ಮಂಗಳವಾರ, ನವೆಂಬರ್ 25, 2014

“ಬುಡ್ಗನಾದ” : ಅಲೆಮಾರಿ ಸಂಸ್ಕೃತಿಯ ಅನಾವರಣ





ನಾಗರೀಕ ಸಮಾಜದ ಸಂಪರ್ಕದಲ್ಲಿದ್ದೂ ತಲೆಮಾರುಗಳಿಂದ ಅಲೆಮಾರಿಗಳಾಗಿ ಬದುಕುವ ಜನಾಂಗಗಳು ಕರ್ನಾಟಕದಲ್ಲಿ ಹಲವಾರಿವೆ. ಆರ್ಥಿಕವಾಗಿ ಬಡವರಾದರೂ ಸಾಂಸ್ಕೃತಿಕವಾಗಿ ಶ್ರೀಮಂತಿಕೆಯನ್ನು ಹೊಂದಿದ ಅಲೆಮಾರಿ ಬುಡುಕಟ್ಟುಗಳ ಕುರಿತು ನಾಟಕವಾಗಿದ್ದು ರಂಗಚರಿತ್ರೆಯಲ್ಲಿ ಇಲ್ಲವೇ ಇಲ್ಲ. ಅಲೆಮಾರಿ ಸಮುದಾಯದ ಭಾಷೆ, ಬದುಕು ಹಾಗೂ ಸಂಸ್ಕೃತಿಯನ್ನು ಮೊಟ್ಟ ಮೊದಲ ಬಾರಿಗೆ ನಾಟಕದಲ್ಲಿ ಕಟ್ಟಿಕೊಡುವ ಪ್ರಯತ್ನವನ್ನು ಬುಡ್ಗನಾದ ನಾಟಕದಲ್ಲಿ ಮಾಡಲಾಗಿದೆ. ಅಲೆಮಾರಿ ಪಂಗಡವಾದ ಬುಡ್ಗ ಜಂಗಮ ಸಮುದಾಯದಲ್ಲೇ ಮೊದಲ ಬಾರಿಗೆ ಸ್ನಾತ್ತಕೋತ್ತರ ಪದವಿ ಪಡೆದು ಡಾಕ್ಟರೇಟ್ ಗಳಿಸಿದ ಡಾ.ಬಾಲಗುರುಮೂರ್ತಿರವರು ತಮ್ಮದೇ ರೀತಿಯ ಅಲೆಮಾರಿ ಜನಾಂಗದ ಬದುಕನ್ನು ಬರಹದ ರೂಪದಲ್ಲಿ ಚಿತ್ರಿಸಿ ರಂಗಪಠ್ಯವಾಗಿಸಿದ್ದಾರೆ. ಹೊಸಕೋಟೆಯ ಜನಪದರು ರಂಗತಂಡದ ಕಲಾವಿದರಿಗೆ ಸುರೇಶ್ ವರ್ತೂರರವರು ತುಂಬಾ ಶ್ರಮವಹಿಸಿ ಸಮರ್ಥವಾಗಿ ಬುಡ್ಗನಾದ ನಾಟಕವನ್ನು ನಿರ್ದೇಶಿಸಿದ್ದಾರೆ. ರಂಗಸೌರಭ ರಂಗತಂಡ ಆಯೋಜಿಸಿದ ವಾರಾಂತ್ಯದ ರಂಕುಲಾಟ ನಾಟಕೋತ್ಸವದಲ್ಲಿ 2014, ನವೆಂಬರ್ 16ರಂದು ಜಯನಗರದ ಹೆಚ್.ಎನ್.ಕಲಾಕ್ಷೇತ್ರದಲ್ಲಿ ಬುಡ್ಗನಾದ ನಾಟಕ ಪ್ರದರ್ಶನಗೊಂಡು ನೋಡುಗರಿಗೆ ಅಲೆಮಾರಿಗಳ ವಿಸ್ಮಯ ಲೋಕವೊಂದನ್ನು ತೋರಿಸುವಲ್ಲಿ ಯಶಸ್ವಿಯಾಯಿತು.

ಅದೊಂದು ಅಲೆಮಾರಿ ಬುಡಕಟ್ಟುಗಳ ಲೋಕ. ಅಲ್ಲಿ ಬಡ್ಗ ಜಂಗಮರು, ಸುಡಗಾಡು ಸಿದ್ದರು, ಕೊಂಡಮಾಮಗಳು, ದೊಂಬಿದಾಸರು.. ಮುಂತಾದವರಿದ್ದಾರೆ. ಬುಡಕಟ್ಟುಗಳಿಗೆ ತಮ್ಮದೇ ಆದ ಸಂಪ್ರದಾಯ, ಕಟ್ಟುಪಾಡು, ಬದುಕಿನ ನೀತಿ ರೀತಿ, ನ್ಯಾಯವ್ಯವಸ್ಥೆಗಳಿವೆ. ಪ್ರೀತಿ ಇದೆ, ದ್ವೇಷ ಇದೆ, ಜಗಳವಿದೆ, ದೂರ್ತತನಗಳಿವೆ, ಧೂಮಪಾನ ಮಧ್ಯಪಾನಗಳಿವೆ, ದೈವದ ಭಯವಿದೆ, ಸಂಪ್ರದಾಯ ಬದ್ಧತೆ ಇದೆಒಟ್ಟಾರೆಯಾಗಿ ಮನುಷ್ಯರ ದೌರ್ಬಲ್ಯಗಳೆಲ್ಲಾ ಅಲ್ಲಿವೆ. ಇಂತಹ ಅಧೋಲೋಕದಲ್ಲಿಯೇ ಕಲೆ ಅರಳಿದೆ. ಕಲರ್ ಕಲರ್ ವೇಶಭೂಷಣಗಳಿವೆ, ಹಾಡು, ಸಂಗೀತ, ನೃತ್ಯ... ಸಾಂಸ್ಕೃತಿಕ ಶ್ರೀಮಂತಿಕೆ ಇದೆ. ಕಾಡುವ ಬಡತನವಿದೆ, ಅತಂತ್ರವಾಗಿ ಅಲೆದಾಡುವ ಬದುಕಿದೆ, ಸ್ವಂತ ನೆಲೆ ನೆಲ ವಿಲ್ಲದ ಅಸ್ತಿರತೆ ಇದೆ. ಕೊರತೆಗಳನ್ನೇ ತಮ್ಮ ಕುಲದ ಶ್ರೇಷ್ಟತೆ ಎಂದು ನಂಬಿಕೊಂಡು ಬದುಕಿನ ಬಂಡಿಯನ್ನು ಚಿತ್ತ ಬಂದತ್ತ ಎಳೆವ  ಸಮುದಾಯದ ನಂಬಿಕೆಗಳಿವೆ. ಇವೆಲ್ಲವುಗಳನ್ನೂ ಬುಡ್ಗನಾದ ನಾಟಕವು ದೃಶ್ಯವೈಭವದ ಮೂಲಕ ಕಟ್ಟಿಕೊಟ್ಟು ನಾಗರೀಕ ಪ್ರೇಕ್ಷಕರಲ್ಲಿ ಸಂಚಲನವನ್ನುಂಟು ಮಾಡುವಲ್ಲಿ ಸಫಲವಾಗಿದೆ.
    

ಕೂಡಿಕೆ ಎನ್ನುವುದು ನಾಟಕದಲ್ಲಿ ಮಹತ್ವದ್ದಾಗಿದೆ. ಶಿಷ್ಟ ಸಮಾಜ ಮಹಿಳೆಯರ ಮೇಲೆ ಹೇರಿದ ಶೀಲ, ಪಾವಿತ್ರ್ಯತೆ ಎಂಬ ಶೋಷಣೆಯ ಪರಿಕಲ್ಪನೆಗಳು ಅಲೆಮಾರಿ ಜನಾಂಗದಲ್ಲಿಲ್ಲ. ಗಂಡ ಬಿಟ್ಟರೆ ಇಲ್ಲವೆ ಸತ್ತರೆ ಹೆಂಡತಿ ಸಾಯುವವರೆಗೂ ಆತನ ನೆನಪಿನಲ್ಲಿ ಪರಿಶುದ್ಧವಾಗಿರುವುದನ್ನೇ ಪತಿವೃತಾ ಧರ್ಮ ಎಂದು ಹೇಳಿ ಮಹಿಳೆಯರನ್ನು ಮನುವಾದಿ ಸಿದ್ದಾಂತಗಳು ಕಟ್ಟಿಹಾಕಿವೆ. ಆದರೆ ಬುಡಕಟ್ಟು ಜನಾಂಗಗಳಲ್ಲಿ ಗಂಡು ಹೆಣ್ಣಿನ ಸಂಬಂಧಗಳ ನಡುವೆ ಇಂತಹ ಯಾವುದೇ ಕಟ್ಟುಪಾಡುಗಳು ಇರುವುದಿಲ್ಲ. ಗಂಡ ಹೆಂಡತಿಯರ ನಡುವೆ ಹೊಂದಾಣಿಕೆಯಾಗಿದಿದ್ದರೆ ಸಂಬಂಧವನ್ನು ಮುರಿದು ಸರಿ ಹೊಂದುವ ಬೇರೆ ಸಂಗಾತಿಯೊಂದಿಗೆ ಕೂಡಿಕೆ ಮಾಡಿಕೊಳ್ಳುವ ಜೀವಪರ ಪದ್ದತಿ ಅಲೆಮಾರಿ ಪಂಗಡಗಳಲ್ಲಿದೆ. ಮಹಿಳೆಯರ ಮೇಲೆ ನಾಗರೀಕ ಸಮಾಜ ಅನಾಗರೀಕ ಕಟ್ಟಪಾಡುಗಳನ್ನು ಹೇರಿದ್ದರೆ, ಅನಾಗರೀಕ ಸಮೂಹ ಎನ್ನಿಸಿಕೊಂಡಿರುವ ಅಲೆಮಾರಿ ಸಮುದಾಯದಲ್ಲಿ ಮಹಿಳೆಗೆ ಕನಿಷ್ಟ ಕೂಡಿಕೆ ವಿಧಾನದಲ್ಲಾದರೂ ಸಾಮಾಜಿಕ ಸಮಾನತೆ ಹಾಗೂ ಸ್ವಾತಂತ್ರ್ಯವನ್ನು ಕೊಟ್ಟಿರುವುದು ನಾಟಕದಲ್ಲಿ ಚಿತ್ರಿತವಾಗಿದೆ. ಯಾವ ಶಿಷ್ಟ ಸಮಾಜದಲ್ಲಿ ಕೂಡಿಕೆ ಅಥವಾ ಲಿವಿಂಗ್ ಟುಗೇದರ್ ಎನ್ನುವುದು ಸಂಪ್ರದಾಯ ವಿರೋಧಿಯಾಗಿದೆಯೋ ಅದು ಅಲೆಮಾರಿಗಳಲ್ಲಿ ಸಂಪ್ರದಾಯವಾಗಿದೆ. ನಿಟ್ಟಿನಲ್ಲಿ ಬುಡಕಟ್ಟು ಜನರ ಕೂಡಿಕೆ ವಿಧಾನ ಶಿಷ್ಟ ಸಮಾಜಕ್ಕೆ ಮಾದರಿಯಾಗಿದೆ. ಮಹಿಳಾಪರ ಎನ್ನಿಸುವಂತಿದೆ.

ಹಾಗಂತ ಮಹಿಳೆಯರಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ಅಲೆಮಾರಿ ಸಮಾಜ ಕೊಟ್ಟಿದೆಯಾ? ಇಲ್ಲ, ಅದು ಸಾಧ್ಯವೂ ಇಲ್ಲ. ಅಲ್ಲಿಯೂ ಸಹ ಪುರುಷಪ್ರಧಾನ ವ್ಯವಸ್ಥೆಯೇ ನಿರ್ಣಾಯಕವಾಗಿರುವುದು ಬುಡ್ಗನಾದದಲ್ಲಿ ಬಿಂಬಿತವಾಗಿದೆ. ಅವರಿಗೆ ಅವರದೇ ಆದ ಕಟ್ಟೀಮನಿ ನ್ಯಾಯ ವ್ಯವಸ್ಥೆ ಇದೆ. ಕಟ್ಟೀಮನಿಯೆಂಬ ಅಲೆಮಾರಿಗಳೇ ಮಾಡಿಕೊಂಡ ಸುಪ್ರಿಂಕೋರ್ಟ ತೀರ್ಪುಗಳನ್ನು ನೋಡಿದರೆ ಉತ್ತರ ಭಾರತದ ಖಾಪ್ ಪಂಚಾಯತಿ ತೀರ್ಮಾಣಗಳು ನೆನಪಾಗುತ್ತದೆ. ಕಟ್ಟೀಮನಿ ಬುದ್ದಿವಂತರಿಗೆ ಪ್ರೀತಿ ಪ್ರೇಮ, ಮಾನವೀಯ ಸಂಬಂಧಗಳ ಬಗ್ಗೆ ಒಂದಿಷ್ಟೂ ಒಲವಿಲ್ಲದಂತಿದ್ದು ಯಾವತ್ತೋ ಯಾರೋ ಮಾಡಿದ ಸಾಂಪ್ರದಾಯಿಕ ಕಟ್ಟುಪಾಡುಗಳನ್ನೇ ಕಾನೂನುಗಳೆಂಬಂತೆ ಪಾಲಿಸಕೊಂಡು ಬರಲಾಗಿದೆ. ಇದರಿಂದಾಗಿಯೇ ಇಷ್ಟ ಪಟ್ಟು ಮಾಡಿಕೊಂಡ ಮದುವೆಯನ್ನು ಅಮಾನ್ಯಮಾಡಲಾಗುತ್ತದೆ. ಒಂದೇ ಬೆಡಗ ಎಂದು ಗೊತ್ತಿಲ್ಲದೇ ಆದ ಕೂಡಿಕೆಯನ್ನು ರದ್ದು ಮಾಡುತ್ತದೆ. ಗರ್ಭದಲ್ಲಿರುವ ಮಗುವನ್ನು ನಿರ್ಧಾಕ್ಷಿಣ್ಯವಾಗಿ ತೆಗೆಸಲಾಗುತ್ತದೆ. ಸಾಯುವ ವ್ಯಕ್ತಿಗೆ ದೇವರ ಮುಂದಿರುವ ನೀರನ್ನು ತಂದು ಕುಡಿಸಿದ ಮಹಿಳೆಗೆ ಸೂತಕದ ನೆಪದಲ್ಲಿ ಶಿಕ್ಷೆ ವಿಧಿಸಲಾಗುತ್ತದೆ. ಬಹುಷಃ ಎಲ್ಲಾ ಕುಲದ ಪದ್ದತಿ ಹೆಸರಿನ ಸಂಪ್ರದಾಯನಿಷ್ಟ ನಿರ್ಣಯಗಳು ಮನುಕುಲ ವಿರೋಧಿ ಹಾಗೂ ಮಹಿಳಾವಿರೋಧಿಯಾಗಿವೆ. ಅಲೆಮಾರಿ ಜನಾಂಗದ ಇಂತಹ ಅಮಾನವೀಯ ನಿರ್ಣಯಗಳು ಹಾಗೂ ಮೂಢ ಆಚರಣೆಗಳು ಮತ್ತು ಮಹಿಳಾವಿರೋಧಿತನಗಳನ್ನು ನಾಟಕದ ರೂಪದಲ್ಲಿ ಬಹಿರಂಗಪಡಿಸುವುದೇ ನಾಟಕಕಾರ ಡಾ.ಬಾಲಗುರುಮೂರ್ತಿಯವರ ಆಶಯವಾಗಿದೆ. ಹಾಗೂ ಅವರ ಉದ್ದೇಶ ನಾಟಕದಲ್ಲಿ ಸಾರ್ಥಕವಾಗಿ ಮೂಡಿಬಂದಿದೆ. ಅಲೆಮಾರಿ ಸಮುದಾಯದ ಎಲ್ಲಾ ಜೀವವಿರೋಧಿ ಕುಲಪದ್ದತಿಯ ಮೌಡ್ಯ ಹಾಗೂ ಮಹಿಳಾ ಶೋಷಣೆಯ ವಿರುದ್ಧವಾಗಿ ನಾಟಕದ ನಾಯಕಿ ಮುಂಗೌರು ಬೇಸತ್ತು ಬಂಡಾಯವೆದ್ದು ಎಲ್ಲಿಯಾದರೂ ಗಟ್ಟಿಯಾಗಿ ನೆಲೆ ನಿಂತು ದುಡಿದು ಬದುಕಲು ನಿರ್ಧರಿಸಿ ಹೊರಡುತ್ತಾಳೆ. ಅವಳ ಅಂತಿಮ ನಿರ್ಣಯವನ್ನು ಕುಲದವರೆಲ್ಲಾ ಅನುಸರಿಸಿ ಜಂಗಮ ಬದುಕಿಗೆ ವಿದಾಯ ಹೇಳಿ ಸ್ಥಾವರ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಮುಂದುವರೆಯುತ್ತಾರೆ.


    
ಆತಂಕದ ಜೀವನ ಹಾಗೂ ನಿರ್ದಿಷ್ಟ ನೆಲೆಯಿಲ್ಲದ ಅಲೆಮಾರಿ ಬದುಕನ್ನು ಹಲವಾರು ತಲೆಮಾರುಗಳಿಂದ ಬದುಕುತ್ತಿರುವ ನೂರಾರು ಬುಡಕಟ್ಟು ಸಮಾಜಗಳು ಒಂದು ಕಡೆ ನೆಲೆನಿಂತು ದುಡಿದು ಬದುಕಬೇಕು. ಮೂಲಕ ಜನಾಂಗದ ಬದುಕು ಬೆಳಕಾಗಬೇಕು. ಅಲೆಮಾರಿಗಳು ಸಹ ಸಮಾಜದ ಮುಖ್ಯವಾಹಿನಿಗೆ ಸೇರಬೇಕು ಎನ್ನುವ ಸಂದೇಶವನ್ನು ಬುಡ್ಗನಾದ ನಾಟಕವು ಕೊಡಮಾಡುತ್ತದೆ. ಅಂದರೆ ಅಲೆಮಾರಿ ಬುಡಕಟ್ಟುಗಳ ಜಂಗಮ ಕಲಾವಿದರನ್ನು ಸ್ಥಾವರಗೊಳಿಸಿ ಮುಖ್ಯ ವಾಹಿನಿಗೆ ತರಬೇಕು ಹಾಗೂ ಅವರೂ ಕೂಡಾ ಎಲ್ಲರಂತೆ ನಾಗರೀಕರಾಗಿ ಬದುಕಬೇಕು ಎನ್ನುವುದು ನಾಟಕಕಾರರ ಆಶಯವಾಗಿದೆ. ನಾಗರೀಕ ಸಮಾಜದ ದೃಷ್ಟಿಕೋನದಿಂದ ನೋಡಿದರೆ ಆಶಯ ಅದ್ಬುತ ಮತ್ತು ಅಗತ್ಯವೆನಿಸುತ್ತದೆ. ಆದರೆ ಕಲೆ ಹಾಗೂ ಸಂಸ್ಕೃತಿಯ ದೃಷ್ಟಿಯಿಂದ ನೋಡಿದರೆ ಜಂಗಮರು ಸ್ಥಾವರವಾಗಬೇಕು ಎನ್ನುವುದು ಆತ್ಮಹತ್ಯಾಕಾರಿ ಎನಿಸುತ್ತದೆ. ನಾಟಕದಲ್ಲಿ ಮುಂಗಜ್ಜ ನಮ್ಮದು ಜಂಗಮ ಬದುಕು ಐತಿ, ಜೀವನ ಅನ್ನೋದು ಹೊಳೆ ಹರಿದಂಗ ಹರೀತಾ ಇರಬೇಕು, ಅದು ನಿಲ್ಲಬಾರದು. ನಿಂತರ ಕೆಸರಾಗಿ ಪಾಚಿಕಟ್ಟಿಕೊಳ್ಳತದ. ಹಂಗನ ಹರೀತಾ ಇರಬೇಕು.... ಎಂದು ಹೇಳುವ ಮಾತು ಅಲೆಮಾರಿ ಸಂಸ್ಕೃತಿಯ ಅಂತಸ್ಸತ್ವವಾಗಿದೆ. ಸಾಂಸ್ಕೃತಿಕ ಶ್ರೀಮಂತಿಕೆ ಹೊಂದಿದ ಅಲೆಮಾರಿ ಜನಾಂಗದವರ ಅಸ್ತಿತ್ವವೇ ಅವರ ಜಂಗಮತ್ವದಲ್ಲಿದೆ. ಎಲ್ಲರಂತೆ ಜನಾಂಗವೂ ಸಹ ಒಂದು ಕಡೆ ನೆಲೆನಿಂತು ನಾಟಕದ ಆಶಯದಂತೆ ಬದುಕಿಗಾಗಿ ಯಾವುಯಾವುದೋ ವೃತ್ತಿಯನ್ನು ಕೈಗೊಂಡರೆ ಅವರಲ್ಲಿರುವ ಕಲೆ, ಮೌಖಿಕ ಸಾಹಿತ್ಯ, ಸಂಸ್ಕೃತಿ ಸಾವಕಾಶವಾಗಿ ನಾಶವಾಗುತ್ತದೆ. ಕಲಾವಿದರು, ಹಾಡುಗಾರರು, ಕಥೆಗಾರರು ವೇಷಗಾರರು ಮುಖ್ಯವಾಹಿನಿಯ ಬದುಕಿನ ದಾವಂತಗಳಲ್ಲಿ ತಮ್ಮ ಮೂಲ ಐಡೆಂಟಿಟಿಯನ್ನು ಕಳೆದುಕೊಂಡು ಜನಸಾಮಾನ್ಯರಾಗುವುದರಲ್ಲಿ ಸಂದೇಹವಿಲ್ಲ.

ಹಾಗಂತ ಅಲೆಮಾರಿ ಸಮಾಜ ಹೀಗೆಯಾ ಅತಂತ್ರವಾಗಿ, ಅನಕ್ಷರರಾಗಿ, ಎಲ್ಲಾ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಬೇಕೆ ಎನ್ನುವ ಪ್ರಶ್ನೆ ಹುಟ್ಟುತ್ತದೆ. ಸಮುದಾಯಕ್ಕೆ ಎಲ್ಲಾ ಸೌಕರ್ಯಗಳೂ ಬೇಕು. ಅವರ ಕಲೆ ಸಂಸ್ಕೃತಿಯನ್ನು ಉಳಿಸಿಕೊಂಡೇ ಅವರು ನೆಮ್ಮದಿಯಾಗಿ ಬದುಕುವಂತಹ ವಾತಾವರಣವನ್ನು ಶಿಷ್ಟ ಸಮಾಜ ಹಾಗೂ ಸರಕಾರ ನಿರ್ಮಿಸಬೇಕಿದೆ. ಇವರನ್ನು ಅಲೆಮಾರಿ ಸಾಂಸ್ಕೃತಿಕ ಹರಿಕಾರರೆಂದೇ ಗುರುತಿಸಿ ಅವರಿಗೆ ಅಲೆಮಾರಿ ರೇಶನ್ ಕಾರ್ಡ, ಓಟರ್ ಕಾರ್ಡ ಮುಂತಾದ ಮೂಲಭೂತ ಸೌಕರ್ಯಗಳನ್ನು  ಒದಗಿಸಬೇಕು. ಅವರು ಎಲ್ಲಿ ಯಾವುರಲ್ಲಿ ಇರುತ್ತಾರೋ ಅಲ್ಲಿಯೇ ಇವುಗಳನ್ನೆಲ್ಲಾ ಬಳಸಿ ಸರಕಾರಿ ಸವಲತ್ತುಗಳನ್ನು ಪಡೆಯಲು ಅನುಕೂಲಮಾಡಿಕೊಡಬೇಕು. ಅವರ ಪಂಗಡದಲ್ಲಿರುವ ಅಕ್ಷರಸ್ತನೊಬ್ಬನನ್ನು ಅಲ್ಲಿರುವ ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸಲು ಸರಕಾರವೇ ನಿಯಮಿಸಬೇಕು. ಮಕ್ಕಳು ಯಾವುದೇ ಶಾಲೆಗೆ ಹೋಗದೇ ತಾವಿದ್ದಲ್ಲೆ ವಿದ್ಯೆಯನ್ನು ಕಲಿತು ಬೆಳೆಯಬೇಕು. ಅಧೀಕೃತ ಪರೀಕ್ಷೆಗಳಿಗೆ ಮಾತ್ರ ಹಾಜರಾಗಿ ಪದವಿ ಪಡೆಯುವಂತಾಗಬೇಕು. ಅಲೆಮಾರಿ ಸಮುದಾಯದವರ ಬದುಕಿಗೆ ಭದ್ರತೆಯನ್ನೂ, ಕಲೆಗೆ ಹೆಚ್ಚು ಪ್ರೋತ್ಸಾಹವನ್ನು, ಅನುದಾನವನ್ನು, ಅನುಕೂಲತೆಗಳನ್ನು ಕೊಟ್ಟು ಕಾಪಾಡಿಕೊಳ್ಳಲು ಸರಕಾರದ ಮೇಲೆ ಜನಪರ ಸಂಘಟನೆಗಳು ಒತ್ತಾಯಹೇರಬೇಕು. ಇಂತಹ ಆಶಯ ನಾಟಕ ಕೊನೆಯಲ್ಲಿ ಬಂದಿದ್ದರೆ ಇಡೀ ನಾಟಕಕ್ಕೆ ಒಂದು ತಾರ್ಕಿಕ ಅಂತ್ಯ ಕೊಟ್ಟಂತಾಗುತ್ತಿತ್ತು ಹಾಗೂ ಸರಕಾರಕ್ಕೆ ಪರೋಕ್ಷವಾಗಿ ತಿಳಿಹೇಳಬಹುದಾಗಿತ್ತು. ಆದರೆ ಆಶಯಕ್ಕೆ ವಿರುದ್ಧವಾಗಿ ಜಂಗಮ ಕಲಾವಿದರನ್ನು ಮುಖ್ಯವಾಹಿನಿಯ ಕೂಲಿ ಕಾರ್ಮಿಕರನ್ನಾಗಿ ಮಾಡುವ ನಾಟಕದ ಉದ್ದೇಶ ಕಲಾವಿರೋಧಿಯಾಗಿದೆ, ಸ್ವತಂತ್ರವಾಗಿರುವ ಸಮುದಾಯಗಳನ್ನು ನಾಗರೀಕರನ್ನಾಗಿಸಿ ಪರಾತಂತ್ರಗೊಳಿಸುವ ಹುನ್ನಾರವಾಗಿದೆ.



ಅಚ್ಚರಿ ಎಂದರೆ ನಾಟಕದಲ್ಲಿ ಪುರುಷ ಪ್ರಧಾನ ವ್ಯವಸ್ಥೆಯ ಕುಲಮೌಡ್ಯಗಳಿಗೆ ಬಲಿಪಶುವಾದ ಮುಂಗೌರಿ ಕಟ್ಟಿಮನಿ ಎನ್ನುವ ಖಾಪ್ ಪಂಚಾಯತಿಯ ವಿರುದ್ಧ ತಿರುಗಿ ಬೀಳಬೇಕಿತ್ತು. ಸಂಪ್ರದಾಯದ ಹೆಸರಲ್ಲಿ ಮಹಿಳೆಯರನ್ನು ಶೋಷಿಸುತ್ತಿರುವ ಅಲೆಮಾರಿ ಪುರೋಹಿತಶಾಹಿ ವ್ಯವಸ್ಥೆಯ ವಿರುದ್ಧ ಬಂಡೇಳಬೇಕಾಗಿತ್ತು. ಇಲ್ಲವೇ ತನಗಾದ ಅನ್ಯಾಯ ಬೇರೆ ಮಹಿಳೆಯರಿಗೆ ಆಗದಿರಲಿ ಎಂದು ಹೋರಾಡಬಹುದಾಗಿತ್ತು. ಆದರೆ ಶೋಷಿತ ಮಹಿಳೆ ಇವೆಲ್ಲವನ್ನೂ ಬಿಟ್ಟು ಅಲೆಮಾರಿ ಜನಾಂಗವು ಜಂಗಮ ಬದುಕು ಬಿಟ್ಟು ಒಂದು ಕಡೆ ನೆಲೆನಿಂತು ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳುವುದು ಪಾತ್ರಕ್ಕೆ ಮೀರಿದ ಮಾತಾಗಿದೆ. ಇಲ್ಲವೇ ನಿರ್ದೇಶಕ ಪಾತ್ರದ ಮೂಲಕ ತನ್ನ ನಾಗರೀಕ ಆಲೋಚನೆಗಳನ್ನು ಹೇಳಿಸಿದಂತಿದೆ. ನಡೆ ಅತಾರ್ಕಿಕವೆನ್ನಿಸುತ್ತದೆ. ಆದರೆ ಕೊನೆಗೆ ಎಲ್ಲರೂ ಆಕೆಯ ಹಿಂದೆ ಸ್ಥಾವರ ನೆಲೆ ಕಟ್ಟಿಕೊಳ್ಳಲು ಹೋಗುತ್ತಾರೆ, ಇನ್ನೂ ವಿಚಿತ್ರವೆಂದರೆ ಜೀವವಿರೋಧಿ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದ್ದ ಕಟ್ಟೀಮನಿಯ ಬುದ್ದಿವಂತರೂ ಸಹ ಅವಳನ್ನು ಅನುಸರಿಸುತ್ತಾರೆ. ಇಲ್ಲಿಗೆ ಜನಾಂಗ ಮುಂಗೌರಿಯ ಆಸೆಯಂತೆ (ನಿರ್ದೇಶಕರ ಉದ್ದೇಶದಂತೆ) ನೆಲೆ ನಿಂತರೂ ಸಹ ಪುರುಷಪ್ರಧಾನ ಪುರೋಹಿತಶಾಹಿಗಳಿಂದ ಮುಕ್ತಿಹೊಂದಲು ಅಸಾಧ್ಯವೆನ್ನುವುದನ್ನು ನಾಟಕ ಪರೋಕ್ಷವಾಗಿ ಹೇಳುತ್ತದೆ. ಲೇಖಕರಿಗೆ ಹಾಗೂ ನಿರ್ದೇಶಕರಿಗೆ ಅಲೆಮಾರಿ ಜನಾಂಗದ ಮೌಡ್ಯಗಳನ್ನು ನಿವಾರಿಸುವುದಕ್ಕಿಂತಲೂ ಅವರನ್ನು ನಾಗರೀಕ ಪ್ರಪಂಚದ ಭಾಗವನ್ನಾಗಿ ಮಾಡುವ ದಾವಂತ ನಾಟಕದಲ್ಲಿ ಕಂಡುಬರುತ್ತದೆ. ಅಲೆಮಾರಿ ಜನಾಂಗದ ಕಲೆ ಸಂಸ್ಕೃತಿಯನ್ನು ಕಾಪಾಡುವುದಕ್ಕಿಂತಲೂ ಜನಸಮುದಾಯವನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ನಾಟಕದಲ್ಲಿ ಸ್ಪಷ್ಟವಾಗಿ ಬಿಂಬಿತವಾಗಿದೆ.

ನಾಟಕದ ವಸ್ತು ವಿಷಯದ ತಾರ್ಕಿಕತೆಯನ್ನು ಬದಿಗಿಟ್ಟು ನಿರ್ದೇಶಕರು ನಾಟಕವನ್ನು ಕಟ್ಟಿಕೊಟ್ಟ ರೀತಿಯನ್ನು ಗಮನಿಸಿದರೆ ನಿಜಕ್ಕೂ ಸೊಗಸಾಗಿದೆ. ೨೫ಕ್ಕೂ ಹೆಚ್ಚು ಕಲಾವಿದರನ್ನು ಬಳಸಿ, ಬಣ್ಣ ಬಣ್ಣದ ವೇಷಗಳನ್ನು ತೊಡಿಸಿ ದೃಶ್ಯವೈಭವವನ್ನು ಕಟ್ಟಿಕೊಡಲಾಗಿದೆ. ಅಭಿನಯ, ನೃತ್ಯ, ಸಂಗೀತ, ಕಾಸ್ಟೂಮ್ ಹಾಗೂ ಬೆಳಕು ವಿನ್ಯಾಸಗಳು  ಪ್ರೇಕ್ಷಕರನ್ನು ನಾಟಕದಾದ್ಯಂತ ಹಿಡಿದಿಡುವುದರಲ್ಲಿ ಸಫಲವಾಗಿವೆ. ರಂಗಸ್ಥಳವನ್ನು ಎರಡು ಲೇವಲ್ಗಳಲ್ಲಿ ವಿಂಗಡಿಸಿ ಅಲೆಮಾರಿ ಜನಾಂಗದ ಚಲನೆಯ ನಿರಂತರತೆಯನ್ನು ತೋರಿಸಲಾಗಿದೆ. ಖಾಲಿ ವೇದಿಕೆಯನ್ನು ನಟರು ತುಂಬಿಸಿ ಹರಡಿಕೊಳ್ಳುವುದರ ಜೊತೆಗೆ ಅಲೆಮಾರಿ ಸಂಸ್ಕೃತಿಯನ್ನು ರಂಗವೇದಿಕೆಯ ಮೇಲೆ ಚಿತ್ರಿಸುವ ರೀತಿಯನ್ನು ನೋಡಿಯೇ ಸವಿಯಬೇಕು.

ರಾಮಕೃಷ್ಣ ಬೆಳ್ತೂರರ ಪ್ರಸಾಧನ ಹಾಗೂ ವಸ್ತ್ರವಿನ್ಯಾಸ ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡುವಂತಿದೆ. ಕೆಲವಾರು ಅಲೆಮಾರಿ ಜನಾಂಗದ ಕಲರ್ಪುಲ್ ವೇಷಗಳನ್ನು ಒಂದೇ ವೇದಿಕೆಯ ಮೇಲೆ ನೋಡಿ ಆನಂದಿಸಬಹುದಾಗಿದೆ. ಕಲೆ ಮತ್ತು ಸಂಸ್ಕೃತಿ ಎನ್ನುವುದು ನಾಗರೀಕರಿಗೆ ಬದುಕಿನ ಭಾಗವಾದರೆ ಅಲೆಮಾರಿಗಳಿಗೆ ಅದೇ ಬದುಕಾಗಿರುವ ಪರಿಯನ್ನು ನಾಟಕದಲ್ಲಿ ಪಾತ್ರಗಳ ವೇಷ ಹಾಗೂ ಭಾಷೆಗಳ ಮೂಲಕ ಅರಿಯಬಹುದಾಗಿದೆ. ನಾಟಕದಾದ್ಯಂತ ಸಂಚಲನವನ್ನು ಸೃಷ್ಟಿಸಿದ್ದು ರಾಜಪ್ಪ ಕೋಲಾರರವರು ಸಂಯೋಜಿಸಿದ ಸಂಗೀತ ಮತ್ತು ಹಾಡುಗಳು. ಬುರ್ರಕಥೆ, ಗಂಗೆ ಗೌರಿ ಕಥೆ, ಕೊಂಡಮಾಮನ ಹಾಡು, ಕೈವಾರ ತಾತಯ್ಯನವರ ಪದಗಳು, ಜನಪದ ಹಾಡುಗಳು... ಹೀಗೆ ವೈವಿದ್ಯಮಯ ಹಾಡುಗಳನ್ನು ನಾಟಕದಲ್ಲಿ ಬಳಸಲಾಗಿದ್ದು ಹೆಚ್ಚು ಕಡಿಮೆ ಇಡೀ ನಾಟಕವೇ ಸಂಗೀತ ಪ್ರಧಾನ ನಾಟಕವಾಗಿದೆ. ಮಂಜು ನಾರಾಯಣರವರ ಬೆಳಕಿನ ವಿನ್ಯಾಸ ಅಚ್ಚರಿ ಹುಟ್ಟಿಸುವಷ್ಟು ಸೊಗಸಾಗಿದೆ. ಕೆಲವೊಮ್ಮೆ ಬೆಳಕಿಗಿಂತ ನೆರಳನ್ನು ಬಳಸಿರುವುದು ದೃಶ್ಯಗಳಿಗೆ ಕಲಾತ್ಮಕ ಸ್ಪರ್ಷ ನೀಡಿದಂತಿದೆ. ಸೈಕ್ ಬಳಕೆ ಒಂದಿಷ್ಟು ಅತೀ ಎನ್ನಿಸಿದರೂ ದೃಶ್ಯಗಳಿಗೆ ಮಾಂತ್ರಿಕತೆಯನ್ನು ತಂದುಕೊಟ್ಟಿದೆ.


ಅಭಿನಯ ವಿಭಾಗದಲ್ಲೂ ಸಹ ಯುವ ನಟ ನಟಿಯರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಅಭಿನಯಿಸಿ ನಾಟಕಕ್ಕೆ ಕಳೆ ತಂದುಕೊಟ್ಟಿದ್ದಾರೆ. ನಾಟಕದಲ್ಲಿ ಅಭಿನಯಿಸಿದವರೆಲ್ಲಾ ನಾಗರೀಕ ಪ್ರಪಂಚದ ವ್ಯಕ್ತಿಗಳಾದರೂ ನಾಟಕದಲ್ಲಿ ಎಲ್ಲರೂ ನಟನೆ, ಭಾಷೆ ಹಾಗೂ ವೇಷಗಳಿಂದಾಗಿ ಅಲೆಮಾರಿ ಸಮುದಾಯದವರೇ ಆಗಿದ್ದು ನಾಟಕಕ್ಕೆ ನೈಜತೆಯನ್ನು ತಂದುಕೊಟ್ಟಿದೆ. ಮುಂಗೌರು ಪಾತ್ರಕ್ಕೆ ಜೀವತುಂಬಿ ನಯನ ಸೂಡ ಅಭಿನಯಿಸಿದ್ದು ನೃತ್ಯದಲ್ಲೂ ಸಹ ಸೈ ಎನ್ನಿಸಿಕೊಂಡರು. ಮುಂಗಜ್ಜನಾಗಿ ಜಗಧೀಶ ಕೆಂಗನಾಳ ನಟನೆ ಹಾಗೂ ಸಂಭಾಷಣೆ ಪಾತ್ರಕ್ಕೆ ಹೇಳಿಮಾಡಿಸಿದಂತಿದೆ. ರಾತಗುದ್ಧ ಪಾತ್ರದ ನಾಗೇಶ್, ಬುದ್ದಿವಂತನ ಪಾತ್ರದಲ್ಲಿ ಸಿದ್ದೇಶ, ಕೊಂಡಪಲ್ಲಿ ಯಾಮನ್ನ ಪಾತ್ರದ ಚಲಪತಿ, ಪಿತ್ಲ ಪಾತ್ರದ ಮಹೇಶ್... ಮುಂತಾದವರು ತಮ್ಮ ಪಾತ್ರಗಳಿಗೆ ನ್ಯಾಯವದಗಿಸಿದರು. ಮುರಂಡಿ ಗುರುವ ಪಾತ್ರದ ಶಿವಕುಮಾರ್ ರವರ ನಟನೆಯಲ್ಲಿ ಇನ್ನೂ ಪೋರ್ಸ ಬೇಕಾಗಿತ್ತು. ಸೇದಕ್ಕಳಾಗಿ ಶ್ಯಾಮಲ ಹಾಗೂ ಹೆಂಗಸಾಗಿ ಕಲಾವತಿ ಇಬ್ಬರೂ ಪುಟ್ಟ ಪಾತ್ರದಲ್ಲೂ ಗಮನ ಸೆಳೆವಂತೆ ನಟಿಸಿದರು. ಕಟ್ಟೀಮನಿ ಮುಖಂಡರುಗಳು ಯಾಕೋ ನಟನೆಯಲ್ಲಿ ದುರ್ಬಲ ಎನ್ನಿಸಿದರು. ಅವರ ಮಾತುಗಳಲ್ಲಿ ಇನ್ನೂ ಅಧಿಕಾರಯುತವಾದ ಪೋರ್ಸ ಇರಬೇಕಾಗಿತ್ತು. ನೆಟ್ಟಗೆ ನಿಲ್ಲದೇ ಕೂತಲ್ಲಿ ಕೂರದೇ ಒಂದುಷ್ಟು ನಟನೆಯನ್ನೂ ಮಾಡಬೇಕಾಗಿತ್ತು. ಒಟ್ಟಾರೆಯಾಗಿ ಗಮನಿಸಿದರೆ ಅಭಿನಯ ವಿಭಾಗ ಗಮನಾರ್ಹವಾಗಿದ್ದು ನಾಟಕವನ್ನು ಯಶಸ್ಸಿನತ್ತ ಕೊಂಡೊಯ್ದಿತು.

ನಾಟಕದ ಇನ್ನೊಂದು ವೈಶಿಷ್ಟ್ಯತೆ ಇರುವುದು ಸಂಭಾಷಣೆಯನ್ನು ಕಟ್ಟಿದ ರೀತಿಯಲ್ಲಿ. ಅದರಲ್ಲೂ ಅಲೆಮಾರಿ ಜನಾಂಗದ ಗಾದೆ ಮಾತುಗಳನ್ನೇ ಬಳಸಿಕೊಂಡು ಮಾತುಗಳನ್ನು ಪಾತ್ರಗಳು ಹೇಳುವುದನ್ನು ಕೇಳುವುದೇ ಒಂದು ರೀತಿಯ ಸೊಗಸು. ಒಟ್ಟಾರೆಯಾಗಿ ಬುಡ್ಗನಾದ ನಾಟಕ ಆಧುನಿಕ ಕನ್ನಡ ರಂಗಭೂಮಿಯಲ್ಲಿ ಮೈಲುಗಲ್ಲಾಗುವಂತಹ ಗಮನಾರ್ಹ ಪ್ರಯೋಗವಾಗಿದೆ.


ಬುಡ್ಗನಾದ ನಾಟಕದ ವಿಶೇಷತೆ ಏನೆಂದರೆ ಇದು ಕನ್ನಡ ರಂಗಭೂಮಿಯ ಇತಿಹಾಸದಲ್ಲಿ ಅಲೆಮಾರಿ ಬುಡಕಟ್ಟು ಕುರಿತ ಮೊಟ್ಟಮೊದಲ ಸಾಂಸ್ಕೃತಿಕ ದೃಶ್ಯಕಾವ್ಯ. ಪ್ರಸ್ತುತ ನಮ್ಮ ದೇಶದಲ್ಲಿ ಇರುವ ಹತ್ತು ಕೋಟಿಗೂ ಹೆಚ್ಚು ಅಲೆಮಾರಿ ಸಮುದಾಯದ ಸಾಂಕೇತಿಕ ಸಾಕ್ಷೀಭೂತವಾಗಿ ನಾಟಕ ಚಿತ್ರಿತವಾಗಿದೆ. ಇನ್ನೊಂದು ವಿಶೇಷತೆ ಏನೆಂದರೆ, ಇದೇ ಅನಕ್ಷರಸ್ತ ಅಲೆಮಾರಿ ಸಮುದಾಯದಲ್ಲೇ ಹುಟ್ಟಿ  ಬೆಳೆದು ಅಕ್ಷರ ಕಲಿತು ಸ್ನಾತಕ ಪದವಿ ಪಡೆದು ಈಗ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ ಮಾಡುತ್ತಿರುವ ಕಥೆಗಾರ ಡಾ.ಬಾಲಗುರುಮೂರ್ತಿರವರು ತಮ್ಮ ಜನಾಂಗದ ಬದುಕು ಬವನೆ ಸಂಸ್ಕೃತಿಯನ್ನು ತಮ್ಮ ಗಾಢವಾದ ಅನುಭವದ ಹಿನ್ನೆಲೆಯಲ್ಲಿ ನಾಟಕ ರೂಪದಲ್ಲಿ ಹಿಡಿದಿಟ್ಟಿದ್ದಾರೆ. ಇದರಿಂದಾಗಿ ನಾಟಕಕ್ಕೆ ಸ್ವಂತಿಕೆ ಬಂದಿದೆ. ಅಸ್ಮಿತೆ ತಂದಿದೆ. ನಾಗರೀಕ ಜಗತ್ತಿನ ನೇಪತ್ಯದಲ್ಲಿದ್ದುಕೊಂಡೇ ಜಾನಪದ ಮೌಖಿಕ ಕಲೆ-ಕಾವ್ಯಪರಂಪರೆಯನ್ನು ತಲೆಮಾರುಗಳಿಂದ ತಲೆಮಾರಿಗೆ ಉಳಿಸಿ ಬೆಳೆಸಿಕೊಂಡು ಬಂದವರು ಅಲೆಮಾರಿ ಕಲಾವಿದರು. ಬುಡ್ಗನಾದ ನಾಟಕದ ಮೂಲಕ ಅಲೆಮಾರಿಗಳ ಬದುಕಿನ ವಿವಿಧ ಆಯಾಮಗಳನ್ನು ಕಟ್ಟಿಕೊಡಲಾಗಿದೆ. ಮುಖ್ಯವಾಹಿನಿಯ ಜನತೆಗೆ ಅಲೆಮಾರಿ ತಳಸಮುದಾಯದ ಜಗತ್ತನ್ನು ನಾಟಕದ ಮೂಲಕ ತೆರೆದು ತೋರಿಸುವ ಹಾಗೂ ನಮ್ಮ ಸಾಂಸ್ಕೃತಿಕ ವೈವಿದ್ಯತೆ ಹಾಗೂ ಅಗಾಧತೆಯನ್ನು ಅನಾವರಣಗೊಳಿಸುವ ಒಂದು ಸಾರ್ಥಕ ಪ್ರಯತ್ನ ನಾಟಕದಲ್ಲಿದೆ.

                            -ಶಶಿಕಾಂತ ಯಡಹಳ್ಳಿ