ಮಹಾಭಾರತ ಹಾಗೂ ಅದರ ಅಂತ್ಯದಲ್ಲಿ ನಡೆದ ಕುರುಕ್ಷೇತ್ರ ಯುದ್ದ ಎಲ್ಲರಿಗೂ ಗೊತ್ತಿರುವಂತಹುದು. ಆದರೆ ಇದೇನಿದು ‘ಸ್ಮಶಾನ ಕುರುಕ್ಷೇತ್ರ’? ‘ವಿನಾಶಕಾರಿ ಯುದ್ದಗಳು ಸ್ಮಶಾನಗಳನ್ನು ಹುಟ್ಟುಹಾಕುತ್ತವೆ’ ಎನ್ನುವ ಪರಿಕಲ್ಪನೆಯಲ್ಲಿ ಕುವೆಂಪುರವರು ಮಹಾಭಾರತದ ಕುರುಕ್ಷೇತ್ರದಲ್ಲಿ ನಡೆಯುವ ವಿಕ್ಷಿಪ್ತ ಘಟನೆಗಳಿಗೆ ರೂಪಕೊಟ್ಟು 1931ರಲ್ಲಿ ‘ಸ್ಮಶಾನ ಕುರುಕ್ಷೇತ್ರ’ ನಾಟಕವನ್ನು ರಚಿಸಿದ್ದರು. ಮಹಾಭಾರತ ಪಾರಾಯಣಕ್ಕಿಂತ ಅದರ ದುಷ್ಪರಿಣಾಮವನ್ನು ಮನಮುಟ್ಟುವಂತೆ ಚಿತ್ರಿಸಿದರು. ಭಾಷೆಯ ಕ್ಲಿಷ್ಟತೆಯಿಂದಾಗಿ ಈ ನಾಟಕ ಸಾಮಾನ್ಯ ಜನರನ್ನು ತಲುಪಲು ಸಾಧ್ಯವಾಗದೇ ಇದ್ದಾಗ ಡಾ.ಜಿ.ಎಸ್.ಶಿವರುದ್ರಪ್ಪನವರು ಈ ದೃಶ್ಯಕಾವ್ಯ ನಾಟಕವನ್ನು ಬಳಕೆ ಕನ್ನಡದ ನುಡಿಗಟ್ಟುಗಳ ಮೂಲಕ 2000 ಇಸ್ವಿಯಲ್ಲಿ ಸರಳ ಕನ್ನಡದಲ್ಲಿ ಮತ್ತೆ ಕಟ್ಟಿಕೊಟ್ಟರು. ಮಾಲತೇಶ ಬಡಿಗೇರರು ಈ ಸರಳಾನುವಾದದ ‘ಸ್ಮಶಾನ ಕುರುಕ್ಷೇತ್ರ’ವನ್ನು ಕಳೆದ ಒಂದೂವರೆ ದಶಕಗಳಿಂದ ಹಲವಾರು ರಂಗತಂಡಗಳಿಗೆ ನಿರ್ದೇಶಿಸುತ್ತಲೇ ಬಂದಿದ್ದಾರೆ. ಈಗ ಬೆಂಗಳೂರಿನ ಕಬ್ಬನ್ ಪಾರ್ಕನಲ್ಲಿರುವ ಸಚಿವಾಲಯ ಕ್ಲಬ್‌ಗಾಗಿ ಈ ನಾಟಕವನ್ನು ಬಡಿಗೇರರು ನಿರ್ದೇಶಿಸಿದ್ದು 2014, ಮೇ 7 ರಿಂದ 15 ರವರೆಗೆ ಸಚಿವಾಲಯ ಕ್ಲಬ್‌ನ ಸಭಾಂಗನದಲ್ಲಿ 'ಕರ್ನಾಟಕ
ಸರಕಾರದ ಸಚಿವಾಲಯ ಕ್ಲಬ್' ಆಯೋಜಿಸಿರುವ ಮಾಲತೇಶ ಬಡಿಗೇರರ ನಿರ್ದೇಶನದ ನಾಟಕೋತ್ಸವದಲ್ಲಿ ಮೇ 9 ರಂದು ‘ಸ್ಮಶಾನ ಕುರುಕ್ಷೇತ್ರ’ ನಾಟಕವು
ಪ್ರದರ್ಶನಗೊಂಡಿತು.
“ಈ ಯುದ್ದಭೂಮಿಗಳೆಂದರೆ ವಿಸ್ತಾರವಾದ ಶ್ಮಶಾನಗಳು. ಯುದ್ದಗಳೋ ಕೊನೆಯಿರದ ಕೊಲೆಯ ಕಲೆ. ಗೆಲುವೆಂದರೇನು? ಸೋತವರ ಸಂತಾಪ, ಗೆದ್ದವರ ವಿಜ್ರಂಭಣೆ!” ಎಂದು ದ್ವಾಪರದೇವ ಈ ನಾಟಕದ ಆರಂಭಕ್ಕೆ ಹೇಳುತ್ತಾನೆ. ಇಡೀ ನಾಟಕವೇ ಕುರುಕ್ಷೇತ್ರ ಯುದ್ದದಲ್ಲಿ ಹತರಾದವರ ಶವಗಳಿಂದಾವೃತವಾದ ಸ್ಮಶಾನಸದೃಶ ಸನ್ನಿವೇಶದಲ್ಲಿ ನಡೆಯುತ್ತದೆ. ಈ ಸ್ಮಶಾನದ ಹುಟ್ಟಿಗೆ ಕಾರಣರಾದವರನ್ನು ನಾಟಕದಾದ್ಯಂತ ವಿಶ್ಲೇಷಿಸಲಾಗುತ್ತದೆ. ಯುದ್ದಗಳ ವಿನಾಶಕಾರತ್ವವನ್ನು ದೃಶ್ಯಗಳ ಮೂಲಕ ಕಟ್ಟಿಕೊಡುತ್ತಲೇ ಯುದ್ದದ ನಿಷ್ಪ್ರಯೋಜಕತೆಯನ್ನು ಮನದಟ್ಟುಮಾಡಿಕೊಡುವ ಈ ನಾಟಕ ಯುದ್ದವಿರೋಧಿ ನಿಲುವನ್ನು ಪ್ರತಿಪಾದಿಸುವಂತೆ ಮೂಡಿ ಬಂದಿದೆ. ಈ ನಾಟಕದ ವಿಶೇಷತೆ ಏನೆಂದರೆ ಯುದ್ದಗಳು ಜನಸಾಮಾನ್ಯರ ಮೇಲೆ ಉಂಟುಮಾಡುವ ಕೆಟ್ಟಪರಿಣಾಮವನ್ನು ಚಿತ್ರಿಸುವ ಮೂಲಕ ಯುದ್ದಗಳ ಹಿಂದಿರುವ ಆಳುವ ವರ್ಗಗಳ ಸ್ವಾರ್ಥಪರತೆ ಮತ್ತು ಮಹತ್ವಾಕಾಂಕ್ಷೆಯನ್ನು ಬಯಲುಮಾಡುವುದಾಗಿದೆ. ಯುದ್ದರಾಜಕಾರಣಕ್ಕೆ ತಮ್ಮದಲ್ಲದ ಕಾರಣಕ್ಕೆ ಹತರಾದ ಸೈನಿಕರ ಹಾಗೂ ಅವರ ಅವಲಂಬಿತರ ನೋವನ್ನು ಸಮರ್ಥವಾಗಿ ಸಂವಹನಗೊಳಿಸುವ ಈ ನಾಟಕವು ಕುವೆಂಪುರವರ ದಾರ್ಶನಿಕತೆಗೆ ಸಾಕ್ಷಿಯಾಗಿದೆ.
ಕುರುಕ್ಷೇತ್ರ ಯುದ್ದ ದುರ್ಯೋಧನನ ‘ಊರುಭಂಗ’ದೊಂದಿಗೆ ಮುಗಿಯುತ್ತದೆ. ದ್ವಾಪರಯುಗ ಮುಗಿದು ಕಲಿಯುಗ ಪ್ರಾರಂಭವಾಗುವ ಸಂಕ್ರಮಣದ ಕಾಲಘಟ್ಟದಲ್ಲಿ ದ್ವಾಪರದೇವ ಕಲಿಗೆ ಅಧಿಕಾರವನ್ನು ಹಸ್ತಾಂತರಿಸುತ್ತಾನೆ. ತೊಡೆಮುರಿದು ಬಿದ್ದ ದುರ್ಯೋಧನನಿಗೆ ‘ನೀನೊಂದು ಕೇವಲ ಪಾತ್ರದಾರಿ’ ಎನ್ನುವ ಅರಿವನ್ನು ಶ್ರೀಕೃಷ್ಣ ಮಾಡಿಸುತ್ತಾನೆ. ಪಿಶಾಚಿಗಳು ಅಟ್ಟಹಾಸಮಾಡುತ್ತವೆ. ತನ್ನ ಗಂಡನನ್ನು ಹುಡುಕಿಬಂದ ಹೆಂಡತಿ ಹಾಗೂ ಮಗನನ್ನು ಹುಡುಕಿ ಬಂದ ತಾಯಿ ಶವಗಳನ್ನು ನೋಡಿ ರೋಧಿಸಿ ಶಾಪಹಾಕುತ್ತಾರೆ. ತನ್ನ ಮಗ ಕರ್ಣನ ಶವ ಹುಡುಕಿ ತಂದು ಪಾಂಡವರ ಪಾಳಯದಲ್ಲಿ ಶವಸಂಸ್ಕಾರ ಮಾಡಲು ಕುಂತಿ ಬಯಸುತ್ತಾಳೆ. ಭೀಮ ವಿರೋಧಿಸುತ್ತಾನೆ. ಅಶ್ವತ್ತಾಮ ಕರ್ಣನ ಪಾರ್ಥಿವ ಶರೀರ ತೆಗೆದುಕೊಂಡು ಹೋಗುತ್ತಾನೆ. ಆಗಲೇ ಶಿವ ರೌದ್ರ ನೃತ್ಯದಲ್ಲಿ ತೊಡಗುತ್ತಾನೆ. ಶಿವನಿಗೆ ಶ್ರೀಕೃಷ್ಣ ತನ್ನ ದ್ವಾಪರ ಯುಗದ ನಾಟಕ ಮುಗಿಸಿದ್ದನ್ನು ತಿಳಿಸುತ್ತಾನೆ. ಕಲಿಯುಗದಲ್ಲಿ ಶ್ರೀಕೃಷ್ಣ ಆಡುವ ನಾಟಕವನ್ನು ಶಿವ ನೋಡಬಯಸುತ್ತಾನೆ. ಕೃಷ್ಣನು ಬುದ್ದನಿಂದ ಹಿಡಿದು ಈಗಿನ
ಭಯೋತ್ಪಾದಕರ ಅಟ್ಟಹಾಸದವರೆಗೆ ಪ್ರಮುಖ ಘಟನೆಗಳನ್ನು ತೋರಿಸುತ್ತಾನೆ. ಭಯೋತ್ಪಾದಕರನ್ನು ಶಿವ ನಾಶಮಾಡುವ ಮೂಲಕ ನಾಟಕ ಅಂತ್ಯವಾಗುತ್ತದೆ. ಕುವೆಂಪುರವರ ರಂಗಪಠ್ಯದಲ್ಲಿ ಭಯೋತ್ಪಾದಕರ ಉಲ್ಲೇಖ ಇಲ್ಲದಿದ್ದರೂ ನಿರ್ದೇಶಕರು ಭಯೋತ್ಪಾದಕರನ್ನು ಸೃಷ್ಟಿಸಿ ರುದ್ರದೇವನಿಂದಲೇ ಅವರ ಸಂಹಾರ ಮಾಡಿಸಿ ಸಮಕಾಲೀನತೆಗೆ ನಾಟಕದ ಕ್ಲೈಮ್ಯಾಕ್ಸನ್ನು ಸಮೀಕರಿಸಿದ್ದಾರೆ.
ಇಡೀ ನಾಟಕ ಮಹಾಭಾರತದಲ್ಲಿಲ್ಲದ ಘಟನಾವಳಿಯನ್ನು ವಿಶಿಷ್ಟವಾಗಿ ವ್ಯಾಖ್ಯಾನ ಮಾಡುತ್ತದೆ. ವ್ಯಾಸ ಎಲ್ಲಿಗೆ ಕುರುಕ್ಷೇತ್ರವನ್ನು ಅಂತ್ಯಗೊಳಿಸಿದ್ದರೋ ಅಲ್ಲಿಂದ ಕುವೆಂಪುರವರ ದೃಶ್ಯ ಸೃಷ್ಟಿ ಮುಂದುವರೆಯುತ್ತದೆ. ಮಹಾಭಾರತವು ಆಳುವ ವರ್ಗದ ದೃಷ್ಪಿಕೋನದಿಂದ ನಿರೂಪನೆಗೊಂಡರೆ, ಅದಕ್ಕೆ ವ್ಯತಿರಿಕ್ತವಾಗಿ ಕುವೆಂಪುರವರು ಜನಸಾಮಾನ್ಯರ ದೃಷ್ಟಿಕೋನದಿಂದ ಸ್ಮಶಾನ ಕುರುಕ್ಷೇತ್ರವನ್ನು ಕಟ್ಟಿಕೊಡುತ್ತಾ ಕೊನೆಗೆ ದೈವತ್ವದಾಟವನ್ನು ನಿರೂಪಿಸುತ್ತಾರೆ. ಕಾಲದೇಶಾತೀತವಾಗಿ ಮನುಕುಲದ ಸ್ವಾರ್ಥ ಮಹತ್ವಾಕಾಂಕ್ಷೆಗಳನ್ನು ಹಾಗೂ ಅದರಿಂದಾಗುವ ಪರಿಣಾಮಗಳನ್ನು ಹೇಳುವ ಈ ನಾಟಕ ಸಾರ್ವಕಾಲಿಕ ಎನ್ನಬಹುದಾದ ರಂಗಕೃತಿ.
ಕುವೆಂಪುರವರ ಪ್ರತಿಮಾಸೃಷ್ಟಿ ಪರಿಕಲ್ಪನೆ ಅನಂತವಾದದ್ದು. ಯುಗಗಳನ್ನೇ ಪಾತ್ರಗಳಾಗಿ ಸೃಷ್ಟಿಸಿ ಮುಖಾಮುಖಿಯಾಗಿಸುತ್ತಾರೆ. ಅವರ ಯುದ್ದವಿರೋಧಿ ನೀತಿಗೆ ಜೈಕಾರವಿರಲಿ. ಜನಪರ ದೋರಣೆಗೆ ಅಭಿನಂದನೆಗಳಿರಲಿ. ಆದರೆ.....ಈ ನಾಟಕದ ಕೊನೆಗೆ ‘ಮಹಾಭಾರತ ಎನ್ನುವುದು ಘಟನೆಯೇ ಅಲ್ಲ ಶ್ರೀಕೃಷ್ಣ ಆಡಿಸಿದ ಪೂರ್ವನಿರ್ಧಾರಿತ ನಾಟಕದ ದೃಶ್ಯಾವಳಿ’ ಎನ್ನುವಂತೆ ಪ್ರತಿಪಾದಿಸುತ್ತಾರೆ. ‘ಶ್ರೀಕೃಷ್ಣ ಜಗನ್ನಾಟಕಮಂಡಳಿಯ ಸೂತ್ರದಾರ ಮನುಷ್ಯರೆಲ್ಲಾ ಅವನ ಪಾತ್ರದಾರಿಗಳು. ಅವನಾಡಿಸುತ್ತಾನೆ ಜನರಾಡುತ್ತಾರೆ’ ಎನ್ನುವ ಈ ನಾಟಕದ ಪರಿಕಲ್ಪನೆ ಅದ್ಯಾಕೋ ಪುರೋಹಿತಶಾಹಿ ಸಿದ್ದಾಂತದ ಪ್ರತಿಪಾದನೆಗೆ ಪೂರಕವೆನ್ನಿಸುತ್ತದೆ. ಯುದ್ದದ ನಿರರ್ಥಕತೆಯನ್ನು ಹೇಳುತ್ತಲೇ ಆ ಯುದ್ದಕ್ಕೆ ಶ್ರೀಕೃಷ್ಣನ ಪ್ರೇರಣೆಯೆ ಕಾರಣ ಎನ್ನುವುದು ಅದ್ಯಾಕೋ ಅವಾಸ್ತವವಾದಿ ಕಲ್ಪನೆ ಎನ್ನಿಸುವಂತಿದೆ. ಈ ದೇವರಾಡುವ ನಾಟಕಕ್ಕೆ ಇಷ್ಟೊಂದು ಅಗಣಿತ ಅಮಾಯಕ ಜನರ ರಕ್ತ ಹರಿಯಬೇಕಿತ್ತೆ? ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ಪರಿಪಾಲನೆಮಾಡುವ ತನ್ನ ಮಹಿಮೆಯನ್ನು ತೋರಿಸಲು ಯುಗಯುಗಗಳನ್ನೇ ಪ್ರಯೋಗಶಾಲೆಯನ್ನಾಗಿ ಮಾಡಿಕೊಳ್ಳಬೇಕಾಗಿತ್ತೆ. ಬ್ರಾಹ್ಮಣ್ಯವನ್ನು ವಿರೋಧಿಸಿದ, ನೂರು ದೇವರುಗಳ ನೂಕಾಚೆ ದೂರ ಎಂದು ಹೇಳಿದ,
ವಿಚಾರ ಕ್ರಾಂತಿಗೆ ಆಹ್ವಾನ ನೀಡಿದ ಕುವೆಂಪು ಹೀಗೆ ದೇವರ ಮಹಿಮೆಯನ್ನೇ ಪರೋಕ್ಷವಾಗಿ ಸಾರುವಂತಹ ದೃಷ್ಪಿಕೋನದಲ್ಲಿ ನಾಟಕ ರಚಿಸಿದ್ಯಾಕೆ? ಕೆಲವೊಮ್ಮೆ ಕುವೆಂಪುರವರನ್ನು ಅರ್ಥಮಾಡಿಕೊಳ್ಳುವುದೇ ಕಷ್ಟವೆನಿಸುತ್ತದೆ. ದೈವ ಧರ್ಮದ ವಿರುದ್ದ ಮಾತನಾಡುತ್ತಲೇ ಆದ್ಯಾತ್ಮದ ಬಗ್ಗೆಯೂ ಹೇಳುತ್ತಾರೆ.
ಈ ನಾಟಕದಲ್ಲಿ ಸಾಮಾನ್ಯ ಜನರ ಸಾವು ನೋವಿಗೆ ಕಾರಣವಾದ ಯುದ್ಧವನ್ನು ದಿಕ್ಕರಿಸುತ್ತಲೇ ಆ ಯುದ್ದಕ್ಕೆ ಅಸಲಿ ಕಾರಣ ಶ್ರೀಕೃಷ್ಣ ಆಡುವ ನಾಟಕ ಎಂದೂ ಪ್ರತಿಪಾದಿಸುತ್ತಾರೆ. ಮನುಷ್ಯರಲ್ಲಿ ರಾಗದ್ವೇಷಗಳನ್ನು ಹುಟ್ಟಿಸಿ ದೇವರು ಅವರ ಬದುಕಿನಲ್ಲಿ ನಾಟಕವನ್ನಾಡಿಸುವುದೇ ನಿಜವಾದಲ್ಲಿ ಮನುಷ್ಯನ ಅಸ್ತಿತ್ವದ ಉದ್ದೇಶವಾದರೂ ಏನು? ದೇವನಿಚ್ಚೆಯಂತೆಯೇ ಎಲ್ಲವೂ ನಡೆಯುವುದಾದರೆ ಮನುಷ್ಯರ ಇಚ್ಚೆಗೆ ಅನಿಸಿಕೆಗೆ ಬದುಕಿಗೆ ಬೆಲೆಯಾದರೂ ಎಲ್ಲಿ? ಈ ಕಲಿಯುಗದಲ್ಲಿ ನಡೆಯುವ ಎಲ್ಲಾ ಘಟನೆಗಳ ಸೂತ್ರದಾರನೂ ಶ್ರೀಕೃಷ್ಣನೇ ಆಗಿದ್ದು ಎಲ್ಲಾ ದುರಂತಗಳನ್ನೂ ಸೃಷ್ಟಿಸುತ್ತಾನೆ ಹಾಗೂ ಕೊನೆಗೆ ಅವನೇ ದುರುಳರನ್ನೂ ನಾಶಗೊಳಿಸುತ್ತಾನೆ ಎನ್ನುವುದಾದರೆ ಈ ವಿನಾಶಗಳಲ್ಲಿ ಹತರಾದ ಲಕ್ಷಾಂತರ ಜೀವಗಳ ಹೊಣೆಯನ್ನೂ ಆ ದೇವರೇ ಹೊರಬೇಕಲ್ಲವೆ? ಹೀಗೆ ಹಲವಾರು ತಾತ್ವಿಕ ಪ್ರಶ್ನೆಗಳನ್ನು ಕುವೆಂಪುರವರ ಈ ನಾಟಕ ಹುಟ್ಟಿಸುತ್ತದೆ. ಘನಘೋರ ವಿನಾಶದ ನಂತರ ಮತ್ತೆ ಹೊಸಸೃಷ್ಟಿಯ ಹುಟ್ಟಿನ ಸಾಧ್ಯತೆಗಳನ್ನು ಹೇಳುವ ಈ ನಾಟಕ ಆ ನವಸೃಷ್ಟಿಗೆ ದೈವವೇ ಕಾರಣ ಎನ್ನುವುದು ಮಾತ್ರ ಅವಾಸ್ತವಾದಿ ಅಲೌಕಿಕ ಪರಿಕಲ್ಪನೆಯ ಮಿಥ್ ಆಗಿದೆ. ಹೀಗಾಗಿ ಕುವೆಂಪುರವರ ‘ಸ್ಮಶಾನ ಕುರುಕ್ಷೇತ್ರ’ವು ವಾಸ್ತವ ಅವಾಸ್ತವಗಳ ತಾಕಲಾಟದ ನಡುವೆ ಪ್ರತಿಮಾತ್ಮಕ ದೃಶ್ಯಕಾವ್ಯವಾಗಿ ಮೂಡಿಬಂದಿದೆ.
ಈ ಪ್ರತಿಮಾಪ್ರಧಾನ ನಾಟಕವನ್ನು ಮಾಲತೇಶ ಬಡಿಗೇರ್ ಕಟ್ಟಿಕೊಟ್ಟಿರುವ ರೀತಿ ತುಂಬಾ ವಿಶಿಷ್ಟವೂ ಹಾಗೂ ಆಕರ್ಷಣೀಯವೂ ಆಗಿದೆ. ಗ್ಲೋಬನ್ನು ಕೈಯಲ್ಲಿ ಹಿಡಿಯಲು ಬಯಸುವ ರಕ್ತಸಿಕ್ತ ಮನುಷ್ಯನನ್ನು ಸಂಕೇತಿಸುವ ಬ್ಯಾಕ್ಡ್ರಾಪ್ ಇಡೀ ನಾಟಕದ ಆಶಯವನ್ನು ಸಂಕೇತಿಸುವಂತಿದೆ. ಮುರಿದ ರಥದ ಚಕ್ರ ಯುದ್ದದ ನಿರರ್ಥತೆಗೆ ಪ್ರತೀಕವಾದರೆ, ಅರಮನೆಯ ಒಂಟಿ ಕಂಬವು ಸರ್ವನಾಶಗೊಂಡ ಸಾಮ್ರಾಜ್ಯದ ಅವನತಿಗೆ ರೂಪಕವಾಗಿದೆ. ಪ್ರತಿಯೊಂದು ಪಾತ್ರಕ್ಕೂ ಸಿದ್ದಗೊಳಿಸಲಾದ ವಸ್ತ್ರವಿನ್ಯಾಸ ಹಾಗೂ ಬಳಸಿದ ರಂಗಪರಿಕರಗಳು ಪೌರಾಣಿಕ ದೃಶ್ಯವನ್ನು ಮರುಸೃಷ್ಟಿಸಿದಂತಿದ್ದು ನಾಟಕವನ್ನು ಶ್ರೀಮಂತಗೊಳಿಸಿವೆ. ಪ್ರತಿ ದೃಶ್ಯದ ಬ್ಲಾಕಿಂಗ್ ಹಾಗೂ ಪಾತ್ರಗಳ ಮೈವ್ಮೆಂಟ್ಗಳು ಖರಾರುವಕ್ಕಾಗಿ ಮೂಡಿಬಂದಿದ್ದು ನಾಟಕ ತನ್ನ ದೃಶ್ಯ ವೈಭವದಿಂದಾಗಿ ನೋಡುಗರ ಗಮನ ಸೆಳೆಯುವಂತೆ ಮೂಡಿಬಂದಿದೆ.
ಈ ನಾಟಕದ ವಿಶೇಷತೆ ಏನೆಂದರೆ, ನಟನೆಯೊಂದನ್ನು ಹೊರತು ಪಡಿಸಿ ನೇಪತ್ಯದ ಎಲ್ಲಾ ಕೌಶಲ್ಯದ ಕೆಲಸಗಳನ್ನು ಮಾಲತೇಶ ಬಡಿಗೇರರು ಸ್ವತಃ ನಿಭಾಯಿಸಿ ತಮ್ಮ ಬಹುಮುಖಿ ಪ್ರತಿಭೆಯನ್ನು ತೋರಿಸಿದ್ದಾರೆ. ಹೊಸಬರಿಗೆ ನಾಟಕವನ್ನು ನಿರ್ದೇಶಿಸಿ, ಪ್ರತಿ ಪಾತ್ರಕ್ಕೂ ಕಾಸ್ಟೂಮ್ಸಗಳನ್ನು ವಿನ್ಯಾಸಗೊಳಿಸಿ, ಪ್ರಸಾಧನದಲ್ಲೂ ಕೈಜೋಡಿಸಿ, ಹಾಡುಗಳಿಗೆ ಸಂಗೀತವನ್ನು ಕಂಪೋಸ್ ಮಾಡಿ, ಲೈವ್ ಸಂಗೀತವನ್ನೂ ತಾವೇ ನಿರ್ವಹಿಸಿ, ಬೆಳಕಿನ್ನು ವಿನ್ಯಾಸಗೊಳಿಸಿದ್ದಲ್ಲದೇ ಅದರ ನಿರ್ವಹನೆಯಲ್ಲೂ ಸಹಕರಿಸಿ, ರಂಗ ಸಜ್ಜಿಕೆಯ ವಿನ್ಯಾಸದ ಜೊತೆಗೆ ರಂಗಪರಿಕರಗಳನ್ನು ಸಿದ್ದಪಡಿಸಿ, ಹಿನ್ನೆಲೆ ಬಿತ್ತಿಚಿತ್ರವನ್ನೂ ಪೇಂಟ್ ಮಾಡಿ.....
ಒಂದಾ ಎರಡಾ...
ಹತ್ತಾರು ಜನ ರಂಗಕರ್ಮಿಗಳು ಮಾಡುವ ಕೆಲಸವನ್ನು ತಮ್ಮ ಪತ್ನಿ ಛಾಯಾ ಬಡಿಗೇರರ ಸಹಕಾರದೊಂದಿಗೆ ಮಾಲತೇಶ ನಿರ್ವಹಿಸಿ ಯಶಸ್ವಿ ನಾಟಕವನ್ನು ಕಟ್ಟಿಕೊಟ್ಟಿದ್ದು ಬಹುಷಃ ಆಧುನಿಕ ಕನ್ನಡ ರಂಗಭೂಮಿಯಲ್ಲಿ ಅಪರೂಪ.
ಬಡಿಗೇರರ ಪ್ರತಿಭೆ ಮತ್ತು ಪರಿಶ್ರಮದಿಂದಾಗಿ ಇಡೀ ನಾಟಕ ಅದ್ದೂರಿಯಾಗಿ ಮೂಡಿಬಂದಿದೆ. ಆದರೆ ಸಮಸ್ಯೆ ಉಂಟಾಗಿದ್ದು ಕಲಾವಿದರ ಅಭಿನಯದಲ್ಲಿ. ರಿಹರ್ಸಲ್ಸ ಕೊರತೆಯಿಂದಲೋ ಅಥವಾ ಅನನುಭವಿ ನಟರಿಂದಾಗಿಯೋ ನಾಟಕದಲ್ಲಿ ಪೋರ್ಸ ಕಂಡುಬರಲಿಲ್ಲ. ದುರ್ಯೋಧನನ ಪಾತ್ರದಾರಿ ರಾಮಕೃಷ್ಣರವರನ್ನು ಹೊರತುಪಡಿಸಿ ಮಿಕ್ಕೆಲ್ಲಾ ನಟ ನಟಿಯರು ತಮ್ಮ ಪಾಲಿನ ಸಂಭಾಷಣೆಗಳನ್ನು ಸರಿಯಾಗಿಯೇ ಒಪ್ಪಿಸಿದರಾದರೂ ಪಾತ್ರದ ಆಳಕ್ಕೆ ಇಳಿಯುವಲ್ಲಿ ವಿಫಲರಾದರು. ಅಭಿನಯ ವಿಭಾಗದಲ್ಲಿ ತಾಲಿಂ ಕೊರತೆ ಎದ್ದು ಕಾಣುವಂತಿತ್ತು ಭಾವಾಭಿನಯದಲ್ಲಿ ಇನ್ನೂ ನಟರು ಪಳಗಬೇಕಿದೆ. ಸರಕಾರಿ ಸಚಿವಾಲಯದಲ್ಲಿ ಕೆಲಸಮಾಡುತ್ತಿರುವ ನೌಕರವರ್ಗದವರು ಇಷ್ಟಾದರೂ ನಾಟಕದ ಬಗ್ಗೆ ಆಸಕ್ತಿ ತಳೆದು ಅಭಿನಯಿಸಿದ್ದು ನಿಜಕ್ಕೂ ಸಂತಸದ ವಿಷಯ.
ಆದರೂ.. ರಂಗಪೂರಕ ಕ್ರಿಯೆಗಳನ್ನು ಅದೆಷ್ಟೇ ಅದ್ದೂರಿಯಾಗಿ ಮಾಡಿದರೂ ನಾಟಕದ ವಸ್ತುವನ್ನು ಭಾವಪೂರ್ಣವಾಗಿ ಪ್ರೇಕ್ಷಕರಿಗೆ ಮುಟ್ಟಿಸಬೇಕಾದವರು ಕಲಾವಿದರೇ. ಯಾಕೆಂದರೆ ನಾಟಕವೆನ್ನುವುದು ನಟರ ಮಾಧ್ಯಮವಾಗಿದೆ. ನಿರ್ದೇಶಕ ಪೂರಕ ರಂಗತಂತ್ರಗಳನ್ನು ಅದೆಷ್ಟೇ ಸಮರ್ಥವಾಗಿ ಬಳಸಿದರೂ ಒಂದು ನಾಟಕ ಸಂಪೂರ್ಣ ಯಶಸ್ವಿಯಾಗಲು ನಟರ ಅಭಿನಯದಿಂದಲೇ ಸಾಧ್ಯ. ಅದ್ಭುತ ಪ್ರಯೋಗವಾಗಬಹುದಾದ ಈ ‘ಸ್ಮಶಾನ ಕುರುಕ್ಷೇತ್ರ’ ನಾಟಕ ಪ್ರದರ್ಶನವು ಸಮರ್ಥ ಅಭಿನಯದ ಕೊರತೆಯಿಂದಾಗಿ ದುರ್ಭಲವೆನಿಸಿತು. ಹೆಚ್ಚು ಹೆಚ್ಚು ತಾಲಿಂಗಳನ್ನು ಮಾಡುವ ಮೂಲಕ ಮುಂದಿನ ಪ್ರದರ್ಶನದಲ್ಲಿ ಆ ಕೊರತೆಯನ್ನು ನೀಗಿಕೊಳ್ಳಬೇಕಿದೆ.
ನಟರಿಂದಾದ ಲೋಪಗಳನ್ನು ಮರೆಯುವಂತೆ ಮಾಡಿದ್ದು ಹಾಡು ಮತ್ತು
ಸಂಗೀತ ಸಂಯೋಜನೆ. ಚಂಡೆ ನಗಾರಿಗಳ ಅರ್ಭಟದಿಂದಾಗಿ ನಾಟಕ ನೋಡುಗರಲ್ಲಿ ಸಂಚಲನವನ್ನುಂಟುಮಾಡಿತು. ಈ ರುದ್ರ ನಾಟಕದ ಕೊನೆಯಲ್ಲಿ ಶಿವನ ತಾಂಡವ ನೃತ್ಯ ತುಂಬಾ ದುರ್ಬಲವಾಗಿತ್ತಾದರೂ ಹಿನ್ನೆಲೆಯಲ್ಲಿ ಬಳಸಿದ ಸಂಗೀತಮಾತ್ರ ಪ್ರೇಕ್ಷಕರ ಎದೆ ಮಿಡಿಸುವಂತಿತ್ತು.
ಮಾಲತೇಶ ಬಡಿಗೇರ |
ಆಳುವ ವರ್ಗಗಳ ಸ್ವಾರ್ಥಕ್ಕೆ ಬಲಿಯಾಗುವ ಅಮಾಯಕ ಜನರ ದುರಂತವನ್ನು, ಅಧಿಕಾರಕ್ಕಾಗಿ ನಡೆಯುವು ತಂತ್ರ-ಕುತಂತ್ರಗಳನ್ನು ಹಾಗೂ ಯುದ್ದದ ನಿರರ್ಥಕತೆಯನ್ನು ಹೇಳುವ ‘ಸ್ಮಶಾನ ಕುರುಕ್ಷೇತ್ರ’ ನಾಟಕವು ಮಹಾಭಾರತದ ರಕ್ತಸಿಕ್ತ ಚರಿತ್ರೆಯನ್ನು ಬಯಲುಗೊಳಿಸುತ್ತಲೇ ಸಂಘರ್ಷಗಳಿಂದ ಸರ್ವನಾಶ ಎನ್ನುವ ಸಾರ್ವಕಾಲಿಕ ಸತ್ಯವನ್ನು ಹೇಳುವಲ್ಲಿ ಯಶಸ್ವಿಯಾಗಿದೆ.
-ಶಶಿಕಾಂತ ಯಡಹಳ್ಳಿ
ನಾಟಕ
ಪ್ರದರ್ಶನದ ನಂತರ ಸಚಿವಾಲಯ ಕ್ಲಬ್ ಕಲಾವಿದರಿಂದ ಆತ್ಮೀಯ ಸನ್ಮಾನ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ