ಶುಕ್ರವಾರ, ಮಾರ್ಚ್ 22, 2019

ರಂಗಾಯಣದ ಬಿಳಿಯಾನೆ ಪ್ರಹಸನ :




ಸರಕಾರ : ಥೂ..ಥೋ... ಈ ಆನೆ ಸಾಕೋದು ಬಹಳಾನೇ ಕಷ್ಟ ಕಣ್ರಿ.. ಇದರಿಂದ ಆದಾಯಾ ಬರೋದಿರ‍್ಲಿ, ಇದನ್ನ ಮೆಂಟೇನ್ ಮಾಡೋದೇ ಹರಸಾಹಸ ಆಗೋಗಿದೆ. ಇದಕ್ಕೇನಾದ್ರೂ ದಾರಿ ಮಾಡಬೇಕಲ್ಲಾ..

ಸೆಕ್ರೇಟರಿ : ಸಾರ್.. ಹಂಗೆಲ್ಲಾ ನಾವು ಪಬ್ಲಿಕ್ಕಾಗಿ ಹೇಳಿದ್ರೆ ರಂಗಭೂಮಿಯವರು ಸಿಟ್ಟಿಗೇಳ್ತಾರೆ ಸಾರ್. ಧರಣಿ ಸತ್ಯಾಗ್ರಹ ಮಾಡ್ತಾರೆ. ಇದು ಅಂತಿಂತಾ ಆನೆ ಅಲ್ಲಾ ಸಾರ್. ರಂಗಾಯಣದ ಆನೆ. ಮೊದಲೆಲ್ಲಾ ಈ ಆನೆ ಚೆನ್ನಾಗಿಯೇ ಇತ್ತು ಸಾರ್.. ಮಾವುತ ಹೇಳಿದ ಮಾತನ್ನ ಚೆನ್ನಾಗಿ ಕೇಳ್ತಾಯಿತ್ತು. ಆದರೆ.. ಮಾವುತರು ಬದಲಾದಂತೆಲ್ಲಾ ಮರಿ ಆನೆ ಹಿರಿಯಾನೆ ಆಯ್ತು, ಹಿರಿಯಾನೆ ಹೋಗಿ ಈಗ ಬಿಳಿಯಾನೆ ಆಗಿ ಬೆಳೆದಿದೆ. ಸರಕಾರವೇ ನೇಮಿಸಿದ ಮಾವುತರ ಮಾತಿರಲಿ, ಸರಕಾರಿ ಅಧಿಕಾರಿಗಳ ಮಾತೇ ಕೇಳ್ತಿಲ್ಲಾ ಅಂತೀನಿ..

ಸರಕಾರ : ಹಾಗಾದ್ರೆ ಹೇಗ್ರಿ ಮಾಡೋದು? ಇದೊಂತರಾ ಬಿಸಿತುಪ್ಪಾ ಆಯ್ತಲ್ರಿ. ಇದನ್ನ ಇಟ್ಕೊಂಡು ಸಾಕೋದಕ್ಕೂ ಆಗ್ತಿಲ್ಲಾ.. ಆ ಕಡೆ ನಾಡಿಂದಾ ಕಾಡಿಗೆ ಓಡ್ಸೋಕ್ಕೂ ಆಗ್ತಿಲ್ಲಾ.. ಬಲೇ ಪಜೀತಿ ಆಯ್ತಲ್ಲಾ. ಏನಾದ್ರೂ ಐಡಿಯಾ ಇದ್ರೆ ಕೊಡ್ರಿ.

ಸೆಕ್ರೆಟರಿ : ಒಂದು ಐನಾತಿ ಐಡಿಯಾ ಐತೆ ಸಾರ್. ಈ ಆನೆಯನ್ನ ಊರೂರಲ್ಲಿ ಪ್ರದರ್ಶನ ಮಾಡಿಸೋದು, ಟಿಕೇಟಿ ಇಟ್ಟು ಜನರಿಂದ ಹಣ ಪಡಿಯೋದು, ಬಂದ ಹಣದಲ್ಲಿ ಈ ಆನೆಯನ್ನ ಸಾಕೋದು..

ಸರಕಾರ : ಅದನ್ನೆಲ್ಲಾ ಮಾಡಿ ನೋಡಿದ್ದಾಯ್ತಲ್ಲಾ.. ಆದ್ರೂ ಈ ಆನೆ ಕರೆಸಿ ಪ್ರದರ್ಶನ ಮಾಡೋಕೂ ಜನ ಮುಂದೆ ಬರ‍್ತಿಲ್ಲವಲ್ಲಾ.

ಸೆಕ್ರೇಟರಿ : ಅದು ಹಂಗಲ್ಲಾ ಸಾರ್. ನಾನು ಮಾವುತನ ಹತ್ತಿರ ಮಾತಾಡಿದ್ದೀನಿ. ಆನೆ ಮುಂದೆ ಕುವೆಂಪುರವರ ಭಾವಚಿತ್ರ ಹಾಕೋದು, ಆನೆ ಮೇಲೆ ಅವರ ಜ್ಞಾನಪೀಠ ಪುರಸ್ಕೃತ ಗ್ರಂಥ ಶ್ರೀರಾಮಾಯನ ದರ್ಶನಂ ಇಡೋದು. ಆನೆ ನೋಡೋಕೆ ಜನ ಬರದೇ ಇದ್ರೂ ಜ್ಞಾನಪೀಠ ಕೃತಿಯನ್ನಾದರೂ ನೋಡೋಕೆ ಜನ ಟಿಕೇಟ್ ತಗೊಂಡು ಬರ‍್ತಾರೆ ಸಾರ್.. ಕುವೆಂಪುರವರ ಹೆಸರಲ್ಲೇ ಮಾರ್ಕೆಟಿಂಗ್ ಮಾಡಿದ್ರಾಯ್ತು. 



ಸರಕಾರ : ಏನಾದ್ರೂ ಮಾಡ್ರಿ, ಸರಕಾರದ ಹೆಸರೂ ಕೆಡಬಾರ‍್ದು, ಆ ಬಿಳಿಯಾನೆ ಸರಕಾರಕ್ಕ ಹೊರೇನೂ ಆಗಬಾರ‍್ದು ಆ ರೀತಿ ಐಡಿಯಾ ಮಾಡಿ.. ಏನಾಯ್ತು ಅಂತಾ ಆದಷ್ಟು ಬೇಗ ರಿಪೋರ್ಟ ಮಾಡಿ.

ಸೆಕ್ರೆಟರಿ : ಸರಿ ಸಾರ್.. ಎಲ್ಲಾ ಜವಾಬ್ದಾರಿ ಆನೆಯನ್ನ ನೋಡಿಕೊಳ್ಳೋ ಮಾವುತನಿಗೆ ಒಪ್ಪಿಸ್ತೀನಿ, ನೀವೇನೂ ಚಿಂತೆ ಮಾಡಿಬೇಡಿ.. ಸರಕಾರದ ಹಿತರಕ್ಷಣೆ ಮಾಡೋದೇ ಅಧಿಕಾರಿಗಳಾದ ನಮ್ಮ ಕೆಲಸ..


ದೃಶ್ಯ : 2
ಮಾವುತ : (ಪೋನಿನಲ್ಲಿ) ನಮಸ್ಕಾರ.. ಯಾರು ಉಡುಪಿಯ ರಂಗಭೂಮಿಯವರಾ.. ನಾವು ರಂಗಾಯಣದವರು. ಬಿಳಿಯಾನೆಯ ಮೇಲೆ ಶ್ರೀರಾಮಾಯನ ದರ್ಶನಂ ಕೃತಿ ಪ್ರದರ್ಶನವನ್ನ ಮಾಡುವ ಯೋಜನೆ ಹಾಕಿಕೊಂಡಿದ್ದು ನಿಮಗೆ ಗೊತ್ತಿರಬಹುದು. ನಿಮ್ಮ ಉಡುಪಿಯಲ್ಲಿ ಪ್ರದರ್ಶನವನ್ನು ನೀವು ಏರ್ಪಡಿಸಲೇಬೇಕು ಅನ್ನೋದು ನಮ್ಮ ಅಭಿಲಾಷೆ. ಏನಂತೀರಿ..

ಸಂಘಟಕ : ಹೌದಾ.. ತುಂಬಾ ಒಳ್ಳೇ ಸುದ್ದಿ ಮಾರ್ರಾಯ್ರೆ.. ಆದರೆ.. ನಮ್ಮದು ಚಿಕ್ಕ ರಂಗಸಂಸ್ಥೆ, ನಿಮ್ಮ ಸರಕಾರಿ ಐರಾವತವನ್ನು ಸಾಕೋವಷ್ಟು ಇನ್ನೂ ದೊಡ್ಡಮಟ್ಟದಲ್ಲಿ ನಾವಿಲ್ಲ.. ಮರಿಯಾನೆಗಳಿದ್ದರೆ ಕಳಿಸಿ ಪ್ರದರ್ಶಿಸುವಾ..

ಮಾವುತ : ಓಹೋ.. ಅದು ಹಾಗಲ್ಲಾ.. ನೀವು ಕುವೆಂಪುರವರ ಹೆಸರು ಕೇಳಿದ್ದೀರಲ್ವಾ.. ಅವರಿಗೆ ಜ್ಞಾನಪೀಠ ಅವಾರ್ಡ ತಂದುಕೊಟ್ಟ ಗ್ರಂಥ ಇದೆಯಲ್ಲಾ.. ಅದನ್ನ ನಾವು ಬಿಳಿಯಾನೆ ಮೇಲಿಟ್ಟು ಕಳಿಸ್ತೇವೆ.. ನೀವು ಟಿಕೆಟ್ ಇಟ್ಟು ಪ್ರದರ್ಶನ ಮಾಡಿದ್ರೆ ತುಂಬಾ ಲಾಭ ಬರಲಿಕ್ಕುಂಟು.

ಸಂಘಟಕ : ಹೌದಾ.. ನಿಜಕ್ಕೂ ಲಾಭ ಬರಲಿಕ್ಕುಂಟಾ.. ಹಾಗೆ ಬರೋದಿದ್ರೆ ಒಳ್ಳೇಯದು..  ಆದ್ರೆ.. ಆ ಐರಾವತಕ್ಕೆ ತಕ್ಕುದಾದ ಸ್ಟೇಜ್ ಬೇಕಲ್ಲಾ, ಅಂತಾ ದೊಡ್ಡ ವೇದಿಕೆ ನಮ್ಮ ಉಡುಪಿಯಲ್ಲಿಲ್ಲ ಮಾರ್ರೆ.. ನಿಮ್ಮ ಆನೆಯನ್ನ ಬೇರೆ ಊರಿಗೆ ಕಳಿಸಿ.. ನಮಗೆ ಅದು ಈಗ ಅದು ಬೇಡಾ..

ಮಾವುತ : ಹೀಗಂದ್ರೆ ಹೇಗೆ.. ನೀವು ಒಳ್ಳೆಯ ಸಂಘಟಕರು ಅಂತಾ ಕೇಳಿದ್ದೀವಿ. ನಿಮಗೇನೂ ಹೆಚ್ಚು ಹೊರೆ ಆಗೋದಿಲ್ಲಾ. ಲೈಟ್ಸ್, ಸೆಟ್ಸ್ ಎಲ್ಲಾ ನಾವೇ ತರೀವಿ.. ನೀವು ಆನೆಗೆ ಹಾಗೂ ಅದರ ಜೊತೆಗೆ ಬರೋ ಜನರಿಗೆ ಊಟ ವಸತಿ ಮಾತ್ರ ನೋಡ್ಕಂಡ್ರೆ ಸಾಕು. ಟಿಕೇಟ್ಟಿನಿಂದಾ ಬರೋ ಹಣವೆಲ್ಲ ನಿಮಗೆ.. ನಮಗೇನೂ ಕೊಡಬೇಕಾಗಿಲ್ಲ. ಒಟ್ಟಿನ ಮೇಲೆ ನಿಮ್ಮೂರಿನ ಜನ ನಮ್ಮ ಆನೆ ನೋಡಬೇಕು.. ಅಷ್ಟೇ..

ಸಂಘಟಕ : ಹೌದಾ.. ಊಟ ವಸತಿ ಮಾತ್ರ ಕೊಟ್ರೆ ಸಾಕಾ.. ಬಂದ ಹಣವೆಲ್ಲಾ ನಮಗೇನಾ. ಹಾಗಾದ್ರೆ ಆಗಬಹುದು. ನಮ್ಮ ಎಂಜಿಎಂ ಕಾಲೇಜಲ್ಲಿ ಬಯಲುರಂಗ ಮಂಟಪ ಉಂಟು ಮಾರ್ರಾಯ್ರೆ.. ಅಲ್ಲಿ ಆನೆ ಪ್ರದರ್ಶನ ಮಾಡೋವಾ.. ಅದಕ್ಕೆ ಪರದೆ ಗಿರದೆ ಶಾಮಿಯಾನ ಬೇಕಲ್ವಾ..

ಮಾವುತ : ಅದಕ್ಕೆಂತಾ ಖರ್ಚಾಗುತ್ತೆ.. ಶಾಮಿಯಾನದವನಿಗೆ ಹೇಳಿದ್ರೆ ಅವರೇ ತಂದಾಕ್ತಾರೆ. ಹಂಗೆ ಮೈಕು ಮತ್ತು ಸ್ಪೀಕರ್ ತರೋದಕ್ಕೆ ಹೇಳಿ.. ನಿಮಗೆ ಟಿಕೆಟ್ ಮಾರಿದ ಹಣ ಪ್ರದರ್ಶನ ಮಾಡೋಕೆ ಮುಂಚೆನೆ ಬರುತ್ತಲ್ವಾ ಅದರಲ್ಲಿ ಸ್ವಲ್ಪ ಖರ್ಚು ಮಾಡಿ. ರಂಗಾಯಣದ ಬಿಳಿಯಾನೆ ಬರ‍್ತಿದೆ, ಕುವೆಂಪುರವರ ಕೃತಿ ಹೊತ್ತು ತರ‍್ತಿದೆ ಅಂತೆಲ್ಲಾ ಪ್ರಚಾರ ಮಾಡಿ. ಆಗ ನೋಡಿ.. ಜನ ಓಡೋಡಿ ಬರ್ತಾರೆ. ಮುಗಿಬಿದ್ದು ಟಿಕೇಟ್ ಕೊಂಡಕೊಳ್ತಾರೆ. ಮುಂದಿನ ತಿಂಗಳು ಮಾರ್ಚ 17ರಂದು ಪ್ರದರ್ಶನ ಮಾಡಬಹುದಲ್ವಾ..

ಸಂಘಟಕ : ನೀವು ಇಷ್ಟೆಲ್ಲಾ ಒತ್ತಾಯ ಮಾಡಿ ಹೇಳಿದ್ದರಿಂದ ಆಯ್ತು, ಒಪ್ಪಿಕೊಳ್ತೇವೆ.. ನಿಮ್ಮ ಐರಾವತದ ಪ್ರದರ್ಶನ ನಮ್ಮೂರಲ್ಲಿ ಆಗಿಬಿಡಲಿ. ನಮ್ಮೂರಿನ ಜನಕ್ಕೂ ಆನೆ ನೋಡಿದ ಆನಂದ ಸಿಗೋದಿದ್ರೆ ಸಿಗಲಿ, ಆಯ್ತು.. ಕಟ್ ಮಾಡ್ಲಾ ಪೋನು..


ದೃಶ್ಯ : 3
ಒಬ್ಬ : ಆನೆ ಹೆಸರಲ್ಲಿ ಲಾಭ ಮಾಡ್ಕೊಂತಿರೋ ಸಂಘಟಕರಿಗೆ ದಿಕ್ಕಾರ.

ಇನ್ನೊಬ್ಬ : ಏನು..? ಒಂದು ಟಿಕೇಟಿಗೆ ನೂರುಪಾಯಿಯಾ, ಡೋನರ್ ಪಾಸ್ ಸಾವಿರ ರೂಪಾಯಿಯಾ.. ಅಯ್ಯ್ಯೋ ಅನ್ಯಾಯಾ.. ಇದು ಲೂಟಿ ಮಾರ್ರಾಯ್ರೆ.. ಮಹಾಲೂಟಿ.. ಹಗಲು ದರೋಡೆ.

ಮತ್ತೊಬ್ಬ : ಇದನ್ನು ಸ್ಥಳೀಯರು ಖಂಡಿಸಲೇಬೇಕು, ರಂಗಕರ್ಮಿಗಳೆಲ್ಲಾ ಪ್ರತಿಭಟಿಸಬೇಕು.

ಸಂಘಟಕ : ಇದು ಸಾಮಾನ್ಯ ಆನೆಯಲ್ಲಾ.. ಐರಾವತ ಸ್ವಾಮಿ ಐರಾವತ.. ಅದು ಎಷ್ಟು ದೊಡ್ಡದಿದೆಯೋ ಖರ್ಚೂ ಅದಕ್ಕಿಂತಾ ಹೆಚ್ಚಿದೆ. ಕೊಡುವ ದಾನಿಗಳು ಮುಂದೆ ಬಂದರೆ ಬೇಡ ಅನ್ನಲು ನಾವ್ಯಾರು? ನಾವೇನೂ ಯಾರಿಗೂ ಬಲವಂತಾ ಮಾಡ್ತಿಲ್ಲಾ. ಮುಂದೆ ಕುಳಿತು ಆನೆಯನ್ನು ಕಣ್ತುಂಬಿ ನೋಡಬೇಕೆನ್ನುವವರು ಡೋನರ್‌ಪಾಸ್ ಕೊಳ್ತಾರೆ. ಆಗದವರು ನೂರುಪಾಯಿ ಕೊಟ್ಟು ಟಿಕೇಟ್ ತಗೋತಾರೆ.. ಇದರಲ್ಲೇನಿದೆ ಅನ್ಯಾಯಾ..

ಒಬ್ಬ : ಇದರಲ್ಲೇ ಇರೋದು ಅನ್ಯಾಯಾ. ಪ್ರೇಕ್ಷಕರಲ್ಲಿ ತಾರತಮ್ಯ ಮಾಡ್ರೀರೇನ್ರಿ. ಮುಂದೆ ಕೂತವರು ದಾನಿಗಳಾದರೆ ಹಿಂದೆ ಕೂತವರು ಕಾಂಜಿಪೀಂಜಿಗಳಾ.. ರಂಗಭೂಮಿಯಲ್ಲಿ ಇಂತಾ ಅಸಮಾನತೆಗೆ ದಿಕ್ಕಾರ..

ಇನ್ನೊಬ್ಬ : ಹೌದೌದು.. ಇಂತಹುದನ್ನ ಖಂಡಿಸಲೇಬೇಕು.. ಸ್ಥಳೀಯರಂತೂ ಪ್ರತಿಭಟಿಸಲೇಬೇಕು.

ಮತ್ತೊಬ್ಬ : ಲಾಭಕೋರ ರಂಗಭೂಮಿ ಸಂಘಟನೆಗೆ ದಿಕ್ಕಾರ.. ದಿಕ್ಕಾರಾ..

ಸಂಘಟಕ : ರೀ ಸ್ವಾಮಿ ದಿಕ್ಕಾರೇಶ್ವರಗಳಿರಾ.. ಹೆತ್ತವರಿಗಷ್ಟೇ ಹೆರಿಗೆ ನೋವು ಗೊತ್ತಾಗೋದೇ ಹೊರತು ಡಾಕ್ಟರ್ ಕಂಪೌಂಡರ್ ಗಳಿಗಲ್ಲಾ. ಅದೇರೀತಿ ಸಂಘಟಕರ ನೋವು ರಂಗನಿರ್ದೇಶಕ ಪ್ರೇಕ್ಷಕರಿಗೆ ಅರ್ಥವಾಗೋದಿಲ್ಲಾ. ನೀವೆಲ್ಲಾ ಬೇಡಾ ಅಂದ್ರ ಬೇಡಾ ಬಿಡಿ. ಆಗೋ ಖರ್ಚನ್ನ ನೀವು ದಿಕ್ಕಾರ ಕೂಗೋರು ಕೊಟ್ಟರೆ ನಾವು ಪುಕ್ಸಟ್ಟೆ ತೋರಿಸ್ತೀವಿ..

ಒಬ್ಬ : ನಮಗೇನು ಮಾಡೋಕೆ ಬೇರೆ ಕೆಲಸ ಇಲ್ವಾ.. ನೀನೇ ಆನೆ ತೋರಿಸ್ಕೋ ಹೋಗು.. ಜನರ ಗಮನ ಸೆಳೆಯೋಕೆ ನಾವು ದಿಕ್ಕಾರ ಕೂಗಬೇಕು ಕೂಗ್ತೀವಿ.. ವಾಟ್ಸಾಪ್ ಫೇಸ್ಬುಕ್‌ಗಳಲ್ಲೆಲ್ಲಾ ಬರೀಬೇಕು ಬರೀತೀವಿ.


ದೃಶ್ಯ : 4
ಮಾವುತ : (ಮೊಬೈಲ್ನಲ್ಲಿ) ಅಬಾಬಾ.. ಎಷ್ಟೊಂದು ಜನರನ್ನ ಸೇರಿಸಿದ್ರೀ ನೀವು ನಮ್ಮ ಆನೆ ನೋಡೋಕೆ. ಅದ್ಬುತಾ.. ಅತ್ಯದ್ಬುತ.

ಸಂಘಟಕ : ಅದಿರಲಿ  ಮಾರ್ರೆ.. ಲಾಭನಷ್ಟದ ಕುರಿತು ಮಾತಾಡೋಣ..

ಮಾವುತ : ಲಾಭ ಎಲ್ಲಾ ನಿಮಗೆ.. ನಮಗೇನೂ ಒಂದು ನೈಯಾಪೈಸೆ ಬೇಕಾಗಿಲ್ಲಾ. ಆನೆ ಜೊತೆ ಬಂದವರನ್ನ ಚೆನ್ನಾಗಿ ನೋಡಿಕೊಂಡ್ರಿ.. ಅದಕ್ಕೆ ನಿಮಗೊಂದು ಥ್ಯಾಂಕ್ಸ ಹೇಳೋಣಾ ಅಂತಾ ಪೋನ್ ಮಾಡಿದೆ..

ಸಂಘಟಕ : ಅದಲ್ಲಾರೀ.. ಮೊದಲು ಲೆಕ್ಕ ಲೆಕ್ಕಾ ಹೇಳ್ತೀನಿ  ಕೇಳ್ರಿ..

ಮಾವುತ : ನೀವು ನಮಗೆ ಎಷ್ಟು ಲಾಭ ಬಂತೂ ಅಂತಾ ಲೆಕ್ಕಾ ಹೇಳೋ ಅಗತ್ಯಾನೇ ಇಲ್ಲಾ ಬಿಡಿ. ಎಲ್ಲಾ ನಿಮ್ದೆ. ಅದೇನೋ ಡೋನರ್ ಪಾಸ್ ಅಂತಾ ಬೇರೆ ಇಟ್ಟು ತಲಾ ಸಾವಿರಾರು ರೂಪಾಯಿ ಕಲೆಕ್ಟ್ ಮಾಡಿದ್ರಂತಲ್ಲಾ. ಅದಕ್ಕೆ ಪ್ರಸಿದ್ಧ ರಂಗನಿರ್ದೇಶಕರೊಬ್ಬರು ನನಗೆ ಪೋನ್ ಮಾಡಿದ್ರು. ಆನೆ ಪ್ರದರ್ಶನ ರದ್ದು ಮಾಡಿ, ಆನೆ ಹೆಸರಲ್ಲಿ ಇಲ್ಲಿ ಹಣದ ಲೂಟಿ ಮಾಡ್ತಿದ್ದಾರೆ ಅಂತಾ ಆರೋಪಿಸಿದ್ರು. ನಾವು ಇಂತಾದ್ದಕ್ಕೆಲ್ಲಾ ಇಂಪಾರ್ಟನ್ಸ್ ಕೊಡೋಕೆ ಹೋಗೋದಿಲ್ಲಾ. ರಂಗಸಂಘಟಕರೂ ಬದುಕ್ ಬೇಕು ಹಾಗೇನೆ ನಮ್ಮ ಆನೆಗೂ ಬೆಲೆ ಬರಬೇಕು.. ಇದು ಹೇಳಿಕೇಳಿ ಸರಕಾರದ ಆನೆ ನೋಡಿ.. ಜನರ ಸೇವೆಗೆ ಸದಾ ಸಿದ್ದ. ರಂಗಸಂಘಟಕರ ಹಿತರಕ್ಷಣೆಗೆ ಸದಾ ಬದ್ದ.

ಸಂಘಟಕ : (ಸಹನೆ ಕಳೆದುಕೊಂಡು) ಅಯ್ಯೋ.. ನಿಮಗೂ ನಿಮ್ಮ ಆನೆಗೂ ಒಂದು  ದೊಡ್ಡ ನಮಸ್ಕಾರಾ ಮಾರಾಯ್ರೆ. ಸುಮ್ಕೆ ಇಲ್ಲದ್ದನ್ನೆಲ್ಲಾ ಮಾತಾಡಿ ನಮ್ಮ ಮಂಡೆಬಿಸಿ ಮಾಡಬೇಡಿ. ಆ ನಿಮ್ಮ ಐರಾವತವನ್ನ ಹೇಗೋ ಸಾಕಬಹುದು.. ಆದರೆ ಅದರ ಜೊತೆ ಬಂದಿದ್ದರಲ್ಲಾ ಐವತ್ತು ಜನ ಬಿಳಿಯಾನೆಯ ಪರಿಪಾಲಕರು ಅವರನ್ನು ಸಾಕೋದರಲ್ಲೇ ನಾವು ಹಾಳಾಗಿ ಹೋದ್ವಿ. ಅವರಿಗೆ ಉಡುಪಿ ಬಿಸಿಲು ಆಗೋದಿಲ್ವಂತೆ. ಎಸಿ ರೂಮೇ ಬೇಕಂತೆ. ಬರೀ ಲಾಜಿಂಗ್ ಬಾಡಿಗೇನೇ ನಲವತ್ತು ಸಾವಿರ ಕಟ್ಟಿದ್ದೀನಿ ಗೊತ್ತೇನ್ರೀ..

ಮಾವುತ : ಹೌದಾ.. ಅದರಲ್ಲಿ ತಪ್ಪೇನಿಲ್ಲಾ ಬಿಡಿ. ಸರಕಾರದ ಆನೆ ಬಿಸಿಲಲ್ಲಿ ಬೆಂದುಹೋಗಬಾರದು ನೋಡಿ.. ಅದರ ಬಳಗಕ್ಕೆ ಎಸಿ ರೂಮು ಮಾಡಿದ್ರೆ ತಪ್ಪೇನೂ ಇಲ್ಲಾ. ಇದೆಲ್ಲಾ ನೀವು ರಂಗಾಯಣಕ್ಕೆ ಮಾಡುವ ಸೇವೆ ಅಂದ್ಕೊಳ್ಳಿ.

ಸಂಘಟಕ : ನಾವೇನೋ ಹತ್ತಾರು ಜನ ಬರ‍್ತಾರೆ ಅನ್ಕೊಂಡ್ರೆ.. ಐವತ್ತರವತ್ತು ಜನ ಆನೆ ಜೊತೆ ಬಂದ್ರೆ.. ಅವರಿಗೆ ತಿಂಡಿ, ಎರಡೊತ್ತು ಊಟ, ಬೇಕ್ ಬೇಕಾದಾಗ ಕಾಫಿ ಜ್ಯೂಸ್‌ಗಳಿಗೆ ಮೂವತ್ತು ಸಾವಿರ ಎಗರೋಗ್ತಲ್ಲಾ ಮಾರಾಯ್ರೆ.. ಅದನ್ನೆಲ್ಲಾ ಯಾರು ಕೊಡೋದು..

ಮಾವುತ : ಇಷ್ಟಕ್ಕೆಲ್ಲಾ ಚಿಂತೆ ಮಾಡಿದ್ರೆ ಹೇಗೆ.. ನೀವು ಉಡುಪಿಯವರು.. ಇಡೀ ವಿಶ್ವಾದ್ಯಂತ ಹೊಟೇಲ್ ತೆರೆದು ಜಗತ್ತಿನ ಜನರಿಗೆ ಊಟ ಹಾಕೋ ಉದಾರಿ ಜನ. ಈ ಅರವತ್ತು ಜನಕ್ಕೆ ಊಟ ತಿಂಡಿಗೆಲ್ಲಾ ಲೆಕ್ಕಾ ಹಾಕಿದ್ರೆ ಹೆಂಗೆ..

ಸಂಘಟಕ : ಅಯ್ಯೋ.. ನಮ್ಮ ಕಷ್ಟ ನಿಮಗೆ ಹೇಗೆ ಹೇಳೋದು. ಸ್ಟೇಜು, ಶಾಮಿಯಾನಾ, ಖುರ್ಚಿ, ಸ್ಪೀಕರ‍್ಗಳು, ಮೈಕು, ಜನರೇಟರು ಅದು ಇದು ಪರಿಕರಗಳ ಬಾಡಿಗೆಗೆನೇ ಒಂದು ಲಕ್ಷದ ಮೇಲೆ ಖರ್ಚಾಗಿದೆಯಲ್ಲಾ ಇದನ್ನ ನಿಮ್ಮ ಸರಕಾರ ಕೊಡುತ್ತಾ..

ಮಾವುತ : ನಿಮ್ಮ ಖರ್ಚಿಗೂ ಸರಕಾರಕ್ಕೂ ಅದೆಂತಹ ಸಂಬಂಧ ಕಟ್ತೀರಿ ರಾಯ್ರೆ.. ನೀವೇನು ಸುಮ್ಮನೇ ಧರ್ಮಕ್ಕಾ ಆನೆ ಪ್ರದರ್ಶನ ಮಾಡಿದ್ದು. ಟಿಕೇಟ್ ಇಟ್ಟಿಲ್ವಾ. ಡೊನರ್ ಪಾಸ್ ಕೊಟ್ಟಿಲ್ವಾ, ಆನೆಯ ಪ್ರಸಿದ್ದಿಯಿಂದಾಗಿ ಜನ ಬಂದು ಥೇಯಟರ್ ತುಂಬಿಲ್ವಾ.. ಮತ್ತೆಂತಹುದು ಪಿರಿಪಿರಿ ನಿಮ್ಮದು.

ಸಂಘಟಕ : ರೀ ಸ್ವಾಮಿ.. ಆ ಹೊಟ್ಟೆಕಿಚ್ಚಿನ ಜನರ ಹಾಗೇನೇ ನೀವು ಮಾತಾಡ್ತೀರಲ್ರೀ. ನಾವು ಊರೆಲ್ಲಾ ಅಲೆದು ಅವರಿವರನ್ನ ಕಾಡಿ ಬೇಡಿ ಡೋನರ್ ಪಾಸ್ ಮಾರಿದ್ರೂ ಮೂವತ್ತು ಜನ ತಗೊಂಡಿಲ್ಲಾ. ಅವರಿವರಿಗೆ ನಮಗೆ ಬೇಕಾದವರಿಗೆ ನಾವೇ ಪುಕ್ಸಟ್ಟೆ ಪಾಸ್ ಕೊಟ್ಟು ಬಂದ್ವಿ. ಊರು ತುಂಬಾ ಬ್ಯಾನರ್ ಕಟ್ಟಿದ್ವಿ, ಸಿಕ್ಕಾಪಟ್ಟೆ ಪ್ರಚಾರ ಮಾಡಿದ್ವಿ.. ಅದಕ್ಕೂ ಹಣ ಖರ್ಚಾಯಿತು. ಆಗ ಜನ ಬಂದ್ರು. ಖುರ್ಚಿ ತುಂಬಿದ್ರು. ಆದರೆ.. ಬಂದ ಹಣಕ್ಕೆ, ನಿಮ್ಮ ಆನೆಗೆ ಮಾಡಿದ ಖರ್ಚಿಗೆ ನಿನ್ನೆಯಿಂದಾ ಆರು ಜನ ಕೂತು ಲೆಕ್ಕ ಹಾಕಿದ್ಮೇಲೆ ಗೊತ್ತಾಯ್ತು ನಲವತ್ತು ಸಾವಿರ ರೂಪಾಯಿ ನಷ್ಟ ಆಗಿದೆ ಅಂತಾ.. ನಮಗಾದ ನಷ್ಟವನ್ನ ಯಾರ್ರೀ ಈಗ ಕಟ್ಟಿಕೊಡ್ತಾರೆ.

ಮಾವುತ : ಹೌದಾ. ನಿಮಗೆ ಲಾಭ ಬಂದಿಲ್ವಾ. ಮತ್ತೆ ಆ ಮಂದಿ ನಂಗೆ ಪೋನ್ ಮಾಡಿ ಆನೆ ಹೆಸರಲ್ಲಿ ದಾನಿಗಳಿಂದ ಬೇಕಾದಷ್ಟು ಹಣ ಲೂಟಿ ಮಾಡಿದ್ರಿ ಅಂತಾ ಹೇಳಿದ್ರಲ್ಲಾ. ನಿಜವಾಗಿಯೂ ನಿಮಗೆ ಲಾಭ ಬಂದಿಲ್ವಾ..

ಸಂಘಟಕ : ಸುಳ್ಳು  ಲೆಕ್ಕ ಹೇಳೋದಿಕ್ಕೆ ನಾನು ಸರಕಾರವೂ ಅಲ್ಲಾ, ಸರಕಾರಿ ಅಧಿಕಾರಿಯೂ ಅಲ್ಲಾ ಮಾರಾಯ್ರೆ. ನಿಮ್ಮ ಆನೆ ಪ್ರದರ್ಶನ ಮಾಡಿ ಇತ್ತ ಹಣವೂ ಹೋಯ್ತು, ಅತ್ತ ಹೆಸರೂ ಹಾಳಾಯ್ತು. ಎಷ್ಟೊಂದು ಹೆಸರು ಮಾಡಿದ್ದ ನಮ್ಮ ಸಂಘಟನೆ ಆ ಹೊಟ್ಟೆಕಿಚ್ಚಿನವರ ಬಾಯಿಗೆ ಎಲೆಅಡಿಕೆ ಆಯ್ತು.

ಮಾವುತ : ಓಹೋ ಹಾಗೋ.. ಈ ವಿಷಯ ನನಗೆ ಆನೆಯಾಣೆಗೂ ಗೊತ್ತಿರಲಿಲ್ಲ, ಸಾರಿ.. ಅದ್ಯಾರೋ ಹೊಟ್ಟೆಕಿಚ್ಚಿನವರು ಅಂದ್ರಲ್ಲಾ.. ಅವರು ಹೇಳಿದ್ದನ್ನೇ ನಾವು ನಂಬಿ ತಪ್ಪಾಗಿ ತಿಳಕೊಂಡಿದ್ವಿ. ಇದನ್ನೆಲ್ಲಾ ರಂಗಭೂಮಿಗೆ ನೀವು ಮಾಡಿದ ಸೇವೆ ಅನ್ಕೊಳ್ಳಿ. ಚಿಂತೆ ಮಾಡಬೇಡಿ.. ನಮ್ಮ ಆನೆಗೆ ಈಗಲೂ ತುಂಬಾ ಡಿಮ್ಯಾಂಡ್ ಇದೆ. ಇನ್ನೊಂದು ಸಲ ನಿಮ್ಮೂರಿಗೆ ಇಲ್ಲಾ ನಿಮ್ಮ ಅಕ್ಕಪಕ್ಕದ ಪಟ್ಟಣಕ್ಕೆ ಆನೆ ಕಳಿಸಿ ಕೊಡ್ತೀವಿ. ನೀವು ಇನ್ನೊಮ್ಮೆ ನಮ್ಮ ಜಗತ್ಪ್ರಸಿದ್ದ ಆನೆಯನ್ನ ಪ್ರದರ್ಶನ ಮಾಡಿ ಹಣ ಸಂಪಾದನೆ ಮಾಡಿಕೋಬಹುದು. ನಿಮಗೆ ಈಗಾದ ನಷ್ಟ ತುಂಬಿಕೊಂಡು ಲಾಭಾನೂ ಮಾಡ್ಕೋಬಹುದು.

ಸಂಘಟಕ : ಅಯ್ಯೋ.. ಆನೆಸ್ವಾಮಿ.. ಬೇಡಾಸ್ವಾಮಿ.. ನಿಮ್ಮ ಆನೆ ಪಾದ ಇಟ್ಟಲ್ಲೆಲ್ಲಾ ನಷ್ಟ ಅಂತಾ ಎಲ್ಲಾಕಡೆ ಹೇಳ್ತಿದ್ದಾರೆ. ಬೆಳಗಾವಿಗೆ ಆನೆ ಕಳಿಸಿದ್ರಿ, ಸಂಘಟಕರಿಗೆ ನಲವತ್ತೈದು ಸಾವಿರ ಗೋವಿಂದ.. ದಾವಣಗೆರೆಗೆ ಆನೆ ಹೋಯ್ತು, ರಂಗಸಂಘಟಕರ ಮೂವತ್ತೈದು ಸಾವಿರ ಹಣ ಮುಂಡಾಮೋಚ್ತು. ಎಲ್ಲೆಲ್ಲಿ ನಿಮ್ಮ ಬಿಳಿಯಾನೆ ಹೋಗಿ ತನ್ನ ಭೀಮಪಾದ ಊರಿದೆಯೋ ಅಲ್ಲೆಲ್ಲಾ ಲಾಭ ಬಿಡಿ ಆದ ನಷ್ಟ ಭರಿಸೋದು ಕಷ್ಟ ಆಗಿದೆ. ಇನ್ನೊಮ್ಮೆ ಈ ನಿಮ್ಮ ಸರಕಾರಿ ಐರಾವತದ ಸಹವಾಸವೇ ಬೇಡಾ ಅಂತಾ ಎಲ್ಲರೂ ಅಂಬೋ ಅಂತಿದ್ದಾರೆ. ನೀವು ಬ್ಯಾಡಾ.. ನಿಮ್ಮ ಸಹವಾಸವೂ ಬೇಡಾ.. ನಿಮ್ಮ ಆನೆ ನಿಮ್ಮಲ್ಲೆ ಇರಲಿ. ನಿಮಗೂ ನಿಮ್ಮ ಆನೆಗೂ ಒಂದೊಡ್ಡ ನಮಸ್ಕಾರಾ..

ಮಾವುತ : ರೀ.. ರೀ... ಥತ್.. ಕಟ್ಟೇ ಮಾಡ್ಬಿಟ್ನಲ್ಲಾ. ಇದೊಳ್ಳೆ ಸರಕಾರಿ ಆನೆ ಸಹವಾಸ ಆಯ್ತಲ್ಲಾ ನನಗೆ. ಇದನ್ನ ಇದ್ದಲ್ಲೇ ಕಟ್ಟೋ ಹಾಗಿಲ್ಲಾ. ಊರೂರಿಗೆ ಕಳಿಸಿ ಪ್ರದರ್ಶನ ಮಾಡದೇ ಬಿಡೋಹಂಗಿಲ್ಲಾ. ಕಟ್ಟಿದ್ರೆ ರಂಗಕರ್ಮಿಗಳು, ಪತ್ರಕರ್ತರು ಉಗೀತಾರ. ಪ್ರದರ್ಶನ ಮಾಡೋಕೆ ಕಳಿಸಿದ್ರೆ ಸಂಘಟಕರು ಲಾಸೋ ಲಾಸು ಅಂತಾರೆ. ಏನೂ ಮಾಡದೇ ಹೋದ್ರೆ ಸರಕಾರಿ ಅಧಿಕಾರಿಗಳು ಗರಂ ಆಗ್ತಾರೆ.. ಏನಪ್ಪಾ ಮಾಡೋದು.. ಮೈಸೂರಿನ ರಂಗಾಯಣೇಶ್ವರಾ..  

-ಶಶಿಕಾಂತ ಯಡಹಳ್ಳಿ







ಶನಿವಾರ, ಮಾರ್ಚ್ 16, 2019

ದಾನವೋ ಅನುದಾನವೋ “ಶೋ ಮಸ್ಟ್ ಗೋ ಆನ್”








ಮಾರ್ಚ್  17 ರಂದು ಉಡುಪಿಯಲ್ಲಿ ಮೈಸೂರು ರಂಗಾಯಣದ 'ಶ್ರೀ ರಾಮಾಯಣದರ್ಶನಂ' ನಾಟಕವನ್ನು  'ರಂಗಭೂಮಿ ಉಡುಪಿ' ತಂಡ ಆಯೋಜಿಸಿದೆ. ನಾಟಕ ನೋಡುವ ಪ್ರೇಕ್ಷಕರಿಗೆ ನೂರು ರೂಪಾಯಿ ಟಿಕೆಟ್ ಇಡುವ ಜೊತೆಗೆ ಸಾವಿರ ರೂಪಾಯಿ ಡೋನರ್ ಪಾಸ್ ಇಟ್ಟಿದ್ದು ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ..

ಸಾವಿರ ರೂಪಾಯಿ ಅನ್ನೋದು ಕೆಲವಾರು ರಂಗಕರ್ಮಿಗಳ ಅಸಮಾಧಾನಕ್ಕೆ ಕಾರಣವಾಗಿದೆ. "ಸಾವಿರ ರೂಪಾಯಿ ತಪ್ಪು, ಯಾರೋ ಹಣ ಮಾಡಲು ಮಾಡಿಕೊಂಡಿರುವ ವ್ಯವಸ್ಥೆ" ಎಂದು ಹಿಂದೆ ಮೈಸೂರು ರಂಗಾಯಣದ ನಿರ್ದೇಶಕರಾಗಿದ್ದ ಚಿದಂಬರರಾವ್ ಜಂಬೆಯವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಇದನ್ನು ಸ್ಥಳೀಯರು ಖಂಡಿಸಲೇಬೇಕು ಮತ್ತು ಅಗತ್ಯವಾದರೆ ಪ್ರತಿಭಟಿಸಬೇಕು" ಎಂದು ರಂಗನಿರ್ದೇಶಕ ಶ್ರೀಪಾದ ಭಟ್ಟರು ಕ್ರಾಂತಿಗೆ ಕರೆಕೊಟ್ಟು ನಾಟಕದ ಹೆಸರಲ್ಲಿ ಹಣ ತೆಗೆದುಕೊಳ್ಳೋದು ತಪ್ಪು ಎಂದು ಪ್ರತಿಪಾದಿಸಿದ್ದಾರೆ.  "ಸರಕಾರಿ ಪ್ರಾಯೋಜಿತವಾದ ಕಾರ್ಯಕ್ರಮಕ್ಕೆ ಇಷ್ಟು ದೊಡ್ಡಮಟ್ಟದ ಟಿಕೇಟ್ ಬೇಕಾ" ಎಂದು ಉಡುಪಿಯ ಮಾಜಿ ರಂಗಕರ್ಮಿ ಉದ್ಯಾವರ ನಾಗೇಶರವರು ಪ್ರಶ್ನಿಸಿದ್ದಾರೆ. ಇನ್ನು ಕೆಲವರು 'ಕೋಣ ಈಯಿತು ಎಂದರೆ ಕೊಟ್ಟಿಗೆಯಲ್ಲಿ ಕಟ್ಟು' ಎನ್ನುವಂತೆ ಹಿಂದೆ ಮುಂದೆ ವಿಚಾರಣೆ ಮಾಡದೇ ತಮ್ಮದೂ ಒಂದು ವಿರೋಧ ಇರಲಿ ಎಂದು ಅಭಿಪ್ರಾಯ ಟಂಕಿಸಿದ್ದಾರೆ

ನಾಟಕಕ್ಕೆ ಸಿದ್ದಪಡಿಸಲಾದ ರಂಗವೇದಿಕೆ

ನಾಟಕವೊಂದಕ್ಕೆ ಇಷ್ಟೊಂದು ಮೊತ್ತದ ಟಿಕೆಟ್ ಇಟ್ಟಿದ್ದು ಸರಿಯಾ ತಪ್ಪಾ ಅನ್ನೋದು ಈಗಿನ ಪ್ರಶ್ನೆ. ಯಾಕೆ ಇಡಬಾರದು? ಎನ್ನುವುದು ಆಯೋಜಕರ ಮರುಪ್ರಶ್ನೆ. 'ಲಾಭ ಮಾಡಿಕೊಳ್ಳಲು ರಂಗತಂಡವು ರಂಗಾಯಣದ ನಾಟಕವನ್ನು ಬಳಸಿಕೊಳ್ಳಲಾಗುತ್ತಿದೆ' ಎಂಬುದು ಕೆಲವರ ಆತಂಕ. 'ಎಲ್ಲಿಯ ಲಾಭ.. ಆಗುತ್ತಿರುವ ಖರ್ಚನ್ನು ಹೊಂದಿಸಿಕೊಳ್ಳುವುದೇ ಹರಸಾಹಸ' ಎನ್ನುವುದು ಆಯೋಜಕರ ಅಳಲು...

ಇಷ್ಟಕ್ಕೂ ವಿವಾದದ ಅಸಲಿಯತ್ತಾದರೂ ಏನು? ರಂಗಭೂಮಿ ಉಡುಪಿ ತಂಡ ಐದಾರು ದಶಕಗಳಿಂದ ಉಡುಪಿಯಲ್ಲಿ ರಂಗಚಟುವಟಿಕೆಗಳನ್ನು ಮಾಡಿಕೊಂಡು ಬರುತ್ತಿದೆ. ನಾಟಕ ಸ್ಪರ್ಧೆಗಳನ್ನು ಪ್ರತಿ ವರ್ಷ ಆಯೋಜಿಸಿ ಉತ್ತಮ ನಾಟಕಗಳಿಗೆ ಬಹುಮಾನಗಳನ್ನು ಕೊಟ್ಟು ಪ್ರೋತ್ಸಾಹಿಸುತ್ತಾ ಬಂದಿದೆ. ಕಾಲಕಾಲಕ್ಕೆ ಅನೇಕ ನಾಟಕೋತ್ಸವಗಳನ್ನು ಹಮ್ಮಿಕೊಳ್ಳುತ್ತದೆ. ಸ್ವತಃ ವರ್ಷಕ್ಕೊಂದೋ ಎರಡೋ ನಾಟಕಗಳನ್ನೂ ಸಹ ನಿರ್ಮಿಸಿ ಕೆಲವಾರು ಕಡೆ ಪ್ರದರ್ಶಿಸುತ್ತದೆ. ಮಕ್ಕಳಿಗೆ ರಂಗಶಿಬಿರಗಳನ್ನು ಆಯೋಜಿಸುತ್ತಾ ಬಂದಿದೆ. ಅದೇ ರೀತಿ ಸಲ ಮೈಸೂರು ರಂಗಾಯಣದ 'ಶ್ರೀ ರಾಮಾಯಣ ದರ್ಶನಂ' ನಾಟಕವನ್ನು ಆಹ್ವಾನಿಸಿ ಉಡುಪಿಯ ಎಂಜಿಎಂ ಕಾಲೇಜಿನ ಮುದ್ದಣ್ಣ ಬಯಲು ರಂಗ ಮಂಟಪದಲ್ಲಿ ಪ್ರದರ್ಶಿಸಲು ವ್ಯವಸ್ಥೆ ಮಾಡಿದೆ.

5 ಗಂಟೆಯ ನಾಟಕವನ್ನು ನೋಡಬಯಸುವ ಪ್ರೇಕ್ಷಕರಿಗೆ ನೂರು ರೂಪಾಯಿಗಳ ಪ್ರವೇಶ ದರವನ್ನು ಫಿಕ್ಸ್ ಮಾಡಲಾಗಿದೆ. ಉಡುಪಿಯ ರಂಗಾಸಕ್ತರಿಗೆ ಇದೇನೂ ದೊಡ್ಡ ಮೊತ್ತವಲ್ಲ. ಎರಡು ಗಂಟೆಯ ಸಿನೆಮಾ ನೋಡೋಕೆ ನೂರು ರೂಪಾಯಿಗಳಿಗಿಂತಾ ಹೆಚ್ಚು ಖರ್ಚು ಮಾಡುವವರಿಗೆ ಐದು ಗಂಟೆಯ ನಾಟಕ ನೋಡಲು ನೂರು ರೂಪಾಯಿ ಕೊಡುವುದು ಭಾರವೇನಲ್ಲ. ಆದರೆ ಸಾವಿರ ರೂಪಾಯಿಯ ಡೋನರ್ ಪಾಸ್ ಇಟ್ಟು ಮುಂದಿನ ಸಾಲಿನ ಖುರ್ಚಿಗಳನ್ನು ದಾನಿಗಳಿಗೆ ಮೀಸಲಿಟ್ಟಿರುವುದೇ ಕೆಲವರ ಕಣ್ಣನ್ನು ಕೆಂಪಗಾಗಿಸಿದೆ. ನಾಟಕ ಪ್ರದರ್ಶನದ ಖರ್ಚು ವೆಚ್ಚಗಳ ಬಗ್ಗೆ ಆಲೋಚಿಸದೇ ಕೇವಲ ಆದಾಯದತ್ತ ಗಮನ ಇದ್ದವರಿಗೆ ಹೀಗೆ ಅಸಹನೆ ಹುಟ್ಟುವುದು ಸಹಜವೇ ಆಗಿದೆ




ಮೊದಲು ಖರ್ಚಿನ ಬಗ್ಗೆ ನೋಡೋಣ... ಆಮೇಲೆ ಆದಾಯದ ವಿಷಯಕ್ಕೆ ಬರೋಣ. ...ರಾಮಾಯಣ ದರ್ಶನಂ ನಾಟಕವನ್ನು ಪ್ರದರ್ಶಿಸುತ್ತಿರುವುದು ಬಯಲು ರಂಗಮಂಟಪದಲ್ಲಿರಂಗವೇದಿಕೆಗೆ ಬೇಕಾದ ಪರದೆ, ಸೈಡ್ ವಿಂಗ್ ಗಳನ್ನು ಬಾಡಿಗೆ ತರಬೇಕು, ಪ್ರೇಕ್ಷಾಗ್ರಹಕ್ಕೆ ಶಾಮಿಯಾನ ಹಾಕಿಸಬೇಕು, ನಾಟಕಕ್ಕೆ ಬೇಕಾದ ದ್ವನಿ ಪರಿಕರಗಳನ್ನು, ಜನರೇಟರ್ ಯುನಿಟ್ಟನ್ನು ಅಷ್ಟೇ ಏಕೆ ಪ್ರೇಕ್ಷಕರು ಕೂಡುವ ಖುರ್ಚಿಗಳನ್ನೂ ಸಹ ಬಾಡಿಗೆಗೆ ತರಬೇಕು.. ನಾಟಕವಾಡಲು ಬಂದ ನಲವತ್ತಕ್ಕೂ ಹೆಚ್ಚು ಕಲಾವಿದರು ಮತ್ತು ನೇಪತ್ಯ ತಂತ್ರಜ್ಞರಿಗೆ ಊಟ ವಸತಿಯ ವ್ಯವಸ್ಥೆ ಆಗಬೇಕು. ಜೊತೆಗೆ ಸಂಘಟನೆ ಮತ್ತು ಪ್ರಚಾರದ ಕೆಲಸಕ್ಕೆ ಹೆಚ್ಚುವರಿ ದುಡ್ಡನ್ನು ಹೊಂದಿಸಬೇಕು. ಇಷ್ಟೆಲ್ಲಾ ಮಾಡಬೇಕೆಂದರೆ ಆಯೋಜಕ ರಂಗತಂಡಕ್ಕೆ ಏನಿಲ್ಲವೆಂದರೂ ಕನಿಷ್ಟ ಒಂದರಿಂದ ಒಂದೂಕಾಲು ಲಕ್ಷದಷ್ಟು ಖರ್ಚು ಬರುತ್ತದಂತೆ. ಇಷ್ಟೊಂದು ಹಣವನ್ನು ರಂಗತಂಡದವರು ಎಲ್ಲಿಂದ ಹೊಂಚಬೇಕು? ಕೇವಲ ಐವತ್ತರಷ್ಟು ಜನರಿರುವ ನಾಟಕದ ಟೀಮಿಗೆ ವಸತಿ ವ್ಯವಸ್ಥೆ ಮಾಡಬೇಕೆಂದರೆ ಇಬ್ಬರಿಗೊಂದು ರೂಮು ಲಾಜಿಂಗಲ್ಲಿ ಮಾಡಿದರೂ ಒಟ್ಟು ಇಪ್ಪತ್ತೈದು ರೂಮುಗಳು ಬೇಕು. ಉಡುಪಿಯಲ್ಲಿರುವ  ಉರಿಬಿಸಿಲಿಗೆ ಎಸಿ ರೂಮೇ ಆಗಬೇಕು. ಈ ವಸತಿ ಖರ್ಚೆ ಏನಿಲ್ಲವೆಂದರೂ ಮೂವತ್ತು ಸಾವಿರಕ್ಕೂ ಅಧಿಕವಾಗಿ ಬರುತ್ತದೆ. ಇದನ್ನೂ ಸಹ ಆಯೋಜಕರೇ ಭರಿಸಬೇಕು.

ರಂಗಾಸಕ್ತ ಪ್ರೇಕ್ಷಕರಿಂದ ಇಲ್ಲವೇ ರಂಗಪೋಷಕ ದಾನಿಗಳಿಂದ. ಒಂದೂ ಕಾಲು ಲಕ್ಷ ಹಣವನ್ನು ಕೇವಲ ಪ್ರೇಕ್ಷಕರಿಂದಲೇ ಪಡೆಯಬೇಕೆಂದರೆ ತಲಾ ನೂರು ರೂಪಾಯಿಗಳ ಹಾಗೆ ಲೆಕ್ಕ ಹಾಕಿದರೂ ಸಾವಿರದಾ ಇನ್ನೂರು ಜನರು ಟಿಕೆಟ್ ಖರೀದಿಸಬೇಕು. ಆದರೆ ಉಡುಪಿಯಂತಹ ಪುಟ್ಟ ಪಟ್ಟಣದಲ್ಲಿ ನಾನೂರು ಜನ ಪ್ರೇಕ್ಷಕರನ್ನು ಕರೆತರುವುದೇ ಸಾಹಸದ ಕೆಲಸ. ರಂಗಾಯಣದ ನಾಟಕವೆಂದು ಆರನೂರು ಜನ ಬಂದು ಟಿಕೇಟ್ ಖರೀದಿಸಿದರೂ ಅರ್ಧದಷ್ಟು ಅಂದರೆ ಅರವತ್ತು ಸಾವಿರ ಬಂದಂತಾಯ್ತು. ಇನ್ನು ಅರ್ಧದಷ್ಟು ಕೊರತೆ ಬಜೆಟ್ಟಿಗೆ ರಂಗತಂಡದವರು ಏನುಮಾಡಬೇಕು? ಯಾರಾದರೂ ದಾನಿಗಳನ್ನು ಹಿಡಿಯಬೇಕು. ಈಗ ಮಾಡಿದ್ದೂ ಅದನ್ನೇ. ಒಂದು ಸಾವಿರ ರೂಪಾಯಿಯ ಡೋನರ್ ಪಾಸ್ ಮಾಡಿ ಪ್ರತಿಯೊಂದು ಪಾಸಿಗೆ ಇಬ್ಬರಿಗೆ ನಾಟಕ ನೋಡಲು ಅವಕಾಶ ಕಲ್ಪಿಸಲಾಗಿದೆ. ಅಂದರೆ ಒಬ್ಬರಿಗೆ ಐನೂರು ರೂಪಾಯಿ ಅಂದಂಗಾಯ್ತು. ಹೀಗೆ ಐದುನೂರು ಕೊಟ್ಟ ದಾನಿಗಳು ನೂರು ಜನ ಬಂದರೆ ಐವತ್ತು ಸಾವಿರ ಆದಾಯ ಬಂದಂಗಾಯ್ತು. ಹಾಗಾದ್ರೂ ಇನ್ನೂ ಹತ್ತಿಪ್ಪತ್ತು ಸಾವಿರದಷ್ಟು ಹಣ ಆಯೋಜಕರ ತಲೆಗೆ ಬಿತ್ತು

ಇದು ರಂಗಸಂಘಟಕರ ಲಾಭ ನಷ್ಟದ ಲೆಕ್ಕಾಚಾರ. ಇಷ್ಟಕ್ಕೂ ಉಡುಪಿಯಲ್ಲಿ ನೂರು ಜನ ದಾನಿಗಳನ್ನು ಹುಡುಕುವುದು ಅಷ್ಟು ಸುಲಭವೂ ಅಲ್ಲ. ನಷ್ಟ ಮಾಡಿಕೊಂಡು ರಂಗತಂಡವೊಂದು ನಾಟಕ ಮಾಡಿಸುವುದು ಸೂಕ್ತವೂ ಅಲ್ಲಾ‌.  ರೀತಿ ಡೋನರ್ ಪಾಸ್ ಮೂಲಕ ಹಣ ಸಂಗ್ರಹಿಸುವುದು ಇದೇ ಮೊದಲೇನಲ್ಲ. ಎಲ್ಲಾ ವೃತ್ತಿ ಕಂಪನಿಗಳೂ ಸಹ ತಮ್ಮ ನಾಟಕಗಳಿಗೆ ಡೋನರ್ ಪಾಸ್ ಮಾರಾಟ ಮಾಡಿ ತಮ್ಮ ನಷ್ಟವನ್ನು ತುಂಬಿಕೊಳ್ಳುತ್ತಾರೆ ಮತ್ತು ಒಂದಿಷ್ಟು ಲಾಭವನ್ನೂ ಮಾಡಿಕೊಳ್ಳುತ್ತಾರೆ. ಅದು ತಪ್ಪೂ ಅಲ್ಲಾ. ಅದೇ ರೀತಿ ಹವ್ಯಾಸಿ ರಂಗತಂಡವೊಂದು ಮಾಡಿದರೆ ಅದೊಂದು ದೊಡ್ಡ ಪ್ರಮಾದವಾಗಿ ಯಾಕೆ ಕಾಣಬೇಕು


ಹವ್ಯಾಸಿ ರಂಗತಂಡಗಳು ಯಾವಾಗಲೂ ನಷ್ಟದಲ್ಲೇ ನಡೆಯಬೇಕು. ಅವು ಲಾಭ ಮಾಡಿಕೊಳ್ಳುವುದನ್ನು ಯೋಚನೆ ಮಾಡಲೇಬಾರದು ಎನ್ನುವ ಮನಸ್ಥಿತಿಯಾದರೂ ಕೆಲವರಿಗೆ ಯಾಕಿರಬೇಕು? ದಾನಿಗಳಿಂದ ಹಣ ಸಂಗ್ರಹಿಸುವ ಸಾಮರ್ಥ್ಯ ಇರುವ ತಂಡದ ರೂವಾರಿಗಳು ಸಾವಿರ ಅಷ್ಟೇ ಯಾಕೆ ಹತ್ತು ಸಾವಿರವನ್ನು ಬೇಕಾದರೂ ತೆಗೆದುಕೊಳ್ಳಲಿ. ಹಾಗೆ ಸಂಗ್ರಹಿಸಿದ ಹಣವನ್ನು ಮತ್ತೆ ರಂಗಚಟುವಟಿಕೆಗಳಿಗೆ ಬಳಸಲಿ. ಇದರಿಂದಾಗಿ ರಂಗಕಾರ್ಯಗಳು ಹೆಚ್ಚಾಗುತ್ತವೆ. ಪ್ರತಿ ಸಲ ಕೈಯಿಂದ ಹಣ ಹಾಕಿ, ಸಾಲ ಮಾಡಿ ರಂಗಚಟುವಟಿಕೆಗಳನ್ನು ಮಾಡುವುದು ಯಾವುದೇ ರಂಗಕರ್ಮಿಗಳಿಗೆ ಸುಲಭಸಾಧ್ಯವಲ್ಲಅಕಸ್ಮಾತ್ ಹೆಚ್ಚು ಜನ ದಾನಿಗಳು ಸಿಕ್ಕು ಹೆಚ್ಚು ಹಣ ಕಲೆಕ್ಟ್ ಆಗಿ ಅದರಲ್ಲಿ ನಾಟಕ ಪ್ರದರ್ಶನದ ಖರ್ಚು ವೆಚ್ಚಗಳನ್ನು ಕಳೆದೂ ಹಣ ಉಳಿದರೂ ತಪ್ಪೇನಿಲ್ಲ. ಆ ಉಳಿಕೆ ಹಣವನ್ನು ಯಾವ ವ್ಯಕ್ತಿಯೂ ತನ್ನ ಸ್ವಂತಕ್ಕೆ ಬಳಸುವುದಿಲ್ಲಾ. ಎಲ್ಲವನ್ನೂ ಮತ್ತೆ ರಂಗಕಾರ್ಯಕ್ಕೆ ಬಳಸಲಾಗುತ್ತದೆ. ಆದ್ದರಿಂದ ಸಾವಿರವಲ್ಲಾ ತಲಾ ಹತ್ತಾರು ಸಾವಿರ ದಾನ ಕೊಡುವವರು ಮುಂದೆ ಬರಲಿ. ರಂಗಚಟುವಟಿಕೆಗಳು ಸರಕಾರದ ಅನುದಾನದ ಹಂಗಿಲ್ಲದೇ ಮುಂದುವರೆಯಲಿ.

ಇಷ್ಟಕ್ಕೂ ಜಂಬೆ, ಶ್ರೀಪಾದ ಭಟ್ ರವರಂತಹ ನಿರ್ದೇಶಕರು ಯಾವುದೇ ನಾಟಕವನ್ನು ಸಂಭಾವಣೆ ಇಲ್ಲದೆ ನಿರ್ದೇಶಿಸುವುದಿಲ್ಲ. ಅವರು ತಮ್ಮ ಪರಿಶ್ರಮಕ್ಕೆ ಪ್ರತಿಯಾಗಿ ಗೌರವಧನವನ್ನು ಪಡೆಯುವುದರಲ್ಲಿ ತಪ್ಪೇನೂ ಇಲ್ಲ. ಆದರೆ ರಂಗತಂಡವೊಂದು ದಾನಿಗಳಿಂದ ಹಣ ಪಡೆದು ನಾಟಕ ಪ್ರದರ್ಶನವನ್ನು ಆಯೋಜಿಸಿದಾಗ ಅಪನಂಬಿಕೆಯಿಂದ ಅಪಸ್ವರ ಎತ್ತುವುದು ಪ್ರಶ್ನಾರ್ಹವಾಗಿದೆ

ಈ ಲೇಖನಕ್ಕೆ ಪ್ರತಿಯಾಗಿ ಶ್ರೀಪಾದ ಭಟ್ಟರವರು ಪ್ರತಿಕೃಯಿಸಿದ ರೀತಿ ಹೀಗಿದೆ “ವಿಚಾರಿಸದೇ ಕಾಮೆಂಟ್ ಹಾಕಿದೇನೆ ಅನ್ನುವ ನಿಮ್ಮ ಮಾತನ್ನು ನಿಮಗೇ ಅನ್ವಯಿಸಿಯೂ ನೋಡಬಹುದಾಗಿದೆ ಶಶಿ. ರಂಗಾಯಣ ನಾಟಕ ಮಾಡಲು ಸಂಘಟಕರನ್ನು ಒತ್ತಾಯಿಸಿಲ್ಲ, ಅವರಿಗೆ ಕಷ್ಟವಾದರೆ ಮಾಡಬೇಕಿಲ್ಲ, ಸಂಘಟನೆ ಹಣಪಡೆಯುವದು ತಪ್ಪಲ್ಲ ಆದರೆ ಯಾವ ಹೆಸರಿನಲ್ಲಿ ಅನ್ನುವದು ಮುಖ್ಯ. ತಂಡದ ಹೆಸರಿನಲ್ಲೇ ತೆಗೆದುಕೊಂಡು ರಶೀದಿ ನೀಡಿದರೆ ಯಾವ ಅಭ್ಯಂತರವೂ ಇಲ್ಲ. ಈಗಾಗಲೇ ಇಲಾಖೆಯ ಹೆಸರಿನಲ್ಲಿ ನಡೆಯುತ್ತಿರುವ ಕಾರ್ಯಕ್ರಮ ಅನ್ನೋದು ನಿಮ್ಮ ಗಮನದಲ್ಲಿರಲಿ. ನಾಟಕ ನಿರ್ದೇಶಿಸಲು ಹಣ ತೆಗೆದು ಕೊಳ್ಳುವದನ್ನು ಸಂಗತಿಯ ಜತೆ ತಳಕು ಹಾಕುವ ಉದ್ದೇಶ ಅರ್ಥವಾಗಲಿಲ್ಲ ಇದು ಎತ್ತು ಮತ್ತು ಹೆರಿಗೆಯ ನಿಮ್ಮ ಉಪಮೆಗೆ ನೀವೇ ಉದಾಹರಣೆ ಆದಂತಿದೆ. ನೋವಿನಿಂದ ಬರೆಯುತ್ತಿದ್ದೇನೆ. ನಿಮಗೆ ಹೇಗೋ ನಮಗೂ ರಂಗ ಸಂಘಟಕರು ಸ್ನೇಹಿತರೇ. ಆದರೆ ಸ್ನೇಹ ಸಂದರ್ಭದಲ್ಲಿರುವ ಅರ್ಥವನ್ನು ಮರೆಮಾಚುವಷ್ಟು ದಡ್ಡತನದ್ದಾಗಬಾರದು. ರಂಗಭೂಮಿಯ ನಿಮ್ಮ ಪ್ರೀತಿ ನೀವು ಯಾರ ಬಗ್ಗೆಯೂ ಏನೂ ಹೇಳಬಹುದು ಎಂಬ ದಾರ್ಷ್ಟ್ಯ ಕ್ಕೆ ಕಾರಣವಾಗಬಾರದು. ನಮಸ್ಕಾರ.”

ಹೀಗೆ ಪ್ರತಿಕ್ರಿಯಿಸಿದ ಶ್ರೀಪಾದ ಭಟ್ಟರಿಗೆ ಉತ್ತರಿಸುವುದು ಅನಿವಾರ್ಯವಾಯಿತು. ಅದಕ್ಕೆಂದೇ ನಾನು ಉತ್ತರಿಸಿದ ರೀತಿ ಹೀಗಿದೆ.. “ಆತ್ಮೀಯ ಶ್ರೀಪಾದರೆ.. ರಂಗಭೂಮಿ ಉಡುಪಿ ತಂಡ ಪ್ರತಿ ವರ್ಷಕ್ಕೆ ಇಪ್ಪತ್ತು ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಿ ವಾರ್ಷಿಕ ರಂಗಚಟುವಟಿಕೆಗಳನ್ನು ಮಾಡುತ್ತಿದೆ. ಆರೇಳು ಲಕ್ಷ ರೂಪಾಯಿಗಳನ್ನು ನಾಟಕ ಸ್ಪರ್ದೆಗೆ ಖರ್ಚು ಮಾಡುತ್ತಿದೆ. ಸಂಸ್ಕೃತಿ ಇಲಾಖೆಯಿಂದ ಬರುವ ಅನುದಾನ ಕೇವಲ ವರ್ಷಕ್ಕೆ ಒಂದೂವರೆ ಲಕ್ಷ ರೂಪಾಯಿ. ಹಾಗಾದರೆ ಒಂದು ತಂಡ ತನ್ನ ರಂಗಚಟುವಟಿಕೆಗಳಿಗೆ ಪ್ರೇಕ್ಷಕರು ಹಾಗೂ ದಾನಿಗಳಿಂದ ಹಣ ಸಂಗ್ರಹಿಸಿದರೆ ತಪ್ಪೇನೂ ಇಲ್ಲಾಈ ರಾಮಾಯಣದರ್ಶನಕ್ಕೂ ಸಹ ಪ್ರಾಯೋಜಕರು ಎಂದು ಕನ್ನಡ ಮತ್ತು ಸಂಸ್ಕೃತಿಯ ಹೆಸರನ್ನೂ ಪೋಸ್ಟರ್ ಬ್ಯಾನರ್ ಗಳಲ್ಲಿ ಹಾಕಿದ್ದಾರೆ. ಆದರೆ ಸಂಸ್ಕೃತಿ ಇಲಾಖೆ ಕೊಡುವ ಸಹಾಯಧನ ಕೇವಲ ಒಂದು ನಾಟಕ ಅಥವಾ ಒಂದು ಕಾರ್ಯಕ್ರಮಕ್ಕಲ್ಲಾ.. ರಂಗತಂಡವೊಂದರ ಒಂದು ವರ್ಷದ ರಂಗಚಟುವಟಿಕೆಗಳಿಗೆ ಎಂಬುದು ನೆನಪಿರಬೇಕು.

ನಾನು ಸಂಬಂಧಿಸಿದ ಸಂಘಟಕರಿಗೆ ಪೋನ್ ಮಾಡಿ ವಿಚಾರಿಸಿ ಅವರು ಆಯೋಜಿಸಿದ ನಾಟಕ ಪ್ರದರ್ಶನಕ್ಕೆ ಆಗಬಹುದಾದ ಖರ್ಚು ವೆಚ್ಚ ಹಾಗೂ ಸಂಪನ್ಮೂಲಗಳ ಬಗ್ಗೆ ವಿಚಾರಿಸಿಯೇ ಲೇಖನ ಬರೆದಿದ್ದೇನೆ.. ಸಂದೇಹವಿದ್ದರೆ ರಂಗಭೂಮಿಯ ಪ್ರದೀಪ್ ಹಾಗೂ ರವಿರಾಜರವರನ್ನು ಕೇಳಿ.

ರಂಗಾಯಣ ಯಾವತ್ತೂ ಯಾವ ತಂಡವನ್ನೂ ನಾಟಕ ಮಾಡಿ ಎಂದು ಒತ್ತಾಯಿಸುವುದಿಲ್ಲ. ತಮ್ಮ ಊರಲ್ಲಿ ರಂಗಾಯಣದ ನಾಟಕ ಮಾಡಿಸಲು ಇಚ್ಚಿಸುವವರು ರಂಗಾಯಣಕ್ಕೆ ಮನವಿ ಸಲ್ಲಿಸುತ್ತಾರೆ. ಊಟ ವಸತಿ ಹಾಗೂ ನಾಟಕಕ್ಕೆ ಬೇಕಾದ ಸ್ಟೇಜ್ ಮತ್ತು ಇತರೆ ಪರಿಕರಗಳನ್ನು ಕೊಡುವ ತಂಡಗಳಿಗೆ ರಂಗಾಯಣ ಉಚಿತವಾಗಿ ನಾಟಕ ಪ್ರದರ್ಶಿಸುತ್ತದೆ. ಸಂಘಟಕರಿಗೆ ಕಷ್ಟವೋ ನಷ್ಟವೋ ನಾಟಕ ಮಾಡಿಸುವುದನ್ನು ಬಿಡುವುದಿಲ್ಲ. ಆದ ನಷ್ಟವನ್ನು ದಾನಿಗಳಿಂದ ಪಡೆಯುತ್ತಾರೆ... ಇಲ್ಲವೇ ಕೈಯಿಂದ ಹಾಕಿ ಕಾರ್ಯಕ್ರಮ ಮಾಡುತ್ತಾರೆ.. ಅದು ಆಯಾ ಸಂಘಟಕರ ಬದ್ದತೆ ಮೇಲೆ ನಿರ್ಧಾರವಾಗುತ್ತದೆ

ಡೋನರ್ ಪಾಸಿಗೆ ರಸೀದಿ ಅಂತಾ ಪ್ರತ್ಯೇಕವಾಗಿ ಇರುವುದು ಅನುಮಾನ. ಟಿಕೇಟ್ ಪುಸ್ತಕದಂತೆಯೇ ಡೋನರ್ ಪಾಸ್ ಸಹ ಕೌಂಟರ್ ಪಾರ್ಟ ಸಹಿತ ಮುದ್ರಿತವಾಗುತ್ತದೆ. ಅದೇ ಆಯಾ ರಂಗತಂಡದ ಲೆಕ್ಕಪತ್ರಕ್ಕೆ ಸಾಕಾಗುತ್ತದೆ. ಮತ್ತು ತಂಡದ ಯಾವುದೇ ವ್ಯಕ್ತಿ ಹಣವನ್ನು ದುರುಪಯೋಗ ಮಾಡಿಕೊಳ್ಳುವುದೇ ನಿಜವಾಗಿದ್ದರೆ ಅಂತಹ ತಂಡ ಐದಾರು ದಶಕಗಳಿಂದ ಸಕ್ರೀಯವಾಗಿರಲು ಸಾಧ್ಯವಿಲ್ಲ. ಅಲ್ಲಿರುವ ಪದಾಧಿಕಾರಿಗಳು ಒಂದಾಗಿ ಕಾರ್ಯಕ್ರಮ ರೂಪಿಸಲೂ ಸಾಧ್ಯವಿಲ್ಲ. ಎಲ್ಲಾ ಕಡೆ ಇರುವ ಹಾಗೆ ಒಂದಿಷ್ಡು ಸೋರಿಕೆ ಇರಬಹುದಾದರೂ ಅದು ದೊಡ್ಡ ಪ್ರಮಾಣದಲ್ಲಿದ್ದರೆ ತಂಡ ಉಳಿಯುವುದಿಲ್ಲ.

ನಿಮಗಾದ ನೋವಿಗಿಂತಲೂ ಕ್ರಿಯಾಶೀಲ ರಂಗತಂಡದ ವಿರುದ್ದ ಸ್ಥಳೀಯರು ಪ್ರತಿಭಟಿಸಬೇಕು ಎಂದು ನೀವು ಸಾರ್ವಜನಿಕವಾಗಿ ಕೊಟ್ಟ ಕರೆ ಇದೆಯಲ್ಲಾ ಅದು ಇಡೀ ರಂಗತಂಡದವರಿಗೆ ಅಪಾರ ನೋವನ್ನು ಕೊಟ್ಟು ಉತ್ಸಾಹವನ್ನು ಉಡುಗಿಸಿದೆರಂಗಸಂಘಟಕರು ಹಾಗೂ ರಂಗಸಂಘಟನೆಗಳಿದ್ದಾಗಲೇ ನಿಮ್ಮಂತಾ ಕ್ರಿಯಾಶೀಲ ನಿರ್ದೇಶಕರಿಗೆ ಹಾಗೂ ನನ್ನಂತಾ ಬರಹಗಾರರಿಗೆ ಕೆಲಸ ಸಿಗೋದು. ಹಲವಾರು ನಾಟಕಗಳಿಗೆ ವೇದಿಕೆ ಸಿಗೋದು. ಸಂಘಟಕರನ್ನೇ ಅನುಮಾನಿಸಿ ಅವರ ವಿರುದ್ದ ಪ್ರತಿಭಟನೆ ಮಾಡಬೇಕು ಎನ್ನುವ ನಿಮ್ಮ ನಿಲುವು ಸೂಕ್ತವಲ್ಲವೆನ್ನುವುದು ನನ್ನ ಅನಿಸಿಕೆ.

ನಾಟಕವೊಂದನ್ನು ನಿರ್ಮಿಸಿದ ರಂಗತಂಡಕ್ಕೆ ಲಾಭವಾಗಲಿ ನಷ್ಟವಾಗಲಿ ನಿರ್ದೇಶಕರ ಸಂಭಾವನೆ ಕೊಡಲೇಬೇಕು ಹಾಗೂ ಅವರಿಗೆ ಬೇಕಾದ ಅನುಕೂಲತೆಗಳನ್ನು ಸಂಘಟಕರು ಮಾಡಿಕೊಡಲೇಬೇಕು. ಆದರೆ ಸಂಘಟಕರ ಸಂಕಟಗಳಿಗೆ ನಿರ್ದೇಶಕರಾದವರು ಸ್ಪಂದಿಸದೇ ಅವರನ್ನು ನಿರುತ್ಸಾಹಗೊಳಿಸುವಂತೆ ಹೇಳಿಕೆ ನೀಡಿದರೆ ಹೇಗೆ

ಎತ್ತು ಮತ್ತು ಹೆರಿಗೆಯ ಉಪಮೇಯಕ್ಕೆ ಹಿಂದೆ ಮುಂದೆ ವಿಚಾರಿಸದೇ, ಸಂಘಟಕರ ಸಂಕಟ ಅರಿಯದೇ ಕಾಮೆಂಟ್ ಮಾಡಿದವರ ಕುರಿತಾಗಿದ್ದೇ ಹೊರತು ನನಗೆ ಅನ್ವಯಿಸುವುದಿಲ್ಲ.. ಯಾಕೆಂದರೆ ರಂಗ ಸಂಘಕರನ್ನು ಸಂಪರ್ಕಿಸಿ ಸರಿ ತಪ್ಪುಗಳನ್ನು ತರ್ಕಕ್ಕೆ ಒರೆಹಚ್ಚಿ ಲೇಖನ ಬರೆದಿದ್ದೆನೆಯೇ ಹೊರತು ಬೀಡುಬೀಸಾಗಿ ಕಮೆಂಟ್ ಮಾಡಿಲ್ಲ

ನನ್ನ ಇಡೀ ಲೇಖನ ನಿಮ್ಮೊಬ್ಬರನ್ನು ಕುರಿತು ಟಾರ್ಗೆಟ್ ಮಾಡಿ ಬರೆದದ್ದೆಂದು ನೀವು ತಪ್ಪಾಗಿ ಭಾವಿಸಿ ಇಗೋ ಹರ್ಟ್ ಮಾಡಿಕೊಂಡಿದ್ದೀರಿ. ಆದರೆ ಲೇಖನದ ಉದ್ದೇಶ ರಂಗ ಸಂಘಟಕರ ಸಂಕಟಗಳನ್ನು ಹೇಳುವುದಾಗಿದೆ. ದಾನಿಗಳಿಂದ ಹಣ ಪಡೆದು ನಾಟಕ ಪ್ರದರ್ಶನ ಆಯೋಜಿಸುವುದರಲ್ಲಿ ಯಾವುದೇ ತಪ್ಪಿಲ್ಲವೆಂದು ಹೇಳುವುದಾಗಿದೆ. ನಿಮ್ಮಂತಾ ಸೂಕ್ಷ್ಮ ಪ್ರಜ್ಞೆಯ ನಿರ್ದೇಶಕರಿಂದ ಬಂದ ನೆಗೆಟಿವ್ ಕಾಮೆಂಟಿಗೆ ಪಾಸಿಟಿವ್ ಉತ್ತರ ಕೊಡುವುದಾಗಿದೆ

ಇಷ್ಟಕ್ಕೂ ಇಲ್ಲಿ ಯಾರೂ ಪರಿಪೂರ್ಣರಲ್ಲ. ನಾನು ನೀವು ಎಲ್ಲರೂ ಅಪರಿಪೂರ್ಣರೆ. ಅಕಸ್ಮಾತ್ ರಂಗತಂಡವೊಂದು ರಂಗಭೂಮಿಯ ಬೆಳವಣಿಗೆಗೆ ಮಾರಕವಾದ ಕೆಲಸ ಮಾಡುತ್ತಿದ್ದರೆ ಅದಕ್ಕೆ ಸಂಬಂಧಪಟ್ಟವರನ್ನು ಎಚ್ಚರಿಸುವ ಕೆಲಸವನ್ನು ನಿಮ್ಮಂತವರು ಮಾಡಬೇಕೆ ಹೊರತು ನಿರುತ್ಸಾಹಗೊಳಿಸುವುದನ್ನಲ್ಲ. ಎಲ್ಲರೂ ರಂಗಭೂಮಿಯನ್ನು ಕಟ್ಟುವ ಕೆಲಸ ಮಾಡಬೇಕಿದೆ.. ಕನ್ನಡ ರಂಗಭೂಮಿಯ ಆಧಾರ ಸ್ಥಂಬವೊಂದಾಗಿರುವ ನಿಮ್ಮಿಂದಲೂ ರಂಗಭೂಮಿ ಅದನ್ನೇ ಬಯಸುತ್ತದೆ..”

ಈ ಪ್ರತಿಕ್ರಿಯೆ ಮತ್ತು ಪ್ರತ್ಯುತ್ತರಗಳಿಂದ ಅರ್ಥವಾಗಿದ್ದಿಷ್ಟೇ.. ಶ್ರೀಪಾದರಂತಹ ಕ್ರಿಯಾಶೀಲ ನಿರ್ದೇಶಕರಿಗೆ ವಿಶಿಷ್ಟವಾಗಿ ನಾಟಕ ನಿರ್ದೇಶಿಸುವುದು ಗೊತ್ತೇ ಹೊರತು ರಂಗಸಂಘಟನೆ ಮಾಡುವುದು ಗೊತ್ತಿಲ್ಲಾ ಹಾಗೂ ರಂಗಸಂಘಟಕರ ಸಂಕಟಗಳ ಅರಿವೂ ಇಲ್ಲಾ. ‘ಬೇಕಾದರೆ ನಾಟಕ ಮಾಡಿಸಿ ಇಲ್ಲವೇ ಬಿಟ್ಟು ಬಿಡಿ’ ಎನ್ನುವ ಅವರ ಮಾತು ರಂಗಭೂಮಿಯ ಬೆಳವಣಿಗೆಗೆ ಮಾರಕವಾಗಿರುವಂತಹುದು. ಯಾರು ಕೈಯಿಂದ ಹಣ ಹಾಕುತ್ತಾರೋ, ಸಾಲಾ ಸೋಲಾ ಮಾಡಿ ನಾಟಕ ಮಾಡಿಸುತ್ತಾರೋ, ಪ್ರೇಕ್ಷಕರಿಂದ ಇಲ್ಲವೇ ದಾನಿಗಳಿಂದ ಹಣ ಸಂಗ್ರಹಿಸುತ್ತಾರೋ ಅಥವಾ ಸರಕಾರಿ ಸಂಸ್ಥೆಗಳಿಂದ ಅನುದಾನ ಪಡೆಯುತ್ತಾರೋ, ಎನ್ನುವುದು ಇಲ್ಲಿ ಮುಖ್ಯವಲ್ಲಾ. ನಾಟಕ ಪ್ರದರ್ಶನಗಳನ್ನು ಮಾಡುವುದು ಹಾಗೂ ಮಾಡಿಸುವುದು ಮುಖ್ಯ. ಏನೇ ತಾಪತ್ರಯಗಳು ಬಂದರೂ ರಂಗಭೂಮಿಯ ಘೋಷವಾಕ್ಯ ಒಂದೇ ಅದು “ಶೋ ಮಸ್ಟ್ ಗೋ ಆನ್”.

- ಶಶಿಕಾಂತ ಯಡಹಳ್ಳಿ