ಬುಧವಾರ, ಜೂನ್ 7, 2017

ರಂಗಭೂಮಿ ಸಂಕಟಕ್ಕೆ ಸಚಿವೆ ಉಮಾಶ್ರೀಯವರ ಸ್ಪಂದನೆ :






ರಂಗಭೂಮಿ ಕ್ಷೇತ್ರಕ್ಕೆ ಅಪ್ಪಳಿಸಬಹುದಾದ ಆಘಾತಕಾರಿ ಆದೇಶಕ್ಕೆ  ಇಷ್ಟು ಬೇಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾನ್ಯ ಸಚಿವೆ ಶ್ರೀಮತಿ ಉಮಾಶ್ರೀಯವರು ಸ್ಪಂದಿಸುತ್ತಾರೆಂಬುದು ನಂಬಲಾಗದ ಸಂಗತಿ.. ಆದರೂ ನಂಬಲೇ ಬೇಕಿದೆ.. ಉಮಾಶ್ರೀಯವರಿಗೆ ಧನ್ಯವಾದ ಹೇಳಲೇ ಬೇಕಿದೆ. ಉಮಾಶ್ರೀಯವರೊಳಗಿರುವ ಕಲಾವಿದೆ ಜಾಗೃತವಾಗಿ ರಂಗಭೂಮಿಯ ಒದಗಬಹುದಾಗಿದ್ದ ಸಮಸ್ಯೆಗೆ ತಡೆ ಹಾಕಲು ಕೇವಲ 24 ಗಂಟೆಗಳಲ್ಲಿ ಪ್ರಯತ್ನಿಸಿರುವುದು ನಿಜಕ್ಕೂ ಶ್ಲಾಘನೀಯ.

ಜೂನ್ 5 ರಂದು ವಿಜಯವಾಣಿ ಪತ್ರಿಕೆಯಲ್ಲಿ ಮಾಧ್ಯಮ ಮಿತ್ರ ಕೀರ್ತಿನಾರಾಯಣ್ ಸರಕಾರಿ ನೌಕರರಿಗೆ ‘ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ’ಯು ವಿಧಿಸಿದ ಶಿಕ್ಷೆಗಳ ಕುರಿತು ಚಿಕ್ಕ ವರದಿಯೊಂದನ್ನು ಬರೆದಿದ್ದರು. ಅದನ್ನು ಆಧರಿಸಿ ಇನ್ನೂ ಕೆಲವು ಮಾಹಿತಿಗಳನ್ನು ಸಂಗ್ರಹಿಸಿ ನಾನು ರಂಗಭೂಮಿಗೊಂದು ಆಘಾತ; ಸರಕಾರಿ ನೌಕರರಿಗೆ ಮರ್ಮಾಘಾತ: ಎನ್ನುವ ಲೇಖನವನ್ನು ನನ್ನ ರಂಗಭೂಮಿ ವಿಶ್ಲೇಷಣೆ ಇಂಟರನೆಟ್ ಬ್ಲಾಗ್‌ನಲ್ಲಿ ಬರೆದಿದ್ದೆ. ಈ ಲೇಖನಕ್ಕೆ ತಕ್ಷಣ ಸ್ಪಂದಿಸಿದ ರಂಗಸಂಪದದ ಜೆ.ಲೊಕೇಶ್‌ರವರು ಸಚಿವೆ ಉಮಾಶ್ರೀಯವರ ಗಮನಕ್ಕೆ ತಂದು ಲೇಖನವನ್ನು ವಾಟ್ಸಾಪ್ ಮೂಲಕ ಕಳಿಸಿಕೊಟ್ಟರು. ಡಾ.ವಿಜಯಮ್ಮನವರು ಲೇಖನ ಓದಿ ಆತಂಕಗೊಂಡು ಉಮಾಶ್ರೀಯವರ ಜೊತೆಗೆ ಮಾತಾಡಿದರು. ಈ ರಂಗಕರ್ಮಿಗಳ ಆಗ್ರಹಕ್ಕೆ ತೀವ್ರವಾಗಿ ಸ್ಪಂದಿಸಿದ ಉಮಾಶ್ರೀಯವರು ತಮ್ಮ ಸಚಿವಾಲಯದ ಆಡಳಿತಾಧಿಕಾರಿಗಳಾದ ಕಿರಣ್‌ಸಿಂಗ್‌ರವರಿಗೆ ತಕ್ಷಣ ಕ್ರಮ ಕೈಗೊಳ್ಳಲು ಆದೇಶಿಸಿದರು. ಕಿರಣ್‌ಸಿಂಗ್‌ರವರು ನನಗೆ ಪೋನ್ ಮಾಡಿ ವಿವರಗಳನ್ನು ಕೇಳಿದಾಗ ‘ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ’ಯ ಸುತ್ತೋಲೆಯ ಪ್ರತಿಗಳನ್ನು ವಾಟ್ಸಾಪ್ ಮೂಲಕ ಕಳುಹಿಸಿಕೊಟ್ಟು ಆದಷ್ಟು ಬೇಗ ಕ್ರಮ ಕೈಗೊಳ್ಳಲು ಒತ್ತಾಯಿಸಿದೆ. ಸಂಜೆಯ ಒಳಗೆ ಶ್ರೀ ಕಿರಣ್‌ಸಿಂಗ್‌ರವರು ಮಾನ್ಯ ಸಚಿವೆ ಉಮಾಶ್ರೀಯವರು ಸುತ್ತೋಲೆಯನ್ನು ತಡೆಹಿಡಿಯಲು ಮಾನ್ಯ ಮುಖ್ಯಮಂತ್ರಿಗಳಿಗೆ ಬರೆದ ಪತ್ರದ ಪ್ರತಿಯನ್ನು ಈಮೇಲ್ ಮೂಲಕ ಕಳುಹಿಸಿದರು.  ಆ ಪತ್ರದ ವಿವರ ಹೀಗಿದೆ..

ಸಂ: ಮ.ಮ.ಅ.ಕ.ಸಂ.ಸ / 434 / 2017                            ದಿನಾಂಕ : 07-06-2017

ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ವಂದನೆಗಳು,

ವಿಜಯವಾಣಿ ದಿನಪತ್ರಿಕೆಯ ದಿ.05-06-2017ರ ಪತ್ರಿಕೆ ತುಣುಕು ಹಾಗೂ ಇದಕ್ಕೆ ಪ್ರತಿಕ್ರಿಯೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗಿರುವ ಬರಹವನ್ನು ತಮ್ಮ ಅವಗಾಹನೆಗಾಗಿ ಸಲ್ಲಿಸುತ್ತಿದ್ದೇನೆ.
ಸರ್ಕಾರಿ ನೌಕರರು ಸಿನೆಮಾ, ನಾಟಕಗಳಲ್ಲಿ ಅಭಿನಯಿಸಿದರೆ ಅಥವಾ ರಂಗಚಟುವಟಿಕೆಗಳಲ್ಲಿ ಭಾಗಿಯಾದರೆ ಅವರಿಗೆ ಶಿಕ್ಷೆಯ ರೂಪದಲ್ಲಿ ವಾರ್ಷಿಕ ಎರಡು ಬಡ್ತಿಗಳನ್ನು ತಡೆಹಿಡಿಯುವ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಹೊಸ ನಿಯಮಾವಳಿಗಳನ್ನು ರೂಪಿಸಿದೆ ಎಂದು ಹೇಳಲಾಗಿದೆ. ಸರ್ಕಾರಿ ನೌಕರರು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಬಾರದು ಎಂಬ ಚಿಂತನೆಯೇ ಆಘಾತಕಾರಿಯಾಗಿದೆ. ಸರ್ಕಾರಿ ನೌಕರರು ಎಂಬ ಕಾರಣಕ್ಕೆ ಅವರಲ್ಲಿರುವ ಪ್ರತಿಭೆಯನ್ನು ಹತ್ತಿಕ್ಕುವುದು ಸರಿಯಾದುದಲ್ಲ. ಕನ್ನಡ ರಂಗಭೂಮಿಯ ಆದ್ಯಪ್ರವರ್ತಕರು ಎನಿಸಿಕೊಂಡ ಶ್ರೀರಂಗರು ಸೇರಿದಂತೆ ಕನ್ನಡ ರಂಗಭೂಮಿಗೆ ಅನನ್ಯವಾದ ಕೊಡುಗೆ ಕೊಟ್ಟ ಶ್ರೀ.ಸಿ.ಜಿ.ಕೃಷ್ಣಸ್ವಾಮಿ, ಶ್ರೀ ಆರ್.ನಾಗೇಶ್, ಶ್ರೀ ಸಿ.ಆರ್.ಸಿಂಹ, ಶ್ರೀ ಶ್ರೀನಿವಾಸ ಜಿ ಕಪ್ಪಣ್ಣ, ಶ್ರೀ ನಾಗರಾಜಮೂರ್ತಿ.. ಮುಂತಾದವರೆಲ್ಲರೂ ಸರ್ಕಾರಿ ನೌಕರಿಯಲ್ಲಿದ್ದವರೇ. ಬಹಳ ಮುಖ್ಯವಾಗಿ ಕನ್ನಡದ ಮೇರು ಸಾಹಿತಿಗಳಲ್ಲಿ ಬಹುತೇಕರು ಸರ್ಕಾರದ ವ್ಯಾಪ್ತಿಗೆ ಒಳಪಡುವ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿರುವವರೇ ಆಗಿದ್ದಾರೆ. ವ್ಯಕ್ತಿಯಲ್ಲಿರುವ ಸೃಜನಶೀಲತೆಯನ್ನು ಹತ್ತಿಕ್ಕುವುದು ಮತ್ತು ಅದಕ್ಕೆ ನಿರ್ಬಂಧಗಳನ್ನು ಹೇರುವುದು ಸಂವಿಧಾನದಲ್ಲಿ ನೀಡಲಾದ ವ್ಯಕ್ತಿ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಗಳಿಗೆ ವಿರುದ್ಧವಾಗಿದೆ. ವಿಶೇಷವಾಗಿ ಕನ್ನಡದ ಹವ್ಯಾಸಿ ರಂಗಭೂಮಿ ನಿಂತಿರುವುದೇ ಸರ್ಕಾರಿ ಹಾಗೂ ಖಾಸಗಿ ನೌಕರರ ಮೇಲೆ. ಅದರಲ್ಲಿಯೂ ಶಾಲಾ ಕಾಲೇಜುಗಳ ಶಿಕ್ಷಕರು ಹವ್ಯಾಸಿ ರಂಗಭೂಮಿಯಲ್ಲಿ ತಮ್ಮ ಮಹತ್ವದ ಕೊಡುಗೆಗಳನ್ನು ನೀಡುತ್ತಿದ್ದಾರೆ.

ಹೀಗಿರುವಾಗ, ಕನ್ನಡದ ಸಾಂಸ್ಕೃತಿಕ ಲೋಕದ ಹಿತಾಸಕ್ತಿಯನ್ನು ಕಾಪಾಡುವುದು ಹಾಗೆಯೇ ಇವುಗಳಲ್ಲಿ ತೊಡಗಿಸಿಕೊಂಡಿರುವ ಸಂವೇದನಾಶೀಲ ವ್ಯಕ್ತಿಗಳ ಸೃಜನಶೀಲತೆಯನ್ನು ಪೋಷಿಸಿ ಬೆಳೆಸುವುದು ನಮ್ಮ ಇಲಾಖೆಯ ಕರ್ತವ್ಯವಾಗಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಾವು ನಿರಂತರವಾಗಿ ಸಾಂಸ್ಕೃತಿಕ ಕ್ಷೇತ್ರಕ್ಕೆ ದೊಡ್ಡ ಪ್ರಮಾಣದಲ್ಲಿ ಸಹಕಾರ ನೀಡುತ್ತಾ ಬಂದಿದ್ದೀರಿ. ಹಾಗಾಗಿ ಸಾಂಸ್ಕೃತಿಕ ಲೋಕದ ಹಿತಾಸಕ್ತಿಗೆ ವಿರುದ್ಧವಾದ ಇಂತಹ ಆದೇಶ ಹೊರಡಿಸಬಾರದು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಸೂಚನೆ ನೀಡಬೇಕೆಂದು ಈ ಮೂಲಕ ತಮ್ಮನ್ನು ವಿನಂತಿಸುತ್ತೇನೆ.

ವಂದನೆಗಳೊಂದಿಗೆ
ತಮ್ಮ ವಿಶ್ವಾಸಿ
ಉಮಾಶ್ರೀ

ಇದು ಆಗಲೇಬೇಕಿತ್ತು. ಸಂಸ್ಕೃತಿ ಇಲಾಖೆಯ ಮಾನ್ಯ ಸಚಿವೆಯ ಈ ಸಮಯೋಚಿತ ಪತ್ರವು ರಂಗಭೂಮಿಗೆ ಒದಗಬಹುದಾದ ಸಂಭವನೀಯ ಅವಘಡವನ್ನು ತಡೆಯಬಲ್ಲುದಾಗಿದೆ. ಯಾರು ಏನೇ ಹೇಳಲಿ, ಉಮಾಶ್ರೀ ಪಕ್ಕಾ ರಾಜಕಾರಣಿಯಂತೆ ವರ್ತಿಸುತ್ತಿದ್ದಾರೆಂದು ಅದೆಷ್ಟೇ ದೂರಲಿ. ಉಮಾಶ್ರೀಯವರೊಳಗಿರುವ ಕಲಾವಿದೆ ಕೊನೆಯಾಗಲು ಸಾಧ್ಯವಿಲ್ಲ. ರಂಗಭೂಮಿಯತ್ತ ಅವರಿಗಿರುವ ತುಡಿತ ಹಾಗೂ ಕಳಕಳಿ ಕೊನೆಯಾಗಲೂ ಸಾಧ್ಯವಿಲ್ಲ ಎನ್ನುವುದು ಅವರ ತೀವ್ರವಾದ ಸಾಂದರ್ಭಿಕ ಸ್ಪಂದನದಿಂದ ಸಾಬೀತಾಗಿದೆ. ಸರ್ಕಾರಿ ನೌಕರರ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣದ ವಿರುದ್ಧ ಪ್ರತಿಭಟಿಸಲು ರಂಗ ಗೆಳೆಯರು ಸಿದ್ದಮಾಡಿಕೊಳ್ಳುತ್ತಿದ್ದರು. ಸಭೆ ಕರೆದು ಹೋರಾಟದ ಪರ ನಿರ್ಣಯವನ್ನು ಒಂದೆರಡು ದಿನಗಳಲ್ಲಿ ತೆಗೆದುಕೊಳ್ಳುವವರಿದ್ದರು. ಆದರೆ.. ಎಲ್ಲರಿಗಿಂತ ಮೊಟ್ಟಮೊದಲು ಸ್ವತಃ ಉಮಾಶ್ರೀಯವರೇ ರಂಗಭೂಮಿಗೆ ಮಾರಕವಾಗಿರುವ ಸುತ್ತೋಲೆಯ ವಿರುದ್ಧ ದ್ವನಿ ಎತ್ತಿರುವುದು ರಂಗಗೆಳೆಯರಿಗೆ ಸಮಾಧಾನವನ್ನುಂಟು ಮಾಡಿದೆ.

ಒಂದೂವರೆ ತಿಂಗಳ ಹಿಂದೆ ರವೀಂದ್ರ ಕಲಾಕ್ಷೇತ್ರಕ್ಕೆ ದ್ವನಿ ಹಾಗೂ ಬೆಳಕಿನ ವ್ಯವಸ್ಥೆ ಆಗಬೇಕು ಎಂದು ರಂಗಗೆಳೆಯರು ರವೀಂದ್ರ  ಕಲಾಕ್ಷೇತ್ರದ ಮುಂದೆ ಪ್ರತಿಭಟನೆ ಹಮ್ಮಿಕೊಂಡಾಗಲೂ ಸಹ ಅವರ ಬೇಡಿಕೆಗಳಿಗೆ ಉಮಾಶ್ರೀಯವರು ಅತಿ ಶೀಘ್ರವಾಗಿ ಸ್ಪಂದಿಸಿದ್ದರು. ಹದಿನೆಂಟು ಲೈಟುಗಳು ಮಾತ್ರ ಬೆಳಗುತ್ತಿದ್ದ ಕಲಾಕ್ಷೇತ್ರದಲ್ಲಿ ಈಗ ಅರವತ್ತು ಲೈಟುಗಳು ಬೆಳಗುತ್ತಿವೆ. ಹಾಗೂ ಟೆಂಡರ್ ಪ್ರಕ್ರಿಯೆ ತೀವ್ರಗೊಂಡಿದ್ದು ಇನ್ನೊಂದು ತಿಂಗಳಲ್ಲಿ ಕಲಾಕ್ಷೇತ್ರಕ್ಕೆ ಆಧುನಿಕ ಲೈಟ್‌ಗಳು ಹಾಗೂ ದ್ವನಿ ವ್ಯವಸ್ಥೆ ಬರಲಿದೆ. ಇದಕ್ಕಾಗಿ ಎರಡು ಕೋಟಿ ಹಣವನ್ನೂ ಕಾಯ್ದಿರಿಸಲಾಗಿದೆ. ಜಿಡ್ಡುಗಟ್ಟಿದ ಲೋಕೋಪಯೋಗಿ ಇಲಾಖೆಯ ಮೇಲೆ ಒತ್ತಡ ತಂದ ಉಮಾಶ್ರೀಯವರ ಪ್ರಯತ್ನವೂ ಇದಕ್ಕೆ ಕಾರಣವಾಗಿದೆ. ಅದೇ ರೀತಿ ರಂಗಾಯಣ ಹಾಗೂ ಅಕಾಡೆಮಿಗಳಿಗೆ ಮುಖ್ಯಸ್ಥರನ್ನು ಆಯ್ಕೆ ಮಾಡುವಲ್ಲಿ ಆಗುತ್ತಿರುವ ವಿಳಂಬವನ್ನು ವಿರೋಧಿಸಿ ರಂಗಗೆಳೆಯರು ಮಾನ್ಯ ಸಚಿವೆಗೆ ಮೇ.23ರಂದು ಮನವಿ ಪತ್ರವನ್ನು ಕೊಟ್ಟರು. ಮೇ.25 ರಂದು ನಡೆಯಬೇಕಿದ್ದ ರಂಗಸಮಾಜದ ಸಭೆಯ ಅಜೆಂಡಾದಲ್ಲಿ ರಂಗಾಯಣದ ನಿರ್ದೇಶಕರ ಆಯ್ಕೆಯ ಕುರಿತ ಪ್ರಸ್ತಾಪವೇ ಇರಲಿಲ್ಲಾ. ಯಾವಾಗ ರಂಗಗೆಳೆಯರು ಸಹಿ ಮಾಡಿಕೊಟ್ಟ ಮೆಮರೆಂಡಮ್ಮನ್ನು ಉಮಾಶ್ರೀಯವರು ಓದಿ ವಿವರಗಳನ್ನು ಪಡೆದರೋ ಆಗ ತಕ್ಷಣ ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಿಗೆ ಪೋನ್ ಮಾಡಿ ರಂಗಸಮಾಜದ ಅಜೆಂಡಾದಲ್ಲಿ ರಂಗಾಯಣಕ್ಕೆ ನಿರ್ದೇಶಕರ ಆಯ್ಕೆ ಎನ್ನುವ ವಿಷಯವನ್ನು ಮುಖ್ಯವಾಗಿ ಸೇರಿಸಲು ಆದೇಶಿಸಿದರು. ಹಾಗೂ ಮೇ 25 ರಂದು ನಡೆದ ಸಭೆಯಲ್ಲಿ ಮೂರೂ ರಂಗಾಯಣಗಳಿಗೂ ನಿರ್ದೇಶಕರನ್ನು ಆಯ್ಕೆ ಮಾಡಲಾಗಿದ್ದು ಘೋಷಣೆ ಮಾಡುವುದೊಂದೇ ಬಾಕಿ ಇದೆ. ಹಾಗೆಯೇ ಅಧ್ಯಕ್ಷರ ಹುದ್ದೆ ಖಾಲಿ ಇರುವ ಎಲ್ಲಾ ಅಕಾಡೆಮಿ ಹಾಗೂ ಪ್ರಾಧಿಕಾರಗಳಿಗೆ ಅಧ್ಯಕ್ಷರುಗಳ ಆಯ್ಕೆ ಬಹುತೇಕ ಪೈನಲ್ ಮಾಡಲಾಗಿದ್ದು ಬಹುಷಃ ಅಸೆಂಬ್ಲಿ ಅಧಿವೇಶನ ಮುಗಿದ ತಕ್ಷಣ ಘೋಷಣೆಯಾಗುವ ಮಾಹಿತಿಗಳಿವೆ. 

ಉಮಾಶ್ರೀಯವರನ್ನು ಬೇಕಾದಷ್ಟು ಟೀಕಿಸಿಯಾಗಿದೆ.  ಅದರೆ ರಂಗಭೂಮಿಗೆ ಏನು ಬೇಕು ಹಾಗೂ ಏನು ಬೇಡಾ ಎಂದು ಅವರಿಗೆ ಅರ್ಥಮಾಡಿಸುವ ಪ್ರಯತ್ನ ಮಾಡಲಾಗಿಲ್ಲಾ. ಅದರರ್ಥ ಅವರಿಗೆ ಏನೂ ಗೊತ್ತಿಲ್ಲ ಎಂದಲ್ಲಾ.  ಆದರೆ ಎರಡ್ಮೂರು ಇಲಾಖೆಗಳು ಹಾಗೂ ಜಿಲ್ಲೆಯೊಂದರ ಉಸ್ತುವಾರಿಯ ವಿಪರೀತ ಹೊಣೆಗಾರಿಕೆಯನ್ನು ಹೊತ್ತುಕೊಂಡಿರುವ ಉಮಾಶ್ರೀಯವರಿಗೆ ಸಮಯದ ಅಭಾವವಿದೆ. ವಿಪರೀತ ಕೆಲಸಗಳ ಭಾರದಿಂದಾಗಿ ಇತ್ತೀಚೆಗೆ ಆರೋಗ್ಯವೂ ಕೈಕೊಡುತ್ತಿದೆ. ಹಾಗೂ ಸಿಕ್ಕಾಪಟ್ಟೆ ಹೊರ ಒಳ ಒತ್ತಡಗಳಿವೆ. ಅವುಗಳ ನಡುವೆ ರಂಗಭೂಮಿಯ ಸಾಧಕ ಬಾಧಕಗಳತ್ತ ಗಮನ ಕೊಡಲು ಅವರಿಗೆ ಸಾಧ್ಯವಾಗದೇ ಹೋಗಿದೆ.  ಅದನ್ನೇ ಮುಖ್ಯವಾಗಿಟ್ಟುಕೊಂಡು ರಂಗಭೂಮಿಯವರಾದ ನಾವು ಉಮಾಶ್ರೀಯವರನ್ನು ಹಿಗ್ಗಾಮುಗ್ಗಾ ಟೀಕಿಸುತ್ತಲೇ ಬಂದಿದ್ದೇವೆಯೇ ಹೊರತು ಸಮಸ್ಯೆಗಳನ್ನು ಅವರ ಗಮನಕ್ಕೆ ತರುವ ಪ್ರಯತ್ನವನ್ನು ಸಂಘಟಿತವಾಗಿ ಮಾಡಲೇ ಇಲ್ಲಾ. ಆದರೆ ಈಗ ಕೆಲವಾರು ರಂಗಗೆಳೆಯರುಗಳು ಸಂಘಟಿತರಾಗಿ ಉಮಾಶ್ರೀಯವರಿಗೆ ಮನವಿ ಪತ್ರಗಳ ಮೂಲಕ ರಂಗಭೂಮಿಗೆ ಏನಾಗಬೇಕಿದೆ ಹಾಗೂ ಏನಾಗಬಾರದು ಎಂಬುದನ್ನು ಆಗಾಗ ಗಮನಕ್ಕೆ ತರುತ್ತಿದ್ದಾರೆ. ಉಮಾಶ್ರೀಯವರೂ ಸಹ ತಮ್ಮ ಗಮನಕ್ಕೆ ಬಂದ ವಿಷಯಗಳಿಗೆ ತೀವ್ರವಾಗಿ ಹಾಗೂ ಪ್ರಾಮಾಣಿಕವಾಗಿ ಸ್ಪಂದಿಸುತ್ತಿದ್ದಾರೆ. ಇದು ನಿಜಕ್ಕೂ ಸಕಾರಾತ್ಮಕ ಬೆಳವಣಿಗೆಯಾಗಿದೆ. ರಂಗಭೂಮಿಯ ಪರವಾಗಿ ಅಪಾರ ಒಲವುಳ್ಳ ಕಲಾವಿದೆಯೊಬ್ಬರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆಯಾಗಿರುವಾಗ ರಂಗಭೂಮಿಯವರು ಅವರ ಅಧಿಕಾರ ಹಾಗೂ ಪ್ರತಿಭೆಯನ್ನು ರಂಗಭೂಮಿಯ ಹಿತಾಸಕ್ತಿಗೆ ಪೂರಕವಾಗಿ ಉಪಯೋಗಿಸಿಕೊಳ್ಳಬೇಕಾಗಿದೆ. ರಂಗಭೂಮಿ ಚಟುವಟಿಕೆಗಳಿಗೆ ಬೇಕಾದ ಅನುದಾನ ಹಾಗೂ ರಂಗಭೂಮಿಯ ಉತ್ಸವಗಳಿಗೆ ಉಮಾಶ್ರೀಯವರ ಅಧಿಕಾರವನ್ನು ಬಳಸಿಕೊಳ್ಳಲು ಸೀಮಿತವಾಗದೇ ರಂಗಭೂಮಿಯ ಸಮಸ್ಯೆಗಳನ್ನು ಅವರ ಗಮನಕ್ಕೆ ತಂದು ಅವುಗಳನ್ನು ಪರಿಹರಿಸಲು ಕೇಳಿಕೊಳ್ಳಬೇಕಿದೆ.

ಶಿಕ್ಷಣ ಕ್ಷೇತ್ರದಲ್ಲಿ ರಂಗಭೂಮಿಯನ್ನು ಅಳವಡಿಸಬೇಕೆಂಬುದು ರಂಗಕರ್ಮಿಗಳ ಬಹುದಿನದ ಬೇಡಿಕೆಯಾಗಿದೆ. ಸರಕಾರಿ ಶಾಲೆಗಳಿಗೆ ರಂಗಶಿಕ್ಷಕರನ್ನು ನಿಯಮಿಸಬೇಕೆಂಬುದು ಇನ್ನೊಂದು ಬೇಡಿಕೆ ಇದೆ. ರಂಗಭೂಮಿಯ ಭವಿಷ್ಯಕ್ಕಾಗಿ ಹಾಗೂ ಶಾಲಾ ಮಕ್ಕಳ ಗ್ರಹಿಕೆಯ ವೃದ್ದಿಗಾಗಿ ಈ ಎರಡೂ ಬೇಡಿಕೆಗಳನ್ನು ಸರಕಾರ ಈಡೇರಿಸಬೇಕಿದೆ. ರಂಗಕರ್ಮಿಗಳು ಈಗ ಸಂಘಟಿತರಾಗಿ ಉಮಾಶ್ರೀಯವರಿಗೆ ಈ ಪ್ರಪೋಸಲ್‌ಗಳನ್ನು ದಾಖಲೆ ಸಮೇತ ಒದಗಿಸಿ ಅನುಷ್ಟಾನಕ್ಕೆ ಒತ್ತಾಯಿಸಿದರೆ ಒಳಿತಾಗಬಹುದು. ಆಗ ಉಮಾಶ್ರೀಯವರು ಮುಖ್ಯಮಂತ್ರಿಗಳ ಮೇಲೆ  ಒತ್ತಡ ತಂದು ಶಿಕ್ಷಣ ಇಲಾಖೆಯ ಮೂಲಕ ಈ ಎರಡೂ ಅಗತ್ಯ ಬೇಡಿಕೆಗಳನ್ನು ಸಾಕಾರಮಾಡುವ ಸಾಧ್ಯತೆಗಳಿವೆ. ಹೀಗೆ ರಂಗಭೂಮಿಯ ಭವಿಷ್ಯದ ದೃಷ್ಟಿಕೋನವನ್ನು ಇಟ್ಟುಕೊಂಡು ರಂಗಕರ್ಮಿಗಳು ಕ್ರಿಯೇಟಿವ್ ಯೋಜನೆಗಳನ್ನು ಸಚಿವರ ಗಮನಕ್ಕೆ  ತರಬೇಕಿದೆ. ರಂಗಭೂಮಿಯ ಹಿತಾಸಕ್ತಿಗಾಗಿ ರಂಗಭೂಮಿಯವರೇ ಆದ ಸಚಿವರ ಅಧಿಕಾರವನ್ನು ಬಳಸಿಕೊಂಡರೆ ತಪ್ಪೇನೂ ಇಲ್ಲಾ. ರಂಗಭೂಮಿಯವರ ಪ್ರತಿನಿಧಿಯಾದ ಉಮಾಶ್ರೀಯವರ ಮೇಲೆ ಒತ್ತಡ ತಂದು ರಂಗಭೂಮಿಯ ಭವಿಷ್ಯದ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡಿಸಿಕೊಳ್ಳುವುದರಲ್ಲಿ ರಂಗಕರ್ಮಿಗಳ ಜಾಣತನವಿದೆ. ಈಗ ಕ್ರಿಯಾಶೀಲವಾಗಿರುವ ರಂಗಗೆಳೆಯರು ಈ ನಿಟ್ಟಿನಲ್ಲಿ ಆಲೋಚಿಸುವುದುತ್ತಮ.

ಏನೇ ಇರಲಿ. ಸರ್ಕಾರಿ ನೌಕರರಿಗೆ ಮಾರಕವಾಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣವನ್ನು ಮಾಡುವ ಸುತ್ತೋಲೆಯಲ್ಲಿರುವ ಜನವಿರೋಧಿ ಅಂಶಗಳು ರದ್ದಾಗಲೇಬೇಕಿದೆ. ಕೆಸಿಎಸ್ (ನಡತೆ) 1966ರ ಸೇವಾ ನಿಯಮಗಳನ್ನು ಸರಕಾರ ಮತ್ತೆ ಮರುಪರಿಶೀಲಿಸಬೇಕಿದೆ. ಅದರಲ್ಲಿರುವ ವ್ಯಕ್ತಿ ಸ್ವಾತಂತ್ರ್ಯಕ್ಕೆ ದಮನಕಾರಿಯಾಗಿರುವ ನಿಯಮಗಳನ್ನು ಕೈಬಿಡಬೇಕಿದೆ. ಇದಕ್ಕಾಗಿ ಉಮಾಶ್ರೀಯವರು ಅಧಿವೇಶನದಲ್ಲಿ ದ್ವನಿ ಎತ್ತಬೇಕಿದೆ. ಮುಖ್ಯಮಂತ್ರಿಗಳಿಗೆ ಖುದ್ದಾಗಿ ಮನವಿ ಮಾಡಿ ಶೀಘ್ರ ಕ್ರಮಕ್ಕೆ ಒತ್ತಾಯಿಸಬೇಕಿದೆ. ರಂಗಭೂಮಿಯಲ್ಲಿ ತೊಡಗಿಕೊಂಡಿರುವ ಎಲ್ಲರ ವ್ಯಕ್ತಿ ಸ್ವಾತಂತ್ರ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುವಂತಹ ವಾತಾವರಣ ನಿರ್ಮಾಣವಾಗಬೇಕಿದೆ. ಇದಕ್ಕೆ ಆಳುವ ವರ್ಗಗಳು ತಮ್ಮ ಇಚ್ಚಾಶಕ್ತಿ ತೋರಬೇಕಿದೆ. ಮುಖ್ಯ ಮಂತ್ರಿಗಳಿಗೆ ಪತ್ರ ಬರೆದು ಆಗ್ರಹಿಸಿದ ಉಮಾಶ್ರೀಯವರಿಗೆ ರಂಗಭೂಮಿಯ ಕಲಾವಿದರು ಹಾಗೂ ರಂಗಕರ್ಮಿಗಳು ಅಭಿನಂದನೆ ಹೇಳಲೇಬೇಕಿದೆ.  


       -ಶಶಿಕಾಂತ ಯಡಹಳ್ಳಿ






ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ