ಬುಧವಾರ, ಮಾರ್ಚ್ 19, 2014

ಸಮಾನತೆ ಸಾರುವ ನಾಟಕವಲ್ಲದ ನಾಟಕ “ಪಂಚಮ” :


                                                  
ಅದು ಎಪ್ಪತ್ತರ ದಶಕ. ಸಾಮಾಜಿಕ ಚಳುವಳಿಗಳು ಕರ್ನಾಟಕದಲ್ಲಿ ಎಚ್ಚರದ ಸ್ಥಿತಿಯಲ್ಲಿದ್ದ ದಿನಗಳು. ಚಳುವಳಿಗಳಿಗೆ ಪೂರಕವಾಗಿ ರಂಗಭೂಮಿಯೂ ತನ್ನ ಚಟುವಟಿಕೆಗಳನ್ನು ವಿಸ್ತರಿಸಿಕೊಂಡಿತ್ತು. ಎಡಪಂಥೀಯ ಸಾಂಸ್ಕೃತಿಕ ಸಂಘಟನೆಯಾದ ಸಮುದಾಯ ತನ್ನ ಜನಪರ ಸಾಂಸ್ಕೃತಿಕ ಜಾತಾ ಹಾಗೂ ಬೀದಿನಾಟಕಗಳ ಮೂಲಕ ಕರ್ನಾಟಕದಲ್ಲಿ ಸಂಚಲನ ಮೂಡಿಸತೊಡಗಿತ್ತು. ಪ್ರಸನ್ನ, ಸಿಜಿಕೆ, ಗುಂಡಣ್ಣ... ಹೀಗೆ ಹಲವಾರು ರಂಗಕರ್ಮಿಗಳು ಸಮುದಾಯ ಮೂಲಕ ಜನಜಾಗೃತಿ ಮೂಡಿಸಲು ಅಹೋರಾತ್ರಿ ತೊಡಗಿಸಿಕೊಂಡಿದ್ದರು. ದಲಿತ ಚಳುವಳಿ ತೀವ್ರಗೊಂಡಿತ್ತು. ಸಿದ್ದಲಿಂಗಯ್ಯನವರು ರಚಿಸಿದ ಹೋರಾಟದ ಹಾಡುಗಳು ಚಳುವಳಿಗಾರರ ಅಸ್ತ್ರಗಳಾದವು. ಅಂತಹ ಸಂದರ್ಭದಲ್ಲಿ ದಲಿತ ಕವಿ ಸಿದ್ದಲಿಂಗಯ್ಯನವರು ಬೆನ್ಕಾಲ್ಡ್ವೆಲ್ರವರ ಜಾಬ್ ನಾಟಕದ ಪ್ರೇರಣೆಯಿಂದ ಕನ್ನಡದಲ್ಲಿ ಒಂದು ನಾಟಕವನ್ನು ಬರೆದರು. ಅದು ಪಂಚಮ.

ಪುರೋಹಿತಶಾಹಿ ಅಧಿಕಾರಿ ವರ್ಗದ ಕುತಂತ್ರ ಹಾಗೂ ದಲಿತ ಸಮುದಾಯದ ಅತಂತ್ರ ಸ್ಥಿತಿಯನ್ನು ಪಂಚಮ ಕಿರುನಾಟಕದಲ್ಲಿ ವಿಡಂಬಣಾತ್ಮಕವಾಗಿ ದಾಖಲಿಸಿದ್ದರು. ಅದೇ ಸಮಯಕ್ಕೆ ತುಮಕೂರಿನಲ್ಲಿ ಸಮುದಾಯ ಸಂಘಟನೆಯ ಘಟಕವೊಂದರ ಉದ್ಘಾಟನೆಗೆ ಸಿದ್ಧತೆಗಳು ನಡೆಯುತ್ತಿದ್ದವು. ಉದ್ಘಾಟನೆಯ ದಿನಕ್ಕೆ ಒಂದು ನಾಟಕ ಬೇಕಾಗಿತ್ತು. ಆಗ ಆಯ್ಕೆಗೊಂಡ ನಾಟಕವೇ ಪಂಚಮ. ಸಿಜಿಕೆ ಮೊಟ್ಟ ಮೊದಲ ಬಾರಿಗೆ ನಾಟಕವನ್ನು ನಿರ್ದೇಶಿಸಿದರು. 1979ರಲ್ಲಿ ಮೊದಲ ಬಾರಿಗೆ ತುಮಕೂರಿನಲ್ಲಿ ಪ್ರದರ್ಶನಗೊಂಡ ಕಿರುನಾಟಕ ಯಶಸ್ವಿಯಾಯಿತು. ನಾಟಕ ಎಂದರೆ ರೀತಿಯೂ ಇರಬಹುದು ಎನ್ನುವ ಅರಿವು ಉಂಟಾಯಿತು. ಯಾಕೆಂದರೆ ಕಲೆಗಾಗಿ ಕಲೆ ಎಂಬ ಸಾಂಪ್ರದಾಯಿಕ ನಂಬಿಕೆಗೆ ಪೂರಕವಾಗಿ ರಂಗಭೂಮಿ ನಡೆದುಕೊಂಡು ಬಂದಿತ್ತು. ಆದರೆ ಇಪ್ಟಾ ಮತ್ತು ಸಮುದಾಯದಂತಹ ಸಾಂಸ್ಕೃತಿಕ ಸಂಘಟನೆಗಳು ಪಾರಂಪರಿಕ ನಂಬಿಕೆಯನ್ನು ಒಡೆದು ಹಾಕಿ ಜನರಿಗಾಗಿ ಕಲೆ ಎನ್ನುವ ಸಿದ್ದಾಂತವನ್ನು ಪ್ರತಿಪಾದಿಸಿ ಸಾಧಿಸಿ ತೋರಿಸಿದರು. ರಂಗಮಂದಿರಗಳನ್ನು ಬಿಟ್ಟು ಬೀದಿ ಬೀದಿಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೊಡುವ ಮೂಲಕ ಕಲೆಯನ್ನು ಜನರು ಇರುವಲ್ಲಿಗೆ ತೆಗೆದುಕೊಂಡು ಹೋದರು

  
ನಂತರ ಸಮುದಾಯ ಸಂಘಟನೆಯ ಬಹುತೇಕ ಶಾಖೆಗಳು ಪಂಚಮ ನಾಟಕವನ್ನು ಕರ್ನಾಟಕದಾದ್ಯಂತ ಪ್ರದರ್ಶಿಸಿದವು. ಸಿದ್ದಲಿಂಗಯ್ಯನವರ ಹೋರಾಟದ ಹಾಡುಗಳು ಹಾಗೂ ಅವರ ಪಂಚಮ ನಾಟಕ ದಲಿತರ ಸ್ವಾಭಿಮಾನದ ಪ್ರತೀಕವಾಗಿ ಹೋದವು. ಹಲವರನ್ನು ಪ್ರಗತಿಪರ ಚಿಂತನೆಗೆ ನಾಟಕ ಪ್ರೇರೇಪಿಸಿತು. ಸಿದ್ದಲಿಂಗಯ್ಯನವರು ಬರೆದ ಚೊಚ್ಚಲ ನಾಟಕ ಇದಾಗಿದ್ದರೆ, ಸಿಜಿಕೆ ನಿರ್ದೇಶನದ ಮೊಟ್ಟ ಮೊದಲ ನಾಟಕವೂ ಇದೇ ಆಗಿದೆ. ಮೊದಲ ಪ್ರದರ್ಶನದಲ್ಲಿ ಹಯವದನ್ರಾವ್ ಪಾತ್ರದಲ್ಲಿ ನಟ ಲೋಹಿತಾಶ್ವ ನಟಿಸಿದ್ದರೆ, ಇತ್ತೀಚೆಗೆ ತೀರಿಕೊಂಡ ಪರೇಶಕುಮಾರ್ ನಾಟಕಕ್ಕೆ ಬೆಳಕು ಸಂಯೋಜನೆ ಮಾಡಿದ್ದರು.

ಮೊದಲ ಪ್ರದರ್ಶನ ಮುಗಿದು ಮೂರುವರೆ ದಶಕಗಳೇ ಕಳೆದಿದೆ. ಚಳುವಳಿಗಳ ಯುಗ ಮುಗಿದು ಜಾಗತೀಕರಣದ ಕಾಲ ಶುರುವಾಗಿದೆ. ಸಾಮಾಜಿಕ ಚಳುವಳಿಗಳು ತಮ್ಮ ತೀವ್ರತೆಯನ್ನು ಕಳೆದುಕೊಂಡಿವೆ. ಸ್ವತಃ ಸಿದ್ದಲಿಂಗಯ್ಯನವರೇ ತಮ್ಮ ಹೋರಾಟದ ಹಾದಿಯನ್ನು ಬದಿಗಿಟ್ಟು ವ್ಯವಸ್ಥೆಯೊಂದಿಗೆ ರಾಜಿಯಾಗಿ ಸರಕಾರಿ ಪಲಾನುಭವಿಗಳಾಗಿದ್ದಾರೆ. ಸಿಜಿಕೆ ಕಾಲವಶರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಪಂಚಮ ನಾಟಕ ಮರುಪ್ರದರ್ಶನಗೊಳ್ಳುತ್ತಿದೆ.


ರವೀಂದ್ರ ಕಲಾಕ್ಷೇತ್ರ-50 ಸುವರ್ಣ ಸಂಭ್ರಮದಲ್ಲಿ ನಾಟಕ ಬೆಂಗಳೂರು ಆಯೋಜಿಸಿದ ನಾಲ್ಕನೆಯ ಕಂತಿನ ನಾಟಕೋತ್ಸವದಲ್ಲಿ 2014, ಮಾರ್ಚ 18ರಂದು ಪಂಚಮ ನಾಟಕವು ರವೀಂದ್ರ ಕಲಾಕ್ಷೇತ್ರದಲ್ಲಿ ರಂಗನಿರಂತರ ತಂಡದ ಕಲಾವಿದರಿಂದ ಪ್ರದರ್ಶನಗೊಂಡಿತು. ಸಿಜಿಕೆ ನಿರ್ದೇಶಿಸಿದ್ದ ನಾಟಕವನ್ನು ಸಿ.ಆರ್.ಮುರುಡಯ್ಯನವರು ಈಗ ಮರುನಿರ್ದೇಶಿಸಿದ್ದಾರೆ.

ಆಳುವ ಸರಕಾರ ಆಗ ಹರಿಜನೋದ್ದಾರ ಮಂಡಳಿಯನ್ನು ರೂಪಿಸಿತ್ತು. ಹರಿಜನರ ಏಳಿಗೆಗಾಗಿ ಸ್ಕೀಂಗಳನ್ನು ಹಾಕುವುದು ಹಾಗೂ ಕಲ್ಯಾಣ ಯೋಜನೆಗಳನ್ನು  ರೂಪಿಸುವುದು ಅದರ ಆಶಯವಾಗಿತ್ತು. ಆದರೆ ಮಂಡಳಿ ಸಹ ಪುರೋಹಿತಶಾಹಿ ವರ್ಗದ ಅಧಿಕಾರಿಗಳ ಕೈಯಲ್ಲೇ ಇತ್ತು. ಕುರಿಗಳನ್ನು ಉದ್ದಾರ ಮಾಡುವುದಕ್ಕೆ ತೋಳಗಳಿಗೆ ಅಧಿಕಾರಕೊಟ್ಟಂತಾಗಿತ್ತು. ಇಂತಹ ವಿರೋಧಾಬಾಸವನ್ನು ಲೇವಡಿ ಮಾಡಲೆಂದೇ ಪಂಚಮ ನಾಟಕ ಹುಟ್ಟಿಕೊಂಡಿದ್ದು. ಹರಿಜನ ನಿರುದ್ಯೊಗಿ ಪದವೀಧರರಿಗೆ ಉದ್ಯೋಗ ವ್ಯವಸ್ಥೆ ಮಾಡುವ ಜಾಹೀರಾತು ನೋಡಿ ಹರಿಜನೋದ್ದಾರ ಮಂಡಳಿ ಕಚೇರಿಗೆ ಬರುವ ಹರಿಜನ ವಿದ್ಯಾವಂತರನ್ನು ಸಂದರ್ಶಿಸುವ ಮೂಲಕವೇ ಪಂಚಮ ವರ್ಗದವರ ಕೀಳರಿಮೆ ಹಾಗೂ ಮೇಲ್ವರ್ಗದ ಅಧಿಕಾರಿಶಾಹಿಗಳ ಮೇಲುರಮೆಯ ಅಸಮಾನತೆಯನ್ನು ಅನಾವರಣಗೊಳಿಸುವ ನಾಟಕವು ಅಧಿಕಾರಿಯ ಹೆಣ್ಣುಬಾಕುತನ, ಪುರೋಹಿತಶಾಹಿಗಳ ಜನವಿರೋಧಿತನ, ಸಾಮಾಜಿಕ-ಆರ್ಥಿಕ ಅಸಮಾನತೆ ಮತ್ತು ದಮನಿತ ಜನಾಂಗದ ಅಸಹಾಯಕತೆಯನ್ನು ಬಹಿರಂಗವಾಗಿ ಚರ್ಚಿಸುತ್ತದೆ

  
ಶಾಲೆಯಲ್ಲಿ ಕೊಡುವ ಉಪ್ಪಿಟ್ಟಿಗೋಸ್ಕರ ಹಾಗೂ ಕಾಲೇಜಿನಲ್ಲಿ ಸಿಗುವ ಸ್ಕಾಲರ್ಶಿಪ್ಗೋಸ್ಕರ ವಿದ್ಯಾಬ್ಯಾಸ ಮಾಡುತ್ತೀರಿ ಎಂದು ಬ್ರಾಹ್ಮಣ ಅಧಿಕಾರಿ ಲೇವಡಿ ಮಾಡುತ್ತಾನೆ. ಚಾಂಡಾಲರು ಚಾಂಡಾಲರೇ, ಕರಿನಾಯಿಯನ್ನು ಬಿಳಿ ಮಾಡೋಕಾಗುತ್ತಾ? ಎಂದು ಆತ ತನ್ನ ದಲಿತ ವಿರೋಧಿತನವನ್ನು ಹೊರಹಾಕುತ್ತಾನೆ. ರೀತಿಯ ಅಧಿಕಾರ ವರ್ಗ ಈಗಲೂ ಆಯಕಟ್ಟಿನ ಜಾಗದಲ್ಲಿ ತಮ್ಮ ಜನವಿರೋಧಿತನವನ್ನು ಮುಂದುವರೆಸುತ್ತಿದೆ. ಇಂತಹ ಕುಲವೈರಿಯನ್ನೇ ನಮ್ಮ ಉದ್ದಾರಕ್ಕೆ ಬಂದ ದೇವರು ನೀವು ಎಂದು ದಲಿತ ಯುವಕ ಶೇಷಾದ್ರಿ ಹೊಗಳುತ್ತಾನೆ. ಅದು ಹೇಗೆ ಕೆಲವು ದಲಿತರೂ ಸಹ ತಮ್ಮ ವರ್ಗ ಹಿತಾಸಕ್ತಿಯನ್ನು ಮರೆತು ಮೇಲ್ವರ್ಗದವರಾಗಲು ಪ್ರಯತ್ನಿಸುತ್ತಾರೆ ಎನ್ನುವುದಕ್ಕೆ ಅದ್ಬುತ ಉದಾಹರಣೆ ಶೇಷಾದ್ರಿ ಪಾತ್ರ. ಹರಿಜನ ಯುವಕ ಉತ್ತಮರ ಹಾಗೆ ವೇಷ ಹಾಕಿಕೊಂಡು, ಕೊರಳಿಗೆ ಬ್ರಾಹ್ಮಣರ ಹಾಗೆ ಜನಿವಾರ ಹಾಕಿಕೊಂಡು ಮನೆಯಲ್ಲಿ ರಾಘವೇಂದ್ರ ಸ್ವಾಮಿಯ ಪೊಟೋ ಇಟ್ಟು ಪೂಜಿಸುವ ಲೇವಲ್ಲಿಗೆ ಮೇಲ್ವರ್ಗದ ಭೂತವನ್ನು ಆಹ್ವಾನಿಸಿಕೊಂಡಿರುತ್ತಾನೆ. ತನ್ನ ಜಾತಿ ಅಷ್ಟೇ ಅಲ್ಲ ತನ್ನ  ಹೆಸರಿನ ಮೇಲೂ ಕೀಳರಮೆಯನ್ನು ಬೆಳೆಸಿಕೊಂಡ ಈತ ಹುಚ್ಚೆಂಕ್ಟ ಎನ್ನುವ ತನ್ನ ಅಸಲಿ ಹೆಸರನ್ನು ಬ್ರಾಹ್ಮಣರ ರೀತಿಯಲ್ಲಿ ಶೇಷಾದ್ರಿ ಎಂದು ಬದಲಿಸಿಕೊಂಡಿರುತ್ತಾನೆ.  ತಮ್ಮತನವನ್ನು ಬಿಟ್ಟು ಮೇಲು ಜಾತಿಯವರನ್ನು ಅನುಕರಿಸುವ ಒಂದು ವಿದ್ಯಾವಂತ ವರ್ಗವೇ ದಲಿತ ಸಮುದಾಯದಲ್ಲಿದೆ. ಇಂತಹ ಸೂಡೋ ದಲಿತರನ್ನು ಶೇಷಾದ್ರಿ ಪಾತ್ರದ ಮೂಲಕ   ನಾಟಕದಲ್ಲಿ ಲೇವಡಿ ಮಾಡಲಾಗಿದೆ.

ದಲಿತ ಸಮುದಾಯದಲ್ಲೇ ಇರುವ ಒಂದು ಅವಕಾಶವಾದಿ ಪುಡಾರಿ ವರ್ಗವನ್ನು ಗಾಂಧಿದಾಸ ಪಾತ್ರವು ಪ್ರತಿನಿಧಿಸುತ್ತದೆ. ಚುನಾವಣೆ ಬಂದಾಗ ಸೀರೆ ಪಂಜೆ, ವಾಚು, ಉಂಗುರ, ಟಿವಿ ಹಾಗೂ ಸರಾಯಿ ಬಾಟಲಿಗಾಗಿ ತಮ್ಮ ಓಟುಗಳನ್ನು ಮಾರಿಕೊಂಡು ಕಡುಕಷ್ಟದಲ್ಲೇ ಬದುಕುವ ದಲಿತರನ್ನು ಹಾಗೂ  ಗಾಂಧಿದಾಸ ರಂತಹ ಅವಕಾಶವಾದಿ ರಾಜಕೀಯ ಮರಿಪುಡಾರಿಗಳ ರಾಜೀಕೋರತನವನ್ನು  ನಾಟಕದಲ್ಲಿ ವಿಶ್ಲೇಷಿಸಲಾಗಿದೆ.

ಗಾರೆ ವೆಂಕಟಪ್ಪನ ಮಗ ಅನಕ್ಷರಸ್ತನಾದವನಾದರೂ ಅದ್ಯಾಕೆ ಸರಕಾರಿ ಮಂಡಳಿಗೆ  ಸಂದರ್ಶನಕ್ಕೆ ಬಂದು ಕೆಲಸ ಕೇಳುತ್ತಾನೋ ಗೊತ್ತಿಲ್ಲ. ಆದರೆ ಹಾಗೆ ಬಂದವನನ್ನು ಇನ್ನೊಬ್ಬ ಉಳ್ಳವರ ಮನೆಯಲ್ಲಿ ತಂಗಳನ್ನಕ್ಕೆ ಜೀತಕ್ಕಿಡುವ ಹಯವದನರಾವ್ರಂತಹ ಪುರೋಹಿತಶಾಹಿ ಅದಿಕಾರಿಯ ಕುತಂತ್ರ ಮಾತ್ರ ಅಕ್ಷಮ್ಯ. ದಲಿತ ಯುವತಿ ಪುಟ್ಟಲಕ್ಷ್ಮಿಯನ್ನು ಕೇವಲ ಭೋಗದ ಸರಕಾಗಿಯೇ ನೋಡುವ ನಾಗರೀಕ ಅಧಿಕಾರಿಯ ವರ್ತನೆ ಮಾತ್ರ ಅನಾಗರೀಕವಾಗಿದೆ. ಇಂತಹ ಅಧಿಕಾರಿಗಳ ಸ್ವಾರ್ಥಪರತೆ ಹಾಗೂ ಭೋಗಲಾಲಸೆಯನ್ನು ಪಂಚಮ ನಾಟಕ ಲೇವಡಿ ಮಾಡುತ್ತದೆ. ಇಲ್ಲಿವರೆಗೂ ನಾಟಕ ಹಾಸ್ಯಮಯವಾಗಿದ್ದದ್ದು ಇದ್ದಕ್ಕಿದ್ದಂತೆ ಗಂಭೀರವಾಗುತ್ತದೆ.

 ಸಂದರ್ಶನದಲ್ಲಿ ಕೊಟ್ಟ ಕೊನೆಗೆ ಬರುವ ಕ್ರಾಂತಿಕಾರಿ ಯುವಕ ಮೇಲ್ವರ್ಗದ ಕೊಳಕು ಅಧಿಕಾರಿಗೆ ಬುದ್ದಿಕಲಿಸುತ್ತಾನೆ. ತಿನ್ನೋ ಅನ್ನ ಬೆಳೆದೋರು, ಹಾಕಿರೋ ಬಟ್ಟೆ ನೇಯ್ದೋರು, ಮನೆ ಕಟ್ಟಿದೋರು, ರೋಡು ಮಾಡಿದೋರು ನಾವು.... ಎಲ್ಲವನ್ನೂ ಉಪಯೋಗಿಸೋಕೆ ನೀವಾ? ಎಂದು ಅಧಿಕಾರಿಯನ್ನು ಪ್ರಶ್ನಿಸುತ್ತಾನೆ. ಸಾವಿರಾರು ವರ್ಷಗಳಿಂದ ಉಳ್ಳವರ ಎಂಜಲು ನೆಕ್ಕಿದ್ದು ಸಾಕು ನಮಗೆ ಸಮಗ್ರ ಬದಲಾವಣೆ ಬೇಕು ಎಂದು ಆಗ್ರಹಿಸುತ್ತಾನೆ. ನಾವು ಹರಿಜನ ಅಲ್ಲ, ನಮಗೆ ಹರಿಜನ ಎನ್ನುವ ಹೆಸರನ್ನು ಉತ್ತಮರು ಇಟ್ಟು ಅನುಕಂಪದ ಪಂಜರದಲ್ಲಿ ಕೂಡಿಹಾಕಿದ್ದಾರೆ. ನಮಗೆ ಅನುಕಂಪ ಬೇಕಾಗಿಲ್ಲ ಸಮಾನತೆ ಬೇಕು ಎಂದು ತನ್ನ ಹಕ್ಕನ್ನು ಪ್ರತಿಪಾದಿಸುತ್ತಾನೆ.  ಜಮೀನ್ದಾರರು, ಪೊಲೀಸರು, ಬಂಡವಾಳಶಾಹಿಗಳ ಶೋಷಣೆ ಇನ್ನು ಸಾಕು ನಾವು ಸೇಡು ತೀರಿಸಿಕೊಳ್ಳಬೇಕು ಎಂದು ಅಧಿಕಾರಿಯ ಮೇಲೆ ಹಲ್ಲೆ ಮಾಡುತ್ತಾನೆ. ಪ್ರತಿಯೊಬ್ಬನೂ ಶೋಷಣೆಯ ವಿರುದ್ಧ ಹೋರಾಡಬೇಕು ಶೋಷಕರನ್ನು ನಿವಾರಿಸಬೇಕು ಎಂದು ಅಧಿಕಾರಿಯನ್ನು ಕೊಂದೇ ಬಿಡುತ್ತಾನೆ.

ನಿಜ ಹೇಳಬೇಕೆಂದರೆ ಅಧಿಕಾರಿ ಕೊಲ್ಲುವಂತಹ ಅಪರಾಧವನ್ನೇನು ಮಾಡಿರಲಿಲ್ಲ. ತನ್ನ ವರ್ಗ ಹಿತಾಸಕ್ತಿಯಿಂದಾಗಿ ಕೆಲವು ಮಾತುಗಳನ್ನು ಹೇಳಿದ್ದನ್ನು ಬಿಟ್ಟರೆ ಈಗಿನ ಅಧಿಕಾರಿಗಳಂತೆ ಕೋಟ್ಯಾಂತರ ಹಣ ನುಂಗಿದ್ದಕ್ಕೆ ನಾಟಕದಲ್ಲಿ ಪುರಾವೆಗಳಿಲ್ಲ. ಜಮೀನ್ದಾರರಂತೆ ದಲಿತರ ಬದುಕಿಗೆ ಬೆಂಕಿ ಹಚ್ಚಿದ ಉದಾಹರಣೆಗಳಿಲ್ಲ. ಜೊತೆಗೆ ಆತ ಬಂಡವಾಳಶಾಹಿ ವ್ಯವಸ್ಥೆಯ ನೀತಿ ನಿರೂಪಕನೂ ಅಲ್ಲ. ಕೇವಲ ಅಸಮಾನ ವ್ಯವಸ್ಥೆಯ ಆದೇಶಗಳನ್ನು ಪರಿಪಾಲಿಸುವ ಒಂದು ಪರಿಕರ (ಟೂಲ್) ವಾಗಿ ಹಯವದನ್ ಪಾತ್ರ ನಾಟಕದಲ್ಲಿ  ಮೂಡಿಬಂದಿದೆ. ಆದರೆ ಅದ್ಯಾಕೋ ನಾಟಕಕಾರ ಜನವಿರೋಧಿ ವ್ಯವಸ್ಥೆಯ ಮೇಲಿನ ಕೋಪವನ್ನು ಪರಿಕರದ ಮೇಲೆ  ಹಾಕಿ ತಮ್ಮೆಲ್ಲಾ ಆವೇಶವನ್ನು ತೀರಿಸಿಕೊಂಡಂತಿದೆ. ಇದು ನಿಜವಾದ ತಾತ್ವಿಕ ನಿಲುವಲ್ಲ. ಕಂಡವರನ್ನೆಲ್ಲಾ ಸಾಯಿಸುವುದು ಯಾವುದೆ ಸಿದ್ದಾಂತವೂ ಅಲ್ಲ. ಹಾಗೆ ಸಾಯಿಸಲೇ ಬೇಕೆಂದಿದ್ದರೆ ಅದಕ್ಕೆ ಮೊದಲು ಅಧಿಕಾರಿ ಅದು ಹೇಗೆ ಸಮಾಜದ್ರೋಹಿ ಎನ್ನುವುದನ್ನು ನಾಟಕದಲ್ಲಿ  ಸಿದ್ದಪಡಿಸಬೇಕಾಗಿತ್ತು.    ನಾಟಕದ ಮಾನದಂಡವನ್ನೇನಾದರೂ ಬಳಸಿ ಎಲ್ಲಾ ಅಧಿಕಾರಿ ವರ್ಗಗಳನ್ನು ಸಾಯಿಸುತ್ತಾ ಬಂದರೆ ಬಹುಷಃ ವ್ಯವಸ್ಥೆ ನಡೆಸಲು ಒಬ್ಬನೇ ಒಬ್ಬ ಸರಕಾರಿ ನೌಕರನೂ ಬದುಕುಳಿಯುವುದಿಲ್ಲ. ನಾಟಕಕಾರನ ಆಗಿನ ಆತುರದ ನಿರ್ಧಾರ ಅತಾರ್ಕಿಕವೆನಿಸುವಂತಿದೆ. ಜೊತೆಗೆ.....


ನಾಟಕದ ಕ್ರಾಂತಿಕಾರಿ ಯುವಕ ನಕ್ಸಲ್ ತತ್ವಕ್ಕೆ ಪೂರಕವಾಗಿಯೇ ನಡೆದುಕೊಳ್ಳುತ್ತಾನೆ. ಸಮನತೆಗಾಗಿ ಶೋಷಕರನ್ನು ನಾಶಮಾಡಬೇಕು ಎನ್ನುವ ನಕ್ಸಲ್ ಸಿದ್ದಾಂತವನ್ನೇ ಅನುಷ್ಟಾನಗೊಳಿಸುತ್ತಾನೆ. ಶೋಷಕನೊಬ್ಬನನ್ನು ಕೊಲ್ಲುತ್ತಾನೆ. ಕ್ರಾಂತಿಯ ಸಂಕೇತವಾದ ಕೆಂಪು ವಸ್ತ್ರಗಳನ್ನೇ ಬಳಸುತ್ತಾನೆ. ಆಗಿನ ಕಾಲದಲ್ಲಿ ನಾಟಕ ಬರೆದ ಸಿದ್ದಲಿಂಗಯ್ಯ ಹೀಗೆ ಕ್ರಾಂತಿಕಾರಿಯಾಗಿ ಆಲೊಚಿಸುತ್ತಿದ್ದರು. ಇಕ್ರಲಾ ಒದಿರಲಾ, ಇವರ ಮೂಳೆ ಎಬ್ರಲಾ ಎಂದು ತಮ್ಮ ಕ್ರಾಂತಿಕಾರಿ ಹಾಡಿನ ಮೂಲಕ ದಲಿತ ಜನಾಂಗವನ್ನೇ ರೋಚ್ಚಿಗೆಬ್ಬಿಸಿದ್ದರು. ಪಂಚಮ ನಾಟಕದಲ್ಲಿ ನೇರವಾಗಿ ನಕ್ಸಲ್ ಸಿದ್ದಾಂತವನ್ನೇ ಹೇಳಿದರು. ಆದರೆ ವಿಪರ್ಯಾಸ ನೋಡಿ ನಾಟಕ ಬರೆದವರೇ ತದನಂತರ ನಕ್ಸಲ್ ಸಿದ್ದಾಂತವನ್ನು ಹಿಂಸಾವಾದವೆಂದು ವಿರೋಧಿಸಿದರು. ದಲಿತ ಜನಾಂಗ ಮತ್ತು ಹೋರಾಟದ ಹಾದಿಯನ್ನೇ ಮರೆತು ನಾಟಕದ ಶೇಷಾದ್ರಿ ಪಾತ್ರದಾರಿಯ ಹಾಗೆ ಮೇಲ್ವರ್ಗದವರಂತಾಗಿ, ಗಾಂಧಿದಾಸ ಪಾತ್ರದ ಹಾಗೆ ವ್ಯವಸ್ಥೆಯ ಭಾಗವಾಗಿ ನಿಜವಾದ ಹೋರಾಟಕ್ಕೆ ತಿಲಾಂಜಲಿಯನ್ನಿತ್ತರು.

ಮೂರುವರೆ ದಶಕಗಳ ಹಿಂದೆ ಪಂಚಮ ನಾಟಕದ ಕ್ರಾಂತಿಕಾರಿ ಯುವಕನ ಪ್ರತಿರೂಪವಾಗಿದ್ದ ಸಿದ್ದಲಿಂಗಯ್ಯ ಬರುಬರುತ್ತಾ ಇದೇ ನಾಟಕದ ಶೇಷಾದ್ರಿ ಹಾಗೂ ಗಾಂಧಿದಾಸ ಪಾತ್ರಗಳ ರಾಜಿಕೋರತನವನ್ನು ತಮ್ಮ ನಿಜಜೀವನದಲ್ಲಿ ಅಳವಡಿಸಿಕೊಂಡಿದ್ದು ನಿಜಕ್ಕೂ ಆಘಾತಕರ. ಮೊನ್ನೆ ನಾಟಕದ ಪ್ರದರ್ಶನಕ್ಕೆ ಸಾಕ್ಷಿಯಾಗಿದ್ದ ಸಿದ್ದಲಿಂಗಯ್ಯನವರಿಗೆ ತಮ್ಮದೇ ನಾಟಕ ನೋಡಿ ಸಾಕ್ಷೀಪ್ರಜ್ಞೆ ಕಾಡಿತಾ? ಗೊತ್ತಿಲ್ಲ. ಜೊತೆಗೆ ಯಾವ ನಕ್ಸಲ್ ಮೂವಮೆಂಟ್ನ್ನು ಸಮುದಾಯ ಸಂಘಟನೆ ಹಾಗೂ ಸಂಘಟನೆಯ ಮಾತೃಸಂಸ್ಥೆ ಸಿಪಿಎಂ ಶತಾಯ ಗತಾಯ ಮೊದಲಿನಿಂದ ವಿರೋಧಿಸುತ್ತಾ ಬಂದಿದೆಯೋ ಅದೇ ಸಂಘಟನೆ ಇಂತಹ ಹಿಂಸಾವಾದವನ್ನು ಹೇಳುವಂತಹ, ನಕ್ಸಲ್ ಸಿದ್ದಾಂತವನ್ನು ಸಾರುವಂತಹ ನಾಟಕವನ್ನು ಯಾಕೆ ರಾಜ್ಯಾದ್ಯಂತ ಪ್ರದರ್ಶಿಸಿತ್ತು?, ತೋರಿಸುವುದೊಂದು, ಹೇಳುವುದೊಂದು, ಮಾತಾಡುವುದೊಂದು, ಮಾಡುವುದಿನ್ನೊಂದು... ಎನ್ನುವುದಕ್ಕೆ ಸಾಕ್ಷಿಯಾಗಿ ಪಂಚಮ ನಾಟಕ ಬರೆದವರು ಮತ್ತು ಆಡಿದವರ ದ್ವಂದ್ವ ನಿಲುವುಗಳು ಪ್ರಶ್ನಾರ್ಹವಾಗಿವೆ.
     
ಹಾಗೆಯೇ... ಪಂಚಮ ವನ್ನು ಒಂದು ಪೂರ್ಣಾವಧಿ ನಾಟಕ ಎನ್ನುವುದು ಅದ್ಯಾಕೋ ಸಮಂಜಸ ಎನ್ನಿಸುವುದಿಲ್ಲ. ಯಾಕೆಂದರೆ ಇದಕ್ಕೆ ಒಂದು ಕಥಾ ಹಂದರವಿಲ್ಲ, ನಿರೂಪನಾ ತಂತ್ರಗಾರಿಕೆ ಇಲ್ಲ. ನಾಟಕೀಯ ತಿರುವುಗಳೂ ಇಲ್ಲ. ನಾಟಕ ಕೊಡುವ ಅನುಭವವನ್ನೂ ಇದು ಕೊಡುವುದಿಲ್ಲ. ಒಂದು ನಾಟಕಕ್ಕೆ ಬೇಕಾದ ಕಾಲಾವಧಿಯೂ ಇಲ್ಲಿಲ್ಲ. ಒಬ್ಬ ಅಧಿಕಾರಿ ಕೆಲವರನ್ನು ಸಂದರ್ಶಿಸುವುದನ್ನೇ ಒಂದು ನಾಟಕ ಎನ್ನಲಾಗುವುದಿಲ್ಲ. ಒಂದು ಬೀದಿನಾಟಕಕ್ಕೆ ಬೇಕಾದ ಹಲವಾರು ಅಂಶಗಳು ಪಂಚಮದಲ್ಲಿದೆ. ಆದರೆ ನಾಟಕ ಎನ್ನುವಂತಹ ಯಾವುದೇ ಪ್ರಮುಖ ಅಂಶಗಳೂ ಇಲ್ಲವಾದ್ದರಿಂದ ಬೀದಿನಾಟಕವೊಂದನ್ನು ಪ್ರಿಸಿನೀಯಂ ಪಾರಂನಲ್ಲಿ ತೋರಿಸಿದಂತಿದೆ.


ಯಾಕೆಂದರೆ ಬೀದಿನಾಟಕಗಳಲ್ಲಿ ನೇರ ಸಂದೇಶ ಹಾಗೂ ಘೋಷಣೆಗಳಿಗೆ ಮಹತ್ವ ಹೆಚ್ಚಿರುತ್ತದೆ ಹಾಗೂ ಕಾಲಾವಧಿ ಕಡಿಮೆ ಇರುತ್ತದೆ. ಸಮಕಾಲೀನ ಸಮಸ್ಯೆಯನ್ನು ನೇರಾನೇರಾ ಜನರಿಗೆ ತಲುಪಿಸಿ ಅವರನ್ನು ಜಾಗೃತಿಗೊಳಿಸುವ ತುರ್ತು ಅಗತ್ಯದ ಭಾಗವಾಗಿ ಬೀದಿನಾಟಕವೊಂದು ಮೈದಳೆಯುತ್ತದೆ. ಪಂಚಮ ನಾಟಕದ ಉದ್ದೇಶವೂ ಅದೇ ಆಗಿದೆ. ಸ್ಟೇಜಿನ ಮೇಲೆ ಮಾಡಿದ ತಕ್ಷಣ ಇದನ್ನು  ರಂಗನಾಟಕ ಎಂದು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಆದ್ದರಿಂದಲೇ ಸಮುದಾಯ ಸಂಘಟನೆಯು ನಾಟಕವನ್ನು ವೇದಿಕೆಯ ಮೇಲೆ ಪ್ರದರ್ಶಿಸಿದ್ದಕ್ಕಿಂತ ಹೆಚ್ಚಾಗಿ ಬೀದಿನಾಟಕ ರೂಪದಲ್ಲಿ ಪ್ರಸ್ತುತಪಡಿಸಿತ್ತು. ಬೀದಿನಾಟಕದ ಪಾರ್ಮ್ಯಾಟಿಗೆ ಪಂಚಮ ನಾಟಕ ಸೂಕ್ತವೆನಿಸುತ್ತದೆ.

ಇನ್ನು ಪ್ರಸ್ತುತ ಪ್ರದರ್ಶನದ ಕುರಿತು ವಿಶ್ಲೇಷಿಸುವುದಾದರೆ.... ನಾಟಕದಲ್ಲಿ ಹಯವದನರಾವ್ ಸ್ವಾತಂತ್ರ ಬಂದು ಅರವತ್ತಾರು ವರ್ಷವಾದರೂ ನಿಮ್ಮೂರಿಗೆ ಕರೆಂಟ್ ಬಂದಿಲ್ವಾ ಎಂದು ಕೇಳುತ್ತಾ ನಾಟಕದ ಸಂದರ್ಭವನ್ನು ಪ್ರಸ್ತುತ ಕಾಲಕ್ಕೆ ತರುತ್ತಾನೆ. ಆದರೆ ಇದು ಸರಿಯಾದದ್ದಲ್ಲ. ಈಗ ಎಲ್ಲಾ ಊರಲ್ಲೂ ಕರೆಂಟ್ ಇದೆ. ಮತ್ತು ನಾಟಕದ ಸಂದರ್ಭ ಮೂರುವರೆ ದಶಕದ ಹಿಂದಿನದ್ದಾಗಿದೆ. ಆದ್ದರಿಂದ ಕಾಲಘಟ್ಟದಲ್ಲಿಟ್ಟೇ ನಾಟಕವನ್ನು ನೋಡುವುದೊಳಿತು. ನಾಟಕದ ಕೊನೆಯಲ್ಲಿ ಜನವಿರೋಧಿ ಅಧಿಕಾರಿಯನ್ನು ಕೊಲ್ಲುವ ಕ್ರಾಂತಿಕಾರಿ ಯುವಕ ತನ್ನ ಕೆಂಪುವಸ್ತ್ರವನ್ನು ಹೆಣದ ಮೇಲೆ ಹೊದಿಸುತ್ತಾನೆ. ಇದು ಸಮಂಜಸವಲ್ಲ. ಯಾಕೆಂದರೆ ಕ್ರಾಂತಿಕಾರಿಗಳು ತೀರಿಕೊಂಡರೆ ಕೆಂಪುವಸ್ತ್ರವನ್ನು ಅವರ ಪಾರ್ಥಿವ ಶರೀರಕ್ಕೆ ಹೊದೆಸಲಾಗುತ್ತದೆ. ಅದೇ ರೀತಿ ದೇಶಭಕ್ತರು ತೀರಿಕೊಂಡರೆ ಬಾವುಟವನ್ನು ದೇಹದ ಮೇಲೆ ಹೊದೆಸಲಾಗುತ್ತದೆ. ಆದರೆ ಇಲ್ಲಿ ಒಬ್ಬ ದುಷ್ಟ ಅಧಿಕಾರಿ ಸಿಕ್ಕರೆ ಅವನ ಹೆಣಕ್ಕೆ ಕ್ರಾಂತಿಯ ಸಂಕೇತವಾದ ಕೆಂಪುವಸ್ತ್ರವನ್ನು ಹೊದೆಸುವುದು ವಿಪರ್ಯಾಸವೆನಿಸುತ್ತದೆ.

ಇಡೀ ನಾಟಕದಲ್ಲಿ ಹೆಚ್ಚಾಗಿ ಶಿಷ್ಟ ಭಾಷೆಯನ್ನೇ ಬಳಸಲಾಗಿದೆ. ದಲಿತರಿಗೆ ಹರಿಜನರಿಗೆ ತಮ್ಮದೇ ಆದ ವಿಶಿಷ್ಟ ಭಾಷೆಯೊಂದಿದೆ. ದೇವನೂರು ಮಹದೇವರವರು ಭಾಷೆಯನ್ನು ತಮ್ಮ ಬರಹಗಳಲ್ಲಿ ಬಳಸಿದ್ದಾರೆ. ಗಾರೆಯವನ ಮಗನೂ ಸಹ ನಾಗರೀಕ ಭಾಷೆ ಬಳಸುತ್ತಾನೆ. ಇದರ ಬದಲು ಎಲ್ಲಾ ದಲಿತ ಪಾತ್ರಗಳು ಗ್ರಾಮ ಭಾಷೆಯನ್ನು ಅದರಲ್ಲೂ ದಲಿತರ ಮಾತಿನ ಶೈಲಿಯನ್ನು ನಾಟಕದಲ್ಲಿ ಬಳಸಿದ್ದರೆ ಇನ್ನೂ ಸೂಕ್ತವೆನಿಸುತ್ತಿತ್ತು. ಇಲ್ಲದೇ ಹೋದರೆ ಶೇಷಾದ್ರಿ ಪಾತ್ರದ ಹಾಗೆ ಕೆಳವರ್ಗದವರು ತಮ್ಮ ಸಾಂಸ್ಕೃತಿಕ ಸೊಗಡನ್ನು ಬಿಟ್ಟು ಮೇಲ್ವರ್ಗದವರಂತಾಗಲು ಪರದಾಡುವಂತಾಗುತ್ತದೆ. ಹಾಗೆಯೇ ಪಾತ್ರೋಚಿತವಾಗಿ ನಟರನ್ನು ಆಯ್ಕೆ ಮಾಡಿಕೊಂಡಿದ್ದರೆ ವಾಸ್ತವಕ್ಕೆ ಹತ್ತಿರವಾಗುತ್ತಿತ್ತು. ಸರಕಾರಿ ಕಚೇರಿಗೆ ಸಂದರ್ಶನಕ್ಕೆ ಬರುವ ವಿದ್ಯಾವಂತರ ವಯಸ್ಸು ಇಪ್ಪತ್ತರಿಂದ ಇಪ್ಪತೈದು ಇರಬಹುದಾಗಿದೆ. ಆದರೆ ನಾಟಕದಲ್ಲಿ ಸಂದರ್ಶನಕ್ಕೆ ಬರುವ ಶೇಷಾದ್ರಿ ಹಾಗೂ ಗಾಂಧಿದಾಸ ಪಾತ್ರವಹಿಸಿದವರ ವಯಸ್ಸು ನಲವತ್ತು ಮೀರಿದ್ದಾಗಿದೆ. ಆದಷ್ಟು ಯುವಕರನ್ನು ತೆಗೆದುಕೊಂಡಿದ್ದರೆ ಪಾತ್ರಕ್ಕೆ ನ್ಯಾಯಸಲ್ಲಿಸಿದಂತಾಗುತ್ತಿತ್ತು. ನಾಟಕದ ಕ್ರಾಂತಿಕಾರಿ ಯುವಕ ಅದ್ಯಾಕೆ ತಂಬೂರಿ ಮಾದರಿಯ ಸಂಗೀತ ಪರಿಕರವನ್ನು ಅಧಿಕಾರಿಯ ಮೇಲೆ ಹಲ್ಲೆ ಮಾಡಲಿಕ್ಕೆ ಬಳಸುತ್ತಾನೆ ಎನ್ನುವುದೇ ಅರ್ಥವಾಗದ್ದಾಗಿದೆ. ಹೋಗಲಿ ಕ್ರಾಂತಿಕಾರಿ ಯುವಕನಿಗೂ ತಂಬೂರಿಗೂ ಏನು ಸಂಬಂಧ. ಅವನ ಕೈಯಲ್ಲಿ ಅದನ್ಯಾಕೆ ನಿರ್ದೇಶಕರು ಕೊಟ್ಟರು ಎನ್ನುವುದು ಪ್ರೇಕ್ಷಕರಿಗಂತೂ ಅರ್ಥವಾಗದ ಸಂಕೇತವಾಗಿದೆ.

ಸಿಜಿಕೆ,
ಒಟ್ಟಿನ ಮೇಲೆ ಕಿರು ಏಕಾಂಕ ನಾಟಕವು ಅಚ್ಚುಕಟ್ಟಾಗಿ ಮೂಡಿ ಬಂದಿದೆ. ಪಂಚ್ ಸಂಭಾಷಣೆಗಳು ನಗುಉಕ್ಕಿಸುವಂತಿವೆ. ಹಯವದನರಾವ್ ಆಗಿ ಶ್ರೀಧರ್ರವರ ಅಭಿನಯ ಪಾತ್ರಕ್ಕೆ ಒಪ್ಪುವಂತಿದೆ. ದಲಿತ ಯುವತಿಯಾಗಿ ಕಲಾವತಿ ತಮ್ಮ ಪುಟ್ಟ ಪಾತ್ರದ ಮೂಲಕ ಗಮನಸೆಳೆಯುವಂತೆ ನಟಿಸಿದ್ದಾರೆ. ಗಾಂಧಿದಾಸನಾಗಿ ಮುರುಡಯ್ಯ ತಮ್ಮ ಎಂದಿನ ವಿಶಿಷ್ಟ ಮಾತಿನ ಶೈಲಿಯನ್ನು ಬಿಡದೇ ಅಭಿನಯದಲ್ಲಿ ಗೆದ್ದಿದ್ದಾರೆ. ಶೇಷಾದ್ರಿಯಾಗಿ ರವೀಂದ್ರ ಸಿರಿವರ ತಮ್ಮ ನಟನೆಯಿಂದ ನಗೆಉಕ್ಕಿಸುವಲ್ಲಿ ಸಫಲರಾಗಿದ್ದಾರೆ.  ಹಾಗೂ ಪಾಪಣ್ಣನಾಗಿ ಜಿಪಿಓ ಚಂದ್ರುರವರ ಮುಗ್ದ ಅಭಿನಯ ಸೊಗಸೆನಿಸುವಂತಿದೆ. ಕ್ರಾಂತಿಕಾರಿ ಯುವಕನಾಗಿ ಚೇತನ್ ನಟನೆ ಗಮನಾರ್ಹ. ಎಲ್ಲಾ ನಟರೂ ಉತ್ತಮವಾಗಿ ಅಭಿನಯಿಸಿ ಇಡೀ ನಾಟಕವನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ.  ಶಶಿಧರ್ ಅಡಪರ ರಂಗವಿನ್ಯಾಸ ಹಾಗೂ ಅಪ್ಪಯ್ಯನವರ ಬೆಳಕು ನಿರ್ವಹಣೆಯಲ್ಲಿ ವಿಶೇಷವೇನೂ ಇರಲಿಲ್ಲ. ಸಿದ್ದಲಿಂಗಯ್ಯನವರು ಬರೆದ ಎರಡು ಹಾಡುಗಳನ್ನು ನಾಟಕದಲ್ಲಿ ರಾಮಚಂದ್ರ ಹಡಪದರವರು  ಹಾಡಿದ್ದಾರೆ.

ಅಧಿಕಾರಿವರ್ಗದ ದುರಹಂಕಾರ, ಮೇಲ್ವರ್ಗದವರಾಗಲು ಹಾತೊರೆಯುವ ದಲಿತ ವರ್ಗಗಳ ಕೀಳರಿಮೆ ಹಾಗೂ ರಾಜೀಕೊರತನಗಳನ್ನು ಹೇಳುತ್ತಲೇ ಹಿಂಸೆಯಿಂದಲಾದರೂ ಸರಿ ಸಮಾನತೆಯನ್ನು ಪಡೆಯಲೇಬೇಕು ಎನ್ನುವ ತನ್ನ ಆಶಯದಲ್ಲಿ ಪಂಚಮ ನಾಟಕ ಸಫಲವಾಗಿದೆ. ಮರತೇ ಹೋಗಿದ್ದ ನಾಟಕವನ್ನು ಮತ್ತೆ ರಂಗದಂಗಳದಲ್ಲಿ ಪ್ರದರ್ಶಿಸಿದ ರಂಗನಿರಂತರ ತಂಡ ಅಭಿನಂದನಾರ್ಹವಾಗಿದೆ.

                                               -ಶಶಿಕಾಂತ ಯಡಹಳ್ಳಿ



 
    

   
           
      
               


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ