ಭಾನುವಾರ, ಮೇ 31, 2015

ನಿರೂಪಣಾ ಪ್ರಧಾನ ನಾಟಕ “ಸೂರ್ಯನ ಕುದುರೆ”




ಸೂರ್ಯನ ಕುದುರೆ ನಾಟಕವು ಡಾ.ಯು.ಆರ್.ಅನಂತಮೂರ್ತಿಯವರು ಬರೆದ ಸಣ್ಣ ಕಥೆಯ ಯಥಾವತ್ ದೃಶ್ಯರೂಪವಾಗಿದೆ. ಕಥೆ, ಕಾದಂಬರಿಗಳನ್ನು ಮೊದಲು ರಂಗಪಠ್ಯವಾಗಿ ಪರಿವರ್ತಿಸಿ ನಂತರ ನಾಟಕವಾಗಿಸಲಾಗುತ್ತದೆ. ಆದರೆ.. ಸೂರ್ಯನ ಕುದುರೆ ಕಥೆ ಯಥಾವತ್ತಾಗಿ ಅದು ಇದ್ದ ರೀತಿಯಲ್ಲಿಯೇ ನಾಟಕವಾಗಿ ಪ್ರಸ್ತುತಗೊಂಡಿರುವುದು ರಂಗಭೂಮಿಯ ವಿಭಿನ್ನ ಸಾಧ್ಯತೆಯನ್ನು ವಿಸ್ತರಿಸಿದೆ. ಅನಂತಮೂರ್ತಿಯವರ ಕಥಾ ನಿರೂಪಣೆಯೂ ಸಹ ಓದಿದವರಿಗೆ ದೃಶ್ಯಗಳನ್ನು ಕಣ್ಣಿಗೆ ಕಟ್ಟಿದಂತೆ ವಿವರಿಸುವಂತಿದೆ. ಹೀಗಾಗಿ ಅದು ನೇರವಾಗಿ ನಾಟಕವಾಗಲು ಸಾಧ್ಯವಾಗಿದೆ. ಸೂರ್ಯನ ಕುದುರೆ ಕಥೆಯನ್ನು ಅದು ಇದ್ದ ಹಾಗೆಯೇ ನರೇಟಿವ್ ಫಾರಂನಲ್ಲಿ ನೀನಾಸಂ ನಲ್ಲಿ ಡಾ.ಎಂ.ಗಣೇಶ್ ಮೇಷ್ಟು ನಾಟಕ ಮಾಡಿಸಿದ್ದರು. ಹಾಗೂ ನಾಟಕದಲ್ಲಿ ಹಡೇ ವೆಂಕ್ಟನ ಪಾತ್ರ ಮಾಡಿ ಯಶಸ್ವಿಯಾಗಿದ್ದ  ಪ್ರಶಾಂತ ಸಿದ್ಧಿಯವರು ಈಗ ವೇಷ ರಂಗತಂಡದ ಕಲಾವಿದರಿಗೆ ಸೂರ್ಯನ ಕುದುರೆಯನ್ನು ನಿರ್ದೇಶಿಸಿದ್ದಾರೆ.

ಕರ್ನಾಟಕ ರಂಗ ಪರಿಷತ್ತು ಮತ್ತು ಸೃಷ್ಟಿ ದೃಶ್ಯಕಲಾ ಮಾಧ್ಯಮ ಅಕಾಡೆಮಿ ಸಂಸ್ಥೆಗಳು ಜಂಟಿಯಾಗಿ ಆಯೋಜಿಸಿದ ಸೃಷ್ಟಿ ಸೊಬಗು ತಿಂಗಳ ಕಾರ್ಯಕ್ರಮದ ಪ್ರಯುಕ್ತ ದೊಮ್ಮಲೂರಿನ ಸೃಷ್ಟಿ ಆಪ್ತ ರಂಗಮಂದಿರದಲ್ಲಿ 2015, ಮೇ 17 ರಂದು ಸೂರ್ಯನ ಕುದುರೆ ನಾಟಕದ ಮೊದಲ ಪ್ರದರ್ಶನ ಪ್ರಯೋಗಗೊಂಡಿತು.

ಸೂರ್ಯನ ಕುದುರೆ ಕಥೆಯು ಡಾ.ಅನಂತಮೂರ್ತಿ ಯವರ ಆತ್ಮಕಥನದ ಭಾಗವೇ ಆದಂತಿದೆ. ಕಥೆಯೊಳಗೆ ಅನಂತಮೂರ್ತಿಯವರೂ ಸಹ ತಮ್ಮದೇ ಹೆಸರಲ್ಲಿ ಪಾತ್ರವಾಗಿ ತಮ್ಮ ಕಥೆಯನ್ನು ತಾವೇ ನಿರೂಪಣೆ ಮಾಡುತ್ತಾ ತಮ್ಮ ಹಳ್ಳಿಯ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟಿದ್ದಾರೆ. ಹೀಗೆ ಮೂರ್ತಿಗಳು ಬಿಚ್ಚಿಟ್ಟ ನೆನಪಿನ ಬುತ್ತಿಯನ್ನು ಪ್ರಶಾಂತ ಸಿದ್ಧಿಯವರು ನಾಟಕ ರೂಪದಲ್ಲಿ ನೋಡುಗರಿಗೆ ಉಣಬಡಿಸಿದ್ದಾರೆ. ಫಾರೆನ್ ರಿಟರ್ನ ಅನಂತ್ ತಮ್ಮ ಗ್ರಾಮಕ್ಕೆ ೧೪ ವರ್ಷಗಳ ನಂತರ ಬಂದು ತನ್ನ ಬಾಲ್ಯದ ಸ್ನೇಹಿತ ಹಡೆ ವೆಂಕಟನನ್ನು ಬೇಟಿಯಾಗುತ್ತಾರೆ. ವೆಂಕಟನ ಜೊತೆಗೆ ಸಂವಹನ ಮಾಡುತ್ತಲೇ ಅನಂತ್ ವೆಂಕಟನ ಜೊತೆ ಒಡನಾಡಿದ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಆತನ ಪ್ರಸ್ತುತ ಅಸಹಾಯಕ ಬದುಕನ್ನು ಪರಿಚಯಿಸುವುದೇ ನಾಟಕದ ಕಥಾವಸ್ತು. ಶಾಲೆಯ ನೆನಪುಗಳು, ಸ್ವಾತಂತ್ರ್ಯ ಚಳುವಳಿಯಲ್ಲಿ ವೆಂಕಟ್ ಪೋಸ್ಟ್ ಬಾಕ್ಸ ಅಪಹರಿಸಿ ಮುಚ್ಚಿಟ್ಟು ಸಿಕ್ಕಾಕಿಕೊಂಡು ಪರದಾಡಿದ್ದು. ವೆಂಕಟ ಜೋಯಿಸನಾಗಿ ಜನರಿಗೆ ಅಭ್ಯಂಜನ ಮಾಡಿಸುವ ಕಲೆಯಲ್ಲಿ ಹೆಸರುವಾಸಿಯಾಗಿದ್ದು. ಬೆಳೆದ ಮಗ ಪೋಲಿಪುಂಡನಾಗಿದ್ದು. ಮನೆಯಲ್ಲಿ ಗಯ್ಯಾಳಿ ಹೆಂಡತಿ ಅವಮಾನಿಸುವುದು, ಊರಲ್ಲಿ ಗೌರವವಿಲ್ಲದಿರುವುದು... ಹೀಗೆ... ಎಲ್ಲಾ ಸಂಕಷ್ಟ ಹಾಗೂ ಅವಮಾನಗಳನ್ನು ನಿರ್ಲಕ್ಷಿಸಿ ನಗುನಗುತ್ತಲೇ ತನ್ನದೇ ಆದ ಲೋಕ ಸೃಷ್ಟಿಸಿಕೊಂಡು ಸೂರ್ಯನ  ಕುದುರೆ ಭ್ರಮೆಯಲ್ಲಿ ಬದುಕನ್ನು ಸಹ್ಯವಾಗಿಸಲು ವೆಂಕಟ ಪ್ರಯತ್ನಿಸುವುದು....  ರೀತಿಯ ವಿವರಣೆಗಳನ್ನು ನೋಡುಗರ ಮನಮುಟ್ಟುವಂತೆ ಕಟ್ಟಿಕೊಡುವಲ್ಲಿ ಸೂರ್ಯನ ಕುದುರೆ ನಾಟಕ ಭಾಗಷಃ ಯಶಸ್ವಿಯಾಗಿದೆ.

ಸೂರ್ಯನ ಕುದುರೆ ಕೇಂದ್ರ ಪಾತ್ರ ಹಡೆ ವೆಂಕಟ. ಅಸಹಾಯಕತೆ ಹಾಗೂ ಸಕಲ ನೋವುಗಳ ನಡುವೆಯೂ ನಗುತ್ತಲೇ ಇರುವ ವೆಂಕ್ಟನ ಪಾತ್ರ ಸೃಷ್ಟಿ ನಾಟಕದ ಹೈಲೈಟ್ ಆಗಿದೆ. ಮೇಲ್ನೋಟಕ್ಕೆ ಬೇಜವಾಬ್ದಾರಿ ವ್ಯಕ್ತಿಯ ಸ್ವಯಂಕೃತ ಅಪರಾಧಿತನವೆಂದು ವೆಂಕ್ಟನ ಬಗ್ಗೆ ಅನ್ನಿಸಿದರೂ, ಪಾತ್ರದ ಸ್ವಭಾವಕ್ಕೆ ಕೌಟುಂಬಿಕ ಹಾಗೂ ಸಾಮಾಜಿಕ ತಾಪತ್ರಯಗಳೂ ಕಾರಣವಾಗಿವೆ. ಪೆನ್ಶನ್ ಬರದೇ ಅನುಭವಿಸುವ ಆರ್ಥಿಕ ಮುಗ್ಗಟ್ಟು ವೆಂಕ್ಟನನ್ನು ಹೈರಾಣಾಗಿಸಿದರೆ, ದಾರಿತಪ್ಪದ ಮಗನ ಅವಿವೇಕ ಜರ್ಜರಿತಗೊಳಿಸಿದೆ. ಸಾಂತ್ವನ ಹೇಳಿ ಸಂಕಷ್ಟದಲ್ಲಿ ಜೊತೆಯಾಗಬೇಕಾಗಿದ್ದ ಹೆಂಡತಿಯ ಹೆಮ್ಮಾರಿತನ ವೆಂಕ್ಟನನ್ನು ನಿರ್ಲಿಪ್ತನನ್ನಾಗಿಸಿದೆ. ವೆಂಕ್ಟನ ಅಭ್ಯಂಜನ ಸೇವೆಯನ್ನು ಪುಕ್ಕಟೆ ಪಡೆಯುವ ಜನ ಆತನನ್ನು ಬಳಸಿಕೊಂಡು ಅವಮಾನಿಸುತ್ತಿರುವುದು ಆತನಲ್ಲಿ ನಿರ್ಲಕ್ಷತೆಯನ್ನು ಹೆಚ್ಚಿಸಿದೆ. ಹೀಗೆ...ಕೌಟುಂಬಿಕ ಹಾಗೂ ಸಾಮಾಜಿಕ ಸಮಸ್ಯೆಗಳ ನಡುವೆಯೂ ವೆಂಕ್ಟನ ಅಲಿಪ್ತತೆ ಹಾಗೂ ನೋವಿನಲ್ಲೂ ನಗುವ ಪರಿ ಅಚ್ಚರಿಯನ್ನುಂಟು ಮಾಡುತ್ತದೆ. ಹಾಗೂ ಸಂಕಷ್ಟಗಳಲ್ಲೂ ಸಂತಸವಾಗಿರುವ ಸಂದೇಶವನ್ನು ನೋಡುಗರಿಗೆ ಕೊಡುವಂತೆ ವೆಂಕ್ಟನ ಪಾತ್ರ ಮೂಡಿಬಂದಿದೆ.
         
ನಾಟಕದಲ್ಲಿ ಕೆಲವೊಂದು ದೃಶ್ಯಗಳು ಸೊಗಸಾಗಿ ಮೂಡಿಬಂದಿವೆ. ವೆಂಕ್ಟ ಅನಂತುಗೆ ಹೊಳೆಯಲ್ಲಿ ಈಜು ಕಲಿಸುವುದು, ಅಭ್ಯಂಜನ ಮಾಡಿಸುವುದು, ಸೂರ್ಯನ ಕುದುರೆ ತೋರಿಸುವ ದೃಶ್ಯಗಳು ಪ್ರೇಕ್ಷಕರಲ್ಲಿ ಸಂಚಲನ ಮೂಡಿಸುವಂತಿವೆ. ಪ್ರಸ್ತುತ ಹಾಗೂ ಪ್ಲಾಷ್ ಬ್ಯಾಕ್ ದೃಶ್ಯಗಳನ್ನು ದೃಶ್ಯ ಬದಲಾವಣೆ ಮಾಡದೇ ಒಂದಕ್ಕೊಂದು ಬ್ಲೆಂಡ್ ಮಾಡಿದ ರೀತಿ ಸೂರ್ಯನ ಕುದುರೆಯಲ್ಲಿ  ಗಮನಾರ್ಹವಾಗಿವೆ.
         

ಆದರೆ... ಸಂಭಾಷಣೆಗಳಿಗೂ ಹಾಗೂ ದೃಶ್ಯ ಸಂಯೋಜನೆಗೂ ಇನ್ನೂ ಒಂದಿಷ್ಟು ಹೊಂದಾಣಿಕೆ ಬೇಕಾಗಿತ್ತು. ಉದಾಹರಣೆಗೆ; ಆಸುಪಾಸಿನಲ್ಲಿ ಕಂಕುಳಲ್ಲಿ ಕೊಡಯಿಲ್ಲದವರೆಂದರೆ ನಾವಿಬ್ಬರೇನೆ ಎಂದು ಅನಂತು ಪಾತ್ರ ಹೇಳುವಾಗ ಅಕ್ಕಪಕ್ಕದಲ್ಲಿದ್ದ ಒಂದಿಬ್ಬರ ಹತ್ತಿರವಾದರೂ ಕೊಡೆ ಇರಬೇಕಾಗಿತ್ತುವೆಂಕ್ಟನ ಉದುರಿದ ಹಲ್ಲಿನ ಕುರಿತು ಅನಂತು ವಿವರ ಕೊಡುವುದರಿಂದ ವೆಂಕ್ಟ ಪಾತ್ರಧಾರಿಯ ಮೂರ್ನಾಲ್ಕು ಹಲ್ಲುಗಳನ್ನಾದರೂ ಕಪ್ಪು ಮಾಡಿ ಉದುರಿದಂತೆ ತೋರಿಸಬೇಕಾಗಿತ್ತು. ದೃಶ್ಯಗಳನ್ನು ಪ್ಲಾಶ್ಬ್ಯಾಕ ತಂತ್ರದಲ್ಲಿ ತೋರಿಸುವಾಗ ಪಾತ್ರಗಳಲ್ಲಿ ಕನಿಷ್ಟ ಸಾಂಕೇತಿಕವಾದ ಬದಲಾವಣೆಯನ್ನಾದರೂ ಮಾಡಬೇಕಾಗಿತ್ತು. ಉದಾಹರಣೆಗೆ.. ಮಾರುಕಟ್ಟೆಗೆ ತರಕಾರಿ ತರಲು ಬಂದಾಗ ವೆಂಕ್ಟನ ಬಗಲಿಲ್ಲದ್ದ ಬ್ಯಾಗನ್ನು ಹದಿನೈದು ಇಪ್ಪತ್ತು ವರ್ಷಗಳ ಹಿಂದಿನ ಪ್ಲಾಶ್ಬ್ಯಾಕ್ ದೃಶ್ಯದಲ್ಲಿ ಕೂಡಾ ಬಳಸುವ ಅಗತ್ಯವಿರಲಿಲ್ಲ.    ಇಂತಹ ಕೆಲವು ಚಿಕ್ಕಪುಟ್ಟ ನ್ಯೂನ್ಯತೆಗಳು ನಾಟಕದಲ್ಲಿ ಇವೆಯಾದರೂ ಅವುಗಳತ್ತಲೂ ಸಹ ಗಮನಹರಿಸಿ ತಮ್ಮ ವೃತ್ತಿಪರತೆಯನ್ನು ನಿರ್ದೇಶಕರು ತೋರಿಸಬೇಕಾಗಿತ್ತು.


ದೃಶ್ಯಕ್ಕೆ ಪೂರಕವಾಗಿ ಪಾತ್ರಗಳನ್ನು ಸಿದ್ಧಗೊಳಿಸುವಲ್ಲಿ ಇನ್ನಷ್ಟು ಮುತುವರ್ಜಿ ವಹಿಸಬೇಕಾಗಿತ್ತು. ತರಕಾರಿ ಮಾರುವ ಯಾರೂ ಹಾಗೆ ಕಾಣುತ್ತಿರಲಿಲ್ಲ. ತರಕಾರಿ ಮಾರುವ ಒಬ್ಬ ಚಿನ್ನದ ಚೈನು ಹಾಕಿದ್ದರೆ, ಇನ್ನೊಬ್ಬಳು ಶ್ರೀಮಂತ ಮನೆಯ ಹುಡುಗಿಯ ಹಾಗೆ ಕಾಸ್ಟೂಮ್ ಧರಿಸಿದ್ದಳು. ಮತ್ತೊಬ್ಬ ಊರ ಗೌಡನ ರೀತಿ ಕಾಣಿಸುತ್ತಿದ್ದ.... ಹೀಗಾಗಿ ಮೊದಲು ಪಾತ್ರಗಳನ್ನು ಅವುಗಳ ವೃತ್ತಿಗೆ ತಕ್ಕಂತೆ ಸಿದ್ದಗೊಳಿಸುವುದುತ್ತಮ. ತರಕಾರಿ ಮಾರುಕಟ್ಟೆ ಹಾಗೂ ಪ್ರಭುವಿನ ಚಿಲ್ಲರೆ ಅಂಗಡಿ ಎರಡನ್ನೂ ಏಕಕಾಲಕ್ಕೆ ಒಂದೇ ದೃಶ್ಯದಲ್ಲಿ ತೋರಿಸುವ ಬದಲಾಗಿ ಒಂದರ ನಂತರ ಇನ್ನೊಂದರಂತೆ ಎರಡು ಭಿನ್ನ ದೃಶ್ಯಗಳನ್ನಾಗಿಸಿದ್ದರೆ ನಾಟಕಕ್ಕೇನೂ ಭಂಗ ಬರುತ್ತಿರಲಿಲ್ಲ, ಜೊತೆಗೆ ಪ್ರೇಕ್ಷಕರಿಗೆ ಗೊಂದಲವಾಗುವುದನ್ನು ನಿವಾರಿಸಬಹುದಾಗಿತ್ತು. ಮನೆಯಿಂದ ಹಣ ವಡವೆ ಎತ್ತಿಕೊಂಡು ಹೋಗಿದ್ದಾನೆಂದು ಆರೋಪಿಸಲಾದ ಮಗ ಮುಂದಿನ ದೃಶ್ಯದಲ್ಲಿ ಮನೆ ಮುಂದೆ ಕೊಡಲಿ ಹಿಡಿದು ಅದೆನೋ ಕಡಿಯುತ್ತಾ ನಿಂತಿರುವುದರ ಹಿಂದಿನ ಲಾಜಿಕ್ ನೋಡುಗರಿಗೆ ಅರ್ಥವಾಗಲೇ ಇಲ್ಲ. ಇನ್ನೂ ಸ್ಟೇಜ್ ಬ್ಯಾಲನ್ಸ್, ಬ್ಲಾಕಿಂಗ್, ಮೂವಮೆಂಟ್, ಎಂಟ್ರಿ ಎಕ್ಸಿಟ್ಗಳಲ್ಲಿ ನಿಖರತೆ ಸಾಧಿಸಬೇಕಿದೆ. ನಾಟಕದಲ್ಲಿ ದೃಶ್ಯಕ್ಕೆ ಪೂರಕವಾಗಿ ಹಿನ್ನೆಲೆ ಸಂಗೀತ ಇದೆಯಾದರೂ ಅದ್ಯಾಕೋ ಮೂಡ್ ಕ್ರಿಯೇಟ್ ಮಾಡಲು ವಿಫಲವಾಗಿದೆ.

ನಿರ್ದೇಶಕ ಪ್ರಶಾಂತ ಸಿದ್ದಿ
ನಾಟಕದ ನಿರ್ದೇಶಕ ಪ್ರಶಾಂತ ಸಿದ್ಧಿರವರು ಅನುಭವಿ ನಟ ಹಾಗೂ ರಂಗನಿರ್ದೇಶಕರಾಗಿದ್ದು ಜೊತೆಗೆ ನೀನಾಸಮ್ ಗರಡಿಯಲ್ಲಿ ಪಳಗಿ ಬಂದಿದ್ದರಿಂದ ನೋಡುಗರು ವೃತ್ತಿಪರತೆಯನ್ನು ನಿರೀಕ್ಷಿಸುತ್ತಾರೆ. ಆದರೆ ನಾಟಕ ಇನ್ನೂ ಅಮ್ಯೂಚರ್ ಹಂತದಲ್ಲಿದೆ. ಸೂಕ್ತ ಬದಲಾವಣೆ ಮಾಡಿಕೊಂಡರೆ ಮುಂದಿನ ಪ್ರದರ್ಶನಗಳಲ್ಲಿ ಸರಿಹೋಗಬಹುದಾಗಿದೆ. ದೃಶ್ಯ ಸಂಯೋಜನೆಗಿಂತಲೂ, ಪೂರಕ ರಂಗ ತಂತ್ರಗಳ ಬಳಕೆಗಿಂತಲೂ ನಟರ ಅಭಿನಯದ ಮೇಲೆ ನಿರ್ದೇಶಕರು ಹೆಚ್ಚು ಗಮನ ಹರಿಸಿದ್ದಾರೆ. ವೆಂಕ್ಟನ ಪಾತ್ರಧಾರಿ ಸುಮಂತ ತಮ್ಮ ಅಭಿನಯ ಸಾಮರ್ಥ್ಯದಿಂದ ಇಡೀ ನಾಟಕವನ್ನು ತೂಗಿಸಿಕೊಂಡು ಹೋಗಿ ದಡ ತಲುಪಿಸಿದರು. ಇದಕ್ಕೆ ಪೂರಕವಾಗಿ ಅನಂತ್ ಪಾತ್ರ ನಿರ್ವಹಿಸಿದ ಅರ್ಜುನ್ ಸಹ ತಮ್ಮ ಸಹಜಾಭಿನಯದಿಂದ ಪಾತ್ರಕ್ಕೆ ಘನತೆ ತಂದರು. ವೆಂಕ್ಟನ ಮಗನಾಗಿ ಪ್ರೀತಂ ಹಾಗೂ ಹೆಂಡತಿ ಪಾತ್ರದಲ್ಲಿ ನಿರ್ಮಲಾ ನಾದನ್ ಇಬ್ಬರೂ ಪುಟ್ಟ ಪಾತ್ರದಲ್ಲೂ ದಿಟ್ಟವಾಗಿ ಅಭಿನಯಿಸಿ ನೋಡುಗರ ಗಮನ ಸೆಳೆದರು. ಅಭಿನಯ ವಿಭಾಗಕ್ಕೆ  ಕೊಟ್ಟಷ್ಟೇ ಗಮನವನ್ನು ಬೇರೆಲ್ಲಾ ವಿಭಾಗಗಳಿಗೂ ಕೊಟ್ಟರೆ ಸೂರ್ಯನ ಕುದುರೆ ಉತ್ತಮ ನಾಟಕವಾಗಿ ಹೊರಹೊಮ್ಮುವ ಸಾಧ್ಯತೆಗಳಿವೆ. ನಾಟಕದಲ್ಲಿ ತೊಡಗಿಸಿಕೊಂಡ ಹೊಸ ಹಾಗೂ ಅನುಭವಿ ಯುವಕ ಯುವತಿಯರು ವೃತ್ತಿಪರತೆಯನ್ನು ಮೈಗೂಡಿಸಿಕೊಳ್ಳಬೇಕಾಗಿದೆ.  

                         -ಶಶಿಕಾಂತ ಯಡಹಳ್ಳಿ