ಗುರುವಾರ, ಜನವರಿ 31, 2019

“ಗಾಂಧಿ ಪಾರ್ಕ”ಲ್ಲಿ ಬಂಧಿಯಾದ ಮಹಾತ್ಮನ ತತ್ವಾದರ್ಶಗಳು :






ಜನವರಿ 30 ಮಹಾತ್ಮಾ ಗಾಂಧಿಯವರನ್ನು ಕೊಂದ ದಿನ. ಈ ದಿನ ಅನೇಕರು ಅನೇಕ ರೀತಿಯಲ್ಲಿ ಗಾಂಧಿ ಸ್ಮರಣೆಯನ್ನು ಮಾಡುತ್ತಾರೆ. ಆದರೆ.. ವಿಜಯನಗರ ಬಿಂಬದವರು ಮಕ್ಕಳಿಂದ ಗಾಂಧಿ ಪಾರ್ಕ ನಾಟಕವನ್ನು ಪ್ರದರ್ಶಿಸುವ ಮೂಲಕ ಗಾಂಧೀಜಿಯವರ ತತ್ವ ಸಿದ್ಧಾಂತವನ್ನು ಹೇಗೆಲ್ಲಾ ಕೊಲೆ ಮಾಡಲಾಗಿದೆ ಎನ್ನುವುದನ್ನು ರಂಗಪ್ರಯೋಗದ ಮೂಲಕ ತೋರಿಸುವ ಸ್ತುತ್ಯಾರ್ಹ ಕೆಲಸವನ್ನು ಮಾಡಿದೆ. ಗಾಂಧೀಜಿಯವರು ಮನುಕುಲಕೆ ಕೊಟ್ಟ ಸತ್ಯ, ನ್ಯಾಯ ಹಾಗೂ ಅಹಿಂಸೆಯೆಂಬ ಮಾನವೀಯ ಮೌಲ್ಯಗಳು ಅದು ಹೇಗೆ ವಿಕೃತಗೊಂಡು ಅನ್ಯಾಯ ಹಿಂಸೆಗಳು ವಿಜ್ರಂಭಿಸುತ್ತಿವೆ ಎಂಬುದನ್ನು ವಿಡಂಬನಾತ್ಮಕವಾಗಿ ತೋರಿಸುವ ಒಂದು ಪ್ರಯತ್ನವೇ ಗಾಂಧಿ ಪಾರ್ಕ ನಾಟಕ.

ಡಾ.ಕಶ್ಯಪ್‌ರವರು ರಚಿಸಿ ನಿರ್ದೇಶಿಸಿದ ಈ ನಾಟಕವನ್ನು ವಿಜಯನಗರ ಬಿಂಬ ರಂಗಶಿಕ್ಷಣ ಕೇಂದ್ರದ ಮಕ್ಕಳು ಜನವರಿ 30ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಅಭಿನಯಿಸಿ ನೋಡುಗರನ್ನು ವಿಸ್ಮಯಗೊಳಿಸಿದರು. ಗಾಂಧೀಜಿಯವರ ಮೂರು ಕೋತಿಗಳ ಸಾಂಕೇತಿಕ ತತ್ವಾದರ್ಶಗಳ ಉಪಮೇಯವನ್ನೇ ನಾಟಕದ ಕೇಂದ್ರವಾಗಿಟ್ಟುಕೊಂಡು ವರ್ತಮಾನದ ವ್ಯಾಪಾರೀಕರಣದ ದುರಂತಗಳನ್ನು ಮಕ್ಕಳು ನಾಟಕವಾಗಿಸಿ ತೋರಿಸಿ ಬೆರಗನ್ನು ಸೃಷ್ಟಿಸಿದರು.


ಮಕ್ಕಳ ನಾಟಕ ಅಂದರೆ ಅಲ್ಲಿ ಪ್ಯಾಂಟಸಿ ಇರಬೇಕು, ಪ್ರಾಣಿ ಗಿಡಮರ ಹೂ ಹಕ್ಕಿಗಳು ಮನುಷ್ಯರಂತೆ ಮಾತಾಡಬೇಕು, ಮಕ್ಕಳ ಅಮೂರ್ತ ಕಲ್ಪನೆಗಳು ರಂಗದಂಗಳದಲ್ಲಿ ಸಾಕಾರಗೊಳ್ಳಬೇಕು ಎನ್ನುವುದಕ್ಕೆ ಹೇಳಿ ಮಾಡಿಸಿದ ನಾಟಕ ಇದು. ನಿರ್ದೇಶಕ ಕಶ್ಯಪ್‌ರವರು ರಂಗದ ಮೇಲೆ ಒಂದು ಪ್ಯಾಂಟಸಿ ಲೋಕವನ್ನೇ ಸೃಷ್ಟಿಸಿದ್ದು, ನಾಟಕ ಮಾಡುವ ಮಕ್ಕಳು ಹಾಗೂ ನೋಡುವ ಪೋಷಕರನ್ನು ಊಹಾ ಲೋಕಕ್ಕೆ ಕರೆದುಕೊಂಡು  ಹೋಗಿದ್ದಾರೆ. ಕೆಲವೊಮ್ಮೆ ದೊಡ್ಡವರಿಗೆ ಬಾಲಿಷ ಎನ್ನಿಸಬಹುದಾದ ಸಂಗತಿಗಳು ಮಕ್ಕಳ ದೃಷ್ಟಿಕೋನದಲ್ಲಿ ರಮ್ಯತೆಯನ್ನು ಪಡೆದುಕೊಳ್ಳುತ್ತವೆ. ಆ ರಮ್ಯತೆಯನ್ನು ಹೇಳುತ್ತಲೇ ಒಂದಿಷ್ಟು ತತ್ವಾದರ್ಶಗಳನ್ನು ಹೇಳುವಲ್ಲಿ ಈ ನಾಟಕ ಯಶಸ್ವಿಯಾಗಿದೆ.

ಆ ಗಾಂಧಿ ಪಾರ್ಕ ತುಂಬಾ ಮಕ್ಕಳ ಕಲರವ. ಅದಕ್ಕೊಬ್ಬ ಕಾವಲುಗಾರ. ಹಳ್ಳಿಯಿಂದ ಪಟ್ಟಣಕ್ಕೆ ಬಂದ ಅಣ್ಣನೊಬ್ಬ ತನ್ನ ತಂಗಿಯೊಂದಿಗೆ ರಾತ್ರಿ ಪಾರ್ಕಲ್ಲಿ ಬಂದು ಅಡಗಿಕೊಳ್ಳುತ್ತಾನೆ. ಪೊಲೀಸ್ ಅಧಿಕಾರಿಯೊಬ್ಬನ ಹೆಂಡತಿಯ ಚಪ್ಪಲಿಗಳನ್ನು ಕದ್ದ ಆತ ಅವುಗಳನ್ನು ಮಾರಿ ಹಸಿವೆಯನ್ನು ನೀಗಿಸಿಕೊಳ್ಳಲು ಬಯಸುತ್ತಾನೆ. ಅಧಿಕಾರಿ ಚಪ್ಪಲಿ ಹುಡುಕಲು ಪೊಲೀಸ್ ಪೇದೆಯನ್ನು ಪಾರ್ಕಲ್ಲಿ ಬಿಡುತ್ತಾನೆ. ಪಾರ್ಕಿನಲ್ಲಿ ಕಣ್ಣು, ಕಿವಿ, ಹಾಗೂ ಬಾಯಿಯನ್ನು ಮುಚ್ಚಿಕೊಂಡು ಕುಳಿತ ಮೂರು ಕೋತಿಗಳ ಕಲ್ಲಿನ ಪ್ರತಿಮೆಗಳು ಜೀವತಳೆಯುತ್ತವೆ. ಚಪ್ಪಲಿ ಕದಿಯೋದು ತಪ್ಪು ಅದನ್ನು ವಾಪಸ್ ಕೊಡು, ಒಳ್ಳೇತನ ಯಾವಾಗಲೂ ಕಾಪಾಡುತ್ತದೆ ಎಂದು ಹಳ್ಳಿ ಹುಡುಗನಿಗೆ ಹೇಳಿದಾಗ ಆತ ಪೊಲೀಸನಿಗೆ ಅವುಗಳನ್ನು ಒಪ್ಪಿಸುತ್ತಾನೆ. ಆದರೆ ಆ ಪೇದೆ ಹಾಗೂ ಕಾವಲುಗಾರ ಚಪ್ಪಲಿ ಕಳ್ಳತನದಲ್ಲಿ ಠಾಣೆಗೆ ಎಳೆದೊಯ್ಯಲು ಮುಂದಾಗುತ್ತಾರೆ. ಆಗ ಅಣ್ಣ ತಂಗಿಯರ ಆಗ್ರಹದಿಂದಾಗಿ ಸಾಕ್ಷಿ ಹೇಳಲು ಕಲ್ಲು ಕೋತಿಗಳು ಜೀವತಳೆಯುತ್ತವೆ. ಅದನ್ನು ನೋಡಿದ ಆ ಕಾವಲುಗಾರ ಹಾಗೂ ಪೇದೆ ಇಬ್ಬರೂ ಸೇರಿ ಕೋತಿಗಳನ್ನು ಸರಪಳಿಯಿಂದ ಬಂಧಿಸಿ ಬೀಗ ಹಾಕುತ್ತಾರೆ. ಕಲ್ಲು ಕೋತಿಗಳು ಜೀವಂತಗೊಂಡು ಜನರ ಮನರಂಜಿಸುವಂತೆ ಮಾಡುವುದನ್ನು ಪ್ರದರ್ಶಿಸಿ ಹಣ ಮಾಡಲು ಆ ಇಬ್ಬರೂ ಸಂಚು ರೂಪಿಸುತ್ತಾರೆ. ಕೋತಿಗಳು ಜೀವಂತವಾಗದೇ ಇದ್ದಾಗ ಜನರ ಆಕ್ರೋಶಕ್ಕೆ ಹೆದರಿ ಅವರು ಓಡಿ ಹೋಗುತ್ತಾರೆ. ಆದರೆ ಕೋತಿಗಳ ಸರಪಳಿ ಹಾಗೆಯೇ ಉಳಿಯುತ್ತದೆ. ದೊಡ್ಡವರಾದ ಮೇಲೆ ಈ ಕೋತಿಗಳನ್ನು ಸರಪಳಿಯ ಬಂಧನದಿಂದ ಬಿಡುಗಡೆ ಮಾಡಿರಿ ಎಂದು ಶಿಕ್ಷಕಿಯೊಬ್ಬಳು ಅಣ್ಣ ತಂಗಿಗಳಿಗೆ ಹೇಳುವ ಮೂಲಕ ನಾಟಕ ಮುಗಿಯುತ್ತದೆ.


ತನ್ನ ಕಾಯಕ ಮರೆತು ಸ್ವಾರ್ಥತನಕ್ಕೆ ಇಳಿದ ಚೌಕೀದಾರನು ಪೊಲೀಸ್ ವ್ಯವಸ್ಥೆಯೊಂದಿಗೆ ಸೇರಿ ಗಾಂಧೀ ತತ್ವಾದರ್ಶಗಳನ್ನು ಸಾರುವ ಮಂಗಗಳನ್ನು ತಮ್ಮಿಷ್ಟದಂತೆ ಆಡಿಸಿ ಜನರನ್ನು ಮರುಳುಗೊಳಿಸಿ ಲಾಭಗಳಿಸುವ ಸಂಚನ್ನು ರೂಪಿಸುವಂತಹ ಚಿತ್ರಣವೇ ಈ ನಾಟಕದ ತಿರುಳು. ಪ್ರಸ್ತುತ ನಮ್ಮ ದೇಶವನ್ನು ಆಳುವ ಚೌಕೀದಾರರೂ ಮಾಡುತ್ತಿರುವುದೂ ಸಹ ಇದನ್ನೇ ಎನ್ನುವುದರ ರೂಪಕವಾಗಿ ಈ ನಾಟಕ ಮೂಡಿಬಂದಂತಿದೆ. ಬೇಲಿಯೇ ಎದ್ದು  ಹೊಲ ಮೇಯುವ ಕಾಯಕವನ್ನು ನಮ್ಮ ದೇಶವನ್ನಾಳುವವರು ಮಾಡುತ್ತಲೇ ಇದ್ದಾರೆ. ಗಾಂಧೀಜಿಯ ತತ್ವಾದರ್ಶಗಳನ್ನು ಬರೀ ಮಾತುಗಳಲ್ಲಿ ಪ್ರದರ್ಶಿಸಿ ಜನರನ್ನು ಯಾಮಾರಿಸುತ್ತಾ ದೇಶ ಲೂಟಿ ಮಾಡುವ ಹುನ್ನಾರವನ್ನು ಮಾಡುತ್ತಿದ್ದಾರೆ. ಏನನ್ನೋ ತೋರಿಸುತ್ತೇನೆಂದು ಭರವಸೆ ಕೊಟ್ಟು ಏನನ್ನೂ ತೋರಿಸದೇ ಹೋದಾಗ, ಅಲ್ಲಿ ನೆರೆದ ಪ್ರೇಕ್ಷಕರು ಚೌಕೀದಾರರ ವಿರುದ್ಧ ತಿರುಗಿ ಬಿದ್ದಾಗ ಆ ಸಂಚುಕೋರರು ಲೂಟಿ ಮಾಡಿದ ಹಣದ ಸಮೇತ ಓಡಿಹೋಗುತ್ತಾರೆ. ಕಾಕತಾಳೀಯವೆಂಬಂತೆ ಇದೇ ರೀತಿಯ ಘಟನೆಗಳೇ ಈಗ ನಮ್ಮ ದೇಶದಲ್ಲಿ ನಡೆಯುತ್ತಿವೆ. ಜನರನ್ನು ಯಾಮಾರಿಸಲು ಗಾಂಧೀ ತತ್ವಾದರ್ಶಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡು ಜನರನ್ನು ಮೋಸಗೊಳಿಸುವ ಶಡ್ಯಂತ್ರವೇ ನಡೆಯುತ್ತಿದೆ. ಜನರು ಎಚ್ಚೆತ್ತುಗೊಂಡು ಆಳುವವರ ಕುತಂತ್ರಗಳನ್ನು ಅರ್ಥಮಾಡಿಕೊಂಡು ಜನದ್ರೋಹಿಗಳನ್ನು ಜನಾಂದೋಲನಗಳ ಮೂಲಕ ಓಡಿಸಬೇಕಾಗಿದೆ. ಈ ನಾಟಕವನ್ನು ಬಲು ಸೂಕ್ಷ್ಮವಾಗಿ ಅವಲೋಕಿಸಿದರೆ ದೇಶದಲ್ಲಿ ನಡೆಯುತ್ತಿರುವ ಆಳುವ ಚೌಕೀದಾರನ ಚಹರೆಗಳು ಗೋಚರವಾಗುವುದಂತೂ ಸುಳ್ಳಲ್ಲ.

ಜನರು ಒಗ್ಗಟ್ಟಾದರೆ ಈ ಲಾಭಕೋರ ಖದೀಮರನ್ನು ಓಡಿಸಬಹುದಾದರೂ ಗಾಂಧೀಜಿ ತತ್ವಗಳಿಗೆ ಹಾಕಿದ ಬಂಧನ ಬೀಗಗಳನ್ನು ತೆರವುಗೊಳಿಸುವವರು ಯಾರು? ಅದು ಈಗ ಸದ್ಯಕ್ಕೆ ಸಾಧ್ಯವಾಗದೇ ಇರುವುದರಿಂದ ಆ ಹೊಣೆಗಾರಿಕೆಯನ್ನೂ ಸಹ  ಮುಂದಿನ ಪ್ರಜೆಗಳಾದ ಇಂದಿನ ಮಕ್ಕಳ ಮೇಲೆಯೇ ಈ ನಾಟಕ ಹೊರೆಸುತ್ತದೆ. ದೊಡ್ಡವರಾದ ಮೇಲೆ ಗಾಂಧೀಜಿ ತತ್ವಗಳಿಗೆ ಹಾಕಿದ ಸರಪಳಿಗಳನ್ನು ತೆಗೆಯಬಹುದು ಎಂದು ಶಿಕ್ಷಕಿ ಮಕ್ಕಳಿಗೆ ಹೇಳುವ ಮೂಲಕ ನಾಟಕ ಕೊನೆಯಾಗುತ್ತದೆ. ಆಳುವವರ ಬಂಧನದಲ್ಲಿರುವ ಸತ್ಯ ನ್ಯಾಯ ಅಹಿಂಸೆಗಳನ್ನು ವಿಮೋಚನೆಗೊಳಿಸಬೇಕು ಎನ್ನುವ ಆಶಯವನ್ನು ಈ ನಾಟಕವಾಡುವ ಮಕ್ಕಳಿಗೆ ಹಾಗೂ ಅವರ ಮೂಲಕ ನಾಟಕ ನೋಡಲು ಬಂದ ಆ ಮಕ್ಕಳ ಪೋಷಕರಿಗೆ ಮನದಟ್ಟುಮಾಡುವ ಪ್ರಯತ್ನವನ್ನು ಈ ಪ್ಯಾಂಟಸಿ ನಾಟಕ ಮಾಡುತ್ತದೆ. ಮನರಂಜನೆಯ ಮೂಲಕ ಪ್ರಸ್ತುತ ಆಳುವ ವ್ಯವಸ್ಥೆಯನ್ನು ವಿಡಂಬನಾತ್ಮಕವಾಗಿ ತೋರಿಸುವಲ್ಲಿ ಈ ನಾಟಕ ಯಶಸ್ವಿಯಾಗಿದೆ.


ಒಳ್ಳೆಯದನ್ನು ಮಾಡಿದರೆ ಒಳಿತಾಗುತ್ತದೆ.. ಎಂಬ ಆದರ್ಶವನ್ನು ಹೇಳುವ ಒಂದೆಳೆ ಕಥೆಯ ಕ್ಯಾನ್ವಾಸಿಗೆ ಅನೇಕಾನೇಕ ಬಣ್ಣಗಳನ್ನು ತುಂಬಲಾಗಿದೆ. ಗಾಂಧಿ ಪಾರ್ಕಿನೊಳಗಿನ ರಾತ್ರಿ ಲೋಕವನ್ನು ಅನನ್ಯವಾಗಿ ಕಟ್ಟಿಕೊಡಲಾಗಿದೆ. ಸೈಕ್ ಬಳಸಿಕೊಂಡು ಹುಣ್ಣಿಮೆಯ ಬೆಳಕಿನ ಹೊನಲನ್ನು ಹರಿಸಲಾಗಿದೆ. ಮಾತಾಡುವ ಪ್ರಾಣಿ, ಕೀಟ, ಪುಷ್ಪ ಸರೀಸೃಪಗಳನ್ನು  ಸೃಷ್ಟಿಸಲಾಗಿದೆ. ಇದೆಲ್ಲವನ್ನೂ ನೋಡುವುದೇ ಒಂದು ಚೆಂದ. ಇದರ ಜೊತೆಗೆ ಪುಟ್ಟ ಮಕ್ಕಳ ಆಡಾಟಗಳನ್ನು ನೋಡುವುದೇ ಅಂದ. ಅಸಲಿ ಪಾರ್ಕನ್ನೇ ಹೋಲುವ ರಂಗಸಜ್ಜಿಕೆಯಿಂದಾಗಿ ದೃಶ್ಯವೈಭವಗಳಿಗೆ ಹೆಚ್ಚಿನ ಮೆರಗು ಬಂದು ಇನ್ನೂ ನಾಟಕ ಆಕರ್ಷನೀಯವೆನಿಸಿತು. ಅಭಿನಯದಲ್ಲಿ ಈ ಬಾಲನಟನಟಿಯರಿಗೆ ಇರುವ ಶಿಸ್ತು ಹಾಗೂ ಸಂಯಮ ಅನುಕರಣೀಯ. ಮಕ್ಕಳ ಅಭಿನಯಕ್ಕೆ ಪೂರಕವಾಗಿ ಬೆಳಕು ಹಾಗೂ ಹಿನ್ನೆಲೆ ಸಂಗೀತ ಕೊಟ್ಟ ಸಹಕಾರದಿಂದಾಗಿ ಇಡೀ ಗಾಂಧಿ ಪಾರ್ಕ ಮನಮೋಹಕವಾಗಿತ್ತು ಎನ್ನುವುದಂತೂ ಸುಳ್ಳಲ್ಲ.

ಹಿಂದುತ್ವವಾದಿಗಳು ಮಹಾತ್ಮಾ ಗಾಂಧೀಜಿಯನ್ನು ಕೊಂದ ಕರಾಳ ದಿನದಂದು ಗಾಂಧೀಜಿಯ ತತ್ವಾದರ್ಶಗಳಿಗೆ ಬೇಲಿ ಹಾಕಿ ಬೀಗ ಜಡಿದ ವ್ಯವಸ್ಥೆಯನ್ನು ರಂಗದಂಗಳದಲ್ಲಿ ಬೆತ್ತಲೆಗೊಳಿಸುವಂತಹ ಈ ಮಕ್ಕಳ ನಾಟಕವನ್ನು ಪ್ರದರ್ಶಿಸಿದ್ದು, ಆ ಮಹಾನ್ ಚೇತನಕ್ಕೆ ಸಲ್ಲಿಸುವ ನಿಜವಾದ ರಂಗಶ್ರದ್ದಾಂಜಲಿಯಾಗಿದೆ. ಇದಕ್ಕಾಗಿ ಶ್ರಮಿಸಿದ ವಿಜಯನಗರ ಬಿಂಬ ನಿಜಕ್ಕೂ ಅಭಿನಂದನಾರ್ಹವಾಗಿದೆ.

-ಶಶಿಕಾಂತ ಯಡಹಳ್ಳಿ  





 





ಬುಧವಾರ, ಜನವರಿ 30, 2019

ಕನ್ನಡ ಭಾಷಾ ಅಸ್ಮಿತೆಯ ಪ್ರತೀಕ “ಶುದ್ಧಗೆ”:



ಕಳೆದ 23 ವರ್ಷಗಳಿಂದ ವಿಜಯನಗರ ಬಿಂಬ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ತರಬೇತುಗೊಳಿಸಿ, ರಂಗಪ್ರದರ್ಶನಗಳ ಮೂಲಕ ಮಕ್ಕಳಲ್ಲಿ ಆತ್ಮಸ್ತೈರ್ಯವನ್ನು ಮೂಡಿಸುತ್ತಿರುವುದು ಸ್ತುತ್ಯಾರ್ಹವಾಗಿದೆ. ಜಾಗತೀಕರಣದಿಂದ ನಾಶವಾಗುತ್ತಿರುವ ನಮ್ಮ ಭಾಷೆ-ಕಲೆ-ಸಂಸ್ಕೃತಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ರಂಗಭೀಷ್ಮ .ಎಸ್.ಮೂರ್ತಿಯವರ ಮಹತ್ವಾಂಕಾಂಕ್ಷೆಯ ಬಿಂಬ ಉತ್ತಮ ಸಾಂಸ್ಕೃತಿಕ ಕೆಲಸವನ್ನು  ಮಾಡುತ್ತಿದೆನಾಳಿನ ನಾಗರೀಕರಾದ ಮಕ್ಕಳೇ ನಮ್ಮ ನಾಡಿನ ಆಶಾಕಿರಣ, ಮಕ್ಕಳಿಗೆ ಕಲೆ -ಸಂಸ್ಕೃತಿ ಕುರಿತು ತರಬೇತಿ, ಮಾರ್ಗದರ್ಶನ ಕೊಡುತ್ತಿರುವ ಬಿಂಬ ಕೆಲಸ ಮಾದರಿಯಾಗಿದೆ. ಶುದ್ಧಗೆಯಂತಹ ನಾಟಕಗಳೇ ಉದಾಹರಣೆಯಾಗಿವೆ

ಕನ್ನಡದ ಅಕ್ಷರ, ಒತ್ತಕ್ಷರಗಳೇ ಪಾತ್ರಗಳಾಗಿ ರಂಗದಂಗಳದಲ್ಲಿ ಮೈದೆಳೆದು, ಪುಟ್ಟ ಮಕ್ಕಳಲ್ಲಿ ಪರಕಾಯ ಪ್ರಮೇಶ ಮಾಡಿ, ತಮ್ಮ ಈಗಿನ ದುರಾವಸ್ಥೆಗೆ ಕಾರಣವನ್ನು ಹೇಳುತ್ತವೆಇಂತಹ ಶುದ್ಧಗೆ ಎನ್ನುವ ಮಕ್ಕಳ ನಾಟಕವನ್ನು ಡಾ. ಎಸ್.ವಿ.ಕಶ್ಯಪ್ರವರು ರಚಿಸಿದ್ದು, ಪ್ರತಿಭಾವಂತ ನಿರ್ದೇಶಕಿ ಎಸ್.ವಿ. ಸುಷ್ಮಾ ವಿಜಯನಗರದ ಬಿಂಬದ ಮಕ್ಕಳಿಗೆ ನಿರ್ದೇಶಿಸಿದ್ದಾರೆವಿಜಯನಗರ ಬಿಂಬ ರಂಗಶಿಕ್ಷಣ ಕೇಂದ್ರದ ಮಕ್ಕಳ ವಿಭಾಗದ 2018ನೇ ಸಾಲಿನ ಮಕ್ಕಳ ರಂಗಶಾಲೆಯ ಸಮಾರೋಪ ಸಮಾರಂಭವನ್ನು 2019 ಜನವರಿ 30 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿತ್ತು. ರಂಗಶಾಲೆಯ ಮಕ್ಕಳು “ಶುದ್ದಗೆ ನಾಟಕವನ್ನು ಅತ್ಯಂತ ಶಿಸ್ತು ಹಾಗೂ ಸಂಯಮದಿಂದ ಅಭಿನಯಿಸಿ ಪ್ರೇಕ್ಷಕರ ಮನಗೆದ್ದರು. 

ಕನ್ನಡ ಭಾಷಾ ಚರಿತ್ರೆಯ ಸೂಕ್ಷ್ಮ ಎಳೆಗಳನ್ನು ಚರ್ಚಿಸುವುದು ಪಂಡಿತರ ಕೆಲಸವೆಂದೇ ಎಲ್ಲರ ಅಭಿಪ್ರಾಯ. ಆದರೆ ಅಂತಹ ಕ್ಲಿಷ್ಟಕರವಾದ ವಿಷಯವನ್ನು ಪುಟ್ಟ ಮಕ್ಕಳ ಮೂಲಕ ಎಲ್ಲರಿಗೂ ಸುಲಭವಾಗಿ ಅರ್ಥವಾಗುವಂತೆ ನಾಟಕದಲ್ಲಿ ಹೇಳುವುದು ಸವಾಲಿನ ಕೆಲಸ. ಕಬ್ಬಿಣದ ಕಡಲೆಯಂತಹ ವಿಷಯವನ್ನು ಸುಲಿದ ಬಾಳೆಹಣ್ಣಿನಂದದಲಿ ರೂಪಕವಾಗಿ ಮಾರ್ಪಡಿಸಿದ ಡಾ. ಕಶ್ಯಪ್ ಹಾಗೂ ಎರಡೂವರೆ ಸಾವಿರ ವರ್ಷಗಳ ಕನ್ನಡ ಭಾಷಾ ಚರಿತ್ರೆಯನ್ನು ಸಂಕ್ಷಿಪ್ತವಾಗಿ ಒಂದೂಕಾಲು ಗಂಟೆಗಳ ನಾಟಕದಲ್ಲಿ ಎಲ್ಲಿಯೂ ಬೋರಾಗದಂತೆ ನಿರ್ದೇಶಿಸಿದ ಸುಷ್ಮಾರವರು ಅಭಿನಂದನಾರ್ಹರು.

 
 ಎಲ್ಲಾ ಭಾಷೆಗಳ ಮೂಲ ಸಂಸ್ಕೃತ ಎಂದು ಪುರೋಹಿತಶಾಹಿಗಳು ಹುಟ್ಟಿಸಿದ ಭ್ರಮೆಯನ್ನು ಒಡೆದು ಹಾಕಿ, ನಮ್ಮ ಭಾಷೆಯ ಮೂಲ ದ್ವಾವಿಢ ಎನ್ನುವ ಐತಿಹಾಸಿಕ ಸತ್ಯವನ್ನು ನಾಟಕ ಬಹಿರಂಗ ಪಡಿಸುತ್ತದೆ. ಆಳುವ ವರ್ಗಗಳು ಸಾಮ್ರಾಜ್ಯಶಾಹಿ ಶಕ್ತಿಗಳಿಗೆ ಮಣಿದು ಇಂಗ್ಲೀಷನ್ನು ಈವತ್ತಿಗೂ ಅನಧೀಕೃತವಾಗಿ ಆಡಳಿತ ಭಾಷೆಯಾಗಿ ಬಳಸುತ್ತಿರುವುದನ್ನು ನಾಟಕದಲ್ಲಿ ಲೇವಡಿ ಮಾಡಲಾಗಿದೆ. ದೇಶಾದ್ಯಂತ ಇಂಗ್ಲೀಷನ್ನು  ಖಾಯಂಗೊಳಿಸಿ ತಮ್ಮ ವ್ಯಾಪಾರೀಕರಣದ ಲೂಟಿಗೆ ಅನುಕೂಲಕರ ವಾತಾವರಣ ಸೃಷ್ಟಿಸಲು ಬಹುರಾಷ್ಟ್ರೀಯ ಶಕ್ತಿಗಳು ರೂಪಿಸಿದ  ಸಂಚನ್ನು  ಪರೋಕ್ಷವಾಗಿ ಬಯಲಿಗೆಳೆದು ತೋರಿಸಲಾಗಿದೆ. ಭೂತ ಮತ್ತು ವರ್ತಮಾನಗಳನ್ನೇ ಪಾತ್ರವಾಗಿಸಿ, ವರ್ತಮಾನದಲ್ಲಿ  ಬದಲಾದ  ಆಳುವವರ ಭಾಷಾ ನೀತಿಯನ್ನು ಲೇವಡಿ ಮಾಡುವಲ್ಲಿ ಶುದ್ದಗೆ ಸಫಲವಾಗಿದೆ. 

ಒಟ್ಟಿನ ಮೇಲೆ ಪರಭಾಷೆಗಳ ಅತಿಕ್ರಮಣ, ಆಂಗ್ಲ ಭಾಷೆಯ ಆಕ್ರಮಣ, ಆಳುವ ದಲ್ಲಾಳಿ ವರ್ಗಗಳ ಪೊಳ್ಳುತನ ಹಾಗೂ ಕನ್ನಡಿಗರ ಉದಾರಿತನಗಳೆಲ್ಲವನ್ನೂ ಸಾಕಷ್ಟು ವಿಡಂಬನೆ ಮಾಡುವ ಶುದ್ಧಗೆ ಪ್ರೇಕ್ಷಕರ ಆತ್ಮಸಾಕ್ಷಿಯನ್ನು ಕೆಣಕುತ್ತದೆ. ಇಂಗ್ಲೀಷ್ ವ್ಯಾಮೋಹಕ್ಕೆ ಬಿದ್ದು ಮಾತೃಭಾಷೆಯನ್ನು ಉಪೇಕ್ಷಿಸುತ್ತಿರುವ ಪೋಷಕರಿಗೆ ವಿಚಾರಮಾಡಲು ಪ್ರೇರೇಪಿಸುವಂತಿದೆ. ರಂಜನೆಯ ಜೊತೆಗೆ ವೈಚಾರಿಕತನವನ್ನೂ ಮೈಗೂಡಿಸಿಕೊಂಡಿದ್ದರಿಂದಲೇ ನಾಟಕ ವಿಶಿಷ್ಟವಾಗಿದೆಅಚ್ಚರಿ ಎಂದರೆ ಈ ನಾಟಕದಲ್ಲಿ ಭಾಗವಹಿಸಿದ ಮಕ್ಕಳಲ್ಲಿ ಬಹುತೇಕರು ಆಂಗ್ಲ ಮಾಧ್ಯಮದಲ್ಲಿ ಕಲಿಯುವವರು ಹಾಗೂ ಅವರ ಪೋಷಕರುಗಳೇ ಇಲ್ಲಿ ಪ್ರೇಕ್ಷಕರು. ಇಂತಹ ಮಕ್ಕಳ ಮತ್ತು ಪೋಷಕರ ಮನಸ್ಸಲ್ಲಿ ಒಂದು ಸಣ್ಣ ತಪ್ಪತಸ್ತ ಮನೋಭಾವವನ್ನು ಹುಟ್ಟಿಸಲು ಸಾಧ್ಯವಾದರೆ ಈ ನಾಟಕ ಸಾರ್ಥಕವಾದಂತೆ. ಕನ್ನಡ ಭಾಷಾ ಸ್ವಾಭಿಮಾನವನ್ನು ನೋಡುಗರಲ್ಲಿ ಅರಳಿಸಿದರೆ  ಈ ನಾಟಕದ ಉದ್ದೇಶ ಈಡೇರಿದಂತೆ.

 ಶುದ್ಧಗೆ ಯಲ್ಲಿ ಕನ್ನಡದ ಮೇಲೆ ಬೇರೆ ದ್ರಾವಿಢ ಭಾಷೆಗಳ ಅತಿಕ್ರಮಣವನ್ನು ಹಾಗೂ ಅಂತರಾಷ್ಟ್ರೀಯ ಆಂಗ್ಲ ಭಾಷೆಯ ದುರಾಕ್ರಮಣವನ್ನು ಅನಾವರಣಗೊಳಿಸಿದ್ದು ಸರಿಯಾಗಿದೆ. ಆದರೆ ಸಹೋದರ ಭಾಷೆಗಳಿಗಿಂತ ಅಪಾಯಕಾರಿಯಾಗಿರುವ ಹಿಂದಿ ಭಾಷೆಯ ಆಕ್ರಮಣವನ್ನು ಅದ್ಯಾಕೋ ಮರೆಯಲಾಗಿದೆ. ತ್ರಿಭಾಷಾ ಸೂತ್ರದಲ್ಲಿ ಕನ್ನಡಿಗರನ್ನು ಮೊದಲಿನಿಂದಲೂ ಬಂಧಿಸಲಾಗಿದೆ. ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಹಿಂದಿಯನ್ನು ರಾಷ್ಟ್ರಭಾಷೆ ಎಂದು ಆರೋಪಿಸಿ ಕನ್ನಡಿಗರ ಮೇಲೆ ಹೇರಲಾಗಿದೆ. ಇತ್ತೀಚೆಗಂತೂ ಐಟಿ-ಬಿಟಿಗಳ ಹಾವಳಿಯಿಂದಾಗಿ ಉತ್ತರಭಾರತದಿಂದ ಯುವಕರು ಕೆಲಸಕ್ಕಾಗಿ ಬೆಂಗಳೂರಿಗೆ ಗುಳೆ ಬರುತ್ತಿದ್ದಾರೆ. ಅವರು ಬಂದು ಕನ್ನಡ ಕಲಿಯುವ ಬದಲು ಕನ್ನಡಿಗರ ಮೇಲೆಯೇ ಹಿಂದಿಯನ್ನೂ ಹೇರುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಉರ್ದು, ತೆಲಗು, ಮಲಯಾಳಿ ಹಾಗೂ ತಮಿಳಿಗಿಂತ ಅತೀ ಹೆಚ್ಚು ಅಪಾಯಕಾರಿಯಾದ ಹಿಂದಿ ಹಾಗೂ ಇಂಗ್ಲೀಷ್ ಭಾಷಾ ಹೇರಿಕೆಯನ್ನು ವಿರೋಧಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಹಿಂದಿ ಹೇರಿಕೆಯನ್ನು ವಿರೋಧಿಸುವಲ್ಲಿ ವಿಫಲವಾಗಿರುವ ನಾಟಕವು ಅಪೂರ್ಣವೆನ್ನಿಸುತ್ತದೆ. ನಿಟ್ಟಿನಲ್ಲಿ ನಿರ್ದೇಶಕರು ಆಲೋಚಿಸಿ ಮುಂದಿನ ಪ್ರಯೋಗದಲ್ಲಿ ಸೂಕ್ತ ಬದಲಾವಣೆ ಮಾಡುವ ಮೂಲಕ ಪರಿಪೂರ್ಣ ನಾಟಕ ಕೊಡಬಹುದಾಗಿದೆ



ಪುಟ್ಟ ಮಕ್ಕಳ ದೇಹಭಾಷೆ, ಮುಗ್ಧ ಅಭಿನಯ, ಮಿಂಚಿನ ಚಲನೆ, ನಿಂತಲ್ಲಿ ನಿಲ್ಲದ ನಡೆಗಳು ನೋಡುಗರಲ್ಲಿ ಬೆರಗು ಹುಟ್ಟಿಸುವಂತಿವೆ. ಪುಟ್ಟ ಮಕ್ಕಳ ಕರಾರುವಕ್ಕಾದ ಸಂಭಾಷಣೆಗಳು ದೊಡ್ಡವರನ್ನು ನಾಚಿಸುವಂತಿವೆ. ಮಕ್ಕಳ ನಾಟಕಕ್ಕೆ ಬೆಳಕು ಸಂಯೋಜಿಸುವುದು ಸವಾಲಿನ ಕೆಲಸ. ವೇದಿಕೆಯಾದ್ಯಂತ ಪಾತ್ರಗಳು ಕೆಲವೊಮ್ಮೆ ಅನಿರೀಕ್ಷಿತವಾಗಿ ಓಡಾಡುವ ವೇಗಕ್ಕೆ ತಕ್ಕಂತೆ ಕ್ಷಣಮಾತ್ರದಲ್ಲಿ ಬೆಳಗಿನ ಸ್ಥಳ ಬದಲಾವಣೆ ಮಾಡಿದ ಮಹದೇವಸ್ವಾಮಿ  ಬೆಳಕಿನ ನಿಯಂತ್ರಣ ಕೌಶಲ್ಯ ಮಾಂತ್ರಿಕತೆ ಸೃಷ್ಟಿಸಿದೆ. ಎಲ್ಲಕ್ಕಿಂತ ಹೆಚ್ಚು ಗಮನ ಸೆಳೆದು ರಂಗವೇದಿಕೆ ಮೇಲೆ ರಂಗನ್ನು ಹರಿಸಿದ್ದು ಶೋಭಾ ವೆಂಕಟೇಶ್ರವರ ಬಣ್ಣ ಬಣ್ಣದ ವಸ್ತ್ರವಿನ್ಯಾಸ ಮತ್ತು ವಿಶ್ವನಾಥ ಮಂಡಿಯವರ ರಂಗಸಜ್ಜಿಕೆ ನಾಟಕಕ್ಕೆ ಹೆಚ್ಚು ಕಳೆಕಟ್ಟಿತು. ಒಟ್ಟಾರೆಯಾಗಿ ಶುದ್ಧಗೆಯು ಮನರಂಜನೆಯ ಜೊತೆಗೆ ನಿರಭಿಮಾನಿ ಕನ್ನಡಿಗರ ದೌರ್ಬಲ್ಯವನ್ನು ಹೇಳುತ್ತಲೇ ಕನ್ನಡ ಭಾಷೆಯ ದುರಂತವನ್ನು ರಂಗದ ಮೇಲೆ ಅನಾವರಣಗೊಳಿಸುವಲ್ಲಿ ಸಫಲವಾಯಿತು

ಕನ್ನಡ ಸಂಘಟನೆಗಳು ನಾಟಕವನ್ನು ನಾಡಿನಾದ್ಯಂತ ಆಯೋಜಿಸಿದರೆ ಅದೇ ಕನ್ನಡಿಗರ ಜಾಗೃತಿಗೆ ಕಾರಣವಾಗಬಹುದಾಗಿದೆ. ನಿಟ್ಟಿನಲ್ಲಿ ಕನ್ನಡ ಪ್ರಾಧಿಕಾರ, ಅಕಾಡೆಮಿ, ಪರಿಷತ್ತು ಮತ್ತು  ಸಂಘಟನೆಗಳು ಆಲೋಚಿಸುವುದುತ್ತಮ. ಬರೀ ಭಾಷಣ, ಧರಣಿ, ಹೋರಾಟಗಳಿಗಿಂತಲೂ ಕನ್ನಡಿಗರ ಸ್ವಾಭಿಮಾನ ಕೆಣಕುವಂತಹ ಇಂತಹ ನಾಟಕಗಳು ಹೆಚ್ಚು ಪರಿಣಾಮಕಾರಿಯಾಗಬಹುದಾಗಿದೆ.

-ಶಶಿಕಾಂತ ಯಡಹಳ್ಳಿ