ಗುರುವಾರ, ಡಿಸೆಂಬರ್ 25, 2014

ಬೆಳಕಿನ ಚಿತ್ತಾರದಲ್ಲಿ “ಮ್ಯಾಕ್‌ಬೆತ್” ಮಾಯಾಲೋಕ





ಶೇಕ್ಸಪೀಯರ್ ದುರಂತ ನಾಟಕಗಳು ಮನುಷ್ಯ ದೌರ್ಬಲ್ಯಗಳನ್ನು ಅನಾವರಣಗೊಳಿಸುವಂತಹ ಸಾರ್ವಕಾಲಿಕ  ನಾಟಕಗಳಾಗಿವೆ. ಕಳೆದ ನಾಲ್ಕು ಶತಮಾನಗಳಿಂದ ಶೇಕ್ಸಪೀಯರ್ ನಾಟಕಗಳು ಜಗತ್ತಿನಾದ್ಯಂತ ಹಲವಾರು ಭಾಷೆಗಳಲ್ಲಿ ಅನುವಾದಗೊಂಡು ಪ್ರದರ್ಶನಗೊಳ್ಳುತ್ತಲೇ ಬಂದಿವೆ. ನಿರ್ದೇಶಕರ ದೃಷ್ಟಿಕೋನಕ್ಕನುಗುಣವಾಗಿ ಮರುಹುಟ್ಟನ್ನು ಪಡೆಯುವ ಗುಣವಿಶೇಷಗಳಿಂದಾಗಿ ಶೇಕ್ಸಪೀಯರ್ ನಾಟಕಗಳು ಜೀವಂತವಾಗಿವೆ. ಭೂತಕಾಲದ ಚೌಕಟ್ಟಿನಲ್ಲಿ ವರ್ತಮಾನದ ತಲ್ಲಣಗಳನ್ನು ಸೃಜಿಸಬಹುದಾದ ಸಾಧ್ಯತೆಗಳಿರುವುದರಿಂದ ಶೇಕ್ಸಪೀಯರ್ ನಾಟಕಗಳು ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿವೆ. ಶೇಕ್ಸಪೀಯರ್ ದುರಂತ ನಾಟಕಗಳಲ್ಲೇ ಪ್ರಸಿದ್ದವಾಗಿರುವುದು ಮ್ಯಾಕ್ಬೆತ್. ನಾಟಕದ ಪಠ್ಯದ ಮೇಲೆ ನಾನಾ ರೀತಿಯ ಪ್ರಯೋಗಗಳು ಕಾಲಕಾಲಕ್ಕೆ ನಡೆಯುತ್ತಲೇ ಬಂದಿವೆ. ಹಲವಾರು ಶೈಲಿಗಳಲ್ಲಿ ನಾಟಕ ಪ್ರದರ್ಶನಗೊಂಡಿದೆ. ಪ್ರತಿಯೊಬ್ಬ ಕ್ರಿಯಾಶೀಲ ನಿರ್ದೇಶಕನಿಗೆ ಹಾಗೂ ಅಭಿನಯಿಸಬಯಸುವ ಕಲಾವಿದನಿಗೆ ಸವಾಲು ಒಡ್ಡುವ ಮ್ಯಾಕ್ಬೆತ್ ಅಷ್ಟು ಸುಲಭಕ್ಕೆ ಯಾರಿಗೂ ದಕ್ಕುವಂತಹುದಲ್ಲ. ಅವರವರ ಭಾವಭಕುತಿಗೆ ಸಿಕ್ಕಷ್ಟು ಪಡೆಯಬೇಕು, ಪಡೆದಷ್ಟು ಅನಾವರಣಗೊಳಿಸಬೇಕು. ಇಂತಹ ಒಂದು ವಿಶಿಷ್ಟ ಪ್ರಯತ್ನವನ್ನು ದೆಹಲಿ ರಾಷ್ಟ್ರೀಯ ನಾಟಕ ಶಾಲೆಯ ಛೇರಮನ್ ರತನ್ ಥೀಯಮ್ರವರು ಪವಾಡಸದೃಶ ರೀತಿಯಲ್ಲಿ ಮಾಡಿ ತೋರಿಸಿದ್ದಾರೆ.

ರಾಷ್ಟ್ರೀಯ ನಾಟಕ ಶಾಲೆ (ಎನ್.ಎಸ್.ಡಿ)ಯು ಡಿಸೆಂಬರ್ 21 ರಿಂದ 25 ರವರೆಗೆ ಆಯೋಜಿಸಿರುವ ಐದು ದಿನಗಳ ಪೂರ್ವ-ಉತ್ತರ ರಂಗೋತ್ಸವದ ಮೊದಲ ದಿನದಂದು ರತನ್ ಥೀಯಮ್ರವರು ನಿರ್ದೇಶಿಸಿದ ಶೇಕ್ಸಪೀಯರ್ ಮ್ಯಾಕ್ಬೆತ್ ನಾಟಕವು ಬೆಂಗಳೂರಿನ ಗುರುನಾನಕ ಭವನದಲ್ಲಿ ಪ್ರದರ್ಶನಗೊಂಡು ನೋಡುಗರಿಗೆ ಮಾಯಾಲೋಕವೊಂದರ ದರ್ಶನ ಮಾಡಿಸಿತು. ಮಣಿಪುರಿ ಭಾಷೆಯ ನಾಟಕವನ್ನು ಇಂಪಾಲದ ಕೋರಸ್ ರೆಪರ್ಟರಿ ಥೆಯಟರ್ ಕಲಾವಿದರು ಅಭಿನಯಸಿದರು.



ಮ್ಯಾಕ್ಬೆತ್ ನಾಟಕವು ಅಧಿಕಾರದಾಹ ಹಾಗೂ ಅದಕ್ಕಾಗಿ ಹಿಡಿಯುವ ಹಿಂಸಾಮಾರ್ಗ ಮತ್ತು ಅದರಿಂದಾಗುವ ಸರ್ವನಾಶವನ್ನು ದೃಶ್ಯರೂಪದಲ್ಲಿ ಹೇಳುತ್ತದೆ. ಮ್ಯಾಕ್ಬೆತ್ ನಾಟಕದಲ್ಲಿ ಮೂವರು ಮಾಯಗಾತಿಯರು ಸೇನಾಧಿಪತಿ ಮ್ಯಾಕ್ಬೆತ್ಗೆ ರಾಜನಾಗುತ್ತೀ ಎಂದು ಭವಿಷ್ಯ  ನುಡಿಯುತ್ತಾರೆ. ಹೆಂಡತಿ ಲೇಡಿ ಮ್ಯಾಕ್ಬೆತ್ ಒತ್ತಾಸೆಯಂತೆ ರಾಜನನ್ನು ಕೊಲೆ ಮಾಡುವ ಮ್ಯಾಕ್ಬೆತ್ ತದನಂತರ ಪಶ್ಚಾತ್ತಾಪದಿಂದ  ಹುಚ್ಚನಂತಾಗುತ್ತಾನೆ. ಲೇಡಿ ಮ್ಯಾಕ್ಬೆತ್ ಅತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಕೊನೆಗೆ ಮ್ಯಾಕ್ಡಫ್ನಿಂದ ಮ್ಯಾಕ್ಬೆತ್ ಹತ್ಯೆಯಾಗುತ್ತದೆ. ಇಲ್ಲಿಗೆ ಹಿಂಸೆಗೆ ಹಿಂಸೆ- ರಕ್ತಕ್ಕೆ ರಕ್ತ ಎನ್ನುವ ಆಶಯದ ಮ್ಯಾಕ್ಬೆತ್ ಅಧಿಕಾರದಾಹದ ನಾಟಕ ಅಂತ್ಯವಾಗುತ್ತದೆ. ಆದರೆ ರಥನ್ ಥೀಯಮ್ರವರು ತಮ್ಮ ನಾಟಕದಲ್ಲಿ ಮಾಯಗಾತಿಯರನ್ನು ಮಾಯಗಾತಿಯರನ್ನಾಗಿ ಬಳಸದೇ ರೋಗಾಣು ರೂಪದಲ್ಲಿ ಸೃಷ್ಟಿಸಿ ಹೊಸ ಹೊಳವೊಂದನ್ನು ಕೊಟ್ಟಿದ್ದಾರೆ. ಹಿಂಸೆ ರಕ್ತಪಾತ ಎನ್ನುವುದೊಂದು ಜಾಗತಿಕ ವೈರಸ್ ಆಗಿದ್ದು ಅದು ಇಂದು ಜಗದಗಲ ಹಬ್ಬಿನಿಂತಿದೆ. ಅಧಿಕಾರದಾಹಕ್ಕಾಗಿ ಆತಂಕವಾದ ಭಯೋತ್ಪಾದನೆ ಎನ್ನುವುದು ವಿಶ್ವವ್ಯಾಪಿಯಾಗುತ್ತಿದೆ. ಹಿನ್ನೆಲೆಯಲ್ಲಿ ಮ್ಯಾಕ್ಬೆತ್ನನ್ನು ಪರಿಭಾವಿಸಿಕೊಂಡ ನಿರ್ದೇಶಕರು  ವಿಶಿಷ್ಟ ರೂಪದಲ್ಲಿ ನಾಟಕವನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಹಿಂಸೆಯನ್ನು ಪ್ರಚೋದಿಸುವ ವೈರಸ್ಗಳನ್ನು ಸಾಂಕೇತಿಕವಾಗಿ ಪಾತ್ರವಾಗಿಸುವ ಮೂಲಕ ನಾಟಕ ಆರಂಭಗೊಂಡರೆ, ಕೊಟ್ಟಕೊನೆಗೆ ಹಿಂಸೆಯಿಂದಾದ ರಕ್ತಪಾತವನ್ನು ಗೂಡಿಸುವ ಮೂಲಕ ಹಿಂಸೆಯನ್ನು ಕೊನೆಗಾಣಿಸಬೇಕಾಗಿದೆ ಎನ್ನುವ ಸಾರ್ವಕಾಲಿಕ ಸದಾಶಯವನ್ನು ನಾಟಕ ಹೇಳುತ್ತದೆ.

ಹಿಂಸೆಗೆ ಕಾರಣ ಪರಿಣಾಮ ಹಾಗೂ ಪರಿಹಾರಗಳನ್ನು ಸಾಂಕೇತಿಕವಾಗಿ ಹೇಳುವ  ಥೀಯಮ್ರವರ ಮ್ಯಾಕ್ಬೆತ್  ನಾಟಕದ ಒಂದೇ ಒಂದು ಶಬ್ದ ಕೂಡಾ ಕನ್ನಡ ಪ್ರೇಕ್ಷಕರಿಗೆ ಅರ್ಥವಾಗುವುದಿಲ್ಲ. ಇಡೀ ನಾಟಕ ಮಣಿಪುರಿ ಭಾಷೆಯಲ್ಲಿದೆ. ಆದರೆ ಮ್ಯಾಕ್ಬೆತ್ ನಾಟಕದ ಕುರಿತು ಪೂರ್ವಾನುಭವ ಇದ್ದವರು ಭಾಷೆಯ ಹಂಗಿಲ್ಲದೇ ನಾಟಕವನ್ನು ಅರಿಯಲು ಪ್ರಯತ್ನಿಸಬಹುದಾಗಿದೆ. ಹಾಗೆ ಅದೆಷ್ಟೇ ಪ್ರಯತ್ನ ಪಟ್ಟರೂ ಸಂಕೇತಗಳನ್ನು ಡಿಕೋಡ್ ಮಾಡಿ ಅರ್ಥೈಸಿಕೊಳ್ಳಬೇಕಾದ ಬೌದ್ದಿಕ ಪಾಂಡಿತ್ಯ ಪ್ರೇಕ್ಷಕರಿಗಿರಬೇಕಾಗಿದೆ.

ನಾಟಕ ನಟರ ಮಾಧ್ಯಮ ಎಂದು ನಂಬಿಕೊಂಡಿದ್ದವರಿಗೆ ನಾಟಕ ಆಘಾತವನ್ನು ಕೊಡುತ್ತದೆ. ಯಾಕೆಂದರೆ ನಾಟಕದಾದ್ಯಂತ ಎಲ್ಲಿ ನೋಡಿದರಲ್ಲಿ ನಿರ್ದೇಶಕನ ಬೌದ್ದಿಕ ಕಸರತ್ತು ಎದ್ದು ಕಾಣುತ್ತದೆ. ನಟರೆನ್ನುವವರು ಇಲ್ಲಿ ಕೇವಲ ಪರಿಕರಗಳಾಗಿ ಬೊಂಬೆಗಳ ರೀತಿಯಲ್ಲಿ ಬಳಕೆಗೊಂಡಿದ್ದಾರೆ. ಅಭಿನಯ ಮಾಧ್ಯಮದ ಮೂಲಕ ವಸ್ತು ವಿಷಯವೊಂದನ್ನು ಸಂಹವನ ಮಾಡುವ ರಂಗಭೂಮಿಯ ಪರಿಕಲ್ಪನೆ ನಾಟಕದಲ್ಲಿ ಬದಲಾವಣೆಯಾಗಿದೆ. ರಂಗತಂತ್ರಗಳು ಹಾಗೂ ಸಂಕೇತಗಳು ನಾಟಕದಾದ್ಯಂತ ವಿಜ್ರಂಬಿಸಿವೆ. ಇಡೀ ನಾಟಕ ಒಂದು ದೃಶ್ಯಕಾವ್ಯೋಪಾದಿಯಲ್ಲಿ ಮೂಡಿಬಂದಿದೆಯಾದರೂ ಯಾವುದೂ ಅರ್ಥವಾಗುತ್ತಿಲ್ಲ. ಸುಂದರವಾದ ಮಾಡರ್ನ ಆರ್ಟ ಪೇಂಟಿಂಗ್ ನೋಡಿದ ಅನುಭವವನ್ನು ನಾಟಕ ಕೊಡುತ್ತದಾದರೂ ಅದರಾಳ ಸುಲಭಕ್ಕೆ ದಕ್ಕುವುದಿಲ್ಲ. ಮನಸ್ಸಿಗೆ ಮುದ ಕೊಡುತ್ತದಾದರೂ ಮೆದುಳಿನ ಲೆಕ್ಕಾಚಾರಕ್ಕೆ ಸಿಕ್ಕುತ್ತಿಲ್ಲ. ನಿರ್ದೇಶಕ ಇಡೀ ನಾಟಕವನ್ನು ಯಾವ ಪರಿಯಲ್ಲಿ ಆವರಿಸಿಕೊಂಡಿದ್ದಾರೆಂದರೆ ರಂಗದಂಗಳದಲ್ಲಿ ಮಾಯಾಲೋಕವನ್ನೇ ಸೃಷ್ಟಿಸಿದ್ದಾರೆ. ತನ್ನ ಬೌದ್ಧಿಕ ಪ್ರತಿಭೆಯನ್ನು ಅನೂಹ್ಯ ರೀತಿಯಲ್ಲಿ ಅನಾವರಣಗೊಳಿಸಿದ್ದಾರೆ. ಆದರೆ ನಾಟಕದ ಅರ್ಥವನ್ನು, ತರ್ಕಗಳನ್ನು, ಉದ್ದೇಶವನ್ನು ಕಡಿತಗೊಳಿಸಿ ತಾನು ಕಂಡುಕೊಂಡ ಆಶಯವನ್ನು ಅಭಿವ್ಯಕ್ತಿಗೊಳಿಸುವಲ್ಲಿ ಸಫಲರಾಗಿದ್ದಾರೆ.

ನಾಟಕ ಅರ್ಥವಾಗದಿದ್ದರೇನಾಯಿತು ನೋಡಿಸಿಕೊಂಡು ಹೋಗುತ್ತದೆ. ಬುದ್ದಿಗೆ ನಿಲುಕದಿದ್ದರೇನಾಯಿತು ಭಾವನೆಗಳಿಗೆ ಸ್ಪಂದಿಸುತ್ತದೆ. ಬೆಳಕು ಹಾಗೂ ಸಂಗೀತ ಸಂಯೋಜನೆಗಳು ಇಡೀ ನಾಟಕದಲ್ಲಿ ಮಾಂತ್ರಿಕತೆಯನ್ನು ಸೃಷ್ಟಿಸಿವೆ. ನಾಟಕ ಪೂರ್ತಿ ಕತ್ತಲೆಯಲ್ಲೇ ನಡೆಯುತ್ತದೇನೋ ಎನ್ನುವ ರೀತಿಯಲ್ಲಿ ದೃಶ್ಯಗಳು ಚಿತ್ರಿತವಾಗಿವೆ. ಹೆಚ್ಚು ಕತ್ತಲೆ ಕಡಿಮೆ ಬೆಳಕು ಬಳಸಿ ನೋಡುಗರಲ್ಲಿ ಮೂಡನ್ನು  ಸೃಷ್ಟಿಸಲಾಗಿದೆ. ಹಿಂದಿನ ಪರದೆ, ನಟರ ಕಾಸ್ಟೂಮ್ಸಗಳು, ರಂಗಪರಿಕರಗಳು ಎಲ್ಲವೂ ಕಪ್ಪು ಬಣ್ಣದವೇ. ಕಪ್ಪು ಬಿಳುಪು ದೃಶ್ಯಗಳಲ್ಲಿ ನಟರ ಚರ್ಮದ ಬಣ್ಣ ಹಾಗೂ ಒಂದಿಷ್ಟು ಆಭರಣಗಳು ಮಾತ್ರ ವರ್ಣದಲ್ಲಿ ಕಾಣುತ್ತದೆ. ಹಿಂಸೆ ರಕ್ತಪಾತ ಕೊಲೆಗಳನ್ನು ಮಾತ್ರ ಕೆಂಪು ಬಟ್ಟೆ ಬಣ್ಣ ಬೆಳಕಿನಲ್ಲಿ ಪ್ರಖರವಾಗಿ ತೋರಿಸಿ ಹಿಂಸೆಯ ಅತಿರೇಕವನ್ನು ಮನದಟ್ಟು ಮಾಡುವ ಪರಿಕಲ್ಪನೆ ನಿಜಕ್ಕೂ ಅದ್ಭುತವೆನಿಸುತ್ತದೆ. ನಿರ್ದೇಶಕರ ಕಲರ್ ಸೆನ್ಸ್ ಮಾತ್ರ ಇಡೀ ನಾಟಕದ ಹೈಲೈಟ್ ಆಗಿದೆ.


 ಥೀಯಾಮ್ರವರ ಮ್ಯಾಕ್ಬೆತ್ನ್ನು ನಾಟಕ ಎನ್ನುವುದಕ್ಕಿಂತಲೂ ಸೌಂಡ್ ಆಂಡ್ ಲೈಟ್ ಶೋ ಎನ್ನುವುದು ಸೂಕ್ತವೆನಿಸುತ್ತದೆ. ಅದಕ್ಕಾಗಿ ನಾಟಕಕ್ಕೆ ವಿಶೇಷ ಬೆಳಕಿನ ವಿನ್ಯಾಸವನ್ನು ಮಾಡಲಾಗಿದೆ. ಸೈಡ್ ವಿಂಗಿನ ಕ್ರಾಸ್ ಲೈಟ್ಸಗಳ ಜೊತೆಗೆ ಟಾಪ್ ಲೈಟ್ಗಳನ್ನು ಬಳಸಿ ಬಣ್ಣದ ಜೊತೆಗೆ ಆಟವಾಡಲಾಗಿದೆ. ಎಲ್ಲೂ ಹಾರ್ಶ ಲೈಟಿಂಗ್ ಬಳಸದೇ ಕೇವಲ ಸಾಪ್ಟ್ ಲೈಟಿಂಗ್ಸ ಜೊತೆಗೆ ಕಲರ್ ಕಾಂಬಿನೇಶನ್ ನಾಟದದಲ್ಲಿ ಮಾಂತ್ರಿಕತೆಯನ್ನು ಸೃಷ್ಟಿಸಿದೆ. ಬಳಸಲಾದ ಹಿನ್ನೆಲೆ ಸಂಗೀತವಂತೂ ಕ್ಷಣ ಕ್ಷಣಕ್ಕೂ ಕೇಳುಗರಲ್ಲಿ ಸಂಚಲನವನ್ನುಂಟು ಮಾಡುವಂತಿತ್ತು. ನಟನೆ, ಬೆಳಕು ಹಾಗೂ ಸಂಗೀತಗಳು ಕರಾರುವಕ್ಕಾಗಿ ಸಿಂಕ್ ಆಗಿರುವ ರೀತಿ ನಾಟಕದ ಯಶಸ್ಸಿಗೆ ಕಾರಣವಾಗಿದೆ.

ಮ್ಯಾಕ್ಬೆತ್ ನಾಟಕವನ್ನು ಯಾವುಯಾವುದೋ ರಾಜ್ಯ ಸಾಮ್ರಾಜ್ಯಗಳಿಗೆ ಹೋಲಿಸಿ ನಾಟಕ ಕಟ್ಟಿದವರಿದ್ದಾರೆ. ಆದರೆ ಬುಡಕಟ್ಟು ಸಂಸ್ಕೃತಿಗೆ ಮ್ಯಾಕ್ಬೆತ್ನನ್ನು ಅಳವಡಿಸಿದ್ದು ಇದೇ ಮೊದಲನೆಯದಾಗಿದೆ. ಬುಡಕಟ್ಟು ಪಂಗಡಗಳ ವೇಶಭೂಷಣಗಳನ್ನು ಪ್ರತಿ ಪಾತ್ರಗಳಿಗೂ ಬಳಸಲಾಗಿದೆ. ಹೀಗಾಗಿ ವಿದೇಶಿ ಮೂಲದ ನಾಟಕಕ್ಕೆ ದೇಸಿಯತೆ ಮೂಡಿಬಂದಿದೆ. ಚಿತ್ರ ವಿಚಿತ್ರ ವೇಶಗಳು, ಲಾಂಚನಗಳು, ಆಯುಧಗಳು ನಾಟಕಕ್ಕೆ ವಿಶೇಷತೆಯನ್ನು ತಂದುಕೊಟ್ಟಿವೆ. ನೋಡುಗರ ಮನಸ್ಸನ್ನು ಬುಡಕಟ್ಟು ಕಾಸ್ಟೂಮ್ಗಳು ಸೆಳೆಯುತ್ತವೆ. ಇದರಿಂದಾಗಿ ನಾಟಕದ ಪ್ರತಿಯೊಂದು ಪ್ರೇಮ್ ಸಹ ಕಲಾತ್ಮಕವಾಗಿ ಮೂಡಿಬಂದಿವೆ.

ನಾಟಕದ ಹೆಸರು ಮ್ಯಾಕ್ಬೆತ್ ಆಗಿದ್ದರೂ ನಾಟಕದಾದ್ಯಂತ ವಿಜ್ರಂಬಿಸಿದ್ದು ಲೇಡಿ ಮ್ಯಾಕ್ಬೆತ್. ನಿರ್ದೇಶಕರೂ ಕೂಡ ಲೇಡಿ ಮ್ಯಾಕ್ಬೆತ್ಳನ್ನು ಹೈಲೆಟ್ ಮಾಡಿಯೇ ನಾಟಕ ಕಟ್ಟಿಕೊಟ್ಟಿದ್ದಾರೆ. ಚಿಂಗ್ಖೈನ್ಗಂಬಿ ಯವರು ಲೇಡಿ ಮ್ಯಾಕ್ಬೆತ್ ಪಾತ್ರಕ್ಕೆ ಜೀವದುಂಬಿ ಅಭಿನಯಸಿದ್ದಾರೆ. ಇಡೀ ನಾಟಕದಲ್ಲಿ ಎಲ್ಲಾ ಪಾತ್ರಗಳ ಮುಖಗಳೂ ಅಸ್ಪಷ್ಟವಾಗಿದ್ದರೆ ಲೇಡಿ ಮ್ಯಾಕ್ಬೆತ್ ಮುಖ-ಭಾವನೆಗಳು ಮಾತ್ರ ಸ್ಪಷ್ಟವಾಗಿ ಕಾಣಿಸುತ್ತವೆ. ಉಳಿದೆಲ್ಲಾ ಪಾತ್ರಗಳು ಆಟಕ್ಕಿವೆಯಾದರೂ ಲೆಕ್ಕಕ್ಕಿಲ್ಲ. ಯಾಕೆಂದರೆ ಬಹುತೇಕ ಪಾತ್ರಗಳ ಮುಖಗಳು ಬಿದಿರಿನ ಕಿರೀಟದಿಂದ ಮಾಸ್ಕ್ ಆಗಿವೆ. ಇಲ್ಲವೇ ಹಲವಾರು ಪಾತ್ರಗಳ ಮುಖದ ಮೇಲೆ ಕತ್ತಲೆಯೇ ಮುತ್ತಿಕೊಂಡಿದೆ. ಹೀಗಾಗಿ ನಟರ ಭಾವಾಭಿವ್ಯಕ್ತಿ ನೋಡುಗರಿಗೆ ಕಾಣಿಸದೇ ಕೇವಲ ಅರ್ಥವಾಗದ ಭಾಷೆಯ ಸಂಭಾಷಣೆಯನ್ನು ಮಾತ್ರ ಕೇಳಬಹುದಾಗಿದೆ. ಕಲಾವಿದರ ಡೈಲಾಗ್ ಟೈಮಿಂಗ್ ಮಾತ್ರ ಅದ್ಬುತವಾಗಿದೆ. ಆದರೆ ನಟರ ಮಾತಿನ ಪೋರ್ಸಿಗೂ ಅವರ ಚಲನೆಗೂ ಅಜಗಜಾಂತರ ವ್ಯತ್ಯಾಸವಿದೆ. ಕಾಲನ್ನು ಮಡಿಚಿಕೊಂಡೇ ಬಹುತೇಕ ಪಾತ್ರಗಳು ನಡೆಯುವಂತಹ ಶೈಲಿಯನ್ನು ಬಳಸಲಾಗಿದೆ.   ಲೇಡಿ ಮ್ಯಾಕ್ಬೆತ್ ಹೊರತು ಪಡಿಸಿ ಬೇರೆಲ್ಲಾ ಪಾತ್ರಗಳಿಗೆ ಆಂಗಿಕಾಭಿನಯಕ್ಕೂ ಸ್ಕೋಪ್ ಇಲ್ಲದಾಗಿದೆ. ಪಾತ್ರಗಳ ಹೆಗಲಮೇಲೆ ದೊಡ್ಡ ಅಂಗವಸ್ತ್ರ ಹಾಕಿದ್ದರಿಂದ ಕೆಲವು ಪಾತ್ರಗಳ ಕೈಗಳ ಚಲನೆಯೂ ಸಹ ಗೋಚರಿಸುತ್ತಿಲ್ಲ. ನಿರ್ದೇಶಕನಿಗೆ ಅಭಿನಯದ ಮೂಲಕ ನಾಟಕವನ್ನು ನಿರೂಪಿಸುವುದು ಬೇಕಿಲ್ಲವಾದ್ದರಿಂದ ಇತರೆಲ್ಲಾ ರಂಗತಂತ್ರಗಳನ್ನೇ ವಿಜ್ರಂಭಿಸಿ ಮಾಯಾಲೋಕವನ್ನು ಸೃಷ್ಟಿಸಿ ನಾಟಕವನ್ನು ಗೆಲ್ಲಿಸಿದ್ದಾರೆ.

  ನಾಟಕದಲ್ಲಿ ಇನ್ನೂ ಗಮನಾರ್ಹವಾಗಿದ್ದು ಬ್ಲಾಕಿಂಗ್. ಬಹುತೇಕ ದೃಶ್ಯಗಳಿಗೆ ಡೈಯಾಗನಲ್ ಬ್ಲಾಕಿಂಗ್ ಮಾಡಲಾಗಿದೆ. ಲೇಡಿ ಮ್ಯಾಕ್ಬೆತ್ ಮತ್ತು ಮ್ಯಾಕ್ಬೆತ್ ದೃಶ್ಯಗಳಿಗೆ ಮಾತ್ರ ಹಾರಿಜೆಂಟಲ್ ಬ್ಲಾಕಿಂಗ್ ಬಳಸಲಾಗಿದೆ. ಪಾತ್ರಗಳ ಪ್ರತಿ ಮೂವ್ಮೆಂಟ್ಗಳನ್ನೂ ನಿರ್ದೇಶಕ ಲೆಕ್ಕಾಚಾರದಲ್ಲಿ ನಿರ್ಬಂಧಿಸಿದಂತಿದ್ದು ನಾಟಕದಲ್ಲಿ ಎಲ್ಲವೂ ಅಳತೆಗೆ ತಕ್ಕಂತೆ. ಒಂದಿಷ್ಟು ಹೆಚ್ಚೂ ಆಗದೇ ಒಂದಿಷ್ಟೂ ಕಡಿಮೆಯೂ ಆಗದೇ ಖರಾರುವಕ್ಕಾಗಿ ನಡೆಯುವ ಶಿಸ್ತನ್ನು ರೂಢಿಸಲಾಗಿದೆ. ಅತಿಯಾದ ಲೆಕ್ಕಾಚಾರದ ಶಿಸ್ತು ಹಾಗೂ ರಂಗತಂತ್ರಗಳ ಅತಿಯಾದ ಹೇರಿಕೆಗಳು ನಟರ ಅಭಿನಯ ಸಾಮರ್ಥ್ಯವನ್ನು ಕುಂಟಿತಗೊಳಿಸದ್ದು   ನಾಟಕದ ನಿರ್ದೇಶಕನ ಉದ್ದೇಶವೂ ಅದೇ ಆದಂತಿದೆ.


 ಪುರಾತನ ಕಾಲ್ಪನಿಕವಾದ ನಾಟಕಕ್ಕೆ ಆಧುನಿಕ ಅಂಶಗಳನ್ನು ಕಸಿ ಮಾಡಲಾಗಿದೆ. ನರ್ಸಗಳನ್ನು ಹಾಗೂ ಆಸ್ಟತ್ರೆಯ ಗಾಲಿ ಖುರ್ಚಿಗಳನ್ನು ಇದ್ದಕ್ಕಿದ್ದಂತೆ ರಂಗದಂಗಳಕ್ಕೆ ತಂದು ಪ್ರೇಕ್ಷಕರಿಗೆ ಶಾಕ್ ಕೊಡಲಾಗಿದೆ. ಮ್ಯಾಕ್ಬೆತ್ ದಂಪತಿಗಳು ಎಂದೋ ಯಾವಕಾಲದಲ್ಲೋ ಇರುವವರಲ್ಲ. ಈಗಲೂ ಇದ್ದಾರೆ. ಮಾಡಿದ ಹಿಂಸೆಗೆ ಪ್ರತಿಯಾಗಿ ಪಶ್ಚಾತ್ತಾಪದಿಂದ ನರಳುತ್ತಿದ್ದಾರೆ. ಅವರಿಗೆ ಆಧುನಿಕ ಚಿಕಿತ್ಸೆ ಬೇಕಾಗಿದೆ.. ಎನ್ನುವುದನ್ನು ಸಾಂಕೇತಿಕವಾಗಿ ಸನ್ನಿವೇಶ ತೋರಿಸಿದಂತಿದೆ. ನಾಟಕದಲ್ಲಿ ಹೀಗೊಂದು ವಿಶೇಷತೆ ಇದೆ. ಎಲ್ಲಾ ನಾಟಕಗಳಲ್ಲಿ ಸೆಟ್ ಬದಲಾಯಿಸುವಾಗ ಡಲ್ ಆಗಿರುವ ಬ್ಯಾಕ್ಲೈಟ್ ಬಳಸುತ್ತಾರೆ. ಸೆಟ್ ಬದಲಾಯಿಸುವವರಿಗೆ ಅನುಕೂಲವಾಗಲಿ ಎಂದು. ಆದರೆ ನಾಟಕದಲ್ಲಿ ಸಂಪೂರ್ಣ ಕತ್ತಲೆಯಲ್ಲಿ ಸೆಟ್ಗಳು ಬದಲಾಗುತ್ತವೆಯೆಂದರೆ ನೇಪತ್ಯದವರ ಡೆಡಿಕೇಶನ್ ಎಷ್ಟಿರಬೇಕು.
     
  ನಾಟಕದಲ್ಲಿ ಗಮನ ಸೆಳೆದದ್ದು ಎರಡು ನಾಟಕೇತರ ಅಂಶಗಳು. ಒಂದು ನಾಟಕ ಮುಗಿದ ಮೇಲೆ ರಂಗಮಂದಿರದಲ್ಲಿ ಕುಳಿತಿದ್ದ ಎಲ್ಲಾ ಪ್ರೇಕ್ಷಕರೂ ಸ್ವಯಂಪ್ರೇರೇಪಿತರಾಗಿ ಎದ್ದು ನಿಂತು ಚೆಪ್ಪಾಳೆಗಳ ಮಳೆಸುರಿಸಿದ್ದು. ಎರಡನೆಯದ್ದು ಅಂತರಾಷ್ಟ್ರೀಯ ನಿರ್ದೇಶಕರಾದ ಥೀಯಾಮ್ ನಂತವರೂ ನಾಟಕದ ನಂತರ ನಟರ ಜೊತೆಗೆ ಮೊನಕಾಲೂರಿ ತಲೆ ನೆಲಕ್ಕೆ ಹಚ್ಚಿ ಭಾವಪೂರ್ಣವಾಗಿ ನಮಸ್ಕರಿಸಿದ್ದು. ಮೊದಲನೆಯದ್ದು ನಾಟಕದ ಯಶಸ್ಸನ್ನು ತೋರ್ಪಡಿಸಿದರೆ ಎರಡನೆಯದು ನಿರ್ದೇಶಕನ ವಿನಯವಂತಿಕೆಯನ್ನು ತೋರಿಸುತ್ತದೆ. ಪ್ರೇಕ್ಷಕರಿಂದ ರೀತಿ ಭಾವಪೂರ್ಣ ಪ್ರತಿಕ್ರಿಯೆ ಹಾಗೂ ಅದಕ್ಕೆ ಪ್ರತಿಯಾಗಿ ನಿರ್ದೇಶಕ ತನ್ನ ಹಣೆ ನೆಲಕ್ಕಿಟ್ಟು ಪ್ರೇಕ್ಷಕರಿಗೆ ತೋರಿಸುವ ವಿನಯಪೂರ್ವಕ ಗೌರವ ಅಪರೂಪದಲ್ಲಿ ಅಪರೂಪವಾಗಿದೆ. ನಿಟ್ಟಿನಲ್ಲಿ ರತನ್ ಥಿಯಾಮ್ ಅಭಿನಂದನಾರ್ಹರು.


     
1500 ರೂಪಾಯಿ ಟಿಕೇಟ್ : ನಾಲ್ಕು ತಿಂಗಳ ಹಿಂದೆ ಇದೇ ನಾಟಕವನ್ನು ದಿ ಹಿಂದೂ ಸಮೂಹ ಸಂಸ್ಥೆಯು ಕಾರ್ಪೋರೇಟ್ ಲೇವಲ್ನಲ್ಲಿ ಚೌಡಯ್ಯ ಮೇಮೋರಿಯಲ್ ಹಾಲ್ನಲ್ಲಿ ಆಯೋಜಿಸಿತ್ತುಅಲ್ಲಿ ನಾಟಕಕ್ಕೆ ಇಟ್ಟ ಟಿಕೆಟ್ ಬೆಲೆ ಕೇಳಿದರೆ ಕನ್ನಡ ರಂಗಪ್ರೇಕ್ಷಕನಿಗೆ ಗಾಭರಿಯಾಗಬಹುದು. ಪ್ರತಿಯೊಬ್ಬರೂ ಒಂದೂವರೆ ಸಾವಿರ ಹಣ ಕೊಟ್ಟು ನಾಟಕ ನೋಡಬೇಕಾಗಿತ್ತು. ಕಾರ್ಪೋರೇಟ್ ಕಲ್ಚರಿನ ಜನ ದುಬಾರಿ  ಟಿಕೆಟ್ಗಳನ್ನು ಕೊಂಡುಕೊಂಡು ನಾಟಕ ನೋಡಿದರು. ಅದೆಷ್ಟು ಅವರಿಗೆ ಅರ್ಥವಾಯಿತೋ ಏನೋ ಒಟ್ಟಾರೆಯಾಗಿ ಬಣ್ಣ ಬೆಳಕು ಸಂಯೋಜನೆಗೆ ಮಾರುಹೋಗಿ ಖುಷಿಪಟ್ಟರು. ಪುಕ್ಕಟೆ ನಾಟಕ ತೋರಿಸುತ್ತೇವೆ ಬನ್ನಿ ಎಂದು ಪ್ರೇಕ್ಷಕರನ್ನು ಆಹ್ವಾನಿಸುವ ಪರಿಸ್ಥಿತಿಯಲ್ಲಿರುವ ಕನ್ನಡ ರಂಗಭೂಮಿಯವರಿಗೆ   ಮಣಿಪುರಿ ನಾಟಕದ ಶ್ರೀಮಂತಿಕೆ ಕಂಡು ಅಸೂಯೆ ಆಗಿದ್ದಂತೂ ಸತ್ಯ. ಅತೀ ಪುಟ್ಟ ರಾಜ್ಯ ಮಣಿಪುರದಲ್ಲಿ ಕರ್ನಾಟಕವನ್ನು ಹೋಲಿಸಿದರೆ ರಂಗಭೂಮಿ ಅಷ್ಟೊಂದು ಬೆಳವಣಿಗೆ ಕಂಡಿಲ್ಲ. ಆದರೆ ಥೀಯಮ್ ನಂತಹ ನಿರ್ದೇಶಕರು ತಮ್ಮ ಸಮ್ಮೋಹನಗೊಳಿಸುವ ನಾಟಕಗಳಿಂದ ಭಾಷೆಯ ನಾಟಕರಂಗಕ್ಕೊಂದು ದೊಡ್ಡ ಹೆಸರನ್ನು ತಂದುಕೊಟ್ಟಿದ್ದಂತೂ ಸುಳ್ಳಲ್ಲ. ನಾಟಕದಲ್ಲಿ ನಟಿಸಿದವರಾರೂ ವೃತ್ತಿಪರರಲ್ಲ. ಯಾವುಯಾವುದೋ ವೃತ್ತಿಯಲ್ಲಿದ್ದುಕೊಂಡೇ ನಟನೆಯಲ್ಲಿ ತೊಡಗಿಸಿಕೊಂಡವರು.  


ರಂಗ ನಿರ್ದೇಶಕ ರಥನ್ ಥೀಯಮ್ :
ಮಣಿಪುರದ ಕಾವ್ಯ, ಕಥೆ, ನೃತ್ಯ ಮತ್ತು ಸಮರ ಕಲೆಗಳ ಸಂಸ್ಕೃತಿಯನ್ನು ಮೈಗೂಡಿಸಿಕೊಂಡ ರಥನ್ ಥೀಯಮ್ ರವರು ರಾಷ್ಟ್ರೀಯ ನಾಟಕ ಶಾಲೆಯಲ್ಲಿ (1971-73) ರಂಗಭೂಮಿಯನ್ನು ಅಭ್ಯಾಸ ಮಾಡಿದವರು. ತಮ್ಮದೇ ಆದ ಕೋರಸ್ ರೆಪರ್ಟರಿ ಥೀಯಟರ್  ಎನ್ನುವ ರಂಗರೆಪರ್ಟರಿಯನ್ನು ಕಟ್ಟಿಕೊಂಡು ಹಲವಾರು ವಿಶಿಷ್ಟ ಪ್ರಯೋಗಗಳನ್ನು ಮಾಡಿದ್ದಾರೆ. ಬರಹಗಾರರು, ನಾಟಕಕಾರರು, ರಂಗನಿರ್ದೇಶಕರು, ವಿನ್ಯಾಸಗಾರರು, ಚಿತ್ರ ಕಲಾವಿದರು, ಸಂಗೀತ ಸಂಯೋಜಕರು ಹಾಗೂ ನಟರೂ ಆದ ಥೀಯಮ್ ರವರು ಭಾರತೀಯ ಹಾಗೂ ಅಂತರಾಷ್ಟ್ರೀಯ ರಂಗ ಸಂಸ್ಕೃತಿಯಲ್ಲಿ ಪ್ರಮುಖರಾದವರು. ಅವರು ೬೦ಕ್ಕಿಂತ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದರು ಇದರಲ್ಲಿ ತಾವೇ ರಚಿಸಿದ ನಾಟಕಗಳು ಹಾಗೂ ರೂಪಾಂತರಿಸಿದ ನಾಟಕಗಳು ಸೇರಿವೆ. ಹಲವಾರು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ನಾಟಕೋತ್ಸವದಲ್ಲಿ ತಮ್ಮ ನಾಟಕಗಳ ಪ್ರದರ್ಶನಗಳನ್ನು ಮಾಡಿದ ರಥಿನ್ ರವರು ತಮ್ಮ ತಂಡದ ನಾಟಕದೊಂದಿಗೆ ವಿಶ್ವ ಪರ್ಯಟನೆ ಮಾಡಿದ್ದಾರೆ. ಥೀಯಮ್ ರವರು 1987-88 ರಲ್ಲಿ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರಾಗಿ ಎನ್.ಎಸ್.ಡಿಯನ್ನು ಮುನ್ನೆಡೆಸಿದ್ದಾರೆ. ಸಂಗೀತ ನಾಟಕ ಅಕಾಡೆಮಿ, ಕಾಳಿದಾಸ ಸನ್ಮಾನ್, ಜಾನ್ ಡಿ ರಾಕ್ ಫೆಲ್ಲರ್, ಫ್ರಿಂಜ್ ಫಸ್ಟಸ್, ಕ್ರಿಟಿಕ್ ಫೋರಂ... ಹೀಗೆ ಮುಂತಾದ ದೇಸಿ ಹಾಗೂ ವಿದೇಶಿ ಪ್ರಶಸ್ತಿಗಳು ದೊರಕಿವೆ. 1989 ರಲ್ಲಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿದೆ. ಸಮನ್ವಯ ಹಾಗೂ ಶಾಂತಿಯ ಹುಡುಕಾಟ ರತನ್ ಥೀಯಮ್ ರವರ ನಾಟಕಗಳ ಶೈಲಿಯ ಅಂತಃಸತ್ವವಾಗಿದೆ

                           -ಶಶಿಕಾಂತ ಯಡಹಳ್ಳಿ