ನಾಟಕ ವಿಮರ್ಶೆ :
‘ಒಂದಾನೊಂದು ಕಾಲದಲ್ಲಿ’ ಗಿರೀಶ್ ಕಾರ್ನಾಡರು ಬರೆದು ನಿರ್ದೇಶಿಸಿದ ಕನ್ನಡ ಚಲನಚಿತ್ರ. 1978ರಲ್ಲಿ ಬಿಡುಗಡೆಯಾಗಿ ಅತ್ಯುತ್ತಮ ಕನ್ನಡ ಚಲನಚಿತ್ರ ರಾಷ್ಟ್ರೀಯ ಪ್ರಶಸ್ತಿಯನ್ನು ಹಾಗೂ ರಾಜ್ಯ ಪ್ರಶಸ್ತಿಯನ್ನೂ ಪಡೆದಿತ್ತು. ಈ ಸಿನೆಮಾದ ಇನ್ನೊಂದು ವಿಶೇಷತೆ ಎಂದರೆ ಇದು ನಟ ಶಂಕರನಾಗ್ರವರ ಮೊದಲ ಸಿನೆಮಾ. ಜಪಾನಿನ ಸುಪ್ರಸಿದ್ದ ಸಿನೆಮಾ ನಿರ್ದೇಶಕ ಅಕಿರಾ ಕುರಾಸಾವರ ಸಮುರಾಯ್ ಸಿನೆಮಾದಿಂದ ಪ್ರೇರೇಪಣೆ ಹೊಂದಿ ‘ಒಂದಾನೊಂದು ಕಾಲದಲ್ಲಿ’ ಸಿನೆಮಾವನ್ನು ಕಾರ್ನಾಡರು ಕಟ್ಟಿಕೊಟ್ಟಿದ್ದರು. ಈ ಸಿನೆಮಾ ಈಗ ರಂಗದಂಗಳದಲ್ಲಿ ನಾಟಕರೂಪದಲ್ಲಿ ಪ್ರದರ್ಶನವಾಗಿ ಗಮನ ಸೆಳೆಯಿತು.
ಕನ್ನಡ ರಂಗಭೂಮಿಯಲ್ಲಿ ಯಶಸ್ವಿಯಾದ ಅದೆಷ್ಟೋ ನಾಟಕಗಳು ಸಿನೆಮಾಗಳಾಗಿವೆ. ಭಾರತೀಯ ಮೊಟ್ಟ ಮೊದಲ ಸಿನೆಮಾ ‘ರಾಜಾಹರಿಶ್ಚಂದ್ರ’ ನಾಟಕದ ಸಿನೆಮಾ ರೂಪಾಂತರವೇ ಆಗಿದೆ. ನಾಗಮಂಡಲ, ಸಿಂಗಾರೆವ್ವ, ಕಾಕನಕೋಟೆ, ವಸಂತಸೇನೆ, ತಬರನ ಕಥೆ... ಹೀಗೆ ಹಲವಾರು ನಾಟಕಗಳು ಕನ್ನಡ ಚಲನಚಿತ್ರವಾಗಿವೆ. ಆದರೆ ಈಗ ಸಿನೆಮಾ ಒಂದು ನಾಟಕರೂಪದಲ್ಲಿ ಪ್ರದರ್ಶನಗೊಂಡಿರುವುದು ಅಪರೂಪದ ವಿದ್ಯಮಾನ. ಗಿರೀಶ ಕಾರ್ನಾಡರ ‘ಒಂದಾನೊಂದು ಕಾಲದಲ್ಲಿ’ ಎನ್ನುವ ಪ್ರಶಸ್ತಿ
ಪುರಸ್ಕೃತ ಚಲನಚಿತ್ರವನ್ನು ರಾಜಗುರು ಹೊಸಕೋಟೆಯವರು ನಾಟಕವಾಗಿ ರೂಪಾಂತರಿಸಿ ‘ರಂಗಪಯಣ’ ತಂಡಕ್ಕೆ
ನಿರ್ದೇಶಿಸಿದ್ದಾರೆ. ‘ರವೀಂದ್ರ ಕಲಾಕ್ಷೇತ್ರ-೫೦ ಸುವರ್ಣ ಸಂಭ್ರಮ’ ರಂಗೋತ್ಸವದಲ್ಲಿ 2013, ಡಿಸೆಂಬರ್ 10 ರಂದು ‘ಒಂದಾನೊಂದು ಕಾಲದಲ್ಲಿ’ ನಾಟಕ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡಿತು.
ನಾಟಕದ ಕಥೆ ಹೀಗಿದೆ. ಮೂರು ಜನ ಅಣ್ಣ ತಮ್ಮಂದಿರು ಜಮೀನ್ದಾರರು. ಇಬ್ಬರು ತಮ್ಮಂದಿರು ಸೇರಿ ಹಿರಿಯಣ್ಣನನ್ನು ಮೋಸದಿಂದ ಕೊಂದು ಜಹಗೀರನ್ನು ಹಂಚಿಕೊಳ್ಳುತ್ತಾರೆ. ಸತ್ತ ಅಣ್ಣನ ಮಗ ಜಯಕೇಶಿಯನ್ನು ಮಾರನಾಯಕ ಸಾಕುತ್ತಾನೆ. ಆ ಜಯಕೇಶಿಯನ್ನು ಸಾವಂತ್ರಿ ಎನ್ನುವ ಯುವತಿ ಪ್ರೀತಿಸುತ್ತಿರುತ್ತಾಳೆ. ನಂತರ ಆ ದಾಯಾದಿಗಳಿಬ್ಬರೂ
ಶತ್ರುಗಳಾಗಿ ಭೂಒಡೆತನಕ್ಕಾಗಿ ಒಬ್ಬರ ಮೇಲೊಬ್ಬರು ಕತ್ತಿ ಮಸೆಯುತ್ತಿರುತ್ತಾರೆ. ಜೊತೆಗೆ ಖಾಸಗಿ ಬಂಟರ ಪಡೆಯನ್ನು ನಿಯಮಿಸಿಕೊಂಡಿರುತ್ತಾರೆ. ತಮ್ಮನು ದಂಡನಾಯಕ ಪೆರುಮಾಳಿಯ ನೇತೃತ್ವದಲ್ಲಿ ಅಣ್ಣ ಮಾರನಾಯಕನ ಜಮೀನನ್ನು ಆಕ್ರಮಿಸಿಕೊಂಡಿರುತ್ತಾನೆ. ನಂತರ ಮಾರನಾಯಕ ಗಂಡುಗಲಿಯನ್ನು ತನ್ನ ಬಂಟರ ಗುಂಪಿಗೆ ಸೇರಿಸಿಕೊಳ್ಳುತ್ತಾನೆ. ಗಂಡುಗಲಿ ತನ್ನ ಚಾತುರ್ಯದಿಂದ ಶತ್ರುಗಳನ್ನು ಚೆಲ್ಲಾಪಿಲ್ಲಿ ಮಾಡಿ ಚಳ್ಳೆಹಣ್ಣು ತಿನ್ನಿಸುತ್ತಾನೆ. ತಂತ್ರಗಾರಿಕೆ ಮಾಡಿ ಶತ್ರುಗಳ ದನಗಳನ್ನು ಹೊಡೆದುಕೊಂಡು ಬರುತ್ತಾನೆ. ಸೆರೆ ಸಿಕ್ಕ ಎದುರಾಳಿ ಪಡೆಯ ಪೆರುಮಾಳನನ್ನು ಕ್ಷಮಿಸಿ ಬಿಡುಗಡೆಗೊಳಿಸುತ್ತಾನೆ. ಪೆರುಮಾಳನನ್ನು ಬಿಟ್ಟಿದ್ದಕ್ಕೆ ಮಾರನಾಯಕ ಗಂಡುಗಲಿಯ ನಿಯತ್ತಿನ ಮೇಲೆ ಸಂದೇಹ ವ್ಯಕ್ತಪಡಿಸಿ ಆತನ ಮೇಲೆ ಕಣ್ಣಿಡಲು ಬಂಟರನ್ನು ನಿಯಮಿಸುತ್ತಾನೆ. ಸೆರೆಸಿಕ್ಕು ಬಂದ ಪೆರಮಾಳಿಗೆ ಆತನ ಯಜಮಾನ ಅವಮಾನಿಸುತ್ತಾನೆ. ಪೆರಮಾಳಿಯ ಮಗ ಗಂಡುಗಲಿಯ ತಲೆತರುವುದಾಗಿ ಪ್ರತಿಜ್ಞೆ ಮಾಡಿ, ಗಂಡುಗಲಿಯನ್ನು ಕೊಲ್ಲಲು ಹೋಗಿ ಮಾರನಾಯಕನ ಬಂಟರಿಂದ ಸಾಯಿಸಲ್ಪಡುತ್ತಾನೆ. ಇತ್ತ ಅವಮಾನವನ್ನು ಸಹಿಸದೇ ಗಂಡುಗಲಿ ಅಣ್ಣ ಮಾರನಾಯಕನನ್ನು ತೊರೆದರೆ ಅತ್ತ ಪೆರುಮಾಳಿ ತನಗಾದ ಅವಮಾನಕ್ಕೆ ಒಡೆಯನನ್ನು ಬಿಡುತ್ತಾನೆ. ಈ ಇಬ್ಬರೂ ಬಾಡಿಗೆ ಬಂಟರು ಸಂದಿಸಿ ಯುದ್ದ ಮಾಡುತ್ತಾರೆ. ಕೊನೆಗೆ ಪೆರಮಾಳಿಯ ಮಗನನ್ನು ತಾನು ಕೊಂದಿಲ್ಲವೆಂದು ಗಂಡುಗಲಿ ಹೇಳಿದಾಗ ಇಬ್ಬರೂ ರಾಜಿಯಾಗುತ್ತಾರೆ. ತನಗಾದ ಅವಮಾನ ಮತ್ತು ತನ್ನ ಮಗನ ಕೊಲೆಗೆ ಪ್ರತೀಕಾರವಾಗಿ ಈ ನಾಯಕರ ವಂಶವನ್ನೇ ನಿರ್ವಂಶ ಮಾಡುವುದಾಗಿ ಪೆರುಮಾಳಿ ಪ್ರಕಟಿಸಿ ಗಂಡುಗಲಿಯ ಸಹಕಾರ ಕೇಳುತ್ತಾನೆ. ಜಯಕೇಶಿಯನ್ನು ಉಳಿಸುವುದಾದರೆ ತಾನು ಜೊತೆಯಾಗುವುದಕ್ಕೆ ಸಿದ್ದ ಎನ್ನುತ್ತಾನೆ ಗಂಡುಗಲಿ. ಈ ಇಬ್ಬರೂ ಬಂಟರು ಒಂದಾಗಿ ತಮ್ಮನ್ನು ಕೊಲ್ಲಲು ಬರುತ್ತಿದ್ದಾರೆನ್ನುವುದು ತಿಳಿದ ಆ ಇಬ್ಬರೂ ದಾಯಾದಿಗಳು ತಮ್ಮ ಶತ್ರುತ್ವವನ್ನು ತೊರೆದು ಒಂದಾಗುತ್ತಾರೆ. ತಮ್ಮ ಮನೆಯವರನ್ನೆಲ್ಲ ಬೇರೆಕಡೆಗೆ ಕಳುಹಿಸುತ್ತಾರೆ. ನಾಯಕರ ಬಂಟರ ಪಡೆಯನ್ನು ಗಂಡುಗಲಿ ಮತ್ತು ಪೆರುಮಾಳಿ ಇಬ್ಬರೂ ಸೇರಿ ಸೆದೆಬಡಿಯುತ್ತಾರೆ. ಹಿಂದಿನಿಂದ ಬಂದ ಮಾರನಾಯಕ ಗಂಡುಗಲಿಯನ್ನು ಕೊಲ್ಲುತ್ತಾನೆ. ಪೆರುಮಾಳಿ ಆ ಇಬ್ಬರೂ ದಾಯಾದಿಗಳನ್ನು ಕೊಂದುಹಾಕುತ್ತಾನೆ. ಗಂಡುಗಲಿಗೆ ಕೊಟ್ಟ ಮಾತಿನಂತೆ ಪೆರುಮಾಳಿಯು ಜಯಕೇಶಿಗೆ ಜಮೀನುದಾರಿಕೆಯ ಒಡೆತನ ಅನುಭವಿಸಲು ಹೇಳಿ ಹೊರಟು ಹೋಗುತ್ತಾನೆ. ಹೀಗೊಂದು ಶತ್ರುಸಂಹಾರದ ಮಾರಣಹೋಮದ ಕಥೆ ಕೊನೆಗೊಳ್ಳುತ್ತದೆ.
ಈ ಕಥೆಗೆ ನಿರ್ದಿಷ್ಟ ಕಾಲಘಟ್ಟವೆಂಬುದಿಲ್ಲ. ಅದಕ್ಕಾಗಿಯೇ ಈ ಕಥಾನಕಕ್ಕೆ ‘ಒಂದಾನೊಂದು
ಕಾಲದಲ್ಲಿ’ ಎಂದು ಕರೆದಿರುವುದು. ಯಾವುದೋ ಕಾಲದಲ್ಲಿ ಆಗಿದೆ ಎಂದು ಊಹಿಸಿ ಬರೆದ ಕಥಾನಕವಿದು. ಮಹಾಭಾರತದಂತೆ ಇಲ್ಲಿಯೂ ದಾಯಾದಿಗಳ ದ್ವೇಷ ಹಾಗೂ ಅಧಿಕಾರಕ್ಕಾಗಿ ಕಾದಾಟವಿದೆ. ದಂಡನಾಯಕರು ತಮ್ಮ ಒಡೆಯರಿಗೆ ತೋರುವ ನಿಷ್ಟೆಯೂ ಇದೆ. ಈ ಕಥೆ ಹೇಗೆ ಮಹಾಭಾರತಕ್ಕಿಂತ ಭಿನ್ನವಾಗುತ್ತದೆಂದರೆ, ಯಾವಾಗ ಈ ದಂಡನಾಯಕರ ನಿಷ್ಟೆಯನ್ನೇ ಅವರ ನಾಯಕರುಗಳು ಸಂದೇಶಿಸುತ್ತಾರೋ ಆಗ ಅವರು ತಮ್ಮ ಸ್ವಾಭಿಮಾನಕ್ಕಾಗಿ ಈ ದಂಡನಾಯಕರು ದೊರಗಳ ವಿರುದ್ಧವೇ ತಿರುಗಿ ಬೀಳುತ್ತಾರೆ. ಕೊಂದು ಸೇಡು ತೀರಿಸಿಕೊಳ್ಳುತ್ತಾರೆ. ಮಹಾಭಾರತ ಮತ್ತು ಅಕಿರಾ ಕುರುಸಾವಾರ ಸಮುರಾಯ್ ಈ ಎರಡೂ ದೃಶ್ಯಕಾವ್ಯಗಳ ಪ್ರೇರಣೆ ಈ ‘ಒಂದಾನೊಂದು ಕಾಲ’ ಕಥಾನಕದಲ್ಲಿ ದಟ್ಟವಾಗಿ ಮೇಳೈಸಿದೆ.
ಶೋಷಕರ ಅಟ್ಟಹಾಸವೇ ನಮ್ಮ ಪುರಾಣಗಳಲ್ಲಿ ಹಾಸುಹೊಕ್ಕಾಗಿದೆ. ಆದರೆ ಅಂತವರ ಅಟ್ಟಹಾಸಕ್ಕೆ ಅವರ ಬಂಟರೇ ಬಂಡೆದ್ದು ಪ್ರತೀಕಾರ ತೀರಿಸಿಕೊಂಡಿರುವುದು ಯಾವ ಪುರಾಣ ಕಥೆಗಳಲ್ಲಿ ದಾಖಲಾಗಿಲ್ಲ. ಯಾಕೆಂದರೆ ಹಾಗೇನಾದರೂ ದಾಖಲಾದರೆ ಅದೇ ಶೋಷಕ ವರ್ಗಗಳಿಗೆ ಪ್ರೇರಣೆ ನೀಡಿ ಜಮೀನ್ದಾರರನ್ನು, ಪಾಳೇಗಾರರನ್ನು, ದೊರೆಗಳನ್ನೂ ಸರ್ವನಾಶಮಾಡಬಹುದು ಎನ್ನುವ ಭಯ ಇರುವುದರಿಂದ ಆ ರೀತಿಯ ಕಥಾನಕಗಳು ಸೃಷ್ಟಿಯಾಗಿಲಿಲ್ಲ. ಹಾಗೇನಾದರೂ ಆಳುವ ವರ್ಗಗಳ ವಿರುದ್ಧ ಸಕಾರಣವಾಗಿ ದಂಗೆ ಎದ್ದರೂ ಅದನ್ನು ವಿಶ್ವಾಸಘಾತುಕ ನಡೆಯೆಂದು ಗುರುತಿಸಿ ಕೊಲ್ಲಲಾಗುತ್ತಿತ್ತು. ಇತಿಹಾಸದಲ್ಲಿ ಇಂತಹ ಕೆಲವು ದಂಗೆಯ ಘಟನೆಗಳನ್ನು ಗುರುತಿಸಬಹುದಾದರೂ ಅವುಗಳ ಅಂತ್ಯ ಮಾತ್ರ ದುರಂತವೇ ಆಗಿವೆ. ಅದಕ್ಕೆ ಉದಾಹರಣೆ ಸಿಪಾಯಿದಂಗೆ.
ಆದರೆ ಸಿನೆಮಾಗಳಲ್ಲಿ ಈ ರೀತಿಯ ಘಟನೆಗಳು ಬೇಕಾದಷ್ಟು ಬಂದಿವೆ. ಶೋಷಣೆಯ ವಿರುದ್ಧ ತಿರುಗಿಬಿದ್ದು ಗೆದ್ದ ಹೀರೋಯಿಸಂ ಉಳ್ಳ ಊಹಾತ್ಮಕ ಸಿನೆಮಾಗಳಿಗೇನೂ ಕೊರತೆ ಇಲ್ಲ. ಅದೇ ರೀತಿಯ ಸೂತ್ರಕ್ಕೆ ಬದ್ದವಾದ ಸಿನೆಮಾ / ನಾಟಕ ಈ ‘ಒಂದಾನೊಂದು ಕಾಲದಲ್ಲಿ’. ಈ ಕಥೆ ಸಿನೆಮಾ ಆಗಲಿಕ್ಕೆ ಸರಿಯಾಗಿದೆಯೇ ಹೊರತು ನಾಟಕವಾಗುವುದಕ್ಕಲ್ಲ. ಯಾಕೆಂದರೆ ಈ ಹೀರೋಯಿಸಂ, ಸಾಹಸವಾದಗಳು ಸಿನೆಮಾದ ಭಾಗವಾಗಿವೆ. ಆದರೆ ನಾಟಕ ಬಹುತೇಕ ಸತ್ಯಕ್ಕೆ ಹತ್ತಿರವಾಗಿದ್ದನ್ನು ಹೇಳುವ ಮಾಧ್ಯಮವಾಗಿದೆ. ಹವ್ಯಾಸಿ ರಂಗಭೂಮಿಯಂತೂ ವೈಚಾರಿಕ ನೆಲೆಗಟ್ಟಿನ ಮೇಲೆ, ಸಾಧ್ಯವಾದಷ್ಟು ತಾತ್ವಿಕ ಅಡಿಪಾಯದ ಮೇಲೆ ಕಟ್ಟಲ್ಪಟ್ಟಿದೆ.
ಹಿಂಸೆ ಈ ನಾಟಕದ ಸ್ಥಾಯಿಭಾವ. ಹಿರಿಯಣ್ಣನನ್ನು ತಮ್ಮಂದಿರು ಕೊಲ್ಲುವಂತಹ ಹಿಂಸೆಯಿಂದ ಆರಂಭವಾದ ಈ ಕಥೆ ಕೊನೆಗೆ ಉಳಿದಿಬ್ಬರು ತಮ್ಮಂದಿರ ನಡುವಿನ ನಿರಂತರ ದ್ವೇಷ ಕ್ರೌರ್ಯದಲ್ಲಿ ಮಿಂದು ಕೊನೆಗೆ ಎಲ್ಲಾ ಶೋಷಕರ ಕೊಲೆಯಲ್ಲಿ ಪರ್ಯವಸಾನವಾಗುತ್ತದೆ. ಜಯಕೇಶಿ ಮತ್ತು ಸಾವಂತ್ರಿಯ ಮುಗ್ದ ಪ್ರೀತಿ ಈ ನಾಟಕದಲ್ಲಿ ಮೂಡಿಬಂದಿದ್ದರೂ ಅದೂ ಸಹ ಸೇಡಿನ ಸನ್ನಿವೇಶಗಳಲ್ಲಿ ಪ್ರಮುಖ ಎನ್ನಿಸುವುದಿಲ್ಲ. ಆದರೆ ಈ ಎಲ್ಲಾ ಹಿಂಸೆಗಳೂ ಕೊನೆಗೆ ಪ್ರತಿಹಿಂಸೆಯಲ್ಲಿಯೇ ಕೊನೆಯಾಗುತ್ತವೆ ಎನ್ನುವುದನ್ನು ಈ ನಾಟಕ ಪ್ರಮುಖವಾಗಿ ಸಾರುತ್ತದೆ. ಜೊತೆಗೆ ನಿಜವಾದ ಪ್ರೀತಿಯೇ ಅಂತಿಮವಾಗಿ ಜಯಿಸುತ್ತದೆ ಎನ್ನುವುದನ್ನೂ ಸಾಂಕೇತಿಕವಾಗಿ ಹೇಳಲಾಗಿದೆ.
ಈ ನಾಟಕ ಈಗಿನ ಕಾಲಕ್ಕೆ ಪ್ರಸ್ತುತವೇ ಎನ್ನುವ ಪ್ರಶ್ನೆ ಏಳುತ್ತದೆ. ಯಾಕೆಂದರೆ ಈಗ ಒಂದಾನೊಂದು ಕಾಲದ ಜಮೀನ್ದಾರಿ ಪಾಳೇಗಾರಿಕೆ ಪಳುವಳಿಕೆಯಾಗಿದೆ. ಬಂಟರ ಪಡೆಗಳನ್ನಿಟ್ಟುಕೊಂಡು ಕೊಲೆಗಳನ್ನು ಮಾಡಿಸುವಂತಹ ದುಷ್ಕೃತ್ಯಗಳು ಕಾನೂನಿಗೆ ವಿರುದ್ದವಾಗಿವೆ. ಶೋಷಕರು ಈಗ ರಾಜಕೀಯ ಸೇರಿದ್ದಾರೆ, ಇಲ್ಲವೇ ಉದ್ಯಮಿಗಳಾಗಿದ್ದಾರೆ, ಇಲ್ಲವೇ ಕಾರ್ಪೋರೇಟ್ ಸೆಕ್ಟರ್ಗಳಲ್ಲಿದ್ದಾರೆ, ಆಳುವ ವರ್ಗಗಳ ಸುಲಿಗೆಯ ಮಾನದಂಡಗಳು ಬದಲಾಗಿವೆ. ಇಂತಹ ಬದಲಾದ ಕಾಲಘಟ್ಟದಲ್ಲಿ ಒಂದಾನೊಂದು ಕಾಲದ ಕಥೆ ಅದೆಷ್ಟು ಸೂಕ್ತ ಎನ್ನುವುದು ಈ ನಾಟಕ ನೋಡಿದವರಿಗೆ ಕಾಡದೇ ಇರದು.
ಈ ನಾಟಕದ ಶಕ್ತಿ ಮತ್ತು ದೌರ್ಬಲ್ಯ ಈ ನಾಟಕದಲ್ಲಿ ಬಳಸಲಾದ ಹಾಡು ಮತ್ತು ಹಿನ್ನೆಲೆ ಸಂಗೀತಗಳಾಗಿವೆ. ಈ ನಾಟಕವನ್ನು ನಿರ್ದೇಶಿಸಿದ ರಾಜಗುರು ಸ್ವತಃ ಸಂಗೀತ ನಿರ್ದೇಶಕರಾಗಿದ್ದರಿಂದ ಹಾಡುಗಳನ್ನು ಸಶಕ್ತವಾಗಿ ಸಂಯೋಜಿಸಿದ್ದಾರೆ. ಬಿಚ್ಚುಗತ್ತಿಯ ಬಂಟನ ಕಥೆಯ ಬಲ್ಲಿರೇನಾ ಯಾರಾ?... ಹಾಡು ಕೇಳುಗರಲ್ಲಿ ಸಂಚಲನವನ್ನು ಹುಟ್ಟಿಸುವಂತಿದೆ. ಆದರೆ ಇದೇ ಹಾಡು ಆಗಾಗ ನಾಟಕದಾದ್ಯಂತ ರಿಪೀಟ್ ಆಗುವುದರಿಂದ ಒಂದಿಷ್ಟು ಏಕತಾನತೆಯನ್ನೂ ಸೃಷ್ಟಿಸಿದೆ. ಜೊತೆಗೆ ದೃಶ್ಯ ಮತ್ತು ಹಾಡು ಪೈಪೋಟಿಗೆ ಬಿದ್ದು ಕೊನೆಗೆ ಸಂಗೀತದ ಅಬ್ಬರವೇ ಜಾಸ್ತಿಯಾಗಿ ನಾಟಕದ ರಸಸ್ವಾದದಲ್ಲಿ ವ್ಯತ್ಯಯವನ್ನುಂಟುಮಾಡಿದಂತಿದೆ. ಆಲಾಪಗಳು ಕೆಲವೊಮ್ಮೆ ಸಂಭಾಷಣೆಯನ್ನೇ ನುಂಗುವಂತಿರುವುದು ಪ್ರೇಕ್ಷಕರಿಗೆ ಕಸಿವಿಸಿಯನ್ನುಂಟುಮಾಡಿದೆ. ಹಾಡು ಸಂಗೀತಗಳು ನಾಟಕಕ್ಕೆ ಪೂರಕವಾಗಿರಬೇಕೆ ಹೊರತು ನಾಟಕವನ್ನು ಓವರ್ಟೇಕ್ ಮಾಡುವಂತಾಗಬಾರದು. ಮುಂದಿನ ಪ್ರದರ್ಶನಗಳಲ್ಲಿ ಈ ನಿಟ್ಟಿನಲ್ಲಿ ನಿರ್ದೇಶಕರು ಯೋಚಿಸುವುದುತ್ತಮ.
ಸಿನೆಮಾದಲ್ಲಿ ಆದಂತೆ ಈ ನಾಟಕದಲ್ಲೂ ಕೂಡಾ ಭಾಷೆಗೂ ವೇಷಕ್ಕೂ ಸಂಬಂಧವೇ ಇಲ್ಲವಾಗಿದೆ. ಉತ್ತರ ಕರ್ನಾಟಕದ ಭಾಷೆಯನ್ನು ನಾಟಕದಾದ್ಯಂತ ಬಳಸಲಾಗಿದೆ. ಆದರೆ ಪಾತ್ರಗಳ ಕಾಸ್ಟೂಮ್ಗಳು ಉತ್ತರ ಕರ್ನಾಟಕದ್ದಲ್ಲ. ಮಹಿಳಾ ಪಾತ್ರದಾರಿಗಳಿಗೆ ಕೊಡಗಿನ ರೀತಿಯಲ್ಲಿ ಸೀರೆ ಉಡಿಸಿದ್ದು ಯಾಕೋ ಗೊತ್ತಾಗುತ್ತಿಲ್ಲ. ಒಂದಾನೊಂದು ಕಾಲದ ಕಥೆಯಾದ್ದರಿಂದ ಯಾವುದಾದರೂ ವೇಷ ಇರಲಿ ಎನ್ನಬಹುದಾದರೂ ನಾಟಕದಲ್ಲಿ ಕೆಲವು ಪಾತ್ರಗಳು ಉತ್ತರ ಕರ್ನಾಟಕದ ಭಾಷೆ ಮಾತಾಡಿದರೆ ಇನ್ನು ಕೆಲವರು ಬೆಂಗಳೂರಿನ ಭಾಷೆಯಲ್ಲೇ ಮಾತಾಡುತ್ತಿದ್ದರು. ಕಲಾವಿದರ ಭಾಷೆಯ ಮೇಲೆ ಇನ್ನೂ ನಿರ್ದೇಶಕರು ನಿಗಾವಹಿಸಬೇಕಿತ್ತು.
ಆರಂಭದಲ್ಲಿ ಶಂಕರನಾಗ ರೀತಿಯ ಪಾತ್ರವನ್ನು ವೇದಿಕೆಗೆ ತಂದು ಅವರ ದ್ವನಿಯಲ್ಲಿ ನಾಟಕದ ತಂತ್ರಜ್ಞರನ್ನು ಪರಿಚಯಿಸಲಾಗಿದೆ. ಆದರೆ ಇದು ಯಾಕೋ ಸಿನಮೀಯ ಶೈಲಿಯಾಗಿದ್ದು ನೋಡುಗರ ಚಪ್ಪಾಳೆ ಗಿಟ್ಟಿಸುವ ಹೀರೋ ಬಿಲ್ಡಪ್ ಗಿಮಿಕ್ ಆಗಿದೆ. ಇದರ ಅಗತ್ಯವೇ ಈ ನಾಟಕಕ್ಕಿರಲಿಲ್ಲ. ಈ ನಾಟಕದಲ್ಲಿ ಗಂಡುಗಲಿ ಪಾತ್ರವು ತನ್ನ ಪಾತ್ರವನ್ನು ಅಭಿನಯಿಸುತ್ತಲೇ ಕಥೆಯ ನಿರೂಪನೆಯನ್ನೂ ಮಾಡುತ್ತದೆ. ಬ್ರೆಕ್ಟ್‌ನ ಡಿಸ್ಟನ್ಸ ಥೀಯರಿಯನ್ನು ಅಳವಡಿಸಲಾಗಿದೆ. ಆದರೆ ಈ ರಂಗತಂತ್ರ ನೋಡುಗರಲ್ಲಿ ಕೆಲವೊಮ್ಮೆ ರಸಭಂಗವನ್ನುಂಟು ಮಾಡಿದ್ದಂತೂ ಸುಳ್ಳಲ್ಲ. ಅದೇನೇ ಆದರೂ ನಾಟಕದ ಪಾತ್ರ ಹಂಚಿಕೆಯಲ್ಲಿ ನಿರ್ದೇಶಕರು ಗೆದ್ದಿದ್ದಾರೆ. ಪ್ರತಿ ಪಾತ್ರಕ್ಕೆ ಸೂಕ್ತವಾಗಿ ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ಗಂಡುಗಲಿ (ರೇಣು) ಮತ್ತು ಪೆರುಮಾಳಿ (ಹರೀಶ್) ಈ ಎರಡೂ ಪ್ರಮುಖ ಪಾತ್ರಗಳು ನಾಟಕದಾದ್ಯಂತ ತಮ್ಮ ಕಟ್ಟುಮಸ್ತು ದೇಹ ಹಾಗೂ ಅಭಿನಯದಿಂದ ಗಮನ ಸೆಳೆಯುತ್ತಾರೆ. ಮಾರನಾಯಕ (ನಾಗರಾಜ) ಮತ್ತು ಆತನ ತಮ್ಮನ (ಉದಯ್) ಪಾತ್ರಗಳ ನಟನೆಯಲ್ಲಿ ಇನ್ನೂ ಎನರ್ಜಿ ಬೇಕಾಗಿತ್ತು. ಪುರುಷ ಪ್ರಧಾನ ನಾಟಕವಾಗಿದ್ದರಿಂದ ಈ ನಾಟಕದಲ್ಲಿ ಮಹಿಳೆಯರ ಪಾತ್ರಗಳಿಲ್ಲಿ ನಗಣ್ಯವಾಗಿವೆ. ಜಯರಾಜ್ರವರ ಪ್ರಸಾದನ ಹಾಗೂ ನವೀನ್ರವರ ಬೆಳಕು ವಿನ್ಯಾಸ ನಾಟಕದ ಸೊಗಸನ್ನು ಹೆಚ್ಚಿಸಿವೆ. ಸಿನೆಮಾದಲ್ಲಿರುವಂತೆ ಈ ನಾಟಕದಲ್ಲೂ ಯುದ್ದಕಲೆ ಸಂಯೋಜನೆ (ಮಹೇಶ ಪತ್ತಾರ್) ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಆದರೆ ಕೈಯಲ್ಲಿರುವ ಕತ್ತಿ ಬಿಟ್ಟು ಕೋಲು ಹಿಡಿದು ಬಡೆದಾಡುವ, ಕೋಲು ಬಿಟ್ಟು ಕೈಯಲ್ಲಿ ಗುದ್ದಾಡುವ ರೀತಿ ಸಿಕ್ಕಾಪಟ್ಟೆ ಅತಾರ್ಕಿಕವೆನಿಸುತ್ತದೆ.
ರಾಜಗುರು ಹೊಸಕೋಟೆ |
ಈ ನಾಟಕದ ನಿರ್ದೇಶಕರು ಮೂಲ ಸಿನೆಮಾವನ್ನೇ ನಾಟಕದಲ್ಲಿ ಬಹುತೇಕ ಅನುಕರಿಸಿದ್ದಾರೆ. ಕಥಾಹಂದರವನ್ನಷ್ಟೇ ಇಟ್ಟುಕೊಂಡು ಸಿನಮೀಯತೆಯನ್ನು ಬದಿಗಿಟ್ಟು ಕ್ರಿಯಾಶೀಲವಾಗಿ ನಾಟಕೀಯತೆಯನ್ನು ನಿರೂಪಿಸಿದ್ದರೆ ತಮ್ಮತನವನ್ನು ರಾಜಗುರು ತೋರಬಹುದಾಗಿತ್ತು. ಅದಕ್ಕೆ ಬೇಕಾದಷ್ಟು ಅವಕಾಶಗಳು ಈ ಕಥಾನಕದಲ್ಲಿವೆ. ಕಥೆಯ ರೂಪಾಂತರವಾಗುವ ಬದಲು ಸಿನೆಮಾದ ರಂಗರೂಪಾಂತರವಾಗಿ ‘ಒಂದಾನೊಂದು ಕಾಲದಲ್ಲಿ’ ಮೂಡಿಬಂದಿದೆ.
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ