ಶನಿವಾರ, ಮಾರ್ಚ್ 15, 2014

ಅಪ್ರಸ್ತುತ ವಿಷಯ ಪ್ರಸ್ತುತಗೊಳಿಸಿದ “ಸಾಹೇಬರ ಸರ್ಕೀಟು”


            
ಶಿಕ್ಷಣ ಕ್ಷೇತ್ರದ ನ್ಯೂನ್ಯತೆ ಹಾಗೂ ಸಾಧ್ಯತೆಗಳನ್ನು ಮನರಂಜನಾತ್ಮಕವಾಗಿ ತೋರಿಸುವ ಪ್ರಯತ್ನವೇ ಸಾಹೇಬರ ಸರ್ಕೀಟು ನಾಟಕ. ರಂಜನೆಯ ಮೂಲಕ ಬೋಧನೆಯನ್ನೂ ಮಾಡುವ ನಾಟಕವು ಸರಕಾರಿ ಶಾಲೆಗಳ ಸ್ಥಿತಿ ಗತಿ ಹಾಗೂ ಮಿತಿಗಳ ಮೇಲೆ ಬೆಳಕು ಚೆಲ್ಲುವಂತಿದೆ. ಸರಕಾರಿ ಶಾಲೆಗಳನ್ನು ಮುಚ್ಚಬೇಕೋ ಬೇಡವೋ ಎನ್ನುವ ಚರ್ಚೆ ನಡೆಯುತ್ತಿರುವ ಪ್ರಸ್ತುತ ಸಂದರ್ಭದಲ್ಲಿ, ಸಂವಾದಕ್ಕೆ ಪೂರಕವಾಗಿ ಕೆಲವು ಸಾಕ್ಷಗಳನ್ನು ಒದಗಿಸುವಂತೆ ನಾಟಕ ಮೂಡಿಬಂದಿದೆ. 

ಎಂ.ಆರ್.ಶ್ರೀನಿವಾಸಮೂರ್ತಿಯವರು ಆರು ದಶಕಗಳ ಹಿಂದೆ ಬರೆದ ರಂಗಣ್ಣನ ಕನಸಿನ ದಿನಗಳು ಎನ್ನುವ ಜನಪ್ರೀಯ ಕಾದಂಬರಿಯ ಕೆಲವು ಕುತೂಹಲಕಾರಿ ಪ್ರಸಂಗಗಳನ್ನು ಆಧರಿಸಿ ಸುಂದರ ಹಾಗೂ ಪ್ರಮೋದರವರು ರಂಗರೂಪಾಂತರಿಸಿದ್ದಾರೆ. ಸಾಹೇಬರ ಸರ್ಕೀಟು ಹೆಸರಲ್ಲಿ  ಪ್ರಮೋದ ಶಿಗ್ಗಾಂವ್ರವರು ಕ್ರಿಯೇಟಿವ್ ಥೀಯೇಟರ್ ರಂಗತಂಡಕ್ಕೆ  ನಿರ್ದೇಶಿಸಿದ್ದಾರೆ. ರವೀಂದ್ರ ಕಲಾಕ್ಷೇತ್ರ-50 ಸುವರ್ಣ ಸಂಭ್ರಮದಲ್ಲಿ ನಾಟಕ ಬೆಂಗಳೂರು ಆಯೋಜಿಸಿದ ನಾಲ್ಕನೆಯ ಕಂತಿನ ನಾಟಕೋತ್ಸವದಲ್ಲಿ 2014, ಮಾರ್ಚ 14ರಂದು ಸಾಹೇಬರ ಸರ್ಕೀಟು ನಾಟಕದ ಹದಿನೇಳನೆಯ ಪ್ರಯೋಗ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡು ನೋಡುಗರಿಗೆ ನಗಿಸುವ ಪ್ರಯತ್ನ ಮಾಡಿತು.



ನಾಟಕಕ್ಕೆ ಒಂದು ಕಥೆಯ ಚೌಕಟ್ಟೆಂಬುದೇನೂ ಇಲ್ಲ. ಒಬ್ಬ ಸ್ಕೂಲ್ ಇನ್ಸಫೆಕ್ಟರ್ ಆತ್ಮಕಥೆಯ ಭಾಗದ ನಿರೂಪನೆಯಂತೆ  ಇಡೀ ನಾಟಕ ಮೂಡಿಬಂದಿದೆ. ಶಾಲೆಯ ಮೇಷ್ಟ್ರಾದ ರಂಗಣ್ಣ ಸ್ಕೂಲ್ ಇನ್ಸಫೆಕ್ಟರನಾಗಿ ಪ್ರಮೋಶನ್ ಪಡೆಯುತ್ತಾನೆ. ಹಳ್ಳಿಹಳ್ಳಿಗಳನ್ನು ತನ್ನ ಸೈಕಲ್ಲಿನಲ್ಲಿ ಸುತ್ತಿ ಸರಕಾರಿ ಶಾಲೆಗಳ ದುಸ್ಥಿತಿ ಹಾಗೂ ಶಾಲೆಯ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿ ಒಳ್ಳೆಯ ಹೆಸರು ಸಂಪಾದಿಸುತ್ತಾನೆ. ಪುಂಡ ಶಿಕ್ಷಕರನ್ನು ಶಿಕ್ಷಿಸುತ್ತಾನೆ. ಇದರಿಂದಾಗಿ ಕೆಲವು ಹಳ್ಳಿಯ ರಾಜಕೀಯ ಪುಡಾರಿಗಳ ಕೋಪಕ್ಕೆ ಕಾರಣನಾಗುತ್ತಾನೆ. ಬಂದ ಬಿಕ್ಕಟ್ಟುಗಳನ್ನು ದೈರ್ಯವಾಗಿ ಎದುರಿಸುತ್ತಾನೆ. ಸಾಮ ಪ್ರೇಮ ದಂಡಗಳ ಬಳಕೆಯಿಂದಾಗಿ ಪ್ರಮಾಣಿಕ ಶಿಕ್ಷಕರಲ್ಲಿ ಪ್ರೀತಿ ಸಲುಗೆಯನ್ನೂ, ಪುಂಡ ಮೇಸ್ಟ್ರುಗಳಲ್ಲಿ ಭೀತಿಯನ್ನು ಹುಟ್ಟಿಸಿ ತನ್ನ ಆಶಯದಲ್ಲಿ ಯಶಸ್ವಿಯಾಗಿ ಮುಂದಿನ ಊರಿಗೆ ವರ್ಗವಾಗುತ್ತಾನೆ. ಇದು ನಾಟಕದ ಒಂದೆಳೆ ಕಥೆ. ಇಡೀ ನಾಟಕದ ಮೂಲ ಉದ್ದೇಶ ಮನರಂಜನೆಯಾದರೂ ವಿನೋದದ ಜೊತೆಗೆ ಕೆಲವೊಮ್ಮೆ ವಿಷಾದವನ್ನೂ ಹುಟ್ಟಿಸುವಲ್ಲಿ ನಾಟಕ ಸಫಲವಾಗಿದೆ.

ಆಗಿನ ಕಾಲದ ಬಡ ಶಿಕ್ಷಕರ ಪರಿಸ್ಥಿತಿ ನಿಜಕ್ಕೂ ತುಂಬಾ ಕೆಟ್ಟದಾಗಿತ್ತು. ಸಿಗುವ ಹದಿನೈದು ರೂಪಾಯಿ ಸಂಬಳದಲ್ಲಿ ಮನೆ ತುಂಬಾ ಮಕ್ಕಳನ್ನಿಟ್ಟುಕೊಂಡ ಮೇಸ್ಟ್ರುಗಳು ಬದುಕು ನಡೆಸುವುದೇ ಹರಸಾಹಸವಾಗಿತ್ತು. ಸ್ಕೂಲ್ ಇನ್ಸಫೆಕ್ಷನ್ ಮಾಡುವ ಕಚೇರಿಯ ಸಿಬ್ಬಂದಿ, ಇನ್ಸಫೆಕ್ಟರಗಳು ಹಾಗೂ ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳು ಅದು ಹೇಗೆ ಶಿಕ್ಷಕರನ್ನು ನಾಯಿಗಿಂತಲೂ ಕಡೆಯಾಗಿ ಗುಲಾಮರಂತೆ ನೋಡಿಕೊಳ್ಳುತ್ತಿದ್ದರು. ಶಿಕ್ಷಕರು ತಮ್ಮ ಬದುಕಿಗಾಗಿ ವೃತ್ತಿಯ ಜೊತೆಗೆ ಉಪವೃತ್ತಿಯನ್ನು ಹೊಂದಬೇಕಾದ ಅನಿವಾರ್ಯತೆ ಇತ್ತು.  ಶಾಲಾ ಕೊಠಡಿಗಳು ಕುರಿದೊಡ್ಡಿಗಳಾಗಿ ಅಸಹನೀಯವಾಗಿದ್ದವು. ಒಬ್ಬೊಬ್ಬ ಮೇಸ್ಟ್ರು ಎಪ್ಪತ್ತಕ್ಕೂ ಹೆಚ್ಚು ಮಕ್ಕಳನ್ನು ನಿಭಾಯಿಸುವ ಅನಿವಾರ್ಯತೆ ಸೃಷ್ಟಿಯಾಗಿತ್ತು. ಏಕೋಪಾದ್ಯಾಯ ಶಾಲೆಗಳ ಮೇಸ್ಟ್ರುಗಳ ದುಸ್ತಿತಿ ಹೇಳಲಾರದಾಗಿತ್ತು. ಜೊತೆಗೆ ಹಳ್ಳಿಗಳ ರಾಜಕೀಯ ಪುಡಾರಿಗಳು ಶಿಕ್ಷಕರನ್ನು ಹಾಗೂ ಶಿಕ್ಷಣಾಧಿಕಾರಿಗಳನ್ನೂ ತನ್ನ ಹಿಡಿತದಲ್ಲಿಟ್ಟುಕೊಂಡಿತ್ತು..... ಹೀಗೆ ಆಗಿನ ಶಿಕ್ಷಣ ವ್ಯವಸ್ಥೆ ಕೇಂದ್ರಿತವಾದ ಅನೇಕ ಆಯಾಮಗಳನ್ನು ನಾಟಕ ಅನಾವರಣಗೊಳಿಸುತ್ತದೆ. ಇದೇ ನಾಟಕ ಅರವತ್ತರ ದಶಕದಲ್ಲಿ ಬಂದಿದ್ದರೆ ಅತ್ಯಂತ ಸೂಕ್ತವಾಗಿರುತ್ತಿತ್ತು.


ಆದರೆ.....ಈಗ ಕಾಲ ಬದಲಾಗಿದೆ. ಒಬ್ಬೊಬ್ಬ ಸರಕಾರಿ ಶಿಕ್ಷಕರ ಸಂಬಳ ಐದಂಕಿ ಮೀರಿದೆ. ಶಿಕ್ಷಕರನ್ನು ಬಡಮೇಸ್ಟ್ರು ಎಂದು ಕರೆಯಲು ಯಾವುದೇ ಪುರಾವೆಗಳಿಲ್ಲ. ಹಳ್ಳಿಗಳಲ್ಲಿ ಸರಕಾರಿ ಶಾಲಾ ಕಟ್ಟಡಗಳಾಗಿವೆ, ಗ್ರಾಮಗಳಿಗೆ ರಸ್ತೆಸಂಪರ್ಕಗಳೂ ಕಾಲಕ್ಕಿಂತ ಚೆನ್ನಾಗಿವೆ. ಶಿಕ್ಷಕರು ಕಾಲ್ನಡಿಗೆ-ಸೈಕಲ್ ಬಿಟ್ಟು ಬಸ್ಸು-ಬೈಕು ಬಳಸುತ್ತಿದ್ದಾರೆ. ಶಿಕ್ಷಣಾಧಿಕಾರಿಗಳು ಕಾರು-ಜೀಪುಗಳಲ್ಲಿ ಓಡಾಡುತ್ತಿದ್ದಾರೆ.  ಶಿಕ್ಷಕರೂ ಸಹ ಸಂಘಗಳನ್ನು ಮಾಡಿಕೊಂಡು ಮೇಲಾಧಿಕಾರಿಗಳಿಂದ ಅನ್ಯಾಯವಾದಾಗ ಸಂಘಟನಾತ್ಮಕವಾಗಿ ಎದುರಿಸುವ ತಾಕತ್ತು ಬೆಳೆಸಿಕೊಂಡಿದ್ದಾರೆ. ಈಗಿನ ಶಿಕ್ಷಕರು ಹೆಚ್ಚು ಓದಿದ್ದಾರೆ....ಸೂಕ್ತ ತರಬೇತಿ ಪಡೆದಿದ್ದಾರೆ, ಕಡಿಮೆ ಮಕ್ಕಳನ್ನು ಹೆತ್ತಿದ್ದಾರೆ... ಸಾಮಾಜಿಕವಾಗಿ ಅನುಕೂಲಸ್ತರಾಗಿದ್ದಾರೆ. ನಾಟಕದಲ್ಲಿ ತೋರಿಸುವಂತಹ ಶಿಕ್ಷಕರು ಈಗ ಯಾವ ಗ್ರಾಮಗಳಲ್ಲೂ ಸಿಕ್ಕುವುದಿಲ್ಲ. ಯಾಕೆಂದರೆ ಕಾಲ ಎಲ್ಲವನ್ನೂ ಬದಲಾಯಿಸಿದೆ. ಶಿಕ್ಷಣ ಕ್ಷೇತ್ರದ ಆದ್ಯತೆಗಳು ಬದಲಾಗಿವೆ. ಸಮಸ್ಯೆಗಳು ಭಿನ್ನವಾಗಿದೆ. ಹೀಗಾಗಿ ಪ್ರಸ್ತುತ ಸಮಸ್ಯೆಗಳಿಗೆ ಸ್ಪಂದಿಸದೇ ಹಳೆಯ ಕಾಲದ ಹಳಹಳಿಕೆಗಳನ್ನೇ ನಾಟಕವಾಗಿ ತೋರಿಸಿದರೆ ಅದು ಔಟ್ಆಪ್ ಡೇಟೆಡ್ ಸಬ್ಜೆಕ್ಟ್ ಆಗುತ್ತದೆ. ಹಳೆಯ ಕಾಲದ ಸಾಹೇಬರ ಸರ್ಕೀಟ್ ಕಾಲಕ್ಕೆ ಶಾರ್ಟ ಸರ್ಕೀಟ್ ಆಗಿದೆ.


ನಾಟಕ ಎನ್ನುವುದು ಕಾಲಕ್ಕೆ ತಕ್ಕಂತೆ ಅಪ್ಡೇಟ್ ಆಗುತ್ತಾ ಹೋಗಬೇಕು ಹಾಗೂ ವಸ್ತು-ವಿಷಯ ಯಾವುದೇ ಆದರೂ ಪ್ರಸ್ತುತ ಸಮಾಜಕ್ಕೆ ಸ್ಪಂದಿಸುತ್ತಿರಬೇಕು. ಇದೇ ನಾಟಕದ ನಿಜವಾದ ಜೀವಂತಿಕೆ. ಶತಮಾನಗಳ ಹಿಂದಿನ ರಾಮಾಯಣ ಮಹಾಭಾರತಗಳನ್ನಾಧರಿಸಿದ ನಾಟಕಗಳನ್ನೇ ಕಾಂಟೆಪ್ರರಿ ಮಾಡಿ ಪ್ರದರ್ಶಿಸುತ್ತಿರುವ ಈಗಿನ ಆಧುನಿಕ ರಂಗಭೂಮಿಯಲ್ಲಿ ಹಳೆಯ ಕಾಲದ, ಶಿಕ್ಷಣ ಕ್ಷೇತ್ರದ ಅಪ್ರಸ್ತುತ ಸಮಸ್ಯೆಗಳ ಮೊತ್ತವನ್ನು ನಾಟಕವಾಗಿಸುವ ಅಗತ್ಯವಿತ್ತೇ? ಎನ್ನುವ ಪ್ರಾಯೋಗಿಕ ಪ್ರಶ್ನೆಯನ್ನು ಎತ್ತುವಂತೆ ನಾಟಕ ಪ್ರೇರೇಪಿಸುತ್ತದೆ. ಕಾಲಘಟ್ಟದ ಪಳುವಳಿಕೆಯಾಗಿ ಮಾತ್ರ ಈಗ ರಂಗರೂಪದಲ್ಲಿ ದಾಖಲಾದಂತಿದೆ. 
                  
ಕ್ರಿಯೇಟಿವ್ ಥಿಯೇಟರ್ ರಂಗತಂಡ ತನ್ನ ಹೆಸರಿಗೆ ತಕ್ಕಂತೆ ಹೊಸ ಸಾಧ್ಯತೆಗಳನ್ನು ಕ್ರಿಯೇಟ್ ಮಾಡುವ ಬದಲು ಅಪ್ರಸ್ತುತ ವಸ್ತುವಿಷಯವನ್ನು ನಾಟಕವಾಗಿಸಿದ್ದೇ ವಿಪರ್ಯಾಸವಾಗಿದೆ. ಸಬ್ಜೆಕ್ಟನ್ನು ಹೊರತು ಪಡಿಸಿ ಕೇವಲ ಮನರಂಜನೆಯನ್ನಷ್ಟೇ ಕೊಡುವ ನಿಟ್ಟಿನಲ್ಲಿ ನಾಟಕವನ್ನು ಹುಟ್ಟುಹಾಕಿದ್ದರೆ ಅದರಲ್ಲೂ ಸಹ ನಾಟಕ ಸಂಪೂರ್ಣ ಯಶಸ್ಸನ್ನು ಪಡೆದಿಲ್ಲ. ಯಾಕೆಂದರೆ ಆಗಾಗ ಒಂದಿಷ್ಟು ನಗೆಯನ್ನು ಹೊರಹೊಮ್ಮಿಸುವುದನ್ನು ಬಿಟ್ಟು ಇಡೀ ನಾಟಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಲು ಸಾಧ್ಯವಾಗಿಲ್ಲ. ಹೀಗಾಗಿಯೇ ಈಗ ಕೈಲಾಸಂ, ಪರ್ವತವಾಣಿಯಂತವರ ನಗೆ ನಾಟಕಗಳು ಹಿನ್ನೆಲೆಗೆ ಸರಿದಿವೆ. ಯಾಕೆಂದರೆ ನಾಟಕಗಳ ಸಮಸ್ಯೆ ಹಾಗೂ ಸಾಧ್ಯತೆಗಳನ್ನು ಮೀರಿ ಕಾಲ ಮುಂದೋಡಿದೆ ಹೊಸ ಸಮಸ್ಯೆ ಹಾಗೂ ಸಾಧ್ಯತೆಗಳನ್ನು ಹುಟ್ಟುಹಾಕಿದೆ. ಪ್ರಸ್ತುತ ಸಂದರ್ಭಕ್ಕೆ ಸ್ಪಂದಿಸದ ನಾಟಕಗಳು ಪ್ರೇಕ್ಷಕರನ್ನು ಕಾಡುವುದೂ ಇಲ್ಲಾ, ಆಗಿನ ಕಾಲಘಟ್ಟದಲ್ಲಿ ಮೇಸ್ಟ್ರುಗಳ ಪರಿಸ್ಥಿತಿ ಹೇಗಿತ್ತು, ಶಿಕ್ಷಣ ಕ್ಷೇತ್ರದ ಸಮಸ್ಯೆಗಳು ಹೇಗಿದ್ದವು ಎನ್ನುವುದರ ಮಾಹಿತಿಯನ್ನು ಕೊಡುವಲ್ಲಿ ನಾಟಕ ಯಶಸ್ವಿಯಾಗಿದೆ

  
ನಾಟಕದ ವಿಷಯ ಅಪ್ರಸ್ತುತವಾದರೂ ನಟರ ಅಭಿನಯ ಲವಲವಿಕೆಯಿಂದ ಕೂಡಿತ್ತು. ಇಡೀ ನಾಟಕದಲ್ಲಿ ಅನುಭವಿ ಕಲಾವಿದರು ತಮ್ಮ ಪಾತ್ರಗಳಿಗೆ ಜೀವದುಂಬಿ ಅಭಿನಯಿಸಿದರು. ರಂಗಣ್ಣನ ಪಾತ್ರಕ್ಕೆ ಅಶೋಕ ಜಂಬೆ ಅತ್ಯಂತ ಸೂಕ್ತ ವ್ಯಕ್ತಿಯಾಗಿದ್ದರು. ಸುಂದರ್ರವರು ತಮ್ಮ ಬಹುಮುಖಿ ಅಭಿನಯ ಪ್ರತಿಭೆಯನ್ನು ನಾಟಕದಲ್ಲಿ ಹಲವು ಪಾತ್ರಗಳನ್ನು ನಿಭಾಯಿಸುವ ಮೂಲಕ ಮತ್ತೊಮ್ಮೆ ಸಾಬೀತು ಪಡಿಸಿದರು. ಲಕ್ಷ್ಮೀ ಚಂದ್ರಶೇಖರರವರು ಸಾಹೇಬರ ಹೆಂಡತಿಯಾಗಿ, ಅಜ್ಜಿಯಾಗಿ, ವಿಧವೆ ಶಿಕ್ಷಕಿಯಾಗಿ, ಊರ ಗೌಡನಾಗಿ ವಿವಿಧ ಪಾತ್ರಗಳಿಗೆ ಪೂರಕವಾಗಿ ಅನನ್ಯ ನಟನೆ ತೋರಿಸಿದ್ದಾರೆ. ಮೇಕಪ್ ಕೌಶಲದ ಜೊತೆಗೆ ರಾಮಕೃಷ್ಣ ಕನ್ನರಪಾಡಿಯವರು ಸ್ವತಃ ಮೇಕಪ್ ಮಾಡಿಕೊಂಡು ಹಲವು ಪಾತ್ರಗಳಾಗಿ ನಟಿಸಿ ಅಭಿನಯದಲ್ಲೂ ಸೈ ಎನ್ನಿಸಿಕೊಂಡರು. ಗುಮಾಸ್ತನ ಪುಟ್ಟ ಪಾತ್ರದಲ್ಲಿ ಚಂದ್ರ ಕೀರ್ತಿ ಹೆಚ್ಚು ಗಮನ ಸೆಳೆದರು. ನಾರಾಯಣ ಭಟ್, ಪ್ರಸಾದ್ ಜೈನ್... ಉಳಿದ ಎಲ್ಲಾ ಯುವ ನಟರು ತಮ್ಮ ಪಾತ್ರಗಳನ್ನು ಸೊಗಸಾಗಿ ನಿರ್ವಹಿಸಿದ್ದಾರೆ. ಅಭಿನಯ ವಿಭಾಗದಲ್ಲಿ ನಾಟಕ ಗೆದ್ದಿದೆ


ನಾಟಕಕ್ಕೆ ಗೋಪಾಲ್ ವಾಜಪೇಯಿ ಹಾಗೂ ಡುಂಡಿರಾಜರವರು ಬರೆದ ಹಾಡುಗಳನ್ನು ಸಂದರ್ಭೊಚಿತವಾಗಿ  ಬಳಸಿಕೊಳ್ಳಲಾಗಿದೆ. ಗಜಾನನ ನಾಯಕರವರ ನಿರ್ದೇಶನದಲ್ಲಿ ಹಾಡು ಮತ್ತು ಸಂಗೀತಗಳನ್ನು ರಿಕಾರ್ಡ ಮಾಡಲಾಗಿದ್ದು ಸೊಗಸಾಗಿವೆ. ಆದರೆ ನಾಟಕದ ದೃಶ್ಯಗಳಿಗೆ ಸರಿಯಾಗಿ ಸಿಂಕ್ ಆಗಲಿಲ್ಲ. ಹಿನ್ನಲೆಯಲ್ಲಿ ಹಾಡು ಬರುತ್ತಿದ್ದರೆ ಅದಕ್ಕೆ ಪೂರಕವಾಗಿ ನಟರು ಸ್ಪಂದಿಸುವಲ್ಲಿ ಸೋತರು. ನಾಟಕದಿಂದ ಹಾಡು ಮತ್ತು ಹಿನ್ನೆಲೆ ಸಂಗೀತ ತನ್ನ ಪ್ರತ್ಯೇಕತೆಯನ್ನು ಮೊದಲಿಂದ ಕೊನೆಯವರೆಗೂ ಕಾಪಾಡಿಕೊಂಡೇ ಬಂದಿತು. ಮುದ್ದಣ್ಣ ರಟ್ಟೇಹಳ್ಳಿಯವರ ಬೆಳಕು ಸಂಯೋಜನೆಯನ್ನು ವಿನಯಚಂದ್ರ ಚೆನ್ನಾಗಿ ನಿರ್ವಹಿಸಿದ್ದಾರೆ. ಕಾಲದ ಸೆಟ್ ಪ್ರಾಪರ್ಟಿಗಳು, ವಸ್ತ್ರವಿನ್ಯಾಸಗಳು ಇಡೀ ನಾಟಕವನ್ನು ಅರವತ್ತರ ದಶಕದ ದರ್ಶನ ಮಾಡಿಸಿದವು. ಕೊಟ್ಟಕೊನೆಗೆ ರಂಗಣ್ಣ ವರ್ಗವಾಗಿ ಹೋಗುವ ದೃಶ್ಯಸೃಷ್ಟಿ  ಹೃದಯಸ್ಪರ್ಷಿಯಾಗಿದೆ. ಇರುವ ವಿಷಯವನ್ನೇ ಸಮರ್ಥವಾಗಿ ನಿರೂಪಿಸಿ ತೋರಿಸುವಲ್ಲಿ ಪ್ರಮೋದ ಶಿಗ್ಗಾಂವರವರ ಪರಿಶ್ರಮ ಎದ್ದು ಕಾಣುತ್ತದೆ.
         
ಪ್ರಮೋದ ಶಿಗ್ಗಾಂವ್
ತನಗೆ ಮುನಿವರೆಗೆ ತಾ ಮುನಿಯಲೇಕಯ್ಯ…..
ತನುವಿನ ಕೋಪ ತನ್ನ ಹಿರಿತನದ ಕೇಡು,
ಮನದ ಕೋಪ ತನ್ನ ಅರಿವಿನ ಕೇಡು.
ಮನೆಯೊಳಗನ ಕಿಚ್ಚು ತನ್ನ ಮನೆಯ ಸುಡಲಲ್ಲದೆ
ನೆರೆಮನೆಯ ಸುಡದು.. ಕೂಡಲ ಸಂಗಮದೇವ

ಇಡೀ ನಾಟಕಕ್ಕೆ ಭಾಷ್ಯ ಬರೆದಂತೆ ಬಸವಣ್ಣನವರ ವಚನ ನಾಟಕದ ಕೊನೆಗೆ ಮೂಡಿಬಂದಿದೆ. ರಂಗಣ್ಣನ ಪಾತ್ರ ವಚನಕ್ಕೆ ಬದ್ದವಾಗಿರುವಂತೆ ನಿರೂಪಿತವಾಗಿದೆ. ಅಧಿಕಾರ ಇದೆ ಎಂದು ಕೋಪ ತಾಪ ತೋರಿಸುವ ಅಧಿಕಾರಿಗಳಿಗೆ ರಂಗಣ್ಣನ ಪಾತ್ರ ಸೂಕ್ತ ಪಾಠ ಹೇಳಿಕೊಡುವಂತಿದೆ.  

                                               -ಶಶಿಕಾಂತ ಯಡಹಳ್ಳಿ
               




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ