ಮಂಗಳವಾರ, ಡಿಸೆಂಬರ್ 17, 2013

ಆಂಗ್ಲಮಯ 'ರಂಗಶಂಕರ' ದಲ್ಲಿ ಕನ್ನಡ ನಾಟಕಗಳ ನಿರ್ಲಕ್ಷ :




ಗಮನ  ಇಟ್ಟು ನೋಡಿ 'ರಂಗಶಂಕರ' ಎನ್ನುವುದು ಅದು ಹೇಗೆ ಕನ್ನಡ ರಂಗಭೂಮಿಯ ವಿರೋಧಿಯಾಗಿದೆ ಎನ್ನುವುದನ್ನು. ಅದಕ್ಕೊಂದು ತಾಜಾ ಉದಾಹರಣೆ ಡಿಸೆಂಬರ್ ತಿಂಗಳಲ್ಲಿ ಆಯೋಜನೆಗೊಂಡ ನಾಟಕಗಳ  ಪಟ್ಟಿಯನ್ನೊಮ್ಮೆ ಪರಿಶೀಲಿಸಿ.

ಒಟ್ಟು ಡಿಸೆಂಬರ್ ತಿಂಗಳಲ್ಲಿ ಇರೋದು 31 ದಿನಗಳು. ಪ್ರತಿ ಸೋಮವಾರ ರಂಗಶಂಕರ ರಜಾ. ಅಂದರೆ ಒಟ್ಟು ಆರು ಸೋಮವಾರಗಳನ್ನು ಕಳೆದರೆ ಉಳಿಯುವುದು 25 ಪ್ರದರ್ಶನದ ದಿನಗಳು. 25 ದಿನಗಳಲ್ಲಿ ಇಂಗ್ಲಿಷ ನಾಟಕಗಳ ಪ್ರದರ್ಶನಗಳಿರುವುದು ಬರೊಬ್ಬರಿ 16 ದಿನಗಳು. (ಅವೂ ಸಹ ಎಂಟೇ ನಾಟಕಗಳಾದರೂ ಒಂದೊಂದು ನಾಟಕದ ಎರಡು ಮೂರು  ಮರುಪ್ರದರ್ಶನಗಳು.)  ತಿಂಗಳಲ್ಲಿ ಪ್ರದರ್ಶನಗೊಳ್ಳಲಿರುವ  ಒಟ್ಟು ಕನ್ನಡ ನಾಟಕಗಳ ಸಂಖ್ಯೆ ಕೇವಲ 9. ಯಾವುದೂ ರಿಪೀಟ್ ಶೋಗಳಿಲ್ಲ. ಒಂಬತ್ತು  ನಾಟಕಗಳಲ್ಲೇ  ಕಲಾಗಂಗೋತ್ರಿ ತಂಡದ ರಂಗಮಹೋತ್ಸವದ ಕಾರಣಕ್ಕೆ ಆರು ನಾಟಕಗಳ ಪ್ರದರ್ಶನಗಳಿವೆ. ಅಂದರೆ 'ರಂಗಶಂಕರ' ಎನ್ನುವುದು ಇಂಗ್ಲೀಷ್ ರಂಗಭೂಮಿಯನ್ನು ಪ್ರಮೋಟ್ ಮಾಡಲು ಇರುವ ಕನ್ನಡಿಗರ ರಂಗಮಂದಿರ ಎನ್ನುವುದು ಖಾತ್ರಿಯಾಯಿತು. 'ರಂಗಶಂಕರ' ಕನ್ನಡ ನಾಟಕಗಳನ್ನು ಮಲತಾಯಿ ಧೋರಣೆಯಿಂದ ನೋಡುತ್ತಿರುವುದು ಸಾಬಿತಾಯಿತು.


ಯಾಕೆ ಹೀಗೆ?  ಕರ್ನಾಟಕ ಸರಕಾರದಿಂದ ಭೂಮಿದಾನ ಪಡೆದು, ಕನ್ನಡಿಗರ ಸಹಾಯ ಮತ್ತು ಸಹಕಾರದಿಂದ  ಆರುಂಧತಿನಾಗ್ ರವರ ಒಡೆತನದಲ್ಲಿ ಪಕ್ಕಾ ಕನ್ನಡದ ಪ್ರತಿಭೆ ಶಂಕರನಾಗ್ ರವರ ಹೆಸರಿನಲ್ಲಿ  ಬೆಂಗಳೂರಿಗರ ಹೆಮ್ಮೆಯ ರಂಗಕೇಂದ್ರವಾಗಿ 'ರಂಗಶಂಕರ' ಹುಟ್ಟಿಕೊಂಡಿತ್ತು.  ರಂಗಮಂದಿರ ಕಟ್ಟುವಲ್ಲಿ ಅರುಂಧತಿನಾಗ್ ರವರ ಸಾಧನೆ ಸಾಹಸ ಸ್ಮರಣಾರ್ಹ. ಆದರೆ ಆರುಂಧತಿನಾಗ್ ಹಾಗೂ ಗಿರೀಶ್ ಕಾರ್ನಾಡರಂತವರ ವಿದೇಶಿ ಭಾಷಾ ಪ್ರೇಮ ಹಾಗೂ ಪರದೇಶಿ ಸಂಸ್ಕೃತಿಯ ಮೋಹದಿಂದಾಗಿ  'ರಂಗಶಂಕರ' ಎನ್ನುವುದು ಪರಕೀಯ ಭಾಷಾ ರಂಗಪ್ರಯೋಗಗಳ ತಾಣವಾಗಿದೆ.  ಅಲ್ಲಿ ಹೆಚ್ಚು ಕಡಿಮೆ ಇಂಗ್ಲೀಷ ವಾತಾವರಣವೇ ಸೃಷ್ಟಿಯಾಗಿದೆ. ಹೀಗಾಗಿ ಕನ್ನಡ ನಾಟಕಗಳನ್ನು ಪ್ರದರ್ಶಿಸುವುದೇ ಒಂದು ರೀತಿಯಲ್ಲಿ  ಹರಸಾಹಸವೆನಿಸುತ್ತದೆ.

ಇಡೀ ರಂಗಮಂದಿರ  ಆರುಂಧತಿ ನಾಗ್ ಅಥವಾ ಗಿರೀಶ ಕಾರ್ನಾಡರಂತವರ ಸ್ವಂತ ಹಣದಲ್ಲಿ ನಿರ್ಮಿತವಾಗಿದ್ದರೆ ಅದು ಸಂಪೂರ್ಣ ಖಾಸಗಿ ಸ್ವತ್ತಾಗುತ್ತಿತ್ತು.  ಹೀಗೆ ರಂಗಶಂಕರವನ್ನು ಪ್ರಶ್ನಿಸುವುದು ಸಾಧ್ಯವಾಗುತ್ತಿರಲಿಲ್ಲ.  ಆದರೆ ರಾಜ್ಯ ಸರಕಾರ ಭೂಮಿಯನ್ನು ಕೊಡುವುದರ ಜೊತೆಗೆ  ಅನುದಾನವನ್ನೂ ಕೊಟ್ಟಿದೆ. ಜೊತೆಗೆ ಅದೆಷ್ಟೋ ಕನ್ನಡಿಗರು ಬೇರೆ ಬೇರೆ ರೀತಿಯಲ್ಲಿ ಸಹಕಾರ ಕೊಟ್ಟಿದ್ದಾರೆ. ಕನ್ನಡ ರಂಗಭೂಮಿಯ ಬೆಳವಣಿಗೆಗೆ ಸಹಕಾರಿಯಾಗಲಿ ಎಂಬುದೇ ಸರಕಾರದ ಮತ್ತು ಸರಕಾರೇತರರ ಆಶಯವಾಗಿತ್ತು. ಆದರೆ 'ರಂಗಶಂಕರ' ಈಗ ಬೇರೆ ಭಾಷೆಗಳ ಅದರಲ್ಲೂ ಆಂಗ್ಲಭಾಷಾ ರಂಗಪ್ರಯೋಗಗಳಿಗೆ ಮುಕ್ತವಾಗಿರುವುದು ನಿಜಕ್ಕೂ ಕಳವಳಕಾರಿಯಾಗಿದೆ.

ಇದಕ್ಕೆ ಏನು ಕಾರಣ? ಮೊದಲನೆಯದಾಗಿ ಆರುಂಧತಿನಾಗ್ ಮತ್ತು ಅವರ ಜೊತೆಯಲ್ಲಿರುವವರ ಆಂಗ್ಲ  ಮೋಹ ಮತ್ತು ಜಾಗತೀಕರಣ ಹುಟ್ಟಿಸಿದ ವಿಕೃತ ಮುಕ್ತ ಸಂಸ್ಕೃತಿಯ ಮೇಲಿನ ವ್ಯಾಮೋಹ.   ಎರಡನೆಯದಾಗಿ ಐಟಿ ಬಿಟಿ ಕಾಲಸೆಂಟರ್ ಗಳಲ್ಲಿರುವ ಕನ್ನಡೇತರ ಪ್ರೇಕ್ಷಕರನ್ನು ರಂಗಪ್ರದರ್ಶನಕ್ಕೆ ಆಕರ್ಷಿಸುವ ದಾವಂತ. ಸೂಕ್ಷ್ಮವಾಗಿ ಗಮನಿಸಿದರೆ ಕನ್ನಡ ನಾಟಕ ಪ್ರದರ್ಶನಕ್ಕೆ ತಲಾ 50 ರೂಪಾಯಿ ಟಿಕೇಟ್ ಇಟ್ಟರೂ ರಂಗಮಂದಿರ ತುಂಬುವುದಿಲ್ಲ.  ಆದರೆ ಅದೇ ಇಂಗ್ಲೀಷ್ ನಾಟಕವಾದರೆ ತಲಾ ನೂರು ರೂಪಾಯಿ ಟಿಕೇಟ್ ಬೆಲೆ ಇಟ್ಟರೂ ಥೇಯಟರ್ ಹೌಸಪುಲ್.  ಹೀಗೆ ಹೌಸಪುಲ್ ಆಗುತ್ತದೆಂದರೆ ಯಾರು ತಾನೆ ಆಂಗ್ಲ ನಾಟಕ ಪ್ರದರ್ಶನ ಮಾಡುವುದಿಲ್ಲ?

ಸಿನೆಮಾ ಥೀಯೇಟರಗಳ ಗತಿಯೂ ಹೀಗೆ ಆಗಿ ಹಾಳಾಗಿದ್ದು. ಯಾವಾಗ  ಮಲ್ಟಿಪ್ಲೆಕ್ಸಗಳು ಬಂದು ಕನ್ನಡೇತರ ಸಿನೆಮಾಗಳನ್ನು ತೋರಿಸ ತೊಡಗಿದವೋ ಆಗ ಕನ್ನಡ ಸಿನೆಮಾ ತೋರಿಸಲೆಂದೇ ಇದ್ದ ಹಲವಾರು ಸಿನೆಮಾ ಮಂದಿರಗಳು ಬೆಂಗಳೂರಿನಲ್ಲಿ ಕಣ್ಣು ಮುಚ್ಚಿ ಮಾಲ್ ಗಳಾಗಿ ರೂಪಾಂತರ ಹೊಂದಿದವು. ಈಗ ಕನ್ನಡ ಸಿನೆಮಾ ರಿಲೀಜ ಮಾಡಬೇಕೆಂದರೆ ಮಲ್ಟಿಪ್ಲೆಕ್ಸಗಳ ಮರ್ಜಿ ಕಾಯಬೇಕು. ಅವರು ದಿನಕ್ಕೊಂದೇ ಶೋ ತೋರಿಸಿದರೂ ಸುಮ್ಮನಿರಬೇಕು. ಕಲೆಕ್ಷನ್ ಇಲ್ಲಾ ಎಂದು ಹೇಳಿ ಎರಡೇ ದಿನಕ್ಕೆ ಸಿನೆಮಾ ಎತ್ತಂಗಡಿ ಮಾಡಿದರೂ ತೆಪ್ಪಗಿರಬೇಕು. ಎಷ್ಟೇ ಆದರೂ ಅವು ಖಾಸಗಿ ಒಡೆತನದ ಮಲ್ಟಿಪ್ಲೆಕ್ಸಗಳು. ಬಹುತೇಕ ಮಲ್ಟಿಪ್ಲೆಕ್ಸಗಳ ಮಾಲೀಕರು ಕನ್ನಡಿಗರಲ್ಲ. ಇದರಿಂದಾಗಿ ಕನ್ನಡ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗಿ ಶೇಕಡಾ 80 ಸಿನೆಮಾಗಳು ಸೋಲಲು ಕಾರಣವಾಯಿತು.

ಇದೇ ರೀತಿಯಲ್ಲಿ ಕನ್ನಡ ನಾಟಕಗಳಿಗೆ ಪ್ರೇಕ್ಷಕರ ಸಂಖ್ಯೆ ಕಡಿಮೆ ಎಂದು ಹೇಳಿ ಇಂಗ್ಲೀಷ್ ನಾಟಕಗಳ ಪ್ರದರ್ಶನಗಳನ್ನು ಹೆಚ್ಚು ಮಾಡಿರುವ 'ರಂಗಶಂಕರ' ಕನ್ನಡ ರಂಗಭೂಮಿಗೆ ಒಂದು ರೀತಿಯಲ್ಲಿ ದ್ರೋಹ ಬಗೆಯುತ್ತಿದೆ. ಕನ್ನಡ ಸಿನೆಮಾಗಳನ್ನು ಪ್ರದರ್ಶಿಸದ ಸಿನೆಮಾ ಮಂದಿರಗಳ ಮೇಲೆ ದಾಳಿ ಮಾಡುವ ಕನ್ನಡ ಸಂಘಟನೆಗಳು ಇಂಗ್ಲೀಷ್ ನಾಟಕಗಳನ್ನೆ ಪ್ರಧಾನವಾಗಿ ಪ್ರದರ್ಶಿಸುವ 'ರಂಗಶಂಕರ'ಕ್ಕೆ ಕನ್ನಡ ನಾಟಕಗಳ ಪ್ರದರ್ಶನಕ್ಕೆ ಹೆಚ್ಚು ಮಹತ್ವ ಕೊಡಿ ಎಂದು ಒಂದು ಮನವಿ ಪತ್ರವನ್ನೂ ಕೊಡುವ ಮನಸ್ಸು ಮಾಡಿಲ್ಲ ಎಂಬುದೊಂದು ವಿಪರ್ಯಾಸ.

ಕರ್ನಾಟಕದ ಸಂಪನ್ಮೂಲಗಳನ್ನು ಬಳಸಿಕೊಂಡು ಅಸ್ತಿತ್ವಕ್ಕೆ ಬಂದ 'ರಂಗಶಂಕರ'ವನ್ನು ಕನ್ನಡದ ನಾಟಕಗಳಿಗೆ ಹೆಚ್ಚು ಮಹತ್ವ ಕೊಡಿ ಎಂದು ಕೇಳುವ ಹಕ್ಕು ಪ್ರತಿ ಕನ್ನಡಿಗರದ್ದಾಗಿದೆ.  ಇಡೀ ಬೆಂಗಳೂರಿನಲ್ಲಿ ನಾಟಕಗಳಿಗೆಂದೇ ಮೀಸಲಿರುವ ಒಂದೇ ಒಂದು ರಂಗಮಂದಿರ ಅಂದರೆ ಅದು 'ರಂಗಶಂಕರ' ಮಾತ್ರ.  ಅದು ನಿಜಕ್ಕೂ ಹೆಮ್ಮೆಯ ವಿಷಯ.  ಆದರೆ ಅಲ್ಲಿ ಕನ್ನಡದ ಕಂಪು ಹರಿದಾಡುತ್ತಿಲ್ಲ, ಕನಿಷ್ಟ ತಿಂಗಳಿಗೆ ಇಪ್ಪತ್ತಾದರೂ ಕನ್ನಡ ನಾಟಕಗಳು ಪ್ರದರ್ಶನವಾಗುತ್ತಿಲ್ಲ   ಎನ್ನುವ ನೋವು ಕನ್ನಡ ರಂಗನಿಷ್ಠರನ್ನು ಕಾಡದೇ ಇರುವುದಿಲ್ಲ.

ಕನ್ನಡ ನಾಟಕಗಳನ್ನೆ ಕಡ್ಡಾಯವಾಗಿ ತೋರಿಸಬೇಕು ಎನ್ನುವುದು ಈ ಲೇಖನದ  ಆಶಯವಲ್ಲ.  ಎಲ್ಲಾ ಭಾಷೆಯ  ಉತ್ತಮ ನಾಟಕಗಳು ಪ್ರದರ್ಶನಗೊಳ್ಳುವುದು ಅಪೇಕ್ಷನೀಯ.  ಕನ್ನಡ ನಾಟಕಗಳ ಪ್ರದರ್ಶನಕ್ಕೆ ಹೆಚ್ಚು ಅವಕಾಶ ಮಾಡಿಕೊಡಬೇಕು ಹಾಗೂ ರಂಗಶಂಕರದಲ್ಲಿ ಕನ್ನಡಮಯ ವಾತಾವರಣವನ್ನು ನಿರ್ಮಿಸಬೇಕು ಎನ್ನುವುದು ಕನ್ನಡ ರಂಗಭೂಮಿಯ ಬೆಳವಣಿಗೆ ದೃಷ್ಟಿಯಿಂದ ಅತ್ಯಗತ್ಯವಾಗಿದೆ.

ಕನ್ನಡ ರಂಗಭೂಮಿಯ ಹಿರಿಯ ರಂಗಕರ್ಮಿಗಳು 'ರಂಗಶಂಕರ' ಆಡಳಿತ ಮಂಡಳಿಯವರಿಗೊಂದು ಮನವಿ ಪತ್ರ ಕೊಡಬೇಕಿದೆ. ಕನ್ನಡ ನಾಟಕಗಳಿಗೆ ಹೆಚ್ಚು ಪ್ರಾಧಾನ್ಯತೆ ಕೊಡಬೇಕೆಂದು ಕೇಳಬೇಕಿದೆ. ಅದಕ್ಕೆ ಮಣಿಯದಿದ್ದರೆ ಒತ್ತಾಯಿಸಬೇಕಾಗಿದೆ. ಅದಕ್ಕೂ ಕ್ಯಾರೆ ಎನ್ನದಿದ್ದರೆ ಕನ್ನಡ ಸಂಘಟನೆಗಳ ಸಹಕಾರದೊಂದಿಗೆ ಹೋರಾಟವನ್ನು ರೂಪಿಸಬೇಕಿದೆ. ಒಟ್ಟಾರೆಯಾಗಿ  ಸರಕಾರದ ಸಹಾಯ ಹಾಗೂ ಕನ್ನಡಿಗರ ಸಹಕಾರದಿಂದ ಕನ್ನಡ ರಂಗಭೂಮಿಯ ಬೆಳವಣಿಗೆಗಾಗಿ ನಿರ್ಮಾಣಗೊಂಡ 'ರಂಗಶಂಕರ' ಕನ್ನಡಿಗರ  ಆಶೋತ್ತರಗಳಿಗಾಗಿ ಸ್ಪಂದಿಸಬೇಕಿದೆ, ಕನ್ನಡ ರಂಗಭೂಮಿಯ ಬೆಳವಣಿಗೆಗಾಗಿ ಶ್ರಮಿಸಬೇಕಿದೆ. ಆಗ  ಶಂಕರನಾಗ್ ರವರ  ಆಶಯವನ್ನು ಈಡೇರಿಸಿದಂತಾಗುತ್ತದೆ. ರಂಗಶಂಕರದ ನಿಜವಾದ  ಉದ್ದೇಶ  ಈಡೇರಿದಂತಾಗುತ್ತದೆ




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ