ಕನ್ನಡದ ಪ್ರತಿಭಾನ್ವಿತ ನಾಟಕಕಾರ ಗಿರೀಶ್ ಕಾರ್ನಾಡರು ಮತ್ತೆ
ಬೀದಿಗಿಳಿದಿದ್ದಾರೆ. ರಂಗಭೂಮಿಯ ಪರವೂ ಅಲ್ಲ, ಕನ್ನಡ ನಾಡು ನುಡಿಯ ಹಿತಾಸಕ್ತಿಗಾಗಿಯೂ ಅಲ್ಲ. ಸುಪ್ರಿಂ
ಕೋರ್ಟ ಸಲಿಂಗಕಾಮಿಗಳ ವಿರುದ್ಧ ನೀಡಿದ ತೀರ್ಪನ್ನು ವಿರೋಧಿಸಿ ಹೋರಾಡಲು ಬೀದಿಗಿಳಿದಿದ್ದಾರೆ. ಹಿಂದೆಯೂ
ಕೂಡಾ ಬಾರ್ ಡಾನ್ಸರ್ಗಳ ಹಕ್ಕಿಗಾಗಿ ಬೀದಿಗಿಳಿದಿದ್ದರು. ಈಗ ಸಲಿಂಗಕಾಮಿಗಳ ಪರವಾಗಿ ಪ್ರತಿಭಟಿಸುತ್ತಿದ್ದಾರೆ.
ಕಾರ್ನಾಡರ ಈ ಮಾನವೀಯತೆಯ ಬಗ್ಗೆ ಕನ್ನಡಿಗರು ಹೆಮ್ಮೆಪಡಬೇಕಾದದ್ದೇ ಆದರೆ......,,,,,,
ಡಿಸೆಂಬರ್
15 ಭಾನುವಾರ ಬೆಂಗಳೂರಿನ ಟೌನ್ ಹಾಲ್ ಮುಂದೆ ಸಲಿಂಗ ಸಂಬಂಧಗಳನ್ನು ಅಪರಾಧ ಎಂದು ಘೊಷಿಸಿದ ಸುಪ್ರಿಂ
ಕೋರ್ಟಿನ ತೀರ್ಪನ್ನು ವಿರೋಧಿಸಿ ಲೈಂಗಿಕ ಅಲ್ಪಸಂಖ್ಯಾತರು ಹಾಗೂ ಲೈಂಗಿಕ ಕಾರ್ಯಕರ್ತರ ಸಹಭಾಗಿ ಸಂಘಟನೆ
ಆಯೋಜಿಸಿದ ಪ್ರತಿಭಟನೆಯಲ್ಲಿ ಗಿರೀಶ್ ಕಾರ್ನಾಡರು ಮುಂಚೂಣಿಯಲ್ಲಿದ್ದರು. ರಾಷ್ಟ್ರಕವಿ ರವೀಂದ್ರನಾಥ ಟ್ಯಾಗೋರರನ್ನು 3ನೇ ದರ್ಜೆಯ ನಾಟಕಕಾರ
ಎಂದು ನಿಂದಿಸಿ ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿದಿದ್ದ ಕಾರ್ನಾಡರು ಈಗ ಸಲಿಂಗಸಂಬಂಧಗಳ
ವ್ಯಕ್ತಿ ಸ್ವಾತಂತ್ರಕ್ಕಾಗಿ ದ್ವನಿ ಎತ್ತಿದರು. ಈ ಜ್ಞಾನಪೀಠಿಗಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು
ಅಭಿನಂದಿಸೋಣ, ವ್ಯಕ್ತಿ ಸ್ವಾತಂತ್ರ್ಯದ ಪರ ನಿಲುವನ್ನೂ ಬೆಂಬಲಿಸೋಣ.
ಆದರೆ.....ಇದೇ
ಟೌನ್ ಹಾಲ್ ಮುಂದೆ 'ರಂಗಶಿಕ್ಷಕರ ನೇಮಕಾತಿಯಲ್ಲಿ ತಾರತಮ್ಯವಾಗಿದೆ' ಎಂದು ರಂಗಶಿಕ್ಷಣ ಪಡೆದ ಯುವಕರು
ನ್ಯಾಯಕ್ಕಾಗಿ ಪ್ರತಿಭಟಿಸಿದಾಗ ಕಾರ್ನಾಡರು ಬೆಂಬಲಿಸಲಿಲ್ಲ, ಇದೇ ಟೌನ್ ಹಾಲ್ ಮುಂದೆ ರಂಗಕರ್ಮಿಗಳೆಲ್ಲಾ
ಸೇರಿ ಕಾವೇರಿ ನೀರಿನ ಹಂಚಿಕೆಯಲ್ಲಾದ ಅನ್ಯಾಯವನ್ನು ಪ್ರತಿಭಟಿಸಿದಾಗ ಕಾರ್ನಾಡರು ಭಾಗವಹಿಸಲಿಲ್ಲ.
ಕರ್ನಾಟಕಕ್ಕೊಂದು ಎನ್ ಎಸ್ ಡಿ ಬೇಕು ಎಂದು ಪ್ರಸನ್ನರವರು ರವೀಂದ್ರ ಕಲಾಕ್ಷೇತ್ರದಲ್ಲಿ ಉಪವಾಸ ಕುಳಿತು
ಅಹೋರಾತ್ರಿ ಧರಣಿ ಕುಳಿತಾಗ ಇಡೀ ರಂಗಭೂಮಿ ಸ್ಪಂದಿಸಿತೇ ಹೊರತು ಕಾರ್ನಾಡರು ತೊರಿಕೆಗೂ ತೊಡಗಿಸಿಕೊಳ್ಳಲಿಲ್ಲ. ರಂಗಾಯಣದಲ್ಲಿ
ರಂಗರಾಜಕೀಯ ಮೇರೆಮೀರಿ ಕಲಾವಿದರು ಅತಂತ್ರವಾದಾಗ ಕಾರ್ನಾಡರು ಕನಿಷ್ಟ ಪ್ರತಿಕ್ರಿಯೆಯನ್ನೂ ಕೊಡಲಿಲ್ಲ.
ಕನ್ನಡ ರಂಗಭೂಮಿಗೆ ಕನ್ನಡ ನಾಡು ನುಡಿಗೆ ಅನ್ಯಾಯವಾದಾಗ
ಎಂದೂ ಸ್ಪಂದಿಸದ ಗಿರೀಶ್ ಕಾರ್ನಾಡರು ಬಾರ್ ಡಾನ್ಸರ್ಸಗಳ ಪರವಾಗಿ, ಸಲಿಂಗ ಸಂಬಂಧಗಳ ಹಕ್ಕಿನ
ಪರವಾಗಿ ಪ್ರತಿಭಟಿಸುತ್ತಾರೆಂದರೆ ನಿಜಕ್ಕೂ ಅಚ್ಚರಿ ಎನಿಸುತ್ತದೆ.
ಕಾರ್ನಾಡರು
ಪುರಾಣ ಇತಿಹಾಸಗಳನ್ನು ಆಧರಿಸಿ ಬರೆದ ನಾಟಗಳನ್ನು ಕನ್ನಡ ರಂಗಭೂಮಿ ತಲೆಮೇಲೆ ಹೊತ್ತುಕೊಂಡು ಮೆರೆಸಿತು,
ಅನೇಕ ರಂಗತಂಡಗಳು ಇವರ ನಾಟಕಗಳನ್ನಾಡಿ ಕಾರ್ನಾಡರಿಗೆ ಪ್ರಸಿದ್ದಿಯನ್ನು ತಂದುಕೊಟ್ಟರು. ಹಾಗೆ ಗಳಿಸಿದ
ಪ್ರಸಿದ್ಧಿ ಗಿರೀಶ್ ರವರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟಿತು. ಕನ್ನಡಿಗರು
ಬಲು ಹೆಮ್ಮೆಯಿಂದ ಕಾರ್ನಾಡರಿಗೆ ದೊರಕಿದ ಜ್ಞಾನಪೀಠವನ್ನು ಕಣ್ಣಿಗೊತ್ತಿಕೊಂಡು ಸ್ವಾಗತಿಸಿ ಸಂಭ್ರಮಿದರು. ಪ್ರಸಿದ್ದಿ
ಪುರಸ್ಕಾರ ಹೆಸರು ಹಣ ಎಲ್ಲದಕ್ಕೂ ಕಾರಣವಾದ ರಂಗಭೂಮಿ ಹಾಗೂ ಕನ್ನಡದ ಜನತೆಯ ಹಿತಾಸಕ್ತಿಗೆ
ಅನ್ಯಾಯವಾದಾಗಲೆಲ್ಲಾ ಅದರ ವಿರುದ್ಧ ದ್ವನಿಎತ್ತುವುದು
ಗಿರೀಶ್ ಕಾರ್ನಾಡರ ಸಾಮಾಜಿಕ ಜವಾಬ್ಧಾರಿಯಾಗಿತ್ತು. ಎಲ್ಲವನ್ನೂ ಕೊಟ್ಟ ರಂಗಭೂಮಿ ಹಾಗೂ ಈ ನಾಡಿನ
ಋಣಭಾರವನ್ನು ಅವರು ರಂಗಹಿತಾಸಕ್ತಿ ಹಾಗೂ ಕನ್ನಡಿಗರ ಹಿತಾಸಕ್ತಿಯ ಪರವಾಗಿ ನಿಲ್ಲುವ ಮೂಲಕ ಮರುಸಂದಾಯಮಾಡಬೇಕಾಗಿತ್ತು.
ಆದರೆ.... ಬಾರ್ ಸಂಸ್ಕೃತಿಯ ಪರವಾಗಿ ಯಾವಾಗ ಬೀದಿಗಿಳಿದು ಪ್ರತಿಭಟಿಸಿದರೋ ಆಗ ಕಾರ್ನಾಡರ ಬಗ್ಗೆ
ಅನುಮಾನ ಶುರುವಾಯಿತು. ತಮ್ಮನ್ನು ಹೆಚ್ಚು ಮಾಡಿಕೊಳ್ಳಲು
ಹೋಗಿ ಯಾವಾಗ ನೋಬೆಲ್ ಪ್ರಶಸ್ತಿ ಪುರಸ್ಕೃತ ನೈಪಾಲರನ್ನು ತುಂಬಿದ ಸಭೆಯಲ್ಲಿ ಅವಮಾನಿಸಿದರೋ ಆಗ ಕಾರ್ನಾಡರ
ಸಂಕುಚಿತತೆ ಗೋಚರವಾಯಿತು. ಯಾವಾಗ ರವೀಂದ್ರನಾಥ ಠಾಗೋರರನ್ನು ಮೂರನೇ ದರ್ಜೆ ನಾಟಕಕಾರ ಎಂದು ಬಹಿರಂಗವಾಗಿ ನಿಂದಿಸಿದರೋ ಆಗ ಕಾರ್ನಾಡರ ಬಗ್ಗೆ ಇದ್ದ ಅಲ್ಪಸ್ವಲ್ಪ
ಗೌರವವೂ ಗೌಣವಾಯಿತು. ಈಗ ಲೈಂಗಿಕ ಅಲ್ಪಸಂಖ್ಯಾತರು
ಹಾಗೂ ಲೈಂಗಿಕ ಕಾರ್ಯಕರ್ತರು ಮತ್ತು ಸಲಿಂಗಕಾಮಿಗಳ ಪರವಾಗಿ ಪ್ರತಿಭಟಿಸಲು ಬೀದಿಗಿಳಿದರೋ ಕಾರ್ನಾಡರ
ತುಘಲಕ್ ಮನಸ್ಥಿತಿ ಬಹಿರಂಗವಾಯಿತು.
ಕಾರ್ನಾಡರು
ಹೀಗೇಕೆ ಮಾಡುತ್ತಿದ್ದಾರೆ? ಯಾಕೆ ಕಾಮಕ್ಕೆ ಸಂಬಂಧಿಸಿದ ಘಟನೆಗಳಿಗೆ ಕೂಡಲೇ ಸ್ಪಂದಿಸುತ್ತಾರೆ? ಯಾಕೆ
ಬಾರ್ ಗರ್ಲಗಳ ಪರವಾಗಿ ನಿಲ್ಲುತ್ತಾರೆ? ಯಾಕೆ ಸಲಿಂಗಕಾಮಿಗಳ ಸಂಗಕ್ಕೆ ಸಹಮತ ವ್ಯಕ್ತಪಡಿಸಿ ಪ್ರತಿಭಟಿಸುತ್ತಾರೆ?
ತಮ್ಮೆಲ್ಲಾ ಬಹುತೇಕ ನಾಟಕಗಳಲ್ಲಿ ಕಾಮವನ್ನು ವೈಭವೀಕರಿಸುತ್ತಾರೆ? ಕಾಮವನ್ನೇ ಕೇಂದ್ರೀಕರಿಸಿದ ವಿಷಯವನ್ನಾಧರಿಸಿ
ಯಾಕೆ ನಾಟಕಗಳನ್ನು ರಚಿಸುತ್ತಾರೆ? ಪ್ರೇಮಕ್ಕಿಂತಲೂ ಯಾಕೆ ಕಾರ್ನಾಡರನ್ನು ಕಾಮ ಕಾಡುತ್ತದೆ? ಇದಕ್ಕೆಲ್ಲಾ
ಉತ್ತರ ಅವರ ಹುಟ್ಟಿನ ಗುಟ್ಟಿನಲ್ಲಿದೆ. ಅದನ್ನು ವಿವರವಾಗಿ
ಬರೆಯಬಹುದಾದರೂ ಅದರ ಅಗತ್ಯವಿಲ್ಲ
ಎನ್ನಿಸುತ್ತದೆ. ಯಾಕೆಂದರೆ ಆ ಗುಟ್ಟುಗಳನ್ನೇ ದೊಡ್ಡದಾಗಿ ಮಾಡಿ ಕಾರ್ನಾಡರ ಚಾರಿತ್ರ್ಯವಧೆ
ಮಾಡಲು ಕೋಮುವಾದಿಗಳು, ಸಾಂಪ್ರದಾಯವಾದಿಗಳು ಕಾಯುತ್ತಿದ್ದಾರೆ.
ಕಾರ್ನಾಡರ
ಈ ಕಾಮಪರ ನಿಲುವಿಗೆ ಇನ್ನೊಂದು ಪ್ರಮುಖ ಕಾರಣವನ್ನು ಗುರುತಿಸಬಹುದಾಗಿದೆ. ಅದು ಜಾಗತೀಕರಣದ ದುಷ್ಟರಿಣಾಮವಾದ
ಮುಕ್ತ ಲೈಂಗಿಕ ಸಂಸ್ಕೃತಿ. ಇದನ್ನು ವ್ಯಯಕ್ತಿಕ ಸ್ವಾತಂತ್ರ್ಯವೆಂದು
ಕಾರ್ನಾಡರು ಬಲವಾಗಿ ನಂಬಿದ್ದಾರೆ. ವ್ಯಕ್ತಿ ಸ್ವಾತಂತ್ರ್ಯವನ್ನು ಎಲ್ಲಾ ವಿಚಾರವಂತರೂ ಸ್ವಾಗತಿಸುತ್ತಾರೆ.
ಆದರೆ ವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ನಡೆಯುವ ಸ್ವೇಚ್ಛಾಚಾರವನ್ನು ವಿರೋಧಿಸುತ್ತಾರೆ. ಈ ಲೈಂಗಿಕ
ಸ್ವೇಚ್ಚಾಚಾರ ಮತ್ತು ಅದನ್ನು ಪ್ರಚೋದಿಸುವ ಮಾಧ್ಯಮಗಳಿಂದಾಗಿ ಮಹಿಳೆಯರ ಮೇಲಿನ ಲೈಂಗಿಕ ಶೋಷಣೆ ಮೇರೆ ಮೀರುತ್ತಿದೆ. ಹೆಣ್ಣನ್ನು
ಬರೀ ಭೋಗದ ವಸ್ತುವಾಗಿ ಪರಿಗಣಿಸಲಾಗುತ್ತಿದೆ. ಏಡ್ಸನಂತಹ ಮಾರಣಾಂತಿಕ ಖಾಯಿಲೆ ಹಬ್ಬುತ್ತಿದೆ. ಸಮಾಜ
ವಿಕೃತ ರೀತಿಯಲ್ಲಿ ಪಲ್ಲಟನಗೊಳ್ಳುತ್ತಿದೆ. ಬಾರ್ ಸಂಸ್ಕೃತಿ ಕೂಡಾ ಬಾರ್ ಗರ್ಲ್ ಗಳನ್ನು ಉತ್ಪಾದಿಸುವ,
ಅಶ್ಲೀಲ ಕ್ಯಾಬರೆ ನೃತ್ಯವನ್ನು ಪ್ರೋತ್ಸಾಹಿಸುವ ಹಾಗೂ ಅಲ್ಲಿಯೂ ಹೆಣ್ಣನ್ನು ಕಾಮದ ವಸ್ತುವನ್ನಾಗಿಸಿ
ಶೋಷಿಸುವ ಜೀವವಿರೋಧಿ ಕೆಲಸವೇ ನಡೆಯುತ್ತದೆ.
ಕಾರ್ನಾಡರು
ವ್ಯಕ್ತಿ ಸ್ವಾತಂತ್ರ್ಯ ಮತ್ತು ಸ್ವೇಚ್ಚಾಚಾರದ ನಡುವಿನ ಅಂತರವನ್ನು ಅರಿಯಬೇಕಾಗಿದೆ. ಲೈಂಗಿಕ ಸ್ವೇಚ್ಚಾಚಾರದಿಂದ
ಮಹಿಳೆಯರ ಮೇಲಾಗುವ ದುಷ್ಪರಿಣಾಮಗಳನ್ನು ತಿಳಿಯಬೇಕಾಗಿದೆ. ಮುಕ್ತ ಲೈಂಗಿಕತೆಯಿಂದ ಸಾಮಾಜಿಕ ಸ್ವಾಸ್ತ್ಯದ ಮೇಲಾಗುವ ಪರಿಣಾಮಗಳನ್ನು ವಿಶ್ಲೇಷಿಸಬೇಕಿದೆ.
ಜೊತೆಗೆ ತಾವು ಏರಿ ಬಂದ ರಂಗಏಣಿಯ ಸಮಸ್ಯೆಗಳತ್ತ ಗಮನಹರಿಸಿ
ಜಾಗತೀಕರಣದ ವಿಕೃತ ಸಂಸ್ಕೃತಿಗೆ ಪ್ರತಿರೋಧವಾಗಿ ದೇಸಿ ರಂಗಸಂಸ್ಕೃತಿಯ ಬೇರುಗಳನ್ನು ಗಟ್ಟಿಗೊಳಿಸುವತ್ತ
ತಮ್ಮೆಲ್ಲಾ ಪ್ರತಿಭೆ ಹಾಗೂ ಬುದ್ದಿವಂತಿಕೆಯನ್ನು ವಿನಿಯೋಗಿಸಬೇಕಿದೆ. ಆ ಮೂಲಕ ರಂಗಭೂಮಿಯ ಹಾಗೂ ಈ
ನಾಡಿನ ಋಣವನ್ನು ತೀರಿಸಬಹುದಾಗಿದೆ.
-ಶಶಿಕಾಂತ ಯಡಹಳ್ಳಿ
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ