ಶುಕ್ರವಾರ, ಮಾರ್ಚ್ 28, 2014

‘ಬಿಇಎಲ್’ ನಲ್ಲಿ ವಿಶ್ವರಂಗಭೂಮಿ ದಿನಾಚರಣೆ ಸಂಭ್ರಮ


                                          
ಆಗೊಂದು ಕಾಲವಿತ್ತು. ಬೆಂಗಳೂರಿನಲ್ಲಿ ಕಾರ್ಮಿಕ ರಂಗಭೂಮಿ ವೈಭವದ ಕಾಲವದು. ಬಿಇಎಲ್, ಬೆಮೆಲ್, ಬಿಹೆಚ್ಇಎಲ್, ಹೆಚ್ಎಂಟಿ, ಹೆಚ್ಎಎಲ್ ದಂತಹ ಕೇಂದ್ರ ಸರಕಾರಿ ಸಾಮ್ಯದ ಕಾರ್ಖಾನೆಗಳಿಂದ ಹಿಡಿದು ಮೈಕೋದಂತಹ ಬಹುರಾಷ್ಟ್ರೀಯ ಒಡೆತನದ ಖಾಸಗಿ ಕಂಪನಿಗಳಲ್ಲಿ ನಾಟಕಗಳ ಸಂಭ್ರಮವೇ ಸಂಭ್ರಮ. ಬಹುತೇಕ ಪ್ಯಾಕ್ಟರಿಗಳಲ್ಲಿ ಲಲಿತ ಕಲಾ ಸಂಘ (ಪೈನ್ ಆರ್ಟ್ಸ ಕ್ಲಬ್) ಗಳು ಸಾಂಸ್ಕೃತಿಕವಾಗಿ ಕ್ರಿಯಾಶೀಲವಾಗಿದ್ದವು. ಕಾರ್ಖಾನೆಯೊಳಗಿರುವ ವಿವಿಧ ವಿಭಾಗಗಳಲ್ಲೇ ನಾಟಕ ತಂಡಗಳು ಹುಟ್ಟಿಕೊಂಡು ಆಂತರಿಕ ನಾಟಕ ಸ್ಪರ್ಧೆಗಳು ತುರುಸಿನಿಂದ ನಡೆಯುತ್ತಿದ್ದವು. ಸ್ಪರ್ಧೆಗಳಲ್ಲಿ ಗೆದ್ದ ನಾಟಕಗಳು ವಿವಿಧ ಕಾರ್ಖಾನೆಗಳ ಕಾರ್ಮಿಕ ರಂಗ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದವು. ಆಗ ನೋಡಬೇಕಿತ್ತು ಕಾರ್ಮಿಕ ಕಲಾವಿದರ ಕಲರವ. ನಾಟಕಗಳ ವೈಭವ. ಹೊರಗಿನಿಂದ ಹೆಸರುವಾಸಿ ಹವ್ಯಾಸಿ ನಿರ್ದೇಶಕರುಗಳನ್ನು ಆಹ್ವಾನಿಸಿ ನಾಟಕಗಳನ್ನು ಕಾರ್ಖಾನೆಗಳು ನಿರ್ಮಿಸುತ್ತಿದ್ದವು. ಸ್ಪರ್ಧೆಗಳಲ್ಲಿ ಗೆಲ್ಲುವುದೇ ಆಯಾ ಕಾರ್ಖಾನೆಗಳಿಗೆ ಪ್ರತಿಷ್ಟೆಯ ವಿಷಯವಾಗಿತ್ತು. ಅಷ್ಟೊಂದು ತುರುಸಿನ ಸ್ಪರ್ಧೆಗಳು ನಡೆಯುತ್ತಿದ್ದವು.

ಆದರೆ ಯಾವಾಗ ಜಾಗತೀಕರಣ, ಖಾಸಗೀಕರಣಗಳು ತೊಂಬತ್ತರ ದಶಕದಲ್ಲಿ ಭಾರತಕ್ಕೆ ದಾಂಗುಡಿ ಇಟ್ಟವೋ ಆಗಿನಿಂದ ಕಾರ್ಖಾನೆಗಳಲ್ಲಿ ನಾಟಕ ಸ್ಪರ್ಧೆಗಳು ಕಡಿಮೆಯಾಗಿ ವಸ್ತುವಿನ ಉತ್ಪಾದನೆಯ ಸ್ಪರ್ಧೆಗಳು ಮಹತ್ವ ಪಡೆದುಕೊಂಡವು. ಯಾವ ಕಾರ್ಖಾನೆಗಳು  ವಸ್ತುಗಳ ಉತ್ಪಾದನೆಯ ಜೊತೆಜೊತೆಗೆ ನಾಟಕಗಳ ಮೂಲಕ ರಂಗಕಲಾವಿದ-ತಂತ್ರಜ್ಞರನ್ನು ಹುಟ್ಟುಹಾಕುತ್ತಿತ್ತೋ ತದನಂತರ ಅದನ್ನು ಬಿಟ್ಟು ಕೇವಲ ವಸ್ತುಗಳ ಉತ್ಪಾದನೆಯನ್ನೇ ತಮ್ಮ ಪ್ರಮುಖ ಗುರಿಯನ್ನಾಗಿಸಿಕೊಂಡವು. ಉತ್ಪಾದನಾ ಸಂಬಂಧಗಳು ಬದಲಾದವು. ಜಾಗತಿಕವಾಗಿ ವಸ್ತು ಉತ್ಪಾದನೆ ಮತ್ತು ಮಾರಾಟಗಳಲ್ಲಿ ತುರುಸಿನ ಪೈಪೋಟಿ ಶುರುವಾಯಿತು. ಕಾರ್ಮಿಕರು ಯಂತ್ರಗಳಾದವು. ಅವರ ಮೇಲೆ ಉತ್ಪಾದನಾ ಒತ್ತಡ ಹೆಚ್ಚತೊಡಗಿತು. ಅಧಿಕಾರಿ ವರ್ಗ ಟಾರ್ಗೆಟ್ ಮೇಲೆ ಕೆಲಸ ಮಾಡತೊಡಗಿತು. ಇದರಿಂದಾಗಿ ಕಾರ್ಮಿಕ ರಂಗಭೂಮಿ ನಿಧಾನವಾಗಿ ತನ್ನ ತೀವ್ರತೆಯನ್ನು ಕಳೆದುಕೊಳ್ಳತೊಡಗಿತು. ನಾಟಕ ಸ್ಪರ್ಧೆಗಳು ಬರಕಾಸ್ತಾದವು. ಬಹುತೇಕ ದೊಡ್ಡ ಪ್ಯಾಕ್ಟರಿಗಳಲ್ಲಿರುವ ಲಲಿತ ಕಲಾ ಸಂಘಗಳು ನಿಷ್ಕ್ರೀಯವಾಗಿ ನೆಪಕ್ಕೊಸ್ಕರ ವರ್ಷಕ್ಕೆರಡು ಕಾರ್ಯಕ್ರಮ ಹಮ್ಮಿಕೊಳ್ಳತೊಡಗಿದವು. ಸರಕಾರಿ ಪ್ರಾಯೋಜಿತ ಕಾರ್ಖಾನೆಗಳಲ್ಲಿ ನಾಟಕೋತ್ಪಾದನೆ ನಿಂತೇ ಹೋಯಿತು. ಬಾಷ್-ಮೈಕೋದಲ್ಲಿರುವ ಕಲಾವಿದರ ಒತ್ತಾಸೆಯ ಮೇರೆಗೆ ಇನ್ನೂ ನಾಟಕ ಕಾರ್ಖಾನೆಯಲ್ಲೊಂದಿಷ್ಟು ಉಸಿರಾಡುತ್ತಿದೆ.
   
ಕಾರ್ಮಿಕ ರಂಗಭೂಮಿ ಹಿನ್ನೆಡೆ ಅನುಭವಿಸುತ್ತಿರುವ ಪ್ರಸ್ತುತ ಸಂದರ್ಭದಲ್ಲಿಯೂ ಸಹ ಕೆಲವೊಂದು ಕಾರ್ಖಾನೆಗಳಲ್ಲಿ ಒಬ್ಬಿಬ್ಬರು ಕಲಾವಿದ ಒತ್ತಾಸೆಯಿಂದಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ಆಗಾಗ ನಡೆಯುತ್ತಿರುತ್ತವೆ ಎನ್ನುವುದೊಂದು ಸಮಾಧಾನಕರವಾದ ಸಂಗತಿ.  ಅಂತಹ ಕಾರ್ಖಾನೆಗಳಲ್ಲಿ ಬಿಇಎಲ್ ಕೂಡಾ ಒಂದು. ಕಾರ್ಖಾನೆಯಲ್ಲಿ ಕೆ.ಜೆ.ಶಂಕರಪ್ಪ ಎನ್ನುವ ರಂಗಭೂಮಿ ಕಲಾವಿದರಿದ್ದಾರೆ. ಕಾರ್ಖಾನೆಯ ಕೆಲಸದ ಸಮಯದ ನಂತರವೂ ಶಂಕರಪ್ಪ ಸಾಂಸ್ಕೃತಿಕ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಭಾರತ್ ಎಲೆಕ್ಟ್ರಾನಿಕ್ಸ್ ಲಲಿತ ಕಲಾ ಸಂಘ ಕಾರ್ಯದರ್ಶಿಯಾಗಿ ಸಕ್ರೀಯರಾಗಿದ್ದಾರೆ. ವರ್ಷ ವಿಶ್ವ ರಂಗಭೂಮಿ ದಿನಾಚರಣೆಯನ್ನು ಕಾರ್ಖಾನೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಬೇಕೆಂಬುದು ಅವರ ಆಸೆಯಾಗಿತ್ತು. ಅದಕ್ಕಾಗಿ ವಿಶೇಷ ಕಾರ್ಯಾಗಾರವೊಂದನ್ನು ಹಮ್ಮಿಕೊಂಡರು. ಅದು ಕಂಸಾಳೆ ಶಿಬಿರ.
         
ಬಿಇಎಲ್ ಕಾರ್ಖಾನೆಯ ಕಾಲೇಜಿಗೆ ಹೋಗಿ ಪ್ರಿನ್ಸಿಪಾಲರನ್ನು ಬೇಟಿಯಾಗಿ ಜಾನಪದ ಕಲೆಯ ಕಾರ್ಯಾಗಾರಕ್ಕೆ ಕಾಲೇಜಿನ ಹುಡುಗರನ್ನು ಕಳುಹಿಸಿಕೊಡಲು ಮನವೊಲಿಸಿದ ಶಂಕರಪ್ಪರವರು ಕಂಸಾಳೆಯಲ್ಲಿ ಪರಿಣಿತರಾದ ಲಕ್ಷ್ಮನ್ ನೆಲಸೊಗಡುರವರನ್ನು ಕರೆಯಿಸಿ ಒಂದು ವಾರಗಳ ಕಾಲ ಕಂಸಾಳೆ ಜಾನಪದ ಕಲೆ ಶಿಬಿರವನ್ನು ಕಾಲೇಜಿನ ಆಸಕ್ತ ಯುವಕ ಯುವತಿಯರಿಗೆ ಆರಂಭಿಸಿದರು. ಇದಕ್ಕೆ ಬಿಇಎಲ್ ಅಧಿಕಾರಿಗಳಾದ ಶಿವಕುಮಾರ್ ಮತ್ತು ಬಿಇಎಲ್ ಲಲಿತ ಕಲಾ ಸಂಘದ ಅಧ್ಯಕ್ಷರಾದ ಮಂಜುನಾಥ ಹೆಗ್ಡೆರವರು ಸಾಥ ಕೊಟ್ಟರು. 20ಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿಗಳ ಕೈಯಲ್ಲಿ  ಕಂಸಾಳೆ ಹಾಗೂ ಅದರ ಸದ್ದು ಇಡೀ ಬಿಇಎಲ್ನ್ನು ಆವರಿಸಿತು

  
2014, ಮಾರ್ಚ 27, ಬಿಇಎಲ್ ಸುಸಜ್ಜಿತ ರಾಷ್ಟ್ರಕವಿ ಕುವೆಂಪು ಕಲಾಕ್ಷೇತ್ರದಲ್ಲಿ  ವಿಶ್ವ ರಂಗಭೂಮಿ ದಿನದ ಆಚರಣೆಯ ಸಂಭ್ರಮ. ನನ್ನನ್ನು ಮುಖ್ಯ ಅತಿಥಿಯನ್ನಾಗಿ ಶಂಕರಪ್ಪ ಆಹ್ವಾನಿಸಿದ್ದರು. ಜೊತೆಗೆ ಬಿಇಎಲ್ ಕಾಲೇಜಿನ ಉಪನ್ಯಾಸಕರಾದ ಡಾ.ಎನ್.ರವಿ, ಲಲಿತ ಕಲಾ ಸಂಘದ ಅಧ್ಯಕ್ಷರಾದ ಮಂಜುನಾಥ ಹೆಗ್ಡೆ, ಬಿಇಎಲ್ ಎಜಿಎಂ ಶಿವಕುಮಾರ್ರವರು ವೇದಿಕೆಯಲ್ಲಿದ್ದರು. ಪಕ್ಕದಲ್ಲಿ ಕೆ.ಜೆ.ಶಂಕರಪ್ಪ ಕೂಡಾ ಕುಳಿತು ಕಾರ್ಯಕ್ರಮವನ್ನು ನಿರ್ವಹಿಸುತ್ತಿದ್ದರು. ವೇದಿಕೆ ಮೇಲೆ ಕುಳಿತವರಲ್ಲಿ ನಾನೊಬ್ಬನೇ ಹೊರಗಿನವನಾಗಿದ್ದೆ. ಎಲ್ಲರು ಬಿಇಎಲ್ ಬಳಗದವರೇ. ಅತಿಥಿಗಳ ಭಾಷಣ ಎಂದಾಗ ಏನು ಮಾತಾಡಬೇಕೆಂದು ನಾನು ನಿರ್ಧರಿಸಿರಲಿಲ್ಲ. ಕಾಲೇಜಿನ ಹುಡುಗರು ಕಂಸಾಳೆ ಕಾಸ್ಟೂಮನಲ್ಲಿ ಯಾವಾಗ ತಮ್ಮ ಪ್ರತಿಭೆ ಪ್ರದರ್ಶಿಸುತ್ತೇವೋ ಎಂದು ಕಾದು ಕುಳಿತಿದ್ದರು. ಒಂದು ವಾರದ ಪರಿಶ್ರಮದ ಫಲಿತಾಂಶದ ಕುತೂಹಲ ಅವರಲ್ಲಿತ್ತು. ನೇಪತ್ಯದಲ್ಲಿ ಬೈರೇಗೌಡರ ಸೋರೇಬುರುಡೆ ನಾಟಕ ತಂಡದ ಕಲಾವಿದರೆಲ್ಲಾ ಬಣ್ಣ ಹಚ್ಚಿಕೊಂಡು ನಾಟಕ ಪ್ರದರ್ಶನಕ್ಕಾಗಿ ಕಾಯುತ್ತಿದ್ದರು. ಹಾಗೂ ಸಮಯ ಏಳುವರೆಯಾಗಿತ್ತು. ಬಣ್ಣ ಹಚ್ಚಿಕೊಂಡು ತಮ್ಮ ಸರದಿಗಾಗಿ ಕಾಯುವ ಕಲಾವಿದರನ್ನು ನೋಡುತ್ತಾ ವೇದಿಕೆಯಲ್ಲಿ ಭಾಷಣ ಮಾಡುವುದು ನಿಜಕ್ಕೂ ಮುಜುಗರದ ಕೆಲಸ. ಅದೆಷ್ಟೋ ಸಲ ನಾನೂ ಹೀಗೆ ಬಣ್ಣ ಹಚ್ಚಿಕೊಂಡೋ ಇಲ್ಲವೇ ನಮ್ಮ ಇಪ್ಟಾ ತಂಡದ ಸದಸ್ಯರಿಗೆ ಬಣ್ಣ ಹಚ್ಚಿಯೋ ಯಾವಾಗ ವೇದಿಕೆ ಕಾರ್ಯಕ್ರಮ ಮುಗಿಯುತ್ತದೋ, ಅದ್ಯಾವಾಗ ಭಾಷಣಗಳ ಅಬ್ಬರ ಕೊನೆಗೊಳ್ಳುತ್ತದೋ ಎಂದು ನಿಟ್ಟುಸಿರು ಬಿಡುತ್ತಾ ಕಾಯ್ದಿದ್ದುಂಟು. ಈಗ ನಾನು ದೀರ್ಘ ಕಾಲ ಮಾತಾಡಿ ಕಲಾವಿದರು ನಿಟ್ಟುಸಿರು ಬಿಡುವಂತೆ ಮಾಡುವುದು ಔಚಿತ್ಯವಲ್ಲ. ಹೀಗಾಗಿ ಸರಿಯಾಗಿ ಐದೇ ನಿಮಿಷ ಮಾತಾಡುವುದಾಗಿ ನಿರ್ಧರಿಸಿದೆ. ಆದರೂ ಅದು ಹೇಗೋ ಇನ್ನೆರಡು ನಿಮಿಷ ಹೆಚ್ಚಾಗಿ ಏಳು ನಿಮಿಷಗಳಷ್ಟು ಮಾತಾಡಿದೆ


ವೇದಿಕೆಯಿಂದ ನಾನು ಹೇಳಿದ್ದಿಷ್ಟೇ. ಆತ್ಮೀಯ ರಂಗಸಕ್ತರಿಗೆಲ್ಲಾ ವಿಶ್ವ ರಂಗಭೂಮಿ ದಿನಾಚರಣೆಯ ಶುಭಾಷಯಗಳು. ಇಂದು ಜಾಗತೀಕರಣ ಹಾಗೂ ನಗರೀಕರಣಗಳ ಒತ್ತಡದಿಂದಾಗಿ ಕಾರ್ಮಿಕ ರಂಗಭೂಮಿ ಮತ್ತು ಕಾಲೇಜು ರಂಗಭೂಮಿ ತನ್ನ ತೀವ್ರತೆಯನ್ನು ಕಳೆದುಕೊಂಡಿದೆ. ಕಾರ್ಮಿಕ ರಂಗಭೂಮಿಯ ಇಂದಿನ ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾರ್ಥಿಗಳನ್ನು ಕರೆತಂದು ಅವರಿಗೆ ವಾರಗಳ ಕಾಲ ಕಂಸಾಳೆ ಕಾರ್ಯಾಗಾರವನ್ನು ಏರ್ಪಡಿಸಿದ್ದು ಸಾರ್ಥಕ ಕೆಲಸವಾಗಿದೆ. ಕಾಲೇಜಿನ ವಿದ್ಯಾರ್ಥಿಗಳಲ್ಲಿ ಕಲೆ, ಸಂಸ್ಕೃತಿ ಹಾಗೂ ರಂಗಭೂಮಿಯ ಕುರಿತು ಅರಿವನ್ನು ಮೂಡಿಸಬೇಕಾದದ್ದು ತುಂಬಾ ಅಗತ್ಯವಾಗಿದೆ. ಮುಂದಿನ ಪೀಳಿಗೆಗೆ ರಂಗಭೂಮಿಯಲ್ಲಿ ಆಸಕ್ತಿ ಮೂಡಿಸುವ ಕೆಲಸ ಮಾಡದಿದ್ದಲ್ಲಿ ಸಾಂಸ್ಕೃತಿಕ ಕ್ಷೇತ್ರ ಬಡವಾಗುತ್ತದೆ. ನಿಟ್ಟಿನಲ್ಲಿ ಬಿಇಎಲ್ ಲಲಿತ ಕಲಾ ಸಂಘ ಶ್ಲಾಘನೀಯ ಕೆಲಸ ಮಾಡಿದೆ. ಇದು ಕೇವಲ ಸಾಂಕೇತಿಕವಾಗಿ ಮಾರ್ಚ ೨೭ರ ವಿಶ್ವ ರಂಗಭೂಮಿ ದಿನ ನೆನಪಿನ ಒಂದು ದಿನದ ಆಚರಣೆಯಾಗಬಾರದು.  ನಿರಂತರವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ಅದರಲ್ಲೂ ರಂಗಕ್ರಿಯೆಗಳು ಕಾರ್ಮಿಕರನ್ನು ಹಾಗೂ ಕಾಲೇಜಿನ ವಿದ್ಯಾರ್ಥಿಗಳನ್ನು ಒಳಗೊಂಡಂತೆ ನಡೆಯುತ್ತಿರಬೇಕು


 ಕಾರ್ಖಾನೆಗಳು ಕೇವಲ ವಸ್ತುಗಳನ್ನು ಮಾತ್ರ ಉತ್ಪಾದಿಸುವ ಕೆಲಸವನ್ನು ಮಾಡದೇ ಅದರ ಜೊತೆಗೆ ಕಲಾವಿದರನ್ನು ಹಾಗೂ ಅವರ ಮೂಲಕ ನಾಟಕಗಳನ್ನು ಉತ್ಪಾದಿಸುವ ಕೆಲಸ ಮಾಡಬೇಕು. ಯಾಕೆಂದರೆ ನಾಟಕ ಎನ್ನುವುದು ಒಂದು ಜೀವಂತ ಕಲೆ. ಟಿವಿ ಸಿನೆಮಾಗಳಲ್ಲಿ ವರ್ಚುವಲ್ ರಿಯಾಲಿಟಿಯನ್ನು ಮಾತ್ರ ನೋಡುತ್ತೇವೆ. ಆದರೆ ನಾಟಕ ಎನ್ನುವುದು ನಮ್ಮ ಕಣ್ಣ ಮುಂದೆ ನಡೆಯುವ ರಿಯಾಲಿಟಿಯಾಗಿದೆ. ಕಾರ್ಖಾನೆಯ ಯಾಂತ್ರಿಕ ಕೆಲಸಗಳಲ್ಲಿ ಪ್ರತಿದಿನ ಒಂದೇ ರೀತಿಯಲ್ಲಿ  ತೊಡಗಿಕೊಂಡು ಯಂತ್ರಗಳೇ ಆಗಿರುವ ಕಾರ್ಮಿಕರನ್ನು ಮತ್ತೆ ಮನುಷ್ಯ ಸಂವೇದನೆಗೆ ಪ್ರೇರೇಪಿಸುವ ಕೆಲಸವನ್ನು ನಾಟಕ ಮಾಡುತ್ತದೆ. ಮನುಷ್ಯನೊಳಗೆ ಜೀವಂತಿಕೆಯನ್ನು ಹಾಗೂ ಚೈತನ್ಯವನ್ನು ತುಂಬುವಂತಹ ರಂಗಮಾಧ್ಯಮಕ್ಕೆ ಅತೀ ಹೆಚ್ಚು ಮಹತ್ವವನ್ನು ಕಾರ್ಖಾನೆಗಳ ಆಡಳಿತ ಮಂಡಳಿ ನೀಡಬೇಕಿದೆ. ಜೊತೆಗೆ ಇಲ್ಲಿ ನೆರೆದಿರುವ ಕಾರ್ಮಿಕರ ಕುಟುಂಬವರ್ಗದವರು ಹಾಗೂ ಕಾಲೇಜು ಮಕ್ಕಳ ಹೆತ್ತವರು ಸಾಂಸ್ಕೃತಿಕ ಕಾರ್ಯಗಳಲ್ಲಿ ಭಾಗವಹಿಸಲು ಅವರನ್ನು ಪ್ರೋತ್ಸಾಹಿಸಬೇಕಾಗಿದೆ.

ಇಂದು ಕಂಸಾಳೆಯಂತಹ ಜಾನಪದ ಕಲೆಯ ಪ್ರದರ್ಶನವನ್ನು ಇದೇ ಕಾರ್ಖಾನೆಯ ಕಾಲೇಜಿನ ವಿದ್ಯಾರ್ಥಿಗಳು ಕಲಿತು ಮಾಡುತ್ತಿರುವುದು ಸಂತಸದ ಸಂಗತಿ. ಜೊತೆಗೆ ಸೋರೆಬುರುಡೆ ಜಾನಪದ ನಾಟಕ ಪ್ರದರ್ಶನವನ್ನೂ ಆಯೋಜಿಸಲಾಗಿದೆ. ಮೂಲಕ ಹಿನ್ನಡೆಯಾಗುತ್ತಿರುವ ಕಾರ್ಮಿಕ ರಂಗಭೂಮಿ, ಕಾಲೇಜು ರಂಗಭೂಮಿ  ಹಾಗೂ ಜಾನಪದ ರಂಗಭೂಮಿಗೆ ಏಕಕಾಲಕ್ಕೆ ವಿಶ್ವ ರಂಗಭೂಮಿ ದಿನ ನೆಪದಲ್ಲಿ ಅವಕಾಶ ಮಾಡಿಕೊಟ್ಟಿರುವುದು ಅಭಿನಂದನೀಯ. ಹೀಗೆಯೇ ಬಿಇಎಲ್ ಲಲಿತ ಕಲಾ ಸಂಘವು ನಿರಂತರವಾಗಿ ಕಾರ್ಯಾಗಾರವನ್ನು ನಡೆಸುತ್ತಿರಲಿ, ನಾಟಕಗಳನ್ನು ಸ್ಟತಃ ನಿರ್ಮಿಸಿ ಪ್ರದರ್ಶಿಸಲಿ ಹಾಗೂ ಕಾರ್ಖಾನೆಯ ಆಡಳಿತ ಮಂಡಳಿ ಸಹಕರಿಸಲಿ ಎಂದು ಆಗ್ರಹಿಸುತ್ತೇನೆ.

ಇಷ್ಟು ಹೇಳಿ ನನ್ನ ಮಾತನ್ನು ಮುಗಿಸಿದೆ. ಇವು ಕೇವಲ ಪ್ರಾಸ್ತಾವಿಕ ಮಾತುಗಳೂ ಆಗಿರಲಿಲ್ಲ ಅಥವಾ ಲಲಿತ ಕಲಾ ಸಂಘದವರು ನನ್ನನ್ನು ಕರೆದು ಸನ್ಮಾನಿಸಿದ್ದಕ್ಕೆ ಕೃತಜ್ಞತೆಯ ಮಾತುಗಳೂ ಆಗಿರಲಿಲ್ಲ. ಕಾರ್ಮಿಕ ರಂಗಭೂಮಿಯ ಕುರಿತು ನನ್ನ ಮನದಾಳದ ಮಾತುಗಳಾಗಿದ್ದವು. ಆರು ತಿಂಗಳ ಹಿಂದೆ ಹೆಚ್ಎಎಲ್ ಲಲಿತ ಕಲಾ ಸಂಘದವರು ನಾಟಕ ಪ್ರದರ್ಶನದ ಉದ್ಘಾಟನೆಗೆ ನನ್ನನ್ನು ಕರೆದಿದ್ದಾಗಲೂ ಇದೇ ರೀತಿಯ ಕಾಳಜಿಯನ್ನು ವ್ಯಕ್ತಪಡಿಸಿದ್ದೆ. ಯಾಕೆಂದರೆ ನಾಟಕ ಕ್ರಿಯೆಗಳಿಗೆ ಪೂರಕವಾದ ಎಲ್ಲಾ ವ್ಯವಸ್ಥೆಗಳು ಕಾರ್ಖಾನೆಗಳಲ್ಲಿವೆ. ಸಕಲ ಸವಲತ್ತಿರುವ ಅತ್ಯುತ್ತಮವಾದ ರಂಗಮಂದಿರಗಳಿವೆ. ನಾಟಕ ಪ್ರದರ್ಶನಕ್ಕೆ ಬಾಡಿಗೆ ಕೊಡುವ ಅಗತ್ಯವಿಲ್ಲ.  ಮಾನವ ಸಂಪನ್ಮೂಲಕ್ಕಂತೂ ಯಾವುದೇ ಕೊರತೆ ಇಲ್ಲ. ಪ್ರಯತ್ನಿಸಿದರೆ ಬೇಕಾದಷ್ಟು ಕಾರ್ಮಿಕರು ನಾಟಕದಲ್ಲಿ ಭಾಗವಹಿಸಲು ಮುಂದೆ ಬರುತ್ತಾರೆ. ಲಲಿತ ಕಲಾ ಸಂಘಗಳಿಗೆ ಹಣಕಾಸಿನ ಕೊರತೆಯೂ ಇಲ್ಲ. ಇದ್ದರೂ ಕಾರ್ಮಿಕರು ನಾಟಕದ ಖರ್ಚುಗಳಿಗೆ ಒಂದು ದಿನದ ಸಂಬಳ ನೀಡಲೂ ಹಿಂಜರಿಯುವುದಿಲ್ಲ. ಪ್ರೇಕ್ಷಕರ ಕೊರತೆಯೂ ಕಾಡದು ಯಾಕೆಂದರೆ ಕಾರ್ಮಿಕರ ಕುಟುಂಬದವರೇ ಪ್ರೇಕ್ಷರಾಗಿರುತ್ತಾರೆ. ಆಡಳಿತ ಮಂಡಳಿ ಅಸಹಕಾರ ತೋರಿಸಿದರೆ ಅವರ ಮೇಲೆ ಒತ್ತಡ ತರಲು ಕಾರ್ಮಿಕ ಸಂಘಟನೆಗಳಿವೆ. ಇಷ್ಟೆಲ್ಲಾ ಇದ್ದರೂ ಯಾಕೆ ಕಾರ್ಖಾನೆಗಳಲ್ಲಿ ಎಪ್ಪತ್ತರ ದಶಕದಂತೆ ಈಗ ನಾಟಕಗಳಾಗುತ್ತಿಲ್ಲ


ಯಾಕೆಂದರೆ ಕಾರ್ಮಿಕ ರಂಗಭೂಮಿಯಲ್ಲಿ ರಂಗಸಂಘಟಕರ ಕೊರತೆ ಕಾಡುತ್ತಿದೆ. ಕಾರ್ಖಾನೆಯಲ್ಲಿ ಇರುವ ಎಲ್ಲಾ ಸವಲತ್ತುಗಳನ್ನು ಹಾಗೂ ಸಂಪನ್ಮೂಲಗಳನ್ನು ಬಳಸಿಕೊಂಡು ಸಾಂಸ್ಕೃತಿಕ ವಾತಾವರಣವೊಂದನ್ನು ರೂಪಿಸುವಂತಹ ರಂಗಸಂಘಟಕರು ಈಗ ಕಾರ್ಖಾನೆಗಳಲ್ಲಿ  ಇಲ್ಲವಾಗಿದ್ದಾರೆ. ಆಗಿನ ಕಾಲದ ಹಲವರು ರಂಗಸಂಘಟಕರು ಜಾಗತೀಕರಣ ಒಡ್ಡಿದ ವಿಆರ್ಎಸ್ ಎನ್ನುವ ಆಮಿಷಕ್ಕೆ ಬಲಿಯಾಗಿ ವಾಲೆಂಟರಿ ನಿವೃತ್ತಿ ಪಡೆದು ಮನೆಗೆ ಹೋಗಿದ್ದಾರೆ. ಇನ್ನುಳಿದ ಕೆಲವರು ಆಸಕ್ತಿ ಕಳೆದುಕೊಂಡಿದ್ದಾರೆ. ಕಾರ್ಖಾನೆಯ ಕೆಲಸದ ಜೊತೆಗೆ ಆಧುನಿಕ ರಂಗಭೂಮಿಯಲ್ಲಿ ತೊಡಗಿಸಿಕೊಂಡ ಮೈಕೋ ಶಿವಣ್ಣ, ಮೈಕೋ ಶಿವಶಂಕರ್, ಕೆಎಸ್ಡಿಎಲ್ ಚಂದ್ರು... ರವರಂತಹ ಬೆರಳೆಣಿಕೆಯಷ್ಟು ಜನ ರಂಗಸಂಘಟಕರು ಈಗಲೂ ತಮ್ಮ ಕಾರ್ಖಾನೆಗಳಲ್ಲಿ ಅದಕ್ಕಿಂತ ಹೆಚ್ಚಾಗಿ ರವೀಂದ್ರ ಕಲಾಕ್ಷೇತ್ರ ಕೇಂದ್ರಿತ ರಂಗಕ್ರಿಯೆಗಳಲ್ಲಿ ಸಕ್ರೀಯರಾಗಿದ್ದಾರೆ. ಕೆ.ಜೆ.ಶಂಕರಪ್ಪನಂತವರು ಬಿಇಎಲ್ ಕಾರ್ಖಾನೆಯಲ್ಲಿ ಪಳುವಳಿಕೆಯಂತೆ ಉಳಿದು ತಮ್ಮ ಕೈಲಾದಷ್ಟು ಸಾಂಸ್ಕೃತಿಕ ಕೆಲಸವನ್ನು ಮಾಡುತ್ತಿರುವುದು ಆಶಾದಾಯಕ ಸಂಗತಿ

ಆದರೆ... ಹೀಗೆ ಕಾರ್ಮಿಕ ರಂಗಸಂಘಟನೆಯಲ್ಲಿ ತೊಡಗಿಕೊಂಡಿರುವ ಕೆಲವೇ ರಂಗಕರ್ಮಿಗಳು ಹಲವಾರು ರಂಗಸಂಬಂಧಿ ಕಾರ್ಯಾಗಾರಗಳನ್ನು ಕಾರ್ಖಾನೆಗಳಲ್ಲಿ ಹಮ್ಮಿಕೊಳ್ಳುವ ಮೂಲಕ ಮುಂದಿನ ತಲೆಮಾರನ್ನು ರಂಗಕ್ರಿಯೆಗೆ ಸಿದ್ದಗೊಳಿಸಬೇಕಿದೆ. ತಮ್ಮ ತಲೆಮಾರಿಗೆ ಆಯಾ ಕಾರ್ಖಾನೆಗಳಲ್ಲಿ ರಂಗಭೂಮಿ ನೇಪತ್ಯಕ್ಕೆ ಸೇರುವುದನ್ನು ತಡೆಯಲು ರಂಗಾಸಕ್ತ ಕಾರ್ಮಿಕ ರಂಗಕರ್ಮಿಗಳು ಮುಂದಿನ ತಲೆಮಾರನ್ನು ಸಿದ್ದಗೊಳಿಸಿ ತಮ್ಮ ಉತ್ತರಾಧಿಕಾರಿಗಳನ್ನು ಸೃಷ್ಟಿಸಬೇಕಿದೆ. ಏನೇ ಆಗಲಿ ರಂಗಕ್ರಿಯೆ ನಿಲ್ಲಬಾರದು. ತಲೆಮಾರುಗಳಿಂದ ತಲೆಮಾರಿಗೆ ಅದು ಮುಂದುವರೆಯಲೇಬೇಕು. ಮನುಷ್ಯನಲ್ಲಿ ಜೀವಂತಿಕೆ ಬೇಕೆಂದಿದ್ದರೆ ಜೀವಂತ ಕಲೆಗಳು ಉಳಿಯಲೇ ಬೇಕು. ಸಂಸ್ಕೃತಿ ಉಳಿಯಬೇಕೆಂದರೆ ರಂಗಕಲೆ ನಿರಂತರವಾಗಿ ಮುಂದುವರೆಯಲೇ ಬೇಕು. ಶಂಕರಪ್ಪನಂತಹ ರಂಗಬದ್ಧತೆ ಇರುವವರು ನೂರಾರು ಸಂಖ್ಯೆಯಲ್ಲಿ ಕಾರ್ಖಾನೆಗಳಲ್ಲಿ ಬರಬೇಕಿದೆ.  ಮತ್ತೆ ಕಾರ್ಮಿಕ ರಂಗಭೂಮಿಯ ವೈಭವದ ಕಾಲ ಮರಳಬೇಕೆಂಬುದು ರಂಗಕರ್ಮಿಗಳ ಅಂತರಂಗದ ಆಸೆ. ಆದರೆ... ಜಾಗತೀಕರಣದ ಸಂಸ್ಕೃತಿಯನ್ನು ಮೆಟ್ಟಿನಿಂತು ರಂಗಸಂಸ್ಕೃತಿಯ ವೈಭವವನ್ನು ಮರಳಿ ಸೃಷ್ಟಿಸುವ ಕ್ರಿಯಾಶೀಲ ರಂಗಸಂಘಟಕರಿಗಾಗಿ ಕಾರ್ಮಿಕ ರಂಗಭೂಮಿ ಕಾಯುತ್ತಿದೆ. ಆಗ ವರ್ಷಕ್ಕೊಮ್ಮೆ ಮಾತ್ರ ರಂಗಭೂಮಿ ದಿನವನ್ನಾಚರಿಸದೆ ದಿನವೂ ರಂಗ ಚಟುವಟಿಕೆಗಳನ್ನು ಮಾಡುತ್ತಾ ರಂಗಭೂಮಿಯನ್ನು ಶ್ರೀಮಂತಗೊಳಿಸಬೇಕಿದೆ. ಇದಕ್ಕೆ ಪೂರಕವಾದ ಎಲ್ಲಾ ವ್ಯವಸ್ಥೆ ಕಾರ್ಮಿಕ ರಂಗಭೂಮಿಯಲ್ಲಿದೆ. ಅವುಗಳನ್ನು ಸಕಾರಾತ್ಮಕವಾಗಿ ಬಳಸಿಕೊಂಡು ಕಾರ್ಮಿಕ ರಂಗಭೂಮಿ ಕಟ್ಟುವಂತಹ ಧೀರ ರಂಗಕರ್ಮಿಗಳ ಅಗತ್ಯವಿದೆ.   

                                               -ಶಶಿಕಾಂತ ಯಡಹಳ್ಳಿ  



 
        
                          


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ