ಶುಕ್ರವಾರ, ಮಾರ್ಚ್ 21, 2014

"ತ್ರಿಶಂಕು"ವಿನಲ್ಲಿ ಬಯಲಾದ ವ್ಯವಸ್ಥೆಯ ಮುಖವಾಡ :



                                       
ನಮ್ಮ ದೇಶದ ಸಾಮಾಜಿಕ ಹಾಗೂ ರಾಜಕೀಯ ವ್ಯವಸ್ಥೆ ತುಂಬಾ ಸಂಕೀರ್ಣವಾದುದು. ಒಂದು ಬಂಡವಾಳಶಾಹಿ ಪ್ರಜಾಪ್ರಭುತ್ವದಲ್ಲಿ ವ್ಯಕ್ತಿ ಸ್ವಾರ್ಥ ಎನ್ನುವುದೇ ಅತ್ಯಂತ ಪ್ರಮುಖವಾಗಿ, ಸಾಮಾಜಿಕ ಹಿತಾಸಕ್ತಿ ಎನ್ನುವುದು ಕೇವಲ ತೋರುಂಬ ಲಾಭವಾಗಿರುತ್ತದೆ. ಇಂತಹ ದುಸ್ಥಿತಿಯಲ್ಲಿ ವಿದ್ಯಾವಂತ ಯುವಜನಾಂಗ ದಿಕ್ಕುಕಾಣದೇ ತ್ರಿಶಂಕೋಪಾದಿಯಲ್ಲಿ ಪರದಾಡುವಂತಾಗುತ್ತದೆ. ದಂಡಿಯಾಗಿ ಶಿಕ್ಷಣವನ್ನು ಕೊಡುವ ನಮ್ಮ ವ್ಯವಸ್ಥೆ ಕೊಟ್ಟ ಶಿಕ್ಷಣಕ್ಕೆ ತಕ್ಕ ಕೆಲಸ ಕೊಡುವಲ್ಲಿ ವಿಫಲವಾಗಿ ನಿರುದ್ಯೋಗ ಪರ್ವಕ್ಕೆ ವಿದ್ಯಾವಂತ ಯುವಕರನ್ನು ದೂಡುತ್ತಿದೆ. ನಮ್ಮ ಅಸಮಾನ ವ್ಯವಸ್ಥೆಯ ನ್ಯೂನ್ಯತೆ ಹಾಗೂ ವಿದ್ಯಾವಂತ ಯುವಕರ ತ್ರಿಶಂಕು ಸ್ಥಿತಿಯನ್ನು ರಂಗದಂಗಳದಲ್ಲಿ ತೋರಿಸುವ ಪ್ರಯತ್ನವೇ ತ್ರಿಶಂಕು ನಾಟಕ ಪ್ರದರ್ಶನ.

ಖ್ಯಾತ ಹಿಂದಿ ನಾಟಕಕಾರ ಬಿ.ಎಂ.ಷಾರವರು ಎಪ್ಪತ್ತರ ದಶಕದಲ್ಲಿ ಹಿಂದಿ ಭಾಷೆಯಲ್ಲಿ ರಚಿಸಿದ್ದ ತ್ರಿಶಂಕು ನಾಟಕವನ್ನು ಎನ್.ಎಸ್.ವೆಂಕಟ್ರಾಂ ರವರು ಕನ್ನಡಕ್ಕೆ ಅನುವಾದಿಸಿದ್ದರು. 1973ರಲ್ಲಿ ಆರ್.ನಾಗೇಶರವರು ರಂಗಸಂಪದ ರಂಗತಂಡಕ್ಕೆ ತ್ರಿಶಂಕು ನಾಟಕವನ್ನು ನಿರ್ದೇಶಿಸಿದ್ದರು. ನಾಟಕ ಪ್ರದರ್ಶನಗೊಂಡು ಈಗ ನಾಲ್ಕು ದಶಕಗಳೇ ಕಳೆದು ಹೋಗಿವೆ. ತ್ರಿಶಂಕುವನ್ನು ಬರೆದವರು, ಅನುವಾದಿಸಿದವರು ಹಾಗೂ ನಿದೇಶಿಸಿದವರಾರೂ ಈಗಿಲ್ಲ. ಆದರೆ ನಾಟಕಕ್ಕೆ ಎಂದೂ ಸಾವಿಲ್ಲವಲ್ಲ. ಹೀಗಾಗಿ ಈಗ ಮತ್ತೆ ತ್ರಿಶಂಕು ವನ್ನು ರಂಗಸಂಪದ ತಂಡ ಮರುನಿರ್ಮಿಸಿದೆ. ಬಿ.ಎಸ್.ರಾಮಮೂರ್ತಿಯವರು ನಾಟಕವನ್ನು ಮರುನಿರ್ದೇಶಿಸಿದ್ದಾರೆ. ರವೀಂದ್ರ ಕಲಾಕ್ಷೇತ್ರ-50 ಸುವರ್ಣ ಸಂಭ್ರಮದಲ್ಲಿ ನಾಟಕ ಬೆಂಗಳೂರು ಆಯೋಜಿಸಿದ ನಾಲ್ಕನೆಯ ಕಂತಿನ ನಾಟಕೋತ್ಸವದಲ್ಲಿ 2014, ಮಾರ್ಚ 16ರಂದು ತ್ರಿಶಂಕು ನಾಟಕವು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡು ನೋಡುಗರಿಗೆ ವಿಭಿನ್ನ ಅನುಭವವನ್ನು ಕೊಟ್ಟಿತು.

   
ಅಪಾರವಾಗಿ ಶ್ರಮವಹಿಸಿ ಓದಿ, ಡಿಗ್ರಿಗಳ ಮೇಲೆ ಡಿಗ್ರಿಗಳನ್ನು ಪಡೆದುಕೊಂಡ ಯುವಜನತೆ ಕಟ್ಟಿಕೊಂಡ ಕನಸುಗಳು ಚಿದ್ರಗೊಂಡಾಗ ಯುವಕರು ಅನಿವಾರ್ಯವಾಗಿ ಸಮಾಜದ್ರೋಹಿ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ ಇಲ್ಲವೇ ಹತಾಶಗೊಂಡು ಆತ್ಮಹತ್ಯೆಗೆ ಶರಣಾಗುತ್ತಾರೆ. ಅತ್ತ ನ್ಯಾಯವಾಗಿ ಬದುಕನ್ನು ಕಟ್ಟಿಕೊಳ್ಳುವ ಅವಕಾಶ ದೊರೆಯದೇ, ಇತ್ತ ಓದಿದ್ದಕ್ಕೆ ತಕ್ಕನಾದ ಕೆಲಸವೂ ಸಿಗದೇ ಅತಂತ್ರವಾಗುವ ನಿರುದ್ಯೋಗಿ ಪದವೀದರರ ಮಾನಸಿಕ ತಳಮಳಗಳನ್ನು ನಾಟಕ ಮಾರ್ಮಿಕವಾಗಿ ಹೇಳುತ್ತದೆ. ಅಕಸ್ಮಾತ್ ಹಾಗೆ ವಿದ್ಯಾವಂತನಾದವನೊಬ್ಬ ಸ್ವಾಭಿಮಾನಿಯೂ ಆಗಿದ್ದರೆ ಆತನ ಸ್ಥಿತಿ ನಿಜಕ್ಕೂ ತ್ರಿಶಂಕುವಿಗಿಂತಲೂ ಅತಂತ್ರವೆನ್ನಬಹುದಾಗಿದೆ.

ನಿರುದ್ಯೋಗ ಸಮಸ್ಯೆ ಹಾಗೂ ನಿರ್ಲಜ್ಜ ವ್ಯವಸ್ಥೆಯನ್ನು ದೃಶ್ಯರೂಪದಲ್ಲಿ ತೋರಿಸುವಾಗ ಅಳವಡಿಸಿಕೊಂಡ ನಿರೂಪನಾ ಶೈಲಿ ನಾಟಕದಲ್ಲಿ ವಿಭಿನ್ನವಾಗಿದೆ. ನಾಟಕಕಾರನೊಬ್ಬ ಆಧುನಿಕ ಜಾನಪದ ಶೈಲಿಯಲ್ಲಿ ವಿಚಿತ್ರ ನಾಟಕವೊಂದನ್ನು ಪ್ರದರ್ಶಿಸಲು ಆರಂಭಿಸಿದಾಗ ಪ್ರೇಕ್ಷಾಗ್ರಹದೊಳಗಿಂದ ಬರುವ ಪಾತ್ರಗಳು ವಿರೋಧಿಸುತ್ತವೆ. ರಾಜಕಾರಣಿ, ಅಧಿಕಾರಿ, ಪೊಲೀಸ್, ಪುರೋಹಿತ, ವರ್ತಕ, ಬುದ್ದಿಜೀವಿ, ಶ್ರಮಜೀವಿಗಳು... ಅಂದರೆ ನಮ್ಮ ಸಮಾಜದ ವಿಭಿನ್ನ ವರ್ಗಗಳ ಪ್ರತಿನಿಧಿಗಳಾಗಿ ಬರುವ ಪಾತ್ರಗಳು ಮುಖವಾಡಗಳೊಂದಿಗೆ ವೇದಿಕೆ ಏರಿ ತಮ್ಮ ಕುರಿತು ನಾಟಕವಾಡಲು ಒತ್ತಾಯಿಸುತ್ತವೆ. ನಿಮ್ಮ ಕುರಿತು ನಾಟಕ ಮಾಡಲು ಸಾಧ್ಯವಿಲ್ಲ ಆದರೆ ನಾಟಕದಲ್ಲಿ ನಿಮಗೆ ಪಾತ್ರಕೊಡುತ್ತೇನೆ ಮುಖವಾಡಗಳನ್ನು ಕಳಚಿಟ್ಟು ಬನ್ನಿ ಎಂದು ಹೇಳುವ ನಾಟಕಕಾರ ನಿರುದ್ಯೋಗಿ ಪದವೀದರ ಯುವಕನನ್ನು ತನ್ನ ನಾಟಕಕ್ಕೆ ನಾಯಕನನ್ನಾಗಿ ಆಯ್ಕೆ ಮಾಡಿಕೊಂಡು ನಾಟಕವನ್ನು ಆರಂಭಿಸುತ್ತಾನೆ. ಇಲ್ಲಿವರೆಗೂ ಸುದೀರ್ಘವಾದ ನಾಟಕೀಯ ರೀತಿಯ ನಾಟಕದ ಪೀಠಿಕೆ ಮುಗಿದು ನಾಟಕ ಶುರುವಾಗುತ್ತದೆ.

  
ಒಂದು ನಾಟಕದ ಆರಂಭಕ್ಕೆ ಪೂರ್ವಭಾವಿ ಪೀಠಿಕೆ ಹಾಕಲು ಮೂವತ್ತು ನಿಮಿಷಗಳ ಪ್ರಹಸನ ಬೇಕಿತ್ತಾ? ಹೋಗಲಿ ರೀತಿಯ ಪೂರ್ವರಂಗದ ಅನುಷ್ಟಾನಕ್ಕಾಗಿ ಪ್ರೇಕ್ಷಕರ ಏಕಾಗ್ರತೆಗೆ ಭಂಗವನ್ನುಂಟುಮಾಡುವ ಪ್ರಯೋಗ ಮಾಡಬೇಕಾಗಿತ್ತಾ? ನಾಲ್ಕು ದಶಕಗಳ ಹಿಂದೆ ಪ್ರೇಕ್ಷಕರಿಗೆ ಶಾಕ್ ಕೊಡುವ ರೀತಿಯ ಪ್ರಯತ್ನಗಳು ಗಮನ ಸೆಳೆಯುತ್ತಿದ್ದವು. ಆದರೆ ಈಗ ಅದು ಸಾಧ್ಯವಿಲ್ಲ ಎನ್ನುವುದಕ್ಕೆ ಇಡೀ ಪ್ರೇಕ್ಷಾಗ್ರಹದಲ್ಲೇ ಅಲ್ಲಲ್ಲಿ ಕುಳಿತ ಕಲಾವಿದರು ಬೇಕಾದಷ್ಟು ಗಲಾಟೆ ಎಬ್ಬಿಸಿದರೂ ಯಾವೊಬ್ಬ ಪ್ರೇಕ್ಷಕನೂ ಆತಂಕಕ್ಕೊಳಗಾಗಿ ಪ್ರತಿಕ್ರಿಯೆ ನೀಡಲಿಲ್ಲ. ಬಹುತೇಕರು ಹಿಂತಿರುಗಿ ಕೂಡಾ ನೋಡಲಿಲ್ಲ. ಯಾಕೆಂದರೆ ಅವರಿಗೆ ಇದೆಲ್ಲಾ ನಾಟಕದ ಗಿಮಿಕ್ ಎಂದು ಮೊದಲೆ ಗೊತ್ತಿತ್ತು. ಆದರೆ ಹಣ ಕೊಟ್ಟು ನಾಟಕ ನೋಡಲು ಬಂದವರಿಗೆ ಹತ್ತು ನಿಮಿಷಗಳ ಕಾಲ ಪ್ರೇಕ್ಷಾಗ್ರಹದಲ್ಲಿ ಕಲಾವಿದರ ನಿರಂತರ ಕೂಗಾಟ ಕಿರಿಕಿರಿಯನ್ನುಂಟು ಮಾಡಿದ್ದಂತೂ ಸುಳ್ಳಲ್ಲ. ಪ್ರೇಕ್ಷಾಗೃಹವನ್ನೇ ರಂಗವೇದಿಕೆ ಮಾಡಿಕೊಂಡು ಪ್ರೇಕ್ಷಕರನ್ನೇ ರಂಗಪ್ರಯೋಗದ ಭಾಗವಾಗಿಸುವುದು ಈಗಿನ ಕಾಲಕ್ಕೆ ಸೂಕ್ತವೂ ಅಲ್ಲ. ರೀತಿಯ ಪ್ರಹಸನವು ಒಂದು ಬೀದಿನಾಟಕದ  ರೀತಿಯಲ್ಲಿ ನಡೆದು ಹೋಯಿತು. ಜನರ ನಡುವಿನಿಂದ ಬರುವ ಪಾತ್ರಗಳು, ಬಳಸಿದ ಮುಖವಾಡಗಳು, ಎಲ್ಲರ ಕೈಯಲ್ಲಿ ಹಿಡಿದ ದೊಣ್ಣೆ ಕೋಲು.... ಇವೆಲ್ಲವೂ ಬೀದಿ ನಾಟಕವನ್ನು ನೆನಪಿಸುವಂತಿದ್ದವು. ಸ್ಟ್ರೀಟ್ಪ್ಲೇ ಫಾರಂನ್ನು ಪ್ರಿಸೀನಿಯಂ ನಾಟಕದಲ್ಲಿ ಬ್ಲೆಂಡ್ ಮಾಡುವ ಪ್ರಯತ್ನ ನಾಟಕದಲ್ಲಿ ಮಾಡಲಾಗಿದೆ.

  
ತದನಂತರ ರಿಯಲ್ ನಾಟಕ ಮುಂದುವರೆಯುತ್ತದೆ. ತ್ರಿಬಲ್ ಗ್ರ್ಯಾಜುಯೇಟ್ ಯುವಕನೊಬ್ಬ ಕ್ರಾಂತಿ ತಂದು ದೊಡ್ಡ ಮನುಷ್ಯನಾಗಬೇಕು ಎನ್ನುವ ಭ್ರಮೆಯಲ್ಲಿರುತ್ತಾನೆ. ಪದವೀದರ ಯುವಕ ಕೆಲಸ ಕೇಳಿಕೊಂಡು ಸರಕಾರಿ ಕಛೇರಿಗೆ ಬಂದು ನಿರಾಶನಾಗಿ ಅಧಿಕಾರಿಯನ್ನು ವಿರೋಧಿಸುತ್ತಾನೆ. ಜ್ಯೋತಿಷಿಯೊಬ್ಬ ಆತನಿಗೆ ಭವ್ಯ ಭವಿಷ್ಯತ್ತಿನ ಆಸೆ ಹುಟ್ಟಿಸಿ ಹಣ ಕೀಳುತ್ತಾನೆ. ವರ್ತಕನೊಬ್ಬ ಯುವಕನನ್ನು ದುರುಪಯೋಗ ಮಾಡಿಕೊಳ್ಳಲು ಹವಣಿಸಿ ನಿರಾಶೆಯಿಂದ ಪೊಲೀಸ್ಗೆ ಸುಳ್ಳು ಕಂಪ್ಲೇಂಟ್ ಕೊಡುತ್ತಾನೆ. ರಾಜಕಾರಣಿ ತನ್ನ ಹೊಸ ಪಕ್ಷದ ಪ್ರಚಾರಕ್ಕೆ ಬಳಸಿಕೊಳ್ಳಲು ಪ್ರಯತ್ನಿಸುತ್ತಾನೆ. ಎಲ್ಲೋ ಎನೋ ತಪ್ಪಾಗಿದೆ ಎಂದು ಸದಾ ಸಿನಿಕ್ತನವನ್ನು ತೋರಿಸುವ ಬುದ್ದಿಜೀವಿಯು ಯುವಕನ ದಿಕ್ಕು ತಪ್ಪಿಸಿ ಆತ್ಮಹತ್ಯೆಗೆ ಪ್ರೇರೇಪಿಸುತ್ತಾನೆ. ಹೇಗೂ ಸಾಯ್ತಿದ್ದೀಯಾ ನನಗೆ ದತ್ತು ಮಗನಾಗಿ ನಂತರ ಸಾಯಿ, ಇನ್ಸೂರೆನ್ಸ ಹಣ ಪಡೆಯುತ್ತೇನೆ ಎನ್ನುವ ವ್ಯಕ್ತಿ ಯುವಕನ ಸಾವಲ್ಲೂ ಲಾಭಗಳಿಸಲು ಪ್ರಯತ್ನಿಸುತ್ತಾನೆ. ಕೊನೆಗೆ ಎಲ್ಲರೂ ತನ್ನನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಾರೆ ಎಂದು ಆರೋಪಿಸುವ ಯುವಕ ಎಲ್ಲೂ ನಿಲ್ಲದೇ ಓಡುತ್ತಲೇ ಇರುತ್ತಾನೆ... ಇಲ್ಲಿಗೆ ನಾಟಕ ಮುಗಿಯುತ್ತದೆ. ನಮ್ಮ ವ್ಯವಸ್ಥೆಯ ಹುಳುಕುಗಳನ್ನು, ಸಮಾಜದ ಕೊಳಕುತನವನ್ನು ಅನಾವರಣಗೊಳಿಸುತ್ತದೆ. ಬಿರುಬಿಸಿಲಲ್ಲಿ ತಂಗಾಳಿಯಂತೆ ಯುವತಿಯೊಬ್ಬಳು ನಡುದಾರಿಯಲ್ಲಿ ಸಿಗುತ್ತಾಳೆ. ಮಾತು ಮಾತಲ್ಲಿ ಯುವಕನೊಂದಿಗೆ ಪ್ರೀತಿಯೂ ಅರಳುತ್ತದೆ. ಆದರೆ ಅದು ಅಲ್ಲಿಯೇ ಕೊನೆಯೂ ಆಗುತ್ತದೆ. ಇಡೀ ನಾಟಕದಲ್ಲಿ ಮತ್ತೆ  ಅವರಿಬ್ಬರ ಸಂಬಂಧದ ಕುರಿತು ಪ್ರಸ್ತಾಪವೇ ಬರದೇ ಪ್ರೇಮಪ್ರಕರಣವೊಂದು ಅಕಾಲಿಕ ಸಾವಿಗೊಳಗಾಗುತ್ತದೆ.   

  
ಇಡೀ ನಾಟಕದಲ್ಲಿ ಯಾವುದೇ ಕಥೆಯ ಚೌಕಟ್ಟಿಲ್ಲ. ನಿರುದ್ಯೋಗಿಯೊಬ್ಬನ ಆತ್ಮಕಥನದ ಘಟನೆಗಳ ಸರಣಿಯಂತೆ ನಾಟಕ ನಿರೂಪನೆಗೊಂಡಿದೆ. ದಾರಾವಾಹಿಯ ಸೀರಿಯಲ್ನಂತೆ ಘಟನೆಗಳು ಜರಗುತ್ತವೆ. ಕೊನೆಯವರೆಗೂ ಸಮಸ್ಯೆಗಳ ಸರಣಿಯನ್ನು ಹೇಳುವ ನಾಟಕ ಎಲ್ಲೂ ಪರಿಹಾರವನ್ನು ಸೂಚಿಸುವುದಿಲ್ಲ. ಪರಿಹಾರ ಹೇಳುವುದು ನಾಟಕದ ಉದ್ದೇಶವೂ ಅಲ್ಲ. ಸ್ವಾರ್ಥಪರ ವ್ಯವಸ್ಥೆಯಲ್ಲಿ ತ್ರಿಶಂಕು ಸ್ಥಿತಿಯಲ್ಲಿರುವ ವಿದ್ಯಾವಂತ ನಿರುದ್ಯೋಗಿಗಳ ಅತಂತ್ರತೆಯನ್ನು ತೋರಿಸುವುದಷ್ಟೇ ನಾಟಕದ ಪ್ರಮುಖ ಆಶಯವಾಗಿದೆ. ಜೊತೆಗೆ ಸಮಾಜದ ವಿವಿಧ ವರ್ಗಗಳ ವಿಕ್ಷಪ್ತತೆಯನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ಅಧಿಕಾರಿ, ರಾಜಕಾರಣಿ, ವ್ಯಾಪಾರಿ, ಪೊಲೀಸ್, ಪುರೋಹಿತಶಾಹಿ, ಬುದ್ದಿಜೀವಿಗಳಿಂದ ಹಿಡಿದು ಕೂಲಿ ಕಾರ್ಮಿಕರ ಸ್ವಾರ್ಥಪರ ನಡುವಳಿಕೆಯನ್ನು ನಾಟಕ ಬಿಂಬಿಸುತ್ತದೆ. ಹಾಗಾದರೆ ಸಮಾಜದ ಎಲ್ಲಾ ವರ್ಗದವರೂ ಹೀಗೇ ಸ್ವಾರ್ಥಿಗಳಾ? ನಿಸ್ವಾರ್ಥತೆ, ಉಪಕಾರಪ್ರಜ್ಞೆ, ಮನುಷ್ಯತ್ವ ಎನ್ನುವುದು ಯಾರಲ್ಲೂ ಇಲ್ಲವೇ ಇಲ್ಲವಾ? ವ್ಯವಸ್ಥೆ ಅನ್ನುವುದು ರಿಪೇರಿ ಆಗದಷ್ಟು ಹದಗೆಟ್ಟು ನಿಂತಿದೆಯಾ? ಬರೀ ನೆಗೆಟಿವ್ ಕಾರೆಕ್ಟರ್ಗಳೇ ಸಮಾಜದಲ್ಲಿವೆಯಾ? ಅಕಸ್ಮಾತ್ ಇಡೀ ಸಮಾಜವೇ ಹಾಳಾಗಿದ್ದರೆ ಇದಕ್ಕೆ ಪರಿಹಾರವೆನ್ನುವುದೇ ಇಲ್ಲವಾ?... ಹೀಗೆ ಹಲವಾರು ಪ್ರಶ್ನೆಗಳು ತ್ರಿಶಂಕು ನಾಟಕ ನೋಡಿದ ನಂತರ ಕಾಡದೇ ಇರದು
  
ನಾಟಕದ ಅಂತ್ಯವೂ ಸಹ ಅಸಂಗತವೆನಿಸುತ್ತದೆ. ಸಾಮಾಜಿಕ ಅವ್ಯವಸ್ಥೆಯಿಂದ ಜಿಗುಪ್ಸೆಗೊಂಡು ನೇಣಿನ ಕುಣಿಕೆಗೆ ತಲೆಕೊಡಲು ನಿರ್ಧರಿಸಿದ ಯುವಕ ಕೊನೆಗೆ ಮನಸ್ಸು ಬದಲಾಯಿಸಿ ನಿಂತಲ್ಲೇ ಓಡತೊಡಗುತ್ತಾನೆ. ಏನಿದರ ಅರ್ಥ?. ಸಾವಿನಿಂದ ದೂರ ಓಡುತ್ತಾನಾ? ಸಮಸ್ಯೆಗಳಿಂದ ದೂರ ಓಡುತ್ತಾನಾ? ಗೊತ್ತಿಲ್ಲ. ಆದರೆ ಕಾಡುವ ಸಮಸ್ಯೆಗಳನ್ನು ಎದುರಿಸದೇ, ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳದೇ ಓಡಿಹೋಗುವುದು ಒಂದು ರೀತಿಯಲ್ಲಿ ಪಲಾಯನವಾದವೆನ್ನಿಸುತ್ತದೆ. ಹಾಗಾದರೆ ಇಡೀ ನಾಟಕ ಏನನ್ನು ಹೇಳುತ್ತದೆ?. ಸಮಸ್ಯೆಗಳನ್ನು ಎದುರಿಸುವ ಆತ್ಮಸ್ಥೈರ್ಯವನ್ನು ತುಂಬುವುದನ್ನು ಬಿಟ್ಟು ಪಲಾಯಣ ಮಾಡುವುದನ್ನು ತೋರಿಸುತ್ತದಾ? ಕ್ರಾಂತಿ ಮಾಡಬೇಕು ಎಂದು ಬಯಸುವ ಯುವಕ ಕೊನೆಗೆ ತನ್ನ ಉದ್ದೇಶಕ್ಕೆ ವಿರುದ್ಧವಾದ ರೀತಿ ನಿರ್ಣಯ ತೆಗೆದುಕೊಳ್ಳುವುದೇಕೆ? ದೊಡ್ಡ ಮನುಷ್ಯ ಆಗಬೇಕು ಎನ್ನುವ ಗುರಿಯನ್ನು ಇಟ್ಟುಕೊಂಡ ಹುಡುಗ ಓಡಿಹೋಗಿ ಅದ್ಯಾವ ಗುರಿಯನ್ನು ಮುಟ್ಟುತ್ತಾನೆ? ಏನಿದರ ಮರ್ಮ ಎಂದು ಕೇಳೋಣವೆಂದರೆ ಆರ್.ನಾಗೇಶರವರು ಬದುಕಿಲ್ಲ.

ನಾಟಕದ ನಾಟಕಕಾರನ ಪಾತ್ರದಾರಿ ನಿರ್ದೇಶಕನ ಬದುಕಿನ ಅಂಗಳ ರಂಗಭೂಮಿ ಎನ್ನುವುದನ್ನು ನಾನು ಒಪ್ಪುತೇನೆ, ನೀವು ಒಪ್ಪುತ್ತೀರಾ? ಎಂದು ಪ್ರೇಕ್ಷಕರ ಮೇಲೆ ತನ್ನ ಅನಿಸಿಕೆಯನ್ನು ಹೇರುತ್ತಾನೆ. ಆದರೆ ಅನಿಸಿಕೆ ನಾಟಕದ ನಿರ್ದೇಶಕರದ್ದಾಗಿದೆಯೇ ಹೊರತು ಸತ್ಯವಾದುದಲ್ಲ. ಯಾಕೆಂದರೆ ರಂಗಭೂಮಿ ನಿರ್ದೇಶಕನ ಬದುಕಿನ ಅಂಗಳವಲ್ಲ ಅದು ಕಲಾವಿದರ ಬದುಕೇ ಆಗಿದೆ. ಕಲಾವಿದರಿಲ್ಲದೇ ನಿರ್ದೇಶಕ ನಾಟಕ ಮಾಡಿಸಲು ಸಾಧ್ಯವೇ ಇಲ್ಲ. ಆದರೆ ನಿರ್ದೇಶಕ ಇಲ್ಲದಿದ್ದರೂ ಕಲಾವಿದರೆ ಪಾತ್ರಗಳನ್ನು ಹಂಚಿಕೊಂಡು ನಾಟಕ ಮಾಡುವ ಸಾಧ್ಯತೆಗಳಿವೆ. ಹೀಗಾಗಿ ಕೇವಲ ನಿರ್ದೇಶಕನ ಬದುಕಿನ ಅಂಗಳ ರಂಗಭೂಮಿ ಎನ್ನುವುದನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ರಾಜಕಾರಣಿಯೊಬ್ಬ ಅಪರಿಚಿತ ನಿರುದ್ಯೋಗಿ ಯುವಕನಿಗೆ ಪಕ್ಷ ಮುನ್ನಡೆಸಲು ಆಹ್ವಾನಿಸುವುದು, ಗೊತ್ತು ಪರಿಚಯವಿಲ್ಲದ ಶೇಟುವಿನ ಹತ್ತಿರ ಹೋದ ಯುವಕ ಬಿಸಿನೆಸ್ ಮಾಡಲು ಹತ್ತು ಲಕ್ಷ ಕೊಡು ಎಂದು ಆಗ್ರಹಿಸುವುದು, ಪದವೀದರನಾದ ಯುವಕನ ಸರ್ಟಿಫಿಕೇಟ್ ನೋಡಿಯೂ ವಿದ್ಯಾರ್ಥಿಗಳನ್ನು ವಿರೋಧ ಹಾಕಿಕೊಂಡರೆ ಅಪಾಯ ಎಂದು ಹೇಳಿ ಪೊಲೀಸ್ ಓಡಿ ಹೋಗುವುದು... ಮುಂತಾದ ಘಟನೆಗಳು ಅತಾರ್ಕಿಕ ಮತ್ತು ಅವಾಸ್ತವವೆನ್ನಿಸುವಂತಿವೆ.
 
ನಾಟಕದ ಆರಂಭದಲ್ಲಿ ಪಾತ್ರಗಳು ಬಳಸಿದ ಮುಖವಾಡಗಳನ್ನು ಮೊದಲ ದೃಶ್ಯದ ನಂತರ ಹಿಂಭಾಗದ ವೇದಿಕೆಯಲ್ಲಿ ಸಾಲಾಗಿ ನಿಲ್ಲಿಸಿದ್ದು ತುಂಬಾ ಸಾಂಕೇತಿಕವಾಗಿ ಮೂಡಿ ಬಂದಿದೆ. ಸಮಾಜದ ಆಳುವ ವರ್ಗಗಳ ಮುಖವಾಡಗಳನ್ನು ತೆರೆದು ವಾಸ್ತವವನ್ನು ತೋರಿಸುವುದೇ ಈ ನಾಟಕದ ನಿಜವಾದ ಉದ್ದೇಶವಾಗಿದೆ. ಆರ್.ನಾಗೇಶರವರ ಈ ಪ್ರತಿಮಾ ರೂಪಕ ಪರಿಕಲ್ಪನೆ ನಾಟಕದ ಅಂತಸ್ಸತ್ವವಾಗಿದೆ.  ವೇದಿಕೆಯ ಹಿಂದೆ ಕಂಬದ ಮೇಲೆ ಬರೆದ ದಾರಿ ದಿಕ್ಕು ತೋರುವ ಬೋರ್ಡ ನಾಟಕದ ಆಶಯವನ್ನು ಸಾಂಕೇತಿಕವಾಗಿ ಸೂಚಿಸುವಂತಿದೆ. ಒಂದು ಕಡೆ ವಿಶ್ವವಿದ್ಯಾಲಯಕ್ಕೆ ಹೋಗುವ ದಾರಿ ತೋರಿದರೆ ಅದಕ್ಕೆ ವಿರುದ್ಧ ದಿಕ್ಕಿನಲ್ಲಿ ಎಂಪ್ಲಾಯಮೆಂಟ್ ಎಕ್ಸಚೇಂಜ್ ಆಪೀಸಿನ ದಾರಿ ತೋರಿಸುವಂತಿದೆ. ಅಂದರೆ ಶಿಕ್ಷಣವೇ ಒಂದು ದಿಕ್ಕಾದರೆ ಕೆಲಸ ಕೊಡಿಸುವುದೇ ಇನ್ನೊಂದು ದಿಕ್ಕಾಗಿದೆ. ಒಂದಕ್ಕೊಂದು ಸಂಬಂಧವಿಲ್ಲದಂತಿರುವ ನಮ್ಮ ಶೈಕ್ಷಣಿಕ ವ್ಯವಸ್ಥೆಯನ್ನು ವಿಡಂಬನಾತ್ಮಕವಾಗಿ ತೋರಿಸುವಂತೆ ಹಿನ್ನೆಲೆ ಸೆಟ್ನ್ನು ಶಶಿಧರ್ ಅಡಪ ರೂಪಿಸಿದ್ದಾರೆ. ಆದರೆ ಕೊನೆಯ ದೃಶ್ಯಕ್ಕೆ ಮಾತ್ರ ಸೂಕ್ತವೆನಿಸುವ ನೇಣು ಹಗ್ಗದ ಕುಣಿಕೆ ನಾಟಕದಾದ್ಯಂತ ಇರುವುದು ಬೇಕಾಗಿರಲಿಲ್ಲವೇನೋ.  ಬೆಳಕು (ಎಂ.ರವಿ) ದೃಶ್ಯಗಳನ್ನು ಸಮರ್ಥವಾಗಿ ಬೆಳಗಿದೆ. ನಾಟಕದ ಮೂಡ್ ಸೃಷ್ಟಿಸಲು ಆಗಾಗ ಸಂಗೀತ ಮತ್ತು ಹಾಡುಗಳ ಅಗತ್ಯವಿತ್ತು. ಆದರ ಕೊರತೆ ಕಾಡುತ್ತದೆ. ವ್ಯಕ್ತಿಗಳನ್ನು ಪಾತ್ರವಾಗಿಸುವಲ್ಲಿ ಪ್ರಸಾದನ ಪ್ರವೀಣ ಬಿಳಿ ರಾಮಕೃಷ್ಣ ತಮ್ಮ ಕೌಶಲವನ್ನು ಸೊಗಸಾಗಿ ತೋರಿಸಿದ್ದಾರೆ

ನಾಟಕನಿರ್ವಾಹಕನಾಗಿ ಬಿ.ಎಸ್.ರಾಮಮೂರ್ತಿ ಸೊಗಸಾಗಿ ಅಭಿನಯಿಸಿದ್ದಾರೆ. ಹೆಚ್.ಎಸ್.ಶಿವಲಿಂಗಪ್ರಸಾದ್ ನಿಜವಾದ ರಾಜಕೀಯ ಪುಡಾರಿಯನ್ನು ಮೀರಿಸುವಂತೆ ನಟಿಸಿದ್ದರೆ, ಶೇಟು ಪಾತ್ರಕ್ಕೆ ಶ್ರೀಪತಿ ಮಂಜನಬೈಲು ಅತ್ಯಂತ ಸೂಕ್ತ ಆಯ್ಕೆ. ಅಧಿಕಾರಿಯಾಗಿ ಚಡ್ಡಿ ನಾಗೇಶ ಹಾಗೂ ಜ್ಯೋತಿಷಿಯಾಗಿ ತ್ಯಾಗರಾಜ್ ಪಾತ್ರೋಚಿತವಾಗಿ ಅಭಿನಯಿಸಿದ್ದಾರೆ. ರಂಗಲಿ ಪಾತ್ರಕ್ಕೆ ಕಲಾವತಿ ಮೋಹಕತೆ ತಂದಿದ್ದರೆ ಅವಳಿಗೆ ವಿರುದ್ದವಾಗಿ ರಂಗಲಾ ಪಾತ್ರದಲ್ಲಿ ಬಿ.ವಿಠ್ಠಲ್ ವಿಕ್ಷಿಪ್ತವಾಗಿ ಹೆಜ್ಜೆ ಹಾಕಿದ್ದು ಇನ್ನೂ ಅಭಿನಯದಲ್ಲಿ ಪಳಗಬೇಕಿದೆ. ಪೋಲೀಸ್ ಪಾತ್ರದಾರಿ ಶರಣು ಇನ್ನೂ ತಮ್ಮ ಪಾತ್ರದ ರೀತಿ ರೀವಾಜನ್ನು ಅರಿತು ಅಭಿನಯಿಸಬೇಕಿದೆ. ಎಲ್ಲಾ ಸೀನಿಯರ್ ನಟರುಗಳನ್ನು ಮೀರಿಸುವಂತೆ ನಿರುದ್ಯೋಗಿ ಯುವಕನ ಪಾತ್ರದಲ್ಲಿ ಅನೂಪ್ಕುಮಾರ್ ನಟಿಸಿ ಗಮನಸೆಳೆದರು. ನಾಲ್ಕು ದಶಕಗಳ ಹಿಂದೆ ನಾಟಕದ ಮೊದಲ ಪ್ರದರ್ಶನದಲ್ಲಿ ಯುವಕನ ಪಾತ್ರವನ್ನು ಟಿ.ಎನ್.ಸೀತಾರಾಂ ಅಭಿನಯಿಸಿದ್ದರು.

 ನಾಲ್ಕು ದಶಕದ ಹಿಂದೆ ತ್ರಿಶಂಕು ನಾಟಕ ಸಕಾಲದ್ದಾಗಿತ್ತು. ಆದರೆ ಈಗ ಕಾಲ ಬದಲಾಗಿದೆ. ಜಾಗತೀಕರಣದ ಪರಿಣಾಮದಿಂದಾಗಿ ಉದ್ಯೋಗದ ಸಾಧ್ಯತೆಗಳು ಹೆಚ್ಚಾಗಿವೆ. ಕೆಲಸ ಮಾಡಲೇ ಬೇಕೆನ್ನುವವನಿಗೆ ಕೆಲಸಕ್ಕೇನೂ ಕೊರತೆ ಇಲ್ಲ. ಹೀಗೆ ತ್ರಿಬಲ್ ಡಿಗ್ರಿ ಮಾಡಿದವರು ಕೆಲಸಕ್ಕಾಗಿ ಅಲೆಮಾರಿಯಂತೆ ಅಲೆದಾಡುವ ಸ್ಥಿತಿ ಇಲ್ಲ. ಸರಕಾರಿ ನೌಕರಿ ಸಿಗದಿದ್ದರೂ ಖಾಸಗಿ ವಲಯಗಳಲ್ಲಿ, ಕಾರ್ಪೊರೇಟ್ ಸೆಕ್ಟರ್ ಗಳಲ್ಲಿ, ದೇಶ ವಿದೇಶಗಳಲ್ಲಿ  ಕೆಲಸಕ್ಕೆ ಅವಕಾಶಗಳು ಬೇಕಾದಷ್ಟಿವೆ. ರೈತ, ಕಾರ್ಮಿಕರು ಈಗ ಸಂಕಷ್ಟದಲ್ಲಿದ್ದಾರೆಯೇ ಹೊರತು ವಿದ್ಯಾವಂತರು ಎಲ್ಲಾದರೂ ಹೇಗಾದರೂ ಕೆಲಸ ಹುಡುಕಿ ಬದುಕುವುದು ಸಾಧ್ಯವಿದೆ. ಇಂತಹ ಬದಲಾದ ಸಾಮಾಜಿಕ ಹಾಗೂ ರಾಜಕೀಯ ಸ್ಥಿತಿಯಲ್ಲಿ ತ್ರಿಶಂಕು ಕಾಲಮಿತಿ ಮೀರಿದ ನಾಟಕವೆನಿಸುತ್ತದೆ. ಕಾಲದಲ್ಲಿ ಹೇಗೆ ಒಂದು ನಾಟಕ ಸಾಮಾಜಿಕ ಸಮಸ್ಯೆಗೆ ಸ್ಪಂದಿಸಿ ನೋಡುಗರಲ್ಲಿ ಜಾಗೃತಿಯನ್ನು ಮೂಡಿಸಿತ್ತು ಎನ್ನುವುದನ್ನು ತಲೆಮಾರಿನವರಿಗೆ ತಿಳಿಸಲಾದರೂ ನಾಟಕ ನಿರ್ಮಿಸಿದ್ದು ಸಾರ್ಥಕ. ನಿಟ್ಟಿನಲ್ಲಿ ರಂಗಸಂಪದ ಸ್ಮರಣಾರ್ಹ ಕೆಲಸ ಮಾಡಿದೆ. ನೆಪದಲ್ಲಿ ಆರ್.ನಾಗೇಶರವರನ್ನು ಅವರ ನಾಟಕ ಮೂಲಕ ನೆನಪಿಸಿಕೊಳ್ಳಲು ಸಾಧ್ಯವಾಗಿದೆ. ನಾಗೇಶರವರ ನಿರ್ದೇಶನದ ನಾಟಕಕ್ಕೆ ಎಲ್ಲೂ ಚ್ಯುತಿ ಬರದಂತೆ ಮರುನಿರ್ದೇಶಿಸಿದ ಬಿ.ಎಸ್.ರಾಮಮೂರ್ತಿ ಅಭಿನಂದನಾರ್ಹರು.  


                                         -ಶಶಿಕಾಂತ ಯಡಹಳ್ಳಿ   


  
               


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ