ಬುಧವಾರ, ಜನವರಿ 23, 2019

"ಆರ್.ನಾಗೇಶ್ ನೆನಪಿನ ನಾಟಕೋತ್ಸವ ಮುನ್ನಡೆಯಲಿ"



ಸಿದ್ದಗಂಗೆಯ ಶ್ರೀ ಶಿವಕುಮಾರ ಸ್ವಾಮೀಜಿಗಳು ಹೋದರು ಎಂದ ಕೂಡಲೇ ಆತಂಕ ಶುರುವಾಗಿದ್ದು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದ ರಂಗತಂಡಗಳಿಗೆ. ಸರಕಾರವು ಮೂರು ದಿನ ಶೋಕಾಚರಣೆಯನ್ನು ಘೋಷಿಸಿ ಜನವರಿ 22 ರಿಂದ ಮುಂದಿನ ಮೂರು ದಿನಗಳ ಕಾಲ ಯಾವುದೇ ಅಧೀಕೃತ ಮನರಂಜನಾ ಕಾರ್ಯಕ್ರಮಗಳನ್ನು ಮಾಡಬಾರದು ಎಂದು ಅಧಿಸೂಚನೆಯನ್ನು ಅಧೀಕೃತವಾಗಿ ಹೊರಡಿಸಿತು. 

ಈ ಮೂರು ದಿನಗಳ ಕಾಲ ಈಗಾಗಲೇ ಹಮ್ಮಿಕೊಂಡಿರುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಬೇಕೋ ಬೇಡವೊ ಎನ್ನುವ ಸಂದಿಗ್ದತೆಯಲ್ಲಿ ರಂಗ ತಂಡಗಳು ಯೋಚನಾಮಗ್ನವಾದವು. 

ಅದೇ ರೀತಿ ಸೂತ್ರದಾರ, ರಂಗ ಸಂಪದ ಹಾಗೂ ಹವ್ಯಾಸಿ ರಂಗಗೆಳೆಯರು ಸೇರಿ ಜನವರಿ 22 ರಿಂದ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಆರ್.ನಾಗೇಶ್ ನೆನಪಿನ ನಾಟಕೋತ್ಸವವನ್ನು ಸ್ವಾಮೀಜಿಗಳಿಗೆ ಗೌರವ ಸಲ್ಲಿಸುವ ಸಲುವಾಗಿ ನಿಲ್ಲಿಸುವುದು ಸೂಕ್ತವೆಂದು ಕೆಲವರು ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರೆ... ಇನ್ನು ಕೆಲವರು ಸ್ವಾಮೀಜಿಗಳಿಗೆ ಅಂತಿಮ ನಮನ ಸಲ್ಲಿಸಿ, ಎರಡು ನಿಮಿಷ ಮೌನ ಶೋಕಾಚರಣೆಯನ್ನು ಮಾಡಿ ನಾಟಕ ಪ್ರದರ್ಶನ ಮುಂದುವರಿಸಬಹುದು ಎಂದರು. ಮತ್ತೆ ಕೆಲವು ಹಿರಿಯರು ಯಾಕೆ ರಿಸ್ಕ ತಗೋತೀರಾ... ವಿವಾದಗಳನ್ನ ಮೈಮೇಲೆ ಹಾಕೋತೀರಾ... ಎಲ್ಲರ ಅಭಿಪ್ರಾಯ ಪಡೆದು ಸೂಕ್ತ ನಿರ್ಧಾರ ತೆಗೆದುಕೊಳ್ಳಿ ಎಂದು ಆದೇಶಿಸಿದರು. 

ನಾಟಕೋತ್ಸವವನ್ನು ನಿಲ್ಲಿಸಿಬಿಡಿ ಎಂದು ಹೇಳುವುದು ಹಾಗೂ ಅದಕ್ಕಾಗಿ ಒತ್ತಾಯಿಸುವುದು ಬಹಳ ಸುಲಭ. ಆದರೆ ಆಯೋಜಕರು ಮೂರು ತಿಂಗಳ ಮೊದಲು ರಂಗಮಂದಿರವನ್ನು ಹರಸಾಹಸ ಪಟ್ಟು ಬುಕ್ ಮಾಡಿರುತ್ತಾರೆ. ಎರಡು ತಿಂಗಳಿಂದ ಈ ನಾಟಕೋತ್ಸವದ ತಯಾರಿ ನಡೆಸಿರುತ್ತಾರೆ, ನಾಟಕೋತ್ಸವದಲ್ಲಿ ನಾಟಕ ಪ್ರದರ್ಶನ ಮಾಡುವ ತಂಡಗಳು ಒಂದು ತಿಂಗಳಿಂದ ಹಲವಾರು ಒತ್ತಡಗಳ ನಡುವೆ ತಾಲೀಮು ಮಾಡಿರುತ್ತಾರೆ. ಹತ್ತು ದಿನಗಳಿಂದ ಪ್ರಚಾರ ಮಾಡುವುದನ್ನೇ ಕಾಯಕ ಮಾಡಿಕೊಂಡಿರುತ್ತಾರೆ. ಈಗ ಇದ್ದಕ್ಕಿದ್ದ ಹಾಗೆ ನಾಟಕೊತ್ಸವವನ್ನು ರದ್ದುಪಡಿಸಿ ಎಂದರೆ ಎಷ್ಟು ಜನರ ಶ್ರಮ, ಕಲಾವಿದರ ಪರಿಶ್ರಮ ಹಾಗೂ ಸಮಯ ವ್ಯರ್ಥವಾಗುತ್ತದೆ.

'ಮೂರು ದಿನದಲ್ಲಿ ಏನಾಗುತ್ತದೆ.. ಶೋಕಾಚರಣೆ ಮುಗಿಸಿ ನಾಟಕ ಮಾಡಬಹುದಲ್ವೇ' ಎಂದು ಕೇಳುವವರೂ ಇದ್ದಾರೆ. ಆದರೆ ಮೂರು ದಿನಗಳ ನಂತರ ನಾಟಕದ ಆಡಿಸಬೇಕೆಂದರೆ ಎಲ್ಲಿ ಆಡಿಸುವುದು. ಮತ್ತೆ ರವೀಂದ್ರ ಕಲಾಕ್ಷೇತ್ರ ದೊರೆಯ ಬೇಕೆ ಆದರೆ ಕನಿಷ್ಟ ಎರಡು ತಿಂಗಳು ಕಾಯಬೇಕು. ಎರಡು ತಿಂಗಳು ಹವ್ಯಾಸಿ ರಂಗಭೂಮಿಯ ನಟರನ್ನು ಹಿಡಿದಿಡಲು ಸಾಧ್ಯವೇ? 

ಆಧುನಿಕ ಕನ್ನಡ ರಂಗಭೂಮಿಯ ಪ್ರಮುಖ ನಿರ್ದೇಶಕರಾಗಿದ್ದ ಆರ್. ನಾಗೇಶರವರು ತೀರಿಕೊಂಡು ಎಂಟು ವರ್ಷಗಳೇ ಉರುಳಿವೆ. ಇಷ್ಟು ವರ್ಷಗಳ ನಂತರ ಅವರನ್ನು ನೆನಪಿನಲ್ಲಿ ನಾಟಕೋತ್ಸವವೊಂದು ಅಪರೂಪಕ್ಕೆ ಆಯೋಜನೆಗೊಂಡಿದೆ. ಈಗ ಅದೂ ರದ್ದಾದರೆ ಮತ್ತೆ ಆಗುತ್ತೊ ಇಲ್ಲವೋ ಹೇಳಲಾಗದು. ಹಲವಾರು ರಂಗಕರ್ಮಿಗಳ ಸಮಯ ಹಾಗೂ ಶ್ರಮ ವ್ಯರ್ಥವಾಗಬಾರದು. ಕಾಯಕವನ್ನೇ ಕೈಲಾಸ ಎಂದು ನಂಬಿದ ಶಿವಕುಮಾರ ಸ್ವಾಮೀಜಿಗಳೂ ರಂಗ ಕಾಯಕ ನಿಲ್ಲುವುದನ್ನು ಇಚ್ಚಿಸಲಾರರು. 

ಇಷ್ಟಕ್ಕೂ ಸರಕಾರಿ ಅಧಿಸೂಚನೆಯಲ್ಲಿ "ದಿವಂಗತರ ಗೌರವಾರ್ಥ ಅಧೀಕೃತ ಮನರಂಜನಾ ಕಾರ್ಯಕ್ರಮಗಳು ಇರುವುದಿಲ್ಲ"ವೆಂದು ನಮೂದಾಗಿದೆ. ಇಲ್ಲಿ ಅಧೀಕೃತ ಅಂದರೆ ಸರಕಾರಿ ಕಾರ್ಯಕ್ರಮಗಳು ಎಂದರ್ಥ. ಆದರೆ ಆರ್.ನಾಗೇಶರವರ ನಾಟಕೋತ್ಸವವನ್ನು ಆಯೋಜಿಸಿದ್ದು ಖಾಸಗಿ ರಂಗತಂಡಗಳು. ತಂಡಗಳ ವಿನಂತಿಯ ಮೇರೆಗೆ ನಾಟಕ ಅಕಾಡೆಮಿ ಒಂಚೂರು ಧನಸಹಾಯ ಮಾಡಿದ್ದು ನಿಜ. ಆದರೆ ಸಹಾಯ ಮಾಡಿದ್ದನ್ನೇ ನೆಪವಾಗಿಟ್ಟುಕೊಂಡು ನಾಟಕೋತ್ಸವ ರದ್ದು ಮಾಡಿ ಎನ್ನುವುದು ಸರಿಯಾದ ಕ್ರಮವಲ್ಲ. ನಾಟಕ ಅಕಾಡೆಮಿಯ ಸಹಕಾರವಿಲ್ಲದೆಯೂ ನಾಟಕೋತ್ಸವ ಮಾಡುವಷ್ಟು ಸಾಮರ್ಥ್ಯ ರಂಗತಂಡಗಳಿಗಿದೆ. 

ನಾಗೇಶರವರ ವೈಚಾರಿಕ ನಾಟಕಗಳು ಮನರಂಜನೆಗಾಗಿ ಇರುವಂತಹುದಲ್ಲ. ಹಾಗೂ ಮನರಂಜನೆಗಾಗಿ ಈ ನಾಟಕೋತ್ಸವವನ್ನು ಆಯೋಜಿಸಿಲ್ಲ. ಆದ್ದರಿಂದ ಸರಕಾರಿ ಅಧಿಸೂಚನೆ ಈ ನಾಟಕೋತ್ಸವಕ್ಕೆ ಅನ್ವಯಿಸುವುದಿಲ್ಲ. ಹಾಗೆ ನೋಡಿದರೆ ಸಿನೆಮಾಗಳು ಪಕ್ಕಾ ಮನರಂಜನೆ ಕೊಡುವಂತಹವು. ಅವುಗಳೇ ನಿರಾತಂಕವಾಗಿ ಪ್ರದರ್ಶನಗೊಳ್ಳುವಾಗ ವೈಚಾರಿಕ ನಾಟಕೋತ್ಸವವನ್ನು ಯಾಕೆ ನಿಲ್ಲಿಸಬೇಕು? ರಂಗಬದ್ದತೆ ಇರುವವರು ಯಾರೂ ರಂಗಭೂಮಿ ಚಟುವಟಿಕೆಗಳನ್ನು ನಿಲ್ಲಿಸಲು ಬಯಸಲಾರರು, ಬಯಸಲೂ ಬಾರದು.

ಸಿದ್ದಗಂಗಾ ವಿದ್ಯಾ ಸಂಸ್ಥೆಯವರು ಒಂದು ಅಧೀಕೃತ ಸುತ್ತೊಲೆ ಹೊರಡಿಸಿದ್ದಾರೆ. ಅದರಲ್ಲಿ  "ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿವರ್ಗದವರು ಶಿಸ್ತಿನಿಂದ ಪರಮ ಪೂಜ್ಯರ ದರ್ಶನ ಪಡೆದು ಶ್ರೀಮಠದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಕರ್ತವ್ಯವಾಗಿರುತ್ತದೆ" ಎಂದು ಹೇಳಲಾಗಿದೆ. ಅದೇ ರೀತಿ ಸ್ವಾಮಿಗಳಿಗೆ ಶೃದ್ದಾಂಜಲಿಯನ್ನು ಅರ್ಪಿಸಿ ರಂಗಕರ್ಮಿಗಳೂ ಸಹ ತಮ್ಮ ರಂಗ ಕೈಂಕರ್ಯದಲ್ಲಿ ತೊಡಗಿಕೊಂಡರೆ ಸ್ವಾಮೀಜಿಗಳ   ಕಾಯಕ ಸಿದ್ದಾಂತಕ್ಕೆ ಗೌರವ ಕೊಟ್ಟಂತಾಗುತ್ತದೆ. 

ಹೌದು.. ಈ ರಾಜ್ಯದ ಬಹು ದೊಡ್ಡ ಜೀವವೊಂದು ನಮ್ಮನ್ನಗಲಿದೆ. ತ್ರಿವಿಧ ದಾಸೋಹ ನಿರತ ಕಾಯಕ ಜೀವಿ ಇನ್ನಿಲ್ಲ. ಕಾಯಕ ಜೀವಿಗೆ ಕಾಯಕದ ಮೂಲಕ ಗೌರವ ತೋರಿಸುವುದಕ್ಕಿಂತಾ ದೊಡ್ಡ ಗೌರವ ಏನಿದೆ. ಸ್ವಾಮೀಜಿಗಳ ಸಾಮಾಜಿಕ ಕಾಯಕಗಳನ್ನು ನೆನೆಯುವುದರ ಮೂಲಕ, ಅವರ ಅಗಲಿಕೆಗೆ ಶೋಕಾಚರಣೆ ಮಾಡುವುದರ ಜೊತೆಗೆ ಕಾಯಕವನ್ನು ಮರೆಯದೇ ಮುಂದುವರೆಸಬೇಕು. ಬಸವ ಧರ್ಮದ ಆಶಯವಾದ "ಕಾಯಕವೇ ಕೈಲಾಸ" ವನ್ನು ಚಾಚೂ ತಪ್ಪದೇ ಪಾಲಿಸಿದ ಪೂಜ್ಯರಿಗೆ ರಂಗಕಾಯಕದ ಮೂಲಕ ರಂಗಗೌರವವನ್ನು ಸಲ್ಲಿಸಬೇಕಿದೆ. ಶ್ರೀ ಶಿವಕುಮಾರ ಸ್ವಾಮೀಜಿಗಳ ಸ್ಮರಣೆಯಲ್ಲಿ ಆರ್.ನಾಗೇಶರವರ ನಾಟಕೋತ್ಸವ ನಿಲ್ಲದೇ ನಡೆಯಬೇಕಿದೆ. 

- ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ