ಹೆಣ್ಣಿನ ಮೇಲೆ ಸತತವಾಗಿ ಹಲ್ಲೆ ಮಾಡಿದರೆ, ನಿರಂತರವಾಗಿ ಶೋಷಣೆ ಮಾಡಿದರೆ ಏನಾಗುತ್ತದೆ? ‘ಸಖಾರಾಂ ಬೈಂಡರ್’ ನಾಟಕವಾಗುತ್ತದೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಶತಮಾನಗಳಿಂದ ಮಹಿಳೆ ನಲುಗುತ್ತಲೇ ಬಂದಿದ್ದಾಳೆ. ಪುರುಷರಿಂದಾಗುವ ಸ್ತ್ರೀ ಶೋಷಣೆಯ ಆಯಾಮಗಳನ್ನು ಹಾಗೂ ಕೌಟುಂಬಿಕ ಹಿಂಸೆ-ಕ್ರೌರ್ಯದ ವಿವಿಧ ಮಜಲುಗಳನ್ನು ರಂಗವೇದಿಕೆಯ ಮೇಲೆ ಹಸಿ ಹಸಿಯಾಗಿ ತೋರಿಸುವ ವಿಕ್ಷಿಪ್ತ ಪ್ರಯತ್ನವೇ ‘ಸಖಾರಾಂ ಬೈಂಡರ್’ ನಾಟಕ.
1972ರಲ್ಲಿ ವಿಜಯ್ ತೆಂಡೂಲ್ಕರ್‌ರವರು ಈ ನಾಟಕವನ್ನು ಮರಾಠಿಯಲ್ಲಿ ರಚಿಸಿದ್ದರು. ಯಾವಾಗ ಈ ನಾಟಕ ಮಹಾರಾಷ್ಟ್ರದಲ್ಲಿ ಪ್ರದರ್ಶನಗೊಂಡಿತೋ ಆಗ ಮಧ್ಯಮ ವರ್ಗದ ಮರಾಠಿ ಜನತೆ ಬೆಚ್ಚಿ ಬಿದ್ದಿತ್ತು. ನಾಟಕ ಪ್ರದರ್ಶನದ ವಿರುದ್ಧ ಪ್ರತಿಭಟನೆಗಳು ಶುರುವಾಗಿದ್ದವು. ತೆಂಡೂಲ್ಕರರವರಿಗೆ ಜೀವಬೆದರಿಕೆಯನ್ನೂ ಒಡ್ಡಲಾಗಿತ್ತು. ಹಾಗಾದರೆ ಅಷ್ಟೊಂದು ಆಕ್ರೋಶ ಹುಟ್ಟಿಸುವಂತಾದ್ದೇನಿದೆ ಈ ನಾಟಕದಲ್ಲಿ?. ಗಂಡು ಹೆಣ್ಣಿನ ನಡುವಿನ ಸಾಂಪ್ರದಾಯಿಕ ಸಂಬಂಧಗಳ ಅಧೀಕೃತತೆಯನ್ನು ದಿಕ್ಕರಿಸಲಾಗಿತ್ತು. ಸಮಾಜ ಮನುಷ್ಯರ ಮೇಲೆ ನಿರ್ಬಂಧಿಸಿರುವ ಮದುವೆ ಎನ್ನುವ ಮಾನ್ಯತೆಯನ್ನೇ ತಿರಸ್ಕರಿಸಲಾಗಿತ್ತು. ಹಿಂಸೆಯನ್ನು ವೈಭವೀಕರಿಸಲಾಗಿತ್ತು. ನಾಲ್ಕು ಗೋಡೆಗಳ ನಡುವೆ ನಡೆಯುವ ಗಂಡು ಹೆಣ್ಣಿನ ನಡುವಿನ ಸರಸ-ವಿರಸ ಹಿಂಸೆಯನ್ನು ರಂಗವೇದಿಕೆಯಲ್ಲಿ ಸಾರ್ವತ್ರಿಕಗೊಳಿಸಲಾಗಿತ್ತು. ಪುಂಕಾನು ಪುಂಕವಾಗಿ ಬೈಗುಳಗಳನ್ನು ಬಳಸಲಾಗಿತ್ತು. ಬ್ರಾಹ್ಮಣರ ಶ್ರೇಷ್ಟತೆಯ ಭ್ರಮೆಯನ್ನು ಒಡೆದು ಹಾಕಿ ಚಾಂಡಾಲರನ್ನಾಗಿ ಚಿತ್ರಿಸಲಾಗಿತ್ತು. ಇದರಿಂದಾಗಿ ಸಂಪ್ರದಾಯವಾದಿಗಳು ಈ ನಾಟಕದ ವಿರುದ್ಧ ಬೀದಿಗಿಳಿದಿದ್ದರು.
ಬಹಳ ವರ್ಷಗಳ ಹಿಂದೆ ಈ ವಿವಾದಾತ್ಮಕ ನಾಟಕವನ್ನು ಬೆಳಗಾವಿಯ ‘ರಂಗಸಂಪದ’ ರಂಗತಂಡದ ರೂವಾರಿ ಶ್ರೀಪತಿ ಮಂಜಿನಬೈಲುರವರು ಕನ್ನಡಕ್ಕೆ ಅನುವಾದ ಮಾಡಿ ಡಿ.ಟಿ.ಚನ್ನಕೇಶವಮೂರ್ತಿಯವರಿಗೆ ನಿರ್ದೇಶನ ಮಾಡಲು ಕೇಳಿಕೊಂಡಿದ್ದರು. ಆದರೆ ಅವರು ‘ವಿನಾಕಾರಣ ವಿವಾದ ಯಾಕೆ’ ಎಂದು ಆ ಪ್ರಸ್ತಾಪವನ್ನೇ ತಳ್ಳಿಹಾಕಿದರು. ಆಮೇಲೆ ಯಾರೂ ಈ ‘ಸಖಾರಾಂ ಬೈಂಡರ್’ ನಾಟಕವನ್ನು ಕನ್ನಡದಲ್ಲಿ ಮಾಡುವ ಸಾಹಸ ಮಾಡಲಿಲ್ಲ. ಈಗ ಪ್ರದೀಪ್ ತಿಪಟೂರು ಅಂತಹ ಸಾಹಸಕ್ಕೆ ಕೈಹಾಕಿದರು. ಗೀತಾ ತೆಕ್ಕೆವಾರಿಯವರಿಂದ ಈ ಮರಾಠಿ ನಾಟಕವನ್ನು ಕನ್ನಡಕ್ಕೆ ಅನುವಾದ ಮಾಡಿಸಿ, ಬೆಂಗಳೂರಿನ ‘ವೈಕರಿ’ ರಂಗತಂಡಕ್ಕೆ ನಿರ್ದೇಶಿಸಿದ ಪ್ರದೀಪ್ ‘ಸಖಾರಾಂ’ ಪಾತ್ರದಲ್ಲೂ ಅಭಿನಯಿಸಿದರು. 2014, ಮಾರ್ಚ 22 ರಂದು ಈ ನಾಟಕವು ಬೆಂಗಳೂರಿನ ಕೆ.ಹೆಚ್.ಸೌಧದಲ್ಲಿ ಮೊದಲ ಪ್ರದರ್ಶನವನ್ನು ಕಂಡು ಕೌಟುಂಬಿಕ ಹಿಂಸೆಯ ವಿರಾಟತೆಯನ್ನು ಅನಾವರಣಗೊಳಿಸಿತು.
‘ಎಲ್ಲಿ ಈ ನಾಟಕ ಭಾರೀ ವಿವಾದವನ್ನು ಹುಟ್ಟುಹಾಕುತ್ತದೋ’ ಎನ್ನುವ ಆತಂಕ ಪ್ರದೀಪ್ ತಿಪಟೂರರಿಗೆ ಮೊದಲಿನಿಂದಲೂ ಕಾಡುತ್ತಿತ್ತು. ಆದರೆ ಹಾಗೆ ಆತಂಕ ಪಡುವ ಅಗತ್ಯವೇ ಇರಲಿಲ್ಲ. ಯಾಕೆಂದರೆ ನಾಲ್ಕು ದಶಕಗಳ ಹಿಂದೆ ಈ ನಾಟಕ ಪ್ರಸ್ತಾಪಿಸುವ ‘ಲಿವಿಂಗ್ ಟುಗೇದರ್’ ಸಂಬಂಧ ಆಗ ಅನೈತಿಕವೆನಿಸುತ್ತಿತ್ತು. ಆದ್ದರಿಂದ ವಿರೋಧ ವ್ಯಕ್ತವಾಗಿತ್ತು. ಆದರೆ ಈಗ ಕಾಲ ಬದಲಾಗಿದೆ. ಜಾಗತೀಕರಣದ ಪರಿಣಾಮದಿಂದಾಗಿ ನಗರಗಳಲ್ಲಿ ಮದುವೆ ಆಗದೇ ಗಂಡು ಹೆಣ್ಣು ಒಟ್ಟಿಗೆ ಬದುಕುವಂತಹ ‘ಲಿವಿಂಗ್ ಟುಗೇದರ್’ ವ್ಯವಸ್ಥೆ ಹೆಚ್ಚಾಗುತ್ತಿದೆ. ಇಂತಹ ಸಂಬಂಧಗಳಿಗೆ ನ್ಯಾಯಾಲಯವೇ ಅಧಿಕೃತವಾಗಿ ಮಾನ್ಯತೆ ಕೊಟ್ಟಿದೆ.
ಹೀಗಾಗಿ ‘ಲಿವಿಂಗ್ ಟುಗೇದರ್’ ಈಗ ಸಮಾಜಬಾಹಿರ ಕೃತ್ಯವಾಗಿ ಉಳಿದಿಲ್ಲ. ಅದಕ್ಕೆ ಅಷ್ಟೊಂದು ಮಹತ್ವವೂ ಇಲ್ಲ. ಹೀಗಾಗಿ ಈ ನಾಟಕ ಈಗ ತನ್ನ ತೀವ್ರತೆಯನ್ನು ಕಳೆದುಕೊಂಡಿದೆ. ವಿವಾದಾತ್ಮಕವಾಗಬಹುದಾದ ಯಾವುದೇ ಸಾಧ್ಯತೆಗಳೂ ಇಲ್ಲ. ಈ ನಾಟಕದ ಕುರಿತು ಸ್ತ್ರೀವಾದಿಗಳು ತಕರಾರು ತಗೆಯಬಹುದಾಗಿದೆ. ಯಾಕೆಂದರೆ ಇಡೀ ನಾಟಕದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಅತಿರೇಕ ಎನ್ನುವಂತೆ ತೋರಿಸಲಾಗಿದೆ. ಈ ನಾಟಕದ ಪ್ರಮುಖ ಪಾತ್ರವಾದ ಸಖಾರಾಂನ ಮನುವಾದಿ ದೋರಣೆಯ ಕುರಿತು ಮಾನವತಾವಾದಿಗಳು ಪ್ರಶ್ನಿಸಬಹುದಾಗಿದೆ. ಆದರೆ ಅಂತಹ ಪ್ರತಿರೋಧ ಬರುವ ಯಾವ ಲಕ್ಷಣಗಳೂ ಈ ಸಧ್ಯಕ್ಕಂತೂ ಇಲ್ಲ. ಹೀಗಾಗಿ ನಾಟಕದ ಪ್ರದರ್ಶನ ಅಬಾಧಿತವಾಗಿದೆ.
ಇಷ್ಟಕ್ಕೂ ಈ ನಾಟಕದ ಕಥೆ ಏನು? ಆತ ಸಖಾರಾಂ. ವೃತ್ತಿಯಲ್ಲಿ ಪುಸ್ತಕದ ಬೈಂಡಿಂಗ್ ಕೆಲಸಗಾರ. ಹುಟ್ಟಿನಿಂದ ಬ್ರಾಹ್ಮಣ. ಆತನಿಗೆ ಮದುವೆಯಲ್ಲಿ ನಂಬಿಕೆ ಇಲ್ಲ. ಗಂಡ ಬಿಟ್ಟ ಹೆಂಗಸರನ್ನು ಕರೆತಂದು ಆಶ್ರಯ ಕೊಡುವ ನೆಪದಲ್ಲಿ ಅವರನ್ನು ತನ್ನ ಅಭೀಷ್ಟೆಗೆ ಬೇಕಾದಂತೆ ಹಿಂಸಿಸಿ ಬಳಸಿಕೊಳ್ಳುತ್ತಿರುತ್ತಾನೆ. ಬೇಡವಾದಾಗ ಹೊರಹಾಕುತ್ತಾನೆ. ಹೀಗೆ...
ಏಳನೆಯವಳಾಗಿ ಆತ ಕರೆತಂದವಳು ಲಕ್ಷ್ಮಿ. ಆಕೆ ಮೃದು ಸ್ವಭಾವದ ಮಹಿಳೆ ಸಂಪ್ರದಾಯವಾದಿ ಬ್ರಾಹ್ಮಣ ಕುಟುಂಬದಿಂದ ಬಂದವಳು. ಮಕ್ಕಳಾಗಲಿಲ್ಲ ಎನ್ನುವ ಕಾರಣಕ್ಕೆ ಗಂಡನಿಂದ ತ್ಯಜಿಸಲ್ಪಟ್ಟವಳು. ಆಕೆಗೆ ಸಖಾರಾಂ ಒಂದು ವರ್ಷಗಳ ಕಾಲ ಕೊಡಬಾರದ ಹಿಂಸೆ ಕೊಟ್ಟು ಮನೆಬಿಟ್ಟು ಓಡಿಸುತ್ತಾನೆ. ಆನಂತರ ಬಂದವಳೇ ಚಂಪಾ. ದಪೇದಾರನಾಗಿದ್ದ ಶಂಡ ಗಂಡನ ಹಿಂಸೆ ತಾಳಲಾರದೆ ಮನೆ ಬಿಟ್ಟು ಹೊರಬಂದ ಆಕೆ ಬಂದು ಸೇರಿದ್ದು ಸಖಾರಾಂ ಮನೆಯನ್ನು. ಆಕೆ ಗಯ್ಯಾಳಿ. ಸಖಾರಾಂಗೆ ತಿರುಗಿಬಿದ್ದು ಹಿಂಸಿಸುತ್ತಾಳೆ. ಹೆಂಡ ಕುಡಿದು ತೂರಾಡುತ್ತಾಳೆ. ಆದರೂ ಆಕೆಯ ಮೇಲೆ ಸಖಾರಾಂಗೆ ಮೋಹ. ಎರಡು ತಿಂಗಳ ನಂತರ ಮತ್ತೆ ಮರಳಿ ಬಂದ ಲಕ್ಷ್ಮಿಯ ಅತಂತ್ರ ಸ್ಥಿತಿಗೆ ಮರುಗಿದ ಚಂಪಾ ಸಖಾರಾಂನ ವಿರೋಧವನ್ನು ಪರಿಗಣಿಸದೆ ಆಕೆಗೆ ಆಶ್ರಯ ಕೊಡುತ್ತಾಳೆ. ಚಂಪಾಳ ಗಂಡ ಹುಚ್ಚನಂತಾಗಿ ಆಗಾಗ ಅವಳನ್ನು ಹುಡುಕಿಕೊಂಡು ಬಂದು ಅವಳಿಂದ ಹೊಡೆತ ತಿಂದು ಹೋಗುತ್ತಿರುತ್ತಾನೆ. ಸಖಾರಾಂನ ಗೆಳೆಯ ದಾವೂದ್‌ನ ಜೊತೆಗೆ ಚಂಪಾ ಅಕ್ರಮ ಸಂಬಂಧ ಹೊಂದಿರುವುದನ್ನು ಲಕ್ಷ್ಮೀ ಸಖಾರಾಂಗೆ ಹೇಳುತ್ತಾಳೆ. ಸಿಟ್ಟಿಗೆದ್ದ ಆತ ಚಂಪಾಳನ್ನು ಕತ್ತು ಹಿಚುಕಿ ಕೊಲೆ ಮಾಡುತ್ತಾನೆ. ಆಘಾತಕ್ಕೊಳಗಾದ ಸಖಾರಾಂ ಗರಬಡಿದವರಂತೆ ನಿಂತರೆ ಲಕ್ಷ್ಮೀಯು ಚಂಪಾಳ ಹೆಣವನ್ನು ಹೂಳುವುದರಲ್ಲಿ ನಿರತಳಾಗುತ್ತಾಳೆ. ಈ ನಾಟಕ ಕುತೂಹಲದ ಘಟ್ಟಕ್ಕೆ ಬಂದು ಅಸಂಗತವಾಗಿ ಮುಕ್ತಾಯವಾಗುತ್ತದೆ. ಮುಂದಿನದನ್ನು ನೋಡುಗರ ಊಹೆಗೆ ಬಿಡಲಾಗಿದೆ.
ಹೀಗೆ ಈ ಮೂರು ಪಾತ್ರಗಳು ಅನೈತಿಕ ಎಂಬ ಸಂಬಂಧದ ಸುಳಿಯಲ್ಲಿ ಸಿಕ್ಕು ತಮ್ಮ ಅಸ್ತಿತ್ವಕ್ಕಾಗಿ ಪರದಾಡುತ್ತವೆ. ತಾನೇ ಮತ್ತೊಬ್ಬನ ಹೆಂಡತಿ ಚಂಪಾಳ ಜೊತೆ ಅಕ್ರಮವಾಗಿ ಇರುವ ಸಖಾರಾಂ, ಯಾವಾಗ ಆಕೆ ಬೇರೊಬ್ಬನ ಜೊತೆ ದೈಹಿಕ ಸಂಬಂಧ ಹೊಂದಿದ್ದಾಳೆ ಎಂದು ಗೊತ್ತಾಗುತ್ತೋ ಆಗ ಚಂಪಾಳನ್ನು ಕೊಲೆ ಮಾಡಿ ಪ್ರತೀಕಾರ ತೀರಿಸಿಕೊಂಡು ಪುರುಷಹಂಕಾರವನ್ನು ಮೆರೆಯುತ್ತಾನೆ. ಎಲ್ಲಿ ತನ್ನ ಅಸ್ತಿತ್ವಕ್ಕೆ ಚಂಪಾ ಮಾರಕವಾಗುತ್ತಾಳೋ ಎಂದು ಆತಂಕಕ್ಕೊಳಗಾದ ಲಕ್ಷ್ಮಿಯು ಚಂಪಾಳನ್ನು ಕೊಲೆ ಮಾಡಲು ಸಖಾರಾಂನನ್ನು ಪ್ರಚೋದಿಸಿ ಯಶಸ್ವಿಯಾಗುತ್ತಾಳೆ. ತನ್ನ ಅಸ್ತಿತ್ವ ಕೇವಲ ಸಖಾರಾಂನನ್ನು ಮಾತ್ರ ಅವಲಂಬಿಸಿಲ್ಲ. ತನ್ನ ತೃಷೆಗೆ ಬೇರೆಯವರನ್ನೂ ಬಳಸಿಕೊಳ್ಳಬಲ್ಲೆ ಎನ್ನುವ ಚಂಪಾ ತನ್ನ ಪ್ರಯತ್ನದಲ್ಲಿ ಯಶಸ್ವಿಯಾದರೂ ಲಕ್ಷ್ಮಿಯ ಕುತಂತ್ರಕ್ಕೆ ಹಾಗೂ ಸಖಾರಾಂನ ಸಿಟ್ಟಿಗೆ ಬಲಿಯಾಗುತ್ತಾಳೆ. ಹೀಗೆ.... ಈ ಮೂರು ಪಾತ್ರಗಳು ತಮ್ಮ ಅಸ್ತಿತ್ವಕ್ಕಾಗಿ ಬಡಿದಾಡಿ ಸರ್ವನಾಶದತ್ತ ಸಾಗುತ್ತವೆ. ಇಲ್ಲಿ ಪ್ರೀತಿ-ದ್ವೇಷ, ಅಸೂಯೆ-ಅಸಹಾಯಕತೆ, ಅಹಂಕಾರ-ಆಹಾಕಾರಗಳೆಲ್ಲ ಈ ಮೂರು ಪಾತ್ರಗಳ ಮೂಲಕ ಈ ನಾಟಕದಲ್ಲಿ ಅನಾವರಣಗೊಂಡಿವೆ.
ಮೂರು ಅಂಕದ ‘ಸಖಾರಾಂ ಬೈಂಡರ್’ ನಾಟಕವನ್ನು ನಿರೂಪಿಸಲು ತೆಂಡೂಲ್ಕರರು ಬಳಸಿದ ರಂಗತಂತ್ರ ತುಂಬಾ ಸರಳವೂ ಹಾಗೂ ವಿಶಿಷ್ಟವೂ ಆಗಿದೆ. ಮೊದಲ ಅಂಕದಲ್ಲಿ ಸಖಾರಾಂ ಮತ್ತು ಲಕ್ಷ್ಮೀ ಈ ಎರಡೂ ಪಾತ್ರಗಳ ಸಂಬಂಧ ಹಾಗೂ ಗುಣಾವಗುಣಗಳ ವಿವರಣೆ ಇದ್ದರೆ, ಎರಡನೇ ಭಾಗದಲ್ಲಿ ಸಖಾರಾಂ ಮತ್ತು ಚಂಪಾಳ ಪಾತ್ರದ ವಿರೋಧಾಬಾಸಗಳ ವಿವರಣೆಗಳಿವೆ. ಮೊದಲ ಅಂಕದಲ್ಲಿ ಸಖಾರಾಂ ವಿಜ್ರಂಭಿಸಿದರೆ ಅದಕ್ಕೆ ವಿರುದ್ಧವಾಗಿ ಎರಡನೇ ಭಾಗದಲ್ಲಿ ಚಂಪಾ ಸಖಾರಾಂನನ್ನು ಪ್ರತಿರೋಧಿಸಿ ವಿಜ್ರಂಭಿಸುತ್ತಾಳೆ. ಮೂರನೆಯ ಅಂಕ ಸಂಕೀರ್ಣವಾಗಿದೆ. ಈ ಮೂರೂ ಪಾತ್ರಗಳ ವೈರುದ್ಯಗಳ ಸಂಕರಣವಾಗಿದೆ. ಜೊತೆಗೆ ಚಂಪಾಳ ಮೊದಲ ಗಂಡ ಹಾಗೂ ಸಖಾರಾಂನ ಗೆಳೆಯ ದಾವೂದ್ ಪಾತ್ರಗಳು ಬರುತ್ತವೆ. ಹೀಗೆ ಮೂರು ಅಂಕಗಳಲ್ಲಿ ಕಥೆ ಸರಳವಾಗಿ ಆರಂಭಗೊಂಡು, ವಿಕ್ಷಿಪ್ತವಾಗಿ ಬೆಳವಣಿಗೆ ಹೊಂದಿ, ಊಹಾತೀತ ಅಂತ್ಯವನ್ನು ಕಾಣುತ್ತದೆ. ಐದೇ ಪಾತ್ರಗಳನ್ನು ನಾಟಕದಲ್ಲಿ ಸೃಷ್ಟಿಸಲಾಗಿದೆ. ಅದರಲ್ಲೂ ಮೂರು ಮುಖ್ಯ ಪಾತ್ರಗಳಲ್ಲಿರುವ ಸಂಘರ್ಷ-ಹಿಂಸೆಗಳನ್ನು ಹೇಳುತ್ತಲೇ ವ್ಯಯಕ್ತಿಕ ರಾಗ-ಮೋಹ-ದ್ವೇಷಗಳನ್ನು ತೋರುತ್ತಾ ಮನುಷ್ಯರ ಮನೋವಿಶ್ಲೇಷಣೆ ಮಾಡುವಂತೆ ಈ ನಾಟಕ ರೂಪಗೊಂಡಿದೆ.
ಲಕ್ಷ್ಮೀ ಹಾಗೂ ಚಂಪಾ ಪಾತ್ರಗಳ ಸಾಮ್ಯತೆ ಮತ್ತು ವೈರುದ್ಯಗಳನ್ನು ಗಮನಿಸಬೇಕು. ಲಕ್ಷ್ಮೀ ಗಂಡನಿಂದ ತಿರಸ್ಕೃತಗೊಂಡಿದ್ದರೆ, ಚಂಪಾ ಗಂಡನನ್ನೇ ದೂರಮಾಡಿ ಬಂದವಳು. ಒಂದರ್ಥದಲ್ಲಿ ಇಬ್ಬರೂ ನೊಂದವರೇ. ನಿರಾಶ್ರಿತರಾಗಿದ್ದು ಸಖಾರಾಂನಲ್ಲಿ ಆಶ್ರಯ ಪಡೆಯಲು ಬಂದವರು. ಆದರೆ ಇವರಿಬ್ಬರ ಮನಸ್ಥಿತಿ ತೀರಾ ತದ್ವಿರುದ್ಧವಾದಂತಹುದು. ಸಾಂಪ್ರದಾಯಕವಾದ ನಡತೆ ಹಾಗೂ ಮೃದು ಸ್ವಭಾವದ ಲಕ್ಷ್ಮಿ ಸಖಾರಾಂನಲ್ಲಿ ಅದಮ್ಯ ನಿಷ್ಠೆ ಇಟ್ಟವಳು. ಆದರೆ ಚಂಪಾ ಬಲು ಚಂಚಲ ಸ್ವಭಾವದ ಹೆಣ್ಣು. ತನ್ನ ವಯ್ಯಾರದಿಂದ ಯಾವುದೇ ಗಂಡನ್ನು ಆಕರ್ಷಿಸಬಲ್ಲೆ ಎನ್ನುವ ಅಹಂಕಾರ ಉಳ್ಳವಳು. ಆದರೆ ಸಂದರ್ಭಗಳು ಇವರಿಬ್ಬರ ಗುಣಗಳನ್ನು ಬದಲಾಯಿಸುವಂತಹ ವಿಪರ್ಯಾಸವೇ ಇಲ್ಲಿಯ ವೈಶಿಷ್ಟ್ಯ. ಮರಳಿ ಮನೆಗೆ ಬಂದ ಲಕ್ಷ್ಮೀಯನ್ನು ಸಖಾರಾಂ ಹಿಂಸಿಸಿ ಹೊರಗಟ್ಟಿದಾಗ ಚಂಪಾ ಆಕೆಯ ಮೇಲೆ ಕರುಣೆ ತೋರಿ ಸಖಾರಾಂನ ವಿರೋಧವನ್ನೂ ಲೆಕ್ಕಿಸದೇ ಜೊತೆಯಲ್ಲಿರಿಸಿಕೊಂಡು ಆಶ್ರಯ ಕೊಡುತ್ತಾಳೆ. ಅದೇ ಮೃದು ಸ್ವಭಾವದ ಲಕ್ಷ್ಮಿ ಕೊನೆಗೆ ಚಂಪಾಳ ಚಂಚಲತೆಯನ್ನೇ ದೊಡ್ಡದು ಮಾಡಿ ಆಕೆಯನ್ನು ಕೊಲ್ಲಲು ಸಖಾರಾಂನನ್ನು ಪ್ರೇರೇಪಿಸುತ್ತಾಳೆ. ಚಂಪಾಳ ಕರುಣೆ ಮತ್ತು ಲಂಪಟತನ ಹಾಗೂ ಲಕ್ಷ್ಮೀಯ ಸಾಧುತನ ಮತ್ತು ಸಮಯಸಾಧಕತನ ಹೀಗೆ ಒಬ್ಬಳೆ ವ್ಯಕ್ತಿಯಲ್ಲಿರಬಹುದಾದ ಎರಡೂ ವ್ಯಕ್ತಿತ್ವಗಳ ವಿಪರ್ಯಾಸಗಳನ್ನು ಈ ನಾಟಕದಲ್ಲಿ ಚರ್ಚಿಸಲಾಗಿದೆ.
ಅನೈತಿಕತೆಯಲ್ಲಿ ನೈತಿಕ ಪ್ರಜ್ಞೆ ಅನ್ನೋದು ಇದಕ್ಕೇನಾ? ಸಖಾರಾಂನ ಜೊತೆಗೆ ಚಂಪಾ ಮತ್ತು ಲಕ್ಷ್ಮೀ ಸಂಬಂಧವೇ ಸಾಮಾಜಿಕವಾಗಿ ಅನೈತಿಕವಾದದ್ದು. ಆದರೆ ಚಂಪಾ ಬೇರೊಂದು ಅಕ್ರಮ ಸಂಬಂಧ ಹೊಂದಿದ ತಕ್ಷಣ ಅದು ಸಖಾರಾಂಗೆ ಅನೈತಿಕವಾಗಿ ಕಂಡರೆ, ಲಕ್ಷ್ಮೀಗೆ ಅಪರಾಧವೆನಿಸುತ್ತದೆ. ಗಂಡು ಹೆಣ್ಣಿನ ನಡುವಿನ ಈ ವಿಚಿತ್ರ ಸಂಬಂಧಗಳ ತಲ್ಲಣಗಳನ್ನು ಈ ನಾಟಕ ಮಾರ್ಮಿಕವಾಗಿ ತೆರೆದಿಡುತ್ತದೆ. ಇದಕ್ಕೆಲ್ಲಾ ಏನು ಕಾರಣ? ಅಭದ್ರತೆ. ಮದುವೆ ವ್ಯವಸ್ಥೆಯಲ್ಲಿ ಗಂಡು ಹೆಣ್ಣಿನ ಸಂಬಂಧಗಳಲ್ಲಿ ಅದೆಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ಒಂದು ರೀತಿಯ ಸಾಮಾಜಿಕ ಭದ್ರತೆ ಹಾಗು ಕಾನೂನಿನ ಬೆಂಬಲ ಇರುತ್ತದೆ. ಆದರೆ ಈ ರೀತಿಯ ಬೇನಾಮಿ ‘ಲಿವಿಂಗ್ ಟುಗೇದರ್’ ಸಂಬಂಧಗಳಲ್ಲಿ ಅಭದ್ರತೆ ಹೆಚ್ಚಾಗಿ ಕಾಡುತ್ತದೆ. ಇಂತಹ ಸಂದರ್ಭಗಳಲ್ಲಿ ಪಾಲುದಾರರಾದ ವ್ಯಕ್ತಿಗಳು ತಮ್ಮ ನೆಲೆಗಳನ್ನು ಗಟ್ಟಿಗೊಳಿಸಿಕೊಳ್ಳಲು ಹಲವಾರು ತಂತ್ರ ಕುತಂತ್ರಗಳಿಗೆ ಮೊರೆ ಹೋಗುತ್ತಾರೆ. ನೆಮ್ಮದಿಯನ್ನು ಕಳೆದುಕೊಳ್ಳುತ್ತಾರೆ. ಅನೈತಿಕ ಎನ್ನಬಹುದಾದ ಸಂಬಂಧಗಳ ಆಂತರಿಕ ತಳಮಳಗಳನ್ನು ಹಾಗೂ ಅದರಿಂದುಂಟಾಗುವ ಮಾನಸಿಕ ಹಾಗೂ ದೈಹಿಕವಾದ ಹಿಂಸೆಯನ್ನು ತೊರುವಲ್ಲಿ ಈ ನಾಟಕ ಯಶಸ್ವಿಯಾಗಿದೆ. ಹಾಗೂ ಅದರಿಂದಾಗಿಯೇ ವಿವಾದಗಳನ್ನೂ ಹುಟ್ಟುಹಾಕಿದೆ.
ಸಖಾರಾಂನಂತಹ ಬೇಕಾದಷ್ಟು ಪುರುಷಪುಂಗವರು ನಮ್ಮ ಸಮಾಜದಲ್ಲಿ ಎಲ್ಲಾ ವರ್ಗಗಳಲ್ಲೂ ಕಂಡುಬರುತ್ತಾರೆ. ವ್ಯತ್ಯಾಸ ಇಷ್ಟೇ ಸಖಾರಾಂ ಬೇರೆಯವರ ಹೆಂಡತಿಯನ್ನು ಆಶ್ರಯ ಕೊಡುವ ನೆಪದಲ್ಲಿ ಕರೆತಂದು ಹಿಂಸಿಸಿ ತನ್ನ ಅಡಿಯಾಳಾಗಿಸಿಕೊಂಡರೆ ಬಹತೇಕ ಗಂಡಸರು ತಮ್ಮ ಹೆಂಡತಿಯರನ್ನೇ ಹಿಂಸಿಸಿ ಗೋಳುಹೊಯ್ದುಕೊಂಡು ಗುಲಾಮರಂತೆ ನೋಡಿಕೊಳ್ಳುತ್ತಾರೆ. ಮನುವಾದಿ ಮನಸ್ಸುಗಳು, ಪುರುಷ ಸರ್ವಾಧಿಕಾರಿ ಪ್ರವೃತ್ತಿಗಳು ಯಾವ ಕಾಲಕ್ಕೂ ಬದಲಾಗುವುದೇ ಇಲ್ಲ ಎನ್ನುವಷ್ಟು ಸಮಾಜದಲ್ಲಿ ಬೇರು ಬಿಟ್ಟಿವೆ. ಅಕಸ್ಮಾತ್ ಗಂಡನ ಸಾರ್ವಭೌಮತ್ವವನ್ನು ಹೆಂಡತಿ ಪ್ರಶ್ನಿಸಿ ಎದುರಾಡಿದರೆ ಆಕೆ ದೈಹಿಕ ಹಿಂಸೆಯನ್ನು ಅನುಭವಿಸಬೇಕಾಗುತ್ತದೆ. ಮತ್ತೂ ವಿರೋಧಿಸಿದರೆ ಮನೆ ಬಿಟ್ಟು ಹೊರಹಾಕಲ್ಪಡುತ್ತಾಳೆ. ಹೀಗೆ ಗಂಡನ ಮನೆ ಬಿಟ್ಟು ಸ್ವತಂತ್ರ ಬದುಕನ್ನು ಕಟ್ಟಿಕೊಳ್ಳಬಯಸುವ ಅದೆಷ್ಟೋ ಮಹಿಳೆಯರು ಮತ್ತೊಬ್ಬ ಸಖಾರಾಂನಂತಹ ಯಾವುದೋ ಗಂಡಸಿನ ಮಾತಿಗೆ ಮರುಳಾಗಿ ಬೆಂಕಿಯಿಂದ ಬಾಣಲೆಗೆ ಬೀಳುತ್ತಾರೆ. ಮಹಿಳೆಯರ ಇಂತಹ ದುರಂತ ಬದುಕಿಗೆ ಸಾಕ್ಷಿಯಾಗಿ ‘ಸಖಾರಾಂ ಬೈಂಡರ್’ ನಾಟಕ ಮೂಡಿಬಂದಿದೆ. ಮಹಿಳೆಗೆ ಸ್ವತಂತ್ರ ಅಸ್ತಿತ್ವವೇ ಇಲ್ಲವೇನೋ ಎನ್ನುವ ಹಾಗೆ ಈ ಪುರುಷ ಪ್ರಧಾನ ವ್ಯವಸ್ಥೆ ಶಡ್ಯಂತ್ರವನ್ನು ರಚಿಸಿ ಅದರೊಳಗೆ ಮಹಿಳೆಯರನ್ನು ಕಟ್ಟಿಹಾಕಿದೆ. ಈ ಕುತಂತ್ರವನ್ನು ತೆಂಡೂಲ್ಕರ್ ಈ ನಾಟಕದ ಮೂಲಕ ನಗ್ನಸತ್ಯವನ್ನು ಹೇಳುವ ಪ್ರಯತ್ನವನ್ನು ಮಾಡಿದ್ದಾರೆ.
ಡೊಮೆಸ್ಟಿಕ್ ವೈಲೆನ್ಸನ್ನು ಈ ನಾಟಕದಲ್ಲಿ ಹಸಿಹಸಿಯಾಗಿ ತೋರಿಸುವ ಭರದಲ್ಲಿ ಬೈಗುಳಗಳ ಬಂಡಾರವನ್ನೇ ಬಿಚ್ಚಿಡಲಾಗಿದೆ. ಸಖಾರಾಂ ಎನ್ನುವ ಡಿಮೊರಲೈಸ್ಡ್ ಬ್ರಾಹ್ಮಣ ಬಾಯಿತೆಗೆದರೆ “ಹಲ್ಕಟ್ ರಂಡೆ, ಬೇವಾರ್ಸಿ ಮುಂಡೆ, ಬೀದಿ ಸೂಳೆ, ಬೋಸಡಿ...” ಹೀಗೆ ಬ್ರಾಹ್ಮಣಿಕಲ್ ಬೈಗಳುಗಳನ್ನು ಬಳಸಿ ಹೆಂಗಸರನ್ನು ಬೈಯುತ್ತಾನೆ. ಕೇಳುಗರ ಕಿವಿಗೆ ಮುಜುಗರವಾಗುವ ರೀತಿಯಲ್ಲಿ ಇಷ್ಟೊಂದು ಅಸಹ್ಯ ಪದಗಳ ಬಳಕೆ ಅಗತ್ಯವಿರಲಿಲ್ಲ. ಈ ನಾಟಕವನ್ನು ಅನುವಾದ ಮಾಡಿದ್ದು ಒಬ್ಬ ಮಹಿಳೆಯಾಗಿದ್ದರಿಂದ ಬೈಗಳುಗಳು ಸ್ಕ್ರಿಪ್ಟ್ನಲ್ಲಿದ್ದರೂ ಒಂದಿಷ್ಟನ್ನು ಎಡಿಟ್ ಮಾಡಬೇಕಾಗಿತ್ತು. ಮೂಲ ನಾಟಕಗಳಲ್ಲಿ ಇಲ್ಲದ್ದಕ್ಕಿಂತಲೂ ಹೆಚ್ಚು ಬೈಗುಳಗಳು ಈ ಕನ್ನಡ ನಾಟಕದಲ್ಲಿವೆ. ವೇದಿಕೆಯ ಮೇಲೆ ತೋರಿಸಲಾದ ದೈಹಿಕ ಹಿಂಸೆಯಂತೂ ನೋಡುಗರಿಗೆ ವಾಕರಿಕೆ ಬರುವಷ್ಟು ಹಿಂಸಾತ್ಮಕವಾಗಿತ್ತು. ಮಹಿಳೆಯನ್ನು ಕೂದಲಿಡಿದು ಎಳೆದಾಡುವುದು, ಸಿಕ್ಕ ಸಿಕ್ಕಲೆಲ್ಲಾ ಒದೆಯುವುದು, ಸಿಕ್ಕಂಗೆಲ್ಲಾ ಹೊಡೆಯುವುದು... ತುಂಬಾ ಅತಿಯಾಯಿತು. ಜೊತೆಗೆ ಲೈವ್ ಹಿಂಸಾರತಿಯ ಪ್ರಯತ್ನ ಮುಜುಗರದ ವಿಷಯ. ಸುಮಾರು ಹತ್ತು ನಿಮಿಷಗಳ ಕಾಲ ಚಂಪಾ ಪಾತ್ರವನ್ನು ಎಳೆದಾಡಿ ಕಾಡಿ ತನ್ನ ದೈಹಿಕ ತೃಷೆತೀರಿಸಿಕೊಳ್ಳಲು ಸಖಾರಾಂ ಮಾಡುವ ಅತ್ಯಾಚಾರದ ಪ್ರಯತ್ನ ಅತಿರೇಕವೆನಿಸಿತು. ಬೈಗಳು, ಸೆಕ್ಸ, ವೈಲೆನ್ಸ್ ಮತ್ತು ಕ್ರೈಂ ಗಳನ್ನು ತೋರಿಸಿದ ರೀತಿಯಿಂದಾಗಿ ಇಡೀ ನಾಟಕ ಒಂದು ‘ಎ’ ಮಾರ್ಕಿನ ‘ಸಿ’ ಗ್ರೇಡ್ ಸಿನೆಮಾವನ್ನು ನೋಡಿದಂತೆನಿಸಿತು. ಈ ನಾಟಕವನ್ನು ಈಗಿದ್ದಂತೆಯೇ ಸಿನೆಮಾ ಮಾಡಿ ತೋರಿಸಿದ್ದರೆ ಸೆನ್ಸಾರಿನವರು ಸಿನೆಮಾದ ಅರ್ಧ ಭಾಗಕ್ಕೆ ಕತ್ತರಿ ಆಡಿಸುತ್ತಿದ್ದರು ಹಾಗೂ ಅಂತಹ ಸಿನೆಮಾದಾದ್ಯಂತ ಬರೀ ಭೀಪ್ ಶಬ್ದಗಳೇ ತುಂಬಿರುತ್ತಿದ್ದವು.
ಇಂತಹ ನಾಟಕಗಳ ಹಾವಳಿ ಮರಾಠಿಯಲ್ಲಿ ಹೆಚ್ಚೆಚ್ಚಾದಾಗಲೇ ಅಲ್ಲಿಯ ಸರಕಾರ ಎಚ್ಚೆತ್ತುಕೊಂಡು ಸಿನೆಮಾಗಳಂತೆ ನಾಟಕಗಳಿಗೂ ಸೆನ್ಸಾರ್ ವ್ಯವಸ್ಥೆ ರೂಪಿಸಿದೆ. ಮೊದಲು ಮಾಡಿದಂತೆ ಈ ಸಖಾರಾಂ.. ನಾಟಕವನ್ನು ಈಗ ಮರಾಠಿಯಲ್ಲಿ ಪ್ರದರ್ಶಿಸಲು ಸಾಧ್ಯವೇ ಇಲ್ಲ. ಕರ್ನಾಟಕದಲ್ಲಿ ನಾಟಕಗಳಿಗೆ ಸೃಜನಶೀಲ ನಿರ್ದೇಶಕರು ಸಮಾಜದ ಸ್ವಾಸ್ತದ ದೃಷ್ಟಿಯಿಂದ ಸ್ವಯಂ ಸೆನ್ಸಾರ್ ಹಾಕಿಕೊಂಡು ನಾಟಕವನ್ನು ಮಾಡುತ್ತಿದ್ದುದರಿಂದ ಇಂತಹ ಸೆನ್ಸಾರ್ ವ್ಯವಸ್ಥೆ ಇಲ್ಲಿವರೆಗೂ ಬಂದಿಲ್ಲ.
ಅಭಿವ್ಯಕ್ತಿ ಸ್ವಾತಂತ್ರ್ಯ ಸ್ವೇಚ್ಚಾಚಾರವನ್ನು ಪ್ರಮೋಟ್ ಮಾಡಬಾರದು. ಕಂಬಾರ, ಕಾರ್ನಾಡರಂತವರ ನಾಟಕಗಳಲ್ಲೂ ಬೇಕಾದಷ್ಟು ಲೈಂಗಿಕತೆ ಮತ್ತು ಹಿಂಸೆ ಇದೆಯಾದರೂ ಅದು ಸೂಚ್ಯವಾಗಿದೆಯೇ ಹೊರತು ವಾಚ್ಯವಾಗಿಲ್ಲ. ನಮ್ಮ ವೃತ್ತಿರಂಗಭೂಮಿಯಲ್ಲೂ ಒಂದು ಹಂತದಲ್ಲಿ ಅತಿಯಾಗಿ ಡಬಲ್ ಮೀನಿಂಗ್ ಡೈಲಾಗಗಳು ಹಾಗೂ ಹೆಣ್ಣಿನ ದೇಹದ ಪ್ರದರ್ಶನಗಳು ನಡೆದವಾದರೂ ಕಾಲಕ್ರಮೇಣ ಜನರೇ ಅಂತವುಗಳನ್ನು ತಿರಸ್ಕರಿಸಿದರು. ಸೆಕ್ಸ್ ಮತ್ತು ಹಿಂಸೆಯಿರುವ ಇಂತಹ ನಾಟಕಗಳಿಗೆ ಕನಿಷ್ಟ ವಯಸ್ಕರಿಗೆ ಮಾತ್ರ ಎಂದು ಪ್ರಚಾರದಲ್ಲಿ ಸೇರಿಸಬೇಕು. ಇಲ್ಲವಾದರೆ ಮಕ್ಕಳು, ಹೆಂಗಸರು ಹಾಗೂ ಸಂಪ್ರದಾಯವಾದಿಗಳು ಈ ನಾಟಕವನ್ನು ನೋಡಿ ಮುಜುಗರವನ್ನು ಪಡಬೇಕಾಗುತ್ತದೆ. ಈ ನಾಟಕದ ನಡುವೆ ಎದ್ದುಹೋದ ಕೆಲವರು “ಬೆಡ್ರೂಂನಲ್ಲಿ ನಡೆಯುವ ಪ್ರೈವೇಟ್ ದೃಶ್ಯಗಳನ್ನು ಇಲ್ಲಿ ಥೇಯಟರನಲ್ಲಿ ತೋರಿಸಿದ್ದಾರೆ, ಇದೂ ಒಂದು ನಾಟಕವಾ? ಎಂದು ದೊಡ್ಡದ್ವನಿಯಲ್ಲಿ ಹೇಳುತ್ತಾ ಹೊರನಡೆದರು.
ಇಷ್ಟಕ್ಕೂ ಇಡೀ ನಾಟಕ ಏನನ್ನು ಹೇಳುತ್ತದೆ? ಒಬ್ಬ ತಿಕ್ಕಲು ಸೈಕೋ ರೀತಿಯ ಸಖಾರಾಂನ ವಿಕ್ಷಪ್ತ ಪ್ರಹಸನದಿಂದ ಸಮಾಜಕ್ಕೆ ಏನು ಸಂದೇಶ ದೊರೆಯುತ್ತದೆ? ಗಂಡು ಹೆಣ್ಣಿನ ಖಾಸಗಿ ಸಂಬಂಧಗಳನ್ನು ಸಾರ್ವತ್ರಿಕಗೊಳಿಸಿ ಹಾದರವನ್ನು ವೈಭವೀಕರಿಸುವುದರ ಅಗತ್ಯವೇನಿತ್ತು? ಹಿಂಸೆ ಮತ್ತು ಸೆಕ್ಸನ್ನು ಇಷ್ಟೊಂದು ವಿಜ್ರಂಭಿಸುವುದರಿಂದ ಪ್ರೇಕ್ಷಕರಿಗಾಗುವ ಪ್ರಯೋಜನವಾದರೂ ಏನು? ಇಷ್ಟೊಂದು ಹಸಿಬಿಸಿಯಾಗಿ ದೃಶ್ಯಗಳನ್ನು ತೋರಿಸುವ ಅಗತ್ಯವಿತ್ತಾ? ಮಹಿಳಾ ವಿರೋಧಿ ನಾಟಕ ಪುರುಷ ಪ್ರೇಕ್ಷಕರಲ್ಲಿ ನಕಾರಾತ್ಮಕ ಭಾವನೆಯನ್ನು ಪ್ರಚೋದಿಸುವುದಿಲ್ಲವಾ? ಎನ್ನುವ ಹಲವಾರು ಪ್ರಶ್ನೆಗಳನ್ನು ಈ ನಾಟಕ ನೋಡುಗರಲ್ಲಿ ಹುಟ್ಟುಹಾಕುತ್ತದೆ. ಹೆಣ್ಣು ಹೆಮ್ಮಾರಿಯಾಗಲು ಈ ನಾಟಕದಲ್ಲಿ ಸಕಾರಣಗಳಿವೆಯೇ ಹೊರತು ಬ್ರಾಹ್ಮಣನೊಬ್ಬ ಹೀಗೆ ಕೀಳುದರ್ಜೆಯ ಕಿರಾತಕನಾಗಲು ಕಾರಣಗಳಿಲ್ಲ. ಇಡೀ ನಾಟಕ ಅದ್ಯಾಕೋ ನೋಡುಗರನ್ನು ಸಿಕ್ಕಾಪಟ್ಟೆ ಡಿಸ್ಟರ್ಬ ಮಾಡಿತು. ಬಹುಶಃ ಈ ರೀತಿ ಡಿಸ್ಟರ್ಬ ಮಾಡುವುದೇ ಈ ನಾಟಕದ ಉದ್ದೇಶವೂ ಆಗಿದೆ. ಆದ್ದರಿಂದ ತನ್ನ ನಕಾರಾತ್ಮಕ ಉದ್ದೇಶದಲ್ಲಿ ನಾಟಕ ಯಶಸ್ವಿಯಾಯಿತು.
ದೃಶ್ಯಗಳು ಪುನರಾವರ್ತನೆಯಾಗಿದ್ದನ್ನು ಎಡಿಟ್ ಮಾಡಿದರೆ, ಬೈಗುಳಗಳನ್ನು ಕಡಿಮೆಗೊಳಿಸಿದ್ದರೆ. ಹಸಿಹಸಿ ಕ್ರೌರ್ಯವನ್ನು ಮಿತಿಗೊಳಿಸಿದ್ದರೆ, ಕೊನೆಯ ರೇಪ್ ದೃಶ್ಯವನ್ನು ಸಾಂಕೇತಿಕಗೊಳಿಸಿದ್ದರೆ ಇಡೀ ನಾಟಕ ಒಂದಿಷ್ಟು ಸಹ್ಯವಾಗಬಹುದಾಗಿದೆ. ಸಖಾರಾಂ ಪಾತ್ರದಲ್ಲಿ ಪ್ರದೀಪ್ ತಿಪಟೂರ ವಾಚಿಕ ಮತ್ತು ಆಂಗಿಕಾಭಿನಯದಲ್ಲಿ ಅದ್ಬುತ ಪರ್ಪಾರ್ಮನ್ಸ್ ನೀಡಿದ್ದಾರೆ. ಆದರೆ....
ತಮ್ಮನ್ನು ತಾವೇ ನಿರ್ದೇಶಿಸಿಕೊಂಡಿದ್ದರಿಂದಲೋ ಏನೋ ಸಾತ್ವಿಕಾಭಿನಯದಲ್ಲಿ ಸೊರಗಿದ್ದಾರೆ. ಸಖಾರಾಂ ಪಾತ್ರವನ್ನು ಆಹ್ವಾನಿಸಿಕೊಳ್ಳಲು ಅವರಿಗೆ ಇನ್ನೂ ಸಾಧ್ಯವಾಗಿಲ್ಲ. ಮಾತಿಗೆ ತಕ್ಕಂತೆ ಭಾವಾಭಿನಯವನ್ನು ರೂಢಿಸಿಕೊಂಡರೆ ನಿಜವಾಗಿ ಸಖಾರಾಂಗೆ ನ್ಯಾಯ ಸಲ್ಲಿಸಲು ಸಾಧ್ಯ. ಒಂದು ದೃಶ್ಯದಲ್ಲಿ ಚೆನ್ನಾಗೇ ಇದ್ದ ಪ್ರದೀಪ್ ನೀರು ಕುಡಿದು ನಶೆ ಏರಿದಂತೆ ನಟಿಸಿದ್ದು ಆಭಾಸಕಾರಿಯಾಗಿದೆ. ಲಕ್ಷ್ಮೀಯಾಗಿ ರಾಜೇಶ್ವರಿ ತಳವಾರ ಹಾಗೂ ಚಂಪಾ ಪಾತ್ರದಲ್ಲಿ ಪ್ರಜ್ಞಾ ಬ್ರಹ್ಮಾವರ್ ಅಭಿನಯ ಅನನ್ಯವಾಗಿದೆ. ಈ ಇಬ್ಬರೂ ಯುವತಿಯರು ಪಾತ್ರವೇ ತಾವಾಗಿ ಅಭಿನಯಿಸಿ ಗಮನಸೆಳೆದರು. ಚಂಪಾ ಗಂಡನಾಗಿ ಸತೀಶ್ ಹಾಗೂ ದಾವುದ್ನಾಗಿ ದರ್ಶನ್ ಅಭಿನಯ ಪಾತ್ರೋಚಿತವಾಗಿತ್ತು.
ಮಂಜು ನಾರಾಯಣರವರ ಬೆಳಕು ದೃಶ್ಯಗಳನ್ನು ಬೆಳಗಿತ್ತಾದರೂ ದೃಶ್ಯದ ಮೂಡಿಗೆ ಸ್ಪಂದಿಸುವಲ್ಲಿ ವಿಫಲವಾಯಿತು. ಕ್ರೌರ್ಯವನ್ನು ಕೆಂಪು ಬಣ್ಣದ ಬೆಳಕಲ್ಲಿ ತೋರಿಸಬೇಕಾಗಿತ್ತು. ಬೆಳಕಿನ ಸಂಯೋಜನೆ ಬಹುತೇಕ ದೃಶ್ಯಗಳಲ್ಲಿ ಕಲಾವಿದರ ಮುಖದಲ್ಲಿ ನೆರಳನ್ನುಂಟುಮಾಡಿ ನೋಡುಗರಿಗೆ ಕಲಾವಿದರ ಮುಖದ ಭಾವನೆಗಳು ಕಾಣದಂತೆ ಮಾಡಿತು. ಬೆಳಕಿನ ವಿನ್ಯಾಸದಲ್ಲಿ ಇನ್ನೂ ಕೌಶಲ ತೋರಬೇಕಾಗಿದೆ. ಮೂಡ್ ಸೃಷ್ಟಿಸಲು ರಾಗವನ್ನು ಬಳಸಲಾಗಿದೆಯಾದರೂ ಅದ್ಯಾಕೋ ಬ್ಲೆಂಡ್ ಆಗಿಲ್ಲ. ಒಂದು ದೃಶ್ಯದಲ್ಲಿ ರಿಕಾರ್ಡೆಡ್ ಸಿತಾರದ ಸದ್ದು ನಟರ ಮಾತುಗಳನ್ನೇ ನುಂಗಿ ಹಾಕಿತು. ದ್ವನಿ ನಿರ್ವಹಣೆಯಲ್ಲಿ ನಿಯಂತ್ರಣ ಹೊಂದಿದ್ದರೆ ಮೂಡ್ ಕ್ರಿಯೇಟ್ ಮಾಡಬಹುದಾಗಿತ್ತು. ಇನ್ನೂ ಹಿಂಸಾತ್ಮಕ ದೃಶ್ಯಗಳಿಗೆ ಪೂರಕವಾಗಿ ಸಂಗೀತವನ್ನು ಬಳಸಲು ಬೇಕಾದಷ್ಟು ಅವಕಾಶಗಳಿದ್ದವು. ಬರೀ ವಾಚ್ಯವಾಗಿರುವ ನಾಟಕವನ್ನು ಹಿನ್ನೆಲೆ ಸಂಗೀತದ ಮೂಲಕ ಅನುಭವಜನ್ಯವಾಗಿಸಬಹುದಾಗಿತ್ತು. ನಾಟಕದ ಸೆಟ್ ಅತ್ಯಂತ ಸರಳವೂ ಹಾಗೂ ರಿಯಾಲಿಸ್ಟಿಕ್ ಆಗಿ ಮೂಡಿಬಂದಿದ್ದು ನಾಟಕಕ್ಕೆ ಪೂರಕವಾಗಿದೆ. ಮೊದಲನೇ ಪ್ರದರ್ಶನವಾಗಿದ್ದರಿಂದ ಹೆಚ್ಚು ಕಡಿಮೆಯಾಗುತ್ತದೆ. ಮುಂದಿನ ಪ್ರದರ್ಶನದಲ್ಲಿ ಈ ನಾಟಕದೊಳಗಿನ ನ್ಯೂನ್ಯತೆಗಳನ್ನು ನಿರ್ದೇಶಕರು ಸರಿಪಡಿಸಬಹುದಾಗಿದೆ.
‘ಸಖಾರಾಂ ಬೈಂಡರ’ನಲ್ಲಿ ಬ್ರಾಹ್ಮಣ್ಯದ ಮನುವಾದಿತನ ಬಟಾಬಯಲಾಗಿದೆ. ಮಹಿಳೆಯರನ್ನ ಶತಮಾನಗಳಿಂದ ತಮ್ಮ ಅಡಿಯಾಳಾಗಿಸಿಕೊಂಡ ಪುರೋಹಿತಶಾಹಿ ವರ್ಗ “ನ ಸ್ತ್ರೀ ಸ್ವಾತಂತ್ರ್ಯಂ ಅರ್ಹತಿ’ ಎನ್ನುವ ಮನುವಾದಕ್ಕೆ ನಿಷ್ಟತೆಯನ್ನು ತೋರುತ್ತಲೇ ಬಂದಿದ್ದಾರೆ. ಈ ನಾಟಕವನ್ನು ಬರೆದ ತೆಂಡೂಲ್ಕರ್ ಬ್ರಾಹ್ಮಣ, ಈಗ ಈ ನಾಟಕವನ್ನು ನಿರ್ದೇಶಿಸಿ ಸಖಾರಾಂ ಪಾತ್ರದಲ್ಲಿ ಅಭಿನಯಿಸಿದ ಪ್ರದೀಪ್ ಕೂಡಾ ಬ್ರಾಹ್ಮಣ. ನಾಟಕಕಾರ ಮತ್ತು ನಿರ್ದೇಶಕ ಇಬ್ಬರೂ ಈ ನಾಟಕದ ಮೂಲಕ ತಮ್ಮ ಮನುವಾದಿತನವನ್ನು ಹಾಗೂ ಸ್ತ್ರೀದ್ವೇಷವನ್ನು ಹೊರಹಾಕಿದ್ದಾರಾ? ಈ ಮಹಿಳಾ ವಿರೋಧಿ ನಾಟಕವನ್ನು ನೋಡಿದಾಗ ಅಂತಹುದೊಂದು ಸಂದೇಹ ಬಾರದೇ ಇರದು. ತೆಂಡೂಲ್ಕರ್ ಆರಂಭದಲ್ಲಿ ಪ್ರಿಂಟಿಂಗ್ ಪ್ರೆಸ್ನಲ್ಲಿ ಬೈಂಡಿಂಗ್ ಕೆಲಸ ಮಾಡಿಕೊಂಡಿದ್ದರು. ಅದ್ಯಾಕೋ ಮಹಿಳೆಯರ ಬಗ್ಗೆ ಒಂದು ರೀತಿಯ ಅಸಮಾಧಾನವನ್ನು ಹೊಂದಿರುವುದು ಅವರ ಬಹುತೇಕ ನಾಟಕಗಳಿಂದ ತಿಳಿಯುತ್ತದೆ. ಆದ್ದರಿಂದ ಸ್ತ್ರೀ ವಿರೋಧಿತನವನ್ನು ಹೇಳುವಂತಹ ‘ಸಖಾರಾಂ ಬೈಂಡರ’ನಂತಹ ನಾಟಕವನ್ನು ಬರೆದು ವಿವಾದವನ್ನು ಸೃಷ್ಟಿಸಿದರು. ಈ ನಾಟಕವನ್ನು ತೆಗೆದುಕೊಂಡ ಪ್ರದೀಪ್ ಕೂಡಾ ತಮ್ಮ ಕೌಟುಂಬಿಕ ಬದುಕಿನ ಅನುಭವದ ಹಿನ್ನೆಲೆಯಲ್ಲಿ ಅದ್ಯಾಕೋ ಸ್ತ್ರೀವಿರೋಧಿತನವನ್ನು ಅಂತರಂಗದಲ್ಲಿ ಹೊಂದಿದ್ದರು. ಮದುವೆ ವ್ಯವಸ್ಥೆಯ ಬಗ್ಗೆ ಹಾಗೂ ಮಹಿಳೆಯರ ಬಗ್ಗೆ ತಮ್ಮದೇ ಆದ ರೀತಿಯ ಅಸಮಾಧಾನವನ್ನು ಅವರಲ್ಲಿತ್ತೇನೋ, ತಮ್ಮ ಒಳಕುದಿತವನ್ನು ಹೊರಹಾಕಲು ಸಖಾರಾಂ ನಾಟಕವನ್ನು ಬಳಸಿಕೊಂಡರು. ಈ ನಾಟಕದ ಮೊದಲ ಪ್ರದರ್ಶನವನ್ನು ಪ್ರಾಯೋಜಿಸಿದ ಸರ್ವಸ್ವ ಸಂಘದ ಸೋಮಯಾಜಿ ಕೂಡಾ ಬ್ರಾಹ್ಮಣನಾಗಿದ್ದು ಇನ್ನೊಂದು ಕಾಕತಾಳೀಯ. ಇಲ್ಲಿ ಬ್ರಾಹ್ಮಣ ಎನ್ನುವುದು ಆಕ್ಷೇಪಣೆಯಲ್ಲ. ಆದರೆ ಮಹಿಳೆಯರ ಬಗ್ಗೆ ಅನಾದರ ಮತ್ತು ಮನುವಾದಿ ದೋರಣೆ ಹೊಂದಿದ ಬ್ರಾಹ್ಮಣ್ಯ ಮಾತ್ರ ಅಕ್ಷಮ್ಯ. ವ್ಯಯಕ್ತಿಕ ಪುರುಷ ವಿಕೃತಿಯ ಅನಾವರಣಕ್ಕೆ ರಂಗಭೂಮಿಯನ್ನು ಬಳಸಿಕೊಂಡಿದ್ದು ಇನ್ನೂ ಅಕ್ಷಮ್ಯ. ಸಾಮಾಜಿಕ ಕಳಕಳಿ ಹಾಗೂ ಮಹಿಳೆಯರ ಮೇಲೆ ಗೌರವವಿರುವವರು ಸಖಾರಾಂ ನಂತಹ ಸ್ತ್ರೀ ಹಿಂಸಾಪ್ರಧಾನ ನಾಟಕವನ್ನು ಪ್ರದರ್ಶಿಸುವುದು ಸಾಧ್ಯವೇ ಇಲ್ಲ.
ಇನ್ನೊಂದು ವಿಪರ್ಯಾಸ ಗಮನಿಸಬೇಕು. ‘ಲಿವಿಂಗ್ ಟುಗೇದರ್’ ನ ವಿಕೃತಿಗಳ ಬಗ್ಗೆ ಸಖಾರಾಂ
... ನಾಟಕ ಬರೆದ ತೆಂಡೂಲ್ಕರರವರ ಸ್ವಂತ ಮಗಳು ಪ್ರೀಯಾ ತೆಂಡೂಲ್ಕರ್ ಅಂತಹುದೇ ವ್ಯವಸ್ಥೆಗೆ ಒಳಗಾಗಿ ಹಿಂಸೆಯನ್ನು ಅನುಭವಿಸಬೇಕಾಯಿತು. ‘ಸಖಾರಾಂ ಬೈಂಡರ್’ ನಾಟಕದಲ್ಲಿ ಪ್ರೀಯಾ ಹಲವು ಬಾರಿ ಚಂಪಾ ಪಾತ್ರದಲ್ಲಿ ಅಮೋಘವಾಗಿ ಅಭಿನಯಿಸುತ್ತಿದ್ದರು. ನಂತರ ಕನ್ನಡದ ಸಿನೆಮಾ ನಟ ಅನಂತನಾಗ್ ಜೊತೆಗೆ ಹಲವು ವರ್ಷಗಳ ಕಾಲ ‘ಲಿವಿಂಗ್ ಟುಗೇದರ್’ ಸಂಬಂಧವನ್ನು ಹೊಂದಿದ್ದರು. ಅನಂತನಾಗ್ರವರು ಕೆಲವೊಮ್ಮೆ ಕುಡಿದಾಗ ಸಖಾರಾಂ ರಂತೆಯೇ ವರ್ತಿಸುತ್ತಿದ್ದರೆಂದು ಪ್ರೀಯಾ ಸಂದರ್ಶನವೊಂದರಲ್ಲಿ ಹೇಳಿದ್ದರು. ಕೊನೆಗೊಂದು ದಿನ ಈ ಟೆಂಪರವರಿ ವಿವಾಹೇತರ ಸಂಬಂಧ ಮುರಿದು ಬಿದ್ದಿತು.
2002, ಸೆಪ್ಟೆಂಬರ್ 19ರಂದು ಪ್ರೀಯಾ ತೆಂಡೂಲ್ಕರ್ ಹಾರ್ಟಅಟ್ಯಾಕ್ಗೊಳಗಾಗಿ ತೀರಿಕೊಂಡರು. ಮಗಳ ಅಕಾಲ ಮೃತ್ಯುವಿನಿಂದ ಅಪಾರವಾಗಿ ನೊಂದುಕೊಂಡ ವಿಜಯ್ ತೆಂಡೂಲ್ಕರ ಬರೆಯುವುದನ್ನೇ ನಿಲ್ಲಿಸಿಬಿಟ್ಟರು. ‘ಲಿವಿಂಗ್ ಟುಗೇದರ್’ ಸಂಬಂಧಗಳ ವಿಕ್ಷಿಪ್ತತೆಯನ್ನು ನಾಟಕವಾಗಿಸಿದ ತೆಂಡೂಲ್ಕರರ ಮಗಳ ಬದುಕನ್ನೇ ಈ ರೀತಿಯ ಸಂಬಂಧ ಹಾಳುಮಾಡಿಬಿಟ್ಟಿತ್ತು.
ಪ್ರದೀಪ್ ತಿಪಟೂರು |
ಮಹಿಳೆಯರ ಅಸಹಾಯಕತೆ ಮತ್ತು ಅತಂತ್ರತೆಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವ ಪುರುಷರು ಎಷ್ಟೊಂದು ನಿರ್ದಯತೆಯಿಂದ ಸ್ತ್ರೀಯರನ್ನು ಗುಲಾಮರನ್ನಾಗಿ ನೋಡಿಕೊಳ್ಳುತ್ತಾರೆ ಎನ್ನುವುದನ್ನು ‘ಸಖಾರಾಂ ಬೈಂಡರ್’ ನಾಟಕ ತೋರಿಸುತ್ತದೆ. ಇಡೀ ನಾಟಕ ಹೆಣ್ಣಿನ ಮೇಲೆ ಗಂಡಿನ ಶೋಷಣೆಯನ್ನು ಬಿಂಬಿಸಿತೇ ಹೊರತು ಬಿಡುಗಡೆಯನ್ನಲ್ಲ. ಹೀಗಾಗಿ ಈ ನಾಟಕ ಮನುಷ್ಯ ಸಂಬಂಧಗಳ ಕ್ರೂರತೆಯನ್ನು ಹೇಳುತ್ತದೆಯೇ ಹೊರತು ಪರಿಹಾರವನ್ನಲ್ಲ. ಕಲಾಕೃತಿಯಾಗಬೇಕಾದ ರಂಗಕೃತಿಯೊಂದು ವಿಕೃತಿಯಾಗಿ ಸೃಷ್ಟಿಯಾಗಿ ವಿಕ್ಷಪ್ತತೆಯನ್ನು ಪ್ರದರ್ಶಿಸುವಂತಹ ನಕಾರಾತ್ಮಕ ನಾಟಕ ಸಮಾಜಕ್ಕೆ ಅಗತ್ಯವಿದೆಯಾ? ಎನ್ನುವ ಪ್ರಶ್ನೆ ನಾಟಕ ಮುಗಿದ ನಂತರ ಪ್ರೇಕ್ಷಕರಲ್ಲಿ ಪಲ್ಲವಿಸುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ