ಬುಧವಾರ, ಜೂನ್ 25, 2014

ರಂಗಭೂಮಿ ಬಸವಣ್ಣ “ಏಣಗಿ ಬಾಳಪ್ಪ”ನವರಿಗೆ ನೂರರ ಸಂಭ್ರಮ :





ಅದು ವೃತ್ತಿ ಕಂಪನಿ ನಾಟಕಗಳು ವಿಜ್ರಂಬಿಸುತ್ತಿದ್ದ ಕಾಲ. ಬಣ್ಣದ ಬದುಕಿನ ಚಿನ್ನದ ದಿನಗಳ ಕಾಲ. ಆಗ ಜಗಜ್ಯೋತಿ ಬಸವೇಶ್ವರ ನಾಟಕ ಹುಬ್ಬಳ್ಳಿಯಲ್ಲಿ ಭರ್ಜರಿ ಯಶಸ್ವಿಯಾಗಿ ಹೌಸಪುಲ್ ಪ್ರದರ್ಶನವಾಗುತ್ತಿತ್ತು. ನಾಟಕದಲ್ಲಿ ರಾತ್ರಿಯೆಲ್ಲಾ ನಾಟಕಮಾಡಿ ಕೆಲವು ನಟರು ನಾಟಕದ ಟೆಂಟಿನ ಹತ್ತಿರವಿದ್ದ ಕಾಕಾ ಅಂಗಡಿಯಲ್ಲಿ ಟೀ ಕುಡಿಯುತ್ತಿದ್ದರು. ಅವರನ್ನು ನೋಡಲು ಹಲವರು ಕುತೂಹಲದಿಂದ ಸೇರಿದ್ದರು. ಹಾಗೆ ಸೇರಿದ ಗುಂಪಿನಲ್ಲಿದ್ದವನೊಬ್ಬ ಲೇ ಅಲ್ಲಿ ನೋಡ್ರಲೇ ಬಸವಣ್ಣ ಚಾ ಕುಡಿತಿದ್ದಾನಲ್ಲಲೇ, ಯಾವೊಂದು ಚಟ ಮಾಡಬ್ಯಾಡ್ರಪ್ಪೋ ಅನ್ನೋ ಬಸವಣ್ಣ ತಾನಾ ಚಾ ಚಟ ಇಟ್ಕೊಂಡಾನಪ್ಪೋ... ಎಂದು ಬಿಟ್ಟ. ಇದನ್ನು ಕೇಳಿದ ಬಸವಣ್ಣನ ಪಾತ್ರದಾರಿಯ ಮನಸ್ಸಲ್ಲಿ ಅದೆಂತದೋ ಕಸಿವಿಸಿ. ಮನಸ್ಸಲ್ಲಿ ಅಂದೇ ನಿರ್ಧರಿಸಿ ಶಪಥ ಮಾಡಿದರು ಇನ್ನು ಮುಂದ ಚಾ ಕುಡಿಯೋದಿಲ್ಲ, ಯಾವುದ ರೀತಿ ಚಟ ಮಾಡುದಿಲ್ಲ... ಅಂತ. ಅಂದಿನಿಂದ ಇಂದಿನವರೆಗೂ ಆಧುನಿಕ ಬಸವಣ್ಣ ಎಂದೂ ಯಾವ ವ್ಯಸನಗಳಿಗೆ ಬಲಿಯಾಗಲಿಲ್ಲ. ವ್ಯಯಕ್ತಿಕವಾಗಿ ಬಸವಣ್ಣನವರಂತೆಯೇ ಬದುಕಿ ಬಾಳಿದರು. ರಂಗಭೂಮಿಯ ಬಸವಣ್ಣನೇ ಆಗಿಹೋದವರು ಈಗ ನೂರು ವರ್ಷಗಳ ಸಾರ್ಥಕ ಬದುಕನ್ನು ಬದುಕುತ್ತಿದ್ದಾರೆ. ಅವರು ಏಣಗಿ ಬಾಳಪ್ಪನವರು.

ಹಲವಾರು ವ್ಯಸನಗಳಿಗೆ ಒಳಗಾಗಿ ತಮ್ಮ ಬದುಕನ್ನೇ ದುರಂತಗೊಳಿಸಿಕೊಂಡ ಅನೇಕರು ಕಲಾಮಾಧ್ಯಮದಲ್ಲಿದ್ದಾರೆ. ಅದರಲ್ಲಿ ಅನೇಕ ಅಪರೂಪದ ಪ್ರತಿಭಾವಂತರೂ ಸೇರಿದ್ದಾರೆ. ಕುಡಿತ ಎನ್ನುವುದು ರಂಗಭೂಮಿಯ ಹಲವಾರು ಕಲಾರತ್ನಗಳನ್ನು ಆಪೋಷನ ತೆಗೆದುಕೊಂಡಿದೆ. ಆದರೆ ಕಲೆಯನ್ನು ಆರಾಧಿಸುತ್ತಲೇ ನೈತಿಕ ಪ್ರಜ್ಞೆ ಹೊಂದಿ, ಜೀವನ ಪೂರ್ತಿ ವ್ಯಸನಮುಕ್ತರಾಗಿ ಬದುಕಿ, ನೆಮ್ಮದಿಯಾಗಿ ಪರಿಪೂರ್ಣ ಬದುಕನ್ನು ಕಂಡ ಏಣಗಿ ಬಾಳಪ್ಪನವರಿಗೆ ಈಗ ಶತಕದ ಸಂಭ್ರಮ.

ಚಲನಚಿತ್ರ ಮಾಧ್ಯಮದಲ್ಲಿ ಡಾ.ರಾಜಕುಮಾರರು ಹೇಗೆ ಆದರಣಿಯರೋ ಅವರಷ್ಟೇ ಗೌರವಾನ್ವಿತರಾಗಿ ರಂಗಭೂಮಿಯಲ್ಲಿ  ಬದುಕಿ ಸಾಧನೆಯ ಉತ್ತುಂಗಕ್ಕೇರಿದವರು ಏಣಗಿ ಬಾಳಪ್ಪನವರು. ರಾಜಕುಮಾರರ ಹಾಗೆಯೇ ನಿಷ್ಕೃಷ್ಟ ಪರಿಸ್ಥಿತಿಯಿಂದ ಉತ್ಕೃಷ್ಟ ಸ್ಥಿತಿಗೆ ತಮ್ಮ ಪ್ರತಿಭೆಯಿಂದ ಪಯಣ ಮಾಡಿದವರು ಬಾಳಪ್ಪನವರು. ಇಬ್ಬರೂ ಕಲಾವಿದರ ಮಾಧ್ಯಮಗಳು ಬೇರೆ ಬೇರೆ ಯಾಗಿರಬಹುದು ಆದರೆ ಎರಡೂ ಮಹಾನ್ ಪ್ರತಿಭೆಗಳ ಬೇರಿರುವುದು ರಂಗಭೂಮಿಯಲ್ಲಿ. ಇಬ್ಬರೂ ಸಮಾಜಕ್ಕೆ ಆದರ್ಶವಾಗಿರುವುದು ಅವರ ಶಿಸ್ತುಬದ್ದ ಬದುಕು ಹಾಗೂ ನೈತಿಕ ಪ್ರಜ್ಞೆಗಳಿಂದಾಗಿ. ಎಲ್ಲಕ್ಕಿಂತಲೂ ಹೆಚ್ಚಾಗಿ ಜನಪ್ರೀಯತೆಯ ಉತ್ತುಂಗಕ್ಕೇರಿದಾಗಲೂ ಸಹ ಇಬ್ಬರೂ ರೂಢಿಸಿಕೊಂಡ ವಿನಯವಂತಿಕೆ ನಿಜಕ್ಕೂ ಮಾದರಿಯಾಗುವಂತಹುದು. ರಾಜಕುಮಾರರು ನಾಯಕರಾಗಿ ಗಾಯಕರಾಗಿ ಸಿನೆಮಾ ಕ್ಷೇತ್ರದಲ್ಲಿ ಹೆಸರಾದರು. ಆದರೆ ಬಾಳಪ್ಪನವರು ನಾಯಕ ಗಾಯಕ ಕಾಯಕದ ಜೊತೆಗೆ ನಾಟಕಗಳ ನಿರ್ದೇಶಕರಾಗಿ, ನಾಟಕ ಕಂಪನಿಯ ಮಾಲೀಕರಾಗಿ, ರಂಗಸಂಘಟಕರಾಗಿ ಕನ್ನಡ ವೃತ್ತಿ ಕಂಪನಿ ರಂಗಪ್ರಕಾರಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದವರು. ಕರ್ನಾಟಕದ ಆರಾಧ್ಯ ದೈವವೆನಿಸಿಕೊಂಡಿರುವ ರಾಜಕುಮಾರರಂತಹ ರಾಜಕುಮಾರರೇ ಏಣಗಿ ಬಾಳಪ್ಪನವರಿಗೆ ಗುಬ್ಬಿವೀರಣ್ಣ ಪ್ರಶಸ್ತಿ ಬಂದಾಗ ಕರೆದು ಸನ್ಮಾನಿಸಿ ಕಾಲು ಮುಟ್ಟಿ ನಮಸ್ಕರಿಸಿ ಆಶೀರ್ವಾದ ಕೇಳಿದ್ದರೆಂದಮೇಲೆ ಬಾಳಪ್ಪನವರ ವ್ಯಕ್ತಿತ್ವ ಎಂತಹುದು ಎನ್ನುವುದು ಅರಿವಿಗೆ ಬರುತ್ತದೆ. ರಾಜಕುಮಾರರ ಬ್ಯಾನರಿನ ಜನುಮದ ಜೋಡಿ ಸಿನೆಮಾದಲ್ಲಿ ತಾವು ಮಾಡಬೇಕಾಗಿದ್ದ ಸ್ವಾಮಿಯ ಪಾತ್ರವನ್ನು ಬಾಳಪ್ಪನವರೇಮಾಡಬೇಕೆಂದು ಆಗ್ರಹಿಸಿದ ರಾಜಕುಮಾರರು ಬಾಳಪ್ಪನವರಿಗೆ ಸಿನೆಮಾದಲ್ಲಿ ನಟಿಸುವ ಅವಕಾಶವನ್ನು ಮಾಡಿಕೊಟ್ಟರುಇಂತಹ ಅಪರೂಪದ ರಂಗಸಾಧಕನಿಗೆ 2014 ಕ್ಕೆ ನೂರುವರ್ಷ ತುಂಬಿತು. ಏಣಗಿ ಬಾಳಪ್ಪನವರ ಶತಕ ಸಂಭ್ರಮದ ಸಂದರ್ಭದಲ್ಲಿ ಅವರ ಬದುಕು ಸಾಧನೆ ಕುರಿತು ಒಂದು ಪಕ್ಷಿನೋಟ ಲೇಖನದಲ್ಲಿದೆ.

ಬಾಳಪ್ಪನವರು ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಏಣಗಿ ಗ್ರಾಮದ ಸಾಧಾರಣ ಕುಟುಂಬದಲ್ಲಿ. ಬಾಳಪ್ಪನವರು ಮೂರು ವರ್ಷದವರಿದ್ದಾಗಲೇ ತಂದೆ ಕರಿಬಸಪ್ಪ ತೀರಿಕೊಂಡ ನಂತರ ಇಡೀ ಕುಟುಂಬ ಸಂಕಷ್ಟಗಳಿಗೆ ತುತ್ತಾಯಿತು. ಪಿತ್ರಾರ್ಜಿತವಾಗಿ ಬಂದ ಹೊಲ ಸಾಲಕ್ಕೆ ಒತ್ತೆ ಹಾಕಲಾಯಿತು. ಬಡತನ ಮನೆಯಲ್ಲಿ ತಾಂಡವವಾಡತೊಡಗಿ ಒಂದು ಹೊತ್ತಿನ ತುತ್ತಿಗೂ ತತ್ವಾರವಾಯಿತು. ಬಾಳಪ್ಪನವರು ಹನ್ನೆರಡು ವರ್ಷಕ್ಕೆ ಕಾಲಿಟ್ಟಾಗ ಮನೆಗೆ ಆಧಾರವಾಗಿದ್ದ ಅವರ ಅಣ್ಣ ಬಸಪ್ಪ ಕಾಲರಾದಿಂದ ತೀರಿಕೊಂಡ ನಂತರ ಅಕ್ಕ ವೀರವ್ವ ಇಬ್ಬರೂ ಕಾಲವಶರಾದರು. ಒಂದಿಷ್ಟು ಸ್ಥಿತಿವಂತರ ಮನೆತನದಿಂದ ಬಂದಿದ್ದ ಬಾಳಪ್ಪನವರ ತಾಯಿ ಬಾಳಮ್ಮ ಪರಿಸ್ಥಿತಿಗೆ ಹೊಂದಿಕೊಂಡು ಅನಿವಾರ್ಯವಾಗಿ ಬೇರೆಯವರ ಹೊಲಕ್ಕೆ ಕೂಲಿಗೆ ಹೋಗಬೇಕಾಯಿತು. ನಾಲ್ಕನೇ ತರಗತಿ ಓದುತ್ತಿದ್ದ ಬಾಳಪ್ಪ ಶಾಲೆಯನ್ನು ಬಿಟ್ಟು ತಾಯಿಯ ಕಷ್ಟಕ್ಕೆ ಜೊತೆಯಾಗಲು ಕೂಲಿ ಮಾಡತೊಡಗಿದರು. ತಾಯಿ ಉಳಿದ ಒಬ್ಬನೇ ಮಗನಿಗೆ ಊಟ ಮಾಡಿಸಿ ತಾನು ಉಪವಾಸ ಮಲಗುತ್ತಿದ್ದಳು. ಒಂದು ರೀತಿಯಲ್ಲಿ ಶತಮಾನದ ನಟ ಚಾರ್ಲಿಚಾಪ್ಲಿನ್ರವರ ಆರಂಭದ ನಿಷ್ಕೃಷ್ಟ ಬದುಕನ್ನು ಬಾಳಪ್ಪನವರಿಗೆ ಸಮೀಕರಿಸಬಹುದಾಗಿದೆ. ಚಾಪ್ಲಿನ್ ರೀತಿಯಲ್ಲೇ ಸಂಕಷ್ಟಗಳನ್ನು ಹಾಸಿ ಹೊದ್ದುಕೊಂಡೇ ಬೆಳೆದ ಬಾಳಪ್ಪನವರ ಸಹಾಯಕ್ಕೆ ಬಂದಿದ್ದು ಅವರ ಸುಮಧುರ ಕಂಠ.



ಶಾಲೆಯಲ್ಲಿದ್ದಾಗ ಶಿಕ್ಷಕರು ಬಾಳಪ್ಪನವರಿಂದ ಹಾಡಿಸಿ ಖುಷಿಪಡುತ್ತಿದ್ದರು. ಶಾಲೆಗೆ ತಿಲಾಂಜಲಿಯನ್ನಿತ್ತನಂತರ ಏಣಗಿ ಊರಿನ ಭಜನಾ ಮಂಡಳಿಯಲ್ಲಿ ಬಾಳಪ್ಪನವರ ಹಾಡನ್ನು ಕೇಳಿ ಊರಜನ ಆನಂದಿಸುತ್ತಿದ್ದರು. ಊರಿನ ಬಯಲಾಟಗಳಲ್ಲಿ ಬಾಲನಟನ ಪಾತ್ರ ಮಾಡುತ್ತಿದ್ದ ಬಾಳಪ್ಪನವರ ಅಭಿನಯ ಕಂಡು ಊರವರು ಅಭಿನಂದಿಸುತ್ತಿದ್ದರುಮುಂದೆ ಬಾಳಪ್ಪನವರ ನಟನೆ ಅದೆಷ್ಟು ಪ್ರಸಿದ್ದಿಯಾಯಿತೆಂದರೆ ವೃತ್ತಿ ಕಂಪನಿ ನಾಟಕದ ದಿಗ್ಗಜ ಗರುಡ ಸದಾಶಿವರಾಯರು ಬರೆದ ಪಾದುಕಾ ಪಟ್ಟಾಭಿಷೇಕ ನಾಟಕದ ಭರತನ ಪಾತ್ರಕ್ಕೆ ಬಾಳಪ್ಪನವರನ್ನು ಆಯ್ಕೆಯಾದರು. ಏಣಿಗಿ ಊರಿನವರಿಗಂತೂ ಬಾಳಪ್ಪ ನಾಟಕದಲ್ಲಿ ಅಮೋಘವಾಗಿ ಅಭಿನಯಿಸಿದ್ದು ಹೆಮ್ಮೆಯ ಸಂಗತಿಯಾಗಿ ಪರಿಗಣಿಸಿ ಸಂಭ್ರಮಿಸಿದರು. ತಮ್ಮ ಹತ್ತನೇ ವಯಸ್ಸಿನಲ್ಲಿ ನಾಟಕಕ್ಕೆ ಬಣ್ಣ ಹಚ್ಚಿದ ಬಾಳಪ್ಪ ಹದಿನಾಲ್ಕನೇ ವಯಸ್ಸಿಗೆ ಮಹಾನಂದ ನಾಟಕವನ್ನು ಏಣಗಿ ಗ್ರಾಮದ ಕಲಾವಿದರಿಗೆ ನಿರ್ದೇಶಿಸಿದರು. ೧೯೨೮ರಲ್ಲಿ ಬಾಳಪ್ಪನವರ ರಂಗಬದುಕಿಗೆ ಪ್ರಮುಖ ತಿರುವು ದೊರೆಯಿತು. ಧಾರವಾಡದ ಶಿವಲಿಂಗಸ್ವಾಮಿಗಳು ತಮ್ಮ ಲಿಂಗರಾಜ ನಾಟ್ಯ ಸಂಘಕ್ಕೆ ಬಾಳಪ್ಪನವರನ್ನು ಸೇರಿಸಿಕೊಂಡರು.

ಅಂದಿನಿಂದ ಬಾಳಪ್ಪನವರು ಏಣಗಿ ಬಾಳಪ್ಪನವರಾದರು. ನಾಟಕವೇ ಸರ್ವಸ್ವವಾಯಿತು. ರಂಗದಂಗಳವೇ ಬದುಕಾಯಿತು. ಅಭಿನಯವೇ ಕಾಯಕವಾಯಿತು. ಚಿಕ್ಕೋಡಿ ಶಿವಲಿಂಗ ಸ್ವಾಮಿಗಳ ಕಿತ್ತೂರು ರಾಣಿ ರುದ್ರಮ್ಮ ನಾಟಕದಲ್ಲಿ ರುದ್ರಮ್ಮಳ ಪಾತ್ರ, ನಲವಡಿ ಶ್ರೀಕಂಠ ಶಾಸ್ತ್ರಿಗಳ ಹೇಮರೆಡ್ಡಿ ಮಲ್ಲಮ್ಮ ನಾಟಕದ ಮಲ್ಲಮ್ಮನ ಪಾತ್ರ, ಜಿ.ಜಿ.ಹೆಗಡೆಯವರ ಶಾಲಾ ಮಾಸ್ತರ್ ನಾಟಕದಲ್ಲಿ ಮಾಸ್ತರನ ಪಾತ್ರ, ಎನ್.ರಾಯಚೂರು ಅವರ ಗೋರಾ ಕುಂಬಾರ ನಾಟಕದಲ್ಲಿ ಕುಂಬಾರನ ಪಾತ್ರ... ಹೀಗೆ ಹಲವಾರು ನಾಟಕಗಳಲ್ಲಿ ಪ್ರಮುಖ ಸ್ತ್ರೀ ಹಾಗೂ ಪುರುಷ ಪಾತ್ರಗಳ ಅಭಿನಯದಿಂದಾಗಿ ಏಣಗಿ ಬಾಳಪ್ಪನವರು ಹೆಸರಾದರು. ಅವರನ್ನು ಜನಪ್ರೀಯರನ್ನಾಗಿಸಿ ಅಪಾರ ಕೀರ್ತಿಯನ್ನು ತಂದುಕೊಟ್ಟಿದ್ದು ಬಸವೇಶ್ವರ ನಾಟಕದ ಬಸವಣ್ಣನ ಪಾತ್ರ. ಪಾತ್ರದ ನಂತರ ಬಾಳಪ್ಪನವರ ವೃತ್ತಿ ಹಾಗೂ ವ್ಯಯಕ್ತಿಕ ಬದುಕಿನ ಸ್ವರೂಪವೇ ಬದಲಾಯಿತು. ದೈಹಿಕ ಸ್ಪುರುದ್ರೂಪ, ಅನನ್ಯ ಅಭಿನಯ, ಮೋಹಕ ದ್ವನಿ ಮತ್ತು ಶಾಸ್ತ್ರೀಯ ಸಂಗೀತದ ಅಭ್ಯಾಸಗಳು ಬಾಳಪ್ಪನವರಿಗೆ ವೃತ್ತಿರಂಗಭೂಮಿಯಲ್ಲಿ ಸ್ಟಾರ್ ಪಟ್ಟವನ್ನು ಗಳಿಸಿಕೊಟ್ಟವು. ಹೀಗೆ ಸಿಕ್ಕ ಪಾತ್ರಗಳನ್ನು ಅಭಿನಯಿಸುತ್ತಾ, ಜನಪ್ರೀಯತೆಯನ್ನು ಸವಿಯುತ್ತಾ ಹೋಗಿದ್ದರೆ ಬಾಳಪ್ಪನವರು ಒಂದಿಷ್ಟು ಸುಖವಾಗಿರುತ್ತಿದ್ದರು. ಆದರೆ ರಂಗನಿಷ್ಟೆ ಅವರನ್ನು ಇನ್ನೂ ಕಷ್ಟಕ್ಕೆ ದೂಡಿತ್ತು. ಸೋದರಮಾವನ ಮಗಳು ಸಾವಿತ್ರಿ ಜೊತೆ ಮದುವೆಯೂ ಆಯಿತು. ಬ್ರಿಟೀಷ ಸರಕಾರ ಕಂಪನಿ ನಾಟಕಗಳ ಮೇಲೆ ನಿಷೇಧವನ್ನೂ ಹೇರಿತು. ಅವರ ಗುರುಗಳಾದ ಶಿವಲಿಂಗಸ್ವಾಮಿಗಳ ನಾಟಕ ಕಂಪನಿ ಮುಚ್ಚಿಹೋಗಿತ್ತು. ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಕಿತ್ತೂರಿನ ರಂಗ ಪೋಷಕರ ಒತ್ತಾಯದ ಮೇರೆಗೆ ವೃತ್ತಿ ಕಂಪನಿ ನಾಟಕ ತಂಡವೊಂದನ್ನು ಕಟ್ಟಬೇಕೆಂದು ಬಾಳಪ್ಪನವರು ನಿರ್ಧರಿಸಿಯಾಗಿತ್ತು. ಬಾಳಪ್ಪನವರಲ್ಲಿದ್ದ ಕಲಾವಿದ ತನ್ನ ಆಯಾಮಗಳನ್ನು ವಿಸ್ತರಿಸಿಕೊಂಡು ರಂಗಸಂಘಟನೆಯತ್ತ ತುಡಿಯತೊಡಗಿದ. ಆಗ ಕೆಲವರು ಸುಮ್ಮನಿರದೇ ಇರುವೆ ಬಿಟ್ಟುಕೊಳ್ಳುವುದು ಎಂದರೆ ಇದೇ ಎಂದು ಲೇವಡಿ ಮಾಡತೊಡಗಿದರು.

ಆದರೆ... ಮುಂದೆ ಇಟ್ಟ ಹೆಜ್ಜೆ ಹಿಂದೆ ಇಡದ ಬಾಳಪ್ಪನವರು ನಾಟಕ ಕಂಪನಿಗೆ ಚಾಲನೆ ಇತ್ತರು. ಬದುಕಿನ ಇನ್ನೊಂದು ಮಜಲಿನ ರಿಸ್ಕ ತೆಗೆದುಕೊಳ್ಳಲು ತಯಾರಾದರು. ಕಿತ್ತೂರಿನ ಜನ ಬಾಳಪ್ಪನವರಿಗೆ ನಾಟಕ ಕಂಪನಿ ಆರಂಭಿಸಲು ಪ್ರೇರೇಪಿಸಿದರು. ದೈರ್ಯಮಾಡಿ ಹುಚ್ಚಪ್ಪ ಸೂಡಿಯವರೊಂದಿಗೆ ಪಾಲುದಾರರಾಗಿ 1932ರಲ್ಲಿ ಶ್ರೀ ಗುರುಸೇವಾ ಸಂಗೀತ ನಾಟ್ಯ ಮಂಡಳಿಯನ್ನು ಬಾಳಪ್ಪ ಸ್ಥಾಪಿಸಿಯೇ ಬಿಟ್ಟರು. ಬಾಳಪ್ಪನವರಿಗಿನ್ನೂ ಹದಿನೆಂಟೇ ವರ್ಷ. ನಾಟಕ ಕಂಪನಿ ಬಿ., ಕಿತ್ತೂರು ರುದ್ರಮ್ಮ, ಅಸ್ಪೃಶ್ಯತಾ ನಿವಾರಣೆ ನಾಟಕಗಳ ಪ್ರದರ್ಶನಗಳಾದವರು. ತದನಂತರ ಹೇಮರೆಡ್ಡಿ ಮಲ್ಲಮ್ಮ ನಾಟಕ ತುಂಬಾ ಜನಪ್ರೀಯವಾಯಿತು. ಮುಂದೆ ನಾಟಕ ಕಂಪನಿಯ ಪಾಲುದಾರ ಹುಚ್ಚಪ್ಪನವರ ಹುಚ್ಚಾಟದಿಂದಾಗಿ ಬೇಸರಗೊಂಡ ಬಾಳಪ್ಪನವರು ತಾವೇ ಕಟ್ಟಿದ ನಾಟಕ ಕಂಪನಿ 1935ರಲ್ಲಿ ಬಿಟ್ಟು ಹೊರಬರಬೇಕಾಯಿತು. ಆದರೆ ಬಾಳಪ್ಪನವರು ಸುಮ್ಮನೇ ಕೂಡದೇ ಒಂದೇ ವರ್ಷದಲ್ಲಿ ಕಿತ್ತೂರು ಸಂಗೀತ ಮಂಡಳಿ ಎನ್ನುವ ನಾಟಕ ಕಂಪನಿಯನ್ನು ಕಟ್ಟಿಯೇ ಬಿಟ್ಟರು. ಕಿತ್ತೂರು ಚೆನ್ನಮ್ಮ, ಕಿತ್ತೂರು ರುದ್ರಮ್ಮ, ರಾಷ್ಟ್ರದ್ವಜ, ಸಿರಿಪ್ರಭಾವ ನಾಟಕಗಳನ್ನು ನಾಟಕ ಕಂಪನಿ ಪ್ರದರ್ಶಿಸತೊಡಗಿತ್ತು. ಆದರೆ ಆರ್ಥಿಕ ಮುಗ್ಗಟ್ಟಿನಿಂದಾಗಿ ಕಂಪನಿಯೂ ಕಣ್ಮುಚ್ಚಿತು. ಮತ್ತೆ ಆಹ್ವಾನ ಬಂದ ನಾಟಕ ಮಂಡಳಿಗೆ ಅತಿಥಿ ನಟರಾಗಿ ಹೋಗಿ ಬಾಳಪ್ಪನವರು ಅಭಿನಯಿಸಿತೊಡಗಿದರು.

ಆದರೆ ಸ್ವಂತ ನಾಟಕ ಕಂಪನಿ ಕಟ್ಟುವ ಆಸೆಯನ್ನು ಅವರೆಂದೂ ಬಿಟ್ಟುಕೊಡಲೇ ಇಲ್ಲ. ಎರಡು ಸೋಲುಗಳ ನಂತರ ಮತ್ತೆ 1940ರಲ್ಲಿ ಇನ್ನೂ ಮೂರು ಜನರ ಪಾಲುದಾರಿಕೆಯಲ್ಲಿ ವೈಭವಶಾಲಿ ಹೆಸರಲ್ಲಿ ಹೊಸ ನಾಟಕ ಕಂಪನಿಗೆ ಬಾಳಪ್ಪನವರು ಚಾಲನೆಯಿತ್ತರು. ಮುಂದಿನ ಮೂರೇ ತಿಂಗಳಲ್ಲಿ ಭಿನ್ನಾಭಿಪ್ರಾಯದಿಂದಾಗಿ ಇಬ್ಬರು ಪಾಲುದಾರರು ಹೊರಟುಹೋದರು. ಹಾಗೂ ಹೀಗೂ ಇನ್ನೊಬ್ಬ ಪಾಲುದಾರನ ಜೊತೆಗೆ ಆರು ವರ್ಷಗಳ ಕಾಲ ನಾಟಕ ಕಂಪನಿ ಮುಂದುವರೆಯಿತು. ಕೊನೆಗೆ ಪಾಲುದಾರ ಇನಾಮ್ದಾರನ ದುರಹಂಕಾರದಿಂದಾಗಿ ವೈಭವಶಾಲಿ ಇಬ್ಬಾಗವಾಯಿತು. ತಮ್ಮ ಪಾಲಿಗೆ ಬಂದ ಪರಿಕರಗಳನ್ನು ತೆಗೆದುಕೊಂಡ ಛಲಗಾರ ಬಾಳಪ್ಪನವರು ಹಠಕ್ಕೆ ಬಿದ್ದು ಪಾಲುದಾರರ ಕೃಪಾಕಟಾಕ್ಷವಿಲ್ಲದೇ ಸ್ವಂತವಾಗಿ ಕಲಾವೈಭವ ನಾಟ್ಯಸಂಘವನ್ನು 1947ರಲ್ಲಿ ಹುಟ್ಟುಹಾಕಿದರು. ಆಗ ತಾನೇ ಬ್ರಿಟೀಷರ ಹಂಗು ಹರಿದಿತ್ತು, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತ್ತು. ಹರಿಶ್ಚಂದ್ರ ನಾಟಕದ ಮೂಲಕ ನಾಟ್ಯಸಂಘದ ಪಯಣ ಆರಂಭವಾಯಿತು. ಮರಾಠಿ ನಾಟಕಗಳಿಂದ ಪ್ರೇರೇಪಿತರಾಗಿ ಏಕದೃಶ್ಯ ನಾಟಕ ಪ್ರಯೋಗವನ್ನು ಮಾಡಲು ಬಯಸಿದ ಬಾಳಪ್ಪನವರು ಮಹಾಂತೇಶ ಶಾಸ್ತ್ರಿಗಳಿಂದ ವಿಧವಾ ವಿವಾಹದ ಕುರಿತು ಕುಂಕುಮ ನಾಟಕವನ್ನು ಬರೆಸಿ ಪ್ರದರ್ಶಿಸಿ ಯಶಸ್ವಿಯಾದರು. ಒಂದೇ ದೃಶ್ಯದಲ್ಲಿ ಸಂಪೂರ್ಣ ನಾಟಕವನ್ನು ಮಾಡಿದ್ದು ಕನ್ನಡ ವೃತ್ತಿ ಕಂಪನಿ ಇತಿಹಾಸದಲ್ಲೇ ಮೊದಲನೆಯದಾಗಿತ್ತು. ರೀತಿಯ ಪ್ರಯೋಗಶೀಲತೆಯಿಂದಾಗಿ ಬಾಳಪ್ಪನವರು ತಮ್ಮ ಕಂಪನಿಯನ್ನು ಮುನ್ನೆಡೆಸಿದರು. ಜಗಜ್ಯೋತಿ ಬಸವೇಶ್ವರ ನಾಟಕವಂತೂ ಪ್ರದರ್ಶನ ಹಾಗೂ ಹಣಗಳಿಕೆಯಲ್ಲಿ ದಾಖಲೆ ಬರೆಯಿತುಬಾಳಪ್ಪನವರ ಬಸವೇಶ್ವರ ಪಾತ್ರ ಜನಜನಿತವಾಗಿ ಅವರಿಗೆ ನಾಟ್ಯಭೂಷಣ ಬಿರುದನ್ನು ದೊರಕಿಸಿಕೊಟ್ಟಿತು. ಮುಂಬಯಿಯಲ್ಲೂ ಸಹ ಕಲಾವೈಭವದ ನಾಟಕಗಳು ಪ್ರದರ್ಶನಗೊಂಡವು. ಕನ್ನಡಕ್ಕಿಂತಲೂ ಹೆಚ್ಚು ಹಣವನ್ನು ಮಹಾರಾಷ್ಟ್ರದಲ್ಲಿ ಸಂಪಾದಿಸಿದ ಕೀರ್ತಿ ಜಗಜ್ಯೋತಿ ಬಸವೇಶ್ವರ ನಾಟಕದ್ದು. ಕನ್ನಡ ನಾಟಕವನ್ನು ಮರಾಠಿ ನಾಡಿನಲ್ಲಿ ಜನಪ್ರೀಯಗೊಳಿಸಿದ ಕೀರ್ತಿ ಬಾಳಪ್ಪನವರಿಗೆ ಸಲ್ಲಲೇಬೇಕು.

1950 ರಲ್ಲಿ ಎಲ್ಲಾ ನಾಟಕ ಕಂಪನಿಗಳ ಸಂಘಟನೆ ಮಾಡಲು ಬಾಳಪ್ಪನವರು ಶ್ರಮಿಸಿದರು. ಗರುಡ ಸದಾಶಿವರಾಯರ ನೇತೃತ್ವದಲ್ಲಿ ಕಂಪನಿ ಮಾಲೀಕರ ಹಿತರಕ್ಷಣಾ ಸಂಘವನ್ನು ಹುಟ್ಟು ಹಾಕಿ ವೃತ್ತಿ ಕಂಪನಿ ನಾಟಕಗಳನ್ನು ಟೀಕಿಸುತ್ತಿದ್ದ ಶ್ರೀರಂಗರನ್ನೇ ಅದಕ್ಕೆ ಅಧ್ಯಕ್ಷರನ್ನಾಗಿ ಮಾಡಿದರು. ದುಡ್ಡು, ಸೇಡು ಹಾಗೂ ಛಲಕ್ಕಾಗಿ ನಾಟಕ ಕಂಪನಿಗಳ ನಡುವೆ ನಕಾರಾತ್ಮಕ ಸ್ಪರ್ಧೆ ಏರ್ಪಡಬಾರದು, ಒಂದು ನಾಟಕ ಕಂಪನಿಯಿಂದ ಇನ್ನೊಂದು ಕಂಪನಿ ಕನಿಷ್ಟ ನಲವತ್ತು ಮೈಲಿ ದೂರದ ಅಂತರ ಕಾಪಾಡಿಕೊಳ್ಳಬೇಕು, ಕಲಾವಿದರು ನಾಟಕ ಕಂಪನಿಗಳಿಗೆ ನಿಷ್ಟರಾಗಿರಬೇಕು ಎನ್ನುವ ಸೂತ್ರಗಳನ್ನೂ ಬಾಳಪ್ಪನವರು ರೂಪಿಸಿದ್ದರು. ಆದರೆ ಕೆಲವು ನಾಟಕ ಕಂಪನಿಗಳ ಮಾಲೀಕರುಗಳ ಅಸಹಕಾರದಿಂದಾಗಿ  ಸಂಘಟನೆ ನೆನಗುದಿಗೆ ಬಿದ್ದಿತು. ಆದರೂ ಬಾಳಪ್ಪನವರು ನಾಟಕ ಕಂಪನಿಗಳ ನಡುವೆ ಸಮನ್ವಯವನ್ನು ಸಾಧಿಸಲು ಪ್ರಯತ್ನಿಸುತ್ತಲೇ ಇದ್ದರು. ಕೇವಲ ತಮ್ಮ ಕಂಪನಿಯ ಲಾಭವನ್ನು ಮಾತ್ರ ನೋಡದೇ ಎಲ್ಲಾ ನಾಟಕ ಕಂಪನಿಗಳ ಹಿತವನ್ನು ಕಾಪಾಡಲು ಶ್ರಮಿಸಿದ ಬಾಳಪ್ಪನವರ ರಂಗಪ್ರೇಮ ನಿಜಕ್ಕೂ ಶ್ಲಾಘನೀಯ.



ಬರುಬರುತ್ತಾ ಸಿನೆಮಾ ಟಿವಿಗಳ ಆಕರ್ಷಣೆಗೆ ಪ್ರೇಕ್ಷಕರು ಪ್ರೇರೇಪಿತರಾದರು. ವೃತ್ತಿ ಕಂಪನಿಗೆ ಸಮಾಜನಿಷ್ಟ ನಾಟಕ ಬರೆಯುವವರು ಕಡಿಮೆಯಾದರು. ಮನರಂಜನೆಯ ಹೆಸರಲ್ಲಿ ಡಬಲ್ ಮೀನಿಂಗ ಸಂಭಾಷನೆ ಹಾಗೂ ಅರೆಬೆತ್ತಲೆ ನೃತ್ಯಗಳು ಹಲವು ನಾಟಕ ಕಂಪನಿಗಳಲ್ಲಿ ವಿಜ್ರಂಭಿಸಿದವು. ಆಧುನಿಕ ರಂಗಭೂಮಿ ನಗರ ಪ್ರದೇಶಗಳಲ್ಲಿ ಬೆಳೆಯತೊಡಗಿತು. ಪ್ರೇಕ್ಷಕರ ಕೊರತೆಯಿಂದಾಗಿ ನಾಟಕ ಕಂಪನಿಗಳನ್ನು ನಡೆಸುವುದೇ ದುಸ್ತರವಾಯಿತು. ಬಿ.ವಿ.ಕಾರಂತರು ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ನಾಟಕ ಕಂಪನಿಗಳಿಗೆ ಐವತ್ತು ಸಾವಿರ ಧನಸಹಾಯ ಘೋಷಿಸಿದರು. ಬಾಳಪ್ಪನವರು ತಮ್ಮ ಮಗ ನಟರಾಜನನ್ನು ನೀನಾಸಂ ರಂಗಶಿಕ್ಷಣ ಕೇಂದ್ರಕ್ಕೆ ಕಳುಹಿಸಿ ತರಬೇತಿ ಕೊಡಿಸಿದ್ದರು. ಆಧುನಿಕ ರಂಗ ತರಬೇತಿ ಪಡೆದ ನಟರಾಜನಿಗೆ ತಮ್ಮ ಕಂಪನಿ ನಡೆಸುವ ಜವಾಬ್ದಾರಿಯನ್ನು ಬಾಳಪ್ಪನವರು ವಹಿಸಿಕೊಟ್ಟರು. ನಟರಾಜರು ಆಧುನಿಕ ರಂಗತಂತ್ರಗಳನ್ನು ಬಳಸಿ ಅಥಣಿ ಶಿವಯೋಗಿಗಳನ್ನು ಕುರಿತು ನಾಟಕವನ್ನು ಆಡಿಸಿದರಾದರೂ ಅದನ್ನು ನೋಡಲು ಪ್ರೇಕ್ಷಕರು ಬರಲೇ ಇಲ್ಲ. ಹಠಕ್ಕೆ ಬಿದ್ದು ಧಾರವಾಡದಲ್ಲಿ ಇಪ್ಪತ್ತೈದು ಪ್ರದರ್ಶನಗಳಾದವಾದರೂ ಆರ್ಥಿಕವಾಗಿ ಕಂಪನಿ ಸೊರಗಿತು. ಬಾಳಪ್ಪನವರಿಗೂ ವಯಸ್ಸಾಗಿ ದೇಹ ಕಂಪನಿಯ ಭಾರವನ್ನು ಹೊರಲು  ನಿರಾಕರಿಸುತ್ತಿತ್ತು. ಹೀಗಾಗಿ ಕಲಾವೈಭವ ನಾಟ್ಯಸಂಘವನ್ನು ನಿಲ್ಲಿಸಲು ಬಾಳಪ್ಪನವರು ನಿರ್ಧರಿಸಿದರು. ಮೂರುವರೆ ದಶಕಗಳ ಕಾಲ ವಿಜ್ರಂಭಿಸಿ ಜನಪ್ರೀಯವಾಗಿದ್ದ ಕಲಾವೈಭವ ನಾಟ್ಯಸಂಘ 1983ರಲ್ಲಿ ಶಾಶ್ವತವಾಗಿ ನಿಲುಗಡೆ ಹೊಂದಿತು. ಸುಪ್ರಸಿದ್ಧ ನಾಟಕ ಕಂಪನಿ ಮೂಲಕ ಬಾಳಪ್ಪನವರು ಒಟ್ಟು ಇಪ್ಪತ್ತು ಪೌರಾಣಿಕ, ಎಂಟು ಐತಿಹಾಸಿಕ ಹಾಗೂ ಮೂವತ್ತೈದು ಸಾಮಾಜಿಕ ನಾಟಕಗಳನ್ನು ನಿರ್ಮಿಸಿ ಸಹಸ್ರಾರು ಪ್ರದರ್ಶನಗಳನ್ನು ದೇಶಾದ್ಯಂತ ಮಾಡಿದ್ದಾರೆ.
 
ಬಾಳಪ್ಪನವರು ನಾಟಕದ ನಟರು ಹಾಗೂ ಕಂಪನಿ ಮಾಲೀಕರು ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಬಹುತೇಕರಿಗೆ ಗೊತ್ತಿಲ್ಲದ ಸಂಗತಿ ಎಂದರೆ ಬಾಳಪ್ಪನವರ ಮುಂದಾಳತ್ವದಲ್ಲಿ ಶಾಲೆಯೊಂದು ಅಸ್ತಿತ್ವಕ್ಕೆ ಬಂದಿದ್ದು. ಏಣಗಿ ಹತ್ತಿರದ ಹಲವು ಊರುಗಳಲ್ಲಿ  ಹೈಸ್ಕೂಲ್ ಇಲ್ಲದ್ದನ್ನು ಮನಗಂಡ ಬಾಳಪ್ಪನವರು ಊರವರನ್ನೆಲ್ಲಾ ಸೇರಿಸಿ ಮಲಪ್ರಭಾ ಶಿಕ್ಷಣ ಸಮಿತಿ ರಚಿಸಿ ತುಂಬಾ ಪರಿಶ್ರಮ ಪಟ್ಟು ಆಸುಂಡಿಯಲ್ಲಿ ಹೈಸ್ಕೂಲನ್ನು ಶುರುಮಾಡಿ ಸರಕಾರದ ಅನುಮತಿಯನ್ನೂ ತೆಗೆಸಿಕೊಟ್ಟರು. ಈಗಲೂ ಶಿಕ್ಷಣ ಸಂಸ್ಥೆಗೆ ಏಣಗಿ ಬಾಳಪ್ಪನವರೇ ಚೇರಮನ್ ಆಗಿದ್ದಾರೆ. ಸ್ವಂತ ಕಟ್ಟಡ ಇಲ್ಲದಿದ್ದರೆ ಶಾಲೆಯ ಮಾನ್ಯತೆ ರದ್ದು ಮಾಡಲಾಗುವುದು ಎಂದು ಸರಕಾರ ಆದೇಶಿಸಿದಾಗ ತಮ್ಮ ಅಳಿಯಂದಿರ ಸಹಾಯ ಪಡೆದು ಶಿಕ್ಷಣ ಸಂಸ್ಥೆಗೆ ಸ್ವಂತ ಶಾಲಾ ಕಟ್ಟಡವನ್ನು ಕಟ್ಟಿಕೊಟ್ಟ ದೀಮಂತರು ನಮ್ಮ ಏಣಗಿ ಬಾಳಪ್ಪನವರು. ರಂಗಭೂಮಿಯ ಹಾಗೆ ಗ್ರಾಮೀಣ ಶಿಕ್ಷಣ ಕ್ಷೇತ್ರಕ್ಕೂ ಸಹ ತಮ್ಮದೇ ಆದ ಕೊಡುಗೆಯನ್ನು ಬಾಳಪ್ಪನವರು ಕೊಟ್ಟಿದ್ದಾರೆ.

ಏಣಗಿ ಬಾಳಪ್ಪನವರ ಕನ್ನಡ ಭಾಷಾ ಪ್ರೀತಿ ಅನನ್ಯವಾದದ್ದು. ಕನ್ನಡ ನಾಟಕಗಳನ್ನು ಮರಾಠಿ ಭಾಷಿಕ ನೆಲದಲ್ಲಿ ಪ್ರದರ್ಶಿಸಿ ಮೆಚ್ಚುಗೆ ಪಡೆದರು. ಬೆಳಗಾವಿಯಲ್ಲಿ ಪ್ರತಿ ವರ್ಷ ರಾಜ್ಯೋತ್ಸವದ ದಿನದಂದು ಮರಾಠಿಗರು ಬಂದ ಆಚರಿಸುತ್ತಿದ್ದು ಅಂದು ಯಾವುದೆ ನಾಟಕ ಪ್ರದರ್ಶನಗಳು ನಡೆಯುತ್ತಿದ್ದಿಲ್ಲ. ಗುಬ್ಬಿ ವೀರಣ್ಣ, ಸುಬ್ಬಯ್ಯ ನಾಯ್ದುರಂತಹ ಅತಿರಥ ಮಹಾರಥರೇ ದಿನ ನಾಟಕಗಳನ್ನು ಆಡುತ್ತಿರಲಿಲ್ಲ. ಆದರೆ ಏಣಗಿ ಬಾಳಪ್ಪನವರು ಭಾಷಾಭಿಮಾನದಿಂದ ಮರಾಠಿ ಪುಂಡರಿಗೆ ಸವಾಲೊಡ್ಡಿ ನವೆಂಬರ್ ಒಂದರಂದು ನಾಟಕ ಪ್ರದರ್ಶನ ಮಾಡುವ ನಿರ್ದಾರ ಮಾಡಿದರು. ಕನ್ನಡ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ನೆರವು ಪಡೆದರು. ಕನ್ನಡ ಹೋರಾಟಗಾರರು ರಂಗಮಂದಿರಕ್ಕೆ ಕಾವಲು ನಿಂತರು. ಕನ್ನಡಿಗ ಪ್ರೇಕ್ಷಕರು ದೈರ್ಯದಿಂದ ನಾಟಕ ನೋಡಲು ಬಂದರು. ದುರುಳರು ನಾಟಕ ನಿಲ್ಲಿಸಲೆಂದು ಕರೆಂಟ್ ನಿಲ್ಲಿಸಿದರು. ಪ್ರದರ್ಶನದಲ್ಲಿ ವಿಳಂಬವಾದರೂ ಜನರು ಸಹನೆಯಿಂದ ಕಾಯ್ದರು. ಕೊನೆಗೆ ಜನರೇಟರ್ ಸಹಾಯದಿಂದ ನಾಟಕ ಪ್ರದರ್ಶನ ಶುರುವಾಗಿಯೇ ಬಿಟ್ಟಿತು. ರಂಗಮಂದಿರಕ್ಕೆ ಒಂದೆರಡು ಕಲ್ಲುಗಳೂ ಬಿದ್ದವು. ಆದರೆ ಸ್ವಯಂ ಕಾರ್ಯಕರ್ತರು ಅದನ್ನು ಹಿಮ್ಮೆಟ್ಟಿಸಿದರು. ಬಾಳಪ್ಪನವರ ಕನ್ನಡ ಪ್ರೇಮದಿಂದಾಗಿ ಬೆಳಗಾವಿಯಲ್ಲಿ ರಾಜ್ಯೋತ್ಸವದ ದಿನದಂದು ಕನ್ನಡ ನಾಟಕ ಪ್ರದರ್ಶನ ಶುರುವಾಯಿತು.

ಮುಂದೆ ಖಾನಾಪುರದಲ್ಲಿ ಬಾಳಪ್ಪನವರ ಕಂಪನಿ ನಾಟಕ ಶುರುವಾದಾಗ ಮತ್ತೆ ಮರಾಠಿ ಭಾಷಾಂಧರು ಬಂದು ನಾಟಕದ ಕಂಪನಿಯ ಹೆಸರಲ್ಲಿ ಬೆಳಗಾವಿ ಅನ್ನೋದನ್ನ ತೆಗೆಯಿರಿ, ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕಾದದ್ದು ಎಂದು ನಾಟಕ ನಿಲ್ಲಿಸಲು ನೋಡಿದರು. ಆದರೂ ಹಠಕ್ಕೆ ಬಿದ್ದ ಬಾಳಪ್ಪನವರು ನಾಟಕ ಪ್ರದರ್ಶನ ನಿಲ್ಲಿಸಲಿಲ್ಲ. ಮರಾಠಿ ಭಾಷಿಕರೆಲ್ಲಾ ಒಂದಾಗಿ ಯಾರೂ ನಾಟಕ ನೋಡಲು ಹೋಗಬಾರದು ಎಂದು ಅನಧೀಕೃತ ಘೋಷಣೆ ಮಾಡಿದರು. ಪ್ರೇಕ್ಷಕರ್ಯಾರೂ ನಾಟಕ ನೋಡಲು ಬರಲಿಲ್ಲ. ಊರ ಪ್ರಮುಖರು ಬಂದು ಬೋರ್ಡನಲ್ಲಿರೋ ಬೆಳಗಾವಿ ತೆಗೆದುಬಿಡಿ ಯಾಕೆ ಸುಮ್ಮನೆ ಲಾಸ್ ಮಾಡಿಕೊಳ್ತೀರಿ ಎಂದು ಬಾಳಪ್ಪನವರಿಗೆ ಬುದ್ದಿಹೇಳಿದರು. ಕನ್ನಡಾಭಿಮಾನಿಯಾಗಿದ್ದ ಬಾಳಪ್ಪನವರು ಸುತರಾಂ ಒಪ್ಪಲಿಲ್ಲ. ನಾಟಕದ ಕ್ಯಾಂಪನ್ನೇ ಅಳ್ನಾವರಕ್ಕೆ ಬದಲಾಯಿಸಿದರೇ ಹೊರತು ಬೆಳಗಾವಿ ಹೆಸರನ್ನು ಬದಲಾಯಿಸಲು ಒಪ್ಪಲಿಲ್ಲ. ನಂತರವು ಬೆಂಬಿಡದ ಮರಾಠಿ ಭಾಷಾಂಧರು ಬಾಳಪ್ಪನವರಿಗೆ ಜೀವಬೆದರಿಕೆ ಒಡ್ಡಿ ಪತ್ರಬರೆದರು. ಯಾವುದಕ್ಕೂ ಹೆದರದ ಬಾಳಪ್ಪನವರು ಬೆದರಿಕೆ ಪತ್ರವನ್ನು ಪ್ರತಿ ಪ್ರದರ್ಶನದಲ್ಲೂ ಪ್ರೇಕ್ಷಕರ ಮುಂದೆ ಓದಿ ಹೇಳಿ ಭಾಷಾಂಧರ ಪುಂಡತನವನ್ನು ಬಯಲುಗೊಳಿಸುತ್ತಲೇ ನಾಟಕ ಶುರುಮಾಡತೊಡಗಿದರು. ಮುಂದೆ ರಾಜಕುಮಾರರ ನೇತೃತ್ವದಲ್ಲಿ ಗೋಕಾಕ್ ಚಳುವಳಿ ಆರಂಭವಾದಾಗ ನಾಟಕ ಅಕಾಡೆಮಿಯ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಗೋಕಾಕ್ ಚಳುವಳಿಯಲ್ಲಿ ಭಾಗವಹಿಸಿ ಹತ್ತು ದಿನಗಳ ಕಾಲ ಜೈಲಿಗೆ ಹೋಗಿದ್ದರು. ಬೆಳಗಾವಿ ವಿವಾದ ಕುರಿತು ಮಹಾಜನ ಆಯೋಗ ಅಧ್ಯಯನ ಮಾಡುತ್ತಿದ್ದಾಗ, ಬೆಳಗಾವಿ ಕನ್ನಡಿಗರದ್ದೇ ಎಂದು ಒಂದು ಸಾಕ್ಷಿ ಒದಗಿಸಲೆಂದು ಒಂದು ವರ್ಷಗಳ ಕಾಲ ನಷ್ಟದಲ್ಲಿಯೂ ಸಹ ಬೆಳಗಾವಿಯಲ್ಲಿ ನಿರಂತರ ನಾಟಕಗಳನ್ನು ಬಾಳಪ್ಪನವರು ಪ್ರದರ್ಶಿಸಿದರು. ಹಲವು ನಾಟಕ ಕಂಪನಿಯ ಮಾಲೀಕರುಗಳು ಕೇವಲ ವ್ಯಾಪಾರಿ ದೃಷ್ಟಿಕೋನದಿಂದ ಎಲ್ಲದಕ್ಕೂ ರಾಜಿಯಾಗಿ ತಮ್ಮ ಕಂಪನಿಗಳನ್ನು ನಡೆಸಿದರೆ ಬಾಳಪ್ಪನವರು ಎಲ್ಲಕ್ಕಿಂತಲೂ ಭಾಷಾಭಿಮಾನ ದೊಡ್ಡದು ಎಂದು ಕನ್ನಡಕ್ಕಾಗಿ ತಮ್ಮ ಆದಾಯವಷ್ಟೇ ಅಲ್ಲ ತಮ್ಮ ಪ್ರಾಣವನ್ನೇ ಪಣಕ್ಕೊಡ್ಡಿ ನಾಟಕ ಪ್ರದರ್ಶನಗಳನ್ನು ಮುನ್ನೆಡೆಸಿದ್ದು ಕನ್ನಡಿಗರಿಗೆ ಅಭಿಮಾನದ ಸಂಗತಿಯಾಗಿದೆ. ಮುನ್ನೂರುಕ್ಕೂ ಹೆಚ್ಚು ಅಪರೂಪದ ರಂಗಗೀತೆಗಳನ್ನ ಹಾಡಿ ದ್ವನಿಸುರಳಿಮಾಡಿ ಮುಂದಿನ ತಲೆಮಾರಿಗೆ ಬಾಳಪ್ಪನವರು ಕಾಯ್ದಿಟ್ಟಿದ್ದಾರೆ.
           
 ಹುಟ್ಟಿದೆ, ಶ್ರೀ ಗುರುವಿನ ಹಸ್ತದಲ್ಲಿ, ಬೆಳೆದ ನಾನು ಅಸಂಖ್ಯಾತರ ಕರುಣೆಯಿಂದ, ಭಾವವೆಂಬ ಹಾಲು, ಸುಜ್ಞಾನವೆಂಬ ತುಪ್ಪ, ಪಾರಮಾರ್ಥವೆಂಬ ಸಕ್ಕರೆಯನ್ನಿಕ್ಕಿದಿರಿ, ಇಂತಿಪ್ಪ ತ್ರಿವಿಧಾಮೃತವನ್ನು ಮನದಣಿಯಲೆರೆದು ಸಲುಹಿದಿರಿ, ಸ್ವಯವಪ್ಪ ಗಂಡಗೆನ್ನ ಕೊಟ್ಟಿರಿ, ಕೊಟ್ಟ ಮನೆಗೆ ಕಳುಹಲೆಂದು ಅಸಂಖ್ಯಾತರೆಲ್ಲರೂ ನೆರೆದು ಬಂದಿರಿ, ಬಸವಣ್ಣ ಮೆಚ್ಚುವಂತೆ ಒಗೆತನವ ಮಾಡುವೆ, ನಿಮ್ಮ ತಲೆಗೆ ಹೂವ ತರುವೆನಲ್ಲದೆ ಹುಲ್ಲ ತಾರೆನು, ನಿಮ್ಮ ಅಡಿಗಳಲ್ಲಿ ಅವಧರಿಸಿ ಶರಣು ಶರಣಾರ್ಥಿ ಇದು ಅನುಭವ ಮಂಟದಲ್ಲಿ ತನ್ನನ್ನು ಬೀಳ್ಕೊಡಲು ಬಂದ ಶರಣರಿಗೆ ಅಕ್ಕಮಹಾದೇವಿ ಹೇಳುವ ಮಾತುಗಳು. ಇದನ್ನು ಬಲು ಧನ್ಯತೆಯಿಂದ ಬಾಳಪ್ಪನವರು ನೆನಪಿಸಿಕೊಳ್ಳುತ್ತಾರೆ. ನಾನು ರಂಗಭೂಮಿಗೆ ಹೂವನಲ್ಲದೇ ಹುಲ್ಲು ಕೊಡಲಿಲ್ಲ ಎಂದು ವಿನಯದಿಂದಲೇ ಹೇಳುತ್ತಾರೆ. ನನ್ನ ಕೊರತೆಗಳೇನೇ ಇದ್ದರೂ ನೀವು ನನ್ನನ್ನು ನಿಮ್ಮವನೆಂದು ಪ್ರೋತ್ಸಾಹಿಸಿದಿರಿ, ನನ್ನಂತಹ ಅನಕ್ಷರಸ್ತನನ್ನೂ ನಿಮ್ಮಂತ ಸುಶಿಕ್ಷಿತರೂ, ಸುಸಂಸ್ಕೃತರು ಮೆಚ್ಚಿ ಬಿರುದು ಬಾವಲಿಗಳನ್ನು ಕೊಡಿಸಿದಿರಿ, ಇದಕ್ಕಿಂತ ಹೆಚ್ಚಿನದಿನ್ನೇನು ಬೇಕು ನನಗೆ, ನನ್ನ ಬದುಕು ಸಾರ್ಥಕ.. ಎಂದು ಬಾಳಪ್ಪನವರು ಬಹುತೇಕ ಕಾರ್ಯಕ್ರಮಗಳಲ್ಲಿ ಹೇಳುತ್ತಲೇ ಬಂದಿದ್ದಾರೆ. ಇದಕ್ಕಿಂತ ವಿಧೇಯತೆ ಇನ್ನೇನು ಬೇಕು. ಎಷ್ಟೇ ಎತ್ತರಕ್ಕೇರಿದರೂ ಸಹ ಎನಗಿಂತ ಕಿರಿಯರಿಲ್ಲ ಎನ್ನುವ ಬಸವ ಪ್ರಜ್ಞೆಯನ್ನು ರೂಢಿಸಿಕೊಂಡ ಬಾಳಪ್ಪನವರ ಬದುಕು ಸಾಧನೆ ಕ್ರಿಯೆ ನಡೆ ನುಡಿಗಳೆಲ್ಲಾ ಕಲಾವಿದರಿಗೆಲ್ಲಾ ಆದರ್ಶವಾಗಿವೆ. ತುಂಬಿದ ಕೊಡ ಎಂದರೆ ಇದೇನಾ?

 ನಾನು ಹೇಗೆ ಬದುಕಿದೆ ಎಂದು ಕೇಳಬೇಡಿ, ಏನು ಮಾಡಿದೆ ಎನ್ನುವುದನ್ನು ಮಾತ್ರ ನೋಡಿ ಎಂಬ ಅಪಾಯಕಾರಿಯಾದ ಮಾತನ್ನು ಉಪಾಯವಾಗಿ ಕಲಾರಂಗದಲ್ಲಿ ಹಲವರು ಹೇಳುತ್ತಾರೆ. ಅಂದರೆ ಬದುಕು ಮತ್ತು ಸಾಧನೆ ಎರಡನ್ನೂ ಬೇರೆ ಬೇರೆಯಾಗಿ ಪರಿಗಣಿಸಬೇಕು, ವ್ಯಕ್ತಿಗತ ಬದುಕಿನ ದೌರ್ಬಲ್ಯಗಳನ್ನೆಲ್ಲಾ ಲೆಕ್ಕಿಸದೇ ಕೇವಲ ಪ್ರತಿಭೆಯನ್ನು ಮಾತ್ರ ಗುರುತಿಸಿ ಗೌರವಿಸಬೇಕು ಎನ್ನುವುದು ಬಹುತೇಕರ ಅಂತರಂಗದ ಆಶಯವಾಗಿದೆ. ಆದರೆ ಡಾ.ರಾಜಕುಮಾರ ಹಾಗೂ ಏಣಗಿ ಬಾಳಪ್ಪನವರು ಇಂತಹ ಪಲಾಯನವಾದಿ ಮಾತುಗಳಿಗೆ ವ್ಯತಿರಿಕ್ತರಾಗಿ ಬದುಕಿ ಕಲಾಚರಿತ್ರೆಯಲ್ಲಿ ಅಜರಾಮರರಾದರು. ಇಂತಹ ಮಹನೀಯರು ಹೇಳಿದಂತೆ ಬಾಳಿದರು, ಬಾಳಿದ್ದನ್ನೇ ಹೇಳಿದರು, ತಮ್ಮ ನಡೆ ನುಡಿಗಳಲ್ಲಿ ನೇರವಂತಿಕೆಯನ್ನು ರೂಢಿಸಿಕೊಂಡರು ಮತ್ತು ವ್ಯಕ್ತಿಗತ ಬದುಕು ಹಾಗೂ ಕಲಾಜೀವನವನ್ನು ಒಂದಾಗಿಸಿಕೊಂಡರು. ಬಾಳಪ್ಪನವರು ಅಭಿನಯಿಸಿದ ನಾಟಕಗಳಲ್ಲಿ ಮಾಡಿದ್ದೆಲ್ಲಾ ಆದರ್ಶಪೂರ್ಣ ಪಾತ್ರಗಳನ್ನು. ಕೇವಲ ಆಯಾ ಕಾಲಕ್ಕೆ ಪಾತ್ರಗಳನ್ನು ಮಾತ್ರ ಮಾಡಿ ವೇಷ ಕಳಚಿಟ್ಟ ನಂತರ ಮಾಡಬಾರದ್ದನ್ನೆಲ್ಲಾ ಮಾಡದೇ ಆಯಾ ಪಾತ್ರಗಳ ಆದರ್ಶಗಳನ್ನು ಮೈಗೂಡಿಸಿಕೊಂಡರು. ಬಸವಣ್ಣನ ಪಾತ್ರವನ್ನು ಮಾಡುತ್ತಲೇ ಬದುಕಿನಲ್ಲಿ ಸರಳತೆಯನ್ನು ರೂಢಿಸಿಕೊಂಡರು. ಶರಣರ ವಿನಯವಂತಿಕೆಯನ್ನು ಅಳವಡಿಸಿಕೊಂಡರು. ಕೊನೆಯವರೆಗೂ ಸಂತೆಯಲ್ಲಿ ನಿಂತರೂ ಸಂತನಂತೆ, ಬಣ್ಣದ ಲೋಕದಲ್ಲಿ ನಿಂತರೂ ಶರಣರಂತೆ ಬಾಳಿ ಬೆಳಗಿದ ಬಾಳಪ್ಪನವರು ರಂಗಭೂಮಿಯಲ್ಲಿ ಅಪರೂಪದಲ್ಲಿ ಅಪರೂಪ ಎನ್ನಿಸುವಂತವರು.

ನಾವು ನಾಟಕಾ ಮಾಡುದ ಮಂದಿ ಮನಸ್ಸಲ್ಲಿ ನೈತಿಕ ಪರಿವರ್ತನಾ ತರೂದಕ್ಕ, ಆದರ ನಾಟಕಾ ಆಡೂ ನಾವಾ ಪರಿವರ್ತನೆ ಆಗದಿದ್ದರ ಇನ್ನ ಜನರು ಬದಲಾಗ್ತಾರ ಅಂತ ಹೆಂಗ ನಂಬೂದು, ಅದಕ್ಕ ಮೊದಲು ನಾ ಪಾತ್ರಗಳ ಸದ್ಬಾವನೆಗಳನ್ನ ನನ್ನ ಬದುಕಿನ್ಯಾಗ ಅಳವಡಿಸಿಕೊಳ್ಳಾಕ ಪ್ರಯತ್ನ ಮಾಡಿದೆ. ನಾಟಕಾ ಮಾಡೋರು ಪರಿಶುದ್ದರಾಗಿದ್ದರ ನಾಟಕ ನೊಡೋ ರಸಿಕರಿಗೆ ಶುದ್ದರಾಗಿರಿ, ಕುಡಿಬ್ಯಾಡ್ರೀ, ಹಾದರಾ ಮಾಡಬ್ಯಾಡ್ರೀ ಅಂತಾ ಹೇಳಾಕ ನೈತಿಕ ಬಲ ಬರತೈತಿ. ನಾವ ಎಲ್ಲಾ ಹೊಲಸ ಕೆಲಸಾ ಮಾಡ್ಕೊಂಡಿದ್ರ ಅದ್ಯಾಂಗ ಮಂದಿಗೆ ಚೊಲೋತ್ನಂಗಾ ಇರ್ರಿ ಅಂತಾ ಹೇಳಾಕ ಸಾಧ್ಯ ಆಗತೈತಿ...  ಇದು ಏಣಗಿ ಬಾಳಪ್ಪನವರು ಹೇಳಿದ ಮುತ್ತಿನಂತಾ ಮಾತು. ಅವರು ಬರೀ ಬೇರೆಯವರ ಹಾಗೆ ಉಪದೇಶ ಹೇಳಲಿಲ್ಲ, ಹೇಳಿದಂತೆ ಬದುಕಿದವರು. ಬಾಳಪ್ಪನವರು ಒಂದು ರೀತಿಯಲ್ಲಿ ಬುದ್ದ ಪ್ರಜ್ಞೆ. ತಾನು ಬೆಲ್ಲ ತಿನ್ನೊದನ್ನು ಬಿಟ್ಟ ನಂತರವೇ ಮಗುವಿಗೆ ಬೆಲ್ಲ ತಿನ್ನಬಾರದು ಎಂದು ಬುದ್ದ ಬುದ್ದಿ ಹೇಳಿದಂತೆ ನಮ್ಮ ಬಾಳಪ್ಪನವರು ಮೊದಲು ತಾವು ನಾಟಕದ ಸದಾಶಯ ಹಾಗೂ ಪಾತ್ರಗಳ ಆದರ್ಶಗಳನ್ನು ಮೈಗೂಡಿಸಿಕೊಂಡು ನಂತರ ತಮ್ಮ ನಾಟಕಗಳ ಮೂಲಕ ಸಮಾಜ ಸುಧಾರಣೆಯ ನಿಟ್ಟಿನಲ್ಲಿ ಸಂದೇಶಗಳನ್ನು ಕೊಟ್ಟರು. ಇದು ನಮ್ಮ ರಂಗಭೂಮಿಯ ಚರಿತ್ರೆಯಲ್ಲಿಯೇ ಗಮನಾರ್ಹವೆನಿಸುವಂತಹುದು.

ಏಣಗಿ ಬಾಳಪ್ಪನವರ ರಂಗಸಾಧನೆಯನ್ನು ಗುರುತಿಸಿ ಹಲವಾರು ಸಂಘಸಂಸ್ಥೆಗಳು ಪ್ರಶಸ್ತಿ ಪುರಸ್ಕಾರ ಬಿರುದು ಬಾವಲಿಗಳನ್ನಿಟ್ಟು ಗೌರವಿಸಿವೆ. 1973 ರಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿ, 1976ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, 1978ರಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ ಪ್ರಶಸ್ತಿ, 1995 ರಲ್ಲಿ ಕೇಂದ್ರ ಸರಕಾರದ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ,  1995 ರಲ್ಲಿ ಕರ್ನಾಟಕ ರಾಜ್ಯ ಸರಕಾರದ ಅತ್ಯಂತ ಪ್ರತಿಷ್ಠಿತವಾದ ಗುಬ್ಬಿ ವೀರಣ್ಣ ಪ್ರಶಸ್ತಿ, 2005 ರಲ್ಲಿ  ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ... ಹೀಗೆ ಲೆಕ್ಕವಿಲ್ಲದಷ್ಟು ಪ್ರತಿಷ್ಟಿತ ಪ್ರಶಸ್ತಿಗಳು ಏಣಗಿ ಬಾಳಪ್ಪನವರ ಸಾಧನೆಗೆ ಸಂದಿವೆ. ಬಾಳಪ್ಪನವರ ರಂಗಕೈಂಕರ್ಯವನ್ನು ಮೆಚ್ಚಿ ಕರ್ನಾಟಕ ವಿಶ್ವವಿದ್ಯಾಲಯವು 2006 ರಲ್ಲಿ ಗೌರವ ಡಾಕ್ಟರೇಟ್ ಪದವಿ ಕೊಟ್ಟು ಗೌರವಿಸಿದೆ. ನಾಟ್ಯಭೂಷಣ, ನಾಟ್ಯಗಂಧರ್ವ... ಹೀಗೆ ಹಲವಾರು ಬಿರುದುಗಳನ್ನು ಸಹೃದಯ ಪ್ರೇಕ್ಷಕರು ಕೊಟ್ಟು ಬಾಳಪ್ಪನವರ ಕೀರ್ತಿಯನ್ನು ಹೆಚ್ಚಿಸಿವೆ. ಯಾರು ಏನೇ ಪ್ರಶಸ್ತಿ ಪುರಸ್ಕಾರಗಳನ್ನು ಕೊಟ್ಟರೂ ಬಾಳಪ್ಪನವರ ಸಾಧನೆ ಮುಂದೆ ಅವೆಲ್ಲಾ ಕಡಿಮೆ ಎನ್ನಿಸುವಷ್ಟು ದೊಡ್ಡವರಾಗಿ ಬೆಳೆದವರು ಏಣಗಿ ಬಾಳಪ್ಪನವರು.
         
ವೃತ್ತಿ ಕಂಪನಿ ರಂಗಭೂಮಿಯಲ್ಲಿ ಅತಿರಥ ಮಹಾರಥರೆಲ್ಲಾ ಮೆರೆದು ಮರೆಯಾಗಿದ್ದಾರೆ. ಆದರೆ ಏಣಗಿ ಬಾಳಪ್ಪನವರ ಹಾಗೆ ನೂರು ವರ್ಷದ ಪರಿಪೂರ್ಣ ಬದುಕನ್ನು ಬದುಕಿದವರಿಲ್ಲ. ಬಹುತೇಕರು ರಂಗದಲ್ಲಿ ಸಕ್ರೀಯರಾಗಿರುವವರೆಗೂ ಜನಪ್ರೀಯತೆ, ಗೌರವ, ಸನ್ಮಾನ ಸತ್ಕಾರಗಳನ್ನು ಪಡೆದರು. ಆದರೆ.. ಬಾಳಪ್ಪನವರ ಹಾಗೆ ನಟನೆಯಿಂದ ನಿವೃತ್ತರಾಗಿ ತಮ್ಮ ಕಂಪನಿ ಮುಚ್ಚಿದ ನಂತರವೂ ಜನರಿಂದ, ಸರಕಾರದಿಂದ, ಸಂಘ ಸಂಸ್ಥೆಗಳಿಂದ ಮನ್ನನೆ, ಗೌರವ, ಪ್ರಶಸ್ತಿ ಪುರಸ್ಕಾರಗಳನ್ನು ಪಡೆದವರೆಲ್ಲ. ವೃತ್ತಿ ಕಂಪನಿಯ ಅನೇಕರು ನಿವೃತ್ತರಾದ ನಂತರ ಸಮಾಜದಿಂದ ನೇಪತ್ಯಕ್ಕೆ ಸರಿದವರಿದ್ದಾರೆ. ಆದರೆ ಬಾಳಪ್ಪನವರು ತಮ್ಮ ಪ್ರತಿಭೆ, ವಿನಯವಂತಿಕೆ, ಶಿಸ್ತುಬದ್ದವಾದ ವ್ಯಸನರಹಿತ ಜೀವನಕ್ರಮದಿಂದಾಗಿ ಈಗಲೂ ಪ್ರಸ್ತುತರಾಗಿದ್ದಾರೆ ನೂರು ವರ್ಷದ ಪ್ರಾಯದಲ್ಲೂ ಹಾರ್ಮೋನಿಯಂ ಹಿಡಿದು ಗಂಟೆಗಂಟಲೇ ಹಾಡುತ್ತಾರೆ. ಯಾರ ಸಹಾಯವಿಲ್ಲದೇ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಾರೆ. ಅಸಾಧ್ಯವಾದ ನೆನಪಿನ ಶಕ್ತಿಯನ್ನು ಇನ್ನೂ ಹೊಂದಿದ್ದಾರೆ. ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಾರೆ. ಯಾರೇ ಬಂದರೂ ಒಂದಿಷ್ಟೂ ಅಸಮಾಧಾನ ತೋರದೇ ಗಂಟೆಗಂಟಲೇ ಸಮಚಿತ್ತದಿಂದ ಮಾತಾಡುತ್ತಾರೆ. ಇಂತಹ ಮಾಗಿದ ಮನಸ್ಸು, ಮಾಗಿದ ವಯಸ್ಸು ಇರುವ ಸಾತ್ವಿಕ ಹಿರಿಯ ಜೀವ ರಂಗಭೂಮಿಯಲ್ಲಿ ಮಾದರಿ ಎಂಬಂತೆ ಬದುಕಿ ಸಾಧಿಸಿರುವುದು ದಂತಕತೆಯಂತಿದೆ. ಬಾಳಪ್ಪನವರ ಆದರಣೀಯವಾದ ವ್ಯಯಕ್ತಿಕ ಬದುಕು ಹಾಗೂ ಮೌಲ್ಯಯುತವಾದ ಕಲಾಬದುಕು ಎಲ್ಲರಿಗೂ ಆದರ್ಶಪೂರ್ಣವಾಗಿದೆ. ನೂರುವರ್ಷ ತುಂಬಿದ ರಂಗಭೂಮಿಯ ಹಿರಿಯಜ್ಜನಿಗೆ ರಂಗನಮನ. ದಶಕಗಳ ಕಾಲ ರಂಗರಸಿಕರಿಗೆ ತಮ್ಮ ಅನನ್ಯ ಪ್ರತಿಭೆಯಿಂದ ರಸದೌತನ ನೀಡಿದ ಬಾಳಪ್ಪನವರಿಗೆ ಲೇಖನ ಸಮರ್ಪಣ.

          ಬಾಳಪ್ಪನವರು ಎಲ್ಲಾ ಸಭೆ ಸಮಾರಂಭಗಳಲ್ಲಿ ಹಾಗೂ ತಮ್ಮ ಕಂಪನಿ ನಾಟಕ ಕ್ಯಾಂಪಿನ ಸಮಾರೋಪದಲ್ಲಿ ತಪ್ಪದೇ ಹಾಡುವ ಜೋಳದರಾಶಿ ದೊಡ್ಡನಗೌಡರು ರಚಿಸಿದ ಹಾಡಿನ ಕೆಲವು ಸಾಲಿನೊಂದಿಗೆ ಲೇಖನ ಮುಗಿಸುವೆ.

                   ಹೋಗಿ ರತೇನ್ರಯ್ಯ ನಮೂರಿಗೆ
                   ಎಲ್ಲರಿಗೂ ಶರಣಾರ್ಥಿ ದಯದೋರಿ ಕಳಿಹಿಸಿರಿ
                   ಏಸೋ ಕಾಲದಿಂದ ಊರೂರು ತಿರುಗುತ

                   ನಿಮ್ಮೂರಿಗೆ ಬಂದೆ ಕಲಾವಿದನಾಗಿ
                   ಹಿಂದಿಲ್ಲ, ಮುಂದಿಲ್ಲ, ನಾ ತಂದಿದ್ದೇನಿಲ್ಲ
                   ಎಲ್ಲ ನೀವೇ ನೀಡಿ ನೆರವಾದಿರಿ...

                   ಬಿಟ್ಟು ಹೋಗುವುದೇ ಎಲ್ಲ, ನಾ ತಂದಿದ್ದೇನಿಲ್ಲ
                   ನೀವಿತ್ತುದನ್ನೆಲ್ಲ ನಿಮಗೊಪ್ಪಿಸುವೆನಯ್ಯ...... 

                                   -ಶಶಿಕಾಂತ ಯಡಹಳ್ಳಿ  
                 



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ