ಗುರುವಾರ, ಡಿಸೆಂಬರ್ 24, 2015

’ಈಗ ಇರಬೇಕಿತ್ತು ಲಂಕೇಶ್’;

ಲಂಕೇಶ್ ನೆನಪಿನ  ಕಾರ್ಯಕ್ರಮ
  


ಆರವತ್ತು ಎಪ್ಪತ್ತರ ದಶಕದಲ್ಲಿ ಸಾಹಿತ್ಯ ಕ್ಷೇತ್ರವನ್ನು ಕುವೆಂಪುರವರು ಪ್ರಭಾವಿಸಿದ್ದರೆ, ಎಂಬತ್ತು ತೊಂಬತ್ತರ ದಶಕದಲ್ಲಿ ಸಾಹಿತ್ಯ ಕ್ಷೇತ್ರವನ್ನು ಆವರಿಸಿಕೊಂಡವರು ಲಂಕೇಶರವರು. ಲಂಕೇಶ್ ಬಹುಮುಖ ಪ್ರತಿಭೆ. ಸಾಹಿತಿಯಾಗಿ, ಕವಿಯಾಗಿ, ಕಥೆಗಾರರಾಗಿ, ಕಾದಂಬರಿಕಾರರಾಗಿ, ಪತ್ರಕರ್ತರಾಗಿ, ಸಂಪಾದಕರಾಗಿ, ನಾಟಕಕಾರರಾಗಿ, ಸಿನೆಮಾ ನಟ ಹಾಗೂ ನಿರ್ದೇಶಕರಾಗಿ, ಸಂಘಟಕರಾಗಿ... ವಿಭಿನ್ನ ಆಯಾಮಗಳಲ್ಲಿ  ಕ್ರಿಯಾಶೀಲವಾಗಿ ತೊಡಗಿಸಿಕೊಂಡ ಲಂಕೇಶ್ ಒಂದು ಪೀಳಿಗೆಯ ಜನರನ್ನು ಪ್ರಭಾವಿಸಿದವರು. ತಮ್ಮ ಕಾಲಘಟ್ಟದ  ಸಮಾಜದ ಸಾಕ್ಷೀ ಪ್ರಜ್ಞೆಯಾಗಿ ಕೆಲಸಮಾಡಿದ ಮಹಾನುಭಾವರು. ಅನೇಕ ಬರಹಗಾರರನ್ನು ಸೃಷ್ಟಿಸಿದವರು. ಇನ್ನೆಷ್ಟೋ ಏಕಲವ್ಯ ಪ್ರತಿಭೆಯಂತಹ ಬರಹಗಾರರಿಗೆ ಗುರು ದ್ರೋಣರಾಗಿ ಪರೋಕ್ಷವಾಗಿ ಬರವಣಿಗೆಗೆ ಸ್ಪೂರ್ತಿಯಾದವರು. ಕಾಲದ ಕನ್ನಡ ನಾಡಿನ ಜಾಣ ಜಾಣೆಯರಲಂಕೇಶ್ ಪತ್ರಿಕೆತನ್ನ ನಿಷ್ಟುರತೆ ಹಾಗೂ ವಿಡಂಬಣಾತ್ಮಕತೆಯಿಂದಾಗಿ ಎಲ್ಲರ ಗಮನ ಸೆಳೆದಿತ್ತು. ಬಹುಷಃ ಮತ್ತೆ ಅಂತಹ ಪ್ರಜ್ಞಾವಂತ ಪತ್ರಿಕೆ ಕನ್ನಡ ನಾಡಿನಲ್ಲಿ ಬರಲೇ ಇಲ್ಲಾ ಎಂದರೆ ಅತಿಶಯೋಕ್ತಿ ಏನಲ್ಲಾ.

ಲಂಕೇಶ್ ಪತ್ರಿಕೆಕೇವಲ ಪತ್ರಿಕೆಯಾಗಿರಲಿಲ್ಲ. ಆಳುವ ವ್ಯವಸ್ಥೆ ಯಾವುದೇ ಇರಲಿ ಅದರ ವಿರೋಧ ಪಕ್ಷದ ರೀತಿಯಲ್ಲಿ ಜನರನ್ನು ಜಾಗೃತಗೊಳಿಸಿದ್ದು ಲಂಕೇಶರ ಸಾಮಾಜಿಕ ಬದ್ಧತೆಗೆ ಸಾಕ್ಷಿಯಾಗಿದೆ. ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರದ ವಿರುದ್ಧ ಅಕ್ಷರ ಸಮರವನ್ನೇ ಪ್ರತಿ ವಾರ ಸಾರಿದ ಲಂಕೇಶ್ ಸರಕಾರದ ಅವನತಿಗೆ ಕಾರಣವಾಗಿದ್ದಂತೂ ಸತ್ಯ. ಪತ್ರಿಕೆಯೊಂದು ಜನರಲ್ಲಿ ಪರಿ ವಿವೇಚನೆಯನ್ನು ಮೂಡಿಸಿ ಸರಕಾರವನ್ನೇ ಅಲ್ಲಾಡಿಸಿ ಬೀಳಿಸಲು ಕಾರಣವಾಗಿದ್ದು ಹಾಗೂ ಜನತಾದಳ ಪಕ್ಷ ಅಧಿಕಾರಕ್ಕೆ ಬರುವಂತೆ ಮಾಡಿದ್ದು ಬಹುಷಃ ಟ್ಯಾಬ್ಲೈಡ್ ಪತ್ರಿಕೋದ್ಯಮದ ಚರಿತ್ರೆಯಲ್ಲೇ ಇಲ್ಲಾ. ಲಂಕೇಶರಿಗೆ ಯಾರೂ ಸರಿಸಾಟಿ ಇಲ್ಲವೇ ಇಲ್ಲ. ಲಂಕೇಶ್ರವರಿಗೆ ಲಂಕೇಶ್ರವರೇ ಸಾಟಿ.


ವರ್ಣರಂಜಿತವಾಗಿ ಬದುಕಿ ಅಸಾಧ್ಯವಾದುದನ್ನು  ಸಾಧಿಸಿದ ಬಹುಮುಖ ಪ್ರತಿಭೆ  ಲಂಕೇಶರವರು ಕಾಲವಶವಾಗಿ 2016, ಜನವರಿ 16 ಕ್ಕೆ ಸರಿಯಾಗಿ 16 ವರ್ಷಗಳಾದವು. ಇವತ್ತಿಗೂ ಕೂಡಾ ಅವರ ಸಮಕಾಲೀನರು, ಸಹವರ್ತಿಗಳು ಹಾಗೂ ಅವರಿಂದ ಪ್ರಭಾವಿತರಾದವರು ಲಂಕೇಶರ ಅನುಪಸ್ಥಿತಿಯನ್ನು ಹೆಚ್ಚು ಕಡಿಮೆ ಮರೆತೇ ಬಿಟ್ಟಿದ್ದಾರೆ. ಲಂಕೇಶರ ಸಾಧನೆಯನ್ನು ಮರೆತು ಅವರ ದೌರ್ಬಲ್ಯಗಳನ್ನೇ ಹೇಳುತ್ತಾ ತಿರುಗುವವರಿಗೇನೂ ಕೊರತೆಯಿಲ್ಲ. ಈಗಿನ ತಲೆಮಾರಿನವರಿಗೆ ಲಂಕೇಶ್ ಬರೀ ಹೆಸರಷ್ಟೇ ಹೊರತು ಅವರ ಮೌಲ್ಯಗಳ ಕುರಿತು ಅರಿವಿಲ್ಲ. ಲಂಕೇಶರ ಒಡನಾಡಿಗಳೇ ಸುಮ್ಮನಿರುವಾಗ ಲಂಕೇಶರ ಪ್ರಭಾವಳಿಗಳಿಂದ ಹೊರಗಿರುವ ಕೆಲವು ಯುವಕರು ಲಂಕೇಶರನ್ನು ನೆನಪಿಸಿಕೊಂಡು ಅವರನ್ನು ಅರಿಯುವ ಪ್ರಯತ್ನ ಮಾಡಿದ್ದಂತೂ ಅಭಿನಂದನೀಯ. ಈಗ ಲಂಕೇಶ್ ಇದ್ದಿದ್ದರೆ ಹೇಗಿರುತ್ತಿತ್ತು? ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನದ ಭಾಗವಾಗಿ ರೂಪಗೊಂಡ ಕಾರ್ಯಕ್ರಮವೇ "ಈಗ ಇರಬೇಕಿತ್ತು ಲಂಕೇಶ್".

ಬೆಂಗಳೂರು ಆರ್ಟ ಪೌಂಡೇಶನ್ನಿನ .ವೆಂಕಟೇಶ್, ಅವಿರತ ಪುಸ್ತಕದ ಹರೀಶಕುಮಾರ್ ಹಾಗೂ ಜನಸಂಸ್ಕೃತಿಯ ಸುರೇಶ್ ಮೂವರು ಸೇರಿ ಕಪ್ಪಣ್ಣನವರ ಮಾರ್ಗದರ್ಶನದ ಮೇರೆಗೆ ಲಂಕೇಶರವರನ್ನು ಅರಿತುಕೊಳ್ಳಲೆಂದು ಡಿಸೆಂಬರ್ ೨೦ ರಿಂದ ೨೨ ವರೆಗಿನ ಮೂರು ದಿನಗಳ ಕಾಲದ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡರು. ಕಾರ್ಯಕ್ರಮದ ಉದ್ಘಾಟನೆ ಬಾದಾಮಿ ಹೌಸ್ನಲ್ಲಿ  ನಡೆಯಿತು. ಚಲನಚಿತ್ರ ಅಕಾಡೆಮಿಯ ಹಾಲಿ ಅಧ್ಯಕ್ಷರಾದ ರಾಜೇಂದ್ರಸಿಂಗ್ ಬಾಬು, ವಾರ್ತಾ ಮತ್ತು ಪ್ರಸಾರ ಇಲಾಖೆಯ ನಿರ್ದೇಶಕರಾದ ವಿಶುಕುಮಾರ್, ಸಿನೆಮಾ ನಿರ್ಮಾಪಕರಾಗಿದ್ದ ಕೊಂಡಜ್ಜಿ ಮೋಹನ್, ನಟ ನಿರ್ದೇಶಕ ಪ್ರಕಾಶ್ ಬೆಳವಾಡಿ, ಲಲಿತಕಲಾ ಅಕಾಡೆಮಿಯ ಪ್ರಸ್ತುತ ಅಧ್ಯಕ್ಷರಾದ ಎಂ.ಎಸ್.ಮೂರ್ತಿಯವರು ಅತಿಥಿಗಳಾಗಿ ಭಾಗವಹಿಸಿದ್ದರು. ಮೊದಲೆರಡು ದಿನಗಳ ಕಾಲ ಲಂಕೇಶರವರು ನಿರ್ದೇಶಿಸಿದ ಎಲ್ಲಿಂದಲೋ ಬಂದವರು, ಪಲ್ಲವಿ ಹಾಗೂ ಅನುರೂಪ ಸಿನೆಮಾಗಳನ್ನು ಬಾದಾಮಿ ಹೌಸ್ನಲ್ಲಿ ಪ್ರದರ್ಶಿಸಲಾಯಿತು. ಲಂಕೇಶ್ ಹಾಗೂ ಅವರ ಸಿನೆಮಾಗಳ ಕುರಿತು ಮುಕುಂದರಾಜ್, ಶಶಿಕಾಂತ ಯಡಹಳ್ಳಿ ಹಾಗೂ ಆರ್.ಜಿ.ಹಳ್ಳಿ ನಾಗರಾಜರವರು ವಿವರವಾಗಿ ಮಾತಾಡಿದರು.



ಸಮಾರಂಭಕ್ಕೆ ಅತಿಥಿಗಳಾಗಿ ಬಂದಿವರು ಕೊಟ್ಟ ವಿಷಯವನ್ನು ಘನತೆಯಿಂದ ಮಾತಾಡಿದ್ದರೆ ಬಹುಷಃ ಲೇಖನವನ್ನು ಬರೆಯುವ ಪ್ರಸಂಗವೇ ಬರುತ್ತಿರಲಿಲ್ಲವೇನೋ. ಆದರೆ ಯಾವಾಗ ಉದ್ಘಾಟನಾ ಸಮಾರಂಭಕ್ಕೆ  ಅತಿಥಿಯಾಗಿ ತಡವಾಗಿ ಬಂದ ಲಲಿತಕಲಾ ಅಕಾಡೆಮಿಯ ಹಾಲಿ ಅಧ್ಯಕ್ಷರಾಗಿರುವ ಎಂ.ಎಸ್.ಮೂರ್ತಿಗಳು ತಮ್ಮ ಭಾಷಣದಲ್ಲಿ "ಲಂಕೇಶ್ ಒಬ್ಬ ಸಿನೆಮಾ ನಿರ್ದೇಶಕರೇ ಅಲ್ಲಾ. ಸಿನೆಮಾವನ್ನೂ ಸಹ ಕಥಾ ಬರವಣಿಗೆ ರೂಪದಲ್ಲೇ ಹೇಳಿದ್ದಾರೆ. ಸಾಹಿತ್ಯ ಕ್ಷೇತ್ರದಿಂದ ಬಂದ ಲಂಕೇಶ್ ಹಲವು ಸಿನೆಮಾ ನಿರ್ದೇಶಿಸಿದರೂ ಅವರಿಗೆ ನಿರ್ದೇಶನ ಗೊತ್ತಿರಲಿಲ್ಲ...." ಎಂದು ಪ್ರವಚನ ಮಾಡಿದರು. ಮಾತುಗಳು ಲಂಕೇಶರ ಸಿನೆಮಾಗಳನ್ನು ನೋಡಿದವರಿಗೆ ಕಸಿವಿಸಿಯನ್ನುಂಟು ಮಾಡಿದ್ದಂತೂ ಸತ್ಯ. ನಂತರ ಲಂಕೇಶರವರಎಲ್ಲಿಂದಲೋ ಬಂದವರುಸಿನೆಮಾವನ್ನು ತೋರಿಸಿ ನೋಡುಗರನ್ನು ಲಂಕೇಶ್ ಸಮರ್ಥ ನಿರ್ದೇಶಕ ಹೌದೋ ಅಲ್ಲವೋ ಎಂದು ಕೇಳಿದಾಗ ಹೊಸ ಹಾಗೂ ಹಳೆ ತಲೆಮಾರಿನ ಪ್ರೇಕ್ಷಕರೆಲ್ಲಾ ಒಕ್ಕೋರಲಿನಿಂದ ಲಂಕೇಶ್ ಒಬ್ಬ ಮಹಾನ್ ನಿರ್ದೇಶಕ ಎನ್ನುವುದನ್ನು ಒಪ್ಪಿಕೊಂಡರು. 22 ರಂದು ನಡೆದ ಸಮಾರೋಪ ಸಭೆಯಲ್ಲಿ ಡಾ.ಸಿ.ಎಸ್.ದ್ವಾರಕಾನಾಥರವರು ಎಂ.ಎಸ್.ಮೂರ್ತಿಯವರ ತಪ್ಪು ಗ್ರಹಿಕೆಗೆ ಸೂಕ್ತ ಉತ್ತರ ಕೊಟ್ಟರು. "ಕನ್ನಡ ಚಲನಚಿತ್ರದ ಇತಿಹಾಸದಲ್ಲಿ ಇಲ್ಲಿವರೆಗೂ ಸಿನೆಮಾ ನಿರ್ದೇಶನಕ್ಕಾಗಿಯೇ ರಾಷ್ಟ್ರ ಪ್ರಶಸ್ತಿ ಬಂದಿದ್ದರೆ ಅದು ಲಂಕೇಶರವರೊಬ್ಬರಿಗೆ ಮಾತ್ರ" ಎಂದು ಹೇಳಿ ವಾಸ್ತವದ ಅರಿವನ್ನು ಮೂಡಿಸಿದರು. 1976 ರಲ್ಲಿಪಲ್ಲವಿಚಲನಚಿತ್ರದ ನಿರ್ದೇಶನಕ್ಕೆ ಲಂಕೇಶರವರಿಗೆ ರಾಷ್ಟ್ರೀಯ ಫಿಲಂ ಅವಾರ್ಡ ಬಂದಿತ್ತು. ( 'ವಂಶವೃಕ್ಷ' ಸಿನೆಮಾದ ನಿರ್ದೇಶನಕ್ಕೂ ರಾಷ್ಟ್ರ ಪ್ರಶಸ್ತಿ ಬಂದಿದೆಯಾದರೂ ಅದನ್ನು ಕಾರ್ನಾಡರು ಮತ್ತು ಕಾರಂತರು ಹಂಚಿಕೊಳ್ಳಬೇಕಾಯಿತು. ಯಾಕೆಂದರೆ ಇಬ್ಬರೂ ಜಂಟಿಯಾಗಿ ಸಿನೆಮಾ ನಿರ್ದೇಶಿಸಿದ್ದರು.). ಎಂ.ಎಸ್.ಮೂರ್ತಿಯಂತಹ ಚಿತ್ರಕಲಾವಿದರು ತಮ್ಮ ಪರೀಧಿಯ ವ್ಯಾಪ್ತಿಯನ್ನು ಮೀರಿ ಮಾತಾಡುವಾಗ ಒಂದಿಷ್ಟು ಅಧ್ಯಯನ ಮಾಡಿಕೊಂಡು ಬಂದಿದ್ದರೆ ಬಹುಷಃ ರೀತಿ ಹೇಳುತ್ತಿರಲಿಲ್ಲ, ಲಂಕೇಶರ ಚಲನಚಿತ್ರ ನೋಡಲು ಬಂದ ಸಿನೆಮಾಸಕ್ತ ಯುವಕರ ಸಮ್ಮುಖದಲ್ಲಿ ಹೀಗೆ ನಕಾರಾತ್ಮಕ ಮಾತುಗಳನ್ನು ಆಡುತ್ತಿರಲಿಲ್ಲ. ತಮ್ಮ ವ್ಯಕ್ತಿಗತ ಅಸಹನೆಯನ್ನು ಹೀಗೆ ಸಾರ್ವಜನಿಕವಾಗಿ ವ್ಯಕ್ತಪಡಿಸುತ್ತಿರಲಿಲ್ಲ..!

ಲಂಕೇಶರು ನಿರ್ದೇಶಿಸಿದ "ಎಲ್ಲಿಂದಲೋ ಬಂದವರು" ಚಲನಚಿತ್ರದ 21 ಜನ ನಿರ್ಮಾಪಕರಲ್ಲೊಬ್ಬರಾದ ಮೋಹನ್ ಕೊಂಡಜ್ಜಿಯವರಿಗೆ ಲಂಕೇಶರ ಕುರಿತು ಅದೆಂತಾ ಅಸಹನೆ ಇತ್ತೋ ಗೊತ್ತಿಲ್ಲ. ಅದನ್ನು ತಮ್ಮ ಅತಿಥಿ ಭಾಷಣದುದ್ದಕ್ಕೂ ಹೊರಹಾಕತೊಡಗಿದರು. "ಲಂಕೇಶ್ ಈಗ ಇದ್ದಿದ್ದರೂ ಏನೂ ಆಗುತ್ತಿರಲಿಲ್ಲ... ಭ್ರಷ್ಟಾಚಾರ ಕಡಿಮೆಯಾಗುತ್ತಿರಲಿಲ್ಲ...." ಅಂತೆಲ್ಲಾ ಹೇಳಿ ಲಂಕೇಶರ ಅನುಪಸ್ಥಿತಿಯನ್ನು ಅರಿಯುವ ಕಾರ್ಯಕ್ರಮದ ಆಶಯಕ್ಕೆ ತಣ್ಣೀರೆರಚಿದರು. ತದನಂತರ ಮಾತಾಡಿದ ಪ್ರಕಾಶ್ ಬೆಳವಾಡಿಯವರು ಲಂಕೇಶರ ಸಾಧನೆಗಿಂತಾ ಅವರ ದೌರ್ಬಲ್ಯಗಳನ್ನು ಹೇಳುವುದಕ್ಕೆ  ತಮ್ಮ ಮಾತನ್ನು ಖರ್ಚುಮಾಡಿದರು. ಕೆಲವು ಮಾಧ್ಯಮಗಳು ಸಹ ಯಥಾವತ್ತಾಗಿ ಹಿರೀಕರು ಹೇಳಿದ್ದನ್ನು ದಿನಪತ್ರಿಕೆಯಲ್ಲಿ ವರದಿಮಾಡಿದವು. ರೀತಿ ಹಿರಿಯರು ಒಬ್ಬ ಸಾಧಕನ ಬಗ್ಗೆ ಹೇಳಿವ ಮುಂಚೆ  ಮುಂದಿನ ತಲೆಮಾರಿನ ಯುವಕರಿಗೆ ಲಂಕೇಶರ ಬಗ್ಗೆ ನಕಾರಾತ್ಮಕ ಭಾವನೆ ಹುಟ್ಟುತ್ತದೆ ಎನ್ನುವ ಅರಿವು ಇರಬೇಕಿತ್ತು. ಲಂಕೇಶರವರೊಂದಿಗೆ ಇವರುಗಳ ವ್ಯಕ್ತಿಗತ ಪ್ರೀತಿ ಮುನಿಸು ವ್ಯಸನ ಏನೇ ಇರಲಿ, ತೀರಿಕೊಂಡ ವ್ಯಕ್ತಿಯ ಬಗ್ಗೆ ಸಾರ್ವಜನಿಕವಾಗಿ ಮಾತಾಡುವಾಗ ಮಾತುಗಳಲ್ಲಿ ಸಂಯಮ ಇರಬೇಕಿತ್ತು.


ಈಗ ಇರಬೇಕಿತ್ತು ಲಂಕೇಶ್ಕಾರ್ಯಕ್ರಮದ ಭಾಗವಾಗಿ ಡಿಸೆಂಬರ್ 22 ರಂದು ನಯನ ರಂಗಮಂದಿರದಲ್ಲಿ ಆಯೋಜಿಸಿದ ವಿಚಾರಸಂಕಿರಣ ಯಶಸ್ವಿಯಾಯಿತು. ಮೊದಲ ಗೋಷ್ಠಿಯಲ್ಲಿ "ಜಾಣ ಜಾಣೆಯರು ಕಂಡ ಲಂಕೇಶ್" ಮತ್ತು ಎರಡನೇ ಗೋಷ್ಠಿಯಲ್ಲಿ "ಅಂದಿನ ಲಂಕೇಶ್ ಪತ್ರಿಕೆ ಹಾಗೂ ಇಂದಿನ ಸಮೂಹ ಮಾಧ್ಯಮಗಳು" ಕುರಿತು ಹಲವಾರು ವಿಚಾರಗಳು ಮಂಡನೆಯಾದವು. ಸಂಜೆ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ದಯಾನಂದರವರುತಾವು ಕಾಣದ ಲಂಕೇಶ ಕುರಿತು ಮಾತಾಡುತ್ತಾ ಈಗಿನ ಕೆಲವು ಪತ್ರಿಕೆಗಳ ಅತಿರೇಕಗಳ ಬಗ್ಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ತದನಂತರ ಮಾತಾಡಿದ ಟಿ.ಎನ್.ಸೀತಾರಾಂರವರು ತಮ್ಮ ಎಂದಿನ ಹಾಸ್ಯಮಯ ಲಯಗಾರಿಕೆಯಲ್ಲಿ  ಲಂಕೇಶರೊಂದಿಗಿನ ತಮ್ಮ ಒಡನಾಟವನ್ನು ಹಂಚಿಕೊಂಡರು. ಲಂಕೇಶರ ಕುರಿತು ಅತ್ಯಂತ ವಸ್ತುನಿಷ್ಠವಾಗಿ ಮಾತಾಡಿದವರು ಡಾ.ಸಿ.ಎಸ್.ದ್ವಾರಕಾನಾಥರವರು. "ಲಂಕೇಶ್ ಎಂದೂ ಜಾತಿವಾದಿಯಾಗಿರಲಿಲ್ಲ, ಭ್ರಷ್ಟರಾಗಿರಲಿಲ್ಲ..... ನಿಷ್ಟುರತೆಯನ್ನು ತಮ್ಮ ಬದುಕಿನಾದ್ಯಂತ ರೂಢಿಸಿಕೊಂಡಿದ್ದರು. ಅವರನ್ನು ಬ್ರಾಹ್ಮಣ ವಿರೋಧಿ ಎಂದು ಬಿಂಬಿಸುವವರಿದ್ದಾರಾದರೂ ಕಷ್ಟದಲ್ಲಿದ್ದ ಬ್ರಾಹ್ಮಣರಿಗೆ ಲಂಕೇಶರವರು ಸಹಾಯ ಮಾಡಿದ್ದಕ್ಕೆ ನಾನೇ ಸಾಕ್ಷಿ. ರಾಜ್ಯದಲ್ಲಿ ಆಗ ಕಾಂಗ್ರೆಸ್ಸೇತರ ಸರಕಾರ ಅಸ್ತಿತ್ವಕ್ಕೆ ಬಂದಿದ್ದೇ ಲಂಕೇಶರವರಿಂದ. ಅವರು ಮನಸ್ಸು ಮಾಡಿದ್ದರೆ ಮಂತ್ರಿಯಾಗಬಹುದಾಗಿತ್ತು. ಆದರೆ ಅಧಿಕಾರಕ್ಕಾಗಿ ಹಾತೊರೆಯಲಿಲ್ಲ. ಮೇಲ್ನೋಟಕ್ಕೆ ಒರಟಾಗಿ ಕಂಡರೂ ಅಂತರಂಗದಲ್ಲಿ ತಾಯಿಪ್ರೀತಿಯನ್ನು ಯಾವಾಗಲೂ ಇಟ್ಟುಕೊಂಡವರಾಗಿದ್ದರು...." ಎಂದು ಲಂಕೇಶರವರ ಇನ್ನೊಂದು ಸಮಾಜಮುಖಿ ಆಯಾಮವನ್ನು ಅನಾವರಣಗೊಳಿಸಿದರು.

ಇಡೀ ಸಮಾರೋಪ ಕಾರ್ಯಕ್ರಮವನ್ನು ಸಮನ್ವಯಗೊಳಿಸುವ ಮಹತ್ಕಾರ್ಯವನ್ನು ವಹಿಸಿಕೊಂಡಿದ್ದ ಶ್ರೀಮಾನ್ ಕಪ್ಪಣ್ಣನವರು ಎಂದಿನಂತೆ ತಮ್ಮದೇ ಆದ ಲೇವಡಿ ದಾಟಿಯಲ್ಲಿ ಲಂಕೇಶರ ಜಗಳ, ಕುಡಿತ, ದೌರ್ಬಲ್ಯಗಳ ಸನ್ನಿವೇಶಗಳಲ್ಲಿ ತಮ್ಮ ಉಪಸ್ಥಿತಿಯನ್ನು ಕುರಿತು ಹಲವಾರು ದಿವ್ಯಾನುಭವಗಳನ್ನು ಕಾರ್ಯಕ್ರಮದಾದ್ಯಂತ ಹಂಚಿಕೊಂಡರು. ಆದರೆ.... ಲಂಕೇಶರೊಂದಿಗಿನ ರಾತ್ರಿಯ ಪಾನಗೋಷ್ಠಿಗಳನ್ನುಅನುಭವ ಮಂಟಪಕ್ಕೆ ಸಮೀಕರಿಸಿ ಹೇಳಿದ್ದು ಯಾಕೋ ವಿಪರೀತವೆನಿಸಿತು. ಶಿವಶರಣರಂತಹ ಪ್ರಜ್ಞಾವಂತರು ಪರಸ್ಪರ ಅರಿವನ್ನು ಹಂಚಿಕೊಳ್ಳಲು ಹಾಗೂ ತಮ್ಮ ಜ್ಞಾನದ ಪರೀಧಿಯನ್ನು ವಿಸ್ತರಿಸಿಕೊಳ್ಳಲುಅನುಭವ ಮಂಟಪಪರಿಕಲ್ಪನೆಯನ್ನು  ಅನುಷ್ಠಾನಗೊಳಿಸಿ ಜಗತ್ತಿಗೆ ಬೆಡಗಿನ ವಚನಗಳನ್ನು ಕಟ್ಟಿಕೊಟ್ಟು ಮಾದರಿಯಾದವರುಆದರೆ ಅಂತಹ ಚಾರಿತ್ರಿಕ ವಿದ್ವತ್ಪೂರ್ಣ ಸಂವಾದ ಮಂಟಪವನ್ನು ಕುಡುಕರ ಮೇಜುವಾನಿಗೆ ಹೋಲಿಸುವುದು ಶರಣ ಸಂಸ್ಕೃತಿಗೆ ಮಾಡುವ ಅವಮಾನವೇ ಆಗಿದೆ. ಕಪ್ಪಣ್ಣನವರು ತಮ್ಮನ್ನು ಲೇವಡಿ ಮಾಡಿಕೊಳ್ಳುವುದಲ್ಲದೇ ತಮ್ಮ ಸಮಕಾಲೀನರನ್ನೂ ಬೇಕಾದರೆ ವಿಡಂಬಣೆ ಮಾಡಿಕೊಳ್ಳಲಿ.... ಆದರೆ ಜಗತ್ತಿಗೇ ಮಾದರಿಯಾದ ಬಸವಣ್ಣನವರ ನೇತೃತ್ವದ, ಅಲ್ಲಮರ ಅಧ್ಯಕ್ಷತೆಯಅನುಭವ ಮಂಟಪವನ್ನು ರೀತಿ ಸಾರ್ವಜನಿಕವಾಗಿ  ಲೇವಡಿ ಮಾಡುವುದು ಖಂಡಿತವಾಗಿಯೂ ಖಂಡನೀಯವಾಗಿದೆ. ಕಪ್ಪಣ್ಣನವರು ಹೆಚ್ಚುತ್ತಿರುವ ವಯಸ್ಸಿನ ಜೊತೆಗೆ ಇನ್ನೂ ಮಾಗಬೇಕಿದೆ. ಮಾತುಗಳಲ್ಲಿ ಸಂಯಮ ತಂದುಕೊಳ್ಳಬೇಕಿದೆ. ಅವರ ಹಾಸ್ಯಪ್ರಜ್ಞೆ ಕೇಳಿದವರ ಮನಸ್ಸಿಗೆ ನೋವಾಗದಂತಿರಬೇಕಿದೆ. ಇಲ್ಲವಾದರೆ ಇದನ್ನೆಲ್ಲಾ ಕೇಳಿದ ಹೊಸತಲೆಮಾರಿನ ಯುವಕರಿಗೆ ಹಿರಿಯರ ಕುರಿತು ನಕಾರಾತ್ಮಕ ಧೋರಣೆ ಬೆಳೆಯುವ ಅಪಾಯವೂ ಇದೆ.

ಹೀಗಾಗಿ ಲಂಕೇಶರ ಸಾಧನೆಯ ಬಗ್ಗೆ.... ಅವರ ಸಾಧನೆಯ ಹಿಂದಿರುವ ವೇದನೆಯ ಬಗ್ಗೆ, ಅವರಂತ ನಿಷ್ಟುರವಾದಿ ಬರಹಗಾರ ಈಗಿದ್ದಿದ್ದರೆ ರಾಜಕೀಯ ವ್ಯಭಿಚಾರ, ಭ್ರಷ್ಟಾಚಾರ ಹಾಗೂ ಕೋಮುವಾದದ ಬಗ್ಗೆ ಹೇಗೆಲ್ಲಾ ತಮ್ಮ ಲೇಖನಿಯ ಮೂಲಕ ಪ್ರತಿಕ್ರಿಯಿಸುತ್ತಿದ್ದರು ಎನ್ನುವುದರ ಬಗ್ಗೆ ಸಕಾರಾತ್ಮಕವಾಗಿ ಮಾತಾಡಿದ್ದರೆ ಎಲ್ಲಾ ಹಿರಿಯ ತಲೆಗಳಿಗೂ ಶೋಭೆ ಬರುತ್ತಿತ್ತು. ಮತ್ತು ಅದು ಎಲ್ಲಾ ಪ್ರಜ್ಞಾವಂತರ ಹೊಣೆಗಾರಿಕೆಯೂ ಆಗಿತ್ತು. ಯಾಕೆಂದರೆ ಯಾವ ವ್ಯಕ್ತಿಯೂ ಪರಿಪೂರ್ಣರಲ್ಲ. ಅಪೂರ್ಣತೆ ಮನುಷ್ಯನ ಮೂಲ ಗುಣ. ಮಾಡಿ ಮಡಿದ ವ್ಯಕ್ತಿಯ ಸಾಧನೆಗಳ ಜೊತೆಗೆ ಬರೀ ದೌರ್ಬಲ್ಯಗಳನ್ನು ಸಾರ್ವತ್ರಿಕವಾಗಿ ಹೇಳುವುದು ಮಾನವೀಯತೆಯೂ ಅಲ್ಲ..... ಲಂಕೇಶರಿದ್ದಾಗ ಬಾಯಿಬಿಡಲೂ ಹೆದರುತ್ತಿದ್ದವರೆಲ್ಲಾ ಇವತ್ತು ಅವರ ಅನುಪಸ್ಥಿತಿಯಲ್ಲಿ ಲಂಕೇಶರ ದೌರ್ಬಲ್ಯಗಳನ್ನು ಆಡಿಕೊಳ್ಳುವುದು ತರವಲ್ಲಾ..... ಇಡೀ ಉದ್ಘಾಟನೆ ಹಾಗೂ ಸಮಾರೋಪ ಕಾರ್ಯಕ್ರಮಗಳಲ್ಲಿ ಮಾತಾಡಿದವರೆಲ್ಲಾ  ’ಈಗ ಲಂಕೇಶ್ ಇರಬೇಕಿತ್ತುಎನ್ನುವ ವಿಚಾರಕ್ಕೆ ಪೂರಕವಾಗಿ ಮಾತಾಡಿದ್ದರೆ ಸೂಕ್ತವಾಗುತ್ತಿತ್ತು. ಅಯೋಜಕರ ಉದ್ದೇಶ ಹಾಗೂ  ಶ್ರಮವೂ ಸಾರ್ಥಕವಾಗುತ್ತಿತ್ತು. ಕೇಳಲು ಬಂದ ಯುವಕರಿಗೆ ಲಂಕೇಶರ ಪ್ರತಿಭೆ ಹಾಗೂ ಸಾಮರ್ಥ್ಯದ ಅರಿವಾಗುತ್ತಿತ್ತು.
             
ಲಂಕೇಶರ ವಿವಿಧ ಆಯಾಮಗಳ ಕುರಿತಈಗ ಲಂಕೇಶ್ ಇರಬೇಕಿತ್ತುಕಾರ್ಯಕ್ರಮದ ವಿಚಾರ ಸಂಕಿರಣದಲ್ಲಿ  ಲಂಕೇಶರ ನಾಟಕಗಳ ಕುರಿತ ಚರ್ಚೆಗೆ ಅವಕಾಶ ಇಲ್ಲದೇ ಇರುವುದೊಂದು ಕೊರತೆಯಾಗಿಯೇ ಉಳಿಯಿತು. ಯಾಕೆಂದರೆ ಲಂಕೇಶ್ ಕನ್ನಡ ರಂಗಭೂಮಿಗೆ ಕೆಲವಾರು ವಿಶಿಷ್ಟ ನಾಟಕಗಳನ್ನು ಬರೆದು ಕೊಟ್ಟಿದ್ದಾರೆ. ತಾವೇ ಪ್ರತಿಮಾ ರಂಗ ತಂಡವನ್ನು ಹುಟ್ಟುಹಾಕಿ ನಾಟಕವನ್ನು ಮಾಡಿಸಿದ್ದಾರೆ. ಅಷ್ಟೇ ಯಾಕೆ ಆಧುನಿಕ ಕನ್ನಡ ರಂಗಭೂಮಿಗೆ ಹೊಸ ತಿರುವನ್ನೇ ಕೊಟ್ಟಬಯಲು ರಂಗಭೂಮಿನಾಟಕೋತ್ಸವದ ಹಿಂದಿನ  ಪ್ರಮುಖ ರೂವಾರಿ ಲಂಕೇಶರೇ ಆಗಿದ್ದಾರೆಟಿ.ಪ್ರಸನ್ನನ ಗ್ರಹಸ್ತಾಶ್ರಮ, ನನ್ನ ತಂಗಿಗೊಂಡು ಗಂಡು ಕೊಡಿ, ಪೊಲೀಸರಿದ್ದಾರೆ ಎಚ್ಚರಿಕೆ, ಕ್ರಾಂತಿ ಬಂತು ಕ್ರಾಂತಿ, ಗಿಳಿಯು ಪಂಜರದೊಳಗಿಲ್ಲ, ಸಿದ್ಧತೆ, ಬಿರುಕು, ಸಂಕ್ರಾಂತಿ, ಗುಣಮುಖ.... ಹೀಗೆ ಒಟ್ಟು ಹತ್ತು ಮುತ್ತಿನಂತಾ ನಾಟಕಗಳನ್ನು ಬರೆದಿದ್ದಾರೆ. ಜೊತೆಗೆ ಗ್ರೀಕಿನದೊರೆ ಈಡಿಪಸ್ಮತ್ತುಅಂತಿಗೊನಿನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ರಂಗಭೂಮಿಗೆ ಇಷ್ಟೆಲ್ಲಾ ಕೊಟ್ಟ ಲಂಕೇಶರವರ ನಾಟಕಗಳ ಕುರಿತು ವಿಚಾರ ಸಂಕಿರಣದಲ್ಲಿ ಗೋಷ್ಟಿಯೊಂದನ್ನು ಇಡಬೇಕಿತ್ತು. ರಂಗಭೂಮಿಯ ಗೆಳೆಯರೇ ಕಾರ್ಯಕ್ರಮವನ್ನು ರೂಪಿಸಿದ್ದರೂ ಅದ್ಯಾಕೆ ಮರೆತರೋ ಗೊತ್ತಿಲ್ಲ... ಮುಂದಿನ ಸಲವಾದರೂ ಲಂಕೇಶ್ ನಾಟಕಗಳ ಕುರಿತ ಚರ್ಚೆ ಸಂವಾದ ಆಯೋಜಿಸಬಹುದಾಗಿದೆ. ನಾಟಕಕಾರ ಲಂಕೇಶರಿಗೆ ಪ್ರಾಮುಖ್ಯತೆ ಕೊಡಬೇಕಿದೆ.



ಅವ್ವ ರೂಪಕ : ಕಾರ್ಯಕ್ರಮದ ಕೊನೆಗೆ ಲಂಕೇಶರವರಅವ್ವಪದ್ಯವನ್ನು ಆಧರಿಸಿ ರೂಪಕವೊಂದನ್ನು ಪ್ರದರ್ಶಿಸಿದ್ದು ಇಡೀ ಕಾರ್ಯಕ್ರಮಕ್ಕೆ ಮೆರಗನ್ನು ತಂದು ಕೊಟ್ಟಿತು. ತಮ್ಮ ತಾಯಿ ನಿಧನರಾಗಿದ್ದಾಗ ಲಂಕೇಶರು ಬರೆದ ಮನಕಲುಕುವ ಕವಿತೆಅವ್ವ’. ರೂಢಿಗತ ಕಾವ್ಯದ ಚೌಕಟ್ಟನ್ನು ಮುರಿದು ಕಟ್ಟಲ್ಪಟ್ಟ ಕವಿತೆ ಇದು. ತಾಯಿಯನ್ನು ದೇವತೆಯೆಂದು ಬರೆದ ಅವಾಸ್ತವ ಕಾವ್ಯಗಳನ್ನು ಮೀರಿ ಶ್ರಮಜೀವಿ ಮಹಿಳೆಯನ್ನು ಲಂಕೇಶರು ಕಟ್ಟಿಕೊಟ್ಟಿದ್ದಾರೆ. ಅವರು ತಾಯಿಗೆಕಪ್ಪುಹೊಲ, ಬನದಕರಡಿ, ನೊಂದ ನಾಯಿ, ಕೆರೆದಾಡುವ ಕೋತಿ...ಹೀಗೆ ಹಲವಾರು ರೂಪಕಗಳನ್ನು ಬಳಸಿ ಒಂಟಿ ಮಹಿಳೆಯ ಹೋರಾಟಮಯ ಬದುಕನ್ನು ಅನನ್ಯವಾಗಿ ಕವಿತೆಯ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆಪ್ರಸ್ತುತ ಕವಿತೆ ಪಿಯುಸಿ ವಿದ್ಯಾರ್ಥಿಗಳಿಗೆ ಪಠ್ಯವೂ ಆಗಿದೆ. ಇಂತಹ ವಿಶಿಷ್ಟ ಕವಿತೆಯನ್ನು ವಿಜಯನಗರ ಬಿಂಬ ರಂಗಶಾಲೆಯ ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಎಸ್.ವಿ.ಸುಷ್ಮಾರವರು ರೂಪಕವಾಗಿಸಿ ನಿರ್ದೇಶಿಸಿದ್ದಾರೆ. ರೂಪಕದ ಪ್ರದರ್ಶನ ಸಾಧ್ಯತೆಯು ಕವಿತೆಯ ಅರ್ಥಸಾಧ್ಯತೆಯನ್ನೂ ಸಾಧಿಸಿದ್ದರೆ ಚೆನ್ನಾಗಿತ್ತು. ರಂಗತಂತ್ರಗಳನ್ನು ಆಕರ್ಷಕವಾಗಿ ಬಳಸಿಕೊಳ್ಳಲಾಗಿದೆಯಾದರೂ ಕಾವ್ಯಾಭಿವ್ಯಕ್ತಿಯಲ್ಲಿ ಇನ್ನೂ ರೂಪಕ ಮೈದಾಳಬೇಕಿದೆ. ಏನೇ ಇರಲಿ.. ಲಂಕೇಶರ ಪದ್ಯವೊಂದನ್ನು ರಂಗರೂಪಕವಾಗಿ ನಿರ್ಮಿಸಿ ಪ್ರದರ್ಶಿಸುವುದಕ್ಕೆವಿಜಯನಗರ ಬಿಂಬವನ್ನು ಅಭಿನಂದಿಸಲೇಬೇಕು.

ಲಂಕೇಶರನ್ನು ಕಾಲಘಟ್ಟ ಹಾಗೂ ಈಗಿನ ತಲೆಮಾರಿನ ಜನತೆ ಮರೆತು ಹೋಗಿದೆ ಎನ್ನುವ ಸಂದರ್ಭದಲ್ಲಿ ಅವರ ಚಲನಚಿತ್ರ, ಸಾಹಿತ್ಯ, ಪತ್ರಿಕೆಗಳ ಕುರಿತು ಕಾರ್ಯಕ್ರಮವೊಂದನ್ನು ರೂಪಿಸಿ ಮರುಚರ್ಚೆಗೆ, ಸಂವಾದಕ್ಕೆ ವೇದಿಕೆಯನ್ನು ಒದಗಿಸಿದ್ದಕ್ಕೆ ಜನಸಂಸ್ಕೃತಿ, ಬೆಂಗಳೂರು ಆರ್ಟ ಪೌಂಡೇಶನ್ ಹಾಗೂ ಅವಿರತ ಪುಸ್ತಕದ ಗೆಳೆಯರಿಗೆಲ್ಲಾ ವಂದನೆಗಳು ಅಭಿನಂದನೆಗಳು....   

                                   -ಶಶಿಕಾಂತ ಯಡಹಳ್ಳಿ