ಶನಿವಾರ, ಏಪ್ರಿಲ್ 30, 2016

ಚರಿತ್ರಪುಸ್ತಕತಿಲೆಕ್ಕು ಒರೇಡು ; ಒಂದು ಸಾರ್ಥಕ ರಂಗಪ್ರಯೋಗ



ರಂಗಭೂಮಿ ಚರಿತ್ರೆಯಲ್ಲಿ ಹೀಗೂ ನಾಟಕ ಮಾಡಬಹುದು ಎಂಬ ಹೊಸ ಸಾಧ್ಯತೆಯನ್ನು ತೋರಿಸಿಕೊಟ್ಟ ಮಲಯಾಳಿ ನಾಟಕ ಚರಿತ್ರಪುಸ್ತಕತಿಲೆಕ್ಕು ಒರೇಡು. ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರವು ಗುರುನಾನಕ ಭವನದಲ್ಲಿ ಆಯೋಜಿಸಿದ 10 ದಿನಗಳ ದಕ್ಷಿಣ ಭಾರತ ರಂಗೋತ್ಸವದಲ್ಲಿ ಎಪ್ರಿಲ್ 29ರಂದು ಪ್ರದರ್ಶನಗೊಂಡು ನೋಡುಗರಲ್ಲಿ ವಿಸ್ಮಯ ಮೂಡಿಸಿತು. ಟಿ.ವಿ.ಕೋಚುಬಾವರವರ ಉಪನ್ಯಾಸಂ ಕಥೆಂiiನ್ನು ಜೇಮ್ಸ್ ಎಲಿಯಾರವರು ರಂಗರೂಪಗೊಳಿಸಿದ್ದು ಜೋಸ್ ಕೋಶಿಯವರು ತಮ್ಮ ದಿ ಇನ್ವಿಸಿಬಲ್ ಲೈಟಿಂಗ್ ಸಲ್ಯೂಶನ್ಸ್ (ತ್ರಿಶೂರ್) ತಂಡವು ಈ ಮಲಯಾಳಿ ಭಾಷೆಯ ನಾಟಕವನ್ನು ನಿರ್ದೇಶಿಸಿದ್ದಾರೆ.

ಕಳೆದ ಕಾಲು ಶತಮಾನದಿಂದ ಮಲಯಾಳಿ ರಂಗಭೂಮಿಯಲ್ಲಿ ಸಕ್ರೀಯವಾಗಿ ತೊಡಗಿಕೊಂಡು ಹೊಸ ಬಗೆಯ ರಂಗಸಾಧ್ಯತೆಗಳನ್ನು ಅವಿಷ್ಕರಿಸಿ, ವಿಭಿನ್ನ ರಂಗಪರಿಭಾಷೆಯನ್ನು ಅನ್ವೇಷಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಿರುವ ಕೇರಳ ರಾಜ್ಯದ ತ್ರಿಶೂರಿನ ದಿ ಇನ್ವಿಸಿಬಲ್ ಲೈಟಿಂಗ್ ಸಲ್ಯೂಶನ್ಸ್ ರಂಗತಂಡವು ಚರಿತ್ರಪುಸ್ತಕತಿಲೆಕ್ಕು ಒರೇಡು ನಾಟಕದ ಮೂಲಕ ಪರ್ಯಾಯ ರಂಗಪರಿಭಾವಗಳ ಅರ್ಥಪೂರ್ಣ ಸಾಧ್ಯತೆಗಳನ್ನು ಅನಾವರಣಗೊಳಿಸಿದೆ. ಇಡೀ ನಾಟಕ ಪ್ರೇಕ್ಷಕರನ್ನು ಅರ್ಧ ಶತಮಾನದ ಹಿಂದಿನ ಕಾಲಕ್ಕೆ ಕರೆದುಕೊಂಡು ಹೋಗಿ ಭಾಷೆಯ ಅರಿವಿಲ್ಲದವರಿಗೂ ಸಹ ರಂಗಾನುಭವವನ್ನು ಕೊಡುವಲ್ಲಿ ಸಫಲವಾಗಿದೆ.

ಈಗಿನ ಹೊಸ ತಲೆಮಾರಿನವರಿಗೆ ಗೊತ್ತೇ ಇಲ್ಲದ, ಪ್ರಸ್ತುತ ಐವತ್ತಕ್ಕೂ ಹೆಚ್ಚು ವಯಸ್ಸಾಗಿರುವ ತಲೆಮಾರಿನವರು ಮರೆಯಲು ಸಾಧ್ಯವೇ ಇಲ್ಲದ ಅಲೆಮಾರಿ ಪ್ರದರ್ಶಕರ ಸಾಹಸ ಕಲೆ ಸೈಕಲ್ ಸರ್ಕಸ್. ಅದನ್ನು ಮಲಯಾಳಂನಲ್ಲಿ ಸೈಕಲ್ ಯಜ್ಞಂ ಎಂದು ಕರೆಯುತ್ತಾರೆ. ಆಗ ಇನ್ನೂ ಟಿವಿ, ಸಿನೆಮಾಗಳಂತಹ ಮನರಂಜನೆಯ ಮಾಧ್ಯಮಗಳು ಸರ್ವವ್ಯಾಪಿಯಾಗಿರಲಿಲ್ಲ. ಸೈಕಲ್ ಕೌಶಲ್ಯಗಳ ಮೂಲಕ ವೈವಿದ್ಯಪೂರ್ಣವಾಗಿ ಗ್ರಾಮೀಣ ಜನರನ್ನು ಮನರಂಜಿಸುವ ಸೈಕಲ್ ಸಾಹಸ ಕಲೆ ಆಗ ತುಂಬಾ ಜನಪ್ರೀಯವಾಗಿತ್ತು. ಒಬ್ಬ ಕಲಾವಿದ ನೆಲಕ್ಕೆ ಕಾಲೂರದೇ ನಿಗದಿತ ವೃತ್ತದಲ್ಲಿ ಬ್ರೇಕಿಲ್ಲದ ಸೈಕಲ್ಲನ್ನು ವಾರಗಳ ಕಾಲ ನಿರಂತರವಾಗಿ ಓಡಿಸುತ್ತಾ, ಅನೇಕಾನೇಕ ಸರ್ಕಸ್‌ಗಳನ್ನು ಮಾಡುತ್ತಿದ್ದ. ಜೊತೆಗಾರರು ವಿವಿಧ ಸಾಹಸ, ನೃತ್ಯ, ಮ್ಯಾಜಿಕ್, ಹಾಸ್ಯಗಳನ್ನು ಮಾಡುತ್ತಾ ಜನರನ್ನು ರಂಜಿಸಿ ಊರಿನವರು ಇಷ್ಟ ಪಟ್ಟು ಕೊಟ್ಟಷ್ಟು ಕಾಣಿಕೆಯಲ್ಲಿ ಬದುಕು ಸಾಗಿಸುತ್ತಿದ್ದರು. ಮನರಂಜನೆಯ ಮಾಧ್ಯಮಗಳು ಬದಲಾದ ಹಾಗೆ ಈ ಸೈಕಲ್ ಯಜ್ಞ ಕಲೆಯೂ ಸಹ ಕಾಲಗರ್ಭಕ್ಕೆ ಸೇರಿ ಹೋಯಿತು. ಈ ಕಲೆಯನ್ನೇ ನಂಬಿ ಬದುಕುತ್ತಿದ್ದ ಅದೆಷ್ಟೋ ಕಲಾವಿದರ ಬದುಕು ಅತಂತ್ರವಾಯಿತು. ಈ ಎಲ್ಲಾ ಘಟನೆಗಳನ್ನು ಚರಿತ್ರಪುಸ್ತಕತಿಲೆಕ್ಕು ಒರೇಡು ನಾಟಕದಲ್ಲಿ ಬಲು ಮಾರ್ಮಿಕವಾಗಿ ತೋರಿಸಲಾಗಿದೆ.

ಕಲಾಪ್ರಕಾರವೊಂದು ಸೃಜಿಸುವ ವಿನೋದಾವಳಿಗಳ ಮೂಲಕ ಕಲೆಯನ್ನೇ ನಂಬಿ ಬದುಕಿದವರ ದುರಂತವನ್ನು ಕಟ್ಟಿಕೊಡುವ ಈ ನಾಟಕವು ನೋಡುಗರನ್ನು ರಂಜಿಸುತ್ತಲೇ ಕಲಾವಿದರ ಅವಸಾನದ ಚಿತ್ರಣಕ್ಕೆ ಪ್ರೇಕ್ಷಕರು ಮರುಗುವಂತೆ ಮಾಡಿದೆ. ನಾಟಕದ ವಸ್ತುವಿಗಿಂತಲೂ ಅದನ್ನು ನಿರೂಪಿಸಿ ತೋರಿಸಿದ ರೀತಿ ನಿಜಕ್ಕೂ ಅದ್ಬುತವೆನಿಸುವಂತಿದೆ. ನಾಟಕದಾದ್ಯಂತ ಬಳಸಿದ ರಂಗತಂತ್ರಗಳಂತೂ ದೃಶ್ಯದಿಂದ ದೃಶ್ಯಕ್ಕೆ ಕುತೂಹಲವನ್ನು ಹೆಚ್ಚಿಸುವಂತೆ ಮೂಡಿಬಂದಿದೆ. ಇಡೀ ರಂಗತಂಡದ ಪೂರ್ವಸಿದ್ಧತೆ ಹಾಗೂ ಕಲಾವಿದರುಗಳ ರಂಗಬದ್ಧತೆ ನಾಟಕದಾದ್ಯಂತ ಪ್ರತಿಫಲಿಸಿದೆ. ನಾಟಕರಂಗ ತನ್ನ ರೂಢಿಗತ ಚೌಕಟ್ಟನ್ನು ಬಿಟ್ಟು ಹೊಸ ಸಾಧ್ಯತೆಗಳನ್ನು ಅಳವಡಿಸಿಕೊಳ್ಳಬೇಕಾದ ಸಂಕ್ರಮಣದ ಕಾಲಘಟ್ಟದಲ್ಲಿ ಈ ಮಲಯಾಳಿ ನಾಟಕ ಮಾದರಿಯಂತಿದೆ.


ಕೇವಲ ಸೈಕಲ್ ಕಲೆಯ ಕೌಶಲವನ್ನಷ್ಟೇ ತೋರಿಸಿದ್ದರೆ ಈ ನಾಟಕವೊಂದು ಸರ್ಕಸ್ ಆಗಬಹುದಾದ ಅಪಾಯವಿತ್ತು. ಇಲ್ಲವೇ ಬೀದಿ ಬದಿಯ ದೊಂಬರಾಟವಾಗುವ ಸಾಧ್ಯತೆ ಇತ್ತು. ಆದರೆ... ನಾಟಕದ ಚೌಕಟ್ಟಿನಲ್ಲಿ ಬೀದಿಕಲೆಯೊಂದನ್ನು ಕಲಾತ್ಮಕವಾಗಿ ಹೇಳುವ ರೀತಿ ಅನನ್ಯವಾಗಿ ಮೂಡಿಬಂದಿದೆ. ಇತಿಹಾಸದಲ್ಲಿ ನಶಿಸಿ ಹೋದ ಕಲೆಯೊಂದನ್ನು ಚರಿತ್ರೆಯ ಪುಟಗಳಿಂದ ಹೆಕ್ಕಿ ತೆಗೆದು ನಾಟಕ ರೂಪದಲ್ಲಿ ನಿರೂಪಿಸಿದ ನಿರ್ದೇಶಕನ ಪರಿಶ್ರಮ ನಿಜಕ್ಕೂ ಅಭಿನಂದನಾರ್ಹ.

ಈ ನಾಟಕ ರಂಗತಂತ್ರಗಳಿಂದ ಶ್ರೀಮಂತವಾಗಿದೆಯಾದರೂ ಕೇವಲ ನಿರ್ದೇಶಕನ ನಾಟಕವಾಗಿಲ್ಲ, ನಟರೊಳಗಿನ ಅಭಿನಯ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲಾಗಿದೆಯಾದರೂ ಇದು ಕೇವಲ ಕಲಾವಿದರ ನಾಟಕವಲ್ಲ. ನಿರ್ದೇಶಕನ ತಂತ್ರಗಾರಿಕೆ ಹಾಗೂ ಕಲಾವಿದರ ಸಾಮರ್ಥ್ಯ ಇವೆರಡೂ ಹದವಾಗಿ ಸಮ್ಮಿಶ್ರಣಗೊಂಡು ನಿಜವಾದ ನಾಟಕವಾಗಿ ಪ್ರದರ್ಶನಗೊಂಡಿದೆ. ಈ ನಾಟಕದಲ್ಲಿ ನಾಯಕ ನಾಯಕಿ ಖಳನಾಯಕ ಎನ್ನುವ ಪರ್ಟಿಕ್ಯೂಲರ್ ಪಾತ್ರಗಳೇ ಇಲ್ಲ. ಯಾವ ಪಾತ್ರವೂ ಮುಖ್ಯವಲ್ಲ, ಇನ್ಯಾವ ಪಾತ್ರವೂ ಅಮುಖ್ಯವಲ್ಲ. ಎಲ್ಲಾ ನಟರಿಗೂ ತಮ್ಮ ಪ್ರತಿಭೆ ಸಾಬೀತುಪಡಿಸುವ ಅವಕಾಶ ಸಿಕ್ಕಿದೆ, ಹೀಗಾಗಿ ನಾಟಕವು ನೋಡುಗರ ಅನುಭವಕ್ಕೆ ದಕ್ಕಿದೆ. ನಿರ್ದೇಶಕ ಹಾಗೂ ಕಲಾವಿದರ ಸಕ್ರೀಯವಾದ ಕ್ರಿಯಾಶೀಲ ಕೊಡುಗೆಯಿಂದಾಗಿ ಈ ಮಲಯಾಳಿ ನಾಟಕ ಯಶಸ್ವಿಯಾಗಿದೆ.

ನಾಟಕದಲ್ಲಿ ಮನರಂಜನೆಯ ಅಂಶಗಳು ಹೇರಳವಾಗಿವೆ. ಮಾತಲ್ಲಿರುವ ಪಂಚ್‌ಗಳು, ಅದನ್ನು ಹೇಳುವ ನಟರ ಟೈಮಿಂಗ್ ಹಾಗೂ ಕಲಾವಿದರ ದೇಹಭಾಷೆ ಅಚ್ಚರಿ ಹುಟ್ಟಿಸುವಷ್ಟು ಸೊಗಸಾಗಿ ಮೂಡಿಬಂದಿವೆ. ಸಾಮಾನ್ಯರಂತೆ ಕಾಣುವ ನಟರ ಅಸಾಮಾನ್ಯ ನಟನಾ ಕೌಶಲ್ಯ ನೋಡುಗರ ಮನಸೂರೆಗೊಂಡಿದ್ದಂತೂ ಸುಳ್ಳಲ್ಲ. ಯಾವ ದೃಶ್ಯವೂ ಮೆಲೋಡ್ರಾಮಾ ಎನ್ನಿಸದೇ, ಯಾರ ಅಭಿನಯವೂ ಕೃತಕವೆಂದು ತೋರದೇ ಚರಿತ್ರೆಯ ಪುಟದ ಘಟನೆಗಳು ನೈಜ ನಟನೆಯ ಮೂಲಕ ನಮ್ಮ ಕಣ್ಣ ಮುಂದೆ ತೆರೆದುಕೊಳ್ಳುವುದನ್ನು ಕಣ್ತುಂಬಿಕೊಂಡ ಪ್ರೇಕ್ಷಕರು ಧನ್ಯರಾದರು. ಪ್ರತಿ ದೃಶ್ಯದಲ್ಲೂ ಪ್ರೇಕ್ಷಕರ ಊಹೆಯನ್ನು ಮೀರಿ ಸನ್ನಿವೇಶಗಳು ಸೃಷ್ಟಿಗೊಂಡು ವಿಸ್ಮಯವನ್ನು ಹುಟ್ಟಿಸುವುದನ್ನು ನೋಡುವುದೇ ಚೆಂದ. ಭರತಮುನಿಯ ನಾಟ್ಯಶಾಸ್ತ್ರದ ಅಭಿನಯ ಪ್ರಕಾರಗಳಾದ ಆಂಗಿಕ, ವಾಚಿಕ, ಆಹಾರ್ಯ ಹಾಗೂ ಸಾತ್ವಿಕ ಈ ಎಲ್ಲಾ ವಿಭಾಗಗಳನ್ನೂ ಕಲಾವಿದರು ಸಮರ್ಥವಾಗಿ ನಿರ್ವಹಿಸಿ ನಾಟಕವನ್ನು ಹೃದ್ಯಗೊಳಿಸಿದ್ದಾರೆ. ಈ ಮೂಲಕ ಮಲಯಾಳಿ ರಂಗಭೂಮಿಯನ್ನು ಸಮೃದ್ದಗೊಳಿಸಿದ್ದಾರೆ.

ಕಲಾವಿದರ ನಟನೆಗೆ ಪೂರಕವಾಗಿ ಬೆಳಕು ಹಾಗೂ ಸಂಗೀತಗಳು ಸ್ಪಂದಿಸಿ ದೃಶ್ಯಕ್ಕೆ ಅಗತ್ಯವಾದ ಮೂಡ್ ಸೃಷ್ಟಿಸುವಲ್ಲಿ  ಬಹುದೊಡ್ಡ ಕೊಡುಗೆ ನೀಡಿದವು. ಸ್ವತಃ ರಂಗಬೆಳಕಿನ ವಿನ್ಯಾಸಕರಾಗಿ ಹೆಸರು ಮಾಡಿದ ಜೋಸ್ ಕೋಶಿರವರು ಈ ನಾಟಕದಲ್ಲಿ ಮಾಡಿದ ಬೆಳಕಿನ ಬಣ್ಣಗಳ ಸಂಯೋಜನೆ ಲೈಟ್ ಡಿಸೈನರ್‌ಗಳಿಗೆ ಮಾದರಿಯಾಗುವಂತಿದೆ. ಮಂದ ಬೆಳಕಿನಲ್ಲೂ ದೃಶ್ಯಗಳು ಮೂಡುವ ಪರಿಯನ್ನು ನೋಡಿಯೇ ಸವಿಯಬೇಕು.

ಐವತ್ತರ ದಶಕದ ಕಾಸ್ಟೂಮ್ಸ್ ಹಾಗೂ ಪರಿಕರಗಳನ್ನು ಅತ್ಯಂತ ಜಾಣ್ಮೆಯಿಂದ ಬಳಸಲಾಗಿದೆ. ಕಲಾವಿದರು ಬಳಸುವ ಕಲರ್ ದಿರುಸುಗಳು  ಬಣ್ಣದ ಬೆಳಕಿನ ಜೊತೆಗೆ ಮಿಳಿತವಾಗಿ ರಂಗದಮೇಲೆ ಬಣ್ಣಬಣ್ಣದ ಲೋಕವನ್ನು ಸೃಷ್ಟಿಸಿದಂತಿದೆ. ದ್ವನಿ ಬೆಳಕಿನ ಸೌಲಭ್ಯವಿರುವ ರಂಗಮಂದಿರವನ್ನು ಬಿಟ್ಟು ಬಟಾಬಯಲಲ್ಲಿ ಸೆಟ್ ಹಾಕಿ ಹೊರಾಂಗಣದಲ್ಲಿ ನಾಟಕ ಮಾಡಿ ತೋರಿಸಿದ್ದು ಈ ರಂಗತಂಡದ ರಂಗನಿಷ್ಟೆಗೆ ಸಾಕ್ಷಿಯಾಗಿದೆ. ಯಾಕೆಂದರೆ.. ಈ ಸೈಕಲ್ ಯಜ್ಞ ಕಲಾ ಪ್ರದರ್ಶನ ನಡೆಯುತ್ತಿದ್ದುದೇ ಜನಸೇರುವ ಬಯಲಲ್ಲಿ. ಒಳಾಂಗಣದಲ್ಲಿ ಮಾಡಿದರೆ ಆ ಬಯಲಿನ ಎಫೆಕ್ಟ್ ಬರಲು ಸಾಧ್ಯವಿಲ್ಲ ಎಂದು ಮನಗಂಡ ನಿರ್ದೇಶಕರು ಬಯಲಲ್ಲೇ ನಾಟಕದ ನೆಪದಲ್ಲಿ ಇತಿಹಾಸದ ಸನ್ನಿವೇಶವನ್ನು ಮರುಸೃಷ್ಟಿಸಿ ನಿಜವಾದ ಅರ್ಥದಲ್ಲಿ ಅಲೆಮಾರಿ ಕಲಾವಿದರ ಚರಿತ್ರೆಯ ಪುಟವನ್ನು ತೆರೆದಿಟ್ಟರು. ಪ್ರೇಕ್ಷಕರೂ ಸಹ ತಾವು ನಾಟಕ ನೋಡುತ್ತಿದ್ದೇವೆಂಬುದು ಮರೆತು ಸೈಕಲ್ ಯಜ್ಞದ ಸನ್ನಿವೇಶದ ಭಾಗವಾದರು.   

ಇಷ್ಟೆಲ್ಲಾ ಚೆಂದದ ನಾಟಕವನ್ನು ಕಟ್ಟಿಕೊಟ್ಟ ನಿರ್ದೇಶಕರು ಅದ್ಯಾಕೋ ಕೊನೆಕೊನೆಗೆ ಅನಗತ್ಯವಾಗಿ ಎಳೆದು ಒಂದಿಷ್ಟು ಬೋರ್ ಹೊಡೆಸಿದ್ದಾರೆ. ಮೊಟ್ಟೆ, ಕೋಳಿ ವ್ಯಾಪಾರದ ದೃಶ್ಯ ತೆಗೆದಿದ್ದರೂ ನಾಟಕಕ್ಕೇನೂ ಹಾನಿಯಾಗುತ್ತಿರಲಿಲ್ಲ. ಜೋಕರ್ ವೇಷದಾರಿಗಳ ಮಾತುಗಳು ಅತಿಯಾಗಿ ಏಕತಾನತೆಯನ್ನುಂಟು ಮಾಡಿದವು. ನಾಟಕದ ವೇಗಕ್ಕೆ ಅಡ್ಡಿಯಾಗುವಂತಹ ಆರಂಭದ ಅನಗತ್ಯ ದೃಶ್ಯಗಳನ್ನು ಎಡಿಟ್ ಮಾಡಿದ್ದರೆ ಚರಿತ್ರಪುಸ್ತಕ... ನಾಟಕವು ರಂಗಚರಿತ್ರೆಯಲ್ಲಿ ಹೊಸ ದಾಖಲೆಯನ್ನು ಬರೆಯಬಹುದಾಗಿದೆ. ಕನ್ನಡ ರಂಗಭೂಮಿಯ ಯುವ ನಿರ್ದೇಶಕರುಗಳು, ನೇಪತ್ಯ ಕಲಾವಿದರುಗಳು ಹಾಗೂ ನಟರುಗಳು ತಮ್ಮ ಕಲಿಕೆಯ ಭಾಗವಾಗಿ ಈ ನಾಟಕವನ್ನು ಒಂದು ಸಲ ನೋಡುವುದುತ್ತಮ. ಪ್ರಸ್ತುತ ತಲೆಮಾರಿನ ರಂಗಕರ್ಮಿಗಳು ಈ ನಾಟಕದ ರಂಗಸಾಧ್ಯತೆಗಳಿಂದ ಸ್ಪೂರ್ತಿ ಪಡೆದು ಕನ್ನಡ ರಂಗಭೂಮಿಯಲ್ಲೂ ಹೊಸಪರಿಕಲ್ಪನೆಗಳನ್ನು ಸೃಜಿಸಲು ಪ್ರೇರಣೆಯನ್ನು ಪಡೆಯಬಹುದಾಗಿದೆ.


ಸಾಕಷ್ಟು ರಂಜಿಸುವ ಈ ನಾಟಕವು ತನ್ನ ಕೊಟ್ಟಕೊನೆಯ ದೃಶ್ಯದಲ್ಲಿ ಹುಟ್ಟಿಸುವ ವಿಷಾದದ ಅಲೆ ಪ್ರೇಕ್ಷಕರ ಮನಸ್ಸನ್ನು ಕಾಡದೇ ಇರದು.  ಆಧುನಿಕ ಮನರಂಜನಾ ಮಾಧ್ಯಮದ ದಾಳಿಯನ್ನು ಎದುರಿಸಲು ಈ  ಅಲೆಮಾರಿ  ಕಲಾವಿದರು ಶಕ್ತಿ ಮೀರಿ ಪ್ರಯತ್ನಿಸುತ್ತಾರೆ. ತಮ್ಮ ಕಲೆಯಿಂದ ವಿಮುಖರಾದ ಜನರನ್ನು ಸೆಳೆದುಕೊಳ್ಳಲು ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಾರೆ. ಬದುಕಿಗಾಗಿ ಕಲೆಯನ್ನು ಉಳಿಸಿಕೊಳ್ಳಲು ತಮ್ಮ ಸಾಮರ್ಥ್ಯವನ್ನು ಮೀರಿ ಭೂಮಿಯೊಳಗೆ ಎರಡು ಗಂಟೆಯ ಬದಲಾಗಿ ಆರುಗಂಟೆ ಭೂಗತವಾಗುವ ಸಾಹಸಕ್ಕೆ ಇಳಿದ ಕಲಾವಿದನೊಬ್ಬ ಅಸುನೀಗುತ್ತಾನೆ.  ಆತನ ಸಾವಿನೊಂದಿಗೆ ಅಲೆಮಾರಿ ಕಲೆಯೊಂದು ಕಾಲವಶವಾಗುತ್ತದೆ. ತಮ್ಮ ಬದುಕಿನ ಸಂಕೇತವಾದ ಸೈಕಲ್ಲಿಗೆ ಬೆಂಕಿ ಹಚ್ಚಿ, ಸತ್ತವನ ಶವ ಹೊತ್ತು ಸಾಗುವ  ಕಲಾವಿದರ ಮೂಕವೇದನೆ ನೋಡುಗರ ಕಣ್ಣಲ್ಲಿ ನೀರಾಗುತ್ತದೆ. ವಿಷಾದ ಎಲ್ಲರೆದೆಯಲ್ಲಿ ಮಡುಗಟ್ಟುತ್ತದೆ. ವಿನೋದದ ಮೂಲಕ ವಿಷಾದವನ್ನು ಹೇಳುವ ತನ್ನ ಆಶಯದಲ್ಲಿ ಈ ವಿಶಿಷ್ಟ ರಂಗಪ್ರಯೋಗ ಯಶಸ್ವಿಯಾಗುತ್ತದೆ. ಚರಿತ್ರೆ ಪುಸ್ತಕದಲ್ಲಿ ಮರೆತು ಮರೆಯಾಗಿ ಹೋದ ಅಲೆಮಾರಿ  ಕಲೆಯೊಂದನ್ನು ನಾಟಕದ ಮೂಲಕ ಅನಾವರಣಗೊಳಿಸಿದ ನಿರ್ದೇಶಕರು ನಿಜಕ್ಕೂ ಅಭಿನಂದನಾರ್ಹರು. ಇಂತಹ ವಿಭಿನ್ನ ನಾಟಕವನ್ನು ಬೆಂಗಳೂರಿಗೆ ಆಹ್ವಾನಿಸಿ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟ ಎನ್‌ಎಸ್‌ಡಿ ಬೆಂಗಳೂರು ಕೇಂದ್ರಕ್ಕೆ ಧನ್ಯವಾದ ಹೇಳಲೇಬೇಕಿದೆ.     

                                                                  - ಶಶಿಕಾಂತ ಯಡಹಳ್ಳಿ       

     





ಶುಕ್ರವಾರ, ಏಪ್ರಿಲ್ 29, 2016

ರಂಗಾಯಣ ಬೆತ್ತಲುಗೊಳಿಸಿ ‘ಬಾಂಬೆ’ ತೋರಿಸಿದ “ತಮಾಶ” :


ತಮಾಶ ತುಂಬಾ ಬರೀ ತಮಾಶಾ; ಏನೂ ಇಲ್ಲಾ ಬಾಕಿ ವಿಷ್ಯಾ :



17ನೇ ಶತಮಾನದಿಂದಲೂ ಮರಾಠಿಯಲ್ಲಿ ಬಲು ಜನಪ್ರೀಯವಾದ ಜಾನಪದ ರಂಗಪ್ರಕಾರ ತಮಾಶಾ. ಬರುಬರುತ್ತಾ ವೃತ್ತಿ ಕಂಪನಿ ಶೈಲಿಯನ್ನೂ ಮೈಗೂಡಿಸಿಕೊಂಡು ಮಹಾರಾಷ್ಟ್ರದಲ್ಲಿ ಸಮೃದ್ಧವಾಗಿ ಬೆಳೆದ ಈ ಪ್ರಕಾರದ ನಾಟಕವನ್ನು ಮೊದಲ ಬಾರಿಗೆ ಕನ್ನಡದಲ್ಲಿ ಪ್ರಯೋಗಿಸುವ ಸಾಹಸವನ್ನು ಧಾರವಾಡದ ರಂಗಾಯಣವು ಮಾಡಿದೆ. ಮನರಂಜನೆಯನ್ನೇ ಉದ್ದೇಶವಾಗಿಟ್ಟುಕೊಂಡು ಪ್ರಸ್ತುತಗೊಂಡಿರುವ ತಮಾಶ ನೋಡುಗರನ್ನು ನಗಿಸುವ ಪ್ರಯತ್ನವನ್ನು ಮಾಡುತ್ತದೆ. 

ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌ಡಿ) ಬೆಂಗಳೂರು ಕೇಂದ್ರವು ಗುರುನಾನಕ್ ಭವನದಲ್ಲಿ 2016, ಎಪ್ರಿಲ್ 20 ರಿಂದ 29 ರವರೆಗೆ ಆಯೋಜಿಸಿದ ದಕ್ಷಿಣ ಭಾರತ ರಂಗೋತ್ಸವ ದಲ್ಲಿ ತಮಾಶ ನಾಟಕವು ಎಪ್ರಿಲ್ 23ರಂದು ಪ್ರಯೋಗಗೊಂಡಿತು. ಮರಾಠಿ ಭಾಷೆಯಲ್ಲಿ ತಮಾಶ ನಾಟಕವನ್ನು ಬರೆದು ನಿರ್ದೇಶಿಸಿದ್ದ ಬಾಂಬೆಯ ಪ್ರೊ ಗಣೇಶ್ ಚಂದನ್ ಶಿವೆಯವರನ್ನೇ ಕನ್ನಡ ಭಾಷೆಯಲ್ಲಿ ನಾಟಕ ನಿರ್ದೇಶಿಸಿಲು ಧಾರವಾಡಕ್ಕೆ ಆಹ್ವಾನಿಸಿದ ರಂಗಾಯಣವು ತಮಾಶ ನಾಟಕವನ್ನು ನಿರ್ಮಿಸಿದೆ. ಈ ನಾಟಕವನ್ನು ಡಿ.ಎಸ್.ಚೌಗಲೆಯವರು ಕನ್ನಡಕ್ಕೆ ಅನುವಾದಿಸಿದ್ದಾರೆ

ಹಾಡು, ಸಂಗೀತ, ನೃತ್ಯದ ಜೊತೆಗೆ ಹಾಸ್ಯ... ಇವುಗಳನ್ನೆಲ್ಲಾ ಸೇರಿಸಿ ಹೊಸೆದಿರುವ ಈ ನಾಟಕವೆಂಬ ನಾಟಕವು ಏನಾದರೂ ಮಾಡಿ ಜನರ ಮನ ರಂಜಿಸಬೇಕು ಎನ್ನುವ ತನ್ನ ಉದ್ದೇಶದಲ್ಲಿ ಭಾಗಶಃ ಸಫಲವಾಗಿದೆ. ಈ ನಾಟಕಕ್ಕೆ ಕಥೆಯ ಚೌಕಟ್ಟಿನ ಹಂಗಿಲ್ಲ, ನಾಟಕದಲ್ಲಿ ನಾಟಕೀಯತೆ ಇಲ್ಲ,  ದೃಶ್ಯದಿಂದ ದೃಶ್ಯಕ್ಕೆ ಯಾವುದೇ ಸಂಬಂಧಗಳಿಲ್ಲ, ಚಿತ್ತ ಬಂದತ್ತ ಹರಿದಾಡುವ ಈ ನಾಟಕವು ನಾಟಕವೇ ಅಲ್ಲ. ಗಾನವಿನೋದಿನಿಯಂತಹ ಹಾಸ್ಯರಸಮಂಜರಿ ತಂಡದವರು ಜನರನ್ನು ನಗಿಸಲು ಹಾಡು, ಸಂಗೀತ, ನೃತ್ಯಗಳ ಜೊತೆಗೆ ಕಾಮಿಡಿ ದೃಶ್ಯಗಳನ್ನು ಅಭಿನಯಿಸಿ ತೋರಿಸುತ್ತಾರಲ್ಲಾ ಹೆಚ್ಚು ಕಡಿಮೆ ಈ ತಮಾಶ ಸಹ ಹಾಗೆಯೇ ಮೂಡಿಬಂದಿದೆ.

ಯಾವುದನ್ನೂ ಕ್ರಮಬದ್ಧವಾಗಿ ನೆಟ್ಟಗೆ ಹೇಳದೇ ಎಲ್ಲವನ್ನೂ ಕಲಸುಮೇಲೋಗರ ಮಾಡಲಾಗಿದ್ದು, ರಂಜನೆಗಾಗಿ ಹಸಿದ ಪ್ರೇಕ್ಷಕರಿಗೆ ಹಾಸ್ಯರಸಾಯನದ ಬದಲು ಬೇರೆ ಭಾಷೆಯಿಂದ ಕಡತಂದ ಹಳಸಲು ಚಿತ್ರಾನ್ನವನ್ನು ಬಡಿಸಲಾಗಿದೆ.  ವಿಷಯವೇ ಇಲ್ಲದ ನಾಟಕದಾದ್ಯಂತ ಬರೀ ವಿಷಯಾಂತರಗಳೇ ತುಂಬಿವೆ. ಸುದೀರ್ಘವಾದ ಸಂಗೀತ, ನಾಂದಿ ಹಾಡು ಹಾಗೂ ನೃತ್ಯದ ನಂತರ ಮಥುರೆಯ ಗೊಲ್ಲತಿಯರನ್ನು ಕಾಡುವ ಆಧುನಿಕ ಕೃಷ್ಣನ ದೃಶ್ಯದೊಂದಿಗೆ ಆರಂಭವಾದ ನಾಟಕವು ನಂತರ ಆ ವಿಷಯವನ್ನು ಅಲ್ಲಿಯೇ ಬಿಟ್ಟು ನಾಲ್ಕೈದು ಜನ ವಿದೂಷಕರಂತವರಿಂದ ಹಳೆಯ ಬಾಲಿಷ ಜೋಕುಗಳ ಅಭಿನಯ ಆರಂಭಿಸಲಾಗುತ್ತದೆ. ಈ ಅಸಂಬದ್ಧ ಸ್ಟ್ಯಾಂಡಪ್ ಕಾಮಿಡಿ ಶೋ ಮುಗಿಯುವಷ್ಟರಲ್ಲಿ ನಾಟಕದ ಪೂರ್ವಾರ್ಧ ಮುಗಿದು ಉತ್ತರಾರ್ಧ ಆರಂಭವಾಗುತ್ತದೆ. ಹುಚ್ಚು ರಾಜ, ತಿಕ್ಕಲು ಮಂತ್ರಿ, ಅಧಿಕಪ್ರಸಂಗಿ ಸಿಪಾಯಿಗಳು ಮಾಡುವ ಮತ್ತೊಂದು ಸುತ್ತು ಹಾಸ್ಯ ದೃಶ್ಯಗಳು ಆರಂಭಗೊಂಡು ನಡುವೆ ರೈತನೊಬ್ಬ ಗೋಳು ತೋಡಿಕೊಂಡು ಮುಗಿಯುವಷ್ಟರಲ್ಲಿ ನಾರದನ ಪ್ರವೇಶ. ಇಲ್ಲಿಗೆ ನಾಟಕ ಮುಕ್ಕಾಲು ಭಾಗ ಮುಗಿದು ಇನ್ನುಳಿದ ಕಾಲು ಭಾಗದಲ್ಲಿ ಅಸಲಿ ಜಾನಪದ ಮಾದರಿಯ ದೃಶ್ಯವೊಂದು ಶುರುವಾಗುತ್ತದೆ. ಖಂಡೋಬ ದೇವನ ಹೆಂಡತಿಯ ತಲೆಯಲ್ಲಿ ಅನುಮಾನದ ಬೀಜ ಬಿತ್ತುವ ನಾರದನ ತಂತ್ರ ಫಲಿಸಿ ಪಗಡೆಯಲ್ಲಿ ಸೋತ ಖಂಡೋಬ ಹನ್ನೆರಡು ವರ್ಷ ವನವಾಸಕ್ಕೆ ಹೋಗುತ್ತಾನೆ. ಚಂದನಪುರಕ್ಕೆ ತೆರಳಿ ಕುರುಬಳಲ್ಲಿ ಅನುರಕ್ತನಾಗಿ ಮದುವೆಯಾಗುತ್ತಾನೆ. ಕೊನೆಗೆ ನಾಟಕಕ್ಕೆ ಸಂಬಂಧವೇ ಇಲ್ಲದ ಸಂದೇಶವನ್ನು ಕಲಾವಿದರಿಂದ ಹೇಳಿಸುವ ಮೂಲಕ ತಮಾಶ ನಾಟಕ ಪರಿಸಮಾಪ್ತಿಯಾಗುತ್ತದೆ. ಇದನ್ನೊಂದು ನಾಟಕ ಎಂದು ಒಪ್ಪಿಕೊಳ್ಳುವುದೇ ತಮಾಶೆಯ ವಿಷಯವಾಗಿ ನೋಡುಗರಿಗೆ ಕಾಡುತ್ತದೆ.

ತಮ+ಆಶಾ=ತಮಾಶಾ. ಅಂದರೆ ಕತ್ತಲೆಯಿಂದ ಬೆಳಕಿನತ್ತ ಕೊಂಡೊಯ್ಯುವುದು ಎಂದರ್ಥ. ತಮಾಶಾ ಎಂದರೆ ತಮಾಶೆ ಮಾಡುವುದೊಂದೇ ಎಂದು ತಪ್ಪಾಗಿ ಅರ್ಥೈಸಿಕೊಂಡಂತಿರುವ ಧಾರವಾಡ ರಂಗಾಯಣದ ನಿರ್ದೇಶಕರಾದ ಪ್ರಕಾಶ ಗರುಡರವರು ಚೌಗಲೆಯವರ ಆತ್ಮೀಯತೆಯ ಒತ್ತಡದಿಂದಾಗಿ ತಮಾಶ ನಾಟಕವನ್ನು ತೆಗೆದುಕೊಂಡಿದ್ದಾರೆ. ಇಡೀ ನಾಟಕವನ್ನು ಜಾಲಾಡಿದರೂ ಎಲ್ಲಿಯೂ ಪ್ರೇಕ್ಷಕರನ್ನು ಆಲೋಚನೆಗೆ ಪ್ರೇರೇಪಿಸುವ ಅಂಶಗಳಿಲ್ಲ. ಪ್ರಸ್ತುತ ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನಗಳಿಲ್ಲ, ಕತ್ತಲೆಯಿಂದ ಬೆಳಕಿಗೆ ಪ್ರೇಕ್ಷಕರ ಆಲೋಚನೆಯನ್ನು ತೆಗೆದುಕೊಂಡು ಹೋಗುವುದು ಈ ನಾಟಕದ ಉದ್ದೇಶವೂ ಅಲ್ಲ. ಹೋಗಲಿ ತತ್ವ ತರ್ಕಗಳೆಲ್ಲವನು ಬದಿಗಿಟ್ಟು ಶುದ್ಧ ಮನರಂಜನೆಯಾದರೂ ದಕ್ಕಿತಾ ಎಂದರೆ ಅದೂ ಆಗಲಿಲ್ಲ. ಮನರಂಜನೆ ಎಂದರೆ ನೋಡುಗರ ಮನಸ್ಸನ್ನು ರಂಜಿಸುವುದು ಎಂಬುದು ಸರಳಾರ್ಥ. ಆದರೆ ಪ್ರೇಕ್ಷಕರ ಮನಸ್ಸನ್ನು ರಂಜಿಸುವ ಬದಲು ವಿಕೃತಗೊಳಿಸಿದರೆ ಅದಕ್ಕೆ ಮನರಂಜನೆ ಎನ್ನುವುದಾದರೂ ಹೇಗೆ? ದ್ವಂದ್ವಾರ್ಥ ಸಂಭಾಷಣೆಗಳು ಹಾಗೂ ಹಾಸ್ಯತುಣುಕುಗಳು ನೋಡುಗರ ಮನಸಲ್ಲಿ ವಿಕೃತಾನಂದವನ್ನು ಹುಟ್ಟಿಸಿದರೆ ಅದು ಮನರಂಜನೆ ಹೇಗಾದೀತು?

ಈ ನಾಟಕವನ್ನು ಬೇರೆ ಯಾವುದಾದರೂ ರಂಗತಂಡ ಬರೀ ಮನರಂಜನೆಯ ಉದ್ದೇಶದಿಂದ ಮಾಡಿದ್ದರೆ ಸಿಕ್ಕಷ್ಟು ನಗುವನ್ನು ದಕ್ಕಿಸಿಕೊಂಡು ಸುಮ್ಮನಿರಬಹುದಾಗಿತ್ತು.  ಆದರೆ ಈ ನಾಟಕವನ್ನು ಮಾಡಿದ್ದು ಸರಕಾರಿ ಕೃಪಾಪೋಷಿತ ಧಾರವಾಡ ರಂಗಾಯಣ. ಲಕ್ಷಾಂತರ ರೂಪಾಯಿ ಜನತೆಯ ಹಣವನ್ನು ಖರ್ಚು ಮಾಡಿ ಅಪಹಾಸ್ಯ ಪ್ರಧಾನವಾದ ನಾಟಕವನ್ನು ಮಾಡಿದ್ದಾದರೂ ಯಾಕೆ ಎನ್ನುವ ಪ್ರಶ್ನೆ ಪ್ರಜ್ಞಾವಂತ ನೋಡುಗರನ್ನು ಕಾಡದೇ ಇರದು. ನಾಟಕದ ಪೂರ್ವಾರ್ಧದಲ್ಲಿ ಬೇಕಾದಷ್ಟು ದ್ವಂದ್ವಾರ್ಥ ಸಂಭಾಷಣೆ ಹಾಗೂ ದೃಶ್ಯಗಳು ತುಂಬಿವೆ. ರಂಗಾಯಣದ ಇತಿಹಾಸದಲ್ಲೇ ಯಾರೂ ಇಂತಹ ದ್ವಂದ್ವಾರ್ಥದ ನಾಟಕವನ್ನು ಮಾಡಿಸಿಲ್ಲ. ಹಳೆಯ ಜೋಕ್ಸ್‌ಗಳನ್ನೇ ಕ್ರ್ಯಾಕ್ ಮಾಡಿ ಅದಕ್ಕೊಂದಿಷ್ಟು ಹಾಡು ನೃತ್ಯ ಸೇರಿಸಿ ನಾಟಕವೆಂದು ಕಟ್ಟಿಕೊಟ್ಟಿಲ್ಲ. ಬಿ.ವಿ.ಕಾರಂತರು ಕಟ್ಟಿದ ರಂಗಾಯಣಕ್ಕೆ ತನ್ನದೇ ಆದ ಘನತೆ ಗೌರವ ಇದೆ. ಅದು ಮಾಡುವ ನಾಟಕಗಳಲ್ಲಿ ಮನರಂಜನೆಯ ಜೊತೆಗೆ ಸಾಮಾಜಿಕ ಕಳಕಳಿ ಮತ್ತು ಬದ್ಧತೆ ಇರುತ್ತದೆ ಹಾಗೂ ಇರಬೇಕು. ರಂಜನೆಯ ಮೂಲಕ ಬೋಧನೆಯನ್ನು ಮಾಡುವ ಉದ್ದೇಶದಿಂದ ರಂಗಾಯಣ ಹುಟ್ಟಿದೆ. ಅಂತಹುದರಲ್ಲಿ ದ್ವಂದ್ವಾರ್ಥಗಳ ನಾಟಕವನ್ನು ಮಾಡಿ ಅಪಹಾಸ್ಯ ತುಣುಕಗಳನ್ನು ಸೇರಿಸಿ ಇದನ್ನೇ ನಾಟಕವೆಂದು ತೋರಿಸುವುದು ರಂಗಭೂಮಿಯಲ್ಲಿ ನಕಾರಾತ್ಮಕ ಪರಿಣಾಮಗಳನ್ನು ಬೀರಬಹುದಾಗಿದೆ. ರಾಜ್ಯಸರಕಾರದ ಅನುದಾನಿತ ರಂಗಾಯಣ ಇಂತಹ ನಾಟಕ ಮಾಡಬಾರದಿತ್ತು ಮಾಡಿದೆ.. ಆದರೆ ಕೇಂದ್ರ ಸರಕಾರದ ಕೃಪಾ ಪೋಷಿತ ಎನ್‌ಎಸ್‌ಡಿ ಬೆಂಗಳೂರು ವಿಭಾಗಕ್ಕೆ ಏನಾಗಿತ್ತು. ದಕ್ಷಿಣ ಭಾರತದ ರಂಗೋತ್ಸವಕ್ಕೆ ಆಯ್ಕೆ ಮಾಡಿ ಒಂದು ಲಕ್ಷ ರೂಪಾಯಿ ಜನತೆಯ ಹಣವನ್ನು ಈ ನಾಟಕ ಪ್ರದರ್ಶನಕ್ಕೆ ಕೊಟ್ಟಿದ್ದಾದರೂ ಯಾಕೆ? ಎನ್ನುವ ಪ್ರಶ್ನೆಯನ್ನು ಈ ನಾಟಕ ಹುಟ್ಟುಹಾಕುತ್ತದೆ.

ಇಂತಹುದೇ ನಕಾರಾತ್ಮಕ ಕಾರಣಗಳಿಂದಾಗಿ ವೃತ್ತಿ ಕಂಪನಿ ರಂಗಭೂಮಿ ತನ್ನ ಪ್ರಭಾವವನ್ನು ಕಡಿಮೆಗೊಳಿಸಿಕೊಂಡಿತು. ವೃತ್ತಿ  ಕಂಪನಿಯ ದೌರ್ಬಲ್ಯಗಳನ್ನು ಕಿತ್ತು ಹಾಕಿ, ಉತ್ತಮ ಅಂಶಗಳನ್ನು ಎತ್ತಿಕೊಂಡು ಅದ್ಭುತವಾದ ನಾಟಕಗಳನ್ನು ಬಿ.ವಿ.ಕಾರಂತರು ಕಟ್ಟಿಕೊಟ್ಟಿದ್ದರು. ಅದೇ ವೃತ್ತಿ ರಂಗಭೂಮಿಯ ದೌರ್ಬಲ್ಯಗಳನ್ನೇ ಪ್ರಮುಖ ವಾಗಿಟ್ಟುಕೊಂಡು ಧಾರವಾಡ ರಂಗಾಯಣವು ನಾಟಕವನ್ನು ನಿರ್ಮಿಸಿದೆ ಎಂದರೆ ಇದು ಕಾರಂತರಿಗೆ ಮಾಡುವ ಅವಮರ್ಯಾದೆಯಾಗಿದೆ. ರಂಗಾಯಣವನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸಲೆಂದೇ ಇರುವ ರಂಗಸಮಾಜದ ಸದಸ್ಯರಾಗಿರುವ ಡಿ.ಎಸ್.ಚೌಗಲೆಯವರೇ ಇಂತಹ ದ್ವಂದ್ವಾರ್ಥಮಯ ಅಪಹಾಸ್ಯದ ನಾಟಕವನ್ನು ಅನುವಾದ ಮಾಡಿ ನಿರ್ಮಾಣ ಮಾಡಲು ಧಾರವಾಡ ರಂಗಾಯಣದ ನಿರ್ದೇಶಕರಾದ ಪ್ರಕಾಶ ಗರೂಡರವರಿಗೆ ಒತ್ತಾಯಿಸಿದ್ದು ವಿಪರ್ಯಾಸಕರವಾಗಿದೆ.

ತಮಾಶ ನಾಟಕದಲ್ಲಿ ಭಾಷೆಯ ಕಲಬೆರಕೆ ಬೇಕಾದಷ್ಟಿದೆ. ನಾಟಕದಾದ್ಯಂತ ಇಂಗ್ಲೀಷ್, ಹಿಂದಿ, ತಮಿಳು, ತೆಲುಗು, ಮರಾಠಿ ಭಾಷೆಯ ಬಳಕೆ ವ್ಯಾಪಕವಾಗಿವೆ. ಅಷ್ಟೇ ಯಾಕೆ ತಮಿಳು ತೆಲುಗು ಸಿನೆಮಾದ ಜನಪ್ರೀಯ ಡೈಲಾಗ್‌ಗಳನ್ನು ಪಾತ್ರಗಳಿಂದ ಹೇಳಿಸಲಾಗಿದೆ. ಹೀಗಾಗಿ ಇದೊಂದು ಬಹುಭಾಷಾ ನಾಟಕ ಎನ್ನುವಂತಾಗಿದೆ. ಕನ್ನಡ ನಾಟಕ ಎಂದು ಹೇಳಿದರೂ ಆರಂಭದ ನಾಚತರಂಗಿಣಿ ನಾಂದಿ ಗೀತೆಯಿಂದ ಹಿಡಿದು ಕೊನೆವರೆಗೂ ಮೂರ‍್ನಾಲ್ಕು ಮರಾಠಿ ಹಾಡುಗಳನ್ನು ಮೂಲ ಭಾಷೆಯ ನಾಟಕದಿಂದ ಯಥಾವತ್ತಾಗಿ ಹಾಡಲಾಗಿದೆ. ಈ ಕನ್ನಡ ನಾಟಕದಲ್ಲಿ ಭಾಷೆಯನ್ನು ಅದೆಷ್ಟು  ಕಲಬೆರಕೆ ಮಾಡಬೇಕೋ ಅಷ್ಟೆಲ್ಲಾ ಮಾಡಲಾಗಿದೆ. ಇಲ್ಲಿ ಪೌರಾಣಿಕ ಪಾತ್ರಗಳೂ ಇಂಗ್ಲೀಷ್ ಶಬ್ಧಗಳನ್ನು ಬಳಸುತ್ತವೆ.  ಭಾಷೆಯ ಬಳಕೆಗೆ ಕಾಲಘಟ್ಟಕ್ಕೂ ಸಂಬಂಧವೇ ಇಲ್ಲದಂತಾಗಿದೆ.

ನಾಟಕದ ವಸ್ತು ವಿಷಯ ಹಾಗೂ ಪ್ರಸ್ತುತಿಯ ಬಗ್ಗೆ ಭಿನ್ನಾಭಿಪ್ರಾಯವಿದ್ದರೂ ಅಭಿನಯ ವಿಭಾಗ ಮಾತ್ರ ಇಡೀ ನಾಟಕದ ಜೀವಾಳವಾಗಿದೆ. ನಗೆ ನಾಟಕಗಳಿಗೆ ಡೈಲಾಗ್ ಪಂಚ್ ಹಾಗೂ ಟೈಮಿಂಗ್ ಬಹಳ ಮುಖ್ಯವಾಗುತ್ತದೆ. ಪ್ರತಿಯೊಬ್ಬ ನಟ ನಟಿಯರೂ ವಾಚಿಕ ಹಾಗೂ ಆಂಗಿಕಾಭಿನಯದಲ್ಲಿ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ. ನಟನೆಯಲ್ಲಿ ಪೋರ್ಸ ಇದೆ. ಮಾತಿನ ಶೈಲಿಯಲ್ಲಿ ತಾಕತ್ತಿದೆ. ಹೀಗಾಗಿ ಈ ನಾಟಕ ನೋಡುಗರನ್ನು ನಗಿಸುವ ತನ್ನ ಉದ್ದೇಶದಲ್ಲಿ ಸಫಲವಾಗಿದೆ.  ನಿರ್ದೇಶಕರು ನಟರನ್ನು ಪಾತ್ರವಾಗಿ ಪಳಗಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ನಾಲ್ಕು ನಟಿಯರಿಗೆ ಮರಾಠಿಯ ತಮಾಶಾ ಶೈಲಿಯ ನೃತ್ಯವನ್ನು ಅದ್ಭುತವಾಗಿ ಸಂಯೋಜನೆ ಮಾಡಲಾಗಿದೆ. ಇಡೀ ನಾಟಕದಲ್ಲಿ ಜೋಕು ಮಾರರನ್ನು ಹೊರತುಪಡಿಸಿ ನೋಡಲೇ ಬೇಕಾದದ್ದು ಏನಾದರೂ ಇದ್ದರೆ ಅದು ನೃತ್ಯವೊಂದೇ. ಕೇಳಲೇ ಬೇಕಾದದ್ದು ಏನಾದರೂ ಇದ್ದರೆ ಅದು ಮರಾಠಿ ವೃತ್ತಿಕಂಪನಿ ಮಾದರಿಯ ಸಂಗೀತವಷ್ಟೇ. ವ್ಯಾಪಕವಾಗಿ ಹಾಡು ಸಂಗೀತವನ್ನು ಬಳಸಲಾಗಿದೆ. ಆದರೆ.. ಕೆಲವೊಮ್ಮೆ ಡೋಲಕ್ಕಿನ ಅಬ್ಬರದಲ್ಲಿ ನಟರ ಮಾತುಗಳೇ ಸಪ್ಪೆಯೆನಿಸುವಂತಿವೆ.

ಮರಾಠಿ ಹಾಡುಗಳನ್ನು ಕನ್ನಡಕ್ಕೆ ಅನುವಾದ ಮಾಡಿದ ರೀತಿ ಊಟದಲ್ಲಿ ಕಲ್ಲು ಬಂದಂತೆ ಭಾಸವಾಗುತ್ತದೆ. ಕಾವ್ಯಮಯವಾಗಿರಬೇಕಾದ ಕೆಲವಾರು ಹಾಡುಗಳು ಗದ್ಯಮಯವಾಗಿದ್ದು ಕೆಟ್ಟದಾದ ರೀತಿಯಲ್ಲಿ ಅನುವಾದ ಮಾಡಲಾಗಿದೆ.  ಉದಾಹರಣೆಗೆ, ಬೆಳಕು ಹರಿದು ಸೂರ್ಯ ನೆತ್ತಿಗೆರ‍್ಯಾನೋ, ಸಂತಿ ಸರ ಸರ ಮುಂದೆ ಹೋತೊ...ಕಿರಿ ಮೈದುನ ಹೊತಗೊಂಡು ಮಲಗಾಯ್ತು, ಹಸಿದ ಕೂಸಿಗ ತೊಟ್ಟಿಲಾಗ ಹಾಕೇನಿ... ಇವು ಪಕ್ಕಾ ಗದ್ಯಮಯ ಮಾತುಗಳು. ಇವನ್ನೇ ಪದ್ಯ ಮಾಡಿದ್ರೆ ಕೇಳಿದವರಿಗೆ ತಿನ್ನುವ ಚಿತ್ರಾನದಲ್ಲೂ ಕಲ್ಲು ಬಂದಂತಾನುಭವ.

ನಾಲ್ಕು ಜನ ಯುವತಿಯರ ವೇಷಭೂಷಣ ನೃತ್ಯ ಒನಪು ವಯ್ಯಾರ ನೋಡುವುದೇ ಒಂದು ಚೆಂದ. ಆದರೆ ಮಹಿಳೆಯರೆಂದರೆ ಪುರುಷರಿಗೆ ಆಕರ್ಷಿಸುವ ಗೊಂಬೆಯಾಗಿಯೇ ಕಾಣುವಂತೆ ಚಿತ್ರಿಸಲಾಗಿದೆ. ನಾಟಕದ ಸ್ಟ್ಯಾಂಡಪ್ ಕಾಮೆಡಿ ವಿಭಾಗದಲ್ಲಿ ತಮಾಶಾ ಕಲಾವಿದೆಯನ್ನು ಮುಟ್ಟಲು, ಇಂಪ್ರೆಸ್ ಮಾಡಲು ಗಂಡು ಪಾತ್ರಗಳೆಲ್ಲಾ ಪರದಾಡುವ ರೀತಿಯೇ ಹಾಗಿದೆ. ಈ ನಾಟಕದ ಕೊನೆಗೆ ಸ್ವತಃ ಖಂಡೋಬ ದೇವರೇ ಬಂಗಾರದಂತಾ ಹೆಂಡತಿ ಇದ್ದರೂ ಇನ್ನೊಬ್ಬಳನ್ನು ಮದುವೆಯಾಗುವ ದೃಶ್ಯವನ್ನು ತೋರಿಸಲಾಗಿದೆ. ದೇವರೆ ಇಷ್ಟಾ ಬಂದಂಗೆ ಮದುವೆಯಾಗುವಾಗ ಹುಲುಮಾನವರಾದ ನಾವು ದೇವರನ್ನು ಅನುಸರಿಸಿದರೆ ತಪ್ಪೇನು ಎನ್ನುವ ತಪ್ಪು ಸಂದೇಶ ಪ್ರೇಕ್ಷಕರಿಗೆ ಬಾರದೇ ಇರದು. ಪುರುಷ ಜನನೇಂದ್ರಿಯವನ್ನು ಬಾಂಬೆಗೆ ಹೋಲಿಸಿ ಮಾಡುವಂತಹ ಬಾಲಿಷವಾದ ಹಾಸ್ಯ ತುಣುಕುಗಳು, ದುರ್ಭಲವಾದ ಅವಾಸ್ತವ ದೃಶ್ಯಗಳು, ಪುಕ್ಕಲು ರಾಜ ತಿಕ್ಕಲು ಸಿಪಾಯಿಗಳ ಅತಿರೇಕದ ಸಂದರ್ಭಗಳು ಇಡೀ ನಾಟಕವನ್ನು ಡೈಲ್ಯೂಟ್ ಮಾಡಿಬಿಟ್ಟಿವೆ. ನಾಟಕದ ಮಧ್ಯದಲ್ಲಿ ರೈತನೊಬ್ಬ ಬಂದು ರಾಜನಲ್ಲಿ ತಮ್ಮ ಗೋಳು ಹೇಳಿಕೊಳ್ಳುವುದು ನಾಟಕದ ಭಾಗವಾಗದೇ ಒತ್ತಾಯದಿಂದ ಆ ದೃಶ್ಯ ತುರುಕಿದಂತಿದೆ.

ಒಂದಿಷ್ಟು ಶೃದ್ದೆ ಸಹನೆ ವಹಿಸಿದ್ದರೆ ತಮಾಶ ನಾಟಕದ ನೃತ್ಯ ಸಂಗೀತ ಶೈಲಿಯನ್ನೇ ಬಳಸಿಕೊಂಡು ಉತ್ತಮ ವಸ್ತುವಿನ್ಯಾಸದ ನಾಟಕವೊಂದನ್ನು ಕಟ್ಟಿ ಕೊಡಬಹುದಾಗಿತ್ತು. ಮನರಂಜನೆಯನ್ನೇ ಪ್ರಮುಖ ವಾಗಿಟ್ಟುಕೊಂಡರೂ ಅದರ ಮೂಲಕವೇ ಸಂದೇಶವನ್ನೂ ಕೊಡಬಹುದಾಗಿತ್ತು. ವೃತ್ತಿ ಕಂಪನಿ ನಾಟಕಗಳು ಅದೆಷ್ಟೇ ಹಾಸ್ಯಮಯವಾಗಿದ್ದರೂ ಅಂತಹ ನಾಟಕದೊಳಗೂ ಸಹ ಸಮಾಜಕ್ಕೆ ಒಂದು ಪ್ರಯೋಜನಕಾರಿ ಸಂದೇಶ ಇದ್ದೇ ಇರುತ್ತಿತ್ತು. ಅದೇ ರೀತಿ ರಂಜನೆಯ ಮೂಲಕವೇ ಆಳುವ ವ್ಯವಸ್ಥೆಯನ್ನು ವಿಡಂಬನಾತ್ಮಕವಾಗಿ ತೋರಿಸಬಹುದಾದ ಎಲ್ಲಾ ಸಾಧ್ಯತೆಗಳೂ ತಮಾಶದಲ್ಲಿ ಇದ್ದವು. ಆದರೆ.. ಅದೂ ಆಗಲಿಲ್ಲ. ಈಗಲೂ ಏನೂ ಆಗಿಲ್ಲ. ನಾಟಕದಾದ್ಯಂತ ಇರುವ ದ್ವಂದ್ವಾರ್ಥ ಸಂಭಾಷಣೆಗಳನ್ನು ತೆಗೆದು ಹಾಕಿ, ಹಾಸ್ಯಕ್ಕಾಗಿಯೇ ಹಾಸ್ಯ ಎನ್ನುವಂತಹ ಹಾಸ್ಯ ತುಣುಕಗಳನ್ನೆಲ್ಲಾ ಬದಿಗಿಟ್ಟು, ನಾಟಕದೊಳಗೆ ಯಾವುದಾದರೂ ವಿಷಯದ ಎಳೆಯನ್ನು ಇಟ್ಟುಕೊಂಡು ದೃಶ್ಯಗಳನ್ನು ಕಟ್ಟುತ್ತಾ ಹೋದರೆ ಒಳ್ಳೆಯ ನಾಟಕವನ್ನು ಕೊಡಬಹುದಾಗಿದೆ. ದೃಶ್ಯಗಳ ನಡುವೆ ಇರುವ ಮಿಸ್ಸಿಂಗ್ ಲಿಂಕ್‌ಗಳನ್ನು ಸರಿಪಡಿಸಿದರೆ, ಅನಗತ್ಯವಾಗಿ ವಿಷಯಾಂತರವಾಗುವುದನ್ನು ತಡೆದರೆ, ಅಸಂಬದ್ದ ಸನ್ನಿವೇಶಗಳನ್ನು ಸುಸಂಬದ್ದಗೊಳಿಸಿದರೆ, ಸಾಧ್ಯವಾದಷ್ಟೂ ಕನ್ನಡ ಭಾಷೆಯ ಬಳಕೆಗೆ ಹೆಚ್ಚು ಒತ್ತುಕೊಟ್ಟರೆ ತಮಾಶ ನಾಟಕವು ರಂಗಾಯಣದ ಆಶಯಕ್ಕೆ ತಕ್ಕಂತೆ ಪ್ರದರ್ಶನಯೋಗ್ಯಗೊಳ್ಳುವುದರಲ್ಲಿ ಸಂದೇಹವಿಲ್ಲ. 

                                                              -  ಶಶಿಕಾಂತ ಯಡಹಳ್ಳಿ      
 




ಗುರುವಾರ, ಏಪ್ರಿಲ್ 28, 2016

ಬರ ಬಂತು ಬರ ..! ಬೀದಿನಾಟಕ ಪ್ರಹಸನ


                      
ದೃಶ್ಯ - 1

(ಎಲ್ಲಾ ಕಲಾವಿದರೂ ಯಾತಕ್ಕೆ ಮಳೆ ಹೋದವೋ ಶಿವಾ ಶಿವಾ ಲೋಕಾ ತಲ್ಲಣಿಸುತಾವೋ ಹಾಡುತ್ತಾರೆ)

ಪುಡಾರಿ :         ಎಲ್ಲರೂ ಕಿವಿಗೊಟ್ಟು ಕೇಳ್ರಿ. ಹಿಂದೆಂದೂ ಬರದಂತಾ ಬರಗಾಲ ಈ ಸಲ ಬಂದೈತೆ. ಬಿಸಿಲು ಕೆಂಡಾ ಕಾರತಿದೆ. ಕುಡಿಯೋದಕ್ಕೆ ನೀರಿಲ್ಲ, ದನಕರುಗಳಿಗೆ ಮೇವಿಲ್ಲ. ಇದೆಲ್ಲಾ ಸರಕಾರಕ್ಕೆ ಗೊತ್ತಾಗಿ ಇನ್ನೂರೈವತ್ತು ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದಾರೆ. ಟ್ಯಾಂಕರನಿಂದಾ ನೀರು ಕೊಡ್ತಾರೆ, ಜಾನುವಾರುಗಳಿಗೆ ಮೇವು ಕೊಡ್ತಾರೆ. ನರೇಗಾ ಯೋಜನೆಯೊಳಗ ಕೆಲಸಾನೂ ಕೊಡ್ತಾರೆ....

ಒಬ್ಬ     :         ಕೆಲಸಾನಾ...? ರೀ ಸ್ವಾಮಿ... ಈಗಾಗಲೇ ಮಾಡಿದ ಕೆಲಸಕ್ಕೆ ಕೂಲಿ ಕೊಟ್ಟಿಲ್ಲಾ.. ಪುಕ್ಸಟ್ಟೆ
                   ದುಡೀಬೇಕೇನು.

ಪುಡಾರಿ  :        ಬರುತ್ತೆ ಬರುತ್ತೆ.. ಬಾಕಿ ಹಣ ಎಲ್ಲಾ ಸಿಗುತ್ತೆ... ಸರಕಾರ ಮನಸ್ ಮಾಡಿದ್ರೆ ಎಲ್ಲಾ ಪರಿಹಾರ
                   ಆಗುತ್ತೆ.

ಮತ್ತೊಬ್ಬ :       ನೀರು ಬೇಕು ನೀರು... ಮನಿಮಂದಿಯೆಲ್ಲಾ ಸ್ನಾನಾ ಮಾಡದ ನಾಲ್ಕು ದಿನಾ ಆಯ್ತು.

ಒಬ್ಬ  :           ಸ್ನಾನಾ ಮಾಡ್ತಾನಂತ ಸ್ನಾನಾ... ಥೂ. ವಾಸನೆ... ಸರಿ ಆಚೆ.. ನಮಗಿಲ್ಲಿ ತೊಳಕೊಳ್ಳಾಕೂ
                   ನೀರಿಲ್ಲಾ.. ಕಲ್ಲಿಂದಾ ವರಿಸಿಕೊಳ್ತಿದ್ದೀವಿ..

ಪುಡಾರಿ :         ಹಾಂ.. ಹಾಂ.. ನಿಮ್ಮ ಸಂಕಟಗಳನ್ನೆಲ್ಲಾ ಕೇಳಿ ಪರಿಹಾರ ಮಾಡ್ಬೇಕಂತಾ ಸ್ವತಃ ನಮ್ಮ ಮಾನ್ಯ
 ಮುಖ್ಯಮಂತ್ರಿಗಳೇ ನಾಳೆ ನಮ್ಮೂರಿಗೆ ಬರ‍್ತಿದ್ದಾರೆ..

ಒಬ್ಬ    :          ಮುಖ್ಯ ಮಂತ್ರಿಗಳು ಬರ‍್ತಾರಾ.. (ಎಲ್ಲರೂ ಅದನ್ನೇ ರಿಪೀಟ್ ಮಾಡಿ ಹೇಳ್ತಾರೆ)

ಪುಡಾರಿ :         ಹೌದು.. ಬನ್ನಿ.. ಎಲ್ಲರೂ ಊರನ್ನ ಸಿಂಗರಿಸೋಣ, ಮುಖ್ಯಮಂತ್ರಿಗಳನ್ನ ಅದ್ದೂರಿಯಿಂದಾ
ಸ್ವಾಗತಿಸೋಣ. ನಮ್ಮ ತಾಪತ್ರಯಗಳನ್ನೆಲ್ಲಾ ಹೇಳಿಕೊಳ್ಳೋಣ. ಏಳ್ರಪ್ಪೋ ಏಳ್ರಿ.. ಟೈಂ ಬಾಳಾ ಕಡಿಮೆ ಐತೆ... ಏಳಿ..;

(ಎಲ್ಲರೂ ಖಷಿಯಿಂದ ಹಾಡಿ ಕುಣಿಯುತ್ತಾ ಊರು ಕೇರಿ ಸಿಂಗರಿಸತೊಡಗುತ್ತಾರೆ)

ದೃಶ್ಯ - 2

(ಅಧಿಕಾರಿಯ ಕಛೇರಿಯಲ್ಲಿ ಗುತ್ತಿಗೆದಾರರ ಸಭೆ )

ಗುತ್ತಿಗೆದಾರ :     ಸಧ್ಯ ಬರ ಬಂತಲ್ಲಾ.. ಆ ದೇವರು ದೊಡ್ಡವನು... ಜೆಸಿಬಿ ಕೊಂಡಕೊಳ್ಳಲಿಕ್ಕೆ  ಮಾಡಿದ ಸಾಲಾ
 ತೀರಿಸಿ ಅಟೋಮ್ಯಾಟಿಕ್ ಬೋರ‍್ವೆಲ್ ಗಾಡಿ ಪರ್ಚೆಸ್ ಮಾಡಬೇಕಂತಾ ಮಾಡೇನಿ ಸಾಹೇಬ್ರೆ..

ಅಧಿಕಾರಿ  :       ಬರಕ್ಕೂ ನಿಮ್ಮ ಸಾಲಕ್ಕೂ ಏನ್ರಿ ಸಂಬಂಧ.

ಗುತ್ತಿಗೆದಾರ :     ಐತೆ.. ಸಂಬಂಧ ಐತೆ... ಬರ ಅಂದ್ರೆ ಜನರಿಗೆ ಶಾಪ ಆದ್ರೆ ನಮ್ಮನಿಮ್ಮಂತೋರಿಗೆ ವರ...
ದೇವ್ರ ಕೊಟ್ಟ ವರ.

ಅಧಿಕಾರಿ  :       ಜನಾ ಕೂಳು ನೀರಿಲ್ಲದೇ ಸಾಯ್ತಿದ್ದಾರೆ. ಇಂತಾದ್ದರಲ್ಲಿ ಇವರಿಗೆ ವರಾ ಅಂತೆ.. ಕೇಳಿದವರು
 ನಗಬಾರದ ಜಾಗದಿಂದ ನಗ್ತಾರೆ.

ಗುತ್ತಿಗೆದಾರ:     ಸಾಯೋವ್ರನ್ನ ಯಾರಾದ್ರು ಬ್ಯಾಡಾ ಅನ್ನೋಕಾಗುತ್ತೇನ್ರಿ. ಮೊದಲು ನಾವು ಬದ್ಕೋ ದಾರಿ
ಕಂಡ್ಕೋಬೇಕ್ರಿ. ಒಬ್ಬರನ್ನ ತುಳ್ದು ಇನ್ನೊಬ್ಬರು ಬದುಕೋದು ಪ್ರಕೃತಿ ಧರ್ಮ ಐತ್ರಿ ಸಾಹೇಬರ. ಗಾಳಿ ಬಿಟ್ಟಾಗ ತೂರಿಕೊಂಡವ್ನ ಜಾಣ ಅಂತಾ ಗಾದಿ ಮಾತು ಕೇಳಿರಿಲ್ರಿ.  ಅಷ್ಟಕ್ಕೂ ಬರಾ ಏನು ವರ್ಷಾ ವರ್ಷಾ ಬರತೈತಾ. ನೀವು ಹೂಂ ಅಂದ್ರ ನಾನು ನೀವು ನಮ್ಮಂತವರೆಲ್ಲಾ ಬದುಕಬಹುದು. ಬರಾ ಅನ್ನೋ ಶಾಪಾನಾ ವರಾ ಮಾಡ್ಕೋಬೋಹ್ದು.

ಅಧಿಕಾರಿ :        ಇವಾಗೇನು ಮಾಡ್ಬೇಕು ಅದನ್ನ ಮೊದಲು ಹೇಳಿ...

ಗುತ್ತಿಗೆದಾರ:     ಹೆ...ಹ್ಹೆ...ಹ್ಹೆ... ಅಂತಾದ್ದೇನಿಲ್ಲ.... ಸರಕಾರ ಬರ ನಿರ್ವಹಣೆಗೆ ಬೇಕಾದಷ್ಟು ಹಣ ಬಿಡುಗಡೆ ಮಾಡಿದೆ.
ಜನರಿಗೆ ಅರ್ಜೆಂಟಾಗಿ ನೀರು, ಜಾನುವಾರುಗಳಿಗೆ ಮೇವು ಒದಗಿಸದಿದ್ದರೆ ಸರಕಾರಕ್ಕೆ ಕೆಟ್ಟ ಹೆಸರು. ಅದಕ್ಕೆ... ಈ ನೀರು ಮೇವು ಸಪ್ಲೈ ಮಾಡೋ ಗುತ್ತಿಗೆ ನನಗೆ ಕೊಡಬೇಕು. ಒಂದಕ್ಕೆರಡು ಪಟ್ಟು ಬಿಲ್ ಬರೀಬೇಕು.. ಒಟ್ಟಾರೆಯಾಗಿ ನಾವು ನೀವು ಸಂದರ್ಭದ ಪಾಯಿದೆ ಪಡೀಬೇಕು.

ಅಧಿಕಾರಿ :        ಆಯ್ತು ಗೊತ್ತಾಯ್ತು.. ನಿಮಗೆ ಹತ್ತು ಹಳ್ಳಿಗೆ ನೀರು ಮೇವು ಸಪ್ಲೈ ಮಾಡೋ ಗುತ್ತಿಗೆ ಕೊಡ್ತೇನೆ.
ಆದರೆ.. ನಮ್ಮ ಪರ್ಸಂಟೇಸ್ ಗೊತ್ತಲ್ಲಾ.. ಯಾಕೆಂದರೆ ಹಣ ಮೇಲಿಂದಾ ಕೆಳಗಿನವರೆಗೂ ಹೆಂಗ ಬರುತ್ತೋ ಹಾಗೇ ವಾಪಸ್ ಕೆಳಗಿನಿಂದ ಮೇಲಿನವರೆಗೂ ಹೋಗಬೇಕು. ಎಲ್ಲಾ ದೇವರಗಳಿಗೂ ಪ್ರಸಾದ ಕೊಟ್ಟು ಪ್ರಸನ್ನಗೊಳಿಸಬೇಕು.

ಗುತ್ತಿಗೆದಾರ :     ಆಯ್ತ್ರೀ ಸರ್.. ಅದೆಲ್ಲಾ ಗೊತ್ತಿರೋದೆ... ಆದರೆ.. ನಮ್ಮ ಬಾವಮೈದನಿಗೂ ಗುತ್ತಿಗೆ ಕೊಡಸಿದ್ರೆ....

ಅಧಿಕಾರಿ :        ನಮಗೆ ಕೊಡೂದು ಕೊಟ್ರೆ ಯಾರಿಗೆ ಬೇಕಾದರೂ ಗುತ್ತಿಗೆ ಕೊಡೋಣ. ಎಲ್ರೂ ಬದುಕೋದು
 ಮುಖ್ಯಾ...

ಗುತ್ತಿಗೆದಾರ :     ಅದಕ್ಕೆ ಹೇಳೂದು ಸಾರ್.. ಸರಕಾರಿ ಕೆಲಸ ದೇವರ ಕೆಲಸಾ ಅಂತಾ. ಎಲ್ಲರೂ ಹರಿದು
                   ಹಂಚಿಕೊಂಡು ತಿನ್ನಬೇಕು ದೇವರು ಕೊಟ್ಟ ವರಪ್ರಸಾದಾನ.

ಅಧಿಕಾರಿ :        ಆಯ್ತು... ನಾಳೆ ಸಿಎಂ ಸಾಹೇಬರು ಬರವೀಕ್ಷಣೆಗೆ ಬರ‍್ತಿದ್ದಾರೆ.. ನಿಮ್ಮ ನೀರಿನ ಟ್ಯಾಂಕರ‍್ಗಳೆಲ್ಲಾ ನೀರು
ತುಂಬಿಕೊಂಡು ಊರು ಕೇರಿಗಳಲ್ಲಿ ಸಿದ್ದವಾಗಿರಬೇಕು. ಮೇವಿನ ಲಾರಿಗಳು ಬಂದು ನಿಂತಿರಿಬೇಕು. ಹಾಂ.. ನರೇಗಾ ಕಾಮಗಾರಿ ಕೆಲಸಾ ಆಗ್ತಿದೆ ಅಂತಾ ತೋರಿಸೋಕೆ ಒಂದಿನ್ನೂರು ಜನ ಕೂಲಿಯಾಳುಗಳನ್ನು ಒಂದು ದಿನದ ಮಟ್ಟಿಗೆ ಕರ‍್ಕೊಂಡು ಬನ್ನಿ... ಸಿ.ಎಂ ಆ ಕಡೆ ಹೋಗೋವರೆಗೂ ಸುಮ್ನೆ ಕೆಲಸಾ ಮಾಡ್ತಿದ್ದಾರೆ ಅಂತಾ ತೋರಿಸಿದ್ರಾಯ್ತು. ನಮ್ದು ನೌಕರಿ ಉಳೀಬೇಕಲ್ರೀ.

ಗುತ್ತಿಗೆದಾರ :     ಅದರ ಚಿಂತಿ ಬಿಡ್ರಿ ಸಾಹೇಬರೆ... ನಾಳೆ ಎಲ್ಲಾ ಸಿದ್ದತೆ ಮಾಡಿರ‍್ತೇನೆ. ಆರಾಮಾಗಿ  ಬನ್ರಿ...


ದೃಶ್ಯ 3

ಪುಡಾರಿ  :        ಮುಖ್ಯ ಮಂತ್ರಿಗಳಿಗೆ

ಎಲ್ಲರೂ  :        ಜೈ  (ಜೈಕಾರಗಳು ಮುಂದುವರೆಯುತ್ತವೆ)

ಸಿಎಂ  :           ನನ್ನ ಪ್ರೀತಿಯ ಮಹಾಜನಗಳೇ. ನೀರು ಆಹಾರ ಕೆಲಸ ಇಲ್ಲದೇ ನೀವೆಲ್ಲಾ ಅನುಭವಿಸುತ್ತಿರುವ
ಸಂಕಟಾ ತಿಳಿದು ನನಗ್ ಬಾಳಾ ಸಂಕಟಾ ಆಯ್ತು. ಅದಕ್ಕೆ ಬೆಳಿಗ್ಗೆ ತಿಂಡೀನೂ ತಿನ್ನದೇ ಹೆಲಿಕ್ಯಾಪ್ಟರಲ್ಲಿ ನಿಮ್ಮನ್ನ ನೋಡಬೇಕು ಅಂತಾ ಓಡೋಡಿ ಬಂದೆ.. ಏನು ಮಾಡೋಕಾಗುತ್ತೆ.. ನಮ್ಮ ಕೈಲಿ ಏನಿದೆ. ಬಂದಿರೋ ಬರಾ ನಿಲ್ಲಿಸೋಕಂತೂ ಆಗೋದಿಲ್ಲ. ಉರಿಯೋ ಸೂರ್ಯಾನ ತಡಿಯೋಕಂತೋ ಬರೋದಿಲ್ಲ. ಆದರ... ಮುಖ್ಯಮಂತ್ರಿಯಾಗಿ ನಿಮಗೆ ನೀರು ಕೆಲಸ ಕೊಡಬಲ್ಲೆ, ನಿಮ್ಮ ಜಾನುವಾರುಗಳಿಗೆ ಮೇವು ಕೊಡಬಲ್ಲೆ. ಈಗಾಗಲೇ ಇದಕ್ಕೆಲ್ಲಾ ವ್ಯವಸ್ಥೆ ಮಾಡಿದ್ದೇನೆ. ನಿಮ್ಮೆಲ್ಲರ ಕೃಪೆ ಆ ದೇವರ ಕರುಣೆ ನಮ್ಮ ಮೇಲಿರುವವರೆಗೂ ಯಾರೂ ನನ್ನ ಅಲ್ಲಾಡಿಸೋಕಾಗೋದಿಲ್ಲ.

ಎಲ್ಲರೂ :         (ಚಪ್ಪಾಳೆ ಹೊಡೆಯುತ್ತಾರೆ. ಖಾಲಿ ಕೊಡ ಹಿಡಿದು ಬಂದ ಹೆಂಗಸರು_

ಮಹಿಳೆ :          ನಮಗೆ ನೀರು ಬೇಕು ನೀರು.. (ಎಲ್ಲರೂ ಬೇಕೆ ಬೇಕು ನೀರು)

ಪುಡಾರಿ :         ಹಾಂ.. ಶಾಂತಿ.. ನೋಡಿ ಅಲ್ಲಿ ನಿಂತಿದೆ ಅಲ್ಲಾ ಟ್ಯಾಂಕರ್ ಅದರಲ್ಲಿದೆ ಬೇಕಾದಷ್ಟು ನೀರು.
ಎಲ್ಲಾ ಉಚಿತ.. ಮುಖ್ಯಮಂತ್ರಿಗೆ .. (ಎಲ್ಲರೂ ಜೈ)

ಒಬ್ಬ   :           ನಮ್ಮ ದನಕರುಗಳಿಗೆ ಮೇವಿಲ್ಲದೇ ಸಾಯ್ತಿದ್ದಾವೆ ಸ್ವಾಮಿ.. ಮೇವು ಬೇಕು ಮೇವು...
(ಎಲ್ಲರೂ ಮೇವು ಬೇಕು ಮೇವು)

ಪುಡಾರಿ :         ಅಲ್ಲಿ ಲಾರಿಗಳಲ್ಲಿ ಬೇಕಾದಷ್ಟು ಮೇವಿದೆ ಹೋಗಿ ತೆಗೆದುಕೊಳ್ಳಿ. ಎಲ್ಲಾ ಪ್ರೀ.. ಪ್ರೀ.. ಮುಖ್ಯಮಂತ್ರಿಗೆ

ಇನ್ನೊಬ್ಬ :    ಮಾಡೋದಿಕ್ಕೆ ಕೆಲಸಾ ಇಲ್ಲಾ ಸ್ವಾಮಿ.. ಊಟಕ್ಕೇನು ಮಾಡೋದು... ಮಕ್ಕಳು ಮರಿ ಉಪವಾಸ ಇದ್ದಾರೆ....ಕೆಲಸಾ ಬೇಕು ಕೆಲಸಾ.. (ಎಲ್ಲರೂ ಕೆಲಸಾ ಬೇಕು ಕೆಲಸಾ)

ಪುಡಾರಿ :      ಅದಕ್ಯಾಕೆ ಚಿಂತೆ ಮಾಡ್ತೀರಿ.. ಅಲ್ಲಿದೆ ಸರಕಾರಿ ಕಾಮಗಾರಿ.. ಹೋಗಿ.. ನಿಮ್ಮ ಕೈಲಾದಷ್ಟು ಕೆಲಸಾ ಮಾಡಿ. ಸರಕಾರ ಕೂಲಿ ಕೊಡುತ್ತೆ...  ಮಾನ್ಯ ಮುಖ್ಯಮಂತ್ರಿಗೆ (ಎಲ್ಲರೂ ಜೈ)

ಮುಖ್ಯಮಂತ್ರಿ :   ಅಕ್ಕ ತಂಗಿಯರೇ , ಅಣ್ಣ ತಮ್ಮಂದಿರೆ.... ನಿಮ್ಮೆಲ್ಲಾ ಕೋರಿಕೆಗಳನ್ನ ಈಡೇರಿಸಲಾಗಿದೆ. ಇನ್ನಾದರೂ
ನೆಮ್ಮದಿಯಾಗಿರಿ. ನಮ್ಮ ಸರಾಕಾರ ಬಡವರ ಪರ ಸರಕಾರ, ನಮ್ಮ ಪಕ್ಷ ರೈತರ ಪರವಾದ ಪಕ್ಷ. ನಿಮ್ಮ ಕಷ್ಟಗಳ ಪರಿಹಾರಕ್ಕೆ ನಾನು ಹಗಲು ರಾತ್ರಿ  ಶ್ರಮಿಸುತ್ತಿರುವೆ. ವಿರೋಧಪಕ್ಷಗಳು ಹೇಳ್ತಾವೆ ನಮ್ಮದು ನಿಷ್ಕ್ರೀಯ ಸರಕಾರ ಎಂದು. ಎಲ್ಲಾ ಸುಳ್ಳು ನೀವೆ ನೋಡಿದ್ರಲ್ಲಾ.. ನಾನೇ ಖುದ್ದಾಗಿ ಬಂದು ನಿಮ್ಮ ಸಮಸ್ಯೆಗಳನ್ನೆಲ್ಲಾ ಬಗೆಹರಿಸಿದೆ. ಕೇಂದ್ರ ಸರಕಾರ ಹಣ ಕೊಡುತ್ತಿಲ್ಲ. ನಾನು ಸರಕಾರದ ವತಿಯಿಂದ ಎಲ್ಲೆಲ್ಲೋ ಸಾಲಾ ಸೋಲಾ ಮಾಡಿ ಹಣ ತಂದು ಜನರ ಬರ ನೀಗಿಸುತ್ತಿದ್ದೇನೆ. ನಿಮ್ಮೆಲ್ಲರ ಬೆಂಬಲ ನಮಗಿರಲಿ. ಬರ ಅಧ್ಯಯನ ಮಾಡಲೆಂದು ಒಂದು ಕಮಿಟಿ ಮಾಡಿದ್ದೇನೆ. ಇಷ್ಟರಲ್ಲೇ ಅದು ವರದಿ ಕೊಡುತ್ತದೆ. ಅದನ್ನು ಜನಹಿತಕ್ಕಾಗಿ ಜಾರಿಗೆ ತರುತ್ತೆನೆಂದು ನಿಮಗೆ ಮಾತುಕೊಡುತ್ತೇನೆ. ಜೈ ಕರ್ನಾಟಕ.

ಅಧಿಕಾರಿ  :       (ಕಿವಿಯಲ್ಲಿ) ಸರ್.. ಬರ ವೀಕ್ಷಣೆ ಮಾಡಬೇಕು.. ರೈತರ ಹೊಲಗಳತ್ತ ಹೋಗೋಣವೇ..

ಮುಖ್ಯಮಂತ್ರಿ:   ರೀ ಇನ್ನೂ ಬೇಕಾದಷ್ಟು ಊರುಗಳಿಗೆ ಬೇಟಿಕೊಡಬೇಕಿದೆ. ಈ ವಿರೋಧ ಪಕ್ಷದವರು ಗಲಾಟೆ
ಮಾಡ್ತಿದ್ದಾರಂತಾ ಈ ಉರಿಬಿಸಲಲ್ಲಿ ಊರು ಕೇರಿ ಸುತ್ತಬೇಕಾಯ್ತು. ಸುಮ್ಕೆ ನಡೀರಿ ಸಂಜೆವೊಳಗೆ ಇನ್ನೂ ಇಪ್ಪತ್ತು ಕಡೆ ಮುಖತೋರಿಸಿ ರಾತ್ರಿ ಡೆಲ್ಲಿಗೆ ಹೈಕಮಾಂಡ್ ನೋಡಲು ಹೋಗಬೇಕು.

ಅಧಿಕಾರಿ :        ಆಯ್ತು ಸರ್... ನಡೀರಿ ಮುಂದಿನ ಊರಿಗೆ.... (ಹಿಂದಿನಿಂದ ಮುಖ್ಯಮಂತ್ರಿಗೆ ಜೈಕಾರದ ಘೋಷಣೆ)


ದೃಶ್ಯ 4

(ಒಂದು ಕಡೆ ಕೆಲವರು ಖಾಲಿ ಕೊಡಗಳನ್ನು ಹಿಡಿದುಕೊಂಡು ಕುಳಿತಿದ್ದಾರೆ. ಇನ್ನು ಕೆಲವರು ಮೇವು ಕೊಂಡಯ್ಯಲು ಬಂದಿದ್ದಾರೆ.ಮತ್ತೆ ಹಲವರು ಕೆಲಸಕ್ಕೆ ಹೋಗಲು ಕಾಯ್ತಿದ್ದಾರೆ. ಇನ್ನೊಂದು ಕಡೆಗೆ ಅಧಿಕಾರಿ, ಪುಡಾರಿ ಗುತ್ತಿಗೆದಾರರು ಬೀರು ಹೀರುತ್ತಾ ಮಾತಾಡುತ್ತಿದ್ದಾರೆ. ಇವೆರಡೂ ದೃಶ್ಯಗಳನ್ನು ಮಾಂಟೇಜ್ ಮಾದರಿಯಲ್ಲಿ ತೋರಿಸಬೇಕು.)

ಒಬ್ಬ     :         (ಈ ಕಡೆ ) ಏನಕ್ಕಾ ನಿನ್ನೆ ತುಂಬಿಕೊಂಡ ನೀರು ಖಾಲಿ ಆಯ್ತಾ.

ಅಧಿಕಾರಿ : ( ಆ ಕಡೆ) ನೀರು ನೀರು ಅಂದ್ರೆ ಎಲ್ಲರಿಗೂ ಎಲ್ಲಿಂದಾ ತಂದುಕೊಡೋದು. ಈ ಜನದ್ದೊಂದು ಒಳ್ಳೇ ಗೋಳು ಕಣ್ರಿ.....

ಮಹಿಳೆ   :        ಹೌದಣ್ಣಾ... ಮತ್ತೆ ನೀರಿನ ಟ್ಯಾಂಕರ್ ಬರುತ್ತೆ ಅಂತಾ ಹೊತ್ತಾರೆಯಿಂದಾ ಕಾಯ್ತಿದ್ದೀನಿ.

ಗುತ್ತಿಗೆದಾರ : ನಾನು ಬಿಲ್ ಪಾಸ್ ಆಗೋದನ್ನೇ ಕಾಯ್ತಿದ್ದೀನೆ. ಸಾಹೇಬರೆ.. ಮೊದಲು ನನ್ನ ನೀರಿನ ಟ್ಯಾಂಕರ್ ಬಿಲ್, ಮೇವಿನ ಲಾರಿ ಬಿಲ್ ರಿಲೀಸ್ ಮಾಡ್ಬಿಡಿ ಸಾಹೇಬರೆ..

ಇನ್ನೊಬ್ಬ  :       ಏನ್ಲಾ ಬಸ್ಯಾ ದೊಡ್ಡ ಹಗ್ಗಾನೇ ತಂದಿದ್ದೀ....

ಅಧಿಕಾರಿ : ಅದೇನಿದು ಇಷ್ಟು ದೊಡ್ಡ ಬಿಲ್ ತಗೊಂಡು ಬದ್ದಿದ್ದೀರಿ. ಆದರೆ ಸಪ್ಲೈ ಮಾಡಿದ್ದು ಕಡಿಮೆ.. ಬಿಲ್ಲಲ್ಲಿ ಮಾತ್ರ ಸಿಕ್ಕಾಪಟ್ಟೆ ಲೆಕ್ಕಾ ತೋರ‍್ಸಿದ್ದೀರಲ್ರಿ...

ಮತ್ತೊಬ್ಬ  :      ಹೌದು ಕಣ್ಲಾ ನಿನ್ನೆ ಮೇವು ಸ್ವಲ್ಪಾನೇ ತಕ್ಕೊಂಡೋದೆ. ಇವತ್ತು ಜಾಸ್ತಿ ಕಟ್ಟಕೊಂಡು ಹೋಗೋಣಾ ಅಂತಾ ಹಗ್ಗಾ ದೊಡ್ಡದೇ ತಂದೀವ್ನಿ...

ಗುತ್ತಿಗೆದಾರ : ನೀವೆ ಹೇಳದ್ರಲ್ಲಾ ಸಾಹೇಬ್ರೆ... ಮೇಲಿಂದ ಕೆಳಗೆ ಬಂದ ಸರಕಾರಿ ಹಣಾ ಮತ್ತೆ ಕೆಳಗಿಂದ ಮೇಲಿನವರೆಗೂ ಹೋಗಬೇಕಂತಾ. ಅದಕ್ಕೆ ದೊಡ್ಡ ಬಿಲ್ಲೇ ತಂದೀನಿ. ನಿಮ್ಮ ಪಾಲು ಸೇರಿಸಿ...

ಒಬ್ಬ    :          ಏನ್ರಪಾ ಗುದ್ದಲಿ ಸನಿಕಿ ತಗೊಂಡು ಎಲ್ಲಿಗೆ ಹೊಂಟ್ರಿ.

ಪುಡಾರಿ : ಎಲ್ಲಿಗೆ ಹೋಗ್ರಿದ್ದೀರಿ ಇರಿ ಸಾಹೇಬರೆ.. ಸರಕಾರಿ ಕಾಮಗಾರಿ ಬಿಲ್ ಪಾಸ್ ಮಾಡಿ ಹೋಗಿ...

ಮತ್ತೊಬ್ಬ :     ಅದೇ ಸರಕಾರಿ ಕಾಮಗಾರಿ ಕೆಲಸಕ್ಕಪ್ಪೋ. ಸುಮ್ಮನೆ ಕೂತೇನು ಮಾಡೋದು.. ಬರೋವಷ್ಟಾದ್ರೂ ರೊಕ್ಕ ಬರ‍್ಲಿ ಅಂತಾ.

ಅಧಿಕಾರಿ : ನಿಮ್ಮ ರೊಕ್ಕ ಸಿಕ್ಕುತ್ತೆ. ಚಿಂತೆ ಮಾಡಬಾಡ್ರಿ.. ನಾವಿರೋದಿನ್ಯಾಕೆ..  ಮೊದಲು ಬೀರ್ ಕುಡೀರಿ ಆಮೇಲೆ ನೀರು ಮೇವು ಕಾಮಗಾರಿ ಬಿಲ್ ಬಗ್ಗೆ ಮಾತಾಡೋಣ, ಇರಿ ಟೀವಿಯಲ್ಲಿ ಏನೋ ಸುದ್ದಿ ಬರ‍್ತಿದೆ...

ಇನ್ನೊಬ್ಬ :      ಏನ್ಲಾ ಅದು ರಾಮ್ಯಾ... ರೇಡಿಯೋ ಜೋರು ಮಾಡು.. ಏನೋ ವಾರ್ತಾ ಬರ‍್ತಿದೆಯಲ್ಲಾ ಕೇಳು... ಪರಿಹಾರ ಗಿರಿಹಾರ ತಗೊಂಡು ಬರ‍್ತಾರೇನೋ ಕೇಳೋಣ...

ರೇಡಿಯೋ ವಾರ್ತೆ : ಬರ ಅಧ್ಯಯನ ಸಚಿವ ಸಂಪುಟ ಉಪಸಮಿತಿಯು ತನ್ನ ವರದಿಯನ್ನು ಸರಕಾರಕ್ಕೆ ಕೊಟ್ಟಿದ್ದು
ರಾಜ್ಯದಲ್ಲಿ ಬರವೆಂಬುದು ಇಲ್ಲವೆಂದು ಹೇಳಲಾಗಿದೆ. ಒಂದಿಷ್ಟು ಬಿಸಿಲು ಮಾತ್ರ ಹೆಚ್ಚಾಗಿದೆ.. ಬೇಸಿಗೆ ಎಂದ ಮೇಲೆ ಬಿಸಿಲು ಝಳ ಇದ್ದೇ ಇರುತ್ತದೆ.. ಇದಕ್ಕೆ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮೀಣಾಭಿವೃದ್ದಿ ಮಂತ್ರಿಗಳು ಬರ ಎನ್ನುವುದೆಲ್ಲಾ ಸುಳ್ಳು.. ಬಿಸಿಲನ್ನೇ ಬರ ಎಂದುಕೊಂಡು ವಿರೋಧಪಕ್ಷದವರು ಹುಯಿಲೆಬ್ಬಿಸುತ್ತಿದ್ದಾರೆಂದು ಸ್ಪಷ್ಟೀಕರಣ ನೀಡಿದ್ದಾರೆ...

ಗುತ್ತಿಗೆದಾರ : ಏನ್ರಿ ಸಾಹೇಬರ.. ಬರಾನೇ ಇಲ್ಲಾ ಅಂತಾ ವರದಿ ಕೊಟ್ಟಿದ್ದಾರೆ.. ನಮ್ಮ ಹೊಟ್ಟಿ ಮ್ಯಾಲೆ ಹೊಡೀತಿದ್ದಾರೆ. ಬರಾ ಇಲ್ಲಾ ಅಂದ್ರೆ ಅದನ್ನೇ ನಂಬಿಕೊಂಡ ನಮ್ಮಂತಾ ಗುತ್ತಿಗೆದಾರರು ಎಲ್ಲಿ ಹೋಗಿ ಸಾಯ್ಬೇಕು..

ಒಬ್ಬ    :          ಯಾವನ್ಲಾ ಅವನು ಅಡ್ಡಕಸಬಿನನ್ನ ಮಗಾ, ನಾವಿಲ್ಲಿ ನೀರು ಊಟಾ ಇಲ್ಲದೇ ಸಾಯ್ತಿದ್ದೀವಿ. ನಮ್ಮ
                   ಕಣ್ಣ ಮುಂದೆ ನಮ್ಮ ದನಗಳು ಸೊರಗಿ ಹಂಚಿಕಡ್ಡಿ ಆಗ್ತಿದ್ದಾವೆ. ಬರಾ ಇಲ್ಲಂತೆ ಬರಾ...

ಅಧಿಕಾರಿ : ಬರಾ ಇಲ್ಲಾ ಅನ್ನೋದು ರಾಜಕೀಯ ಸ್ಪಂಟ್ ಅಷ್ಟೇ. ವಿರೋಧಪಕ್ಷದವರ ಬಾಯಿ ಮುಚ್ಚಿಸಬೇಕಲ್ಲಾ ಅದಕ್ಕೆ ಈ  ಎಲ್ಲಾ ನಾಟಕ ನೀವೇನು ಚಿಂತೆ ಮಾಡ್ಬೇಡಿ ನಿಮ್ಮ ಬಿಲ್ ಪಾಸ್ ಮಾಡಿಸ್ತೇನೆ.

ಇನ್ನೊಬ್ಬ :        ಎಸಿ ಕಾರು, ಎಸಿ ರೂಮ್‌ನಲ್ಲಿ ಇರೋ ಜನರಿಗೆ ಬರ ಅದೆಂಗೆ ಕಾಣ್ತದೋ ಮಾವಾ.. ಇನ್ನೂ ಈ ನೀರಿನ ಟ್ಯಾಂಕರ್ , ಮೇವಿನ ಲಾರಿ ಯಾಕ ಬರಲಿಲ್ಲಾ... ಕಾಮಗಾರಿ ನಡೆಸೋರು ಬಂದಿಲ್ಲಾ...

ಪುಡಾರಿ : ಏನಾದರೂ ಮಾಡ್ರಿ ಸಾಹೇಬರ.. ಕಾಮಗಾರಿ  ಬಿಲ್ ಪಾಸ್ ಮಾಡ್ರಿ. ಹಗಲು ರಾತ್ರಿ  ನಮ್ಮ ಜೆಸಿಬಿಗಳು ಕೆಲಸ ಮಾಡಿ ಕೆರೆ ಹೂಳೆತ್ತಿದ್ದಾವೆ. ಕೂಲಿ ಕೆಲಸಾ ಮಾಡೋರನ್ನ ನಾನು ನೋಡ್ಕೋತೇನೆ...

ವ್ಯಕ್ತಿ    :           ನೀವಿಲ್ಲಿ ಕಾಯ್ತಾ ಕೂತಿದ್ದೀರಿ. ಆದರೆ.. ಮುಂದಿನ ಊರಲ್ಲಿ ವಿರೋಧ ಪಕ್ಷದ ನಾಯಕರು ಬರವೀಕ್ಷಣೆಗೆ
ಬಂದಿದ್ದಾರಂತೆ ಕಣ್ರನ್ನಾ. ಟಾಂಕರ್‌ಗಳು ಲಾರಿಗಳು ಅಲ್ಲಿಗೆ ಹೋಗಿದ್ದಾವಂತೆ.. ಇನ್ನೆಲ್ಲಿ ನೀರು.. ಇನ್ನೆಲ್ಲಿ ಮೇವು...

                    ಅಧಿಕಾರಿ : ಆಯ್ತು... ನಿಮ್ಮ ಬಿಲ್ ಪಾಸ್ ಆಗುತ್ತೆ.. ನಾಳೆಯಿಂದ ವಿರೋಧ ಪಕ್ಷದ ನಾಯಕರ
ಬರವೀಕ್ಷಣೆ ಶುರುವಾಗ್ತಿದೆ. ಅವರು ಎಲ್ಲೆಲ್ಲಿ ಹೋಗ್ತಾರೋ ಅದಕ್ಕಿಂತಾ ಮೊದಲು ನೀವು ಹೋಗಿ ನೀರು, ಮೇವು, ಕೆಲಸ ರೆಡಿ ಮಾಡಿರ‍್ಬೇಕು... ಹಣದ ಚಿಂತಿ ಬ್ಯಾಡಾ... ವಿರೋಧ ಪಕ್ಷದವರ ಬಾಯಿ ಮುಚ್ಚಿಸ್ಬೇಕು..

ಮಹಿಳೆ :         ಇವರ್ ಮನೆ ಹಾಳಾಗಾ... ಇವರಿಗೆ ಬರಬಾರದ್ ಬರಾ... ನೀರು ಬರ‍್ತದೆ ಅಂತಾ ಮನೇಲಿರೋ ನೀರನ್ನೆಲ್ಲ ಬಳಕೆ ಮಾಡಿದ್ದಾಯ್ತು. ಅಯ್ಯೋ ಶಿವನೆ... ಕೂಸುಕಂದಮ್ಮಗಳಿಗೆ ಕುಡಿಯೋದಕ್ಕೂ ನೀರಿಲ್ಲವಲ್ಲೋ ಶಿವನೇ....

ಗುತ್ತಿಗೆದಾರ : ನೀರು ಮೇವಿನ ಚಿಂತಿ ಬಿಡಿ ಸಾಹೇಬ್ರೆ... ಇಂತಾದ್ದೆಲ್ಲಾ ನಮಗೆ ನೀವು ಹೇಳಿಕೊಡಬೇಕಾ... ನಡೀರಿ ಹೋಗೋಣು... ಹುಚ್ಚು ಮುಂಡೆ ಮದುವೇಲಿ ಉಂಡೋಣೆ ಜಾಣ ಅನ್ನೂದನ್ನ ನಿಜಾ ಮಾಡೋಣು. 

ಒಬ್ಬ   :           ಮೇವಿಲ್ಲದೇ ಆಕಳು ಅಂಬೋ ಅಂತಿದ್ದಾವೆ..ಅವುಗಳ ಗೋಳು ನೋಡೋಕಾಗ್ತಿಲ್ಲ. ಇವತ್ತು
                   ತಗೊಂಡೋಗಿ ಸಂತೇಲಿ ಮಾರಿಬರ‍್ತೀನಿ...

ಇನ್ನೊಬ್ಬ :        ನೀನೇನೋ ಮಾರ‍್ತಿಯಾ.. ಆದರೆ ತಗೋಳ್ಳೋರು ಯಾರು? ಎಲ್ಲಾ ರೈತರು ನಮ್ಮಂಗೆ ಕಂಗಾಲಾಗವ್ರೆ. ಕಟಕರು ಸಹ ಗೋವು ಕೊಂಡುಕೊಳ್ಳೋದಿಲ್ಲ. ಗೋಹತ್ಯೆ ಮಾಡ್ತಾರೆ ಅಂತಾ ಹೇಳಿ ಕೊಂಡುಕೊಂಡವರನ್ನೇ ಸಾಯಿಸೋ ಜನಾ ಹುಟ್ಟಿಕೊಂಡವ್ರೇ.

ಮತ್ತೊಬ್ಬ :       ಏನಪ್ಪಾ ಮಾಡೋದು ಶಿವನೇ... ಯಾರನ್ನ ನಂಬೋದು.... ಯಾರನ್ನ ಬಿಡೋದು...

ತಾತ    :         ನೀರು... ನೀರು.. ( ಎನ್ನುತ್ತಾ ಬಸವಳಿದು ಕೆಳಗೆ ಬೀಳುತ್ತಾನೆ)

ಒಬ್ಬ    :          ಯಾರಾದ್ರೂ ಅಜ್ಜನಿಗೆ ಕುಡಿಯೋ ನೀರು ಕೊಡ್ರಪ್ಪಾ...

ಇನ್ನೊಬ್ಬ :     ನೀರು ಯಾರತ್ರ ಇದೆ ಕಾಕಾ... ಟ್ಯಾಂಕರ್ ಬರುತ್ತೆ ಅಂತಾ ಎಲ್ರೂ ನೀರು ಬಳಕೆ ಮಾಡಿ ಖಾಲಿ ಕೊಡಗಳನ್ನ ತಂದಿದ್ದಾರೆ ನೋಡು.

ತಾತ    :         ನೀರು... ನೀರು.... (ಅನ್ನುತ್ತಲೇ ಅಸುನೀಗುತ್ತಾನೆ.)

(ಕೆಲವರು ಆತನನ್ನು ಹೊತ್ತುಕೊಂಡು ಒಂದು ಸುತ್ತು ಹಾಕುತ್ತಾರೆ. ಕಾಲಿ ಕೊಡಗಳು ಹಿಂಬಾಲಿಸುತ್ತವೆ.
ಬಾಕಿಯವರೆಲ್ಲಾ ಯಾತಕ್ಕೆ ಮಳೆ ಹೋದವೋ ಶಿವ ಶಿವಾ ಲೋಕ ತಲ್ಲಣಿಸುತಾವೆ.. ಎಂದು ಹಾಡು ಹಾಡುತ್ತಾ
ನೋವಿನಿಂದ ಹೋಗುತ್ತಾರೆ. ನಾಟಕ ಮುಗಿಯುತ್ತದೆ)

                         - ಶಶಿಕಾಂತ ಯಡಹಳ್ಳಿ
 
  





         








ಶುಕ್ರವಾರ, ಏಪ್ರಿಲ್ 22, 2016

ಅಭಿವ್ಯಕ್ತಿ ಸ್ವಾತಂತ್ರ್ಯ ದಮನ ಮತ್ತು ರಂಗಭೂಮಿಯ ಪ್ರತಿರೋಧ :


ಅಚ್ಚೇ ದಿನ್ ಎಲ್ಲಿ  ಬೀದಿ ನಾಟಕದ ದೃಶ್ಯ
ರಂಗಭೂಮಿ ಎನ್ನುವುದು ಮೂಲಭೂತವಾಗಿ ಪ್ರತಿಭಟನಾ ಮಾಧ್ಯಮ. ಮನರಂಜನೆಯ ಜೊತೆ ಜೊತೆಗೆ ಸಾಮಾಜಿಕ ಸಮಸ್ಯೆಗಳಿಗೆ ತನ್ನದೇ ಆದ ಪ್ರತಿರೋಧವನ್ನು  ತೋರಿಸುತ್ತಾ ಜನರನ್ನು ಜಾಗೃತಿಗೊಳಿಸುವ ಕೆಲಸವನ್ನು ರಂಗಭೂಮಿ ಕಾಲಕಾಲಕ್ಕೆ ಮಾಡುತ್ತಲೇ ಬಂದಿದೆ. ಬ್ರಿಟಿಷ್ ಆಡಳಿತದ ಸರ್ವಾಧಿಕಾರ ಇದ್ದಾಗಲೂ ಸಹ ಸ್ವಾತಂತ್ರ್ಯದ ಕುರಿತು ಅರಿವನ್ನು ಹಾಗೂ ಸಾಮ್ರಾಜ್ಯಶಾಹಿಗಳ ಶೋಷಣೆಯನ್ನು ನಾಟಕದ ಭಾಗವಾಗಿ ವೃತ್ತಿ ಕಂಪನಿ ನಾಟಕಗಳು ತೋರಿಸುತ್ತಿದ್ದವು. ನಾಟಕದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬ್ರಿಟೀಷ್ ಆಡಳಿತ ಸಂಪೂರ್ಣವಾಗಿ ಕಿತ್ತುಕೊಂಡು ವೃತ್ತಿ ಕಂಪನಿ ನಾಟಕಗಳ ಮೇಲೆ ಅನೇಕಾನೇಕ ನಿರ್ಬಂಧಗಳನ್ನು ಹೇರಿತ್ತು. ಆದರೂ ಕೆಲವು ದೇಶಾಭಿಮಾನಿಯಾಗಿದ್ದ ನಾಟಕ ಕಂಪನಿಗಳ ಮಾಲೀಕರುಗಳು ಸ್ವಾತಂತ್ರ್ಯ ಹೋರಾಟಕ್ಕೆ ಪ್ರೆರೇಪಣೆಯಾಗುವಂತಹ ದೃಶ್ಯಗಳನ್ನು ಹಾಗೂ ದೇಶಪ್ರೇಮದ ಸಂಭಾಷಣೆಗಳನ್ನು ತಮ್ಮ ನಾಟಕಗಳಲ್ಲಿ ಸೇರಿಸುತ್ತಿದ್ದರು. ಇದನ್ನು ತಮ್ಮ ಗೂಢಚಾರರಿಂದ ತಿಳಿದ ಬ್ರಿಟೀಷ್ ಪರ ಅಧಿಕಾರಿಗಳು ಕೆಲವಾರು ನಾಟಕ ಕಂಪನಿಗಳ ಪ್ರದರ್ಶನಾ ಪರವಾನಿಗೆಯನ್ನೇ ರದ್ದುಪಡಿಸಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಪ್ರಯತ್ನಿಸಿದ್ದು ಭಾರತದ ಸ್ವಾತಂತ್ರ್ಯಪೂರ್ವ ಚರಿತ್ರೆಯಲ್ಲಿ ದಾಖಲಾಗಿವೆ.

ಆಂಗ್ಲರ ವಸಾಹತುಶಾಹಿ ಆಡಳಿತ ಕೊನೆಗೊಂಡು ಭಾರತೀಯರ ಆಳ್ವಿಕೆಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯೊಂದು ಅಸ್ತಿತ್ವಕ್ಕೆ ಬಂದರೂ ಆಳುವ ವರ್ಗಗಳು ಕಾಲಕಾಲಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಲೇ ಬಂದಿವೆ. ಆಡಳಿತ ವಿರೋಧಿ ಪ್ರತಿಭಟನಾತ್ಮಕ ರಂಗಚಟುವಟಿಕೆಗಳನ್ನು ಮಟ್ಟಹಾಕಲು ಪ್ರಯತ್ನಿಸುತ್ತಲೇ ಬಂದಿವೆ. ಕಾಂಗ್ರೆಸ್ ಪಕ್ಷದ ಗೂಂಡಾ ಪಡೆ 1989 ಜನವರಿ 2 ರಂದು ರಂಗಕರ್ಮಿ ಸಪ್ದರ್ ಹಷ್ಮಿಯವರನ್ನು ಬೀದಿನಾಟಕ ಮಾಡುತ್ತಿರುವಾಗಲೇ ಮಾರಣಾಂತಿಕ ಹಲ್ಲೆ ಮಾಡಿ ನಡುಬೀದಿಯಲ್ಲೇ ಕೊಂದು ಹಾಕಿದರು. ಪ್ರಸನ್ನನವರ ನಿರ್ದೇಶನದಲ್ಲಿ ಸಮುದಾಯ ಸಂಘಟನೆಯು ಬೆಂಗಳೂರಿನ ಜಯನಗರದ ಕಾಂಪ್ಲೆಕ್ಸಲ್ಲಿ  ಇಂದಿರಾಗಾಂಧಿ ಕೃಪಾಪೋಷಿತ ನಾಟಕ ಮಂಡಳಿ ಎನ್ನುವ ಬೀದಿ ನಾಟಕ ಮಾಡುವಾಗ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮೈಕ್ ಕಿತ್ತೆಸೆದು ದೊಡ್ಡ ಗಲಾಟೆ ಮಾಡಿ ನಾಟಕ ನಿಲ್ಲಿಸಿದ್ದರು. ಚಂದ್ರಶೇಖರ್ ಪಾಟೀಲರವರ ಜಗನ್ಮಾತೆ... ಬೀದಿನಾಟಕಕ್ಕೆ ಬೇಕಾದಷ್ಟು ಪ್ರತಿರೋಧಗಳು ಬಂದವು. ಎಸ್. ಮಾಲತಿಯವರು ತಮ್ಮ ನಾಟಕ ಪ್ರದರ್ಶನದ ಮುನ್ನ ಭಾಷಣ ಮಾಡುವಾಗ ಕಲ್ಲುಗಳು ತೂರಿಬಂದವು. ಸ್ಥಾಪಿತ ಹಿತಾಸಕ್ತಿಗಳಿಂದಾಗಿ ಒಂದಲ್ಲ ಎರಡಲ್ಲಾ ಇಂತಹ ಅನೇಕ ಘಟನೆಗಳು ನಡೆದಿವೆ. 

ಆಳುವ ವರ್ಗದ ಶೋಷಣೆಯ ವಿರುದ್ಧ ಜನಜಾಗೃತಿಯಲ್ಲಿ ತೊಡಗಿದ ಬಹುತೇಕ ರಂಗಸಂಘಟನೆಗಳು ಆಳುವ ಪಕ್ಷಗಳ ದಬ್ಬಾಳಿಕೆಯನ್ನು ಎದುರಿಸಿಕೊಂಡೇ ಬಂದಿವೆ. ಸಾಹಿತಿ ಕಲಾವಿದರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹರಣ ಮಾಡುವಲ್ಲಿ ಎಲ್ಲಾ ಪಕ್ಷಗಳ ಹಾಗೂ ಮತೀಯ ಶಕ್ತಿಗಳ ಕೊಡುಗೆಯೂ ಬೇಕಾದಷ್ಟಿದೆ. ಮತೀಯವಾದಿ ಶಕ್ತಿಗಳು ಹಲವಾರು ಬಾರಿ ಸಮುದಾಯ ಸಾಂಸ್ಕೃತಿಕ ಸಂಘಟನೆ ಬೀದಿ ನಾಟಕ ಮಾಡುವಾಗ ಗಲಾಟೆ ಮಾಡಿವೆ. ಆನೇಕಲ್ಲಿನಲ್ಲಿ 1998ರಲ್ಲಿ ಸಮುದಾಯದ ಕಲಾವಿದರು ಟಿಪು ಜನ್ಮಶತಮಾನೋತ್ಸವ ಜಯಂತಿ ಜಾತಾದ ಭಾಗವಾಗಿ  ಬೀದಿನಾಟಕ ಪ್ರದರ್ಶನ ಹಮ್ಮಿಕೊಂಡಾಗ ಲೋಕಲ್ ಆರ್‌ಎಸ್‌ಎಸ್ ಸಂಘಟನೆಯ ಕೆಲವಾರು ಗೂಂಡಾಗಳು ಕಲಾವಿದರುಗಳ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದರು. ಸಮುದಾಯದ ಗುಂಡಣ್ಣನವರ ವೇಷ ಹಾಗೂ ದಾಡಿ ನೋಡಿ ಅವರನ್ನು ಮುಸ್ಲಿಂ ಎಂದುಕೊಂಡು ಚಾಕುವಿನಿಂದ ತೀವ್ರವಾಗಿ ಹಲ್ಲೆ ಮಾಡಿ ಕೊಲ್ಲಲು ಪ್ರಯತ್ನಿಸಿದ್ದರು.  ತಲೆ ಸೀಳಿ ದೇಹವೆಲ್ಲಾ ತೀವ್ರವಾಗಿ ರಕ್ತ ಹರಿಯುತ್ತಿದ್ದರೂ ಕೊನೆಯ ಕ್ಷಣದ ಸಮಯಪ್ರಜ್ಞೆಯಿಂದ ಗುಂಡಣ್ಣನವರು ಅದು ಹೇಗೋ ತಪ್ಪಿಸಿಕೊಂಡು ಜೀವ ಉಳಿಸಿಕೊಂಡರು. ಒಂಚೂರು ಹೆಚ್ಚುಕಡಿಮೆ ಯಾಗಿದ್ದರೂ ಗುಂಡಣ್ಣ  ಕರ್ನಾಟಕದ ಸಫ್ದರ್ ಹಷ್ಮಿಯಾಗಿ ಹುತಾತ್ಮರಾಗಿಬಿಡುತ್ತಿದ್ದರು.  ಹಲ್ಲೆ ನಡೆದ ಒಂದೆರಡು ದಿನಗಳ ನಂತರ ಗಿರೀಶ್ ಕಾರ್ನಾಡಾದಿಯಾಗಿ ಬೆಂಗಳೂರಿನ ಹಲವಾರು ರಂಗಕರ್ಮಿಗಳು ಹಲ್ಲೆ ನಡೆದ ಜಾಗಕ್ಕೆ ಹೋಗಿ ಬಹಿರಂಗ ಸಭೆಯನ್ನು ಮಾಡಿ ಅದೇ ಬೀದಿ ನಾಟಕವನ್ನು ಪ್ರದರ್ಶಿಸಿ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಮಾಡಲು ಬಯಸಿದ ಗೂಂಡಾ ಪಡೆಗಳಿಗೆ ಸಂಘಟಿತ ಪ್ರತಿಭಟನೆಯನ್ನು ಸಲ್ಲಿಸಿದ್ದರು. ಆಳುವ ರಾಜಕೀಯ ಪಕ್ಷಗಳು ಹಾಗೂ ಕೋಮುಶಕ್ತಿಗಳಿಂದ ಅನೇಕ ಬಾರಿ ರಂಗಭೂಮಿ ಆಘಾತವನ್ನು ಅನುಭವಿಸಿದೆ ಮತ್ತು ಒಂದಾಗಿ ನಿಂತು ದುಷ್ಟ ಶಕ್ತಿಗಳ ವಿರುದ್ಧ ತೀವ್ರ ಪ್ರತಿಭಟನೆಯನ್ನು ವ್ಯಕ್ತಪಡಿಸಿದೆ. ೆ

ಎಂಬತ್ತರ ದಶಕದಲ್ಲಿ ಧಾರವಾಡದಲ್ಲಿ ಸಮುದಾಯ ನಿರ್ಮಿಸಿ ಶಿವಪ್ರರಕಾಶರವರು ರಚಿಸಿದ ಮಹಾಚೈತ್ರ ನಾಟಕದ ಪ್ರದರ್ಶನವನ್ನು ಆಯೋಜಿಸಿದ್ದರು. ಅದು ಆರಂಭವಾಗುವ ಸಮಯಕ್ಕೆ ಸರಿಯಾಗಿ ಎರಡು ಸಾವಿರಕ್ಕೂ ಮಿಕ್ಕಿ ಬಸವಪೀಠದ ಭಕ್ತರು ರಂಗಮಂದಿರದ ಮೇಲೆ ಸಂಘಟಿತ ದಾಳಿ ಮಾಡಿದರು. ಈ ನಾಟಕದ ನಿರ್ದೇಶಕರಾದ ವಾಲ್ಟರ್ ಡಿಸೋಜಾರವರನ್ನೂ ಸೇರಿದಂತೆ ಕಲಾವಿದರ ಮೇಲೆ ಹಲ್ಲೆಮಾಡಿ ನಾಟಕ ಪ್ರದರ್ಶನವನ್ನು ಬಲವಂತವಾಗಿ ನಿಲ್ಲಿಸಿ ರಂಗಾಭಿವ್ಯಕ್ತಿಯ ಕೊಲೆ ಮಾಡಿದರು. ಮರುದಿನ ಪ್ರಸನ್ನರವರ ನೇತೃತ್ವದಲ್ಲಿ ಧಾರವಾಡದಲ್ಲಿ ಬ್ರಹತ್ ಪ್ರತಿಭಟನೆ ಆಯೋಜಿಸಿ ಲಿಂಗಾಯತ ಕೋಮಿನ ಮೂಲಭೂತವಾದಿಗಳ ಮುಖವಾಡವನ್ನು ಬೆತ್ತಲುಗೊಳಿಸಲು ಪ್ರಯತ್ನಿಸಲಾಯಿತು.    

ಆಳುವ ವರ್ಗಗಳು, ರಾಜಕೀಯ ಪಕ್ಷಗಳು, ಜಾತಿ ಹಾಗೂ ಧರ್ಮಗಳ ಅಂಧಾನುಯಾಯಿಗಳು ನಾಟಕ ಹಾಗೂ ಬೀದಿನಾಟಕಗಳ ಮೇಲೆ ಹಲ್ಲೆ ಮಾಡಿ ರಂಗಾಭಿವ್ಯಕ್ತಿಯನ್ನು ದಮನಿಸಲು ಪ್ರಯತ್ನಿಸಿದ್ದಕ್ಕೆ ರಂಗಭೂಮಿ ಸಾಕ್ಷಿಯಾಗಿದೆ. ಹೂಲಿ ಶೇಖರವರು ರಚಿಸಿ ನಿರ್ದೇಶಿಸಿದ್ದ ಕಲ್ಯಾಣ ಕ್ರಾಂತಿ ನಾಟಕ ಪ್ರದರ್ಶನ ನಿಲ್ಲಿಸಲು  ಲಿಂಗಾಯತ ಸಮುದಾಯದ ಕೆಲವರು ಧಾರವಾಡದಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರಕ್ಕೆ ಬಂದು ಲಗ್ಗೆ ಹಾಕಲು ಪ್ರಯತ್ನಿಸಿದರು. ಆಗ ಸ್ವತಃ ಲಂಕೇಶರವರು ಹಾಗೂ ರಂಗಸಂಪದದ ಜೆ.ಲೊಕೇಶರವರು ಕಲಾಕ್ಷೇತ್ರದ ಮುಖ್ಯ ಬಾಗಿಲಿಗೆ ಕಾವಲಾಗಿ ನಿಂತು ಉದ್ರಿಕ್ತರನ್ನು ಒಳಗೆ ಹೋಗದಂತೆ ತಡೆದಿದ್ದರು. ಎರಡು ತಿಂಗಳ ಹಿಂದೆಯೇ ಬಿಜಾಪುರದಲ್ಲಿ ಹೂಲಿ ಶೇಖರರವರು ರಚಿಸಿದ ಬೆಕುವಾ ನಾಟಕವನ್ನು ಚೆನ್ನವೀರ ಜಳಕಿಯವರು ನಿರ್ದೇಶಿಸಿ ಪ್ರದರ್ಶಿಸುತ್ತಿದ್ದಾಗ ರಾಜಕೀಯ ಪ್ರೇರಿತರು ಗುಂಪು ಕಟ್ಟಿಕೊಂಡು ಬಂದು ನಾಟಕವಾಗದಂತೆ ತಡೆದರು. ಆ ನಾಟಕ ಮತ್ತೆ ಮರುಪ್ರದರ್ಶನವಾಗಲೇ ಇಲ್ಲ. ಇಂತಹ ಅನೇಕ ರಂಗವಿರೋಧಿ ಘಟನೆಗಳನ್ನು ಪಟ್ಟಿಮಾಡಬಹುದಾಗಿದೆ. ವಿರೋಧಿಗಳು ಅದೆಷ್ಟೇ ಪ್ರಯತ್ನಿಸಿದರೂ ರಂಗಭೂಮಿ ಮಾತ್ರ ಸಮಾಜದ ಭ್ರಷ್ಟತೆ, ಅನಿಷ್ಟತೆ ಹಾಗೂ ಮೂಲಭೂತವಾದಕ್ಕೆ ಕನ್ನಡಿ ಹಿಡಿಯುತ್ತಲೇ ಬಂದಿದೆ. ಆಳುವ ವರ್ಗಗಳು ಯಾರೇ ಇರಲಿ ವಿರೋಧ ಪಕ್ಷಗಳಂತೆ ಕೆಲಸಮಾಡುತ್ತಲೇ ಬಂದಿದೆ. ಪುರಾಣೇತಿಹಾಸಗಳನ್ನು ಮತ್ತೆ ಮತ್ತೆ ಮುರಿದು ಕಟ್ಟುತ್ತಾ ಭ್ರಮೆಗಳನ್ನು ಕಳಚುತ್ತಾ ಬಂದಿದೆ. ಜನವಿರೋಧಿಗಳ ಮುಖವಾಡವನ್ನು ಕಾಲಕಾಲಕ್ಕೆ ಬಯಲು ಮಾಡಿದೆ.

ಸಂಘಪರಿವಾರ ಬೆಂಬಲಿತ ಬಿಜೆಪಿ ಸರಕಾರ ಯಾವಾಗ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿತೋ ಆಗಿನಿಂದ ಅಭಿವ್ಯಕ್ತಿ ಎನ್ನುವುದು ದೇಶದ್ರೋಹವಾಗಿ ಬದಲಾಯಿತು. ಯಾರು ಸಂಘ ಪರಿವಾರದ ವಿರುದ್ಧವಾಗಿ ಮಾತನಾಡುತ್ತಾರೋ, ಸರಕಾರದ ವಿರುದ್ಧ ಟೀಕಿಸುತ್ತಾರೋ, ನಾಟಕಗಳನ್ನು ಮಾಡುತ್ತಾರೋ ಅಂತವರೆಲ್ಲಾ ಸಂಘಿಗಳ ಲೆಕ್ಕದಲ್ಲಿ ದೇಶದ್ರೋಹಿಗಳಾಗಿ ಕಾಣಿಸಿಕೊಳ್ಳತೊಡಗಿದರು. ಎಂ.ಎಂ.ಕಲಬುರ್ಗಿ, ದಾಬೋಲ್ಕರ್, ಪೆನ್ಸಾರೆ.. ಮುಂತಾದ ವಿಚಾರವಾದಿಗಳನ್ನು ಕೋಮುವ್ಯಾಧಿ ಪೀಡಿತರು ಕೊಂದು ಹಾಕಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವನು ಹಾಡುಹಗಲೇ ಮಾಡಿದರು. ಗಿರೀಶ್ ಕಾರ್ನಾಡರು ಟಿಪ್ಪು ಹೆಸರನ್ನು ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಟ್ಟಿದ್ದರೆ ಚೆನ್ನಾಗಿತ್ತು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದನ್ನೇ ನೆಪವಾಗಿಟ್ಟುಕೊಂಡ ಮತೀಯವಾದಿಗಳು ಅವರನ್ನೊಬ್ಬ ಹಿಂದೂವಿರೋಧಿ  ಎಂದು ಬಿಂಬಿಸಿ ಗಲಾಟೆ ಎಬ್ಬಿಸಿದರು. ಬ್ರಾಹ್ಮಣ್ಯದ ಮುಖವಾಡಗಳನ್ನು ತಮ್ಮ ಸಂಸ್ಕಾರ ಕಾದಂಬರಿ, ನಾಟಕ ಹಾಗೂ ಸಿನೆಮಾದಲ್ಲಿ ಬಿಚ್ಚಿಟ್ಟ ಡಾ.ಅನಂತಮೂರ್ತಿಯವರನ್ನು ಕೋಮುಪೀಡಿತರು ಸಾಯುವವರೆಗೂ ಬಿಡದೇ ಕಾಡಿ ಸತ್ತ ಮೇಲೆ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸಂಘಪರಿವಾರದ ರಾಜಕೀಯ ಪಕ್ಷ ಯಾವಾಗ ದೇಶದ ಚುಕ್ಕಾಣಿಯನ್ನು ಹಿಡಿಯಿತೋ ಆಗಿನಿಂದ ಮತೀಯವಾದಿಗಳ ಅಟ್ಟಹಾಸ ಹೆಚ್ಚತೊಡಗಿತು. ವಿರೋಧಿಸಿದವರನ್ನು  ನಿಂದಿಸುವುದು, ಭಿನ್ನಾಭಿಪ್ರಾಯ ವ್ಯಕ್ತ ಪಡಿಸಿದವರ ಮೇಲೆ ದಾದಾಗಿರಿ ಮಾಡಿ ಹಲ್ಲೆ ಮಾಡುವುದು, ಅಭಿಪ್ರಾಯಬೇದ ಇದ್ದವರನ್ನು ಹೆದರಿಸಿ ಹಿಂಸಿಸುವುದು ಈಗ ದೇಶಾದ್ಯಂತ ನಿತ್ಯ ನಿರಂತರವಾಗಿದೆ. ಭಿನ್ನಾಭಿಪ್ರಾಯವನ್ನು ದೇಶದ್ರೋಹ ಧರ್ಮದ್ರೋಹ ಎಂದು ಆರೋಪಿಸಿ ಶಿಕ್ಷೆಯನ್ನೂ ಕೊಡುವ ನಕಲಿ ದೇಶಭಕ್ತರ ಪಡೆಯೇ ಹುಟ್ಟಿಕೊಂಡಿದೆ. ವಿಚಾರವಾದವನ್ನು ವಿಚಾರದಿಂದಲೇ ಎದುರಿಸುವ ಸಾಮರ್ಥ್ಯ ಮತ್ತು ಸತ್ವ ಇಲ್ಲದ ಈ ಹಿಂದೂವಾದಿಗಳು ವಿಚಾರವಾದವನ್ನು ಹಿಂಸಾವಾದದಿಂದ ದಮನಿಸಲು ಸರ್ವಪ್ರಯತ್ನವನ್ನು ಮಾಡುತ್ತಲೇ ಇದ್ದಾರೆ. ಇದಕ್ಕೆ ರಂಗಭೂಮಿಯೂ ಇವರಿಗೆ ಹೊರತಲ್ಲ.


ಇತ್ತೀಚೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಸಿಜಿಕೆ ರಾಷ್ಟ್ರೀಯ ನಾಟಕೋತ್ಸವದಲ್ಲಿ  ಎಪ್ರಿಲ್ 12 ರಂದು ರಾವಣಲೀಲಾ ಎನ್ನುವ ಹಿಂದಿ ನಾಟಕವನ್ನು ಪ್ರದರ್ಶಿಸಲಾಯಿತು. ಈ ನಾಟಕದಲ್ಲಿ ರಾವಣನನ್ನು ನಾಯಕನನ್ನಾಗಿಸಿ ರಾಮನನ್ನು ಖಳನಾಯಕನನ್ನಾಗಿ ತೋರಿಸಲಾಗುತ್ತದೆ. ಇದನ್ನು ಸಹಿಸದ ಹಿಂದೂಪರ ಸಂಘಟನೆಯ ಕಾರ್ಯಕರ್ತರು ರಂಗವೇದಿಕೆಗೆ ನುಗ್ಗಿ ಚಾಕು ತೋರಿಸಿ ಕಲಾವಿದರನ್ನು ಹೆದರಿಸಿ ಹಿಂಸಿಸುತ್ತಾರೆ. ರಾಮಾಯಣದಲ್ಲಿ ನಡೆದ ಅಂತಿಮ ಯುದ್ಧದಲ್ಲಿ ವಿಭೀಷಣನ ದ್ರೋಹದಿಂದಾಗಿ ರಾವಣ ಸತ್ತನಾದರೂ ಈಗ ರಾವಣನ ವಂಶಸ್ತರು ಎಲ್ಲಾ ಕಡೆ ವ್ಯಾಪಿಸಿ ಈ ರೀತಿ ಹಿಂಸೆಯಲ್ಲಿ ತೊಡಗಿದ್ದಾರೆ ಎನ್ನುವುದನ್ನು ರಾವಣಲೀಲಾ ನಾಟಕ ಹೇಳುತ್ತದೆ. ನಾಟಕದ ಭಾಗವಾಗಿಯೇ ಇಲ್ಲಿ ರಾಮಭಕ್ತರು ಗಲಾಟೆ ಮಾಡುತ್ತಾ ಮತೀಯವಾದಿಗಳ ಅಸಹಿಷ್ಣುತತೆಯನ್ನು ನಾಟಕದಲ್ಲಿ ತೋರಿಸಲಾಯ್ತು. ಈ ನಾಟಕ ಪ್ರದರ್ಶನದ ಹಿಂದಿನ ದಿನ ನಾನು ನಿರ್ದೇಶಿಸಿದ ಅಚ್ಚೆ ದಿನ್ ಎಲ್ಲಿ ಎನ್ನುವ ಬೀದಿನಾಟಕದ ಪ್ರದರ್ಶನ ಇದೇ ಸಿಜಿಕೆ ರಾಷ್ಟ್ರೀಯ ರಂಗೋತ್ಸವದಲ್ಲಿ ಪ್ರದರ್ಶನಗೊಂಡಿತ್ತು. ಆಗ ಅಲ್ಲಿ ನೆರೆದ ಪ್ರೇಕ್ಷಕರಲ್ಲಿ ಬಹುತೇಕರು ರಂಗಭೂಮಿಯವರು ಮತ್ತು ವಿಚಾರವಂತರೂ ಆಗಿದ್ದರಿಂದ ಬೀದಿನಾಟಕ ಯಾವುದೇ ತೊಂದರೆ ಇಲ್ಲದೇ ನಡೆಯಿತು. ಯಾವಾಗ ಇದೇ ಬೀದಿನಾಟಕವನ್ನು ಎಪ್ರಿಲ್ ೧೭ ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ವಿಜಯನಗರ ಬಿಂಬವು ಆಯೋಜಿಸಿದ ಬೀದಿನಾಟಕೋತ್ಸವದಲ್ಲಿ ಮರುಪ್ರದರ್ಶನ ಮಾಡಲಾಯಿತೋ ಆಗ ಕೆಲವು ಮತೀಯವಾದಿ ಭಕ್ತರ ಅನಾರೋಗ್ಯಪೀಡಿತ ಮನಸುಗಳಲ್ಲಿ ಅಸಹಿಷ್ಣುತತೆ ಬುಗಿಲೆದ್ದಿತು.  ಪೂರ್ತಿ ಬೀದಿನಾಟಕ ನೋಡಿ ಪ್ರತಿಕ್ರಿಯಿಸುವಷ್ಟೂ  ವ್ಯವಧಾನವಿಲ್ಲದ ಈ ಕೋಮುಪೀಡಿತರು ನಾಟಕ ನಿಲ್ಲಿಸಲು ಗಲಾಟೆ ಮಾಡತೊಡಗಿದರು. ನಾಟಕ ನಿಲ್ಲಲಿಲ್ಲ. ಕಲಾವಿದರು ಇನ್ನೂ ಜೋರಾಗಿ ಆಜಾದಿ ಆಜಾದಿ ಬೇಕೆ ಬೇಕು ಆಜಾದಿ ಎಂದು ಘೋಷಣೆಗಳನ್ನು ಕೂಗುತ್ತಾ ಮನುವಾದದಿಂದ, ಜಾತಿವಾದದಿಂದ, ಕೋಮುವಾದದಿಂದ ಸ್ವಾತಂತ್ರ್ಯ ಬೇಕು ಎಂದು ಹಾಡುತ್ತಾ ಸೇರಿದ್ದ ಪ್ರೇಕ್ಷಕರಲ್ಲಿ ಜಾಗೃತಿ ಮೂಡಿಸುವಂತೆ ನಟಿಸಿದರು. ಇದರಿಂದ ಮತ್ತಷ್ಟು ರೊಚ್ಚಿಗೆದ್ದ ಆಗುಂತಕರು ನಾಟಕ ಮುಗಿದ ನಂತರವು ಇನ್ನೂ ಒಂದಿಬ್ಬರನ್ನು ಸೇರಿಸಿಕೊಂಡು ಬಂದು ತೀವ್ರವಾಗಿ ವಾದಕ್ಕೆ ಇಳಿದರು. ಗಲಾಟೆ ಜೋರಾಯಿತು. ಇನ್ನೇನು ಹೊಡೆದಾಟ ಆರಂಭವಾಗಬೇಕು ಆಗ ಪ್ರೇಕ್ಷಕರೇ ಅವರ ಬಾಯಿಮುಚ್ಚಿಸಿದರು.

ಬೀದಿನಾಟಕದ ಪ್ರದರ್ಶನ ವಿರೋಧಿಸಿ ಗಲಾಟೆ ಮಾಡಿದವರು
ರಾವಣಲೀಲಾ ನಾಟಕದಲ್ಲಿ ಪ್ರವೇಶ ಪಡೆದ ಕೋಮುವಾದಿಗಳ ಪಾತ್ರವಹಿಸಿದವರು ಪ್ರೇಕ್ಷಕರೊಳಗಿಂದಲೇ ಬಂದು ಪ್ರೇಕ್ಷಕರನ್ನೇ ನಿಂದಿಸುತ್ತಾರೆ. ಪ್ರೇಕ್ಷಕರ ಪರವಾಗಿಯೇ ಒಬ್ಬ ಕಲಾವಿದನನ್ನು ವೇದಿಕೆಗೆ ಕರೆದು ಅಯೋಗ್ಯರು ನೀವು ಎಂದು ನಿಂದಿಸುತ್ತಾರೆ. ಅಂದರೆ  ಮತೀಯವಾದಿಗಳು ಏನೇ ಮಾಡಿದರೂ ನೋಡಿ ಚಪ್ಪಾಳೆ ತಟ್ಟುವುದಷ್ಟೇ ಜನರ ಕೆಲಸ. ಎದುರಿಸುವ ತಾಕತ್ತು ಯಾರಿಗೂ ಇಲ್ಲಾ ಎನ್ನುವುದನ್ನು ಈ ನಾಟಕವು ಹೇಳುತ್ತದೆ.  ಪ್ರೇಕ್ಷಕರನ್ನು ಅಯೋಗ್ಯರು, ಅಸಮರ್ಥರು ಎಂದೆಲ್ಲಾ ನಿಂದಿಸುವ ಈ ನಾಟಕದ ಉದ್ದೇಶಕ್ಕೆ ವಿರುದ್ಧವಾಗಿ ಅಚ್ಚೇ ದಿನ್...’” ಬೀದಿನಾಟಕ ನೋಡಿದ ಪ್ರೇಕ್ಷಕರು ಸ್ವಯಂಪ್ರೇರಣೆಯಿಂದ ಪ್ರತಿಕ್ರಿಯಿಸಿದರು. ನಾವು ಸತ್ತ ಪ್ರೇಕ್ಷಕರಲ್ಲ ಅನ್ಯಾಯವನ್ನು ಎದುರಿಸಬಲ್ಲವರು ಎಂಬುದನ್ನು ಸಾಬೀತು ಪಡಿಸಿದರು. ಇದು ಹೇಗಾಯಿತೆಂದರೆ.. ಬೀದಿನಾಟಕ ನಡೆಯುತ್ತಿರುವಾಗಲೇ  ನಾಟಕದ ಬಗ್ಗೆ ನಿಂದಿಸುತ್ತಾ, ನಿರ್ದೇಶಕರಿಗೆ ತಲೆ ಕೆಟ್ಟಿದೆ ಎಂದು ಬೈಯುತ್ತಾ  ನಾಟಕದ ಪ್ರದರ್ಶನ ನಿಲ್ಲಿಸಲು ಕೋಮುವಾದಿ ಪ್ರೇರಿತರು ಯಾವಾಗ ದಾದಾಗಿರಿ ಶುರುಮಾಡಿದರೋ ಆಗ ತಬ್ಬಿಬ್ಬಾದ ಕಲಾವಿದರುಗಳು ಎರಡು ನಿಮಿಷ ನಾಟಕ ನಿಲ್ಲಿಸಿದರು. ಆದರೆ ಪ್ರೇಕ್ಷಕರು ನಾಟಕದ ಹೊರಗಿನ ಈ ಭಕ್ತರ ಹುಚ್ಚಾಟವನ್ನು ಸಮರ್ಥವಾಗಿ ನಿಭಾಯಿಸಿದರು. ನಾಟಕ ನೋಡಲು ಬಂದ ಕೆಲವು ಯುವಕರು ನಿಂದಿಸುವವರನ್ನು ಅನಾಮತ್ತು ಎತ್ತಿಕೊಂಡು ದೂರಕ್ಕೆ ಹೋಗಿ ಬಾಯಿಮುಚ್ಚಿಸಿದರು. ಇನ್ನು ಕೆಲವು ಪ್ರೇಕ್ಷಕರುಗಳು ನಾಟಕ ಮುಂದುವರೆಯಲಿ ಎಂದು ಕಲಾವಿದರನ್ನು ಹುರುದುಂಬಿಸಿದರು. ಈ ಘಟನೆಯ ನಂತರ ಪ್ರತಿಯೊಂದು ಸಂಭಾಷಣೆಗೂ ಚಪ್ಪಾಳೆಯ ಮೂಲಕ ತಮ್ಮ ಸಹಮತ ವ್ಯಕ್ತಪಡಿಸಿದರು. ಇನ್ನೂ ಬಹುಸಂಖ್ಯಾತ ಜನತೆ ಕೋಮುವ್ಯಾಧಿಗೆ ತುತ್ತಾಗಿಲ್ಲ, ಇನ್ನೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬೆಂಬಲಿಸುವ ಜನತೆ ಬೇಕಾದಷ್ಟಿದ್ದಾರೆ ಹಾಗೂ ಪ್ರೇಕ್ಷಕರು ಮೂಕರಲ್ಲ ಮಾತಾಡಬಲ್ಲವರು ಎನ್ನುವುದನ್ನು ಈ ಘಟನೆ ಸಾಬೀತು ಪಡಿಸಿತು. ನಾಟಕದ ನಂತರವೂ ಮರಳಿ ಬಂದ ಕೋಮುವಾದಿ ಪಿತ್ತ ನೆತ್ತಿಗೇರಿದವರನ್ನು ತರಾಟೆಗೆ ತೆಗೆದುಕೊಂಡವರೇ ಪ್ರೇಕ್ಷಕರುಗಳು. ಯಾವಾಗ ಗಲಾಟೆ ಎಬ್ಬಿಸಿದವರಿಗೆ ತಮ್ಮ ಸಮರ್ಥಕರಿಗಿಂತ ವಿರೋದಿಸುವವರೇ ಸುತ್ತಲೂ ಇದ್ದಾರೆಂಬುದು ಅರಿವಾಯಿತೋ ಆಗ ಈ ನಾಟಕವನ್ನು ಇನ್ನೊಮ್ಮೆ ಪ್ರದರ್ಶಿಸಿದರೆ ಪರಿಣಾಮ ನೆಟ್ಟಗಿರೋದಿಲ್ಲ ಎಂದು ದಮಕಿ ಹಾಕಿ ಮೆತ್ತಗೇ ಅಲ್ಲಿಂದ ಕಾಲುಕಿತ್ತರು. ಇದು ನಾಟಕ ಮಾಡಿದವರಿಗಿಂತಾ, ಮಾಡಿಸಿದವರಿಗಿಂತಾ ಜ್ಯಾತ್ಯಾತೀತ ಪ್ರೇಕ್ಷಕರಿಗೆ ಸಲ್ಲಬೇಕಾದ ವಿಜಯವಾಗಿದೆ.

ಇಷ್ಟಕ್ಕೂ ಈ ಮತೀಯವಾದಿಗಳ ಮನಸಲ್ಲಿ ಅಸಾಧ್ಯ ತಲ್ಲಣ ಹುಟ್ಟಿಸುವಂತಹುದು ಈ ಬೀದಿ ನಾಟಕದಲ್ಲೇನಿತ್ತು? ಈಗ ದೇಶದಲ್ಲಿ ಏನಾಗುತ್ತಿದೆಯೋ ಅದೇ ಅಲ್ಲಿ ಪ್ರತಿದ್ವನಿಸಿತ್ತು. ನಾಟಕದ ಕಥಾವಸ್ತು ಹೀಗಿದೆ. ಹೂವಿನ ಪಕ್ಷವೊಂದು ಭಾರೀ ಬಹುಮತದಿಂದ ಆರಿಸಿ ಬಂದಾಗ ಅಚ್ಚೇ ದಿನ್ ಬಂದಿತು ಎನ್ನುವ ಸಂತಸದಲ್ಲಿ ಶೇಷಪ್ಪ ಎನ್ನುವ ಪಕ್ಷದ ನಿಷ್ಟಾವಂತ ಕಾರ್ಯಕರ್ತ ಭಾವಾತಿರೇಕದಿಂದ ಕೋಮಾ ಸ್ಥಿತಿಗೆ ಹೋಗುತ್ತಾನೆ. ಮನೋವೈದ್ಯರ ಚಿಕಿತ್ಸೆಯಿಂದಾಗಿ ಎರಡು ವರ್ಷಗಳ ನಂತರ ಎಚ್ಚರಗೊಳ್ಳುವ ಶೇಷಪ್ಪ ಅಚ್ಚೆ ದಿನ್ ಬಂದಿದೆಯೆಂದು ಹುಡುಕಿಕೊಂಡು ಹೊರಗೆ ಬಂದರೆ ಪರಿಸ್ಥಿತಿಯೇ ಭಿನ್ನವಾಗಿರುತ್ತದೆ. ತಿನ್ನಲು ಮನೆಯಲ್ಲಿಟ್ಟಿದ್ದ ದನದ ಮಾಂಸವನ್ನು ಗೋಮಾಂಸವೆಂದು ಸುಳ್ಳು ಸುದ್ದಿ ಹಬ್ಬಿಸಿ ಮುಸ್ಲಿಂ ವ್ಯಕ್ತಿಯನ್ನು ಮತೀಯವಾದಿಗಳು ಕೊಂದು ಹಾಕಿದ್ದು, ಬಿಜೆಪಿ ಸಂಸದನೊಬ್ಬ ಭಾರತ್ ಮಾತಾಕಿ ಜೈ ಅನ್ನದವರು ಈ ದೇಶದಲ್ಲಿರಲು ಅರ್ಹರಲ್ಲ ಎಂದು ಭಾಷಣ ಮಾಡಿದ್ದು, ಇನ್ನೊಬ್ಬ ಮುಸ್ಲಿಂ ಸಂಸದ ಸತ್ತರೂ ನಾನು ಭಾರತ್ ಮಾತಾಕಿ ಜೈ ಎನ್ನುವುದಿಲ್ಲವೆಂದಿದ್ದು, ಸಂವಿಧಾನ ಅಡ್ಡಿಬರದಿದ್ದರೆ ಜೈಕಾರ ಹಾಕದವರನ್ನು ಸಾಯಿಸುತ್ತಿದ್ದೇವೆಂದು ಬಾಬಾ ರಾಂದೇವ್ ಹೇಳಿದ್ದು, ಜೆಎನ್‌ಯು ವಿಶ್ವವಿದ್ಯಾಲಯದಲ್ಲಿ ದೇಶದ್ರೋಹಿಯೆಂದು ಆರೋಪಿಸಿ ಕನ್ನಯ್ಯಕುಮಾರನನ್ನು ಬಂಧಿಸಿದ್ದು, ನ್ಯಾಯಾಲಯದ ಮೆಟ್ಟಲುಗಳ ಮೇಲೆ ನ್ಯಾಯವಾಧಿಗಳೇ ಹಲ್ಲೆ ಮಾಡಿದಂತಹ  ಅನೇಕ ಘಟನೆಗಳನ್ನು ನೋಡಿ ನೊಂದುಕೊಂಡ ಶೇಷಪ್ಪ ಹತಾಶನಾಗುತ್ತಾನೆ.  ಕಣ್ಣಯ್ಯ ಆಜಾದಿ ಕುರಿತು ಭಾಷಣ ಮಾಡಿದ್ದು ಕೇಳಿ ಪುಳಕಗೊಳ್ಳುತ್ತಾನೆ. ಮತೀಯವಾದಿ ಶಕ್ತಿಗಳ ಹಿಂಸಾಪಾತವನ್ನು ನೋಡಿ ಅನುಭವಿಸಿ ದೇಶವೆಂದರೆ ಮಾತೆ, ದೇವತೆ, ಕಲ್ಲು ಮಣ್ಣಲ್ಲ ಅಲ್ಲಿ ವಾಸಿಸುವ ಸಕಲ ಜೀವ ಸಂಕುಲ ಜನಗಳು, ಎಲ್ಲರೂ ಹೊಂದಿಕೊಂಡು ಬಾಳಬೇಕು ಎಂದು ಹೇಳಿ ಕೋಮುವಾದಿಗಳ ಹಲ್ಲೆಗೆ ಬಲಿಯಾಗಿ ಹತನಾಗುತ್ತಾನೆ. ಮುಂದೆ ಕಣ್ಣಯ್ಯನ ಆಜಾದಿ ಪರ ಘೋಷಣೆ ಹಾಗೂ ನಂತರ ಸ್ವಾತಂತ್ರ್ಯ ಸ್ವಾತಂತ್ರ್ಯ ಬೇಕು ನಮಗೆ ಸ್ವಾತಂತ್ರ್ಯ ಹಾಡಿನೊಂದಿಗೆ ಬೀದಿ ನಾಟಕ ಅಂತ್ಯಗೊಳ್ಳುತ್ತದೆ.

ನಾಟಕ ನೋಡಿದ ನಕಲಿ ದೇಶಭಕ್ತರ ಎದೆಯೊಳಗೆ ಉರಿ ತಾಳಲಾಗದಷ್ಟು ಬೇಗೆಯಾಗುತ್ತದೆ. ಇದ್ದದ್ದನ್ನು ಇದ್ದಂಗೆ ಹೇಳುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಿಸುವ ನಿಟ್ಟಿನಲ್ಲಿ ಹಿಂದುತ್ವವಾದಿಗಳು ಕ್ರಿಯಾಶೀಲರಾದರು. ಇಲ್ಲದ್ದನ್ನು ಹೇಳಿದ್ದರೆ, ಇಲ್ಲವೇ ಊಹಿಸಿಕೊಂಡು ದೃಶ್ಯ ಕಟ್ಟಿದ್ದರೆ ಈ ದೇಶಭಕ್ತರ ವಿರೋಧಕ್ಕೆ ಒಂದು ಅರ್ಥ ಇರುತ್ತಿತ್ತು. ಆದರೆ ಇಡೀ  ನಾಟಕದಲ್ಲಿ ಶೇಷಪ್ಪ ಎನ್ನುವ ಪಾತ್ರವನ್ನು ಮಾತ್ರ ಊಹಿಸಿ ಸೃಷ್ಟಿಸಿ ಆ ಪಾತ್ರದ ಮೂಲಕ ದೇಶದಲ್ಲಿ ಆಗುತ್ತಿರುವ ಮತೀಯವಾದದ ಅತಿರೇಕಗಳನ್ನು ತೋರಿಸುವ ಪ್ರಯತ್ನವನ್ನು ಈ ಬೀದಿನಾಟಕ ಮಾಡುತ್ತದೆ. ಕೋಮುವಾದಿ ಹುನ್ನಾರಗಳನ್ನು ಹಾಗೂ ನಕಲಿ ದೇಶಭಕ್ತರ ಮುಖವಾಡಗಳನ್ನು ಬೀದಿಯಲ್ಲಿ ನಿಂತು ಈ ಬೀದಿನಾಟಕವು ಬೆತ್ತಲೆಗೊಳಿಸಿದ್ದಕ್ಕೆ  ಬೆಚ್ಚಿಬಿದ್ದ ಮತೀಯವಾದಿ ಪಡೆ ಬಲವಂತವಾಗಿ ನಾಟಕವನ್ನೇ ನಿಲ್ಲಿಸಲು ಪ್ರಯತ್ನಿಸಿದ್ದು ಅಭಿವ್ಯಕ್ತಿ ಸ್ವಾತಂತ್ರ್ಯದ ಕತ್ತು ಹಿಚುಕುವ.. ಪ್ರಶ್ನಿಸುವ ಬಾಯಿಗಳನ್ನು ಮುಚ್ಚುವ ಕುತಂತ್ರವಾಗಿದೆ. ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳನ್ನು ನಾಟಕದ ಮೂಲಕ ಹೇಳುವಂತಹ ರಂಗಾಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿಯನ್ನುಂಟುಮಾಡುವ ಹಾಗೂ ಜನವಿರೋಧಿತನದ ವಿರುದ್ಧ ಜನಜಾಗೃತಿ ಮಾಡುವಂತಹ  ರಂಗಪ್ರತಿರೋಧವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿರುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ.  ನಡೆಯುತ್ತಿರುವ ನಾಟಕವನ್ನು ನಿಲ್ಲಿಸಿ ಗಲಾಟೆ ಎಬ್ಬಿಸಿ ನಾಟಕ ಪ್ರದರ್ಶನಕ್ಕೆ ಅಡ್ಡಿಯನ್ನುಂಟು ಮಾಡಿರುವುದು ರಂಗವಿರೋಧಿ ಕೃತ್ಯವಾಗಿದೆ.

ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹರಣ ಮಾಡುತ್ತಿರುವ ಇಂತಹ ನಕಲಿ ದೇಶಭಕ್ತರ ಗೂಂಡಾಗಿರಿಯನ್ನು ಎಲ್ಲಾ ಕಲಾವಿದರು, ರಂಗಕರ್ಮಿಗಳು ಹಾಗೂ ಪ್ರಜ್ಞಾವಂತರುಗಳು ವಿರೋಧಿಸಲೇಬೇಕಿದೆ. ಅಸಂವಿಧಾನಿಕ ಸಾಂಸ್ಕೃತಿಕ ದಾದಾಗಿರಿಯನ್ನು ಸ್ವಸ್ಥ ಸಮಾಜದ ಹಿತದೃಷ್ಟಿಯಿಂದ ಎಲ್ಲಾ ಮಾನವತಾವಾದಿಗಳೂ ಪ್ರತಿರೋಧಿಸಲೇಬೇಕಿದೆ. ಭಿನ್ನಾಭಿಪ್ರಾಯಗಳನ್ನು ಗೌರವಿಸುತ್ತಲೇ ತಮ್ಮ ಅಭಿಪ್ರಾಯಗಳನ್ನು ಮಂಡಿಸಬೇಕೆನ್ನುವ  ಕನಿಷ್ಟ ಸೌಜನ್ಯವೂ ಇಲ್ಲದ ಕೋಮುವ್ಯಾಧಿ ಪೀಡಿತರನ್ನು ಜ್ಯಾತ್ಯಾತೀತ ಪರಂಪರೆಯ ರಂಗಭೂಮಿ ಸಾಮೂಹಿಕವಾಗಿ ಒಂದಾಗಿ ಖಂಡಿಸಲೇಬೇಕಿದೆ.

ಕಲಾಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಲು ಹಾಗೂ ರಂಗಭೂಮಿಯ ಸ್ವಾಯತ್ತತೆಯನ್ನು ಕಾಪಾಡಿಕೊಳ್ಳಲು ಎಲ್ಲಾ ಕಲಾವಿದರುಗಳು, ರಂಗಸಂಘಟಕರು, ಅಕಾಡೆಮಿಗಳು ಹಾಗೂ ಮಾಧ್ಯಮಗಳು ಕೋಮುವಾದಿಗಳ ಜನವಿರೋಧಿತನದ ಈ ದೃಷ್ಕೃತ್ಯವನ್ನು ಖಂಡಿಸುತ್ತಾ ಮತೀಯ ಶಕ್ತಿಗಳಿಗೆ ಎಚ್ಚರಿಕೆಯನ್ನು ತಮ್ಮ ತಮ್ಮ ಮಾಧ್ಯಮಗಳ ಮೂಲಕ ಕೊಡಬೇಕಾಗಿದೆ. ಈ ನಿಟ್ಟಿನಲ್ಲಿ ಜ್ಯಾತ್ಯಾತೀತ ಮೌಲ್ಯಗಳಲ್ಲಿ ನಂಬಿಕೆ ಇರುವ.. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುವ ಎಲ್ಲರೂ ಕಲಾಭಿವ್ಯಕ್ತಿ ವಿರೋಧಿಗಳ ದಾದಾಗಿರಿಯನ್ನು ಹಿಮ್ಮೆಟ್ಟಿಸಬೇಕಿದೆ.


ಇದು ಕೇವಲ ಒಂದು ಬೀದಿನಾಟಕದ ಕುರಿತ ವಿರೋಧದ ಪ್ರಶ್ನೆಯಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆ. ತಮ್ಮನ್ನು ವಿರೋಧಿಸುವ ಎಲ್ಲವನ್ನೂ ಎಲ್ಲರನ್ನೂ ಸಾಮ ಬೇಧ ದಂಡಾದಿಗಳನ್ನು ಬಳಸಿ ಮಟ್ಟಹಾಕಲು ಪ್ರಯತ್ನಿಸುವ ಸಮಾಜದ್ರೋಹಿ ದುಷ್ಟ ಶಕ್ತಿಗಳಿಗೆ ಪ್ರಭಲವಾದ ಪ್ರತಿರೋಧವನ್ನು ಒಡ್ಡಲೇಬೇಕಿದೆ. ವೈಚಾರಿಕ ಅಭಿವ್ಯಕ್ತಿ ಸ್ವಾತಂತ್ರ್ಯ ನಮ್ಮ ಹಕ್ಕು ಹಾಗೂ ಅನ್ಯಾಯವನ್ನು ಪ್ರಶ್ನಿಸುವುದು ನಮ್ಮ ಕರ್ತವ್ಯ ಎಂಬುದನ್ನು ಎಲ್ಲಾ ಪ್ರಜ್ಞಾವಂತರೂ ತೋರಿಸಿ ಕೊಡಬೇಕಿದೆ. ವೈರಾಣುಗಳಿಗೆ ಪ್ರತಿರೋಧವನ್ನು ಕಳೆದುಕೊಂಡ ದೇಹ ನಶಿಸಿಹೋಗುತ್ತದೆ. ಅನ್ಯಾಯಗಳಿಗೆ ಪ್ರತಿರೋಧಿಸದ ದೇಶ ಸರ್ವನಾಶವಾಗುತ್ತದೆ. ಇದಕ್ಕೆ ಹಿಟ್ಲರ್‌ನ ಪ್ಯಾಸಿಸ್ಟ್ ದುರಾಡಳಿತ ಅತಿ ದೊಡ್ಡ ಚಾರಿತ್ರಿಕ ಉದಾಹರಣೆಯಾಗಿದೆ.. ಪ್ಯಾಸಿಸಂ ಮತ್ತೆ ಈ ದೇಶವನ್ನು ಆವರಿಸಿ ಆಕ್ರಮಿಸಿ ಆಪೋಷಣ ತೆಗೆದುಕೊಳ್ಳುವ ಮೊದಲು ಎಲ್ಲಾ ಕಲಾವಿದರು, ಸಾಹಿತಿಗಳು, ಬುದ್ದಿಜೀವಿಗಳು, ಹೋರಾಟಗಾರರು ಒಂದಾಗಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿಗಾಗಿ ಸಾಧ್ಯವಾದ ಎಲ್ಲವನ್ನೂ ಮಾಡಬೇಕಿದೆ. ಮತ್ತೆ ಈ ದೇಶ ಸರ್ವಾಧಿಕಾರಿಗಳ ಪಾಲಾಗದಂತೆ ಕಾಪಾಡಬೇಕಿದೆ. ರಂಗಭೂಮಿಯ ಸ್ವಾಭಿಮಾನವನ್ನು ಎತ್ತಿ ಹಿಡಿಯಬೇಕಿದೆ.

ಈ ನಿಟ್ಟಿನಲ್ಲಿ ಉಮಾಶ್ರೀಯವರು ತೀವ್ರವಾಗಿ ಪ್ರತಿಕ್ರಿಯಿಸಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹರಣ ಮಾಡುವವರಿಗೆ ಎಚ್ಚರಿಕೆಯನ್ನು ಕೊಟ್ಟಿದ್ದಾರೆ. ಎಪ್ರಿಲ್ ೨೦ ರಂದು ಎನ್ ಎಸ್‌ಡಿ ನಾಟಕೋತ್ಸವದ ಉದ್ಘಾಟನೆಯಲ್ಲಿ ಭಾಗವಹಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆ ಉಮಾಶ್ರೀಯವರು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಅಚ್ಚೇ ದಿನ್ ಎಲ್ಲಿ ಬೀದಿನಾಟಕ ಪ್ರದರ್ಶನಕ್ಕೆ ಅಡ್ಡಿ ಪಡಿಸಿದವರು ದುಷ್ಟರು. ಇಂತಹ ದಬ್ಬಾಳಿಕೆಗೆ ರಂಗಭೂಮಿ ಅಲುಗಾಡದು. ಯಾವುದೇ ಅಳುಕಿಲ್ಲದೇ ಸಮಾಜದ ಓರೆಕೋರೆಗಳನ್ನು ಹೇಳುವ ಏಕೈಕ ಮಾಧ್ಮ ರಂಗಭೂಮಿ. ಸಾಂಸ್ಕೃತಿಕ ದಬ್ಬಾಳಿಕೆಯ ಮೂಲಕ ಅದರ ದ್ವನಿ ಅಡಗಿಸಲು ಸಾಧ್ಯವೇ ಇಲ್ಲ. ನಾಟಕ ತಡೆಯಲು ನಡೆಸಿದ ಪ್ರಯತ್ನವನ್ನು ರಂಗಕಲಾವಿದೆಯಾಗಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆಯಾಗಿ ಖಂಡಿಸುತ್ತೇನೆ ಎಂದು ಹೇಳಿ ಮತೀಯವಾದಿ ದುಷ್ಟಶಕ್ತಿಗಳಿಗೆ ಬಿಸಿಮುಟ್ಟಿಸಿದರು. ಹಾಗೆಯೇ ಜೆ.ಲೊಕೇಶ್, ಡಾ.ಮರುಳಸಿದ್ದಪ್ಪ, ಜಿ.ಕೆ.ಗೋವಿಂದರಾವ್, ಡಾ.ಕೆ.ವೈ.ನಾರಾಯಣಸ್ವಾಮಿ, ನಾಗರಾಜಮೂರ್ತಿ, ಶಶಿಧರ್ ಅಡಪ... ಮುಂತಾದ ರಂಗಕರ್ಮಿಗಳು ರಂಗಾಭಿವ್ಯಕ್ತಿ ಸ್ವಾತಂತ್ರ್ಯದ ದಮನದ ವಿರುದ್ಧ ದ್ವನಿ ಎತ್ತಿದರು. ಪತ್ರಿಕಾ ಹೇಳಿಕೆ ನೀಡುವ ಮೂಲಕ ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಿದರು.

ಆದರೆ.. ರಂಗಪ್ರದರ್ಶನದ ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿ ನಿಂತು, ಕೋಮುಶಕ್ತಿಗಳ ಗೂಂಡಾಗಿರಿಯನ್ನು ವಿರೋಧಿಸಿ ಪ್ರತಿಭಟಿಸುವ ಕೆಲಸವನ್ನು ರಂಗಭೂಮಿಯ ಪ್ರಾತಿನಿಧಿಕ ಸರಕಾರಿ ಸಂಸ್ಥೆಯಾದ ಕರ್ನಾಟಕ ನಾಟಕ ಅಕಾಡೆಮಿ ಮಾಡಬೇಕಿತ್ತು. ಆದರೆ ಅದ್ಯಾಕೋ ಅದರ ಅಧ್ಯಕ್ಷರು ಹಾಗೂ ಸದಸ್ಯರುಗಳು ದಿವ್ಯ ಮೌನವನ್ನು ವಹಿಸಿದರು. ಜೊತೆಗೆ ಕಲೆ ಸಾಹಿತ್ಯ ಜಾನಪದಕ್ಕೆ ಸಂಬಂಧಿಸಿದ ಅಕಾಡೆಮಿ ಪ್ರಾಧಿಕಾರಗಳ ಅಧ್ಯಕ್ಷರುಗಳು ಹಿಂದುತ್ವವಾದಿಗಳ ಸಾಂಸ್ಕೃತಿಕ ವಿರೋಧಿತನವನ್ನು ಖಂಡಿಸಬೇಕಿದೆ.  ಏನೇ ಆಗಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಕಲಾವಿದರ ಹಕ್ಕು. ಅದನ್ನು ಉಳಿಸಿಕೊಳ್ಳಲು ಪ್ರಜ್ಞಾವಂತರೆಲ್ಲರೂ ಒಂದಾಗಲೇಬೇಕಿದೆ. ಇಂದು ಬೀದಿನಾಟಕಕ್ಕೆ ಅಡ್ಡಿಪಡಿಸಿದವರು, ಸಾಗರದಲ್ಲಿ ಡಾ.ಮೇಟಿಯವರ ಮಾತನ್ನು ಅಪಾರ್ಥಮಾಡಿಕೊಂಡು ಮುಗಿಬಿದ್ದವರು ನಾಳೆ ವ್ಯವಸ್ಥೆಯ ಅವ್ಯವಸ್ಥೆಯನ್ನು ಪ್ರಶ್ನಿಸಿದವರೆಲ್ಲರ ಮೇಲೆ ಹರಿಹಾಯ್ದು ಹಲ್ಲೆಮಾಡುವುದರಲ್ಲಿ ಸಂದೇಹವೇ ಇಲ್ಲ. ಭವಿಷ್ಯದಲ್ಲಿ ಬರಬಹುದಾದ ಪ್ಯಾಸಿಸ್ಟ್ ಆಡಳಿತದ ಮೊಳಕೆಗಳನ್ನು ಸಣ್ಣದರಲ್ಲೇ ಚಿವುಟಬೇಕು. ಇಲ್ಲವಾದರೆ ಈ ದೇಶವನ್ನು ಹಿಟ್ಲರ್ ಮಾದರಿಯ ಸರ್ವಾಧಿಕಾರಿ ಕೋಮು ಉನ್ಮಾದದ ಆಡಳಿತಕ್ಕೆ ಈಡುಮಾಡಿದಂತಾಗುತ್ತದೆ. ಮುಂದಿನ ತಲೆಮಾರಿಗೆ ಉತ್ತರದಾಯಿತ್ವ ಹೊಂದಿರುವ ಪ್ರಜ್ಞಾವಂತ ಪ್ರಗತಿಪರರೆಲ್ಲಾ ಮೌನವನ್ನು ಮುರಿದು ಕೋಮುವಾದಿ ಪಡೆಯ ಸಾಂಸ್ಕೃತಿಕ ದಾದಾಗಿರಿಗೆ ತೀವ್ರವಾದ ಪ್ರತಿರೋಧವನ್ನು ತೋರಬೇಕಿದೆ. ರಂಗಕರ್ಮಿಗಳು ಇತರ ಕ್ಷೇತ್ರಗಳ ಜನಪರ ಮನಸುಗಳನ್ನು ಸೇರಿಸಿಕೊಂಡು ಅಭಿವ್ಯಕ್ತಿ ಸ್ವಾತಂತ್ರ್ಯ ಉಳಿಸಿ ಆಂದೋಲನವನ್ನು ಶುರುಮಾಡಬೇಕಿದೆ. ಈ ನಿಟ್ಟಿನಲ್ಲಿ ಉಮಾಶ್ರೀಯವರ ದಿಟ್ಟವಾದ ಹೇಳಿಕೆ ಮಾದರಿಯಾಗಿದೆ.     

                                                      - ಶಶಿಕಾಂತ ಯಡಹಳ್ಳಿ