ಮಂಗಳವಾರ, ಜನವರಿ 20, 2015

ಶೈಲೀಕೃತ ದೃಶ್ಯಕಾವ್ಯರೂಪಕ “ಮೋಹೆ ಪಿಯಾ' :






ಬಂಗಾರವು ಅದೆಷ್ಟೆ ಹಳೆಯದಾದರೂ ಕಾಲಕಾಲಕ್ಕೆ ತಿಕ್ಕಿ ತೀಡಿ ಕೊಳೆತೆಗೆದು ಹೊಸರೂಪ ಕೊಟ್ಟರೆ ಮತ್ತೆ ಹೊಸತಾಗಿ ಪಳಪಳ ಹೊಳೆಯುವ ಆಕರ್ಷಕ ಆಭರಣವಾಗುವುದರಲ್ಲಿ ಸಂದೇಹವಿಲ್ಲ. ಅದೇ ರೀತಿ ಕೆಲವು ಅಪರೂಪದ ಪುರಾತನ ನಾಟಕಗಳು ಅದೆಷ್ಟೇ ಶತಮಾನಗಳು ಕಳೆದರೂ ಸಾಣೆ ಹಿಡಿದಷ್ಟೂ ಹೊಸರೂಪ ತೊಟ್ಟು ತಲೆಮಾರಿನಿಂದ ತಲೆಮಾರಿಗೆ ಉಳಿಯುತ್ತಲೇ ಬರುತ್ತವೆ. ಅಂತಹ ಅಪರೂಪದ ಸಂಸ್ಕೃತ ನಾಟಕಗಳಲ್ಲೊಂದು ಭಾಸಕವಿಯ ಮಧ್ಯಮ ವ್ಯಾಯೋಗ. ಬಂಗಾರವನ್ನು ಕಾಲಕ್ಕೆ ತಕ್ಕಂತೆ ಬದಲಾಯಿಸಿ ಒಡವೆ ಮಾಡಲು ಅಪಾರ ಕೌಶಲ್ಯತೆ ಇರುವ ಅಕ್ಕಸಾಲಿಗ ಬೇಕಾದಂತೆ ಇಂತಹ ಪುರಾತನ ನಾಟಕವನ್ನು ದೃಶ್ಯಕಾವ್ಯವಾಗಿಸಲು ಕ್ರಿಯಾಶೀಲ ನಿರ್ದೇಶಕನ ಅಗತ್ಯವಿದೆ. ಮಧ್ಯಮ ವ್ಯಾಯೋಗ ದಂತಹ ನಾಟಕ ನೋಡುಗರಲ್ಲಿ ಆಕರ್ಷಣೆ ಮತ್ತು ಆಲೋಚನೆ ಎರಡನ್ನೂ ಹುಟ್ಟಿಸುವಂತೆ ಮಾಡಲು ವಾಮನ ಕೇಂದ್ರೆಯಂತಹ ಸೃಜನಶೀಲ ನಿರ್ದೇಶಕರ ಅಗತ್ಯವಿದೆ.

ಮಹಾಭಾರತದ ಹಿಡಂಬಾ ಪ್ರಕರಣವನ್ನಾಧರಿಸಿ ಭಾಸಕವಿ ಸಂಸ್ಕೃತದಲ್ಲಿ ರಚಿಸಿದ್ದ ಮಧ್ಯಮ ವ್ಯಾಯೋಗ ನಾಟಕವನ್ನು ಆಧರಿಸಿ ವಾಮನ ಕೇಂದ್ರೆಯವರು ತಮ್ಮದೇ ಆದ ರೀತಿಯಲ್ಲಿ ಹೊಸಹೊಳವನ್ನು ಕೊಟ್ಟಿದ್ದಾರೆ. ಮೋಹೆ ಪೀಯಾ ಹೆಸರಲ್ಲಿ ಹಿಂದಿ ಭಾಷೆಯಲ್ಲಿ ರಚಿಸಿ ನಿರ್ದೇಶಿಸಿ ಭಾಸನ ನಾಟಕವನ್ನು ಮರುವ್ಯಾಖ್ಯಾನಕ್ಕೊಳಪಡಿಸಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಆಯೋಜಿಸಿದ ರಂಗಭಾರತಿ ರಾಷ್ಟ್ರೀಯ ನಾಟಕೋತ್ಸವದಲ್ಲಿ 2015 ಜನವರಿ 19ರಂದು ಬೆಂಗಳೂರಿನ ಗುರುನಾನಕ ಭವನದಲ್ಲಿ ಪ್ರದರ್ಶನಗೊಂಡ ಮೋಹೆ ಪೀಯಾ ನಾಟಕವನ್ನು  ಮುಂಬೈನ ರಂಗಪೀಠ ಥೀಯೆಟರ್ ಕಲಾವಿದರು ಪ್ರಸ್ತುತಪಡಿಸಿ ನೋಡುಗರನ್ನು ವಿಸ್ಮಯಗೊಳಿಸಿದರು.

ಭಾಸನ ಮಧ್ಯಮ ವ್ಯಾಯೋಗ ನಾಟಕದ ಕಥೆ ತುಂಬಾ ಸರಳವಾದದ್ದು. ಬ್ರಾಹ್ಮಣ ಕುಟುಂಬವೊಂದು ಕಾಡಿನಲ್ಲಿ ಹೋಗುವ ದಾರಿಮಧ್ಯದಲ್ಲಿ ಘಟೋದ್ಘಜ ತಡೆದು ತಾಯಿ ಹಿಡಿಂಬೆಯ ಉಪವಾಸವೃತ ಕೊನೆಗೊಳಿಸಲು ಆಹಾರವಾಗಿ ನರನೊಬ್ಬ ಬೇಕು ಎನ್ನುತ್ತಾನೆ. ತಂದೆ ಮುದಿಯ, ತಾಯಿ ಹೆಣ್ಣು ಆದ್ದರಿಂದ ಮೂರು ಗಂಡುಮಕ್ಕಳಲ್ಲಿ ಒಬ್ಬನನ್ನು ಬಲಿಯಾಗಿ ಕಳಿಸಲು ಘಟೋದ್ಘಜ ಬೆದರಿಸುತ್ತಾನೆ. ಹಿರಿಮಗ ಅಪ್ಪನಿಗೆ ಬೇಕು, ಕಿರಿಮಗನ ಮೇಲೆ ತಾಯಿಗೆ ಪ್ರೀತಿ. ಹೀಗಾಗಿ ಕುಟುಂಬ ರಕ್ಷಣೆಗಾಗಿ ನಡುವಿನ ಮಗ ಪ್ರಾಣತ್ಯಾಗ ಮಾಡಲು ಒಪ್ಪಿ ಸರೋವರದಲ್ಲಿ ನೀರು ಕುಡಿದು ಬರುವುದಾಗಿ ಹೋಗುತ್ತಾನೆ. ಆತ ಎಷ್ಟೊತ್ತಾದರೂ ಮರಳಿ ಬರದಿರುವಾಗ ಘಟೋದ್ಘಜನು ಆತನ ಹೆಸರಾದ ಮಧ್ಯಮ ಎಲ್ಲಿದ್ದಿಯಾ ಎಂದು ಕೂಗುತ್ತಾ ಹುಡುಕುತ್ತಾನೆ. ಅದನ್ನು ಅಜ್ಞಾತವಾಸದಲ್ಲಿದ್ದ ಮಧ್ಯಮ ಪಾಂಡವ ಭೀಮ ಕೇಳಿಸಿಕೊಂಡು ತಾನೇ ಮಧ್ಯಮ ಎನ್ನುತ್ತಾನೆ. ಪೀಚಲು ಬ್ರಾಹ್ಮಣ ಪಿಳ್ಳೆಯನ್ನು ಬಿಟ್ಟು ದಷ್ಟಪುಷ್ಟವಾದ ಭೀಮನನ್ನು ತನ್ನ ತಾಯಿಗೆ ಆಹಾರವಾಗಿ ತೆಗೆದುಕೊಂಡು ಹೋಗಲು ಭೀಮ ನಿರ್ಧರಿಸುತ್ತಾನೆ. ಬ್ರಾಹ್ಮಣ ಕುಟಂಬ ತನ್ನ ಮಗನನ್ನು ಕಾಪಾಡಲು ಭೀಮನಿಗೆ ಮೊರೆಯಿಡುತ್ತಾರೆ. ಭೀಮ ಘಟೋದ್ಘಜರಿಬ್ಬರಿಗೂ ಭೀಕರ ಹೋರಾಟವಾಗಿ ಕೊನೆಗೆ ಘಟೋದ್ಘಜ ಭೀಮನನ್ನು ಹಗ್ಗದಲ್ಲಿ ಕಟ್ಟಿ ಎಳೊದೊಯ್ದು ತಾಯಿ ಹಿಡಿಂಬೆಯ ಮುಂದೆ ನಿಲ್ಲಿಸುತ್ತಾನೆ. ಭೀಮನನ್ನು ನೋಡಿ ರೋಮಾಂಚಿತಳಾದ ಹಿಡಿಂಬೆ ಮಗನಿಗೆ ತಂದೆಯ ಪರಿಚಯ ಮಾಡಿಕೊಡುತ್ತಾಳೆ. ತಂದೆ ತಾಯಿ ಮಗ ಮೂವರೂ ಒಂದಾಗುವುದರ ಮೂಲಕ ಭಾಸಕವಿಯ ನಾಟಕ ಸುಖಾಂತ್ಯವಾಗುತ್ತದೆ. ಇದು ಮಧ್ಯಮ ವ್ಯಾಯೋಗ ನಾಟಕದ ಭಾಗವಾದರೆ. ಇದರ ನಂತರದಲ್ಲಿ ವಾಮನ ಕೇಂದ್ರೆಯವರ ಮರುವ್ಯಾಖ್ಯಾನದಲ್ಲಿ ನಾಟಕ ಇನ್ನೊಂದು ಹಂತದಲ್ಲಿ ಮುಂದುವರೆಯುತ್ತದೆ.


ಮಧ್ಯಮ ವ್ಯಾಯೋಗ ಕಥೆಯನ್ನು ದೃಶ್ಯಗಳ ಮೂಲಕ ಕಟ್ಟಿಕೊಡುವ ವಾಮನ ಕೇಂದ್ರೆರವರು ಇನ್ನೂ ಒಂದಿಷ್ಟು ಕಥೆಯನ್ನು ಬೆಳೆಸಿ ಆರ್ಯ ಅನಾರ್ಯರ ಅಸಮಾನತೆ ಹಾಗೂ ಸ್ವಾರ್ಥ ರಾಜನೀತಿ ಕುರಿತು ತಾತ್ವಿಕ ಜಿಜ್ಞಾಸೆಯನ್ನು ಹಿಡಿಂಬೆ ಪಾತ್ರದ ಮೂಲಕ ಮಂಡಿಸುತ್ತಲೇ ನಾಟಕವನ್ನು ದುಃಖಾಂತ್ಯಗೊಳಿಸುತ್ತಾರೆ. ಬೆಳವಣಿಗೆಯಲ್ಲೇ ನಾಟಕದ ಅಂತಸ್ಸತ್ವ ಇರುವುದು. ಅನಾರ್ಯೆ ತಾನೆಂದು ತೊರೆದು ಹೋದೆಯಲ್ಲಾ ಅಕಸ್ಮಾತ್ ನಾನೇನಾದರೂ ಆರ್ಯೆಯಾಗಿದ್ದಲ್ಲಿ ಹೀಗೆ ಮಾಡುತ್ತಿದ್ದೇಯಾ ಎಂದು ಹಿಡಿಂಬೆ ಭೀಮನನ್ನು ಪ್ರಶ್ನಿಸುತ್ತಾಳೆ.   ನನ್ನಿಂದ ಒಂದು ಮಗುವಾಗುವವರೆಗೂ ಭೀಮ ಗಂಡನಾಗಿರಲಿ ಎಂದು ತಾಯಿ ಕುಂತಿಯನ್ನು ನೀನು ಕೇಳಿಕೊಂಡಿದ್ದರಿಂದ ತಾಯಿಯ ಮಾತಿನ ಕರಾರಿಗೆ ಒಪ್ಪಿ ಜೊತೆಯಲ್ಲಿದ್ದು ನಂತರ ಹೊರಟೆ ಎಂದು ಭೀಮ ಸಮಜಾಯಿಸಿ ಕೊಡುತ್ತಾನೆ. ಕರಾರುಗಳಿಗಿಂತ ಮೀರಿದ್ದು ಸಂಬಂಧ, ಪ್ರೀತಿ.. ಎನ್ನುವುದು ಅರಿವಿಗೆ ಬರಲಿಲ್ಲವೇ? ಎಂದು ಹಿಡಿಂಬೆ ಕೇಳಿದ ಪ್ರಶ್ನೆಗೆ ಭೀಮ ನಿರುತ್ತರನಾಗುತ್ತಾನೆ. ಮಾತುಗಳನ್ನು ಮೂಲ ನಾಟಕಕ್ಕೆ ಸೇರಿಸುವ ಮೂಲಕ ನಿರ್ದೇಶಕರು ಆರ್ಯರು ಬುಡಕಟ್ಟಿನ ಹೆಂಗಸರನ್ನು ಬೇಕಾದಾಗ ಬಳಸಿ ಬೇಡವಾದಾಗ ಬಿಸಾಕಿ ಹೋಗುತ್ತಾರೆ, ಅವರಿಗೆ ಪ್ರೀತಿ ಸಂಬಂಧಗಳಿಗಿಂತಲೂ ಆರ್ಯಕುಲಗೌರವವೇ ಪ್ರಮುಖವಾಗುತ್ತದೆ ಎನ್ನುವುದನ್ನು ಪ್ರತಿಪಾದಿಸಿದ್ದಾರೆಮುಂದುವರೆದು ವೀರ ಶೂರ ಪರಾಕ್ರಮಿಯಾದ ಮಗನಿದ್ದಾನೆ, ಮುಂದೆ ನಡೆವ ಕುರುಕ್ಷೇತ್ರ ಯದ್ದದಲ್ಲಿ ಹೋರಾಡಲು ಶೂರ ಯೋಧನೊಬ್ಬ ಸಿಕ್ಕ ಎಂದು ಮಗನನ್ನು ಒಪ್ಪಿಕೊಂಡೆಯಲ್ಲಾ ಅಕಸ್ಮಾತ್ ಅಯೋಗ್ಯ ಮಗನಾಗಿದ್ದರೆ ಒಪ್ಪಿಕೊಳ್ಳುತ್ತಿದ್ದೀರಾ, ನೀವು ಸ್ವೀಕರಿಸುತ್ತಿರುವುದು ವೀರ ಪುತ್ರನನ್ನೋ ಇಲ್ಲವೇ ಕೇವಲ ಪುತ್ರನನ್ನೋ  ಎಂದು ಭೀಮನನ್ನು ಹಿಡಿಂಬೆ ಕೇಳುತ್ತಾಳೆ. ರಾಜನೀತಿಯ ಭಾಗವಾಗಿ ಅಸಾಧಾರಣ ಯೋಧನೊಬ್ಬ ಯುದ್ದಕ್ಕೆ ಬೇಕೆಂಬ ಬಯಕೆಯಿಂದ ಪುತ್ರನನ್ನು ಆದರಿಸುವ ಭೀಮನ ಉದ್ದೇಶವನ್ನು ಗ್ರಹಿಸಿದ ಹಿಡಿಂಬೆ ಮಗನನ್ನು ಯುದ್ದಕ್ಕೆ ಕಳುಹಿಸಲು ನಿರಾಕರಿಸುತ್ತಾಳೆ. ನಿಷ್ಪಲ ಯುದ್ದಕ್ಕೆ ನಾವ್ಯಾಕೆ ಸಿದ್ದರಾಗಬೇಕು? ಎಂದು ಯುದ್ದದ ನಿರರ್ಥಕತೆಯನ್ನು ಹಿಡಿಂಬೆ ಪ್ರಶ್ನಿಸುತ್ತಾಳೆ. ರಾಜನೀತಿ ಚಕ್ರದಿಂದ ಯಾರೂ ಹೊರತಲ್ಲ.. ಎನ್ನುವ ಭೀಮ ಕುರುಕ್ಷೇತ್ರ ಯುದ್ದದಲ್ಲಿ ಯೋಧನಾಗಿ ಪಾಲ್ಗೊಳ್ಳಲು ಮಗನನ್ನು ಆಹ್ವಾನಿಸುತ್ತಾನೆ. ತಾಯಿಯ ಮಾತನ್ನು ನಿರಾಕರಿಸಿ ತಂದೆಯ ಅನತಿಯಂತೆ ಕುರುಕ್ಷೇತ್ರ ಯುದ್ದದಲ್ಲಿ ಭಾಗಿಯಾಗಿ ತನ್ನ ಶೌರ್ಯ ಮರೆಯುವ ಘಟೋದ್ಘಜ ಕೊನೆಗೆ ಹೋರಾಡುತ್ತಲೇ ಸಾವನ್ನಪ್ಪುತ್ತಾನೆ. ಹಿಡಿಂಬೆ ಬಂದು ಮಗನ ಸಾವಿಗೆ ಗೋಳಾಡುವುದರೊಂದಿಗೆ ವಾಮನ ಕೇಂದ್ರೆಯವರ ನಾಟಕ ಅಂತ್ಯವಾಗುತ್ತದೆ.

ಇದು ನಿಜಕ್ಕೂ ಒಬ್ಬ ಕ್ರಿಯಾಶೀಲ ರಂಗ ನಿರ್ದೇಶಕ ಮಾಡಬೇಕಿರುವುದು. ಇದ್ದದ್ದನ್ನು ಇದ್ದ ಹಾಗೆಯೇ ಹೇಳುವ ಬದಲು ಈಗಾಗಲೇ ಇದ್ದದ್ದನ್ನು ನಿಷ್ಕರ್ಷಕ್ಕೆ ಅಳವಡಿಸಿ ವೈಚಾರಿಕ ದೃಷ್ಟಿಕೋನದಲ್ಲಿ ನಾಟಕವನ್ನು ವಿಮರ್ಶಿಸಿ ಮತ್ತೆ ಹೊಸದಾಗಿ ಕಟ್ಟುವುದು ಕ್ರಿಯಾಶೀಲತೆಯ ಪ್ರತೀಕವಾಗಿದೆ. ಭಾಸಕವಿಯ ಕಾಲದ ವ್ಯಾಖ್ಯಾನಕ್ಕೆ ಮರುವ್ಯಾಖ್ಯಾನ ಮಾಡುತ್ತಲೇ ಪಾತ್ರಗಳ ಮೂಲಕ ಪ್ರಶ್ನೆಗಳನ್ನು ಕೇಳಿಸುತ್ತಾ ನೋಡುಗರನ್ನು ಆಲೋಚನೆಗೆ ತೊಡಗಿಸುವಂತೆ ಮಾಡುವುದು ನಾಟಕಕಾರ ಹಾಗೂ ನಿರ್ದೇಶಕನ ಹೊಣೆಗಾರಿಕೆಯಾಗಿದೆ. ಮಧ್ಯಮ ವ್ಯಾಯೋಗವನ್ನು ಮರುರಚಿಸುವಲ್ಲಿ ಯಶಸ್ವಿಯಾದ ವಾಮನ ಕೇಂದ್ರೆಯವರು ನಾಟಕವನ್ನು ಕಟ್ಟಿಕೊಡುವಲ್ಲಿಯೂ ಕೂಡಾ ಮಾಂತ್ರಿಕತೆಯನ್ನು ಸೃಷ್ಟಿಸುತ್ತಾರೆ. ದೃಶ್ಯಕ್ಕೆ ಪೂರಕವಾಗಿ ರಂಗತಂತ್ರಗಳನ್ನು ಉಪಯೋಗಿಸಿಕೊಂಡು ನಟರ ಅಭಿನಯ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಂಡು ಇಡೀ ನಾಟಕವನ್ನು ದೃಶ್ಯಕಾವ್ಯ ರೂಪಕವನ್ನಾಗಿ ಕಟ್ಟಿ ಕೊಟ್ಟ ಪರಿಯನ್ನು ನೋಡಿಯೇ ಅನುಭವಿಸಬೇಕು.

ಅತೀ ಹೆಚ್ಚು ಗಮನಸೆಳೆಯುವುದು ನಾಟಕದ ಸಿನಿಮಿಯಾಟ್ರಿಕ್ಸ್. ಸೌಂದರ್ಯ ಪ್ರಜ್ಞೆ ಎನ್ನುವುದು ನಾಟಕದಾದ್ಯಂತ ಮೂಡಿಬಂದಿದೆ. ವಾಸ್ತವದಲ್ಲಿ ಆಲೋಚಿಸಿದರೆ ಕಾಡಿನಲ್ಲಿ ನಡೆಯುವ ದೃಶ್ಯಕ್ಕೆ ನಾಲ್ಕು ಕಂಬಗಳಿರುವ ಸುಸಜ್ಜಿತವಾದ ಸೆಟ್ ಅನಗತ್ಯವೆನಿಸುತ್ತದೆ. ಆದರೆ   ನಾಟಕದಲ್ಲಿ ಈಸ್ತೆಟಿಕ್ಸ್ ತರಲು ಸನ್ನಿವೇಶಕ್ಕೆ ಹೊರತಾದ ಸ್ಥಿರ ರಂಗವಿನ್ಯಾಸವನ್ನು ಮಾಡಲಾಗಿದೆ. ದೃಶ್ಯ ಬಯಸುವ ಲೊಕೇಶನ್ನಿನ  ಅಗತ್ಯವನ್ನು ಮರೆಮಾಚಿ ನಿರ್ದೇಶಕ ಬಯಸುವಂತೆ ರಂಗವಿನ್ಯಾಸವನ್ನು ಅದ್ದೂರಿಯಾಗಿಯೇ ಮಾಡಲಾಗಿದೆ. ಕಾಡಿನಲ್ಲ್ಯಾಕೆ ನಾಡಿನ ಸೆಟ್ ಎನ್ನುವ ಅನುಮಾನ ಬಾರದಂತೆ ನಾಟಕವನ್ನು ಕಟ್ಟಿಕೊಡಲಾಗಿದೆ. ಹಿನ್ನೆಲೆ ಸಂಗೀತವಂತೂ ನಾಟಕದ ನಾಡಿಮಿಡಿತವಾಗಿದೆ. ಹಾಗೆ ನೋಡಿದರೆ ನಾಟಕದಲ್ಲಿ ಮಾತುಗಳೇ ಕಡಿಮೆ. ಸಂಗೀತ ಮತ್ತು ಅಭಿನಯ ಕ್ರಿಯೆಗಳೇ ನಾಟಕದ ಜೀವಾಳವಾಗಿವೆ. ಯಕ್ಷಗಾನದಲ್ಲಿ ಬಳಸಲಾಗುವ ಹಿನ್ನೆಲೆ ಸಂಗೀತವನ್ನು ಹೆಚ್ಚಾಗಿ ಬಳಸಿಕೊಳ್ಳಲಾಗಿದ್ದು ಎಲ್ಲಾ ಪಾತ್ರಗಳ ಪ್ರತಿ ಹೆಜ್ಜೆ-ಕ್ರಿಯೆಗಳಲ್ಲಿ ಸಂಗೀತ ಸಹಭಾಗಿಯಾಗಿದೆ. ಸಂಗೀತ ಹಾಗೂ ದೃಶ್ಯ ಸಂಯೋಜನೆಗೆ ಪೂರಕವಾಗಿ ಬೆಳಗುವ ಬೆಳಕು ಸಂಯೋಜನೆಯು (ಸಂಜಯ್) ನೋಡುಗರಲ್ಲಿ ವಿಶೇಷ ಅನುಭೂತಿಯನ್ನು ಹುಟ್ಟಿಸುತ್ತದೆ. ಹಿಂದಿನ ಸೈಕ್ಲೋರಮಾ ಪರದೆಯ ಮೇಲೆ ಮೂಡುವ ಬೆಳಕಿನ ಚಿತ್ತಾರ ನಾಟಕಕ್ಕೆ ಬಹು ದೊಡ್ಡ ಕ್ಯಾನ್ವಾಸನ್ನು ಸೃಷ್ಟಿಸಿದೆ.

ನಾಟಕದ ಆರಂಭದ ದೃಶ್ಯದಲ್ಲಿ ಸೂತ್ರದಾರ ಹಾಗೂ ಸೂತ್ರಧಾರಿಣಿ ಬಂದು ನಾಟಕವನ್ನು ಆರಂಭಿಸುವ ಕ್ರಮ ತುಂಬಾ ಸೊಗಸಾಗಿ ಮೂಡಿಬಂದಿದೆಯಾದರೂ ನಾಟಕಕ್ಕೆ ಅನಗತ್ಯವೆನಿಸುವಂತಿದೆ. ಸೂತ್ರದಾರರು ಇಲ್ಲವೇ ಭಾಗವತರನ್ನು ನಾಟಕದ ಕಥೆಯ ನಿರೂಪನೆಗಾಗಿ ಬಳಸಲಾಗುತ್ತದೆ. ಆದರೆ ನಾಟಕಕ್ಕೆ ಅಂತಹ ಯಾವುದೇ ನಿರೂಪನೆಯ ಅಗತ್ಯವಿಲ್ಲ. ನಾಟಕದ ದೃಶ್ಯಗಳೇ ಎಲ್ಲವನ್ನೂ ಪಾತ್ರಗಳ ಅಭಿನಯದ ಮೂಲಕ ಕಟ್ಟಿಕೊಡುತ್ತವೆ. ಸಿನಿಮಿಯಾಟ್ರಿಕ್ಸ್ ಭಾಗವಾಗಿಯೇ ಆರಂಭದ ಅನಗತ್ಯ ದೃಶ್ಯವನ್ನು ಅನನ್ಯವಾಗಿ ಸೃಷ್ಟಿಸಲಾಗಿದೆ. ಇಲ್ಲವೇ ನಾಟಕದ ಅವಧಿ ತುಂಬಾ ಕಡಿಮೆ ಇರುವುದರಿಂದ ಹೆಚ್ಚುವರಿಯಾಗಿ ಮೊದಲಿನ ದೃಶ್ಯವನ್ನು ಕಟ್ಟಿಕೊಡಲಾಗಿದೆ. ಭರತಮುನಿಯ ನಾಟ್ಯಶಾಸ್ತ್ರದ ಮೊದಲ ಮೂರು ಅಭಿನಯದ ಪ್ರಕಾರಗಳನ್ನು ನಾಟಕದಲ್ಲಿ ಹೆಚ್ಚುವರಿಯಾಗಿಯೇ ಅಳವಡಿಸಿ ಪ್ರೇಕ್ಷಕರನ್ನು ಪರವಶಗೊಳಿಸಲಾಗಿದೆ. ಶೈಲೀಕೃತ ಆಂಗಿಕಾಭಿನಯವನ್ನು ಅತಿ ಎನ್ನಿಸುವಷ್ಟು ಪಾತ್ರಗಳು ಬಳಸಿಕೊಂಡಿವೆ. ಪ್ರತಿಯೊಂದು ಸಂಭಾಷಣೆಗೆ ಸರಿಸಮನಾಗಿ ದೇಹಭಾಷೆ ಬಳಕೆಯಾಗಿದೆ. ವಾಚಿಕಾಭಿನಯ ಮತ್ತು ಆಂಗಿಕಾಭಿನಯದ ವಿಜ್ರಂಭನೆಯಲ್ಲಿ ಸಾತ್ವಿಕಾಭಿನಯ ತನ್ನ ಮಹತ್ವವನ್ನೇ ಕಳೆದುಕೊಂಡಂತಿದೆ. ಇದರಿಂದಾಗಿ ಗಂಭೀರವಾದ ದುಃಖದ ಸನ್ನಿವೇಶಗಳಲ್ಲೂ ಸಹ ಪ್ರೇಕ್ಷಕರಲ್ಲಿ ನಗೆ ಉಕ್ಕಿಸುವಂತಹ ವಿಪರ್ಯಾಸ ನಾಟಕದಲ್ಲಿ ಒಡಮೂಡಿದೆ. ಮನಕಲಕುವ ದೃಶ್ಯಗಳು ಅತಿಯಾದ ಆಂಗಿಕಾಭಿನಯದಿಂದಾಗಿ ಡೈಲ್ಯೂಟ್ ಆದಂತಾಗಿ ನೋಡುಗರಲ್ಲಿ ಉಂಟುಮಾಡಬಹುದಾದ ಪರಿಣಾಮ ವ್ಯತಿರಿಕ್ತವಾಗಿದೆ. ಏನೇ ಆಗಲಿ ನಟರ ಆಂಗಿಕಾಭಿನಯ ಪ್ರೇಕ್ಷಕರ ಮನರಂಜಿಸುವಲ್ಲಿ ಸಫಲವಾಗಿದೆ. ಭೀಮನಾಗಿ ಸುಹಾಸ್ ಸೂರ್ಯವಂಶಿ, ಘಟೋದ್ಘಜನಾಗಿ ಅಭಿಜಿತ್ ಭಗತ್ ಹಾಗೂ ಹಿಡಿಂಬೆಯಾಗಿ ಭಾಗ್ಯಶ್ರೀ ಜ್ಯೋಷಿರಾವ್ ಮೂವರೂ ಪೈಪೋಟಿಗೆ ಬಿದ್ದಂತೆ ಅಭಿನಯಿಸಿದ್ದಾರೆ. ಯಾವುದೇ ಪರಿಕರಗಳನ್ನು ಬಳಸದೇ ಕೇವಲ ಅಭಿನಯವನ್ನೇ ಬಳಸಿ ದೃಶ್ಯ ಪರಿಕಲ್ಪನೆಯನ್ನು ನೋಡುಗರ ಮನೋರಂಗದಲ್ಲಿ ಹುಟ್ಟುಸುವ ಪರಿ ಅದ್ಭುತವಾಗಿದೆ.

ನಾಟಕದಲ್ಲಿ ಗಮನಸೆಳೆಯುವುದು ಕೋರಿಯೋಗ್ರಾಫಿ. ಒಂದು ರೀತಿಯಲ್ಲಿ ನೃತ್ಯ ಸಂಗೀತ ನಾಟಕದಂತಿರುವ ಪ್ರಯೋಗದ ಯಶಸ್ಸಿನ ಬಹುಪಾಲು ಕೇಳುವುದೇ ನೃತ್ಯ ನಿರ್ದೇಶನ. ಇಲ್ಲಿ ನೃತ್ಯ ಎನ್ನುವುದು ಪ್ರತೇಕ ಘಟಕವಾಗಿರದೇ ಪಾತ್ರಗಳ ಪ್ರತಿಯೊಂದು ಚಲನೆಯಲ್ಲೂ ತನ್ನ ಇರುವನ್ನು ತೋರಿಸುತ್ತದೆ. ಭೀಮ ಘಟೋದ್ಘಜರ ಕದನ ಹಾಗೂ ಕುರುಕ್ಷೇತ್ರ ಯುದ್ದದಲ್ಲಿ ಘಟೋದ್ಘಜನ ಹೋರಾಟಗಳನ್ನು ಸಂಯೋಜನೆ ಮಾಡಿದ ರೀತಿ ರೋಮಾಂಚನಗೊಳಿಸುವಂತಿವೆ. ಯಾವುದೇ ಆಯುಧ ಪರಿಕರಗಳಿಲ್ಲದೇ ಮೈಮ್ ಮಾದರಿಯಲ್ಲಿ ಕದನಗಳು ವಿನ್ಯಾಸಗೊಂಡಿವೆ. ಅಭಿಜಾತ ಸಂಗೀತ-ನೃತ್ಯ ಕಲಾಪ್ರಕಾರಗಳನ್ನು ನಾಟಕಕ್ಕೆ ಬೇಕಾದಂತೆ ಬಳಸಿಕೊಂಡ ಬಗೆ ವಿಸ್ಮಯಕಾರಿಯಾಗಿವೆ. ಒಂದೂಕಾಲು ಗಂಟೆಗಳ ಕಾಲ ನೋಡುಗರನ್ನು ಒಂದು ಕ್ಷಣಕ್ಕೂ ಅತ್ತಿತ್ತ ಅಲ್ಲಾಡದಂತೆ ಕೂಡಿಸಿ ನೋಡಿಸಿಕೊಂಡು ಹೋಗುವ ನಾಟಕ ಹಲವಾರು ಯುವ ರಂಗ ನಿರ್ದೇಶಕರಿಗೆ ಮಾದರಿಯಂತಿದೆ. ರಂಗಶಿಸ್ತು, ರಂಗವಿನ್ಯಾಸ, ವೃತ್ತಿಪರತೆಗಳು ನಾಟಕದ ಎಲ್ಲಾ ವಿಭಾಗಗಳಲ್ಲೂ ಪ್ರತಿಬಿಂಬಿತವಾಗುತ್ತದೆ. ಕನ್ನಡದಲ್ಲಿ ಯಾಕೆ ಇಂತಹ ರಂಗಪ್ರಯೋಗಗಳು ಸಾಧ್ಯವಾಗುತ್ತಿಲ್ಲ ಎಂಬ ಅಸಮಾಧಾನವನ್ನು ಕನ್ನಡ ಪ್ರೇಕ್ಷಕರಲ್ಲಿ ಹುಟ್ಟಿಸುವ ರೀತಿಯಲ್ಲಿ ಹಿಂದಿ ನಾಟಕ ಮೂಡಿ ಬಂದಿದೆ.

ಎನ್ಎಸ್ಡಿ ಪದವೀಧರರಾದ ರಂಗನಿರ್ದೇಶಕರ ಮೇಲೆ ನಟರನ್ನು ನಿರ್ಲಕ್ಷಿಸಿ ರಂಗತಂತ್ರಗಳ ಮೂಲಕ ತಮ್ಮ ಬೌದ್ದಿಕ ಪ್ರತಿಭೆಯನ್ನು ಮೆರೆಯುತ್ತಾರೆ ಎನ್ನುವ ಆರೋಪವಿದೆ. ಕೆಲವರು ಆರೋಪವನ್ನು ಸಾಬೀತು ಪಡಿಸುವಂತೆ ನಾಟಕಗಳನ್ನು ಕಟ್ಟಿಕೊಟ್ಟಿದ್ದಾರೆ. ಆದರೆ ಆರೋಪವನ್ನು ಒಡೆದು ಹಾಕುವಂತೆ ಪ್ರಸ್ತುತ ರಾಷ್ಟ್ರೀಯ ರಂಗಶಾಲೆ (ಎನ್ಎಸ್ಡಿ) ನಿರ್ದೇಶಕರಾಗಿರುವ ವಾಮನ ಕೇಂದ್ರೆಯವರು ಮೋಹೆ ಪೀಯಾ ನಾಟಕವನ್ನು ಕಟ್ಟಿಕೊಟ್ಟಿದ್ದು ನಟರ ಅಭಿನಯ ಸಾಮರ್ಥ್ಯವನ್ನು ಹೆಚ್ಚಾಗಿಯೇ ಬಳಸಿಕೊಂಡು ಅದಕ್ಕೆ ಪೂರಕವಾಗಿ ರಂಗತಂತ್ರಗಳನ್ನು ಸಮರ್ಥವಾಗಿ ಉಪಯೋಗಿಸಿಕೊಂಡು ದೃಶ್ಯರೂಪಕವೊಂದನ್ನು ಸೃಷ್ಟಿಸಿದ್ದಾರೆ.

 
ನಿರ್ದೇಶಕ ವಾಮನ ಕೇಂದ್ರೆ
ಆದರೆ ಬೇಸರದ ಸಂಗತಿ ಏನೆಂದರೆ ನಾಟಕೋತ್ಸವದ ಆಯೋಜಕರು ಹೆಚ್ಚು ಜನ ರಂಗಾಸಕ್ತ ಪ್ರೇಕ್ಷಕರನ್ನು ರಂಗಮಂದಿರದತ್ತ ಸೆಳೆಯದಿದ್ದದ್ದು. ಪ್ರಚಾರದ ಕೊರತೆಯೋ ಇಲ್ಲವೇ ಆಯೋಜಕರ ನಿರ್ಲಕ್ಷವೋ ಗೊತ್ತಿಲ್ಲ, ಕನ್ನಡ ಪ್ರೇಕ್ಷಕರು ಉತ್ತಮ ನಾಟಕವೊಂದನ್ನು ನೋಡುವುದರಿಂದ ವಂಚಿತರಾದರು. ದೂರದಿಂದ ಬಂದ ರಂಗತಂಡದವರು ಕೇವಲ ನೂರಾರು ಜನರಿಗಾಗಿ ನಾಟಕ ಪ್ರದರ್ಶನ ಮಾಡಿದ್ದು   ಬೇಸರದ ಸಂಗತಿ. ಪ್ರೇಕ್ಷಕರಿಗೆ ಮಾತ್ರವಲ್ಲ, ರಂಗ ಕಲಾವಿದರಿಗೆ ಹಾಗೂ ರಂಗನಿರ್ದೇಶಕರಿಗೂ ಕೂಡಾ ಕಲಿಯಲು ಬೇಕಾದ ಉತ್ತಮ ಅಂಶಗಳನ್ನು ನಾಟಕ ಹೊಂದಿದ್ದು ಹೆಚ್ಚು ಜನ ರಂಗಕರ್ಮಿಗಳು ಬಂದು ಇಂತಹ ನಾಟಕವನ್ನು ನೋಡಿದ್ದರೆ ಕನ್ನಡ ನಾಟಕಗಳ ಕ್ವಾಲಿಟಿ ಸುಧಾರಿಸಲು ಅನುಕೂಲವಾಗುತ್ತಿತ್ತೇನೋ. ಮೋಹೆ ಪೀಯಾ ಎನ್ನುವ ದೃಶ್ಯಕಾವ್ಯ ರೂಪಕವನ್ನು ನೋಡಿದ ಕೆಲವರು ನಿಜಕ್ಕೂ ಪುಣ್ಯವಂತರುನೋಡದಿದ್ದವರು ಒಮ್ಮೆಯಾದರೂ ನಾಟಕವನ್ನೂ ನೋಡಲೇ ಬೇಕು. ನಾಟಕ ಅಂದರೆ ಹೇಗಿರಬೇಕು ಎಂಬುದನ್ನು ತಿಳಿಯಲೇಬೇಕು. ಕನ್ನಡದಲ್ಲಿ ಇಂತಹ ವೃತ್ತಿಪರ ಈಸ್ತೆಟಿಕ್ಸ್ ನಾಟಕಗಳು ಮೂಡಿಬರಬೇಕು, ಕನ್ನಡದಲ್ಲಿ ನಾಟಕ ನಿರ್ಮಿಸುವವರಿಗೆ ಪ್ರೇರಕವಾಗಬೇಕು. ಕಾವ್ಯದಲ್ಲಿ ಮರಾಠಿ ಮೂಲದ ದತ್ತಾತ್ರೇಯ ಬೇಂದ್ರೆ ಹೊಸ ಕಾವ್ಯ ಮಾದರಿಗಳನ್ನು ಕೊಟ್ಟಂತೆ, ನಾಟಕರಂಗದಲ್ಲಿ ಮರಾಠಿಯ ವಾಮನ ಕೇಂದ್ರೆ ಹೊಸ ರಂಗಪರಿಕಲ್ಪನೆಯನ್ನು ಕೊಡುತ್ತಿರುವುದು ಭಾರತೀಯ ಆಧುನಿಕ ರಂಗಪರಂಪರೆಯಲ್ಲಿ ಹೆಮ್ಮೆ ತರುವಂತಹುದಾಗಿದೆ. ಮಾತಿಗೆ 20 ದಿನಗಳ ಹಿಂದೆ ಇದೇ ಗುರುನಾನಕ ಭವನದಲ್ಲಿ ಪ್ರದರ್ಶನಗೊಂಡ ವಾಮನ ಕೇಂದ್ರೆ ನಿರ್ದೇಶನದ ಗಜಬ್ ತೆರಿ ಅದಾ ನಾಟಕ ಹಾಗೂ ಈಗ ಪ್ರಸ್ತುತಗೊಂಡ ಮೋಹೆ ಪೀಯಾ ನಾಟಕಗಳೇ ಸಾಕ್ಷಿಯಾಗಿವೆ.    

                      -ಶಶಿಕಾಂತ ಯಡಹಳ್ಳಿ     



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ