ಶುಕ್ರವಾರ, ಡಿಸೆಂಬರ್ 11, 2015

ಆಯೋಜಕರ ತಪ್ಪಿಗೆ ಬಲಿಯಾದ ಯುವಕವಿ ಸಮ್ಮೇಳನ:


ಗಂಗೋತ್ರಿ ಕುಮಾರನ ಯುವಕವಿ ಸಮ್ಮೇಳನಕ್ಕೆ ಸಾಮೂಹಿಕ ಬಹಿಷ್ಕಾರ :

ಗಂಗೋತ್ರಿ ಕುಮಾರ

ಇಲ್ಲಾ... ಹೀಗಾಗಬಾರದಿತ್ತು. ಆಯೋಜಕರ ಮೇಲಿರುವ ಆರೋಪಕ್ಕೆ ಆಯೋಜನೆಗೊಂಡಿದ್ದ ಅಪರೂಪದ ಯುವಕವಿ ಸಮ್ಮೇಳನವೊಂದು ಬಲಿಯಾಗಬಾರದಿತ್ತು. ಬೆಂಗಳೂರಿಗೆ ಬಂದು ಕವಿಸಮ್ಮೇಳನದಲ್ಲಿ ಭಾಗವಹಿಸುವ ಸಂಭ್ರಮದಲ್ಲಿದ್ದ ಯುವಕವಿಗಳಿಗೆ ಇಷ್ಟೊಂದು ನಿರಾಶೆ ಆಗಬಾರದಿತ್ತು. ನಾನು ಬರೆದ ಒಂದು ಲೇಖನ ಇದಕ್ಕೆಲ್ಲಾ ಮೂಲ ಕಾರಣವಾಗಿತ್ತು. ಉದ್ದೇಶಿತ ಕವಿ ಸಮ್ಮೇಳನದಲ್ಲಿ ಭಾಗವಹಿಸಲು ಒಪ್ಪಿಕೊಂಡಿದ್ದ ಬಹುತೇಕ ಯುವ ಕವಿಗಳು ಹಾಗೂ ಅತಿಥಿಗಳು ಕವಿಸಮ್ಮೇಳನಕ್ಕೆ ಸಹಮತದಿಂದ ಸಾಮೂಹಿಕ ಬಹಿಷ್ಕಾರ ಹಾಕಿ ಆಯೋಜಕನ ವಿರುದ್ಧ ತಮ್ಮ ಪ್ರತಿಭಟನೆ ತೋರಿಸಿದ್ದು ಸಾಹಿತ್ಯಲೋಕದ ಚರಿತ್ರೆಯಲ್ಲಿ ಹಿಂದೆಂದೂ ಘಟಿಸಿರಲಿಲ್ಲ. ಯುವಕವಿಗಳಿಲ್ಲಿರುವ ಪ್ರಜ್ಞಾವಂತಿಕೆಗೆ ಮೆಚ್ಚಬೇಕೋ ಇಲ್ಲವೇ ಸಾಹಿತ್ಯಲೋಕಕ್ಕೆ ಸಂಬಂಧವೇ ಇಲ್ಲದ ಆಯೋಜಕನ ಅಜ್ಞಾನಕ್ಕೆ ವಿಷಾದಿಸಬೇಕೋ, ಆಯೋಜಕರ ಬೆನ್ನಿಗೆ ನಿಂತ ಹಿರಿಯ ಸಾಹಿತಿಯ ಜಾಣಕುರುಡುತನಕ್ಕೆ ಬೆರಗಾಗಬೇಕೋ, ಇಲ್ಲವೇ ಹಿಂದೆ ಮುಂದೆ ಏನೂ ಯೋಚಿಸದೇ ಕವಿಗೋಷ್ಟಿಯಲ್ಲಿ ಭಾಗವಹಿಸಲು ಒಪ್ಪಿಕೊಂಡ ಕವಿ ಸಾಹಿತಿ ಹೋರಾಟಗಾರರ ಅಮಾಯಕತೆಗೆ ವಿಸ್ಮಯಗೊಳ್ಳಬೇಕಾ ಗೊತ್ತಿಲ್ಲ. ಆದರೆ ಇಡೀ ಪ್ರಕರಣದ ಒಂದು ನೋಟವನ್ನು ಲೇಖನದಲ್ಲಿ ಕೊಡುವ ಪ್ರಯತ್ನ ಮಾಡಲಾಗಿದೆ.

2015 ಡಿಸೆಂಬರ್ 11 ರಂದು ಬೆಂಗಳೂರಿನ ಮಲ್ಲತ್ತಳ್ಳಿಯಲ್ಲಿರುವ ಕಲಾಗ್ರಾಮದಲ್ಲಿ ರಂಗೋತ್ರಿ ಸಂಘವು ಯುವ ಕವಿ ಸಮ್ಮೇಳನವನ್ನು ಆಯೋಜಿಸಿತ್ತು. ಹಾಗೂ ಅದಕ್ಕೆ ಅಖಿಲ ಕರ್ನಾಟಕ ಪ್ರಥಮ ಯುವಕವಿ ಸಮ್ಮೇಳನ-2015 ಎಂದು ಕರೆದು ಪ್ರಚಾರವನ್ನೂ ಕೊಡಲಾಗಿತ್ತು. ಯುವಕವಿ ಅರೀಫ್ ರಾಜ ರವರನ್ನು ಸಮ್ಮೇಳನದ ಅಧ್ಯಕ್ಷರಾಗಿಯೂ ಆಯ್ಕೆ ಮಾಡಲಾಯಿತು. ಭಾಗವಹಿಸಲಿಚ್ಚಿಸುವ 35 ವರ್ಷದೊಳಗಿನ ಯುವ ಕವಿಗಳು ತಮ್ಮ 2 ಕವಿತೆಗಳ ಜೊತೆಗೆ 300 ರೂಪಾಯಿಗಳನ್ನು ನವೆಂಬರ್ 25ರೊಳಗೆ ಕಳುಹಿಸಿಕೊಡಬೇಕು ಎಂದು ನಾಡಿನ ಪ್ರಮುಖ ದಿನಪತ್ರಿಕೆಗಳಲ್ಲಿ ಪ್ರಕಟಣೆಯನ್ನು ಕೊಡಲಾಗಿತ್ತು. ಕರ್ನಾಟಕದ ಮೂಲೆ ಮೂಲೆಯಿಂದ ಯುವಕವಿಗಳು ರಾಜ್ಯಮಟ್ಟದ ಸಮ್ಮೇಳನದಲ್ಲಿ ಕವಿತೆ ಓದುವ ಯೋಗ ಸಿಕ್ಕಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದಂತೆ ಮಾಡಿದರು. ಈಗಾಗಲೇ ಸಾಹಿತ್ಯದಲ್ಲಿ ಕಾವ್ಯಕ್ಷೇತ್ರದಲ್ಲಿ ಹೆಸರು ಮಾಡಿದ ಹಲವಾರನ್ನು ಸಮ್ಮೇಳನಕ್ಕೆ ಅತಿಥಿಗಳಾಗಲು ಹಾಗೂ ಗೋಷ್ಟಿಯಲ್ಲಿ ವಿಷಯ ಮಂಡಿಸಲು ಬರಬೇಕೆಂದು ಒಪ್ಪಿಸಲಾಗಿತ್ತು. ದೊಡ್ಡ ದೊಡ್ಡವರ ಹೆಸರುಗಳನ್ನು ವಿಶೇಷ ಆಹ್ವಾನಿತರೆಂದು ಇನ್ವಿಟೇಶನ್ನಿನ ಪಟ್ಟಿಯಲ್ಲಿ ಹಾಕಲಾಗಿತ್ತುಆಹ್ವಾನ ಪತ್ರಿಕೆಯನ್ನೂ  ಹಂಚಲಾಯಿತು. ಡಿಸೆಂಬರ್ ೯ರ ವರೆಗೆ ಸಮ್ಮೇಳನದ ತಯಾರಿಯೂ ಜೋರಾಗಿಯೇ ನಡೆದಿತ್ತು. ಆದರೆ... ಇದ್ದಕ್ಕಿದ್ದಂತೆ ಮುಖ್ಯ ಸಂಘಟಕನಿಗೆ ಸಮ್ಮೇಳನದಲ್ಲಿ ಭಾಗವಹಿಸಬಹುದಾಗಿದ್ದ  ಹಲವಾರು ಕವಿಗಳಿಂದ ಹಾಗೂ ಗೋಷ್ಟಿಯ ಅತಿಥಿಗಳಿಂದ ಈಮೇಲ್ಗಳು  ಬರತೊಡಗಿದವು. ವಾಟ್ಸಾಪ್ ಮೆಸೇಜ್ಗಳು ನಿರಂತರವಾದವು. ಮೊಬೈಲ್ ಪೋನ್ಲ್ಲಿ ಹಲವರು ಕ್ಲಾರಿಫಿಕೇಶನ್ ಕೇಳತೊಡಗಿದರು. ಎಲ್ಲರದೂ ಒಂದೇ ಮಾತು ಸಮ್ಮೇಳನದ ಸಂಘಟಕನ ಮೇಲೆ ಭ್ರಷ್ಟಾಚಾರದ ತೀವ್ರ ಆರೋಪವಿದೆಯಾದ್ದರಿಂದ  ಕವಿಸಮ್ಮೇಳನವನ್ನು ಬಹಿಸ್ಕರಿಸುತ್ತಿದ್ದೇವೆ. ಉಮೇದಿನಲ್ಲಿದ್ದ ಸಂಘಟಕ ದಿಗಿಲುಗೊಂಡ... ಸಮರ್ಥನೆಗೆ ಮಾತುಗಳು ಸಾಲದಾದವು...

ಜೆಡಿಎಸ್ ಸಭೆಯಲ್ಲಿ ಗಂಗೋತ್ರಿ ಕುಮಾರ
ಯಾರೀ ಸಂಘಟಕ? ಏನಿದು ಆರೋಪ? ಕವಿಸಮ್ಮೇಳನಕ್ಕೆ ಬರುವುದಾಗಿ ಒಪ್ಪಿಕೊಂಡವರು ಇದ್ದಕ್ಕಿದ್ದಂತೆ ನಿರಾಕರಿಸಿದ್ದಾದರೂ ಯಾಕೆ? ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾದರೆ ಒಂದಿಷ್ಟು ತಿಂಗಳ ಹಿಂದಕ್ಕೆ ಹೋಗಬೇಕು. ಗಂಗೋತ್ರಿ ಎನ್ನುವ ಸಂಸ್ಥೆಯ ರೂವಾರಿ ಹೆ.ಹೆಚ್.ಕುಮಾರ್ ಮೂಲತಃ ಜನತಾದಳ ಪಕ್ಷದ ಕಾರ್ಯಕರ್ತ. ಪಕ್ಷದ ವಕ್ತಾರನೆಂದು ಹೇಳಿಕೊಳ್ಳುತ್ತಾನಾದರೂ ಅದು ಸತ್ಯವಲ್ಲಅಭಿನಯ ತರಂಗ ರಂಗಶಾಲೆಯಲ್ಲಿ ರಂಗತರಬೇತಿ ಪಡೆದು ರಂಗಭೂಮಿಯಲ್ಲಿ ಆಸಕ್ತಿ ಹೊಂದಿ ಒಂದಿಷ್ಟು ಬೀದಿನಾಟಕಗಳನ್ನು ಮಾಡಿಸಿದ್ದಿದೆ. ಆಗಾಗ ರಂಗೋತ್ಸವಗಳನ್ನೂ ಆಯೋಜಿಸಿದ್ದಾರೆ. ರಾಜಾಜಿನಗರದ ರಾಮಮಂದಿರವನ್ನು ತನ್ನ ಸಾಂಸ್ಕೃತಿಕ ಕಾರ್ಯಕ್ಷೇತ್ರವಾಗಿಸಿಕೊಂಡಿದ್ದ ಕುಮಾರ್ ತನ್ನ ಚಟುವಟಿಕೆಗಳಿಗೆ ಬೇಕಾದ ಹಣಕಾಸಿನ ಅನುದಾನಗಳನ್ನು ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆಯಿಂದ ಪಡೆಯುತ್ತಿದ್ದುದು ಸತ್ಯಹಾಗೆ ಹಣ ಬಿಡುಗಡೆ ಮಾಡಿಸುವುದಕ್ಕೆ ರಾಜಕೀಯ ಒತ್ತಡ ತಂದಿದ್ದಾನೆ, ಧಮಕಿ ಹಾಕಿದ್ದಾನೆ, ಇಲಾಖೆಯ ಅಧಿಕಾರಿಗಳನ್ನು ಬುಟ್ಟಿಗೆ ಹಾಕಿಕೊಂಡಿದ್ದಾನೆ, ಕಾರ್ಯಕ್ರಗಳನ್ನು ಮಾಡದೇ ಲಕ್ಷಾಂತರ ಹಣ ನುಂಗಿದ್ದಾನೆ ಎನ್ನುವ ಆರೋಪಗಳು ಸಾಮಾನ್ಯವಾಗಿದ್ದವು. ಎಲ್ಲಾ ರಂಗದಲ್ಲಾಳಿಗಳು ಮಾಡುವ ಹಾಗೆಯೇ ಇಲಾಖೆಯ ಜೊತೆಗೆ ಕುಮಾರ್ ಸಂಪರ್ಕ ಹಾಗೂ ಸಂಬಂಧ ಇಟ್ಟುಕೊಂಡಿದ್ದರಲ್ಲೂ ಸುಳ್ಳಿಲ್ಲ.


ಕೆ.ಎ.ದಯಾನಂದ
ಕಳೆದ ವರ್ಷದ ಬಜೆಟ್ಟಲ್ಲಿ ಕಾಲೇಜು ರಂಗಭೂಮಿ ಗಾಗಿ ಯಾವಾಗ ಸರಕಾರ ಕೊಟ್ಯಾಂತರ ರೂಪಾಯಿ ಹಣ ಬಜೆಟ್ಟಲ್ಲಿ ಮೀಸಲಿಟ್ಟಿತೋ ಆಗ ಅದನ್ನು ಪಡೆಯಲು ಈಗಾಗಲೆ ಕಾಲೇಜು ರಂಗೋತ್ಸವವನ್ನು ಮಾಡುತ್ತಾ ಬಂದಿರುವ ಪ್ರಯೋಗರಂಗದ ನಾಗರಾಜಮೂರ್ತಿಯವರಿಗೂ ಹಾಗೂ ಕುಮಾರನಿಗೂ ಪೈಪೋಟಿ ಏರ್ಪಟ್ಟಿತು. ಭಾರತ ರಂಗಯಾತ್ರೆಯ ಹೆಸರಲ್ಲಿ ನಾಗರಾಜಮೂರ್ತಿ ಮಾಡುವ ಕಾಲೇಜು ರಂಗಭೂಮಿಯ ದಶಕಗಳ ಚಟುವಟಿಕೆಗಳನ್ನು ಆಧರಿಸಿ ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ದಯಾನಂದರವರು ಕಾಲೇಜು ರಂಗಭೂಮಿ ಪ್ರಾಜೆಕ್ಟನ್ನು ನಾಗರಾಜಮೂರ್ತಿಯವರಿಗೆ ವಹಿಸಿಕೊಟ್ಟರು. ಆಗ ಕುಮಾರ ಕಿಡಿಕಿಡಿಯಾಗಿ ತನಗೆ ಸಿಗದ ಪಾಲು ಯಾರಿಗೂ ದಕ್ಕಬಾರದು ಎಂದುಕೊಂಡು ದಯಾನಂದ ಹಾಗೂ ನಾಗರಾಜಮೂರ್ತಿಯವರ ಮೇಲೆ ತನ್ನ ರಾಜಕೀಯ ಪ್ರಭಾವ ಬಳಸಿಕೊಂಡು ಲೋಕಾಯುಕ್ತದಲ್ಲಿ ಕೇಸ್ ಪೈಲ್ ಮಾಡಿದ. ಕಾಲೇಜು ರಂಗಭೂಮಿ ಪ್ರಾಜೆಕ್ಟ್ ಶುರುವಾಗಿ ಆಹ್ವಾನಪತ್ರಿಕೆಗಳು ಮುದ್ರಣಗೊಂಡು ಕಾಲೇಜುಗಳ ನಾಟಕಗಳ ತಯಾರಿಯೂ ಮುಗಿದು ಇನ್ನೇನು ಕಲಾಕ್ಷೇತ್ರದ ಆವರಣದಲ್ಲಿ ಪ್ರದರ್ಶನಗಳು ನಡೆಯಬೇಕಿತ್ತು. ಲೋಕಾಯುಕ್ತದ ಆದೇಶದ ಮೇರೆಗೆ ಇಡೀ ಕಾರ್ಯಕ್ರಮ ನಿಲ್ಲಿಸಬೇಕಾಯಿತು. ಕ್ಷಣಕ್ಕೆ ಕುಮಾರ ಗೆಲುವಿನ ನಗೆ ನಕ್ಕ. ದಯಾನಂದ ಸಾಹೇಬರು ತಲ್ಲಣಿಸಿಹೋದರು. ನಾಗರಾಜಮೂರ್ತಿ ಸದ್ಯಕ್ಕೆ ಥೇಯಟರ್ ಸಹವಾಸವೇ ಸಾಕೆಂದು ದಾರಾವಾಹಿ ಸಿನೆಮಾಗಳಲ್ಲಿ ನಟಿಸಲು ಹೋದರು.

ಇದರ ಜೊತೆಗೆ ಇನ್ನೊಂದು ಎಡವಟ್ಟನ್ನೂ ಕುಮಾರ ಮಾಡಿಕೊಂಡಿದ್ದ. ಇಲಾಖೆ ಪ್ರತಿ ವರ್ಷ ಆಯ್ದ ಸಾಂಸ್ಕೃತಿಕ ಸಂಘಟನೆಗಳಿಗೆ  ಕೊಡುತ್ತಿದ್ದ ಕ್ರಿಯಾಯೋಜನೆಯ ಅನುದಾನವನ್ನು ಇದ್ದಕ್ಕಿದ್ದಂತೆ ನಿಲ್ಲಿಸಿತು. ಇದರಿಂದಾಗಿ ಕುಮಾರ ಸೇರಿದಂತೆ ಹಲವಾರು ಸಾಂಸ್ಕೃತಿಕ ಗುತ್ತಿಗೆದಾರರು ತಳಮಳಗೊಂಡರು. ಪ್ರತಿ ವರ್ಷ ನಿಯಮಿತವಾಗಿ ಬರುತ್ತಿದ್ದ ಲಕ್ಷಾಂತರ ರುಪಾಯಿ ಆದಾಯ ನಿಂತುಹೋದದ್ದಕ್ಕೆ ಫಲಾನುಭವಿಗಳಾಗಿದ್ದ ಕೆಲವರು ಆಕ್ರೋಶಗೊಂಡರು. ಇಂತವರೆಲ್ಲರನ್ನೂ ಒಟ್ಟುಗೂಡಿಸಿದ ಕುಮಾರನು ಹೋರಾಟದ ನಾಯಕತ್ವ ವಹಿಸಿಕೊಂಡು ಇಲಾಖೆಯ ವಿರುದ್ಧ ಬಂಡಾಯದ ಬಾವುಟ ಹಾರಿಸಿದ. ಕರಪತ್ರಗಳನ್ನು ಹಂಚಿದ. ಧರಣಿ ಕುಂತ, ಕೊನೆಗೆ ಸಂಸ್ಕೃತಿ ಇಲಾಖೆಯ ಸಚಿವೆ ಉಮಾಶ್ರೀಯವರು ಲಲಿತಕಲಾ ಅಕಾಡೆಮಿಯ ಕಾರ್ಯಕ್ರಮದಲ್ಲಿ ಭಾಗವಹಿಸಲು ರವೀಂದ್ರ ಕಲಾಕ್ಷೇತ್ರಕ್ಕೆ ಬಂದಿದ್ದಾಗ ಗುಂಪ ಕಟ್ಟಿಕೊಂಡು ಬಂದು ಗೆರಾವ್ ಹಾಕಿದ. ಅನರೀಕ್ಷಿತ ಘಟನೆಗಳಿಂದ ಉಮಾಶ್ರೀ ಹಾಗೂ ಇಲಾಖೆಯ ನಿರ್ದೇಶಕರು ತಳಮಳಗೊಂಡರು. ಇದು ಹೀಗೆ ಬಿಟ್ಟರೆ ತಮ್ಮ ಬುಡಕ್ಕೆ ಬಿಸಿನೀರಾಗುತ್ತದೆಂದುಕೊಂಡು ಏನಾದರೂ ಮಾಡಿ ಕುಮಾರನನ್ನು ಮಟ್ಟಹಾಕಬೇಕೆಂದು ಕಾಯುತ್ತಿದ್ದರು. ಕೆಎಎಸ್ ಅಧಿಕಾರಿಯಾಗಿರುವ ದಯಾನಂದರವರಿಗೆ ಐಎಎಸ್ ಅಧಿಕಾರಿಯಾಗಿ ಪ್ರಮೋಶನ್ ಬರುವುದರಲ್ಲಿತ್ತು. ಇಂತಹ ಸಂದರ್ಭದಲ್ಲಿ ಲೋಕಾಯುಕ್ತ ತನಿಖೆಯಲ್ಲಿ ಸಿಕ್ಕಾಕಿಕೊಂಡರೆ ತಮ್ಮ ಬಡ್ತಿ ತಡೆಹಿಡಿಯಲಾಗುತ್ತದೆಂಬ ಸಂಕಟವೂ ದಯಾನಂದರವರದ್ದಾಗಿತ್ತು. ಏನಾದರೂ ಮಾಡಲೇ ಬೇಕೆಂದು ತಹತಹಿಸುತ್ತಿದ್ದರು.

ಆಗ ಒಬ್ಬ ಆಪದ್ಬಾಂದವನ ಹಾಗೆ ಬಂದ, ಜೊತೆಗೆ  ಒಂದು ದೂರು ತಂದ. ಅದು ಇಲಾಖೆಯ ನಿರ್ದೇಶಕರಿಗೆ ವರದಾನವಾಯಿತು. ಖಾಸಗಿ ವಾಹಿನಿಯಲ್ಲಿ ಕೆಲಸ ಮಾಡುವ ಹುಡುಗ “‘ಗಂಗೋತ್ರಿ ಹಾಗೂ ಅಂಕ ದಂತಹ ಅನೇಕ ಸಂಸ್ಥೆಗಳು ಸರಕಾರಿ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ವಿಚಾರಣೆ ಮಾಡಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ದೂರು ಕೊಟ್ಟಇದನ್ನೇ ನೆಪವಾಗಿಟ್ಟುಕೊಂಡ ದಯಾನಂದರವರು ಗಂಗೊತ್ರಿ ಸಂಸ್ಥೆಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಕ್ಕೆ ಮುಹೂರ್ತ ಫಿಕ್ಸ ಮಾಡಿದರು. ಕಳ್ಳ ಲೆಕ್ಕ ಕೊಟ್ಟ ಹಾಗೂ ಲೆಕ್ಕವನ್ನೇ ಕೊಡದಿರುವ ಎಲ್ಲಾ ಸಂಸ್ಥೆಗಳ ಮೇಲೆ ವಿಚಾರಣೆ ಮಾಡಲು ಆದೇಶಿಸಿದರು. ಆಗ ಸಿಕ್ಕಿದ್ದು ಐವತ್ತಕ್ಕೂ ಹೆಚ್ಚು ಸಂಸ್ಥೆಗಳು. ಎಲ್ಲಾ ಸಂಸ್ಥೆಗಳನ್ನೂ ಕಪ್ಪು ಪಟ್ಟಿಯಲ್ಲಿಡಲಾಗುತ್ತದೆ ಹಾಗೂ ಕ್ರಿಮಿನಲ್ ಮೊಕದ್ದಮೆ ಹೂಡಿ ಜೈಲಿಗಟ್ಟಲಾಗುತ್ತದೆ ಎಂದು ದಯಾನಂದರವರು ಟಿವಿಯಲ್ಲಿ ಹಾಗೂ ಪತ್ರಿಕೆಗಳಲ್ಲಿ ಹೇಳಿಕೆ ಕೊಟ್ಟರು. ತಕ್ಷಣ ಪೊಲೀಸ್ ಠಾಣೆಗೂ ಹೋಗಿ ಗಂಗೊತ್ರಿ ಸಂಸ್ಥೆಯ ಕುಮಾರನ ಮೇಲೆ 56 ಲಕ್ಷ ಹಣ ದುರುಪಯೋಗ ಮಾಡಿಕೊಂಡಿದ್ದಕ್ಕೆ ಹಾಗೂ ಇನ್ನೊಂದು ಅಣ್ಣಮ್ಮದೇವಿ ಕಲಾ ವೇದಿಕೆಯ ಕೃಷ್ಣಮೂರ್ತಿ ಎನ್ನುವವರು  ಎಂಟು ಲಕ್ಷ ರೂಪಾಯಿ ದುರುಪಯೋಗದ ಮಾಡಿಕೊಂಡಿದ್ದಕ್ಕೆ ಇಲಾಖೆಯ ವತಿಯಿಂದ ಎಸ್.ಜೆ.ಪೊಲೀಸ್ ಠಾಣೆಯಲ್ಲಿ 2015 ಆಗಸ್ಟ್ 26 ರಂದು ದೂರು ದಾಖಲಿಸುತ್ತಾರೆ.   ಸಹಿಸುವಷ್ಟು ದಿನ ಸಹಿಸಿದ ದಯಾನಂದ ಸಾಹೇಬರು ಕುಮಾರನ ಬೇನಾಮಿ ಸಂಸ್ಥೆಯ ಮೂಲವನ್ನು ಕಂಡು ಹಿಡಿದು ಆತನ ಬುಡಕ್ಕೆ ಬತ್ತಿ ಇಟ್ಟು ಸೇಡು ತೀರಿಸಿಕೊಂಡರು. ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಆತನನ್ನು ಜೈಲಿಗೆ ಕಳುಹಿಸುವ ಸ್ಕೆಚ್ ಸಿದ್ದಗೊಳಿಸಿದರು. ಹಾಗೂ ವಿಷಯ ಮಾಧ್ಯಮಗಳಲ್ಲೂ ಬರುವಂತೆ ನೋಡಿಕೊಂಡರು. ತಲ್ಲಣಿಸಿ ಹೋಗುವುದು ಈಗ ಕುಮಾರನ ಸರದಿಯಾಗಿತ್ತು.

ದೇವೇಗೌಡರ ಜೊತೆಗೆ ಕುಮಾರ
ಗಂಗೋತ್ರಿ ಕುಮಾರ ಅದೆಷ್ಟು ಹಣ ನುಂಗಿದ್ದಾನೆ... ಅದೆಷ್ಟು ಕಳ್ಳ ಲೆಕ್ಕ ಕೊಟ್ಟು ಇಲಾಖೆಯನ್ನು ಯಾಮಾರಿಸಿದ್ದಾನೆ... ಇದರಲ್ಲಿ ಸತ್ಯ ಎಷ್ಟು ಮಿಥ್ಯ ಎಷ್ಟು ಎನ್ನುವುದನ್ನೆಲ್ಲಾ ನ್ಯಾಯಾಲಯ ವಿಚಾರಣೆ ಮಾಡಿ ಮುಂದೆ ಅದೆಷ್ಟೋ ವರ್ಷಗಳ ಮೇಲೆ ಎಂಥದೋ ಒಂದು ತೀರ್ಮಾಣಕ್ಕೆ ಬರುತ್ತದೆ. ಅದೂ ಕೂಡಾ ಸುಳ್ಳನ್ನು ಸತ್ಯವೆಂದು ಸಾಬೀತುಪಡಿಸುವ ವಕೀಲರುಗಳ ಚಾಣಾಕ್ಷತೆಯನ್ನು ಅವಲಂಬಿಸಿರುತ್ತದೆಹೇಗೋ ನುಂಗಣ್ಣರ ಮೇಲೆ ತನಿಖೆ ಮಾಡಿ ಆಕ್ಷನ್ ತೆಗೆದುಕೊಂಡಿದ್ದಕ್ಕೆ ದಯಾನಂದರವರು ಎಲ್ಲರ ಮೆಚ್ಚುಗೆಗೂ ಪಾತ್ರರಾದರು. ಆದರೆ... ದಯಾನಂದರವರ ಹೀರೋಯಿಸಂ ಹಿಂದಿರುವುದು ತಮ್ಮ ಭವಿಷ್ಯಕ್ಕೆ ಮಾರಕವಾಗಿದ್ದ ಕುಮಾರನನ್ನು ಮಾತ್ರ ಮಟ್ಟಹಾಕುವುದಾಗಿತ್ತು ಎಂಬುದು ತದನಂತರದ ವಿದ್ಯಮಾನಗಳಿಂದ ತಿಳಿದು ಬರತೊಡಗಿತು. ಇಲಾಖೆಯ ಹಣ ದುರುಪಯೋಗ ಪಡಿಸಿಕೊಂಡ ಐವತ್ತಕ್ಕೂ ಹೆಚ್ಚು ಸಂಸ್ಥೆಗಳನ್ನು ಬ್ಲಾಕ್ಲಿಸ್ಟಲ್ಲಿ ಇಡಲಾಗುವುದು ಹಾಗೂ ಕ್ರಿಮಿನಲ್ ಮೊಕದ್ದಮೆ ಹೂಡಿ ಖದೀಮರು ತಿಂದ ಹಣ ಕಕ್ಕಿಸಲಾಗುವುದು ಎಂದೆಲ್ಲಾ ಮಾಧ್ಯಮಗಳಲ್ಲಿ ಹೇಳಿ ಪ್ರಚಾರ ಗಿಟ್ಟಿಸಿಕೊಂಡಿದ್ದ ದಯಾನಂದ ಸಾಹೇಬರು ತಮ್ಮ ಕಾರ್ಯಾಚರಣೆಯನ್ನು  ಎರಡೇ ಸಂಸ್ಥೆಗಳಿಗೆ ಸೀಮಿತಗೊಳಿಸಿ ಸೇಡಿನ ರಾಜಕೀಯ ಮಾಡಿದ್ದು ಸ್ಪಷ್ಟವಾಗುವಂತಿದೆ. ಹದ್ದು ಮೀರುತ್ತಿರುವ ಕುಮಾರನ ಉಪಟಳವನ್ನು ತಡೆಹಿಡಿಯಬೇಕು ಎನ್ನುವುದೊಂದೆ ಅವರ ಒಂದಂಶದ ಕಾರ್ಯಕ್ರಮವಾಗಿತ್ತು. ಬಾಕಿ ಸಂಘ ಸಂಸ್ಥೆಗಳ ಮೇಲೇನಾದರೂ ಕ್ರಮ ಕೈಗೊಂಡಿದ್ದರೆ ಸಂಸ್ಕೃತಿ ಇಲಾಖೆಯ ಬಹುತೇಕ ಅಧಿಕಾರಿಗಳು ಹಾಗು ನೌಕರರು ಜೈಲಿಗೆ ಹೋಗಬೇಕಾಗುತ್ತಿತ್ತು. ಯಾಕೆಂದರೆ ರಂಗದಲ್ಲಾಳಿಗಳ ಹಣ ದುರುಪಯೋಗದಲ್ಲಿ ಅವರೆಲ್ಲಾ ಶಾಮಿಲಾಗಿದ್ದರು. ಹೀಗಾಗಿ ತಮ್ಮ ಇಲಾಖೆಯ ಮರ್ಯಾದೆ ಹೋಲಸೇಲಾಗಿ ಹರಾಜಾದರೆ ಇಲಾಖೆಯ ಮರ್ಯಾದೆ ಮೂರು ಕಾಸಿಗೆ ಹರಾಜಾಗುತ್ತದೆ ಹಾಗೂ ಸರಕಾರಕ್ಕೆ ಕೆಟ್ಟ ಹೆಸರು ಬರುತ್ತದೆ...ಕೊನೆಗೆ ತನ್ನ ನೌಕರಿಗೂ ಕುತ್ತು ಬರುತ್ತದೆ ಎಂಬುದನ್ನು ಅರಿತ ದಯಾನಂದ ಸಾಹೇಬರು ಇಲಾಖೆಯ ಕರ್ಮಕಾಂಡದ ಹುತ್ತಕ್ಕೆ ಕೈ ಹಾಕದೇ ತನ್ನ ಮೇಲೆ ಬುಸುಗುಡುತ್ತಾ ಕಚ್ಚಲು ಬಂದ ಹಾವೊಂದನ್ನು ಮಾತ್ರ ಹಿಡಿದು  ಹದ್ದುಬಸ್ತಿನಲ್ಲಿಡಲು ಪ್ರಯತ್ನಿಸಿದರು. ಹಾಗೂ ಅದರಲ್ಲಿ ತಕ್ಕಮಟ್ಟಿಗೆ ಯಶಸ್ಸನ್ನೂ ಪಡೆದರು.

ಇದರ ಹಿಂದೆ ಇನ್ನೊಂದು ಅನುಮಾನವೂ ಕಾಡತೊಡಗಿತು. ಅದನ್ನು ಕುಮಾರ ಎಲ್ಲರ ಮುಂದೆ ಹೇಳಿಯೂ ಆಯಿತು. ಅದೇನೆಂದರೆ ಲೋಕಾಯುಕ್ತದಲ್ಲಿ ಹಾಕಿದ ಕೇಸನ್ನು ವಾಪಸ್ಸು ತೆಗೆದುಕೊಂಡು ನನಗೆ 50 ಲಕ್ಷ ಪರಿಹಾರವನ್ನು ಕೊಟ್ಟರೆ ನಿನ್ನ ಮೇಲೆ ಹಾಕಿದ ಕ್ರಿಮಿನಲ್ ಕೇಸನ್ನು ವಾಪಸ್ ತೆಗೆದುಕೊಳ್ಳಲಾಗುವುದು ಎಂದು ದಯಾನಂದರವರು ಕುಮಾರನನ್ನು ಬ್ಲಾಕ್ಮೇಲ್ ಮಾಡಿದರಂತೆ. ಇದು ಪೂರ್ಣ ಸತ್ಯ ಇರಲಾರದು. ಬೇಕಾದರೆ ಕೇಸಿಗೆ ಬದಲಾಗಿ ಕೇಸು ವಾಪಸ್ಸು ತೆಗೆದುಕೊಳ್ಳುವ ಡೀಲ್ಗೆ ದಯಾನಂದ ತಯಾರಿರಬಹುದಾದರೂ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿದ್ದನ್ನು ಯಾರೂ ನಂಬಲಾರರು. ಹಾಗೆ ಮಾಡಿದರೆ ಕುಮಾರ ಊರಿಗೆಲ್ಲಾ ಕೇಳಿಸುವಂತೆ ಬಾಯಿಬಡಿದು ಕೊಳ್ಳುತ್ತಾನೆಂಬುದನ್ನು ಅರಿಯದಷ್ಟು ಪೆದ್ದರಲ್ಲ ದಯಾನಂದರವರು. ಏನೇ ಹೇಳಿದರೂ ಕುಮಾರನನ್ನು ನಂಬಲು ಯಾರೂ ತಯಾರಿರಲಿಲ್ಲ. ಹೇಳುವುದನ್ನು ಆತನೂ ನಿಲ್ಲಿಸಲೂ ಇಲ್ಲ


ಆದರೆ ಕ್ರಿಮಿನಲ್ ಕೇಸಿಗಿಂತಲೂ ಹೆಚ್ಚು ಗಂಗೋತ್ರಿ ಕುಮಾರನನ್ನು ಕಂಗೆಡಿಸಿದ್ದು ಮಾಧ್ಯಮಗಳು. ಯಾಕೆಂದರೆ ಕುಮಾರನ ಚುಟುವಟಿಕೆಗಳ ಮೇಲೆ ಎಲ್ಲರಿಗೂ ಕೇವಲ ಗುಮಾನಿಗಳಿದ್ದವು. ಆದರೆ ಈಗ ಕ್ರಿಮಿನಲ್ ಆರೋಪಿತನಾದ ಮೇಲೆ ಆತನ ಮೇಲೆ ವಿಶ್ವಾಸಾರ್ಹತೆ ಕಡಿಮೆಯಾಗತೊಡಗಿತು. ಪ್ರಜಾ ಟಿವಿಯಲ್ಲಿ ಪ್ರಚಾರಗೊಂಡಿತ್ತು. ವಿಜಯವಾಣಿ ಹಾಗೂ ವಿಜಯಕರ್ನಾಟಕದಲ್ಲಿ ಕೂಡಾ ದಯಾನಂದರ ಹೇಳಿಕೆ ಹಾಗೂ ಕುಮಾರನ ಹಣ ದುರುಪಯೋಗದ ವರದಿ ಪ್ರಕಟಗೊಂಡಿತು. ಎಲ್ಲಾ ಬೆಳವಣಿಗೆಗಳನ್ನು ಗಮನಿಸಿ ನಾನು ಅಗ್ನಿ ವಾರಪತ್ರಿಕೆಯಲ್ಲಿ ಸಂಸ್ಕೃತಿ ಇಲಾಖೆಯ ಹೆಗ್ಗಣಗಳಿಗೆ ಬೋನು ಎನ್ನುವ ಲೇಖನ ಬರೆದಿದ್ದೆ. ಅದೇ ಲೇಖನದ ಸಂಪೂರ್ಣ ವಿವರವನ್ನು ಬ್ಲಾಗನಲ್ಲೂ ಹಾಕಿದ್ದೆ. ಅದು ನವೆಂಬರನಲ್ಲಿ ಸಂಸ ರಂಗಪತ್ರಿಕೆಯಲ್ಲೂ ಪ್ರಕಟವಾಯಿತು. ಇಷ್ಟೆಲ್ಲಾ ಆದ ಮೇಲೂ ಸುಮ್ಮನಿರಬೇಕಾಗಿದ್ದ ಕುಮಾರ ಪತ್ರಿಕೆಯಲ್ಲಿ ಬರೆದವರ ಮೇಲೆ ಎಗರಾಡತೊಡಗಿದ. ಮಾನನಷ್ಟ ಮೊಕದ್ದಮೆ ಹೂಡುತ್ತೇನೆಂದು ದಮಕಿ ಹಾಕತೊಡಗಿದ. ಆದರೆ  ತಪ್ಪು ಮಾಡಿಯೂ ಪತ್ರಕರ್ತರನ್ನು ಎದುರು ಹಾಕಿಕೊಳ್ಳವುದು ಎಷ್ಟು ಅಪಾಯಕಾರಿ ಎನ್ನುವುದು ಕುಮಾರನೆಂಬ ಹುಂಬನಿಗೆ ಗೊತ್ತಾಗದೇ ಹೋಯಿತು. ಸಿಕ್ಕವರ ಮುಂದೆಲ್ಲಾ ಬೈದಾಡಿಕೊಂಡು ತಿರುಗಿದ. ಇದೇ ಸಂಸ್ಕೃತಿ ಇಲಾಖೆಯಲ್ಲಿ ಕೋಟಿ ಕೋಟಿ ಹಣ ನುಂಗಿದ ಖದೀಮರು ನಾಜೂಕಾಗಿ ತಮ್ಮ ಕೆಲಸಗಳನ್ನು ಮಾಡಿಕೊಂಡು, ಅಧಿಕಾರಿಗಳ ಜೊತೆ ಶಾಮೀಲಾಗಿ ತಮ್ಮ ಲೂಟಿಯನ್ನು ಮುಂದುವರೆಸಿಕೊಂಡು ಹೋಗಿದ್ದಾರೆ. ಆತನ ಅವಿವೇಕತನದ ಮಾತುಗಳು ಹಾಗೂ ಹುಂಬತನಕ್ಕೆ ಬಿದ್ದ ಕುಮಾರ ಎಲ್ಲರನ್ನೂ ಎದುರು ಹಾಕಿಕೊಂಡು ಕ್ರಿಮಿನಲ್ ಆರೋಪ ಹೊತ್ತುಕೊಂಡು ತೊಂದರೆಗೊಳಗಾದ.

ನಟರಾಜ ಹುಳಿಯಾರ್

ಇಷ್ಟೆಲ್ಲಾ ಆದರೂ ಒಂದಿಷ್ಟು ದಿನಗಳ ಕಾಲ ಕುಮಾರ ಸುಮ್ಮನಿರಬೇಕಿತ್ತು. ಕನಿಷ್ಟ ವಿಷಯ ತಣ್ಣಗಾಗುವವರೆಗಾದರೂ ತಣ್ಣಗಿರಬೇಕಿತ್ತು. ಅದನ್ನು ಮಾಡಲಿಲ್ಲ. ಒಂದೆರಡು ವರ್ಷಗಳ ಕಾಲ ಇಲಾಖೆಯ ಹಣದ ಹಂಗಿಲ್ಲದೇ ಉತ್ತಮ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಿ ತನ್ನ ಸಾಮರ್ಥ್ಯ ತೋರಿಸಬಹುದಾಗಿತ್ತು. ಅದನ್ನೂ ಮಾಡಲಿಲ್ಲ. ಯಾಕೆಂದರೆ ಆತನೊಳಗಿನ ಹುಂಬುತನ ಹಾಗೂ ಅಸಾಧ್ಯವಾದ ಇಗೋ ಆತನನ್ನು ಸುಮ್ಮನಿರಲು ಬಿಡಲಿಲ್ಲ. ಮುಖಕ್ಕೆ ಹಚ್ಚಲಾದ ಮಸಿಯನ್ನು ಒರೆಸಿಕೊಳ್ಳಲು ತುರ್ತಾಗಿ ಏನಾದರೂ ಮಾಡಬೇಕಾಗಿತ್ತು ಸಂದರ್ಭದಲ್ಲಿ ದೇವರಂತೆ ಜೊತೆಯಾದವರು ಹಿರಿಯ ಬರಹಗಾರ ನಟರಾಜ್ ಹುಳಿಯಾರರವರು. ಅದು ಹೇಗೋ ಹುಳಿಯಾರರ ಸಂಪರ್ಕ ಹಾಗೂ ಸ್ನೇಹ ಸಂಪಾದಿಸಿದ ಕುಮಾರ್ ಅವರ ಹಿಂದೆ ಬಿದ್ದು ಏನಾದರೂ ಮಾಡಬೇಕು ಎನ್ನುವ ತನ್ನ ತಹತಹ ಹೇಳಿಕೊಂಡಹೆಚ್ಚು ಕಡಿಮೆ ಸಾಹಿತ್ಯ ಲೋಕದಿಂದ ಸ್ವಲ್ಪ ದೂರವೇ ಉಳಿದಿರುವ ಹುಳಿಯಾರರವರು ಜನಮಾನಸದಲ್ಲಿ ಉಳಿಯುವಂತಹ ಕಾರ್ಯಕ್ರಮವೊಂದರ ನೀಲಿ ನಕ್ಷೆ ಸಿದ್ದಗೊಳಿಸಿದರು. ಅದೇ ಯುವ ಕವಿ ಸಮ್ಮೇಳನ, ಇಲ್ಲಿವರೆಗೂ ಯಾರೂ ಮಾಡದ ಕಾರ್ಯಕ್ರಮವನ್ನು  ಅದ್ದೂರಿಯಾಗಿ ಮಾಡಲು ಕುಮಾರನೂ ಉತ್ಸುಕನಾದ. ಆದರೆ ಸಾಹಿತ್ಯ ಲೋಕದಲ್ಲಿ ಕುಮಾರನನ್ನು ಬಲ್ಲವರು ಯಾರೂ ಇಲ್ಲ. ಸಾಹಿತ್ಯದ ಗಂಧಗಾಳಿಯೂ ಆತನಿಗೆ ಗೊತ್ತಿಲ್ಲ. ಇಂತಹುದರಲ್ಲಿ ಯಾರನ್ನು ಕರೆಯುವುದು... ಕವಿಗಳನ್ನು ಹೇಗೆ ಒಪ್ಪಿಸುವುದು ಎನ್ನುವುದು ಗೊತ್ತಾಗಲಿಲ್ಲಕವಿಗಳನ್ನು ಅತಿಥಿಗಳನ್ನು ಒಪ್ಪಿಸುವುದು ಹುಳಿಯಾರರ ಕೆಲಸ ಹಾಗು ಕಾರ್ಯಕ್ರಮವನ್ನು ಆಯೋಜಿಸುವುದು ಕುಮಾರನ ಕರ್ತವ್ಯವೆಂದು ಕೆಲಸದ ಹಂಚಿಕೆ ಮಾಡಲಾಯಿತು. ಕೊನೆಗೂ ಡಿಸೆಂಬರ್ 11 ರಂದು ಯುವ ಕವಿ ಸಮ್ಮೇಳನ ಮಾಡುವುದೆಂದು ನಿರ್ಧರಿಸಲಾಯಿತು.


ಕಾರ್ಯಕ್ರಮ ರೂಪಿಸಲಾಯಿತಾದರೂ ಖರ್ಚಿಗೆ ಹಣ ಎಲ್ಲಿಂದ ತರುವುದು. ಕುಮಾರ್ ಕೈಯಿಂದ ಹಣ ಹಾಕುತ್ತಾನೆಂದರೆ ಯಾರೂ ನಂಬಲಾರರು. ಅದಕ್ಕೆ ಕವಿ ಸಮ್ಮೇಳನಕ್ಕೆ ಕವಿಗಳಿಂದಲೇ ಹಣ ಪಡೆಯುವ ಐಡಿಯಾ ಕುಮಾರನ ತಲೆಗೆ ಹೊಳೆದಿದ್ದೇ ತಡ ಎಲ್ಲಾ ಪತ್ರಿಕೆ ಕಾರ್ಯಾಲಾಯಗಳಿಗೆ ಪ್ರೆಸ್ ನೋಟ್ ಹೋಯಿತು. ಅಖಿಲ ಕರ್ನಾಟಕ ಪ್ರಥಮ ಯುವ ಕವಿ  ಸಮ್ಮೇಳನದಲ್ಲಿ ಭಾಗವಹಿಸಲು ಇಚ್ಚಿಸುವ ಕವಿಗಳು ತಮ್ಮ ವಿವರಗಳೊಂದಿಗೆ ಎರಡು ಕವಿತೆಗಳನ್ನು ಹಾಗೂ ಮೂನ್ನೂರು ರೂಪಾಯಿ ಪ್ರತಿನಿಧಿ ಶುಲ್ಕವನ್ನು ಕಳುಹಿಸಿಕೊಡಬೇಕು ಎಂದು ಕೆಲವು ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿತುಇದೊಂದು ಭಾರೀ ದೊಡ್ಡ ಸಮ್ಮೇಳನ ಇರಬಹುದು. ಇದರಲ್ಲಿ ತಮ್ಮ ಕವಿತೆ ಓದುವ ಭಾಗ್ಯ ನಮ್ಮದಾಗಲಿ ಎಂದುಕೊಂಡು ರಾಜ್ಯದ ಮೂಲೆ ಮೂಲೆಯಿಂದ ಎಲ್ಲಾ ನಮೂನಿ ಕವಿಗಳು ಕವಿತೆಯ ಜೊತೆಗೆ ಹಣವನ್ನೂ ಕೊಟ್ಟು ತಮ್ಮ ಹೆಸರನ್ನು ನೋಂದಾಯಿಸಿಕೊಂಡರು. ಕಾರ್ಯಕ್ರಮದ ಖರ್ಚಿಗೆ ಬೇಕಾದ ಹಣ ಸಂಗ್ರಹವಾಗತೊಡಗಿತು. ಕುಮಾರನ ವ್ಯಾಪಾರಿ ಬುದ್ದಿ ಪ್ರತಿಫಲನೀಡಿತು. ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆಯಿರೋ ಎನ್ನುವ ಮಾತು ಅಕ್ಷರಶಃ ನಿಜವಾಯಿತು. ಸಂಘಟಕನ ಆರ್ಥಿಕ ಸಮಸ್ಯೆ ನಿವಾರಣೆಯಾಯಿತು. ಆದರೆ ಮುನ್ನೂರು ನಾನೂರು ಕವಿಗಳು ಕವಿತೆ ಕಳುಹಿಸಿ ಹೆಸರು ನೋಂದಾಯಿಸಿಕೊಂಡಾಗ ಅವರು ಬಂದು ಇಲ್ಲಿ ಮಾಡುವುದಾದರೂ ಏನು. ಅಷ್ಟೊಂದು ಜನರಿಗೆ ಕವಿತೆ ಓದಲು ಅವಕಾಶ ಕೊಡಲಂತೂ ಸಾಧ್ಯವಿಲ್ಲ. ಕವಿತೆ ಓದುವ ನಾಲ್ಕರು ಜನರನ್ನು ಈಗಾಗಲೇ ನಿರ್ಧರಿಸಿ ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಲಾಗಿದೆ. ಹಣ ಕೊಟ್ಟು ಕವಿತೆ ಓದುವ ಆಶಯದಿಂದ ದೂರದೂರುಗಳಿಂದ ಬಂದ ಯುವ ಕವಿಗಳಿಗೆ ಕವಿತೆ ಓದಲು ಅವಕಾಶ ಸಿಗದಿದ್ದಾಗ ಅವರೆಲ್ಲಾ ನಿರಾಶೆಯಾಗುವುದು ಗ್ಯಾರಂಟಿ. ಅದು ಪ್ರತಿಭಟನೆಯ ಹಂತಕ್ಕೂ ಹೋಗಬಹುದಿತ್ತು. ಗಲಾಟೆಗಳೂ ಆಗಬಹುದಾಗಿತ್ತು. ಯುವಕವಿಗಳನ್ನು ಹಣ ಪಡೆದು ಕರೆಸಿ, ಅವರ ಕವಿತೆಯನ್ನೂ ಆಹ್ವಾನಿಸಿ ಕವಿತೆ ಓದಲು ಅವಕಾಶವನ್ನೂ ಕೊಡದೇ ಪ್ರೇಕ್ಷಕರಾಗಿ ಕುಳಿತು ಕೇಳಿರಿ ಎನ್ನುವುದು ವಂಚನೆಯಾಗುತ್ತದೆ ಎನ್ನುವ ಅರಿವು ಕುಮಾರನಿಗಾಗಲೀ ಹುಳಿಯಾರರಿಗಾಗಲೀ ಗೊತ್ತಾಗಲೇ ಇಲ್ಲ. ಸಧ್ಯ ಇಡೀ ಕಾರ್ಯಕ್ರಮವೇ ರದ್ದಾಗಿದ್ದರಿಂದ ಸಮಸ್ಯೆ ತಲೆದೋರಲಿಲ್ಲ. ಹಣ ಕೊಟ್ಟು ಕವಿತೆ ಓದುವ ಆಸೆ ಇಟ್ಟುಕೊಂಡವರ ಕನಸು ನನಸಾಗಲಿಲ್ಲ.  

ಹುಳಿಯಾರರು ದಿನಗಂಟಲೇ ತಲೆ ಕೆಡಿಸಿಕೊಂಡು ಕಾರ್ಯಕ್ರಮದ ರೂಪರೇಶೆ ಸಿದ್ದಗೊಳಿಸಿದರು. ಆರಿಪ್ ರಾಜರವರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಒಪ್ಪಿಸಿದರು. ಗೋಷ್ಟಿಗಳಲ್ಲಿ ಚರ್ಚಿಸಬೇಕಾದ ವಿಷಯಗಳನ್ನು ತಿರ್ಮಾನಿಸಿದರು. ವಿಷಯ ತಜ್ಞರನ್ನು ಮಾತಾಡಲು ಒಪ್ಪಿಸಿದರು. ಕವಿಗೋಷ್ಟಿಗೆ  ವಿ.ಆರ್.ಕಾರ್ಪೆಂಟರ್, ಬಸವರಾಜ್, ಹರವು ಸ್ಪೂರ್ತಿ, ಎಚ್.ಲಕ್ಷ್ಮೀನಾರಾಯಣ, ಸಂವರ್ಥ ಸಾಹಿಲ್, ಮಾಲತಿ ಭಟ್ರವರನ್ನು ಆಯ್ಕೆ ಮಾಡಿ ಒಪ್ಪಿಸಲಾಯಿತು. ಸಂವಾದ ಗೊಷ್ಟಿಯಲ್ಲಿ ಮಾತಾಡಲು ಡಾ.ಅರುಣ್ ಜೋಳದ ಕೂಡ್ಲಗಿ, ಡಾ.ಸುರೇಶ್ ನಾಗಲಮಡಿಕೆ, ಚಂದ್ರಶೇಖರ್ ಐಜೂರು, ಆಶಾ ಜೆ.ಸಿ ಇವರುಗಳನ್ನು ಆಹ್ವಾನಿಸಲಾಯಿತುಇತರೇ ವಿಷಯಗಳ ಗೋಷ್ಟಿಗೆ ಶ್ರೀದೇವಿ ಕಳಸದ, ರಮೇಶ ಅರೋಲಿ, ರೂಪಶ್ರೀ ಕಲ್ಲಿಗನೂರು, ಚಿಂತನ್ ವಿಕಾಸ್, ಹೃದಯಶಿವ, ಎಸ್.ಕುಮಾರ್ ಇವರುಗಳನ್ನು ಕರೆಯಲಾಯಿತುವೀರಣ್ಣ ಮಡಿವಾಳರ ಹಾಗೂ ಹುಲಿಕುಂಟೆ ಮೂರ್ತಿಯವರು ಸಮಾರೋಪದ ಅತಿಥಿಗಳಾದರು. ಇದರಲ್ಲಿ ಬಹುತೇಕರು ಹೆಚ್ಚು ಜನರಿಗೆ ಗೊತ್ತಿಲ್ಲವಾದ್ದರಿಂದ ಹೆಸರುವಾಸಿಯಾದವರ ಹೆಸರಿನ ಬೆಂಬಲವಿಲ್ಲದಿದ್ದರೆ ಇಡೀ ಸಮ್ಮೇಳನಕ್ಕೆ ತೂಕ ಬರಲಾರದೆಂದು ಅರಿತ ನಟರಾಜ ಹುಳಿಯಾರರು ಕವಿ ಸಿದ್ದಲಿಂಗಯ್ಯ, ಹಾಡುಗಾರ ಶಿವಮೊಗ್ಗ ಸುಬ್ಬಣ್ನ, ಸಿಪಿಐ ಪಕ್ಷದ ನಾಯಕರಾದ ಸಿದ್ದನಗೌಡ ಪಾಟೀಲ್, ಸಿಪಿಎಂ ಪಕ್ಷದ ನಾಯಕರಾದ ಜಿ.ಎನ್.ನಾಗರಾಜ್, ಪ್ರಸಿದ್ದ ವಕೀಲರಾದ ಸಿ.ಹೆಚ್.ಹನುಮಂತಯ್ಯ, ಕಥೆಗಾರ ಕಾ.ತಾ.ಚಿಕ್ಕಣ್ಣ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಎಲ್.ಹನುಮಂತಯ್ಯ ಬಂಜೆಗೆರೆ ಜಯಪ್ರಕಾಶ್ಪ್ರಾಧಿಕಾರ ಹಾಗೂ ಅಕಾಡೆಮಿಗಳ ಹಾಲಿ ಮಾಜಿ ಅಧ್ಯಕ್ಷರುಗಳು...ಹೀಗೆ ಪ್ರಸಿದ್ದರಾದವರನ್ನೆಲ್ಲಾ  ವಿಶೇಷ ಆಹ್ವಾನಿತರನ್ನಾಗಿ ಹೆಸರಿಸಿ ಆಹ್ವಾನ ಪತ್ರದಲ್ಲಿ ಮುದ್ರಿಸಿದರು. ವಿಶೇಷವೆಂದರೆ  ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ದಯಾನಂದರವರ ಹೆಸರೂ ಪಟ್ಟಿಯಲ್ಲಿತ್ತು. ಪಟ್ಟಿಯಲ್ಲಿ ಹೆಸರು ಹಾಕಲು ಎಲ್ಲರ ಅನುಮತಿ ಖಡ್ಡಾಯವೇನಿಲ್ಲವಲ್ಲಾ... ಹೀಗಾಗಿ ಹೆಸರುಗಳನ್ನು ಸೇರಿಸಲಾಯಿತು. ಇಂತಹ ದೊಡ್ಡ ದೊಡ್ಡವರೆಲ್ಲಾ ನನ್ನ ಜೊತೆಗಿದ್ದಾರೆ, ನನ್ನ ಎಲ್ಲಾ ಕೆಲಸಕ್ಕೆ ಸಹಮತ ಹೊಂದಿದ್ದಾರೆ ಎಂದು ತೋರಿಸಿಕೊಂಡು ತನ್ನ ಸಾಚಾತನವನ್ನು ಸಾಬೀತು ಪಡಿಸುವ ಪ್ರಯತ್ನವನ್ನು ಕುಮಾರ ಅತೀವ ಶೃದ್ದೆಯಿಂದ ಮಾಡತೊಡಗಿದ. ವಿಶೇಷ ಏನೆಂದರೆ ವಿಶೇಷ ಆಹ್ವಾನಿತರ ಪಟ್ಟಿಯಲ್ಲಿದ್ದ ಬಹಳಷ್ಟು ಮಂದಿಗೆ  ತಮ್ಮ ಹೆಸರು ಬಳಸಿಕೊಳ್ಳಲಾಗಿದೆ ಎನ್ನುವುದೇ ಗೊತ್ತಿರಲಿಲ್ಲ. ವಿಶೇಷ ಆಹ್ವಾನಿತರು ಬಂದು ಸಮ್ಮೇಳನದಲ್ಲಿ ಏನು ಮಾಡಬೇಕೆಂಬುದು ಕರೆದವರಿಗೂ  ಬರುವವರಿಗೂ ಗೊತ್ತಿರಲಿಲ್ಲ.

ಅದು ಹೇಗೋ ಬಂದವರು ಬರುತ್ತಿದ್ದರು, ಬಿಟ್ಟವರು ಬಿಡುತ್ತಿದ್ದರು. ಆದರೆ ಎಲ್ಲಾ ಎಡವಟ್ಟಾಗಿದ್ದು ಒಂದು ಲೇಖನದಿಂದ ಹಾಗೂ ಒಬ್ಬ ಪ್ರಜ್ಞಾವಂತ ಕವಿಯ ಸಮಯಸ್ಪೂರ್ತಿಯಿಂದನಾನು ನಾಲ್ಕು ತಿಂಗಳ ಹಿಂದೆ ಬರೆದ ಸಂಸ್ಕೃತಿ ಇಲಾಖೆ ಹೆಗ್ಗಣಗಳಿಗೆ ಬೋನು ಲೇಖನ ನನಗೇ ಮರೆತುಹೋಗಿತ್ತು. ಆದರೆ ಧಾರವಾಡದ ಕವಿಮಿತ್ರರು ಅದನ್ನು ನೆನಪಿಸಿಕೊಂಡಿದ್ದರು. ಕವಿಗಳಿಗೆ ಸಮ್ಮೇಳನದ ಹೆಸರಲ್ಲಿ ವಂಚಿಸಲಾಗುತ್ತದೆ ಎನ್ನುವ ಕುರುಹುಗಳು ಅವರಿಗೆ ಗೊತ್ತಾಗಿ ಹೋಗಿದ್ದವು. ಯುವಕವಿ ಸಮ್ಮೇಳನಕ್ಕೆ ಹೋಗುವವರು ಲೇಖನವನ್ನು ಓದಿಕೊಳ್ಳಿ ಎಂದು ತಮ್ಮ ಪೇಸಬುಕ್ಕಿನ ಪುಟದಲ್ಲಿ ಬರೆದು ಲೇಖನದ ಕೆಲವು ಅಂಶಗಳನ್ನು ಪ್ರಕಟಿಸಿ ಪೋಸ್ಟ್ ಮಾಡಿಬಿಟ್ಟಿದ್ದರು. ಸಮ್ಮೇಳನಕ್ಕೆ ಆಹ್ವಾನಿತರಾದ ಅನೇಕರು ಅವರ ಫೇಸ್ಬುಕ್ಕಿನಲ್ಲಿರುವವರು. ಅದನ್ನು ಓದಿದವರಿಗೆಲ್ಲಾ ದಿಗ್ಬ್ರಮೆ ಆಯಿತು. ಸಮ್ಮೇಳನದ ಸಂಘಟಕರ ಮೇಲಿರುವ ಕ್ರಿಮಿನಲ್ ಆರೋಪಗಳ ಕುರಿತು ಓದಿ ತಲ್ಲಣಗೊಂಡರು. ತಮ್ಮತಮ್ಮೊಳಗೆ ಚರ್ಚಿಸಿದರು. ಕೆಲವರು ನಂಬಿದರು ಇನ್ನು ಕೆಲವರು ಅಲಕ್ಷಿಸಿದರು. ಮತ್ತೆ ಕೆಲವರು ನಂಬದವರಿಗೆ ಪೂರಕ ಸಾಕ್ಷಿಗಳನ್ನು ಒದಗಿಸತೊಡಗಿದರು. ಯಾರಿಂದಲೋ ಪ್ರಜಾಟಿವಿಯಲ್ಲಿ ಬಂದ ವರದಿಯ ವಿಡೀಯೋ ತುಣುಕು ಅದು ಹೇಗೋ ಸಿಕ್ಕಿತು. ಅದರು ವಾಟ್ಸಪ್ ಮೂಲಕ ಶರವೇಗದಲ್ಲಿ ಹಂಚಿಕೆಯಾಯಿತು. ಇನ್ನು ಕೆಲವರಿಗೆ ವಿಜಯವಾಣಿ, ವಿಜಯಕರ್ನಾಟಕ ಹಾಗೂ ಅಗ್ನಿ ಪತ್ರಿಕೆಯಲ್ಲಿ ಬಂದ ಪೇಪರ್ ಕಟ್ಟಿಂಗಗಳು ಸಿಕ್ಕವೂ ಅವೂ ಕೂಡಾ ಹಂಚಿಕೆಯಾದವರು. ಈಮೇಲ್ಗಳಲ್ಲಿ ಪೇಸಬುಕ್ಕಲ್ಲಿ ಕುರಿತ ಮಾಹಿತಿಗಳು ವಿನಿಮಯಗೊಂಡವುಇದರಿಂದ ದಿಗಿಲುಗೊಂಡ ಕೆಲವರು ನಟರಾಜ ಹುಳಿಯಾರರಿಗೆ ಪೋನ್ ಮಾಡಿದರೆ ಅವರು ಪೊನ್ ಎತ್ತಲೇ ಇಲ್ಲವಂತೆ. ಕುಮಾರ್ ಕೂಡಾ ಸಮರ್ಥನೆ ಮಾಡಿಕೊಳ್ಳುವಷ್ಟು ಮಾಡಿಕೊಂಡು ಸುಮ್ಮನಾದ. ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಗೊಂಡ ಅರಿಪ್ ರಾಜ ರೊಂದಿಗೆ ಕೆಲವರು ಮಾತಾಡಿದರು. ಕೊನೆಗೆ ಎಲ್ಲಾ ಕವಿಗಳು ಅದರಲ್ಲೂ ಉತ್ತರ ಕರ್ನಾಟಕದ ಯುವ ಕವಿಗಳು ಹೆಚ್ಚಿದ್ದರು. ಕವಿ ಸಮ್ಮೇಳನದ ಆಯೋಜಕರ ಮೇಲೆ ಗುರುತರವಾದ ಆರೋಪಗಳಿರುವುದರಿಂದ ಹಾಗೂ ಸಂಘಟಕರಿಗೂ ಸಾಹಿತ್ಯ ಕ್ಷೇತ್ರಕ್ಕೂ ಸಂಬಂಧವೇ ಇಲ್ಲವಾದ್ದರಿಂದ ಕವಿ ಸಮ್ಮೇಳನವನ್ನು  ವಿರೋಧಿಸುತ್ತೇವೆ ಹಾಗು ಬಹಿಷ್ಕರಿಸುತ್ತೇವೆ ಎನ್ನುವ ಸಾಮೂಹಿಕ ತೀರ್ಮಾಣವನ್ನು ತೆಗೆದುಕೊಂಡು ಅದನ್ನು ಪೇಸ್ಬುಕ್ಗಳಲ್ಲಿ ಪರಸ್ಪರ ಹಂಚಿಕೊಂಡರು. ಈಮೇಲ್ ಮೂಲಕ ಕುಮಾರ್ ಹಾಗೂ ಹುಳಿಯಾರರಿಗೆ ತಿಳಿಸಿದರು.

ಆರಿಪ್ ರಾಜ
ಆರಿಪ್ ರಾಜರವರೂ ತಮ್ಮ ಈಮೇಲ್ನಲ್ಲಿ ಮಾನ್ಯ ರಂಗೋತ್ರಿಯ ಕುಮಾರರವರೆ,.... ನಿಮ್ಮ ಮೇಲಿನ ಗಂಭೀರ ಆರೋಪಗಳನ್ನು ದಾಖಲೆ ಸಮೇತ ನೋಡಿದ ಮೇಲೆ ಅನಗತ್ಯ ಚರ್ಚೆ ನಗಣ್ಯ. ಕಾರ್ಯಕ್ರಮಕ್ಕೆ ಬರಲಾರದ್ದಕ್ಕೆ ಕ್ಷಮೆಯಿರಲಿ, ನನಗೀಗಾಗಲೇ   ಕಾರ್ಯಕ್ರಮಕ್ಕೆ ಬರಲಾಗುವುದಿಲ್ಲ ಎಂದು ತಿಳಿಸಿದ ಎಲ್ಲಾ ಯುವ ಲೇಖಕರ ಈಮೇಲ್ ಗಳನ್ನು ನಿಮಗೆ ಪಾರ್ವರ್ಡ ಮಾಡಿದ್ದೇನೆ. ಬಹುತೇಕರು ಪೋನ್ ಹಾಗೂ ಪೇಸಬುಕ್ ಮೂಲಕ ಬರಲಾಗದ್ದನ್ನು ತೋಡಿಕೊಂಡಿದ್ದಾರೆ. ಯಾರಿಗೋಸ್ಕರ   ಕಾರ್ಯಕ್ರಮ ಮಾಡುತ್ತಿದ್ದೇವೋ ಅವರೇ ಬರುತ್ತಿಲ್ಲ ಎಂದಮೇಲೆ ಕಾರ್ಯಕ್ರಮಕ್ಕೆ ಯಾವ ಅರ್ಥವೂ ಇಲ್ಲ. ದಯವಿಟ್ಟು ಹಠಮಾಡಿ  ಮುಂದುವರೆದು ಮುಖಬಂಗ ಅನುಭವಿಸಬೇಡಿ. ನನಗೂ ಮರ್ಯಾದೆಗೇಡು ಮಾಡಬೇಡಿ... ಎಂದು ಕುಮಾರನಿಗೆ ತಿಳಿಸುವ ಜೊತೆಗೆ ಇದನ್ನು ತಮ್ಮ ಪೇಸ್ಬುಕ್ನಲ್ಲೂ ಹಾಕಿ ತಮ್ಮ ಅಸಹಾಯಕತೆ ತೋಡಿಕೊಂಡರುಅಖಿಲ ಕಾರ್ನಾಟಕ ಯುವ ಕವಿ ಸಮ್ಮೇಳನವನ್ನು ನಾವು ಸಾಮುಹಿಕವಾಗಿ ಬಹಿಷ್ಕರಿಸಿದ್ದೇವೆ. ಬ್ರಷ್ಟತೆಯ ಆರೋಪ ಹೊತ್ತ ಸಂಘಟಕರಾದ ಕುಮಾರ್ ಬಗ್ಗೆ ನಮಗೆ ಏನೂ ಗೊತ್ತಿರಲಿಲ್ಲ. ನಟರಾಜ್ ಹುಳಿಯಾರರವರೂ ಇದರ ಹಿನ್ನೆಲೆ ಗೊತ್ತಿಲ್ಲದೇ ಕಾರ್ಯಕ್ರಮವನ್ನು ರೂಪಿಸಿಕೊಟ್ಟಿದ್ದರಂತೆ. ನಮ್ಮ ಸಂಪರ್ಕಕ್ಕೆ ಸಿಗದ ಮೂವರನ್ನು ಹೊರತು ಪಡಿಸಿ ನಾವುಗಳು ಒಟ್ಟಾರೆ ನಿರ್ಧಾರಕ್ಕೆ ಬಂದಿದ್ದೇವೆ..... ಎಂದು ಡಾ.ಅರುಣ್ ಜೋಳದ ಕೂಡ್ಲಗಿಯವರು ಮೇಲ್ ಹಾಗೂ ಪೇಸ್ಬುಕ್ ಮೂಲಕ ತಮ್ಮ ತೀರ್ಮಾಣ ಪ್ರಕಟಿಸಿದ್ದಾರೆ.

ಆದರೆ ಕುಮಾರನ ಮೇಲಿರುವ ಆರೋಪ ಅದೇನೇ ಇರಲಿ ಅದರ ಬಗ್ಗೆ ನಟರಾಜ ಹುಳಿಯಾರರಿಗೆ ಏನೂ ಗೊತ್ತಿಲ್ಲ ಎನ್ನುವುದನ್ನು ನಂಬಲು ಅಸಾಧ್ಯ. ಯಾಕೆಂದರೆ ಅವರು ಅಗ್ನಿ ಪತ್ರಿಕೆಯ ಖಾಯಂ ಓದುಗರು. ಅಲ್ಲಿ ಬಂದ ಲೇಖನವನ್ನೂ ಓದಿದ್ದಾರೆ. ಜೊತೆಗೆ ದಿನಪತ್ರಿಕೆಗಳಲ್ಲೇ ಹಗರಣ ಕುರಿತು ವರದಿಯಾಗಿದೆ. ಇದೆಲ್ಲಾ ಗೊತ್ತಿಲ್ಲ ಎನ್ನುವಷ್ಟು ಅಮಾಯಕರಂತೂ ಹುಳಿಯಾರರಲ್ಲ. ಜೊತೆಗೆ ಇತ್ತೀಚೆಗೆ ಕನ್ನಡಭವನಕ್ಕೆ ಹೋಗಿದ್ದಾಗ ಹುಳಿಯಾರರಿಗೆ ಅವರ ಬಂಡಾಯ ಸಂಘಟನೆಯ ಗೆಳೆಯ ಕುರಿತು ಎಚ್ಚರಿಸಿದ್ದಾರೆ. ಇದೆಲ್ಲಾ ಗೊತ್ತಿದ್ದೂ ಕಾರ್ಯಕ್ರಮದ ರೂಪರೇಷೆ ಸಿದ್ದಗೊಳಿಸಿ, ಬಹುತೇಕರನ್ನು ಒಪ್ಪಿಸಿ ಈಗ ಎಲ್ಲರೂ ತಿರುಗಿ ಬಿದ್ದಾಗ ನನಗೇನೂ ಗೊತ್ತೆಇಲ್ಲಾ ಅನ್ನುವುದು ಪಲಾಯಣವಾದವಾಗುತ್ತದೆ. ಲಂಕೇಶರ ಒಡನಾಡಿಯಾಗಿದ್ದ ಹಾಗೂ ಬಂಡಾಯ ಸಾಹಿತ್ಯ ಸಂಘಟನೆಯಲ್ಲಿ ಸಕ್ರೀಯವಾಗಿದ್ದ ಹುಳಿಯಾರರು ಹೀಗೆಲ್ಲಾ ಸುಳ್ಳು ಹೇಳಬಾರದು ಹಾಗೂ ಬ್ರಷ್ಟಾಚಾರದ ಅರೋಪ ಇರುವವರ ಜೊತೆಗೆ ಶಾಮೀಲೂ ಆಗಬಾರದು. ಇನ್ನೊಂದು ವಿಶೇಷತೆ ಗಮನಿಸಲೇಬೇಕು. ನಟರಾಜರು ಇಡೀ ಕಾರ್ಯಕ್ರಮದಲ್ಲಿ ಎಲ್ಲಿಯೂ ಮುಂಚೂಣಿಯಲ್ಲಿ ಕಾಣಿಸಿಕೊಳ್ಳದೇ ಎಲ್ಲವನ್ನೂ ನೇಪತ್ಯದಲ್ಲಿ ನಿಂತೇ ನಿರ್ದೇಶಿಸಿದ್ದಾರೆ. ಆಹ್ವಾನ ಪತ್ರಿಕೆಯಲ್ಲೂ ಸಹ ಅವರ ಹೆಸರು ವಿಶೇಷ ಆಹ್ವಾನಿತರ ಪಟ್ಟಿಯ ನಡುಮಧ್ಯದಲ್ಲಿದೆ. ಅಂದರೆ ಅವರಿಗೆ ಅದೆಲ್ಲೋ ಗಿಲ್ಟ್ ಕಾಡುತ್ತಿತ್ತೇನೋ. ಬಹಿರಂಗವಾಗಿ ಗುರುತಿಸಿಕೊಳ್ಳುವುದು ಕ್ಷೇಮ ಅಲ್ಲವೆಂಬ ಅರಿವು ಅವರಲ್ಲಿರಬಹುದಾಗಿದೆ. ಏನೇ ಆದರು ನಟರಾಜ ಹುಳಿಯಾರಂತವರು ಹೀಗೆ ಮಾಡಬಾರದಾಗಿತ್ತು. ಅನೇಕ ಪ್ರಜ್ಞಾವಂತ ಕವಿ ಬರಹಗಾರರನ್ನು ದಾರಿ ತಪ್ಪಿಸಬಾರದಿತ್ತು. ಕುಮಾರ ಬ್ರಷ್ಟಾಚಾರದ ಆರೋಪದಿಂದ ಮುಕ್ತನಾಗುವವರೆಗೂ ಆತನ ಥಿಂಕ್ಟ್ಯಾಂಕ್ ಆಗಿ ಹಿನ್ನಲೆಯಲ್ಲಿದ್ದು ಕೆಲಸ ಮಾಡಬಾರದಿತ್ತು. ರಾಜಕಾರಣಿಗಳಿಂದ ಒಂದಷ್ಟು ಅಂತರಕಾಪಾಡಿಕೊಂಡೇ ಇರುವ ಪ್ರಜ್ಞಾವಂತರಾದ ನಟರಾಜ ಹುಳಿಯಾರರು ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ವ್ಯಕ್ತಿಯೊಂದಿಗೆ ಸಹಯೋಗಹೊಂದಿ ಸಾಹಿತ್ಯಕ ಕಾರ್ಯಕ್ರಮವನ್ನು ರೂಪಿಸಿದ್ದಾದರೂ ಯಾಕೆ ಎನ್ನುವ ಪ್ರಶ್ನೆ ಹುಳಿಯಾರರನ್ನು ಬಲ್ಲ ಕೆಲವರಿಗಾದರೂ ಕಾಡದೇ ಇರದು

ಆಸ್ಪತ್ರೆಯಲ್ಲಿ ಕುಮಾರ

ಎಲ್ಲಾ ಮುಗಿದ ಮೇಲೆ ಇನ್ನೇನಿದೆ. ಆಹ್ವಾನಿತ ಕವಿಗಳು, ಅತಿಥಿಗಳು ಕವಿಸಮ್ಮೇಳನವನ್ನೇ ಸಾರಾಸಗಟಾಗಿ ಬಹಿಷ್ಕರಿಸಿದ ಮೇಲೆ ಮತ್ತೇನಿದೆ. ಕಾರ್ಯಕ್ರಮವನ್ನು ರದ್ದು ಮಾಡುವುದನ್ನು ಬಿಟ್ಟು ಬೇರೆ ಪರ್ಯಾಯ ದಾರಿಗಳು ಕುಮಾರನ ಮುಂದೆ ಇರಲಿಲ್ಲ. ಪರ್ಯಾಯ ಕಾರ್ಯಕ್ರಮಗಳನ್ನು ಮಾಡಲು ಸಮಯವೂ ಇರಲಿಲ್ಲ. ಸಮ್ಮೇಳನಕ್ಕಾಗಿ ಕವಿಗಳಿಂದ ಹಣ ಬೇರೆ ವಸೂಲಿ ಮಾಡಲಾಗಿದೆ. ಮಾಡದಿದ್ದರೆ ಕೊಟ್ಟವರು ಸುಮ್ಮನಿರಲಾರರು. ಏನೇ ಹೇಳಿದರೂ ಯಾರೂ ಕುಮಾರನನ್ನು ನಂಬುವ ಹಾಗಿರಲಿಲ್ಲ. ಏನಾಯಿತೆಂದು ಹೇಳಿದರೆ ಅವಮಾನಎಲ್ಲರೂ ನಂಬುವಂತಹ ಕಥೆಯೊಂದನ್ನು ಕಟ್ಟಲೇಬೇಕಾಗಿತ್ತು. ಹೀಗೆ ಹೃದಯಾಘಾತದ ಸನ್ನಿವೇಶ ಸೃಷ್ಟಿಸಲಾಯಿತುನೇರವಾಗಿ ಲೋಕಲ್ ಕ್ಲಿನಿಕ್ಗೆ ಹೋಗಿ ಅದೇನೋ ಚೆಕಪ್ ಮಾಡಿಸಿಕೊಂಡು ಜನರನ್ನು ನಂಬಿಸಲು ಅದನ್ನೂ ಸಹ ಪೊಟೋ ಹೊಡೆದು ಫೇಸಬುಕ್ ಗೆ ಅಪ್ ಲೋಡ್ ಮಾಡಿ ಸಂಘಟಕರಿಗೆ ಹೃದಯಾಘಾತವಾಗಿದ್ದರಿಂದ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ಘೋಷಿಸಿಕೊಂಡ. ಯಾರಾದರೂ ಆಸ್ಪತ್ರೆಯಲ್ಲಿ ಹೃದಯಾಘಾತವಾದಾಗ ತಮ್ಮ ಪೊಟೋ ತೆಗೆಸಿಕೊಂಡು ನೆಟ್ನಲ್ಲಿ ಹಾಕಲು ಸಾಧ್ಯವಾ? ಅಷೊಂದು ಸಮಯ ಹಾರ್ಟಅಟ್ಯಾಕ್ ಆದವರ ಹತ್ತಿರ ಇರುತ್ತದಾ? ಇದು ಸಹ ಕುಮಾರ ಆಡುವ ರಾಜಕೀಯದಾಟವಾ? ಹೀಗೆ ಹಲವಾರು ಪ್ರಶ್ನೆಗಳು ಬಣ್ಣ ಕಟ್ಟಿಕೊಂಡು ರವೀಂದ್ರ ಕಲಾಕ್ಷೇತ್ರದ ಮೆಟ್ಟಲುಗಳ ಕುಣಿಯತೊಡಗಿದವು. ಇದಿಷ್ಟೇ ಆಗಿದ್ದರೆ ಹೋಗಲಿ ಬಿಡು ನೋವಲ್ಲಿರುವವನನ್ನು ಆಡಿಕೊಂಡು ಏನು ಸಾಧಿಸುವುದಿದೆ ಎಂದುಕೊಂಡು ಸುಮ್ಮನಾಗಬಹುದಾಗಿತ್ತೇನೋ.... ಆದರೆ ಯಾವಾಗ ಫೇಸಬುಕ್ನಲ್ಲಿ ತನ್ನ ಒಡೆದಾಳುವ ಹಾಳು ರಾಜಕೀಯ ಬುದ್ದಿಯನ್ನು ಕುಮಾರ ತೋರಿಸಿದನೋ ಆಗ ಮನಸ್ಸು ಆಕ್ರೋಶಗೊಂಡಿತು. ಆತನ ಪೇಸ್ಬುಕ್ಕಿನಲ್ಲಿ ಕವಿ ಸಮ್ಮೇಳನ ರದ್ದಾಗಿದ್ದಕ್ಕೆ ಕೊಟ್ಟ ಕಾರಣ ಎಷ್ಟೊಂದು ಅಪಾಯಕಾರಿಯಾಗಿದೆ ನೋಡಿ...
      
ಫೇಸಬುಕಲ್ಲಿ ಕುಮಾರ ಉವಾಚ
 ಮೋಸದ ವಿರುದ್ಧ ಹೋರಾಟ ಮಾಡುತ್ತಿದ್ದ ನನ್ನ ಮೇಲೆ ಸಾಂಸ್ಕೃತಿಕ ದ್ರೋಹಿಗಳು ಇಲ್ಲಸಲ್ಲದ ಆರೋಪ ಮಾಡಿ ನನ್ನ ದ್ವನಿಯನ್ನು ಅಡಗಿಸುವ ಕುತಂತ್ರ ಮಾಡಿದ್ದಾರೆ. ಹಾಗೂ ಅಲ್ಪಸಂಖ್ಯಾತ ಯುವ ಕವಿಯನ್ನು ಸಮ್ಮೇಳನ ಅಧ್ಯಕ್ಷರನ್ನಾಗಿಸಿದ್ದನ್ನು ಸಹಿಸದೇ ಬಹು ಸಂಸ್ಕೃತಿಯ ಕಿಡಿಗೇಡಿಗಳ ಸಂಚಿನ ಹುನ್ನಾರಕ್ಕೆ ಕಾರ್ಯಕ್ರಮ ಬಲಿಯಾಗಿದೆ. ಆಘಾತವನ್ನು ಸಹಿಸದೇ ಹೃದಯಾಘಾತವಾಗಿ ಆಸ್ಪತ್ರೆಯಲ್ಲಿದ್ದೇನೆ. ಕಾರ್ಯಕ್ರಮ ತಾತ್ಕಾಲಿಕ ಮುಂದುಹಾಕಿದ್ದೇನೆ. ಯಾರಿಗೂ ಅಂಜುವುದಿಲ್ಲ ಅಳುಕುವುದಿಲ್ಲ.....

ಇಂತಹ ಕೋಮುದ್ವೇಶವನ್ನು ಹುಟ್ಟಿಸುವಂತಹ ಅಮಾನವೀಯ ಕೆಲಸವನ್ನು ಕೋಮುವಾದಿಗಳು ಮಾತ್ರ ಮಾಡಲು ಸಾಧ್ಯ. ಅರೀಪ್ ರಾಜರವರನ್ನು ಈತ ಅಲ್ಪಸಂಖ್ಯಾತ ಅಂತಾ ಆಯ್ಕೆ ಮಾಡಿದ್ದಾನಂತೆ. ಬಹುಸಂಖ್ಯಾತರು ಅದನ್ನು ಸಹಿಸದೇ ಇಡೀ ಕಾರ್ಯಕ್ರಮವನ್ನು ನಿಲ್ಲಿಸಲು ಕುತಂತ್ರ ಮಾಡಿದರಂತೆ. ಅಂದರೆ ಇದು ಕೋಮುಸೌಹಾರ್ದತೆಯನ್ನು ಕದಡುವಂತಹ ದುಷ್ಕೃತ್ಯವಾಗಿದೆ. ಯಾರೆಂದರೆ ಯಾರಿಗೂ ಕುಮಾರನಿಗೆ ಹೊಳೆದ ಖತರನಾಕ್ ವಿಚಾರ ಹೊಳೆದಿರಲು ಸಾಧ್ಯವೇ ಇಲ್ಲ. ಸ್ವತಃ ಅರೀಪ್ರವರೇ ಯಾಕೆ ಸಮ್ಮೇಳನಕ್ಕೆ ಬರುತ್ತಿಲ್ಲ ಎನ್ನುವುದನ್ನು ಮೇಲ್ ಮೂಲಕ ಸ್ಪಷ್ಟಪಡಿಸಿದ್ದಾರೆ. ಈತನ ಬ್ರಷ್ಟಾಚಾರದ ಆರೋಪದ ವಿರುದ್ಧ ಇಡೀ ಸಮ್ಮೆಳನದ ಕವಿಬಳಗ ಪ್ರತಿಭಟಿಸಿದೆ. ಆದರೆ ಈತ ಮಾತ್ರ ಅವರವರಲ್ಲೇ ಒಡಕು ಹುಟ್ಟಿಸುವ ಹುನ್ನಾರ ಮಾಡುತ್ತಿರುವುದು ನೋಡಿದರೆ ಈಗ ಅರೆಕಾಲಿಕ ರಾಜಕಾರಣ ಬಿಟ್ಟು ಯಾವುದಾದರೂ ಕೋಮುವಾದ ಪಕ್ಷದಲ್ಲಿ ಇರಲು ಯೋಗ್ಯನಾಗಿದ್ದಾನೆ. ಇಂತಹ ಅಪಾಯಕಾರಿ ಜನರನ್ನು ಸಾಹಿತ್ಯ ಲೋಕವಾಗಲೀ ಇಲ್ಲವೇ ಸಾಂಸ್ಕೃತಿಕ ಕ್ಷೇತ್ರವಾಗಲಿ ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ. ಈತನ ಎಲ್ಲಾ ಬ್ರಷ್ಟತೆ ದಲ್ಲಾಳಿತನಗಳನ್ನು ಸಹಿಸಬಹುದು ಆದರೆ ಹೀಗೆ  ಕೋಮು ಸೌಹಾರ್ಧತೆಯನ್ನು ಹಾಳು ಮಾಡುವಂತಹ ಮನಸ್ಥಿತಿಯನ್ನು ಮಾತ್ರ ಶತಾಯ ಗತಾಯ ವಿರೋಧಿಸಲೇಬೇಕು. ಇಂತವರಿಂದಲೇ ಇಂದು ಮನುಷ್ಯ ಮನುಷ್ಯರ ನಡುವೆ ಗುಮಾನಿಗಳು ಗೋಡೆಗಳಾಗಿವೆ. ತನ್ನ ದೌರ್ಬಲ್ಯಗಳನ್ನು ಮುಚ್ಚಿಕೊಳ್ಳಲು ಹೀಗೆ ಬೇರೆಯವರ ಮೇಲೆ  ಆರೋಪ ಮಾಡುವುದನ್ನು ಪ್ರಜ್ಞಾವಂತರು ಪ್ರತಿಭಟಿಸಲೇಬೇಕಿದೆ.


ಗಾಜಿನ ಮನೆಯಲ್ಲಿರುವವರು ಬೇರೆಯವರತ್ತ ಕಲ್ಲು ಬೀಸಾಕಬಾರದು ಎನ್ನುವುದು ಕುಮಾರನಿಗೆ ಗೊತ್ತಿಲ್ಲವೆಂದು ಕಾಣಿಸುತ್ತದೆ. ಇಲ್ಲವೇ ನಟರಾಜ ಹುಳಿಯಾರರಂತವರಾದರೂ ಬುದ್ದಿಹೇಳಬೇಕಿದೆ. ಹುಂಬತನ, ವರಟುತನ, ಪರನಿಂದನೆ, ಸ್ವಾರ್ಥ, ದ್ವೇಷ, ಅಸೂಹೆ ಅಸಹನೆಗಳು ವ್ಯಕ್ತಿಯನ್ನು ಸಣ್ಣವನನ್ನಾಗಿಸುತ್ತದೆ ಹಾಗೂ ವ್ಯಕ್ತಿತ್ವವನ್ನು ಸಂಪೂರ್ಣ ನಾಶಮಾಡಿಕೊಳ್ಳುತ್ತದೆ ಎನ್ನುವುದನ್ನು ಯಾರಾದರೂ ಅವನ ಹಿತಚಿಂತಕರು ಹೇಳಬೇಕಿದೆ. ಬುದ್ದಿಹೇಳಿದವರ ಜೊತೆ ಗುದ್ದಾಡೋಕೆ ಬರುವ ಆತ ಯಾರು ಹೇಳಿದರೂ ಕೇಳುವ ಪರಿಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಅದರ ಪ್ರತಿಫಲವನ್ನೂ ಅನುಭವಿಸಲೇಬೇಕಾಗುತ್ತದೆ. ಈಗಾಗಲೇ ಬೇಕಾದಷ್ಟು ಆಗಿದೆ. ಪಶ್ಚಾತ್ತಾಪವೊಂದೇ ಈಗ ಕುಮಾರನಿಗಿರುವ ಸಾತ್ವಿಕ ಮಾರ್ಗವಾಗಿದೆ. ದುರಹಂಕಾರವೇ ದಾರಿದೀಪವಾದರೆ ದುಷ್ಪರಿಣಾಮಗಳು ಹೆಗಲೇರುತ್ತವೆ. ಶತಾಯ ಗತಾಯ ಹಣ ಮಾಡುವುದೊಂದೇ ಬದುಕಿನ ಗುರಿಯಾದರೆ ಮಾನ ಮರ್ಯಾದೆ ಗೌರವಗಳು ಮಣ್ಣು ಪಾಲಾಗುತ್ತವೆ. ಕನಿಷ್ಟ ಗೌರವವನ್ನೂ ಕಾಪಾಡಿಕೊಳ್ಳದ ಮನುಷ್ಯ ಭೂಮಿಗೆ ಬಾರವಾಗಿ ಇದ್ದರೆಷ್ಟು ಇರದಿದ್ದರೆಷ್ಟು.

ಗಂಗೋತ್ರಿ ಕುಮಾರನ ವಿಚಾರ ಪಕಕ್ಕಿಟ್ಟು ನಮ್ಮ ಯುವ ಕವಿಗಳ ನಿರ್ಧಾರವನ್ನು ಆಲೋಚಿಸಿದಾಗ ಹೆಮ್ಮೆಯೆನಿಸುತ್ತದೆ. ಯಾಕೆಂದರೆ ತಮಗೆ ಅನ್ಯಾಯವಾಗದಿದ್ದರೂ ಅನ್ಯಾಯ ಮಾಡಿದ ಆರೋಪಕ್ಕೆ ಒಳಗಾದವನ ಜೊತೆ ನಾವು ಸೇರೋದಿಲ್ಲ, ಅಂತವರು ಮಾಡುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ವಿರೋಧಿಸಿದರಲ್ಲಾ ಅಂತವರಿಗೆಲ್ಲಾ ಒಂದು ಹ್ಯಾಟ್ಸಾಪ್ ಹೇಳಲೇಬೇಕು. ಕೆಲವು ಹಿರಿಯ ಸಾಹಿತಿ ಕವಿಗಳು ಪ್ರಶಸ್ತಿ ಪದವಿ ವೇದಿಕೆಗಳಿಗಾಗಿ ಭ್ರಷ್ಟ ರಾಜಕಾರಣಿಗಳೊಂದಿಗೆ ಕೈಜೋಡಿಸುವುದನ್ನೂ ನೋಡುತ್ತಲೇ ಇದ್ದೇವೆ. ತಮ್ಮ ಸ್ವಾರ್ಥಕ್ಕಾಗಿ ವ್ಯವಸ್ಥೆಯೊಂದಿಗೆ ರಾಜಿಯಾಗಿ ಅವಕಾಶವಾದಿಗಳಾಗಿದ್ದನ್ನು ಕಂಡಿದ್ದೇವೆ. ಇಂತಹ ಅವಕಾಶವಾದಿ ಸಾಹಿತಿಗಳ ರಾಜೀಕೋರ ಮಾರ್ಗವನ್ನು ಬಿಟ್ಟು ಭ್ರಷ್ಟರ ಜೊತೆ ವೇದಿಕೆ ಹಂಚಿಕೊಳ್ಳುವುದಿಲ್ಲ, ದಲ್ಲಾಳಿಗಳು ಕೊಟ್ಟ ವೇದಿಕೆಯನ್ನು ಏರುವುದಿಲ್ಲ ಎಂದು ದೃಢ ನಿರ್ಧಾರವನ್ನು ತೆಗೆದುಕೊಂಡ ಯುವ ಸಾಹಿತಿ ಕವಿ ಮಿತ್ರರು ಹಿರಿಯ ಅವಕಾಶವಾದಿ ಸಾಹಿತಿಗಳಿಗೆ ಮಾದರಿಯಾಗಿದ್ದಾರೆ. ಅಸಹಿಷ್ಣುತೆ ವಿರೋಧಿಸಿ ಸಾಂಕೇತಿಕ ಪ್ರತಿಭಟನೆಯ ರೂಪದಲ್ಲಿ ಪ್ರಶಸ್ತಿಯನ್ನು ಮೊದಲು ವಾಪಸ್ ಕೊಟ್ಟಿದ್ದೇ ಯುವ ಸಾಹಿತಿ ಮಿತ್ರರು. ಈಗಲೂ ಹಲವಾರು ರಾಜೀಕೋರ ಸಾಹಿತಿಗಳು ಪ್ರಶಸ್ತಿ ವಾಪಸ್ ಕೊಡುವುದನ್ನು ವಿರೋಧಿಸುತ್ತಿದ್ದಾರೆ. ವ್ಯವಸ್ಥೆಯನ್ನು ವಿರೋಧಿಸುವ ಧೈರ್ಯ ಇಲ್ಲದ ಸಮಯಸಾಧಕರು ಸಹ ಬೇಕಾದಷ್ಟಿದ್ದಾರೆ. ಇಂತವರ ನಡುವೆ ನಮ್ಮ ಯುವ ಸಾಹಿತಿಗಳು ಹಿಂದೆ ಮುಂದೆ ನೋಡದೇ ಲಾಭನಷ್ಟದ ಲೆಕ್ಕಾಚಾರಗಳನ್ನು ಹಾಕದೇ ತಮಗೆ ಕೊಟ್ಟ ಪ್ರಶಸ್ತಿಯನ್ನು ವಾಪಸ್ ಕೊಟ್ಟರಲ್ಲಾ ಅಂತವರ ಸಾಮಾಜಿಕ ಕಾಳಜಿ ಕಳಕಳಿ ಹಾಗೂ ಹೊಣೆಗಾರಿಕೆ ಆದರ್ಶನೀಯವಾದಂತಹುದು. ಏನೇ ಆಗಲಿ ಭ್ರಷ್ಟಾಚಾರದ ಆರೋಪಿ ಆಯೋಜಿಸಿದ ಯುವಕವಿ ಸಮ್ಮೇಳನವನ್ನು ಸಾಮೂಹಿಕವಾಗಿ ಬಹಿಷ್ಕರಿಸಿ ಭ್ರಷ್ಟಾಚಾರದ ವಿರುದ್ಧ ತಮ್ಮ ಪ್ರತಿಭಟನೆಯನ್ನು ತೋರಿದ ಎಲ್ಲಾ ಕವಿ ಸಾಹಿತಿ ಮಿತ್ರರಿಗೆ ಅಭಿನಂದನೆಗಳು

                                   -ಶಶಿಕಾಂತ ಯಡಹಳ್ಳಿ





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ