ಶುಕ್ರವಾರ, ನವೆಂಬರ್ 15, 2019

ಅಕಾಡೆಮಿಯಲ್ಲಿ ಅಧಿಕಾರಿಗಳ ಅನಗತ್ಯ ಹಸ್ತಕ್ಷೇಪ ನಿಲ್ಲಲಿ; ನಿಲ್ಲಿಸಲಾದ ಬೆಳಕಿನ ಪರಿಕರ ಯೋಜನೆ ಜಾರಿಯಾಗಲಿ.


ಬಿಜೆಪಿ ಪಕ್ಷದ ನೇತೃತ್ವದ ಹೊಸ ಸರಕಾರ ಅಸ್ಥಿತ್ವಕ್ಕೆ ಬಂದ ತಕ್ಷಣ ಮಾಡಿದ ಮೊದಲ ಘನಂಧಾರಿ ಕೆಲಸವೇನೆಂದರೆ ಸರಕಾರಿ ಅನುದಾನಿತ ಸಂಘ, ಸಂಸ್ಥೆ ಅಕಾಡೆಮಿ ಪ್ರಾಧಿಕಾರಗಳ ಆಯ್ಕೆಗಳನ್ನೆಲ್ಲಾ ಅಕಾಲಿಕವಾಗಿ ರದ್ದುಮಾಡಿದ್ದು. ಇನ್ನೂ ಯಾವ ಇಲಾಖೆಗಳಿಗೂ ಮಂತ್ರಿಗಿರಿಯನ್ನೇ ಹಂಚಿಕೆ ಮಾಡಿರಲಿಲ್ಲ. ಇನ್ನೂ ಸಚಿವ ಸಂಪುಟವೇ ರಚನೆಯಾಗಿರಲಿಲ್ಲ. ಅಂತಹುದರಲ್ಲಿ ತರಾತುರಿಯಲ್ಲಿ  2019, ಜುಲೈ 31 ರಂದು ಆದೇಶ ಹೊರಡಿಸಿದ ಸರಕಾರ ಅಕಾಡೆಮಿ ಪ್ರಾಧಿಕಾರಗಳ ಅಧ್ಯಕ್ಷರು ಹಾಗೂ ಸದಸ್ಯರುಗಳನ್ನು ಯಾವುದೇ ಕಾರಣವೇ ಇಲ್ಲದೇ ಅವಧಿಪೂರ್ವವಾಗಿ ವಜಾಮಾಡಿತು. ಆದೇಶವೇ ಅಕಾಡೆಮಿಗಳ ಬೈಲಾ ನಡಾವಳಿಗೆ ಹಾಗೂ ಸರಕಾರವೇ ಒಪ್ಪಿಕೊಂಡ ಸಾಂಸ್ಕೃತಿಕ ನೀತಿಗೆ ವಿರುದ್ದವಾಗಿತ್ತು. ಅಸಂವಿಧಾನಿಕ ಆದೇಶದ ವಿರುದ್ಧ ಅಲ್ಲಲ್ಲಿ ಪ್ರತಿಭಟನೆ ಹೋರಾಟಗಳು ನಡೆದವು, ಪತ್ರಿಕೆಗಳಲ್ಲಿ ವರದಿ ಲೇಖನಗಳು ಪ್ರಕಟಗೊಂಡವು, ಸಾಮಾಜಿಕ ಜಾಲತಾಣಗಳಲ್ಲಿ ಅಸಹನೆ ವ್ಯಕ್ತವಾಯಿತು.. ಆದರೂ ಪಂಚೇಂದ್ರಿಯಗಳನ್ನೇ ಕಳೆದುಕೊಂಡ ಸರಕಾರಕ್ಕೆ ಕಲಾವಿದರ ಕೂಗು ಕೇಳಿಸುವಂತೆ ಮಾಡುವವರಾದರೂ ಯಾರು? ಬೆಕ್ಕಿಗೆ ಗಂಟೆ ಕಟ್ಟುವುದಾದರೂ ಹೇಗೆ..?

ಸರಿ.. ವಜಾ ಆದೇಶವಾದ ತಕ್ಷಣವಾದರೂ ಅಕಾಡೆಮಿ ಪ್ರಾಧಿಕಾರಗಳಿಗೆ ಹೊಸದಾಗಿ ಅಧ್ಯಕ್ಷರು ಸದಸ್ಯರ ನೇಮಕಾತಿಯನ್ನಾದರೂ ಸರಕಾರ ಮಾಡಿತಾ..? ಅದಕ್ಕಾಗಿ  ಬರೊಬ್ಬರಿ ಎರಡೂವರೆ ತಿಂಗಳುಗಳ ಕಾಲ ಕಾಯಬೇಕಾಯಿತು. ಅಲ್ಲಿವರೆಗೂ ಎಲ್ಲಾ ಅಕಾಡೆಮಿ ಪ್ರಾಧಿಕಾರಗಳ ಕೆಲಸ ಕಾರ್ಯಗಳು ಕೋಮಾಗೆ ಜಾರಿದ್ದವು. ಅಂತೂ ಇಂತೂ 2019, ಅಕ್ಟೋಬರ್ 15ರಂದು ಅಕಾಡೆಮಿ ಪ್ರಾಧಿಕಾರಗಳಿಗೆ ಹೊಸದಾಗಿ ಅಧ್ಯಕ್ಷರು ಹಾಗೂ ಸದಸ್ಯರ ನೇಮಕಾತಿಯನ್ನು ಮಾಡಿ ಅಧಿಸೂಚನೆ ಹೊರಡಿಸಿತು. ಸಂಘಪರಿವಾರದ ಆಶಯಗಳಿಗೆ ಬದ್ದರಾಗಿರುವ ಬಹುತೇಕರ ಹೆಸರುಗಳೇ ಪಟ್ಟಿಯ ತುಂಬ ರಾರಾಜಿಸುತ್ತಿತ್ತು. ಬೇರೆ ದಾರಿಯಿಲ್ಲದೇ ಅಕಾಡೆಮಿ ಪ್ರಾಧಿಕಾರಗಳಿಗೆ ಹೊಸದಾಗಿ ನೇಮಕವಾದವರನ್ನು  ಸ್ವಾಗತಿಸಿದ್ದೂ ಆಯಿತು. ಅಕ್ಟೋಬರ್ 18ರಂದು ಹೊಸದಾಗಿ ಆಯ್ಕೆಮಾಡಲಾದ ಅಕಾಡೆಮಿ ಪ್ರಾಧಿಕಾರಗಳ ಅಧ್ಯಕ್ಷರು ಹಾಗೂ ಸದಸ್ಯರುಗಳಿಗೆ ಅಭಿನಂದನೆ ಸಲ್ಲಿಸಲು ಕರೆದ ಸಭೆಯಲ್ಲಿ ಸಂಸ್ಕೃತಿ ಇಲಾಖೆಯ ಸಚಿವರಾದ ಸಿ.ಟಿ.ರವಿಯವರು ಮನೆಹಾಳರು.. ಎಂದು ಸಾಹಿತಿ ಕಲಾವಿದರುಗಳಿಗೆ ಅವಮಾನಕಾರಿಯಾಗಿ ಮಾತಾಡಿ  ಪ್ರಜ್ಞಾವಂತರ ಆಕ್ರೋಶಕ್ಕೂ ಈಡಾಗಿದ್ದೂ ಆಯಿತು.
  
ಅಕಾಡೆಮಿಯ ಅಧ್ಯಕ್ಷ ಮಾನ್ಯ ಭೀಮಸೇನ್ ರವರು
ಕರ್ನಾಟಕ ನಾಟಕ ಅಕಾಡೆಮಿಯ ಮೊದಲ ಸರ್ವಸದಸ್ಯರ ಸಭೆ ನಾಟಕ ಅಕಾಡೆಮಿಯ ನೂತನ ಅಧ್ಯಕ್ಷರಾದ ಮಾನ್ಯ ಭೀಮಸೇನ್ ರವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 25ರಂದು ನಡೆಯಿತು. ಬೈಲಾ ಪ್ರಕಾರ ಹದಿನೈದು ಜನ ಸದಸ್ಯರನ್ನು ಆಯ್ಕೆ ಮಾಡಬೇಕಾಗಿದ್ದ ಸರಕಾರ ಕೇವಲ ಹದಿಮೂರು ಜನರನ್ನು ಆಯ್ಕೆ ಮಾಡಿದ್ದು, ಅಪೂರ್ಣ ಸರ್ವಸದಸ್ಯರ ಸಭೆ ಇದಾಗಿದ್ದರಿಂದ ಇನ್ನೂ ಮೂರು ಜನ ಕಲಾವಿದರುಗಳನ್ನು ಕೋಆಪ್ಟ್ ಮಾಡಬಹುದಾಗಿದ್ದುದನ್ನು ಮುಂದೂಡಲಾಯಿತು.  ಹಿಂದಿನ ಅವಧಿಯಲ್ಲಿ ಜಾರಿಮಾಡಲಾಗಿದ್ದ ಯೋಜನೆಗಳನ್ನು ಮುಂದುವರೆಸುವ ನಿರ್ಧಾರವನ್ನು ಸರ್ವಸದಸ್ಯರ ಸಭೆ ತೆಗೆದುಕೊಂಡಿದ್ದು ಶ್ಲಾಘನೀಯ. ಇದಕ್ಕಾಗಿ ನಾಟಕ ಅಕಾಡೆಮಿಯ ಅಧ್ಯಕ್ಷರು ಹಾಗೂ ಸದಸ್ಯರುಗಳು ಅಭಿನಂದನೀಯ.

ಆದರೆ.. ಎರಡು ಪ್ರಮುಖವಾದ ಯೋಜನೆಗಳಿಗೆ ಮಾತ್ರ ತಡೆಯೊಡ್ಡಲಾಗಿದ್ದು ಮಾತ್ರ ಪ್ರಶ್ನಾರ್ಹವಾಗಿದೆ. ಅದರಲ್ಲಿ ಮೊದಲನೆಯದು, ರಂಗಚಟುವಟಿಕೆಗಳಲ್ಲಿ ಕಾರ್ಯನಿರತವಾಗಿರುವ ಖಾಸಗಿ ರಂಗಮಂದಿರಗಳಿಗೆ ಬೆಳಕಿನ ಪರಿಕರಗಳನ್ನು ಅಕಾಡೆಮಿ ಒದಗಿಸುವ ಯೋಜನೆ. ಆದರೆ ಅದರ ಮುಂದುವರಿಕೆಗೆ ಅಕಾಡೆಮಿಯ ರೆಜಿಸ್ಟ್ರಾರಮ್ಮನವರೇ ಅಡ್ಡಗಾಲು ಹಾಕಿ ನಿಲ್ಲಿಸಿದ್ದು ಅಕ್ಷಮ್ಯ. ನಿಕಟಪೂರ್ವ ಕಾಲಾವಧಿಯ ಅಕಾಡೆಮಿಯ ಸರ್ವಸದಸ್ಯರ ಸಭೆಯಲ್ಲಿ ಬೆಳಕಿನ ಪರಿಕರಗಳನ್ನು ಅರ್ಹ ರಂಗಮಂದಿರಗಳಿಗೆ ಕೊಡುವ ನಿರ್ಧಾರ ಕೈಗೊಂಡು ಅದಕ್ಕಾಗಿ 10 ಲಕ್ಷ ರೂಪಾಯಿಗಳನ್ನು ತೆಗೆದಿರಿಸಲಾಗಿತ್ತು. ಕರ್ನಾಟಕ ಅಷ್ಟೇ ಯಾಕೆ ಕೇರಳದ ಕಾಸರಗೋಡಿನವರೆಗೂ ಹೋಗಿ ಅನೇಕ ರಂಗಮಂದಿರಗಳನ್ನು ಖುದ್ದಾಗಿ ನೋಡಿ ಬಂದ ನಾಟಕ ಅಕಾಡೆಮಿಯ ಸದಸ್ಯರ ತಂಡವು 12 ಅರ್ಹ ರಂಗಮಂದಿರಗಳನ್ನು ಗುರುತಿಸಿ ವರದಿ ಕೊಟ್ಟಿತ್ತು. ವರ್ಷ ಐದು ರಂಗಮಂದಿರಗಳಿಗೆ ಹಾಗೂ ಮುಂದಿನ ವರ್ಷ ಇನ್ನು ಐದು ರಂಗಮಂದಿರಗಳಿಗೆ ಲೈಟ್ಸ್ ಇಕ್ಯುಪ್ಮೆಂಟ್ಗಳನ್ನು ಕೊಡುವುದಾಗಿ ನಿರ್ಧರಿಸಿ ಕಾರ್ಯಸೂಚಿಯಲ್ಲಿ ಸೇರಿಸಲಾಗಿತ್ತು. ಲಕ್ಷ ರೂಪಾಯಿಯ ಮೇಲಿನ ಖರ್ಚುಗಳು ಆಗಿದ್ದರಿಂದ ಈಟೆಂಡರ್ ಕರೆಯುವ ಪ್ರಯತ್ನವೂ ಜಾರಿಯಲ್ಲಿತ್ತು. ಆದರೆ.. ಅಷ್ಟರಲ್ಲಿ ಅಕಾಡೆಮಿಗಳ ಅಧಿಕಾರಾವಧಿಯನ್ನೇ ಸರಕಾರ ವಜಾಗೊಳಿಸಿತು.

ಅಕಾಡೆಮಿಯ ರೆಜಿಸ್ಟ್ರಾರ್ ಶೈಲಜಾರವರು
 ಅಕ್ಟೋಬರ್ 25ರಂದು ನಡೆದ ಸರ್ವಸದಸ್ಯರ ಸಭೆಯಲ್ಲಿ ಹಿಂದಿನ ಎಲ್ಲಾ ಯೋಜನೆಗಳನ್ನು ಮುಂದುವರೆಸಲು ನಿರ್ಧರಿಸಿ ಯೋಜನೆಯನ್ನು ಮಾತ್ರ ನಿಲ್ಲಿಸಲಾಯಿತು. ಇಲಾಖೆಯ ನಿರ್ದೇಶಕರು ಯೋಜನೆಗೆ ಅನುಮತಿ ನೀಡಿಲ್ಲವಾದ್ದರಿಂದ ಇದನ್ನು ಮುಂದುವರೆಸಲು ಸಾಧ್ಯವಿಲ್ಲ ಎಂದು ಅಕಾಡೆಮಿಯ ರೆಜಿಸ್ಟ್ರಾರ್ ಶೈಲಜಾರವರು ಹಾಲಿ ಸರ್ವಸದಸ್ಯರ ಸಭೆಯ ದಿಕ್ಕು ತಪ್ಪಿಸಿದರು. ಇದಕ್ಕೆ ಪಕ್ಕವಾದ್ಯ ನುಡಿಸಿದ ಜಂಟಿನಿರ್ದೇಶಕರಾದ  ಬಲವಂತರಾವ್ ಪಾಟೀಲರು ಹೌದೌದು, ಇದು ಅಕಾಡೆಮಿ ಮಾಡುವ ಕೆಲಸವಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಡುವ ಕೆಲಸವೆಂದು ತಿಪ್ಪೆ ಸಾರಿಸಿ ರಂಗೋಲಿ ಹಾಕಿದರು. ಇಲಾಖೆಯ ನಿರ್ದೇಶಕರು ಯಾವಾಗ ಎಲ್ಲಿ ಯೋಜನೆಗೆ ಅನುಮತಿ ತಡೆಹಿಡಿದಿದ್ದಾರೆ, ಕುರಿತು ದಾಖಲೆ ಎಲ್ಲಿವೆ? ಎಂದು ಕೇಳುವ ಯೋಚನೆಯೂ ಅಕಾಡೆಮಿ ಅಧ್ಯಕ್ಷರಿಗಾಗಲೀ ಇಲ್ಲವೇ ಸದಸ್ಯರುಗಳಿಗಾಗಲೀ ಬರಲೇ ಇಲ್ಲ. ಅಧಿಕಾರಿಗಳು ಹೇಳಿದ್ದನ್ನು ಮಹಾಪ್ರಸಾದವೆಂದುಕೊಂಡು ಇಡೀ ಯೋಜನೆಯನ್ನೇ ರದ್ದು ಮಾಡುವ ಆಘಾತಕಾರಿ  ನಿರ್ಣಯವನ್ನು  ಸಭೆ ತೆಗೆದುಕೊಳ್ಳಲಾಯಿತು. ಯೋಜನೆಯ ಮಹತ್ವ ಏನು? ಇದರಿಂದಾಗಿ ರಂಗಮಂದಿರಗಳಿಗೆ ಎಷ್ಟು ಪ್ರಯೋಜನವಾಗುತ್ತದೆ. ರಂಗಸಂಘಟಕರ ಹಣ ಶ್ರಮ ಎಷ್ಟು ಉಳಿತಾಯವಾಗುತ್ತದೆ. ರಂಗಮಂದಿರವೊಂದು ದ್ವನಿ ಬೆಳಕಿನ ಸಿದ್ದ ವ್ಯವಸ್ಥೆಯನ್ನು ಹೊಂದಿದ್ದರೆ ಅಲ್ಲಿ ಎಷ್ಟೊಂದು ರಂಗಚಟುವಟಿಕೆಗಳು ನಿರಂತರವಾಗಿ ಗರಿಗೆದರುತ್ತವೆ.. ಎಂಬುದರ ಬಗ್ಗೆ ಒಂದಿಷ್ಟೂ ತಿಳುವಳಿಕೆ ಇಲ್ಲದ ಸರಕಾರಿ ಅಧಿಕಾರಿಗಳು ಒಂದು ಅತ್ಯುತ್ತಮ ಯೋಜನೆಗೆ ಕಲ್ಲುಹಾಕಿದರು, ಅಡೆತಡೆಗಳ ಮೀರಿ ಕಾರ್ಯಸಾಧುವಾದ ಪ್ರಯೋಜನಕಾರಿ ಯೋಜನೆಯೊಂದನ್ನು ನಿಲ್ಲಿಸಲು ಒಪ್ಪಿಕೊಂಡ ನಾಟಕ ಅಕಾಡೆಮಿಯ ಅಧ್ಯಕ್ಷರು ಹಾಗೂ ಸದಸ್ಯರುಗಳು ರಂಗಮಂದಿರಗಳ ಬೆಳಕನ್ನೇ ಕತ್ತಲಾಗಿಸಿ ಕಲ್ಲಾಗಿ ಕು:ಳಿತರು.

ಇಷ್ಟಕ್ಕೂ ಜೆಡಿ ಪಾಟೀಲರು ಹೇಳಿದಂತೆ ರಂಗಮಂದಿರಗಳಿಗೆ ಬೆಳಕಿನ ಪರಿಕರಗಳನ್ನು ಇಲಾಖೆಯೇ ಕೊಡಮಾಡುವುದೇ ಆಗಿದ್ದರೆ ಇಲ್ಲಿವರೆಗೂ ಅದೆಷ್ಟು ರಂಗಮಂದಿರಗಳಿಗೆ ಹೋಗಿ ಇಲಾಖೆಯ ಅಧಿಕಾರಿಗಳು ಅಲ್ಲಿಯ ಅಗತ್ಯತೆಗಳ ಕುರಿತು ಅಧ್ಯಯನ ಮಾಡಿಕೊಂಡು ಬಂದಿದ್ದಾರೆ.? ಅದೆಷ್ಟು ರಂಗಮಂದಿರಗಳಿಗೆ ಅಗತ್ಯ ಪರಿಕರಗಳನ್ನು ಒದಗಿಸಿ ಅಳವಡಿಸಿದ್ದಾರೆ? ಅದ್ಯಾವ ರಂಗಮಂದಿರ ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಬೆಳಗುತ್ತಿದೆ? ಯಾವುದೂ ಇಲ್ಲ. ಯಾಕೆಂದರೆ ಇಲಾಖೆ ಪರಿಕರಗಳನ್ನು ಕೊಡುವುದಿಲ್ಲಾ.. ಕೊಟ್ಟರೂ ಅರ್ಹರಿಗೆ ಅದು ತಲುಪುವುದೂ ಇಲ್ಲಾ. ಈಗಾಗಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿಯಂತ್ರಣದಲ್ಲಿರುವ ಸರಕಾರಿ ರಂಗಮಂದಿರಗಳಲ್ಲಿಯೇ ನೆಟ್ಟಗೆ ಬೆಳಕು ಮತ್ತು ದ್ವನಿ ವ್ಯವಸ್ಥೆಗಳಿಲ್ಲ. ಕಲಾಗ್ರಾಮದಲ್ಲಿರುವ ರಂಗಮಂದಿರ ಬೆಂಕಿಗಾಹುತಿಯಾಗಿ ಒಂದೂವರೆ ವರ್ಷಕಳೆದರೂ ಅದನ್ನು ಸರಿಪಡಿಸಿ ಮತ್ತೆ ನಾಟಕ ಪ್ರದರ್ಶನಗಳಿಗೆ ಸಿದ್ದಗೊಳಿಸುವ ಯೋಗ್ಯತೆಯೂ ಅಧಿಕಾರಸ್ತರಿಗಿಲ್ಲ


ಬೆಳಕಿನ ಪರಿಕರಗಳಿಗೆ ಆಯ್ಕೆ ಮಾಡಲಾದ  ಐದೂ ರಂಗಮಂದಿರಗಳು ಕರ್ನಾಟಕದಲ್ಲಿ ರಂಗಚಟುವಟಿಕೆಗಳಿಗೆ ಮುಂಚೂಣಿಯಲ್ಲಿರುವಂತಹವು. ಬೆಂಗಳೂರನಲ್ಲಿ ಎ.ಎಸ್.ಮೂರ್ತಿಯವರಿಂದ ಸ್ಥಾಪಿತ ಅಭಿನಯ ತರಂಗವು ಕಳೆದ ಮೂರೂವರೆ ದಶಕಗಳಿಂದ ರಂಗಭೂಮಿ ಕುರಿತ ತರಬೇತಿ, ಪ್ರದರ್ಶನಗಳನ್ನು ಮಾಡುತ್ತಲೇ ಬಂದಿದೆ. ಸಾವಿರಾರು ಯುವಕ ಯುವತಿಯರು ಈ ರಂಗಶಾಲೆಯಲ್ಲಿ ಕಲಿತು ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದಾರೆ. ನಿರಂತರವಾಗಿ ನಾಟಕ ಪ್ರದರ್ಶನಗಳು ಅಲ್ಲಿ ಆಗುತ್ತಲೇ ಇರುತ್ತವೆ. ಆದರೆ ಅಲ್ಲಿ ಇರುವುದು ಎರಡು ಹಾಲೋಜನ್ ಲೈಟ್ಸ್ ಗಳು ಮಾತ್ರ. ಪ್ರತಿಸಲ ನಾಟಕಕ್ಕೆ ಅಗತ್ಯವಾದ ಲೈಟ್ಸ್ ಗಳನ್ನು ಬಾಡಿಗೆಗೆ ತರಲಾಗುತ್ತದೆ. ಇಂತಹ ಆಪ್ತ ರಂಗಮಂದಿರಕ್ಕೆ ನಾಟಕ ಅಕಾಡೆಮಿ ಬೆಳಕಿನ ಪರಿಕರಗಳನ್ನು ಕೊಟ್ಟರೆ ಒಳಿತಲ್ಲವೇ. ಅದೇ ರೀತಿ ಗ್ರಾಮೀಣ ಪ್ರದೇಶದಲ್ಲಿ ದೊಡ್ಡ ರಂಗಮಂದಿರವನ್ನು ಕಟ್ಟಿ ನಾಟಕ ಚಟುವಟಿಕೆಯನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿರುವ ಹೊಸಕೋಟೆಯ ‘ಜನಪದರು’, ಕೋಲಾರದ ‘ಆದಿಮ’, ರಕ್ಷಿದಿಯ ‘ಜೈ ಕರ್ನಾಟಕ ಸಂಘ’ ಹಾಗೂ ಸೂಳ್ಯದ  ‘ರಂಗಮನೆ’.. ಈ ಐದು ರಂಗಮಂದಿರಗಳ ಅಗತ್ಯಕ್ಕೆ ಪೂರಕವಾಗಿ ಬೆಳಕಿನ ಪರಿಕರಗಳನ್ನು ವದಗಿಸುವ ಸ್ತುತ್ಯಾರ್ಹ ಕಾಯಕವನ್ನು ನಾಟಕ ಅಕಾಡೆಮಿ ಹಮ್ಮಿಕೊಂಡಿತ್ತು. ಇಲ್ಲಿವರೆಗೂ ಯಾವುದೇ ಅಕಾಡೆಮಿಯಾಗಲಿ ಇಲ್ಲವೇ ಸಂಸ್ಕೃತಿ ಇಲಾಖೆಯಾಗಲಿ ಮಾಡದ ಕೆಲಸವನ್ನು ಮಾಡವ ಯೋಜನೆ ರೂಪಿಸಲಾಗಿತ್ತು. ಈ ಯೋಜನೆ ಸರ್ವ ಸದಸ್ಯರ ಸಭೆಯಲ್ಲಿ  ಅನುಮತಿ ಪಡೆದು 2019 ಮಾರ್ಚ್ 7 ರಂದು ನಡೆದ ಉಪಸಮಿತಿಯ ಸಭೆಯಲ್ಲಿ ಕಾರ್ಯಯೋಜನೆ ಅಧೀಕೃತವಾಗಿ ರೂಪಗೊಂಡಿತು. ಈ ಸಭೆಯ ನಡಾವಳಿಗಳಿಗೆ  ನಾಟಕ ಅಕಾಡೆಮಿಯ ರೆಜಿಸ್ಟ್ರಾರ್ ಸಹ ಸಹಿ ಹಾಕಿ ಒಪ್ಪಿದ್ದರು. ಆದರೆ.. ಆಗ ಇಲ್ಲದ ವಿರೋಧವನ್ನು ಈಗ ಯಾಕೆ ಈ ಅಧಿಕಾರಮ್ಮ ಮಾಡುತ್ತಿದ್ದಾರೆ..? ಆಗ ಇಲಾಖೆಯ ನಿರ್ದೇಶಕಿಯಾಗಿದ್ದ ಮಾನ್ಯ ಜಾನಕಿಯವರು ಈ ಯೋಜನೆಯ ವಿರುದ್ಧ ಚಕಾರ ಎತ್ತಿರಲಿಲ್ಲ ಹಾಗೂ ಎತ್ತುವ ಹಾಗೂ ಇರಲಿಲ್ಲ. ಈಗ ವರ್ಗವಾಗಿ ಹೋದ ಜಾನಕಿಯವರ ಹೆಸರನ್ನು ಬಳಸಿಕೊಂಡು ಶೈಲಜಮ್ಮನವರು ಇಡೀ ಬೆಳಕಿನ ಯೋಜನೆಯನ್ನು  ಕತ್ತಲಿಗೆ ದೂಡುವ ಪ್ರಯತ್ನವನ್ನು ಮಾಡುತ್ತಿರುವುದಾದರೂ ಯಾಕೆ? ರೆಜಿಸ್ಟ್ರಾರ್ ರವರಿಗೆ ಜಂಟಿ ನಿರ್ದೇಶಕರೂ ಸಹ ದ್ವನಿಗೂಡಿಸುತ್ತಿರುವುದರ ಹಿಂದಿರುವ ತಂತ್ರಗಾರಿಕೆಯಾದರೂ ಯಾವುದು..? ಯಾಕೆ ಈ ಯೋಜನೆಗೆ ಮಾತ್ರ ಈ ಅಧಿಕಾರಿಗಳು ತಮ್ಮ ವಿರೋಧ ವ್ಯಕ್ತಪಡಿಸುತ್ತಿದ್ದಾರೆ..?  ಯಾಕೆ ಅಧಿಕಾರಿಗಳು ನಾಟಕ ಅಕಾಡೆಮಿಯ ಬೆಳಕಿನ ಯೋಜನೆಯನ್ನು ಕತ್ತಲೆಗೆ ತಳ್ಳಿದರು? ಯಾಕೆ ಅಕಾಡೆಮಿಯಿಂದ ಬೇಡಾ ಇಲಾಖೆಯಿಂದಲೇ ಯೋಜನೆ ಜಾರಿಗೊಳಿಸಬಹುದು ಎಂದು ಹೇಳಿದರು

 ಇದಕ್ಕೆಲ್ಲಾ ಕಾರಣವೂ ಇದೆ. ಅದೇನೆಂದರೆ ಕಮೀಷನ್. ಸರಕಾರಿ ಅಧಿಕಾರಿಗಳು ಯಾವುದೇ ಯೋಜನೆಯನ್ನು ಜಾರಿಗೆ ಗೊಳಿಸಲಿ ಇಲ್ಲವೇ ನಿಲ್ಲಿಸಲಿ ಅದಕ್ಕೆಲ್ಲಾ ಮೂಲ ಕಾರಣ ಅದರಲ್ಲಿ ಅವರ ಲಾಭ ಎಷ್ಟು ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಬೆಳಕಿನ ಯೋಜನೆಯನ್ನು ನಾಟಕ ಅಕಾಡೆಮಿಯಿಂದ ಜಾರಿಗೆ ಗೊಳಿಸಿದರೆ ಅದಕ್ಕೆ -ಟೆಂಡರ್ ಕರೆಯಬೇಕು ಹಾಗೂ ಅದು ಅಕಾಡೆಮಿಯ ಅಧ್ಯಕ್ಷರು ಹಾಗೂ ಸದಸ್ಯರುಗಳ ಕಣ್ಗಾವಲಿನಲ್ಲಿ ಯೋಜನೆ ಕಾರ್ಯರೂಪಕ್ಕೆ ಬರಬೇಕಾಗುತ್ತದೆ. ಅತ್ತ ಪರಿಕರಗಳ ಸಪ್ಲೈಯರಗಳಿಂದಲೂ ಅಂದುಕೊಂಡ ಪರ್ಸಂಟೇಸ್ ಸಿಗುವುದು ಕಷ್ಟ ಹಾಗೂ ಇತ್ತ ಫಲಾನುಭವಿಗಳಾಗುವ ರಂಗಮಂದಿರಗಳಿಂದಲೂ ಸಹ ಕಮೀಷನ್ ದೊರೆಯುವುದು ಅಸಾಧ್ಯ. ಹೀಗಾಗಿ ಅಧಿಕಾರಸ್ತರಿಗೆ ಲಾಭವೇ ಇಲ್ಲದ ಯೋಜನೆಯನ್ನೇ ನಿಲ್ಲಿಸಿ ಬಿಡುವ ಶಡ್ಯಂತ್ರವೊಂದು ಬಹಳಾ ನಯನಾಜೂಕಾಗಿ ಮಾಡಲಾಯಿತು. ನಿಕಟಪೂರ್ವ ಅಧ್ಯಕ್ಷರಾಗಿದ್ದ ಜೆ.ಲೊಕೇಶರವರು ಅಧಿಕಾರಸ್ತರಿಗೆ ಜಗ್ಗುತ್ತಿರಲಿಲ್ಲ. ಕಮಿಷನ್ ಪರ್ಸಂಟೇಜ್ಗಳಿಗೆ ಆಸೆಪಡುತ್ತಿರಲಿಲ್ಲ. ಹೀಗಾಗಿ ಅವರು ಇದ್ದಾಗ ಬಾಲಬಿಚ್ಚದ ಅಧಿಕಾರಿಗಳು ಈಗ ತಾನೆ ಹೊಸದಾಗಿ ಬಂದ ಅಧ್ಯಕ್ಷರು ಹಾಗೂ ಸದಸ್ಯರುಗಳಿಗೆ ಇಲ್ಲಸಲ್ಲದ್ದನ್ನು ಹೇಳಿ ಇಡೀ ಯೋಜನೆ ನಿಲ್ಲಿಸುವಂತೆ ನೋಡಿಕೊಂಡರು. ಯೋಜನೆಗಾಗಿ ಮೀಸಲಿಟ್ಟಿದ್ದ ಹಣವನ್ನು ನಾಟಕೋತ್ಸವಗಳಿಗೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭಗಳಿಗೆ ಡೈವರ್ಟ ಮಾಡಲಾಯ್ತು.


ಯಾವಾಗ ಉಪಸಮಿತಿಯಲ್ಲಿ  ಈ ಬೆಳಕಿನ ಯೋಜನೆ ಕಾರ್ಯರೂಪಕ್ಕೆ ತರಲು ನಿರ್ಧಾರ ಮಾಡಲಾಯಿತೋ ಆಗಲೇ ಆಯ್ಕೆಯಾದ ಐದೂ ರಂಗಮಂದಿರದ ರೂವಾರಿಗಳಿಗೆ ತಿಳಿಸಲಾಗಿತ್ತು. ಅವರೆಲ್ಲಾ ಅತೀವ ಸಂತಸ ವ್ಯಕ್ತಪಡಿಸಿದ್ದರು. ರಂಗಚಟುವಟಿಕೆಗಳನ್ನು ಇನ್ನೂ ಹೆಚ್ಚಾಗಿ ಮಾಡುವುದಾಗಿ ಹೇಳಿದ್ದರು. ಆದರೆ.. ಈಗ  ಯೋಜನೆ ರದ್ದಾಗಿದೆ ಎಂದು ಅವರಿಗೆ ತಿಳಿದರೆ ಆಗುವ ನಿರಾಸೆ ಅಷ್ಟಿಷ್ಟಲ್ಲ. ಈ ಯೋಜನೆಯನ್ನು ವಿನಾಕಾರಣ ನಿಲ್ಲಿಸಿದ ಅಧಿಕಾರಿಗಳಿಗೆ ಇದರಿಂದ ಏನೂ ಆಗದೇ ಇರಬಹುದು. ಆದರೆ ಪರಿಕರ ಕೊಡುತ್ತೇನೆಂದು ಭರವಸೆ ಕೊಟ್ಟು ಕೊಡದೇ ಹೋದರೆ ಮರ್ಯಾದೆ ಹೋಗುವುದು ನಾಟಕ ಅಕಾಡೆಮಿಯದು. ನಾಟಕ ಅಕಾಡೆಮಿಯ ಅಧ್ಯಕ್ಷರು ಹಾಗೂ ಸದಸ್ಯರುಗಳದ್ದು. ನಿಜಕ್ಕೂ ಇದು ನಾಚಿಗೆಗೇಡಿನ ಪ್ರಸಂಗ, ಇಂತಹ ಮುಜುಗರದ ಸನ್ನಿವೇಶಕ್ಕೆ ಕಾರಣಕರ್ತರಾದ ಅಧಿಕಾರಿಗಳು ಹಾಗೂ ಈ ಅಧಿಕಾರಿಗಳು ಹೇಳಿದ್ದನ್ನು ಕುರುಡಾಗಿ ನಂಬಿ ಯೋಜನೆಯನ್ನು ನಿಲ್ಲಿಸಿದ ನಾಟಕ ಅಕಾಡೆಮಿಯ ಹಾಲಿ ಅಧ್ಯಕ್ಷರು ಮತ್ತು ಸದಸ್ಯರುಗಳ ರಂಗವಿರೋಧಿ ನಡೆ ಅಕ್ಷಮ್ಯ.
 
ಇಷ್ಟಕ್ಕೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ರಂಗಮಂದಿರಗಳಿಗೆ ಬೆಳಕಿನ ಪರಿಕರಗಳನ್ನು ಕೊಡುವುದೇ ಆದರೆ ಕೊಡಲಿ ಬಿಡಿ ಯಾರು ಬೇಡವೆಂದವರು. ಕರ್ನಾಟಕದಾದ್ಯಂತ ಇರುವ ಅನೇಕ ರಂಗಮಂದಿರಗಳು ಸೂಕ್ತ ಬೆಳಕು ಹಾಗೂ ದ್ವನಿ ಪರಿಕರಗಳಿಲ್ಲದೇ ಬಾಡಿಗೆಗೆ ತಂದು ನಾಟಕ ಮಾಡುವ ಪರಿಸ್ಥಿತಿಯಲ್ಲಿವೆ. ಅಂತವುಗಳಿಗೆ ಪರಿಕರಗಳನ್ನು ಕೊಟ್ಟರೆ ರಂಗಚಟುವಟಿಕೆಗಳು ಹೆಚ್ಚಾಗುತ್ತವೆ. ಅಕಾಡೆಮಿಯೂ ಸಹ ತಮ್ಮ ಬಜೆಟ್ಟಿನಲ್ಲಿ ಆಯ್ದ ಅರ್ಹ ರಂಗಮಂದಿರಗಳಿಗೆ ಪರಿಕರಗಳನ್ನು ಕೊಟ್ಟರೆ ತಪ್ಪೇನು? ನಾಟಕ ಅಕಾಡೆಮಿಗಳಿಗೆ ಇಂತಿಷ್ಟೇ ಹೀಗೀಗೆ ಕೆಲಸ ಮಾಡಬೇಕು ಎಂದು ನಿರ್ದೇಶಿಸುವ ಹಕ್ಕನ್ನು ಅಧಿಕಾರಿಗಳಿಗೆ ಕೊಟ್ಟವರಾದರೂ ಯಾರು? ಅಕಾಡೆಮಿಗಳಿಗೆ ಸರ್ವಸದಸ್ಯರ ಸಭೆಯ ನಿರ್ಣಯವೇ ಅಂತಿಮ. ಅಲ್ಲಿ ಏನು ಬಹುಮತದ ತೀರ್ಮಾನವಾಗುತ್ತದೆಯೋ ಅದನ್ನು ಅನುಷ್ಟಾನಕ್ಕೆ ತರಲು ನೆರವಾಗುವುದು ಮಾತ್ರ ಅಧಿಕಾರಿಗಳ ಕೆಲಸ. ಹೊಲಕ್ಕೆ ಬೇಲಿಯ ಹಾಗೆ ಅಕಾಡೆಮಿಗಳಿಗೆ ಅಧಿಕಾರಿಗಳು ಇದ್ದು ಕಾಯಬೇಕೆ ಹೊರತು ಬೇಲಿಯೇ ಎದ್ದು ಹೊಲ ಮೇಯಬಾರದು. ಹಾಗೆ ಮೇಯಲು ಅಕಾಡೆಮಿಯ ಅಧ್ಯಕ್ಷರು ಹಾಗೂ ಸದಸ್ಯರುಗಳ ಅಧಿಕಾರಿಗಳಿಗೆ ಅವಕಾಶ ಕೊಡಬಾರದು.

ಇಲ್ಲಿ ಇನ್ನೊಂದು ವಿಷಯ ನೆನಪಿರಲಿ. ಯಾವುದೇ ಸರಕಾರಿ ಯೋಜನೆ ಇರಲಿ.. ಅದರಲ್ಲಿ ಒಬ್ಬ ಇಲ್ಲವೇ ಇಬ್ಬರು ಅಧಿಕಾರಿಗಳು ಮಾತ್ರ ಫಲಾನುಭವಿಗಳಾಗಿರದೇ ಅಧಿಕಾರದ ಶ್ರೇಣಿಕೃತ ವ್ಯವಸ್ಥೆಯಲ್ಲಿ ಇರುವವರೆಲ್ಲರೂ ಅವರವರ ಸ್ಥಳಮಹಾತ್ಮೆಗೆ ಅನುಗುಣವಾಗಿ ಪ್ರಸಾದ ಸ್ವೀಕರಿಸಲು ಅರ್ಹರಾಗಿರುತ್ತಾರೆ. ಹೀಗಾಗಿ ಒಂದು ಯೋಜನೆಯಲ್ಲಿ ಲಾಭ ಇಲ್ಲವೆಂದಾದರೆ ಇಡೀ ಶ್ರೇಣಿಕೃತ ವ್ಯವಸ್ಥೆಯೆ ಅದನ್ನು ಜಾರಿಗೆ ತರದಂತೆ ನಿಲ್ಲಿಸಲು ಪ್ರಯತ್ನಿಸುತ್ತದೆ ಹಾಗೂ ಬಹುತೇಕ ಸಲ ಯಶಸ್ವಿಯೂ ಆಗುತ್ತದೆ. ಬೆಳಕಿನ ಪರಿಕರ ಯೋಜನೆಯೂ ರದ್ದಾಗಿದ್ದು ಅಧಿಕಾರಸ್ತರ ಕರಾಮತ್ತಿನಿಂದ. ಇವರ ಹಿಡನ್ ಅಜೆಂಡಾಗಳು ಗೊತ್ತಿಲ್ಲದ ಅಕಾಡೆಮಿಯ ಅಧ್ಯಕ್ಷರು ಹಾಗೂ ಸದಸ್ಯರುಗಳು ತಲೆ ಅಲ್ಲಾಡಿಸುತ್ತಾರೆ ಹಾಗೂ ರಂಗದ್ರೋಹಕ್ಕೆ ಪರೋಕ್ಷವಾಗಿ ಕಾರಣೀಕರ್ತರಾಗುತ್ತಾರೆ.

ಮೊದಲು ನಾಟಕ ಅಕಾಡೆಮಿಯ ಅಧ್ಯಕ್ಷರು ಹಾಗೂ ಸದಸ್ಯರುಗಳು ಅಧಿಕಾರಿಗಳ ಮಾತನ್ನು ಪರಿಶೀಲಿಸದೇ ನಂಬಲೇಬಾರದು. ಯಾವುದೇ ಕಾರಣಕ್ಕೂ ಅಕಾಡೆಮಿಯ ಜುಟ್ಟು ಜನಿವಾರಗಳನ್ನು ಅಧಿಕಾರಿಗಳ ಕೈಗೆ ಕೊಡಲೇಬಾರದು. ಸರ್ವಸದಸ್ಯರು ನಿರ್ಣಯಿಸಿದ ಯಾವುದೇ ಕಾರ್ಯಯೋಜನೆಯಲ್ಲಿ ಮೂಗುತೂರಿಸುವ ಅಧಿಕಾರ ರೆಜಿಸ್ಟ್ರಾರ್ ಅವರದ್ದಲ್ಲ. ಸರಕಾರ ನಾಟಕ ಅಕಾಡೆಮಿಗೆ ಸಂಸ್ಕೃತಿ ಇಲಾಖೆಯ ಮೂಲಕ ಕೊಡಮಾಡುವ ವಾರ್ಷಿಕ ಅನುದಾನ ಅಂದುಕೊಂಡ ಕಾರ್ಯಕ್ಕೆ ಸರಿಯಾಗಿ  ಬಳಕೆಯಾಗುತ್ತದೋ ಇಲ್ಲವೋ ಎಂದು ನೋಡಿಕೊಳ್ಳುವುದಷ್ಟೇ ಅಧಿಕಾರಿಗಳ ಕೆಲಸ. ಆದರೆ.. ಬಹುತೇಕ ಅಕಾಡೆಮಿ  ಹಾಗೂ ಪ್ರಾಧಿಕಾರಗಳಲ್ಲಿ ಅಧಿಕಾರಿ ವರ್ಗದವರ ಹಸ್ತಕ್ಷೇಪ ಅತಿಯಾಗಿಯೇ ಇರುತ್ತದೆ. ಅಧ್ಯಕ್ಷರುಗಳ ಆಡಳಿತಾನುಭವದ ಕೊರತೆಯನ್ನು ತಮ್ಮ ಲಾಭಕೋರ ಹಿತಾಸಕ್ತಿಗಾಗಿ  ಬಳಸಿಕೊಳ್ಳುವ ಜಾಣ್ಮೆ ಅಧಿಕಾರಿ ವರ್ಗಕ್ಕೆ ಕರಗತವಾಗಿರುತ್ತದೆ. ತಮ್ಮ ಹಿತಾಸಕ್ತಿಗೆ ವಿರುದ್ಧವಾಗಿ ಏನೂ ಆಗದಂತೆ ನೋಡಿಕೊಳ್ಳುವಲ್ಲಿ ಅಧಿಕಾರಿಗಳು ಸಿದ್ಧಹಸ್ತರು. ಹೆಚ್ಚುಕಮ್ಮಿ ಆದರೆ ಅಕಾಡೆಮಿ ಸದಸ್ಯರುಗಳನ್ನೇ ಎತ್ತಿಕಟ್ಟಿ ಅಧ್ಯಕ್ಷರುಗಳ ಕೈಕಾಲು ಅಲ್ಲಾಡದಂತೆ ನೋಡಿಕೊಳ್ಳುವ ತಂತ್ರಗಳು ಅವರಿಗೆ ಗೊತ್ತಿರುತ್ತವೆ.

ಹೀಗೆಯೇ.. ಎಲ್ಲದಕ್ಕೂ ಕಾನೂನಿನ ಕೊಕ್ಕೆ ಹಾಕುತ್ತಿದ್ದ ಆಗಿನ ರೆಜಿಸ್ಟ್ರಾರ್ ದಕ್ಷಿಣಾಮೂರ್ತಿಯ ಹಲ್ಲುಗಳನ್ನೇ ಅಕಾಡೆಮಿಯ ಅಧ್ಯಕ್ಷರಾಗಿದ್ದ ಆರ್.ನಾಗೇಶರವರು ಉದುರಿಸಿದ್ದರು. ಎಲ್ಲದರಲ್ಲೂ ಅಸಹಕಾರ ತೋರುತ್ತಿದ್ದ ಈಗಿರುವ ರೆಜಿಸ್ಟ್ರಾರ್ ಡಾ.ಶೈಲಜಾರವರನ್ನು ನಿಕಟ ಪೂರ್ವ ಅಧ್ಯಕ್ಷರಾಗಿದ್ದ ಜೆ.ಲೊಕೇಶರವರು ಹದ್ದುಬಸ್ತಿನಲ್ಲಿಟ್ಟಿದ್ದರು. ಅಧಿಕಾರಿಗಳ ಕಿರಿಕಿರಿಗಳ ವಿರುದ್ಧ ಸಚಿವರಿಗೆ ದೂರುಕೊಡುವ ಧೈರ್ಯ ಅವರಲ್ಲಿತ್ತು. ಬಹುತೇಕ ಅಕಾಡೆಮಿ ಪ್ರಾಧಿಕಾರಗಳಲ್ಲಿ ಅಧಿಕಾರಿವರ್ಗ ಹಾಗೂ ಅಧ್ಯಕ್ಷರುಗಳ ನಡುವಿನ ಸಂಘರ್ಷ ಸದಾ ಇದ್ದೇ ಇರುವಂತಹುದು. ಅಧ್ಯಕ್ಷರ ಅಧಿಕಾರ ವ್ಯಾಪ್ತಿಯನ್ನು ಯಾವಾಗಲೂ ನಿಯಂತ್ರಿಸಲು ಪ್ರಯತ್ನಿಸುವ ಅಧಿಕಾರಗಳನ್ನು ಹದ್ದುಬಸ್ತಿನಲ್ಲಿಟ್ಟುಕೊಂಡೇ ಅಕಾಡೆಮಿಯನ್ನು ನಡೆಸಿದರೆ ಹಾಕಿಕೊಂಡ ಯೋಜನೆಗಳು ಒಂದಿಷ್ಟು ಪ್ರಯೋಜನಕಾರಿಯಾಗಬಹುದು. ಕೈಬಾಯಿ ಕೆಡಿಸಿಕೊಳ್ಳದೇ ಅಕಾಡೆಮಿಗಳನ್ನು  ಮುನ್ನಡೆಸಬಹುದು. ಅಧಿಕಾರಿಗಳ ತಾಳಕ್ಕೆ ಕುಣಿದರೆ ಇಡೀ ಅಕಾಡೆಮಿ ದುರ್ಬಲವಾಗುತ್ತದೆ. ರೆಜಿಸ್ಟ್ರಾರ್ ಆಗಿರಲಿ ಇಲ್ಲವೇ ಅವರ ಮೇಲಿನ ಯಾವುದೇ ಅಧಿಕಾರಿಯಾಗಿರಲಿ ಏನೇ ಹೇಳಿದರೂ ಅವರನ್ನು ಪ್ರಶ್ನಿಸುವ ಎಲ್ಲದಕ್ಕೂ ಸಾಕ್ಷಿ ಆಧಾರಗಳನ್ನು ಕೇಳುವ ಡೈನಾಮಿಕ್ ಗುಣವನ್ನು ಅಕಾಡೆಮಿ ಅಧ್ಯಕ್ಷರು ಹಾಗೂ ಸದಸ್ಯರುಗಳ ಬೆಳೆಸಿಕೊಳ್ಳಬೇಕು. ಅಧಿಕಾರಿಗಳು ಇರುವುದು ಅಕಾಡೆಮಿಯ ಸರ್ವಸದಸ್ಯರ ಸಭೆ ಹಾಗೂ ಸ್ಥಾಯಿ ಸಮಿತಿಯ ನಿರ್ಣಯಗಳನ್ನು ದಾಖಲಿಸಿಕೊಂಡು ಜಾರಿಮಾಡಲು ಸಹಾಯಕವಾಗಲಿ ಎಂದು ಅಷ್ಟೇ ಹೊರತು ತಮ್ಮ ಅಧಿಕಾರವನ್ನು ಬಳಸಿ ಕಾನೂನಿನ ಕೊಕ್ಕೆಗಳ ಮೂಲಕ ಅಕಾಡೆಮಿ ನಿರ್ಣಯಗಳನ್ನು ದುರ್ಬಲಗೊಳಿಸಲು ಅಲ್ಲಾ ಎನ್ನುವುದನ್ನು ಅಧ್ಯಕ್ಷರು ಹಾಗೂ ಸದಸ್ಯರುಗಳು ಅರ್ಥಮಾಡಿಕೊಳ್ಳಲೇ ಬೇಕು.


ಖಾಸಗಿ ರಂಗಮಂದಿರಗಳಿಗೆ ಬೆಳಕು ಹಾಗೂ ದ್ವನಿ ಪರಿಕರಗಳನ್ನು ಕೊಡುವುದನ್ನು ಅಕಾಡೆಮಿಯಿಂದ ಜಾರಿಗೆ ತನ್ನಿ ಎಂದು ಪ್ರಸ್ತುತ ಅಕಾಡೆಮಿಯಲ್ಲಿ ಹಿರಿಯ ಸದಸ್ಯರಾಗಿರುವ ಮಾನ್ಯ ಗುಣಶೀಲನ್ರವರು ಎರಡು ವರ್ಷಗಳ ಹಿಂದೆ ನನಗೆ ಪೋನ್ ಮಾಡಿ ಒತ್ತಾಯಿಸಿದ್ದರು. ಅವರ ಆಶಯವನ್ನು ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದ ಜೆ.ಲೊಕೇಶರವರಿಗೂ ತಿಳಿಸಲಾಗಿತ್ತು. ಕುರಿತು ಯೋಜನೆಯೂ ಸಿದ್ದವಾಗಿ ಇನ್ನೇನು ಅನುಷ್ಟಾನಕ್ಕೆ ಬರಬೇಕಿತ್ತು. ಆದರೆ.. ಈಗ ನಾಟಕ ಅಕಾಡೆಮಿ ಸದಸ್ಯರಾಗಿ ಎರಡನೇ ಬಾರಿಗೆ ಆಯ್ಕೆಗೊಂಡು ಬಂದಿರುವ ಅದೇ ಗುಣಶೀಲನ್ರವರು ರಂಗಮಂದಿರಗಳಿಗೆ ಬೆಳಕಿನ ಪರಿಕರ ಕೊಡುವ ಯೋಜನೆಗೆ ಅಧಿಕಾರಿಗಳು ತಡೆ ಒಡ್ಡಿದಾಗ ಸುಮ್ಮನಿದ್ದು ತಮ್ಮ ಸಮ್ಮತಿ ಸೂಚಿಸಿದ್ದು ಸೋಜಿಕ. ಪ್ರಸ್ತುತ ಅಕಾಡೆಮಿಯ ಅಧ್ಯಕ್ಷರಾದ ಮಾನ್ಯ ಭೀಮಸೇನ್ರವರು ಹಾಗೂ ಇತರೆ ಎಲ್ಲಾ ಸದಸ್ಯರುಗಳು ಯೋಜನೆಯ ಅಗತ್ಯತೆ ಹಾಗೂ ಅನಿವಾರ್ಯತೆಯನ್ನು ಮನಗಂಡು ಮುಂದಿನ ಸರ್ವಸದಸ್ಯರ ಸಭೆಯಲ್ಲಿ ಅರ್ಹ ಖಾಸಗಿ ರಂಗಮಂದಿರಗಳಿಗೆ ಬೆಳಕಿನ ಪರಿಕರಗಳನ್ನು ಕೊಡುವ ಯೋಜನೆಯನ್ನು ಮುಂದುವರೆಸಬೇಕು ಹಾಗೂ ಪ್ರತಿ ವರ್ಷ ಕನಿಷ್ಟ ಐದು ರಂಗಮಂದಿರಗಳಿಗಾದರೂ ಆಯಾ ರಂಗಮಂದಿರಗಳ ಅಗತ್ಯಕ್ಕೆ ತಕ್ಕಂತೆ ಬೆಳಕು ಹಾಗೂ ದ್ವನಿ ಪರಿಕರಗಳನ್ನು ಕೊಟ್ಟು ಅವುಗಳ ಸದ್ಬಳಕೆ ಆಗುವಂತೆ ನೋಡಿಕೊಳ್ಳಬೇಕು.

ಇಷ್ಟಕ್ಕೂ ಅಕಾಡೆಮಿಯ ಕೆಲಸ ನಾಟಕೋತ್ಸವಗಳನ್ನು ಮಾಡಿ ಸರಕಾರಿ ಅನುದಾನದ ಹಣದ ಸಿಂಹಪಾಲನ್ನು ಖರ್ಚು ಮಾಡುವುದಲ್ಲ. ದಾಖಲೀಕರಣ, ತರಬೇತಿ, ವಿಚಾರ ಸಂಕಿರಣ, ಪ್ರಕಟಣೆ ಹಾಗೂ ರಂಗಚಟುವಟಿಕೆಗಳಿಗೆ ಪೂರಕ ಸಹಕಾರ ಒದಗಿಸುವುದೇ ಅಕಾಡೆಮಿಗಳ ಪ್ರಮುಖ ಕಾಯಕವಾಗಿದೆ. ನಂತರ ಹಣ ಉಳಿದರೆ, ಅಗತ್ಯವೆನಿಸಿದರೆ ರಂಗೋತ್ಸವಗಳು ಇರಲಿ. ರಂಗಪ್ರದರ್ಶನಗಳಾಗಲಿ. ಏನೇ ಆಗಲಿ ಅಕಾಡೆಮಿಯಲ್ಲಿ ಅಧಿಕಾರಿಗಳ ಅನಗತ್ಯ ಹಸ್ತಕ್ಷೇಪ ನಿಲ್ಲಲಿ. ಸರ್ವ ಸದಸ್ಯರ ಸಭೆಯ ನಿರ್ಣಯಗಳು ಅಡೆತಡೆಗಳನ್ನು ಮೀರಿ ಅನುಷ್ಠಾನಕ್ಕೆ ಬರಲಿ.

-ಶಶಿಕಾಂತ ಯಡಹಳ್ಳಿ