ಸೋಮವಾರ, ಮಾರ್ಚ್ 17, 2014

ಅಪರೂಪದ ನಗೆನಾಟಕ “ಬಲು ಅಪರೂಪ ನಮ್ ಜೋಡಿ”





                                            
 ಬಲು ಅಪರೂಪ ನಮ್ ಜೋಡಿ ಎಂಬ ಶೀರ್ಷಿಕೆ ನೋಡಿ ಇದೊಂದು ಪ್ರೇಮ ಕಥಾನಕ ಎಂದುಕೊಂಡು ನಾಟಕ ನೋಡಲು ಹೋದರೆ ಅಲ್ಲಿ ಬೇರೊಂದು ಬಗೆಯ ಕಥೆ ಅನಾವರಣಗೊಳ್ಳುತ್ತದೆ.  ಇದೊಂದು ಲವ್ ಆಂಡ್ ಹೇಟ್ ಕಥೆ. ಅದೂ ಇಬ್ಬರು ವಯೋವೃದ್ದ ರಂಗ ಕಲಾವಿದರ ಅಂತಿಮ ದಿನಗಳ ವ್ಯಥೆ. ಆರಂಭದಿಂದ ಹಾಸ್ಯರಸಪಾಕವನ್ನು ಹದವಾಗಿ ಮಾಡಿ ರಂಗರಸಿಕರಿಗೆ ಉಣಬಡಿಸುತ್ತಲೇ ಕೊನೆಗೆ ವಿಷಾದವನ್ನುಂಟು ಮಾಡುತ್ತಾ ಬದುಕಿನ ವಾಸ್ತವವನ್ನು ಹೇಳುವ ಅನನ್ಯ ಪ್ರಯತ್ನ ನಾಟಕದಲ್ಲಿದೆ.

ರವೀಂದ್ರ ಕಲಾಕ್ಷೇತ್ರ-50 ಸುವರ್ಣ ಸಂಭ್ರಮದಲ್ಲಿ ನಾಟಕ ಬೆಂಗಳೂರು ಆಯೋಜಿಸಿದ ನಾಲ್ಕನೆಯ ಕಂತಿನ ನಾಟಕೋತ್ಸವದಲ್ಲಿ 2014, ಮಾರ್ಚ 17ರಂದು ಬಲು ಅಪರೂಪ ನಮ್ ಜೋಡಿ ನಾಟಕವು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡು ನೋಡುಗರನ್ನು ನಗೆಗಡಲಲ್ಲಿ ತೇಲಿಸುವಲ್ಲಿ ಯಶಸ್ವಿಯಾಯಿತು. ಚಿತ್ತಾರ ರಂಗತಂಡವು ಅಭಿನಯಿಸಿದ ನಾಟಕವನ್ನು ರಾಜೇಂದ್ರ ಕಾರಂತರು ರಂಗರೂಪಾಂತರಿಸಿ ನಿರ್ದೇಶಿಸಿ ಅಭಿನಯಿಸಿದ್ದಾರೆ

  
ರಾಮ್ನಾರಾಯಣ ಮತ್ತು ಶಾಮ್ಪ್ರಸಾದ್ ಇಬ್ಬರೂ 43 ವರ್ಷಗಳ ಕಾಲ ನಾಟಕಗಳಲ್ಲಿ ಒಟ್ಟಿಗೆ ಹಾಸ್ಯ ಪಾತ್ರ ಮಾಡುತ್ತಿದ್ದ ಹಿರಿಯ ಕಲಾವಿದರು. ಅಭಿನಯಿಸುವುದನ್ನೂ ನಿಲ್ಲಿಸಿದರು. ಅವರು ಪರಸ್ಪರ ಅಗಲಿ 11 ವರ್ಷಗಳೇ ಗತಿಸಿದ್ದವು. ಇಬ್ಬರೂ ಒಬ್ಬರಿಗೊಬ್ಬರು ಅಂತರಂಗದಲ್ಲಿ ಪ್ರೀತಿ ಇಟ್ಟುಕೊಂಡಿದ್ದರೂ ಬಹಿರಂಗದಲ್ಲಿ ಜಗಳವಾಡುತ್ತಲಿದ್ದವರು. ಒಂದು ಟಿವಿ ಚಾನೆಲ್ನವರು ಇವರಿಬ್ಬರನ್ನೂ ಒಟ್ಟು ಸೇರಿಸಿ ಆಗಿನ ಕಾಲದಲ್ಲಿ ಅವರಿಬ್ಬರ ಜನಪ್ರೀಯ ನಾಟಕವಾಗಿದ್ದ ಯಂಕ ಮಂಕ ವನ್ನು ಮರಳಿ ಚಿತ್ರೀಕರಿಸಿ ರಾಮ್ ಶಾಮ್ ಶೋ ಹೆಸರಲ್ಲಿ ಪ್ರಸಾರ ಮಾಡಲು ಬಯಸಿದರು. ರಾಮ್ ಸೋದರಳಿಯ ಹರಿ ಬೇರೆಯಾಗಿದ್ದ ಇಬ್ಬರನ್ನೂ ಟಿವಿ ಶೋಗಾಗಿ ಒಂದು ಕಡೆ ಸೇರಿಸಲು ಪ್ರಯತ್ನಿಸಿ ಯಶಸ್ವಿಯಾದ. ಶೂಟಿಂಗ್ ಸಮಯದಲ್ಲಿ ರಾಮ್ಗೆ ಹೃದಯಾಘಾತವಾಗಿ ಆಸ್ಟತ್ರೆ ಸೇರಿದ. ಅವನನ್ನು ನೋಡಲು ಆಸ್ಪತ್ರೆಗೆ ಬಂದ ಶಾಮ್ ತನ್ನ ಒಬ್ಬಂಟಿತನದ ಬಗ್ಗೆ ಹೇಳಿಕೊಂಡ. ಮಗಳು ಅಳಿಯರಿಂದ ಪರಿತ್ಯಕ್ತನಾದ ಬಗ್ಗೆ ನೋವು ತೋಡಿಕೊಂಡ. ರಾಮ್ ಕೂಡಾ ಒಬ್ಬಂಟಿಯಾಗಿದ್ದ. ಕೊನೆಗೆ ಇಬ್ಬರೂ ತಮ್ಮ ಭಿನ್ನಾಭಿಪ್ರಾಯಗಳನ್ನು ತೊರೆದು ಒಬ್ಬರ ನೋವಿಗೆ ಇನ್ನೊಬ್ಬರು ಸ್ಪಂದಿಸಿ ಸರಕಾರಿ ವೃದ್ದಾಶ್ರಮದಲ್ಲಿ ಒಟ್ಟಿಗೆ ಇರಲು ನಿರ್ಧರಿಸಿದರು. ಒಂದು ರೀತಿಯಲ್ಲಿ ನಾಟಕ ಸುಖಾಂತ್ಯವಾದರೂ ಕೊಟ್ಟ ಕೊನೆಗೆ ನೋಡುಗರಲ್ಲಿ ವಿಷಾದವನ್ನುಂಟು ಮಾಡುವಲ್ಲಿ ಯಶಸ್ವಿಯಾಯಿತು.

ರಂಗಭೂಮಿಯಲ್ಲಿ ತಮ್ಮ ನಟನಾ ಪ್ರತಿಭೆಯಿಂದ ಮೆರೆದಿದ್ದ ಕಲಾವಿದರ ಕೊನೆಗಾಲದ ಸಮಸ್ಯೆಯನ್ನು ನಾಟಕ ಹಾಸ್ಯದ ಮೂಲಕ ತೋರಿಸುತ್ತದೆ. ತನ್ನವರೆನ್ನುವವರಿಂದ ದೂರಾಗುವುದು, ಕಾಡುವ ಒಂಟಿತನ, ಆಗಾಗ ಕೈಕೊಡುವ ಆರೋಗ್ಯ.. ಮುಂತಾದ ವೃದ್ಯಾಪ್ಯದ ಸಮಸ್ಯೆಗಳಿಂದ ನಲುಗಿ ನರಳುವ ಕಲಾವಿದರ ಬದುಕು ಅಸಹನೀಯವಾಗುತ್ತದೆ. ಇಂತಹ ಇಬ್ಬರು ವಯೋವೃದ್ದ ಕಲಾವಿದರ ಕಥೆಯನ್ನು ವಿನೋದವಾಗಿ ಹೇಳುತ್ತಲೇ ನಾಟಕ ಅಂತವರ ಬದುಕಿನ ಸಂಜೆಯ ಸಂಕಟಗಳನ್ನು ತೆರೆದಿಡುತ್ತದೆ

  
ನಾಟಕದ ರಾಮ್ ಮತ್ತು ಶಾಮ್ ಜೋಡಿ ನಿಜಕ್ಕೂ ಅಪರೂಪದ ವಿಚಿತ್ರ ಮತ್ತು ವಿಕ್ಷಿಪ್ತ ಜೋಡಿಯೇ ಆಗಿದೆ. ಒಬ್ಬರನ್ನು ಬಿಟ್ಟು ಇನ್ನೊಬ್ಬರು ಇರಲು ಸಾಧ್ಯವಿಲ್ಲ ಎನ್ನುವಷ್ಟು ಗಾಢವಾದ ಆತ್ಮೀಯತೆಯನ್ನು ಹೊಂದಿದವರಾದರೂ ಯಾವುಯಾವುದೋ ಕ್ಷುಲ್ಲಕ ಕಾರಣಗಳಿಂದ ದ್ವೇಷವನ್ನು ರೂಢಿಸಿಕೊಂಡವರು. ಅತಿಯಾದ ಸ್ವಾಭಿಮಾನ ಹಾಗೂ ಹೆಚ್ಚುಗಾರಿಕೆ ಎನ್ನುವುದು ಇಬ್ಬರ ನಡುವಿನ ತಡೆಗೋಡೆಯಾಗಿದೆ. ಶ್ರೇಷ್ಟತೆಯ ವ್ಯಸನವನ್ನು ದೂರಮಾಡಿ ಇಬ್ಬರನ್ನೂ ಕೊನೆಗೆ ಒಂದುಗೂಡಿಸುವುದು ಅವರ ಒಂಟಿತನ ಮತ್ತು ಸಂಕಟ. ಮನುಷ್ಯನ ಅಹಂ ಮತ್ತು ಐಡೆಂಟಿಟಿ ಕ್ರೈಸಸ್ನ್ನು ಒಡೆದು ಹಾಕುವುದು ಅನಾರೋಗ್ಯ ಮತ್ತು ಅಭದ್ರತೆ ಎನ್ನುವುದನ್ನು ನಾಟಕ ಸಾಬೀತುಪಡಿಸುತ್ತದೆ.

 ನಿಜಕ್ಕೂ ಉತ್ತಮ ಸಂದೇಶವಿರುವ, ಅತ್ಯುತ್ತಮ ಶುದ್ಧ ಹಾಸ್ಯವಿರುವ ನಗೆನಾಟಕವಿದು. ಎಲ್ಲೂ ಕಳಪೆ ಮಾತುಗಳಿಲ್ಲ, ಪೋಲಿ ಜೋಕ್ಸ್ಗಳಿಲ್ಲ, ಡಬಲ್ ಮೀನಿಂಗ್ ಡೈಲಾಗಗಳಿಲ್ಲ ಆದರೂ ಪ್ರೇಕ್ಷಕರನ್ನು ನಕ್ಕು ನಗಿಸುವುದರಲ್ಲಿ ನಾಟಕ ಹಿಂದೆ ಬಿದ್ದಿಲ್ಲ. ನಾಟಕದಾದ್ಯಂತ ತಮ್ಮ ನಟನೆಯಿಂದ ವಿಜ್ರಂಬಿಸಿದ್ದು ರಾಮ್ನಾರಾಯಣ್ ಪಾತ್ರದ ರಾಜೇಂದ್ರ ಕಾರಂತರವರು. ತಮ್ಮ ವಿಶಿಷ್ಟ ದ್ವನಿ ಹಾಗೂ ವಿಕ್ಷಪ್ತ ಅಭಿನಯದಿಂದಾಗಿ ನಾಟಕದಾದ್ಯಂತ ಗಮನ ಸೆಳೆದರು. ಇವರಿಗೆ ಪೈಪೋಟಿಗೆ ಬಿದ್ದಂತೆ ಶಾಮ್ಪ್ರಸಾದ ಪಾತ್ರದಲ್ಲಿ ನಟಿಸಿದ ಶ್ರೀಕಂಠರವರ ಅಭಿನಯ ಸೊಗಸಾಗಿತ್ತು. ಇಬ್ಬರೂ ನಟರ ಮಾತಿನ ಟೈಮಿಂಗ್, ಹಾಸ್ಯವನ್ನು ಪಂಚ್ ಮಾಡುವ ರೀತಿ ಹಾಗೂ ಪಾದರಸದ ಅಭಿನಯ ಇಡೀ ನಾಟಕವನ್ನು ನೋಡಿಸಿಕೊಂಡು ಹೋಯಿತು. ನಾಟಕ ಎಲ್ಲೂ ಬೋರಾಗದೇ ಒಂದೂವರೆಗಂಟೆ ಹೇಗೆ ಕಳೆಯಿತು ಎನ್ನುವುದೇ ಪ್ರೇಕ್ಷಕರ ಗಮನಕ್ಕೆ ಬರಲಿಲ್ಲ. ಅಷ್ಟೊಂದು ಸೊಗಸಾಗಿ ನಾಟಕವನ್ನು ರಾಜೇಂದ್ರ ಕಾರಂತ ನಿರ್ದೇಶಿಸಿ ಅಭಿನಯಿಸಿದ್ದಾರೆ.

ಆದರೆ ಇಡೀ ನಾಟಕದಾದ್ಯಂತ ಬರೀ ಮಾತು ಮಾತು ಮಾತುಗಳೇ ತುಂಬಿದ್ದವು. ಬಹುತೇಕ ಸಮಯ ಪಾಜ್ಗಳಿಲ್ಲದೇ ನಟರು ಮಾತಾಡುತ್ತಲೇ ಇದ್ದರು. ಒಬ್ಬರ ಮಾತು ಮುಗಿಯುವುದನ್ನೇ ಕಾಯುತ್ತಿದ್ದ ಇನ್ನೊಬ್ಬರು ಮಾತು ಮುಂದುವರೆಸುತ್ತಿದ್ದರು. ಒಂದು ವಾಕ್ಯವನ್ನು ಕೇಳುಗರು ಅರ್ಥೈಸಿಕೊಳ್ಳುವ ಮೊದಲೇ ಇನ್ನೊಂದು ವಾಕ್ಯ ವೇಗವಾಗಿ ಕಿವಿಗಪ್ಪಳಿಸುತ್ತಿತ್ತು. ಇದರಿಂದಾಗಿ ಮಾತುಗಳನ್ನು ಗ್ರಹಿಸಲು ಪ್ರೇಕ್ಷಕರು ಪರದಾಡಬೇಕಾಯಿತು. ಕೇಳುಗರ ಮೆದುಳಲ್ಲಿ ಮಾತಿನ ಅರ್ಥ ರೆಜಿಸ್ಟರ್ ಆಗುವಲ್ಲಿ ಸ್ಪಲ್ಪ ಮಟ್ಟಿಗೆ ವ್ಯತ್ಯಯವಾಗುತ್ತಿತ್ತು. ಆಡುವ ಮಾತುಗಳಲ್ಲಿ ಸ್ವಲ್ಪ ಸಂಯಮವಿರಬೇಕಿತ್ತು. ಮಾತಿನ ವೇಗಕ್ಕೆ ಕಡಿವಾಣ ಹಾಕಿ ವಾಕ್ಯಗಳ ನಡುವೆ ಪಾಜ್ಗಳ ಬಳಕೆಯನ್ನು ಹೆಚ್ಚಿಸಬೇಕಿತ್ತು. ಕೆಲವೊಂದು ಅನಗತ್ಯ ಚಲನೆಗಳನ್ನು ನಿಯಂತ್ರಿಸಬೇಕಿತ್ತು. ಸ್ವತಃ ರಾಜೇಂದ್ರ ಕಾರಂತರು ಅಗತ್ಯ ಇರಲಿ ಬಿಡಲಿ ಇಡೀ ವೇದಿಕೆಯಾದ್ಯಂತ ಚಲಿಸುತ್ತಲೇ ಇರುತ್ತಾರೆ. ಖರಾರುವಕ್ಕಾದ ಸಂಯಮದ ಮಾತು ಮತ್ತು ಚಲನೆ ನಾಟಕಕ್ಕೆ ಇನ್ನೂ ಹೆಚ್ಚು ತಾಕತ್ತನ್ನು ತುಂಬಬಹುದಾಗಿದೆ.

 ನಾಟಕದಲ್ಲಿ ರಾಮ್ ಮತ್ತು ಶಾಮ್ ಇಬ್ಬರೂ ವಯೋವೃದ್ದರಾಗಿರುತ್ತಾರೆ. ಕೈ ಕಾಲು ತಲೆ ನಡುಗುತ್ತಿರುತ್ತದೆ. ಆದರೆ ಯಾವಾಗ ಟಿವಿ ಚಾನೆಲ್ನಲ್ಲಿ ಶೂಟಿಂಗ್ ಪೂರ್ವ ರಿಹರ್ಸಲ್ ಮಾಡುತ್ತಿರುತ್ತಾರೋ ಆಗ ಇಬ್ಬರೂ ತಮ್ಮ ಪಾತ್ರದ ವಯಸ್ಸನ್ನು ಮರೆತು ನಾರ್ಮಲ್ ಮನುಷ್ಯರಂತೆ ನಟಿಸಲು ಆರಂಭಿಸುವುದು ಆಭಾಸಕಾರಿಯಾಗಿದೆ. ನಟನೆಯ ಕಂಟಿನ್ಯೂಟಿ ಸಮಸ್ಯೆಯಾಗಿದೆ. ಆಗಲೂ ಕೂಡಾ ಪಾತ್ರೋಚಿತವಾಗಿ ವಯೋವೃದ್ಧ ಕಲಾವಿದರಂತೆಯೇ ಅಭಿನಯಿಸಿದ್ದರೆ ನೈಜತೆಯನ್ನು ಕಾಪಾಡಿಕೊಳ್ಳಬಹುದಾಗಿದೆ.

ನಾಟಕದಲ್ಲಿ ಅಗತ್ಯವಿಲ್ಲದಿದ್ದರೂ ಕೈಲಾಸಂರವರು ರಚಿಸಿದ ಹಾಡುಗಳನ್ನು ಬಳಸಲಾಗಿದೆ. ರಿಕಾರ್ಡೆಡ್ ಹಾಡುಗಳು ಕೇಳಲು ತುಂಬಾ ಚೆನ್ನಾಗಿವೆಯಾದರೂ ನಾಟಕಕ್ಕೆ ಏನನ್ನೂ ಕಾಂಟ್ರಿಬ್ಯೂಟ್ ಮಾಡುವುದಿಲ್ಲ. ಕೆಲವೊಮ್ಮೆ ಬಳಸಿದ ಹಿನ್ನಲೆ ಸಂಗೀತ ನಟರ ಮಾತುಗಳಿಗೆ ಅಡತಡೆಯನ್ನುಂಟುಮಾಡುವಂತಿವೆ. ದ್ವನಿ ನಿರ್ವಹಣೆ ಮಾಡುವವರು ಇದನ್ನು ಸರಿಪಡಿಸಬೇಕಾಗಿದೆ. ಸೆಟ್ ನಾಟಕಕ್ಕೆ ಪೂರಕವಾಗಿದೆ. ಮನಸ್ ರವರ ಬೆಳಕಿನ ಸಂಯೋಜನೆ ಇಡೀ ನಾಟಕವನ್ನು  ಸಮರ್ಥವಾಗಿ ಬೆಳಗಿದೆಯಾದರೂ ಇನ್ನೂ ಮೂಡ್ ಸೃಷ್ಟಿ ಮಾಡಲು ಬೆಳಕಿನಲ್ಲಿ ವ್ಯತ್ಯಾಸ ಮಾಡಬೇಕಾಗಿತ್ತು. ಅದರಲ್ಲೂ ಕೊನೆಯ ಭಾವನಾತ್ಮಕ ದೃಶ್ಯದಲ್ಲಿ ವಿಷಾದವನ್ನು ಹುಟ್ಟಿಸುವುದಕ್ಕೆ ಪೂರಕವಾಗಿ ಬೆಳಕು ಮೂಡಿಬರಬೇಕಿತ್ತು. ರಾಮಕೃಷ್ಣ ಕನ್ನರಪಾಡಿಯವರ ಪ್ರಸಾಧನ ನಾಟಕದ ಎಲ್ಲಾ ವ್ಯಕ್ತಿಗಳನ್ನು ಪಾತ್ರವಾಗಿಸಿತ್ತು ಆದರೆ ಶಾಮ್ ಪಾತ್ರದಾರಿಗೆ ಬಕ್ಕತಲೆ ಮಾಡುವಾಗ ಅದು ಕೃತಕ ಎನ್ನುವುದು ಪ್ರೇಕ್ಷಕರಿಗೆ ತಿಳಿಯುವಂತಿತ್ತು

ಸಿನೆಮಾದವರು ಕೊಡುವ ಚೆಕ್ಗಿಂತಲೂ ನಾಟಕ ಕೊಡುವ ನೆಮ್ಮದಿ ದೊಡ್ಡದು ಎಂದು ರಾಮ್ನಾರಾಯಣ್ ಪಾತ್ರ ನಾಟಕದ ನಟನೆ ಕೊಡುವ ಅನನ್ಯ ಅನುಭವದ ಕುರಿತು ಹೇಳುತ್ತದೆ. ಹಾಗೆಯೇ ಕಲಾವಿದನಾಗಿ ಹುಟ್ಟಲೇಬಾರದು. ಒಳಗೂ ಹಿಂಸೆ, ಹೊರಗೂ ಹಿಂಸೆ, ನಮ್ಮ ಸಂಕಟವನ್ನು ಯಾರಿಗೆ ಹೇಳಿಕೊಳ್ಳುವುದು, ಕೇಳುವವರಾದರೂ ಯಾರು? ಎಂದು ಶಾಮಪ್ರಸಾದ್ ಪಾತ್ರ ಕೊನೆಗೆ ನೊಂದು ನುಡಿಯುತ್ತದೆ. ಮಾತು ಬಹುಷಃ ಬಹುತೇಕ ರಂಗಕಲಾವಿದರಿಗೆ ಅನ್ವಯವಾಗುವಂತಿದೆ. ರಂಗದಂಗಳದಲ್ಲಿ ವಿಜ್ರಂಭಿಸುವ ಕಲಾವಿದರು ನಿಜ ಜೀವನದಲ್ಲಿ, ಬದುಕಿನ ಸಂಜೆಯಲ್ಲಿ ಅನುಭವಿಸುವ ಅಸಹನೀಯತೆಗೆ ಮಾತುಗಳು ಸಾಕ್ಷಿಯಾಗಿವೆ.

ಒಟ್ಟಿನ ಮೇಲೆ ಇಡೀ ನಾಟಕ ಚಾರ್ಲಿ ಚಾಪ್ಲಿನ್ ಸಿನೆಮಾಗಳಂತೆ ಪ್ರೇಕ್ಷಕರನ್ನು ನಕ್ಕು ನಗಿಸುತ್ತಲೇ ವಿನೋದದ ಮೂಲಕ ವಿಷಾದವನ್ನು ಮೂಡಿಸುವಲ್ಲಿ ಸಫಲವಾಗಿದೆ. ‘‘ಬಲು ಅಪರೂಪ ನಮ್ ಜೋಡಿ ನಾಟಕ ನೋಡಿದವರು ಬಲು ಅಪರೂಪ ಇಂತಹ ನಗೆನಾಟಕ ಹೋಗಿ ನೋಡಿ ಎಂದು ಬೇರೆಯವರಿಗೆ ಹೇಳುವ ಹಾಗೆ ನಾಟಕ ಮೂಡಿ ಬಂದಿದೆ. ಯಾವುದೇ ಇಸಂಗಳಿಲ್ಲದೇ, ಯಾವುದೇ ಬೌದ್ದಿಕ ಕಸರತ್ತಿಲ್ಲದೇ ಇರುವ ನಾಟಕವನ್ನು ಕುಟುಂಬ ಪರಿವಾರ ಸಮೇತ ಮಕ್ಕಳಿಂದ ಹಿಡಿದು ಮುದುಕರವರೆಗೂ ನೋಡಿ ಆನಂದಿಸಬಹುದಾಗಿದೆ. ಇಂತಹ ಅಪರೂಪದ ನಗೆನಾಟಕವನ್ನು ಕೊಟ್ಟ ರಾಜೇಂದ್ರ ಕಾರಂತರವರು ಅಭಿನಂದನಾರ್ಹರು.   

                                        -ಶಶಿಕಾಂತ ಯಡಹಳ್ಳಿ
                   
           

               


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ