ಗುರುವಾರ, ಜುಲೈ 23, 2015

ಕಣ್ಮನ ಸೆಳೆದ ದೃಶ್ಯಕಾವ್ಯ “ಚಿತ್ರಪಟ” :




ರಾಮಾಯಣಕ್ಕೆ ಹಲವು ಆಯಾಮ... ಕಾಲಕಾಲಕ್ಕೆ ಜನಸಮೂಹದ ಸಮುದಾಯಗಳು ರಾಮಾಯಣವನ್ನು ಭಿನ್ನವಾದ ರೀತಿಯಲ್ಲಿ ವ್ಯಾಖ್ಯಾನಿಸುತ್ತಲೇ ಬಂದಿವೆ. ಪುರೋಹಿತಶಾಹಿ ಮೂಲಗಳು ರಾಮನನ್ನು ಸರ್ವಗುಣ ಸಂಪನ್ನನಾದ ಆರಾಧ್ಯ ದೇವರಂತೆ ಚಿತ್ರಿಸುತ್ತಾ ಭಜಿಸುತ್ತಾ.... ತಮ್ಮ ದಶಾವತಾರ ಪರಿಕಲ್ಪನೆಯ ಹಿತಾಸಕ್ತಿಗೆ ತಕ್ಕಂತೆ ರಾಮಾಯಣವನ್ನು ಬಿಂಬಿಸುತ್ತಾ ಜನತೆಯ ಮೇಲೆ ದೈವ ಕಲ್ಪನೆಯನ್ನು ಹೇರುವ ಪ್ರಯತ್ನವನ್ನು ಶತಮಾನಗಳಿಂದ ಮಾಡುತ್ತಲೇ ಬಂದಿದ್ದಾವೆ. ಅದಕ್ಕೆ ವ್ಯತಿರಿಕ್ತವಾಗಿ ದುಡಿಯುವ ಜನತೆ ರಾಮನನ್ನು ಹಲವಾರು ದೌರ್ಬಲ್ಯಗಳಿರುವ ಮನುಷ್ಯನನ್ನಾಗಿಯೇ ನೋಡಿ ರಾಮಾಯಣವನ್ನು ಕಟ್ಟುತ್ತಲೇ ಬಂದಿದ್ದಾರೆ. ಇದಕ್ಕೆ ಒಂದು ಉದಾಹರಣೆ ಎಂದರೆ ಸೀತಾ ಅಗ್ನಿಪರೀಕ್ಷೆ ಮತ್ತು ಸೀತಾ ಪರಿತ್ಯಾಗ ಸನ್ನಿವೇಶಗಳು. ಪುರುಷ ಪ್ರಧಾನ ವ್ಯವಸ್ಥೆಯ ಪ್ರತಿಪಾದಕನಾದ ರಾಮನನ್ನು ಪುರೋಹಿತಶಾಹಿ ಪ್ರಣೀತರು ಸುಂದರ ಸುಳ್ಳುಗಳ ಮೂಲಕ ವ್ಯಭವೀಕರಿಸಿದರು. ಸೀತೆ ತನ್ನ ಪಾವಿತ್ರ್ಯತೆಯನ್ನು ಸಾಬೀತು ಪಡಿಸಲು ಆದೇಶಿಸಿದ ರಾಮ ಆಕೆಯ ದೈವತ್ವವನ್ನು ಉನ್ನತೀಕರಿಸಿದ ಎಂದೋ ಇಲ್ಲವೇ ಅಗಸನ ಆರೋಪದ ಮಾತು ಕೇಳಿ ಹೆಂಡತಿಯನ್ನೇ ತ್ಯಜಿಸಿದ್ದು ಪ್ರಜಾನಿಷ್ಠತೆಯ ಪರಮ ಮೌಲ್ಯ ಎಂದೋ ವೈದಿಕ ರಾಮಾಯಣಗಳು ಹೇಳುತ್ತಲೇ ಬಂದಿವೆ. ಆದರೆ... ಪಿತೃಪ್ರಧಾನ ವ್ಯವಸ್ಥೆಯ ಭಾಗವಾಗಿದ್ದ ರಾಮ ಎಲ್ಲಾ ಸಾಮಾನ್ಯ ಪುರುಷರಂತೆ ಹೆಂಡತಿಯನ್ನು ಸಂದೇಹಿಸಿ ಅಗ್ನಿದಿವ್ಯಕ್ಕೊಳಪಡಿಸಿದ, ಅಷ್ಟಕ್ಕೂ ಅನುಮಾನ ಪರಿಹಾರವಾಗದೇ ಆಕೆಯನ್ನು ತ್ಯಜಿಸಿದ ಎನ್ನುವಂತಹ ತರ್ಕಕ್ಕೆ ಹತ್ತಿರವಾಗುವಂತಹ ಕಲ್ಪನೆಯೊಂದನ್ನು ಜನಪದರು ಕಟ್ಟಿಕೊಟ್ಟಿದ್ದಾರೆ. ರೀತಿಯ ಪರಿಕಲ್ಪನೆಯ ಒಂದು ಮಾದರಿಯೇ ಚಿತ್ರಪಟ ರಾಮಾಯಣ.

ಹೆಳವನಕಟ್ಟೆ ಗಿರಿಯಮ್ಮನ ಕಾವ್ಯವೊಂದರಲ್ಲಿ ಜನಪದ ರಾಮಾಯಣ ಕುರಿತು ಕೆಲವು ಹೊಳಹುಗಳಿವೆ. ಅದರಲ್ಲಿ ಎಲ್ಲಮ್ಮ ದೇವಿಯ ಭಕ್ತರಾದ ಭೂತೆಯರು ಚಿತ್ರಪಟಗಳನ್ನು ತೋರಿಸಿ, ಜಾನಪದ ಶೈಲಿಯ ನೃತ್ಯ-ಗೀತೆಗಳ ಮೂಲಕ ರಾಮಾಯಣದ ಕತೆಯನ್ನು  ಹೇಳುವ ಶೈಲಿಯನ್ನು ಆಧರಿಸಿ ಡಾ.ಎಚ್.ಎಸ್.ವೆಂಕಟೇಶಮೂರ್ತಿಯವರು ಚಿತ್ರಪಟ ರಾಮಾಯಣ ಎನ್ನುವ ನಾಟಕವನ್ನು ರಚಿಸಿದ್ದರು. ನಾಟಕವನ್ನು ಮಂಜುನಾಥ ಬಡಿಗೇರರು  ಹೆಸರಲ್ಲಿ ಸಮಷ್ಟಿ ರಂಗತಂಡಕ್ಕೆ ದೃಶ್ಯಕಾವ್ಯದ ರೀತಿಯಲ್ಲಿ ವಿಶಿಷ್ಟವಾಗಿ ಚಿತ್ರಪಟ ವನ್ನು ನಿರ್ದೇಶಿಸಿದ್ದಾರೆ. 2015 ಜೂನ್ 25 ರಂದು ಭಾರತ ರಂಗಯಾತ್ರಾ ಕೇಂದ್ರ ಆಯೋಜಿಸಿದ್ದ ಕಾರ್ಯಕ್ರಮದ ಭಾಗವಾಗಿ ರವೀಂದ್ರ ಕಲಾಕ್ಷೇತ್ರದಲ್ಲಿ ಚಿತ್ರಪಟ ಪ್ರದರ್ಶನಗೊಂಡು ವಿಸ್ಮಯವನ್ನು ನೋಡುಗರಲ್ಲಿ ಹುಟ್ಟಿಸಿತು.

ರಾವಣ ಸಂವಾರವಾಗಿ ರಾಮನ ಪಟ್ಟಾಭಿಷೇಕದ ನಂತರವೂ ಶೂರ್ಪನಖಿಗೆ ರಾಮನ ಮೇಲಾಸೆ... ಸೀತೆಯನ್ನು ರಾಮನಿಂದ ದೂರಮಾಡಲು ಕೊರವಂಜಿ ವೇಷದಲ್ಲಿ ಬಂದು ಸೀತೆಯ ಮನವೊಲಿಸಿ ರಾವಣನ ಚಿತ್ರ ಬಿಡಿಸಲು ಒತ್ತಾಯಿಸುತ್ತಾಳೆ. ಸೀತೆ ಬರೆದ ಚಿತ್ರಕ್ಕೆ ಜೀವ ಕೊಟ್ಟು ಶೂರ್ಪನಖಿ ಮಾಯವಾಗುತ್ತಾಳೆ. ಆಗ ಬಂದ ರಾಮನಿಗೆ ರಾವಣನನ್ನು ಕಂಡು ಸೀತೆಯ ಮೇಲೆ ಅನುಮಾನ ಹೆಚ್ಚಾಗಿ ರಾವಣ ಸಂವಾರಕ್ಕೆ ಮುಂದಾಗುತ್ತಾನೆ. ಸೀತೆ ಅಸಹಾಯಕಳಾಗುತ್ತಾಳೆ. ಕುವೆಂಪುರವರ ದಶಾನನ ಸ್ವಪ್ನಸಿದ್ಧಿಯಲ್ಲಿ ಬರುವ ಸೀತೆ ಹಾಗೂ ರಾವಣನ ತಾಯಿ ಮಗನ ಸಂಬಂಧದ ಪರಿಕಲ್ಪನೆಯ ಎಳೆಯನ್ನು ಚಿತ್ರಪಟ ರಾಮಾಯಣದಲ್ಲಿ ಸೇರಿಸಿದ್ದು ಇಡೀ ನಾಟಕಕ್ಕೆ ವಿಶೇಷತೆಯನ್ನು ತಂದು ಕೊಟ್ಟಿದೆ. ಇಲ್ಲಿ ಚಿತ್ರಪಟದಿಂದ ಹೊರಬಂದ ರಾವಣ ಸೀತೆಯನ್ನು ಬಯಸಿದಾಗ ನನ್ನ ಸೇರಬೇಕಾದರೆ, ನನ್ನ ಮಡಿಲಲಿ ಮಲಗಬೇಕಾದರೆ ನನ್ನ ಮಗುವಾಗು ಎಂದು ಸೀತೆ ಸಲಹೆ ಕೊಡುತ್ತಾಳೆ. ಅದಕ್ಕೊಪ್ಪಿದ ರಾವಣ ಆಕೆಯನ್ನು ತಾಯಿ ಎಂದು ಸ್ವೀಕರಿಸಿ ಮಗುವಾಗುತ್ತಾನೆ. ನಂತರ ರಾಮ ಬಂದು ಅನುಮಾನ ಪೀಡಿತನಾಗಿ ರಾವಣನ ಸಂವಾರಕ್ಕೆ ಲಕ್ಷ್ಮಣನ ಜೊತೆ ಸೇರಿ ಪ್ರಯತ್ನಿಸಿದಾಗ ಸೀತೆ ಪ್ರತಿರೋಧಿಸುತ್ತಾಳೆ. ರಾವಣ ನನ್ನ ಸೃಷ್ಟಿ, ನನ್ನ ಮಗ... ಮಗನ ಅವಸಾನ ನೋಡಲಾರೆನೆನ್ನುತ್ತಾಳೆ... ಕೊನೆಗೆ ರಾಮನನ್ನು ಧಿಕ್ಕರಿಸಿ ಚಿತ್ರಪಟದೊಳಗೆ ಸೇರುವ ಮೂಲಕ ತನ್ನ ತೀವ್ರ ಪ್ರತಿಭಟನೆಯನ್ನು ತೋರಿಸುತ್ತಾಳೆ. ಇಲ್ಲಿಗೆ ನಾಟಕವೇನೋ ಮುಗಿಯುತ್ತದೆ... ಆದರೆ ನೋಡುಗರನ್ನು ಆಲೋಚನೆಗೆ ಪ್ರೇರೇಪಿಸುತ್ತದೆ.

ನಾಟಕದ ಕ್ಲೈಮ್ಯಾಕ್ಸನಲ್ಲಿ ಒಂಚೂರು ಬದಲಾವಣೆ ಮಾಡುವ ಮೂಲಕ ಮಾಲತೇಶ ಬಡಿಗೇರರು ಇಡೀ ನಾಟಕಕ್ಕೆ ಅನನ್ಯವಾದ ತಿರುವನ್ನ ಕೊಟ್ಟಿದ್ದಾರೆ. ಡಾ.ಎಚ್.ಎಸ್.ವಿ.ರವರ ನಾಟಕದಲ್ಲಿ ಸೀತೆ ಅಸಹಾಯಕಳಾಗಿ ತನ್ನ ಮಗನೆಂದುಕೊಂಡ ರಾವಣನ ಸಂವಾರ ನೋಡುತ್ತಾ ಅಸಹಾಯಕಳಾಗಿ ಕೂಡುತ್ತಾ ವ್ಯವಸ್ಥೆಯ ದಮನವನ್ನು ಸಾಂಕೇತಿಕವಾಗಿ ಒಪ್ಪಿಕೊಳ್ಳುತ್ತಾಳೆ. ಆದರೆ.... ಬಡಿಗೇರರು ಕಾನ್ಸೆಪ್ಟ ಬದಲಾಯಿಸಿದ್ದಾರೆ. ರಾವಣನ ಮೇಲೆ ರಾಮ ಲಕ್ಷ್ಮಣರ ಹಲ್ಲೆಯನ್ನು ವಿರೋಧಿಸುವ ಸೀತೆ... ರಾಮನ ಅಮಾನವೀಯತೆ ಹಾಗೂ ಅನುಮಾನದ ನಡೆ ನುಡಿಗೆ ಬೇಸತ್ತು ರಾವಣನ ಜೊತೆಗೆ ಚಿತ್ರಪಟದ ಚೌಕಟ್ಟಿನೊಳಗೆ ಹೋಗುವ ಮೂಲಕ ಪುರುಷ ದುರಹಂಕಾರಕ್ಕೆ ಪ್ರತಿಭಟನೆಯನ್ನು ತೋರುತ್ತಾಳೆ ಹಾಗೂ ಅದನ್ನು ನೋಡುತ್ತಾ ರಾಮ ಲಕ್ಷ್ಮಣರು ಅಸಹಾಯಕರಾಗಿ ನಿಲ್ಲುತ್ತಾರೆ...., ಅಸಹಾಯಕರನ್ನಾಗಿಸಿದವರನ್ನೇ ತೊರೆದು ಹೋಗಿ ಪ್ರತಿಭಟಿಸುವ ಮೂಲಕ ಮಹಿಳೆ ದೌರ್ಜನ್ಯವೆಸಗುವವರನ್ನು ಅಸಹಾಯಕರನ್ನಾಗಿಸುವ ಆಶಯ ಸಮಂಜಸವಾಗಿದೆ....ಹಾಗೂ ಪುರುಷ ದೌರ್ಜನ್ಯ ಪೀಡಿತ ಮಹಿಳೆಯರಿಗೆ ಪೀಡನೆ ಮುಕ್ತ ಬದುಕನ್ನು ಕಟ್ಟಿಕೊಳ್ಳಲು ಸಾಂಕೇತಿಕವಾಗಿ ಸ್ವತಂತ್ರ ಪರ್ಯಾಯ ಮಾರ್ಗವನ್ನು ನಾಟಕ ಹೇಳುತ್ತದೆ....


ತರ್ಕಕ್ಕೆ ಅಳವಡಿಸಿದಾಗ ನಾಟಕದಲ್ಲೂ ಸಹ ಕೆಲವು ಅಂತೆ ಕಂತೆಗಳು ಸೇರಿವೆ. ತನ್ನ ಅಣ್ಣ ರಾವಣನ ಸಂವಾರಕ್ಕೆ ಬದಲಾಗಿ ಶೂರ್ಪನಖಿ ರಾಮನ ಮೇಲೆ ಸೇಡು ತೀರಿಸಿಕೊಳ್ಳಲೆಂದು ರಾಮಸೀತೆಯರನ್ನು ಅಗಲಿಸಲು ಸಂಚು ಮಾಡಿದಳೆಂದರೆ ನಂಬಬಹುದೇನೋ? ಆದರೆ ನಾಟಕದಲ್ಲಿ ರಾಮನಲ್ಲಿ ಸಂದೇಹವನ್ನು ಹುಟ್ಟಿಸುವ ಮೂಲಕ ಸೀತೆಯನ್ನು ದೂರಮಾಡಿ ಆತನನ್ನು ತಾನು ಮದುವೆಯಾಗಬೇಕು ಎನ್ನುವ ಶೂರ್ಪನಖಿಯ ದುರಾಸೆ ಅದು ಯಾಕೋ ಸಮಂಜಸ ಎನ್ನಿಸುವುದೇ ಇಲ್ಲ. ಸೀತೆಯನ್ನು ಪಡೆಯಲು ಚಿತ್ರಪಟದ ರಾವಣ ಪ್ರಯತ್ನಿಸಿದಾಗ ಸೀತೆ ಮಗುವಾಗು ಎಂದ ತಕ್ಷಣ ರಾವಣ ಒಪ್ಪಿಕೊಂಡಿದ್ದೂ ಅದ್ಯಾಕೋ ಸರಿಎನ್ನಿಸುವಂತಿಲ್ಲ. ಅದರ ಬದಲಾಗಿ ತಾನು ಬರೆದ ಚಿತ್ರದಿಂದ ಹುಟ್ಟಿದ ರಾವಣ ತನ್ನದೇ ಸೃಷ್ಟಿ... ನನ್ನ ಸೃಷ್ಟಿ ನನ್ನ ಮಗುವಾಗಲು ಮಾತ್ರ ಸಾಧ್ಯ... ಎಂದು ಸೀತೆ ರಾವಣನಿಗೆ ಮನದಟ್ಟು ಮಾಡಿ ಮಗುವಾಗಿಸಿದ್ದರೆ ಇನ್ನೂ ತರ್ಕಬದ್ಧವಾದ ಮಾತಾಗುತ್ತಿತ್ತು.


ತಾತ್ವಿಕ ಚರ್ಚೆಯನ್ನು ಪಕ್ಕಕ್ಕಿಟ್ಟು ನಾಟಕದ ಪ್ರದರ್ಶನವನ್ನು ಪರಿಗಣಿಸಿದರೆ ನಿಜಕ್ಕೂ ಬಡಿಗೇರರು ದೃಶ್ಯಕಾವ್ಯವೊಂದನ್ನು ರಂಗದಂಗಳದಲ್ಲಿ ಸೃಷ್ಟಿಸಿದ್ದಾರೆ.... ಶೈಲೀಕೃತ ಅಭಿನಯ, ಯಕ್ಷಗಾನ ಬಯಲಾಟದ ಭಾವ ಭಂಗಿ ನೃತ್ಯ ಸಂಗೀತಗಳು ನೋಡುಗರ ಮನಸ್ಸನ್ನು ಸೂರೆಗೊಳ್ಳುವಂತಿವೆ. ಕಥೆ ಹೇಳಲು ಜೋಗಪ್ಪ , ಜೋಗವ್ವಗಳನ್ನು ಬಳಸಿ ಮಾಡಲಾದ ನಾಟಕದ ನಿರೂಪನಾ ಶೈಲಿಯೂ ಸಹ ತುಂಬಾ ಸೊಗಸಾಗಿದೆ.... ಒಂದೂ ಕಾಲು ಗಂಟೆಗಳ ಕಾಲ ನೋಡುಗರಿಗೆ ಪ್ಯಾಂಟಸಿ ದೃಶ್ಯಲೋಕ ದರ್ಶನ ಮಾಡಿಸಿದ ಅನುಭವವನ್ನು ಕಟ್ಟಿಕೊಡುವಲ್ಲಿ ಚಿತ್ರಪಟ ಸಫಲವಾಗಿದೆ. ಯಾವುದೇ ಸೆಟ್ ಪರಿಕರಗಳನ್ನು ಹೆಚ್ಚಾಗಿ ಬಳಸದೇ ಇಡೀ ನಾಟಕವನ್ನು ನಟರ ದೇಹಭಾಷೆಯ ಮೂಲಕವೇ ಕಟ್ಟಿಕೊಟ್ಟಿದ್ದು ನಿರ್ದೇಶಕರ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ಪ್ರತಿಯೊಂದು ಚಲನೆ.... ಪ್ರತಿಯೊಂದು ಮಾತಿನ ಶೈಲಿ... ಎಲ್ಲವೂ ವಿಶೇಷ... ನಾಟಕದ ಮೂಲಕ ಅಭಿನಯದಲ್ಲಿ ಹೊಸ ಸಾಧ್ಯತೆಗಳ ಹುಡುಕಾಟದಲ್ಲಿ ಮಂಜುನಾಥ ಬಡಿಗೇರವರು ಬಹುತೇಕ ಯಶಸ್ವಿಯಾಗಿದ್ದಾರೆ. ನಟರ ಆಂಗಿಕ ವಾಚಿಕ ಭಾಷೆಯ ಮೇಲೆ ಅತೀ ಹೆಚ್ಚು ಶ್ರಮವಹಿಸಿದ್ದಾರೆ. ರಂಗಭೂಮಿ ನಟರ ಮಾಧ್ಯಮವಾಗಿದ್ದು, ಅಭಿನಯದ ಮೂಲಕ ವಿಷಯವನ್ನು ನೋಡುಗರಿಗೆ ಸಮರ್ಥವಾಗಿ ಮುಟ್ಟಿಸಬಹುದು ಎಂಬುದಕ್ಕೆ ನಾಟಕ ಸಾಕ್ಷಿಯಾಗಿದೆ. ನಾಟಕವೊಂದನ್ನು ಪ್ರಸ್ತುತಪಡಿಸಲು ಯಕ್ಷಗಾನದಂತಹ ಜಾನಪದ ಕಲಾಪ್ರಕಾರಗಳನ್ನು ಬಳಸಿಕೊಂಡರೆ ಅದು ಹೇಗೆ ನಾಟಕವನ್ನು ಶ್ರೀಮಂತಗೊಳಿಸಬಹುದು ಎನ್ನುವುದನ್ನು ನಾಟಕ ನೋಡಿಯೇ ತಿಳಿಯಬಹುದಾಗಿದೆ.


ಅಭಿನಯ ಪ್ರಧಾನವಾದ ನಾಟಕದಲ್ಲಿ ಕೊರವಂಜಿಯಾಗಿ ಸವಿತಾ ಹಾಗೂ ಸೀತೆಯಾಗಿ ಶ್ವೇತಾ ಇಬ್ಬರ ಪೈಪೋಟಿಯ ಅಭಿನಯ ನೋಡುಗರ ಮನದಾಳಕ್ಕಿಳಿಯುವಂತಹುದು. ಚಂದ್ರನಖಿ ಪಾತ್ರದ ಸೌಮ್ಯ ಜೈನ್ ಹಾಗೂ ಭೂತೆಯರಾಗಿ ಪ್ರಮಿಳಾ, ಧನ್ಯ ಇವರೆಲ್ಲಾ ತಮ್ಮ ಶೈಲೀಕೃತ ಆಂಗಿಕಾಭಿನಯದಿಂದಲೇ ಗಮನಸೆಳೆದರು. ರಾವಣ ಪಾತ್ರದ ರೇಣುಕಾ ಪ್ರಸಾದ್ ನಟನೆ ಕುರಿತು ಹೇಳುವುದಕ್ಕಿಂತ ನೋಡುವುದೇ ಚೆಂದ. ಜೋಗಿಗಳಾದ ಮಧು, ಸಂದೇಶ್, ಹರೀಶ್ ಮೂವರೂ ನಿರೂಪಕರಾಗಿ ನಾಟಕದಲ್ಲಿ ಸಂಚಲನವನ್ನುಂಟುಮಾಡಿದರು. ರಾಮನಾಗಿ ಪದ್ಮ ಪ್ರಸಾದ್ ಇನ್ನೂ ತಮ್ಮ ಪಾತ್ರಕ್ಕೆ ನ್ಯಾಯಸಲ್ಲಿಸಲು ಶ್ರಮಿಸಬೇಕು. ಯಾಕೆಂದರೆ ಸೀತೆಯ ಅಂತಪುರದಲ್ಲಿ ಬರುವಾಗಲೇ ಕೊಪೋದ್ರಿಕ್ತನಾಗಿ ಬರುವ ಅಗತ್ಯವಿರಲಿಲ್ಲ. ನಗುನಗುತ್ತಲೇ ಬಂದು ಅಲ್ಲಿರುವ ವ್ಯತಿರಿಕ್ತ ಸಾಕ್ಷಿಗಳನ್ನು ನೋಡಿ ಸಿಟ್ಟಾಗಿದ್ದರೆ ಸಾಕಿತ್ತು. ಅದ್ಯಾಕೋ ರಾಮ ಲಕ್ಷ್ಮಣರ ಕಾಸ್ಟೂಮ್ಸಗಳು ಸಹ ರಾಜ ತೇಜಸ್ಸಿನಿಂದ ಕೂಡಿರಲಿಲ್ಲ.

ಮಂಜುನಾಥ ಬಡಿಗೇರ
ನಾಟಕದಲ್ಲಿ ಬಳಸಲಾದ ಸಾಂಕೇತಿಕ ಸೆಟ್ ಪರಿಕರಗಳು ದೃಶ್ಯವನ್ನು ಕಟ್ಟಿಕೊಡಲು ಸಾಕೆನಿಸಿತು. ಅದಕ್ಕಿಂತ ಹೆಚ್ಚಾಗಿ ಆರಂಭದ ದೃಶ್ಯದಲ್ಲಿ ಬಿತ್ತಿಚಿತ್ರಗಳನ್ನು ಬಳಸಿ ಕಥೆಯನ್ನು ನಿರೂಪಿಸಿದ ರೀತಿ ಮಾರ್ಮಿಕವಾಗಿತ್ತು. ನಾಟಕದ ದೃಶ್ಯಗಳಲ್ಲಿ ಮೂಡ್ ಸೃಷ್ಟಿಸಲು ಸಂಗೀತ ಹಾಗೂ ಬೆಳಕಿನ ಕೊಡುಗೆ ಬೇಕಾದಷ್ಟಿತ್ತು. ಆದರೆ... ಗಜಾನನ ಹೆಗಡೆಯವರ ಸಂಗೀತ ಸಂಯೋಜನೆಯಲ್ಲಿ ಮೊದಲೇ ರಿಕಾರ್ಡ ಮಾಡಿದ್ದ ಹಾಡು ಸಂಗೀತಗಳು ರಿನ್ಯೂವ್ ಆದ ಕಲಾಕ್ಷೇತ್ರದ ಕೆಟ್ಟದಾದ ಸೌಂಡ್ ಸಿಸ್ಟಂಗಳಿಂದಾಗಿ ಕೇಳುಗರಿಗೆ ಒಂದಿಷ್ಟು ಕಿರಿಕಿರಿ ಮಾಡಿದ್ದಂತೂ ಸುಳ್ಳಲ್ಲ. ಬೆಳಕು ವಿನ್ಯಾಸದಲ್ಲಿ ರವೀಂದ್ರ ಪೂಜಾರರು ಬೇಕಾದಷ್ಟು ಶ್ರಮವಹಿಸಿದರೂ ಕಲಾಕ್ಷೇತ್ರದ ಲೈಟಿಂಗ್ ಮಿತಿಯಲ್ಲಿ ದೃಶ್ಯ ಕೇಳುವ ಇಫೆಕ್ಟನ್ನು ಕೊಡಲು ಸಾಧ್ಯವಾಗದೇ ಹೋದರು. ನಿಜವಾಗಿ ಹೇಳಬೇಕೆಂದರೆ ಒಂದು ದೃಶ್ಯಕಾವ್ಯವನ್ನು ರಂಗಮಂದಿರದ ಬೆಳಕು ಹಾಗೂ  ಸೌಂಡ್-ಮೈಕ್ ಸಿಸ್ಟಂಗಳು ಹಾಳು ಮಾಡಿದವು. ಆದರೂ... ಇರುವ ವ್ಯವಸ್ಥೆಯನ್ನೇ ಬಳಸಿಕೊಂಡು ಗಮನಾರ್ಹ ನಾಟಕವನ್ನು ಪ್ರದರ್ಶಿಸಿದ ಸಮಷ್ಟಿ ರಂಗತಂಡದ ಕಲಾವಿದರು ಹಾಗೂ ನೇಪತ್ಯ ತಂತ್ರಜ್ಞರಿಗೆ ಅಭಿನಂದನೆ ಹೇಳಲೇಬೇಕು. ಅದರಲ್ಲೂ ಇಂತಹ ಕ್ಲಾಸಿಕ್ ನಾಟಕವನ್ನು ನಿರ್ಮಿಸಿದ ರವೀಂದ್ರ ಪೂಜಾರ್ ಹಾಗೂ ನಿರ್ದೇಶಿಸಿದ ಮಂಜುನಾಥ ಬಡಿಗೇರ್ ಇಬ್ಬರೂ ಅಭಿನಂದನಾರ್ಹರು

                 -ಶಶಿಕಾಂತ ಯಡಹಳ್ಳಿ