ಮಂಗಳವಾರ, ಡಿಸೆಂಬರ್ 10, 2013

ಸಿಜಿಕೆ ರಾಷ್ಟ್ರೀಯ ರಂಗೋತ್ಸವದ ಸುತ್ತ :




                                       ರಂಗಾನುಭವ:


 



ಮೊನ್ನೆ ಕನ್ನಡದ  ಅತ್ಯುತ್ತಮ ಕಲಾ ನಿರ್ದೇಶಕ ಶಶಿಧರ್ ಅಡಪರವರು ರವೀಂದ್ರ ಕಲಾಕ್ಷೇತ್ರದ  ಆವರಣದಲ್ಲಿ ಸಿಕ್ಕಿದ್ದರು. ಸಿಜಿಕೆ ರಾಷ್ಟ್ರೀಯ ರಂಗೋತ್ಸವದ ಪೂರ್ವ ತಯಾರಿಯಲ್ಲಿ ತೀವ್ರವಾಗಿ ತೊಡಗಿಕೊಂಡಿದ್ದರು. 'ಥೀಯಟರ್ ಕೆಲಸ  ಅನ್ನೋದು ಸಿಕ್ಕಾಪಟ್ಟೆ ಲಾಸ್ ವ್ಯವಹಾರ'  ಎಂದು ಅವಲತ್ತುಕೊಂಡರು.  'ಯಾಕೆ ನಾಟಕಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೇಕಾದಷ್ಟು ಅನುದಾನ ಕೊಡ್ತಿದೆಯಲ್ಲಾ, ಅದರಿಂದ ಬೇಕಾದಷ್ಟು ಜನ ಲಾಭ ಮಾಡ್ಕೊಂತಿದ್ದಾರಲ್ಲಾ?' ಎಂದು ಪ್ರಶ್ನಿಸಿದೆ. ಸುಳ್ಳು ಲೆಕ್ಕ ತೋರಿಸಿ ಮಾಡ್ಕೊಳ್ಳೋರು ಮಾಡ್ಕೊಳ್ಳಲಿ ಆದರೆ ನಿಜವಾದ ಅರ್ಥದಲ್ಲಿ ಪ್ರಾಮಾಣಿಕವಾಗಿ ನಾಟಕಗಳನ್ನು ಮಾಡುವವರ ಖರ್ಚು ಹಾಗೂ ಅಷ್ಟೊಂದು ಜನರ ಪರಿಶ್ರಮವನ್ನು ಲೆಕ್ಕಾ ಹಾಕಿದರೆ ನಾಟಕ ಮಾಡುವುದು ನಷ್ಟದ ವ್ಯವಹಾರವಾಗಿದೆ' ಎಂದು ಹೇಳುತ್ತಾ ಲೆಕ್ಕಾಚಾರಗಳನ್ನು ಬಿಚ್ಚಿಡತೊಡಗಿದರು.

          "ಜನವರಿ 13 ರಿಂದ 17ರವರೆಗೆ 'ಸಿಜಿಕೆ' ಹೆಸರಿನಲ್ಲಿ ರಂಗನಿರಂತರ ತಂಡ ರಾಷ್ಟ್ರೀಯ ನಾಟಕೋತ್ಸವವನ್ನು ಆಯೋಜಿಸಿದೆ. ಒಂದು ಕನ್ನಡ ನಾಟಕವೂ ಸೇರಿದಂತೆ ಮಲಯಾಳಂ, ಬೆಂಗಾಲಿ, ಮರಾಠಿ ಹಾಗೂ ಹಿಂದಿ... ಹೀಗೆ ಒಟ್ಟು ಐದು ನಾಟಕಗಳ ಪ್ರದರ್ಶನವಿರುತ್ತದೆ. ಒಟ್ಟಾರೆ ನಾಟಕೋತ್ಸವದ ಬಜೆಟ್ ಇರೋದು ಹದಿಮೂರುವರೆ ಲಕ್ಷ ರೂಪಾಯಿಗಳು. ರವೀಂದ್ರ ಕಲಾಕ್ಷೇತ್ರದಲ್ಲಿರುವ 800 ಸೀಟುಗಳ ಟಿಕೆಟನ್ನು ತಲಾ 50 ರೂಪಾಯಿಯಂತೆ ಮಾರಾಟ ಮಾಡಿದರೂ ಸಹ ಒಂದು ನಾಟಕಕ್ಕೆ  ನಲವತ್ತು ಸಾವಿರ ಬರುತ್ತದೆ. ಐದೂ ನಾಟಕಗಳು ಹೌಸ್ ಫುಲ್ ಓಡಿದರೂ ಸಹ  ಎರಡು ಲಕ್ಷ ರೂಪಾಯಿ ಹಣ ಸಂಗ್ರಹವಾಗುತ್ತದೆ. ಕನ್ನಡ ಸಂಸ್ಕೃತಿ ಇಲಾಖೆ ಅಬ್ಬಬ್ಬಾ ಅಂದರೆ ಐದು ಲಕ್ಷ ಕೊಡಬಹುದು. ಇಷ್ಟಾದರೂ ಇನ್ನೂ ಆರುವರೆ ಲಕ್ಷ ರೂಪಾಯಿ ಹಣವನ್ನು ಎಲ್ಲಿಂದ ತರುವುದು?" ಎಂದು ಶಶಿಧರ್ ಅಡಪ ನಿಟ್ಟುಸಿರುಬಿಟ್ಟರು.

          "ಪ್ರೇಕ್ಷಕರು ಕೊಡುವುದು ಐವತ್ತು ರೂಪಾಯಿಗಳಾದರೆ ನಾವು ಪ್ರತಿಯೊಬ್ಬ ಪ್ರೇಕ್ಷಕರಿಗೆ ಮಾಡುವ ವೆಚ್ಚ 375 ರೂಪಾಯಿಗಳು.  ಅದು  ಹೇಗೆಂದರೆ ಒಟ್ಟು ಖರ್ಚಾಗುವ ಹಣ ಹದಿಮೂರುವರೆ ಲಕ್ಷ. ಐದೂ ನಾಟಕಗಳ  ಪ್ರದರ್ಶನಗಳು  ಹೌಸಪುಲ್ ಆಗಿವೆ ಅಂದುಕೊಳ್ಳೋಣ.  ಆಗ 800 ಸೀಟುಗಳನ್ನು 5 ರಿಂದ ಗುಣಿಸಿದರೆ ಒಟ್ಟು 4000 ಜನ ನಾಟಕವನ್ನು ತಲಾ 50 ರೂಪಾಯಿ ಕೊಟ್ಟು ನೋಡಿದ್ದಾರೆ ಎಂದುಕೊಳ್ಳೋಣ, ಹದಿಮೂರುವರೆ ಲಕ್ಷ ರೂಪಾಯಿಗಳನ್ನು 4000 ದಿಂದ ಭಾಗಿಸಿದರೆ ಪ್ರತಿಯೊಬ್ಬ ಪ್ರೇಕ್ಷಕನಿಗೆ 338 ರೂಪಾಯಿಗಳಾಗುತ್ತದೆ. ಅಂದರೆ 288 ರೂಪಾಯಿಗಳ ನಿವ್ವಳ ಲಾಸ್. ಬಹುಷಃ ಯಾವುದೇ ವ್ಯವಹಾರದಲ್ಲೂ ಕೂಡಾ ಹೀಗೆ ನಷ್ಟವಾಗುತ್ತದೆ ಎಂದು ಗೊತ್ತಿದ್ದರೂ ಅಂತಹ ಕೆಲಸವನ್ನು ಉತ್ಸಾಹದಿಂದ ಮಾಡಲು ಸಾಧ್ಯವೇ ಇಲ್ಲಾ. ಅದು ರಂಗಭೂಮಿಯಲ್ಲಿ ಮಾತ್ರ ಸಾಧ್ಯ. ಯಾಕೆಂದರೆ ರಂಗಕ್ರಿಯೆ ವ್ಯವಹಾರವಲ್ಲ. ನಾಟಕೋತ್ಸವಕ್ಕಾಗಿ ಮೂರು ತಿಂಗಳು ಕೆಲಸ ಮಾಡುತ್ತಿರುವ ನಮ್ಮೆಲ್ಲರ ಶ್ರಮವನ್ನು ಹಣದಲ್ಲಿ ಲೆಕ್ಕಹಾಕಿದರೆ ಇನ್ನೂ ಹೆಚ್ಚು ನಷ್ಟವನ್ನು ಲೆಕ್ಕಹಾಕಬಹುದಾಗಿದೆ. "  ಹೀಗೆ ರಂಗಭೂಮಿಯ  ಆಂತರಿಕ ಅರ್ಥಶಾಸ್ತ್ರವನ್ನು ಬಿಡಿಬಿಡಿಸಿಟ್ಟರು ಅಡಪ.

          ಇಷ್ಟೆಲ್ಲಾ ನಷ್ಟವಾಗುವುದು ಮೊದಲೆ ಗೊತ್ತಿದ್ದರೂ ಯಾಕೆ ಇವರು ಇಷ್ಟೊಂದು ಸಂಭ್ರಮದಿಂದ ನಾಟಕೋತ್ಸವ ಮಾಡುತ್ತಿದ್ದಾರೆ? ಅದು ರಂಗಭೂಮಿಯ ಮೇಲಿರುವ ಪ್ರೀತಿಗೆ, ಅದಕ್ಕಿಂತಲೂ ಹೆಚ್ಚಾಗಿ ಸಿಜಿಕೆ ಮೇಲಿರುವ ಗೌರವಕ್ಕೆ. ರಂಗನಿರಂತರ ತಂಡವನ್ನು ಕಟ್ಟುವುದರ ಜೊತೆಗೆ ಅನೇಕ ಪ್ರತಿಭಾವಂತರನ್ನೂ ಅದರ ಜೊತೆಗೆ ಬೆಳೆಸಿದ ಸಿಜಿಕೆ ಯವರ ನೆನಪಿನಲ್ಲಿ ಲಾಭನಷ್ಟಗಳಾಚೆ ನಿಂತು ನಾಟಕೋತ್ಸವವನ್ನು ಕಟ್ಟುವ ಕೆಲಸಕ್ಕೆ ಕಂಕಣಬದ್ದರಾದವರ ನಿಷ್ಟೆಯನ್ನು ಗಮನಿಸಿದರೆ ರಂಗಭೂಮಿಯ ಕರಳು ಬಳ್ಳಿಯ ಸಂಬಂಧಗಳು ತರ್ಕಾತೀತವಾಗಿ ಗೋಚರಿಸುತ್ತವೆ. 

ಡಿ.ಕೆ.ಚೌಟರವರು ಹಿನ್ನೆಲೆಯಲ್ಲಿ ಗಟ್ಟಿಯಾಗಿ ನಿಂತಿದ್ದಾರೆ, ಅನೇಕ ಉತ್ಸಾಹಿ ಯುವಕರು ನಾಟಕೋತ್ಸವದ ಯಶಸ್ಸಿಗಾಗಿ ಒಂದು ತಿಂಗಳು ಮುಂಚೆಯಿಂದಲೇ ಸ್ವಂತ ಕೆಲಸ ಕಾರ್ಯಗಳನ್ನು ಬದಿಗಿಟ್ಟು ಶ್ರಮಿಸುತ್ತಿದ್ದಾರೆ. ಎಲ್ಲರಿಗಿಂತ ಶಶಿಧರ ಅಡಪ ತಮ್ಮ ಸಿನೆಮಾ ಕೆಲಸಗಳನ್ನು ಪಕ್ಕಕ್ಕಿಟ್ಟು ರಂಗೋತ್ಸಕ್ಕಾಗಿ ರವೀಂದ್ರ ಕಲಾಕ್ಷೇತ್ರದಲ್ಲೇ ನೆಲೆಯೂರಿದ್ದಾರೆ. ಅಚ್ಚರಿಯ ವಿಷಯವೆಂದರೆ ಇದರಲ್ಲಿ ಯಾರಿಗೂ ಯಾವುದೇ ರೀತಿಯ  ಆರ್ಥಿಕ ಪ್ರತಿಫಲಾಕ್ಷೆಗಳಿಲ್ಲ  ಅಪೇಕ್ಷಿಸಿದರೂ ಇಲ್ಲಿ ಸಿಕ್ಕುವುದೂ ಇಲ್ಲಾ. ಭಗವದ್ಘೀತೆಯಲ್ಲಿ ಶ್ರೀಕೃಷ್ಣ  "ಕರ್ಮ ನೀನು ಮಾಡು ಫಲಾಫಲಗಳನ್ನು ಕೇಳಬೇಡ"  ಎಂದು ಹೇಳಿರುವುದಕ್ಕೆ ಪೂರಕವಾಗಿ ರಂಗನಿರಂತರದ ಯುವ ರಂಗಕರ್ಮಿಗಳು ನಡೆದುಕೊಳ್ಳುತ್ತಿದ್ದಾರೆ. 
 
ಸಿಜಿಕೆ
ಇಲ್ಲೊಂದು ವಿಶೇಷವನ್ನು ಗಮನಿಸಲೇಬೇಕು. ಹವ್ಯಾಸಿ ರಂಗಭೂಮಿಯಲ್ಲಿ ರಂಗತಂಡಗಳು ಒಬ್ಬನ  ಆಸಕ್ತಿ ಮತ್ತು ಹಿತಾಸಕ್ತಿಯನ್ನಾಧರಿಸಿ ಕಟ್ಟಲ್ಪಟ್ಟಿರುತ್ತವೆ. ರಂಗತಂಡದ ಮುಂಚೂಣಿಯಲ್ಲಿರುವ ವ್ಯಕ್ತಿ ಯಾವುದೋ ಕಾರಣದಿಂದ ರಂಗಕ್ರಿಯೆಯಿಂದ ಹಿಂದೆ ಸರಿದರೆ   ಅಥವಾ ನಿಧನರಾದರೆ  ಆ ತಂಡ ನಿಷ್ಕ್ರೀಯವಾಗುತ್ತದೆ. ಇದು ಅನೇಕ ಸಂದರ್ಭದಲ್ಲಿ ಸಾಬೀತಾಗಿದೆ. ಆದರೆ ಸಿಜಿಕೆ ಶಕ್ತಿ ಅದೆಷ್ಟು ಪರಿಣಾಮಕಾರಿ ಎಂದರೆ ಅವರ ದೇಹಾಂತ್ಯದ ನಂತರವೂ ಸಹ  ಅವರು ಕಟ್ಟಿ ಬೆಳೆಸಿದ 'ರಂಗನಿರಂತರ' ತಂಡ ಕ್ರಿಯಾಶೀಲವಾಗಿದೆ.  ಸಿಜಿಕೆ ಹೆಸರಲ್ಲಿ ಪ್ರತಿವರ್ಷ ನಾಟಕೋತ್ಸವಗಳನ್ನು ಏರ್ಪಡಿಸುತ್ತದೆ. ವರ್ಷಕ್ಕೊಂದು ಇಲ್ಲವೆ ಎರಡು ನಾಟಕಗಳನ್ನು ನಿರ್ಮಿಸಿ ಹಲವಾರು ಪ್ರದರ್ಶನಗಳನ್ನೂ ಮಾಡುತ್ತದೆ. ಹೀಗಾಗಿ ಸಿಜಿಕೆ ದೈಹಿಕವಾಗಿ ಇಲ್ಲವಾದರೂ ಅವರು ಬೆಳೆಸಿಹೋದ ಹಲವಾರು ರಂಗಕರ್ಮಿಗಳ ಮನದಾಳದಲ್ಲಿ ಇನ್ನೂ ಜೀವಂತವಾಗಿದ್ದಾರೆ. ಅವರ ಮೂಲಕ ರಂಗಕ್ರಿಯೆ ಸಿಜಿಕೆ ಅನುಪಸ್ಥಿತಿಯಲ್ಲೂ ನಿರಂತರವಾಗಿದೆ. ಇದು ನಿಜಕ್ಕೂ ಕನ್ನಡ ಹವ್ಯಾಸಿ ರಂಗಭೂಮಿಯಲ್ಲಿ ಮಾದರಿಯಾಗಿದೆ. 


                                                         -ಶಶಿಕಾಂತ ಯಡಹಳ್ಳಿ 


            

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ