ಶುಕ್ರವಾರ, ಜನವರಿ 30, 2015

ಕಾನೂನಿನ ನೆರಳಲ್ಲಿ ದಯಾಮರಣದ “ಉರುಳು”:





ಮರಣದಂಡನೆ ಹಾಗೂ ದಯಾಮರಣ ಇವರೆಡೂ ಬಹುಚರ್ಚಿತ ಸಂಗತಿಗಳು. ನಮ್ಮ ದೇಶದ ಕಾನೂನು ಮರಣದಂಡನೆ ಅಪರಾಧಿಯನ್ನು ಬದುಕಲು ಬಿಡದು, ದಯಾಮರಣ ಬೇಕೆನ್ನುವವರನ್ನು ಸಾಯಲು ಬಿಡದು. ಎರಡೂ ಆಯಾಮಗಳನ್ನು ರಂಗದಂಗಳದಲ್ಲಿ ವಿಶ್ಲೇಷಿಸುವ ಕೆಲಸವನ್ನು ಉರುಳು ನಾಟಕ ಮಾಡುತ್ತದೆ. ಹಿಂದಿಯಲ್ಲಿ ಡಾ.ಶಂಕರಶೇಷ್ ರವರು ಬರೆದ ನಾಟಕವನ್ನು ರಂಗಕರ್ಮಿ ಸದಾನಂದ ಸುವರ್ಣರವರು ಕನ್ನಡಕ್ಕೆ ಅನುವಾದಿಸಿದ್ದರೆ. ಹೊಸಕೋಟೆಯ ಜನಪದರು ಸಾಂಸ್ಕೃತಿಕ ವೇದಿಕೆಯ ಕಲಾವಿದರಿಗೆ ಸುರೇಶ್ ವರ್ತೂರುರವರು ಉರುಳು ನಾಟಕವನ್ನು ನಿರ್ದೇಶಿಸಿದ್ದು, 2015 ಜನವರಿ 18 ರಂದು ದೊಮ್ಮಲೂರಿನ ಸೃಷ್ಟಿ ಆಪ್ತ ರಂಗಮಂದಿರದ ಉದ್ಘಾಟನಾ ನಾಟಕವಾಗಿ ಪ್ರಯೋಗಗೊಂಡಿತು.


ಆತ ಲಾರಿ ಡ್ರೈವರ್, ಹೆಸರು ನಂದಿ. ತಂದೆಯ ಕೊಲೆ ಕೇಸಲ್ಲಿ ಜೈಲಲ್ಲಿದ್ದಾನೆ. ಆತನ ಪರವಾಗಿ ವಾದಮಾಡಲು ಶಾಂತಾರಾಮ್ ಎನ್ನುವ ವಕೀಲನನ್ನು ಕೋರ್ಟು ನಿಯಮಿಸುತ್ತದೆ. ಇಬ್ಬರ ನಡುವೆ ಜೈಲಿನ ಸಂದರ್ಶಕರ ಕೋಣೆಯಲ್ಲಿ ನಡೆಯುವ ನಾಟಕೀಯ ಸನ್ನಿವೇಶಗಳು ಇಡೀ ನಾಟಕದ ಜೀವಾಳವಾಗಿವೆ. ಕ್ಯಾನ್ಸರ ಪೀಡಿತ ತಂದೆಯ ಸಹಿಸಲಸಾಧ್ಯ ನೋವು ಮರೆಸಲು ನೋವುನಿವಾರಕ ಇಂಜೆಕ್ಷನ್ ಕೊಡಿಸಲು ಹಣವಿಲ್ಲದ ನಂದಿಯು ತಂದೆಯ ಸಂಕಟ ನೋಡಲಾರದೇ ಕತ್ತು ಹಿಚುಕಿ ಕೊಂದು ನೋವಿನಿಂದ ಖಾಯಂ ಆಗಿ ಮುಕ್ತಿ ಕೊಡುತ್ತಾನೆ. ನಂದಿಯ ದೃಷ್ಟಿಯಲ್ಲಿ ಅದೊಂದು ದಯಾಮರಣ, ಆದರೆ ಕಾನೂನಿನ ದೃಷ್ಟಿಯಲ್ಲಿ ಅಪರಾಧ. ಮರಣದಂಡನೆ ಎಂಬ ಶಿಕ್ಷೆಯ ಉರುಳಿನ ನೆರಳಲ್ಲಿ ದಿನ ದೂಡುತ್ತಿದ್ದ ನಂದಿಗೆ ವಕೀಲ ಶಾಂತಾರಾಮರವರ ಮಾತು ಬದುಕುವ ಆಸೆಯನ್ನು ಚಿಗುರಿಸುತ್ತದೆ. ಇಬ್ಬರೂ ಸೇರಿ ನಾಳೆ ಕೋರ್ಟಿನಲ್ಲಿ ನಡೆಯಬಹುದಾದದ್ದನ್ನು ಮೊದಲೇ ರಹರ್ಸಲ್ ಮಾಡುತ್ತಾರೆ. ನಂದಿ ಅಪರಾಧಿ ಪರ ಲಾಯರ್ ಆದರೆ, ಶಾಂತಾರಾಂ ಸರಕಾರಿ ಲಾಯರ್ ಆಗುತ್ತಾನೆ, ನಕಲಿ ವಾದ ವಿವಾದ ಮುಂದುವರೆಯುತ್ತದೆ. ಸಾಕ್ಷಿಗಳ ವಿಚಾರಣೆಯೂ ಆಗುತ್ತದೆ. ಏನೆಲ್ಲಾ ಆದರೂ ತಾನೇ ತನ್ನ ತಂದೆಯನ್ನು ಕೊಲೆ ಮಾಡಿದ್ದೇನೆಂದು ಕೋರ್ಟಲ್ಲಿ ತಪ್ಪೊಪ್ಪಿಕೊಂಡ ನಂದಿ ವಿರುದ್ಧ ತೀರ್ಪು ಬರುವುದು ಗ್ಯಾರಂಟಿಯಾಗುತ್ತದೆ. ಕೊನೆಗೆ ಶಾಂತಾರಾಂ ಬ್ಯಾರಿಸ್ಟರ್ ಗಂಗಾಧರ್ರವರ ಸಹಾಯ ಪಡೆಯುತ್ತಾನೆ. ತರ್ಕಬದ್ದವಾಗಿ ವಾದಿಸಿದ ಗಂಗಾಧರ ದಯಾಮರಣದ ಅಗತ್ಯತೆ ಹಾಗೂ ಅನಿವಾರ್ಯತೆಯನ್ನು ಕೋರ್ಟಲ್ಲಿ ಸಾಬೀತು ಪಡಿಸುತ್ತಾನೆ. ಉದ್ದೇಶಪೂರ್ವಕ ಕೊಲೆಯಲ್ಲ ಎನ್ನುವುದನ್ನು ನ್ಯಾಯಾಧೀಶರಿಗೆ ಮನದಟ್ಟು ಮಾಡುತ್ತಾನೆ. ನೋವಿನಿಂದ ಬಳಲುತ್ತಿದ್ದ ತಮ್ಮ ನಾಯಿಯನ್ನು ನ್ಯಾಯಾಧೀಶರು ಕೊಂದಿದ್ದನ್ನು ನೆನಪಿಸುತ್ತಾನೆ. ಕೊಟ್ಟಕೊನೆಗೆ ನಂದಿಯಲ್ಲಿ ಬಿಡುಗಡೆಯ ಆಶಾಕಿರಣವನ್ನು ಹುಟ್ಟಿಸುತ್ತಾ, ಅಂತಿಮ ತೀರ್ಮಾಣವನ್ನು ಪ್ರೇಕ್ಷಕರ ವಿವೇಚನೆಗೆ ಬಿಡುವ ಮೂಲಕ ನಾಟಕ ಕೊನೆಯಾಗುತ್ತದೆ.



ದಯಾಮರಣ ಬೇಕೋ ಬೇಡವೋ ಎನ್ನುವುದೊಂದು ಬಹುಚರ್ಚಿತ ವಿಷಯ. ಭಾರತದಂತಹ ಸಂಕೀರ್ಣ ದೇಶದಲ್ಲಿ ಯಾವುದೇ ಕಾನೂನು ಮಾಡಿದರೂ ಅವು ದುರುಪಯೋಗವಾಗುವುದೇ ಹೆಚ್ಚು. ಇನ್ನು ದಯಾಮರಣವನ್ನು ಕಾನೂನುಬದ್ದಗೊಳಿಸಿದಲ್ಲಿ  ಹಲವಾರು ನಕಲಿ ಕೊಲೆಗಳೇ ನಡೆದು ಬಿಡಬಹುದು ಎನ್ನುವ ಆತಂಕ ನ್ಯಾಯಾಲಯದ್ದಾಗಿದೆ. ಆದರೆ ಮಾನವೀಯ ದೃಷ್ಟಿಯಿಂದ ನೋಡಿದರೆ ಬದುಕಲು ಸಾಧ್ಯವೇ ಇಲ್ಲವೆನ್ನುವಂತಹ ಸಂದರ್ಭದಲ್ಲಿ ಸಾಯುವವನಿಗೆ ಸುಖದ ಸಾವನ್ನು ಕೊಟ್ಟು ನೋವಿನಿಂದ ಮುಕ್ತಿಕೊಡುವುದು ಸರಿಯಾದ ಕ್ರಮವೆನಿಸುತ್ತದೆ. ಆದರೆ... ದಯಾಮರಣವನ್ನು ಕಾನೂನಿನ ಮಾನ್ಯತೆಗೊಳಪಟ್ಟಂತೆ ಹಾಗೂ ವೈದ್ಯರ ಸಲಹೆಯಂತೆ ಜಾರಿಯಲ್ಲಿ ತರುವುದು ಸೂಕ್ತವೇ ಹೊರತು ವ್ಯಕ್ತಿಗತವಾಗಿ ಸ್ವಯಂ ಪ್ರೇರಣೆಯಿಂದ ದಯಾಮರಣವನ್ನು ದಯಪಾಲಿಸುವುದು ಅನಾಹುತಗಳಿಗೆ ದಾರಿಯಾಗುತ್ತದೆ. ನಾಟಕದಲ್ಲೂ ಸಹ ಇದೇ ರೀತಿಯ ಅತಾರ್ಕಿಕವಾದವೊಂದಿದೆ. ನಿರುದ್ಯೋಗಿ ಲಾರಿ ಚಾಲಕನೊಬ್ಬ ಬಡತನದಿಂದಾಗಿ ತಂದೆಗೆ ಚಿಕಿತ್ಸೆಕೊಡಿಸಲು ಅಸಮರ್ಥನಾಗಿ ಸ್ವಯಂಪ್ರೇರಿತನಾಗಿ ದಯಾಮರಣ ಜಾರಿಮಾಡುತ್ತಾನೆ. ಅವನು ಮಾಡಿದ್ದು ಸರಿ ಎನ್ನುವಂತೆ ನಾಟಕದಲ್ಲಿ ಪ್ರತಿಪಾದಿಸಲಾಗಿದೆ.



ಆದರೆ.. ಇದೇ ಮಾನದಂಡವನ್ನು ನೋವುಪೀಡಿತರಾದ ರೋಗಿಗಳ ಮನೆಯವರೆಲ್ಲಾ ಬಳಸಿದರೆ ಆಸ್ತಿ ಕಲಹದಿಂದ ಸಂಬಂಧಗಳೇ ಅಸ್ತಿರಗೊಂಡ ದೇಶದಲ್ಲಿ ದಯಾಮರಣದ ಹೆಸರಲ್ಲಿ ಸರಣಿ ಕೊಲೆಗಳೇ ಅವ್ಯಾಹತವಾಗಿ ನಡೆದು ಹೋಗುತ್ತವೆ. ಎಲ್ಲಾ ಕೊಲೆಗಾರರು ದಯಾಮರಣ ದಯಪಾಲಿಸಿದ ಪುಣ್ಯಕಾರ್ಯದಿಂದಾಗಿ ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಾರೆ. ನ್ಯಾಯಾಧೀಶ ನಾಯಿಗೆ ದಯಾಮರಣ ಕೊಟ್ಟಿದ್ದಕ್ಕೂ ಮನುಷ್ಯರಿಗೆ ದಯಾಮರಣ ಕೊಡುವುದಕ್ಕೂ ಅಗಾಧವಾದ ವ್ಯತ್ಯಾಸವಿದೆ. ದಯಾಮರಣ ಎನ್ನುವುದು ಅದರ ಅಗತ್ಯ ಇರುವವರಿಗೆ ಕೊಡಬೇಕು. ಅದಕ್ಕೆ ಕಾನೂನಾತ್ಮಕ ರೀತಿ ರಿವಾಜುಗಳಿರಬೇಕು. ದಯಾಮರಣದ ಅಗತ್ಯತೆಯ ಸಾಧ್ಯಾಸಾಧ್ಯತೆಗಳನ್ನು ವಿಚಾರಿಸಿ ಅನುಮತಿಯನ್ನು ಕೊಡುವ ಹೊಣೆಗಾರಿಕೆ ನ್ಯಾಯಾಲಯಕ್ಕಿರಬೇಕು. ಆದರೆ ಇಂತಹ ಸಾಧ್ಯತೆಯತ್ತ ಉರುಳು ನಾಟಕ ಕುರುಡಾಗಿದ್ದು, ವ್ಯಕ್ತಿಗತ ನೆಲೆಯಲ್ಲಿ ಸಿಂಪಥಿಯನ್ನು ಹುಟ್ಟಿಸಿ ದಯಾಮರಣವನ್ನು ಸಮರ್ಥಿಸಿ ಕೊಂಡಿರುವುದು ಅತಿಶಯವೆನಿಸುತ್ತದೆ. ಲಾರಿ ಚಾಲಕ ಬಡತನದಲ್ಲಿದ್ದ ಹಾಗೂ ಒಳ್ಳೆಯ ನಡೆತೆಯುಳ್ಳವನಾಗಿದ್ದರಿಂದ ಅವನು ಆವೇಶಕ್ಕೋ, ಅನಿವಾರ್ಯತೆಗೋ ಒಳಗಾಗಿ ಮಾಡಿದ ಕೊಲೆ ಅದು ಹೇಗೆ ದಯಾಮರಣವೆನ್ನಿಸಿಕೊಳ್ಳುತ್ತದೆ ಎನ್ನುವ ಪ್ರಶ್ನೇ ನೋಡುಗರನ್ನು ಕಾಡದೇ ಇರದು. ದಯಾಮರಣದ ಅಗತ್ಯತೆಯನ್ನು ಹೇಳುವ ನಾಟಕದ ಆಶಯ ಸರಿಯಾಗಿಯೇ ಇದೆ, ಅದರೆ ಅದನ್ನು ಹೇಳುವ ರೀತಿ ಮಾತ್ರ ಅತಾರ್ಕಿಕವಾಗಿದೆ.

ದಯಾಮರಣ ಹಾಗೂ ಮಾನವ ಹಕ್ಕುಗಳ ಕುರಿತು ಹೇಳುತ್ತಲೇ ಉರುಳು ನಾಟಕ ಜೈಲಿನಲ್ಲಿರುವ ಅಕ್ರಮದ ಕುರಿತು ಬಿಂಬಿಸಲಾಗಿದೆಲಾಯರ್ಗಳೇ ಅದು ಹೇಗೆ ಜೈಲಿನ ಸಿಬ್ಬಂದಿಗಳಿಗೆ ಲಂಚ ಕೊಟ್ಟು ತಮ್ಮ ಕೆಲಸ ಸರಳಗೊಳಿಸಿಕೊಳ್ಳುತ್ತಾರೆ. ಜೈಲಿನಲ್ಲಿ ನಿಷೇಧಿತವಾದ ಬೀಡಿ, ತಂಬಾಕುಗಳನ್ನು ಜೈಲಿನ ಸಿಬ್ಬಂದಿ ಅಕ್ರಮವಾಗಿ ಖೈದಿಗಳಿಗೆ ಅದು ಹೇಗೆ ಸರಬರಾಜು ಮಾಡುತ್ತಾರೆ ಎನ್ನುವುದರ ಮೇಲೆಯೂ ಸಹ ನಾಟಕ ಬೆಳಕು ಚೆಲ್ಲುತ್ತದೆ. ನಮ್ಮ ನ್ಯಾಯಾಂಗ ವ್ಯವಸ್ಥೆ ಹಾಗೂ ಅದರ ಭಾಗವೇ ಆದ ಬಂಧೀಖಾನೆ ವ್ಯವಸ್ಥೆ ಇಂದು ಲಂಚ, ಭ್ರಷ್ಟಾಚಾರ ಹಾಗೂ ಅಕ್ರಮಗಳ ಆಗರವಾಗಿದ್ದು ಅದನ್ನು ಸೂಕ್ಷ್ಮವಾಗಿ ತೋರಿಸುವಲ್ಲಿ ನಾಟಕ ಸಫಲವಾಗಿದೆ. ವಕೀಲರು ಹೋರಾಡುವುದು ನ್ಯಾಯಕ್ಕಾಗಿಯೋ ಇಲ್ಲವೇ ಕಕ್ಷಿಗಾರನ ಹಣಕ್ಕಾಗಿಯೋ ಎಂದು ನಂದಿ ಪಾತ್ರ ಪ್ರಶ್ನಿಸುವುದು ವೃತ್ತಿಪರತೆ ಮರೆತು ಹಣದ ಹಿಂದೆ ಬಿದ್ದ ಬಹುತೇಕ ವಕೀಲರನ್ನು ಲೇವಡಿಮಾಡಿದಂತಿದೆ.


 ಇದೊಂದು ಪಕ್ಕಾ ರಿಯಲಿಸ್ಟಿಕ್ ಮಾದರಿಯ ನಾಟಕವಾಗಿದೆ. ಆದರೆ ಕೆಲವು ಅವಾಸ್ತವ ಸಂಗತಿಗಳು ಸೇರಲ್ಪಟ್ಟಿವೆ. ಕೊಲೆ ಮಾಡಿದ್ದನ್ನು ಒಪ್ಪಿಕೊಂಡು ಜೈಲು ಸೇರಿದ ಶಿಕ್ಷಾರ್ಹ ಅಪರಾಧಿಗೆ ಜೈಲಿಗೆ ಹೋದ ತಕ್ಷಣ ಮೊದಲು ಮಾಡುವ ಕೆಲಸವೇ ಜೈಲಿನ ಯುನಿಪಾರಂ ಹಾಕಿಸುವುದು ಹಾಗೂ ಕೈದಿಗೆ ನಂಬರ್ ಕೊಡುವುದು. ಆದರೆ ನಾಟಕದ ಖೈದಿ ಲಾರಿ ಡ್ರೈವರ್ ವೇಷದಲ್ಲೇ ಇರುವುದು ಆಭಾಸಕಾರಿಯಾಗಿದೆ. ಸ್ವತಂತ್ರ ಭಾರತದ ನ್ಯಾಯವಾದಿಗಳಲ್ಲಿ ಬ್ಯಾರಿಸ್ಟರ್ ಎನ್ನುವ ಪದವಿಯಾಗಲೀ, ಅಧಿಕಾರವಾಗಲೀ ಇಲ್ಲವೇ ಇಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ವಿದೇಶದಲ್ಲಿ ಲಾ ಕಲಿತು ಬಂದವರಿಗೆ ಬ್ಯಾರಿಸ್ಟರ್ ಎಂದು ಕರೆಯಲಾಗುತ್ತಿತ್ತು. ಆಪ್ರಿಕಾದಲ್ಲಿ ಕಾನೂನು ಓದಿ ಬಂದ ಮಹಾತ್ಮಾ ಗಾಂಧಿಯರವರನ್ನು ಬ್ಯಾರಿಸ್ಟರ್ ಎನ್ನಲಾಗುತ್ತಿತ್ತು. ಆದರೆ ನಾಟಕದಲ್ಲಿ ಖೈದಿಯ ಬಾಯಲ್ಲಿ, ಲಾಯರ್ ಬಾಯಲ್ಲಿ ಬ್ಯಾರಿಸ್ಟರ್ ಪದ ಹಲವಾರು ಬಾರಿ ಬರುತ್ತದೆ. ಅಷ್ಟೇ ಯಾಕೆ ಶಾಂತಾರಾಂ ಎನ್ನುವ ವಕೀಲ ದಯಾಮರಣವನ್ನು ಸಾಬೀತುಪಡಿಸಲು ವಿಫಲವಾದಾಗ ಬ್ಯಾರಿಸ್ಟರ್ ಗಂಗಾಧರ್ ಬಂದು ವಾದ ಮಂಡಿಸುತ್ತಾರೆ. ಸ್ವಾತಂತ್ರ್ಯದ ನಂತರ ನಡೆಯುವ ನಾಟಕದ ಕಾಲಘಟ್ಟದಲ್ಲಿ ಅಸ್ತಿತ್ವದಲ್ಲೇ ಇಲ್ಲದ ಬ್ಯಾರಿಸ್ಟರ್ನನ್ನು ಸೃಷ್ಟಿಸುವುದು ವಿಚಿತ್ರವೆನಿಸುವಂತಿದೆ. ಯಾವುದೋ ಕಾಲಘಟ್ಟದಲ್ಲಿ, ಉತ್ತರ ಭಾರತದಲ್ಲಿ ಬರೆದ ರಂಗಪಠ್ಯವನ್ನು ನೆಲಕ್ಕೆ ತಕ್ಕಂತೆ ಬದಲಾಯಿಸದೇ ನಿಷ್ಟತೆಯನ್ನು ತೋರಿಸಿದಾಗ ರೀತಿಯ ಅವಘಡಗಳು ನಾಟಕದಲ್ಲಿ ಸೇರಿಕೊಳ್ಳುತ್ತವೆ. ನಿರ್ದೇಶಕರು ಕಾನೂನಿನ ಸೂಕ್ಷ್ಮತೆಗಳನ್ನು ಇನ್ನೂ ಸ್ವಲ್ಪ ಅಧ್ಯಯನ ಮಾಡಿದ್ದರೆ ಚಿಕ್ಕ ಪುಟ್ಟ ದೋಷಗಳನ್ನು ತಿದ್ದಿಕೊಳ್ಳಬಹುದಾಗಿದೆ. ಹಾಗೂ ನಾಟಕವನ್ನು ವಾಸ್ತವಕ್ಕೆ ಹತ್ತಿರಗೊಳಿಸಬಹುದಾಗಿದೆ.

ತಾತ್ವಿಕ ಪ್ರಶ್ನೆಗಳನ್ನು ಪಕ್ಕಕ್ಕಿಟ್ಟು ಉರುಳು ನಾಟಕದ ಪ್ರದರ್ಶನದ ಬಗ್ಗೆ ಆಲೋಚಿಸಿದಾಗ, ಇಡೀ ನಾಟಕದಲ್ಲಿರೋದು ಮೂವರೇ ನಟರಾದರೂ ಹಲವು ಗೋಚರ ಹಾಗೂ ಅಗೋಚರ ಪಾತ್ರಗಳಿವೆ. ಮೂವರು ನಟರು ಎಲ್ಲಿಯೂ ಪ್ರೇಕ್ಷಕರಿಗೆ ಬೋರಾಗದಂತೆ ಒಂದು ಗಂಟೆಯ ನಾಟಕವನ್ನು ಕಟ್ಟಿಕೊಟ್ಟಿರುವ ರೀತಿ ನಿಜಕ್ಕೂ ವಿಸ್ಮಯಕಾರಿಯಾಗಿದೆ. ಮಾತುಗಳಲ್ಲಿಯೇ ಪಾತ್ರಗಳು ಬದಲಾಗುತ್ತಾ, ದೃಶ್ಯಗಳು ಸೃಷ್ಟಿಗೊಳ್ಳುತ್ತಾ ಕಥೆಯನ್ನು ನಿರೂಪಿಸುವ ಪರಿಯನ್ನು ನೋಡಿಯೇ ಸವಿಯಬೇಕು. ದಯಾಮರಣದಂತಹ ಸಂಕೀರ್ಣ ವಿಷಯವನ್ನು ಇಷ್ಟೊಂದು ಸರಳವಾಗಿ ವಿಶ್ಲೇಷಣೆಗೊಳಪಡಿಸಿರುವುದು ಉರುಳು ನಾಟಕದ ವಿಶೇಷತೆಯಾಗಿದೆನಾಟಕೀಯತೆ ನಾಟಕದ ಅಂತಸ್ಸತ್ವವಾಗಿದ್ದು, ಒಂದೇ ಜಾಗದಲ್ಲಿ ಸನ್ನಿವೇಶಗಳು ಬದಲಾಗುವ ಜೊತೆಗೆ ನಾಟಕದ ಕಥಾನಕದಲ್ಲಿ ತೆರೆದುಕೊಳ್ಳುವ ನಾಟಕೀಯ ತಿರುವುಗಳು ನೋಡುಗರಲ್ಲಿ ಕುತೂಹಲವನ್ನು ಹುಟ್ಟಿಸುವಂತಿವೆ.

ನಟರಿಗೆ ತಮ್ಮಲ್ಲಿರುವ ಅಭಿನಯ ಸಾಮರ್ಥ್ಯದ ಸಾಕ್ಷಾತ್ಕಾರಕ್ಕೆ ಪುಟ್ಟ ನಾಟಕ ದೊಡ್ಡ ಸವಾಲನ್ನೊಡ್ಡುತ್ತದೆ. ಯಾಕೆಂದರೆ ಒಂದು ನಾಟಕದಲ್ಲಿ ಒಂದೇ ಪಾತ್ರವನ್ನು ಅಭಿನಯಿಸುವುದಕ್ಕೂ, ಒಬ್ಬ ನಟ ಹಲವು ಪಾತ್ರಗಳಾಗಿ ಬದಲಾವಣೆಗೊಳಗಾಗುವುದಕ್ಕೂ ವ್ಯತ್ಯಾಸವಿದೆ. ಪಾತ್ರ ಬದಲಾದಂತೆ ನಟ ತನ್ನ ಮೂಡ್, ಮಾತಿನ ವೈಖರಿ, ನಟನೆಯ ಶೈಲಿಗಳೆಲ್ಲವನ್ನೂ ಆಯಾ ಪಾತ್ರಕ್ಕೆ ಪೂರಕವಾಗಿ ಬದಲಾಯಿಸಬೇಕಾಗುತ್ತದೆ. ಅದೂ ಕ್ಷಣಮಾತ್ರದಲ್ಲಿ ಬದಲಾಗಬೇಕಾದ ಅನಿವಾರ್ಯತೆಯನ್ನು ಎಷ್ಟು ಸಮರ್ಥವಾಗಿ ನಿಭಾಯಿಸುತ್ತಾರೆ ಎನ್ನುವುದರ ಮೇಲೆ ನಟರ ಅಭಿನಯ ಸಾಮರ್ಥ್ಯ ಇತ್ಯರ್ಥಗೊಳ್ಳುತ್ತದೆ. ಸತ್ವ ಪರೀಕ್ಷೆಯಲ್ಲಿ ನಂದಿ ಪಾತ್ರದಾರಿ ಸಿದ್ದೇಶ್ ಹಾಗೂ ವಕೀಲ ಪಾತ್ರವಹಿಸಿದ ಸಿ.ಎಸ್.ಆರ್.ಮೂರ್ತಿ ಯಶಸ್ವಿಯಾಗಿದ್ದಾರೆ. ಇಬ್ಬರೂ ಆಯಾ ಪಾತ್ರಗಳಿಗೆ ಅದರಷ್ಟು ಹೊಂದಾಣಿಕೆಯಾಗಿದ್ದಾರೆಂದರೆ ಯಾರೋ ಲಾರಿ ಚಾಲಕ ಹಾಗೂ ರಿಯಲ್ ಲಾಯರ್ ಗಳನ್ನೇ ಕರೆತಂದು ನಾಟಕದಲ್ಲಿ ಪಾತ್ರಧಾರಿಗಳನ್ನಾಗಿಸಿದ್ದಾರೇನೋ ಎನ್ನುವಂತೆ ನೋಡುಗರಿಗೆ ಭಾಸವಾಗುತ್ತದೆ. ವ್ಯಕ್ತಿಗಳನ್ನು ಪಾತ್ರಗಳಾಗಿಸುವಲ್ಲಿ ಹಾಗೂ ಮಾತಿನ ಟೈಮಿಂಗ್ ಹಾಗೂ ಅಭಿನಯದ ಪಟ್ಟುಗಳನ್ನು ಹೇಳಿಕೊಡುವುದರಲ್ಲಿ ನಿರ್ದೇಶಕರ ಶ್ರಮ ಎದ್ದುಕಾಣುವಂತಿದೆ.

ಆದರೆ.. ಪಾತ್ರೋಚಿತವಾಗಿ ಭಾಷೆಯನ್ನು ಬಳಿಸಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. ಕೆಳವರ್ಗದ ಲಾರಿಚಾರಕ ಸುಶಿಕ್ಷಿತ ಭಾಷೆಯನ್ನು ಬಳಸುವುದು ಅದ್ಯಾಕೋ ಪಾತ್ರಕ್ಕೆ ಸೂಕ್ತವೆನಿಸುವಂತಿಲ್ಲ. ಅನಕ್ಷರಸ್ತ ನಂದಿ ಲಾಯರ್ ಆಗಿ ತಾತ್ಕಾಲಿಕವಾಗಿ ಬದಲಾದಾಗ ಲಾಯರ್ ರೀತಿಯಲ್ಲಿಯೇ ಯುವರ್ ಆನರ್ ಎಂದು ಪಕ್ಕಾ ಕಾನೂನಿನ ಪರಿಭಾಷೆಯಲ್ಲಿ ಮಾತಾಡುವುದು ಸರಿಎನ್ನಿಸುವುದಿಲ್ಲ. ಅಭಿನಯಕ್ಕೆ ಕೊಟ್ಟ ಮಹತ್ವವನ್ನು ಸೂಕ್ತ ಭಾಷಾ ಬಳಕೆಗೂ ಕೊಟ್ಟಿದ್ದರೆ ಇನ್ನೂ ನಾಟಕ ಪರಿಣಾಮಕಾರಿಯಾಗುತ್ತಿತ್ತುವಾರ್ಡರ್ ಪಾತ್ರ ವಹಿಸಿದ ಜಗದೀಶ್ ಕೆಂಗನಾಳ ಪಾತ್ರಕ್ಕೆ ತಮ್ಮ ವಿಶಿಷ್ಟ ಅಭಿನಯದಿಂದ ನ್ಯಾಯವದಗಿಸಿದ್ದಾರೆ. ಆದರೆ ನಾಟಕದ ವಾರ್ಡರ್ ಯಾವಾಗಲೂ ಹೆಚ್ಚಾಗಿ ಹಿಂದಿ ಹಾಡುಗಳನ್ನೇ ಗುಣಗುಣಿಸುತ್ತಾ ಬರುವುದ್ಯಾಕೆ? ಕನ್ನಡದ ಹಾಡುಗಳೇ ಬೇಕಾದಷ್ಟಿದ್ದು ಅವುಗಳನ್ನು ಸನ್ನಿವೇಶಕ್ಕೆ ತಕ್ಕಂತೆ ಆಯ್ಕೆ ಮಾಡಿ ಅಳವಸಿದ್ದರೆ ನಾಟಕಕ್ಕೆ ಹೆಚ್ಚು  ಸೂಕ್ತವೆನಿಸುತ್ತಿತ್ತು.

ಇರುವ ಕಡಿಮೆ ಲೈಟ್ಸ್ಗಳನ್ನೇ ಬಳಸಿ ಸನ್ನಿವೇಶಕ್ಕೆ ತಕ್ಕಂತೆ ಮೂಡ್ನ್ನು ಸೃಷ್ಟಿಸುವಲ್ಲಿ ರಂಜಿತ್ ಕಾಂತರಾಜ್ರವರ ಬೆಳಕು ನಿರ್ವಹನೆ ಸಹಕಾರಿಯಾಗಿದೆ. ದೃಶ್ಯದಲ್ಲಿ ನಿರ್ಣಾಯಕ ಸಮಯದಲ್ಲಿ ನೋಡುಗರಿಗೆ ಮೂಡನ್ನು ಹುಟ್ಟಿಸಲು ಹಿನ್ನೆಲೆಯಲ್ಲಿ ಮೂಡಿ ಬರುವ ಕೊಳಲಿನ ನಾದ ಅಚ್ಚರಿದಾಯಕ ಪರಿಣಾಮವನ್ನು ಬೀರಿದ್ದಂತೂ ಸುಳ್ಳಲ್ಲ. ಹಿನ್ನಲೆ ಸಂಗೀತ ಹಾಗೂ ಸಮಯದ ಗಂಟೆ ಮೊಳಗುವ ಟೈಮಿಂಗನ್ನು ಸನ್ನಿವೇಶಕ್ಕೆ ಸರಿಯಾಗಿ ಬ್ಲೆಂಡ್ ಮಾಡುವಲ್ಲಿ ಕೆ.ಸಿ.ಶಿವಕುಮಾರ್ರವರು ಸಫಲರಾಗಿದ್ದಾರೆ.
                      
ನಾಟಕದಲ್ಲಿ ಸೆಟ್ ಪ್ರಾಪರ್ಟಿಗಳನ್ನು ಬಳಸಿದ ರೀತಿ ನಿರ್ದೇಶಕರ ಪ್ರತಿಭೆಗೆ ಕೈಗನ್ನಡಿಯಾಗಿದೆ. ಜೈಲಿನ ಸಂದರ್ಶನ ಕೋಣೆಯಲ್ಲಿರುವ ಖುರ್ಚಿ ಹಾಗೂ ಟೇಬಲ್ನ್ನು ಸ್ಥಳಾಂತರಗೊಳಿಸಿ ಕೋರ್ಟಿನ ಸನ್ನಿವೇಶವನ್ನು ಸೃಷ್ಟಿಸಿದ್ದು ಹಾಗೂ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಜೈಲಿನ ಕಂಬಿಗಳಿರುವ ಬಾಗಿಲನ್ನು ಪ್ರತಿಷ್ಟಾಪಿಸಿದ್ದು ನೋಡುಗರಲ್ಲಿ ಅಚ್ಚರಿಯನ್ನು ಮೂಡಿಸಿದರೆ, ಇದ್ದಕ್ಕಿದ್ದಂತೆ ನಟರು ಬೇರೆ ಪಾತ್ರವಾಗಿ ಬದಲಾಗುವ ರೀತಿ ಪ್ರೇಕ್ಷಕರಲ್ಲಿ ಸಂಚಲನವನ್ನುಂಟುಮಾಡುತ್ತದೆ. ಅತೀ ಕಡಿಮೆ ಸೆಟ್ಗಳನ್ನು ಬಳಸಿ, ಇಬ್ಬರೇ ನಟರನ್ನು ಉಪಯೋಗಿಸಿ  ಮಾತಿನ ನಾಟಕವನ್ನು ಅಭಿನಯದ ಮೂಲಕ ಕಟ್ಟಿಕೊಟ್ಟಿದ್ದಕ್ಕೆ ಸುರೇಶ್ ವರ್ತೂರ ಅಭಿನಂದಾನಾರ್ಹರು. ಆಪ್ತ ರಂಗಮಂದಿರಗಳಿಗೆ ಹೇಳಿಮಾಡಿಸಿದಂತಹ ನಾಟಕವಿದು. ಕಡಿಮೆ ಖರ್ಚಿನಲ್ಲಿ ತಯಾರಾದ ನಾಟಕವನ್ನು ಎಲ್ಲಿ ಬೇಕಾದಲ್ಲಿ ಹೆಚ್ಚು ಪೂರ್ವತಯಾರಿಯ ಅಗತ್ಯವಿಲ್ಲದೇ ಪ್ರದರ್ಶಿಸಬಹುದಾಗಿದೆ. ನಾಟಕ ಎನ್ನುವುದು ಸುಸಜ್ಜಿತ ರಂಗಮಂದಿರ ಇಲ್ಲದ ಕಡೆಯೂ ಜನರಿಗೆ ತಲುಪಬೇಕೆಂದರೆ ಇಂತಹ ಪ್ರೊಡಕ್ಷನ್ಗಳು ಅಗತ್ಯವಾಗಿವೆ. ಬದ್ದತೆ ಇರುವ ನಟರ ಕೊರತೆಯನ್ನು ಅನುಭವಿಸುತ್ತಿರುವ ರಂಗತಂಡಗಳಿಗೆ ಇಂತಹ ಕಡಿಮೆ ನಟರ ನಾಟಕಗಳು ವರದಾನವಾಗಿವೆ.



ದಯಾಮರಣವನ್ನು ನೆಪವಾಗಿಟ್ಟುಕೊಂಡು ಕಾನೂನಿನ ಶುಷ್ಕತೆಯನ್ನು ಹಾಗು ನಿಷ್ಕರುಣೆಯನ್ನು ನಾಟಕ ಪ್ರಶ್ನಿಸುತ್ತದೆ. ಬ್ಯಾರಿಸ್ಟರ್ ಗಂಗಾಧರ ಹೇಳುವ ಮಾತುಗಳು ಹೀಗಿವೆ. ಕಾನೂನು ಮನುಷ್ಯನಿಗಾಗಿದೆಯೋ ಇಲ್ಲವೇ ಮನುಷ್ಯ ಕಾನೂನಿಗಾಗಿ ಇದ್ದಾನೋ? ಮನುಷ್ಯನನ್ನು ಅನ್ಯಾಯ, ಅತ್ಯಾಚಾರ, ಕಷ್ಟ ಪರಂಪರೆಗಳಿಂದ ರಕ್ಷಿಸಲು ಕಾನೂನು ಜನ್ಮತಾಳಿದೆ. ಆದ್ದರಿಂದ ಕಾನೂನು ಯಾವಾಗಲೂ ಹೊಸ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಕಾನೂನೇ ಕಲ್ಲಿನಂತೆ ಸ್ಥಿರವಾಗಿ ನಿರ್ಜೀವವಾಗಿ ಬಿಟ್ಟರೆ ಸಮಾಜದಲ್ಲಿ ಬದಲಾಗುತ್ತಿರುವ ಪರಿಸ್ಥಿತಿಗನುಗುಣವಾಗಿ ನ್ಯಾಯ ದೊರಕಿಸಲು ಸಾಧ್ಯವಿಲ್ಲ. ಆದ್ದರಿಂದ ಯುವರ್ ಆನರ್ ಇಂದಿನ ಕೋರ್ಟುಗಳಲ್ಲಿ ಹಿಂದಿನ ಕಾನೂನಿಗೆ ಹೊಸ ಅರ್ಥ, ವಿವರಣೆ ದೊರಕಬೇಕಾಗಿದೆ.... ಇವು ಕೇವಲ ನಾಟಕದ ಮಾತುಗಳಾಗಿ ಉಳಿಯಬೇಕಾಗಿಲ್ಲ. ಬ್ರಿಟೀಷರು ರಚಿಸಿದ ಕಾನೂನುಗಳೇ ಇಂದಿಗೂ ದೇಶದ ನ್ಯಾಯವ್ಯವಸ್ಥೆಯ ಬೆನ್ನೆಲುಬಾಗಿರುವಾಗ ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ದೇಸಿ ಕಾನೂನುಗಳು ಸೃಷ್ಟಿಗೊಂಡು ಹೆಚ್ಚು ಮಾನವೀಯವಾಗಿ ಜನರಿಗೆ ಸ್ಪಂದಿಸಬೇಕು ಎನ್ನುವ ನಾಟಕದ ಆಶಯ ಇಂದಿನ ಕಾನೂನು ರಕ್ಷಕರಿಗೆ ಪಾಠಹೇಳುವಂತಿದೆ. ನಾಟಕದ ಕೊನೆಯಲ್ಲಿ ಖೈದಿ ನಾನು ಬಿಡುಗಡೆ ಹೊಂದಬಹುದೆ? ಎಂದು ವಕೀಲನನ್ನು ಆತಂಕದಿಂದ ಕೇಳಿದಾಗ ಕಾನೂನಿನ ಆತ್ಮದಲ್ಲಿ ಮನುಷ್ಯನಿದ್ದರೆ ನೀನು ಅಗತ್ಯ ಪಾರಾಗುವಿ... ಆದರೆ ಕಾನೂನಿನ ಆತ್ಮ ಕಲ್ಲೇ ಆಗಿದ್ದರೆ....? ಎಂದು ಹೇಳಿದ ವಕೀಲ ತನ್ನ ಮಾತು ನಿಲ್ಲಿಸುತ್ತಾನೆ. ಇಲ್ಲಿಗೆ ನಾಟಕವೇನೋ ಯಾವ ತೀರ್ಪನ್ನೂ ನಿರ್ಣಾಯಕವಾಗಿ ಕೊಡದೇ ಮುಗಿಯುತ್ತದೆ. ಆದರೆ ನೋಡುಗರ ಮನೋರಂಗದಲ್ಲಿ ನಾಟಕದ ಅಂತ್ಯದ ಕುರಿತು ಜಿಜ್ಞಾಸೆ ಆರಂಭವಾಗುತ್ತದೆ. ನಾಟಕ ತಾನು ಹುಟ್ಟು ಹಾಕಿದ ದಯಾಮರಣ, ಮರಣದಂಡನೆ, ಶಿಕ್ಷೆ, ಕಾನೂನು, ತೀರ್ಪು... ಕುರಿತ ಸಂವಾದವನ್ನು ಪ್ರೇಕ್ಷಕರ ಆಲೋಚನೆಗೆ ಬಿಡುವ ಮೂಲಕ ಪ್ರೇಕ್ಷಕರಲ್ಲೂ ಸಂಚಲನವನ್ನು ಹುಟ್ಟಿಸುವಲ್ಲಿ ಉರುಳು ಸಫಲವಾಗಿದೆ

                             -ಶಶಿಕಾಂತ ಯಡಹಳ್ಳಿ