ಶುಕ್ರವಾರ, ಡಿಸೆಂಬರ್ 6, 2013

ತಾಂತ್ರಿಕ ವೈಭವದ ರಂಗಪ್ರಯೋಗ “ತುಘಲಕ್” : ನಾಟಕ ವಿಮರ್ಶೆ :







ಕನ್ನಡ ರಂಗಭೂಮಿಯಲ್ಲಿ ತನ್ನದೇ ಆದ ಮೈಲುಗಲ್ಲನ್ನು ಸ್ಥಾಪಿಸಿದ ನಾಟಕ ಡಾ. ಗಿರೀಶ್ ಕಾರ್ನಾಡರ ತುಘಲಕ್, ಚಾರಿತ್ರಿಕ ಪಾತ್ರವೊಂದನ್ನು ಕೇಂದ್ರವಾಗಿಟ್ಟುಕೊಂಡು ಮೊಘಲ್ ಕಾಲದ ವಂಚನೆ ಪ್ರಪಂಚವನ್ನು ಅನಾವರಣಗೊಳಿಸುವ ಮಹತ್ವದ ನಾಟಕ ತುಘಲಕ್. ಇದು ಕಾರ್ನಾಡರ ನಾಟಕಗಳಲ್ಲೇ ಬಹಳ ಮಹತ್ತರವಾದ ನಾಟಕ. ಅದಕ್ಕೆ ಕಾರಣ ನಾಟಕದ ರಚನಾ ಕೌಶಲ್ಯ ಮತ್ತು ಕಾವ್ಯಾತ್ಮಕ ಸಂಭಾಷಣೆ

ಈ ನಾಟಕವನ್ನು ಮೊದಲು ನಿರ್ಮಿಸಿದ್ದು 'ಕನ್ನಡ ಸಾಹಿತ್ಯ ಕಲಾಸಂಘ', ಹನ್ನೊಂದು ವಿವಿಧ ಹವ್ಯಾಸಿ ರಂಗತಂಡಗಳ ಸಹಕಾರದಿಂದಾಗಿ ಬಿ.ಚಂದ್ರಶೇಖರರವರ(ಬಿ.ಸಿ) ನಿರ್ದೇಶನದಲ್ಲಿ 'ತುಘಲಕ್' ನಾಟಕ 1969ರಲ್ಲಿ ಪ್ರದರ್ಶನಗೊಂಡಿತು. ಸತತವಾಗಿ ಆರು ತಿಂಗಳುಗಳ ಕಾಲ ತಾಲಿಂ ಮಾಡಲಾಗಿತ್ತು. 'ತುಘಲಕ್' ಪಾತ್ರದಾರಿಯಾದ ಸಿ.ಆರ್.ಸಿಂಹರವರ ಅಭಿನಯ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ತದನಂತರ 1972ರಲ್ಲಿ ಸಿ.ಆರ್.ಸಿಂಹರವರೇ 'ನಟರಂಗ' ತಂಡಕ್ಕೆ ಇದೇ ನಾಟಕವನ್ನು ಹೊಸದಾಗಿ  ನಿರ್ದೇಶಿಸಿ ನಟಿಸಿದರು. 
ನೂರಕ್ಕೂ ಹೆಚ್ಚು ಪ್ರಯೋಗಗಳನ್ನು ಮಾಡಿ ಸಿಂಹರವರು ತುಘಲಕ್ ಆಟ ನಿಲ್ಲಿಸಿದ್ದರು.  ಈಗ ಮತ್ತೆ ಬೆಂಗಳೂರಿನ ಸಮುದಾಯ  ಭರ್ಜರಿಯಾಗೆ ತುಘಲಕ್ನನ್ನು ರಂಗವೇದಿಕೆಗೆ ತಂದಿದೆ. ಎನ್ಎಸ್ಡಿ ಪದವೀಧರ ಡಾ.ಸ್ಯಾಮ್ಕುಟ್ಟಿ ಪಟ್ಟಂಕರಿಯವರನ್ನು ಕೇರಳದಿಂದ ಕರೆತಂದು ಕನ್ನಡದಲ್ಲಿ ತುಘಲಕ್ ನಾಟಕ ನಿರ್ದೇಶನ ಮಾಡಿಸಲಾಗಿದೆ. ಜೊತೆಗೆ ಕನ್ನಡದ ಪ್ರತಿಭಾನ್ವಿತ ರಂಗನಿರ್ದೇಶಕ ಡಾ.ಶ್ರೀಪಾದ ಭಟ್ರವರು ನಾಟಕಕ್ಕೆ ಸಹನಿರ್ದೇಶಕರಾಗಿದ್ದಾರೆ. ರವೀಂದ್ರ ಕಲಾಕ್ಷೇತ್ರ-50 ಸುವರ್ಣ ಸಂಭ್ರಮ ರಂಗೋತ್ಸವದಲ್ಲಿ 2013, ಡಿಸೆಂಬರ್ 5 ರಂದು ತುಘಲಕ್ ನಾಟಕ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡು ನೋಡುಗರಲ್ಲಿ ಬೆರಗನ್ನು ಹುಟ್ಟಿಸಿತು.

          ನಾಟಕದ ಸಾರಾಂಶ ಕುತೂಹಲಕಾರಿಯಾಗಿದೆ. ತನ್ನ ಆದರ್ಶಗಳನ್ನು ಆಚರಣೆಯಲ್ಲಿ ತರಲು ಅಧಿಕಾರಬೇಕು ಎಂದುಕೊಂಡ ಮಹಮದ್ ಬಿನ್ ತುಘಲಕ್ ತನ್ನ ತಂದೆ ಹಾಗೂ ತಮ್ಮನನ್ನು ಪ್ರಾರ್ಥನೆಯ ಸಮಯದಲ್ಲಿ ಕೊಲ್ಲಿಸಿ ಸುಲ್ತಾನನಾಗುತ್ತಾನೆ. ರಾಜ್ಯಾಡಳಿತಕ್ಕೆ ಅನುಕೂಲವಾಗಲಿ ಎಂದು ದಿಲ್ಲಿಯಿಂದ ದೌಲತ್ತಾಬಾದ್ಗೆ ತನ್ನ ರಾಜಧಾನಿಯನ್ನು ಬದಲಾಯಿಸಲು ಆಜ್ಞಾಪಿಸುತ್ತಾನೆ. ಆಗ ಅಮೀರರು ದಿಗಿಲುಬೀಳುತ್ತಾರೆ. ಹಿಂದೂಗಳಿಗೆ ಅನ್ಯಾಯ ಮಾಡಿದವರನ್ನು ಶಿಕ್ಷಿಸುತ್ತಾನೆ. ಇಸ್ಲಾಮಿಗಳು ಕೋಪಗೊಳ್ಳುತ್ತಾರೆ. ಬೆಳ್ಳಿ ನಾಣ್ಯದ ಬದಲು ತಾಮ್ರದ ನಾಣ್ಯಗಳನ್ನು ಚಲಾವಣೆಗೆ ತರುತ್ತಾನೆ. ನಕಲಿ ನಾಣ್ಯಗಳು ಹುಟ್ಟಿಕೊಂಡು ರಾಜ್ಯದ ಆರ್ಥಿಕತೆಯನ್ನೇ ಬುಡಮೇಲು ಮಾಡುತ್ತವೆ. ಧರ್ಮಗುರು ಶೇಖ್ ಇಮಾಮುದ್ದೀನ್ ಬಹಿರಂಗವಾಗಿ ತುಘಲಕ್ನನ್ನು ಟೀಕಿಸುತ್ತಾನೆ. ತನ್ನ ವಿರುದ್ಧ ಯುದ್ದ ಸಾರಿದ ತನ್ನ ಸಾಮಂತ ಮುಲ್ಮುಲ್ ಜೊತೆಗೆ ಇಮಾಮುದ್ದಿನ್ರನ್ನು ಸಂಧಾನಕ್ಕೆಂದು ಕಳುಹಿಸಿದ ತುಘಲಕ್ ಆತನನ್ನು ಮೋಸದಿಂದ ಯುದ್ದಭೂಮಿಯಲ್ಲಿ ಕೊಲ್ಲಿಸಿ ನಂತರ ಕೂಟಯುದ್ದದಿಂದ ಆಯಿನೆ ಉಲ್ಮುಲ್ಕನನ್ನೂ ಸೋಲಿಸುವ ಮೂಲಕ ತನ್ನ ಆಂತರಿಕ ಶತ್ರುವನ್ನು ಹಾಗೂ ಬಾಹ್ಯ ಶತ್ರುವನ್ನು ಏಕಕಾಲಕ್ಕೆ ನಿವಾರಿಸುತ್ತಾನೆ. ತಾನು ಯುದ್ದಕ್ಕೆ ಹೋದಾಗ ದಿಲ್ಲಿ ಆಡಳಿತ ನೋಡಲು ನಿಯಮಿಸಿದ ಶಹಾಬುದ್ದೀನ್ ಅಮೀರರು ಮತ್ತು ದರ್ಮಾಂಧ ಮುಲ್ಲಾಗಳ ಜೊತೆಗೆ ಸೇರಿ ತುಘಲಕ್ನನ್ನು ಪ್ರಾರ್ಥನೆಯ ಸಮಯದಲ್ಲಿ ಕೊಲ್ಲಲು ಪ್ರಯತ್ನಿಸಿ ವಿಫಲನಾಗಿ ಸಾಯುತ್ತಾನೆ. ರೋಸಿಗೆದ್ದ ತುಘಲಕ್ ರಾಜ್ಯದಲ್ಲಿ ಪ್ರಾರ್ಥನೆಯನ್ನೇ ಬಹಿಷ್ಕರಿಸುತ್ತಾನೆ. ಮುಸ್ಲಿಂ ಮೂಲಭೂತವಾದಿಗಳು ಸಿಟ್ಟಿಗೇಳುತ್ತಾರೆ. ತುಘಲಕ್ ಧರ್ಮವಿರೋಧಿ ನಡೆಗೆ ಆತನ ನಂಬಿಗಸ್ತ ಮಂತ್ರಿ ನಜೀಬ್ನೇ ಕಾರಣ ಎಂದುಕೊಂಡ ತುಘಲಕ್ ಮಲತಾಯಿ ನಜೀಬ್ನಿಗೆ ವಿಷಹಾಕಿ ಕೊಲ್ಲಿಸುತ್ತಾಳೆ. ರಾಜದ್ರೋಹದ ಆರೋಪದಲ್ಲಿ ಆಕೆಯನ್ನು ಸಾರ್ವಜನಿಕವಾಗಿ ತುಘಲಕ್ ಕೊಲ್ಲಿಸುತ್ತಾನೆ. ರಾಜ್ಯದ ಹಲವಾರು ಕಡೆ ದಂಗೆಗಳು ಆರಂಭವಾಗುತ್ತವೆ. ತುಘಲಕ್ ರಾಜಕೀಯದ ಚದುರಂಗದ ನಡೆ ಸುಗಮವಾಗುವುದಿಲ್ಲ. ರಾಜದ್ರೋಹಿಗಳು, ಧರ್ಮಾಂದರು ತುಘಲಕ್ ಎಲ್ಲಾ ಮಹತ್ವಾಂಕಾಂಕ್ಷೆಗಳನ್ನು ಬುಡಮೇಲು ಮಾಡುತ್ತಾರೆ. ರಾಜ್ಯದಲ್ಲಿ ಅರಾಜಕತೆಯನ್ನು ಸೃಷ್ಟಿಸುತ್ತಾರೆ. ಮತ್ತೆ ಪ್ರಾರ್ಥನೆಯನ್ನು ರಾಜ್ಯದಲ್ಲಿ ಪ್ರಾರಂಭಿಸಲು ಅರಬಸ್ತಾನದಿಂದ ಕರೆಸಲಾದ ಜಿಯಾಬುದ್ದೀನ ಅಬ್ಬಾಸ ಸಹ ನಕಲಿ ಎಂದು ಗೊತ್ತಾಗುತ್ತದೆ. ಎಲ್ಲ ದಿಕ್ಕಿನಿಂದಲೂ ತುಘಲಕ್ನನ್ನು ನಿರಾಶೆ ಕಾಡುತ್ತದೆ. ಕೊನೆಗೆ ಜೊತೆಗುಳಿದ ಇತಿಹಾಸಕಾರ ಭರಣಿಯೂ ಸುಲ್ತಾನನ್ನು ಬಿಟ್ಟು ಹೋಗುತ್ತಾನೆ. ತುಘಲಕ್ ಒಬ್ಬಂಟಿಗನಾಗುತ್ತಾನೆ.

          ತುಘಲಕ್ ಒಬ್ಬ ಹುಚ್ಚು ಸುಲ್ತಾನ ಎಂದು ಈಗಿನ ಕಾಲದವರಂತೆ ಆಗಿನ ಕಾಲದ ಜನರೂ ಭಾವಿಸಿದ್ದರು ಹಾಗೂ ಕೆಲವಾರು ಇತಿಹಾಸಕಾರರೂ ಹಾಗೆಯೇ ದಾಖಲಿಸಿದ್ದರು. ಆದರೆ ತುಘಲಕ್ ಒಬ್ಬ ಮಹತ್ವಾಂಕಾಂಕ್ಷೆಯುಳ್ಳ ಚಾಣಾಕ್ಷ ರಾಜತಂತ್ರಜ್ಞನಾಗಿದ್ದ, ಕೋಮುಸೌಹಾರ್ದತೆಯನ್ನು ಬಯಸಿದ್ದ, ಧರ್ಮಾಧರನ್ನು ದೂರವಿಟ್ಟಿದ್ದ, ಪ್ರಜೆಗಳ ಹಿತವನ್ನು ಆಲೋಚಿಸುತ್ತಿದ್ದ ಹಾಗೂ ಹಲವಾರು ಜನಪರ ನಿರ್ಧಾರಗಳನ್ನೂ ಜಾರಿಗೊಳಿಸಲು ಪ್ರಯತ್ನಿಸಿದ್ದ ಎನ್ನುವುದನ್ನು ಸಾಕ್ಷೀಕರಿಸುವಂತೆ ಕಾರ್ನಾಡರ ತುಘಲಕ್ ನಾಟಕ ಮೂಡಿಬಂದಿದೆ. ತುಘಲಕ್ನಂತಹ ಸರ್ವಾಧಿಕಾರಿಯನ್ನೂ ಸಹ ದುರಂತ ನಾಯಕನನ್ನಾಗಿ ಚಿತ್ರಿಸುತ್ತಾ ಆತನ ಸರ್ವಾಧಿಕಾರಿತನಕ್ಕಿರುವ ಅನಿವಾರ್ಯತೆಗಳನ್ನು ದೃಶ್ಯಗಳ ಮೂಲಕ ಕಟ್ಟಿಕೊಟ್ಟ ಕಾರ್ನಾಡರೂ ನಿಜಕ್ಕೂ ಅಭಿನಂದನಾರ್ಹರು. ಬಹುಷಃ ಭಿನ್ನವಾಗಿ ಆಲೋಚಿಸುವ, ಸಂಪ್ರದಾಯವನ್ನು ಮುರಿದು ಕಟ್ಟಬಯಸುವ ಎಲ್ಲಾ ಮಹನೀಯರಿಗೂ ಹುಚ್ಚನ ಪಟ್ಟವನ್ನೇ ಎಲ್ಲಾ ಕಾಲಕ್ಕೂ ಕಟ್ಟಲಾಗಿದೆ.   ಬಗೆಯ ಹುಚ್ಚು ಎನ್ನುವುದು ಕ್ರಿಯಾಶೀಲ ಆಲೋಚನೆಗೆ ಪರ್ಯಾಯಪದವೇ ಆಗಿದೆ. ಅದಕ್ಕೆ ತುಘಲಕ್ ಉತ್ತಮ ಉದಾಹರಣೆ.

          ತುಘಲಕ್ ಒಬ್ಬ ಅಭೂತಪೂರ್ವ ಮಹತ್ವಾಂಕಾಂಕ್ಷಿ, ಅಸಾಧ್ಯ ಬುದ್ದಿವಂತ, ಚಾಣಾಕ್ಷ ಅಡಳಿತಗಾರ, ರಾಜತಂತ್ರ
ನಿಪುಣ, ತನ್ನ ಆಲೋಚನೆಗಳನ್ನು ಹಿಂಸಾತ್ಮಕವಾಗಿಯಾದರೂ ಜಾರಿಗೆ ತರುವ ಛಲವಾದಿ, ಅನಿವಾರ್ಯವಾಗಿ ಕೊಲೆಪಾತಕನಾದ, ಮನೋವಿಕಾರಿಯಾದ, ಜೊತೆಗೆ ಕವಿ ಮನಸ್ಸಿನವ..... ಹೀಗೆ ಮನುಷ್ಯನೊಳಗಿನ ಹುಚ್ಚು ಮನಸ್ಸಿನ ಹತ್ತಾರು ಮುಖಗಳನ್ನು ತುಘಲಕ್ನಲ್ಲಿ ಕಾಣಬಹುದಾಗಿದೆ. ಸಾಂಪ್ರದಾಯಿಕವಾಗಿ ಆಡಳಿತ ನಡೆಸಿದ್ದರೆ, ಧರ್ಮಗುರುಗಳನ್ನು ಓಲೈಸುತ್ತಾ ರಾಜ್ಯಾಡಳಿತ ಮಾಡಿದ್ದರೆ, ಪ್ರಜೆಗಳನ್ನು ಭ್ರಮೆಯಲ್ಲಿಟ್ಟಿದ್ದರೆ, ಜನರನ್ನು ಧರ್ಮಾಧಾರಿತವಾಗಿ ಒಡೆದಾಳಿದ್ದರೆ ಬಹುಷ: ಎಲ್ಲಾ ಅರಸರಂತೆ ತುಘಲಕ್ ಸಹ ಒಬ್ಬ ರಾಜನಾಗಿ ಇತಿಹಾಸದಲ್ಲಿ ಐಕ್ಯನಾಗುತ್ತಿದ್ದ. ಆದರೆ ತುಘಲಕ್ ಎಲ್ಲ ದೊರೆಗಳಿಗಿಂತ ಭಿನ್ನವಾಗಿ ಆಲೋಚಿಸಿದ, ವಿಭಿನ್ನವಾಗಿ ರಾಜ್ಯಾಡಳಿತ ನಡೆಸಲು ಬಯಸಿದ, ಧರ್ಮವನ್ನು ರಾಜಕಾರಣದಿಂದ ದೂರಿವಿಡಲು ಆಶಿಸಿದ.... ಆದರ್ಶ ರಾಜ್ಯವೊಂದರ ಸ್ಥಾಪನೆಗಾಗಿ ತಹಸಹಿಸಿದ. ಹೀಗಾಗಿ ಲೋಕವಿರೋಧಕ್ಕೆ ಒಳಗಾದ, ಎಲ್ಲರ ಕಣ್ಣಲ್ಲಿ ಹುಚ್ಚನಾದ, ತಿಕ್ಕಲು ತುಘಲಕ್ ಎಂದೇ ಇತಿಹಾಸದಲ್ಲಿ ದಾಖಲಾದ. ಆದರೆ ತುಘಲಕ್ ನಿಜ ತಾಕತ್ತನ್ನು, ಅಂತರಂಗದ ಸದಾಶಯಗಳನ್ನು ಹಾಗೂ ಆತ ಹಾಗಾಗುವುದಕ್ಕೆ ನಿರ್ದಿಷ್ಟ ಕಾರಣಗಳನ್ನು ಗುರುತಿಸಿ ತುಘಲಕ್ನನ್ನು ಅಜರಾಮರನಾಗಿಸಿದ್ದ್ದು ಗಿರೀಶ್ ಕಾರ್ನಾಡರ ತುಘಲಕ್ ನಾಟಕ.

          ತುಘಲಕ್ನಂತಹ ವಿಕ್ಷಿಪ್ತ ವ್ಯಕ್ತಿತ್ವವವನ್ನು ಸ್ವಕಾಯದಲ್ಲಿ ಆಹ್ವಾನಿಸಿಕೊಂಡು ಅಭಿನಯಿಸಲು ಬಲು ದೊಡ್ಡ ಗುಂಡಿಗೆ ಬೇಕು. ನಾಟಕವನ್ನು ನಿರ್ದೇಶಿಸಲು ವಿಶಿಷ್ಟ ಪ್ರತಿಭೆಯೂ ಬೇಕು. ಅಂತಹ ಪ್ರಯತ್ನಕ್ಕೆ ಸಮುದಾಯ ಸಂಚಲನೆ ನೀಡಿದೆ. ಡಾ.ಸ್ಯಾಮಕುಟ್ಟಿ ಮತ್ತು ಡಾ.ಶ್ರೀಪಾದ ಭಟ್ರವರು ತಮ್ಮದೇ ಆದ ಶೈಲೀಕೃತ ರೀತಿಯಲ್ಲಿ ಸಮರ್ಥವಾಗಿ ತುಘಲಕ್ ನಾಟಕವನ್ನು ಕಟ್ಟಿ ಕೊಟ್ಟಿದ್ದಾರೆ. ಎಲ್ಲಿಯೂ ಬೋರಾಗದಂತೆ ನಿರೂಪಿಸಿದ್ದಾರೆ. ನಟರಂಗದ ತುಘಲಕ್ಗೂ ಹಾಗೂ ಸಮುದಾಯದ ತುಘಲಕ್ಗೂ ಸಮೀಕರಿಸಿ ನೋಡುವುದು ಸಮಂಜಸವಲ್ಲ. ಯಾಕೆಂದರೆ ನಟರಂಗದ ನಾಟಕ ಅಭಿನಯ ಪ್ರಧಾನ ನಾಟಕವಾಗಿದ್ದು ಸಿ.ಆರ್.ಸಿಂಹರವರ ನಟನೆಯೇ ಅಲ್ಲಿ ಪ್ರಾಮುಖ್ಯತೆಯನ್ನು ಪಡೆದಿತ್ತು. ಆದರೆ ಸಮುದಾಯದ ನಾಟಕ ರಂಗತಂತ್ರ ಪ್ರಧಾನವಾಗಿದ್ದು ನಿರ್ದೇಶಕರೇ ಕೌಶಲ್ಯವೇ ಇಲ್ಲಿ ಎದ್ದು ಕಾಣುವಂತಿದೆ. ಇದಕ್ಕೆ ಕಾರಣ ಎನ್ಎಸ್ಡಿ ಪ್ರಭಾವ. ರಂಗಭೂಮಿ ನಟನ ಮಾಧ್ಯಮವೆಂದರೂ ಸಹ ನಿರ್ದೇಶಕ  ತನ್ನ ರಂಗತಂತ್ರಗಳ ಮೂಲಕ ರಂಗಭೂಮಿ ನಿರ್ದೇಶಕರ ಮಾಧ್ಯಮ ನಟರು ಕೇವಲ ಪರಿಕರಗಳಷ್ಟೇ ಎಂದು ಸಾಬೀತು ಪಡಿಸಲು ಎನ್ಎಸ್ಡಿ ಪ್ರಾಯೋಜಿತ ನಿರ್ದೇಶಕರು ಪ್ರಯತ್ನಿಸುತ್ತಲೇ ಬಂದಿದ್ದಾರೆ. ಆಶಯದ ಭಾಗವಾಗೇ ಡಾ.ಸ್ಯಾಮ್ಕುಟ್ಟಿಯವರ ತುಘಲಕ್ ಮೂಡಿಬಂದಿದೆ.


        ಕಾರ್ನಾಡರು ತುಘಲಕ್ ನಾಟಕವನ್ನು ಪಗಡೆ ಆಟದ ರೀತಿಯಲ್ಲಿ  ಬಲು ಜಾಣ್ಮೆಯಿಂದ ಕಟ್ಟಿದ್ದಾರೆ. ಚದುರಂಗದಾಟವನ್ನು ರೂಪಕವಾಗಿ ನಾಟಕದಲ್ಲಿ ಬಳಸುತ್ತಾ ರಾಜ್ಯಾಡಳಿತವನ್ನುವುದು ಜಾಣ್ಮೆಯ ಆಟ ಎನ್ನುವುದನ್ನು ಹೇಳುತ್ತಾರೆ. ಅದನ್ನೇ ಪ್ರಮುಖವಾದ ವಿಷಯವಾಗಿಟ್ಟುಕೊಂಡ ಡಾ.ಸ್ಯಾಮಕುಟ್ಟಿಯವರು ಇಡೀ ನಾಟಕವನ್ನು ಚದುರಂಗದಾಟದ ಹಿನ್ನೆಲೆಯಲ್ಲಿ ಪ್ರಸ್ತುತಪಡಿಸುತ್ತಾರೆ. ರಂಗಸ್ಥಳ ಹಾಗೂ ರಂಗದ ಹಿಂಭಾಗವನ್ನು ಚದುರಂಗದ ಕಪ್ಪು ಬಿಳಿ ಚೌಕಗಳಿಂದ ನಿರ್ಮಿಸಲಾಗಿದೆ. ಪ್ರತಿ ಪಾತ್ರಗಳೂ ರಂಗವೇದಿಕೆಗೆ ಚದುರಂಗದ ಬೋರ್ಡನೊಳಗಿಂದಲೇ ಬರುವಂತೆ ವಿನ್ಯಾಸಗೊಳಿಸಲಾಗಿದೆ. ಇಲ್ಲಿ ವ್ಯಕ್ತಿಗಳೇ ಚದುರಂಗದ ಕಾಯಿಗಳಂತೆ ಬಳಕೆಯಾಗಿದ್ದು ನಾಟಕದ ಕ್ರಿಯಾಶೀಲ ಪರಿಕಲ್ಪನೆಯಾಗಿ ಮೂಡಿಬಂದಿದೆ. ರಾಜಕೀಯದ ಚದುರಂಗದಾಟ ಆಡುತ್ತಾ ಪ್ರತಿ ಪಾತ್ರಗಳನ್ನು ತನ್ನ ತಂತ್ರಗಾರಿಕೆಯಿಂದ ಮುನ್ನಡೆಸುತ್ತಾ ಹೋಗುವ ತುಘಲಕ್ ಕೊನೆಗೆ ತಾನೇ ಆಟದ ಕಾಯಿಯಾಗಿ ಇಡೀ ವ್ಯವಸ್ಥೆಗೆ ಬಲಿಯಾಗಿ ಸೋಲುವ ರೀತಿಯನ್ನು ಸೊಗಸಾಗಿ ತೋರಿಸಲಾಗಿದೆ

    ಬೆಳಕಿನ ವಿನ್ಯಾಸ (ವಿನಯ್ ಚಂದ್ರ) ತುಂಬಾ ಮನಮೋಹಕವಾಗಿದೆಯಾದರೂ ಅದರ ನಿರ್ವಹಣೆಯಲ್ಲಿ ಸಮಸ್ಯೆಯಾಗಿದೆ. ಬೆಳಕು ಕೆಲವೊಮ್ಮೆ ಕಲಾವಿದರು ಸರಿಯಾಗಿ ಕಾಣದಂತೆ ಮಂದವಾಗಿ ಬೆಳಗಿ ಕಲಾವಿದರ ಮುಖದ ಭಾವನೆಗಳನ್ನು ಮರೆಮಾಡಿದೆ. ಒಟ್ಟಾರೆಯಾಗಿ ದೃಶ್ಯದ ಮೂಡಿಗೆ ತಕ್ಕಂತೆ ಮೂಡಿಬಂದಿದೆ. ನಾಟಕಕ್ಕೆ ಮೂಡ್ ಕಟ್ಟಿಕೊಡುವಲ್ಲಿ ಹಿನ್ನೆಲೆ ಸಂಗೀತ ಸಂಯೋಜನೆ ಗಮನಾರ್ಹವಾದ ಕೊಡುಗೆ ಕೊಟ್ಟಿದೆ. ದ್ವನಿ ನಿರ್ವಹಣೆ ಪ್ರತಿ ದೃಶ್ಯಕ್ಕೂ ಸಿಂಕ್ ಆಗಿದೆ. ಪ್ರತಿಯೊಂದು ಮೂವಮೆಂಟ್ ಬ್ಲಾಕಿಂಗ್ ಕರಾರುವಕ್ಕಾಗಿವೆ. ಬಣ್ಣಬಣ್ಣದ ಕಾಸ್ಟೂಮ್ಗಳು, ಪಾತ್ರೋಚಿತವಾದ ಪ್ರಸಾದನ (ಮೋಹನ್), ಎಲ್ಲವೂ ನಾಟಕವನ್ನು ಕಟ್ಟಿಕೊಡುವಲ್ಲಿ ಮಹತ್ತರವಾಗಿವೆ
         
   ರಂಗತಂತ್ರಗಳಿಗೆ ಬಹುತೇಕ ತಮ್ಮೆಲ್ಲಾ ಅನುಭವವನ್ನು ದಾರೆಯೆರೆದು ನಿರ್ದೇಶಕರು ಕಲಾವಿದರನ್ನು ಮೋಲ್ಡ್ ಮಾಡುವುದರಲ್ಲಿ ಇನ್ನೂ ಶ್ರಮಿಸಬೇಕಾಗಿತ್ತು. ಆದರಲ್ಲೂ ಪ್ರಮುಖವಾಗಿ ತುಘಲಕ್ ಪಾತ್ರದ ಅಭಿನಯ ಸಾಮರ್ಥ್ಯವನ್ನು ಹೆಚ್ಚಿಸಬಹುದಾಗಿತ್ತು. ತುಘಲಕ್ ಪಾತ್ರದಾರಿ ವೆಂಕಟೇಶ ಪ್ರಸಾದ ದೇಹಗಾತ್ರದಲ್ಲಿ ಹಾಗೂ ಆಹಾರ್ಯಾಭಿನಯದಲ್ಲಿ ತುಘಲಕ್ನ್ನೇ ಮೀರಿಸುವಂತಿದ್ದಾರೆ. ಆದರೆ ಸಂಭಾಷಣೆಯಲ್ಲಿನ್ನೂ ಏರಿಳಿತ ಬೇಕಾಗಿತ್ತು, ಮಾತಿನಲ್ಲಿ ಇನ್ನೂ ಪೋರ್ಸ ಇರಬೇಕಿತ್ತು. ಆಂಗಿಕಾಭಿನಯದಲ್ಲೂ ಸಹ ಸರ್ವಾಧಿಕಾರಿಯೊಬ್ಬನ ಗತ್ತು ತೋರಿಸಬೇಕಿತ್ತು. ಚಲನವಲನದಲ್ಲಿನ್ನೂ ಖದರ್ ಬೇಕಾಗಿತ್ತು. ಭಾವಾಭಿನಯ ತುಂಬಾ ದುರ್ಭಲವಾಗಿತ್ತು. ಹೀಗಾಗಿ ಸಿ.ಆರ್.ಸಿಂಹರವರ ಅಮೋಘ ಅಭಿನಯ ಆಗಾಗ ನೆನಪಾಗಿದ್ದಂತೂ ಸುಳ್ಳಲ್ಲ.  ಅಗಸ ಅಝೀಝ ಆಗಿ ಸಿದ್ದಾರ್ಥರ ಪ್ಲೆಕ್ಸಿಬಲ್ ನಟನೆ ಮತ್ತು ವಿಶಿಷ್ಟ ಡೈಲಾಗ್ ಡೆಲಿವರಿ ಎಲ್ಲರ ಗಮನ ಸೆಳೆಯಿತು. ಏನೆ ಅನ್ನಲಿ ರಂಗತಂತ್ರಗಳ ವೈಭವದಲ್ಲಿ ಕಲಾವಿದರ ಸಾಮರ್ಥ್ಯ ಮಂಕಾದಂತೆ ಕಂಡುಬಂದಿತು. ಹಾಗಾಗಿಯೇ ಸಮುದಾಯದ ತುಘಲಕ್ ನಿರ್ದೇಶಕರ ನಾಟಕವೆಂದೆನಿಸಿಕೊಂಡಿತು. ಹೀಗಾಗಿ ಇಡೀ ನಾಟಕ ಕಣ್ಮನ ಸೆಳೆಯಿತಾದರೂ ಪ್ರೇಕ್ಷಕರ ಎದೆಗೆ ಮುಟ್ಟಲಿಲ್ಲ, ಭಾವನಾತ್ಮಕವಾಗಿ ನೋಡುಗರನ್ನು ಕಾಡಲಿಲ್ಲ.      

        ನಾಲ್ಕು ದಶಕಗಳ ನಂತರವೂ ನಾಟಕ ಇನ್ನೂ ತನ್ನ ಪ್ರಸ್ತುತತೆಯನ್ನು ಕಳೆದುಕೊಂಡಿಲ್ಲ. ಯಾಕೆಂದರೆ ತುಘಲಕ್ ಕಾಲದ ಧರ್ಮಾಂದರು, ಕೋಮುವಾದಿಗಳು, ದ್ರೋಹಿಗಳು, ಪ್ರಜಾಹಿಂಸಕರೂ, ಶೋಷಕರು... ಪ್ರಜಾಪ್ರಭುತ್ವದ ಪ್ರಸ್ತುತ ಕಾಲಘಟ್ಟದಲ್ಲೂ ಬೇಕಾದಷ್ಟಿದ್ದಾರೆ. ತುಘಲಕ್ ತನ್ನ ಆಡಳಿತ ಸುಗಮಗೊಳಿಸಲು ಹಿಂದೂಗಳ ಮನವೊಲಿಸಿದಂತೆ ಈಗ ನಮ್ಮನ್ನಾಳುವ ರಾಜಕಾರಣಿಗಳು ತಮ್ಮ ಮತಬ್ಯಾಂಕಿಗಾಗಿ ಮುಸ್ಲಿಂರನ್ನು ಓಲೈಸುತ್ತಾರೆ. ತುಘಲಕ್ ಹಿಂಸಾತ್ಮಕ ಆಡಳಿತವನ್ನೇ ಆಂತರಿಕವಾಗಿ ರೂಢಿಸಿಕೊಂಡ ನಮ್ಮ ಈಗಿನ ಪ್ರಭುಗಳಿಗೆ ತುಘಲಕ್ಗಿರುವ ಮುಂದಾಲೋಚನೆಯೂ ಇಲ್ಲ, ಆದರ್ಶ ರಾಜ್ಯದ ಪರಿಕಲ್ಪನೆಯೂ ಇಲ್ಲ. ಆದರೆ ರಾಜಕೀಯದ ಚದುರಂಗದಾಟದಲ್ಲಿ ತುಘಲಕ್ನನ್ನೂ ಮೀರಿಸಿದ ಪಂಟರ್ಗಳು ಇಂದು ನಮ್ಮನ್ನಾಳುತ್ತಿದ್ದಾರೆ. ಹೀಗಾಗಿ ತುಘಲಕ್ ನಾಟಕ ಸಮಕಾಲೀನತೆಗೆ ಸಮೀಕರಣಗೊಳ್ಳುತ್ತದೆ ಹಾಗೂ ಪ್ರಸ್ತುತವಾಗಿದೆ. ಚಾರಿತ್ರಿಕ ಸಂದರ್ಭವನ್ನು ಆಧುನಿಕ ನೆಲೆಯಲ್ಲಿ ಪರಿಶೋಧಿಸುವುದೇ ಕಾರ್ನಾಡರ ತುಘಲಕ್ ನಾಟಕದ ಆಶಯವೂ ಆಗಿದೆ.    

                                                                                  -ಶಶಿಕಾಂತ ಯಡಹಳ್ಳಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ