ಶನಿವಾರ, ಏಪ್ರಿಲ್ 9, 2016

ರಂಗತಂತ್ರ ವೈಭವದ ಮಲಯಾಳಿ ನಾಟಕ “ಮತ್ತಿ” :


   
ರಂಗದಿಗ್ಗಜ ಸಿ.ಜಿ.ಕೃಷ್ಣಸ್ವಾಮಿ (ಸಿಜಿಕೆ) ಯವರ ಸವಿನೆನಪಿನಲ್ಲಿ ಸಿಜಿಕೆಯವರ ರಂಗನಿರಂತರ ತಂಡವು 2016, ಎಪ್ರಿಲ್ 8 ರಿಂದ ಎಪ್ರಿಲ್ 14ರ ವರೆಗೆ  ಸಿಜಿಕೆ ರಾಷ್ಟ್ರೀಯ ರಂಗೋತ್ಸವವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ. ಈ ನಾಟಕೋತ್ಸವದ ಮೊದಲ ನಾಟಕವಾಗಿ ಎಪ್ರಿಲ್ ೯ ರಂದು ಜಿನೋ ಜೋಸೆಪ್‌ರವರು ಬರೆದು ನಿರ್ದೇಶಿಸಿದ ಮಲಯಾಳಿ ನಾಟಕ ಮತ್ತಿ ಯನ್ನು ಮಲಯಾಳ ಕಲಾನಿಲಯಂ ನಾಟಕ ತಂಡದ ಕಲಾವಿದರು ಪ್ರದರ್ಶಿಸಿ ಪ್ರೇಕ್ಷಕರಲ್ಲಿ ಸಂಚಲನವನ್ನು ಮೂಡಿಸಿದರು.

ಜಾಗತೀಕರಣ ಹಾಗೂ ನಗರೀಕರಣಗಳ ದುಷ್ಪರಿಣಾಮಗಳಿಂದಾಗಿ ಶ್ರಮಜೀವಿಗಳು ಅದು ಹೇಗೆ ತಮ್ಮ ನೆಲೆಯನ್ನು ಕಳೆದುಕೊಂಡು ಅನಾಥಪ್ರಜ್ಞೆಯಿಂದ ಅತಂತ್ರವಾಗಿ ಬದುಕುವ ಅನಿವಾರ್ಯತೆಗೊಳಗಾಗುತ್ತಾರೆ ಎನ್ನುವ ವಾಸ್ತವತೆಯನ್ನು ಮತ್ತಿ ನಾಟಕ ಅನಾವರಣಗೊಳಿಸುತ್ತದೆ. ಅಭಿವೃದ್ದಿಯ ಹೆಸರಲ್ಲಿ ಜನರನ್ನು ಒಕ್ಕಲೆಬ್ಬಿಸುವ ಜಾಗತೀಕರಣದ ವ್ಯವಸ್ಥೆಯ ಹುನ್ನಾರಗಳನ್ನು ಈ ನಾಟಕ ತೆರೆದಿಡುತ್ತದೆ.

ಮತ್ತಿ ಎನ್ನುವ ಹೆಸರಿನ ಮೀನನ್ನು ಕೇಂದ್ರವಾಗಿಟ್ಟುಕೊಂಡ ಈ ನಾಟಕವು ತಮ್ಮ ಪಾಡಿಗೆ ತಾವು ಸುಖವಾಗಿದ್ದ ಶ್ರಮಜೀವಿ ಸಮುದಾಯದ ಆಗುಹೋಗುಗಳು ಹಾಗೂ ದುರಂತವನ್ನು ಮನಮಿಡಿಯುವಂತೆ ಹೇಳುವಲ್ಲಿ ಯಶಸ್ವಿಯಾಗಿದೆ. ಇದು ಕೇವಲ ದುಡಿಯುವ ವರ್ಗದ ಸಮುದಾಯವೊಂದರ ಸಂಕಟವಾಗಿರದೇ ಅಭಿವೃದ್ದಿಯ ಭರಾಟೆಯಲ್ಲಿ ನಿರಾಶ್ರಿತರಾಗಿ ಬದುಕು ಕಳೆದುಕೊಂಡು ಅತಂತ್ರವಾಗಿರುವ ಈ ದೇಶದ ಬಹುತೇಕ ವಿಭಿನ್ನ ಜನಸಮುದಾಯಗಳ ರೂಪಕವಾಗಿ ಮತ್ತಿ ಮೂಡಿಬಂದಿದೆ.

 ಗಾತ್ರದಲ್ಲಿ ಚಿಕ್ಕದಾದ, ಕಡಿಮೆ ಬೆಲೆಯ ಹಾಗೂ ಪೌಷ್ಟಿಕವಾದ ಮತ್ತಿ ಕೇರಳ ರಾಜ್ಯದ ಜನಸಾಮಾನ್ಯರಿಗೆ ಇಷ್ಟವಾದ ಮತ್ತು ಬಲು ಪ್ರಸಿದ್ಧವಾದ ಮೀನು. ಜನಸಾಮಾನ್ಯರ ಬದುಕಿನ ಆಹಾರ ಕ್ರಮದ ಅವಿಭಾಜ್ಯ ಅಂಗವೇ ಆಗಿರುವ ಮತ್ತಿ ಮೀನು ಶ್ರಮಜೀವಿ ವರ್ಗದ ಹೊಟ್ಟೆಯ ಹಸಿವಿಗೆ ಆಧಾರವಾಗಿದೆ. ಮೀನು ಹಾಗೂ ಮನುಷ್ಯ ಸಂಬಂಧಗಳನ್ನು ಚಿತ್ರಿಸುತ್ತಲೇ ಮನುಕುಲಕೆ ಕಂಟಕವಾಗಿರುವ ಜಾಗತೀಕರಣದ ಅತಿರೇಕವನ್ನೂ ಹೇಳುವಲ್ಲಿ ಈ ನಾಟಕ ಸಫಲವಾಗಿದೆ.

ಅದೊಂದು ಶ್ರಮಜೀವಿಗಳು ಕೂಡಿ ಸೌಹಾರ್ಧದಿಂದ ಬಾಳುತ್ತಿದ್ದ ಪ್ರದೇಶ. ರಫೀಕ್ ಎನ್ನುವ ಮೀನು ಮಾರುವವ ತನ್ನ ಪತ್ನಿಯೊಂದಿಗೆ ವಾಸಿಸುತ್ತಲೇ ಪಕ್ಕದ ಮನೆಯವಳ ಒಲುಮೆಗೆ ಪ್ರಯತ್ನಿಸುತ್ತಿರುತ್ತಾನೆ. ದುಡಿಯುವ ಜನರು ಹಾಡುತ್ತಾರೆ, ಕುಣಿಯುತ್ತಾರೆ, ನಾಟಕದ ತಾಲಿಂನಲ್ಲಿ ನಿರತರಾಗಿರುತ್ತಾ ತಮ್ಮ ಶ್ರಮವನ್ನು ಮರೆಯುತ್ತಾ ಅದು ಹೇಗೋ ಖುಷಿಯಿಂದಲೇ ಬದುಕುತ್ತಿರುತ್ತಾರೆ. ಅಷ್ಟರಲ್ಲಿ ಅಭಿವೃದ್ದಿಯ ಗಾಳಿ ಬೀಸತೊಡಗುತ್ತದೆ. ಕೆಲಸ ಹುಡುಕಿಕೊಂಡು ಶ್ರಮಜೀವಿಗಳು ತಮ್ಮ ನೆಲೆಯನ್ನು ಬಿಟ್ಟು ವಲಸೆ ಹೋಗುತ್ತಾರೆ. ಜನರೇ ಇಲ್ಲದ ಮೇಲೆ ಮೀನು ಮಾರುವ ರಫಿಕ್‌ಗೆ ಕೆಲಸವೇ ಇಲ್ಲವಾಗುತ್ತದೆ. ಅನಾಥ ಪ್ರಜ್ಞೆ ಕಾಡತೊಡಗುತ್ತದೆ. ನೆಲೆ ಬಿಟ್ಟು ಹೋಗಲಾಗದೇ, ಇದ್ದ ನೆಲೆಯಲ್ಲೂ ಬಾಳಲಾಗದೇ ರಫಿಕ್ ತತ್ತರಿಸಿ ಆತ್ಮಹತ್ಯೆಗೆ ಶರಣಾಗುತ್ತಾನೆ. ಇದರಿಂದ ರೋಸಿಹೋಗಿ ಗುತ್ತಿಗೆದಾರರ ಮೇಲೆ ಹಲ್ಲೆ ಮಾಡಲು ಹೋದ ನಿರೂಪಕ ಹಲ್ಲೆಗೊಳಗಾಗಿ ಹೊರದಬ್ಬಲ್ಪಡುತ್ತಾನೆ. ಕೊನೆಗೆ ಅದು ಹೇಗೋ ಮೀನನ್ನು ಸಂಪಾದಿಸಿಕೊಂಡು ಬಂದ ನಿರೂಪಕ ರಫೀಕನ ಹೆಂಡತಿಗೆ ಕೊಟ್ಟು ಸುಟ್ಟಾಗ ಅದರ ವಾಸನೆಗೆ ಮತ್ತೆ ಬಂದ ಶ್ರಮಜೀವಿಗಳೆಲ್ಲಾ ಒಂದಾಗುತ್ತಾರೆ. ಮತ್ತೆ ಮೊದಲಿನಂತೆ ಅಲ್ಲಿ ಸೌಹಾರ್ಧತೆಯ ಬದುಕು ಅರಳುತ್ತದೆ. ಇಲ್ಲಿಗೆ ನಾಟಕವೂ ಮುಗಿಯುತ್ತದೆ.

ರಂಗಪಠ್ಯದಲ್ಲಿ ಅಂತಹ ನಾಟಕೀಯ ತಿರುವುಗಳೇನೂ ಹೆಚ್ಚಿಗಿಲ್ಲ. ಕುತೂಹಲವನ್ನು ಕಾಪಾಡಿಕೊಂಡು ಹೋಗಬಲ್ಲ ವಿಷಯಗಳೂ ಇಲ್ಲ. ಅವೈಜ್ಞಾನಿಕ ಜೀವವಿರೋಧಿ ಅಭಿವೃದ್ದಿಯ ಅನಾಹುತಗಳಿಗೆ ಜನತೆ ತತ್ತರಿಸಿರುವುದೂ ಸಹ ಈಗ ಹೊಸ ವಿಷಯವೇನಲ್ಲ.  ಒಂದೆಳೆ ಕಥೆಯನ್ನಿಟ್ಟುಕೊಂಡು ಅದನ್ನೇ ಅಗತ್ಯಕ್ಕೆ ತಕ್ಕಂತೆ ಹಿಗ್ಗಿಸಿ ಬಗ್ಗಿಸಿ ಒಗ್ಗಿಸಿ ನಾಟಕವನ್ನಾಗಿ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ.  ಆದರೆ ಇಡೀ ನಾಟಕ ಪ್ರೇಕ್ಷಕರನ್ನು ಆಕರ್ಷಿಸುವುದು ವಿಶಿಷ್ಟ ರಂಗತಂತ್ರಗಳ ಸಮರ್ಥ ಬಳಕೆಯಿಂದಾಗಿ. ಕನ್ನಡ ಭಾಷೆಯ ಪ್ರೇಕ್ಷಕರಿಗೆ ಮಲಯಾಳಂ ಭಾಷೆಯ ಈ ನಾಟಕ ಶಬ್ಧಶಃ ಅರ್ಥವಾಗದಿದ್ದರೂ ಪ್ರತಿ ದೃಶ್ಯಗಳನ್ನು ಕಟ್ಟಿಕೊಟ್ಟ ರೀತಿ ಮಾತ್ರ ವಿಸ್ಮಯಕಾರಿಯಾಗಿದ್ದು ಕನ್ನಡಿಗರಿಗೆ ಹೊಸ ರೀತಿಯ ಅನುಭವವನ್ನು ಕೊಟ್ಟಿದ್ದಂತೂ ಸುಳ್ಳಲ್ಲ.

ಇಡೀ ನಾಟಕ ವಾಚ್ಯ ಪ್ರಧಾನವಾಗಿದ್ದು ಪಾತ್ರಗಳ ಮಾತುಗಳ ಪ್ರವಾಹಕ್ಕೊಳಗಾಗುವ ಪ್ರೇಕ್ಷಕನಿಗೆ ರಂಗತಂತ್ರಗಳ ಸೂಚ್ಯತೆ ರಿಲ್ಯಾಕ್ಸ್ ನೀಡುತ್ತದೆ. ಆರಂಭ ಮತ್ತು ಅಂತ್ಯದ ದೃಶ್ಯಗಳು ಇಡೀ ನಾಟಕದಲ್ಲಿ ಪ್ರಧಾನವಾಗಿದ್ದು ನಡುಮಧ್ಯದ ದೃಶ್ಯಗಳು ಒಂದಿಷ್ಟು ಎಳೆತವಾದಂತೆ ಭಾಸವಾಗುತ್ತದೆ. ಹಾಸ್ಯಕ್ಕೆ ಹೆಚ್ಚಿನ ಒತ್ತಾಸೆ ಕೊಟ್ಟಿದ್ದರಿಂದಾಗಿ ನಾಟಕದ ತೀಕ್ಷ್ಣತೆ ಡೈಲ್ಯೂಟ್ ಆದಂತೆನಿಸಿತು. ವಿವಾಹಿತನೊಬ್ಬ ಇನ್ನೊಬ್ಬಳನ್ನು ಮೋಹಿಸಲು ಪಡುವ ಪರಿಪಾಟಲು ಹಾಸ್ಯರಸಾಯನದಲ್ಲಿ  ವಿಜ್ರಂಭನೆಗೊಂಡಿದೆ. ರಫೀಕನ ಹಾಸ್ಯ ದೃಶ್ಯಗಳು ನೋಡುಗರ ಮನರಂಜಿಸಿದರೂ ಕಥಾನಕದ ಉದ್ದೇಶದ ಹಂದರಕ್ಕೆ ಸ್ವಲ್ಪ ಹೆಚ್ಚೇ ಅನ್ನುವಂತಿವೆ. ದೃಶ್ಯಗಳನ್ನು ನಾಟಕದ ಆಶಯಕ್ಕೆ ಪೂರಕವಾಗಿ ಇನ್ನೂ ಎಡಿಟ್ ಮಾಡಿದರೆ ಇನ್ನೂ ಉತ್ತಮ ಪ್ರದರ್ಶನವನ್ನು ಕೊಡಬಹುದಾಗಿದೆ.

ವಸ್ತುವಿಗಿಂತಲೂ ಅದನ್ನು ತೋರಿಸಲು ಬಳಸಲಾದ ವಿನ್ಯಾಸವೇ ಬಲು ಆಕರ್ಷಣೀಯವಾಗಿದೆ. ನಾಟಕದ ಕಥೆಗಿಂತಲೂ ಅದನ್ನು ಹೇಳಲು ಬಳಸಿದ ನಿರೂಪಣಾ ಕ್ರಮವೇ ವಿಶಿಷ್ಟವಾಗಿದೆ. ಹೀಗಾಗಿ ಈ ಮಲಯಾಳಿ ನಾಟಕ ನೋಡುಗರ ಗಮನ ಸೆಳೆಯುವುದರಲ್ಲಿ ಗೆದ್ದಿದೆ ಹಾಗೂ ರಾಷ್ಟ್ರೀಯ ರಂಗೋತ್ಸವದಲ್ಲಿ ಪ್ರದರ್ಶನಗೊಳ್ಳುವ ಎಲ್ಲಾ ಅರ್ಹತೆಗಳನ್ನೂ ಪಡೆದಿದೆ. ಈ ಅರ್ಹತೆಗೆ ಕಾರಣವಾಗಿದ್ದು ರಂಗಸಜ್ಜಿಕೆಯ ವಿನ್ಯಾಸ ಹಾಗೂ ಅದರ ಸೂಕ್ತವಾದ ಬಳಕೆ. ರೂಢಿಗತ ರಂಗವಿನ್ಯಾಸವನ್ನು ಬದಲಿಸಿ ಡೀಪ್‌ಸ್ಟೇಜಲ್ಲಿ ತಿರುಗುವ ವಿಂಗ್ಸಗಳ ಬ್ಯಾಕ್‌ಡ್ರಾಪ್ ಬಳಸಿದ್ದು ಹಾಗೂ ಚಲಿಸುವ ಸೈಡ್ ವಿಂಗ್ಸಗಳನ್ನೇ ಬಳಸಿ ಕೆಲವಾರು ದೃಶ್ಯಗಳನ್ನು ಸೃಷ್ಟಿಸಿದ್ದು ಕನ್ನಡದ ಪ್ರೇಕ್ಷಕರಿಗೆ ವಿಶೇಷ ಅನುಭೂತಿಯನ್ನು ನೀಡಿತು. ಬಹುತೇಕ ನಾಟಕಗಳಲ್ಲಿ ಕಲಾವಿದರು ಆಗಮನ ನಿರ್ಗಮನಕ್ಕೆ ಎಡ ಬಲಗಳ ವಿಂಗ್ಸಗಳನ್ನು ಬಳಸಿದರೆ ಈ ನಾಟಕದಲ್ಲಿ ಎಲ್ಲಾ ಪಾತ್ರಗಳೂ ಹಿಂಭಾಗದಿಂದ ಬಂದು ಹೋಗುವುದು ಸಹ ವಿಶೇಷವೆನಿಸುವಂತಿದೆ. ವಿಂಗ್ಸಗಳನ್ನು ಹೇಗೆಲ್ಲಾ ಬಳಸಬಹುದು ಎನ್ನುವುದರ  ಪ್ರಾತ್ಯಕ್ಷಿಕತೆ ಈ ನಾಟಕದಲ್ಲಿದೆ.
 
          ರಂಗವಿನ್ಯಾಸದ ನಂತರ ನಾಟಕವನ್ನು ಎತ್ತರಕ್ಕೇರಿಸಿದ್ದು ಕ್ರಿಸ್ಟ್ ರವರು ಮಾಡಿದ ಬೆಳಕಿನ ವಿನ್ಯಾಸ ಹಾಗೂ ನಿರ್ವಹಣೆ. ರೂಢಿಗತ ಬೆಳಕಿನ ವಿನ್ಯಾಸ ಕ್ರಮವನ್ನು ಬದಲಾಯಿಸಿ ಮಂದ ಬೆಳಕಿನಲಿ ಚೆಂದದಿಂದ ದೃಶ್ಯಗಳನ್ನು ಬೆಳಗಿಸಿ ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡಿದ್ದಂತೂ ಅವಿಸ್ಮರಣೀಯ. ಬೆಳಕು ಬಣ್ಣ ಹಾಗೂ ನೆರಳುಗಳನ್ನು ಹೇಗೆಲ್ಲಾ ಬೆರೆಸಿ ದೃಶ್ಯಗಳನ್ನು ಕಟ್ಟಿಕೊಡಬೇಕು ಎನ್ನುವುದನ್ನು ಕಲಿತುಕೊಳ್ಳುವವರಿಗೆ ಈ ನಾಟಕದ ಬೆಳಕಿನ ವಿನ್ಯಾಸ ಮಾದರಿಯಾಗಿದೆ. ಅದೇ ರೀತಿ ದೃಶ್ಯ ಸಂಯೋಜನೆಗಳೂ ನಾಟಕದ ಯಶಸ್ಸಿನಲ್ಲಿ ಪಾಲು ಕೇಳುವಂತೆ ಮೂಡಿಬಂದಿವೆ. ನಾಟಕದ ಪ್ರತಿಯೊಂದು ಪ್ರೇಮ್ ಸಹ ಚಿತ್ರಕಾರನ ಬಣ್ಣದ ಕ್ಯಾನ್ವಾಸ್ ರೀತಿಯಲ್ಲಿ ಮೂಡಿಬಂದಿದ್ದು ರಂಗದಂಗಳದಲ್ಲಿ ದೃಶ್ಯಚಿತ್ರಣವನ್ನು ಮೂಡಿಸಿವೆ. ಪಾತ್ರಗಳ ಕಾಸ್ಟೂಮ್‌ಗಳ ಬಣ್ಣಗಳೂ ಸಹ ಈ ದೃಶ್ಯಸೃಷ್ಟಿಗೆ ಪೂರಕವಾಗಿವೆ.

ನಾಟಕದಾದ್ಯಂತ ರಂಗಪರಿಕರಗಳನ್ನು ರೂಪಕವಾಗಿ ಬಳಸಲಾಗಿದೆ. ಇಲ್ಲಿ ಸೈಕಲ್‌ನಿಂದ ಹಿಡಿದು ಕಾಂಕ್ರಿಟ್ ಮಿಂಕ್ಸಿಂಗ್ ಮಷಿನ್‌ವರೆಗೂ ಎಲ್ಲವೂ ಸಾಂಕೇತಿಕತೆಯನ್ನು ಬಿಂಬಿಸುವಂತಿವೆ. ರಫೀಕ್ ನೇಣು ಹಾಕಿಕೊಂಡ ನಂತರ ಅದೇ ಜಾಗಕ್ಕೆ ಮೀನಿನ ಅಸ್ತಿಪಂಜರ ನೇತು ಹಾಕಿದ್ದೂ ಸಹ ಶ್ರಮಜೀವಿಗಳ ಹೊಟ್ಟೆಯ ಮೇಲೆ ಹೊಡೆದು ಬೆಳೆಯುವ ಜಾಗತೀಕರಣವನ್ನು ಪ್ರತಿಬಿಂಬಿಸುವಂತೆ ಮೂಡಿಬಂದಿದೆ. ಹಾವು ಕಂಬದಿಂದ ಕೆಳಗಿಳಿಯುವುದನ್ನೂ ಸಾಂಕೇತಿಕವಾಗಿ ತೋರಿಸುತ್ತಾ ಸೌಹಾರ್ಧದಿಂದ ಬದುಕುತ್ತಿದ್ದ ಸಮುದಾಯದಲ್ಲಿ ಹೊರಗಿನವರ ಪ್ರವೇಶವನ್ನು ರೂಪಕದಂತೆ ತೋರಿಸಲಾಗಿದೆ.
     
ನಾಟಕ ಪ್ರೀಯರಿಗೆ ಮಾತ್ರವಲ್ಲ ಮೀನು ಪ್ರೀಯರಿಗೂ ಈ ನಾಟಕ ಖುಷಿಕೊಡುತ್ತದೆ. ಯಾಕೆಂದರೆ ನಾಟಕದಾದ್ಯಂತ ರಂಗವೇದಿಕೆಯ ಮೇಲೆ ಮೀನು ಹೆಂಚಿನ ಮೇಲೆ ಬೇಯುತ್ತಲೇ ಇರುತ್ತದೆ. ಅದರ ವಾಸನೆ ರಂಗಮಂದಿರದೊಳಗೆಲ್ಲಾ ಪಸರಿಸಿ ಪ್ರೇಕ್ಷಕರ ನಾಸಿಕ ಪ್ರವೇಶಿಸಿ ನಾಲಿಗೆಯಲ್ಲಿ ನೀರೂರಿಸುತ್ತದೆ.  ಪಕ್ಕಾ ಸಸ್ಯಾಹಾರಿಗಳಿಗೆ ಈ ಮೀನಿನ ವಾಸನೆ ಒಂದಿಷ್ಟು ಮುಜುಗರ ತಂದರೂ ಮೀನು ಪ್ರೀಯರ ಪಂಚೇಂದ್ರಿಯಗಳಿಗೆ ಹಬ್ಬವೆನಿಸಿದ್ದಂತೂ ಸುಳ್ಳಲ್ಲ. ಕಣ್ಣು ಕಿವಿ ಹಾಗೂ ಬುದ್ದಿಯ ಗ್ರಹಿಕೆಗೆ ದಕ್ಕಬಹುದಾದ ನಾಟಕ ಪ್ರಕಾರವು ಮತ್ತಿ ಯಲ್ಲಿ ನಾಲಿಗೆ ಹಾಗೂ ನಾಸಿಕಕ್ಕೂ ದಕ್ಕಿದ್ದು ಒಂದು ರೀತಿ ನಾಲ್ಕನೇಯ ಆಯಾಮವನ್ನು ರಂಗದ ಮೇಲೆ ಸೃಷ್ಟಿಸಿದಂತಿದೆ.

ನಾಟಕದಾದ್ಯಂತ ಸಿನಿಮೀಯ ದೃಶ್ಯಗಳು ಹೇರಳವಾಗಿವೆ. ಸಿನೆಮಾದಲ್ಲಿ ಬಳಸುವ ಸ್ಲೋಮೋಶನ್ ತಂತ್ರವನ್ನು ಈ ನಾಟಕದಲ್ಲಿ ಅನನ್ಯ ರೀತಿಯಲ್ಲಿ ಸೃಷ್ಟಿಸಲಾಗಿದೆ. ರೈಲು ಬೋಗಿ ಚಲಿಸುವ ದೃಶ್ಯವನ್ನಂತೂ ಪ್ರೇಕ್ಷಕರು ಎಂದೂ ಮರೆಯಲು ಸಾಧ್ಯವೇ ಇಲ್ಲ ಎನ್ನುವ ರೀತಿಯಲ್ಲಿ ತೋರಿಸಲಾಗಿದೆ. ಹೊಗೆಯ ಎಫೆಕ್ಟ್ ಮೂಲಕ ದೃಶ್ಯವನ್ನು ಶ್ರೀಮಂತಗೊಳಿಸಲಾಗಿದೆ. ರೆಕಾರ್ಡೆಡ್ ಹಾಡು ಮತ್ತು ಸಂಗೀತಗಳು ನಾಟಕಕ್ಕೆ ಪೋರ್ಸ. ಕೊನೆಗೆ ಕಂಗಾಲಾದ ರಫೀಕನ ಮನದೊಳಗಿನ ತಲ್ಲಣಗಳನ್ನು ತೋರಿಸಲು ಬಳಸಿದ ಹಿನ್ನಲೆ ಸಂಗೀತ ನಿಜಕ್ಕೂ ಪರಿಣಾಮಕಾರಿಯಾಗಿ ಮೂಡಿಬಂದಿದೆ.

ಕಲಾವಿದರ ಶ್ರಮ, ನಿರ್ದೇಶಕರ ಪರಿಶ್ರಮ ಹಾಗೂ ಒಟ್ಟಾರೆ ರಂಗತಂಡದ ರಂಗಬದ್ಧತೆ ಮತ್ತು ಶಿಸ್ತು ನಾಟಕದಾದ್ಯಂತ ಕಂಡುಬಂದಿತು. ಅವಸರದಲ್ಲಿ ನಾಟಕ ಕಟ್ಟುವ ಅನೇಕರಿಗೆ ನಾಟಕದ ಪ್ರಸ್ತುತಿ ಅಂದರೆ ಹೀಗಿರಬೇಕು ಎಂದು ತೋರಿಸಿಕೊಡುವಂತೆ ನಾಟಕ ಅನಾವರಣಗೊಂಡಿದ್ದು ನೋಡುಗರನ್ನು ಆವರಿಸಿಕೊಂಡಿತು. ಇಂತಹ ವಿಶಿಷ್ಟ ನಾಟಕವನ್ನು ಆಹ್ವಾನಿಸಿ ಕನ್ನಡಿಗರಿಗೆ ತೋರಿಸಿದ ರಂಗನಿರಂತರದ ಸಿಜಿಕೆ ರಾಷ್ಟ್ರೀಯ ನಾಟಕೋತ್ಸವದ ರೂವಾರಿಗಳಿಗೆ ಪ್ರೇಕ್ಷಕರು ಧನ್ಯವಾದಗಳನ್ನು ತಿಳಿಸಲೇಬೇಕು. ಸಾಧಾರಣ ವಸ್ತು ವಿಷಯದ ಕತೆಯನ್ನು ಅಸಾಧಾರಣವಾಗಿ ತೋರಿಸಿದ ಈ ನಾಟಕದ ಯುವ ನಿರ್ದೇಶಕ ಜಿನೋ ಜೋಸೆಪ್‌ರವರಿಗೂ ಹಾಗೂ ಮಲಯಾಳ ಕಲಾನಿಲಯಂ ರಂಗತಂಡಕ್ಕೂ ಅಭಿನಂದನೆಗಳನ್ನು ಹೇಳಲೇಬೇಕಿದೆ.     

              -    ಶಶಿಕಾಂತ ಯಡಹಳ್ಳಿ 



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ