳಿದರೆ ಆಗುವ ನಿರಾಸೆ ಅಷ್ಟಿಷ್ಟಲ್ಲ. ಈ ಯೋಜನೆಯನ್ನು ವಿನಾಕಾರಣ ನಿಲ್ಲಿಸಿದ ಅಧಿಕಾರಿಗಳಿಗೆ ಇದರಿಂದ ಏನೂ ಆಗದೇ ಇರಬಹುದು. ಆದರೆ ಪರಿಕರ ಕೊಡುತ್ತೇನೆಂದು ಭರವಸೆ ಕೊಟ್ಟು ಕೊಡದೇ ಹೋದರೆ ಮರ್ಯಾದೆ ಹೋಗುವುದು ನಾಟಕ ಅಕಾಡೆಮಿಯದು. ನಾಟಕ ಅಕಾಡೆಮಿಯ ಅಧ್ಯಕ್ಷರು ಹಾಗೂ ಸದಸ್ಯರುಗಳದ್ದು. ನಿಜಕ್ಕೂ ಇದು ನಾಚಿಗೆಗೇಡಿನ ಪ್ರಸಂಗ, ಇಂತಹ ಮುಜುಗರದ ಸನ್ನಿವೇಶಕ್ಕೆ ಕಾರಣಕರ್ತರಾದ ಅಧಿಕಾರಿಗಳು ಹಾಗೂ ಈ ಅಧಿಕಾರಿಗಳು ಹೇಳಿದ್ದನ್ನು ಕುರುಡಾಗಿ ನಂಬಿ ಯೋಜನೆಯನ್ನು ನಿಲ್ಲಿಸಿದ ನಾಟಕ ಅಕಾಡೆಮಿಯ ಹಾಲಿ ಅಧ್ಯಕ್ಷರು ಮತ್ತು ಸದಸ್ಯರುಗಳ ರಂಗವಿರೋಧಿ ನಡೆ ಅಕ್ಷಮ್ಯ.
 
ಇಷ್ಟಕ್ಕೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ರಂಗಮಂದಿರಗಳಿಗೆ ಬೆಳಕಿನ ಪರಿಕರಗಳನ್ನು ಕೊಡುವುದೇ ಆದರೆ ಕೊಡಲಿ ಬಿಡಿ ಯಾರು ಬೇಡವೆಂದವರು. ಕರ್ನಾಟಕದಾದ್ಯಂತ ಇರುವ ಅನೇಕ ರಂಗಮಂದಿರಗಳು ಸೂಕ್ತ ಬೆಳಕು ಹಾಗೂ ದ್ವನಿ ಪರಿಕರಗಳಿಲ್ಲದೇ ಬಾಡಿಗೆಗೆ ತಂದು ನಾಟಕ ಮಾಡುವ ಪರಿಸ್ಥಿತಿಯಲ್ಲಿವೆ. ಅಂತವುಗಳಿಗೆ ಪರಿಕರಗಳನ್ನು ಕೊಟ್ಟರೆ ರಂಗಚಟುವಟಿಕೆಗಳು ಹೆಚ್ಚಾಗುತ್ತವೆ. ಅಕಾಡೆಮಿಯೂ ಸಹ ತಮ್ಮ ಬಜೆಟ್ಟಿನಲ್ಲಿ ಆಯ್ದ ಅರ್ಹ ರಂಗಮಂದಿರಗಳಿಗೆ ಪರಿಕರಗಳನ್ನು ಕೊಟ್ಟರೆ ತಪ್ಪೇನು? ನಾಟಕ ಅಕಾಡೆಮಿಗಳಿಗೆ ಇಂತಿಷ್ಟೇ ಹೀಗೀಗೆ ಕೆಲಸ ಮಾಡಬೇಕು ಎಂದು ನಿರ್ದೇಶಿಸುವ ಹಕ್ಕನ್ನು ಅಧಿಕಾರಿಗಳಿಗೆ ಕೊಟ್ಟವರಾದರೂ ಯಾರು? ಅಕಾಡೆಮಿಗಳಿಗೆ ಸರ್ವಸದಸ್ಯರ ಸಭೆಯ ನಿರ್ಣಯವೇ ಅಂತಿಮ. ಅಲ್ಲಿ ಏನು ಬಹುಮತದ ತೀರ್ಮಾನವಾಗುತ್ತದೆಯೋ ಅದನ್ನು ಅನುಷ್ಟಾನಕ್ಕೆ ತರಲು ನೆರವಾಗುವುದು ಮಾತ್ರ ಅಧಿಕಾರಿಗಳ ಕೆಲಸ. ಹೊಲಕ್ಕೆ ಬೇಲಿಯ ಹಾಗೆ ಅಕಾಡೆಮಿಗಳಿಗೆ ಅಧಿಕಾರಿಗಳು ಇದ್ದು ಕಾಯಬೇಕೆ ಹೊರತು ಬೇಲಿಯೇ ಎದ್ದು ಹೊಲ ಮೇಯಬಾರದು. ಹಾಗೆ ಮೇಯಲು ಅಕಾಡೆಮಿಯ ಅಧ್ಯಕ್ಷರು ಹಾಗೂ ಸದಸ್ಯರುಗಳ ಅಧಿಕಾರಿಗಳಿಗೆ ಅವಕಾಶ ಕೊಡಬಾರದು.

ಇಲ್ಲಿ ಇನ್ನೊಂದು ವಿಷಯ ನೆನಪಿರಲಿ. ಯಾವುದೇ ಸರಕಾರಿ ಯೋಜನೆ ಇರಲಿ.. ಅದರಲ್ಲಿ ಒಬ್ಬ ಇಲ್ಲವೇ ಇಬ್ಬರು ಅಧಿಕಾರಿಗಳು ಮಾತ್ರ ಫಲಾನುಭವಿಗಳಾಗಿರದೇ ಅಧಿಕಾರದ ಶ್ರೇಣಿಕೃತ ವ್ಯವಸ್ಥೆಯಲ್ಲಿ ಇರುವವರೆಲ್ಲರೂ ಅವರವರ ಸ್ಥಳಮಹಾತ್ಮೆಗೆ ಅನುಗುಣವಾಗಿ ಪ್ರಸಾದ ಸ್ವೀಕರಿಸಲು ಅರ್ಹರಾಗಿರುತ್ತಾರೆ. ಹೀಗಾಗಿ ಒಂದು ಯೋಜನೆಯಲ್ಲಿ ಲಾಭ ಇಲ್ಲವೆಂದಾದರೆ ಇಡೀ ಶ್ರೇಣಿಕೃತ ವ್ಯವಸ್ಥೆಯೆ ಅದನ್ನು ಜಾರಿಗೆ ತರದಂತೆ ನಿಲ್ಲಿಸಲು ಪ್ರಯತ್ನಿಸುತ್ತದೆ ಹಾಗೂ ಬಹುತೇಕ ಸಲ ಯಶಸ್ವಿಯೂ ಆಗುತ್ತದೆ. ಬೆಳಕಿನ ಪರಿಕರ ಯೋಜನೆಯೂ ರದ್ದಾಗಿದ್ದು ಅಧಿಕಾರಸ್ತರ ಕರಾಮತ್ತಿನಿಂದ. ಇವರ ಹಿಡನ್ ಅಜೆಂಡಾಗಳು ಗೊತ್ತಿಲ್ಲದ ಅಕಾಡೆಮಿಯ ಅಧ್ಯಕ್ಷರು ಹಾಗೂ ಸದಸ್ಯರುಗಳು ತಲೆ ಅಲ್ಲಾಡಿಸುತ್ತಾರೆ ಹಾಗೂ ರಂಗದ್ರೋಹಕ್ಕೆ ಪರೋಕ್ಷವಾಗಿ ಕಾರಣೀಕರ್ತರಾಗುತ್ತಾರೆ.

ಮೊದಲು ನಾಟಕ ಅಕಾಡೆಮಿಯ ಅಧ್ಯಕ್ಷರು ಹಾಗೂ ಸದಸ್ಯರುಗಳು ಅಧಿಕಾರಿಗಳ ಮಾತನ್ನು ಪರಿಶೀಲಿಸದೇ ನಂಬಲೇಬಾರದು. ಯಾವುದೇ ಕಾರಣಕ್ಕೂ ಅಕಾಡೆಮಿಯ ಜುಟ್ಟು ಜನಿವಾರಗಳನ್ನು ಅಧಿಕಾರಿಗಳ ಕೈಗೆ ಕೊಡಲೇಬಾರದು. ಸರ್ವಸದಸ್ಯರು ನಿರ್ಣಯಿಸಿದ ಯಾವುದೇ ಕಾರ್ಯಯೋಜನೆಯಲ್ಲಿ ಮೂಗುತೂರಿಸುವ ಅಧಿಕಾರ ರೆಜಿಸ್ಟ್ರಾರ್ ಅವರದ್ದಲ್ಲ. ಸರಕಾರ ನಾಟಕ ಅಕಾಡೆಮಿಗೆ ಸಂಸ್ಕೃತಿ ಇಲಾಖೆಯ ಮೂಲಕ ಕೊಡಮಾಡುವ ವಾರ್ಷಿಕ ಅನುದಾನ ಅಂದುಕೊಂಡ ಕಾರ್ಯಕ್ಕೆ ಸರಿಯಾಗಿ  ಬಳಕೆಯಾಗುತ್ತದೋ ಇಲ್ಲವೋ ಎಂದು ನೋಡಿಕೊಳ್ಳುವುದಷ್ಟೇ ಅಧಿಕಾರಿಗಳ ಕೆಲಸ. ಆದರೆ.. ಬಹುತೇಕ ಅಕಾಡೆಮಿ  ಹಾಗೂ ಪ್ರಾಧಿಕಾರಗಳಲ್ಲಿ ಅಧಿಕಾರಿ ವರ್ಗದವರ ಹಸ್ತಕ್ಷೇಪ ಅತಿಯಾಗಿಯೇ ಇರುತ್ತದೆ. ಅಧ್ಯಕ್ಷರುಗಳ ಆಡಳಿತಾನುಭವದ ಕೊರತೆಯನ್ನು ತಮ್ಮ ಲಾಭಕೋರ ಹಿತಾಸಕ್ತಿಗಾಗಿ  ಬಳಸಿಕೊಳ್ಳುವ ಜಾಣ್ಮೆ ಅಧಿಕಾರಿ ವರ್ಗಕ್ಕೆ ಕರಗತವಾಗಿರುತ್ತದೆ. ತಮ್ಮ ಹಿತಾಸಕ್ತಿಗೆ ವಿರುದ್ಧವಾಗಿ ಏನೂ ಆಗದಂತೆ ನೋಡಿಕೊಳ್ಳುವಲ್ಲಿ ಅಧಿಕಾರಿಗಳು ಸಿದ್ಧಹಸ್ತರು. ಹೆಚ್ಚುಕಮ್ಮಿ ಆದರೆ ಅಕಾಡೆಮಿ ಸದಸ್ಯರುಗಳನ್ನೇ ಎತ್ತಿಕಟ್ಟಿ ಅಧ್ಯಕ್ಷರುಗಳ ಕೈಕಾಲು ಅಲ್ಲಾಡದಂತೆ ನೋಡಿಕೊಳ್ಳುವ ತಂತ್ರಗಳು ಅವರಿಗೆ ಗೊತ್ತಿರುತ್ತವೆ.

ಹೀಗೆಯೇ.. ಎಲ್ಲದಕ್ಕೂ ಕಾನೂನಿನ ಕೊಕ್ಕೆ ಹಾಕುತ್ತಿದ್ದ ಆಗಿನ ರೆಜಿಸ್ಟ್ರಾರ್ ದಕ್ಷಿಣಾಮೂರ್ತಿಯ ಹಲ್ಲುಗಳನ್ನೇ ಅಕಾಡೆಮಿಯ ಅಧ್ಯಕ್ಷರಾಗಿದ್ದ ಆರ್.ನಾಗೇಶರವರು ಉದುರಿಸಿದ್ದರು. ಎಲ್ಲದರಲ್ಲೂ ಅಸಹಕಾರ ತೋರುತ್ತಿದ್ದ ಈಗಿರುವ ರೆಜಿಸ್ಟ್ರಾರ್ ಡಾ.ಶೈಲಜಾರವರನ್ನು ನಿಕಟ ಪೂರ್ವ ಅಧ್ಯಕ್ಷರಾಗಿದ್ದ ಜೆ.ಲೊಕೇಶರವರು ಹದ್ದುಬಸ್ತಿನಲ್ಲಿಟ್ಟಿದ್ದರು. ಅಧಿಕಾರಿಗಳ ಕಿರಿಕಿರಿಗಳ ವಿರುದ್ಧ ಸಚಿವರಿಗೆ ದೂರುಕೊಡುವ ಧೈರ್ಯ ಅವರಲ್ಲಿತ್ತು. ಬಹುತೇಕ ಅಕಾಡೆಮಿ ಪ್ರಾಧಿಕಾರಗಳಲ್ಲಿ ಅಧಿಕಾರಿವರ್ಗ ಹಾಗೂ ಅಧ್ಯಕ್ಷರುಗಳ ನಡುವಿನ ಸಂಘರ್ಷ ಸದಾ ಇದ್ದೇ ಇರುವಂತಹುದು. ಅಧ್ಯಕ್ಷರ ಅಧಿಕಾರ ವ್ಯಾಪ್ತಿಯನ್ನು ಯಾವಾಗಲೂ ನಿಯಂತ್ರಿಸಲು ಪ್ರಯತ್ನಿಸುವ ಅಧಿಕಾರಗಳನ್ನು ಹದ್ದುಬಸ್ತಿನಲ್ಲಿಟ್ಟುಕೊಂಡೇ ಅಕಾಡೆಮಿಯನ್ನು ನಡೆಸಿದರೆ ಹಾಕಿಕೊಂಡ ಯೋಜನೆಗಳು ಒಂದಿಷ್ಟು ಪ್ರಯೋಜನಕಾರಿಯಾಗಬಹುದು. ಕೈಬಾಯಿ ಕೆಡಿಸಿಕೊಳ್ಳದೇ ಅಕಾಡೆಮಿಗಳನ್ನು  ಮುನ್ನಡೆಸಬಹುದು. ಅಧಿಕಾರಿಗಳ ತಾಳಕ್ಕೆ ಕುಣಿದರೆ ಇಡೀ ಅಕಾಡೆಮಿ ದುರ್ಬಲವಾಗುತ್ತದೆ. ರೆಜಿಸ್ಟ್ರಾರ್ ಆಗಿರಲಿ ಇಲ್ಲವೇ ಅವರ ಮೇಲಿನ ಯಾವುದೇ ಅಧಿಕಾರಿಯಾಗಿರಲಿ ಏನೇ ಹೇಳಿದರೂ ಅವರನ್ನು ಪ್ರಶ್ನಿಸುವ ಎಲ್ಲದಕ್ಕೂ ಸಾಕ್ಷಿ ಆಧಾರಗಳನ್ನು ಕೇಳುವ ಡೈನಾಮಿಕ್ ಗುಣವನ್ನು ಅಕಾಡೆಮಿ ಅಧ್ಯಕ್ಷರು ಹಾಗೂ ಸದಸ್ಯರುಗಳ ಬೆಳೆಸಿಕೊಳ್ಳಬೇಕು. ಅಧಿಕಾರಿಗಳು ಇರುವುದು ಅಕಾಡೆಮಿಯ ಸರ್ವಸದಸ್ಯರ ಸಭೆ ಹಾಗೂ ಸ್ಥಾಯಿ ಸಮಿತಿಯ ನಿರ್ಣಯಗಳನ್ನು ದಾಖಲಿಸಿಕೊಂಡು ಜಾರಿಮಾಡಲು ಸಹಾಯಕವಾಗಲಿ ಎಂದು ಅಷ್ಟೇ ಹೊರತು ತಮ್ಮ ಅಧಿಕಾರವನ್ನು ಬಳಸಿ ಕಾನೂನಿನ ಕೊಕ್ಕೆಗಳ ಮೂಲಕ ಅಕಾಡೆಮಿ ನಿರ್ಣಯಗಳನ್ನು ದುರ್ಬಲಗೊಳಿಸಲು ಅಲ್ಲಾ ಎನ್ನುವುದನ್ನು ಅಧ್ಯಕ್ಷರು ಹಾಗೂ ಸದಸ್ಯರುಗಳು ಅರ್ಥಮಾಡಿಕೊಳ್ಳಲೇ ಬೇಕು.


ಖಾಸಗಿ ರಂಗಮಂದಿರಗಳಿಗೆ ಬೆಳಕು ಹಾಗೂ ದ್ವನಿ ಪರಿಕರಗಳನ್ನು ಕೊಡುವುದನ್ನು ಅಕಾಡೆಮಿಯಿಂದ ಜಾರಿಗೆ ತನ್ನಿ ಎಂದು ಪ್ರಸ್ತುತ ಅಕಾಡೆಮಿಯಲ್ಲಿ ಹಿರಿಯ ಸದಸ್ಯರಾಗಿರುವ ಮಾನ್ಯ ಗುಣಶೀಲನ್ರವರು ಎರಡು ವರ್ಷಗಳ ಹಿಂದೆ ನನಗೆ ಪೋನ್ ಮಾಡಿ ಒತ್ತಾಯಿಸಿದ್ದರು. ಅವರ ಆಶಯವನ್ನು ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದ ಜೆ.ಲೊಕೇಶರವರಿಗೂ ತಿಳಿಸಲಾಗಿತ್ತು. ಕುರಿತು ಯೋಜನೆಯೂ ಸಿದ್ದವಾಗಿ ಇನ್ನೇನು ಅನುಷ್ಟಾನಕ್ಕೆ ಬರಬೇಕಿತ್ತು. ಆದರೆ.. ಈಗ ನಾಟಕ ಅಕಾಡೆಮಿ ಸದಸ್ಯರಾಗಿ ಎರಡನೇ ಬಾರಿಗೆ ಆಯ್ಕೆಗೊಂಡು ಬಂದಿರುವ ಅದೇ ಗುಣಶೀಲನ್ರವರು ರಂಗಮಂದಿರಗಳಿಗೆ ಬೆಳಕಿನ ಪರಿಕರ ಕೊಡುವ ಯೋಜನೆಗೆ ಅಧಿಕಾರಿಗಳು ತಡೆ ಒಡ್ಡಿದಾಗ ಸುಮ್ಮನಿದ್ದು ತಮ್ಮ ಸಮ್ಮತಿ ಸೂಚಿಸಿದ್ದು ಸೋಜಿಕ. ಪ್ರಸ್ತುತ ಅಕಾಡೆಮಿಯ ಅಧ್ಯಕ್ಷರಾದ ಮಾನ್ಯ ಭೀಮಸೇನ್ರವರು ಹಾಗೂ ಇತರೆ ಎಲ್ಲಾ ಸದಸ್ಯರುಗಳು ಯೋಜನೆಯ ಅಗತ್ಯತೆ ಹಾಗೂ ಅನಿವಾರ್ಯತೆಯನ್ನು ಮನಗಂಡು ಮುಂದಿನ ಸರ್ವಸದಸ್ಯರ ಸಭೆಯಲ್ಲಿ ಅರ್ಹ ಖಾಸಗಿ ರಂಗಮಂದಿರಗಳಿಗೆ ಬೆಳಕಿನ ಪರಿಕರಗಳನ್ನು ಕೊಡುವ ಯೋಜನೆಯನ್ನು ಮುಂದುವರೆಸಬೇಕು ಹಾಗೂ ಪ್ರತಿ ವರ್ಷ ಕನಿಷ್ಟ ಐದು ರಂಗಮಂದಿರಗಳಿಗಾದರೂ ಆಯಾ ರಂಗಮಂದಿರಗಳ ಅಗತ್ಯಕ್ಕೆ ತಕ್ಕಂತೆ ಬೆಳಕು ಹಾಗೂ ದ್ವನಿ ಪರಿಕರಗಳನ್ನು ಕೊಟ್ಟು ಅವುಗಳ ಸದ್ಬಳಕೆ ಆಗುವಂತೆ ನೋಡಿಕೊಳ್ಳಬೇಕು.

ಇಷ್ಟಕ್ಕೂ ಅಕಾಡೆಮಿಯ ಕೆಲಸ ನಾಟಕೋತ್ಸವಗಳನ್ನು ಮಾಡಿ ಸರಕಾರಿ ಅನುದಾನದ ಹಣದ ಸಿಂಹಪಾಲನ್ನು ಖರ್ಚು ಮಾಡುವುದಲ್ಲ. ದಾಖಲೀಕರಣ, ತರಬೇತಿ, ವಿಚಾರ ಸಂಕಿರಣ, ಪ್ರಕಟಣೆ ಹಾಗೂ ರಂಗಚಟುವಟಿಕೆಗಳಿಗೆ ಪೂರಕ ಸಹಕಾರ ಒದಗಿಸುವುದೇ ಅಕಾಡೆಮಿಗಳ ಪ್ರಮುಖ ಕಾಯಕವಾಗಿದೆ. ನಂತರ ಹಣ ಉಳಿದರೆ, ಅಗತ್ಯವೆನಿಸಿದರೆ ರಂಗೋತ್ಸವಗಳು ಇರಲಿ. ರಂಗಪ್ರದರ್ಶನಗಳಾಗಲಿ. ಏನೇ ಆಗಲಿ ಅಕಾಡೆಮಿಯಲ್ಲಿ ಅಧಿಕಾರಿಗಳ ಅನಗತ್ಯ ಹಸ್ತಕ್ಷೇಪ ನಿಲ್ಲಲಿ. ಸರ್ವ ಸದಸ್ಯರ ಸಭೆಯ ನಿರ್ಣಯಗಳು ಅಡೆತಡೆಗಳನ್ನು ಮೀರಿ ಅನುಷ್ಠಾನಕ್ಕೆ ಬರಲಿ.

-ಶಶಿಕಾಂತ ಯಡಹಳ್ಳಿ