ಗುರುವಾರ, ಮಾರ್ಚ್ 6, 2014

ಸಿ.ಆರ್.ಸಿಂಹರವರೊಂದಿಗೆ ಟಿಪಿಕಲ್... ಸಂದರ್ಶನ :





 ಸಿ.ಆರ್.ಸಿಂಹರವರು 2008 ಆಗಸ್ಟ್ 23 ರಂದು 'ಟಿಪಿಕಲ್ ಟಿ.ಪಿ.ಕೈಲಾಸಂ' ಏಕವ್ಯಕ್ತಿ ನಾಟಕವನ್ನು ಪ್ರಯೋಗಿಸಿದ್ದರು. ಅವರ ಅಭಿನಯ ಪ್ರತಿಭೆಗೆ ನಾನು ಮಾರುಹೋದೆ. ಅಂದೇ ಅವರ ಸಂದರ್ಶನ ಮಾಡಲೇ ಬೇಕೆಂದುಕೊಂಡೆ. ತುಂಬಾ ಸುಸ್ತಾಗಿದ್ದರು. ಆದರೂ ಬೇಸರಿಸಿಕೊಳ್ಳದೇ ಅರ್ಧ ಗಂಟೆಗಳ ಕಾಲ ಅವರ ಕಾರಿನಲ್ಲೇ ಕುಳಿತು ನಾನು ಕೇಳಿದ ಪ್ರಶ್ನೆಗಳಿಗೆ ನಗುನಗುತ್ತಲೇ ಉತ್ತರಗಳನ್ನು ಕೊಡುತ್ತಾ ಹೋದರು. ಟಿಪಿಕಲ್ ನಾಟಕದ ಕುರಿತು ತಮ್ಮ ಅನುಭವಗಳನ್ನು ಬಿಚ್ಚಿಟ್ಟಿರು. ಈಗ ಸಿಂಹರವರು ನಮ್ಮನ್ನಗಲಿದ್ದಾರೆ. ಅವರ ನೆನಪಿಗಾಗಿ ಅಂದು ಅವರೊಂದಿಗೆ ಮಾಡಿದ ಸಂದರ್ಶನವನ್ನು ಇಂದು ಮತ್ತೊಮ್ಮೆ ಇಲ್ಲಿ ಪ್ರಕಟಿಸಲಾಗಿದೆ.                  
                                                                 –ಶಶಿಕಾಂತ ಯಡಹಳ್ಳಿ







ಒನ್ ಮ್ಯಾನ್ ಶೋ ಯಾಕೆ?
ಯಾಕೆ ಒಂದು ಏಕವ್ಯಕ್ತಿ  ಪ್ರಯೋಗವನ್ನು  ಮಾಡ್ಬೇಕು ಅಂತ ನನಗೆ  ಅನ್ನಿಸಿತು ಅಂದರೆ; ಬಹಳ  ಹಿಂದಿನಿಂದ ಬೆಂಗಳೂರಿಗೆ ಇಂಗ್ಲೆಂಡ್, ಅಮೇರಿಕದಿಂದ ಕೆಲ ಕಲಾವಿದರು ಆಗಾಗ ಬಂದು ಇಲ್ಲಿ ಏಕವ್ಯಕ್ತಿ  ಪ್ರಯೋಗವನ್ನು  ಆಗಾಗ ಮಾಡೋರು. ಒಬ್ಬ  ಪ್ರಸಿದ್ಧ ಲೇಖಕನನ್ನು  ಇಟ್ಟುಕೊಂಡು  ಅವರ  ಸಾಹಿತ್ಯ ಮತ್ತು  ಅವರ  ವ್ಯಕ್ತಿತ್ವವನ್ನು   ಒನ್ ಮ್ಯಾನ್ ಶೋಗಳಲ್ಲಿ  ಕಟ್ಟಿಕೊಡ್ತಾ  ಇದ್ದರು. ನನಗೂ ಅನೇಕ  ವರ್ಷ  ಇವನ್ನು  ನೋಡಿ  ಏಕವ್ಯಕ್ತಿ  ಪ್ರಯೋಗವೊಂದನ್ನು  ಮಾಡ್ಬೇಕು  ಅಂತ  ಆಸೆ  ಬಂತು. ನಾನು ಅನೇಕ  ತಂಡಗಳಲ್ಲಿ  ನಾಟಕ ಮಾಡ್ತಿದ್ದರೂ  ಕೂಡಾ  ಒಳಗಡೆ    ಏಕವ್ಯಕ್ತಿ  ಪ್ರಯೋಗ  ಆಸೆ  ಉಳಿದೇ ಇತ್ತು. ಅದಕ್ಕೆ  ಕಾಲ  ಕೂಡಿ  ಬಂದಿದ್ದು  1983ರಲ್ಲಿ.

ಕೈಲಾಸಂರವರೇ ಯಾಕೆ?
ಇಂತಹಏಕವ್ಯಕ್ತಿ ಪ್ರಯೋಗಮಾಡಬೇಕೆಂದರೆ ಯಾವ ಸಾಹಿತಿ, ವ್ಯಕ್ತಿತ್ವವನ್ನು ಆರಿಸಿಕೊಳ್ಳಬೇಕು? ಅಂತವರ ಸಾಹಿತ್ಯ-ವ್ಯಕ್ತಿತ್ವ-ಬದುಕು ತುಂಬಾ ಆಕರ್ಷಕವಾಗಿರಬೇಕು, ಸಂಕೀರ್ಣವಾದ ವ್ಯಕ್ತಿತ್ವವಾದರೆ ಅಭಿವ್ಯಕ್ತಿಗೆ ಅನೇಕ ಅವಕಾಶಗಳಿರುತ್ತದೆ ಅಂದುಕೊಂಡು  ಅಲೋಚನೆ  ಮಾಡಿದಾಗ  ನನಗೆ  ಹೊಳೆದ ಮೊದಲ ಹೆಸರು  ಟಿ.ಪಿ.ಕೈಲಾಸಂ. ವಿಲಕ್ಷಣವಾದ  ಜೀನಿಯಸ್ ಪ್ರತಿಭೆ  ಅವರದು.  ಕನ್ನಡ  ರಂಗಭೂಮಿಗೆ  ಒಂದು  ಹೊಸ  ದಿಕ್ಕನ್ನು  ತೋರಿದಂತಹ  ಆದ್ಯ ಪ್ರವರ್ತಕರು ಕೈಲಾಸಂ. ಅವರ ಜೀವನ, ನಾಟಕದ ಪಾತ್ರಗಳು, ಹಾಡುಗಳು ಇವನ್ನೆಲ್ಲಾ  ಅವಲೋಕಿಸಿದಾಗ  ಟಿ.ಪಿ. ಕೈಲಾಸಂ  ಏಕವ್ಯಕ್ತಿ   ಪ್ರದರ್ಶನಕ್ಕೆ  ಹೇಳಿ  ಮಾಡಿಸಿದ  ವ್ಯಕ್ತಿ   ಹಾಗೂ ವ್ಯಕ್ತಿತ್ವ ಎಂದು  ನಿರ್ಧರಿಸಿದೆ. ಕೈಲಾಸಂ ಜೀವನದ  ಕೊನೆಯ ಎರಡು ಗಂಟೆಗಳಲ್ಲಿ  ನಡೆದಿರಬಹುದಾದ್ದನ್ನು  ತೊರಿಸಿದರೆ  ನಾಟಕಕ್ಕೊಂದು ಬಂಧ, ಚೌಕಟ್ಟು  ಸಿಗುತ್ತೆ  ಎಂದುಕೊಂಡೆ.

ಎರಡು ಗಂಟೆ ನಡೆದದ್ದು ನಿಜವಾ ಅಥವಾ ಊಹೆಯಾ?
ಕೈಲಾಸಂರವರು 1946 ನವೆಂಬರ್ 23 ರಂದು ಬೆಂಗಳೂರಿನ ಸೌತ್ ಎಂಡ್ ಸರ್ಕಲ್ ಹತ್ತಿರವಿರುವ ಬಿ.ಟಿ.ಶ್ರೀನಿವಾಸರಆವಂತಿಮನೆಯಲ್ಲಿ  ತೀರಿಕೊಂಡರು. ಬಹುಷಃ  ಅಂತಹ  ಕೈಲಾಸಂಗೆ  ತನ್ನ  ಬದುಕಿನ  ಅಂತ್ಯಕ್ಕೆ  ಕೊನೆ ಬಂತು. ಉಳಿದದ್ದು  ಇನ್ನೂ  ಕೇವಲ 2 ಗಂಟೆಗಳು ಮಾತ್ರ ಎಂದು ತಿಳಿದಿದ್ದರೆ, ತಮ್ಮ ಸಾವಿನ  ಕ್ಷಣ ಮೊದಲೇ ಗೊತ್ತಾಗಿದ್ದರೆ  2 ಗಂಟೆ  ಮನುಷ್ಯ ಹೇಗೆ  ಕಳೆದಿರಬಹುದು? ಯಾವ್ಯಾವ  ಪಾತ್ರಗಳು  ಅವರನ್ನು  ಕಾಡಿರಬಹುದು?  ಎಂಬ ಊಹೆಯನ್ನಿಟ್ಟುಕೊಂಡು  ನಾಟಕ  ಮುಂದುವರೆಸಲು ಆಲೋಚಿಸಿದೆ.

ಕಾನ್ಸೆಪ್ಟ್ ಗೊತ್ತಾದ ಮೇಲೆ ನಾಟಕ ನೀವೇ ಬರೆಯಬಹುದಿತ್ತಲ್ಲಾ?
ಹೌದು, ಇಂತಹ  ಆಲೋಚನೆಯನ್ನು  ಸ್ಕ್ರಿಪ್ಟ್  ಆಗಿ ಬರೆಯಬೇಕಾಗಿತ್ತು.  ನಾನಾಗಲೇ ನಿರ್ದೇಶಕನಾಗಿದ್ದೆ.  ಆದರೆ  ಏಕವ್ಯಕ್ತಿ ಪ್ರಯೋಗದಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳಬೇಕಾದ್ದರಿಂದ ಇನ್ನೊಬ್ಬರ ಕೈಯಲ್ಲಿ  ಬರೆಸಬೇಕೆಂದುಕೊಂಡೆ.  ಕೈಲಾಸಂರವರಂತೆಯೇ  ಕನ್ನಡ ರಂಗಭೂಮಿಯಲ್ಲಿ  ಇನ್ನೊಬ್ಬ  ವಿಕ್ಷಿಪ್ತ  ವ್ಯಕ್ತಿ ಇದ್ದ.  ಆತ  ಟಿ.ಎನ್.ನರಸಿಂಹನ್. ಅವರದು ಕೇವಲ  ವಿಲಕ್ಷಣ  ವ್ಯಕ್ತಿತ್ವ ಮಾತ್ರವಲ್ಲ  ಅತ್ಯಂತ ಪ್ರತಿಭಾನ್ವಿತ ಕೂಡಾ ಆಗಿದ್ದ. ಏಕವ್ಯಕ್ತಿ ಪ್ರಯೋಗದ ಚೌಕಟ್ಟನ್ನು ಹೇಳಿದಾಗಆಯ್ತು  ಬರಿತೀನಂತ ಒಪ್ಕೊಂಡ, ಒಂದು..ಎರಡು... ಮೂರು....ಹೀಗೆ  ತಿಂಗಳುಗಳಾದರೂ ನರಸಿಂಹನ್ ಕೈಗೆ  ಸಿಕ್ಕಲಿಲ್ಲ. ಸಿಕ್ಕಾಗೆಲ್ಲಾ 'ಆಯ್ತು ಮಾಡಿಕೊಡ್ತೀನಿ' ಅಂತ ಸಬೂಬು ಹೇಳಿ ತಪ್ಪಿಸಿಕೊಳ್ತಿದ್ದ.

ನಿಮಗೆ ನಿರಾಶೆಯಾಗಲಿಲ್ಲವೇ?
ಆಗದೇ ಏನು? ಆದರೆ ನಾನು ನರಸಿಂಹನ್ ಹಿಂದೆ ಬೇತಾಳದಂತೆ ಬಿದ್ದಿದ್ದೆ. ದಿನ ದಸರಾ. ಮಹಾಲಯ  ಅಮವಾಸ್ಯೆ.  ನರಸಿಂಹನ್  ಗೋಖಲೆ ಇನ್ಸ್ಟಿಟ್ಯೂಟನಲ್ಲಿ ಕಾಲೇಜ್ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ಮಾಡ್ತಿದ್ದಾನೆ ಅಂತ ಗೊತ್ತಾಯ್ತು.  ಹೋಗಿ ನೋಡಿದೆ. ಸಿಕ್ಕಾಕೊಂಡು ಬಿಟ್ಟ.  ಇವತ್ತು  ಮಹಾಲಯ  ಅಮವಾಸ್ಯೆ  ಕರಾಳ ದಿನ  ಬೇರೆ  ಪ್ರಶಸ್ತವಾದ ದಿನ ಆರಂಭಿಸೋಣಎಂದು  ತಪ್ಪಿಸಿಕೊಳ್ಳಲು  ನೋಡಿದ . ‘ಮಂಗಳವಾರ  ಅಮವಾಸ್ಯೆಗಳೇ  ನನಗೆ ತುಂಬಾ ಲಕ್ಕಿ  ದಿನಗಳು. ಏನದರಾಗ್ಲಿ  ಇವತ್ತೇ  ಶುರು ಮಾಡೋದುಅಂತ ಪಟ್ಟು ಹಿಡಿದೆ.  ಕೊನೆಗೂ ಒತ್ತಡಕ್ಕೆ  ಮಣಿದು ಸ್ಕ್ರಿಪ್ಟ್ ಆರಂಭವಾಯ್ತು.  ಅಲ್ಲೊಂದಿಲ್ಲೊಂದಿಷ್ಟು ಟಿಪ್ಪಣಿ ರೂಪದಲ್ಲಿರೋದಕ್ಕೆ  ಪೂರ್ತಿ  ಆಕಾರ  ಬಂದಿದ್ದು  ಕಲಾಕ್ಷೇತ್ರದ  ತಾಲಿಂ  ಕೊಠಡಿಯಲ್ಲಿ . ಒಟ್ಟು 9 ದಿನ ನರಸಿಂಹನ್ ನಿರ್ದೇಶನದಲ್ಲಿ ತಾಲಿಂ  ಮಾಡಲಾಯ್ತು.

ಸೆಟ್ ಕಾನ್ಸೆಪ್ಟ್ ನಿಮ್ಮದೇನಾ?
ಅಲ್ಲಾ. ರಂಗಭೂಮಿಯಲ್ಲಿ ಹೆಸರಾಂತರಾದ ಎಂ.ಎಸ್. ಸತ್ಯುರವರು ಕೈಲಾಸಂ ನಾಟಕಕ್ಕೆ ಸೊಗಸಾದ ರಂಗವಿನ್ಯಾಸ ಮಾಡಿದರು. ವಿನ್ಯಾಸದ ವಿಶೇಷತೆ ಏನೆಂದರೆ, ರಂಗವೇದಿಕೆ  ಹಿಂಭಾಗದಲ್ಲಿ  ಕೈಲಾಸಂರವರ ಭಿತ್ತಿಚಿತ್ರವಿತ್ತು. ದೊಡ್ಡದಾದ  ಕೈಲಾಸಂ ಮುಖ ರಂಗವೇದಿಕೆ ಆಕ್ರಮಿಸಿಕೊಂಡಿದ್ದು, ಅದರ  ಮುಂದೆ  ನಟನಾಗಿ  ನಾನು  ಕೇವಲ  ಅಭಿನಯಿಸುತ್ತಿದ್ದೆ.   ನಾಟಕದಾದ್ಯಂತ  ಕೈಲಾಸಂರವರ ಅಸ್ತಿತ್ವ ಗೋಚರವಾಗಿ ನಟನಾಗಿ ನಾನು ಕೇವಲ  ಕೈಲಾಸಂ  ಮತ್ತು  ಪ್ರೇಕ್ಷಕರ  ನಡುವಿನ  ಮಧ್ಯಮವಾಗಿದ್ದೇನಷ್ಟೇ.

ಮೊದಲ ಪ್ರದರ್ಶನ ಇದೇ 'ನಯನ'ದಲ್ಲಲ್ವಾ ಸಾರ್?
ಹೌದು ಮತ್ತು ಅಲ್ಲ.   ನಾಟಕದ  ಪ್ರಥಮ ಪ್ರಯೋಗ  1983, ನವೆಂಬರ್ನಲ್ಲಿ  ಈಗಿರುವ    'ನಯನ'   ಜಾಗದಲ್ಲೇ  ಮಾಡಲಾಗಿತ್ತು. ಆದರೆ ನಯನ ರಂಗಮಂದಿರವನ್ನು ಆಗಿನ್ನೂ ಕಟ್ಟಿರಲಿಲ್ಲ. ಆಗ ಎಂಟತ್ತು ತಿಂಗಳು  ರವೀಂದ್ರ  ಕಲಾಕ್ಷೇತ್ರ  ಮುಚ್ಚಲಾಗಿತ್ತು. ಆಗ  ಬಯಲಾಗಿದ್ದ    ಜಾಗದಲ್ಲಿ  ತಡಿಕೆ ಕಟ್ಟಿ, ಶೀಟ್  ಹೊದಿಸಿ  ಕೈಲಾಸಂ ಕಲಾಕ್ಷೇತ್ರಅಂತ  ಹೆಸರಿಟ್ಟು   ಅಲ್ಲಿ  ಟಿಪಿಕಲ್ ಟಿ.ಪಿ. ಕೈಲಾಸಂನಾಟಕ  ಪ್ರಥಮ ಪ್ರದರ್ಶನ ಕಂಡಿತು.

ಏಕವ್ಯಕ್ತಿ ಪ್ರಯೋಗವೇ ಯಾಕೆ?
ಏಕವ್ಯಕ್ತಿ  ಪ್ರಯೋಗದ ಬಹು ದೊಡ್ಡ  ಅನುಕೂಲ ಏನೆಂದರೆ, ದೊಡ್ಡ  ಪಾತ್ರವರ್ಗವಿದ್ದರೆ  ಅವರನ್ನೆಲ್ಲಾ  ಕಟ್ಕೊಂಡು ಊರೂರು ತಿರುಗೋದು ತುಂಬಾ ಶ್ರಮ ಹಾಗೂ ತೊಂದರೆದಾಯಕ. ಆದರೆ    ಏಕವ್ಯಕ್ತಿ ಪ್ರಯೋಗ  ಮಾಡುವುದು ತುಂಬಾ ಸುಲಭ. ಒಂದು ಸೂಟ್ಕೇಸ್  ಅಥವಾ  ಟ್ರಂಕ್ನಷ್ಟು   ಸಾಮಾನುಗಳು, ಸೆಟ್ ಕೂಡಾ ಸಲೀಸಾಗಿ  ಮಡಿಚಿ ತೆಗೆದುಕೊಂಡು ಹೋಗುವಂತದ್ದು , ಜೊತೆಗೆ ಒಬ್ಬರು ಅಥವಾ  ಇಬ್ಬರು  ತಾಂತ್ರಿಕ ವರ್ಗದವರು ಜೊತೆಗಿದ್ದರೆ  ಸಾಕು ಜಗತ್ತಿನ ಯಾವುದೇ  ಮೂಲೆಗೆ ಯಾವಾಗ ಬೇಕಾದರೂ ಹೋಗಿ ನಾಟಕವನ್ನು  ಸುಲಭವಾಗಿ ಮಾಡಿಕೊಂಡು ಬರಬಹುದು. ಇನ್ನೊಂದು ಅನುಕೂಲ ಏನೆಂದರೆ, ನಮಗೆ ರಂಗವೇದಿಕೆ ಚಿಕ್ಕದಾಗಿರಲಿ, ದೊಡ್ಡದಾಗಿರಲಿ, ಹೇಗೇ ಇರಲಿ  ನಾಟಕ ಮಾಡಬಹುದು . ಎಲ್ಲಾ  ಅನುಕೂಲತೆಗಳು ಇಷ್ಟೊಂದು  ಪ್ರಯೋಗವನ್ನು ಮಾಡಲು ಸಾಧ್ಯವಾಗಿಸಿತು. ಅಮೇರಿಕ, ಇಂಗ್ಲೆಂಡ್, ಕೆನಡಾ ಹೀಗೆ ವಿದೇಶಗಳಿಗೂ ಹೋಗಿ ಪ್ರದರ್ಶಿಸಲು ಅನುಕೂಲವಾಯ್ತು. ಕೇವಲ  2 ಟಿಕೆಟ್ ಕೊಟ್ಟು ಬಿಟ್ರೆ  ನಾನು ನನ್ನ  ಹೆಂಡತಿ  ಇಬ್ಬರೇ   ಹೋಗಿ ಸಲೀಸಾಗಿ ನಾಟಕ  ಮಾಡಿಕೊಂಡು  ಬರುತ್ತೇವೆ.  ಹತ್ತಾರು  ನಟರ / ತಂತ್ರಜ್ಞರಿರುವ ರಂಗ ತಂಡವನ್ನು  ಕರೆದೊಯ್ದು  ಈಗ ನಾಟಕ  ಮಾಡೋದು  ತುಂಬಾ ಖರ್ಚಿನ  ಬಾಪ್ತು.  ಇದರಿಂದ  ವಿದೇಶದವರಿಗೂ   ರೀತಿಯಒನ್ ಮ್ಯಾನ್ ಶೋಗಳನ್ನು ಕರೆಸುವುದು ಆರ್ಥಿಕವಾಗಿ  ಅನುಕೂಲಕರ. 1986ರಲ್ಲಿ  ಪ್ರಪಂಚ  ಪರ್ಯಟನೆ  ಮಾಡಿ  ಕೈಲಾಸಂ ಏಕವ್ಯಕ್ತಿ ನಾಟಕ ಪ್ರದರ್ಶನ ಮಾಡಿ ಕನ್ನಡದ ಕೈಲಾಸಂರವರನ್ನು ಪ್ರಪಂಚ ಬೇರೆ ಭಾಗದವರಿಗೆ ಪರಿಚಯಿಸಿದ್ದೇನೆ.

ಎಲ್ಲಾನೂ ಒಬ್ಬರೇ ಮಾಡೋದು ಬೋರ್ ಅಲ್ಲವೆ?
ಹೌದು, ಎಲ್ಲಾ ಅನುಕೂಲದ ಜೊತೆಗೆ ಅನಾನುಕೂಲ ಏನು ಅಂದ್ರೆ...  ಏಕವ್ಯಕ್ತಿ  ಪ್ರಯೋಗ ಮಾಡುವ ನಮ್ಮೆಲ್ಲರಿಗೂ ಆದ ಅನುಭವ... ಗ್ರೀನ್ರೂಂನಲ್ಲಿ ಕೂತ್ಕೊಂಡು, ಮೇಕಪ್ ಮಾಡ್ಕೊಂಡು ಅಭಿನಯಕ್ಕೆ  ಸಿದ್ಧವಾಗಿರಾಗ್ತೀವಿ, ಆಗ ಇಡೀ ಮೇಕಪ್ ರೂಂನಲ್ಲಿ ಏಕಾಂಗಿತನ  ಕಾಡತೊಡಗುತ್ತದೆ. ನಾವು ಅನೇಕ ಕಲಾವಿದರ ಜೊತೆ ಹಾಡ್ಕೊಂಡು, ಮಾತಾಡ್ಕೊಂಡು, ನಕ್ಕೊಂಡು ನಟನೆಗೆ ಸಿದ್ಧವಾಗ್ತಿದ್ದಂತವರಿಗೆ ಇಲ್ಲಿ ಒಂಟಿತನ  ಹಿಂಸಿಸುತ್ತದೆ. ಅನುಭವ  ಕಲಾವಿದನ ಮೈಮನಸ್ಸನ್ನು  ಹೆದರಿಸುವಂತಾದ್ದು. ಯಾಕೆಂದರೆ  ಅಷ್ಟೊಂದು  ಜನ  ಪ್ರೇಕ್ಷಕರನ್ನು ಒಬ್ಬನೇ  ಎದುರಿಸಬೇಕಲ್ಲಾ  ಎನ್ನುವ ಆತಂಕ.  ಬೇರೆ  ನಾಟಕದಲ್ಲಾದರೆ  ಒಂದು  ದೃಶ್ಯದಲ್ಲಿ  ಸರಿ ಮಾಡದಿದ್ದರೆ  ಇನ್ನೊಂದರಲ್ಲಿ ಸರಿತೂಗಿಸಬಹುದು. ಅಲ್ಲಿ ಒಬ್ಬನ ಪಾತ್ರ ಬಿದ್ದು ಹೋದರೆ ಇನ್ನೊಬ್ಬನ ಪಾತ್ರ ಗಮನಾರ್ಹ ವಾಗಿರಬಹುದು. ಆದರಿಲ್ಲಿ? ರೋಮನ್ ಕಾಲದಲ್ಲಿ  ದೊಡ್ಡ  ಮೈದಾನದಲ್ಲಿ ಸುತ್ತಲೂ  ಸಾವಿರಾರು ಜನ ಕೂತು ನಡು ಮಧ್ಯ ಒಬ್ಬನೇ ಒಬ್ಬ  ಗ್ಲೇಡಿಯೇಟರ್   ಕೈಗೆ  ಈಟಿ ಕೊಟ್ಟು  ಹುಲಿಯೊಂದಿಗೆ  ಬಿಟ್ಟು  ಎದುರಿಸು  ಇಲ್ಲವೆ  ಸಾಯಿಎಂದಾಗ  ಯಾವ  ಪರಿಸ್ಥಿತಿ ಇತ್ತೋ  ಹಾಗೆನೇ  ಏಕವ್ಯಕ್ತಿ  ಪಾತ್ರದಾರಿಗೂ ನಾಟಕ ಮಾಡುವಾಗ ಅನ್ನಿಸತೊಡಗುತ್ತದೆ. ಆಗನೀನು ಒಬ್ಬಂಟಿ, ಗೆದ್ದರೂ  ನೀನೇ, ಸೋತರೂ ನೀನೆ  ಅನ್ನುವ  ಭಾವನೆ  ಒಂದು  ರೀತಿ ಯಲ್ಲಿ  ರೋಮಂಚನ  ಇನ್ನೊಂದು  ರೀತಿಯಲ್ಲಿ ಹಿಡಿದು ಅಲ್ಲಾಡಿಸುವಂತಹ  ತಳಮಳ ಹುಟ್ಟಿಸುತ್ತದೆ.

ಕೈಲಾಸಂ ಬಗ್ಗೆ ಗೊತ್ತಿಲ್ಲದವರಿಗೆ ಈ ನಾಟಕ ಹೇಗೆ ಕಮ್ಯೂನಿಕೇಟ್ ಮಾಡುತ್ತದೆ?
ಎಸ್,   ಕೈಲಾಸಂ  ಪ್ರಸಂಗದಲ್ಲಿ    ಕಷ್ಟ ಇತ್ತು.  ರಾಮಾಯಣವೋ ಮಹಾಭಾರತವೋ  ಆಧರಿಸಿದ, ಜನರಿಗೆ  ಗೊತ್ತಿರುವಂತಹ ಕಥೆಯನ್ನು ಆಧರಿಸಿ ನಾಟಕ ಮಾಡಿದ್ದರೆ ನೋಡುಗರಿಗೆ ಪಾತ್ರಗಳು ಮೊದಲೇ ಪರಿಚಿತವಾಗಿರುತ್ತವೆ. ಆದರೆ    ಕೈಲಾಸಂ ಪ್ರಯೋಗವನ್ನು ಈಗಿನ  ಜನರ  ಮುಂದೆ  ಮಾಡುವಾಗ  ಹಲವರು   ಕೈಲಾಸಂರವರ  ಹೆಸರು  ಕೇಳಿರುತ್ತಾರೆಯೇ ಹೊರತು  ಅವರ ಕೃತಿಗಳ ಪರಿಚಯವಿರೋದಿಲ್ಲ. ಗೊತ್ತಿರೋರು ತಕ್ಷಣ ಪಾತ್ರದೊಂದಿಗೆ ಸ್ಪಂದಿಸುತ್ತಾರೆ.  ಗೊತ್ತಿಲ್ಲದವರಿಗೆ ದಿಕ್ಕು ತಪ್ಪುತ್ತದೆ. ಅದರಲ್ಲೂ    ನಾಟಕದಲ್ಲಿ  ಕನ್ನಡ  ಮತ್ತು ಇಂಗ್ಲೀಷ್ ಎರಡೂ  ಭಾಷೆಗಳು ಬೆರೆಸಲಾಗಿದೆ.  ಕೈಲಾಸಂರವರ  ಇಂಗ್ಲೀಷ್ ಬೆರೆಸಿದ ಜೋಕ್ಸ್ಗಳು, ಅದರಲ್ಲೂ  ಪೂರ್ತಿ ಇಂಗ್ಲೀಷಲ್ಲಿರೋ ಏಕಲವ್ಯ ಪ್ರಕರಣ ಇವೆಲ್ಲವುಗಳನ್ನು  ಪ್ರೇಕ್ಷಕರಿಗೆ  ಹೇಗೆ ಮನದಟ್ಟಾಗಿಸಬೇಕು ಎಂಬೆಲ್ಲಾ  ಅಳುಕುಗಳು  ನನ್ನನ್ನು  ಕಾಡಿದ್ದುಂಟು.

ವಿದೇಶದಲ್ಲಿ ನಿಮ್ಮ ನಾಟಕಾನುಭವ?
ಇಂಗ್ಲೆಂಡಲ್ಲಿ  ಲಾಂಚೆಸ್ಟರ್  ಚಿಕ್ಕ  ಥಿಯೇಟರ್ ನಲ್ಲಿ  ನಮ್ಮ  ಕೈಲಾಸಂ ನಾಟಕ  ಮಾಡಬೇಕಾಗಿತ್ತು.  ನಾಟಕದ  ದಿನ ಸ್ಟೇಜ್ ನೋಡಿಕೊಂಡು ಬರಲು ಹೊರಟೆ. ಅಲ್ಲಿದ್ದ  ಬಾರಲ್ಲಿ ಕೆಲವು ಜನ ಗುಂಡು ಹಾಕ್ತಾ ಕೂತಿದ್ದರು. ನಾನು ಸ್ಟೇಜ್ ಮ್ಯಾನೇಜರ್ನಿಗೆ ಕೆಲವು ಪ್ರಾಪರ್ಟಿಗಳು ಬೇಕೆಂದು ವಿನಂತಿಸಿಕೊಂಡೆ. ಅಲ್ಲಿ ಒಂದು ಕೈಇಲ್ಲದ ಖುರ್ಚಿ ಬೇಕೆಂದಾಗ ಆತ  ಅಚ್ಚರಿ ಪಟ್ಟ.  ಇನ್ನೊಂದು  ಕಾಲಿಲ್ಲದ ಟೇಬಲ್ ಒದಗಿಸಿಕೊಟ್ಟ.  ಮುರುಕಲು ಸಾಮಾನು ವೇದಿಕೆ ಮೇಲೆ ಹೊಂದಿಸುವಾಗ  ಅಲ್ಲಿ ಕುಡೀತಾ ಕೂತಿದ್ದ  ಜನ  ಪ್ರಶ್ನಿಸಿದರು. ರಂಗಭೂಮಿಯ ಅದ್ಬುತವೇನೆಂದರೆ, ನಾವು ಕಲಾವಿದರೆಂದು ಗೊತ್ತಾಗಿದ್ದೇ  ತಡ  ಎಲ್ಲಾ  ಜನ ತಕ್ಷಣ  ಎದ್ದು  ಬಂದು  ವಿವರಗಳನ್ನು  ಕೇಳಿ, ಬೇಕಾದ  ಸಹಕಾರ ಕೊಟ್ಟರು. ಜಗತ್ತಿನ  ಯಾವುದೇ ಪ್ರದೇಶಕ್ಕೆ  ಹೋದರೂ  ರಂಗಕಲಾವಿದರೆಲ್ಲಾ  ಒಂದೇ  ಎಂಬುದು ನನ್ನ  ಅನುಭವಕ್ಕೆ  ಬಂತು. ಒಂದು ಮುರುಕುಲು  ಖುರ್ಚಿಯಿಂದ ಶುರುವಾಗಿ ಇಡೀ ರಂಗವೇದಿಕೆಯನ್ನ    ಕಲಾವಿದರು ರೂಪಿಸಿಕೊಟ್ಟಿದ್ದನ್ನು  ನೋಡಿ  ನಾನು ದಂಗಾಗಿ  ಹೋದೆ. ಆದಿಕವಿ  ಪಂಪ  ಮನುಷ್ಯ ಜಾತಿ ಒಂದೇಎಂದು ಹೇಳಿದಂತೆ  ನಾವು ಕಲಾವಿದರೆಲ್ಲಾ ಒಂದೇಎಂಬ ಅಪೂರ್ವ ಸಂಗತಿ ನನಗರಿವಾಯ್ತು.  ಕಲಾವಿದನಾಗಿದ್ದಕ್ಕೆ  ನನಗೆ  ಹೆಮ್ಮೆಯಾಯ್ತು.

ಸಿಂಹರವರಿಂದಾಗಿ ಕೈಲಾಸಂ ವಿದೇಶದಲ್ಲಿ ಹೆಸರಾದರಲ್ಲವೇ?
ಇಲ್ಲಾ. ಕೈಲಾಸಂ ಹಾಗೂ ಅವರ ವ್ಯಕ್ತಿತ್ವ-ಶಕ್ತಿಗಳು 'ಟಿಪಿಕಲ್ ಟಿ.ಪಿ.ಕೈಲಾಸಂ' ಪ್ರಯೋಗದ ಮೂಲಕ ನನ್ನ ಅನುಭವಕ್ಕೆ ಬಂದವು. ಕೈಲಾಸಂರವರಿಂದಾಗಿ, ಕನ್ನಡ ರಂಗಭೂಮಿಯಿಂದಾಗಿ ನನಗೆ ದೊರೆತ ಮಾನ್ಯತೆ  ನನ್ನ  ಭಾಗ್ಯವೆಂದು ಭಾವಿಸಿದ್ದೇನೆ. ಕೈಲಾಸಂ ನಂತರವೂ ಅವರನ್ನು  ನಾಟಕದ ಮೂಲಕ  ಜನರಿಗೆ ತಲುಪಿಸುತ್ತಿರುವ  ಧನ್ಯತೆ  ನನ್ನದು. ಇದಕ್ಕಿಂತ ಭಾಗ್ಯ  ಒಬ್ಬ  ನಟನಿಗೆ  ಇನ್ನೇನುಂಟು. ಕೈಲಾಸಂರವರಿಗೆ  ನನ್ನ  ನೂರು  ನಮನಗಳು.

                                                                              

                                         ಸಂದರ್ಶನ – ಶಶಿಕಾಂತ ಯಡಹಳ್ಳಿ




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ