ರಂಗಭೂಮಿ(ರಿ) ಉಡುಪಿ ಎನ್ನುವ ಉಡುಪಿಯ ಪುರಾತನ ರಂಗಸಂಸ್ಥೆಯು ಪ್ರಸಕ್ತ ವರ್ಷ ಸುವರ್ಣ ವರ್ಷದ ಸಂಭ್ರಮಾಚರಣೆ ಆಚರಿಸುತ್ತಿದೆ. ಪ್ರತಿ ವರ್ಷ ಸಾಹಿತ್ಯಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ರಂಗದಲ್ಲಿ ಸೇವೆ ಸಲ್ಲಿಸಿದ ಓರ್ವ ಗಣ್ಯರನ್ನು ಆಯ್ಕೆ ಮಾಡಿ ಬಿರುದಾವಳಿಯನ್ನು ಕೊಟ್ಟು ಸನ್ಮಾನಿಸುವುದನ್ನು ದಿ. ಆನಂದ ಗಾಣಿಗರು 50 ವರ್ಷದ ಹಿಂದೆ ಆರಂಭಿಸಿದರು. ಅವರ ನಂತರವೂ ಈ ಬಿರುದಾವಳಿ ಸಂಸ್ಕೃತಿ ಹಾಗೆಯೇ ಮುಂದುವರೆದುಕೊಂಡು ಬಂದಿತು. ಈ ಸಲದ ಬಿರುದುಬಾವಲಿಗೆ ಆಯ್ಕೆ ಮಾಡಿದ್ದು ನಮ್ಮ ಶ್ರೀಮಾನ್ ಕಪ್ಪಣ್ಣನವರು. ಕನ್ನಡ ರಂಗಭೂಮಿಗೆ ಸಲ್ಲಿಸಿದ ಅನುಪಮ ಸೇವೆಗಾಗಿ ಕಪ್ಪಣ್ಣನವರಿಗೆ "ರಂಗ ಕಲಾ ರತ್ನ" ಬಿರುದನ್ನು ಜನವರಿ 2 ರಂದು ಉಡುಪಿಯಲ್ಲಿ ಕೊಟ್ಟು ಸನ್ಮಾನಿಸಲಾಗುವುದೆಂದು ಘೋಷಿಸಲಾಗಿದೆ. ಕಲಾರತ್ನ ಕಪ್ಪಣ್ಣನವರಿಗೆ ಮೊದಲು ಅಭಿನಂದನೆಗಳನ್ನು ಹೇಳಲೇಬೇಕಿದೆ.
ಕಪ್ಪಣ್ಣನವರಿಗೆ ಕೊಟ್ಟ ಈ ಬಿರುದೆಂಬುದು ಕೊಟ್ಟವರಿಗೂ ತೆಗೆದುಕೊಳ್ಳುವವರಿಗೂ ಸಂಬಂಧಿಸಿದ ವಿಷಯ. ಕಪ್ಪಣ್ಣನವರನ್ನು ಯಾಕೆ ಆಯ್ಕೆ ಮಾಡಿದರು? ಅವರು ಈ ಘೋಷಿತ ಬಿರುದು ಬಾವಲಿಗೆ ಅರ್ಹರಾ ಅಥವಾ ಇಲ್ಲವಾ? ಕಪ್ಪಣ್ಣನವರು ಅದೆಷ್ಟು ಜನರಿಗೆ ದಾರಿತೋರಿದರು ಹಾಗೂ ಎಷ್ಟು ಜನರಿಗೆ ದಾರಿ ತಪ್ಪಿಸಿದರು? ಎಷ್ಟು ಜನರಿಗೆ ಬಳಕೆಯಾದರು ಹಾಗೂ ಎಷ್ಟು ಜನರನ್ನು ಬಳಸಿಕೊಂಡರು? ಎಂಬುದನ್ನೆಲ್ಲಾ ಈ ಬಿರುದು ಪ್ರಸಂಗವನ್ನಿಟ್ಟುಕೊಂಡು ಪ್ರಶ್ನಿಸುವುದು ಸೂಕ್ತವಲ್ಲ. ಇಷ್ಟಕ್ಕೂ ಇದು ಸರಕಾರದ ಪ್ರಶಸ್ತಿಯಲ್ಲವಾದ್ದರಿಂದ ಆ ಕುರಿತು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲಾ. ಯಾಕೆಂದರೆ ಬಿರುದು ಕೊಟ್ಟಿರುವುದು ಖಾಸಗಿ ರಂಗಸಂಸ್ಥೆ. ಕಪ್ಪಣ್ಣನವರ ಅಧಿಕಾರಾವಧಿಯಲ್ಲಿ ಹಾಗೂ ತದನಂತರ ಫಲಾನುಭವಿಯಾದವರು ಋಣಸಂದಾಯ ಮಾಡುವ ಪರ್ಯಾಯ ಮಾರ್ಗಗಳಲ್ಲಿ ಇದೂ ಒಂದು ಎಂದುಕೊಂಡರೂ ಇದನ್ನು ಈಗ ಕೇಳುವ ಹಾಗಿಲ್ಲ. ಇಷ್ಟಕ್ಕೂ ಕಪ್ಪಣ್ಣ ಯಾವುದೇ ಪ್ರಶಸ್ತಿ, ಸನ್ಮಾನ ಹಾಗೂ ಬಿರುದುಗಳನ್ನು ಪಡೆಯಲೇಬಾರದು ಎಂದೇನೂ ಇಲ್ಲಾ...
ಆದರೆ ತಕರಾರಿರುವುದು ಕಪ್ಪಣ್ಣನವರಿಗೆ "ರಂಗ ಕಲಾ ರತ್ನ" ಎಂದು ಕೊಟ್ಟ ಬಿರುದಿನ ಹೆಸರಿನಲ್ಲಿ. ಯಾಕೆಂದರೆ ಯಾವತ್ತೂ ಕಪ್ಪಣ್ಣ ಕಲಾವಿದರಾಗಿ ರಂಗಭೂಮಿಯಲ್ಲಿ ತೊಡಗಿಸಿಕೊಂಡವರಲ್ಲ. ತಾನೊಬ್ಬ ನಟನಾಗಲು ಪ್ರಯತ್ನಿಸಿ ವಿಫಲನಾದೆ ಎಂದು ಅದೆಷ್ಟೋ ಸಮಾರಂಭಗಳಲ್ಲಿ ಕಪ್ಪಣ್ಣ ಸ್ವತಃ ಹೇಳಿಕೊಂಡಿದ್ದಾರೆ. ಕನ್ನಡ ರಂಗಭೂಮಿಯಲ್ಲಿ ಸಂಘಟಕನಾಗಿ ಕಪ್ಪಣ್ಣ ಮೊದಲಿನಿಂದಲೂ ತೊಡಗಿಸಿಕೊಂಡಿದ್ದನ್ನು ಅಲ್ಲಗಳೆಯಲಾಗದು. ರಂಗದಿಗ್ಗಜರಾದ ಬಿ.ವಿ.ಕಾರಂತ್ ದಂಪತಿಗಳಿಗೆ ಒತ್ತಾಸೆಯಾಗಿ ನಿಂತು ನಾಟಕಗಳನ್ನು ಕಟ್ಟುವಲ್ಲಿ ಶ್ರಮವಹಿಸಿದ್ದನ್ನು ಮರೆಯಲಾಗದು. ನಟರಂಗ ತಂಡ ಕಟ್ಟುವಲ್ಲಿ ಹಾಗೂ ಒಡೆಯುವಲ್ಲಿ ಕಪ್ಪಣ್ಣನವರ ಪಾತ್ರವನ್ನು ತೆಗೆದು ಹಾಕಲಾಗದು. ನಾಟಕ ಅಕಾಡೆಮಿ ಅಧ್ಯಕ್ಷರಾಗಿದ್ದಾಗ ಅವರು ಹಾಕಿದ ಯೋಜನೆಗಳ ಬಗ್ಗೆ ಚಕಾರ ಎತ್ತುವ ಹಾಗಿಲ್ಲ. (ಅನುಷ್ಠಾನದ ಬಗ್ಗೆ ಆಕ್ಷೇಪಗಳಿವೆ). ಆಗಾಗ ಕೆಲವು ನಾಟಕಗಳಿಗೆ ಬೆಳಕಿನ ಸಂಯೋಜನೆಯನ್ನು ಮಾಡಿದ್ದನ್ನೂ ನಿರ್ಲಕ್ಷಿಸುವ ಹಾಗಿಲ್ಲ. ಒಟ್ಟಾರೆಯಾಗಿ ಒಬ್ಬ ರಂಗಸಂಘಟಕನಾಗಿ ರಂಗಚಟುವಟಿಕೆಗಳಿಗೆ ಏನೆಲ್ಲಾ ಮಾಡಬೇಕೋ ಅದನ್ನೆಲ್ಲಾ ಕಪ್ಪಣ್ಣ ಮಾಡಿದ್ದಾರೆಂಬುದು ನಿರ್ವಿವಾದ. ಅವರ ಹಲವಾರು ನಡೆ ನುಡಿಗಳು ವಾದ ವಿವಾದಗಳನ್ನು ಸೃಷ್ಟಿಸಿವೆ ಎನ್ನುವುದೂ ಸುಳ್ಳಲ್ಲ.
ಆದರೆ.... ರಂಗವ್ಯವಸ್ಥಾಪಕನೊಬ್ಬನನ್ನು ಕಲಾರತ್ನ ಎಂದು ಒಪ್ಪಿಕೊಳ್ಳುವುದು ಹೇಗೆ? ’ರಂಗ ಸಂಘಟಕ ರತ್ನ’ ಎಂತಲೋ ಇಲ್ಲವೇ ’ರಂಗ ನೇಪತ್ಯ ವಜ್ರ’ ಅಂತಾನೋ ಕಪ್ಪಣ್ಣನವರ ವೃತ್ತಿಪರತೆಗೆ ಸಂಬಂಧಿಸಿದಂತೆ ಹೆಸರಿಟ್ಟು ಬಿರುದು ದಯಪಾಲಿಸಿದ್ದರೆ ಸೂಕ್ತವಾಗುತ್ತಿತ್ತು. ಈ ಪ್ರಶ್ನೆಯನ್ನು ರಂಗಭೂಮಿ ಉಡುಪಿಯ ರೂವಾರಿ ಪ್ರದೀಪ್ ಚಂದ್ರರವರ ಮುಂದಿಟ್ಟಾಗ ’ನೇಪಥ್ಯ ಕಲಾವಿದರೂ ಕಲಾವಿದರೇ ಅಲ್ಲವೇ?’ ಎಂದು ಕೇಳಿದರು. ಈ ಸಂಸ್ಥೆಯ ಇನ್ನೊಬ್ಬ ಪದಾದಿಕಾರಿ ರವಿರಾಜ್‌ರವರು ’ಕಲಾವಿದ’ ಅಂದರೆ ಯಾರು? ಎಂದು ಮರುಪ್ರಶ್ನಿಸಿದರು. ಕಪ್ಪಣ್ಣನವರ ಈ ಹೊಚ್ಚ ಹೊಸ ಬಿರುದನ್ನು ಸಮರ್ಥಿಸಿಕೊಂಡ ರಾಜೇಂದ್ರ ಕಾರಂತರವರು ’ಕಪ್ಪಣ್ಣನವರು ನಿರ್ದೇಶನ, ಅಭಿನಯ, ನೇಪಥ್ಯ, ಸಂಘಟನೆ, ಆಡಳಿತ.... ಎಲ್ಲಾ ವಿಭಾಗಗಳಲ್ಲೂ ಕೆಲಸ ಮಾಡಿದ್ದಾರೆ... ಯಾವ ಹೆಸರಲ್ಲಿ ಕೊಟ್ಟರೇನು ಎಲ್ಲವೂ ಕಲೆಗೆ ಸಂಬಂಧಿಸಿದ್ದಲ್ಲವೇ....?’ ಎಂದು ಪ್ರತಿಕ್ರಿಯಿಸಿದರು. ಈ ಪ್ರಶ್ನೆಗಳೇ ಈ ಲೇಖನ ಬರೆಯುವಂತೆ ಪ್ರೇರೇಪಿಸಿದವು. ಕಲಾವಿದರು ಎನ್ನುವುದರ ಅರ್ಥವನ್ನು ಹೇಗೆ ವ್ಯಾಖ್ಯಾನಿಸಬೇಕು ಎನ್ನುವುದರ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಯಿತು.
ಕಲೆ ಎಂದರೇನು? ಸೃಜನಶೀಲವಾದ ಸೃಷ್ಟಿಯನ್ನು ಕಲೆ ಎನ್ನುವುದನ್ನು ಎಲ್ಲರೂ ಸಾಮಾನ್ಯವಾಗಿ ಒಪ್ಪಿಕೊಳ್ಳುತ್ತಾರೆ. ಇನ್ನೂ ಸರಿಯಾಗಿ ಹೇಳಬೇಕೆಂದರೆ ಕಲೆ ಎನ್ನುವುದು ’ಭಾವನೆಗಳು ಮತ್ತು ಅರಿವಿನ ಮೇಲೆ ಪರಿಣಾಮವಾಗುವ ಹಾಗೂ ಬುದ್ಧಿ ಪೂರ್ವಕವಾಗಿ ಜೋಡಿಸಲಾದ ಅಂಶಗಳ ರೂಪ’ ಎಂದು ಕಲೆಯ ತತ್ವಜ್ಞಾನದ ಶಾಖೆಯಾದ ಸೌಂದರ್ಯ ಮೀಮಾಂಸೆಯಲ್ಲಿ ವಿವರಿಸಲಾಗಿದೆ. ಭಾವನೆ ಯೋಚನೆ ಹಾಗೂ ಗ್ರಹಿಕೆಗಳನ್ನು ಅಭಿವ್ಯಕ್ತಿಸುವ ಕ್ರಿಯೆಯನ್ನು ಕಲೆ ಎನ್ನಲಾಗುತ್ತದೆ. ಈ ರೀತಿಯ ಕಲೆಯಲ್ಲಿ ಯಾರು ಪಳಗಿ ಸಾಧಿಸುತ್ತಾರೋ ಅವರನ್ನು ಕಲಾವಿದ ಎನ್ನಲಾಗುತ್ತದೆ.
ರಂಗಭೂಮಿ ಪರಿಭಾಷೆಯಲ್ಲಿ ಕಲಾವಿದ ಎಂದ ಕೂಡಲೇ ಮೊದಲು ಎಲ್ಲರ ಗಮನ ಹೋಗುವುದು ನಟನೆಯನ್ನು ಮಾಡುವವರ ಮೇಲೆ. ಗುಬ್ಬಿ ವೀರಣ್ಣ ಒಬ್ಬ ಅದ್ಭುತ ಕಲಾವಿದರಾಗಿದ್ದರು ಎನ್ನುತ್ತೇವೆ.... ರಂಗಭೂಮಿಯಲ್ಲಿ ಅಭಿನಯ ಕಲೆಗೆ ಪೂರಕವಾಗಿ ಇನ್ನೊಂದಿಷ್ಟು ಕಲೆಗಳು ಬರುಬರುತ್ತಾ ಸೇರ್ಪಡೆಯಾದವು. ಅವು ಪ್ರಸಾಧನ ಕಲೆ, ಚಿತ್ರಕಲೆ, ನೃತ್ಯಕಲೆ ಮುಂತಾದವುಗಳು. ರಂಗಮಂದಿರಕ್ಕೆ ಹೋಗಿ ಕಲಾವಿದ ಬರುತ್ತಿದ್ದಾನೆ ಎಂದರೆ ಜನ ನೃತ್ಯಕಲಾವಿದನಾ, ಪ್ರಸಾದನ ಕಲಾವಿದನಾ ಎಂದು ಕೇಳುವುದಿಲ್ಲ. ಹಾಗೆ ಬರುತ್ತಿರುವವನು ನಟನೇ ಎಂದು ಯಾರೂ ಹೇಳದಿದ್ದರೂ ತಿಳಿದುಕೊಳ್ಳುತ್ತಾರೆ. ಯಾರು ಏನೇ ಹೇಳಲಿ ಮೂಲಭೂತವಾಗಿ ರಂಗಭೂಮಿ ಎನ್ನುವುದು ಕಲಾವಿದರ ಮಾಧ್ಯಮ. ಯಾವ ಕಲಾವಿದ ಎಂದು ಬೇರೆ ಹೇಳಬೇಕಿಲ್ಲ. ಅದು ಪಕ್ಕಾ ನಟರ ಮಾಧ್ಯಮವಾಗಿದೆ. ರಂಗಸಜ್ಜಿಕೆ, ಪ್ರಸಾಧನ, ನೃತ್ಯ, ಸಂಗೀತ, ಬೆಳಕಿನ ವಿನ್ಯಾಸ, ವಸ್ತ್ರವಿನ್ಯಾಸ....ಮುಂತಾದ ನೇಪತ್ಯ ತಂತ್ರಗಳನ್ನು ಪೂರಕವಾಗಿ ಬಳಸಲಾಗುತ್ತದೆ. ಇವು ಯಾವುದೂ ಇಲ್ಲದೇ ನಾಟಕವನ್ನು ಕೇವಲ ನಟರ ಆಂಗಿಕ, ವಾಚಿಕ ಹಾಗೂ ಸಾತ್ವಿಕಾಭಿನಯಗಳ ಮೂಲಕ ಕಟ್ಟಿಕೊಡಬಹುದಾಗಿದೆ. ಇದನ್ನು ಬೀದಿ ನಾಟಕ ಪ್ರಕಾರಗಳಲ್ಲಿ ಈಗಲೂ ನೋಡಬಹುದಾಗಿದೆ. ನಟರ ಅಭಿನಯವನ್ನು ಹೆಚ್ಚು ಶ್ರೀಮಂತಗೊಳಿಸಲು, ನಾಟಕದಲ್ಲಿ ಮೂಡ್ ಹುಟ್ಟಿಸಲು ಅಭಿನಯಕ್ಕೆ ಪೂರಕವಾಗಿ ನೇಪತ್ಯವನ್ನು ಬಳಸಲಾಗುತ್ತದೆ. ಅಸಲಿಗೆ ನೇಪತ್ಯ ಅನ್ನುವುದು ಕಲೆ ಎನ್ನುವುದಕ್ಕಿಂತಲೂ ಅದೊಂದು ತಾಂತ್ರಿಕತೆಯಾಗಿದೆ. ಅದಕ್ಕೆ ನೇಪತ್ಯದಲ್ಲಿರುವವರನ್ನು ನಾವು ತಜ್ಞರು ಎಂದು ಕರೆಯುವುದು. ಬರುಬರುತ್ತಾ ನೇಪತ್ಯವೂ ಒಂದು ಕಲೆ ಎನ್ನುವುದು ರೂಢಿಗೆ ಬಂದಿತು.
ಸೃಜನಾತ್ಮಕ ಕಲೆಯಲ್ಲಿ ತೊಡಗಿಸಿಕೊಂಡವರನ್ನು ಕಲಾವಿದರು ಎನ್ನಬಹುದಾಗಿದೆ. ಆದರೆ ಅಂತಹ ಕಲೆಯನ್ನು ಸಂಘಟಿಸುವವರನ್ನು ಹಾಗೂ ನಾಟಕಗಳನ್ನು ಆಯೋಜಿಸುವವರನ್ನು ಕಲಾವಿದರು ಎನ್ನುವುದು ನಿಜಕ್ಕೂ ಹಾಸ್ಯಾಸ್ಪದ. ಹತ್ತಾರು ನಟರನ್ನು ಸೇರಿಸಿ, ಒಬ್ಬ ನಿರ್ದೇಶಕರನ್ನು ಕರೆಯಿಸಿ, ಪೂರಕವಾಗಿ ನೇಪತ್ಯ ಕಲಾವಿದರನ್ನು ಆಹ್ವಾನಿಸಿ ನಾಟಕ ಮಾಡಿಸಲು ತೊಡಗುವವರನ್ನು ಸಂಘಟಕರು, ಸಂಯೋಜಕರು ಎನ್ನುತ್ತೇವೆ. ವೃತ್ತಿ ನಾಟಕ ಕಂಪನಿಗಳಲ್ಲಿ ಇವರನ್ನು ಮ್ಯಾನೇಜರ್ ಎನ್ನುತ್ತಿದ್ದರು. ಹವ್ಯಾಸಿ ರಂಗಭೂಮಿಯಲ್ಲಿ ಕಲಾವಿದರನ್ನು ಬಳಸಿಕೊಂಡು, ನಾಟಕೋತ್ಸವಗಳನ್ನು ಆಯೋಜಿಸಿ ಸ್ವಂತಕ್ಕೆ ಹಣವನ್ನು ಮಾಡಿಕೊಳ್ಳುವವರನ್ನು ಸಾಂಸ್ಕೃತಿಕ ಗುತ್ತಿಗೆದಾರರು ಎಂದು ಕರೆಯಲಾಗುತ್ತದೆ. ಮ್ಯಾನೇಜರ್‌ಗಳು ಮತ್ತು ಗುತ್ತಿಗೆದಾರರನ್ನೂ ಸಹ ಕಲಾವಿದರು ಎಂದು ಪರಿಗಣಿಸಲು ಸಾಧ್ಯವೇ? ಯಾವ ಕಲಾ ಪ್ರಕಾರವನ್ನು ಅವರು ಅಭಿವ್ಯಕ್ತಿಗೊಳಿಸಿದ್ದಾರೆ? ಯಾವ ಪ್ರದರ್ಶನ ಕಲೆಯಲ್ಲಿ ಪಳಗಿದ್ದಾರೆ? ಇಂತಹ ಯಾವುದೇ ಪ್ರಶ್ನೆಗಳನ್ನು ಕೇಳಿಕೊಳ್ಳದೇ ರಂಗಭೂಮಿಯಲ್ಲಿ ಏನೇ ಮಾಡಿದರೂ ಅವರನ್ನು ಕಲಾವಿದರು ಎಂದು ಕರೆಯುವುದು ಸೂಕ್ತವಂತೂ ಅಲ್ಲ. ಯಾಕೆಂದರೆ ಈಗ ನಮ್ಮ ಕನ್ನಡ ರಂಗಭೂಮಿಯಲ್ಲಿ ಕಲಾವಿದರು ಹಾಗೂ ತಂತ್ರಜ್ಞರನ್ನು ಬಳಸಿಕೊಂಡು, ಸಂಸ್ಕೃತಿ ಇಲಾಖೆಯ ಸಕಲ ಸವಲತ್ತುಗಳನ್ನೂ ಪಡೆದುಕೊಂಡು ರಂಗಚಟುವಟಿಕೆಗಳನ್ನು ಆಯೋಜಿಸಿ ಹಣ ಮಾಡುವಂತಹ ದಂದೆ ಬಹಳ ಜೋರಾಗಿಯೇ ಇದೆ. ಇತ್ತೀಚೆಗೆ ಸುಮಾರು ಐವತ್ತಕ್ಕೂ ಹೆಚ್ಚು ಇಂತಹ ದಲ್ಲಾಳಿ ಸಂಸ್ಥೆಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬ್ಲಾಕ್ಲಿಸ್ಟಲ್ಲಿಟ್ಟು ವಿಚಾರಣೆ ಮಾಡುತ್ತಿದೆ. ಒಂದೆರಡು ಸಂಸ್ಥೆಗಳ ಮೇಲೆ ಕ್ರಿಮಿನಲ್ ಕೇಸ್ ಕೂಡಾ ಹೂಡಲಾಗಿದೆ. ಹಾಗೆ ಕ್ರಿಮಿನಲ್ ಆರೋಪ ಎದುರಿಸಿ 56 ಲಕ್ಷ ವಂಚಿಸಿದ ಆರೋಪಿ ಕುಮಾರ್ ಎನ್ನುವವನೂ ಕೂಡಾ ತಾನೂ ಕಲಾವಿದ ಎಂದೇ ಹೇಳಿಕೊಂಡು ನಾಟಕ ಅಕಾಡೆಮಿ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಿದೆ. ಹಾಗೂ ಈ ಪ್ರಶಸ್ತಿಯನ್ನು ರಂಗದಲ್ಲಾಳಿ ಕುಮಾರನಿಗೆ ಕೊಟ್ಟಿದ್ದೂ ಸಹ ಇದೇ ಕಪ್ಪಣ್ಣರವರು ನಾಟಕ ಅಕಾಡೆಮಿ ಅಧ್ಯಕ್ಷರಾಗಿದ್ದಾಗ ಎನ್ನುವುದನ್ನೂ ಗಮನಿಸಬೇಕಾಗಿದೆ.
ಈಗ ಕಪ್ಪಣ್ಣನವರ ವಿಷಯಕ್ಕೆ ಬಂದರೆ... ಕಪ್ಪಣ್ಣ ಮೂಲಭೂತವಾಗಿ ಸರಕಾರಿ ಅಧಿಕಾರಿಯಾಗಿದ್ದರೂ ರಂಗಾಸಕ್ತಿಯಿಂದಾಗಿ ನಾಟಕ ನಿರ್ಮಿತಿಯ ಸಂಘಟನಾ ಕಾರ್ಯದಲ್ಲಿ ಮೊದಲಿನಿಂದಲೂ ತೊಡಗಿಸಿಕೊಂಡಿದ್ದಾರೆ. ಬೆಂಗಳೂರು ಮೂಲದ ಎಲ್ಲಾ ರಂಗದಿಗ್ಗಜರೊಂದಿಗೂ ಕೆಲಸ ಮಾಡಿದ್ದಾರೆ. ಕೊನೆಗೊಮ್ಮೆ ನಾಟಕ ಅಕಾಡೆಮಿಗೆ ಅಧ್ಯಕ್ಷಾಗಲೇ ಬೇಕೆಂಬ ಹಂಬಲದಿಂದ ಇರುವ ನೌಕರಿಗೆ ರಾಜೀನಾಮೆಕೊಟ್ಟು ನಾಟಕ ಅಕಾಡೆಮಿ ಅಧ್ಯಕ್ಷರಾಗಿ ಹಿಂದಿನ ಯಾವ ಅಧ್ಯಕ್ಷರೂ ಮಾಡದಷ್ಟು ವೈವಿದ್ಯಮಯ ರೀತಿಯಲ್ಲಿ ಯೋಜನೆಗಳನ್ನು ರೂಪಿಸಿದ್ದಾರೆ. ಲೈಟಿಂಗ್ ಮಾಡಲು ಯಾರೂ ಇಲ್ಲದಿದ್ದಾಗ ಕೆಲವೊಮ್ಮೆ ಲೈಟಿಂಗ್ ಮಾಡಿದ್ದಾರೆ. ನಟರಂಗ ತಂಡವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಪರೂಪಕ್ಕೊಮ್ಮೆ ನಟಿಸುವ ಪ್ರಯತ್ನವನ್ನೂ ಮಾಡಿದ್ದಾರೆ. ಇವು ಯಾವುದನ್ನೂ ನಿರಾಕರಿಸುವ ಹಾಗಿಲ್ಲ. ತಮ್ಮ ರಂಗಬದುಕಿನಲ್ಲಿ ರಂಗಭೂಮಿಯಲ್ಲಿ ಬಹುತೇಕ ಸಂಘಟಕನಾಗಿ, ಸಂಯೋಜಕನಾಗಿ, ವ್ಯವಸ್ಥಾಪಕನಾಗಿ ತಮ್ಮ ಇತಿಮಿತಿಗಳಲ್ಲಿ ಕೆಲಸ ಮಾಡಿದ್ದಾರೆ. ಕನ್ನಡ ರಂಗಭೂಮಿಯ ರಂಗಸಂಘಟಕರಲ್ಲಿ ಕಪ್ಪಣ್ಣ ಕೂಡಾ ಪ್ರಮುಖರು ಹಾಗೂ ಪ್ರಭಾವಶಾಲಿಗಳು ಎನ್ನುವುದನ್ನು ಮರೆಯುವಂತಿಲ್ಲ. ಅವರ ಕೆಲಸದ ವೈಖರಿ ಹಾಗೂ ರಂಗಬದ್ಧತೆ ಕುರಿತು ಏನೇ ಭಿನ್ನಾಭಿಪ್ರಾಯವಿದ್ದರೂ ಅವರು ರಂಗಸಂಘಟನೆಗೆ ಕೊಟ್ಟ ಕೊಡುಗೆಯನ್ನೂ ತೆಗೆದು ಹಾಕುವಂತಿಲ್ಲ. ಆದರೆ.... ಅದ್ಯಾಕೋ ಸಾಂಸ್ಕೃತಿಕ ಸಂಘಟಕ ಕಪ್ಪಣ್ಣನವರನ್ನು ರಂಗಕಲಾವಿದ ಕಪ್ಪಣ್ಣ ಎಂದು ಒಪ್ಪಿಕೊಳ್ಳುವುದಂತೂ ಸಾಧ್ಯವೇ ಇಲ್ಲ.
ಅಪರೂಪಕ್ಕೆ ಯಾವುದೋ ನಾಟಕದಲ್ಲಿ ಅನಿವಾರ್ಯಕ್ಕೆ ಅದು ಹೇಗೋ ನಟಿಸಿದವರೆಲ್ಲಾ ಕಲಾವಿದರಾಗೋದಿಲ್ಲ. ಬೆಳಕಿನ ವಿನ್ಯಾಸ ಮಾಡುವುದು ತಾಂತ್ರಿಕ ಕೆಲಸವೇ ಹೊರತು ಅದನ್ನು ಕಲೆ ಎಂದು ಕರೆಯಲು ಆಗುವುದಿಲ್ಲ. ರಂಗಭೂಮಿಯ ಅವಿಭಾಜ್ಯ ಅಂಗವಾದ ರಂಗ ಸಂಘಟಕರುಗಳು ವ್ಯವಸ್ಥಾಪಕರೇ ಹೊರತು ಕಲಾಭಿವ್ಯಕ್ತಿಗೊಳಿಸುವವರಲ್ಲ. ಇಂತವರನ್ನು ರಂಗಕರ್ಮಿಗಳೆಂದು ಗುರುತಿಸಬಹುದೇ ಹೊರತು ರಂಗಕಲಾವಿದರ ಕೆಟಗರಿಯಲ್ಲಿ ಇವರುಗಳು ಬರುವುದೇ ಇಲ್ಲ. ಇಂತಹುದರಲ್ಲಿ ಕಪ್ಪಣ್ಣನವರನ್ನೂ ಸಹ ಕಲಾವಿದ ಎಂದುಕೊಂಡು "ರಂಗ ಕಲಾ ರತ್ನ" ಬಿರುದನ್ನು ಕೊಡುತ್ತಿರುವ ರಂಗಭೂಮಿ ಉಡುಪಿ ರಂಗಸಂಸ್ಥೆಯವರಿಗೆ ಕಲೆ ಕಲಾವಿದ ಕಲಾಭಿವ್ಯಕ್ತಿಯ ಬಗ್ಗೆ ಸಂಪೂರ್ಣ ಅರಿವಿಲ್ಲ, ಅರಿವಿದ್ದರೂ ಈ ರೀತಿಯ ಹೆಸರಿನ ಬಿರುದು ಕೊಟ್ಟಿರುವುದು ಯಾವುದೋ ಋಣಸಂದಾಯದ ಭಾಗವಾಗಿ ತೋರುತ್ತದೆಯೇ ಹೊರತು ರಂಗಬದ್ಧತೆಯನ್ನಲ್ಲ. ರಂಗಭೂಮಿ ಉಡುಪಿ ಸಂಸ್ಥೆಯವರು ಕಪ್ಪಣ್ಣನವರ ಕಿರೀಟಕ್ಕೆ ಒಂದು ಬಿರುದನ್ನು ತೊಡಿಸಿ ರತ್ನವನ್ನಾಗಿಸುವುದಿದ್ದರೆ ಅದಕ್ಕೆ ಭಿನ್ನಮತವೇನಿಲ್ಲ. ನೇಪತ್ಯದವರನ್ನೂ ಕಲಾವಿದರು ಎಂದು ಗುರುತಿಸುವುದೇ ಆದರೆ ’ರಂಗ ನೇಪತ್ಯ ಕಲಾ ರತ್ನ" ಎಂತಲೋ ಇಲ್ಲವೇ "ರಂಗ ಸಂಘಟಕ ರತ್ನ" ಎಂತಲೋ ಹೆಸರಿಟ್ಟು ಬಿರುದು ಕೊಟ್ಟು ಕಪ್ಪಣ್ಣನವರನ್ನೂ "ಬಿರುದೆಂತರ ಗಂಡ" ಮಾಡುವುದಿದ್ದರೆ ಯಾರ ತಕರಾರೂ ಇರುತ್ತಿರಲಿಲ್ಲ. ಹೀಗೆ ಕಲಾವಿದರಲ್ಲದವರಿಗೆ ಕಲಾರತ್ನ ಎಂದು ಕರೆಯುವುದು, ಇಲ್ಲವೇ ಸಮರ್ಥ ರಂಗಸಂಘಟಕನನ್ನು ತಪ್ಪಾಗಿ ಗ್ರಹಿಸಿ ಆತ ಕೊಟ್ಟ ಕೊಡುಗೆಯನ್ನು ಬದಿಗಿಟ್ಟು ಅವರು ಮಾಡದ ಕೆಲಸಕ್ಕೆ ಬಿರುದನ್ನು ಕೊಡಮಾಡುವುದು ಇತ್ತ ಕಲಾವಿದರಿಗೂ ಹಾಗೂ ಅತ್ತ ರಂಗಸಂಘಟಕನಿಗೂ ಮಾಡುವ ಅವಮಾನವಾಗಿದೆ.
ಯಾರು ಏನೇ ಹೇಳಲಿ... ಕಪ್ಪಣ್ಣನವರು ನೇಪತ್ಯದಲ್ಲಿ ಕೆಲಸ ಮಾಡಿದ್ದಕ್ಕಿಂತಲೂ ಈವೆಂಟ್ ಮ್ಯಾನೇಜರಾಗಿ ಕೆಲಸ ಮಾಡಿದ್ದೇ ಹೆಚ್ಚು. ಅಪರೂಪಕ್ಕೊಮ್ಮೆ ಬೆಳಕಿನ ನಿರ್ವಹಣೆ ಮಾಡಿರಬಹುದು, ಅನಿವಾರ್ಯಕ್ಕೊಮ್ಮೆ ತಮ್ಮದೇ ತಂಡದಲ್ಲಿ ನಟಿಸಿರಬಹುದು. ಆದರೆ ರಂಗರಾಜಕಾರಣದ ಎಲ್ಲಾ ಪಟ್ಟುಗಳನ್ನೂ ಅರಿಗಿಸಿಕೊಂಡಿರುವ ಕಪ್ಪಣ್ಣ ಸರಕಾರಿ ಹಾಗೂ ಖಾಸಗಿ ಸಮಾರಂಭಗಳನ್ನು, ಜಾನಪದ ಜಾತ್ರೆಗಳನ್ನು, ರಾಜಕೀಯ ಪ್ರೇರಿತ ಕಾರ್ಯಕ್ರಮಗಳನ್ನು.... ಎಲ್ಲಾ ನಮೂನಿ ಅಕಾಡೆಮಿ ಹಾಗೂ ಪ್ರಾಧಿಕಾರಗಳ ಸಮಾರಂಭಗಳನ್ನು ಆಯೋಜಿಸಲು ಗುತ್ತಿಗೆದಾರನಾಗಿಯೋ ವ್ಯವಸ್ಥಾಪಕನಾಗಿಯೋ ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ. ಅಧೀಕೃತವಾಗಿ ಹೇಳಿಕೊಳ್ಳದಿದ್ದರೂ ಸಾಂಸ್ಕೃತಿಕ ಕ್ಷೇತ್ರದ ಈವೆಂಟ್ ಮ್ಯಾನೇಜರ್ ಆಗಿ ಕಪ್ಪಣ್ಣ ತಮ್ಮ ವ್ಯಾಪಾರಿ ಪ್ರವೃತ್ತಿಯನ್ನು ಮುನ್ನಡೆಸಿಕೊಂಡು ಬಂದಿರುವುದು ರಹಸ್ಯವಾಗೇನೂ ಇಲ್ಲ. ಕಪ್ಪಣ್ಣನವರ ಸಮಕಾಲೀನರಲ್ಲಿ ಹೋಗಿ 'ಕಪ್ಪಣ್ಣ ಈಗ ಕಲಾರತ್ನ' ಎಂದು ಹೇಳಿದರೆ ಅವರೆಲ್ಲಾ ಬಿದ್ದು ಬಿದ್ದು ನಗುತ್ತಾರೆ. ಕಾರ್ಯಕ್ರಮಗಳ ವ್ಯವಸ್ಥಾಪಕರುಗಳಿಗೂ, ಸಮಾರಂಭಗಳ ಗುತ್ತಿಗೆದಾರರಿಗೂ 'ರಂಗ ಕಲಾ ರತ್ನ' ಎಂದು ಬಿರುದನ್ನಿತ್ತು ತಲೆಮೇಲೆ ಹೊತ್ತು ಮೆರೆಸುವುದು ನಿಜವಾದ ಕಲಾವಿದರಿಗೆ ಮಾಡಿದ ಅವಮಾನವಾಗಿದೆ. ಸಾಂಸ್ಕೃತಿಕ ದಲ್ಲಾಳಿಗಳಿಗೆ ಈ ರೀತಿಯ ಉತ್ಪ್ರೇಕ್ಷಿತ ಬಿರುದು ಕೊಟ್ಟು ಸನ್ಮಾನಿಸುತ್ತಿರುವ ರಂಗಕರ್ಮಿಗಳ ಬದ್ಧತೆಯನ್ನೇ ಗುಮಾನಿಯಿಂದ ನೋಡುವಂತಾಗಿದೆ. ಯಾವುದೋ ಒಂದು ಹೊಗಳುಬಟ್ಟ ತಂಡವೋ ಇಲ್ಲವೇ ರೋಲ್ ಕಾಲ್ ವ್ಯಕ್ತಿಗಳೋ ಕಪ್ಪಣ್ಣನಂತವರನ್ನು ಕರೆದು ಬಿರುದು ಬಾವಲಿಗಳನ್ನು ಕೊಟ್ಟಿದ್ದರೆ ಅದನ್ನು ನಿರ್ಲಕ್ಷಿಸಿ ಸುಮ್ಮನಿರಬಹುದಾಗಿತ್ತು. ಆದರೆ 'ರಂಗಭೂಮಿ ಉಡುಪಿ' ಒಂದು ಪ್ರತಿಷ್ಠತ ರಂಗಸಂಸ್ಥೆಯಾಗಿದ್ದು ಐವತ್ತು ವರ್ಷಗಳ ಇತಿಹಾಸವಿದೆ. ಅಂತಹ ಹಿರಿಯ ಸಂಸ್ಥೆ ಹೀಗೆ ಒಪ್ಪಿತವಲ್ಲದ ರೀತಿಯಲ್ಲಿ ತಪ್ಪಾದ ಹೆಸರಲ್ಲಿ ಬಿರುದು ಕೊಟ್ಟು ಸನ್ಮಾನಿಸುವುದು ಅಕ್ಷಮ್ಯ.
ಯಾರು ಏನೇ ಹೇಳಲಿ... ಕಪ್ಪಣ್ಣನವರು ನೇಪತ್ಯದಲ್ಲಿ ಕೆಲಸ ಮಾಡಿದ್ದಕ್ಕಿಂತಲೂ ಈವೆಂಟ್ ಮ್ಯಾನೇಜರಾಗಿ ಕೆಲಸ ಮಾಡಿದ್ದೇ ಹೆಚ್ಚು. ಅಪರೂಪಕ್ಕೊಮ್ಮೆ ಬೆಳಕಿನ ನಿರ್ವಹಣೆ ಮಾಡಿರಬಹುದು, ಅನಿವಾರ್ಯಕ್ಕೊಮ್ಮೆ ತಮ್ಮದೇ ತಂಡದಲ್ಲಿ ನಟಿಸಿರಬಹುದು. ಆದರೆ ರಂಗರಾಜಕಾರಣದ ಎಲ್ಲಾ ಪಟ್ಟುಗಳನ್ನೂ ಅರಿಗಿಸಿಕೊಂಡಿರುವ ಕಪ್ಪಣ್ಣ ಸರಕಾರಿ ಹಾಗೂ ಖಾಸಗಿ ಸಮಾರಂಭಗಳನ್ನು, ಜಾನಪದ ಜಾತ್ರೆಗಳನ್ನು, ರಾಜಕೀಯ ಪ್ರೇರಿತ ಕಾರ್ಯಕ್ರಮಗಳನ್ನು.... ಎಲ್ಲಾ ನಮೂನಿ ಅಕಾಡೆಮಿ ಹಾಗೂ ಪ್ರಾಧಿಕಾರಗಳ ಸಮಾರಂಭಗಳನ್ನು ಆಯೋಜಿಸಲು ಗುತ್ತಿಗೆದಾರನಾಗಿಯೋ ವ್ಯವಸ್ಥಾಪಕನಾಗಿಯೋ ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಂಡಿದ್ದಾರೆ. ಅಧೀಕೃತವಾಗಿ ಹೇಳಿಕೊಳ್ಳದಿದ್ದರೂ ಸಾಂಸ್ಕೃತಿಕ ಕ್ಷೇತ್ರದ ಈವೆಂಟ್ ಮ್ಯಾನೇಜರ್ ಆಗಿ ಕಪ್ಪಣ್ಣ ತಮ್ಮ ವ್ಯಾಪಾರಿ ಪ್ರವೃತ್ತಿಯನ್ನು ಮುನ್ನಡೆಸಿಕೊಂಡು ಬಂದಿರುವುದು ರಹಸ್ಯವಾಗೇನೂ ಇಲ್ಲ. ಕಪ್ಪಣ್ಣನವರ ಸಮಕಾಲೀನರಲ್ಲಿ ಹೋಗಿ 'ಕಪ್ಪಣ್ಣ ಈಗ ಕಲಾರತ್ನ' ಎಂದು ಹೇಳಿದರೆ ಅವರೆಲ್ಲಾ ಬಿದ್ದು ಬಿದ್ದು ನಗುತ್ತಾರೆ. ಕಾರ್ಯಕ್ರಮಗಳ ವ್ಯವಸ್ಥಾಪಕರುಗಳಿಗೂ, ಸಮಾರಂಭಗಳ ಗುತ್ತಿಗೆದಾರರಿಗೂ 'ರಂಗ ಕಲಾ ರತ್ನ' ಎಂದು ಬಿರುದನ್ನಿತ್ತು ತಲೆಮೇಲೆ ಹೊತ್ತು ಮೆರೆಸುವುದು ನಿಜವಾದ ಕಲಾವಿದರಿಗೆ ಮಾಡಿದ ಅವಮಾನವಾಗಿದೆ. ಸಾಂಸ್ಕೃತಿಕ ದಲ್ಲಾಳಿಗಳಿಗೆ ಈ ರೀತಿಯ ಉತ್ಪ್ರೇಕ್ಷಿತ ಬಿರುದು ಕೊಟ್ಟು ಸನ್ಮಾನಿಸುತ್ತಿರುವ ರಂಗಕರ್ಮಿಗಳ ಬದ್ಧತೆಯನ್ನೇ ಗುಮಾನಿಯಿಂದ ನೋಡುವಂತಾಗಿದೆ. ಯಾವುದೋ ಒಂದು ಹೊಗಳುಬಟ್ಟ ತಂಡವೋ ಇಲ್ಲವೇ ರೋಲ್ ಕಾಲ್ ವ್ಯಕ್ತಿಗಳೋ ಕಪ್ಪಣ್ಣನಂತವರನ್ನು ಕರೆದು ಬಿರುದು ಬಾವಲಿಗಳನ್ನು ಕೊಟ್ಟಿದ್ದರೆ ಅದನ್ನು ನಿರ್ಲಕ್ಷಿಸಿ ಸುಮ್ಮನಿರಬಹುದಾಗಿತ್ತು. ಆದರೆ 'ರಂಗಭೂಮಿ ಉಡುಪಿ' ಒಂದು ಪ್ರತಿಷ್ಠತ ರಂಗಸಂಸ್ಥೆಯಾಗಿದ್ದು ಐವತ್ತು ವರ್ಷಗಳ ಇತಿಹಾಸವಿದೆ. ಅಂತಹ ಹಿರಿಯ ಸಂಸ್ಥೆ ಹೀಗೆ ಒಪ್ಪಿತವಲ್ಲದ ರೀತಿಯಲ್ಲಿ ತಪ್ಪಾದ ಹೆಸರಲ್ಲಿ ಬಿರುದು ಕೊಟ್ಟು ಸನ್ಮಾನಿಸುವುದು ಅಕ್ಷಮ್ಯ.
ಈ ಬಿರುದು ಬಾವಲಿಗಳೇ ಸವಕಲು ನಾಣ್ಯಗಳಾಗಿವೆ. ರಾಜಪ್ರಭುತ್ವದಲ್ಲಿ ಇವು ಅಸ್ತಿತ್ವದಲ್ಲಿದ್ದವು. ಈಗ ಅವು ಕೇವಲ ಪಳುವಳಿಕೆಗಳಾಗಿವೆ. ಪರಂಪರೆಯಿಂದ ಸಾಂಪ್ರದಾಯಿಕತೆಯನ್ನು ಇನ್ನೂ ರೂಢಿಸಿಕೊಂಡು ಉಸಿರಾಡುತ್ತಿರುವ ಉಡುಪಿಯಂತಹ ಧಾರ್ಮಿಕ ಕ್ಷೇತ್ರದ ಪ್ರಜ್ಞಾವಂತರೂ ಕೂಡಾ ಈ ಬಿರುದು ಬಾವಲಿ ಕೊಡುವುದನ್ನು ಈ ಕಾಲದಲ್ಲೂ ರೂಢಿಸಿಕೊಂಡಿರುವುದೇ ವಿಪರ್ಯಾಸಕರವಾಗಿದೆ. ಇದು ಸಾಧಕರಿಗೆ ಪ್ರಶಸ್ತಿ ಪುರಸ್ಕಾರಗಳನ್ನು ಕೊಟ್ಟು ಗೌರವಿಸುವ ಕಾಲಘಟ್ಟ. ಈಗ ಬಿರುದು ಬಾವಲಿಗಳನ್ನು ಕೊಡುವುದು ಹಾಗೂ ತೆಗೆದುಕೊಳ್ಳುವುದೇ ಒಂದು ರೀತಿಯಲ್ಲಿ ಆಭಾಸಕಾರಿ. ಆದರೂ ರೂಢಿಗತವಾಗಿ ರಂಗಭೂಮಿ ಉಡುಪಿಯವರು ಬಿರುದು ಸಂಸ್ಕೃತಿಯನ್ನು ಮುಂದುವರೆಸುತ್ತಾ ಬಂದಿದ್ದಾರೆ. ಅದು ಅವರ ವಿವೇಚನೆ. ಆದರೆ ಬಿರುದು ಕೊಡುವುದನ್ನಾದರೂ ವ್ಯಕ್ತಿ ಮಾಡಿದ ಕೆಲಸಕ್ಕೆ ಪೂರಕವಾದ ಹೆಸರಲ್ಲಿ ಕೊಡುವುದು ಸೂಕ್ತ ಎನ್ನುವುದು ಪ್ರಸಕ್ತ ಅನಿಸಿಕೆ. ನಿರ್ಧಾರ ಅವರವರಿಗೆ ಬಿಟ್ಟದ್ದು.... ಏನೇ ಆಗಲಿ "ರಂಗ ಕಲಾ ರತ್ನ" ಬಿರುದಾಂಕಿತ ರಂಗ ಸಂಘಟಕ ಶ್ರೀಮಾನ್ ಕಪ್ಪಣ್ಣನವರಿಗಿನ್ನೊಮ್ಮೆ ವಂದನೆಗಳು ಅಭಿನಂದನೆಗಳು....
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ