ಬುಧವಾರ, ಮಾರ್ಚ್ 5, 2014

ಸಿಂಹರವರ ಏಕವ್ಯಕ್ತಿ ರಂಗಪ್ರಯೋಗ "ಟಿಪಿಕಲ್ ಟಿ.ಪಿ.ಕೈಲಾಸಂ" :



                                                        
(ಫೆ. 28ರಂದು ಕನ್ನಡ ರಂಗಭೂಮಿಯ ಅಭಿಜಾತ ನಟ ಸಿ.ಆರ್.ಸಿಂಹರವರು ಕಾಲವಶರಾದರು. ಅವರು ಅಭಿನಯಿಸಿದ ನಾಟಕಗಳಲ್ಲಿ ಪ್ರಮುಖವಾಗಿರುವುದು 'ತುಘಲಕ್' ಮತ್ತು 'ಟಿಪಿಕಲ್ ಟಿ.ಪಿ.ಕೈಲಾಸಂ' ನಾಟಕಗಳು.  ಕಾಲು ದಶಕಗಳ ಕಾಲ ಶತಕದ ಲೆಕ್ಕ ಮೀರಿ ದೇಶ-ವಿದೇಶಗಳಲ್ಲಿ ಪ್ರಯೋಗಗೊಂಡ  ನಾಟಕ 'ಟಿಪಿಕಲ್ ಟಿ.ಪಿ.ಕೈಲಾಸಂ'. ಸಿಂಹರವರ ನಿರ್ಗಮನದ ನಿಮಿತ್ತ  ಅವರಿಗೆ ರಂಗನಮನಗಳನ್ನು ಸಲ್ಲಿಸುವುದಕ್ಕಾಗಿ ಅವರ  ಪ್ರೀತಿಯ  ಈ ನಾಟಕದ ವಿಶ್ಲೇಷಣೆಯನ್ನು ಇಲ್ಲಿ ಕೊಡಲಾಗಿದೆ. ಇದು 2008 ಆಗಸ್ಟ್ 23ರಂದು 'ನಯನ' ಸಭಾಂಗಣದಲ್ಲಿ ನಡೆದ ಪ್ರಯೋಗದ ಕುರಿತು ವಿಮರ್ಶೆಯಾಗಿದೆ. 'ರಂಗಭೂಮಿ ವಿಶ್ಲೇಷಣೆ' ರಂಗಪತ್ರಿಕೆಯ 2008 ಸೆಪ್ಟಂಬರ್ ಸಂಚಿಕೆಯಲ್ಲಿ ಪ್ರಕಟಗೊಂಡಿತ್ತು.)  

ವಿಲಕ್ಷಣ  ಪ್ರತಿಭಾವಂತ ನಾಟಕಕಾರ, ಪ್ರಹಸನ ಪಿತಾಮಹರೆಂದೇ  ಹೆಸರಾದ   ಕೈಲಾಸಂರವರು  ಕನ್ನಡ ಹವ್ಯಾಸಿ ರಂಗಭೂಮಿಯ ಬೆಳವಣಿಗೆಗೆ ಹೇಗೆ ಕಾರಣರಾದರೋ, ಹಾಗೆ ಅದೇ  ಕೈಲಾಸಂನವರ ಬದುಕು-ಬರಹ ಆಧರಿಸಿದ ಪ್ರಯೋಗವು ಏಕವ್ಯಕ್ತಿ ರಂಗ ಪ್ರಕಾರದ  ಮುಂದುವರಿಕೆಗೆ  ಪ್ರೇರಕವಾಯಿತು. ಕೈಲಾಸಂರವರು ಕೊನೆಯುಸಿರೆಳೆಯುವ ಮೊದಲಿನ ಎರಡು ಗಂಟೆಗಳಲ್ಲಿ ನಡೆದಿರಬಹುದಾದ ಕೈಲಾಸಂ ಆಲೋಚನೆಗಳ ಊಹೆಗಳನ್ನು  ಟಿ.ಎನ್.ನರಸಿಂಹನ್ರವರು ದೃಶ್ಯರೂಪದಲ್ಲಿ  ಕಟ್ಟಿಕೊಡುವ ಗಟ್ಟಿ  ಪ್ರಯತ್ನವನ್ನು  ಟಿಪಿಕಲ್ ಟಿ.ಪಿ. ಕೈಲಾಸಂಮೂಲಕ ಮಾಡಿದ್ದಾರೆ.  ಕೈಲಾಸಂರವರ  ಕೊನೆಗಾಲದ ನೆನಪುಗಳು ಪದರುಪದರಾಗಿ  ಸಾಕ್ಷಚಿತ್ರಗಳಂತೆ  ರಂಗದ ಮೇಲೆ ಬಿಚ್ಚಿಕೊಂಡಿವೆ.

ಪಾಶ್ಚಾತ್ಯ ದೇಶದ  ಸೊಲೋ ಪ್ರದರ್ಶನಗಳಿಂದ ಪ್ರೇರೇಪಿತರಾಗಿ  ಏಕವ್ಯಕ್ತಿ  ಪ್ರದರ್ಶನ ಮಾಡಲೇ ಬೇಕೆಂಬ ಸಿ.ಆರ್.ಸಿಂಹರವರ ಒತ್ತಾಸೆಗೆ ಕಟ್ಟು ಬಿದ್ದ  ಟಿ.ಎನ್. ನರಸಿಂಹನ್ರವರು   ವಿಶಿಷ್ಟವಾದ ಏಕವ್ಯಕ್ತಿ ರಂಗಪ್ರಯೋಗವನ್ನು ರಚಿಸಿ ನಿರ್ದೇಶಿಸಿದ್ದರು. 1983 ನವೆಂಬರ್ನಲ್ಲಿ  ಟಿಪಿಕಲ್....ಕೈಲಾಸಂಪ್ರಯೋಗವು  ಬೆಂಗಳೂರಿನ 'ನಯನ' ಸಭಾಂಗಣದಲ್ಲಿ ಮೊದಲ ಬಾರಿಗೆ  ಪ್ರದರ್ಶನ ಕಂಡು ನೋಡುಗರನ್ನು  ಬೆರಗುಗೊಳಿಸಿತ್ತು. ಅಂದಿನಿಂದ 1991 ರವರೆಗೆ ನೂರು  ಪ್ರದರ್ಶನ  ಕಂಡ    ಏಕವ್ಯಕ್ತಿ ನಾಟಕವು  ನಂತರ  ಏಣಿಕೆಗಳನ್ನು  ಮೀರಿ ಕಳೆದ 25 ವರ್ಷಗಳಿಂದ  ಪ್ರದರ್ಶನಗೊಳ್ಳುತ್ತಲೇ ಬಂದಿದೆ. ಬಹುಷ: ತುಘಲಕ್ ಪಾತ್ರದ ನಂತರ ಸಿ ಆರ್.ಸಿಂಹರವರ  ಸಂಪೂರ್ಣ ಭಿನಯ ಪ್ರೌಡಿಮೆ ಇಲ್ಲಿ ಅನಾವರಣಗೊಂಡಿದೆ. ಕಾಲನ ಹೊಡೆತದಲ್ಲಿ ಜನಮಾನಸದಿಂದ ಮರೆಯಾ  ಕೈಲಾಸಂರವರನ್ನು ಮತ್ತೆ  ಜೀವಂತಗೊಳಿಸಿ   "ಟಿಪಿಕಲ್ ಟಿ.ಪಿ. ಕೈಲಾಸಂ  ಏಕವ್ಯಕ್ತಿ  ಪ್ರಯೋಗದ  ಮೂಲಕ  ಕಳೆದ ಕಾಲು ಶತಮನಗಳಿಂದ ರಂಗವೇದಿಕೆಯಲ್ಲಿ  ಪ್ರದರ್ಶಿಸುತ್ತಾ ಅಪ್ರತಿಮ ಪ್ರತಿಭೆಗೆ ರಂಗಗೌರವ ಸಲ್ಲಿಸುತ್ತಿರುವ  ವೇದಿಕೆತಂಡದ  ಸಾಧನೆ  ಭಿನಂದನಾರ್ಹ,

ಮತ್ತೆ  ಈಗ 2008, ಆಗಸ್ಟ್  23 ರಂದುಏಕವ್ಯಕ್ತಿ  ರಂಗೋತ್ಸವದಲ್ಲಿ  ಬೆಂಗಳೂರಿನನಯನರಂಗಮಂದಿರದಲ್ಲಿ  ಪ್ರದರ್ಶನಗೊಂಡಟಿಪಿಕಲ್ ಟಿ.ಪಿ. ಕೈಲಾಸಂರಂಗ ಪ್ರಂಗವು ವಿಕ್ಷಪ್ತ  ವ್ಯಕ್ತಿತ್ವದ ಕೈಲಾಸಂರವರ ಬದುಕು ಹಾಗೂ ಅವರು ಸೃಷ್ಟಿಸಿದ್ದ ಪಾತ್ರಗಳೊಂದಿಗೆ ನಡೆಯುವ ಅನುಸಂಧಾನವನ್ನು ರಂಗದಂಗಳದಲ್ಲಿ ಅನಾವರಣಗೊಳಿಸಿ ನೋಡುಗರನ್ನು  ಒಂದೂಮುಕ್ಕಾಲು ಗಂಟೆಗಳ ಕಾಲ  ಹಿಡಿದಿಡುವಲ್ಲಿ  ಸಫಲವಾಯಿತು.

ಹೇಳಿಕೊಳ್ಳೋದಿಕ್ಕೆ  ಇಡೀ  ಏಕವ್ಯಕ್ತಿ  ಪ್ರದರ್ಶನದಲ್ಲಿ  ಕಥೆ  ಎಂಬುದೇನೂ ಇಲ್ಲವೇ ಇಲ್ಲ.  ಹಳೆಯ ಫೋಟೋ ಅಲ್ಬಂವೊಂದನ್ನು ತೆರೆದು ನೋಡುತ್ತಾ ನೆನಪುಗಳನ್ನು ತಾಜಾ ಮಾಡಿಕೊಂಡಂತಹ ಅನುಭವವನ್ನು ಪ್ರಯೋಗವು ಕಟ್ಟಿ ಕೊಡುತ್ತದೆ.   ಕೈಲಾಸಂರವರ ಬದುಕಿನ  ಕೆಲ ಪುಟಗಳನ್ನು  ಅವರ ನಾಟಕದ ಪಾತ್ರಗಳೊಂದಿಗೆ ಮುಖಾಮುಖಿಯಗಿಸಿ ಅವರ ಸಾಧನೆ-ವೇದನೆ, ಸಂತಸ-ಸಂಕಟಗಳನ್ನೆಲ್ಲಾ ಒಂದಡೆ ಹರವಿಕೊಂಡು, ಈಗಿನ ನವಪೀಳಿಗೆ ಮರೆತಿರುವ ನಾಟಕಕಾರನ ಮರೆಯಲಾರದ ನೆನಪುಗಳನ್ನು ಸಿ.ಆರ್.ಸಿಂಹರವರು ತಮ್ಮ ಭಿನಯದ ಮೂಲಕ  ಪ್ರೇಕ್ಷಕರೊಂದಿಗೆ ಹಂಚಿಕೊಂಡಿದ್ದಾರೆ. ಒಂದು ರೀತಿಯಲ್ಲಿ  ಚದುರಿದ ಚಿತ್ರಗಳ  ವಾಖ್ಯಾನದಂತೆ, ಅರ್ಥವಾಗದ ಪೇಂಟಿಂಗ್  ವಿವರಗಳಂತೆ    ನಾಟಕ ಮೂಡಿಬಂದಿದೆ.  ಒಂದಿಷ್ಟು  ಕೈಲಾಸಂ ಬಗ್ಗೆ , ಅವರ ನಾಟಕಗಳ ಬಗ್ಗೆ ಹಾಗೂ ನಾಟಕಗಳಲ್ಲಿ  ಬರುವ  ಪಾತ್ರಗಳ ಬಗ್ಗೆ  ಗೊತ್ತಿರುವವರಿಗೆ  ಸುಲಭಕ್ಕೆ ಅರ್ಥವಾಗಬಹುದಾದ ನಾಟಕವು  ಏನೂ ಗೊತ್ತಿಲ್ಲದಿರುವ  ಪ್ರೇಕ್ಷಕನಿಗೆ  ಕಬ್ಬಿಣದ  ಕಡಲೆಯಂತೆ.

ಯಾಕೆಂದರೆ ನಾಟಕದಲ್ಲಿ  ಬಳಸಲಾದ ಭಾಷೆಯನ್ನು  ಅರ್ಥೈಸಿಕೊಳ್ಳುವುದು  ಅಷ್ಟು  ಸುಲಭದ್ದೇನಲ್ಲ. ಇತ್ತೀಚೆಗೆ  ಆರಂಭವಾದ  ಎಫ್.ಎಂ  ರೇಡಿಯೋಗಳ  ಕಂಗ್ಲೀಷ್  ಭಾಷೆಯಂತೆ   ಇಲ್ಲಿ ಕನ್ನಡಾಂಗ್ಲ ಭಾಷೆಗಳ ಸಮ್ಮಿಶ್ರಣವಿದೆ.  ಎರಡೂ ಭಾಷೆಗಳ  ಸಮ್ಮಿಲನದಿಂದ  ಹೊರಹೊಮ್ಮುವ  ಮಾಷೆ (ಫನ್)ಯನ್ನೇ ಬಳಸಿಕೊಂಡು ಪ್ರೇಕ್ಷಕರಿಗೆ ಕಚಗುಳಿ ಇಡುವಂತಹ ಪ್ರಹಸನಗಳನ್ನು  ಕೈಲಾಸಂ ತಮ್ಮೆಲ್ಲಾ  ನಾಟಕಗಳಲ್ಲಿ  ಕಟ್ಟಿಕೊಟ್ಟಿದ್ದಾರೆ.  ಅದೇ  ರೀತಿಯ  ಮಿಶ್ರ ಭಾಷಾ ತಂತ್ರವನ್ನೆ  ಏಕವ್ಯಕ್ತಿ ಪ್ರದರ್ಶನದ  ಆದಿಯಿಂದ ಅಂತ್ಯದವರೆಗೂ  ಬಳಸಿಕೊಳ್ಳಲಾಗಿದೆ. ಒಂದು  ಹಂತದಲ್ಲಂತೂ  ಕನ್ನಡಕ್ಕಿಂತ ಇಂಗ್ಲೀಷೆ  ಮೇಲುಗೈ  ಸಾಧಿಸಿದಂತಿದ್ದು , ಕೈಲಾಸಂರವರ ಇಂಗ್ಲೀಷ್  ನಾಟಕ  ದಿ  ಫರ್ಪಸ್ನ್ನು ಸುಮರು 20ನಿಮಿಷಗಳಷ್ಟು ಕಾಲ ಸಂಪೂರ್ಣ ಆಂಗ್ಲ ಭಾಷೆಯಲ್ಲೇ ಭಿನಯಿಸಲಾಗಿದೆ. ಭಾಗದ ಪ್ರಸ್ತುತಿ ಸುದೀರ್ಘವಾಗಿದ್ದು  ಒಂದಿಷ್ಟು  ಎಡಿಟ್  ಮಾಡಿದ್ದರೆ  ಸೊಗಸಾಗಿತ್ತೇನೋ ಎಂಬ ಭಾವನೆ ಹಲವು ಪ್ರೇಕ್ಷಕರದ್ದಾಗಿದೆ. ಹೀಗೆ ಪ್ರೇಕ್ಷಕ ಮೊದಲು ವಿಕ್ಷಪ್ತ ಭಾಷೆಯನ್ನು ಅರ್ಥೈಸಿಕೊಳ್ಳಬೇಕು, ಕೈಲಾಸಂನವರ ವಿಲಕ್ಷಣ ವ್ಯಕ್ತಿತ್ವವನ್ನು ತಿಳಿದಿರಬೇಕು, ನಂತರ ಅವರ ನಾಟಕದ ವಿಚಿತ್ರ ಪಾತ್ರಗಳಾದ ಪೋಲಿಕಿಟ್ಟಿ, ಅಹೋಬಲನಂತವರ ಬಗ್ಗೆ ಅರಿತಿರಬೇಕು.   ಅಂತವರಿಗೆ  ಇಡೀ  ನಾಟಕ  ಅಸಾಧ್ಯ  ಖುಷಿಯನ್ನು  ಕೊಡುತ್ತದೆ. ಮಿಕ್ಕವರಿಗೆ  ಸಕಲಾರ್ಥಗಳನ್ನು  ಮೀರಿದಂತಹ ಸಿಂಹರವರ ಭಿನಯ ತೃಪ್ತಿ ಕೊಡುತ್ತದೆ.  ಕೈಲಾಸಂ ಜೋಕ್ಗಳ ಒಳಾರ್ಥ ಅರ್ಥವಾದವರಿಗೆ  ನಾಟಕ ಥ್ರಿಲ್ ಕೊಡುತ್ತವೆ



ಕೈಲಾಸಂ ತಮ್ಮನ್ನು  ತಾವೇ ವಿಮರ್ಶಿಸಿಕೊಳ್ಳುವ ಪ್ರಕ್ರಿ ಅದ್ಬುತವಾದದ್ದು.  ಉದಾಹರಣೆಗೆ ; "ವೈಟ್ ಹೌಸ್ ನಮ್ಮನೆ ಹೆಸರು ಆದರೆ ಅಲ್ಲಿ ಯಾಮ್ ಓನ್ಲಿ ಬ್ಲಾಕ್ ಸ್ಪಾಟ್ಅಂತಾರೆ.  ವಿಪರ್ಯಾಸವೇನೆಂದರೆ  ವೈಟ್ ಹೌಸ್ಗಿಂತ ಬ್ಲಾಕ್ಸ್ಪಾಟ್ ಹೆಚ್ಚು  ಜನರ ಗಮನ  ಸೆಳೆಯುತ್ತದೆ.  ಕೈಲಾಸಂ ಹೇಳುವ ಹಾಗೆ  ಜಗತ್ತಿನ ವಿರುದ್ಧ ಹೋದವರನ್ನು ಜಗತ್ತು ನಿರ್ಲಕ್ಷಿಸುತ್ತದೆ. ಆದರೆ ಅಂತವರನ್ನೇ ಸಾಧಕರು ಎಂದು ಇತಿಹಾಸ ಗುರುತಿಸುತ್ತದೆ. ಅದಕ್ಕೆ ನಮ್ಮ ಕೈಲಾಸಂ ದೊಡ್ಡ  ಉದಾಹರಣೆ.

ಮನುವಾದಿ ಮೌಲ್ಯಗಳು ನಾಟಕದಲ್ಲಿ ತೂರಿ ಬಂದಂತಿವೆ. ‘ಮಹಿಳೆ ತಿಂತಾಳೆ, ಅಳ್ತಾಳೆ, ಮಲಗ್ತಾಳೆ. ಆದರೆ ಗಂಡಸು ಕೆಲಸ ಸದಾ ಕೆಲಸ ಮಾಡ್ತಾನೆ ರುತ್ತಾನೆಎನ್ನುವಂತಹ ಈ ನಾಟಕದ ಕೈಲಾಸಂ ಮಾತುಗಳು  ಮಹಿಳೆಯರನ್ನು  ಮನೆಯೊಳಗೆ  ಸೀಮಿತಗೊಳಿಸುವ ಹಾಗೂ  ಗಂಡಸನ್ನು ಮಾತ್ರ  ಶ್ರಮಜೀವಿ ಎಂದು ತೋರುವ ಪ್ರಯತ್ನ ಮಾಡಿದಂತಿದೆ.  ಹೆಂಡತೀರು ಪರ್ಪೆಕ್ಟ್ ಕ್ರಿಟಿಕ್ಸ್ ಆಪ್ ಗಂಡಾಎಂದು ವ್ಯಂಗ್ಯಮಾಡುವ ರೀತಿಯೇ ಪುರುಷ ಪ್ರಧಾನತೆಯ ಸಂಕೇತವಾಗಿ ಮೂಡಿ ಬರುತ್ತದೆ.

ವಿಮರ್ಶೆಯನ್ನು ಕೈಲಾಸಂರವರು ಇಲ್ಲಿ  ಬಲು ಸೂಕ್ಷವಾಗಿ ವಿಶ್ಲೇಷಿಸುತ್ತಾರೆ. ಎಲ್ಲದಕ್ಕೂ ಅನಗತ್ಯವಾಗಿ ಕಾಮೆಂಟ್ ಮಾಡುವವರಿಗೆ  ಮಾರ್ಮಿಕವಾಗಿ ಉತ್ತರಿಸ್ತಾರೆ.ಜೀವನದಲ್ಲಿ  ಸುಸ್ತಾದ್ರೆ  ಸುಧಾರಿಸಿಕೊಳ್ಳೋಕೆ  ಸೈಡ್ವಿಂಗ್ ಇಲ್ಲ . ಬದುಕಲ್ಲಿ  ಎಲ್ಲರೂ  ವ್ಯಯಕ್ತಿಕವಾಗಿ ನಟ ಹಾಗೂ ಪ್ರೇಕ್ಷಕ.  ನಟ  ಹಾಗೂ  ಪ್ರೇಕ್ಷಕನ  ಹಾವು  ಏಣಿ  ಆಟದಲ್ಲಿ  ವಿಮರ್ಶಕ  ವಿಮರ್ಶಿಸಲು  ತೊಡಗುತ್ತಾನೆ. ಆದರೆ  ವಿಮರ್ಶಕ  ತಾನೂ ನಟನೆಂಬುದನ್ನು  ಮರೆತು ದೂರ ಹೋಗಿ ನಿಂತು ಬಿಡುತ್ತಾನೆ. ನಟ ಆರಂಭವಾದರೆ ಪ್ರೇಕ್ಷಕ ಅಂತ್ಯವಾಗಿದ್ದು ನಡುವೆ ಮೌ ವಿಮರ್ಶಕನಾಗಿ ಗಡಿಯಾರವಿರುತ್ತದೆ ಮತ್ತು ಅದೂ ಸದ್ದು ಮಾಡುತ್ತಿರುತ್ತದೆ. ಸದ್ದನ್ನು ಆಗಾಗ ಕೇಳಿಸಿ ಕೊಳ್ಳೋದು ಎಲ್ಲರಿಗೂ ಬಹುಮುಖ್ಯ”. ಕೈಲಾಸಂರವರು    ಒಂದು ಮಹತ್ವದ ಮಾತಿನಲ್ಲಿ  ವಿಮರ್ಶಕನಿಗೆ  ಕರ್ತವ್ಯ ಪ್ರಜ್ಞೆಯನ್ನು, ನಟ ಹಾಗೂ  ಪ್ರೇಕ್ಷಕನಿಗೆ ವಿಮರ್ಶೆಯ ಅತ್ಯಗತ್ಯತೆಯನ್ನು  ಗಡಿಯಾರದ  ರೂಪಕದ ಮೂಲಕ  ಬಹು ಮರ್ಮಿಕವಾಗಿ ವಿವರಿಸಿದ್ದಾರೆ.


 ತಮ್ಮ  ಅಸಹಾಯಕತೆಗಾಗಿ ಕೊನೆಗೆ  ಕೈಲಾಸಂ ಪಶ್ಚಾತ್ತಾಪ ಪಡುತ್ತಾರೆ.  ಸೂರ್ಯೋದಯವನ್ನು  ನೋಡಲಾಗಲಿಲ್ಲವಲ್ಲಎಂಬುದು ಅವರ ಕೊರಗು. ರಾತ್ರಿ ಎಲ್ಲಾ  ಎಚ್ಚರಾಗಿದ್ದು  ಅಪರಾತ್ರಿ ಮಲಗಿ  ಮಧ್ಯಾಹ್ನ ಏಳುವ ಅಭ್ಯಾಸ ಹೊಂದಿದ್ದ  ಕೈಲಾಸಂಗೆ ಕೊಟ್ಟ ಕೊನೆಯದಾಗಿ ಸಾಯುವ ಗಳಿಗೆ ಹತ್ತಿರವಾಗುತ್ತಿದ್ದಂತೆ ಸೂರ್ಯೋದಯ ನೋಡುವ ಭಿಲಾಷೆ. ಇದು ನಾಟಕಕಾರನ ಊಹೆಯೂ  ಆಗಿರಬಹುದು. ಆದರೆ  ಸೂರ್ಯೋದಯವನ್ನು  ಸಂಕೇತವಾಗಿಸಿಕೊಂಡು  ಕೈಲಾಸಂರವರ ಮೂಲಕ ಬೆಳಕಿಗೆ ವಿಮುಖವಾಗುವ ವ್ಯಕ್ತಿಗಳಿಗೆ, ಪ್ರಕೃತಿಯನ್ನು ಮರೆತು ಬದುಕುವ ಶಕ್ತಿಗಳಿಗೆ ನಾಟಕದ ಅಂತ್ಯ ಸೂಕ್ತ ಉತ್ತರವನ್ನು ಕೊಡುವಂತಿದೆ.  ಹೆಚ್ಚಾಗಿ ಸೂರ್ಯೋದಯವನ್ನು  ಹುಟ್ಟಿಗೂ  ಸೂರ್ಯಾಸ್ತವನ್ನು  ಸಾವಿಗೂ ಸಂಕೇತಿಸಲಾಗುತ್ತದೆ.  ಆದರೆ  ನಿರ್ದೇಶಕರ  ವಿಲಕ್ಷಣತೆ  ಇಲ್ಲಿ ಕಾನ್ಸೆಪ್ಟನ್ನೇ ಉಲ್ಟಾ ಮಾಡಿ ವಿಶಿಷ್ಟವಾದ ಪರಿಕಲ್ಪನೆಯನ್ನು ಸೃಷ್ಟಿಸಿದೆ.  ಸೂರ್ಯೋದಯದೊಂದಿಗೆ  ಕೈಲಾಸಂ ಎನ್ನುವ  ರಂಗಭೂಮಿ ನಕ್ಷತ್ರ  ಅಸ್ತಂಗತವಾಗುತ್ತದೆ.  ಕೈಲಾಸಂ ಭೌತಿಕವಾಗಿ ನೇಪತ್ಯಕ್ಕೆ  ಸರಿದರೂ ಅವರ ವಿಚಾರಗಳು  ಅವರೆಲ್ಲಾ ಕೃತಿಗಳ ಮೂಲಕ, ನಾಟಕಗಳ ಮೂಲಕ ಜಗತ್ತನ್ನು ಬೆಳಗುತ್ತವೆಎಂಬುದನ್ನು  ಪ್ರತಿಮಾತ್ಮಕವಾಗಿ  ತೋರಿಸುವ ಮೂಲಕ  ಬೆರಗು ಸೃಷ್ಟಿಸಲಾಗಿದೆ

 ಮಾಜದ ಸಮಸ್ಯೆಗಳ  ಕುರಿತು ನಾಟಕ ಬರೆದರೆ ಅವು  ಪರಿಹಾರ ಆಗುತ್ತವೆ  ಎಂಬ ಭ್ರಮೆ ನನಗಿಲ್ಲ. ಜನರ ಮನಸ್ಸನ್ನ  ಸಮಸ್ಯೆಗಳತ್ತ  ತಿರುಗಿಸಬಲ್ಲೆ ಅನ್ನಿಸುತ್ತೆ. ಇದಕ್ಕಿಂತ  ಹೆಚ್ಚು  ನನಗೇನೂ ಮಾಡಲು  ಸಾಧ್ಯ?” ಎಂದು  ಹೇಳುವ ಕೈಲಾಸಂ ರಂಗ ಪ್ರಯೋಗಗಳ ಮಿತಿ ಹಾಗೂ ಸಾಧ್ಯತೆಗಳನ್ನು  ಹೇಳುತ್ತಾರೆ.   ಸಾಮಾಜಿಕ ಸ್ವಾಸ್ತ್ಯಕ್ಕೆ ಬದ್ಧರಾಗಿರುವ ನಾಟಕಕಾರನ ಕರ್ತವ್ಯವನ್ನು ನಿಷ್ಠೆಯಿಂದ ಮಾಡಿ ಮುಗಿಸಿ ರಂಗಭೂಮಿ ಎಂದೂ ಮರೆಯದಂತಹ  ರಂಗಕೃತಿಗಳ ಕೊಡುಗೆಗಳನ್ನು  ಕೊಟ್ಟು  ಹೋಗಿದ್ದಾರೆ

 ‘ನಾದಸ್ವರ ಬಿಟ್ಟು ಮನುಷ್ಯ ಹೇಗೆ ಬದುಕಲು  ಸಾಧ್ಯ ?’ ಎಂದು  ಕೈಲಾಸಂ  ಪ್ರಶ್ನಿಸುತ್ತಾರೆ. ‘ಹಾಸ್ಯಪ್ರಜ್ಞೆ  ಮತ್ತು  ಕ್ರಿಯಶೀಲತೆ ಬದುಕಿಗೆ ಬಹುಮುಖ್ಯ. ನಾಟಕದ ನಿಜವಾದ ಮಜಾ ಸಿಗೋದು ಹಾಸ್ಯಪ್ರಜ್ಞೆ ಇದ್ದಾಗ.  ಹಾಗೆಯೇ ಹಾಸ್ಯಪ್ರಜ್ಞೆಯ ಅಂತರಂಗದಲ್ಲಿ ನೋವು ಸಹ ಅನಾವರಣಗೊಳ್ಳಬೇಕುಎಂದು  ಕೈಲಾಸಂ ಮೂಲಕ ನಾಟಕ ಬದುಕಿನ  ಪಾಠಗಳನ್ನು  ಹೇಳುತ್ತದೆ. 

ಆದರೆ  ಈಗ ಕೈಲಾಸಂ ಕಾಲ ಮುಗಿದು ಜಾಗತೀಕರಣದ ಕಾಲ ಬಂದಿದೆ.  ಬಹುತೇಕರು ಕುರುಡು ಕಾಂಚಾಣದ ನಾದಸ್ವರದ ಹಿಂದೆ ಅಲೆಯುತ್ತಿದ್ದಾರೆ. ಅಪಹಾಸ್ಯವನ್ನೇ ಬಂಡವಾಳ ಮಾಡಿಕೊಂಡು ಸಂಸ್ಕೃತಿಯನ್ನು ಹಣಕ್ಕಾಗಿ ಬಿಕರಿ ಮಾಡುತ್ತಿದ್ದಾರೆ. ಕ್ರಿಯಶೀಲತೆಯನ್ನು ರಂಗಭೂಮಿಯ ಬದಲು  ಈವೆಂಟ್ ಮ್ಯಾನೆಜ್ಮೆಂಟ್ಗಾಗಿ ಬಳಸುತ್ತಿದ್ದಾರೆ. ಅಪಾರ ಸಂಪತ್ತನ್ನು ಕಡೆಗಣಿಸಿ ಬಂದು ರಂಗ ಸಂಸ್ಕೃತಿಗಾಗಿ ಕೈಲಾಸಂರವರು ದುಡಿದಿದ್ದರೆ ಸಂಸ್ಕೃತಿಯನ್ನೇ ಮಾರಿ ಸಂಪತ್ತನ್ನು ಗಳಿಸಬಯಸುವ ಸಾಂಸ್ಕೃತಿಕ ದಲ್ಲಾಳಿಗಳು ಸರ್ವಾಂತರವ್ಯಾಪಿಯಾಗಿದ್ದಾರೆ. ಪ್ರಾಮಾಣಿಕವಾಗಿ ರಂಗ ನಿಷ್ಠೆಯಿಂದ ದುಡಿಯುವವರು ನಿರ್ಲಕ್ಷಕ್ಕೊಳಗಾಗಿದ್ದಾರೆ. ಇಂತಹ ಸಂದರ್ಭದಲ್ಲಿ ನಮಗೆ ಕೈಲಾಸಂರವರು ಆದರ್ಶವೆನಿಸುತ್ತಾರೆ. ರಂಗಭೂಮಿಗೆ ತನ್ನನ್ನು  ಸಮರ್ಪಿಸಿಕೊಂಡ ಕನ್ನಡದ ಮಹಾನ್ ನಾಟಕಕಾರನ ನೆನಪನ್ನಾದರೂ ಟಿಪಿಕಲ್ ಟಿ.ಪಿ. ಕೈಲಾಸಂ  ಪ್ರದರ್ಶನ ಮಾಡಿ ಕೊಡುತ್ತಿರುವುದಕ್ಕಾಗಿ    ಏಕವ್ಯಕ್ತಿ ರಂಗಪ್ರಯೋಗ  ಪ್ರಮುಖ ಎನ್ನಿಸಿಕೊಳ್ಳುತ್ತದೆ


ಸಿಗರೇಟಿನಿಂದ ಆರಂಭವಾಗಿ ಸಿಗರೇಟಿನಿಂದಲೇ ಅಂತ್ಯವಾಗುವ ಪ್ರದರ್ಶನದಲ್ಲಿ  ಸಿಗರೇಟೆಂಬುದು  ಸಹ ಪಾತ್ರವೇನೋ ಎನ್ನಿಸುವಂತಿದೆ. ಕೈಲಾಸಂರವರ ಬದುಕಿನ ಅವಿಭಾಜ್ಯ ಆಂಗವಾದ ಧೂಮಪಾನ ಸಾವಕಾಶವಾಗಿ ಕೈಲಾಸಂರವರನ್ನೇ ಆಕ್ರಮಿಸಿಕೊಂಡಂತಿದೆ. ಅವರ ಇನ್ನೊಂದು ದೌರ್ಬಲ್ಯವಾದ ಕುಡಿತದ ಬಗ್ಗೆ  " Do you think i am drinking it. No it is drinking me", ಎಂದು  ಹೇಳುತ್ತಾ  ಕೈಲಾಸಂ ತಮ್ಮ  ಕುಡಿತದ ಬಗ್ಗೆ  ತಾವೇ  ಲೇವಡಿ ಮಾಡಿಕೊಳ್ಳುತ್ತಿದ್ದರು. ಧೂಮಪಾನ -ಮಧ್ಯಪಾನಗಳು  ಅದು ಹೇಗೆ  ಕ್ರಿಯಾಶೀಲ  ವ್ಯಕ್ತಿಯನ್ನು  ದೈಹಿಕವಾಗಿ ದುರ್ಬಲಗೊಳಿಸುತ್ತವೆ ಎಂಬುದಕ್ಕೆ  ಕೈಲಾಸಂರವರ ಕೊನೆಯ ದಿನಗಳೇ ಸಾಕ್ಷಿ . ದುರಭ್ಯಾಸಗಳು ಮಿತಿಯಲ್ಲಿದ್ದರೆ 61ನೇ ವಯಸ್ಸಿಗೆ ಸಾಯುವ ಬದಲು ಕೈಲಾಸಂ ಇನ್ನೂ ಬದುಕಿರುತ್ತಿದ್ದರೋ ಏನೋ? ‘ ದುರಭ್ಯಾಸಗಳೇ ಕೈಲಾಸಂರವರ ಕ್ರಿಯಶೀಲತೆಗೆ  ಪ್ರೇರಕ  ಶಕ್ತಿಗಳಾಗಿದ್ದವುಎನ್ನುವವರೂ ಇದ್ದಾರೆ. ಒಟ್ಟಿನ  ಮೇಲೆ ದುರಭ್ಯಾಸಗಳಿಂದಾಗುವ ದುರಂತವನ್ನು  ಪರೋಕ್ಷವಾಗಿಟಿಪಿಕಲ್.. ಕೈಲಾಸಂಪ್ರದರ್ಶನ  ತೋರಿಸುವಂತಿದೆ.

ಕೈಲಾಸಂರವರ ವಿಶಿಷ್ಟ  ಹಾಡುಗಳನ್ನು  (ರಿಕಾರ್ಡೆಡ್) ಇಲ್ಲಿ  ಸಾಂದರ್ಭಿಕವಾಗಿ ಬಳಸಿರುವುದು  ಹಾಗೂ ಅಗತ್ಯಕ್ಕೆ  ತಕ್ಕಂತೆ  ವಿಶೇಷ  ಪೂರ್ವ ಮುದ್ರಿತ ದ್ವನಿಗಳನ್ನು ಕರಾರುವಕ್ಕಾಗಿ  ಬಳಸಿದ್ದು  ಪ್ರದರ್ಶನಕ್ಕೆ ಮೆರಗನ್ನು ತಂದಿದೆ. ಎಂ.ಎಸ್.ಸತ್ಯುರವರ ರಂಗವಿನ್ಯಾಸ ಗಮನ ಸೆಳೆಯುವಂತಿದೆ. ಹಿಂಬದಿಯಲ್ಲಿ ದೊಡ್ಡದಾದ ಕೈಲಾಸಂರವರ ಬಿತ್ತಿಚಿತ್ರ ರಂಗವೇದಿಕೆ ಮೇಲೆ  ಕೈಲಾಸಂರವರ  ಅಸ್ತಿತ್ವವನ್ನು ನೆನಪಿಸುವಂತಿದೆ. ವೇದಿಕೆಗೆ ಭಾರವಲ್ಲದಂತೆ ಪ್ರದರ್ಶನಕ್ಕೆ ಅಗತ್ಯವಾದಷ್ಟೇ  ರಂಗಸಜ್ಜಿಕೆ  ವಿನ್ಯಾಸಗೊಳಿಸಿದ್ದು  ಸತ್ಯುರ ಕ್ರಿಯಶೀಲತೆಗೆ ಸಾಕ್ಷಿಯಾಗಿದೆ.


ಕೈಲಾಸಂರವರ  ಪ್ರತಿರೂಪವೆನೋ ಎಂಬಂತೆ  ಸಿ.ಆರ್. ಸಿಂಹರವರು  ಅವರ  ಪಾತ್ರಕ್ಕೆ  ಮೈದುಂಬಿ ಭಿನಯಿಸಿದ್ದಾರೆ. ಕೈಲಾಸಂರವರಷ್ಟೇ  ದೇಹಗಾತ್ರ  ಹೊಂದಿರುವ  ಸಿಂಹರವರೆಗೆ  ಕೈಲಾಸಂ ಪಾತ್ರವಂತೂ ಹೇಳಿ ಮಾಡಿಸಿದಂತಿದೆ. ಸಿಂಹರವ ಲವಲವಿಕೆಯ ಚಲನೆ,  ಜೀವನೋತ್ಸಾಹ  ಗಮನ ಸೆಳೆಯುವಂತಿದೆ. ಅವರ  ಸಹಜ ಭಿನಯ ಮತ್ತು  ವಿಶಿಷ್ಟವಾದ ಸಂಭಾಷಣಾ ಶೈಲಿಗಳು ನಿಜವಾದ ಕೈಲಾಸಂ  ದರ್ಶನವನ್ನು ನೋಡುಗರಿಗೆ ತೋರಿಸುವಂತಿದೆ.

ಏಕವ್ಯಕ್ತಿ  ಪ್ರದರ್ಶನದಲ್ಲಿ  ಪ್ರೇಕ್ಷಕರನ್ನು ಅದೂ ಯಾಂತ್ರಿಕ  ನಗರಿಯ ನೋಡುಗರನ್ನು ಒಂದು ಗಂಟೆ ಹಿಡಿದಿಡುವುದೇ ಹರಸಾಹಸದ ಕೆಲಸ. ಅಂತಹುದರಲ್ಲಿ ಒಂದುಮುಕ್ಕಾಲೂ ಗಂಟೆಗಳ ಕಾಲ ನೋಡುಗರನ್ನು  ತಮ್ಮ ಭಿನಯ ಕೌಶಲ್ಯ  ಹಾಗೂ ಮಾತಿನ ವರಸೆಗಳ ಮೂಲಕ ಆಕರ್ಷಿಸುವಲ್ಲಿ  ಸಿ.ಆರ್ ಸಿಂಹರವರು  ಸಫಲರಾಗಿದ್ದು  ಬಹುಷ: ಕನ್ನಡ ಏಕವ್ಯಕ್ತಿ  ರಂಗಪ್ರಯೋಗಗಳಲ್ಲೇ  ಟಿಪಿಕಲ್ ..ಕೈಲಾಸಂದೀರ್ಘ ಕಾಲಾವಧಿಯದ್ದಾಗಿದೆ. ಕೈಲಾಸಂರವರ ವಿಲಕ್ಷಣತೆ, ನಿರ್ದೇಶಕ  ಟಿ.ಎನ್.ನರಸಿಂಹನ್ರವರ ವಿಕ್ಷಿಪ್ತತೆ ಹಾಗೂ ನಟ ಸಿ.ಆರ್.ಸಿಂಹರವರ  ನಟನಾ ವೈಶಿಷ್ಟತೆಗಳು  ಈ ನಾಟಕದಲ್ಲಿ ಹದವಾಗಿ ಮಿಶ್ರಣಗೊಂಡಿವೆ. ಏಕವ್ಯಕ್ತಿ  ಪ್ರದರ್ಶನಗಳಲ್ಲೆ  ಅಗ್ರಗಣ್ಯವಾಗಿರುವ ಟಿಪಿಕಲ್ ಟಿ.ಪಿ.ಕೈಲಾಸಂ  ಕಳೆದ 25 ವರ್ಷಗಳಿಂದ ಪ್ರದರ್ಶನಗೊಳ್ಳುತ್ತಲೇ ಬಂದಿದೆ. ಹಾಗೆಯೇ  ಆಧುನಿಕ ಕನ್ನಡ ರಂಗಭೂಮಿಯಲ್ಲಿ ಏಕವ್ಯಕ್ತಿ  ರಂಗಪ್ರಯೋಗ ಪ್ರಕಾರಗಳ ಪರಂಪರೆಯನ್ನೇ  ಹುಟ್ಟುಹಾಕಿದೆ.

                                                       -ಶಶಿಕಾಂತ ಯಡಹಳ್ಳಿ






ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ