ಶುಕ್ರವಾರ, ಜೂನ್ 27, 2014

ಮರೆತೆನೆಂದರೂ ಮರೆಯಲಾಗದ ನಟಸಾಮ್ರಾಟ ಏಣಗಿ ನಟರಾಜ :





ರಂಗಭೂಮಿಯ ಸಜ್ಜನ ರಂಗಕರ್ಮಿ ಏಣಗಿ ಬಾಳಪ್ಪನವರಿಗೆ ವರ್ಷ ಶತಕದ ಸಂಭ್ರಮ. ನೂರು ವರ್ಷಗಳ ಕಾಲ ಅರ್ಥಪೂರ್ಣವಾಗಿ ಬಾಳಿದ ಬಾಳಪ್ಪನವರನ್ನು ರಂಗಭೂಮಿ ನೆನಪಿಸಿಕೊಂಡು ಸಂಭ್ರಮಿಸುತ್ತಿದೆಜೂನ್ 14 ರಂದು ನಾಟಕ ಅಕಾಡೆಮಿ ಧಾರವಾಡದಲ್ಲಿಏಣಗಿ ಬಾಳಪ್ಪನವರಿಗೆ ಶತಕ ಸನ್ಮಾನ ಸಮಾರಂಭ ಏರ್ಪಡಿಸಿ ಗೌರವಿಸಿತು. ಬಾಳಪ್ಪನವರ ಬಾಳಸಂಗಾತಿ ಲಕ್ಷ್ಮೀಬಾಯಿರವರಿಗೆ ಸರಕಾರ ಗುಬ್ಬಿ ವೀರಣ್ಣ ಪ್ರಶಸ್ತಿ ಕೊಟ್ಟು ಸನ್ಮಾನಿಸಿತು. ಆದರೆ ಅಭಿನಯದಲ್ಲಿ ಏಣಗಿ ಬಾಳಪ್ಪ ದಂಪತಿಗಳನ್ನೂ ಮೀರಿಸುವಂತಹ ಪ್ರತಿಭೆಯಾಗಿದ್ದ ಬಾಳಪ್ಪನವರ ಮಗ ನಟರಾಜರನ್ನು ಬಹುತೇಕರು ಮರೆತೇ ಹೋದರು. ತಿಂಗಳು 9 ನೇ ತಾರೀಖಿಗೆ ಸರಿಯಾಗಿ ರಂಗದಂಗಳದಲ್ಲಿ ನಟಸಾಮ್ರಾಟನಾಗಿ ಮೆರೆದ ಏಣಗಿ ನಟರಾಜ ತೀರಿಕೊಂಡು ಎರಡು ವರ್ಷಗಳು ಕಳೆದವು. ನಟರಾಜ ಮರೆಯಾದರೂ ಇನ್ನೂ ಕೆಲವರಿಗೆ ನಟರಾಜರ ಅಭಿನಯ ಕಣ್ಣಿಗೆ ಕಟ್ಟಿದಂತಿದೆ. ಅಂತಹ ಅಪರೂಪದ ನಟನ ಬದುಕು, ಸಾಧನೆ, ವೇದನೆಗಳನ್ನು ಕುರಿತು ನೆನಪಿಸಿಕೊಳ್ಳುವ ಮೂಲಕ ನಮ್ಮ ಪತ್ರಿಕೆ ಮಹಾನ್ ಪ್ರತಿಭಾವಂತನಿಗೆ ಅಕ್ಷರ ನಮನವನ್ನು ಸಲ್ಲಿಸುತ್ತಿದೆ.
  
 ನಿಜಕ್ಕೂ ಕನ್ನಡ ರಂಗಭೂಮಿ ಕಂಡ ಅಪರೂಪದ ನಟರಲ್ಲಿ ಏಣಗಿ ನಟರಾಜ ಪ್ರಮುಖರು. ಅವರ ನಟನಾ ಕೌಶಲ್ಯ ಯುವ ಕಲಾವಿದರಿಗೆ ಮಾದರಿಯಾಗಿತ್ತು. ಅದೆಂತಾ ದೇಹಭಾಷೆ, ಅದೆಂತಾ ಕಂಚಿನ ಕಂಠದ ಮಾತುಗಾರಿಕೆ, ಅದೆಂತಾ ಅಭಿನಯ ಕಲೆಯ ಅಭಿವ್ಯಕ್ತಿ ಹೋ... ಅವರ ನಟನೆಯನ್ನು ನೋಡುವುದೇ ಪ್ರೇಕ್ಷಕರಿಗೆ ಒಂದು ಹಬ್ಬವಾಗಿತ್ತು. ಬಹುಶಃ ನಟರಾಜರ ಅಭಿನಯಕ್ಕೆ ಬೇರೆ ಹೋಲಿಕೆಯೇ ಇಲ್ಲ. ಅವರಿಗೆ ಅವರೇ ಸರಿಸಾಟಿ. ಅವರ ಸಂಭಾಷಣೆ ಮೇಲಿನ ಹಿಡಿತ, ಪಾತ್ರದೊಳಗೆ ಪರಕಾಯಪ್ರವೇಶ ಮಾಡುವ ತುಡಿತ, ಪ್ರೇಕ್ಷಕರೊಂದಿಗಿನ ಸಂವಹನದಲ್ಲಿ ಸಂಯಮದ ಮಿಡಿತ, ಇವೆಲ್ಲವುಗಳನ್ನು ನುಂಗಿ ನೀರು ಕುಡಿದು ಅಕಾಲಿಕವಾಗಿ ನಟಶ್ರೇಷ್ಟನನ್ನು ನಿಶ್ಚಲವಾಗಿಸಿ ಅಂಗಾತ ಮಲಗಿಸಿದ್ದು ವಿಪರೀತ ಕುಡಿತ.



ಅಂದು 2012, ಜೂನ್ 9, ಕನ್ನಡ ರಂಗಭೂಮಿಗೆ ಮತ್ತೊಂದು ದುರಂತದ ಸುದ್ದಿ. ಏಣಗಿ ನಟರಾಜ ಅಸ್ತಂಗತ. ಅವರ ಸಾವು ನಿಶ್ಚಿತ ಎಂದು ಮೊದಲೇ ಗೊತ್ತಿದ್ದವರಿಗೂ, ಅವರ ಸಾವಿನ ದಿನವನ್ನು ಲೆಕ್ಕಹಾಕುತ್ತಿದ್ದವರಿಗೂ, ಅವರ ಸಾವು ಖಚಿತ ಎಂದು ತಿಳಿದು ಇನ್ನೂ ಸಾಯುವುದಕ್ಕಿಂತ ಮೊದಲೇ ಧಾರವಾಡ ರಂಗಾಯಣದ ನಿರ್ದೇಶಕರಾಗಲು ಲಾಭಿ ನಡೆಸುತ್ತಿದ್ದವರಿಗೂ ಏಣಗಿ ನಟರಾಜರ ಅಕಾಲಿಕ ಮರಣ ಅಂತಃಕರಣವನ್ನು ಕಲುಕಿದ್ದಂತೂ ಸುಳ್ಳಲ್ಲ. ಅವರ ಶತ್ರುಗಳೂ ಸಹ ಅವರ ಸಾವನ್ನು ಬಯಸಿದವರಲ್ಲ. ನಟರಾಜರ ದೌರ್ಬಲ್ಯಗಳನ್ನು ಮೀರಿ ನಿಂತಿದ್ದು ಅವರ ಅಭಿನಯ. ಆದರೆ ದುರಂತವೇನೆಂದರೆ ದೌರ್ಬಲ್ಯಗಳೇ ಅವರ ಅಭಿನಯ ಸಾಮರ್ಥ್ಯವನ್ನು ಕಂತು ಕಂತಿನಲ್ಲಿ ಕೊಂದು ಹಾಕಿಬಿಟ್ಟಿದ್ದವು. ಕುಡಿತ ಎನ್ನುವ ಮಹಾಮಾರಿ ಅಪರೂಪದ ಕಲಾವಿದನನ್ನು ಕಂತು ಕಂತುಗಳಲ್ಲಿ ದುರ್ಬಲಗೊಳಿಸಿ ಮತ್ತೆ ಮರಳಿಬಾರದ ಲೋಕಕ್ಕೆ ಕರೆದೊಯ್ತು. ಏಣಗಿ ನಟರಾಜರ ಅಮೋಘ ಅಭಿನಯವನ್ನು ನಾಟಕಗಳಲ್ಲಿ, ದೂರದರ್ಶನದ ಧಾರಾವಾಹಿಗಳಲ್ಲಿ ಹಾಗೂ ಸಿನೆಮಾಗಳಲ್ಲಿ ನೋಡಿ ಆನಂದಿಸಿದ ಜನರು ಮರಮರಮರುಗಿದರು.

ಹುಟ್ಟಿನಿಂದಲೇ ತಂದೆ ಏಣಗಿ ಬಾಳಪ್ಪನವರಿಂದ ಬಳುವಳಿಯಾಗಿ ಬಂದ ಅಭಿನಯಕಲೆ ನಟರಾಜರಿಗೆ ರಕ್ತಗತವಾಗಿತ್ತು. ನೀನಾಸಂ ರಂಗಶಾಲೆಯಲ್ಲಿ ಆಧುನಿಕ ರಂಗಭೂಮಿ ಕುರಿತು ತರಬೇತಿ ಪಡೆದು ಅಭಿನಯ ಕಲೆಗೆ ವಿಶಿಷ್ಟ ಶೈಲಿಯನ್ನು ರೂಪಿಸಿದವರು ಏಣಗಿ  ನಟರಾಜ್. ನೀನಾಸಂ ತಿರುಗಾಟದ ನಾಟಕಗಳಲ್ಲಿ ತಮ್ಮ ಅಭಿನಯ ಸಾಮರ್ಥ್ಯವನ್ನು ಸಾಬೀತುಪಡಿಸಿದ ನಟರಾಜ್ ಒಂದಲ್ಲಾ ಎರಡಲ್ಲಾ ಒಂದು ಸಾವಿರಕ್ಕೂ ಹೆಚ್ಚು ನಾಟಕಗಳ ಪ್ರದರ್ಶನ ಮತ್ತು ಮರುಪ್ರದರ್ಶನಗಳಲ್ಲಿ ಅಭಿನಯಿಸಿ ಕನ್ನಡ ರಂಗಭೂಮಿಯಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿ ಮರೆಯಾಗಿದ್ದಾರೆ. ಮ್ಯಾಕಬೆತ್, ಮಿಸ್ ಸದಾರಮೆ, ನಟಸಾಮ್ರಾಟ್, ಪ್ರಸನ್ನರವರ ನಿರ್ದೇಶನದ ತದ್ರೂಪಿ, ಜಂಬೆರವರ ನಿರ್ದೇಶನದ "ಬಿರುದಂತೆಂಬರ ಗಂಡ", ಚಂದ್ರಶೇಖರ ಕಂಬಾರರ "ಸಾಂಬಶಿವ ಪ್ರಹಸನ" ಹಾಗೂ ಎಸ್. ಸುರೇಂದ್ರನಾಥರವರ ನಿರ್ದೇಶನದಲ್ಲಿ ಇತ್ತೀಚೆಗೆ ಅಭಿನಯಿಸಿದ "ನಾ ತುಕಾರಾಂ ಅಲ್ಲ" ..... ಮುಂತಾದ ನಾಟಕಗಳು ಏಣಗಿ ನಟರಾಜರ ಅಭಿನಯ ಸಾಮರ್ಥ್ಯಕ್ಕೆ ಕೆಲವು ಸಾಕ್ಷಿಗಳು. ಧಾರವಾಡದ ಲೋಕೋದ್ದಾರಕ ಸಂಘಕ್ಕೆ ನಿರ್ದೇಶಿಸಿದ ಹಸಿರೆಲೆ ಹಣ್ಣೆಲೆ, ತಮ್ಮದೇ ಆದ ಕಲಾವೈಭವ ನಾಟ್ಯಸಂಘಕ್ಕೆ ನಿರ್ದೇಶಿಸಿದ "ಶ್ರೀ ಜಗಜ್ಯೋತಿ ಬಸವೇಶ್ವರ"... ಹೀಗೆ  ಹಲವಾರು ನಾಟಕಗಳನ್ನು ಏಣಗಿ ನಟರಾಜರು ನಿರ್ದೇಶಿಸಿದ್ದಾರೆ. ಮೈಸೂರಿನ ರಂಗಾಯಣದಲ್ಲಿ ರಂಗಶಿಕ್ಷಕರಾಗಿ ಕೆಲಸಮಾಡಿದ ಅನುಭವ ಹೊಂದಿದ ಇವರು ನಟನೆಗೆ ಅವಕಾಶವಿಲ್ಲ ಎಂಬುದನ್ನು ಅರಿತು ಶಿಕ್ಷಕ ವೃತ್ತಿಗೆ ನಮಸ್ಕರಿಸಿ ಹೊರಬಂದವರು.

'ನಾ ತುಕಾರಾಂ ಅಲ್ಲ' ನಾಟಕದಲ್ಲಿ ಬಿ.ಸುರೇಶರವರ ಜೊತೆ ಏಣಗಿ ನಟರಾಜ

ರಂಗಭೂಮಿ ಅಷ್ಟೇ ಅಲ್ಲ, ಕಿರುತೆರೆಯ ಧಾರಾವಾಹಿಗಳಲ್ಲೂ ಸಹ ತಮ್ಮ ಅಭಿನಯದಿಂದ ಏಣಗಿ ನಟರಾಜ್ ಮನೆಮಾತಾಗಿದ್ದಾರೆ. 25ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿ ತಮ್ಮದೇ ಆದ ಅಭಿಮಾನಿಗಳನ್ನು ಹೊಂದಿದ್ದಾರೆ. ಬಿ.ಸುರೇಶ ನಿರ್ದೇಶನದ "ನಾಕುತಂತಿ", ಸುನಿಲ್ಕುಮಾರ ಸಿಂಗ್ ನಿರ್ದೇಶನದ "ಗೋಧೂಳಿ", ನಾಗಾಭರಣ ನಿರ್ದೇಶನದ "ಸಂಕ್ರಾಂತಿ", ಮಹಾನವಮಿ.... ಹೀಗೆ ಹಲವಾರು ಸೀರಿಯಲ್ಗಳಲ್ಲಿ ನಟರಾಜರದು ಗಮನಾರ್ಹ ನಟನೆ. ರವೀಂದ್ರ ಪೂಜಾರಿ ನಿರ್ಮಾಣದ "ಕಿನ್ನುರಿ" ಎಂಬ ಧಾರಾವಾಹಿಗೆ ಸ್ಕ್ರಿಪ್ಟ್ ರಚಿಸಿ, ನಿರ್ದೇಶಿಸಿ ಅದರಲ್ಲಿ ಅಭಿನಯವನ್ನೂ ಮಾಡುವ ಮೂಲಕ ಆಲ್ರೌಂಡರ್ ಕೆಲಸ ಮಾಡಿದರುಸಿನೆಮಾ ರಂಗದಲ್ಲೂ ಸಹ ತಮ್ಮ ವಿಶಿಷ್ಟ ನಟನೆಯ ಶೈಲಿಯಿಂದ ಏಣಗಿ ನಟರಾಜ್ ಗುರುತಿಸಿಕೊಂಡರುನಾಗಾಭರಣರವರು ನಿರ್ದೇಶಿಸಿದ ಬಹುತೇಕ ಸಿನೆಮಾಗಳಲ್ಲಿ ಏಣಗಿ ನಟರಾಜರು ನಟಿಸಿದ್ದಾರೆ. ಮತ್ತೆ ಮುಂಗಾರು, ಅವ್ವ, ಅಭಿ ಸೇರಿದಂತೆ ಹಲವಾರು ಕನ್ನಡ ಚಲನಚಿತ್ರಗಳಲ್ಲಿ ಏಣಗಿ ನಟರಾಜ್ ಅಭಿನಯಿಸಿದ್ದಾರೆ.

 ವಿಪರ್ಯಾಸ ಎಂದರೆ ಇದೇ ಏನೋ?. ಸೆಂಚುರಿ ವರ್ಷ ಮುಗಿಸುತ್ತಿರುವ ಏಣಗಿ ಬಾಳಪ್ಪನವರು ಇನ್ನೂ ಯುವಕರ ಹಾಗೇ ಆರೋಗ್ಯದಿಂದ ಓಡಾಡುತ್ತಿದ್ದಾರೆ. ಆದರೆ ಅವರ ಮಗ ನಟರಾಜಗಿನ್ನೂ ಅರ್ಧ ಸೆಂಚುರಿ (52ವರ್ಷ) ವಯಸ್ಸಾಗಿತ್ತಷ್ಟೇ. ಅಷ್ಟರಲ್ಲೇ ಔಟಾಗಿ ರಂಗದಂಗಳದಿಂದ ನಿರ್ಗಮಿಸಿಬಿಟ್ಟರು. ಆಗಿನ್ನೂ ಬಾಳಪ್ಪನವರಿಗೆ ಹದಿಹರೆಯದ ವಯಸ್ಸು, ಶ್ರೀ ಜಗಜ್ಯೋತಿ ಬಸವೇಶ್ವರ ನಾಟಕದಲ್ಲಿ ಬಸವಣ್ಣನವರ ಪಾತ್ರ ಮಾಡುತ್ತಿದ್ದರು. ಅದೊಂದು ದಿನ ನಾಟಕ ಪ್ರದರ್ಶನದ ಮಾರನೆಯ ದಿನ ಬೆಳಿಗ್ಗೆ ಪುಟ್ಟ ಟೀ ಅಂಗಡಿಯ ಮುಂದೆ ನಿಂತು ಚಾ ಕುಡಿಯುತ್ತಿದ್ದರು. ಅದನ್ನು ನೋಡಿದ ಯಾರೋ ಒಬ್ಬ ಇನ್ನೊಬ್ಬನಿಗೆ " ಲೇ ಅಲ್ಲಿ ನೋಡೋ, ಬಸವಣ್ಣ ಚಾ ಕುಡಿತಿದ್ದಾನೆ.." ಅಂದು ಬಿಟ್ಟ. ಇದನ್ನು ಕೇಳಿದ ಬಾಳಪ್ಪನವರು ತಳಮಳಗೊಂಡರು. ಪಾತ್ರಗಳ ಮೂಲಕ ನೈತಿಕತೆ ಬೋದಿಸುವ ನಟನನ್ನು ಜನ ಅನುಕರಿಸುತ್ತಾರೆ ಎಂಬುದನ್ನು ಅರಿತುಗೊಂಡು ಅಂದಿನಿಂದ ಚಾ, ಕಾಫಿ ಕುಡಿಯುವುದಕ್ಕೆ ತಿಲಾಂಜಲಿಯನ್ನಿತ್ತರು. ಯಾವುದೇ ದುರಭ್ಯಾಸಕ್ಕೂ ಬಲಿಯಾಗದೇ ಇಂದಿಗೂ ಆರೋಗ್ಯಪೂರ್ಣ ಜೀವನ ನಡೆಸುತ್ತಿದ್ದಾರೆ. ಬಹುಶಃ ಕಲಾಲೋಕದಲ್ಲಿ ಬಾಳಪ್ಪನವರನ್ನು ಡಾ.ರಾಜಕುಮಾರರಿಗೆ ಹೋಲಿಸಬಹುದು. ರಾಜಕುಮಾರ್ ಸಿನೆಮಾಲೋಕದ ದಿಗ್ಗಜರಾದರೆ, ಬಾಳಪ್ಪನವರು ರಂಗಲೋಕದ ದಿಗ್ಗಜರು. ಇಬ್ಬರೂ ಆದರ್ಶಪುರುಷರು ತಮ್ಮ ಸರಳತೆ ಮತ್ತು ದುರಭ್ಯಾಸರಹಿತ ಜೀವನಶೈಲಿಯಿಂದಾಗಿ ಸಾರ್ವಕಾಲಿಕ ಮಾದರಿಯಾಗುವಂತವರು.

ತಂದೆ ಏಣಗಿ ಬಾಳಪ್ಪನವರ ಜೊತೆಗೆ ಏಣಗಿ ನಟರಾಜ

ಏಣಗಿ ಬಾಳಪ್ಪರವರಂತಹ ಆದರ್ಶವ್ಯಕ್ತಿಯ ಮಗನಾದ ನಟರಾಜ ತಂದೆಯಿಂದ ಅಭಿನಯಕಲೆಯನ್ನು ಬಳುವಳಿಯಾಗಿ ಪಡೆದು ಹೆಸರುವಾಸಿಯಾದರು. ಅಭಿನಯದಲ್ಲಿ ಆಧುನಿಕ ನಟನಾಕಲೆಯನ್ನು ಬಳಸಿಕೊಂಡು ತಂದೆ ಬಾಳಪ್ಪನವರಿಗಿಂತಲೂ ನಟನೆಯಲ್ಲಿ ಒಂದು ಕೈ ಹೆಚ್ಚೇ ಎನ್ನುವಷ್ಟು ತಮ್ಮ ಕಲಾಕೌಶಲವನ್ನು ಮೆರೆದರು. ಆದರೆ ಎಂದೂ ತನ್ನ ತಂದೆಯವರ ಆದರ್ಶದ ಬದುಕನ್ನು ರೂಢಿಸಿಕೊಳ್ಳಲಿಲ್ಲ, ನಿಜ ಬದುಕಿನಲ್ಲಿ ತಂದೆಗೆ ತಕ್ಕ ಮಗನಾಗಲಿಲ್ಲ. ನೋವು ಬಾಳಪ್ಪನವರನ್ನು ಸದಾ ಕಾಡಿದ್ದಂತೂ ಸುಳ್ಳಲ್ಲ. ಮಗನ ಸಾವಿನ ಹೊರೆಯನ್ನು ಹೊರುವಂತಹ ದುರಂತ ಸ್ಥಿತಿ ಯಾವ ತಂದೆಗೂ ಬರಬಾರದು. ಮಗ ಇದ್ದಾಗಲೂ ಅವನ ಬಗ್ಗೆ ಮರುಗುತ್ತಿದ್ದ ಹಿರಿಯ ಜೀವ ಇನ್ನು ಮಗ ಇಲ್ಲವಾದಾಗಲೂ ಕೊರಗುತ್ತಿರುವುದಕ್ಕೆ ಹೇಗೆ ಸಮಾಧಾನ ಹೇಳಲು ಸಾಧ್ಯ?

ಕಲೆ ಮತ್ತು ಕುಡಿತ ಏಣಗಿ ನಟರಾಜರ ಉಸಿರಾಗಿದ್ದವು. ಕಲೆ ಅವರನ್ನು ಯಶಸ್ಸಿನ ಎತ್ತರೆತ್ತರಕ್ಕೆ ಏರಿಸಿದಂತೆಲ್ಲಾ ಕುಡಿತ ಎನ್ನುವುದು ಕೆಳಕ್ಕೆಳೆದು ಪ್ರಪಾತದತ್ತ ಸೆಳೆಯುತ್ತಿತ್ತು. ಇವೆರೆಡರ ಎಳೆತ ಸೆಳೆತಗಳಲ್ಲಿ ದಿನದಿಂದ ದಿನಕ್ಕೆ ನಟರಾಜ್ ತತ್ತರಿಸಿ ಹೋದರು. ಯಶಸ್ಸಿನ ಶಿಖರ ಏರಬೇಕಾದ ಪ್ರತಿಭಾವಂತ ನಟನನ್ನು ಕುಡಿತವೆನ್ನುವ ತೆವಲು ಸೋಲಿನ ಸುಳಿಗೆ ನೂಕಿತ್ತು. ತಂದೆ ಬಾಳಪ್ಪನವರು ಕಟ್ಟಿದ ನಾಟಕ ಕಂಪನಿಯನ್ನು ಸರಕಾರ ಕೊಟ್ಟ ಅನುದಾನದ ನೆರವಿನಿಂದ ನಡೆಸುತ್ತೇನೆಂದು ಹೊಸ ಹುರುಪಿನಿಂದ ಹೊರಟ ಏಣಗಿ ನಟರಾಜ ಅಲ್ಲಿಯೂ ನಷ್ಟ ಮಾಡಿಕೊಂಡು ನಾಟಕ ಕಂಪನಿಯನ್ನು ಪರ್ಮನೆಂಟ್ ಆಗಿ ಮುಚ್ಚಿಬಿಟ್ಟರು. ಹೂವಿನ ಹಡಗಲಿಯಲ್ಲಿ ಎಂಪಿ ಪ್ರಕಾಶರು ತುಂಬಾ ಮಹತ್ವಾಕಾಂಕ್ಷೆಯಿಂದ "ರಂಗಭಾರತಿ" ಎನ್ನುವ ರಂಗ ರೆಪರ್ಟರಿಯನ್ನು ಆರಂಭಿಸಿ ಏಣಗಿ ನಟರಾಜರನ್ನು ರೆಪರ್ಟರಿಯ ಇನ್ಚಾರ್ಜ ಮಾಡಿದರು. ರೆಪರ್ಟರಿಯಲ್ಲಿದ್ದ ಹನುಮಕ್ಕ ಹಾಗೂ ಇತರೆ ಕಲಾವಿದರು ಒಬ್ಬೊಬ್ಬರಾಗಿ ದೂರಾದರು. ಸರಿಯಾಗಿ ನಾಟಕಗಳು ಪ್ರದರ್ಶನಗೊಳ್ಳಲಿಲ್ಲ. ಒಂದೇ ವರ್ಷಕ್ಕೆ ನಟರಾಜರ ಕುಡಿತ ರೆಪರ್ಟರಿಯನ್ನೇ ನಿಲ್ಲಿಸುವಂತೆ ಮಾಡಿತು. ಬಿ.ಸುರೇಶರವರು ನಾಕುತಂತಿ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ನೀಡಿದರು, ಅದನ್ನೂ ಅರ್ಧಕ್ಕೆ ನಿಲ್ಲಿಸಿ ಬೇರೆ ಧಾರಾವಾಹಿಗೆ ನಟರಾಜ್ ಹೋದರು. ಕಿನ್ನುರಿ ಧಾರಾವಾಹಿಯ ಹೊಣೆ ಹೊತ್ತುಕೊಂಡರು. ಸರಿಯಾಗಿ ಶೂಟಿಂಗ ಮಾಡಲಾರದೇ ಗುಂಡಿನ ಗಮ್ಮತ್ತಿನಲ್ಲೇ ಮೈಮರೆತು ಕಿನ್ನುರಿಯನ್ನು ದಡಸೇರಿಸಲಿಲ್ಲ. ಇತ್ತೀಚೆಗೆ ಕುಡಿತದಿಂದುಂಟಾದ ಅನಾರೋಗ್ಯಕ್ಕೆ ತುತ್ತಾಗಿ ರಂಗಶಂಕರದಲ್ಲಿ ಆಯೋಜಿಸಲಾಗಿದ್ದ "ನಾ ತುಕಾರಾಂ ಅಲ್ಲಾ" ನಾಟಕದ ಪ್ರದರ್ಶನವೇ ರದ್ದಾಯಿತು. ಹೀಗೆ ಕುಡಿತದ ಅಮಲು ನಟರಾಜರ ಮಾನಸಿಕ ಸ್ಥಿಮಿತತೆಯನ್ನು ಹಾಳುಮಾಡಿ ದೈಹಿಕ ಅನಾರೋಗ್ಯಕ್ಕೆ ಕಾರಣವಾಯಿತು. ಅದರ ಜೊತೆ "ನಾ ಮಾಡಿದ್ದೇ ಸರಿ" ಎನ್ನುವ ಸರ್ವಾಧಿಕಾರದ ಮನೋಭಾವವೂ ಸೇರಿಕೊಂಡು ರಂಗಸ್ನೇಹಿತರು ದೂರವಾದರು. ಬೇರೆ ಕಲಾವಿದರು ಹತ್ತಿರ ಸುಳಿಯದಾದರು. ಧಾರಾವಾಹಿಗಳ ನಿರ್ದೇಶಕರುಗಳು ರಿಸ್ಕ ತೆಗೆದುಕೊಳ್ಳುವುದು ಬೇಡಾ ಎಂದುಕೊಂಡು ಅವಕಾಶ ಕೊಡುವುದನ್ನು ನಿಲ್ಲಿಸಿದರು. ಬದುಕು ದುಸ್ತರವಾಗತೊಡಗಿತು. ಅವಕಾಶಗಳು ಸೊರಗತೊಡಗಿದವು. ಕುಡಿತ ದಿನದ 24 ಗಂಟೆಗಳನ್ನು ಬೇಡುತ್ತಿತ್ತು. ತಮ್ಮ ಗೋರಿಯನ್ನು ನಟರಾಜ ತಾವೇ ಅಗೆದುಕೊಂಡಾಗಿತ್ತು.

ಇಂತಹ ದುಸ್ತರ ಪರಿಸ್ಥಿತಿಯಲ್ಲಿ ಸರಕಾರ ಏಣಗಿ ನಟರಾಜರನ್ನು ಧಾರವಾಡ ರಂಗಾಯಣದ ನಿರ್ದೇಶಕರನ್ನಾಗಿ ನಿಯಮಿಸಿತು. ಹಿಂದೆ ತಮ್ಮ ನಟನೆಗೆ ಅವಕಾಶವಿಲ್ಲ ಎಂದು ಮೈಸೂರು ರಂಗಾಯಣದಲ್ಲಿನ ರಂಗಶಿಕ್ಷಕ ವೃತ್ತಿಯನ್ನು ನಿರಾಕರಿಸಿ ಏಣಗಿ ನಟರಾಜರು ಬಂದಿದ್ದರು. ಅದರೆ ಈಗ ಮತ್ತೆ ಅದೇ ರೀತಿ ನಟನೆಗೆ ಅವಕಾಶವೇ ಇಲ್ಲದಂತಹ ಧಾರವಾಡ ರಂಗಾಯಣದ ನಿರ್ದೇಶಕಗಿರಿಯನ್ನು ಒಪ್ಪಿಕೊಳ್ಳುವ ಅನಿವಾರ್ಯತೆಗೆ ಒಗ್ಗಿಕೊಂಡರುಇನ್ನಾದರೂ ನಟರಾಜರ ಬದುಕು ಮತ್ತೆ ಹಳಿಗೆ ಬರುತ್ತದೆ ಎಂದು ರಂಗಕರ್ಮಿಗಳು ಆಸಿಸಿದರು. ಆದರೆ ಕಾಲ ಮಿಂಚಿಹೋಗಿತ್ತು. ಅಷ್ಟರಲ್ಲಾಗಲೇ ಕುಡಿತವೇ ನಟರಾಜರನ್ನು ನಿಯಂತ್ರಿಸತೊಡಗಿತು. ನಟನೆಗೆ ಹಾತೊರೆಯುತ್ತಿದ್ದ ನಟರಾಜರಿಗೆ ರಂಗಾಯಣದ  ನಿರ್ದೇಶಕರನ್ನಾಗಿಸಿದ್ದುಸರಿಹೋಗಲಿಲ್ಲ. ಆದರೂ ಅದೇನೋ ಹರಸಾಹಸ ಪಟ್ಟು ಒಂದಿಷ್ಟು ಕೆಲಸವನ್ನು ಮಾಡಲು ಪ್ರಯತ್ನಿಸಿದರಾದರೂ ಧಾರವಾಡದ ರಂಗಕರ್ಮಿಗಳು ನಾಗರಾಜರ ಇಚ್ಚೆಗನುಗುಣವಾಗಿ ಸಹಕರಿಸಲಿಲ್ಲ, ಅವರ ಅನಾರೋಗ್ಯವಂತೂ ದಿನದಿಂದ ದಿನಕ್ಕೆ ಹದಗೆಡತೊಡಗಿತು. ಕೊನೆಗೂ ಜೂನ್ 9ಕ್ಕೆ ದೇಹ ಸಂಪೂರ್ಣವಾಗಿ ತಣ್ಣಗಾಯಿತು. ದೇಹದೊಳಗನುದಿನವಿದ್ದು ಒಂದು ಮಾತನ್ನೂ  ಹೇಳದೆ ಪ್ರಾಣವೆಂಬ ಹಂಸ ಹಾರಿಹೋಯಿತು. ಏಣಗಿ ನಟರಾಜರು ತಮ್ಮ ಬದುಕಿನ ನಾಟಕದ ರಂಗಪರದೆಯನ್ನು ತಾವೇ ಎಳೆದುಕೊಂಡು ನೇಪತ್ಯಕ್ಕೆ ಸೇರಿಹೋದರು. ಅವರ ಸಾವಿನ ಸುದ್ದಿ ತಿಳಿದ ರಂಗಕರ್ಮಿಗಳ ಕಣ್ಣುಗಳು ಹನಿಗಟ್ಟಿದವು. ಸಾಯಬಾರದ ವಯಸ್ಸಲ್ಲಿ ಸಾವಿನೂರಿಗೆ ಹೋದವನ ಕಂಡು ಮಮ್ಮಲ ಮರುಗಿದರು.

ಸಾವಿನೂರಿಗೆ ಹೋದವನು ಮತ್ತೆ ಬಾರಲಾರನು. ಆದರೆ ಹೋಗುವ ಮುಂಚೆ ಹೇಗಿರಬೇಕು ಹಾಗೂ ಹೇಗಿರಬಾರದು ಎನ್ನುವುದರ ಕುರಿತು ನಟರಾಜ ಪಾಠ ಕಲಿಸಿಹೋದರು. "ಇದ್ದರೆ ಏಣಗಿ ನಟರಾಜರ ಹಾಗೆ ರಂಗದಂಗಳದಲ್ಲಿ ಪ್ರೇಕ್ಷಕರು ದಂಗುಬಡಿದು ನೋಡುವ ಹಾಗೆ ನಟಿಸಬೇಕು. ರೀತಿಯ ಕಲೆಯನ್ನು ರೂಢಿಸಿಕೊಳ್ಳಬೇಕು", ಎನ್ನುವಂತಹ ಸಾಧನೆ ಮಾಡಿ ಯುವಕಲಾವಿದರಿಗೆ ಮಾದರಿಯಾದವರು ಏಣಗಿ ನಟರಾಜ್. ಹಾಗೆಯೇ "ದುರಭ್ಯಾಸಕ್ಕೆ ದಾಸರಾದರೆ ಎಂತಹ ಪ್ರತಿಭಾವಂತರೂ ಸಹ ಕೊನೆಗೆ ಪ್ರಪಾತಕ್ಕೆ ಬೀಳಬೇಕಾಗುತ್ತದೆ, ಬಂಗಾರದ ಬದುಕನ್ನು ದುಸ್ತರವಾಗಿಸಿಕೊಳ್ಳಬೇಕಾಗುತ್ತದೆ" ಎನ್ನುವುದಕ್ಕೂ ಸಹ ಏಣಗಿ ನಟರಾಜರೇ ಮಾದರಿಯಾಗಿದ್ದೊಂದು ವಿಪರ್ಯಾಸ. ಆಧುನಿಕ ಕನ್ನಡ ರಂಗಭೂಮಿಯಲ್ಲಿ ನಿರ್ದೇಶಕರೇ ನಿರ್ಣಾಯಕರಾಗಿ ನಟಪರಂಪರೆಯೇ ನಶಿಸಿ ಹೋದ ಪ್ರಸ್ತುತ ಸನ್ನಿವೇಶದಲ್ಲಿ ಏಣಗಿ ನಟರಾಜರಂತಹ ನಟಸಾಮ್ರಾಟರು ನೇಪತ್ಯಕ್ಕೆ ಸೇರಿದ್ದು ನಿಜಕ್ಕೂ ರಂಗಭೂಮಿಗೆ ಆದ ನಷ್ಟವೇ ಆಗಿದೆ. ನಟರಾಜರ ಸ್ಥಾನವನ್ನು ತುಂಬುವಂತಹ ಇನ್ನೊಬ್ಬ ನಟ ಇನ್ನೂ ಕನ್ನಡ ರಂಗಭೂಮಿಯಲ್ಲಿ ಹುಟ್ಟಿಲ್ಲ. ಮರೆತೆನೆಂದರೂ  ಮರೆಯಲಾರದ ದೀಮಂತ ಅಭಿನಯ ಪ್ರತಿಭೆ ಏಣಗಿ ನಟರಾಜರಿಗೆ ರಂಗ ನಮನ.

                                       -ಶಶಿಕಾಂತ ಯಡಹಳ್ಳಿ




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ