ಮಂಗಳವಾರ, ಜೂನ್ 6, 2017

ರಂಗಭೂಮಿಗೊಂದು ಆಘಾತ; ಸರಕಾರಿ ನೌಕರರಿಗೆ ಮರ್ಮಾಘಾತ :




ಕನ್ನಡ ರಂಗಭೂಮಿಗೆ ಆಘಾತಕಾರಿ ಸುದ್ದಿಯೊಂದು ಅಪ್ಪಳಿಸಿದೆ. ಇನ್ಮೇಲೆ ಸರಕಾರಿ ನೌಕರರು ಸಿನೆಮಾ ನಾಟಕಗಳ ಚಟುವಟಿಕೆಗಳಲ್ಲಿ ಭಾಗವಹಿಸಕೂಡದು ಎಂದು ಸರಕಾರಿ ಇಲಾಖೆ ಆಜ್ಞೆ ಮಾಡಲು ಸಿದ್ದವಾಗಿದೆಯಂತೆ. ಹಾಗೇನಾದರೂ ಅಪ್ಪೀ ತಪ್ಪೀ ಭಾಗವಹಿಸಿದ್ದು ಮೇಲಾಧಿಕಾರಿಗಳ ಗಮನಕ್ಕೆ ಬಂದರೆ ಎರಡು ವಾರ್ಷಿಕ ವೇತನ ಬಡ್ತಿಯನ್ನು ತಡೆಹಿಡಿದು ಶಿಕ್ಷಿಸಲಾಗುವುದಂತೆ. ಇದೆಂತಾ ತುಘಲಕ್ ಸರಕಾರವಿದು. ದೇಸಿ ಸಂಸ್ಕೃತಿ ಉಳಿದರೆ ಭಾಷೆ ಉಳಿಯುತ್ತದೆ. ಭಾಷೆ ಉಳಿದರೆ ಕನ್ನಡ ನಾಡು ಉಳಿಯುತ್ತೆ.. ನಾಡು ಉಳಿದರೆ ಕನ್ನಡಿಗರು ಸ್ವಾಭಿಮಾನದಿಂದ ಬದುಕುವಂತಾ ವಾತಾವರಣ ಇರುತ್ತೆ ಎನ್ನುವ ಕನಿಷ್ಟ ಪರಿಜ್ಞಾನವಾದರೂ ಈ ರೂಲ್ಸನ್ನು ಮಾಡಿದವರಿಗೆ ಇರಬೇಕಿತ್ತು. ಇಲ್ಲವೆನ್ನುವುದೇ ಕನ್ನಡಿಗರ ದೊಡ್ಡ ದುರಂತ. 

ಸರಕಾರಿ ನೌಕರರನ್ನು ವೃತ್ತಿಪರರನ್ನಾಗಿಸಲು, ಲಂಚ ರುಷುವತ್ತು ಬ್ರಷ್ಟಾಚಾರಗಳಿಂದ ದೂರವಿರುವಂತೆ ಮಾಡಲು ಹಾಗೂ ಸಮಯ ಪ್ರಜ್ಞೆ ಮತ್ತು ಜನಪರ ನಿಷ್ಟೆಗಳನ್ನು ಬೆಳೆಸಲು ಕೆಲವಾರು ನಿಬಂಧನೆಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಸರಕಾರಿ ನೌಕರರಿಗೆ ವಿಧಿಸಿದೆ. ಸರಕಾರಿ ಹಣ ದುರ್ಬಳಕೆ ಮಾಡಿಕೊಂಡವರಿಗೆ, ವರದಕ್ಷಿಣೆ ತೆಗೆದುಕೊಂಡವರಿಗೆ, ಲೈಂಗಿಕ ಕಿರುಕುಳ ನೀಡಿದವರಿಗೆ, ಅಷ್ಟೇ ಯಾಕೆ ಎರಡನೇ ಮದುವೆ ಆದವರಿಗೆ.. ಹೀಗೆ 23 ಅಪರಾಧಗಳಿಗೆ ಕಡ್ಡಾಯ ನಿವೃತ್ತಿ, ವಜಾ, ಹಿಂಬಡ್ತಿ ಹಾಗೂ ವಾರ್ಷಿಕ ವೇತನ ಬಡ್ತಿ ತಡೆಯಂತಹ ತರಾವಾರಿ ಶಿಕ್ಷೆಗಳನ್ನು ವಿಧಿಸಿ ಪರಿಷ್ಕೃತ ನಿಯಮಾವಳಿಗಳನ್ನು ಜಾರಿ ಮಾಡಲಾಗಿದೆ. ಇದ್ಯಾವುದಕ್ಕೂ ಯಾರ ವಿರೋಧಗಳಿಲ್ಲಾ. ಆದರೆ.. ಈ 23 ಅಪರಾಧಗಳ ಪಟ್ಟಿಯಲ್ಲಿ ಸರಕಾರದ ಇಲಾಖೆ ಗುರುತಿಸಿದ ಕೆಲವು ನಿಯಮಗಳು ಮಾತ್ರ ತುಂಬಾನೇ ಅಪಾಯಕಾರಿಯಾದ ಅಂಶಗಳಾಗಿದ್ದು  ಉದ್ದೇಶಪೂರ್ವಕವಾಗಿಯೇ ಸೇರಿಸಲಾಗಿದೆ. ಈಗಾಗಲೇ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಎಲ್ಲಾ ಸರಕಾರಿ ಇಲಾಖೆಗಳಿಗೆ ಸುತ್ತೋಲೆ ಹೊರಡಿಸಲು ತಯಾರಿ ಮಾಡಿಕೊಂಡಿದೆ.


ಮೊದಲನೆಯದಾಗಿ ಯಾವುದೇ ಸರಕಾರಿ ನೌಕರರು ಸರಕಾರವನ್ನು ಯಾವುದೇ ಕಾರಣಕ್ಕೂ ಟೀಕಿಸಕೂಡದು, ಪತ್ರಿಕೆಯಲ್ಲಿ ಬರೆಯಕೂಡದು, ಆಕಾಶವಾಣಿ ದೂರದರ್ಶನ ಮೊದಲಾದ ಮಾಧ್ಯಮಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಕೂಡದು ಎಂಬುದಾಗಿದೆ. ಹಾಗೇನಾದರೂ ಮಾಡಿದರೆ ಕನಿಷ್ಟ ಪಕ್ಷ ಎರಡು ವಾರ್ಷಿಕ ವೇತನ ಬಡ್ತಿ ಬರಕಾಸ್ತಾಗುತ್ತದೆ. ಇಂತಹ ಆರ್ಡರನ್ನು ಪ್ಯಾಸಿಸ್ಟ್ ಸರಕಾರ ಮಾಡಲು ಮಾತ್ರ ಸಾಧ್ಯ. ಇದು ನಿಜಕ್ಕೂ ಸಂವಿಧಾನ ವಿರೋಧಿ ನಿಯಮ. ಯಾಕೆಂದರೆ ಈ ದೇಶದ ಪ್ರತಿಯೊಬ್ಬ ಪ್ರಜೆಗೂ ಅಭಿವ್ಯಕ್ತಿ ಸ್ವಾತಂತ್ರವನ್ನು ನಮ್ಮ ಸಂವಿಧಾನ ಕೊಟ್ಟಿದೆ. ಎಲ್ಲಾ ನೌಕರರೂ ಮೊದಲು ಈ ದೇಶದ ಪ್ರಜೆಗಳಾಗಿದ್ದು ಆಮೇಲೆ ನೌಕರರು. ಪ್ರಜೆಗಳು ನೌಕರರಾದ ತಕ್ಷಣ ಮೂಲಭೂತ ಸಾಂವಿಧಾನಿಕ ಹಕ್ಕಿನಿಂದ ಅವರನ್ನು ಹೇಗೆ ವಂಚಿತರಾಗಲು ಸಾಧ್ಯ? ಹಿಂದಿನ ಸರಕಾರವೋ,  ಯಾವುದೇ ಸರಕಾರ ಜನವಿರೋಧಿ ನಿರ್ಣಯಗಳನ್ನು ಜಾರಿ ಮಾಡಿದರೆ ಅದರ ವಿರುದ್ದ ದ್ವನಿ ಎತ್ತುವುದು ಹಾಗೂ ಆಡಳಿತದ ತಪ್ಪು ಹೆಜ್ಜೆಗಳನ್ನು ಪ್ರಶ್ನಿಸುವ ಹಕ್ಕು ಈ ದೇಶದ ಪ್ರತಿಯೊಬ್ಬ ಪ್ರಜೆಗೂ ಇದೆ. ಅದಕ್ಕಾಗಿಯೇ ಸರಕಾರಿ ನೌಕರರ ಸಂಘಟನೆಗಳೂ ಇವೆ. ಈಗ ಸರಕಾರಿ ನೌಕರರ ವಾಕ್ ಸ್ವಾತಂತ್ರವನ್ನೇ ಕಿತ್ತುಕೊಂಡು ಅವರನ್ನು ಕೇವಲ ದುಡಿಯುವ ಯಂತ್ರಗಳನ್ನಾಗಿ ಮಾಡುವ ಹುನ್ನಾರ ಮೊದಲಿನಿಂದಲೂ ಸರಕಾರಿ ನಿಯಮಗಳ ರೂಪದಲ್ಲಿದೆ.  ಓಟ್ ಹಾಕಲು ಮಾತ್ರ ಸರಕಾರಿ ನೌಕರರು ಬೇಕು.. ಓಟ್ ಪಡೆದು ಜನವಿರೋಧಿ ಆಡಳಿತವನ್ನು ಕೊಡುವ ಸರಕಾರವನ್ನು ಟೀಕಿಸುವುದನ್ನು ಮಾತ್ರ ಮಾಡಬಾರದು ಅಂದರೆ ಸ್ವಾತಂತ್ರ್ಯದ ನಂತರ ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೋ ಇಲ್ಲಾ ಪ್ಯಾಸಿಸ್ಟ್ ಆಡಳಿತದಲ್ಲಿದ್ದೇವೋ? ಕರ್ನಾಟಕದ ಪ್ರತಿಯೊಬ್ಬ ಸರಕಾರಿ ನೌಕರ ಹಾಗೂ ಆ ನೌಕರರ ಸಂಘಟನೆಗಳು ಮೊದಲು ಕೆಸಿಎಸ್ (ನಡತೆ) 1966ರ ಸೇವಾ ನಿಯಮಗಳನ್ನು  ಶತಾಯ ಗತಾಯ ವಿರೋಧಿಸಿ ತಮ್ಮ ಸಾಂವಿಧಾನಿಕ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಹೋರಾಡಲೇಬೇಕು. ಅಷ್ಟೇ ಯಾಕೆ ಎಲ್ಲಾ ಜನಪರ, ಪ್ರಗತಿಪರ, ಎಡಪಂಥೀಯ, ದಲಿತ, ರೈತ ಹಾಗೂ ಮಹಿಳಾ ಸಂಘಟನೆಗಳೂ ಸಹ ಸೇವಾನಿಯಮಗಳಲ್ಲಿರುವ ಅಘಾತಕಾರಿ ಅಂಶದ ವಿರುದ್ದ ಚಳುವಳಿಯನ್ನು ಹಮ್ಮಿಕೊಂಡು ಆಳುವ ವರ್ಗಗಳ ಮೈಚಳಿ ಬಿಡಿಸಬೇಕಿದೆ. ಹಾಗೂ ಸರಕಾರವನ್ನು ಟೀಕಿಸಲೇಬಾರದು ಎನ್ನುವ ಜನವಿರೋಧಿ ನಿಯಮದ ಪರವಾಗಿ ಈಗಿನ ಸರಕಾರವೂ ಬೆಂಬಲವಾಗಿದ್ದರೆ ಸರಕಾರದ ವಿರುದ್ದವೆ ಜನಾಲೊಂದನ ರೂಪಿಸಿ ಸರಕಾರಿ ನೌಕರರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಬೇಕಿದೆ. ಹಾಗೂ ಇದು ಪ್ರಜ್ಞಾವಂತರಾದ ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದೆ. ಈ ಮೊದಲಿಂದಾನೇ ಈ ನಿಬಂಧನೆ ಇತ್ತಲ್ಲಾ ಎಂದು ಉದಾಸೀನ ಮಾಡುವ ಬದಲು ಸರಕಾರಿ ನೌಕರರ ಅಭಿವ್ಯಕ್ತಿ  ಸ್ವಾತಂತ್ರವನ್ನು ದಮನ ಮಾಡುವ ನಿಬಂಧನೆಯನ್ನು ತೆರವು ಗೊಳಿಸಲು ಸರಕಾರವನ್ನು ಒತ್ತಾಯಿಸಬೇಕಿದೆ.
 
ಎರಡನೆಯದಾಗಿ, ಸರಕಾರಿ ನೌಕರರು ಸಿನೆಮಾ ನಾಟಕಗಳ ಚಟುವಟಿಕೆಗಳಲ್ಲಿ ಭಾಗವಹಿಸಬಾರದು, ಅದರಲ್ಲೂ ಸರಕಾರದ ಸೂಚನೆಗಳಿಗೆ ವಿರುದ್ಧವಾಗಿ ತೊಡಗಿಸಿಕೊಳ್ಳದೇ ಕೂಡದು" ಎನ್ನುವ ಇನ್ನೊಂದು ಅಪಾಯಕಾರಿ ಅಂಶವು ಈ ನಾಡಿನ ಸಾಂಸ್ಕೃತಿಕ ಲೋಕದ ಬೇರಿಗೆ ಇಟ್ಟ ಕೊಡಲಿ ಪೆಟ್ಟಾಗಿದೆ. ಹಾಗೂ ಸರಕಾರಿ ನೌಕರರು ಎನ್ನುವ  ಕಾರಣಕ್ಕೆ ಅವರಲ್ಲಿರುವ ಪ್ರತಿಭೆಯನ್ನು ಹತ್ತಿಕ್ಕುವ ಶಡ್ಯಂತ್ರವಾಗಿದೆ. ಕರ್ನಾಟಕದ ಸಾಂಸ್ಕೃತಿಕ ಕ್ಷೇತ್ರಕ್ಕೆ ಸರಕಾರಿ ನೌಕರರು ಕೊಟ್ಟ ಕೊಡುಗೆ ಅಪಾರವಾಗಿದೆ. ರಂಗಭೂಮಿಯಲ್ಲಿ ತೊಡಗಿಕೊಂಡವರಲ್ಲಿ ಅರ್ಧಕ್ಕಿಂತಾ ಹೆಚ್ಚು ಜನರು ಯಾವುಯಾವುದೋ ಸರಕಾರಿ ಇಲಾಖೆಯಲ್ಲಿ ಕೆಲಸಮಾಡಿಕೊಂಡಿದ್ದು, ಪ್ರವೃತ್ತಿಯಾಗಿ ನಾಟಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾ ರಂಗಭೂಮಿಯನ್ನು ತಮ್ಮದೇ ಇತಿಮಿತಿಗಳಲ್ಲಿ ಕಟ್ಟುತ್ತಿದ್ದಾರೆ. ಬೀದಿನಾಟಕಗಳನ್ನು ರಚಿಸಿ ನಿರ್ದೇಶಿಸಿ ನಟಿಸುವವರಲ್ಲಿ ಅನೇಕ ಸರಕಾರಿ ನೌಕರರೂ ಇದ್ದಾರೆ. ಸರಕಾರದ ನೀತಿಗಳು ಜನವಿರೋಧಿಯಾಗಿದ್ದರೆ ಅದನ್ನು ಬೀದಿನಾಟಕದ ಮೂಲಕ ಜನಜಾಗೃತಿ ಮಾಡಬೇಕಾಗುತ್ತದೆ. ಸರಕಾರದ ಆಡಳಿತದ ವಿರುದ್ಧ ನಾಟಕದಲ್ಲೂ ಸೊಲ್ಲೆತ್ತಬಾರದು ಎಂದು ಆಜ್ಞೆ ಮಾಡಿ ಸರಕಾರಿ ನೌಕರರ ಕೈಬಾಯಿ ಕಟ್ಟಿ ಕೂಡಿಸುವುದು ಅಕ್ಷಮ್ಯ.

ಹವ್ಯಾಸಿ ರಂಗಭೂಮಿ ಭಾಗಶಃ  ನಿಂತಿರುವುದೇ ಸರಕಾರಿ ಹಾಗೂ ಖಾಸಗಿ ನೌಕರರ ಮೇಲೆ. ಯಾಕೆಂದರೆ ಬದುಕು ನಡೆಸಲು ಸರಕಾರಿ ನೌಕರಿಯ ವೃತ್ತಿ ಮಾಡುವ ಅನೇಕ ಕಲಾವಿದರು ಹಾಗೂ ತಂತ್ರಜ್ಞರುಗಳು ತಮ್ಮ ಪ್ರತಿಭೆಯ ಅನಾವರಣಕ್ಕಾಗಿ ನಾಟಕವನ್ನು ಹವ್ಯಾಸವಾಗಿ ತೆಗೆದುಕೊಂಡಿರುತ್ತಾರೆ. ಅಷ್ಟಕ್ಕೂ ನಾಟಕದ ಚಟುವಟಿಕೆಗಳು ನಡೆಯುವುದೂ ಸಹ ಸಾಯಂಕಾಲದ ನಂತರ ಹಾಗೂ ರಜೆಯ ದಿನಗಳಲ್ಲಿ. ಸರಕಾರಿ ಕೆಲಸದಲ್ಲಿದ್ದುಕೊಂಡೇ ರಂಗಭೂಮಿಯಲ್ಲಿ ತೊಡಗಿಸಿಕೊಂಡವರು ಬೇಕಾದಷ್ಟು ರಂಗಕರ್ಮಿಗಳಿದ್ದಾರೆ. ಎಪ್ಪತ್ತರ ದಶಕದಲ್ಲಿ ಶ್ರೀರಂಗರು ಶಾಲಾ ಶಿಕ್ಷಕರಿಗಾಗಿ ರಂಗಕಾರ್ಯಾಗಾರಗಳನ್ನು ಆಯೋಜಿಸಿದ್ದರು. ತದನಂತರ ಅದನ್ನು ವಿದ್ಯಾರ್ಥಿಗಳಿಗೂ ವಿಸ್ತರಿಸಿದರು. ಆ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಎಷ್ಟೋ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ತದನಂತರ ಹವ್ಯಾಸಿ ರಂಗಭೂಮಿಯಲ್ಲಿ ತೊಡಗಿಸಿಕೊಂಡರು. ಹಲವಾರು ಬೀದಿನಾಟಕಗಳ ಮೂಲಕ ಶಿಕ್ಷಕವರ್ಗ ಹಾಗೂ ವಿದ್ಯಾರ್ಥಿಗಳು ಜನಜಾಗೃತಿ ಮಾಡುತ್ತಲೇ ಬಂದಿದ್ದಾರೆ.  ಆದರೆ.. ಈಗ ನಾಟಕ ಚಟುವಟಿಕೆಗಳಲ್ಲಿ ಶಿಕ್ಷಕರಾದಿಯಾಗಿ ಸರಕಾರಿ ನೌಕರರು ಭಾಗವಹಿಸಕೂಡದೆಂದು ನಿರ್ಬಂಧ ಹೇರಿದರೆ ರಂಗಭೂಮಿ ಬೆಳೆದೀತು ಹೇಗೆ? ಮುಂದಿನ ತಲೆಮಾರಿನವರಿಗೆ ಉಳಿದೀತು ಹೇಗೆ?

ಸಿನೆಮಾಗಳಲ್ಲಿ ಭಾಗವಹಿಸಬಾರದು ಯಾಕೆಂದರೆ ಅದು ಉದ್ಯಮವಾಗಿದೆ ಹಾಗೂ ನೌಕರಿಯ ಸಮಯದಲ್ಲಿ ಶೂಟಿಂಗ್ ಇರುತ್ತದೆ.. ಹೀಗಾಗಿ ಸರಕಾರಿ ನೌಕರರು ಸಿನೆಮಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಅವರ ವೃತ್ತಿ ನಿಷ್ಟೆ ಕಡಿಮೆಯಾಗುತ್ತದೆ ಎಂದು ಈ ಸರಕಾರಿ ಅಧಿಕಾರಿಗಳು ಅಂದುಕೊಂಡಿದ್ದರೆ ಇರಲಿ ಬಿಡಿ ಎಂದು ಸುಮ್ಮನಿರಬಹುದಾಗಿತ್ತು. ಆದರೆ.. ರಂಗಭೂಮಿ ವ್ಯಾಪಾರೋಧ್ಯಮವಲ್ಲ, ನಾಟಕದಿಂದ ದೊಡ್ಡ ಮೊತ್ತ ಸಂಪಾದಿಸುತ್ತೇವೆಂಬುದಂತೂ ಸಾಧ್ಯವೇ ಇಲ್ಲಾ, ಇಲ್ಲಿ ನಟಿಸುವ ಕಲಾವಿದರಿಗೆ ಹೋಗಿ ಬರುವ ಬಸ್‌ಚಾರ್ಜ ಸಹ ಯಾರೂ ಕೊಡುವುದಿಲ್ಲ. ಹಾಗೂ ವೃತ್ತಿಯ ಸಮಯದಲ್ಲಿ ನಾಟಕ ಚಟುವಟಿಕೆಗಳು ಇರುವುದೂ ಅಪರೂಪ. ಆದ್ದರಿಂದ ಯಾವುದೇ ಸರಕಾರಿ ನೌಕರ ತನ್ನ ವೃತ್ತಿಗೆ ತೊಂದರೆಯಾಗದ ಹಾಗೆ ತನ್ನ ಪ್ರತಿಭಾಭಿವ್ಯಕ್ತಿಯ ಹವ್ಯಾಸವನ್ನು ಮುಂದುವರೆಸಿಕೊಂಡು ಹೋಗಬಹುದಾಗಿದೆ. ಅಪವಾದವೆಂಬಂತೆ ಬೆರಳೆಣಿಕೆಯಷ್ಟು ಸರಕಾರಿ ನೌಕರರು ಸರಕಾರಿ ಇಲಾಖೆಗಳ ಅನುದಾನವನ್ನು ತೆಗೆದುಕೊಂಡಿದ್ದೂ ಇದೆ. ಬೇಕಾದರೆ ಸರಕಾರಿ ಸಂಬಳ ಪಡೆಯುವ ನೌಕರರು ಬೇರೆ ಸರಕಾರಿ ಇಲಾಖೆಗಳಿಂದ ಆರ್ಥಿಕ ಸಹಾಯ ಪಡೆಯುವಂತಿಲ್ಲಾ ಎಂದು ನಿಯಮ ಮಾಡುವುದಿದ್ದರೆ ಮಾಡಿಕೊಳ್ಳಲಿ. ಈ ಸಂಸ್ಕೃತಿ ವಿಹೀನ ಅಧಿಕಾರಿಶಾಹಿಗಳಿಗೆ ಹಾಗೂ  ರಂಗಭೂಮಿಯ ಸಾಮಾಜಿಕ ಮಹತ್ವದ ಅರಿವೇ ಇಲ್ಲವಾಗಿದ್ದು ಈ ರೀತಿಯ ಸಾಂಸ್ಕೃತಿಕ ವಿರೋಧಿ ಕಾನೂನುಗಳು ಜಾರಿಯಾಗುತ್ತವೆ. ರಂಗಭೂಮಿ ಎಂದರೆ ಪ್ರತಿರೋಧ. ಆರೋಗ್ಯಪೂರ್ಣ ಸಮಾಜ ನಿರ್ಮಿಸುವಲ್ಲಿ ಈ ಪ್ರತಿರೋಧ ಅತ್ಯಗತ್ಯವಾಗಿದೆ. ಅದನ್ನೇ ಬೇಡವೆಂದು ಆಜ್ಞಾಪಿಸಿದರೆ ಹೇಗೆ? ಆಧುನಿಕ ರಂಗಭೂಮಿಯ ಬಹುತೇಕ ನಾಟಕಗಳು ಪ್ರತ್ಯಕ್ಷವಾಗಿಯೋ ಇಲ್ಲವೇ ಪರೋಕ್ಷವಾಗಿಯೋ ವ್ಯವಸ್ಥೆಯ ವಿರುದ್ದವಾದುದಾಗಿರುತ್ತವೆ. ಸಾಮಾಜಿಕ ಸ್ವಾಸ್ಥ್ಯಕ್ಕೆ ಬದ್ದವಾಗಿರುತ್ತವೆ. ಆದ್ದರಿಂದ ನಾಟಕದ ಚಟುವಟಿಕೆಗಳಲ್ಲಿ ಸರಕಾರಿ ನೌಕರರ ಭಾಗವಹಿಸುವಿಕೆಯನ್ನು ಬ್ಯಾನ್ ಮಾಡುವುದನ್ನು ಎಲ್ಲರೂ ವಿರೋಧಿಸಲೇಬೇಕಿದೆ.

 
ಡಾ.ಶ್ರೀಪಾದ ಭಟ್ ನಿರ್ದೇಶನದ ಮಿಸ್ಟೇಕ್ ನಾಟಕ
ಕನ್ನಡ ರಂಗಭೂಮಿಯಲ್ಲಿ ಹೆಚ್ಚಾಗಿ ಶಾಲಾ ಶಿಕ್ಷಕರು ತೊಡಗಿಕೊಂಡಿದ್ದಾರೆ. ಎಲ್ಲಾ ಶಿಕ್ಷಕರೂ ರಂಗಭೂಮಿಯಲ್ಲಿ ತೊಡಗಿಸಿಕೊಂಡು ರಂಗಮುಖೇನ ಶಿಕ್ಷಣವನ್ನು ಮಕ್ಕಳಿಗೆ ಕೊಡಬೇಕು ಎನ್ನುವುದು ರಂಗಕರ್ಮಿಗಳ ಹಾಗೂ ಶಿಕ್ಷಣ ತಜ್ಞರುಗಳ ಆಶಯವಾಗಿದೆ. ಶಿಕ್ಷಣದಲ್ಲಿ ರಂಗಭೂಮಿಯನ್ನು ಅಳವಡಿಸಬೇಕು ಎಂದು ಪ್ರಸನ್ನಾದಿಯಾಗಿ ಹಲವಾರು ರಂಗಕರ್ಮಿಗಳು ಕೆಲವಾರು ಬಾರಿ ಸರಕಾರಕ್ಕೆ ಮನವಿಯನ್ನೂ ಮಾಡಿಕೊಂಡಿದ್ದಾರೆ.  ಯಾವುದೇ ಪಾಠವನ್ನು ಓದಿ ಹೇಳುವುದಕ್ಕಿಂತಲೂ ಅದನ್ನು ರಂಗಪಠ್ಯದ ಮೂಲಕ ಇಲ್ಲವೇ ರಂಗಪ್ರದರ್ಶನದ ಮೂಲಕ ತೋರಿಸಿದರೆ ಮಕ್ಕಳ ಚಿತ್ತ ಬಿತ್ತಿಯಲ್ಲಿ ಅದು ಶಾಶ್ವತವಾಗಿ ಉಳಿಯುವ ಸಾಧ್ಯತೆಗಳು ಹೆಚ್ಚಾಗಿವೆ. ಆದರೆ
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಈಗಿನ ಆಜ್ಞೆಯಂತೆ ಸರಕಾರಿ ಶಾಲೆಯ ಶಿಕ್ಷಕರು ಇನ್ನು ಮೇಲೆ ನಾಟಕ ಚಟುವಟಿಕೆಗಳಲ್ಲಿ ಭಾಗವಹಿಸಬಾರದು ಎಂದಾಗ ಶಿಕ್ಷಕರು ರಂಗಭೂಮಿಯಿಂದಾ ದೂರವಿರಬೇಕಾಗುತ್ತದೆ. ಶಿಕ್ಷಕರಿಗೆ ನಾಟಕದ ಗಂಧಗಾಳಿ ಗೊತ್ತಿಲ್ಲದೇ ಹೋದರೆ ಮಕ್ಕಳಿಗೆ ಮನದಟ್ಟಾಗುವಂತೆ ಪಾಠಮಾಡಲಾಗುವುದಿಲ್ಲ. ಶಿಕ್ಷಕರುಗಳಿಗೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ಆಸಕ್ತಿ ಇಲ್ಲವಾದರೆ ಮಕ್ಕಳೂ ಸಹ ಪಠ್ಯೇತರ ಚಟುವಟಿಕೆಗಳಲ್ಲಿ ಹಿಂದುಳಿಯುತ್ತಾರೆ. ಬಾಲಕರ ಒಂದು ತಲೆಮಾರು ಕಲೆ ನಾಟಕಗಳಿಂದ ದೂರವಾದರೆ ರಂಗಭೂಮಿ ಸಾವಕಾಶವಾಗಿ ನಾಶವಾಗುತ್ತಾ ಸಾಗುತ್ತದೆ. ಈಗಲೂ ಗ್ರಾಮೀಣ ಪ್ರದೇಶಗಳಲ್ಲಿ ಡಾ.ಶ್ರೀಪಾದ ಭಟ್, ಸಾಸಿವೆಹಳ್ಳಿ ಸತೀಶ್‌ರಂತಹ ಹಲವಾರು ಕ್ರಿಯಾಶೀಲ ಶಿಕ್ಷಕರು ನಿರಂತರವಾಗಿ ರಂಗಭೂಮಿಯಲ್ಲಿ ತೊಡಗಿಕೊಂಡು ಮಕ್ಕಳ  ರಂಗಭೂಮಿಯ ಜೊತೆಗೆ ಗ್ರಾಮೀಣ ರಂಗಭೂಮಿಯನ್ನೂ ತಮ್ಮ ಉಳಿಕೆಯ ಕಾಲಾವಧಿಯಲ್ಲಿ ಕಟ್ಟುತ್ತಿದ್ದಾರೆ. ಇನ್ನು ಮೇಲೆ ಸರಕಾರಿ ನೌಕರರು ನಾಟಕ ಚಟುವಟಿಕೆಗಳಲ್ಲಿ ಭಾಗವಹಿಸಲೇಕೂಡದು ಎಂದರೆ ಆಯಾ ಭಾಗಗಳಲ್ಲಿ ನಾಟಕದ ತಯಾರಿಗಳೇ ನಿಂತು ಹೋಗುತ್ತವೆ. ಇದರ ದುಷ್ಪರಿಣಾಮ ರಂಗಭೂಮಿಯ ಮೇಲಾಗುವುದರಲ್ಲಿ ಸಂದೇಹವೇ ಇಲ್ಲಾ.

ಯಾವುದೇ ಸರಕಾರಿ ನೌಕರ ತಪ್ಪುಮಾಡಿದರೆ, ವೃತ್ತಿದ್ರೋಹ ಮಾಡಿದರೆ, ಜನವಿರೋಧಿಯಾಗಿ ನಡೆದುಕೊಂಡರೆ ಅಂತವರನ್ನು ಶಿಕ್ಷಿಸುವುದು ಅಪೇಕ್ಷಣೀಯ. ಆದರೆ.. ಸಮಾಜಮುಖಿಯಾದ ರಂಗಭೂಮಿಯಲ್ಲಿ ತೊಡಿಸಿಕೊಂಡಿದ್ದಕ್ಕೆ ಶಿಕ್ಷೆ ಕೊಡುತ್ತೇವೆ ಎಂದರೆ ಇದನ್ನು ಪ್ರಜ್ಞಾವಂತರಾದವರು ಸಹಿಸಿಕೊಳ್ಳುವುದಾದರೂ ಹೇಗೆ? ಸಮಾಜಕ್ಕೆ ಪೂರಕವಾಗಿ ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಸರಕಾರಿ ನೌಕರರಿಗೆ ಅವರ ಮೇಲಾಧಿಕಾರಿಗಳು ಹಾಗೂ ಆಳುವ ಸರಕಾರಗಳು ಹೆಚ್ಚು ಪ್ರೋತ್ಸಾಹ ಕೊಡಬೇಕು. ಪ್ರಾಮಾಣಿಕವಾಗಿ ರಂಗಬದ್ದತೆಯಿಂದಾ ಕೆಲಸ ಮಾಡುವ ನೌಕರರಿಗೆ ಇನ್ನೂ ಹೆಚ್ಚು ಇನ್ಕ್ರಿಮೆಂಟಗಳನ್ನು ಹಾಗೂ ಹೆಚ್ಚೆಚ್ಚು ರಜೆಗಳನ್ನು ಕೊಟ್ಟು ಸಹಕರಿಸಬೇಕು. ಅದು ಬಿಟ್ಟು ನಾಟಕ ಮಾಡಿದರೆ ಸವಲತ್ತು ಕಟ್ ಮಾಡುತ್ತೇವೆ, ಶಿಕ್ಷೆ ಕೊಡುತ್ತೇವೆ ಎಂದರೆ ಇದಕ್ಕಿಂತಾ ಸಂವೇದನಾ ರಹಿತ ಕೆಲಸ ಯಾವುದಿದೆ? 

ಬೆಂಗಳೂರಿನ ಕಬ್ಬನ್ ಪಾರ್ಕಿನಲ್ಲಿ ಕರ್ನಾಟಕ ಸಚಿವಾಲಯ ಕ್ಲಬ್ (ಕೆಜಿಎಸ್) ಅಂತಾ ಒಂದಿದೆ. ಇಲ್ಲಿ ಸಚಿವಾಲಯದಲ್ಲಿ ಕೆಲಸ ಮಾಡುವ ಸರಕಾರಿ ನೌಕರರೇ ಪದಾಧಿಕಾರಿಗಳು. ನಿರಂತರವಾಗಿ ನಾಟಕ ಚಟುವಟಿಕೆಗಳನ್ನು ನಡೆಸುತ್ತಾರೆ. ನಾಟಕ ಸ್ಪರ್ದೆಗಳನ್ನು ಆಯೋಜಿಸುತ್ತಾರೆ, ಪ್ರತಿಭಾವಂತ ರಂಗನಿರ್ದೇಶಕರನ್ನು ಆಹ್ವಾನಿಸಿ ಸಚಿವಾಲಯದ ಕಲಾಸಕ್ತ ನೌಕರರಿಗೆ ನಾಟಕವನ್ನು ನಿರ್ಮಿಸುತ್ತಾರೆ. ಹೀಗಾಗಿ ಸಚಿವಾಲಯದಲ್ಲಿ ಹಲವಾರು ಕಲಾವಿದರು ಸೃಷ್ಟಿಯಾಗಿದ್ದಾರೆ. ಅನೇಕ ಸರಕಾರಿ ನೌಕರರು ನಾಟಕ ನೋಡುವುದನ್ನು ರೂಢಿಸಿಕೊಂಡು ಅಲ್ಲಿ ಪ್ರೇಕ್ಷಕರ ಒಂದು ಸಮೂಹವೇ ನಿರ್ಮಾಣವಾಗಿದೆ. ಈ  ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ’ಯ ಆಂಟಿ ಕಲ್ಚರಲ್ ರೂಲ್ ಅಪ್ಲೈ ಮಾಡಿದರೆ ಈ ಕ್ಲಬ್ಬಿನಲ್ಲಿ ಯಾರೂ ನಾಟಕದ ಚಟುವಟಿಕೆಗಳನ್ನು ಮಾಡಲಾಗದೇ ಸಂಜೆ ಟೈಂಪಾಸಿಗೆ ಕೂತು ಇಸ್ಪೇಟ್ ಆಡಿ ಹೋಗುವಂತಾಗುತ್ತದೆ. ಇದು ಕೇವಲ ಒಂದು ಉದಾಹರಣೆ ಮಾತ್ರ, ಸರಕಾರದ ಕೆಲವಾರು ಇಲಾಖೆಗಳಲ್ಲಿ ರಂಗಾಸಕ್ತ ನೌಕರ ವರ್ಗ ತಮ್ಮ ಇತಿ ಮಿತಿಗಳಲ್ಲಿ ರಂಗಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಲೇ ಬಂದಿದ್ದಾರೆ. ರಂಗಕಾರ್ಯಗಳಲ್ಲಿ ಭಾಗವಹಿಸಿದ ನೌಕರರ ಇನ್ಕ್ರಿಮೆಂಟ್ ಕಟ್ ಮಾಡುತ್ತಾ ಹೋದರೆ ಯಾರು ತಾನೆ ನಾಟಕದತ್ತ ಮುಖಮಾಡಲು ಸಾಧ್ಯ? ನಾಟಕ ಮಾಡೋದು ಇರಲಿ ನೋಡೋದು ಬೇಕಿಲ್ಲವಾಗಿ ರಂಗಭೂಮಿಗೆ ನಷ್ಟವಾಗುವುದು ಶತಸಿದ್ಧ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಟ್ಟಳೆಗಳ ಪ್ರಕಾರ ನೌಕರರು ತಮ್ಮ ವೃತ್ತಿ ಸಮಯದ ನಂತರ ನಾಟಕದಲ್ಲಿ ತೊಡಗಿಸಿಕೊಳ್ಳುವುದೂ ಸಹ ಶಿಕ್ಷಾರ್ಹ ಅಪರಾಧವಾಗಿದೆ ಎಂಬುದು ಎಂತಾ ವಿಪರ್ಯಾಸ.  
ಸಾಂಸ್ಕೃತಿಕ ಸಂವೇದನೆಯನ್ನೇ ಕಳೆದುಕೊಂಡ ಸರಕಾರ ಹಾಗೂ ಸರಕಾರದ ಇಲಾಖೆಯ ವಿರುದ್ಧ ಕನ್ನಡ ರಂಗಭೂಮಿಯ ಎಲ್ಲಾ ರಂಗಕರ್ಮಿ ಕಲಾವಿದರುಗಳು ತುರ್ತಾಗಿ ಸಂಘಟಿತರಾಗಿ ಪ್ರತಿಭಟಿಸಲೇಬೇಕಿದೆ. ಬೇರೆಲ್ಲಾ ಸಂಘ ಸಂಸ್ಥೆ ಹಾಗೂ ಜನಪರ ಸಂಘಟನೆಗಳು ಸಾಥ್ ಕೊಡಬೇಕಿದೆ. ಇಲ್ಲವಾದರೆ ರಂಗಭೂಮಿಯಲ್ಲಿ ತೊಡಗಿಸಿಕೊಂಡ ಅರ್ಧಕ್ಕಿಂತಾ ಹೆಚ್ಚು ಕ್ರಿಯಾಶೀಲ ಸರಕಾರಿ ನೌಕರರನ್ನು ಕಳೆದುಕೊಳ್ಳಬೇಕಾಗುತ್ತದೆ. ರಂಗಭೂಮಿಯಿಂದಲೇ ಹೋಗಿರುವ ಕಲಾವಿದೆ ಉಮಾಶ್ರೀಯವರೇ ಈಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆಯಾಗಿರುವುದರಿಂದ ಅವರ ಮೇಲೆ ರಂಗಕರ್ಮಿಗಳು ಒತ್ತಾಯ ತಂದು ರಂಗಭೂಮಿಗೆ ಮಾರಕವಾಗಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಯ ಪ್ರಪೋಸಲ್ಲಿನಲ್ಲಿರುವ  ಜನವಿರೋಧಿ ಅಂಶಗಳನ್ನು ತೆಗೆಸಿ ಹಾಕಲು ಪ್ರಯತ್ನಿಸಬೇಕು. ಇಲ್ಲವಾದರೆ ನೇರವಾಗಿ ಮುಖ್ಯಮಂತ್ರಿಗಳಿಗೆ ಮನವಿಯನ್ನು ಮಾಡಿಕೊಂಡು ರಂಗಭೂಮಿಯಲ್ಲಿ ಸರಕಾರಿ ನೌಕರರು ಕ್ರಿಯಾಶೀಲವಾಗಿ ಭಾಗವಹಿಸಬೇಕಾದದ್ದೂ ಸಾಂಸ್ಕೃತಿಕವಾಗಿ ಎಷ್ಟು ಮಹತ್ವದ್ದು ಎಂಬುದನ್ನು ಮನದಟ್ಟು ಮಾಡಬೇಕು. ಇಷ್ಟೆಲ್ಲಾ ಮಾಡಿದರೂ ಯಾವುದೇ ಪ್ರಯೋಜನವಾಗದಿದ್ದರೆ ಸಂಘಟಿತ ಹೋರಾಟಕ್ಕೆ ಮುಂದಾಗಬೇಕಿದೆ. ಇಲ್ಲವಾದರೆ ರಂಗಭೂಮಿಯ ಚಟುವಟಿಕೆಗಳು ಕುಂಟಿತಗೊಂಡು ಮುಂದಿನ ತಲೆಮಾರು ರಂಗಕಲೆಯಿಂದಲೇ ವಿಮುಖರಾಗುವ ಅಪಾಯವೂ ಇದೆ. ಈಗ ಆಗಿರುವ ಈ ಅವಘಡವನ್ನು ತಡೆಯುವ ಕೆಲಸ ಪ್ರಜ್ಞಾವಂತರ ಹೋರಾಟದಿಂದ ಮಾತ್ರ ಸಾಧ್ಯವಿದೆ.

ಈ ಹಿಂದೆ ಎಂ.ಪಿ.ಪ್ರಕಾಶರವರು ಮಂತ್ರಿಯಾಗಿದ್ದಾಗ ಇದೇ “‘ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಸರಕಾರಿ ನೌಕರರು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಬಾರದು ಎಂದು ಆರ್ಡರ್ ಮಾಡಿತ್ತು. ಆಗ ಪ್ರಕಾಶರವರು ಕೆಂಡಾಮಂಡಲವಾಗಿ ಯಾವನಯ್ಯಾ ಇದನ್ನು ಮಾಡಿದೋನು,? ಮೊದಲು ಈ ರಂಗವಿರೋಧಿ ಅಂಶವನ್ನು ತೆಗೆದುಹಾಕಿ ಎಂದು ಗುಡುಗಿ ತೆಗೆಸಿಯೇ ಬಿಟ್ಟಿದ್ದರು. ಈಗ ಇದೇ ಕೆಲಸವನ್ನು ಮಾನ್ಯ ಸಚಿವೆ ಶ್ರೀಮತಿ ಉಮಾಶ್ರೀಯವರು ಮಾಡಬೇಕಿದೆ. ತಮ್ಮ ರಂಗಬದ್ದತೆಯನ್ನು ಸಾಬೀತು ಪಡಿಸಬೇಕಿದೆ. ಸಧ್ಯಕ್ಕೆ ಇನ್ನೂ ಸರಕಾರಿ ಆದೇಶವಾಗಿಲ್ಲ. “‘ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಈ ನಿಬಂಧನೆಗಳ ಪಟ್ಟಿಯನ್ನು ಮಾಡಿ ಪ್ರಪೋಸಲ್ ಕಳಿಸಿದೆ. ಈ ಕೂಡಲೇ ಸಚಿವೆ ಉಮಾಶ್ರೀಯವರು ಸೂಕ್ತ ಕ್ರಮ ತೆಗೆದುಕೊಂಡು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿ ಜಿಓ ಆಗದಂತೆ ತಡೆಯಬೇಕಿದೆ ಹಾಗೂ ರಂಗಭೂಮಿಗೆ ಮಾರಕವಾದ ಅಂಶಗಳನ್ನು ತೆಗೆದುಹಾಕಲು ಕಾರ್ಯಪ್ರವೃತ್ತರಾಗಬೇಕಿದೆ. ಈಗಿನ ಸರಕಾರ ಇರುವುದರಲ್ಲೇ ಜನರ ಆಗ್ರಹಕ್ಕೆ ಸ್ವಂದಿಸುತ್ತದೆ ಆದರೆ ಮುಂದೆಂದರೂ ಪ್ಯಾಸಿಸ್ಟ್ ಮನಸ್ಥಿತಿಯ ಸರಕಾರ ಆಡಳಿತದ ಚುಕ್ಕಾಣಿ ಹಿಡಿದರೆ ಸರಕಾರಿ ನೌಕರರ ಮೇಲೆ ಈ ನಿಯಮಗಳನ್ನು ನಿರ್ದಾಕ್ಷಿಣ್ಯವಾಗಿ ಹೇರಿ ಅಭಿವ್ಯಕ್ತಿಯ ಹಕ್ಕನ್ನೇ ಹರಣ ಮಾಡುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲಾ. ಎಲ್ಲಕ್ಕಿಂತಾ ಮೊದಲು ತುಂಬಾ ಹಳೆಯದಾದ, ಬ್ರಿಟಿಶ್ ಆಡಳಿತ ಮಾದರಿಯಿಂದ ರೂಪಿತವಾದ ಕೆಸಿಎಸ್ (ನಡತೆ) 1966ರ ಸೇವಾ ನಿಯಮಗಳಿಗೆ ಸರಕಾರ ಅಮೂಲಾಗ್ರ ಬದಲಾವಣೆ ತರುವ ಅಗತ್ಯವಿದೆ.   ಕಾಲಕ್ಕೆ ತಕ್ಕಂತೆ ಕಾನೂನುಗಳು ಬದಲಾಗದಿದ್ದರೆ ಹೇಗೆ? ಸರಕಾರಿ ನೌಕರರನ್ನು ಗುಲಾಮರನ್ನಾಗಿ ಪರಿಗಣಿಸುವುದಕ್ಕಿಂತಲೂ ಪ್ರತಿಭೆ, ಕ್ರಿಯಾಶೀಲತೆ ಹಾಗೂ ಸಂವೇದನಾಶೀಲರಾದ ಮನುಷ್ಯರನ್ನಾಗಿ ಪರಿಗಣಿಸಬೇಕಾಗಿದೆ.  ಸರಕಾರಿ ನೌಕರರ ವರ್ಗವನ್ನು ಸಂಪೂರ್ಣವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯದಿಂದ ವಿಮುಖರನ್ನಾಗಿ ಮಾಡುವ ಹಾಗೂ ರಂಗಭೂಮಿಯಿಂದ ದೂರ ಮಾಡುವ ಹುನ್ನಾರಗಳು ಆಡಳಿತಾಧಿಕಾರಿಗಳಿಂದ ನಡೆಯುತ್ತಲೆ ಬಂದಿದೆ. ಇದನ್ನು ಜನಹೋರಾಟದ ಮೂಲಕವೇ ಎದುರಿಸುವ ಅಗತ್ಯ ಈಗಿದೆ.  

             -ಶಶಿಕಾಂತ ಯಡಹಳ್ಳಿ        






ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ