ಮಂಗಳವಾರ, ಜೂನ್ 24, 2014

ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಬಲಿಯಾದ ಅಕಾಡೆಮಿ ಅಧ್ಯಕ್ಷರು:


ಕೋರ್ಟಿಗೆ ಹೆದರಿ ಕಂಗಾಲಾದ ಅಧಿಕಾರಿಗಳು
ಅಧಿಕಾರ ಕಳೆದುಕೊಂಡ ಅಕಾಡೆಮಿ ಅಧ್ಯಕ್ಷರುಗಳು:                                              

ನ್ಯಾಯಾಂಗ ನಿಂದನೆಗೆ ಹೆದರಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತೊಂದು ಯಡವಟ್ಟು ಮಾಡಿಕೊಂಡಿದೆ. 2014 ಫೆಬ್ರುವರಿ 26 ರಂದು ತಾನೇ ಆಯ್ಕೆ ಮಾಡಿದ ಮೂರು ಅಕಾಡೆಮಿಗಳ ಅಧ್ಯಕ್ಷರು ಹಾಗೂ ಸದಸ್ಯರನ್ನು ನಾಲ್ಕೇ ತಿಂಗಳಲ್ಲಿ ಅನೂರ್ಜಿತಗೊಳಿಸಿ ಮನೆಗೆ ಕಳುಹಿಸಿದೆ. ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿ ತನಕ್ಕೆ ಹಾಗೂ ಸಂಸ್ಕೃತಿ ಮಂತ್ರಿಣಿಯ ಆತುರದ ನಿರ್ಧಾರಕ್ಕೆ ಅಕಾಡೆಮಿಯ ಅಧ್ಯಕ್ಷರು ಹಾಗೂ ಸದಸ್ಯರುಗಳು ಬಲಿಪಶುವಾಗಿದ್ದಾರೆ. ಜೊತೆಗೆ ಮಿಕ್ಕ ಅಕಾಡೆಮಿಗಳ ಅಧ್ಯಕ್ಷರು ಹಾಗೂ ಸದಸ್ಯರುಗಳೂ ಸಹ ಆತಂಕಗೊಂಡಿದ್ದಾರೆ.

ಇದು ಮೂಲತಃ ಸರಕಾರಗಳು ಮಾಡುವ ಅತಿರೇಕ ಹಾಗೂ ಅಧಿಕಾರಿಗಳ ಅವಿವೇಕತನದ ಫಲವಾಗಿದೆ. ಕಾಂಗ್ರೆಸ್ ಸರಕಾರ 2013 ಮೇ ನಲ್ಲಿ ಅಸ್ತಿತ್ವಕ್ಕೆ ಬಂತು. ಜೂನ್ ತಿಂಗಳಲ್ಲಿ ಎಲ್ಲಾ ಅಕಾಡೆಮಿ ಅಧ್ಯಕ್ಷರಿಂದ ಒತ್ತಾಯ ಪೂರ್ವಕವಾಗಿ ರಾಜೀನಾಮೆ ಪಡೆಯಲಾಯಿತು. ಅಲ್ಲಿಂದ ಸರಿಯಾಗಿ ಒಂಬತ್ತು ತಿಂಗಳ ನಂತರ ಅಕಾಡೆಮಿ ಪ್ರಾಧಿಕಾರಗಳಿಗೆ ಸರಕಾರಿ ನೇಮಕಾತಿ ನಡೆಯಿತು. ಅದೂ ಚುನಾವಣೆ ಇನ್ನೇನು ಡಿಕ್ಲೇರ್ ಆಗುತ್ತೆ ಅನ್ನುವಾಗ ಅವಸರವಸರದಲ್ಲಿ ಆದೇಶ ಹೊರಡಿಸಲಾಯಿತು. ಬಹುತೇಕ ಅಕಾಡೆಮಿ ಪ್ರಾಧಿಕಾರದ ಅಧ್ಯಕ್ಷರುಗಳು ಫೆಬ್ರವರಿ 27ರಂದೇ ತಮ್ಮ ಹುದ್ದೆ ಅಲಂಕರಿಸಿದರು.

ಸರಕಾರೀ ಆದೇಶ (ಜಿಓ)
ಆದರೆ... ಬಿಜೆಪಿ ಸರಕಾರವಿದ್ದಾಗ ಆಯ್ಕೆಗೊಂಡ ಅಕಾಡೆಮಿಗಳ ಅಧ್ಯಕ್ಷರು ಹಾಗೂ ಸದಸ್ಯರ ಅಧಿಕಾರದ ಅವಧಿ ಇನ್ನೂ ಎರಡು ವರ್ಷಗಳಷ್ಟಿತ್ತು. ಆದರೂ ಸಹ ಸರಕಾರ ಬದಲಾಗುತ್ತಿದ್ದಂತೆ ಅಕಾಡೆಮಿಗಳ ಪದಾಧಿಕಾರಿಗಳನ್ನೂ ಬದಲಾಯಿಸಿದ್ದು ಅಕ್ಷಮ್ಯ. ಯಾಕೆಂದರೆ ಅಕಾಡೆಮಿ ಪ್ರಾಧಿಕಾರಗಳು ಒಂದೊಂದು ಕ್ಷೇತ್ರದ ಅಭಿವೃದ್ದಿಗಾಗಿ ಶ್ರಮಿಸುತ್ತಿದ್ದು ಅದಕ್ಕೆ ಸರಕಾರ ಅನುದಾನವನ್ನು ಒದಗಿಸುತ್ತದೆ. ಯಾವುದೇ ಕಾರಣಕ್ಕೂ ಸರಕಾರಗಳು ಅಕಾಡೆಮಿಗಳಲ್ಲಿ ರಾಜಕೀಯ ಮಾಡಬಾರದು. ಆದರೆ ತಮ್ಮ ಪಕ್ಷದ ಪರವಾಗಿರುವವರಿಗೆ ಅಧಿಕಾರಗಳನ್ನೊದಿಗಿಸಲು ಸರಕಾರಗಳು ಅಕಾಡೆಮಿಗಳನ್ನು ಬಳಸಿಕೊಳ್ಳತೊಡದ್ದೇ ಅನೈತಿಕ. ಇದರಿಂದಾಗಿ ಸರಕಾರ ಬದಲಾದ ಕೂಡಲೇ ಅಕಾಡೆಮಿ ಪ್ರಾಧಿಕಾರಗಳ ಅಧ್ಯಕ್ಷರ ರಾಜೀನಾಮೆ ಕೇಳಲಾಗುತ್ತದೆ. ಅದರಂತೆ ಕಾಂಗ್ರೆಸ್ ಸರಕಾರ ಬಂದಾಗಲೂ ಅದನ್ನೇ ಮಾಡಲಾಯಿತು. ಸರಕಾರಿ ಇಲಾಖೆಯ ಒತ್ತಡಕ್ಕೆ ಮಣಿದು ಕೆಲವು ಅಕಾಡೆಮಿಗಳ ಅಧ್ಯಕ್ಷರುಗಳು ರಾಜೀನಾಮೆ ಕೊಟ್ಟರು. ಆದರೆ ಸರಕಾರದ ಮೌಖಿಕ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಲಿಖಿತ ಆದೇಶವನ್ನು ಪ್ರಶ್ನಿಸಿ ಲಲಿತ ಕಲಾ ಅಕಾಡೆಮಿಯ ಅಧ್ಯಕ್ಷರಾಗಿದ್ದ .ಸು.ಕೃಷ್ಣಶೆಟ್ಟಿ, ಬ್ಯಾರಿ ಸಾಹಿತ್ಯ ಅಕಾಡೆಮಿಯ ರಹೀಂ ಉಚ್ಚಿಲ್ ಮತ್ತು ಯಕ್ಷಗಾನ ಬಯಲಾಟ ಅಕಾಡೆಮಿಯ ಅಧ್ಯಕ್ಷ ಡಾ.ಎಂ.ಎಲ್.ಸಾಮಗ ರವರುಗಳು ತಮ್ಮ ಅಧ್ಯಕ್ಷಗಿರಿಗೆ ರಾಜೀನಾಮೆಯನ್ನು ಕೊಡಲು ನಿರಾಕರಿಸಿದರು. ಸರಕಾರ ತನ್ನ ಪರಮಾಧಿಕಾರವನ್ನು ಬಳಸಿ ಆಯಾ ಅಕಾಡೆಮಿಗಳ ಅಧ್ಯಕ್ಷರು ಹಾಗೂ ಸದಸ್ಯರನ್ನು ಅನೂರ್ಜಿತಗೊಳಿಸಿತು. ಆಗ ಸರಕಾರದ ಸರ್ವಾಧಿಕಾರಿತನವನ್ನು ಆಕ್ಷೇಪಿಸಿ ಮೂರು ಜನ ಅಧ್ಯಕ್ಷರುಗಳು ನ್ಯಾಯಕ್ಕಾಗಿ ಆಗ್ರಹಿಸಿ ಕೋರ್ಟ ಮೆಟ್ಟಿಲು ಏರಿದರು. " ಹಿಂದೆ ಬಂದ ಯಾವುದೇ ಸರಕಾರಗಳು ಸ್ವಂತ ಬೈಲಾ ಹೊಂದಿರುವ ಯಾವುದೇ ಅಕಾಡೆಮಿಗಳನ್ನು ಅವಧಿಪೂರ್ವ ಬದಲಾಯಿಸಿಲ್ಲ. ಹೀಗಾಗಿ ಸರಕಾರವು ಅಧ್ಯಕ್ಷರ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಿದೆ" ಎಂದು ಆರೋಪಿಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು.
 
ಮೂವರ ಮನವಿಯನ್ನು ಪರಿಗಣಿಸಿದ ನ್ಯಾಯಾಲಯವು ಸರಕಾರಕ್ಕೆ ವಿವರಣೆ ಕೊಡಲು ಸೂಚಿಸಿದರೂ ಸರಕಾರದ ಕಡೆಯಿಂದ ಯಾವುದೇ ವಿವರಣೆ ದೊರೆಯಲಿಲ್ಲ. ಕೊನೆಗೆ ನ್ಯಾಯಾಲಯವು   ಮೂರೂ ಅಕಾಡೆಮಿಗೆ ಸಂಬಂಧಿಸಿದಂತೆ ಅಂತಿಮ ತೀರ್ಪು ಬರುವವರೆಗೆ ಯಥಾಸ್ಥಿತಿಯನ್ನು ಕಾಪಾಡಬೇಕು ಎಂದು ಸರಕಾರಕ್ಕೆ ಆದೇಶಿಸಿ ಮಧ್ಯಂತರ ತೀರ್ಪನ್ನು ನೀಡಿತ್ತು. ಹಾಗೂ ವಿಚಾರಣೆ ಈಗಲೂ ಮುಂದುವರೆದಿದೆ. ಹೀಗೆ ಮದ್ಯಂತರ ಆದೇಶ ನೀಡಿದ್ದಾಗ ಇನ್ನೂ ಅಕಾಡೆಮಿಗಳಿಗೆ ಯಾವುದೇ ನೇಮಕಾತಿ ಮಾಡಿರಲಿಲ್ಲ. ನ್ಯಾಯಾಲಯದ ಆದೇಶವನ್ನು ಕಾಪಾಡುವುದು ಸರಕಾರದ ಹಾಗೂ ಅಕಾಡೆಮಿಗಳನ್ನು ನೋಡಿಕೊಳ್ಳುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆದ್ಯ ಕರ್ತವ್ಯವಾಗಿದೆ. ಆದರೆ ನ್ಯಾಯಾಲಯದ ಆದೇಶವನ್ನು ನಿರ್ಲಕ್ಷಿಸಿ 2014 ಫೆಬ್ರುವರಿ 26 ರಂದು ಬೇರೆಲ್ಲಾ ಅಕಾಡೆಮಿ ಪ್ರಾಧಿಕಾರಗಳ ಜೊತೆಗೆ ವಿವಾದಿತ ಮೂರು ಅಕಾಡೆಮಿಗಳಿಗೂ ಸಹ ಅಧ್ಯಕ್ಷರು ಹಾಗೂ ಸದಸ್ಯರುಗಳನ್ನು ಆಯ್ಕೆ ಮಾಡಿ ಸರಕಾರ ಆದೇಶ ಹೊರಡಿಸಿತು. ಅದಕ್ಕೆ ಮುಖ್ಯ ಮಂತ್ರಿಗಳ ಸಹಿಯನ್ನೂ ಪಡೆಯಲಾಗಿತ್ತು. ಸಂಸ್ಕೃತಿ ಇಲಾಖೆಯ ಮಂತ್ರಿಣಿ ಉಮಾಶ್ರೀ ಒತ್ತಾಸೆಯಾಗಿ ನಿಂತಿದ್ದರು. ಹೀಗಾಗಿ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವಾಗಲೇ ಲಲಿತ ಕಲಾ ಅಕಾಡೆಮಿಗೆ ಡಾ.ಎಂ.ಎಸ್.ಮೂರ್ತಿಯವರನ್ನು, ಬ್ಯಾರಿ ಸಾಹಿತ್ಯ ಅಕಾಡೆಮಿಗೆ ಮಹಮದ್ದ ಹನೀಪ್ ರವರನ್ನು ಹಾಗೂ ಯಕ್ಷಗಾನ ಬಯಲಾಟ ಅಕಾಡೆಮಿಗೆ ಡಾ.ಬೆಳಗಲ್ ವೀರಣ್ಣನವರನ್ನು ಆಯ್ಕೆಮಾಡಿ ಅವರ ಜೊತೆಜೊತೆಗೆ ಸದಸ್ಯರುಗಳನ್ನೂ ಆಯ್ಕೆ ಮಾಡಿ ಸರಕಾರ ಅಧೀಕೃತವಾಗಿ ಆದೇಶವನ್ನು ಹೊರಡಿಸಿತು. ಆಯಾ ಅಧ್ಯಕ್ಷರುಗಳು ಹಾಗೂ ಸದಸ್ಯರುಗಳು ಅಧಿಕಾರವನ್ನೂ ವಹಿಸಿಕೊಂಡು ಅಕಾಡೆಮಿಯ ಸಭೆಗಳನ್ನೂ ನಡೆಸಿಕೊಂಡು ಸಕ್ರೀಯರಾದರು.

ಲಲಿತಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷ  ಎಂ.ಎಸ್.ಮೂರ್ತಿ

ನಡುವೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತರಾಗಿದ್ದ .ನು.ಬಳಿಗಾರ ಹಾಗೂ ಇನ್ನೊಬ್ಬ ಅಧಿಕಾರಿ ಕಾ..ಚಿಕ್ಕಣ್ಣ ನಿವೃತ್ತರಾದರು. ಇಲಾಖೆಯ ಮೇಲೆ ಲೋಕಾಯುಕ್ತ ದಾಳಿಯೂ ನಡೆದು ಎಲ್ಲಾ ಅಧಿಕಾರಿಗಳು ಕಕ್ಕಾಬಿಕ್ಕಿಯಾದರು. ಲೋಕಾಯುಕ್ತ ದಾಳಿಯಿಂದಾಗಿ ಇಲಾಖೆಯ ಆಂತರಿಕರಂಗ ಅಲ್ಲೋಲ ಕಲ್ಲೋಲ ಆಯಿತು. ಪ್ರಕ್ಷುಬ್ದ ಸನ್ನಿವೇಶದಲ್ಲಿ ನ್ಯಾಯಾಲಯದ ಮದ್ಯಂತರ ಆದೇಶ ಎಲ್ಲಾ ಅಧಿಕಾರಿಗಳಿಗೂ ಮರೆತೇ ಹೋಯಿತು. ಗೊತ್ತಿದ್ದ ಕೆಳಹಂತದ ಅಧಿಕಾರಿಗಳೂ ಸಹ ಮೌನಕ್ಕೆ ಶರಣಾದರು. ಇಲಾಖೆಯ ಒತ್ತಡ ಇಲ್ಲದ್ದರಿಂದ ಇಲಾಖೆಯ ವಕೀಲರು ನ್ಯಾಯಾಲಯದಲ್ಲಿ ಕಾಲಹರಣ ಮಾಡತೊಡಗಿದರು. ಇಲಾಖೆಯ ಮಂತ್ರಿಣಿಗೆ ಯಾವುದರ ಬಗ್ಗೆ ಅರಿವಿರಲಿಲ್ಲ. ಸಿಎಂ ಸಾಹೇಬರಂತೂ ತಮ್ಮದೇ ಚುನಾವಣಾ ರಾಜಕೀಯದಲ್ಲಿ ಒತ್ತಡದಲ್ಲಿದ್ದರು. ಹೀಗೆ ಇದ್ದರೆ ಎಲ್ಲವೂ ಸುಸೂತ್ರವಾಗಿರುತ್ತಿತ್ತು. ಆದರೆ ಯಾವಾಗ ಕೋರ್ಟಿಗೆ ಹೋದ ಮಾಜಿ ಅಧ್ಯಕ್ಷರುಗಳ ವಕೀಲರುಗಳು ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗಿದೆ, ಇದು ಕಂಡಮ್ಟ ಆಪ್ ಕೋರ್ಟ ಎಂದು ನ್ಯಾಯಾಧೀಶರಿಗೆ ಸರಕಾರದ ವಿರುದ್ಧ ಮನವಿ ಮಾಡಿದರೋ ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಬೆಚ್ಚಿಬಿದ್ದರು. ಮುಂದಿನ ವಾರ ನ್ಯಾಯಾಲಯ ನಿಂದನೆ ಕುರಿತು ವಿಚಾರಣೆ ಇದೆ. ಹೀಗಾಗಿ ಇನ್ನು ಸುಮ್ಮನಿದ್ದರೆ ಆರೆಸ್ಟ್ ವಾರೆಂಟ್ ಗ್ಯಾರಂಟಿ ಎಂದು ಗೊತ್ತಾಗಿದ್ದೇ ತಡ ಇಲಾಖೆಯ ಅಧಿಕಾರಿಗಳು ವಿಧಾನಸೌಧದಲ್ಲಿರುವ ಇಲಾಖೆ ಕಾರ್ಯದರ್ಶಿಗಳ ಚೇಂಬರಿಗೆ ದೌಡಾಯಿಸಿದರು. ಮಂತ್ರಿಣಿ ಉಮಾಶ್ರೀ ಕಂಗಾಲಾದರು. ರಾತ್ರೋ ರಾತ್ರೀ ಜಿಓ ಅಂದರೆ ಗೌವರ್ನಮೆಂಟ್ ಆರ್ಡರ್ ತಯಾರಿಸಿ ನ್ಯಾಯಾಲಯದ ಮೆಟ್ಟಲೇರಿದ ಮೂರು ಅಕಾಡೆಮಿಗಳ ಹಾಲಿ ಅಧ್ಯಕ್ಷರು ಹಾಗೂ ಸದಸ್ಯರ ಆಯ್ಕೆಯನ್ನು ಅಧೀಕೃತವಾಗಿ ರದ್ದು ಪಡಿಸಿದ ಆದೇಶವನ್ನು ಜೂನ್ 19ರಂದು ಹೊರಡಿಸಿದರು. ಅಂಡಿಗೆ ಬೆಂಕಿ ಹತ್ತಿದಾಗ ಭಾವಿ ತೋಡಲು ಶುರು ಮಾಡಿದರು.

ಕೇವಲ ಮೂರೇ ಅಕಾಡೆಮಿಗಳಲ್ಲ, ಉಳಿದೆಲ್ಲಾ ಅಕಾಡೆಮಿಗಳ ಅಧ್ಯಕ್ಷರು ಹಾಗೂ ಸದಸ್ಯರುಗಳಿಗೂ ಈಗ ದಿಗಿಲು ಶುರುವಾಗಿದೆ. ಯಾಕೆಂದರೆ ಮೊದಲೇ ಅಧಿಕಾರಾವಧಿ ಮುಗಿದಿದ್ದ ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಸಾಹಿತ್ಯ ಅಕಾಡೆಮಿ ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರಗಳನ್ನು ಹೊರತು ಪಡಿಸಿ ಮಿಕ್ಕೆಲ್ಲಾ ಅಕಾಡೆಮಿಗಳ ಹೊಸ ಆಯ್ಕೆ ಈಗ ಪ್ರಶ್ನಾರ್ಹವಾಗಿದೆ. ಮಿಕ್ಕೆಲ್ಲಾ ಅಕಾಡೆಮಿಗಳ ಅಧಿಕಾರವಧಿ ಇನ್ನೂ ಎರಡು ವರ್ಷಗಳಷ್ಟು ಇರುವಾಗಲೇ ಇಲಾಖೆ ಅಧಿಕೃತ ಮೆಮೋ ಕೊಟ್ಟು ಬಲವಂತವಾಗಿ ರಾಜೀನಾಮೆ ಪಡೆದಿದೆ. ಈಗ ಆಯಾ ಅಕಾಡೆಮಿಯ ಅಧ್ಯಕ್ಷರುಗಳು ನಮಗೆ ಉತ್ತಾಯ ಪೂರ್ವಕವಾಗಿ ರಾಜೀನಾಮೆ ಪಡೆದಿದ್ದಾರೆ ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರೆ ಮಿಕ್ಕೆಲ್ಲಾ ಅಕಾಡೆಮಿಗಳ ಅಧ್ಯಕ್ಷರು ಮತ್ತು ಸದಸ್ಯರುಗಳ ಆಯ್ಕೆಯೂ ಸಹ ರದ್ದು ಮಾಡ ಬೇಕಾಗುತ್ತದೆ. ಈಗಾಗಲೇ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷೆ ಮಾಲತಿ ಸುಧೀರರು ಲಾಯರ್ ಜೊತೆಗೆ   ಕುರಿತು ಮಾತುಕತೆ ನಡೆಸಿದ್ದಾರೆ. ಅವರು ತಮ್ಮ ಅಧಿಕಾರದ ಹಕ್ಕಿಗಾಗಿ ನ್ಯಾಯಾಲಯದಲ್ಲಿ ಹೋರಾಟಕ್ಕೆ ಇಳಿದರೆ ರಾಜಕೀಯ ಲಾಭಿಮಾಡಿ ಅಲ್ಪಸಂಖ್ಯಾತ ಎನ್ನುವ ಕಾರಣಕ್ಕೆ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಶೇಖ ಮಾಸ್ತರ್ ಅಧ್ಯಕ್ಷಗಿರಿ ಶೇಕ್ ಆಗುವುದರಲ್ಲಿ ಸಂದೇಹವಿಲ್ಲ. ಲಾಬಿಗಳ ಮೂಲಕ ಹಾಗೂ ಜಾತಿರಾಜಕಾರಣದ ಮೂಲಕ ನಾಟಕ ಅಕಾಡೆಮಿಯ ಸದಸ್ಯರಾದ ಬಹುತೇಕರು ಮನೆಗೆ ಹೋಗುವುದನ್ನು ತಪ್ಪಿಸಲು ಅವರವರ ರಂಗರಾಜಕೀಯ ಪಿತಾಮಹರಿಂದಲೂ ಸಾಧ್ಯವಿಲ್ಲ.

ಡಾ.ಬೆಳಗಲ್ ವೀರಣ್ಣ  
ಸರಕಾರ ಹಾಗೂ ಸರಕಾರಿ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ಮೊದಲಿದ್ದ ಅಧ್ಯಕ್ಷರುಗಳಿಗೂ ಅನ್ಯಾಯವಾಯಿತು. ಹಾಗೂ ಈಗ ಆಯ್ಕೆಗೊಂಡ ಅಧ್ಯಕ್ಷರು ಹಾಗೂ ಸದಸ್ಯರನ್ನು ಸಕಾರಣಗಳಿಲ್ಲದೇ ಮನೆಗೆ ಕಳುಹಿಸಿ ಅವಮಾನಿಸಲಾಯಿತು. ಈಗ ತಾನೆ ನಾಲ್ಕು ತಿಂಗಳ ಹಿಂದೆ ಅಧ್ಯಕ್ಷರಾಗಿ ಹಾಗೂ ಸದಸ್ಯರುಗಳಾಗಿ ಆಯ್ಕೆಗೊಂಡು ತಮ್ಮ ಕ್ಷೇತ್ರಗಳಲ್ಲಿ ಏನೆಲ್ಲಾ ಯೋಜನೆಗಳನ್ನು ಹಾಕಿಕೊಳ್ಳಬೇಕು ಎನ್ನುವ ಕುರಿತು ನೀಲಿನಕ್ಷೆಗಳನ್ನು ತಯಾರಿಸಿಕೊಂಡು ಕಾರ್ಯಪ್ರವೃತ್ತರಾಗುತ್ತಿದ್ದ ಮೂರು ಅಕಾಡೆಮಿಗಳ ಅಧ್ಯಕ್ಷರುಗಳಿಗಂತೂ ತುಂಬಾ ನಿರಾಸೆಯಾಗಿದೆ. ಅವರುಗಳ ಅಧಿಕಾರ ಸಮಾಪ್ತಿಯಾಗಿದೆ. ಇನ್ನು ನ್ಯಾಯಾಲಯದ ಅಂತಿಮ ಆದೇಶ ಬರುವವರೆಗೂ ಅಕಾಡೆಮಿಗಳು ವಾರಸುದಾರರಿಲ್ಲದೇ ಸರಕಾರಿ ಅಧಿಕಾರಿಗಳ ಸಂಕುಚಿತ ವ್ಯಾಪ್ತಿಗೆ ಒಳಪಡಬೇಕಾಗಿದೆ. ನ್ಯಾಯಾಲಯದ ತೀರ್ಪು ಮಾಜಿ ಅಧ್ಯಕ್ಷರುಗಳ ಪರವಾಗಿ ಬಂದರೆ ಅನಿವಾರ್ಯವಾಗಿ ಅವರ ಉಳಿದ ಎರಡು ವರ್ಷಗಳಿಗೆ ಅವರನ್ನೇ ನಿಯಮಿಸಬೇಕಾಗುತ್ತದೆ. ಇದು ಆಗುವುದು ಉತ್ತಮ. ಯಾಕೆಂದರೆ ವಿವೇಚನಾ ರಹಿತವಾಗಿ ಅಕಾಡೆಮಿಗಳಲ್ಲಿ ರಾಜಕಾರಣ ಮಾಡುವ ಸರಕಾರಗಳಿಗೆ ಹಾಗೂ ಸರಕಾರಿ ಇಲಾಖೆಗೆ ಇದೊಂದು ಪಾಠವಾಗಬೇಕಿದೆ. ಮುಂದೆ ಬರುವ ಸರಕಾರಗಳು ಇಷ್ಟ ಬಂದ ಹಾಗೆ ಅಕಾಡೆಮಿ ಪ್ರಾಧಿಕಾರಗಳನ್ನು ತಮ್ಮ ಅಂಕೆಯಲ್ಲಿಟ್ಟು ಆಳುವುದನ್ನು ತಪ್ಪಿಸಬೇಕಿದೆ.

ವಿವಾದಿತ ಮೂರು ಅಕಾಡೆಮಿಗಳ ಮಾಜಿ ಅಧ್ಯಕ್ಷರುಗಳು ಬೆಳವಣಿಗೆಯಿಂದ ಒಂದಿಷ್ಟು ಗೆಲುವನ್ನು ಪಡೆದಿದ್ದಾರೆ. ಹಾಲಿ ಅಧ್ಯಕ್ಷರುಗಳು ಹಾಗೂ ಸದಸ್ಯರುಗಳು ಅಧಿಕಾರ ಕೈತಪ್ಪಿದ್ದಕ್ಕೆ ಅಪಾರ ನಿರಾಶೆಯನ್ನು ಅನುಭವಿಸುತ್ತಿದ್ದಾರೆ. ಕಾಂಗ್ರೆಸ್ ಸರಕಾರಕ್ಕೆ ತೀವ್ರ ಮುಖಭಂಗವಾಗಿದೆ. ಆದರೆ ಎಲ್ಲಾ ಅವಗಡಗಳಿಗೆ ಕಾರಣೀಕರ್ತರಾದ ದಪ್ಪ ಚರ್ಮದ ಅಧಿಕಾರಶಾಹಿ ಮಾತ್ರ ಇದೆಲ್ಲಾ ಮಾಮೂಲು ಎನ್ನುವಂತೆ ನಿರ್ಲಕ್ಷದೋರಣೆ ತೋರುತ್ತಲೆ ಇದೆ. ಒಂದು ಮಾತ್ರ ಸತ್ಯ, ಸರಕಾರ ಬದಲಾಗುತ್ತದೆ. ಅಕಾಡೆಮಿಗಳ ಅಧ್ಯಕ್ಷ ಸದಸ್ಯರುಗಳು ಬದಲಾಗುತ್ತಾರೆ ಆದರೆ ಬ್ಯೂರೋಕ್ರಾಟ್ಸ್ಗಳು ಮಾತ್ರ ಒಂದಿಲ್ಲಾ ಒಂದು ಇಲಾಖೆಯಲ್ಲಿ ಆಯಕಟ್ಟಿನ ಜಾಗದಲ್ಲಿ ಕೂತು ನಿವೃತ್ತರಾಗುವವರೆಗೂ ಖಾಯಂ ಆಗಿ ವಿಜ್ರಂಬಿಸುತ್ತವೆ. ಇದು ದೇಶದ ದೌರ್ಬಾಗ್ಯವಾಗಿದೆ. ಜನರನ್ನು ಆಳುವವರು ಯೋಜನೆಗಳನ್ನು ರೂಪಿಸುವವರು ಸರಕಾರದವರು ಹಾಗೂ ರಾಜಕಾರಣಿಗಳು ಎಂದು ಎಲ್ಲರೂ ತಿಳಿದುಕೊಂಡಿದ್ದಾರೆ. ಆದರೆ ನಿಜಕ್ಕೂ ಇಡೀ ರಾಜ್ಯವನ್ನು ಅಷ್ಟೇ ಯಾಕೆ ಇಡೀ ದೇಶವನ್ನೇ ನಿಯಂತ್ರಿಸುವವರು ಅಧಿಕಾರಶಾಹಿಗಳೇ ಎಂಬುದು ನಿರ್ವಿವಾದ.

ಯಕ್ಷಗಾನ ಬಯಲಾಟ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ.ಎಂ.ಎಲ್.ಸಾಮಗ
  ಸರಕಾರಕ್ಕೆ ವಿವೇಚನೆ ಎನ್ನುವುದು ಇದ್ದಲ್ಲಿ ಮೊದಲು ನ್ಯಾಯಾಲಯದ ಆದೇಶವನ್ನು ಮಂತ್ರಿಗಳ ಗಮನಕ್ಕೆ ತರದೇ ಹೊಸ ಅಧ್ಯಕ್ಷರುಗಳನ್ನು ಆಯ್ಕೆ ಮಾಡಲು ಕಾರಣೀಕರ್ತರಾದ ಎಲ್ಲಾ ಅಧಿಕಾರಿಗಳನ್ನು ಮೊದಲು ಕರ್ತವ್ಯ ನಿರ್ಲಕ್ಷ ಆರೋಪದ ಮೇಲೆ ಖಾಯಂ ಆಗಿ ಮನೆಗೆ ಕಳುಹಿಸಬೇಕು. ಹಾಗೆಯೇ ಯಾವುದೇ ಪಕ್ಷ ಇರಲಿ, ಯಾವುದೇ ಸರಕಾರ ಬರಲಿ ಅಕಾಡೆಮಿ ಹಾಗೂ ಪ್ರಾಧಿಕಾರದ ಅಧಿಕಾರ ವ್ಯಾಪ್ತಿ ಹಾಗೂ ಅಧ್ಯಕ್ಷರು ಹಾಗೂ ಸದಸ್ಯರುಗಳ ಆಯ್ಕೆ  ವಿಚಾರಗಳಲ್ಲಿ ಹಸ್ತಕ್ಷೇಪ ಮಾಡಲೇ ಬಾರದು. ಹೀಗೊಂದು ಪಾಠವನ್ನು ನ್ಯಾಯಾಲಯದ ಅಂತಿಮ ಆದೇಶ ಕಲಿಸಬೇಕಿದೆ. ಈಗಾಗಲೇ ರಾಜಕೀಯ ಪ್ರೇರಿತ, ಲಾಭಿ ಆಧಾರಿತ ಅಕಾಡೆಮಿಯ ಅಧ್ಯಕ್ಷರು ಹಾಗೂ ಸದಸ್ಯರುಗಳ ಆಯ್ಕೆಯಿಂದಾಗಿ ಬಹುತೇಕ ಅಕಾಡೆಮಿಗಳು ನಿಷ್ಕ್ರೀಯಗೊಂಡಿವೆಕಲೆ ಸಾಹಿತ್ಯ ಸಂಸ್ಕೃತಿಯ ಅಭಿವೃದ್ದಿಗಾಗಿ ಅಸ್ತಿತ್ವಕ್ಕೆ ಬಂದ ಅಕಾಡೆಮಿಗಳಿಂದ ನಿರೀಕ್ಷಿಸಿದಷ್ಟು ಕೆಲಸಗಳು ಆಗುತ್ತಿಲ್ಲ. ಬರುಬರುತ್ತಾ ಜನರಿಗೇ ಅಕಾಡೆಮಿಗಳು ಭಾರವಾಗುತ್ತಿವೆ. ಅನಗತ್ಯವಾಗಿ ಜನರ ಹಣವನ್ನು ಕಬಳಿಸುತ್ತಿವೆ. ಸರಕಾರ ಸಾಕುವ ಬಿಳಿಯಾನೆಗಳಾಗಿ ಬದಲಾಗುತ್ತಿವೆ. ಇಂತಹ ಅಕಾಡೆಮಿಗಳು ಬೇಕಾ? ರಾಜಕೀಯ ಪ್ರೇರಿತ ಅಧ್ಯಕ್ಷರುಗಳು ಹಾಗೂ ಸದಸರುಗಳು ಅಗತ್ಯವಿದೆಯಾ? ಅಕಾಡೆಮಿಗಳನ್ನು ನಿಷ್ಕ್ರೀಯಗೊಳಿಸುವ ಅಧಿಕಾರಿಶಾಹಿಗಳ ಹಿಡಿತದಿಂದ ಅಕಾಡೆಮಿಗಳಿಗೆ ಮುಕ್ತಿಇಲ್ಲವಾ? ಅಕಾಡೆಮಿಗಳನ್ನು ಯಾಕೆ ಸ್ವಾಯತ್ತಗೊಳಿಸಬಾರದು? ಎನ್ನುವ ಪ್ರಶ್ನೆಗಳನ್ನು ಕನ್ನಡದ ಪ್ರಜ್ಞಾವಂತರು ಕೇಳುತ್ತಿದ್ದಾರೆ. ಉತ್ತರಿಸಬೇಕಾದವರು  ಪಂಚೇಂದ್ರಿಯಗಳನ್ನು  ನಿಷ್ಕ್ರೀಯ ಗೊಳಿಸಿಕೊಂಡಿದ್ದಾರೆ.

                             -ಶಶಿಕಾಂತ ಯಡಹಳ್ಳಿ


"ಸರಕಾರ ಹಾಗೂ ಸಂಸ್ಕೃತಿ ಇಲಾಖೆ ಒಂದರ ನಂತರ ಒಂದು ತಪ್ಪು ಮಾಡುತ್ತಲೇ ಇದೆಮೊದಲು ನಮ್ಮನ್ನು  ಅಕಾರಣವಾಗಿ ಅಧ್ಯಕ್ಷತೆಯಿಂದ  ಪದಚ್ಯುತಿಗೊಳಿಸಿ ತಪ್ಪುಮಾಡಿತು. ವಿವಾದ ನ್ಯಾಯಾಲಯದಲ್ಲಿದ್ದರೂ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಿ ಇನ್ನೊಂದು ತಪ್ಪು ಮಾಡಿತು. ಈಗ ಮತ್ತೆ ಆಯ್ಕೆ ಮಾಡಿದ ಹೊಸ ಅಧ್ಯಕ್ಷರುಗಳ ನೇಮಕ ರದ್ದುಗೊಳಿಸಿ ಮತ್ತೊಂದು ತಪ್ಪು ಮಾಡಿದೆ."
-ಲಲಿತ ಕಲಾ ಅಕಾಡೆಮಿಯ ಪದಚ್ಯುತ ಅಧ್ಯಕ್ಷ  ಚಿ.ಸು.ಕೃಷ್ಣಶೆಟ್ಟಿ.        

               



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ