ಶುಕ್ರವಾರ, ಮಾರ್ಚ್ 28, 2014

“ವಾಲ್ಟಿ-60”: ವಿಶಿಷ್ಟ ಪ್ರತಿಭೆಯ ಮೈಮ್ ಕಲಾವಿದ-ರಂಗನಿರ್ದೇಶಕರಿಗೊಂದು ರಂಗಸನ್ಮಾನ.


                                               

ಆಧುನಿಕ ಕನ್ನಡ ರಂಗಭೂಮಿಯ ಪ್ರತಿಭಾನ್ವಿತ ನಟ-ನಿರ್ದೇಶಕ ವಾಲ್ಟರ್ ಡಿಸೋಜಾ :


 ಮೊಟ್ಟ ಮೊದಲು ಬಣ್ಣ ಹಚ್ಚಿದ್ದು ಏಳನೇ ವಯಸ್ಸಿನಲ್ಲಿ. ಅಂದಿನಿಂದ ನಾಟಕ-ಅಭಿನಯ ಅಂದರೆ ಅದೆಂತದೋ ಸೆಳೆತ. ಮಂಗಳೂರಿಂದ ಹನ್ನೆರಡು ಮೈಲಿ ದೂರವಿರುವ ಕೈಕಂಬ ನನ್ನ ಊರು. ನನಗೆ ಅಭಿನಯದ ಹುಚ್ಚು. ನಾನು ಹುಟ್ಟಿದ್ದು ಕೊಂಕಣಿ ಕ್ರಿಶ್ಚಿಯನ್ ಸಮುದಾಯದಲ್ಲಿ. ಕ್ರಿಶ್ಚಿಯನ್ರಲ್ಲಿ ನಾಟಕ ಎಂದರೆ ಬಹಿಷ್ಕೃತ ಮಾಧ್ಯಮ. ನಾಟಕ ಇದೆ ಅಂದರೆ ಅದು ಚರ್ಚಿನ ಧರ್ಮಪ್ರಸಾರದ ಭಾಗವಾಗಿ ಮಾತ್ರ ಇತ್ತು. ಹಾಗೂ ಇರಬೇಕಿತ್ತು. ಚರ್ಚಿನವರೇ ನಾಟಕಕ್ಕೆ ಪಂಡ್ ಕೊಟ್ಟು, ಅವರೇ ದೇವರ ಮಹಿಮೆಯ ನಾಟಕ ಆಡಿಸಿ ಅವರವರೇ ಖುಷಿಪಡ್ತಿದ್ದರು. ಹೊರಗಿನ ನಾಟಕಗಳನ್ನು ಕ್ರಿಶ್ಚಿಯನ್ನರು ನೋಡುವುದೂ ಇಲ್ಲ, ನಮಗೂ ನೋಡುವುದಕ್ಕೆ ಬಿಡುವುದೂ ಇಲ್ಲ. ಚರ್ಚಿನ ಒಳಗಿನ ಪ್ರಾರ್ಥನೆ, ದೇವರ ಭಜನೆಗಳು ಮಾತ್ರ ಇದ್ದವು. ನನಗೆ ಬೇರೆ ಬೇರೆ ಸಾಂಸ್ಕೃತಿಕ ಪ್ರದರ್ಶನ ಕಲೆಗಳತ್ತ ವಿಪರೀತ ಆಸಕ್ತಿ ಮೂಡತೊಡಗಿತ್ತು. ಇದರಿಂದಾಗಿ ನಾನು ಯಕ್ಷಗಾನವನ್ನು ಕದ್ದುಮುಚ್ಚಿ ರಾತ್ರಿ ಮುಖಮರೆಸಿಕೊಂಡು ಹೋಗಿ ನೋಡಿಬರುತ್ತಿದ್ದೆ. ಹಾಗೂ ಹೀಗೂ ಡಿಗ್ರಿವರೆಗೂ ನಮ್ಮೊಳಗಿನ ನಾಟಕದ ಆಸೆಯನ್ನು ತಡೆದುಕೊಂಡಿದ್ದೆ.
  
 ಮುಂದೆ ಬಿಎಸ್ಸಿ ಓದುತ್ತಿರುವಾಗ ಅದೊಂದು ದಿನ ಮಂಗಳೂರಿನ ನಮ್ಮ ಕಾಲೇಜಿನಲ್ಲಿ ಮಾರೀಚನ ಬಂದುಗಳು ನಾಟಕ ಮಾಡಿಸಲು ಹೆಗ್ಗೋಡಿನ ಪ್ರಸನ್ನ ಬಂದಿದ್ದರು. ನನ್ನ ಜೊತೆ ಕಾಲೇಜಮೇಟ್ ಆಗಿದ್ದವರೂ ಚಂದ್ರಹಾಸ ಉಲ್ಲಾಳ ಮತ್ತು ಪ್ರಭಾಕರ. ಪ್ರಸನ್ನ ನಾಟಕದ ರಿಹರ್ಸಲ್ಸಗಳನ್ನು ಕುತೂಹಲದಿಂದ ಹಾಗೂ ಅಸಕ್ತಿಯಿಂದ ಪ್ರತಿದಿನ ಹೋಗಿ ಮೂಲೆಯಲ್ಲಿ ಕುಳಿತು ನಾವು ಮೂವರು ನೋಡುತ್ತಿದ್ದೆವು. ಸಣ್ಣ ಪಾತ್ರವಾದರು ಸಿಗುತ್ತದಾ ಎನ್ನುವ ಆಸೆ ಇಟ್ಟುಕೊಂಡಿದ್ದೆವು. ನಮ್ಮ ಅದೃಷ್ಟಕ್ಕೆ ಅದೊಂದು ದಿನ ಒಬ್ಬ ನಟ ರಹರ್ಸಲ್ಗೆ ಗೈರುಹಾಜರಾದ. ಸುಮ್ಮನೆ ಬಂದು ದಿನಾ ಕೂತ್ಕೋತಿರಾ ಯಾರಾದರೊಬ್ಬರು ಬನ್ರೀ ಎಂದು ಪ್ರಸನ್ನ ನಮ್ಮ ಗುಂಪಿನವರನ್ನು ಕರೆದರು. ಇದನ್ನೇ ಕಾಯುತ್ತಿದ್ದ ನಾನು ಚಂಗನೆ ಜಿಗಿದು ಓಡಿ ಹೋದೆ. ಎಲ್ರಿ ಒಂದು ಡೈಲಾಗ್ ಹೇಳ್ರೀ ಎಂದು ಪ್ರಸನ್ನ ಕೇಳಿದ್ದೆ ತಡ ಡೈಲಾಗ್ ಶುರುಮಾಡೇಬಿಟ್ಟೆ. ನನ್ನದೋ ಮಂಗಳೂರು ಕನ್ನಡ. ಬೆಂಗಳೂರಿನ ಭಾಷಿಕರು ಮಾಡಿಸುವ ನಾಟಕದಲ್ಲಿ ನಮ್ಮ ಭಾಷೆ ಪಿಟ್ ಆಗೋದಿಲ್ಲ. ಹೋಗ್ರಿ ಮೊದಲು ಸರಿಯಾಗಿ ಕನ್ನಡ ಕಲಿತ್ಕೊಂಡು ಬನ್ರಿ ಅಂತ ಪ್ರಸನ್ನ ವಾಪಸ್ ಕಳುಹಿಸಿಯೇ ಬಿಟ್ಟರು. ನಿಜಕ್ಕೂ ಅಪಾರವಾದ ನಿರಾಶೆಯಾಯಿತು.

ಪ್ರಸನ್ನನವರ ಡಿಕ್ಟೇಟರ್ಶಿಪ್ ನೋಡಿ ದಂಗಾಗಿಬಿಟ್ಟೆವು. ಎನ್ಎಸ್ಡಿ ಯಿಂದ ಬಂದಿದ್ದಾರೆಂದರೆ ಅವರಿಗೇನು ಕೋಡಿದೆಯಾ. ಅದು ಅಷ್ಟೊಂದು ಅಹಂಕಾರವನ್ನು ತಂದು ಕೊಡುತ್ತದಾ. ಏನಾದರಾಗಲೀ ನಾನು ಎನ್ಎಸ್ಡಿ ಓದಲೇಬೇಕು ಎಂದು ಮನದಲ್ಲೇ ಅಂದುಕೊಂಡೆ. ಅವರು ನಮಗೆ ಅವಕಾಶ ಕೊಡದಿದ್ದರೂ ಹೇಗೆ ನಾಟಕ ಮಾಡಿಸುತ್ತಾರೆ ಎನ್ನುವ ಕುತೂಹಲದಿಂದ ಪ್ರತಿದಿನ ತಾಲಿಂಗೆ ಹೋಗುವುದನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ. ಅದೆಷ್ಟೋ ಸಾರಿ ಸಮಯ ಹೆಚ್ಚಾಗಿ ಊರಿಗೆ ಹೋಗಲು ಬಸ್ಸಿಲ್ಲದೇ ಲಾರಿ ಹತ್ತಿ ಮನೆ ತಲುಪಿದ್ದಿದೆ. ಕೆಲವೊಮ್ಮೆ ಹೋಗಲು ಸಾಧ್ಯವಾಗದೇ ತಾಲಿಂ ಕೊಠಡಿಯಲ್ಲೇ ಮಲಗಿದ್ದಿದೆ. ಏನೇ ಕಷ್ಟ ಆದರೂ ನಾಟಕ ಕಟ್ಟುವುದನ್ನು ಕಲಿಯಬೇಕು ಎನ್ನುವ ಛಲ ನನ್ನಲ್ಲಿತ್ತು. ಅದಕ್ಕಾಗಿ ಎಂತಹುದೇ ತ್ಯಾಗಕ್ಕೂ ನಾನು ಸಿದ್ದನಾಗಿದ್ದೆ. ಮಾರೀಚನ ಬಂಧುಗಳು ನಾಟಕ ಮಂಗಳೂರಿನಲ್ಲಿ ಮೊದಲ ಪ್ರದರ್ಶನವಾಯಿತು, ಎರಡನೇ ಪ್ರದರ್ಶನ ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಫಿಕ್ಸ ಆಗಿತ್ತು. ಮೊದಲ ಶೋವಾಗುವಾಗಲೇ ಒಂದು ಎಡವಟ್ಟಾಗಿಬಿಟ್ಟಿತ್ತು.

  ನಾಟಕದಲ್ಲಿ ಅಭಿನಯಿಸಿದ ನಟರಲ್ಲಿ ಕೆಲವರು ಆರ್ಎಸ್ಎಸ್ ಹಿನ್ನಲೆಯವರಾಗಿದ್ದರು. ನಾಟಕದಲ್ಲಿ ವಾಲ್ಮೀಕಿಯ ಕೈಯಲ್ಲಿ ಸಿಗರೇಟ್ ಹಿಡಿಸುವ ಪ್ರಸನ್ನ ಎಡಪಂಥೀಯನಾಗಿದ್ದರಿಂದ ನಮ್ಮ ಹಿಂದು ಧರ್ಮಕ್ಕೆ ಅಪಮಾನ ಮಾಡಲೆಂದೇ ಹೀಗೆ ಮಾಡಿದ್ದು ಎಂದು ಅವರು ತಕರಾರು ತೆಗೆದರು. ಬದಲಾವಣೆ ಸಾಧ್ಯವಿಲ್ಲ ಎಂದು ಪ್ರಸನ್ನ ಹಠಹಿಡಿದರು. ಹಾಗಾದರೆ ಕಾರ್ಲಮಾರ್ಕ್ಸ ವೇಷ ತೊಡಿಸಿ ಸಿಗರೇಟ್ ಸೇದಿಸಿ ಎಂದು ಕೆಲವರು ಕ್ಯಾತೆ ತೆಗೆದಾಗ ಆಯಿತು ಮಾರ್ಕ್ಸ ಕಾಸ್ಟೂಮ್ಸ ಹಾಕಿಸ್ತೇನೆ ಆದರೆ ಬಾಯಲ್ಲಿ ವಾಲ್ಮೀಕಿ ಮಾತುಗಳನ್ನೇ ಆಡಿಸ್ತೇನೆ ಎಂದು ಪ್ರಸನ್ನ ಹೇಳಿದ್ದರಿಂದ ಕೋಪಗೊಂಡ ನಾಲ್ಕು ನಟರು ಎರಡನೇ ಪ್ರದರ್ಶನದ ದಿನವೇ ಗೈರುಹಾಜರಾದರು. ಉಸ್ತಾದ್ ರೋಲ್ ಮಾಡುವವನಿಗೆ ಅವತ್ತೇ ಹಾರ್ಟಅಟ್ಯಾಕ್ ಆಯಿತು. ಆಗ ನಮ್ಮ ಅದೃಷ್ಟ ಖುಲಾಯಿಸಿತು. ರೀ ಮಂಗಳೂರು ಭಾಷೆ ಮಾತಾಡೋ ಹುಡುಗ್ರೇ ನಾಟಕ ಮಾಡ್ತೀರೇನ್ರಿ ಬನ್ರಿ ಎಂದು ಪ್ರಸನ್ನ ನಮ್ಮನ್ನು ಕರೆದರು. ಅಂತಹುದೊಂದು ಕರೆಗಾಗಿ ಪ್ರತಿದಿನ ಪ್ರತಿಕ್ಷಣ ನಾವು ಕಾಯುತ್ತಿದ್ದೆವು. ಅಂತಹ ಗಳಿಗೆ ಬಂದೇ ಬಿಟ್ಟಿತು. ಪ್ರತಿದಿನ ರಿಹರ್ಸಲ್ಸಗಳಿಗೆ ನಾವು ಹೋಗುತ್ತಿದ್ದುದರಿಂದ ನಮಗೆ ನಾಟಕದ ಪ್ರತಿ ಪಾತ್ರದ ಪ್ರತಿ ಡಯಲಾಗ್ಗಳೂ ಕಂಠಪಾಠವಾಗಿಬಿಟ್ಟಿದ್ದವು. ಮಂಗಳೂರು ಭಾಷೆಯಲ್ಲೇ ನಾವು ನಾಟಕ ಮಾಡಿದೆವು. ನಾಟಕ ಯಶಸ್ವಿಯಾಯಿತು. ಪ್ರತಿಷ್ಟಿತ ಉಳ್ಳಾಲ ಪ್ರಶಸ್ತಿಯೂ ನಮ್ಮ ನಾಟಕಕ್ಕೆ ಬಂತು. ಇದಾಗಿ ಮೂವತ್ತೆರಡು ವರ್ಷಗಳಾದರೂ ನಾಟಕದ ಸಂಭಾಷಣೆ ಈಗಲೂ ನನಗೆ ಬಾಯಲ್ಲೇ ಇದೆ.

ನಾಟಕ ಮುಗಿದ ನಂತರ ಅನಾಥ ಪ್ರಜ್ಞೆ ಕಾಡತೊಡಗಿತು. ನಾಟಕ ಮಾಡಿಸಿದ ಪ್ರಸನ್ನ ಹೊರಟುಹೋಗಿದ್ದರು. ನಮಗೆ ಹೊಸ ನಾಟಕ ಮಾಡಿಸಲು ಅನುಭವ ಇರಲಿಲ್ಲ. ಡಿಗ್ರಿ ಮುಗಿದಿತ್ತು. ಮುಂದೇನು ಮಾಡಬೇಕೆಂದು ತಿಳಿದಿರಲಿಲ್ಲ. ಇಂತಹ ಸಂದರ್ಭದಲ್ಲಿ ನಾವು ಮೂವರೂ ಗೆಳೆಯರು ಎನ್ಎಸ್ಡಿ ಗೆ ಹೋಗಿ ನಾಟಕ ಕಲಿಯೋಣ ಎಂದು ಡಿಸೈಡ್ ಮಾಡಿ ಬೆಂಗಳೂರಿನ ಬಸ್ ಹತ್ತಿದೆವು. ಬೆಂಗಳೂರಿನಲ್ಲಿ ನಮಗೋ ಯಾರೆಂದರೆ ಯಾರೂ ಗೊತ್ತಿರಲಿಲ್ಲ. ಯಾವುದೋ ಲಿಂಕ್ನಿಂದ ಸಿಜಿಕೆ ಯವರನ್ನು ಬೆಟ್ಟಿಮಾಡಿದೆವು. ಚಾಮರಾಜಪೇಟೆಯಲ್ಲಿ ಆಗ ಸಮುದಾಯ ಸಂಘಟನೆಯ ಕೊಠಡಿಯೊಂದಿತ್ತು. ಅಲ್ಲೇ ಇದ್ದುಬಿಟ್ಟೆವು. ಅವರು ಕೊಟ್ಟದ್ದನ್ನೇ ತಿಂದೆವು. ಬರತಾ ಬರತಾ ಚಂದ್ರಹಾಸ ಮತ್ತು ಪ್ರಭಾಕರ್ ಇಬ್ಬರು ನಿರಾಶೆಯಿಂದ ದೈರ್ಯಗುಂದಿದರು. ಹತಾಶೆಯಿಂದ ಮಂಗಳೂರಿಗೆ ವಾಪಸ್ ಹೋದರು. ಏನಾದರಾಗಲೀ ರಂಗಭೂಮಿಯಲ್ಲೇ ಬದುಕಬೇಕೆಂದು ನಾನು ನಿರ್ಧರಿಸಿಯಾಗಿತ್ತು.

ಅಷ್ಟೊತ್ತಿಗೆ ಕುಂಬಳಗೋಡಿನಲ್ಲಿ ಬಾದಲ್ ಸರ್ಕಾರ್ ನಾಟಕದ ವರ್ಕಶಾಪ್ ಮಾಡ್ತಿದ್ದರು. ಗೊತ್ತಾಗಿದ್ದೆ ಭಾಗವಹಿಸಿದೆ. ನಂತರ ಬಾದಾಮಿ ಹೌಸ್ನಲ್ಲಿ  ಎನ್ಎಸ್ಡಿ ಗೆ ಸಿಲೆಕ್ಷನ್ ನಡೆಯುತ್ತಿದೆ ಎಂದು ಗೊತ್ತಾಯಿತು. ತಕ್ಷಣ ಓಡಿಹೋಗಿ ಸಂದರ್ಶನದಲ್ಲಿ ಭಾಗವಹಿಸಿದೆ. ಶಾರುಖಖಾನ್ ತರಬೇತುದಾರರಾದ ಬ್ಯಾರಿ ಜಾನ್ ಆಯ್ಕೆ ಸಮಿತಿಯಲ್ಲಿದ್ದರು. ಏನಾದರೂ ಅಭಿನಯಿಸಿ ತೋರಿಸು ಎಂದು ಕೇಳಿದರು. ನನಗೆ ಒಂದಿಷ್ಟು ಮೈಮ್ ಮಾಡೋಕೆ ಕಲಿತಿದ್ದೆ. ಹಿಂದೆ ರಾಮಚಂದ್ರರಾವ್ ಎಲೆಕ್ಷನ್ನಿಂತ ಸಂದರ್ಭದಲ್ಲಿ ಬಂಟ್ವಾಳದಿಂದ ಪ್ರಚಾರದ ಜಾತಾ ಹೋಗಿದ್ದಾಗ ಮೈಮ್ ಮಾಡುತ್ತಲೇ ಹೋಗಿದ್ದೆವು. ಅದು ಈಗ ಪ್ರಯೋಜನಕ್ಕೆ ಬಂತು. ಸಂದರ್ಶನ ಮುಗೀತು. ಆದರೆ ರಿಜಲ್ಟ್ ತಿಳಿಯಲು ಇನ್ನೂ ಹದಿನೈದು ದಿನ ಆಗುತ್ತೆ ಎಂದರು. ಆದರೆ ನಾನು ವಾಪಸ್ ಊರಿಗೆ ಹೋಗಲು ನಿರಾಕರಿಸಿದೆ. ಹದಿನೈದು ದಿನ ಬೆಂಗಳೂರಿನಲ್ಲಿ ಎಲ್ಲಿರಬೇಕು ಎನ್ನುವ ಚಿಂತೆ ಕಾಡತೊಡಗಿತು. ಬ್ರೆಡ್ ತಿನಕೊಂಡು ಸಮುದಾಯದ ಕೊನೆಯಲ್ಲಿ ಹದಿನೈದು ದಿನ ಅದು ಹೇಗೋ ಕಾಲಕಳೆದೆ. ಹದಿನೈದು ದಿನದ ನಂತರ ಆಯ್ಕೆ ಸಮಿತಿಯ ರಿಜಲ್ಟ್ ಬಂದತ್ತು. ಕರ್ನಾಟಕದಿಂದ ಮೂರು ಜನ ಆಯ್ಕೆಯಾಗಿದ್ದರು.  ಜಯತೀರ್ಥ ಜ್ಯೋಷಿ, ರಘುನಂದನ್ ಇಬ್ಬರೂ ಆಯ್ಕೆಯಾಗಿ ರಾಜ್ಯದ ಸ್ಕಾಲರ್ಶಿಪ್ ಪಡೆದರೆ ನಾನು ಅವರಿಗಿಂತ ಒಂದು ಹೆಜ್ಚೆ ಮುಂದೆನೇ ಡೈರೆಕ್ಟಾಗಿ ಆಯ್ಕೆಯಾಗಿ ಕೇಂದ್ರ ಸರಕಾರದ ಸ್ಕಾಲರ್ಶಿಪ್ ಪಡೆದು ಆಯ್ಕೆಯಾಗಿದ್ದೆ. ನನ್ನ ಖುಷಿಗೆ ಪಾರವೇ ಇರಲಿಲ್ಲ.

ಮೂರು ವರ್ಷ ಎನ್.ಎಸ್.ಡಿಯಲ್ಲಿ ಅದು ಹೇಗೆ ಕಳೆದನೋ ಗೊತ್ತಾಗಲೇ ಇಲ್ಲ. ಎನ್.ಎಸ್.ಡಿ ಪದವೀದರನಾಗಿ ವಾಪಸ್ ಬೆಂಗಳೂರಿಗೆ ಬಂದಾಗ ನನಗೆ ಎರಡನೇ ಬಾರಿಗೆ ಅನಾಥ ಪ್ರಜ್ಞೆ ಕಾಡತೊಡಗಿತು. ರತನ್ ಮಹಲ್ನಲ್ಲಿ ಯಾರದೋ ರೂಮಿನಲ್ಲಿದ್ದೆ.  ಪೇಪರ್ ಹಾಸಿಕೊಂಡು ನೆಲದಲ್ಲಿ ಮಲಗುತ್ತಿದ್ದೆ. ನನಗೆ ಯಾವ ದುಡಿಮೆಯೂ ಇರಲಿಲ್ಲ. ಕನಿಷ್ಟ ಊಟಕ್ಕೂ ಗತಿ ಇರಲಿಲ್ಲ. ರೂಮಿನಲ್ಲಿದ್ದವರು ಕೊಡಿಸಿದ ಖಾಲಿ ದೋಸೆ ತಿಂದು, ಕಬ್ಬನ್ ಪಾರ್ಕಿನಲ್ಲಿರುವ ಸೆಂಟ್ರಲ್ ಲೈಬ್ರರಿಗೆ ಬಂದು ಬಿಟ್ಟಿ ಪೇಪರ್ ಪುಸ್ತಕ ಓದಿ ಕಾಲ ದೂಡುತ್ತಿದ್ದೆ. ಅದೆಷ್ಟೋ ತಿಂಗಳು ಪ್ರತಿ ದಿನ ಸಂಜೆ ಆರರಿಂದ ಒಂಬತ್ತು ಗಂಟೆಯವರೆಗೆ ರವೀಂದ್ರ ಕಲಾಕ್ಷೇತ್ರದ ಮೆಟ್ಟಿಲುಗಳ ಮೇಲೆ ಕುಳಿತು ಯಾವುದಾದರೂ ಅವಕಾಶ ಸಿಗುತ್ತಾ ಅಂತ ಕಾಯುತ್ತಿದ್ದೆ. ನಾನು ಮೊದಲೇ ಅಲ್ಪಸಂಖ್ಯಾತನಾಗಿದ್ದೆ ಹಾಗೂ ನನ್ನ ಪ್ರತಿಭೆಯನ್ನ ನಾನಿನ್ನೂ ಸಾಬೀತು ಪಡಿಸಿರಲಿಲ್ಲ. ಅದಕ್ಕೆ ಅವಕಾಶವೂ ಸಿಕ್ಕಿರಲಿಲ್ಲ. ನಾನು ಎನ್ಎಸ್ಡಿ ಎಂದು ಸಿಕ್ಕವರೆಲ್ಲರ ಹತ್ತಿರ ಹೇಳಿಕೊಂಡರೂ ಯಾರೂ ನನ್ನ ಗುರುತಿಸಲಿಲ್ಲ. ಕರೆದೊಂದು ಅವಕಾಶ ಕೊಡಲಿಲ್ಲ. ರಿಚರ್ಡ ಲೂಯಿಸ್ ಕ್ರಿಶ್ಚಿಯನ್ ಆಗಿದ್ದರಿಂದ ಏನಾದರೂ ಅವಕಾಶ ಕೊಡಿಸಬಹುದೆಂಬ ಆಸೆಯಿಂದ ಅವರನ್ನು ಕೇಳಿಕೊಂಡೆ, ಅವರಿಂದ ಸರಿಯಾದ ಸ್ಪಂದನೆ ಸಿಗಲೇ ಇಲ್ಲ.

ಅದೊಂದು ದಿನ ಎಂದಿನಂತೆ ಆಕಾಶ ನೋಡುತ್ತಾ ಕಲಾಕ್ಷೇತ್ರದ ಮೆಟ್ಟಿಲ ಮೇಲೆ ಕುಳಿತಿದ್ದೆ. ಚಂದ್ರಕುಮಾರ್ ಸಿಂಗ್ ಹತ್ತಿರ ಬಂದು ಒಂದು ವರ್ಕಶಾಪ್ ಇದೆ ಹೋಗಿ ಮಾಡ್ತಿಯಾ? ಎಂದು ಕೇಳಿದರು. ಆಯ್ತು ಎಂದು ಒಪ್ಪಿಕೊಂಡೆ. ಆಗ ಪ್ರಜಾವಾಣಿ ಡೆಕ್ಕನ್ ಹೆರಾಲ್ಡ್ ನವರು ೨೦ ದಿನಗಳ ಕಾರ್ಯಾಗಾರ ಹಾಗೂ ನಾಟಕವನ್ನು ಆಯೋಜಿಸಿದ್ದರು. ಆರ್. ನಾಗೇಶ ನಿರ್ದೇಶಕರಾಗಿದ್ದರು. ತರಬೇತಿ ಬೆಳಿಗ್ಗೆ ಆರು ಗಂಟೆಗೆ ಶುರುವಾಗುತ್ತಿತ್ತು. ಆದರೆ ಆರ್. ನಾಗೇಶರವರಿಗೆ ಅಸ್ತಮಾ ಇದ್ದು ಬೆಳಗಿನ ಚಳಿಯಲ್ಲಿ ಬರಲು ಸಾಧ್ಯವಾಗುತ್ತಿರಲಿಲ್ಲ. ಆಗ ಪ್ರಜಾವಾಣಿಯ ವೈಕುಂಟರಾಜುರವರು ಬೇರೆ ಯಾರನ್ನಾದರೂ ವರ್ಕಶಾಪ್ಗೆ ಕರೆಯಿಸಿ, ನಾಟಕವನ್ನು ನಾಗೇಶರವರೇ ಮಾಡಿಸಲಿ ಎಂದರು. ಹೀಗಾಗಿ ಕಾರ್ಯಾಗಾರದ ಅವಕಾಶ ನನ್ನ ಪಾಲಾಗಿತ್ತು. ಇಪ್ಪತ್ತು ದಿನಗಳ ಕೆಲಸಕ್ಕೆ ಆರುನೂರು ರೂಪಾಯಿ ಫಿಕ್ಸ್ ಆಯಿತು. ಅದೇ ಕಾಲದಲ್ಲಿ ನನಗೆ ಬೇಕಾದಷ್ಟಾಗಿತ್ತು. ಜೊತೆಗೆ ಅವಕಾಶವೂ ಸಿಕ್ಕಿತ್ತು. ಇದು ನನ್ನ ಬದುಕಿನ ಮೊಟ್ಟಮೊದಲ ಅಭಿನಯ ಶಿಬಿರವಾಗಿತ್ತು. ಇಡೀ ಕಾರ್ಯಾಗಾರ ಯಶಸ್ವಿಯಾಯಿತು. ಇದರಿಂದ ಖುಷಿಯಾದ ವೈಕುಂಟರಾಜುರವರು ನನ್ನನ್ನು ದಾವಣಗೆರೆಯಲ್ಲಿ ಕಾರ್ಯಾಗಾರಕ್ಕೆ ನಿರ್ದೇಶಕನನ್ನಾಗಿ ಕಳುಹಿಸಿದರು. ಇಲ್ಲಿಗೆ ನನ್ನ ದೌರ್ಭಾಗ್ಯದ ದಿನಗಳು ಕಳೆದವು. ಅಲ್ಲಿಂದ ನಾನು ಹಿಂತಿರುಗಿ ನೋಡಿದ್ದೇ ಇಲ್ಲ. ಒಂದಾದ ಮೇಲೊಂದರಂತೆ ಅಭಿನಯ ಕಾರ್ಯಾಗಾರಗಳು ಹುಡುಕಿಕೊಂಡು ಬಂದವು. ಜೊತೆಗೆ ಹಣ ಹಾಗೂ ಹೆಸರನ್ನೂ ಕೊಟ್ಟವು.

ಮೈಮ್ ಮಾಡಬೇಕೆಂಬುದು ನನ್ನ ಅಭೀಷ್ಟೆಯಾಗಿರಲಿಲ್ಲ. ಅದು ನನಗೆ ಇಷ್ಟವೂ ಇರಲಿಲ್ಲ. ಅದೂ ಕೂಡಾ ಒಂದು ವಿಚಿತ್ರ ಸನ್ನಿವೇಶ ನನ್ನನ್ನು ಮೈಮ್ ಆರ್ಟಿಸ್ಟ್ ಆಗಲು ಪ್ರೇರೇಪಿಸಿತು. ಆಗ ನಾನು ಬಾಪೂಜಿ ಸಂಸ್ಥೆಯಲ್ಲಿ ಆಕ್ಟಿಂಗ್ ವರ್ಕಶಾಪ್ ಮಾಡಿಸುತ್ತಿದ್ದೆ. ಆಗ ಕಲಾವಿದರಿಗೆ ಬಾಡಿ ಲಾಂಗ್ವೇಜ್ ಮೂವಮೆಂಟ್ ಬಗ್ಗೆ ಮಾಡಿ ತೋರಿಸುತ್ತಿದ್ದೆ. ಅಲ್ಲಿನ ಲೆಕ್ಚರ್ಗಳೆಲ್ಲಾ ತುಂಬಾ ಇಂಪ್ರೆಸ್ ಆಗಿ ಮೂವಮೆಂಟ್ಗಳನ್ನು ವೇದಿಕೆ ಮೇಲೆ ಮಾಡಿ ಎಂದು ದುಂಬಾಲು ಬಿದ್ದರು. ಆಯಿತು ಎಂದು ಅವರ ಆಗ್ರಹಕ್ಕೆ ಕಟ್ಟು ಬಿದ್ದು ಮಾತಿಲ್ಲದೇ ಮೈಮ್ನಲ್ಲಿ ಕೆಲವೊಂದು ಸನ್ನಿವೇಶಗಳನ್ನು ವೇದಿಕೆಯ ಮೇಲೆ ಅಭಿನಯಿಸಿ ತೋರಿಸಿದೆ. ಆಗಿನ ಕಾಲಕ್ಕೆ ಮೈಮ್ ಎನ್ನುವುದು ವಿಸ್ಮಯದ ಅಭಿನಯವೆನಿಸುತ್ತಿತ್ತು. ಪ್ರದರ್ಶನ ಅತ್ಯಂತ ಯಶಸ್ವಿಯಾಯಿತು. ಇದರಿಂದ ಉತ್ತೇಜಿತರಾದ ಸಂಸ್ಥೆಯವರು ನನ್ನ ಅರಿವಿಗೆ ಬಾರದೇ ಹಲವು ಕಡೆಗಳಲ್ಲಿ ಹದಿನೈದು ಶೋಗಳನ್ನು ಆರ್ಗನೈಸ್ ಮಾಡಿಬಿಟ್ಟಿದ್ದರು. ಎಲ್ಲಾ ಕಡೆಯೂ ನನ್ನ ಮೂಕಾಭಿನಯ ಜನರನ್ನು ರಂಜಿಸಿತು. ನಂತರ ನನಗೆ ವರ್ಕಶಾಪ್ಗಳಿಗಿಂತ ಮೈಮ್ ಅಭಿನಯಕ್ಕೆ ಸಿಕ್ಕಾಪಟ್ಟೆ ಡಿಮಾಂಡ್ ಬಂದುಬಿಟ್ಟಿತು. ಲೇಡಿಸ್ ಕ್ಲಬ್ಗಳು, ರೋಟರಿಕ್ಲಬ್ ಗಳು, ದೂರದ ರಾಣೇಬೆನ್ನೂರಿನಂತಹ ಊರುಗಳಲ್ಲಿ ಇಪ್ಪತ್ತೈದಕ್ಕೂ ಹೆಚ್ಚು ಶೋ ಫಿಕ್ಸ ಆಯಿತು. ದುಡ್ಡೇ ಕಂಡಿರದ ನನಗೆ ದುಡಿಮೆ ಚೆನ್ನಾಗಿ ಆಗತೊಡಗಿತು. ಮೈಮ್ ನಿಂದ ಸಂಪಾದನೆ ಇದೆ, ಬದುಕಿಗೆ ದಾರಿ ಆಯ್ತು ಎಂದು ನನಗೆ ಗೊತ್ತಾಗಿದ್ದೇ ಅದನ್ನೇ ಮುಂದುವರೆಸಿದೆ.  ಮೈಮ್ನಲ್ಲಿ ನನ್ನನ್ನು ನಾನು ಹೆಚ್ಚು ತೊಡಗಿಸಿಕೊಂಡೆ. ಇನ್ನೂ ಹೆಚ್ಚಿನದನ್ನು ಕಲಿಯಲು ಮಲೇಶಿಯಾ, ಮನಿಲಾ, ಫಿಲಿಫೈನ್ಸ, ಸಿಂಗಾಪೂರ ಹೀಗೆ ಹತ್ತು ಹಲವು ದೇಶಗಳಿಗೂ ಹೋಗಿ ಮೈಮ್ ಹೊಸ ಆಯಾಮಗಳನ್ನು ಕಲಿತುಕೊಂಡು ಅಭಿನಯಿಸತೊಡಗಿದೆ. ಮೈಮ್ ಸಾಧ್ಯತೆಗಳನ್ನು ಮೈಗೂಡಿಸಿಕೊಂಡೆ. ಮೂಕಾಭಿನಯದಲ್ಲಿ ರಾಜ್ಯ ದೇಶ ವಿದೇಶಗಳಲ್ಲಿ ಹೆಸರು ಮಾಡಿದೆ.... 

ರಂಗಭೂಮಿಯಲ್ಲಿ ನನಗೆ ನಿರ್ದೇಶನದ ಅವಕಾಶವನ್ನು ಕೊಟ್ಟಿದ್ದು ಪ್ರಯೋಗರಂಗದ ನಾಗರಾಜಮೂರ್ತಿ. ಒಬ್ಬ ಕ್ರಿಶ್ಚಿಯನ್ ಮೈನಾರಿಟಿಯವನನ್ನು ಕರೆದು ನಾಟಕ ಮಾಡಲು ಅವಕಾಶ ಕೊಟ್ಟಿದ್ದು ನನ್ನ ಪಾಲಿಗೆ ಬಹುದೊಡ್ಡ ಪ್ರಯೋಜನಕಾರಿಯಾಗಿದೆ. ನಾಟಕದ ಮೇಲೆ ನಾಟಕಗಳನ್ನು ನಿರ್ದೇಶಿಸುವ ಅವಕಾಶ ನನಗೆ ಪ್ರಯೋಗರಂಗದಲ್ಲಿ ದೊರಕಿತು. ಸಂತೆಯಲ್ಲಿ ನಿಂತ ಕಬೀರ, ಮಹಿಪತ ಕೋಣನ ತಂಬ್ಗಿ ಎಂಎ... ಮುಂತಾದ ನಾಟಕಗಳನ್ನು ಪ್ರಯೋಗರಂಗಕ್ಕೆ ನಾನು ನಿರ್ದೇಶಿಸಿದೆ. ಪ್ರತಿಯೊಂದು ನಾಟಕವೂ ಅನೇಕ ಯಶಸ್ವಿ ಪ್ರದರ್ಶನಗಳನ್ನು ಕಂಡಿವೆ. ನನ್ನ ಮೂರು ನಾಟಕಗಳ ಉತ್ಸವವನ್ನೂ ಸಹ ಪ್ರಯೋಗರಂಗ ಆಯೋಜಿಸಿತ್ತು. ತದನಂತರ ನಾನು ಕೆಲಸ ಮಾಡುವ ಬೆಮೆಲ್ ನಲ್ಲಿ ಡಾ.ತಿಪ್ಪೇಶಿ,.... ಮುಂತಾದ ನಾಟಕಗಳನ್ನು ನಿರ್ದೇಶಿಸಿದೆ. ಎಲ್ಲಾ ನಾಟಕಗಳ ಯಶಸ್ಸಿನಿಂದಾಗಿ ಕನ್ನಡ ರಂಗಭೂಮಿ ನನ್ನನ್ನು ಒಬ್ಬ ರಂಗ ನಿರ್ದೇಶಕ ಎಂದು ಗುರುತಿಸಿ ಗೌರವಿಸಿತು...

ಇಷ್ಟೆಲ್ಲಾ ತಮ್ಮ ಬದುಕಿನ ಅನುಭವ ಹಾಗೂ ತಮ್ಮ ಏರಿದ ಯಶಸ್ಸಿನ ಮೆಟ್ಟಿಲುಗಳ ನೆನಪಿನ ಬುತ್ತಿಯನ್ನು ನಯನ ಸಭಾಂಗಣದಲ್ಲಿ ಬಿಚ್ಚಿಡತೊಡಗಿದರು ವಾಲ್ಟರ್ ಡಿಸೋಜಾ. ಅವತ್ತು 2014, ಮಾರ್ಚ 25. ಬೆಮೆಲ್ ರಂಗಸ್ನೇಹಿತರು ಸೇರಿಕೊಂಡು ಸ್ಥಾಪಿಸಿದ ಮಿತ್ರಕೂಟ ತಂಡದ ಕಲಾವಿದರು ಪ್ರಯೋಗರಂಗ ರಂಗತಂಡದ ಸಹಕಾರದಿಂದ ವಾಲ್ಟಿ-60 ಎನ್ನುವ ಹೆಸರಲ್ಲಿ ವಾಲ್ಟರ್ ಡಿಸೋಜರವರಿಗೆ ರಂಗಸನ್ಮಾನ ಕಾರ್ಯಕ್ರಮವನ್ನು ನಯನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ವಾಲ್ಟರ್ ತಮ್ಮ ಅಂತರಾಳವನ್ನು ಮೇಲಿನಂತೆ ಬಿಚ್ಚಿಟ್ಟರು. ಸನ್ಮಾನ ಕಾರ್ಯಕ್ರಮ ಆಯೋಜನೆಗೆ ಇನ್ನೊಂದು ಪ್ರಭಲ ಕಾರಣವಿತ್ತು. ಅದು ವಾಲ್ಟರ್ ರವರು ಬಿಇಎಂಎಲ್ ಕಾರ್ಖಾನೆಯ ವೃತ್ತಿಯಿಂದ ನಿವೃತ್ತರಾಗುತ್ತಿದ್ದರು. ಅವರಿಗೆ ರಂಗಗೌರವದ ಮೂಲಕ ಬೀಳ್ಕೊಡುಗೆ ಕಾರ್ಯಕ್ರಮವನ್ನು ಬೆಮೆಲ್ ಕಲಾವಿದರು ಆಯೋಜಿಸಿದ್ದರು. ಯಾಕೆಂದರೆ ವಾಲ್ಟರ್ ಬೆಮೆಲ್ ನಲ್ಲಿ ಕೇವಲ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಮಾತ್ರ ಕಾರ್ಯನಿರ್ವಹಿಸಲಿಲ್ಲ. ಅದರ ಜೊತೆ ಜೊತೆಗೆ ಅಲ್ಲಿ ಕಾರ್ಮಿಕ ರಂಗಭೂಮಿಯನ್ನು ಕಟ್ಟಿದರು. ಹಲವಾರು ಕಾರ್ಮಿಕರೊಳಗಿನ ಪ್ರತಿಭೆಯನ್ನು ಗುರುತಿಸಿ ಕಲಾವಿದರನ್ನಾಗಿ ಬೆಳೆಸಿದರು. ಬೆಮೆಲ್ ಲಲಿತಕಲಾ ಸಂಘಕ್ಕೆ ಹಲವಾರು ನಾಟಕಗಳನ್ನು ನಿರ್ದೇಶಿಸಿದರು. ಒಟ್ಟಾರೆಯಾಗಿ ಕಾರ್ಖಾನೆಯ ಯಾಂತ್ರಿಕ ವ್ಯವಸ್ಥೆಯಲ್ಲಿ ಜೀವಂತಿಕೆಯನ್ನು ತಂದರು. ಹೀಗಾಗಿ ಬೆಮೆಲ್ ಕಾರ್ಮಿಕರು ಹಾಗೂ ಆಡಳಿತ ಮಂಡಳಿಯಲ್ಲಿ ವಾಲ್ಟರ್ ಲೋಕಪ್ರಸಿದ್ದರಾದರು. ಹೀಗಾಗಿ ವಾಲ್ಟರ್ ಬೆಳೆಸಿದ ಕಲಾವಿದರೆಲ್ಲಾ ಸೇರಿ ಅವರ ವೃತ್ತಿ ನಿರ್ಗಮನವನ್ನು ರಂಗಸನ್ಮಾನದ ಮೂಲಕ ಆಚರಿಸಿ ಸಂಭ್ರಮಿಸಿದರು. ಹಲವಾರು ಜನ ವಾಲ್ಟರ್ ಜೊತೆಗಿನ ತಮ್ಮ ಒಡನಾಟವನ್ನು ಹಂಚಿಕೊಂಡರು.


ಸಮಾರಂಭದಲ್ಲಿ ಮಾತಾಡಿದ ಕೆಲವರು ವಾಲ್ಟರ್ಗೆ ಆರವತ್ತು ವರ್ಷವಾಯ್ತು ಅಂದಾಗ ಸಣ್ಣದಾಗಿ ಅಸಹನೆ ವ್ಯಕ್ತಪಡಿಸಿದ ವಾಲ್ಟರ್ ಮಿತ್ರಕೂಟದವರು ನನ್ನ ಸನ್ಮಾನದ ಸಮಾರಂಭಕ್ಕೆ ಅದ್ಯಾಕೆ ವಾಲ್ಟಿ-60 ಎಂದು ಹೆಸರಿಟ್ಟರೋ ಏನೋ? ದಾಖಲೆಗಳಲ್ಲಿ ನನಗೆ ಅರವತ್ತು ತುಂಬಿದ್ದು ನಿಜ. ಆದರೆ ದೈಹಿಕವಾಗಿ ನನಗೀಗ ಕೇವಲ 37 ಹಾಗೂ ಮಾನಸಿಕವಾಗಿ ನನಗಿನ್ನೂ 21 ವಯಸ್ಸಷ್ಟೇ. ಇದನ್ನು ಸಾಬೀತುಪಡಿಸಬೇಕೆಂದರೆ ಈಗ ಇದೇ ವೇದಿಕೆಯ ಮೇಲೆ ನಾನು ಕನಿಷ್ಟ ಎಂದರೂ ಎರಡು ಗಂಟೆಗಳ ಕಾಲ ನಾನ್ಸ್ಟಾಪ್ ಮೈಮ್ ಅಭಿನಯ ಮಾಡಿ ತೋರಿಸಬಲ್ಲೆ.  ಎಂದು ಚಾಲೆಂಜ್ ಎಸೆದರು. ಅವರ ತಾಕತ್ತೇ ಅಂತಹುದು. ಕಳೆದ ಇಪ್ಪತ್ತು ವರ್ಷಗಳಲ್ಲಿ ಒಂದಿಷ್ಟು ಹೊಟ್ಟೆ ಮುಂದೆ ಬಂದಿದ್ದನ್ನು ಹೊರತು ಪಡಿಸಿ ವಾಲ್ಟರ್ ದೇಹ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಗುರುತಿಸಲು ಸಾಧ್ಯವಿಲ್ಲ. ಇನ್ನೂ ಕೂಡಾ ಅದೇ ಎನರ್ಜಿ ಇಟ್ಟುಕೊಂಡೇ ನಟಿಸುತ್ತಾರೆ. ನಿಜಕ್ಕೂ ವಾಲ್ಟರ್ ಕನ್ನಡ ರಂಗಭೂಮಿ ಕಂಡ ಅನನ್ಯ ಪ್ರತಿಭೆ. ಅವರ ಸಾಧನೆಯ ಸಂಕ್ಷಿಪ್ತ ಪರಿಚಯ ಹೀಗಿದೆ.
 
1954 ಎಪ್ರಿಲ್ ಒಂದರಂದು ಮುಂಬೈಯಲ್ಲಿ ಕ್ರಿಶ್ಚಿಯನ್ ಸಮುದಾಯದಲ್ಲಿ ಹುಟ್ಟಿದ ವಾಲ್ಟರ್ ನಂತರ ಬೆಳೆದಿದ್ದು ಓದಿದ್ದು ಎಲ್ಲಾ ಕರ್ನಾಟಕದ ಸಾಗರ, ಪುತ್ತೂರು ಮತ್ತು ಮಂಗಳೂರುಗಳಲ್ಲಿ. ಬಿಎಸ್ ಸಿ ಪದವಿಯ ನಂತರ ರಂಗಭೂಮಿಯ ಸೆಳೆತಕ್ಕೊಳಗಾಗಿ ದೆಹಲಿಯ ನ್ಯಾಷನಲ್ ಸ್ಕೂಲ್ ಆಪ್ ಡ್ರಾಮಾ (ಎನ್.ಎಸ್.ಡಿ) ಸೇರಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಜೊತೆಗೆ ಒಂದು ವರ್ಷ ಫೋಟಗ್ರಾಫಿಯಲ್ಲೂ ಡಿಪ್ಲೋಮಾ ಮಾಡಿದರು.  ಎನ್ಎಸ್ಡಿ ಯಿಂದ ವಾಪಸ್ ಬಂದನಂತರ ಕರ್ನಾಟಕದ ಏಳು ಜಿಲ್ಲೆಗಳಲ್ಲಿ 415 ರಷ್ಟು ಅಭಿನಯ ಕಾರ್ಯಾಗಾರಗಳನ್ನು ನಿರ್ದೇಶಿಸಿ ಸಹಸ್ರಾರು ಯುವಕರನ್ನು ತರಬೇತುಗೊಳಿಸಿದರು.

  
ಸಮುದಾಯದ ಧಾರವಾಡ ಘಟಕಕ್ಕೆ ಸ್ಪಾರ್ಟಕಸ್ ನಾಟಕ ನಿರ್ದೇಶಿಸಿದ ವಾಲ್ಟರ್ರವರು ಪ್ರಯೋರಂಗ ರಂಗತಂಡಕ್ಕೆ ಸಂತೆಯಲ್ಲಿ ನಿಂತ ಕಬೀರ, ಪರಿಹಾರ ಹಾಗೂ ಮಹಿಪತ ಕೋಣನ ತಂಬ್ಗಿ ಎಂಎ ಎನ್ನುವ ಮೂರು ಅಪರೂಪದ ನಾಟಕಗಳನ್ನು ನಿರ್ದೇಶಿಸಿ ಪ್ರಸಿದ್ದಿ ಪಡೆದಿದ್ದಾರೆ. ಸ್ನೇಹರಂಗ ತಂಡಕ್ಕೆ ಮಾರೀಚನ ಬಂಧುಗಳು ಹಾಗೂ ತುಕ್ಕೋಜಿ ನಾಟಕ ನಿರ್ದೇಶಿಸಿದ್ದಾರೆ. ಕಾರ್ಮಿಕ ರಂಗಭೂಮಿಯನ್ನು ಬೆಮೆಲ್ ಕಾರ್ಖಾನೆಯಲ್ಲಿ ಬೆಳೆಸುವಲ್ಲಿ ತಮ್ಮ ಕೊಡುಗೆಯನ್ನು ಕೊಟ್ಟ ವಾಲ್ಟರ್ ಬೆಮೆಲ್ ಲಲಿತ ಕಲಾ ಸಂಘಕ್ಕೆ ತುಘಲಕ್, ಹಯವದನ, ಹಿಂತಿರುಗಿ ನೋಡಬೇಡ, ಡಾ.ತಿಪ್ಪೇಶಿ, ಸಾಯೋಆಟ, ಕೃಷ್ಣಸಂಧಾನ ... ಮುಂತಾದ ನಾಟಕಗಳನ್ನು ಕಾರ್ಮಿಕರಿಗೆ ನಿರ್ದೇಶಿಸಿ ಬೆಮೆಲ್ನಲ್ಲಿ ಸಾಂಸ್ಕೃತಿಕ ವಾತಾವರಣವನ್ನು ಸೃಷ್ಟಿಸಿದರು. ಜೊತೆಗೆ ಕುಡಿತ ಹಾಗೂ ಸುರಕ್ಷತೆ ಕುರಿತು ಬೆಮೆಲ್ ಕಾರ್ಮಿಕರಿಗೆ ಬೀದಿ ನಾಟಕಗಳನ್ನೂ ನಿರ್ದೇಶಿಸಿ ಪ್ರದರ್ಶಿಸಿದರು. ಕಾಲೇಜು ರಂಗಭೂಮಿಗೂ ತಮ್ಮ ನಿರ್ದೇಶನ ಪ್ರತಿಭೆಯನ್ನು ವಿಸ್ತರಿಸಿದ ಡಿಸೋಜಾರವರು ನ್ಯಾಷನಲ್ ಕಾಲೇಜಿಗೆ ಒಂದು ಲೋಕದ ಕಥೆ ಹಾಗೂ ಕ್ರೈಸ್ಟ್ ಕಾಲೇಜಿಗೆ ಇದುವೆ ಜೀವನ ನಾಟಕ ಮಾಡಿಸಿದ್ದಾರೆ.   ಕನ್ನಡ, ಕೊಂಕಣಿ, ತುಳು, ಮರಾಠಿ, ಹಿಂದಿ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ನಲವತ್ತೆರಡಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ. ವಿಡಂಬಣೆ ಅವರ ನಾಟಕ ನಿರ್ದೇಶನದ ಮೂಲದ್ರವ್ಯವಾಗಿದೆ.  ಭರತನ ನಾಟ್ಯ ಶಾಸ್ತ್ರದ ಆಶಯದಂತೆ ರಂಜನೆಯ ಮೂಲಕ ಬೋಧನೆಯನ್ನು ತಮ್ಮ ನಾಟಕಗಳಲ್ಲಿ ತೋರಿಸುವುದರಲ್ಲಿ ವಾಲ್ಟರ್ ಪ್ರಸಿದ್ದರು.

ಸ್ವಂತ ಆಸಕ್ತಿಯಿಂದ ಮೌನಾಭಿನಯ (ಮೈಮ್) ಕಲೆಯನ್ನು ರೂಢಿಸಿಕೊಂಡು ಅದರಲ್ಲಿ ಪ್ರಭುದ್ದತೆಯನ್ನು ಸಾಧಿಸಿದ್ದಷ್ಟೇ ಅಲ್ಲದೇ ಸಾವಿರಾರು ಯುವಕರಿಗೆ ಮೈಮ್ ಕುರಿತು ತರಬೇತಿಯನ್ನು ನೀಡಿ ಕರ್ನಾಟಕದಲ್ಲಿ ಮೈಮ್ ಕಲೆಯನ್ನು ಬೆಳೆಸಲು ತಮ್ಮ ಕೊಡುಗೆಯನ್ನು ಕೊಟ್ಟಿದ್ದಾರೆ. ಜೊತೆಗೆ ಕಿನ್ನರ ಎನ್ನುವ ಮೈಮ್ ತಂಡವನ್ನು ಕಟ್ಟಿಕೊಂಡು ಅದರ ಮೂಲಕ ಇಲ್ಲಿವರೆಗೂ 1662 ಮೈಮ್ ಪ್ರದರ್ಶನಗಳನ್ನು ರಾಜ್ಯ, ದೇಶ, ವಿದೇಶಗಳಲ್ಲಿ ಕೊಟ್ಟಿದ್ದಾರೆ. ಮೌನಾಭಿನಯದಲ್ಲಿ ಹೊಸ ಪ್ರಯೋಗಗಳನ್ನು ನಡೆಸಿ ಕಲೆಗೆ ಹೊಸ ಆಯಾಮವನ್ನು ಕೊಟ್ಟಿದ್ದಾರೆ. ಗಾಲಿಬ್ ಉರ್ದು ಗಜಲ್ಗಳನ್ನು ಮೌನಾಭಿನಯದಲ್ಲಿ ನಿರ್ದೇಶಿಸಿದ್ದು ಅವರ ಪ್ರತಿಭೆಗೆ ಸಾಕ್ಷಿಯಾಗಿದೆ.  ಎಂಟು ಸಾಕ್ಷಚಿತ್ರಗಳು ಹಾಗೂ ಮೂರು ಟಿ.ವಿ. ದಾರಾವಾಹಿಗಳಲ್ಲಿ ಮತ್ತು ಕೆಲವಾರು ಕನ್ನಡ ಸಿನೆಮಾಗಳಲ್ಲಿ ಅಭಿನಯಿಸಿದ್ದಾರೆ.  ಸಾಕ್ಷಿ ಮತ್ತು ಸಾಕಿದ ಹೂ ಎನ್ನುವ ಎರಡು ಕಿರುಚಿತ್ರಗಳನ್ನು ಟಿವಿಗಾಗಿ ನಿರ್ದೇಶಿಸಿದ್ದರೆ. ಇಪ್ಪತ್ತೆರಡಕ್ಕೂ ಹೆಚ್ಚು ಜಾಹಿರಾತುಗಳಲ್ಲಿ ಹಾಗೂ ಸಾಕ್ಷಚಿತ್ರಗಳಲ್ಲಿ ನಟಿಸಿದ್ದಾರೆ.


ರಂಗಭೂಮಿಗೆ ವಾಲ್ಟರ್ ಒಬ್ಬ  ಉತ್ತಮ ಸಂಪನ್ಮೂಲ ವ್ಯಕ್ತಿ. ಅಭಿನಯ ತರಂಗ, ಆದರ್ಶ ಫಿಲಂ ಸಂಸ್ಥೆ ಹಾಗೂ ಸೃಷ್ಟಿ ದೃಶ್ಯಕಲಾಮಾಧ್ಯಮ ಅಕಾಡೆಮಿ ಮುಂತಾದ ನಾಟಕ ಹಾಗೂ ಸಿನೆಮಾ ತರಬೇತಿ ಕೊಡುವ ಸಂಸ್ಥೆಗಳಲ್ಲಿ  ಅತಿಥಿ ಉಪನ್ಯಾಸಕಾರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಅಭಿನಯ ಕುರಿತು ತರಬೇತಿಯನ್ನು ಕೊಟ್ಟಿದ್ದಾರೆ. ಉದಯ ಕಲಾನಿಕೇತನ, ಕ್ರೈಸ್ಟ್ ಕಾಲೇಜ್, ರಾಮಯ್ಯ ಕಾಲೇಜಗಳಲ್ಲಿ ಕೂಡಾ ತರಬೇತಿ ಶಿಬಿರಗಳನ್ನು ನಡೆಸಿದ್ದಾರೆ. ಹಲವಾರು ಪ್ರಮುಖ ಸರಕಾರಿ ಇಲಾಖೆಗಳಿಗೆ ಹಾಗೂ ವಿಶ್ವವಿದ್ಯಾಲಯಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ತಮ್ಮ ವಿಚಾರವನ್ನು ಹಂಚಿಕೊಂಡಿದ್ದಾರೆ.

ವಾಲ್ಟರ್ ನಮಗೆಲ್ಲಾ ಇಷ್ಟ ಆಗುವುದು ಅವರ ಪ್ರಗತಿಪರ ದೋರಣೆಯಿಂದಾಗಿ. ಸಮುದಾಯ ಹಾಗೂ ಇಪ್ಟಾ ಸಾಂಸ್ಕೃತಿಕ ಸಂಘಟನೆಗಳ ಜೊತೆಗಿನ ಒಡನಾಟ ಹಾಗೂ ಕೆಲವಾರು ಪ್ರಗತಿಪರ ಸಂಘಟನೆಗಳ ಸಹವಾಸದಿಂದಾಗಿ ಎಡಪಂಥೀಯ ವಿಚಾರದಾರೆಗಳನ್ನು ಅಳವಡಿಸಿಕೊಂಡ ವಾಲ್ಟರ್ ತಮ್ಮೆಲ್ಲಾ ನಾಟಕಗಳಲ್ಲಿ ಪ್ರಗತಿಪರ ಚಿಂತನೆಗಳನ್ನು ತೋರಿಸಿದ್ದಾರೆ. ಚರ್ಚಗಳಲ್ಲಿ ಧರ್ಮಾಧಾರಿತ ನಾಟಕಗಳನ್ನು ಮಾಡಿಸಿದರೆ ಕೇಳಿದಷ್ಟು ಹಣ ನೀಡುತ್ತೇವೆ ಎಂದು ಆಮಿಷ ಬಂದಾಗ ಅದನ್ನು ನಿರಾಕರಿಸುವ ವಾಲ್ಟರ್ ಅದೆಷ್ಟೋ ಸಲ ಬಡ ರಂಗತಂಡಗಳಿಗೆ ಅತೀ ಕಡಿಮೆ ಹಣದಲ್ಲಿ ನಾಟಕ ಮಾಡಿಸಿದ್ದಿದೆ. ಎನ್ಎಸ್ಡಿಯಿಂದ ಬಂದ ಹಲವಾರು ನಿರ್ದೇಶಕರು ನಾಟಕ ಪ್ರದರ್ಶನಕ್ಕೆ ಹೆಚ್ಚು ಹಣ ಖರ್ಚು ಮಾಡಿಸುತ್ತಾರೆ ಎನ್ನುವ ಆರೋಪವಿದೆ. ಎಷ್ಟೋ ಸಲ ಅದು ಸಾಬೀತಾಗಿದೆ. ಆದರೆ ವಾಲ್ಟರ್ರವರ ನಿರ್ದೇಶನದ ನಾಟಕದ ಪ್ರೊಡಕ್ಷನ್ ಕಾಸ್ಟ್ ಹತ್ತರಿಂದ ಹದಿನೈದು ಸಾವಿರ ರೂಪಾಯಿಗಳೊಳಗೇ ಇರುತ್ತದೆ. ಹೀಗಾಗಿ ಕಡಿಮೆ ವೆಚ್ಚದಲ್ಲಿ ಉತ್ತಮ ನಾಟಕವನ್ನು ಕಟ್ಟಿಕೊಡುವಲ್ಲಿ ವಾಲ್ಟರ್  ಎಕ್ಸಪರ್ಟ.  ರಂಗಭೂಮಿಗೆ ಇಂತಹ ನಿರ್ದೇಶಕರ ಅಗತ್ಯ ತುಂಬಾ ಇದೆ

ತಮ್ಮ ಜನಪರ ನಿಲುವನ್ನು ಹಲವಾರು ಬಾರಿ ಸಾಬೀತುಪಡೆಸಿದ್ದಾರೆ. ಮಹಿಳಾ ಜಾಗೃತಿ ಎನ್ನುವ ಮಹಿಳಾಪರ ಹೋರಾಟ ಮಾಡುವ ಸಂಘಟನೆಗೆ ಎರಡು ಸಲ ಅಭಿನಯ ಕಾರ್ಯಾಗಾರವನ್ನು ವಾಲ್ಟರ್ ನಿರ್ದೇಶಿಸಿದ್ದರು. ವಿಶೇಷ ಏನೆಂದರೆ ಒಂದು ರೂಪಾಯಿ ಸಂಭಾವನೆಯನ್ನೂ ಸಹ ಕೊಟ್ಟರೂ ತೆಗೆದುಕೊಳ್ಳಲಿಲ್ಲ. ಇಪ್ಟಾ ಸಂಘಟನೆಯ ಕಲಾವಿದರಿಗೆ ಹಲವಾರು ಬಾರಿ ಮೈಮ್ ತರಬೇತಿಯನ್ನು ಹೇಳಿಕೊಟ್ಟರು. ಎಂದೂ ಸಂಭಾವನೆಯನ್ನು ಅಪೇಕ್ಷಿಸಲಿಲ್ಲ. ಹಣವಿಲ್ಲದೆ ಜನಕ್ಕಾಗಿ ಕೆಲಸ ಮಾಡುವ ಜನಪರ ಸಂಘಟನೆಗಾಗಿ ಎಂದೂ ವಾಲ್ಟರ್ ಸಂಭಾವನೆ ಕೇಳಿದ್ದಿಲ್ಲ. ಅವರಾಗೇ ಕೊಟ್ಟರೂ ಸಹ ತೆಗೆದುಕೊಳ್ಳಲಿಲ್ಲ. ಯಾಕೆಂದು ಕೇಳಿದರೆ ನೀವು ನನಗೆ ಕೊಡುವ ಸಂಭವನೆಯನ್ನು ನನ್ನ ಪರವಾಗಿ ನಿಮ್ಮ ಸಂಘಟನೆಗೆ ದೇಣಿಗೆಯಾಗಿ ತೆಗೆದುಕೊಳ್ಳಿ, ನನಗೆ ನೇರವಾಗಿ ಹೋರಾಟಕ್ಕೆ ಬರಲು ಸಾಧ್ಯವಿಲ್ಲ. ಹೀಗಾಗಿ ಜನ ಹೋರಾಟದ ಕೆಲಸಕ್ಕೆ ಪೂರಕವಾಗಿ ನಾನು ಕೊಟ್ಟ ತರಬೇತಿ ಉಪಯೋಗವಾದರೆ ಅದೇ ನನ್ನ ಸಾರ್ಥಕತೆ ಎಂದು ವಾಲ್ಟರ್ ಹೇಳಿ ತಮ್ಮ ಜನಪರ ನಿಲುವನ್ನು ಸಾಬೀತುಪಡಿಸಿದ್ದರು. ಹೀಗಾಗಿ ಸಾಮಾಜಿಕ ಪಿಡುಗುಗಳ ಬಗ್ಗೆ ಜಾಗೃತಿ ಮೂಡಿಸುವಂತಹ ಹಲವಾರು ಬೀದಿನಾಟಕಗಳನ್ನು ಕರ್ನಾಟಕ, ಕೇರಳ, ಪಾಂಡಿಚೇರಿ, ತಮಿಳುನಾಡು, ಭೂಪಾಲ, ಮುಂಬೈಗಳಲ್ಲಿ ನಿರ್ದೇಶಿಸಿ ಪ್ರದರ್ಶಿಸಿದ್ದಾರೆ. ಏಡ್ಸ್ ಮತ್ತು ಕ್ಯಾನ್ಸರ್ ಕುರಿತು ಮೈಮ್ ಶೋಗಳ ಮೂಲಕ ಜನ ಜಾಗೃತಿ ಮೂಡಿಸಿದ್ದಾರೆ. ಚರ್ಚ ಆಪ್ ಸೌಥ್ ಇಂಡಿಯಾ ವತಿಯಿಂದ ಕೊಳಚೆ ನಿರ್ಮೂಲನೆ ಬಗ್ಗೆ ಒಂದು ವರ್ಷಗಳ ಕಾಲ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ. ಬುದ್ದಿಮಾಂದ್ಯ ಹಾಗೂ ಅನಾಥ ಮಕ್ಕಳಿಗೆ ಮತ್ತು ರಿಮಾಂಡ್ ಹೋಂ ಮಕ್ಕಳಿಗೆ ವಿಶೇಷ ತರಬೇತಿಯನ್ನು ನೀಡಿದ್ದಾರೆ. ಒಬ್ಬ ಕಲಾವಿದ ನಿರ್ದೇಶಕನಿಗೆ ಸಾಮಾಜಿಕ ಜವಾಬ್ದಾರಿಯೂ ಮುಖ್ಯ ಹಾಗೂ ಕಲೆಯ ಮೂಲಕ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ದೋರಣೆ ಇನ್ನೂ ಪ್ರಾಮುಖ್ಯ ಎನ್ನುವುದಕ್ಕೆ ವಾಲ್ಟರ್ ಮಾದರಿಯಾಗಿದ್ದಾರೆ. ಕಲೆಗಾಗಿ ಕಲೆಯಲ್ಲ, ಜನರಿಗಾಗಿ ಕಲೆ ಎನ್ನುವುದನ್ನು ಅರಿತುಕೊಂಡಿದ್ದಾರೆ. 1987ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಹಾಗೂ 2013ರಲ್ಲಿ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ವಾಲ್ಟರ್ ರವರಿಗೆ ದೊರಕಿವೆ.

ವಾಲ್ಟರ್ ನಿರ್ದೇಶನದ ಕ್ಯಾನ್ಸರ್  ಕುರಿತು ಜನಜಾಗೃತಿ ಬೀದಿನಾಟಕ ಒಂದು ದೃಶ್ಯ

ಬೇಕಾದಷ್ಟು ಸಾಧನೆ ಮಾಡಿದರೂ ಎಂದೂ ವಾಲ್ಟರ್ ಶ್ರೇಷ್ಟತೆಯ ವ್ಯಸನಕ್ಕೆ ಬಿದ್ದವರಲ್ಲ. ಅವರ ಮಾತಿನ ಶೈಲಿಯಲ್ಲಿ ಒಂದಷ್ಟು ಪಾಳೇಗಾರಿಕೆ ಸಂಸ್ಕೃತಿ ಇದೆ ಎಂದು ಮೇಲ್ನೋಟಕ್ಕೆ ಅನ್ನಿಸಿದರೂ ಎಂದೂ ಸರ್ವಾಧಿಕಾರಿಯಂತೆ ವರ್ತಿಸಲಿಲ್ಲ. ಸಹ ಕಲಾವಿದರನ್ನು ಸ್ನೇಹಿತರಂತೆ ಕಾಣುವ ಆತ್ಮೀಯತೆಯಿಂದಾಗಿ ವಾಲ್ಟರ್ನ್ನು ಎಲ್ಲರೂ ಮೆಚ್ಚುತ್ತಾರೆ. ಅವರ ವ್ಯಯಕ್ತಿಕ ದೌರ್ಬಲ್ಯಗಳೇನೇ ಇದ್ದರೂ ಅವು ರಂಗಭೂಮಿ ಕೆಲಸಕ್ಕೆ ಎಂದು ಅಡ್ಡಬರಲಿಲ್ಲ. ಕೆಲವೊಮ್ಮೆ ವೃತ್ತಿ ನಿಷ್ಟೆಯಲ್ಲಿ ಮೈಮರೆತು ರಂಗನಿಷ್ಟೆಯನ್ನು ಮರೆತಿದ್ದಿದೆ, ಮತ್ತೆ ಎಚ್ಚೆತ್ತು ನಾಟಕಗಳನ್ನು ನಿರ್ದೇಶಿಸಿದ್ದೂ ಇದೆ. ಆಗಾಗ ಬೇಸರವಾದಾಗ ರಂಗಕ್ರಿಯೆಯಿಂದ ದೂರವಿರುವ ವಾಲ್ಟರ್ ಮೇಲೆ ಸೋಮಾರಿ ಎನ್ನುವ ಆರೋಪವೂ ಇದೆ. ರಂಗಕೆಲಸ ಇಲ್ಲದಾಗ ನಿಜಕ್ಕೂ ಸೋಮಾರಿಯಾಗಿ ಜಡತ್ವ ಬೆಳೆಸಿಕೊಳ್ಳುವ ವಾಲ್ಟರ್ ಒಮ್ಮೆ ನಾಟಕವೊಂದಕ್ಕೆ ಕಮಿಟ್ ಆಗಿಬಿಟ್ಟರೆ  ಚಟುವಟಿಕೆಯ ಗಣಿಯಾಗುತ್ತಾರೆ. ವಯಸ್ಸಲ್ಲೂ ಪಾದರಸದ ಗುಣ ಅವರಲ್ಲಿದೆ. ನಿಜ ಹೇಳಬೇಕೆಂದರೆ ವಾಲ್ಟರ್ ಪ್ರತಿಭೆಯನ್ನು ಆಧುನಿಕ ಕನ್ನಡ ರಂಗಭೂಮಿ ಸರಿಯಾಗಿ ಬಳಸಿಕೊಳ್ಳಲಿಲ್ಲ. ಪ್ರಯೋಗರಂಗವನ್ನು ಹೊರತು ಪಡಿಸಿದರೆ ಬೇರೆ ರಂಗ ತಂಡಗಳು ವಾಲ್ಟರ್ರವರಿಗೆ ನಾಟಕ ನಿರ್ದೇಶನದ ಅವಕಾಶಗಳನ್ನು ಕೊಡಲಿಲ್ಲ. ಅವಕಾಶ ಕೊಡಿ ಎಂದು ಕೇಳಲು ವಾಲ್ಟರ್ ಸ್ವಾಭಿಮಾನವೂ ಅವಕಾಶ ಕೊಡುವುದಿಲ್ಲ. ವಾಲ್ಟಿರವರ ನಿರ್ಲಿಪ್ತ ಗುಣ ಹಾಗೂ ಅಲಿಪ್ತ ನಡವಳಿಕೆ ಅವರ ದೌರ್ಬಲ್ಯಗಳಾಗಿವೆ.
  
ಇಷ್ಟೆಲ್ಲಾ ಸಾಧನೆಯನ್ನು ಮಾಡಿದರೂ ಯಾಕೆ ವಾಲ್ಟರ್ ತುಂಬಾ ಪ್ರಸಿದ್ಧಿಯನ್ನು ಪಡೆಯಲಿಲ್ಲ?. ಇಷ್ಟೆಲ್ಲಾ ಬಹುರೂಪಿ ಪ್ರತಿಭೆಯನ್ನು ಹೊಂದಿದ್ದರೂ ಯಾಕೆ ಕನ್ನಡ ರಂಗಭೂಮಿಯಲ್ಲಿ ಗಮನಾರ್ಹವಾಗಿ ಹೆಸರು ಮಾಡಲಿಲ್ಲ? ಇದಕ್ಕೆ ವಾಲ್ಟಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ಎನ್ನುವ ಕಾರಣವಾ? ಇಲ್ಲವೇ ಕಾರ್ಮಿಕ ರಂಗಭೂಮಿಯ ನಿರ್ದೇಶಕ ಎನ್ನುವ ಬ್ರ್ಯಾಂಡ್ ಕಾರಣವಾ? ಅಥವಾ ಮೈಮ್ ಕಲಾವಿದ ಎನ್ನುವ ಕಾರಣಕ್ಕೆ ಅವರ ನಿರ್ದೇಶನ ಪ್ರತಿಭೆ ಹಿನ್ನಡೆಯನ್ನು ಅನುಭವಿಸಿತಾ?  ಬಹುಷಃ ಇವೆಲ್ಲವೂ ಕಾರಣಗಳಾಗಿವೆಯಾದರೂ ಪ್ರಮುಖ ಕಾರಣ ಬೇರೆಯದೇ ಆಗಿದೆ. ಅದು ಎಂದೂ ವಾಲ್ಟರ್ ರಂಗರಾಜಕೀಯ ಮಾಡಲು ಹೋಗಲಿಲ್ಲ. ರವೀಂದ್ರ ಕಲಾಕ್ಷೇತ್ರ ಕೇಂದ್ರಿತ ತಂತ್ರಗಾರಿಕೆಯಿಂದ ದೂರವೇ ಉಳಿದರು. ಸಂಸ್ಕೃತಿ ಇಲಾಖೆಯ ಕ್ರಿಯಾಯೋಜನೆಗಳನ್ನು ಪಡೆದು ಸುಳ್ಳು ಲೆಕ್ಕಪತ್ರ ಸೃಷ್ಟಿಸಿ ಹಣ ಮಾಡಿಕೊಳ್ಳಲಿಲ್ಲ. ಇಲ್ಲದ ರೆಪರ್ಟರಿಯನ್ನು ಕಾಗದದಲ್ಲಿ ತೋರಿಸಿ ಕೇಂದ್ರ ಸರಕಾರದ ಅನುದಾನವನ್ನು ದೋಚಲಿಲ್ಲ. ಎಂದೂ ಎನ್ಎಸ್ಡಿ ಎನ್ನುವ ಟ್ರಂಪ್ ಕಾರ್ಡನ್ನು ಬಳಸಿ ಲಾಭಮಾಡಿಕೊಳ್ಳಲಿಲ್ಲ. ಎನ್ಎಸ್ಡಿ, ಆರ್ಆರ್ಸಿ ಮುಂದೆ ಹೋಗಿ ಕಾರ್ಯಕ್ರಮಗಳನ್ನು ಕೊಡಿ ಎಂದು ಬೇಡಿಕೊಳ್ಳಲಿಲ್ಲ. ಪ್ರಚಾರದ ಹಪಾಹಪಿಗೆ ಬೀಳದೇ ಯಾವಾಗಲೂ ಮಾಧ್ಯಮಗಳಿಂದ ದೂರವೇ ಉಳಿದರು.  ಹೀಗಾಗಿ ವಾಲ್ಟರ್ ಹೆಸರು ರಂಗಭೂಮಿಯಲ್ಲಿ ಮುಂಚೂಣಿಯಲ್ಲಿ ಬರದೇ ನೇಪತ್ಯದಲ್ಲೇ ಉಳಿದುಕೊಂಡಿತು. ಕೆಲವು ಖಾಲಿ ಡಬ್ಬಾಗಳು ಸದ್ದು ಮಾಡುತ್ತಾ ಜನರ ಗಮನ ಸೆಳೆದು ಹಣ-ಹೆಸರು ಮಾಡಿದರೆ, ತುಂಬಿದ ಕೊಡದಂತಿರುವ ಪ್ರತಿಭಾವಂತ ನಿರ್ದೇಶಕ ವಾಲ್ಟರ್ ಎಲ್ಲೂ ಸದ್ದು ಮಾಡಲಾಗದೇ ತನ್ನ ಪಾಡಿಗೆ ತಾನು ರಂಗಕೆಲಸದಲ್ಲಿ ತೊಡಗಿದರು.

ಇಷ್ಟು ದಿನ ವಾಲ್ಟರವರ ರಂಗಕ್ರಿಯೆಗೆ ವೃತ್ತಿ ಎನ್ನುವ ಸಂಕೋಲೆ ಅಡ್ಡವಾಗುತ್ತಿತ್ತು. ಮಾರ್ಚ 30 ಕ್ಕೆ ಅವರು ಬೆಮೆಲ್ ವೃತ್ತಿಯಿಂದ ನಿವೃತ್ತರಾಗುತ್ತಿದ್ದಾರೆ. ಇನ್ನು ಮೇಲಾದರೂ ತಮ್ಮ ನಿರ್ಲಿಪ್ತತೆಯಿಂದ ಹೊರಬಂದು ಮತ್ತೆ ಕ್ರಿಯಾಶೀಲರಾಗಿ ರಂಗಭೂಮಿಯಲ್ಲಿ ತೊಡಗಲಿ ಎನ್ನುವುದು ಅವರ ರಂಗಸ್ನೇಹಿತರ ಬಯಕೆಯಾಗಿದೆ. ಕೆಲಸ ಮಾಡಬೇಕೆನ್ನುವವರಿಗೆ ಕನ್ನಡ ರಂಗಭೂಮಿಯಲ್ಲಿ ಕೊರತೆ ಇಲ್ಲ. ಎಲ್ಲಾ ಸಾಮರ್ಥ್ಯ ಇರುವ ವಾಲ್ಟರ್ ಮತ್ತೆ ರಂಗಭೂಮಿಯಲ್ಲಿ ಸಕ್ರೀಯರಾಗಲಿ. ತಮ್ಮ ಬದುಕಿನ ಎರಡನೇ ಇನಿಂಗ್ಸನ್ನು ನಿರಂತರವಾಗಿ ನಾಟಕಗಳನ್ನು ಕಟ್ಟುವ ಮೂಲಕ ಆರಂಭಿಸಲಿ. ಕನ್ನಡ ರಂಗಭೂಮಿ ಎಚ್ಚೆತ್ತು ನೋಡುವಂತೆ ತಮ್ಮ ರಂಗಪ್ರಯೋಗಗಳ ಮೂಲಕ ಸಕಾರಾತ್ಮಕವಾಗಿ ಸದ್ದು ಮಾಡಲಿ ಎನ್ನುವುದು ರಂಗಕರ್ಮಿಗಳ ಬಯಕೆಯಾಗಿದೆ. ಈಗ ವಾಲ್ಟಿ-60 ಆಗಿರುವುದು ವಾಲ್ಟಿ-90 ಆಗಲಿ ಸಾಧ್ಯವಾದರೆ ವಾಲ್ಟಿ-120 ಕೂಡಾ ಆಗಲಿ ಎಂದು ಆಶಿಸೋಣ. ಪ್ರತಿಭಾನ್ವಿತ ರಂಗಕರ್ಮಿಯ 60 ವರ್ಷದ ಸಾರ್ಥಕ ಬದುಕಿಗೆ ಅಭಿನಂದಿಸೋಣ.  

                                                    -ಶಶಿಕಾಂತ ಯಡಹಳ್ಳಿ